೨೬. ವಿಭಾವನೆ

ಕಾರಣಮನ[1]ೞಪಿ ನಿಜ-ಸಂಸ್ಕಾರ-ಗುಣಾತಿಶಯದೊಳ್ ತಗುಳ್ಚುವುದಕ್ಕುಂ |

ಸಾರಂ ವಿಭಾವನಾಳಂಕಾರಂ ಮತ್ತದರ ಲಕ್ಷ್ಯಮೀ ತೆಱನಕ್ಕುಂ ||೧೬೯||

 

ಸಮಱುಗೆಯಿಲ್ಲದ ಮ[2]ಱುಕಮುಮಮರ್ದಿರೆ ಕೆಯ್ಗೆಯ್ಯದೊಪ್ಪುವಂದಮುಮವಳಾ |

ನೆವಮಿಲ್ಲದ ದರ-ಹಸಮುಂ ಸಮದಾಲಸ-ಲಲಿತ-ಗಮನಮುಂ ಸೊಗಯಿಸುಗುಂ ||೧೭೦||

೨೭. ಲೇಶ

ಗುಣದೊಳಮಱಪುವುದಿನಿಸವಗುಣಮಂ ದೋಷದೊಳಮಿನಿಸು ಗುಣಮಂ ತಂದಿ- |

ರ್ದೆಣಿಸುವುದು ಲೇಶಮೆಂಬುದು ಗಣಿದದಿನಿಂತಕ್ಕುಮದರ ಲಕ್ಷ್ಯ-ವಿಭಾಗಂ ||೧೭೧||

೧೬೯. (ಪ್ರಸಿದ್ಧವಾದ) ಕಾರಣವನ್ನು ಅಳಿಸಿ, ಕಾರ್ಯಕ್ಕೆ ಸ್ವಸಂಸ್ಕಾರದ ಗುಣಾತಿಶಯವನ್ನೇ ಕಾರಣಸ್ಥಾನದಲ್ಲಿ ಕಲ್ಪಿಸುವುದು ಶ್ರೇಷ್ಠವಾದ ‘ವಿಭಾವನಾ’ ಅಲಂಕಾರ. ಅದರ ಉದಾಹರಣೆ ಹೀಗಿರುತ್ತದೆ-*ಹೋಲಿಸಿ-ದಂಡಿ, II -೧೯೯*.

೧೭೦. ಅಕೃತ್ರಿಮವಾದ ಅವಳ ಪ್ರೇಮದೊಂದಿಗೆ ಯಾವ ಸಿಂಗಾರವೂ ಇಲ್ಲದೆಯೇ ಒಪ್ಪುವ ಸಹಜ ಸೌದರ್ಯ, ಅಕಾರಣವಾದ ಮುಗುಳ್ನಗೆ ಹಾಗು (ಯೌವನ) ಮದದಿಂದ ಮಂದವಾದ ಅಂದದ ನಡಗೆಗಳು ಸೊಗಯಿಸುವುವು. *ಸಮಱುಗೆ=ಬಾಹ್ಯಶೃಂಗಾರ. ಕೆಯ್‌ಗೆಯ್= ಸಿಂಗರಿಸಿಕೊಳ್ಳು. ಮಱುಕ=ಪ್ರೀತಿ. ಇಲ್ಲಿ ಅವಳ ಪ್ರೇಮ, ಸೌಂದರ್ಯ, ಮುಗುಳ್ನಗೆ, ಲಲಿತಗಮನಗಳಿಗೆ ಬಾಹ್ಯಕಾರಣಗಳಾದ ಶೃಂಗಾರಸಾಧನಗಳಾಗಲಿ ಸನ್ನಿವೇಶಗಳಾಗಲಿ, ಮಧುಪಾನಾದಿಗಳಾಗಲಿ ಒಂದೂ ಇಲ್ಲವೆಂದೂ ಕಾರಣನಿಷೇಧಮಾಡಿಯೂ ಕಾರ್ಯೋ ತ್ಪತ್ತಿಯನ್ನು ಹೇಳಿರುವುದರಿಂದ ವಿಭಾವನಾಲಂಕಾರ. ಹೋಲಿಸಿ-ದಂಡಿ, II -೨೦೧.*

