ಪ್ರತಿಮಾ, ಪ್ರತೀಕ, ಸಂಕೇತ, ನಿದರ್ಶನ, ದೃಷ್ಟಾಂತ, ಸಾಮತಿ ಈ ಎಲ್ಲ ವಿಧಾನಗಳೂ ನಾಗರಿಕತೆಯ ಪ್ರತ್ಯುಷೆಯ ಕಾಲದಿಂದಲೂ ಜ್ಞಾನಸಾಧನೆಗೆ ಪ್ರಣಾಳಿಕೆಗಳಾಗಿ ಮಾನವನ ಬುದ್ಧಿಶ್ರೀಯನ್ನೂ ಭಾವಶ್ರೀಯನ್ನೂ ಬೆಳೆಸುತ್ತಾ ಆತ್ಮಶ್ರೀಯನ್ನು ಬೆಳಗುತ್ತಾ ಬಂದಿದೆ, ವೇದಗಳಲ್ಲಿ ಉಪನಿಷತ್ತುಗಳಲ್ಲಿ ಪುರಾಣಗಳಲ್ಲಿ ಕಾವ್ಯಗಳಲ್ಲಿ ನೀತಿಕಥೆಗಳಲ್ಲಿ, ದೇಶವಿದೇಶಗಳ ಪವಿತ್ರಗ್ರಂಥಗಳಲ್ಲಿ, ವಿವಿಧ ಸಾಹಿತ್ಯಕೃತಿಗಳಲ್ಲಿ, ಋಷಿ ಆಚಾರ್ಯ ಅವತಾರಾದಿ ವಿಭೂತಿಪುರುಷರ ಉಪದೇಶಾಮೃತದಲ್ಲಿ. ಈ ವಿಧಾನಗಳ ನೆರವಿನಿಂದ ಅಗ್ರಾಹ್ಯ ಅಥವಾ ದುರ‍್ಗ್ರಾಹ್ಯವಾದ ಅಮೂರ್ತ ತತ್ತ್ವಗಳೂ ಮೂರ್ತವಾಗಿ, ಸಕಲ ಸುಲಭ ಗ್ರಾಹ್ಯವಾಗಿ, ಬಾಳಿನ ಬೇರಿಗೆ ಚಿತ್‌ಸುಧೆಯನ್ನೆರೆದು, ಬದುಕಿಗೆ ಶಕ್ತಿ ಪುಷ್ಟಿ ಜ್ಯೋತಿಗಳನ್ನಿತ್ತು, ಅದನ್ನು ನಿರಂತರವೂ ಉತ್ತಮತರವನ್ನಾಗಿಯೂ ಊರ್ಧ್ವಗಾಮಿಯನ್ನಾಗಿಯೂ ಮಾಡಿವೆ. ಅವು ಅತೀತದ ಅವತರಣಕ್ಕೆ ಸಹಾಯವಾದಂತೆಯೆ ಅವತರಿಸಿದ ಅತೀತವನ್ನು ಪೂರ್ಣವಾಗಿಯಾಗಲಿ ಆಂಶಿಕವಾಗಿಯಾಗಲಿ ಘನಗೈದು, ಲೌಕಿಕ ಸ್ಥೂಲವನ್ನಾಗಿ ಮಾಡಿ, ಪಾರ್ಥಿವ ಪ್ರಜ್ಞೆಯ ಸಾಮಾನ್ಯ ಸಾಮರ್ಥ್ಯಕ್ಕೂ ಯಾವಾಗ ಬೇಕೆಂದರಾಗ ಅತೀತದ ಸ್ಪರ್ಶ ನಿಲುಕುವಂತೆ ಮಾಡಿವೆ.

