ರಾಷ್ಟ್ರಪಿತ ದಿವಂಗತ
ಉನ್ಮತ್ತ ಹಸ್ತ ಹತ!
ನರಹೃದಯದ ವಿಷವಾರ್ಧಿಗೆ
ಜೀವಾಮೃತ ಸಮರ್ಪಿತ!
ಕ್ಷಮಿಸು, ಓ ಜಗತ್‌ಪಿತಃ
ಅದೃಷ್ಟ ಹೀನ ಭಾರತ!

ನಮ್ಮ ರಾಷ್ಟ್ರದ ಪಿತಾಮಹನು ರಣರಂಗದ ಮಧ್ಯೆ ಶರಶಯ್ಯೆಯಲ್ಲಿ ಅಸ್ತಂಗತನಾದನು. ನಮ್ಮ ಸಾಕ್ರೆಟೀಸನಿಗೆ ವಿಷಪಾನ ಮಾಡಿಸಿಯಾಯಿತು. ನಮ್ಮ ಯೇಸು ಕ್ರಿಸ್ತನು ಶಿಲುಬೆಗೇರಿದನು. ಜಗದ್ವಂದ್ಯ ಲೋಕಗುರು ಪೂಜ್ಯ ಮಹಾತ್ಮಾಗಾಂಧಿ ತಲೆಕೆಟ್ಟ ಕೊಲೆಗಾರನೊಬ್ಬನ ಕ್ರೂರ ಹಸ್ತದಿಂದ ಪ್ರಾರ್ಥನಾ ಸಭೆಯ ವೇದಿಕೆಯ ಮೇಲೆ, ತಮ್ಮಿಬ್ಬರು ಮೊಮ್ಮಕ್ಕಳ ಪ್ರೇಮ ಬಾಹುಗಳ ನಡುವೆ ನಿಂತು, ತಮ್ಮನ್ನು ಸ್ವಾಗತಿಸುತ್ತಿದ್ದ ವಿಪುಲಜನವೃಂದಕ್ಕೆ ತಮ್ಮೆರಡು ಕೈಗಳನ್ನೂ ಹಣೆಗೆತ್ತಿ ನಮಸ್ಕರಿಸುತ್ತಿದ್ದಾಗಲೇ ಮೃತ್ಯು ರಾಹುವಿಗೆ ತುತ್ತಾದರು. ವೇದಿಕೆಯ ಮೇಲೆ ಅತಿ ಸಮೀಪದಲ್ಲಿ ಕುಳಿತ ಹಿಂದೂ ಯುವಕನೊಬ್ಬನು ಚಿಮ್ಮಿ ನಿಂತು ಅವರ ತೆರೆದೆದೆಗೆ ಗುಂಡಿಟ್ಟು ಕೊಂದನಂತೆ. ಹಿಂದೆಂದೂ ಭರತಖಂಡದಲ್ಲಿ ನಡೆಯದಂತಹ ಇಂತಹ ಅಸಹ್ಯವಾದ ಘೋರ ಪಾತಕವನ್ನು ಇಂದು ನಡೆಸಿ ನಮ್ಮ ದೇಶಕ್ಕೆ ದೇಶವೇ ಜಗತ್ತಿನ ಮುಂದೆ ಮಹಾಪರಾಧಿಯಾಗಿದೆ; ಅವಮಾನಿತವಾಗಿದೆ; ನಾವು ತಲೆಯೆತ್ತಿ ನಡೆಯದಂತಾಗಿದೆ. ನಮ್ಮ ದೇಶ ತಿರಸ್ಕಾರಕ್ಕೊ ಶಾಪಕ್ಕೂ ಪಕ್ಕಾಗಿದೆ. ಈ ಪಾಪಕರ್ಮಕ್ಕೆ ತಕ್ಕ ತಪಸ್ಯೆಯಿಂದ ಪಶ್ಚಾತ್ತಾಪದಿಂದ ಪ್ರಾಯಶ್ಚಿತ್ತಮಾಡಿಕೊಳ್ಳದಿದ್ದರೆ ನಮಗೆ ಯೇಸು ಕ್ರಿಸ್ತನನ್ನು ಮೊಳೆಹೊಡೆದು ಕೊಂದ ಜನಾಂಗಕ್ಕಾಗಿರುವ ದುರ್ಗತಿಯೇ ಒದಗುತ್ತದೆಯೋ ಏನೋ ಎಂದು ಹೆದರಿಕೆಯಾಗುತ್ತಿದೆ.