೧೭೧. ಗುಣದಲ್ಲಿಯೂ ಒಂದಿಷ್ಟು ಅವಗುಣವನ್ನು, ದೋಷದಲ್ಲಿಯೂ ಸ್ವಲ್ಪ ಗುಣಾಂಶವನ್ನು ತಂದಿಟ್ಟುಕೊಂಡು ವರ್ಣಿಸುವುದು ‘ಲೇಶ’ವೆಂಬಲಂಕಾರ. ಅದರ ಲಕ್ಷ್ಯಗಳ ರೀತಿ ಹೀಗಿರುವುದು-*ಈ ಲಕ್ಷಣ ದಂಡಿ ಹೇಳುವ ಮತಾಂತರಾನುಸಾರಿಯಾಗಿದೆ; ಭಾಮಹನು ಈ ಅಲಂಕಾರವನ್ನು ಒಪ್ಪುವುದೇ ಇಲ್ಲ. ಹೋಲಿಸಿ-ದಂಡಿ, II -೨೬೮.*

ಮಾನಿಯುಮುದಾರೆ-ಚರಿತನುಮಾನತ-ರಿಪು-ನಿಕರನಂ ಮನಸ್ವಿಯುಮಂತಾ |

ಮಾನಸರನಾರುಮಂ ಮನಕೇನುಂ ಮುಟ್ಟಿಲ್ಲದಂತು ಬಗೆವುದು ದೋಷಂ ||೧೭೨||

 

ಕುಲಜನುಮಲ್ಲಂ ನಣ್ಪಿನ ಬಲಮುಂ ತನಗಿಲ್ಲ ಕಣ್ಗಮೇಳಿದನಾರೊಳ್ |

ನೆಲಸಿರನೆಲ್ಲಿಯುಮ[3]ವನಂ ಚಲವೆಂದುಂ ಪತ್ತುವಿಡದೊಂದುಂಟು ಗುಣಂ ||೧೭೩||

೨೮. ಉದಾತ್ತ

ಮಿಗೆ ಮನದ ಪೆಂಪುಮಂ ಕೈಮಿಗೆ ವಿಭವದ ಪೆಂಪುಮಂ ವಿಶೇಷಿಸಿ ಪೇೞಲ್ |

ಬಗೆವುದುದಾತ್ತಾಲಂಕಾರ-ಗುಣೋದಯಮದಱದಿಂತು ಸದುದಾಹರಣಂ ||೧೭೪||

 

ಚಲದೆಡೆಗೆ ಪಿರಿದು ರಜಮುಂ ನೆಲನುಂ ಪ್ರಿಯದೆಡೆಗೆ ಕಿಱದು ಕೊಳಲುಂ ಕು[4]ಡಲುಂ |

ಚಲಮುಂ ಪ್ರಿಯಮುಂ ಬೞ ಸಮಬಲಮಾಗಿರೆ ನೆ[5]ಗೞ್ವ ಬಗೆಗೆ ಕಿಱದೇಂ ಪಿರೆದೇಂ ||೧೭೫||

೧೭೨. ಅಭಿಮಾನಿಯೂ, ಉದಾರಚರಿತನೂ, ಆನತ ಶತ್ರುಸಮೂಹನೂ, ಮನಸ್ವಿಯೂ ಆದವನು ಮತ್ತಿನ ಮನುಷ್ಯರಾರೂ ತನ್ನಮಟ್ಟಕ್ಕೆ ಮುಟ್ಟಲಾರರೆಂದು ಮನಸ್ಸಿನಲ್ಲಿ ಭಾವಿಸುವುದು ದೋಷವೆನಿಸುವುದು. *ಇಲ್ಲಿ ಗುಣದೊಡನೆ ಇರುವ ದೋಷವನ್ನು ಕೂಡ ಬಿಡಿಸಿ ಹೇಳಿರುವುದರಿಂದ ಲೇಶಾಲಂಕಾರ.*

೧೭೩. ಅವನು ಕುಲೀನನಲ್ಲ; ನಂಟಿನ ಬಲವೂ ಅವನಿಗಿಲ್ಲ; ಕಣ್ಣಿಗೂ ಅವನು ಕುರೂಪಿ; ಯಾರಲ್ಲಿಯೂ ಅವನು ಸ್ಥಿರವಾಗಿ ನಿಲ್ಲುವುದಿಲ್ಲ-ಇಷ್ಟಾದರೂ ಅವನಲ್ಲಿ ಚಲವೆಂದೂ ಕುಗ್ಗುವುದಿಲ್ಲವೆಂಬ ಗುಣವೊಂದು ಕಾಣುತ್ತದೆ. *ಇಲ್ಲಿ ದೋಷಗಳ ನಡುವೆಯೂ ಕೂಡ ಇರುವ ಗುಣವೊಂದರ ಉಲ್ಲೇಖವಿರುವುದರಿಂದ ಲೇಶಾಲಂಕಾರ.*

೧೭೪. ಆಶಯದ ಮಹತ್ವವನ್ನೂ ವಿಭವದ ಮಹತ್ತ್ವವನ್ನೂ ಅತ್ಯಧಿಕವಾಗಿ ಉತ್ಪ್ರೇಕ್ಷಿಸಿ ಹೇಳುವುದೇ ‘ಉದಾತ್ತಾಲಂಕಾರ’. ಅದರ ಯೊಗ್ಯ ಉದಾಹರಣೆ ಹೀಗೆ- *ಹೋಲಿಸಿ-ದಂಡಿ, MM-೩೦೦*.

೧೭೫. ಚಲಕ್ಕೆ ನಿಂತಾಗ ತೆಗೆದುಕೊಳ್ಳಲು ಒಂದು ಧೂಳಿನ ಕಣ ಕೂಡ ದೊಡ್ಡದೆನ್ನುವನು; ಪ್ರಿಯವೆಸಗಲು ಹೊರಟಾಗ ದಾನಕೊಡಲು ಇಡಿಯ ಭೂಮಂಡಲವೇ ಕಿರಿದೆನ್ನುವನು. ಹೀಗೆ ಚಲ, ಪ್ರಿಯ-ಎರಡೂ ಅವನ ಬಳಿ ಸಮಬಲವಾಗಿರುವಾಗ ಅವನ ದೃಷ್ಟಿಗೆ ಯಾವುದು ತಾನೆ ಕಿರಿದು, ಯಾವುದು ತಾನೆ ಹಿರಿದು? *ಇಲ್ಲಿ ಕೊಳಲುಂ ರಜಮುಂ ಪಿರಿದು, ಕುಡಲುಂ ನೆಲನುಂ ಕಿಱದು ಎಂಬಾಗ ಯಥಾಸಂಖ್ಯವೂ ಇದೆ. ಅದನ್ನು ಬಿಟ್ಟು ಅರ್ಥಮಾಡಿದರೆ ಅಪಾರ್ಥಕ್ಕೆಡೆಯಾಗುತ್ತದೆ. ಇಲ್ಲಿ ಆಶಯದ ಮಹತ್ವ ವರ್ಣಿತವಾಗಿದೆ.*

ಅೞದೞಪಿ ಬೞಯನುೞಯದೆ ಪೞವರುಮಂ ತವಿಸಿ ಕೞಯದುೞವಳನಾದಂ |

ಪೞಕೆಯ್ದು ತೊೞ್ತನುೞದಂತುೞದ ಮಹಾಪುರುಷರಱ ಯದುೞದರೆ ಸಿರಿಯಂ ||೧೭೬||

 

