ಕಳೆದ ಒಂದು ಶತಮಾನದಲ್ಲಿ ಭಾರತೀಯ ಪ್ರತಿಭಾಲಕ್ಷ್ಮಿ ವಂಗದೇಶದಲ್ಲಿ ಅಭಿವ್ಯಕ್ತೆಯಾದಂತೆ ಬಹು ರೂಪಿಣಿಯಾಗಿ ಮತ್ತಾವ ದೇಶಭಾಷಾ ಸೀಮೆಯಲ್ಲಿಯೂ ಆವಿರ್ಭೂತೆಯಾದಂತೆ ತೋರುವುದಿಲ್ಲ. ಈಶ್ವರಕೃಪೆಯೊಂದಿದ್ದರೆ ಅಮಂಗಳದಿಂದಲೂ ಮಂಗಳವೆ ಮೂಡಬಹುದೆಂಬುದಕ್ಕೆ ಅದೊಂದು ನಿದರ್ಶನ. ಕ್ಲೈವನ ಕೈತವಕ್ಕೆ ಸಿಲುಕಿ ಪಲಾಸಿ ಕದನದಲ್ಲಿ ಪರಾಜಿತೆಯಾದ ವಂಗೀಯ ಕ್ಷಾತ್ರಶ್ರೀ ಆಂಗ್ಲೇಯರ ಆಧಿಪತ್ಯಕ್ಕೆ ಒಳಗಾದ ತರುವಾಯ ಯಾವ ಯಾವ ಕ್ಷೇತ್ರಗಳಲ್ಲಿ ಎಂತೆಂತಹ ವಿಭೂತಿಗಳನ್ನು ಪಡೆದು, ಭಾರತೀಯ ಆತ್ಮಶ್ರೀಗೆ ಅದೆನಂತಹ ಲೋಕಗೌರವ ಪಾತ್ರವಾಗುವ ಅನನ್ಯ ಸಾಧಾರಣವಾದ ಸಂಪತ್ತನ್ನು ಸಂಪಾದಿಸಿಕೊಟ್ಟಿದ್ದಾಳೆ! ಸುಧಾರಣಾಕ್ಷೇತ್ರದಲ್ಲಿ, ಮತಕ್ಷೇತ್ರದಲ್ಲಿ, ತತ್ತ್ವವಿಚಾರಕ್ಷೇತ್ರದಲ್ಲಿ, ರಾಜಕೀಯ ಕ್ಷೇತ್ರದಲ್ಲಿ, ಕ್ರಾಂತಿ ಮತ್ತು ಶಾಂತಿಕ್ಷೇತ್ರಗಳಲ್ಲಿ, ವಿಜ್ಞಾನ, ಸಾಹಿತ್ಯ, ಕಲೆ, ತ್ಯಾಗ ಮತ್ತು ಯೋಗಗಳಲ್ಲಿ ಎಲ್ಲೆಲ್ಲಿಯೂ ಆ ದಿವ್ಯ ಪ್ರತಿಭೆ ಮಿಂಚುತ್ತಿರುವುದನ್ನು ನಾವು ನೋಡುತ್ತೇವೆ. ಆ ಶತಮಾನದ ಭಾರತೀಯ ಮಹದ್ವ್ಯಕ್ತಿಗಳ ಪಂಕ್ತಿಯಲ್ಲಿ ಅಗ್ರಸ್ಥಾನದ ಬಹುಭಾಗಗಳನ್ನು ವಂಗದೇಶವೆ ಆಕ್ರಮಿಸಿದೆ. ಆ ಅಗ್ರಪಂಕ್ತಿಯ ಉಜ್ವಲಜ್ಯೋತಿಗಳಲ್ಲಿ ಕವಿ ರವೀಂದ್ರರೂ ಒಬ್ಬರಾಗಿ ತಮ್ಮ ವಿಶಿಷ್ಟ ದೀಪ್ತಿಯಿಂದ ವಿರಾಜಿಸುತ್ತಿದ್ದಾರೆ.