ಈ ಎಲ್ಲ ವಿಧಾನಗಳು ರೂಪತಃ ಒಂದೆ ವರ್ಗಕ್ಕೆ ಸೇರಿದಂತೆ ತೋರಿದರೂ ಸ್ವರೂಪತಃ ಅವುಗಳಲ್ಲಿ ವ್ಯತ್ಯಾಸವಿರುತ್ತದೆ. ಅವುಗಳಲ್ಲೆಲ್ಲ ಅತ್ಯಂತ ಶ್ರೇಷ್ಠವೂ ಗಹನವೂ ಜೀವಂತವೂ ಮಂತ್ರೋಪಮ ಶಕ್ತಿಪೂರ್ಣವೂ ದೇವತಾಸ್ವರೂಪ ಸದೃಶವೂ ಮತ್ತು ತನ್ನ ಅತ್ಯುತ್ತಮ ಅವಿರ್ಭಾವದಲ್ಲಿ ದೇವತಾಸಮಾನವೂ ಆಗಿರುವ ಪ್ರತಿಮಾವಿಧಾನವು ಪ್ರತಿಭಾಮಾತ್ರ ವಶವಾಗಿ ‘ಬುದ್ಧಿಪೂರ್ವ’ವಾಗಿ ತನಗೆ ತಾನೆ ಮೂಡುವ ಸ್ವಭಾವವುಳ್ಳದ್ದು. ಪ್ರತೀಕವಿಧಾನವಾದರೊ ಭಾವದಿಂದ ಉದ್ಭವವಾದರೂ ‘ಬುದ್ಧಿಪೂರ್ವಕ’ವಾಗಿಯೆ ಹೊಮ್ಮುವಂತಹುದು. ಸಂಕೇತವಿಧಾನವಂತೂ ಸಂಪೂರ್ಣವಾಗಿ ಬುದ್ಧಿಪೂರ್ವಕವಾಗಿಯೆ ಸಿದ್ದವಾಗುತ್ತದೆ. ನಿದರ್ಶನ, ದೃಷ್ಟಾಂತ, ಸಾಮತಿ ಈ ವಿಧಾನಗಳು ಸಾಮಾನ್ಯವಾಗಿ ಆಲೋಚನೆಯ ಭೂಮಿಕೆಯಿಂದಲೆ ಸಿದ್ಧವಾಗತಕ್ಕವಾದರೂ ಸಮಯ ಸಂದರ್ಭಗಳಿಗೆ ಅನುಗುಣವಾಗಿ, ಉಪಯೋಗಿಸುವ ವ್ಯಕ್ತಿಯ ಶಕ್ತಿಗನುಗುಣವಾಗಿ, ವಿಷಯವನ್ನು ಮನಃಸ್ಪಷ್ಟವನ್ನಾಗಿ ಮಾಡುವುದರ ಜೊತೆಗೆ ಭಾವದೀಪ್ತವನ್ನಾಗಿಯೂ ಮಾಡುವ ಸಾಮರ್ಥ್ಯವನ್ನೂ ಪಡೆಯುತ್ತವೆ.

ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಅದ್ಭುತವಾದ ಜೀವನಚರಿತ್ರೆಯನ್ನು ಓದುವವರಿಗೆ ಅವರ ಸಾಧನೆ ಮತ್ತು ಸಿದ್ಧಿಗಳ ಭೂಮಿಕೆಯಲ್ಲಿ ಈ ಪ್ರತಿಮಾವಿಧಾನವು ಹೆಜ್ಜೆಹೆಜ್ಜೆಗೂ ಮಿಂಚಿ ಮೂಡುವ ಮಹತ್ತು ಗೋಚರಿಸುತ್ತದೆ. “ಒಂದು ದಿನ ನಾನು ಧ್ಯಾನಕ್ಕೆ ಕುಳಿತಿದ್ದಾಗ ನನ್ನ ದೇಹದಿಂದಲೆ ತೇಜಸ್ವಿಯಾದ ಸನ್ಯಾಸಿಯೊಬ್ಬನು ತ್ರಿಶೂಲಧಾರಿಯಾಗಿ ಹೊರಗೆ ಬಂದು ಏಕಾಗ್ರತೆಯಿಂದ ಧ್ಯಾನಮಾಡುವಂತೆ ನನಗೆ ಆಜ್ಞೆಮಾಡಿದನು. ಹಾಗೆ ಮಾಡದಿದ್ದರೆ ತ್ರಿಶೂಲದಿಂದ ತಿವಿಯುವೆನೆಂದೂ ಹೆದರಿಸಿದನು. ಅಷ್ಟರಲ್ಲಿ ಕರಿಯ ದೇಹದ ಪಾಪಪುರುಷನು ನನ್ನ ದೇಹದಿಂದಲೆ ಹೊರಕ್ಕೆ ಹಾರಿದನು. ತ್ರಿಶೂಲಧಾರಿಯಾದ ಸನ್ಯಾಸಿ ಅವನನ್ನು ಅಲ್ಲಿಯೆ ತಿವಿದು ಕೊಂದುಬಿಟ್ಟನು.” ಪಾಪಪುಣ್ಯಗಳ ಸ್ವರೂಪ, ಪಾಪವನ್ನು ನಿರಸನಗೊಳಿಸುವ ಪುಣ್ಯದ ಲಕ್ಷಣ, ಪಾಪಪುಣ್ಯಗಳ ಹೋರಾಟ, ಕೊನೆಯದಾಗಿ ಪಾಪದ ವಿನಾಶ ಮತ್ತು ಪುಣ್ಯದ ಜಯ ಇವೆಲ್ಲವೂ ಪರಮಹಂಸರಿಗಾದ ಪ್ರತಿಮಾವಿಧಾನದ ಆ ಅನುಭವದಲ್ಲಿ ಎಷ್ಟು ಜೀವಂತವಾಗಿ ಸಶಕ್ತವಾಗಿ ನಾಟಕೀಯವಾಗಿ ಸತ್ಯವಾಗಿ ಮೂರ್ತಗೊಂಡಿವೆ! ಅವರ ಮಧುರಭಾವದ ಸಾಧನೆ, ವಾತ್ಸಲ್ಯಭಾವ ಸಾಧನೆ, ದಾಸ್ಯಭಾವ ಸಾಧನೆ, ಕ್ರಿಸ್ತ ಪೈಗಂಬರಾದಿ ವಿಭೂತಿ ಪುರುಷರೂ ದೇವದೇವತೆಗಳೂ ಪ್ರತ್ಯಕ್ಷರಾಗಿ ತಮ್ಮೆಲ್ಲಿಯೆ ವಿಲೀನವಾಗುವ ಮೂರ್ತ ಚಿತ್ರಗಳು, ನರೇಂದ್ರನೇ ನರಮಹರ್ಷಿ ಎಂಬುದನ್ನು ಸೂಚಿಸುವಾಗ ತಾವು ಕಂಡುದೆಂದು ವರ್ಣಿಸುವ ಅತ್ಯಂತ ಸುಂದರವೂ ಭವ್ಯವೂ ಆಗಿರುವ ಒಂದು ದರ್ಶನ-ಇಂತಹ ನೂರಾರು ಪ್ರಸಂಗಗಳಲ್ಲಿ ಪ್ರತಿಮಾವಿಧಾನದ ವೈಭವವನ್ನೂ ವೈವಿಧ್ಯವನ್ನೂ ಸಂದರ್ಶಿಸುತ್ತೇವೆ. ಆ ವಿಚಾರವಾಗಿ ಪರಮಹಂಸರು ಕೊಡುತ್ತಿದ್ದ ವಿವರಣೆ ‘ತಾಯಿ ನನಗೆ ತೋರಿಸುತ್ತಾಳೆ’ ಎಂಬುದಾಗಿತ್ತು. ಎಂದರೆ ಅಂತಹ ‘ತೋರುವಿಕೆ’ಗೆ ವ್ಯಕ್ತಿಯ ಬಾಹ್ಯಪ್ರಜ್ಞೆಯಾಗಲಿ ಜಾಗ್ರತ್‌ಸತ್ತೆಯ ಸಾಮಾನ್ಯ ಬುದ್ಧಿಯಾಗಲಿ ವ್ಯಕ್ತಿಪ್ರಯತ್ನವಾಗಲಿ ನೇರವಾದ ಕಾರಣಗಳಾಗುವುದಿಲ್ಲ.