ಮತ್ತೇನಿದ್ದೀತು ನಾವು ಕೈಕೊಳ್ಳುವ ಆ ಪ್ರಾಯಶ್ಚಿತ್ತ? ಯಾವ ಮಹಾಪುರುಷನ ಪ್ರೇಮಮಯ ಹೃದಯವು ಗುಂಡು ತಗುಲಿ ಬಿರಿಯಿತೋ ಆ ಹೃದಯದ ಆಶೆ ಆಕಾಂಕ್ಷೆ ಆದರ್ಶಗಳನ್ನು ಅಚಂಚಲವಾದ ದೃಢತೆಯಿಂದ ಆಚರಿಸಿ ಸಾಧಿಸುವುದೊಂದೇ ನಮಗೆ ಮುಂದಿರುವ ಶ್ರೇಯೋಮಾರ್ಗ. ಶಿಲುಬೆಗೇರಿದ ಯೇಸು ಕ್ರಿಸ್ತನಿಗೆ ‘ಕ್ಷಮಿಸು, ತಂದೆ!’ ಎಂದು ಮಾನವರ ಪರವಾಗಿ ಭಗವಂತನನ್ನು ಬೇಡಲು ಸ್ವಲ್ಪ ಪ್ರಜ್ಞೆಯಾದರೂ ಇತ್ತಂತೆ. ನಿನ್ನೆ ಮಡಿದ ನಮ್ಮ ಕ್ರಿಸ್ತನಿಗೆ ಅಷ್ಟಕ್ಕೂ ಅವಕಾಶಕೊಡದಷ್ಟು ಬೇಗನೆ ಪ್ರಜ್ಞೆ ಹೋಯಿತಂತೆ. ಆದರೂ ಆತನ ಮುಖಮುದ್ರೆ ಪ್ರಶಾಂತವಾಗಿ, ಕ್ಷಮಾಶೀಲವಾಗಿ, ಧ್ಯಾನ ಪೂರ್ಣಶಾಂತಿಯಿಂದ ತುಂಬಿ, ‘ಕ್ಷಮಿಸು ತಂದೆ!’ ಎನ್ನುವಂತಿತ್ತೆಂದು ಆ ವರ್ಣನೆಯನ್ನು ಕೇಳಿದವರೆಲ್ಲರಿಗೂ ವೇದ್ಯವಾಗಿರಬೇಕು. ಮೃತಸ್ಥಿತಿಯಲ್ಲಿಯೂ ಅಮೃತವನ್ನೇ ಪ್ರೋಕ್ಷಿಸುತ್ತಿದ್ದ ಆ ಮುಖನಿದ್ರೆಯ ಸಂದೇಶ-ಕ್ಷಮೆ, ಪ್ರೇಮ, ಸತ್ಯ, ಅಹಿಂಸೆ ಇವು ನಮಗೆ ರಕ್ಷಾಮಂತ್ರಗಳಾಗಬೇಕು. ಹಾಗಾದರೆ ಮಾತ್ರವೆ ನಮ್ಮ ದೇಶದ ಸದ್ಯೋಜಾತ ಸ್ವಾತಂತ್ಯ್ರಕ್ಕೆ ರಕ್ಷಾಯಂತ್ರ ಸಿದ್ಧವಾಗುತ್ತದೆ.