ರವೀಂದ್ರರ ವ್ಯಕ್ತಿಪ್ರಭಾವಳಿ ಏಕಮುಖ ಸಂಭೂತವಾದುದಲ್ಲ. ಬಹುಮುಖ ಸ್ಫಟಿಕಮಣಿಯಂತೆ ಅವರ ಪ್ರತಿಭಾವಾಸುಕಿ ಅವರ ಆತ್ಮದ ಕಾಂತಿಯನ್ನು ತನ್ನ ನಾನಾ  ಫಣೆಗಳಿಂದ ಪ್ರಸರಿಸುತ್ತದೆ. ಒಂದೊಂದು ಮುಖದಲ್ಲಿಯೂ ಒಂದೊಂದು ವರ್ಣ, ಒಂದೊಂದು ವಿಶಿಷ್ಟತೆ, ಒಂದೊಂದು ಮೋಹಕತೆ ಹೊಮ್ಮುತ್ತದೆ. ಬಹುಮುಖವಾದ ಆ  ಪ್ರತಿಭೆಯ ಯಾವ ಒಂದು ಮೆಯ್ಯಿಂದಲೇ ಆದರೂ ಅವರು ಜಗತ್‌ಗೌರವ ಪಾತ್ರರಾಗಬಹುದಾಗಿತ್ತು. ಅವರ  ವ್ಯಕ್ತಿತ್ವಕ್ಕೆ ಅಂತಹ ಹಲವು ಮೈಗಳಿವೆ ಎಂದಮೇಲೆ ಅದರ ವೈಭವಕ್ಕೆ ಮೇರೆ ಎಲ್ಲಿ! ತನ್ನ ಒಂದೊಂದು ಗುಣಕ್ಕಾಗಿ, ಒಂದೊಂದು ಕಾರಣಕ್ಕಾಗಿ, ಒಂದೊಂದು ಬಣ್ಣಕ್ಕಾಗಿ ಅಥವಾ ಒಂದೊಂದು ರಸಕ್ಕಾಗಿ ಒಂದೊಂದೇ ವರ್ಗದವರನ್ನು ಸೆಳೆದರೂ ಸಾಕು; ಮೊತ್ತದಲ್ಲಿ ಅದು ಸರ್ವಜನಪ್ರಿಯವಾಗಿ ಸರ್ವಗೌರವ ಭಾಜನವಾಗುವುದರಲ್ಲಿ ಸಂದೇಹವಿಲ್ಲ. ಈ ದೃಷ್ಟಿಯಿಂದ ನೋಡಿದರೆ ವಿಶ್ವಕವಿಯೆಂದು ಅವರನ್ನು ಸಂಬೋಧಿಸುವುದು ಸಾರ್ಥಕವಾಗುತ್ತದೆ.

ಆದರೆ ಅವರ ವ್ಯಕ್ತಿತ್ವದ ವಿಶ್ವತ್ತ ಎಂಬುದು ಅವರ “ಕವಿತ್ವ” ಮಾತ್ರದಲ್ಲಿಯೆ ಎಂದೂ, “ವಿಶ್ವತ್ವ” ಎಂಬ ಪದಕ್ಕೆ ಸರ್ವಶ್ರೇಷ್ಠತ್ವ ಎಂದೂ ವ್ಯಾಖ್ಯಾನ ಮಾಡಿದರೆ ಅದು ಚರ್ಚಾಸ್ಪದವಾಗಬಹುದು. ಈ ಭಾಷಣದ ವಿಷಯ ಸಮಗ್ರ ರವೀಂದ್ರರನ್ನು ಕುರಿತದ್ದಲ್ಲ; ಕವಿ ರವೀಂದ್ರರನ್ನು ಕುರಿತದ್ದು. ಆದ್ದರಿಂದ ಅವರ “ಕವಿತ್ವ” ಮಾತ್ರವನ್ನೇ ಇಲ್ಲಿ ವಿಶೇಷವಾಗಿ ಗಮನಿಸಿ, ಕೊಟ್ಟಿರುವ ಸ್ವಲ್ಪಾವಕಾಶದಲ್ಲಿ ಸ್ಥೂಲರೇಖಾವಿನ್ಯಾಸದಿಂದ ಎರಡು ಮಾತು ಹೇಳುತ್ತೇವೆ.