ಕಸವರಮೆಂಬುದು ನೆಱೆ ಸೈರಿಸಲಾರ್ಪೊಡೆ ಪರವಿಚಾರಮಂ ಧರ್ಮಮುಮಂ |

ಕಸವೇಂ ಕಸವರಮೇನುಬ್ಬಸಮಂ ಬಸಮಲ್ಲದಿರ್ದು ಮಾ[6]ಡುವದೆಲ್ಲಂ ||೧೭೭||

 

ಪಾೞ ನಿಲೆ ನೆಗೞ ಬಾೞ್ವುದು ಬಾೞೆಂಬುದು ನಿಕ್ಕುವಂ ಗುಣ-ಗ್ರಾಮಣಿಗಳ್ |

ಪಾೞಾಗೆ ತೆಗೞೆ ಬಾೞ್ವಾ ಬಾೞೇನಾಚಂದ್ರತಾ[7]ರಮೋ ಮಾನಸರಾ ||೧೭೮||

೧೭೬. ಲಕ್ಷ್ಮೀಯೆಂಬವಳು ತಾವೂ ಅಳಿದು, ಇತರರನ್ನೂ ಅಳಿಸಿ, ಬಳಿಯನ್ನು ಬಿಡದವರನ್ನು ಹೇಗೋ ಹಾಗೆ, ಹಳಿವವರನ್ನು ಕೂಡ ತಪ್ಪಿಸಿ ಕಳೆಯದೆ ಸೇವಿಸುವಳು. ಅಂತಹವಳನ್ನು ನಿಂದೆಗೈದು ತೊತ್ತನ್ನು ತೊರೆಯುವಂತೆ ತೊರೆದ ಮಹಾಪುರುಷರು ಅಜ್ಞರೇನು? *ಇಲ್ಲಿಯೂ ಆಶಯಮಹತ್ತ್ವವೇ ಮೂಡಿಬಂದಿದೆ. ಗ್ರಂಥಕಾರನು ಈ ಅಲಂಕಾರದ ನೆವದಲ್ಲಿ ತನ್ನ ಜೀವನ ಧ್ಯೇಯವನ್ನೇ ವಿವರವಾಗಿ ಪ್ರಕಟಿಸಿದ್ದಾನೆ- ನೃಪತುಂಗನನ್ನು ಆರು ಪದ್ಯಗಳಷ್ಟು ವಿಸ್ತಾರವಾಗಿ. ಕುರಿತು “ವಿವೇಕಾತ್ ತ್ಯಕ್ತ ರಾಜ್ಯೇನ” ಎಂಬ ಮಾತಿರುವುದರಿಂದ ಈ ಪದ್ಯದ ಅಭಿಪ್ರಾಯ ಅವನ ಮನೋಭೂಮಿಕೆಗೆ ಚೆನ್ನಾಗಿ ಅನ್ವಯಿಸುವಂತಿದೆ. ಕಾಳಿದಾಸನೂ ಕೂಡ ‘ವಾರ್ಧಕೇ ಮುನಿವೃತ್ತೀ ನಾಂ’ ಎಂದು ರಘುವಂಶದವರ ಜೀವನಾದರ್ಶವನ್ನು ಹೇಳಿರುವುದಲ್ಲದೆ ರಾಜ್ಯವನ್ನು ತ್ಯಾಗಮಾಡಿದ ರಘು ಹೇಗೆ ಆಶ್ರಮವ್ರತವನ್ನು ಪಾಲಿಸುತ್ತಿದ್ದನೆಂದು ವಿಸ್ತಾರವಾಗಿಯೇ ವರ್ಣಿಸಿದ್ದಾನೆ.*