ಪರಮಹಂಸರ ಬದುಕಿನಲ್ಲಿ, ಅವರ ಸಾಧನೆ ಸಿದ್ಧಿ ಸಂವಾದೋಪದೇಶಗಳಲ್ಲಿ ಪ್ರತಿಮಾವಿಧಾನದ ಸ್ಥಾನ ವಿಶೇಷವಾದುದಾದರೂ ಇತರ ವಿಧಾನಗಳ ಸ್ಥಾನ ಕಡಿಮೆಯಾದುದೇನಲ್ಲ. ಮಾಸ್ಟರ್ ಮಹಾಶಯನು ಬರೆದಿಟ್ಟಿರುವ ಅವರ ‘ವಚನಾಮೃತ’ದ ಬೃಹತ್‌ಕೃತಿಯನ್ನು ಓದುವವರು ನಿದರ್ಶನ, ದೃಷ್ಟಾಂತ, ಸಾಮತಿಗಳ ವಿಧಾನವನ್ನೂ ಯಥೇಚ್ಛವಾಗಿ ಎದುರುಗೊಳ್ಳುತ್ತಾರೆ. ಅವರ ಸಂವಾದಗಳಲ್ಲಿ ಕಂಡುಬರುವ ವಿಶೇಷ ವೈಶಿಷ್ಟ್ಯವೆ ಅದು. ಸಾವಿರಾರು ಪುಟಗಳಲ್ಲಿ ಬಹುಶಃ ಯಾವ ಒಂದು ಪುಟವೂ ಆ ವಿಶಿಷ್ಟತೆಯಿಂದ ಚ್ಯುತವಾಗುವುದಿಲ್ಲವೆಂದು ತೋರುತ್ತದೆ. ಆ ವಿಶಿಷ್ಟತೆಯೆ ಅದರ ಸ್ವಾರಸ್ಯವನ್ನು ಕಾಪಾಡಿಕೊಂಡು ಬರುತ್ತದೆ. ಚಿಕ್ಕವರಿಗಾಗಲಿ ದೊಡ್ಡವರಿಗಾಗಲಿ, ಪಾಮರರಿಗಾಗಲಿ ಪಂಡಿತರಿಗಾಗಲಿ, ಅತ್ಯಂತ ಗಹನವಾದ ಜ್ಞಾನ ವಿಷಯವಾಗಲಿ ಅತ್ಯಂತ ತೀವ್ರವಾದ ಭಕ್ತಿಯ ವಿಷಯವಾಗಲಿ, ಎಲ್ಲರಿಗೂ ಯಾವಾಗಲೂ ತಿಳಿಯಾಗಿ ಅರ್ಥವಾಗುವಂತೆ ತೋರಿ ತೃಪ್ತಿಯನ್ನುಂಟುಮಾಡುತ್ತದೆ. ನಿಜ, ಓದುವವರ ಸಂಸ್ಕಾರ ಬೆಳೆದಂತೆಲ್ಲ ಆ ಮಾತುಗಳ ಆ ದೃಷ್ಟಾಮತ ಆ ಸಾಮತಿಗಳ ಅರ್ಥಭಾವ ತತ್ತ್ವಗಳ ವ್ಯಾಪ್ತಿ ಬೆಳೆಯುತ್ತಾ ಹೋಗುತ್ತದೆ. ಕೊನೆಕೊನೆಗೆ ಅವುಗಳ ಮಿತಿಯೇ ಇಲ್ಲದಂತೆಯೂ ತೋರುತ್ತದೆ. ಆದರೆ ಯಾರಿಗೂ ಯಾವ ಸಂದರ್ಭದಲ್ಲಿಯೂ ನಿರಾಶೆಯನ್ನಾಗಲಿ ಭಯವನ್ನಾಗಲಿ ಉಂಟು ಮಾಡುವುದಿಲ್ಲ. ಅಶೋಕವನದಲ್ಲಿ ಸೀತಾದೇವಿಯ ಮುಂದೆ ನಿಂತ ಅಂಗುಷ್ಟ ಮಾತ್ರ ಗಾತ್ರದ ಆಂಜನೇಯನಂತೆ ಅವಶ್ಯಬಿದ್ದಾಗ ವಿರಾಡ್ರೂಪವನ್ನು ತಾಳಬಲ್ಲುವಾದರೂ ಅಣುವನ ಅಣುತ್ವ ವಿನಯವನ್ನು ಉಲ್ಲಂಘಿಸುವುದಿಲ್ಲ.