ರವೀಂದ್ರರ ಬಹುರೂಪಿಣೀ ಕಾವ್ಯಪ್ರತಿಭೆ ಭಾವಗೀತೆಗಳಲ್ಲಿ, ಸಣ್ಣ ಕತೆಗಳಲ್ಲಿ, ದೃಶ್ಯಕಾವ್ಯಗಳಲ್ಲಿ, ದೊಡ್ಡ ಕತೆಗಳಲ್ಲಿ, ಕಾದಂಬರಿಗಳಲ್ಲಿ, ಸಾಹಿತ್ಯ ಸಮಾಲೋಚನೆಯಲ್ಲಿ, ಪತ್ರಲೇಖನ ಸಾಹಿತ್ಯದಲ್ಲಿ, ಕಾವ್ಯವಿಮರ್ಶೆಯಲ್ಲಿ, ಆತ್ಮಕಥಾ ಶಾಖೆಯಲ್ಲಿ, ಭಾರತೀಯ ಸಂಸ್ಕೃತಿಯ ಉತ್ಥಾನ, ಸ್ಥಾಪನೆ ಮತ್ತು ಪ್ರಚಾರ ಇವುಗಳ ಉದ್ಯಮದಲ್ಲಿ, ರಾಜಕೀಯಾತ್ಮಕವಾದ ವಿಶ್ವಶಾಂತಿಯ ಬೋಧೆಯಲ್ಲಿ, ಕವಿದರ್ಶನದ್ಯೋತಕವಾದ ತಾತ್ವಿಕೋಪನ್ಯಾಸಗಳಲ್ಲಿ, ವಿದೇಶೀಯ ಖಂಡನೆಗಳನ್ನು ಖಂಡಿಸುವ ಉತ್ತರ ಪ್ರತ್ಯುತ್ತರ ರೂಪವಾದ ಲೇಖನಗಳಲ್ಲಿ, ಸಮಾಜ ಸುಧಾರಣೆಯಲ್ಲಿ, ಗ್ರಾಮೋದ್ಧಾರಾದಿ ವ್ಯವಹಾರ ಕ್ಷೇತ್ರಗಳಲ್ಲಿ, ಸ್ವಭಾಷಾ ಪರವಾದ ಸಂಗ್ರಾಮದಲ್ಲಿ, ನೃತ್ಯ, ಗಾನ ಮತ್ತು ಚಿತ್ರ ಕಲೆಗಳಲ್ಲಿ, ಭಾರತ ಸ್ವಾತಂತ್ಯ್ರಸಾಧನೆಯ ವಾಙ್ಮಯಸೇವೆಯಲ್ಲಿ ಇತ್ಯಾದಿಯಾದಿ ಅನೇಕಾನೇಕ ವಿಧಾನಗಳಲ್ಲಿ ಪ್ರಕಾಶಿತವಾಗಿದೆ. ಬಹುಶಃ ಬದುಕಿನ ಯಾವ ಕ್ಷೇತ್ರವನ್ನೂ ಆ ಪ್ರತಿಭೆ ಗಮನಿಸದೆ ಬಿಟ್ಟಿಲ್ಲ. ಆದರೆ ಆ ಸಕಲ ವೈವಿಧ್ಯವನ್ನು ಒಂದು ಮೂಲಭೂತವಾದ ರಸಸೂತ್ರ, ಮಣಿಗಣದ ನಡುವಣ ಹೊನ್ನದಾರದಂತೆ, ವ್ಯಾಪಿಸಿ ಬಂಧಿಸಿದೆ. ಅದೇ ಅವರ ವ್ಯಕ್ತಿತ್ವದ ಸ್ವರೂಪಲಕ್ಷಣದಂತಿರುವ ಕವಿಶಕ್ತಿ. ರವೀಂದ್ರರು ಮತ್ತೇನೆ ಆಗಿರಲಿ ಆಗಿರದಿರಲಿ ಅವರು ಎಲ್ಲದರಲ್ಲಿಯೂ ಎಲ್ಲೆಲ್ಲಿಯೂ ಮುಖ್ಯವಾಗಿ ಶೀಲತಃ ಕವಿ. ಗಂಧದ ಮರದಲ್ಲಿ ಮೀನನ್ನು ಕೆತ್ತಿರಬಹುದು, ಪುನಗಿನ ಬೆಕ್ಕನ್ನು ಕೆತ್ತಿರಬಹುದು, ಅಥವಾ ಕಸ್ತೂರಿ ಮೃಗವನ್ನೇ ಮಾಡಿರಬಹುದು. ಆ ಎಲ್ಲ ಗೊಂಬೆಗಳಲ್ಲಿಯೂ ಸಮಾನವಾಗಿ ಗಂಧದ ಸುವಾಸನೆ ಆಪ್ಯಾಯಮಾನವಾಗಿರುತ್ತದೆ. ಕಲಾದೃಷ್ಟಿಯಿಂದ ಒಂದುವೇಳೆ ಕಸ್ತೂರಿಮೃಗದ ಆಕೃತಿ ತುಂಬಾ ಕೀಳುಮಟ್ಟದ್ದಾದರೂ ಅದರ ಸುಗಂಧಕ್ಕೆ ಸ್ವಲ್ಪವೂ ಊನಬರುವುದಿಲ್ಲ. ಸುಗಂಧದಿಂದಲಾದರೂ ಅದು ಆಕರ್ಷಣೀಯವಾಗದೆ ಇರುವುದಿಲ್ಲ. ಅದರಂತೆಯ ರವೀಂದ್ರರ ಕೃತಿಗಳು ಎಲ್ಲ ಭಾಗಗಳಲ್ಲಿಯೂ ಎಲ್ಲ ಶಾಖೆಗಳಲ್ಲಿಯೂ ಒಂದೇ ಸಮನೆ ಸರ್ವ ಶ್ರೇಷ್ಠವಾಗಿರದಿದ್ದರೂ ಅವುಗಳಲ್ಲಿ ಎಲ್ಲೆಲ್ಲಿಯೂ ಕಂಡುಬರುವ ಒಂದು ದಿವ್ಯವಾದ ಕವಿ ಶಕ್ತಿಯ ಮತ್ತು ಅಪ್ಸರೀಸದೃಶವಾದ ಮಧೂರಶೈಲಿಯ ಮೋಹಕತ್ವದಿಂದ ಅವೆಲ್ಲವೂ ಆಕರ್ಷಣೀಯವಾಗಿರುವುದರಲ್ಲಿ ಎಳ್ಳನಿತೂ ಸೋಜಿಗವಿಲ್ಲ.

ಆದರೆ ಮಿಠಾಯಿಸಾಬಿ ಸಕ್ಕರೆಯಲ್ಲಿ ಬಣ್ಣಬಣ್ಣದ ಕೋಳಿಗಳನ್ನೂ ನವಿಲುಗಳನ್ನೂ ಆನೆ ಕುದುರೆ ಮೀನು ಮೊಸಳೆಗಳನ್ನೂ ರಚಿಸಿ ಕೋಲಿಗೆ ಸಿಕ್ಕಿಸಿ ಎತ್ತಿ ಹಿಡಿದು ಬೀದಿಯಲ್ಲಿ ಕೂಗುತ್ತ ಬಂದರೆ ನಾಲಗೆಯ ರುಚಿಗಾಗಿ ಕಣ್ಣಿಗೆ  ಮಾರುಹೋಗುವ ಮಕ್ಕಳಂತಾಗಿ, ನವಿಲಾದರೇನು? ಮೊಸಳೆಯಾದರೇನು? ಅಥವಾ ನವಿಲು ಕಾಗೆಯಹಾಗಿದ್ದರೇನು? ಮೊಸಳೆ ಇಲಿಯಂತಿದ್ದರೇನು? ಸಕ್ಕರೆಯ ಸಿಹಿಯಲ್ಲವೆ ಮುಖ್ಯ! ಅಃ ಈ ಕಾಗೆ ಎಷ್ಟು ಚೆನ್ನ? ಈ ಗೂಬೆ ಎಷ್ಟು ಸುಂದರ? ಎಂದು ಕೇಕೆ ಹಾಕುತ್ತ, ಕಲೆ ಚೆನ್ನಾಗಿದ್ದರೂ ಕೃಶವಾಗಿ ಕಾಣುವ ನವಿಲನ್ನು ಸಕ್ಕರೆಯ ಪ್ರಮಾಣಕ್ಕಾಗಿ ತಿರಸ್ಕರಿಸಿ, ಗಾತ್ರದಲ್ಲಿ ದಪ್ಪ ದಪ್ಪವಾಗಿರುವ ಕಾಗೆ ಗೂಬೆಗಳನ್ನೆ ಆರಿಸಿ ಮನಸೋತರೆ ಸಾಹಿತ್ಯವಿಮರ್ಶೆ ದಿಕ್ಕು ತಪ್ಪಿದಂತಾಗುತ್ತದೆ.

