ಕನ್ನಡ ಸಾಹಿತ್ಯ ಒಂದು ಸಾವಿರ ವರ್ಷಗಳಿಂದ ಬೆಳೆದುಬಂದಿದೆ. ಅನೇಕ ಕವಿಕೃತಿಗಳಿಂದ ವೈವಿಧ್ಯ ರಮಣೀಯವಾಗಿದೆ. ಆ ಸಾಹಿತ್ಯಕ್ಷೇತ್ರದ ಸುದೀರ್ಘ ಪಥದ ವಿಪುಲ ವಿಸ್ತೀರ್ಣದಲ್ಲಿ, ಒಂದರಿಂದೊಂದಕ್ಕೆ ಸುಮಾರು ೫೦೦ ವರ್ಷಗಳ ಅಂತರದ ದೂರದಲ್ಲಿ, ಎರಡು ಮಹಾ ಶಿಖರಗಳು ಶೋಭಿಸುತ್ತಿವೆ, ಆಕಾಶ ಚುಂಬಿಗಳಾಗಿ, ಬೃಹತ್ತಿನಲ್ಲಿ, ಮಹತ್ತಿನಲ್ಲಿ, ಮಹೋನ್ನತಿಯಲ್ಲಿ, ಭವ್ಯತೆಯಲ್ಲಿ ಅವರೆಡೂ ಒಂದರೊಡನೊಂದು ಹೊಯ್‌ಕಯ್ಯಾಗಿ ನಿಂತಿವೆ. ಅವುಗಳ ಸುತ್ತಲೂ, ಒಂದರಿಂದೊಕ್ಕೆ ತೋರಣ ಕಟ್ಟಿದಂತೆ, ಮಲೆಗಳಿಗೆ, ಬೆಟ್ಟಗಳಿವೆ, ಗುಡ್ಡಗಳಿವೆ, ಬೋರೆತಿಟ್ಟುಗಳಿವೆ. ಆದರೆ ಮೇರು ಮಂದರ ಸದೃಶರಾಗಿರುವ ಪಂಪ ನಾರಣಪ್ಪರಿಗೆ ಹೆಗಲೆಣೆಯಾಗುವವರು ಅವರಲ್ಲಿ ಯಾರೊಬ್ಬರೂ ಇಲ್ಲ.