ನಿದರ್ಶನ ಮತ್ತು ದೃಷ್ಟಾಂತಗಳ ವಿಷಯ ನಮಗಿಲ್ಲಿ ಅಪ್ರಕೃತ. ನಮಗಿಲ್ಲಿ ಸಂಗತವಾದದ್ದು ದೃಷ್ಟಾಂತ ಕಥೆ, ಎಂದರೆ ಸಾಮತಿ. ಸಾಮತಿ ಯಾವಾಗಲೂ ಒಂದು ಕಥಾರೂಪದಲ್ಲಿಯೆ ಇರುತ್ತದೆ. ಅದು ಒಂದು ನೀತಿಯನ್ನಾಗಲಿ ಒಂದು ತತ್ತ್ವವಿಷಯವನ್ನಾಗಲಿ, ಒಂದು ಭಾವವನ್ನಾಗಲಿ ಇಂಗಿತದಿಂದ ಸೂಚಿಸುತ್ತದೆ, ಕಾವ್ಯವು ಧ್ವನಿಕ್ರಮದಿಂದ ತನ್ನ ಕಾರ್ಯಸಾಧನೆ ಮಾಡುವಂತೆ ಅದು ಮೂರ್ತವಾಗಿರುವುದರಿಂದ, ಸ್ಥೂಲವಾಗಿರುವುದರಿಂದ, ವಿಗ್ರಹ ಸದೃಶವಾಗಿರುವುದರಿಂದ ಮನಸ್ಸು ಅದನ್ನು ಸುಲಭವಾಗಿ ಹಿಡಿದು ಬಹುಕಾಲ ಇಟ್ಟುಕೊಳ್ಳಬಲ್ಲುದು; ಇನ್ನೊಬ್ಬನಿಗೆ ಕೊಡಲೂ ಕಷ್ಟವಾಗುವುದಿಲ್ಲ. ಬರಿಯ ತತ್ತ್ವಪ್ರತಿಪಾದನೆಯಿಂದಾಗಬಹುದಾದ, ನಿಷ್ಕೃಷ್ಟತೆಯಿಂದಲೇ ಒಮ್ಮೊಮ್ಮೆ ಒದಗುವ, ಗಣಿತವರ್ತನೆಯಿಂದ ಸಂಭವಿಸಬಹುದಾದ, ಅಪಾಯವಿರುವುದಿಲ್ಲ. ಕಥೆಯ ಸ್ವಾರಸ್ಯ, ತತ್ತ್ವದ ಸೂಕ್ಷ್ಮತೆ, ನೀತಿಯ ಮೈತ್ರಿ, ಭಾವದ ಜೀವಂತತೆ ಇವೆಲ್ಲವನ್ನೂ ಒಳಗೊಂಡಿರುತ್ತದೆ ಸಾಮತಿ.