ರವೀಂದ್ರ ಸಾಹಿತ್ಯದಲ್ಲಿ ಪೂರ್ವೋಕ್ತ ಉಪಮಾನಗಳಲ್ಲಿ ಸಕ್ಕರೆ ಮತ್ತು ಗಂಧದಮರ ಇವುಗಳಂತಿರುವ ಅಪ್ಸರೀ ಮೋಹಕತೆಗೆ ಮಾತ್ರ ಮಾರುಹೋಗದೆ ಅವನ್ನು ನಿಷ್ಪಕ್ಷ ವಿಮರ್ಶೆಯ ನಿಕಷದಲ್ಲಿ ಪರೀಕ್ಷಿಸಿದರೆ ಅವರ ಭಾವಗೀತೆಗಳೂ ಸಣ್ಣಕತೆಗಳೂ ಸರ್ವಶ್ರೇಷ್ಠತ್ವಕ್ಕೆ ಏರಿ ಶಿಖರಸ್ಥಾನದಲ್ಲಿ ನಿಲ್ಲುತ್ತದೆ. ಅವರು ಮುಖ್ಯವಾಗಿ ಭಾವಕವಿ. ಅವರ ಪ್ರತಿಭೆ ಪ್ರಧಾನತಃ ಭಾವ ಗೀತಾತ್ಮಕವಾದುದ್ದು; ಮಹಾಕಾವ್ಯಾತ್ಮಕವಾದುದಲ್ಲ. ಅವರು ತಮ್ಮ  ಲಘುಕೃತಿಗಳಲ್ಲಿ ಮುಟ್ಟಿರುವ ಪರಾಕಾಷ್ಠತೆಯನ್ನೂ ತಮ್ಮ ದೀರ್ಘ ಕೃತಿಗಳಲ್ಲಿ ಮುಟ್ಟದಿರುವುದಕ್ಕೂ ಅದೇ ಕಾರಣ, ಅಲ್ಲದೆ ಅವರು ಮಹಾಕಾವ್ಯಗಳ ರಚನೆಯ ಗೋಜಿಗೆ ಹೋಗದಿರುವುದಕ್ಕೂ ಅದೇ ಕಾರಣವೆಂದು ತೋರುತ್ತದೆ. ಅವರನ್ನು “ಮಹಾಕವಿಯಾಗಿರುವ ಶ್ರೇಷ್ಠವ್ಯಕ್ತಿ” ಎಂದು ವರ್ಣಿಸುವುದಕ್ಕಿಂತಲೂ “ಶ್ರೇಷ್ಠ ಕವಿಯಾಗಿರುವ ಮಹಾವ್ಯಕ್ತಿ” ಎಂದು ವರ್ಣಿಸಿದರೆ ಹೆಚ್ಚು ಸತ್ಯವಾಗಿ ತೋರುತ್ತದೆ.

