ಪ್ರಶಂಸೆ, ಪೂಜೆ, ಆರಾಧನೆ, ಉಪಾಸನೆ ಈ ಪದಗಳು ನಮ್ಮ ಮನಸ್ಸಿನ ಅಥವಾ ಬುದ್ಧಿಯ ಯಾವ ವ್ಯಾಪಾರಗಳನ್ನು ವರ್ಣಿಸುತ್ತವೆ ಎಂಬುದನ್ನು ಪರಿಶೀಲಿಸಿದರೆ ನಮ್ಮ ಚೇತನದ ಅತಿ ನಿಗೂಢವಾದ ಎರಡು ಪ್ರಧಾನ ಲಕ್ಷಣಗಳು ಗೋಚರವಾಗುತ್ತವೆ. ಒಂದು ಅದರ ಊರ್ಧ್ವಮುಖತೆ, ಮತ್ತೊಂದು ಅದರ ಊರ್ಧ್ವಯಾತ್ರೆ. ಅನ್ಯರಲ್ಲಿದ್ದು ಸದ್ಯಕ್ಕೆ ತನಗಿಲ್ಲದ ಆದರೂ ಪಡೆಯಲಾಶಿಸುವ ಮನೋಧರ್ಮ ಪ್ರಶಂಸೆಯ ರೂಪದಲ್ಲಿ ಮೊದಲು ಮೈದೋರುತ್ತದೆ. ಇಂದು ತಾನಾಗಿಲ್ಲದಿದ್ದರೂ ಮುಂದೆ ತಾನಾಗಲೆಬೇಕೆಂಬ ಎದೆಹಂಬಲ ತೀವ್ರವಾದಂತೆಲ್ಲ ಆ ಪ್ರಶಂಸೆ ಪೂಜಾರೂಪಕ್ಕೆ ತಿರುಗುತ್ತದೆ. ಪೂಜಾವಸ್ತು ಆದರ್ಶವಾಗಿ ಪರಿಣಮಿಸುತ್ತದೆ. ತನ್ನ ಆಕಾಂಕ್ಷೆಯ ಆತ್ಮಶ್ರೀಯನ್ನು ಪಡೆದಿರುವ ಆ ವ್ಯಕ್ತಿ ಪೂಜ್ಯನಾಗುತ್ತಾನೆ. ಬರಿಯ ಊರ್ಧ್ವಮುಖವಾಗಿರುವ ಆಕಾಂಕ್ಷೆ ಸಾಧನೆಯ ರೂಪಕ್ಕೆ ತಿರುಗಿ ಊರ್ಧ್ವಯಾತ್ರಾರೂಪಿಯಾದೊಡನೆ ಪೂಜೆ ಆರಾಧನೆಯಾಗುತ್ತದೆ. ಆರಾಧನಾ ಭಾವನೆ ಉಜ್ವಲವಾಗಿ ತಪಸ್ಯಾರೂಪಕ್ಕೆ ತಿರುಗಿದರೆ ಉಪಾಸನೆಯಾಗುತ್ತದೆ. ಉಪಾಸನೆ ತುತ್ತತುದಿಗೆ ತಲ್ಲೀನರೂಪದ ಸಾಕ್ಷಾತ್ಕಾರದಲ್ಲಿ ಪರ್ಯವಸಾನ ಹೊಂದುತ್ತದೆ. ಆಗ ಸಾಧಕನಿಗೆ ಸಿದ್ಧಿಯಾಯಿತೆಂದು ಹೇಳುತ್ತೇವೆ. ಸಿದ್ಧಿಯೆಂದರೆ ನಿಸ್ತರಂಗವಾದ ನಿರಪೇಕ್ಷಕವಾದ ಪೂರ್ಣತಾ ವಿಶ್ರಾಂತಿ, ತಾದ್ಯಾತ್ಮ್ಯ, ಶಾಂತಿ.