ಆಲಿಸಿ: ಶಾಸ್ತ್ರಜ್ಞಾನದ ತಪ್ಪುತಿಳಿವಳಿಕೆಯಿಂದ ಆಗುವ ಪ್ರಮಾದವನ್ನು ಹೇಗೆ ಸೂಚಿಸುತ್ತದೆ, ಹೇಗೆ ತಿದ್ದುತ್ತದೆ ಈ ‘ಮಾವಟಿಗಬ್ರಹ್ಮ’ನ ಸಾಮತಿ:

ಗುರು ಶಿಷ್ಯರಿಗೆ ಬೋಧಿಸುತ್ತಾನೆ: ‘ಸರ್ವವೂ ಬ್ರಹ್ಮ, ಪ್ರತಿಯೊಂದು ವಸ್ತುವನ್ನೂ ಬ್ರಹ್ಮವೆಂದು ತಿಳಿದು ನಮಸ್ಕರಿಸಿ. ‘ಉಪದೇಶಾಮೃತವನ್ನು ಸವಿದ ಶಿಷ್ಯರು ಸಮಿತ್ತು ತರಲು ಬಳಿಯ ವನಕ್ಕೆ ಹೋಗುತ್ತಾರೆ. ಹಠಾತ್ತನೆ ‘ದಾರಿ ಬಿಡಿ! ದಾರಿ ಬಿಡಿ!’ ಎಂದು ಎಚ್ಚರಿಕೆಯ ಕೂಗು ಕೇಳಿಸುತ್ತದೆ. ತಲೆಯೆತ್ತಿ ನೋಡುತ್ತಾರೆ: ಮದಿಸಿದ ಆನೆಯೊಂದು ತಮ್ಮೆಡೆಗೆ ಧಾವಿಸುತ್ತಿದೆ! ಮೇಲೆ ಕುಳಿತ ಮಾವಟಿಗ ‘ದಾರಿ ಬಿಡಿ! ಅಪಾಯ! ದಾರಿ ಬಿಡಿ!’ ಎಂದು ಒರಲುತ್ತಿದ್ದಾನೆ. ಶಿಷ್ಯರು ಓಡಿದರು, ಒಬ್ಬನು ವಿನಾ. ಅವನು ದಾರಿ ಬಿಡದೆ ನಿಂತಲ್ಲಿಯೆ ತರ್ಕಿಸಿದ: ‘ಆನೆಯೂ ಬ್ರಹ್ಮ, ನಾನೂ, ಬ್ರಹ್ಮ. ಬ್ರಹ್ಮ ಬ್ರಹ್ಮಕ್ಕೆ ಹೆದರಲೇಕೆ? ಗುರು ಬೋಧಿಸಿದಂತೆ ಸರ್ವವೂ ಬ್ರಹ್ಮ ಎಂದು ನಮಸ್ಕರಿಸಬೇಕು.’ ಮಾವಟಿಗ ಕೂಗಿದ: ‘ದಾರಿ ಬಿಡು, ಸಾಯುತ್ತೀಯೆ!’ ಶಿಷ್ಯ ಕದಲಲಿಲ್ಲ. ಆನೆ ಅವನನ್ನು ಸೊಂಡಿಲಿನಿಂದ ಹಿಡಿದು ದೂರಕ್ಕೆಸೆದು ಮುಂದೆ ನುಗ್ಗಿತು. ಗುರುಗಳಿಗೆ ಸಿದ್ದಿ ಮುಟ್ಟಲು ಅವರು ಶಿಷ್ಯಸಮೇತರಾಗಿ ಅಲ್ಲಿಗೆ ಬಂದು ಮೈಯೆಲ್ಲ ನುಗ್ಗುನುರಿಯಾಗಿ ರಕ್ತಮಯವಾಗಿ ಜ್ಞಾನತಪ್ಪಿ ಬಿದ್ದಿದ್ದ ಶಿಷ್ಯನನ್ನು ಎತ್ತಿಕೊಂಡು ಹೋಗಿ ಶುಶ್ರುಷೆ ಮಾಡಿದರು. ಸ್ವಲ್ಪ ಹೊತ್ತಿನ ಮೇಲೆ ಅವನಿಗೆ ಎಚ್ಚರವಾಯಿತು. ಗುರು ಕೇಳಿದರು: ‘ವತ್ಸ, ಅದೇಕೆ ದಾರಿ ಬಿಡದೆ ಅಪಾಯಕ್ಕೊಳಗಾದೆ? ಮಾವಟಿಗ ಕೂಗಿದ್ದು ಕೇಳಿಸಲಿಲ್ಲವೆ?’ ಶಿಷ್ಯನೆಂದ ‘ಸ್ವಾಮಿ, ಸರ್ವವೂ ಬ್ರಹ್ಮ ಎಂದು ಉಪದೇಶಮಾಡಿದ್ದಿರಿ. ಆನೆಯನ್ನು ಬ್ರಹ್ಮವೆಂದು ಭಾವಿಸಿ ಅಲುಗಾಡದೆ ನಿಂತುಬಿಟ್ಟೆ.’ ಗುರು ವ್ಯಥೆಯಿಂದ ಹೇಳಿದರು: ವತ್ಸ. ಓಡಿಬಂದುದೇನೋ ಗಜಬ್ರಹ್ಮವೇ ದಿಟ. ಆದರೆ ಅದರ ಮೇಲಿದ್ದ ಮಾವಟಿಗಬ್ರಹ್ಮ ದಾರಿ ಬಿಡುವಂತೆ ನಿನಗೆ ಕೂಗಿ ಹೇಳಲಿಲ್ಲವೆ? ಸರ್ವವೂ ಬ್ರಹ್ಮವೆಂಬುದು ಸತ್ಯ. ಆದರೆ ಆನೆ ಬ್ರಹ್ಮವಾದರೆ ಮಾವಟಿಗನೂ ಬ್ರಹ್ಮವಲ್ಲವೇ? ಮಾವಟಿಗಬ್ರಹ್ಮನ ಮಾತನ್ನೇಕೆ ಕೇಳಲಿಲ್ಲ?