೧೭೭. ಪರರ ವಿಚಾರನವನ್ನೂ ಧರ್ಮವನ್ನೂ ಸೈರಿಸುವುದಾದರೆ ಅದೇ ಹೊನ್ನು. ಈತೇಂದ್ರಿಯರಲ್ಲದ ಎಲ್ಲರಿಗೂ ಕಸವಿರಲಿ, ಹೊನ್ನಿರಲಿ, ಕ್ಲೇಶವನ್ನೇ ಉಂಟುಮಾಡುವದು. *ಇಲ್ಲಿ ಪರಧರ್ಮಸಹಿಷ್ನುತೆಯೆಂಬ ಆಶಯಮಹಾತ್ಮ್ಯ ಸುಂದರವಾಗಿ ಪ್ರಕಟವಾಗಿದೆ. ಇದೂ ಕವಿಯ ಸ್ವಂತ ಧ್ಯೇಯ ಹಾಗು ಆತ್ಮಾಭಿಪ್ರಾಯವೆಂಬಂತೆಯೇ ತೋರುತ್ತದೆ.*

೧೭೮. ಗುಣವಂತರಾದವರು (ಧರ್ಮಶಾಸ್ತ್ರದಲ್ಲಿ ಹೇಳಿದ) ಕ್ರಮ ತಪ್ಪದಂತೆ ನಡೆಸುವ ಜೀವನವೇ ಜೀವನವೆಂಬುದು ನಿಶ್ಚಿತ. ಎಲ್ಲರೂ ತೆಗಳುವಂತಹ ಹಾಳಾದ ಮನುಷ್ಯರ ಜೀವನ ಚಂದ್ರತಾರೆಗಳಂತೆ ಶಾಶ್ವತವೇನು? *ಇಲ್ಲಿಯೂ ಉತ್ತಮ ಜೀವನಾದರ್ಶವೇ ಅಭಿವರ್ಣಿತವಾಗಿರುವುದು ಸ್ಪಷ್ಟ.*

ಪೊಲ್ಲಮೆಯುಂ ಗುಣಮುಂ ತಮಗಲ್ಲದೆ ಪುದುವಲ್ಲ ಮತ್ತೆ ತನಗುಂ ಪೆಱರ್ಗಂ |

ನಿಲ್ಲದೆ ಜನಮುಂತಾಗಿಯುಮೆಲ್ಲಂ ಮುನಿಸೊಸಗೆವೆರಸು ಪೞಗುಂ ಪೊಗೞ್ಗುಂ ||೧೭೯||

 

ಮಿಗೆ ಪೞವರೆನ್ನನೆನ್ನದೆ ಪೊಗೞ್ವರ್ ನೆರೆದೆಲ್ಲರೆನ್ನನೆನ್ನದೆ ತನ್ನೊಳ್ |

ಬಗೆದುಭಯ-ಲೋಕ-ಹಿತದೊಳ್ ನೆಗೞ್ಗೆ ಜನಂ ಪೞಗೆ ಪೊಗೞ್ಗೆ ತನಗೇನದಱೊಳ್ ||೧೮೦||

 

