ಕವಿಯ ದೃಷ್ಟಿಗೆ ಪ್ರಕೃತಿ ಹೇಗೆ ಕಾಣುತ್ತದೆ? ಎಂಬ ಪ್ರಶ್ನೆಗೆ ಅಂಗವಾಗಿ ಇನ್ನೆರಡು ಪ್ರಶ್ನೆಗಳು ಉದ್ಭವಿಸುತ್ತವೆ. ಅವುಗಳನ್ನು ಪರಿಶೀಲಿಸದೆ ಮುಂದುವರಿದರೆ ತಪ್ಪಾಗುತ್ತದೆ. ಏಕೆಂದರೆ ಕವಿ ಮತ್ತು ಪ್ರಕೃತಿ ಎಂಬ ಪದಗಳು ಒಂದು ಎರಡು ಮೂರು ನಾಲ್ಕು ಎಂಬ ಅಂಕಿಗಳಂತೆ ನಿರ್ವಿಶಿಷ್ಟವೂ ನಿರ್ವಿವಿಧವೂ ನಿರ್ವಿವಾದವೂ ಆಗಿರುವ ಅರ್ಥವನ್ನು ಸೂಚಿಸುವುದಿಲ್ಲ. ಕವಿ ಮತ್ತು ಪ್ರಕೃತಿ ಎಂಬ ಸತ್ಯಗಳು ೪x೨ =೮ ಎಂಬ ಗಣಿತಸತ್ಯದಂತಲ್ಲ. ಕವಿ ಎಂದೊಡನೆ ಯಾವ ಕವಿ ಎಂಬ ಪ್ರಶ್ನೆ ಏಳುತ್ತದೆ. ಗಣಿತದಲ್ಲಿ ೨ ಎಂದೊಡನೆ ಯಾವ ೨ ಎಂಬ ಪ್ರಶ್ನೆ ಏಳುವುದಿಲ್ಲ. ಹಾಗೆಯೆ ಪ್ರಕೃತಿ ಎಂದೊಡನೆ ಎಂತಹ ಪ್ರಕೃತಿ? ದೃಕ್‌ಪ್ರಕೃತಿಯೋ? ಅಪರಾ ಪ್ರಕೃತಿಯೋ? ಪರಾ ಪ್ರಕೃತಿಯೋ? ವೈಜ್ಞಾನಿಕನ ಪ್ರಕೃತಿಯೋ? ತತ್ತ್ವಶಾಸ್ತ್ರದ ಪ್ರಕೃತಿಯೋ? ಎಂದೆಲ್ಲ ಪ್ರಶ್ನೆಗಳು ಸುಳಿಯಬಹುದು.

ಕವಿಗಳೆಲ್ಲ ಒಂದೆ  ತೆರನಲ್ಲ. ಒಬ್ಬೊಬ್ಬ ಕವಿಯೂ ವಿಶಿಷ್ಟ ವ್ಯಕ್ತಿ. ಒಬ್ಬೊಬ್ಬನದೂ ಸಂಸ್ಕಾರ ಬೇರೆ, ಬದುಕು ಬೇರೆ, ಜೀವಿತೋದ್ದೇಶ ಬೇರೆ, ಸ್ವಭಾವ ಸ್ವಧರ್ಮಗಳೂ ಬೇರೆ ಬೇರೆ. ಆಶೆ, ರುಚಿ, ಅಭಿರುಚಿ, ವಿದ್ಯೆ, ಸಂಸ್ಕೃತಿ ಎಲ್ಲ ಬೇರೆ ಬೇರೆ. ಊರಿಂದೂರಿಗೆ ನಾಡಿಂದ ನಾಡಿಗೆ ದೇಶದಿಂದ ದೇಶಕ್ಕೆ ಈ ವ್ಯಕ್ತಿತ್ವದ ವ್ಯತ್ಯಾಸಗಳು ಹೆಚ್ಚುತ್ತಾ ಹೋಗುತ್ತವೆ. ಅದರಂತೆ ಪ್ರಕೃತಿಯೂ ವ್ಯತ್ಯಸ್ತವಾಗುತ್ತದೆ. ಮರಭೂಮಿಗೂ ಮಲೆನಾಡಿಗೂ ಎಷ್ಟು ವ್ಯತ್ಯಾಸ! ಮೈಸೂರಿನ ಚೆಲುವಿನ ಬೃಂದಾವನಕ್ಕೂ ಆಸ್ಸಾಮಿನ ಭೂಕಂಪದ ಪ್ರದೇಶಕ್ಕೂ ಎಷ್ಟು ವ್ಯತ್ಯಾಸ! ಉತ್ತರಧ್ರುವದ ಕಟುಶೈತ್ಯಕ್ಕೂ ಅರೇಬಿಯಾದ ಉಗ್ರೋಷ್ಣಕ್ಕೂ ಎಷ್ಟು ವ್ಯತ್ಯಾಸ! ಪ್ರಕೃತಿ ಒಂದೆಡೆ ರಮಣೀಯವಾದರೆ ಮತ್ತೊಂದೆಡೆ ರುದ್ರ. ಒಮ್ಮೆ ‘ಇಂದುವದನೆ ಕುಂದರದನೆ ಪ್ರಕೃತಿ ರೂಪಿಸಿ’, ಇನ್ನೊಮ್ಮೆ ‘ರಕ್ತಮುಖಿ ರಕ್ತನಖಿ ಪ್ರಕೃತಿ ರಾಕ್ಷಸಿ.’ ನೆಮ್ಮದಿಯಾಗಿರುವ ಸುಂದರಪ್ರದೇಶದಲ್ಲಿ ಹುಟ್ಟಿ ಬೆಳೆದು ಬಾಳು ಸಾಗಿಸುವ ಕವಿಗೆ ಪ್ರಕೃತಿ ‘ರೂಪಸಿ’ಯಾಗುತ್ತಾಳೆ. ಸರ್ವದಾ ಕಷ್ಟ ಕ್ಲೇಶ ಕಂಟಕಮಯವಾದ ಕ್ರೂರ ಪ್ರದೇಶದಲ್ಲಿ ದುಡಿದು ಕಡಿದು ಬದುಕುವ ಕವಿಗೆ ಪ್ರಕೃತಿ ‘ರಾಕ್ಷಸಿ’ಯಾಗುತ್ತಾಳೆ. ಹೀಗೆ ಕವಿ ಮತ್ತು ಪ್ರಕೃತಿ ಎಂಬ ಎರಡು ಪದಗಳಿಗೂ ಬಹುಮುಖಗಳಿರುವಾಗ ‘ಕವಿಯ ದೃಷ್ಟಿಯಲ್ಲಿ ಪ್ರಕೃತಿ ಹೇಗೆ ಕಾಣುತ್ತದೆ?’ ಎಂಬ ಪ್ರಶ್ನೆಗೆ ಕೊಡುವ ಉತ್ತರಕ್ಕೂ ಬಹುಮುಖಗಳಿರಬೇಕಾಗುತ್ತದೆ. ಆದರೆ ಎಲ್ಲ ಮುಖಗಳನ್ನೂ ಎಲ್ಲ ಮುಖಗಳಿಂದಲೂ ಪರಿಶೀಲಿಸುವುದು ಇಲ್ಲಿ ಸಾಧ್ಯವಿಲ್ಲ. ಆದ್ದರಿಂದ ಕವಿ ಮತ್ತು ಪ್ರಕೃತಿ ಎಂಬ ಪದಗಳಿರುವ ಒಂದು ಸರ್ವಸಾಧಾರಣವೂ ಸರ್ವಸಂಪೂರ್ಣವೂ ಆದ ಅರ್ಥವನ್ನು ಮನಸ್ಸಿನಲ್ಲಿಟ್ಟುಕೊಂಡು ಉತ್ತರದ ವ್ಯಾಪ್ತಿಯನ್ನಾಗಲಿ ಮಿತಿಯನ್ನಾಗಲಿ ಮರೆಯದೆ ಮುಂಬರಿಯುತ್ತೇವೆ.

ಕವಿ ಎಂದರೆ ಯಾರು? ಪ್ರಕೃತಿ ಎಂದರೆ ಏನು? ಎಂಬ ವಿಚಾರ ಇಲ್ಲಿಗೆ ಎಷ್ಟೇ ಪ್ರಕೃತವಾದರೂ ನಾವು ಅದರ ಜಿಜ್ಞಾಸೆಯ ಗೋಜಿಗೆ ಹೋಗುವುದಿಲ್ಲ. ಕವಿ ಎಂಬ ಪದಕ್ಕೆ ಪದ್ಯ ಹೆಣೆಯುವವನು ಎಂಬರ್ಥದಿಂದ ಹಿಡಿದು ದ್ರಷ್ಟಾರನಾದ ರಸಋಷಿ ಎಂಬರ್ಥದ ವರೆಗೆ ವ್ಯಾಪ್ತಿಯಿದೆ. ಪ್ರಕೃತಿ ಎಂಬ ಪದದಲ್ಲಿ ನಮ್ಮ ಸುತ್ತಮುತ್ತ ಇರುವ ಮತ್ತು ತನಗೆ ತಾನೆ ಆಗಿರುವ ಎಲ್ಲ ವಸ್ತುಸಮೂಹಗಳೂ ಸೇರುತ್ತವೆ. ಆದರೆ ಬಳಕೆಯಲ್ಲಿ ಆ ಮಾತಿಗೆ ವಿಶೇಷವಾಗಿ ಇಂದ್ರಿಯ ಗೋಚರವಾದ ಸುಂದರ ನಿಸರ್ಗ ಎಂಬರ್ಥವಿರುತ್ತದೆ. ಎಂದರೆ ಕಾಡು ಬೆಟ್ಟ ಹೊಳೆ ಕೆರೆ ಗದ್ದೆ ಹೊಲ ಬಯಲು ಮಲೆ ಬಾನು ಬೆಳಗು ಬೈಗು ಇರುಳು ಚುಕ್ಕಿ ಹಕ್ಕಿ ಮಿಗ ಮುಗಿಲು ಕಡಲು ನೇಸರು ತಿಂಗಳು ಮಳೆ ಗುಡುಗು ಮಿಂಚು ಗಾಳಿ ಬಿಸಿಲು ತಳಿರು ಹೂವು ಇತ್ಯಾದಿ ಇತ್ಯಾದಿ.

ಇದನ್ನೆಲ್ಲ ಗಮನಿಸಿದ ಮೇಲೆ ನಮ್ಮ ಪ್ರಶ್ನೆ ಈ ರೂಪ ತಾಳುತ್ತದೆ: ‘ರಸಋಷಿಯಾದ ಕವಿಯ ಪೂರ್ಣದೃಷ್ಟಿಗೆ ಗೋಚರವಾಗುವ ಪ್ರಕೃತಿದರ್ಶನದ ಸ್ವರೂಪವೇನು?’