ಎಷ್ಟು ಅನಿರೀಕ್ಷಿತ, ಎಷ್ಟು ಆಕಸ್ಮಿಕ, ಎಷ್ಟು ಭಯಂಕರವಾಗಿತ್ತು ನಿನ್ನೆ ಬಂದ ಆ ಘೋರ ವಾರ್ತೆ! ಮೊನ್ನೆತಾನೆ ಆಮರಣ ಪರ್ಯಂತ ಕೈಕೊಂಡ ಉಪವಾಸ ವ್ರತದಿಂದ ದೆಹಲಿಯ ವಿಷಸಮುದ್ರವನ್ನೂ ಕ್ಷೀರಸಾಗರವಾಗಿ ಪರಿವರ್ತಿಸಿ, ಲೋಕದ ಪ್ರಶಂಸೆಗೂ ಪೂಜೆಗೂ ಕೃತಜ್ಞತೆಗೂ ಪಾತ್ರರಾಗಿದ್ದರು. ಅಲ್ಲದೆ ನಮ್ಮೆಲ್ಲರಲ್ಲಿ ಮತ್ತೊಂದು ಹೊಸ ಆಶೆಯನ್ನೂ ಪ್ರಚೋದಿಸಿದ್ದರು. ನೂರಿಪ್ಪತ್ತೈದುವರ್ಷದ ಹೊಂಗನಸು ಎಪ್ಪತೆಂಟಕ್ಕೇ ಬಿರಿಯುವಂತೆ ಮಾಡಿದ ಈಶ್ವರೇಚ್ಛೆಯ  ಕಟುಲೀಲೆಗೆ ಏನು ಹೇಳುವುದು? ತಲೆಬಾಗಿ ಮೂಕರಾಗುವುದೊಂದೇ ದಾರಿ. ಆ ವಾರ್ತೆ ಕಿವಿಗೆ ಬಿದ್ದಾಗ ಜನ ನಕ್ಕುಬಿಟ್ಟರು. ಅದನ್ನು ತಿಳಿಸಿದವರಿಗೆ ಛಿಃ ಮಾಡಿದರು. ಸತ್ತರೆಂದು ನಂಬುವುದಾದರೂ ಎಂತು? ಗುಂಡು ಬಿದ್ದು ಸತ್ತರೆಂದಾಗಲಂತೂ ಯಾರೂ ನಂಬದೆಹೋದರು. ಏನು? ಗಾಂಧೀಜಿಗೆ? ಗುಂಡಿನೇಟು? ಅಸಾಧ್ಯ! ಅಸಂಭವ? ಅವಿವೇಕ! ಸುಳ್ಳು! ಖಂಡಿತ ಸುಳ್ಳು! ಅಕಾಶವಾಣಿ ಶೋಕವಾರ್ತೆಯನ್ನು ಮತ್ತೆ ಮತ್ತೆ ಒತ್ತಿಯೊತ್ತಿ ಹೇಳಿದಾಗ ನಂಬಲೇಬೇಕಾಗಿ ಬಂತು. ಆಗಂತೂ ಜನರಲ್ಲುಂಟಾದ ಕಳವಳ ಭೀತಿ, ನಿರಾಶೆ, ಸಂಕಟ ಇವುಗಳನ್ನು ಹೇಳತಿರದು. ಬದುಕಿನ ಅರ್ಥವೇ ಇದ್ದಕ್ಕಿದ್ದಂತೆ ಶೂನ್ಯವಾದಂತಾಯಿತು, ಜೀವನದ ಪ್ರಯೋಜನವೇ ಕೊನೆಮುಟ್ಟಿದಂತೆ ತೋರಿತು. ಗಾಂಧಿ ಇಲ್ಲದ ಜಗತ್ತು! ತೆಗೆ ತೆಗೆ ಅದೆಲ್ಲಿಯ ಮಾತು! ಎರಡು ತಲೆಮಾರುಗಳಿಂದ ಪ್ರಪಂಚದ, ಅದರಲ್ಲಿಯೂ ಭರತ ಖಂಡದ, ಬಾಳನ್ನೆಲ್ಲ ಆವರಿಸಿ, ಉಸಿರನ್ನೆಲ್ಲ ತುಂಬಿ ಚೇತನಕ್ಕೆ ಶಕ್ತಿಯಾಗಿ, ಕಣ್ಣಿಗೆ ಬೆಳಕಾಗಿ, ದಾರಿಗೆ ಸಂಗಾತಿಯಾಗಿ, ಕೆಳೆಯನಾಗಿ, ನಾಯಕನಾಗಿ, ಸುಧಾರಕನಾಗಿ, ಮಾರ್ಗದರ್ಶಿಯೂ ಗುರುವೂ ಆಗಿದ್ದ ಗಾಂಧಿಯಿಲ್ಲದ ಜಗತ್ತು ಜಗತ್ತೆ? ಅದೊಂದು ಅಮಂಗಲ ವಿಪತ್ತು! ಉಳಿದವರ ಮಾತಿರಲಿ! ನೆಹರು, ಪಟೇಲ್, ಅಜಾದ್‌ಅಂಥವರಿಗೂ ಏನಾಯಿತೆಂಬುದನ್ನು ರೇಡಿಯೋದಿಂದ ಕೇಳಿದ್ದೇವೆ. ಭಾರತದ ಪ್ರಧಾನಿ ಮತ್ತು ಉಪಪ್ರಧಾನಿ ಇಬ್ಬರೂ ದೆಹಲಿಯಿಂದ ಮಾಡಿದ ಪ್ರಸಾರ ಭಾಷಣಗಳಲ್ಲಿ ತಮ್ಮ ತಮ್ಮ ಸಹಜ ಧೈರ್ಯವನ್ನೂ ಒತ್ತಿ ಮೀರಿಬಂದ ದುಃಖಾತಿಶಯಕ್ಕೆ ಗದ್ಗದ ಧ್ವನಿ ನೀಡಿದುದನ್ನು ನಾವೆಲ್ಲರೂ ಆಲಿಸಿ ಮರುಗಿದ್ದೇವೆ.