ಇದು ಇನ್ನೊಂದು ಸಾಮತಿ. ಆಚರಣೆಯ ದೃಷ್ಟಿಯಿಂದ ಹಿಂಸೆ ಅಹಿಂಸೆಗಳ ತತ್ತ್ವಸೂಕ್ಷ್ಮವನ್ನು ಬೋಧಿಸುತ್ತದೆ ಈ ‘ಸನ್ಯಾಸಿ ಮತ್ತು ಸರ್ಪದೀಕ್ಷೆ’ಯ ಸಾಮತಿ:

ಹುಡುಗರು ದನ ಮೇಯುಸುತ್ತಿದ್ದ ಒಂದು ಹಕ್ಕಲಿನಲ್ಲಿ ಒಂದು ವಿಷಸರ್ಪವಿತ್ತು. ಅದರ ಹೆದರಿಕೆಯಿಂದ ಅಲ್ಲಿ ತಿರುಗಾಡುವವರೆಲ್ಲ ಕೈಯಲ್ಲಿ ಜೀವ ಹಿಡಿದುಕೊಂಡೆ ತಿರುಗಾಡಬೇಕಿತ್ತು. ಒಂದು ದಿನ ಒಬ್ಬ ಸನ್ಯಾಸಿ ಆ ದಾರಿಯಲ್ಲಿ ಹೋಗುತ್ತಿದ್ದ. ದನಕಾಯುವ ಹುಡುಗರು ಅವನೆಡೆಗೆ ಓಡಿ ‘ಸ್ವಾಮಿ, ಅಲ್ಲಿ ಹೋಗಬೇಡಿ. ಅಲ್ಲೊಂದು ಘಟಸರ್ಪ ಇದೆ’ ಎಂದರು. ಅವನು ಮುಗುಳುನಗುತ್ತಾ ‘ಚಿಂತೆಯಿಲ್ಲ, ಮಕ್ಕಳಿರಾ, ನನಗೆ ಮಂತ್ರಬಲವಿದೆ’ ಎಂದು ಮುಂದುವರಿದು ಹೋದ. ಹುಡುಗರಾರೂ ಹೆದರಿಕೆಯಿಂದ ಅವನ ಜೊತೆ ಹೋಗಲಿಲ್ಲ. ಅಷ್ಟರಲ್ಲಿ ಆ ಹಾವು ಹೆಡೆಯೆತ್ತಿ ಸನ್ಯಾಸಿಯ ಕಡೆ ನುಗ್ಗಿ ಬಂತು. ಹತ್ತಿರ ಬಂದೊಡನೆ ಸನ್ಯಾಸಿ ಹಾಕಿದ ಮಂತ್ರಕ್ಕೆ ಅಧೀನವಾಗಿ ಸೋತು ಅವನ ಪಾದಕ್ಕೆರಗಿತು. ಸನ್ಯಾಸಿ ಆಶೀರ್ವದಿಸಿ ಹೇಳಿದ: ‘ನೀನು ಸುಮ್ಮನೆ ಏಕೆ ಎಲ್ಲರಿಗೂ ಹಿಂಸೆ ಕೊಡುತ್ತಿದ್ದೀಯೆ? ನಿನಗೆ ಮಂತ್ರೋಪದೇಶ ಕೊಡುತ್ತೇನೆ. ಅದನ್ನು ಜಪಿಸುತ್ತಿದ್ದರು. ನಿನ್ನಲ್ಲಿ ಭಗವದ್ ಭಕ್ತಿ ಉಂಟಾಗುತ್ತದೆ. ಕೊನೆಯಲ್ಲಿ ನಿನಗೆ ಅವನ ಸಾಕ್ಷಾತ್ಕಾರವೂ ಆಗಿ ನಿನ್ನ ಹಿಂಸಾಗುಣ ಸಂಪೂರ್ಣವಾಗಿ ಬಿಟ್ಟು ಹೋಗುತ್ತದೆ.’ ಹೀಗೆಂದು ಅದಕ್ಕೆ ಮಂತ್ರೋಪದೇಶ ಮಾಡಿದನು. ಹಾವು ಗುರುವಿಗೆ ತಲೆಬಾಗಿ ‘ಸಾಧನೆಯ ಕ್ರಮವನ್ನು ಬೋಧಿಸುವ ಕೃಪೆ ಮಾಡಬೇಕು ಎಂದಿತು. ‘ಮಂತ್ರಜಪ ಮಾಡುತ್ತಿರು; ಯಾರಿಗೂ ಹಿಂಸೆ ಕೊಡಬೇಡ! ನಾನು ಮತ್ತೊಮ್ಮೆ ನಿನ್ನನ್ನು ಬಂದು ನೋಡುತ್ತೇನೆ’ ಎಂದು ಹೇಳಿ ಸನ್ಯಾಸಿ ಹೊರಟುಹೋದನು.

ಹಾವು ಅಹಿಂಸಾವ್ರತವನ್ನು ಕೈಗೊಂಡಮೇಲೆ ಯಾರನ್ನೂ ಕಚ್ಚುತ್ತಿರಲಿಲ್ಲ; ಅಟ್ಟುತ್ತಲೂ ಇರಲಿಲ್ಲ. ಇದನ್ನು ಗಮನಿಸಿದ ದನಕಾಯುವ ಹುಡುಗರು ಮೊದಮೊದಲು ಅದರ ಕಡೆಗೆ ದೂರದಿಂದ ಕಲ್ಲೆಸೆದರು. ಅದು ಏನೂಮಾಡದೆ ಒಂದು ಎರೆ ಹುಳುವಿಗಿಂತ ಸಾಧುಪ್ರಾಣಿಯಾಗಿದ್ದುದನ್ನು ಕಂಡು ಹತ್ತಿರಕ್ಕೂ ಹೋದರು. ಕೊನೆಗೆ ಅದರ ಬಾಲವನ್ನು ಹಿಡಿದು ಗಿರನೆ ತಿರುಗಿಸಿ ನೆಲ್ಕಕೆ ಮತ್ತೆಮತ್ತೆ ಅಪ್ಪಳಿಸಿಯೂ ಬಿಟ್ಟರು. ಹಾವು ರಕ್ತ ಕಾರಿಕೊಂಡು ನಿಶ್ಚೇಷ್ಟಿತವಾಗಿ ಬಿದ್ದಿತು. ಸತ್ತುಹೋಯಿತೆಂದು ನಿಶ್ಚಯಮಾಡಿಕೊಂಡು ಹುಡುಗರು ಹೊರಟುಹೋದರು.

ರಾತ್ರಿ ಬಹಳ ಹೊತ್ತಾದ ಮೇಲೆ ತಂಗಾಳಿ ಬೀಸಿ ಅದಕ್ಕೆ ಪ್ರಜ್ಞೆ ಮರಳಿತು. ಮೈಯೆಲುಬೆಲ್ಲ ನುಗ್ಗಾಗಿತ್ತು. ಹೇಗೋ ಕಷ್ಟದಿಂದ ಹೊರಳಿಕೊಂಡು ಹೋಗಿ ತನ್ನ ಹುತ್ತ ಹೊಕ್ಕಿತು. ಆಘಾತದ ಪರಿಣಾಮವಾಗಿ ಅದು ಬರಿಯ ಚರ್ಮ ಹೊದೆದ ಎಲುಬುಗೂಡಾಯಿತು. ರಾತ್ರಿಕಾಲದಲ್ಲಿ ಮಾತ್ರ ಹೊರಗೆ ಬಂದು ಸೊಪ್ಪುಸದೆ ಹಣ್ಣುಹಂಪಲು ತಿಂದು ಜೀವಿಸುತ್ತಿತ್ತು.