ಪ್ರಕೃತಿ ವಿಷಯವಾದ ಕವಿಯ ದೃಷ್ಟಿ ಪೂರ್ಣದೃಷ್ಟಿಯಾಗಿ, ಅದು ‘ದರ್ಶನ’ ಎಂಬ ಹೆಸರಿಗೆ ಅರ್ಹವಾಗಬೇಕಾದರೆ ಕಾಲವೂ ಬೇಕು, ಸಾಧನೆಯೂ ಬೇಕು. ಅರಿತು ಮಾಡಲಿ, ಅರಿಯದೆ ಮಾಡಲಿ ಆ ಸಾಧನೆ ತಪಸ್ಯೆಯ ರೂಪವನ್ನು ತಾಳಿಯೆ ತಾಳುತ್ತದೆ ಅಂತಹ ಸಹಜ ಯೋಗಸಾಧನೆಯಿಂದ ಕವಿ ದ್ರಷ್ಟಾರನಾದ ರಸಋಷಿಯಾಗಿ ಪೂರ್ಣದೃಷ್ಟಿಯ ‘ದರ್ಶನ’ಕ್ಕೇರುತ್ತಾನೆ.

ಬಾಲ್ಯದ ಬಹಿರ್ಮುಖವಾದ ಪ್ರಜ್ಞೆಗೆ ಪ್ರಕೃತಿ ಒಮ್ಮೆ ಆಡುಂಬೊಲವಾಗಿಯೂ ಒಮ್ಮೆ ಆಟದ ವಸ್ತುವಿನಂತೆಯೂ ಒಮ್ಮೆ ಜೊತೆ ಆಡುವ ಆಟಗಾರನಂತೆಯೂ ಗೋಚರವಾಗುತ್ತದೆ. ಮಳೆ ಗಾಳಿ ಮಿಂಚು ಇಂತಹ ಪ್ರಕೃತಿ ವ್ಯಾಪಾರಗಳು ಬೆದರಿಕೆಗೂ ಬೆಕ್ಕಸಕ್ಕೂ ಕಾರಣವಾದರೆ, ಹಸುರು ಹಕ್ಕಿ ಹೂವು ಮೊದಲಾದುವು ಅದರ ಆಶ್ಚರ್ಯ ಆನಂದಗಳಿಗೆ ಕಾರಣವಾಗುತ್ತವೆ. ಆಗ ಮರ ಹಣ್ಣುಕೊಡುವ ಇಷ್ಟದೇವತೆಯಾದರೆ ಗಾಳಿ ಹಣ್ಣು ಉದುರಿಸುವ ಗಗನದ ಗೆಳೆಯನಾಗುತ್ತಾನೆ. ಆಗ ಆಕಾಶ ಆಶ್ಚರ್ಯದ ವಿಷಯವಾಗಿ ಕಂಡರೂ ಅದು ಹುಡುಗನಿಗೆ ಬಹಳ ಸಮೀಪದ ವಸ್ತು: ಮನೆಯ ಗೋಡೆಕಟ್ಟಿ ಹಬ್ಬಿರುವ ಮಲೆಯ ತಲೆಯ ಮೇಲೆ  ಒಂದು ಏಣಿ ಹಾಕಿದರೆ ಸರಿ ಆಕಾಶಕ್ಕೆ ತಲುಪುತ್ತೇವೆ! ಆಗ ಪ್ರಕೃತಿ ಸಮಸ್ತವೂ ಪ್ರಜ್ಞಾಪೂರ್ವಕವಾದಂತೆ ತೋರುತ್ತದೆ. ಮಗುವಿಗೆ ತನ್ನ ವ್ಯಾಪಾರಕ್ಕೂ ಪ್ರಕೃತಿವ್ಯಾಪಾರಕ್ಕೂ ಪ್ರಭೇದ ಕಾಣುವುದಿಲ್ಲ. ಸೃಷ್ಟಿಯ, ಎಂದರೆ ಜಡ ಜೀವ ಮನಸ್ಸು ಎಲ್ಲ ಸೇರಿ, ಸೃಷ್ಟಿಯ ಸರ್ವವ್ಯಾಪಾರಗಳೂ ಚಿಚ್ಛಕ್ತಿಯ ಪ್ರಕಾಶನದ ಭಿನ್ನ ಭಿನ್ನ ಪ್ರಕಾರಗಳು ಎಂಬ ತುತ್ತತುದಿಯ ಪೂರ್ಣದೃಷ್ಟಿಯ ಸಾಕ್ಷಾತ್ಕಾರ ಪ್ರಜ್ಞೆ, ಇನ್ನೂ ಜ್ಞಾನವಲ್ಲದ ಯಾವುದೊ ಒಂದು ರೀತಿಯಲ್ಲಿ, ಮಗುತನಕ್ಕೆ ಸಹಜವಾಗಿರುವಂತೆ ತೋರುತ್ತದೆ.