ಹೊಳೆ ಹರಿಯುವುದನ್ನು ಭೌತವಿಜ್ಞಾನಿ ‘ನದಿಗಿರುವ ಸಮುದ್ರಪರವಾದ ಪ್ರಶಂಸೆ’ ಎಂದು ವಿವರಿಸುವುದಿಲ್ಲ. ಮೇಲುಮಟ್ಟದಲ್ಲಿ ಕಟ್ಟಿರುವ ಜಲಾಶಯದಿಂದ ಕೊಳಾಯಿಗಳಲ್ಲಿ ನುಗ್ಗಿ ಅಧೋಮುಖವಾದ ನಲ್ಲಿಗಳಲ್ಲಿ ಹರಿದು ಎತ್ತರದಲ್ಲಿರುವ ನಗರಸ್ಥಾನಗಳಿಗೇರಲು ಮತ್ತೆ ಊರ್ಧ್ವಮುಖವಾಗಿ ಅಡಗಿರುವ ನೀರಿನ ಅಚಿದ್‌ವ್ಯಾಪಾರವನ್ನು ತನ್ನ ಪೂರ್ವಸ್ಥಾನ ಸಾಧನಾಕ್ರಿಯೆಯೆಂದು ವಿವರಿಸುತ್ತೇವೆ. ಆ ನೀರಿನ ಕ್ರಿಯೆ ಪ್ರಜ್ಞಾಪೂರ್ವಕವಾಗಿದ್ದಿದ್ದರೆ ಅದರ ಆ ಊರ್ಧ್ವಮುಖತೆಯನ್ನೂ ಊರ್ಧ್ವಯಾತ್ರೆಯನ್ನೂ ಪ್ರಶಂಸೆ ಪೂಜೆ ಆರಾಧನೆ ಉಪಾಸನೆ ಸಾಧನೆ ಮೊದಲಾದ ಮಾತುಗಳಿಂದ ವಿವರಿಸಬೇಕಾಗಿತ್ತು. ನಾವು ಹಾಗೆ  ಮಾಡದಿರುವುದಕ್ಕೆ ಕಾರಣ ಅನ್ನಮಯ ವ್ಯಾಪಾರಗಳನ್ನು ಪ್ರಾಣಮಯ ವ್ಯಾಪಾರಗಳಿಂದ ಪ್ರತ್ಯೇಕವಾಗಿ ಭಾವಿಸುವ ನಮ್ಮ ರೂಢಿ. ಆದರೂ ಪೂರ್ಣಪ್ರಜ್ಞೆಗೆ ಅವೆರಡು ವ್ಯಾಪಾರಗಳಿಗೂ ಸ್ವರೂಪತಃ ಭೇದವಿಲ್ಲ.

ಇಂತಹ ವೈಜ್ಞಾಣಿಕವಾದ ಪೂರ್ಣದೃಷ್ಟಿಯಿಂದ ಸಮೀಕ್ಷಿಸಿದರೆ ನಮ್ಮ ಪೂಜಾಭಾವದ ನಿಜಸ್ವರೂಪ ಗೊತ್ತಾಗುತ್ತದೆ. ಅದರ ಉದ್ದೇಶ ಅರ್ಥವಾಗುತ್ತದೆ. ಎಲ್ಲ ಪೂಜೆಯ ಪರಮೋದ್ಧೇಶವೆಂದರೆ ನಾವು ಯಾವುದನ್ನು ಪೂಜಿಸುತ್ತೇವೆಯೊ ಅದರಂತಾಗುವುದು; ಕೊನೆಗೆ ಇನ್ನೂ ಮುಂಬರಿದು ಅದನ್ನು ಪೂರ್ಣವಾಗಿ ಪಡೆದು ಅದೇ ಆಗುವುದು. ಜಲಾಶಯದಿಂದ ಕೊಳಾಯಿಗಳಲ್ಲಿ ಕೆಳಗಿಳಿದು ಮತ್ತೆ ಮೇಲೇರುವ ನೀರಿನ ಪ್ರಯತ್ನವನ್ನು ಪೂರ್ವಸ್ಥಾನಸಾಧನಾಕ್ರಿಯೆ ಎಂದು ವಿವರಿಸುವಂತೆಯೆ ಜೀವರ ಈ ಎಲ್ಲ ಪ್ರಯತ್ನಗಳನ್ನೂ ವಿವರಿಸಿದರೆ ತಪ್ಪಾಗುವುದಿಲ್ಲ. ತಾರತಮ್ಯವಿರುವುದು ಪ್ರಜ್ಞಾಪ್ರಕಾರದಲ್ಲಿ ಮಾತ್ರ. ಸಚ್ಚಿದಾನಂದ ಲೀಲಾರ್ಥವಾಗಿ ಮಾಯೆಗವತರಿಸಿದ ಜೀವ ತನ್ನ ಸ್ವಸ್ಥಾನ ಸಂಸ್ಥಾಪನಾಸಾಧನೆಯಲ್ಲಿ ತೊಡಗುತ್ತದೆ. ಸ್ವಾಭಾವಿಕವಾಗಿ, ಪ್ರಕೃತಿ ಸಿದ್ಧವಾಗಿ. ಆ ಸಾಧನೆ ಬೇರೆಬೇರೆಯ ಕೋಶಗಳಲ್ಲಿ ಆಯಾ ಕೋಶಗಳಿಗೆ ಅನುಗುಣವಾದ ರೀತಿಗಳಲ್ಲಿ ರೂಪಗಳಲ್ಲಿ ಸಾಗುತ್ತದೆ. ಅದು ಅನ್ನಮಯದಲ್ಲಿ ವಿಕಾಸಗೊಳ್ಳುವಾಗ ನಿದ್ರಿತವೆಂಬಂತೆ ಸಾಗುತ್ತದೆ. ಪ್ರಾಣಮಯದಲ್ಲಿ ಸ್ವಪ್ನಸ್ಥವೆಂಬಂತೆ; ಮನೋಮಯದಲ್ಲಿ ಜಾಗ್ರತವಾಗಿ, ಪ್ರಜ್ಞಾಪೂರ್ವಕವಾಗಿ, ಸ್ವಪ್ರಯತ್ನಶೀಲವಾಗಿ, ತನ್ನರಿವಿಗೆ ತಾನೆ ವಿಷಯವಾಗಿ ತನ್ನನ್ನು ತಾನೆ ಗಮನಿಸುತ್ತಾ ಮುಂಬರಿಯುತ್ತದೆ. ಮನೋಮಯದ ಪ್ರಜ್ಞೆಯಲ್ಲಿ ಜೀವನಿಗೆ ತನಗಿಂತಲೂ ಮುಂದಿರುವ ಸ್ಥಾನ ಆಕರ್ಷಣೀಯವಾಗಿ, ಆರಾಧ್ಯಾವಾಗಿ, ಆದರ್ಶವಾಗಿ, ಕರೆಯಾಗಿ, ಕೋರಿಕೆಯಾಗಿ, ಪ್ರಿಯವಾಗಿ, ಪೂಜ್ಯವಾಗಿ ಗೋಚರವಾಗುತ್ತದೆ. ಹಾಗೆಯೆ ತಾನಿರುವ ಮಟ್ಟಕ್ಕೆ ಆ ಮೇಲಿರುವ ಮಟ್ಟ ವಿಭೂತಿಸ್ಥಾನವಾಗಿ ಪರಿಣಮಿಸುತ್ತದೆ. ಅಲ್ಲಿಗೆ ಏರಿರುವ ಇನ್ನೊಂದು ಚೇತನ ವಿಭೂತಿಸ್ಥಾನವಾಗಿ ಪರಿಣಮಿಸುತ್ತದೆ. ಅಲ್ಲಿಗೆ ಏರಿರುವ ಇನ್ನೊಂದು ಚೇತನ ವಿಭೂತಿಯಾಗುತ್ತಾನೆ. ಅಲ್ಲಿಗೆ ಏರಬೇಕೆಂಬುವ ಅಪೇಕ್ಷೆ ಪ್ರಶಂಸಾರೂಪದಲ್ಲಿ ಪೂಜಾರೂಪದಲ್ಲಿ ಭಾವಚರವಾಗುತ್ತದೆ. ಆ ಅಪೇಕ್ಷೆ ತನ್ನ ಸದ್ಯಃಸ್ಥಿತಿಯಿಂದ ಆದರ್ಶಪ್ರಾಯವಾದ ಆ ವಿಭೂತಿ ಸ್ಥಾನಕ್ಕೆ ಏರಲು ಪೂಜಾಪಥದಲ್ಲಿ ಯಾತ್ರಿಯಾಯಿತೆಂದರೆ ಆರಾಧನೆಯ ಉಪಾಸನೆಯ ಸಾಧನೆಯ ರೂಪದಲ್ಲಿ ಯೋಗಶಕ್ತಿಯಾಗುತ್ತಾ ಹೋಗುತ್ತದೆ. ಮನುಷ್ಯಚೇತನದ ಈ ಊರ್ಧ್ವಮುಖವಾದ ಅಭೀಪ್ಸೆಯ ಚೇಷ್ಟಿತವನ್ನು ‘ವೀರಪೂಜೆ’ ಎಂದು ಕರೆದಿದ್ದಾರೆ. ಆದರೆ ಅದನ್ನು ‘ವಿಭೂತಿಪೂಜೆ’ ಎಂದು ಕರೆದರೆ ನಮ್ಮ ವಿವರಣೆಯ ದೃಷ್ಟಿಯಿಂದ ಹೆಚ್ಚು ಸಾರ್ಥಕವಾಗುತ್ತದೆ.