ಹಳಗನ್ನಡದ ಕವಿ ಪಂಪ-ಕಲಿತವರಿಗೆ ಕಲ್ಪತರು. ನಡುಗನ್ನಡದ ಕವಿ ನಾರಣಪ್ಪ-ಕಲಿಯದವರಿಗೂ ಕಾಮಧೇನು. ಕರ್ಣಾಟಕದ ಕವಿಜೀವನದ ಮೇಲೆ ಪಂಪನ ಪ್ರಭಾವ ವಿಶೇಷವಾಗಿರಬಹುದು. ಆದರೆ ಜನಜೀವನದ ಹೃದಯ ವೇದಿಕೆಯಲ್ಲಿ ನಾರಣಪ್ಪನೆ ಅಗ್ರಾಸನಸ್ಥ ಮಹಾಧ್ಯಕ್ಷ, ಅದಕ್ಕೆ ಕಾರಣ, ನಾರಣಪ್ಪನ ನಡುಗನ್ನಡದ ಭಾಮಿನೀಗಣದ ತರಂಗಶೈಲಿಯ ಸುಲಭ ಸರಳತೆ ಮಾತ್ರವಲ್ಲ; ಪ್ರವಾಹಪೂರ್ಣವಾದ ಪರ್ವತ ಭಾಗೀರಥಿಯ ಅದಮ್ಯ ವೇಗದ ಭೀಮಗಮನ ವಿನ್ಯಾಸದಿಂದ ಮುನ್ನುಗ್ಗುವ ಆತನ ಪ್ರತಿಭೆಯೊಂದೇ ಅಲ್ಲ: ಹೆಮ್ಮೋಡದಂತೆ ದಿಗಂತದಿಂದ ಅನಿರೀಕ್ಷಿತವಾಗಿ ಮೇಲ್ವಾಯುವ ಅವನ ಕಲ್ಪನಾಶಕ್ತಿ, ಕಾರ್ಗಾಳಿಯಂತೆ ಬೀಸಿ ಬಡಿಯುವ ಅವನ ಭಾವಾವೇಗ, ಮಿಂಚಿನ ಬಳ್ಳಿಯಂತೆ ಅಲ್ಲಲ್ಲಿ ತಳತಳಿಸುವ ಆತನ ಉಪಮಾರೂಪಕಾದಿಗಳ ರುದ್ರರಮ್ಯತೆ, ಸಿಡಿಲುಗುಡುಗಿನ ಡಮರುಡಿಂಡಿಮಗಳನ್ನೆ ಹಿಡಿದು ಬಡಿದು ಕುಣಿವ ನಾದ ತಾಂಡವನಂತಹ ಆತನ ರುಂದ್ರನೃತ್ಯಶೈಲಿ-ಇವು ಮಾತ್ರವೆ ಸಮಸ್ತಕಾರಣವಲ್ಲ, ಗದುಗಿನ ಭಾರತದ ಜನಪ್ರಿಯತೆಗೆ. ಕವಿ ವಿರಾಟ್‌ಕುಮಾರವ್ಯಾಸನ ಕಾವ್ಯಲಕ್ಷ್ಮಿಗೆ ಆಕೆಯ ನಾಡಿಯ ನಿತ್ಯಸ್ಪಂದನಗಳೇನೊ ನಿಜ, ಮೇಲೆ ಹೇಳಿದ ಗುಣಗಳೆಲ್ಲ. ಜೊತೆಗೆ, ಬಹುಮುಖ್ಯವಾಗಿ, ಅವನ ಮಹಿಮೆಗೆ ಕಾರಣ ಆತನ ಧರ್ಮದೃಷ್ಟಿ, ಆತನ ಭಗವದ್‌ಭಕ್ತಿ, ಆತನ ಋಷಿದರ್ಶನ.

ಅವನ ಕೃತಿ ಕಲೆಗಾಗಿ ಕಲೆಯಾಗಿರದೆ ರಸರೂಪಿ ವಿಶ್ವೇಶನ ಸಾಕ್ಷಾತ್ಕಾರಕ್ಕೆ ಸೋಪಾನವೂ ಸಾಧನವೂ ಆಗಿದೆ. ಆದ್ದರಿಂದಲೆ ಸಾಹಿತ್ಯ ವಿಮರ್ಶನ ದೃಷ್ಟಿಯಿಂದ ತನ್ನ ಕೃತಿಯನ್ನು ಪರಿಶೀಲಿಸುವವರ ವಿಷಯದಲ್ಲಿ ಆತನಿಗೆ ಕೊಂಚ ಜುಗುಪ್ಸೆ. ಅದಿರಲಿ, ಕಡೆಗೆ, ಪದಕ್ಕೊಂದು ಖಚಿತವಾದ ಅರ್ಧವಿರಲೇಬೇಂಬ ನಿಘಂಟಿನ ನಿಯಮಕ್ಕೂ ಅವನು ನಿಷ್ಠಾವಂತನಾಗಿರುವಂತೆ ತೋರುವುದಿಲ್ಲ.

ಪದದ ಪ್ರೌಢಿಯ, ನವರಸಂಗಳ ಉದಿತವನು, ಅಭಿಧಾನಭಾವವ
ಬೆದಕಲಾಗದು ಬಲ್ಲ ಪ್ರೌಢರುಮೀ ಕಥಾಂತರಿಕೆ;
ಇದು ವಿಚಾರಿಸೆ ಬರಿಯ ತೊಳಸಿಯ ಉದಕದಂತಿರೆ ಇಲ್ಲಿ ನೋಳ್ಪುದು
ಪದುಮನಾಭನ ಮಹಿಮೆ, ಧರ್ಮವಿಚಾರ ಮಂತ್ರವನು.