ಇಲ್ಲಿ ಮತ್ತೊಂದು ವಿಷಯವನ್ನು ಸೂಕ್ಷ್ಮವಾಗಿ ಸೂಚಿಸಿದರೆ ಮೇಲಿನ ಇತ್ಯರ್ಥಕ್ಕೆ ಇನ್ನಷ್ಟು ಪುಷ್ಟಿ ದೊರೆಯುತ್ತದೆ. ಅದೇನೆಂದರೆ, ರವೀಂದ್ರರ ವಿರಾಟ್ ಪ್ರತಿಭೆಯನ್ನು ಸಂಕುಚಿತವೂ ಏಕಮುಖ ಮಾತ್ರವೂ ಆದ ಒಂದು ತತ್ವಪಂಜರದಲ್ಲಿ ಸಂಚರಿಸುವಂತೆ ಮಾಡಿದ ಹೊಣೆ ಬ್ರಾಹ್ಮಸಮಾಜಕ್ಕೆ ಸೇರಿದುದು. ಆ ಸಮಾಜದವರು ಉಪನಿಷತ್ತುಗಳನ್ನು ಮುಖ್ಯವಾಗಿ ಒಪ್ಪಿಕೊಂಡು, ಹಿಂದೂ ಸಾಹಿತ್ಯ ಸಂಸ್ಕೃತಿಯ ಆಕರಗಳಾದ ಪುರಾಣಗಳನ್ನು ಮತೀಯ ಕಾರಣಕ್ಕಾಗಿ ತಿರಸ್ಕರಿಸಿದರು. ಆ ಸಮಾಜದ ಶ್ರದ್ಧೆಯಲ್ಲಿಯೆ ಚಿಕ್ಕಂದಿನಿಂದಲೂ ಸಾಣೆಗೊಂಡ ರವೀಂದ್ರರ ಮತಿ ತನ್ನ ಪ್ರತಿಭೆಗೂ ಆ ಶೃಂಖಲೆಗಳನ್ನು ತೊಡಿಸಿತು. ಹಾಗಾಗಿ ಮಹಾಕಾವ್ಯಾತ್ಮಕವೂ ಆಗಬೇಕಾಗಿದ್ದ ಆ ಪ್ರತಿಭೆ ಭಾವ ಗೀತಾತ್ಮಕ ಮಾತ್ರವಾಗಿಯೆ ಪರ್ಯವಸಾನ ಹೊಂದಬೇಕಾಯಿತು. ರವೀಂದ್ರರು ರಾಮಾಯಣ, ಮಹಾಭಾರತ ಮತ್ತು ಇತರ ಪುರಾಣಗಳಿಂದ ವಸ್ತುಗಳನ್ನು ಸ್ವೀಕರಿಸಿ ಹಿಂದೂ ಸಂಸ್ಕೃತಿಯ ನಂದಾದೀಪವಾಗುವಂತೆ ಯಾವ ಮಹಾಕಾವ್ಯವನ್ನೂ ಬರೆಯಲಾರದೆ ಹೋದರು. ಕ್ರೈಸ್ತಮತವನ್ನು ಅವಲಂಬಿಸಿದ್ದ ಮೈಕೇಲ್‌ಮಧುಸೂದನ ದತ್ತರೂ ಕೂಡ ಅಲ್ಲಿ ಇಲ್ಲಿ ತೊಳಲಿ, ವಿದೇಶೀಯ ಭಾಷೆ ಮತ್ತು ಸಂಸ್ಕೃತಿಗಳಲ್ಲಿ ಕವಿತ್ವಮಾಡುವ ಸಾಹಸದಲ್ಲಿ ವಿಫಲರಾಗಿ ಬೇಸತ್ತು ಕಡೆಗೆ “ಮೇಘನಾದ ವಧ” “ತಿಲೋತ್ತಮಾ ಸಂಭವ” ಎಂಬ ಹಿಂದೂ ಪುರಾಣ ವಿಷಯಗಳನ್ನೊಳಗೊಂಡ ಎರಡು ಮಹಾಕಾವ್ಯಗಳನ್ನು ರಚಿಸಿ, ಬಂಗಾಳೀ ಸಾಹಿತ್ಯಕ್ಕೆ ನೂತನ ಕಳೆಯನ್ನು ತಂದುದನ್ನು ನೆನೆದರೆ ರವೀಂದ್ರರಂತಹ ವಿಶ್ವ ಪ್ರತಿಭಾಶಾಲಿಯಾದ ಕವಿ ಹಾಗೆ ಮಾಡದಿದ್ದುದರಿಂದ ಬಂಗಾಳಿಗೂ ತನ್ಮೂಲಕ ಭಾರತಕ್ಕೂ ಮತ್ತು ಲೋಕಕ್ಕೂ ಎಂತಹ ನಷ್ಟವಾಯಿತೆಂಬುದನ್ನು ಊಹಿಸುವುದು ಅಸಾಧ್ಯ. ಅಥವಾ ಆ ಪ್ರತಿಭೆಯ ಪ್ರಕಾಶನದ ಮಿತಿಯೇ ಅಷ್ಟಿರಬೇಕು ಎಂಬುದು ವಿಧಿಸಂಕಲ್ಪಿತವೆಂದು ಊಹಿಸಬೇಕಾಗುತ್ತದೆ.