ಮಗುವಿನ ಚೇತನ ಅರ್ಧಚಂದ್ರನನ್ನು ಕಂಡು ‘ದೇವರ ಪೆಪ್ಪರಮೆಂಟೇನಮ್ಮಾ ಗಗನದೊಳಲೆಯುವ ಚಂದಿರನು?’ ಎನ್ನುತ್ತದೆ. ಬೈಗಿನ ನೇಸರನ್ನು ಕಂಡು ‘ಸಂಜೆಯ ರಂಜಿಪ ಸೂರ್ಯನ ತರುವೆನು; ಕೈಬಿಡು ಹೋಗುವೆ ನಾನಮ್ಮಾ!’ ಎಂದು ಸಾಹಸಿಯಾಗುತ್ತದೆ. ‘ಕಾಮನ ಬಿಲ್ಲು ಕಮಾನು ಕಟ್ಟಿದೆ ಮೋಡದ ನಾಡಿನ ಬಾಗಿಲಿಗೆ!’ ಎಂದು ಕುಣಿಯುತ್ತದೆ. ಆಗಸದಲ್ಲಿ ತೇಲಾಡುವ ಬೆಳ್ಮುಗಿಲು ‘ಬಾನೊಳು ಹರಡಿಹ ಬೆಳ್ಳನೆ ಲಾಲಿಕುಲಾಲಿ ಮಿಠಾಯಿ’ಯೋ ‘ನೀಲಿಯ ನೀರೊಳು ಬಾನಮ್ಮನಿಟ್ಟಿಹ ಬೆಣ್ಣೆಯ ಮುದ್ದೆ’ಗಳೋ ಆಗುತ್ತವೆ. ಚಂದ್ರೋದಯವಾದರೆ ‘ತಿಂಗಳ್‌ಮಾವ ಬರುತಿದಾನೆ ನೋಡಮ್ಮಾ’ ಎನ್ನುತ್ತದೆ. ಚಂದ್ರಸೂರ್ಯನು ಕೂಡ ಮೂಡಿ ಮುಳುಗುವುದು ಮಗುವಿಗಾಗಿ, ಮಗುವಿನ ಸಂತೋಷಕ್ಕಾಗಿ, ಅದರ ಜೊತೆಗಾರಿಕೆಗಾಗಿ. ‘ಎಲ್ಲಿಗೆ ನಾ ಹೋದರಲ್ಲಿಗೆ ಬರುವನು, ಅಮ್ಮಾ, ಚಂದಿರ ನನ್ನವನು’ ಎಂಬ ಸತ್ಯದಲ್ಲಿ ಮಗುವಿಗಿನಿತೂ ಅವಿಶ್ವಾಸವಿಲ್ಲ. ಬಾಲ್ಯದ ಅಂತಹ ಸ್ವರ್ಗೀಯವಾದ ಅನುಭವವನ್ನು ಸ್ಮರಿಸಿಕೊಂಡೆ ಪ್ರಕೃತಿ ಉಪಾಸಕನೆಂದು ಪ್ರಸಿದ್ಧನಾಗಿರುವ ಇಂಗ್ಲಿಷ್‌ ಕವಿ ಹೀಗೆ ಹಾಡಿದ್ದಾನೆ:

“There was a time when meadow, grove and stream,
The earth and every common sight,
To me did seem
Apparelled in celestial light,
The glory and freshness of a dream.”