ವಿಭೂತಿಯೆಂದರೆ ವಿಶೇಷವಾದ ಭೂತಿ. ಭೂತಿ ಎಂದರೆ ಆಗುವಿಕೆ. ಜಗತ್ತೆಲ್ಲ ಈಶ್ವರನ ಭೂತಿಯೆ, ಎಂದರೆ ಅವನ ಆಗುವಿಕೆಯೆ. ಆದರೂ ಲೀಲಾಪ್ರಯೋಜನಾರ್ಥವಾಗಿ ಅವನ ಈ ಭೂತಿ ಅಥವಾ ಆಗುವಿಕೆಯಲ್ಲಿ ಗುಣ, ಕಾಂತಿ, ಶಕ್ತಿ, ವಿಕಾಸ ಪ್ರಕಾಶಾದಿಗಳಲ್ಲಿ ತಾರತಮ್ಯ ಗೋಚರವಾಗಿದೆ. ಈಶ್ವರನ ಅಥವಾ ಈಶ್ವರೀ ಶಕ್ತಿಯ ಈ ಭೂತಿ ಅಥವಾ ಆಗುವಿಕೆ ಎಲ್ಲಿ ಸಾಮಾನ್ಯ ಪ್ರಮಾಣಕ್ಕಿಂತಲೂ ಅಧಿಕತರವಾಗಿ ಅಥವಾ ತನ್ನ ಸಾಮಾನ್ಯರೀತಿಗಿಂತಲೂ ಪರತರವಾಗಿ ಕಾಣಿಸಿಕೊಳ್ಳುತ್ತದೆಯೊ ಅಲ್ಲಿ ‘ವಿಭೂತಿ’ ಮೂಡುತ್ತದೆ. ಎಂದರೆ ವಿಶೇಷವಾದ ಭುತಿ ಅವಿರ್ಭವಿಸುತ್ತವೆ. ಆಗ ‘ಸಾಮಾನ್ಯ ಭೂತಿ’ ಈ ವಿಭೂತಿಯ ಮಟ್ಟಕ್ಕೇರಲು ಮೊದಲು ಆಶಿಸುತ್ತದೆ; ಆಮೇಲೆ ಪ್ರಯತ್ನಿಸುತ್ತದೆ. ಆ ಆಶೆಯ ಪ್ರಶಂಸೆ, ಪೂಜೆ; ಆ ಪ್ರಯತ್ನವೆ ಉಪಾಸನೆ, ಸಾಧನೆ. ಸಾಮಾನ್ಯಭೂತಿ ವಿಶೇಷಭೂತಿಯಾಗಲು ಕೈಕೊಳ್ಳುವ ಕಾರ್ಯಕ್ರಮದ ಪ್ರಪ್ರಥಮ ವಿನ್ಯಾಸವೆ ವಿಭೂತಿಪೂಜೆ!

ಮನುಷ್ಯ ಲೋಕದಲ್ಲಿ ಈ ವಿಭೂತಿ ನಾನಾ ರೂಪಗಳಲ್ಲಿ ಅನಂತವಾಗಿ ಮೈದೋರುತ್ತದೆ: ಜೋಗದ ಜಲಪಾತದಿಂದ ಹಿಡಿದು ಮಹಾತ್ಮಾ ಗಾಂಧಿಯವರೆಗೆ; ವರ್ಣಶಿಲ್ಪಿ ರೋರಿಕ್‌ನಿಂದ ಹಿಡಿದು ಪೂರ್ಣಯೋಗಿ ಶ್ರೀ ಅರವಿಂದರವರೆಗೆ. ಭಗವದ್ಗೀತೆಯ ಹತ್ತನೆಯ ಅಧ್ಯಾಯವವೆಲ್ಲ ಈ ‘ವಿಭೂತಿಯೋಗ’ಕ್ಕೆ ಮೀಸಲಾಗಿದೆ. ಈ ಕೊನೆಮೊದಲಲ್ಲ. ತನ್ನ ವಿಭೂತಿಗಳನ್ನು ಕುರಿತು ಹೇಳುವಾಗ ಪೀಠಿಕೆಯಾಗಿ ಹೀಗೆ ಹೇಳುತ್ತದೆ ಭಗವದ್‌ವಾಣಿ: “ನಾಸ್ತ್ಯಂತೋ ವಿಸ್ತರಸ್ಯ ಮೇ!” ಆ ವಿಭೂತಿಕೋಟಿಯ ಹೊರಹೊಮ್ಮುವಿಕೆಯ ವಿವಿಧತೆ ಸರ್ವಲೋಕವ್ಯಾಪ್ತವಾಗಿದೆ; ಸರ್ವತೋಮುಖವಾಗಿದೆ. ಬೆಟ್ಟ ಹೊಳೆ ಹಕ್ಕಿ ಮಿಗ ಮೀನು ಹಿಡಿದು ಅವತಾರ ಋಷಿ ಪ್ರವಾದಿ ಯೋಗಿ ಆಚಾರ್ಯ ಕವಿಯವರೆಗೂ ಇನ್ನೂ ಮೀರಿ ಅದರ ಉಲ್ಲೇಕವಿದೆ. ಆಲಿಸಿ: “ಆದಿತ್ಯಾನಾಮಹಂ ವಿಷ್ಣು” “ವೇದಾನಾಂ ಸಾಮವೇದೋಸ್ಮಿ” “ಸೇನಾನಿನಾಮಹಂ ಸ್ಕಂದಃ” “ಸ್ಥಾವರಾಣಾಂ ಹಿಮಾಲಯಃ” “ಅಶ್ವತ್ಥಃ ಸರ್ವ ವೃಕ್ಷಾಣಾಂ” “ಆಯುಧಾನಾಮಹಂ ವಜ್ರಂ” “ಧೇನೂನಾಮಸ್ಮಿ ಕಾಮಧುಕ್” “ಅನಂತಶ್ಚಾಸ್ಮಿ ನಾಗಾನಾಂ” “ರಾಮಃ ಶಸ್ತ್ರಭೃತಾಮಹಂ” “ಝಷಾಣಾಂ ಮಕರಶ್ಚಾಸ್ಮಿ” “ಸ್ರೋತ ಸಾಮಸ್ಮಿ ಜಾಹ್ನವೀ” “ಆಧ್ಯಾತ್ಮವಿದ್ಯಾ ವಿದ್ಯಾನಾಂ” “ದ್ವಂದ್ವಃ ಸಾಮಾಸಿ ಕಸ್ಯ ಚ” (ಕಡೆಗೆ ವ್ಯಾಕರಣವನ್ನು ಕೂಡ ಕೈಬಿಟ್ಟಿಲ್ಲ ಭಗವಂತ!) “ಕೀರ್ತಿ ಶ್ರೀರ್ವಾಕ್‌ಚ ನಾರೀಣಾಂ” “ಗಾಯತ್ರೀ ಛಂದಸಾಮಹಮ್‌” “ಕವೀನಾ ಮುಶನಾ ಕವಿಃ” “ಮೌನಂ ಚೈವಾಸ್ಮಿ ಗುಹ್ಯಾನಾಂ” ಕೊನೆಗೆ “ಉದ್ದೇಶತಃ ಕೆಲವನ್ನು ಹೇಳಿದ್ದೇನೆ, ಪರಂತಪ; ನನ್ನ ದಿವ್ಯ ವಿಭೂತಿಗಳಿಗೆ ಅಂತವಿಲ್ಲ” ಎಂದು ಭಗವಂತನು ಎಲ್ಲಕ್ಕೂ ಅನ್ವಯಿಸುವ ಮತ್ತು ಎಲ್ಲವನ್ನೂ ಒಳಕೊಳ್ಳುವ ಈ ವಿಭೂತಿಯೋಗ ಸೂತ್ರವನ್ನು ಹಾಡಿದ್ದಾನೆ:

ಯದ್ಯದ್ ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ ನಾ
ತತ್ತದೇವಾವಗಚ್ಛ ತ್ವಂ ಮಮ ತೇಜೋಂsಶ ಸಂಭವಮ್‌|

ವಿಭೂತಿಮತ್ತಾದ ಸತ್ತ್ವ ಎಲ್ಲಿ ಗೋಚರಿಸುತ್ತದೆಯೊ ಅಲ್ಲಿ ಭಗವಂತನ ತೇಜಸ್ಸಿನ ಅಂಶ ವಿಪುಲಪ್ರಮಾಣದಲ್ಲಿ ಅನುಭವಕ್ಕೆ ಬರುತ್ತದೆ. ಸಾಮಾನ್ಯ ಚೇತನದ ಉದ್ಧಾರಕ್ಕೆ ಪುರೋಗಮನಕ್ಕೆ ವಿಕಾಸಕ್ಕೆ ಈ ‘ವಿಭೂತಿ ಪೂಜೆ’ ಅನಿವಾರ್ಯ ಮಾರ್ಗವಾಗುತ್ತದೆ, ಅವಶ್ಯ. ವಿಧಾನವಾಗುತ್ತದೆ.