ಮತಪುರಾಣಗಳನ್ನು ಆಶ್ರಯಿಸಿ ಬರೆದಿದ್ದ ಮಾತ್ರಕ್ಕೆ ಕಾವ್ಯದ ವಿಶ್ವತ್ವ ನಷ್ವಾಗುತ್ತಿರಲಿಲ್ಲ. ಕ್ರೈಸ್ತಮತದ ಬೈಬಲ್ ಕಥೆಯನ್ನು ತನ್ನ ಕಾವ್ಯವಿಷಯವಾಗಿ ಆರಿಸಿಕೊಂಡ ಮಿಲ್ಟನ್ ಕವಿಯ “ಪ್ಯಾರಡೈಸ್ ಲಾಸ್ಟ್” ಮಹಾಕಾವ್ಯ ತನ್ನ ವಿಶ್ವತ್ವವನ್ನೂ ಕಳೆದುಕೊಂಡಿಲ್ಲ. ರೋಮನ್ ಕ್ಯಾಥೋಲಿಕ್ ಮತವಿಷಯವನ್ನು ಆಶ್ರಯಿಸಿ ಮಹಾಕೃತಿಯನ್ನು ರಚಿಸಿದ “ಡಾಂಟೆ” ತನ್ನ ವಿಶ್ವತ್ವವನ್ನು ಕಳೆದುಕೊಂಡಿಲ್ಲ. ಹಿಂದೂಮತ ವಿಷಯಗಳನ್ನು ಆಶ್ರಯಿಸಿ ಕೃತಿ ರಚನೆಮಾಡಿದ ವಾಲ್ಮೀಕಿ, ವ್ಯಾಸ, ಕಾಳಿದಾಸರು ತಮ್ಮ ವಿಶ್ವತ್ವವನ್ನು ಕಳೆದುಕೊಂಡಿಲ್ಲ. ಜೈನ ಮತಕಥೆ “ಆದಿಪುರಾಣ”ವನ್ನು ಬರೆದು ಪಂಪ ತನ್ನ ವಿಶ್ವತ್ವವನ್ನು ಕಳೆದುಕೊಂಡಿಲ್ಲ. ಅಂತಹ ಮಹಾಕಾವ್ಯವನ್ನು ಬರೆದಿದ್ದರೆ ರವೀಂದ್ರರ ವಿಶ್ವತ್ವವೂ ಕುಂಠಿತವಾಗುತ್ತಿರಲಿಲ್ಲ. ಅದಕ್ಕೆ ತನ್ನ ಪೂರ್ವಸಿದ್ಧತೆಯೂ ಅವರಿಗಿತ್ತು ಎನ್ನುವುದನ್ನು ‘ಪ್ರಾಚೀನ ಸಾಹಿತ್ಯ’ ಮೊದಲಾದ ಅವರ ಕಾವ್ಯವಿಮರ್ಶೆಗಳು ಸಾರಿ ಹೇಳುತ್ತವೆ.

ರಚನೆ ಮಾಡಲಿಲ್ಲ ಎಂಬ ಕಾರಣದಿಂದ ಒದಗಿರುವ ನಷ್ಟದ ಜೊತೆಗೆ ಮಾಡಿದ ರಚನೆಗಳೂ ಹಗುರವಾದುವು ಎಂಬ ಇನ್ನೊಂದು ನಷ್ಟವೂ ಸೇರುತ್ತದೆ. ಮೇರುದಂಡ ಬಲಿಷ್ಠವಾಗಿರುವ ರಾಮಾಯಣ, ಮಹಾಭಾರತ ಮತ್ತು ಪುರಾಣ ವಿಷಯಗಳನ್ನು ತೆಗೆದುಕೊಳ್ಳಲು ತಿರಸ್ಕರಿಸಿದುದರಿಂದಲೇ ರವೀಂದ್ರರ ನಾಟಕಗಳೂ ಅವರ “ಕತ್ತಲೆಯ ಕೋಣೆಯ ರಾಜ”ನಂತೆ ಹೊಗೆಹೊಗೆಯಾಗಿ ಮಂಜುಮಂಜಾಗಿ ರಕ್ತಮಾಂಸವಿಲ್ಲದೆ ಪ್ರೇತವತ್ತಾಗಿ ಉಳಿದಿವೆ.