ಬೆಳೆಯುವ ಹುಡುಗನ ಎಳೆಯ ಪ್ರಜ್ಞೆ ವಿಕಾಸವಾದ ಹಾಗೆಲ್ಲ ಕ್ರಮೇಣ ಪ್ರಕೃತಿ ಅದರ ಮೊದಲಿನ ಅಪೃಥಗ್‌ಭಾವದಿಂದ ದೂರದೂರವಾಗಿ ಬಾಲಕನ ಕ್ರೀಡಾದಿ ಕರ್ಮಗಳಿಗೆ ರಂಗಭೂಮಿಯಾಗಿ ಪರಿಣಮಿಸುತ್ತದೆ. ಪ್ರಪಂಚದ ಭೌತರೂಪವೂ ಮನಸ್ಸಿನ ಮೇಲೆ ತನ್ನ ಅಧಿಕಾರವನ್ನು ಹೆಚ್ಚು ಹೆಚ್ಚಾಗಿ ಸ್ಥಾಪಿಸುತ್ತ ಹೋಗುತ್ತದೆ. ಎಲ್ಲವೂ ತನಗಾಗಿ, ತನ್ನ ಸಂತೋಷಕ್ಕಾಗಿ, ತನ್ನ ಅನುಕೂಲಕ್ಕಾಗಿ ಎಂಬುವ ಭಾವಕ್ಕೆ ಧಕ್ಕೆ ತಗಲುತ್ತಾ ಹೋದಂತೆ ನಮ್ಮ ಪ್ರತ್ಯೇಕತೆಯೂ ವಿಶಿಷ್ಟತೆಯೂ ಅಹಂಕಾರವೂ ಬಲಿಯುತ್ತದೆ. ‘ಅಮ್ಮಾ ಅಮ್ಮಾ ತಿಂಡಿ ಕೊಡು’ ಎಂದು ಗೋಗರೆದಾಗ ತಾಯಿ ತಿಂಡಿ ಕೊಡುವಂತೆ ‘ಮರವೇ ಮರವೇ ಹಣ್ಣುಕೊಡು’ ಎಂದಾಗ ಮರ ಹಣ್ಣುಕೊಡುವುದಿಲ್ಲ ಎಂಬುದು ಗೊತ್ತಾಗುತ್ತದೆ. ಹಣ್ಣು ಬೇಕಾದರೆ ಮರ ಹತ್ತಿ ಕೀಳಬೇಕು. ಇಲ್ಲವೆ ಬಡಿಗೆ ಎಸೆದು ಉದುರಿಸಬೇಕು ಎಂಬ ಪೌರುಷ ಬುದ್ಧಿಯೂ ಉದ್ಯೋಗಶೀಲತೆಯೂ ಮೂಡುತ್ತವೆ. ಭೂಮಿಯ ಮೇಲೆ ನಡೆದಂತೆ ನಡೆಯುತ್ತೇವೆ ಎಂದು ನೀರಿಗೆ ಕಾಲಿಟ್ಟಾಗ ಹಳ್ಳಕ್ಕೆ ಬಿದ್ದು ಮೈ ಒದ್ದೆಮಾಡಿಕೊಂಡ ಮೇಲೆ ನೀರಿನ ನಿರ್ದಾಕ್ಷಿಣ್ಯ ಮನಸ್ಸಿಗೆ ಗೋಚರವಾಗಿ, ನೀರನ್ನು ಗೆಲ್ಲುವುದಕ್ಕಾಗಿ ಈಜುಕಲಿಯುತ್ತಾನೆ. ಹೀಗೆ ಪ್ರಕೃತಿಯ ನಿರ್ದಾಕ್ಷಿಣ್ಯತೆಯೂ ನಿಷ್ಠುರತೆಯೂ ಮತ್ತೆ ಮತ್ತೆ ಮನಸ್ಸಿಗೆ ತಗುಲಿ ಹುಡುಗನ ಬುದ್ಧಿಯನ್ನು ಅದರ ನಿಯತಿ ಮತ್ತು ನಿಯಮನಿಷ್ಠೆಯ ಕಡೆಗೆ ಕೊಂಡೊಯ್ಯುತ್ತವೆ. ಜೊತೆಗೆ ಹಿರಿಯರ ಮಾತುಕತೆ ನಡೆನುಡಿಗಳಿಂದಲೂ ವಿದ್ಯಾಭ್ಯಾಸಕ್ಕಾಗಿ ಓದುವ ಪಠ್ಯಪುಸ್ತಕಾದಿ ಪ್ರಥಮ ಪಾಠಗಳಿಂದಲೂ ಪೂರ್ವಕವಿಗಳ ಕವನಕೃತಿಗಳಿಂದಲೂ ಮತ್ತು ಇತರ ಕಲಾನುಭವಗಳಿಂದಲೂ ಪ್ರಕೃತಿವಿಷಯವಾದ ಸ್ಥೂಲಾಭಿಪ್ರಾಯಗಳು ರೂಪುಗೊಳ್ಳುತ್ತವೆ.

ಪ್ರಕೃತಿ ಕವಿಪ್ರಜ್ಞೆಯನ್ನು ಮೊತ್ತಮೊದಲು ಆಕರ್ಷಿಸುವುದು ತನ್ನ ವೈಭವಯುಕ್ತವೂ ವೈವಿಧ್ಯಪೂರ್ಣವೂ ಆಗಿರುವ ಸೌಂದರ್ಯದಿಂದ. ಆಕೆಯ ನಾನಾ ಭಂಗಿಯ ವರ್ಣಮಯ ನರ್ತನ ಅವನ ಚೇತನವನ್ನು ಸೆಳೆಯುತ್ತದೆ. ಆ ಭಾವೋಜ್ವಲ ಆಕರ್ಷಣೆಯ ಸ್ವರೂಪವಾಗಲಿ ಉದ್ದೇಶವಾಗಲಿ ಪ್ರಯೋಜನವಾಗಲಿ ಅವನ ಮತಿಗೆ ಆಗ ಗೋಚರಿಸದಿರಬಹುದು. ಆದರೂ ಆ ರಸಾ ಕರ್ಷಣೆಗೆ ಸಿಲುಕಿ ಅವಶವಾಗಿ ಎಂಬಂತೆ, ಅನಿವಾರ್ಯವಾಗಿ ಎಂಬಂತೆ, ಆಸ್ವಾದನಾ ಮಧುಸ್ರೋತದಲ್ಲಿ ತೇಲುತ್ತಾನೆ: ಆ ತಾವರೆಯ ತೇರನ್ನು ಏರುತ್ತಾನೆ; ಆ ಕಮಲಯಾನದ ಕಲಾವಿಮಾನದಲ್ಲಿ ಅನಂತ ಯಾತ್ರಿಯಾಗುತ್ತಾನೆ:

“ನೀನಂದು ಕನಕರಥವನು ತಂದು ಬಾ ಎಂದು
ಕರೆದಂದು ನಾನು ದೂಳಾಡುತ್ತಿದ್ದೆ;
ಹೊಂಬಿಸಲು ಹೊಮ್ಮಿತ್ತು, ಖಗಗಾನ ಚಿಮ್ಮಿತ್ತು,
ಕಣ್ದೆರೆದುಕೊಂಡಿತ್ತು ಜಗದ ನಿದ್ದೆ!
ತೇರಿನಾ ಬಣ್ಣವನು ಕಂಡೆ
ಮೊದಲು ಮರುಳಾದೆ;
ಹುಡುಗಾಟ ಎಂದಂದುಕೊಂಡೆ
ಅದನೇರಿ ಹೋದೆ!
ಎಲ್ಲಿಗೊಯ್ಯುವೆ ಎಂದು ನಾ ಕೇಳಲಿಲ್ಲಂದು
ಕೇಳಿದರೆ ನೀನು ನುಡಿಯದಿಹೆ ಇಂದು.
ಬರಿದೆ ಬೆರಳೆತ್ತಿ ತೋರುವೆ; ಮುಂದೆ ನೋಡಿದರೆ
ಹಬ್ಬಿಹುದು ನೀಲಿಮೆಯ ಶೂನ್ಯಸಿಂಧು!”