ಪ್ರಣತಾರಿ-ನಿ[8]ಟಿಲ-ಮುಕ್ತಾ-ಮ[9]ಣಿಗಣಮುತ್ತಂಸದಿಂ ಕ[10]ೞಲ್ದುದುಱೆ ಸಭಾಂ- |

ಗಣಮೊಪ್ಪೆ ವೀರ-ನಾರಾಯಣನಾ ತಾರಕಿತ-ನಭದವೋಲ್ ಸೊಗಯಿಸುಗುಂ ||೧೮೧||

೧೭೯-೧೮೦. ದೋಷವಿರಲಿ, ಗುಣವಿರಲಿ ತಮತಮಗೆ ಸೇರಿದ್ದೇ ಹೊರತು ತನ್ನಂತೆ ಇತರರಿಗೂ ಸೇರಿದ್ದಲ್ಲ. ಹಾಗಿದ್ದರೂ ಜನ ಕೋಪಬಂದಾಗ ಇತರರನ್ನು ತೆಗಳುತ್ತದೆ, ಹರ್ಷವಾದಾಗ ಹೊಗಳುತ್ತದೆ (ತಮ್ಮನ್ನು ತೆಗಳಿಕೊಳ್ಳುವುದಿಲ್ಲ, ಇತರರನ್ನೇ ತೆಗಳುತ್ತದೆ). ಎಲ್ಲರೂ ನನ್ನನ್ನು ತೆಗಳುವರೆಂದುಕೊಳ್ಳದೆ, ಎಲ್ಲರೂ ನನ್ನನ್ನು ಹೊಗಳುವರೆಂದೂ ಎಣಿಸದೆ, ಇಹ-ಪರಗಳೆರಡಕ್ಕೂ ಹಿತವಾದುದನ್ನು ಮಾತ್ರ ತಾನು ಆಚರಿಸಬೇಕು. ಜನ (ಅದರ ಸ್ವಭಾವಕ್ಕನುಗುಣವಾಗಿ) ಹಳಿಯಲಿ, ಹೊಗಳಲಿ, ಅದರಿಂದ ತನಗೇನು?

೧೮೧. *ಇದು ವಿಭವದ ಮಹತ್ತ್ವಕ್ಕೆಉದಾಹರಣೆ-* ಕಾಲ್ಗೆರಗಿದ ಅರಿಗಳ ಹಣೆಗಳಲ್ಲಿಯ ಮುತ್ತಿನ ಮಣಿಗಳು ಅವರ ಕಿರೀಟಗಳಿಂದ ಕಳಚಿಕೊಂಡು ಕೆಳಗುದುರಲು, ವೀರನಾರಾಯಣನ ಸಭಾಂಗಣವೆಲ್ಲ ನಕ್ಷತ್ರಖಚಿತವಾದ ಬಾಂದಳದಂತೆ ಸೊಗಯಿಸುತ್ತದೆ. ನೃಪತುಂಗನ ರಾಜಾಸ್ಥಾನದ ಮುತ್ತು ಮಣಿಗಳ ವೈಭವ ಎಷ್ಟು ಅತಿಶಯವಾದುದೆಂಬುದು ಇಲ್ಲಿಯ ವರ್ಣನಾವಿಷಯ. ಹೋಲಿಸಿ-ದಂಡಿ, MM-೩೦೨*.

ಪರ-ಚಕ್ರ-ಭೂಪರಟ್ಟಿದ ಕರಿಗಳ್ ಬಿಡುತಪ್ಪ ಮದದ ಪುನಲಿಂದೆತ್ತಂ |

ನರಲೋಕ-ಚಂದ್ರನಾ ಮಂದಿರದೊಳಗೆಲ್ಲ ಕಾಲಮುಂ ಕೆಸಱಕ್ಕುಂ ||೧೮೨||

೨೯. ಅಪಹ್ನುತಿ

ಅತಿಶಯಿತ-ವಸ್ತು-ವಿಷಯ-ಪ್ರತೀತಿಯಂ ಮಱಸಿ ನಿಱಸಿ ಪೇೞ್ವುದು ಪೆಱತಂ |

ಸತತಮಪಹ್ನುತಿ ಸದಳಂಕೃತಿ ಮತ್ತಿಂತಕ್ಕುಮದಱ ಲಕ್ಷ್ಯ-ವಿಕಲ್ಪಂ ||೧೮೩||

i) ಮೋಹಾಪೋಹ

ಅಮೃತಮಯ-ಕಿರಣನೆಂಬುದುಮಮರದು ಶಿಶರಾಂಶುವೆಂಬುದು ಶಶಿಗೆಂದುಂ |

ಸಮನಿಸಿ ವಿಷ-ಕಿರಣನುಮನಲ-ಮರೀಚಿಯುಮೆಂದೆನಲ್ಕೆ ಮೋಹಾಪೋಹಂ ||೧೮೪||

೧೮೨. ಮಾಂಡಲಿಕ ರಾಜರು ಕಾಣಿಕೆಯಾಗಿ ಕಳುಹಿಸಿದ ಆನೆಗಳು ಸರಿಸುವ ಮದೋದಕದ ಪ್ರವಾಹದಿಂದ ಎಲ್ಲೆಲ್ಲೂ ನರಲೋಕಚಂದ್ರನ ಅರಮನೆಯೊಳಗಿನ ನೆಲ ಎಲ್ಲ ಕಾಲವೂ ಕೆಸರಾಗಿಯೇ ಇರುತ್ತದೆ. *ಇಲ್ಲಿಯೂ ಮೇಲಿನ ಪದ್ಯದಂತೆಯೇ (ನೃಪತುಂಗನ) ರಾಜವೈಭವಾತಿಶಯದ ವರ್ಣನೆಯೇ ಇದೆ. ಇಲ್ಲಿ ಗ್ರಂಥಕಾರನು ಭಾರವಿ MM-೧೬ ರಿಂದ ಪ್ರಭಾವಿತನಾಗಿದ್ದಾನೆ. ಹೋಲಿಸಿ-

ನೃಪರನೇಕರ ತೇರ ಕುದುರೆಗಳು ಕಿಕ್ಕಿರದ

ಆತನೋಲಗಸಾಲೆಯಂಗಳವ ಸತತ |

ನೃಪರು ಕಾಣಿಕೆಯಿತ್ತ ಗಜಗಳಾ ಮದಜಲವು

ಸಪ್ತಪರ್ಣಸುಗಂಧಿ ತೊಯ್ವುದನವರತ ||

(ಡಾ|| ಕೆ. ಕೃಷ್ಣಮೂರ್ತಿ, ಕನ್ನಡ ಕಿರಾತಾರ್ಜುನೀಯ, ಪು.೬.)*

೧೮೩. ವರ್ಣ್ಯಮಾನವಾದ ವಿಷಯದ ಸ್ವರೂಪವನ್ನು ಮರೆಮಾಚಿ ಇರಿಸಿ, ಬೇರೊಂದನ್ನು ಹೇಳುವುದು ಅಪಹ್ನುತಿಯೆಂಬ ಶ್ರೇಷ್ಠ ಅಲಂಕಾರ. ಅದರ ಲಕ್ಷ್ಯ ಪ್ರಭೇದಗಳು ಹೀಗಿರುತ್ತವೆ. *ಹೋಲಿಸಿ-ದಂಡಿ, II -೩೦೪.*

೧೮೪. “ಚಂದ್ರನಿಗೆ ‘ಅಮೃತಕಿರಣ’ ಎಂಬ ವಿಶೇಷಣವಾಗಲಿ ‘ಶೀತಕಿರಣ’ ನೆಂಬ ವಿಶೇಷಣವಾಗಲಿ ಸಲ್ಲದು. ಅವನನ್ನು ಸರಿಯಾಗಿ ಕರೆಯುವುದಾದರೆ ‘ವಿಷಕಿರಣ’ ‘ಅಗ್ನಿಕಿರಣ’ ಎಂದು ಕರೆಯಬೇಕು”. ಹೀಗೆ ಬಣ್ಣಿಸುವುದು ‘ಮೋಹಾಪೋಹ’ ಅಥವಾ ಭ್ರಾಂತಿಯಿಂದ ಮಾಡುವ ಅಪೋಹ ಎಂದರೆ ಅಪಹ್ನುತಿ.*ಈ ವಿಧವಾದ ವರ್ಣನೆಯನ್ನು ವಿರಹತಾಪದಿಂದ ಭ್ರಾಂತನಾದವನು ಮಾತ್ರ ಮಾಡುವುದು ಶಕ್ಯವಾದ್ದರಿಂದ ಇದು ಮೋಹಾಪೋಹ. ಹೋಲಿಸಿ-ದಂಡಿ, II-೩೦೭.*

ii) ಧರ್ಮಾಪೋಹ

ಕುಸುಮಂಗಳೆಂಬ ಮಾತದು ಪುಸಿ ದಹನಮಯಂಗಳಂಬುಗಳ್ ಮನಸಿಜನಾ |

ಜಸಮೞಯೆ ಸುಡುವು[11]ವೆರ್ದೆಯಂ ಬಿಸಿಯವಿವೆಂದಿಂತೆ ಪೇೞೆ ಧರ್ಮಾಪೋಹಂ ||೧೮೫||

 