ನಿದರ್ಶನಗಳನ್ನು ಇನ್ನೂ ಸಮರ್ಪಕವಾಗಿ ಕೊಟ್ಟು, ತತ್ವಗಳನ್ನು ಮತ್ತಷ್ಟು ವಿಶದವಾಗಿಯೂ ವಿವರವಾಗಿಯೂ ಸಮರ್ಥಿಸಲು ಇಲ್ಲಿ ಕಾಲಾವಕಾಶವಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಕವಿ ರವೀಂದ್ರರ ಸಾಹಿತ್ಯದಲ್ಲಿ ಭಾವಗೀತೆಗಳು ಸಣ್ಣ ಕತೆಗಳು ಉತ್ತಮವರ್ಗಕ್ಕೆ ಕವಿ ರವೀಂದ್ರರ ಸಾಹಿತ್ಯದಲ್ಲಿ ಭಾವಗೀತೆಗಳೂ ಸಣ್ಣ ಕತೆಗಳೂ ಉತ್ತಮವರ್ಗಕ್ಕೆ ಸೇರುತ್ತವೆ. ನಾಟಕಗಳಂತೂ, ಬಹುಶಃ ಪುರಾಣ ವಸ್ತುಗಳನ್ನು ಆಶ್ರಯಿಸಿರುವ ಚಿತ್ರಾ, ಕುಂತಿ ಕರ್ಣ ಮೊದಲಾದ ಒಂದೆರಡು ಲಘು ಪ್ರಯೋಗಗಳನ್ನುಳಿದು, ನಾಟಕಗಳಾಗಿ ನಿಲ್ಲುವುದಿಲ್ಲ. ಅವುಗಳಲ್ಲಿರುವ ಭಾವ ಗೀತಾಂಶಗಳಿಗಾಗಿಯಾದರೂ ನಿಲ್ಲುತ್ತವೆಯೇ ಎಂಬುದೂ ಸಂದೇಹಕರ. ಅವರ ಕಾದಂಬರಿಗಳೂ, ಅವುಗಳಲ್ಲಿರುವ ಕವಿತ್ವಾಂಶವನ್ನು ಬಿಟ್ಟರೆ, ಆ ಜಾತಿಯ ಸಾಹಿತ್ಯದಲ್ಲಿ ಅತ್ಯುತ್ತಮವರ್ಗಕ್ಕೆ ಸೇರುತ್ತವೆ ಎಂದು ಧೈರ್ಯವಾಗಿ ಹೇಳಲಾಗುವುದಿಲ್ಲ. ಗದ್ಯಲೇಖನಗಳಲ್ಲಿ ಅವರ ಸಾಹಿತ್ಯಮೀಮಾಂಸೆಗೂ ಕಾವ್ಯ ವಿಮರ್ಶೆಗೂ ನಿಜವಾಗಿಯೂ ಅತ್ಯುತ್ತಮವು ಸ್ಥಾನ ಒದಗಬೇಕಾಗುತ್ತದೆ. ಅವರು ಕವಿಮಾತ್ರರಾಗಿ ಮಹಾಕವಿ ಅಲ್ಲ. ಮಹಾವ್ಯಕ್ತಿಯಾಗಿ ಉತ್ತಮಕವಿಯೂ ಆಗಿರುವುದರಿಂದ ವ್ಯಕ್ತಿಯ ವಿಶೇಷಣ ಕವಿಗೂ ಲಭಿಸಿ ಮಹಾಕವಿಯಾಗಿದ್ದಾರೆ.