ಮನುಷ್ಯ ಲೋಕದಲ್ಲಿ ಮತ್ತು ಮನುಷ್ಯ ರೂಪದಲ್ಲಿ ಈ ವಿಭೂತಿ ತನ್ನ ಪರಮಾವಧಿಯಲ್ಲಿ ಮೈದೋರಿದಾಗ ‘ಅವತಾರ’ ಎನ್ನುತ್ತೇವೆ. ಎಂದರೆ ತನ್ನ ನರರೂಪದಲ್ಲಿ ‘ಅವತಾರ’ಕ್ಕಿಂತಲೂ ಅತಿಶಯತರವಾದ ಪ್ರಕಾರದಲ್ಲಿ ಆ ಭಗವದ್ ವಿಭೂತಿ ಗೋಚರಿಸುವುದಿಲ್ಲ. ಅದಕ್ಕೆ ದ್ವಿತೀಯ ಸ್ಥಾನದಲ್ಲಿ ಆ ವಿಭೂತಿ ಋಷಿ, ಯೋಗಿ, ಪ್ರವಾದಿ, ಗುರು, ಮಹಾತ್ಮಾ, ಮಹಾಕವಿ, ವರ್ಣಶಿಲ್ಪ, ರಸೃಋಷಿ, ಗಾನಯೋಗಿ, ಯುದ್ಧವೀರ, ದಾನವೀರ, ದಯಾವೀರ, ತ್ಯಾಗಿ, ಜ್ಞಾನಿ, ಭಕ್ತ, ಕರ್ಮಯೋಗಿ, ರಾಷ್ಟ್ರಭಕ್ತ ಇತ್ಯಾದಿಯಾಗಿ ನಾನಾ ಗುಣಗಳಲ್ಲಿ ವ್ಯಕ್ತಿಗನುಗುಣವಾದ  ಶಕ್ತಿತಾರತಮ್ಯಗಳಿಂದ ಆವಿರ್ಭವಿಸುತ್ತದೆ. ಆ ಶಕ್ತಿವಿಶೇಷವನ್ನು ಸಂದರ್ಶಿಸಿದ ಸಾಮಾನ್ಯಚೇತನದಲ್ಲಿ ವಿಕಾಸಾಕಾಂಕ್ಷೆ ಪ್ರಶಂಸಾರೂಪದಲ್ಲಿ ಹೃದಯಚಾರಿಯಾಗಿ ಕಾಣಿಸಿಕೊಳ್ಳುತ್ತದೆ; ಈರ್ಷ್ಯೆ ಅಸೂಯೆ ಮಾತ್ಸರ್ಯಾದಿಗಳ ರೂಪದಲ್ಲಿಯೂ ಅನೇಕ ವೇಳೆ ತೋರುವುದುಂಟು. ಆದರೆ ಅದೂ ಪ್ರಶಂಸೆಯ ವಿಪರೀತ ಸ್ಥಿತಿಯೆ. ಜೀವದ ಅಜ್ಞಾನದಿಂದ ಆ ವಿಕಾರ ಒದಗುತ್ತದೆ. ಅಂತಹ ಮನೋವಿಕಾರಕ್ಕೆ ದೊರೆಕೊಳ್ಳುವ ಪ್ರತಿಫಲದ ಆಘಾತದಿಂದ ಚೇತನ ಇಂದಲ್ಲ ನಾಳೆ ಎಚ್ಚರುತ್ತದೆ; ತರುವಾಯ ಅಧೋ ಗಮನದ ಅಡ್ಡದಾರಿಯನ್ನು ತ್ಯಜಿಸಿ ಋಜುಪಥಕ್ಕೆ ಬಂದು ಊರ್ಧ್ವಗಾಮಿಯಾಗುತ್ತದೆ.

ವಿಭೂತಿ ವ್ಯಕ್ತಗೊಳ್ಳುವ ವಿವಿಧ ನರವರ್ಗಗಳನ್ನಷ್ಟೆ ಸೂಚಿಸಿದೆ, ಮೇಲೆ ಕೊಟ್ಟಿರುವ ಹೆಸರಿನ ಪಟ್ಟಿ. ಆ ಹೆಸರುಗಳು ಒಂದಕ್ಕೊಂದೇನು ಹೊರತಲ್ಲ. ದೇಶಭಕ್ತನು ಮಹಾಕವಿಯಾಗಬಾರದೆಂದಾಗಲಿ, ರಸಋಷಿ ದೇಶಭಕ್ತನಾಗಲಾರನೆಂದಾಗಲಿ, ಯೋಗಿಯಾದವನು ವರ್ಣಶಿಲ್ಪಿಯಾಗಲಾರನೆಂದಾಗಲಿ, ಮಹಾಕವಿ ಮಹರ್ಷಿಯಾಗಿರಲಾರನೆಂದಾಗಲಿ ಅರ್ಥವಿಲ್ಲ. ವಿಭುತಿ ಏಕಮುಖವಾಗಿಯೂ ತೋರಬಹುದು; ಬಹುಮುಖವನ್ನೂ ಧಾರಣೆಮಾಡಬಹುದು.