ಸ್ಮರನಸ್ತ್ರ-ಸಮಿತಿಯದು ನಿರ್ಭರಮಂಗಮನುರ್ಚಿ ಪೋಗೆಯುಂ ಪೋಬೞಯಂ |

ದೊರೆಕೊಳಿಸಲಾಗದದೞಂ ಶರತತಿಯಲ್ತೆಂಬುದಿಂತು ಧರ್ಮಾಪೋಹಂ ||೧೮೬||

iii) ಗುಣಾಪೋಹ

ಸ್ಮರನೈದಂಬುಗಳಲ್ಲಿವು ಶರಕೋಟಿಗಳಿಲ್ಲದಾಗಳಿಂತೀ ಲೋಕಾಂ- |

ತರವರ್ತಿ ವಿರಹಿ-ಗಣಮಂ ನಿರುತಂ ಮ[12]ರ್ದಿಸವು ಅವೆನೆ ಸುಗುಣಾಪೋಹಂ ||೧೮೭||


[1] ನುೞಪೆ ‘ಪಾ’, ನಱಪೆ ‘ಮ’, ನುೞಪಿ ‘ಸೀ’; ಅರ್ಥದೃಷ್ಟಿಯಿಂದ ಪರಿಷ್ಕೃತಪಾಠ ನಮ್ಮದು.

[2] ಮುಱಕ ‘ಸೀ’.

[3] ಮನವಂ ‘ಪಾ, ಮ’.

[4] ಕಡಲುಂ ‘ಪಾ, ಸೀ’; ಕೊಳಲುಂ ‘ಅ’.

[5] ನೆಗೞ್ದ‘ಬ’.

[6] ಇದು ಪರಿಷ್ಕೃತಪಾಠ; ಮಾಡುವರೆಲ್ಲಂ ‘ಪಾ, ಮ, ಸೀ’.

[7] ತಾರಮೇ ‘ಬ’.

[8] ತೃಟಿತ ‘ಪಾ’. ತ್ರುಟಿತ ‘ಮ’. ಛಂದಸ್ಸಿಗಾಗಿ ‘ತ್ರುಟಿತ ಎಂಬಲ್ಲಿ ಪ್ರಥಮಾಕ್ಷರ ಶಿಥಿಲವಾಗಿರುವುದೆಂಬುದನ್ನು ‘ತೃಟಿತ’ ಎಂಬ ಈ ಪಾಠ ತೋರಿಸುತ್ತದೆ; ಇದಾಗಲಿ ‘ಘಟಿತ’ ಎಂದು ‘ಸೀ’ ಸೂಚಿತಪಾಠವಾಗಲಿ ಅರ್ಥಕ್ಕೆ ಹೊಂದದು. ಆದುದರಿಂದ ಅರ್ಥಾನುಸಾರ ಇಲ್ಲಿ ಪರಿಷ್ಕರಿಸಲಾಗಿದೆ.

[9] ಇದು‘ಸೀ’ ಸೂಚಿತಪಾಠ; ‘ಗಣಗಣನೋತ್ತಂಸದಿ’, ‘ಪಾ’; ‘ಮಣಿಗಳ್ ಮೂರ್ತ್ತಾಂ ಕದಿಂ’ ‘ಮ’.

[10] ಕೞಲ್ದುದಿದೆ ‘ಮ’, ‘ಕಳಲ್ತುದುರೆ ‘ಪಾ’.

[11] ದೆರ್ದೆಯಂ ‘ಮ’.

[12] ಇದು ಅರ್ಥೋಚಿತವಾಗಿ ಪರಿಷ್ಕೃತಪಾಠ; ಮರ್ದಿಸುವುವನೆನೆ ‘ಪಾ, ಮ’.