ಧರ್ಮಬೋಧೆ ಆಕರ್ಷಿಸದವರನ್ನು ಕಲಾಸೌಂದರ್ಯವಾದರೂ ಸೆಳೆದು ಸಯ್ಪಿನ ಕಡೆಗೆ ನಡೆಯಿಸಲಿ ಎಂಬುದು ಆತನ ಆಕಾಂಕ್ಷೆ:

ಸರಸರಿಗೆ ಸಾಹಿತ್ಯರಿಗೆ ಹರಿಶರಣರಿಗೆ ಶಾಂತಾ
ತ್ಮರಿಗೆ ವರವಿದು ವಶ್ಯಮಾತ್ರದಮೋಘರಸಘಂಟಿಕೆ.
ದುರುಳರಿಗೆ ದೂಷಕರಿಗತಿಮೊಗದಿರುಹುವರಿಗಜ್ಞರಿಗೆ ಚಿತ್ತಾ
ಕರುಷಣಪು ಕವಿತಾ ವಿಲಾಸದ ವರ ಚಮತ್ಕಾರ.

ನಾರಣಪ್ಪನಿಗೆ ಭಾರತವೆಂದರೆ ಭಗವಂತನ ಲೀಲೆ. ಆತನ ಲೀಲೆಯ ಸ್ಮರಣ, ಆತನ ಲೀಲೆಯ ಧ್ಯಾನ, ಆತನ ಲೀಲೆಯ ವರ್ಣನ ಮತ್ತು ವಾಚನ-ಈ ಎಲ್ಲ ಸಾಧನಗಳಿಂದ, ಎಂದರೆ, ಹೃದಯದ ಮೇಲೆ ಹಾದುಹೋಗುವ ಮಹದ್ಭಾವಗಳ ಪವಿತ್ರ ಪದಸ್ಪರ್ಶನದಿಂದ ಪ್ರಾಪ್ತವಾಗುವ ಜೀವನ ಸಂಸ್ಕಾರವೆ ತಪಸ್ಸಾಧನೆಯಾಗಿ, ಆತ್ಮಬೋಧಿಗೆ ಹಾದಿಯಾಗುತ್ತದೆ.

ತಿಳಿಯಹೇಳುವೆ ಕೃಷ್ಣಕಥೆಯನು ಇಳೆಯ ಜಾಣರು ಮೆಚ್ಚುವಂತಿರೆ
ನೆಲೆಗೆ ಪಂಚಮಶ್ರುತಿಯನೊರೆವೆನು ಕೃಷ್ಣ ಮೆಚ್ಚಲಿಕೆ;
ಹಲವು ಜನ್ಮದ ಪಾಪರಾಶಿಯ ತೊಳೆವ ಜಲವಿದು, ಶ್ರೀಮದಾಗಮ
ಕುಳಕೆ ನಾಯಕ, ಭಾರತಾಕೃತಿ ಪಂಚಮಶ್ರುತಿಯ.

ಇಂತಹ ಶ್ರದ್ಧೆಯಿಂದ ಉದ್ದೀಪ್ತನಾಗಿ ಮಹಾಕಾವ್ಯವನ್ನು ಮಹತ್ತಾಗಿ ನಿರ್ವಹಿಸಿರುವ ನಮ್ಮೀ ಕವಿ ಬರಿಯ ಕವಿ ಅಲ್ಲ. ರಸದರ್ಶಿಯೂ ಹೌದು. ಆದ್ದರಿಂದ ಬ್ರಹ್ಮದರ್ಶಿಯೂ ಆಗಿದ್ದಾನೆ.