ಕ್ರಮೇಣ ಬಹಿರ್ಮುಖವಾದ ಬಹಿರಂಗ ಸೌಂದರ್ಯದ ಮೋಹಾಕರ್ಷಣೆ ಅಂತರ್ಮುಖವಾದ ಅಂತರಂಗ ಸೌಂದರ್ಯದ ಕಡೆಗೂ ತಿರುಗಿ ಉಪಾಸನಾರೂಪವನ್ನು ತಾಳುತ್ತದೆ. ಪ್ರಕೃತಿಯ ಅದ್ಭುತ ಶಕ್ತಿ, ಅತ್ಯದ್ಭುತ ರಚನಾಕೌಶಲ, ಅನಿರ್ವಚನೀಯವಾದ ಮಹೋದ್ದೋಶ, ಅಚಿಂತ್ಯವಾದ ಪರಮಪುರುಷಾರ್ಥ ಇತ್ಯಾದಿಗಳ ಮನನದಿಂದ ಧ್ಯಾನಗೋಚರವಾಗುವ ಆಕೆಯ ಸ್ವರೂಪಸತ್ಯವನ್ನೆ ಪರಿವರ್ತನಗೊಳಿಸುತ್ತದೆ. ಹೊರಹರಗೆ ಮೃಣ್ಮಯಿಯಾಗಿ ತೋರುವವಳು, ವೈಜ್ಞಾನಿಕವಾದ ನೋಟಕ್ಕೆ ನಿಯಮಮಯಿಯಾಗಿ ತೋರುವವಳು, ವೇದಾಂತಿಯ ದೃಷ್ಟಿಗೆ ಚಿನ್ಮಯೀಶಕ್ತಿಯಾಗಿ ತೋರುವವಳು ಕವಿಪ್ರಜ್ಞೆಗೆ ಆ ಸತ್ಯಮುಖಗಳಲ್ಲಿ ಯಾವುದನ್ನೂ ಅಲ್ಲಗಳೆಯದ ಮತ್ತು ಆ ಎಲ್ಲ ಸತ್ಯಮುಖಗಳನ್ನು ಒಳಕೊಳ್ಳುವ ಬ್ರಹ್ಮಮಯಿಯಾಗಿ ಆನಂದಮಯಿಯಾಗಿ ಗೋಚರಿಸುತ್ತಾಳೆ. ಮೊದಮೊದಲು ಬಾಳುವೆಯ ಹಿನ್ನೆಲೆವಾಗಿ, ಬರಬರುತ್ತ ಕಾವ್ಯಕಲಾಕ್ಷೇತ್ರದ ಹಿನ್ನೆಲೆಯಾಗಿ, ಮತ್ತೆ ಮುಂಬರಿದು ಕಾವ್ಯರಮಣೀಯತೆಯನ್ನು ಹೆಚ್ಚಿಸುವ ಅಲಂಕಾರಸಾಧನಗಳನ್ನು ಸಮೃದ್ಧಿಯಾಗಿ ಒದಗಿಸುವ ಸೊಬಗಿನ ಗಣಿಯಾಗಿ, ಅದಕ್ಕೂ ಮುಂದೆ ಹೋಗಿ ಸೂಕ್ಷ್ಮತರವಾದ ‘ಧ್ವನಿ’ಗೂ ಆಧ್ಯಾತ್ಮಕವಾದ ‘ದರ್ಶನ’ಕ್ಕೂ ಪ್ರತಿಮಾ ರೂಪಿಣಿಯಾಗುತ್ತಾಳೆ. ಅಂತಹ ಕವಿಪ್ರಜ್ಞೆಗೆ ‘ಪ್ರಕೃತಿಯಾರಾಧನೆ ಪರಮನಾರಾಧನೆಯಾಗುತ್ತದೆ;’ ‘ಪ್ರಕೃತಿಲೊಲ್ಮೆಯೆ ಮುಕ್ತಿಯಾನಂದ ಸಾಧನೆ’ಯಾಗುತ್ತದೆ.

“ಪ್ರಕೃತಿಯನು ಬ್ರಹ್ಮಮಯಿ ಎಂದರಿತು ಒಲಿದವನಿಗೆ
ಮೇಣು ಆನಂದಮಯಿ ಎಂದೊಲಿದು ಅರಿತವಗೆ
ದುಗುಡವೆತ್ತಣದು?”……

ಎಂಬ ಒಂದು ಶ್ರದ್ಧೆ, ಧೈರ್ಯ, ಶಾಂತಿ ಹೃದಯವನ್ನು ತುಂಬುತ್ತವೆ. ಅಂತಹ ರಸದೃಷ್ಟಿಗೆ ಸ್ಥೂಲವಾದುದೂ ಜಡವಾದುದೂ ಸಚ್ಚಿದಾನಂದವಾಗಿ ತೋರತೊಡಗುತ್ತದೆ.