ನಿಜ, ನಮ್ಮ ದುಃಖಕ್ಕೆ ತೀರವಿಲ್ಲ; ನಮ್ಮ ನಷ್ಟಕ್ಕೆ ಅಳತೆಯಿಲ್ಲ. ಎಂದೆಂದಿಗೂ ಪಡೆಯಲಾಗದ ಒಡವೆ ಚ್ಯುತವಾಗಿದೆ. ನಮ್ಮ ಆಧ್ಯಾತ್ಮಿಕ ರಿಕ್ತತೆಯೋ ಪಾತಾಳದಂತೆ ಗಭೀರವಾಗಿದೆ; ಆಕಾಶದಂತೆ ವಿಸ್ತಾರವಾಗಿದೆ. ನಿನ್ನೆ ಸರ್ವದೇಶಗಳನ್ನೂ ನಗುವಂತೆ ಶ್ರೀಮಂತರಾಗಿದ್ದವರು ಇಂದು ಎಲ್ಲ ನಾಡುಗಳೂ ನಗುವಂತೆ ದಟ್ಟದರಿದ್ರರಾಗಿದ್ದೇವೆ. ಆದರೂ, ಪಂಡಿತ ನೆಹರೂ ತಮ್ಮ ಭಾಷಣದಲ್ಲಿ ಹೇಳಿದಂತೆ, ಕ್ಲೈಬ್ಯಕ್ಕಿದು ಕಾಲವಲ್ಲ; ಅಧೈರ್ಯಕ್ಕಿದು ಅವಕಾಶವಲ್ಲ; ಅಸ್ಥಿರತೆಗೆ ಸಮಯವಲ್ಲ. ಗಾಂಧೀಜಿಗಾಗಿ ನಾವು ಅಳಬೇಕಾಗಿಲ್ಲ. ನಮ್ಮ ದುರದೃಷ್ಟಕ್ಕಾಗಿಯಾದರೂ ಅಳುತ್ತಾ ಕೂರುವುದು ಅವಿವೇಕವೆ. ಈಶ್ವರನ ಲೀಲೆಯಲ್ಲಿ ಇಂತಹ ಘಟನೆ ಮೊತ್ತಮೊದಲನೆಯದಲ್ಲವೆಂದೂ ತೋರುತ್ತದೆ. ಶ್ರೀಕೃಷ್ಣನು ಎಂತಹ ದುರಂತ ಸನ್ನಿವೇಶದಲ್ಲಿ ಮೃತನಾದನೆಂಬುದನ್ನು ಊಹಿಸಿಕೊಳ್ಳಿ. ಶ್ರೀ ರಾಮಚಂದ್ರನಿಗೆ ಕೊನೆ ಬಂದ ಪರಿಯನ್ನು ನೆನೆಯಿರಿ. ಶ್ರೀ ಕ್ರಿಸ್ತನು ಎಂತಹ ದುರ್ಮರಣಕ್ಕೀಡಾದನು ಎಂಬುದನ್ನು ಪರ್ಯಾಲೋಚಿಸಿ. ನಮಗೆ ಅನರ್ಥವಾಗಿ ತೋರುವುದು ಈಶ್ವರನ ಸಮಷ್ಟಿದೃಷ್ಟಿಗೆ ಅರ್ಥಪೂರ್ಣವೂ ಸಾರ್ಥಕವೂ ಆಗಿರಬಾರದೇನು? ಮಹಾತ್ಮಾರೇ ಹೇಳುತ್ತಿದ್ದರು: ‘ನನ್ನನ್ನು ಕೊಲ್ಲುವ ಸಾಮರ್ಥ್ಯ ಈಶ್ವರನೊಬ್ಬನಿಗೇ ಇದೆ’ ಎಂದು. ಕೊಂದವನು ಯಃಕಶ್ಚಿತ ಮನುಷ್ಯನಾದರೂ ಅಲ್ಲಿಯೂ ರುದ್ರನ ಹಸ್ತವನ್ನು ಕಾಣಬಹುದು. ಸರ್ವಮಂಗಲ ನಿಧಿಯಾದ ಭಗವಂತನ ಇಚ್ಛೆಯಲ್ಲಿ ಶ್ರದ್ಧೆಯಿಟ್ಟು ಸಮಾಧಾನ ತಂದುಕೊಂಡು ಮುಂದಿನ ಕಾರ್ಯಕ್ಕೆ ಸೊಂಟ ಕಟ್ಟಿ ನಿಲ್ಲಬೇಕು. ಆತ್ಮದ ಅಮೃತತ್ವದಲ್ಲಿಯೂ ಅವತಾರಗಳಲ್ಲಿಯೂ ಜನ್ಮಾಂತರ ಮತ್ತು ಪುನರ್ಜನ್ಮಗಳಲ್ಲಿಯೂ ಶ್ರದ್ಧಾಲುಗಳಾದ ನಮಗೆ ಪೂಜ್ಯ ಗಾಂಧೀಜಿಯ ದೇಹಾವಸಾನವು ಪುನರುತ್ಥಾನಕ್ಕೆ ಪ್ರಚೋದನವಾಗಬೇಕು. ಸ್ಥಿತಿಪ್ರಜ್ಞರಾದ ಗಾಂಧೀಜಿ ಮೃತರಾದರು ಎಂಬುದು ಲೋಕೋಪಚಾರದ ಮಾತು. ನಿಜವಾದ ನಿಜವಲ್ಲ. ಏಕ ದೇಹಸ್ಥವಾಗಿದ್ದ ಚೇತನ ಈಗ ಸರ್ವತ್ರವಾಗಿದೆ. ಆ ಶಕ್ತಿಗೆ ಅಂತ್ಯವಿಲ್ಲ. ಕಾಲ ಕಳೆದಂತೆಲ್ಲ ಅದು ಬಹುಗುಣಿತವಾಗುತ್ತ ಹೋಗುತ್ತದೆ. ಭಕ್ತಿಸೂತ್ರಗಳು ಹೇಳುವಂತೆ ಅಂತಹ ವಿಭೂತಿಗಳ ಆವಿರ್ಭಾವದಿಂದ ‘ಮೋದಂತೇ ಪಿತರೋ ನೃತ್ಯಂತಿ ದೇವತಾಃ ಸನಾಥಾ ಚೇಯಂ ಭೂರ್ಭವತಿ’: ‘ಪಿತೃಗಳು ನಲಿಯುತ್ತಾರೆ, ದೇವತೆಗಳು ಕುಣಿಯುತ್ತಾರೆ. ನಮ್ಮಿ ಪೃಥ್ವಿ ಸನಾಥಳಾಗುತ್ತಾಳೆ.’ ಗಾಂಧೀಜಿಯನ್ನು ನಮ್ಮಿ ಪೃಥ್ವಿ ಎಂದೆಂದಿಗೂ ಅನಾಥೆಯಲ್ಲ, ನಿತ್ಯ ಸನಾಥೆ! ಆ ಪೂಜ್ಯ ಮಹಾತ್ಮನು ನಮ್ಮನ್ನು ಕ್ಷಮಿಸಲಿ; ಆತನ ಕೃಪೆ ನಮ್ಮನ್ನು ಕೈಬಿಡದೆ ಕಾಯಲಿ; ಆ ದೇವಮಾನವನ ದಿವ್ಯಸ್ಮೃತಿ ಕಂಗೆಟ್ಟಿರುವ ನಮ್ಮ ಜನತೆಯ ಮುನ್ನಡೆಗೆ ಗಗನೋನ್ನತ ದೀಪಸ್ತಂಭವಾಗಲಿ!

ಮಹತ್ಮಾ ಗಾಂಧೀಕಿ ಜಯ್‌!
ಜಯ್ ಹಿಂದ್!

 


[1] ಗಾಂಧೀಜಿಯ ನಿಧನದ ಮರುದಿನ ಸಂಜೆ ಮೈಸೂರು ಆಕಾಶವಾಣಿಯಲ್ಲಿ ಮಾಡಿದ ಪ್ರಸಾರ ಭಾಷಣ (೩೧-೧-೧೯೪೮).