ಅಲ್ಪಕಾಲಾವಕಾಶದ ಭಾಷಣದಲ್ಲಿ ವಿವರಕ್ಕೆ ಕೈಹಾಕುವುದು ಗಾಂಪತನವಾದೀತು, ಮೂರುಗಳಿಗೆಯಲ್ಲಿ ಮೇರುವನ್ನು ಸುತ್ತ ಬಯಸುವಂತೆ. ಆದ್ದರಿಂದ ಆ ತ್ರಿವಿಕ್ರಮಪ್ರದಕ್ಷಿಣದ ಜಾಂಬವಸಾಹಸಕ್ಕೆ ಕೈಹಾಕದೆ, ಅಂತಹ ಸಾಹಸಕ್ಕೆ ಕೈಮರಗಳಂತಿರುವ ಕೆಲವು ಪುಸ್ತಕಗಳ ಹೆಸರು ಹೇಳಿ ವಿರಮಿಸುತ್ತೇನೆ: ಮೈಸೂರು ಮಹಾರಾಜಾ ಕಾಲೇಜಿನ ಕರ್ನಾಟಕ ಸಂಘವು ಪ್ರಕಟಿಸಿರುವ ಕುಮಾರವ್ಯಾಸ ಪ್ರಶಸ್ತಿ; ವಿಶ್ವವಿದ್ಯಾನಿಲಯದ ಪ್ರಚಾರೋಪನ್ಯಾಸ ಮಾಲೆಯಲ್ಲಿ ಅಚ್ಚಾಗಿರುವ “ಕುಮಾರವ್ಯಾಸ” ಮತ್ತು ‘ಕುಮಾರವ್ಯಾಸ ವಾಣಿ.’

ಒಂದೆಚ್ಚರಿಕೆಯ ಮಾತು. ವಿಮರ್ಶೆಗಳೆಷ್ಟಿದ್ದರೂ ಅವೆಲ್ಲ ಕೈಮರಗಳಂತೆ. ಕೈಮರಕ್ಕೆ ಜೋತುಬಿದ್ದ ಮಾತ್ರಕ್ಕೆ ಯಾರಿಗೂ ದಾರಿ ಸಾಗುವುದಿಲ್ಲ, ಯಾರೂ ಗುರಿಗೆ ಸೇರುವುದಿಲ್ಲ. ಆದ್ದರಿಂದ ಓರಿಯಂಟಲ್ ಲೈಬ್ರರಿಯಲ್ಲಿ ಅಚ್ಚಾಗಿರುವ ಮತ್ತು ಅಚ್ಚಾಗುತ್ತಿರುವ ಸಂಪುಟಗಳ ನಿಜಸೌಧಕ್ಕೇ ನಾವು ಯಾತ್ರಿಗಳಾಗುವುದು ಉತ್ತಮೋತ್ತಮ. ಅಭಿರುಚಿ ಇರುವವರಿಗೆ ಇನ್ನೊಂದು ಶುಭವಾರ್ತೆ. ವಿಶ್ವವಿದ್ಯಾನಿಲಯದ ಗ್ರಂಥಮಾಲೆಯಲ್ಲಿ ಗದುಗಿನ ಭಾರತದ ಸಂಗ್ರಹವು ಎರಡು ಹೊತ್ತಗೆಗಳಲ್ಲಿ. ಸಾಮಾನ್ಯರೂ ಕೊಳ್ಳಬಹುದಾದ ಬೆಲೆಯಲ್ಲಿ ಸಿದ್ಧವಾಗುತ್ತಿದೆ.