“ಈ ಬಿಳಿ ಮಳಲ ರಾಶಿ, ವನಪರ್ಣವಾರಾಶಿ,
ವರ್ತಿಸುತ ಪ್ರವಹಿಸುವ ನೀಲಾಭ ಜಲರಾಶಿ,
ನೀಲ ನೀರವ ಶಕುನದಂತಿರುವ ಆಕಾಶ,
ಎಲ್ಲವೂ ನನ್ನ ದೃಷ್ಟಿಗೆ ಆತ್ಮದಾವೇಶ
ಭಾವಗಳು! ಜಡವಲ್ಲ; ಸ್ಥೂಲವಸ್ತುಗಳಲ್ಲ;
ಮೃತನಿಸರ್ಗದ ಚೇತನವಿಹೀನ ಶವವಲ್ಲ!
ಈಶ್ವರ ಶರೀರದಲಿ ಚಿನ್ಮಯ ಮಾಹಾಂಗಗಳು;
ಬ್ರಹ್ಮದ ಮಹಾ ಚಿತ್ತ ಶರಧಿಯ ತರಂಗಗಳು;
ಚಿಂತೆಗಳು ನನ್ನ ಮನದಲಿ, ನನ್ನ ನಾಡಿಯಲಿ
ರಕ್ತಬಿಂದುಗಳು! ನಾನುಸಿರೆಳೆಯೆ ಮೋಡದಲಿ
ಶ್ವಾಸವಾಡುವುದು!…

ಎಂಬ ತಾದ್ಯಾತ್ಮ್ಯಾನುಭವವುಂಟಾಗುತ್ತದೆ. ಅಂತಹ ರಸಸ್ಥಿತಿಗೆ ಎಲ್ಲೆಲ್ಲಿಯೂ ಚೈತನ್ಯವೆ ಗೋಚರವಾಗುತ್ತದೆ.

“ಹನಿಯನು ನಾನನುಭವಿಸುವ ಪ್ರೀತಿ
ಆ ಹನಿ ನನ್ನನು ರಮಿಸುವ ರೀತಿ!
ನನ್ನಡಿ ಸೋಂಕಿಹ ಈ ಹುಲ್ಲು
ಇನಿಯನ ತುಟಿಸೋಂಕನೆ ಸವಿಯುತ್ತಿದೆ!
ಪ್ರೀತಿಯ ಮುತ್ತಿಗೆ ಹಾತೊರೆಯುತ್ತಿದೆ
ಚೇತನ ಮೂರ್ತಿಯು ಆ ಕಲ್ಲು:-
ತೆಗೆ, ಜಡವೆಂಬುದೆ ಬರಿಸುಳ್ಳು!”

ರಸಋಷಿಯಾದ ಕವಿಯ ಪೂರ್ಣದೃಷ್ಟಿಗೆ ಪ್ರಕೃತಿ ಪರಮಾತ್ಮನ ಚಿನ್ಮಯ ದಿವ್ಯ ಶರೀರವಾಗಿ ತೋರುತ್ತದೆ. ಇಂದ್ರಿಯವ್ಯಾಪಾರಗಳೆಲ್ಲ ಪೂಜೆಯಾಗಿ ಪರಿಣಮಿಸುತ್ತವೆ.

“ಸುಂದರ ಮಹೇಶ್ವರನ ರಸಮಯ ಶರೀರವಿದು
ವಿಶ್ವರೂಪದಿ ನಮಗೆ ತೋರುತಿದೆ. ಜೀವನಂ
ಕ್ಷಣಕ್ಷಣಕೆ ಮುಟ್ಟುತಿಹುದಾತನಂ, ಘ್ರಾಣದಲಿ
ಸ್ಪರ್ಶದಲಿ ರುಚಿಯಲ್ಲಿ, ಶ್ರೋತ್ರ ದೃಷ್ಟಿಗಳಲ್ಲಿ.
ಎದೆ ತುಂಬಿ ಬಾಳುವುದೆ ಪ್ರಾಣಕರ್ಪೂರಮಂ
ಪೊತ್ತಿಸೆತ್ತುವ ಮಂಗಳಾರತಿ…..”

ದ್ರಷ್ಟಾರನಾದ ಕವಿಯ ಪೂರ್ಣದೃಷ್ಟಿಗೆ ಪ್ರಕೃತಿ ಮರ್ತ್ಯಗೋಚರವಾದ ಜಗತ್ತಷ್ಟರಿಂದಲೆ ಪೂರೈಸುವುದಿಲ್ಲ. ಅವಳು ಉರ್ವರೆಯೂ ಹೌದು. ವಿಶ್ವಂಭರೆಯೂ ಹೌದು. ಅಂತರ್ಯಾಮಿಯೂ ಹೌದು, ಅತೀತೆಯೂ ಹೌದು. ಅವಳು ಸೃಷ್ಟಿರತಿ, ಕಲಾಸುಂದರಿ, ಜಗದ್ಧಾತ್ರಿ, ಜಗಜ್ಜನನಿ, ಮಹಾಮಾಯೆ, ಆದಿಶಕ್ತಿ, ಸೃಷ್ಟಿಯೆಲ್ಲ ಅವಳ ಲೀಲಾವ್ಯಕ್ತಿ; ಜನನ ಮರಣ ಕಾಲ ದೇಶಗಳು ಅವಳ ನರ್ತನದ ಚರಣನ್ಯಾಸಗಳು:

‘ಮೊದಲ ಬಯಕೆ ಸಿಡಿದ ಕಿಡಿ,
ಮೊದಲ ಗಾನವೊಗೆದ ನುಡಿ,
ನೀನೆ ಕಡಲು, ನೀನೆ ತಡಿ,
ಹೇ ವಿಶ್ವದೇಹಿನಿ!-’

‘ಸೂರ್ಯ ಚಂದ್ರರುದಯದಲಿ
ಪೂರ್ವದಿಶಾ ಹೃದಯದಲಿ,
ಸ್ವರ್ಣಸ್ವಪ್ನರಂಗಿನಿ!
ವರ್ನಜಲಧಿ ಮಥನದಿ,
ಬಣ್ಣ ಬಳಿವೆ ಜತನದಿ,
ಓ ಭಾವನಾಂಗಿನಿ!’