ಭಗವದ್ ವಿಭೂತಿಯ ಆವಿರ್ಭಾವರೀತಿಗಳಲ್ಲಿ ಎಲ್ಲ ದೇಶಗಳಲ್ಲಿಯೂ, ಸರ್ವಸಾಧಾರಣವಾಗಿ, ಎಲ್ಲರ ಅದರಕ್ಕೂ ವಿಶೇಷವಾಗಿ ಪಾತ್ರವಾಗಿರುವ ಒಂದು ರಸಪೂರ್ಣವಾದ ರೀತಿ ಎಂದರೆ ಕವಿ. ಕವಿಯಲ್ಲಿ ಮೈದೋರುವ ವಿಭೂತಿ ಸರ್ವೋಚ್ಚವಾದುದು ಎಂದಲ್ಲ. ಏಕೆಂದರೆ ಸಚ್ಚಿದಾನಂದಾಭಿಮುಖವಾದ ಆತ್ಮದ ವಿಕಾಸಪಥದಲ್ಲಿ ಕವಿಯ ಪೂಜೆಗೂ ಪಾತ್ರವಾಗುವಂತೆ ಮುಂಬರಿದಿರುವ ಅನೇಕ ವಿಭೂತಿಗಳಿರುತ್ತವೆ: ಯೋಗಿಶ್ವರ, ಸಿದ್ಧಗುರು, ಮಹರ್ಷಿ, ಮಹಾತ್ಮಾ ಇತ್ಯಾದಿ. ಅಥವಾ ಕವಿಯೆ ಯೋಗಿಯೂ ಸಿದ್ದನೂ ಋಷಿಯೂ ಆಗಿರಲಾರನು ಎಂದೂ ಅಲ್ಲ. ಕವಿಯಲ್ಲಿರುವ ಕಲಾ ವಿಭೂತಿಯನ್ನು ಮಾತ್ರ ಲಕ್ಷ್ಯದಲ್ಲಿಟ್ಟುಕೊಂಡು ನಾವು ಮಾತನಾಡುತ್ತಿದ್ದೇವೆ. ಆ ಅರ್ಥದಲ್ಲಿ ಆ ಕಾರಣಕ್ಕಾಗಿ ‘ಕವಿ’ಯಲ್ಲಿ ಮೈದೋರುವ ವಿಭೂತಿಗೆ ಲೋಕವಿಶ್ವಾಸ ಲೋಕಾದರ ಲೋಕಪೂಜೆಗಳು ಆ ದೇಶ ಈ ದೇಶ ಎನ್ನದೆ, ಆ ಕಾಲ ಈ ಕಾಲ ಎನ್ನದೆ, ಆ ಮತ ಈ ಮತ ಅವರಿವರೆನ್ನದೆ, ಎಲ್ಲ ದೇಶಗಳಲ್ಲಿಯೂ ಎಲ್ಲ ಕಾಲಗಳಲ್ಲಿಯೂ ಎಲ್ಲರಿಂದಲೂ ಏಕಪ್ರಕಾರವಾಗಿ ಸಲ್ಲುತ್ತಾ ಬಂದಿದೆ.

ಅವತಾರ, ಮಹರ್ಷಿ, ಯೋಗಿ, ಸಿದ್ದಗುರು ಇವರು ಸಚ್ಚಿದಾನಂದ ಸತ್ಯ ಮತ್ತು ಶಿವಾಂಶಗಳನ್ನೇ ಪ್ರಧಾನಲಕ್ಷ್ಯವಾಗಿಟ್ಟುಕೊಳ್ಳುವುದರಿಂದ ಅವರು ಗೌರವಾರ್ಹರಾದರೂ ಪೂಜಾರ್ಹರಾದರೂ ಮಧುಲೋಲ ಪ್ರಿಯವಾದ ನರಚೇತನಕ್ಕೆ ಆಕರ್ಷಣೀಯವೂ ರಮಣೀಯವೂ ಆಗಿ ರುಚಿಸುವುದು ಕಷ್ಟ. ಕವಿಯಾದರೋ ಸಚ್ಚಿದಾನಂದದ ಸತ್ಯ ಮತ್ತು ಶಿವಾಂಶಗಳನ್ನೂ ಸೌಂದರ್ಯ ಮುಖದಿಂದಲೇ ಆಸ್ವಾದಿಸಿ, ಸತ್ಯದ ಮತ್ತು ಶಿವದ ಅಮೃತಮಯ ಪುಷ್ಟಿಶಕ್ತಿಗಳನ್ನು ಸೌಂದರ್ಯದ ಕೆಚ್ಚಲಿನಿಂದಲೇ ರಸರೂಪದಲ್ಲಿ ಕರೆದು ಸ್ವಾದುಗೊಳಿಸಿ ನೀಡುವುದರಿಂದ ಸಾಧಾರಣವಾದ ಬಾಲಚೇತನಗಳಿಗೂ ಸುಲಭನೂ ಪ್ರಿಯನೂ ಮಧುಪ್ರಾಯನೂ ಆಗುತ್ತಾನೆ. ಅಲ್ಲದೆ ತನ್ನಲ್ಲಿ ಭಾವಚರವಾಗುವ ನಿತ್ಯಸತ ಮತ್ತು ಶಿವಶಕ್ತಿಗಳನ್ನು ರಸಾನುಭವವಾಗಿ ಪರಿವರ್ತಿಸಿ ಸಾಮಾನ್ಯರಿಗೆ ಆ ಅನುಭವವನ್ನು ದಾನಮಾಡಲು ಕವಿ ಕೈಕೊಳ್ಳುವ ವಿಧಾನಗಳೂ ಅವನ ಲೋಕಪ್ರಿಯತೆಗೆ ಬಹುಮಟ್ಟಿಗೆ ಕಾರಣಗಳಾಗಿವೆ. ಅಮರ್ತ್ಯಚೇತನಗಳಿಗೂ ಮರ್ತ್ಯಚೇತನಗಳಿಗೂ ಮಧ್ಯೆ ಕವಿಯ ಚೇತನ ರಸಸೇತುವೆಯಾಗಿ ಕಾಮನಬಿಲ್ಲಿನಂತೆ ಚೇತೋಹಾರಿಯಾಗಿ ವಂಕಿಮವಾಗಿ ನಿಲ್ಲುವುದರಿಂದ ಕವಿರೂಪದಲ್ಲಿ ಆವಿರ್ಭವಿಸುವ ಭಗವದ್‌ವಿಭೂತಿ ಲೋಕೋತ್ತರವೂ ಲೋಕಪ್ರಿಯವೂ ಲೋಕೋದ್ಧರಕವೂ ಆಗಿ ಜಗದ್ವಂದ್ಯವಾಗಿದೆ.

ಶ್ರೀ ರಾಮ ಶ್ರೀ ರಾಮ ಕೃಷ್ಣಾದಿ ಅವತಾರ ವಿಭೂತಿಗಳೂ ವಾಲ್ಮೀಕಿ ವ್ಯಾಸಾದಿ ಕವಿ ವಿಭೂತಿಗಳಿಂದಲೆ ಲೋಕಕ್ಕೆ ಪ್ರಕಟಿತರೂ ಪ್ರಕಾಶಿತರೂ ಸನಾತನರಾದರೂ ಚಿರನೂತನರೂ ಆಗಿದ್ದಾರೆ. ಕವಿಪ್ರತಿಭೆಯ ಸಂಜೀವಿನೀ ಶಕ್ತಿಗೆ ಒಳಗಾಗಿ ಮೃತವಾದುದೆಲ್ಲ ಚಿರಂಜೀವವಾಗುತ್ತದೆ. ರಾಮಪಾದ ಸೋಕಿದೊಡನೆ ಕಲ್ಲು ಹೆಣ್ಣಾದಂತೆ ಕವಿಪ್ರತಿಭಾಕಿರಣಸ್ಪರ್ಶಮಾತ್ರದಿಂದ ಹೆಪ್ಪುಗಟ್ಟಿದಂತೆ ಗಡ್ಡೆಯಾಗಿರುವ ಎನಿತೆನಿತೊ ಜೀವಿಗಳ ಜಡತ್ವ ಅಳಿಯುತ್ತದೆ. ಆ ಪ್ರತಿಭೆಯ ದರ್ಶನಶಕ್ತಿಗೆ ವಶರಾಗಿ ದೇವತೆಗಳೂ ನೆಲ ಮುಟ್ಟುತ್ತಾರೆ; ಮರ್ತ್ಯಚರ ವ್ಯಾಪಾರಗಳಾಗಿ ನಮ್ಮ ಕಲ್ಯಾಣಕ್ಕೆ ದುಡಿಯುತ್ತಾರೆ.

ಕವಿ ಇತರ ಎಲ್ಲ ವಿಭೂತಿಗಳಿಗೂ ಪ್ರಣಾಳಿಕಾರೂಪವಾಗಿ ಆವಿರ್ಭವಿಸುವ ವಿಭೂತಿ. ಸರ್ವಚೇತನಗಳ ಸಮಷ್ಟಿಚೇತನರೂಪವಾಗಿ ಸರ್ವ ದೇವತಾ ಶಕ್ತಿಗಳ ಸಮಷ್ಟಿದೇವತಾಶಕ್ತಿರೂಪನಾಗಿ ಆವಿರ್ಭವಿಸುವ ಮಹಾಕವಿ ಇತರ ಎಲ್ಲ ವಿಭೂತಿಗಳಿಗೂ ಪ್ರಣಾಳಿಕಾರೂಪದಲ್ಲಿ ಅವತರಿಸುವ ಲೋಕಮೋಹಕ ವಿಭೂತಿ.