ಆದರೆ ಎಲ್ಲರೂ ಅಷ್ಟುದೂರ ಹೋಗುವುದೂ ಬೇಡ, ಅಷ್ಟು ಕಾಲ ಕಾಯುವುದೂ ಬೇಡ. ನಮ್ಮ ಪುಣ್ಯಕ್ಕೆ ನಮಗೊಂದು ವಿಶೇಷ ಸೌಕರ್ಯವಿದೆ. ಅಕ್ಷರ ಪರಿಚಯ ಇಲ್ಲದವರೂ ಪುಸ್ತಕಕ್ರಯ ಕೊಡಲಾರದವರೂ ಗಮಕಿಗಳ ಅನುಗ್ರಹದಿಂದ ನಾರಣಪ್ಪನ ರಸಾವೇಶದ ರುಚಿಯನ್ನು ಮನದಣಿಯ ಸವಿಯಬಹುದು. ಗದುಗಿನ ಭಾರತವನ್ನು ಕುರಿತು ಮಾತನಾಡುವಾಗ ಅದರ ಅಮೃತ ಸುಖದ ವಿತರಣೆಗೆ ದಿನದಿನವೂ ದುಡಿಯುತ್ತಿರುವ ಗಮಕಿಗಳನ್ನು ನೆನೆಯದಿರುವುದು ಸಾಧ್ಯವಿಲ್ಲ. ನಾರಣಪ್ಪನ ಕಾವ್ಯದ ಬದುಕಿಗೆ ಗಮಕಕಲೆ ಶ್ವಾಸೋಚ್ಛಾಸದಂತೆ ಅತ್ಯಂತಾವಶ್ಯಕ. ಓದಿ ಅಥವ ಓದಿಸಿ ಕೇಳಿದಲ್ಲದೆ ಕುಮಾರವ್ಯಾಸನ ವಾಣಿಯ ಮಹತ್ತು ಅರಿವಾಗುವುದಿಲ್ಲ. ಕವಿ ಪ್ರತಿಭೆಯ ಸೂಕ್ಷ್ಮ ಸೌಂದರ್ಯಗಳನ್ನು ಅರಿಯಲು ವಿಮರ್ಶನಕಲೆ ಎಷ್ಟರಮಟ್ಟಿಗೆ ಅವಶ್ಯಕವೋ ಆ ಪ್ರತಿಭೆಯನ್ನು ಆಸ್ವಾದಿಸಲು ಗಮಕಕಲೆ ಅಷ್ಟೇ ಮಟ್ಟಿಗೆ ಅವಶ್ಯಕ. ವಿಮರ್ಶಕರು ಗಮಕಿಗಳಾಗಿ, ಗಮಕಿಗಳು ವಿಮರ್ಶಕರಾಗಿ ಅಥವಾ ವಿಮರ್ಶಕರಿಂದ ಗಮಕಿಗಳರಿತು, ಗಮಕಿಗಳಿಂದ ವಿಮರ್ಶಕರನುಭವಿಸಿ, ಒಬ್ಬರಿಗೊಬ್ಬರು ನೆರವಾಗಿ ಎರಡೂ ಕಲೆಗಳ ಉಪಾಸಕರು ಅನ್ಯೋನ್ಯತೆಯಿಂದ ಕುಮಾರವ್ಯಾಸನ ಸೇವೆಗೆ ಹೊರಟರೆ ಎಂತಹ ಆಶೀರ್ವಾದವಾದೀತು ಜನ ಜೀವನಕ್ಕೆ.

ಅಂತಹ ಪುಣ್ಯಕಾಲ ಈಗಾಗಲೆ ಸ್ವಲ್ಪ ಮಟ್ಟಿಗೆ ಪ್ರಾರಂಭವಾಗಿದೆ. ಇಂದಿನ ಉತ್ಸವದ ಕಾರ್ಯಕ್ರಮವೂ ಅದಕ್ಕೊಂದು ಸಾಕ್ಷಿ.

ನಮ್ಮ ಕನ್ನಡನಾಡಿಗೆ ದೇವರು ಸಹ್ಯಾದ್ರಿಯನ್ನು ದಯಪಾಲಿಸಿದ್ದಾನೆ. ತುಂಗಾ ಕಾವೇರಿಯನ್ನು ದಯಪಾಲಿಸಿದ್ದಾನೆ. ಪಶ್ಚಿಮ ಸಮುದ್ರದ ಸಂಗ ಸಾನಿಧ್ಯಗಳನ್ನು ಕೃಪೆಮಾಡಿದ್ದಾನೆ. ಜೊತೆಗೆ, ಅವೆಲ್ಲಕ್ಕೂ ಹೆಗಲೆಣೆಯಾಗಿ ನಿಂತರೂ ನಮಗೆ ಒಡನಾಡಿಗಳಾಗಿರುವಂತೆ, ಪಂಪ ನಾರಣಪ್ಪರನ್ನೂ ಅನುಗ್ರಹಿಸಿದ್ದಾನೆ. ಅವರ ಬೆಲೆಯರಿತು ನಾಡಿನ ಬಾಳು ಅರಳಲಿ. ಆ ವಿಶ್ವಕವಿಗಳಿಬ್ಬರನ್ನೂ ನಮ್ಮವರೆಂದು ಹೇಳಿಕೊಳ್ಳುವ ನಮ್ಮ ಹೆಮ್ಮೆಯ ನೆತ್ತಿ ಮುಗಿಲಿಗೆ ತಾಗುತ್ತಿರಲಿ.