‘ಚರಾಚರಗಳಂತರದಿ
ಉರಿಯುತಿಹೆ ನಿರಂತರದಿ,
ಹೇ ಪ್ರೇಮೋನ್ಮಾದಿನಿ!
ನಿನ್ನ ಮೋಹ ಶಕ್ತಿಯಿಂ,
ಬದುಕಿದೆ ಸೆರೆ ಮುಕ್ತಿಯಿಂ,
ಓ ಬಂಧನ ಮೋದಿನಿ!’

‘ಶತ ಸಹಸ್ರ ನಿಯತಿ ಲೋಲೆ
ನೀನ್‌ಅಕೂಲ ಮುಕ್ತಿಶೀಲೆ;
ನಿಯಮಗಳೆ ನಿನಗೆ ಬಳೆ,
ಅನವರತ ಅಶೃಂಖಲೆ!’

ಸಚ್ಚಿದಾನಂದಮಯಿಯಾದ ಆ ಪರಾಪ್ರಕೃತಿಯ ಒಂದು ಪಾದ, ಒಂದು ಅಂಶ ಮಾತ್ರ ಇಲ್ಲಿ ‘ನಮ್ಮ ಪ್ರಕೃತಿ’ ಆಗಿದೆ. ಉಳಿದ ಮೂರು ಪಾದ ಇನ್ನೂ ಅವ್ಯಕ್ತದಲ್ಲಿ ಅನಂತದಲ್ಲಿ ಅತೀತದಲ್ಲಿ ಅಮೃತವಾಗಿ ಇದೆ. ಋಗ್ವೇದದ ಕವಿಋಷಿ ಇಂತು ಮಂತ್ರಿಸುತ್ತಾನೆ:

ಏತವಾನಸ್ಯ ಮಹಿಮಾ ಅತೋ ಜ್ಯಾಯಾಂಶ್ಚ ಪೂರುಷಃ |
ಪಾದೋsಸ್ಯ ವಿಶ್ವಾ ಭೂತಾನಿ ತ್ರಿಪಾದಸ್ಯಾಮೃತಂ ದಿವಿ ||

ಆ ‘ದರ್ಶನ’ಕ್ಕೆ ಅಲ್ಪ ಎಂಬುದು ಯಾವುದೂ ಇರುವುದಿಲ್ಲ. ಎಲ್ಲವೂ ‘ಭೂಮ’ವಾಗುತ್ತವೆ. ಅತ್ಯಂತ ಸಾಮಾನ್ಯವೂ ಅತ್ಯಂತ ವಿಶೇಷವಾಗಿ ತೋರುತ್ತದೆ. ಸಾಮಾನ್ಯವೆ ಸರ್ವಸಾಮಾನ್ಯವಾಗಿ ಸಮದರ್ಶನ ಸಿದ್ಧಿಸುತ್ತದೆ. ಅಂತಹ ‘ದರ್ಶನ’ ಅತ್ಯಂತಿಕವಾದ ಸುಖಕ್ಕೂ ಶಾಂತಿಗೂ ಕಾರಣವಾಗುತ್ತದೆ.

‘ಯೋ ವೈ ಭೂಮಾ ತತ್‌ಸುಖಮ್‌, ನಾಲ್ಪೇ ಸುಖಮಸ್ತಿ|’
‘ಯಂತ್ರ ನಾನ್ಯತ್ ಶ್ರುಣೋತಿ ನಾನ್ಯತ್ ವಿಜಾನಾತಿ ಸ ಭೂಮಾಃ’
‘ಅಥ ಯತ್ರಾನ್ಯತ್‌ಪಶ್ಯತಿ ಅನ್ಯತ್‌ಶ್ರುಣೋತಿ ಅನ್ಯದ್‌ವಿಜಾನಾತಿ ತದಲ್ಪಮ್’
‘ಯೋ ವೈ ಭೂಮಾ ತದಮೃತಮ್‌’
‘ಅಥ ಯದಲ್ಪಮ್ ತನ್ಮರ್ತ್ಯಮ್.’

ಈ ‘ಅಲ್ಪ’ದಲ್ಲಿ ಪ್ರಾರಂಭವಾಗಿ ಬೇರೆ ಬೇರೆ ಭೂಮಿಗಳಲ್ಲಿ ರಸಗ್ರಾಹಿಯಾಗಿ ಚರಿಸಿ, ಕೊನೆಗೆ ಆ ‘ಭೂಮ’ದಲ್ಲಿ ಸಿದ್ಧಿ ಪಡೆಯುತ್ತದೆ ಪ್ರಕೃತಿ ದರ್ಶನ ಪರವಾದ ಕವಿಯ ಪೂರ್ಣದೃಷ್ಟಿ.