ಒಂದು ವರ್ಷದ ಮೇಲೆ ಸನ್ಯಾಸಿ ಮತ್ತೆ ಆ ದಾರಿಯಲ್ಲಿ ಬರುತ್ತಾ ಹಾವು ಏನಾಯಿತೆಂದು ದನಗಾಹಿಗಳನ್ನು ಕೇಳಿದನು. ‘ಅದು ಎಂದೋ ಸತ್ತು ಹೋಯಿತು’ ಎಂದರು. ತಾನು ಕೊಟ್ಟ ದೀಕ್ಷೆ ಸಫಲವಾಗಿ ಮಂತ್ರ ಸಿದ್ಧಿಯಾಗುವವರೆಗೂ ಹಾವಿಗೆ ಸಾವಿಲ್ಲವೆಂದು ಅವನಿಗೆ ಗೊತ್ತು. ಹಕ್ಕಲಿನಲ್ಲಿ ಹಾವಿರುತ್ತಿದ್ದ ಜಾಗಕ್ಕೆ ಹೋಗಿ ಕೂಗಿ ಕರೆದನು. ಗುರುವಾಣಿಯನ್ನು ಆಲಿಸಿ ಹಾವು ಹೊರಗೆಬಂದು ಪಾದಕ್ಕೆ ಭಕ್ತಿಯಿಂದ ನಮಸ್ಕರಿಸಿತು. ಗುರು ‘ಕ್ಷೇಮವಾಗಿದ್ದೀಯಾ?’ ಎಂದು ಕೇಳಿದನು. ‘ಕ್ಷೇಮವಾಗಿದ್ದೇನೆ’ ಎಂದಿತು ಹಾವು. ‘ಯಾಕೆ ಬಹಳ ಬಡವಾಗಿದ್ದೀಯಲ್ಲಾ?’ ‘ಯಾರಿಗೂ ಹಿಂಸೆ ಕೊಡಬಾರದೆಂದು ಅಪ್ಪಣೆಕೊಡಿಸಿದ್ದಿರಿ. ಆದ್ದರಿಂದ ಸೊಪ್ಪುಸದೆ ತರಗೆಲೆ ತಿನ್ನುತ್ತಾ ಜೀವಿಸುತ್ತಿದ್ದೇನೆ. ಆ ಕಾರಣದಿಂದ ಕೊಂಚ ತೆಳ್ಳಗಾಗಿರಬಹುದು.’

ಹಾವಿಗೆ ಆಗಲೆ ಸತ್ತ್ವಗುಣ ವೃದ್ಧಿಯಾಗಿದ್ದುದರಿಂದ ಅದು ಯಾರ ಮೇಲೆಯೂ ಕೋಪಗೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಹುಡುಗರು ಮಾಡಿದ್ದೆಲ್ಲ ಮರೆತೇ ಹೋಗಿತ್ತು.

ಸನ್ಯಾಸಿ ಕೇಳುತ್ತಾನೆ: ‘ಬರಿಯ ಆಹಾರ ಬದಲಾವಣೆಯಿಂದಲೆ ಹೀಗೆ ಎಲುಬು ಚಕ್ಕಳ ಆಗಲು ಸಾಧ್ಯವಿಲ್ಲ. ಇನ್ನೇನೋ ನಡೆದಿರಬೇಕು. ನೆನಪು ತಂದುಕೋ.’

ಹಾವಿಗೆ ನೆನಪಾಗಿ ಹೇಳಿತು ‘ಹೌದು ಸ್ವಾಮಿ, ಮರೆತಿದ್ದೆ. ದನಕಾಯುವ ಹುಡುಗರು ಒಂದು ದಿನ ನನ್ನನ್ನು ಬಾಲಹಿಡಿದು ನೆಲಕ್ಕೆ ಅಪ್ಪಳಿಸಿಬಿಟ್ಟರು. ಪಾಪ, ಆ ಮಕ್ಕಳಿಗೆ ಏನುಗೊತ್ತು? ನನ್ನಲ್ಲಾದ ಪರಿವರ್ತನೆ ಅವರಿಗೆ ಹೇಗೆ ಗೊತ್ತಾಗಬೇಕು?’

ಸನ್ಯಾಸಿ ಹೇಳಿದ” ‘ಅಯ್ಯೊ ಪೆಚ್ಚೆ, ನಿನಗೇನು ಹಿಡಿಯಿತು ಈ ಬೆಪ್ಪು? ಮೂರ್ಖ, ನಿನ್ನನ್ನು ನೀನು ರಕ್ಷಿಸಿಕೊಳ್ಳುವುದಕ್ಕೆ ಗೊತ್ತಾಗಲಿಲ್ಲವೆ? ಕಚ್ಚಿ ಕೊಲ್ಲಬೇಡ ಎಂದರೆ ಬುಸ್ಸೆಂದು ಹೆದರಿಸಬೇಡ ಎಂದೆನೆ? ಹೆಡೆಯೆತ್ತಿ ಬುಸ್‌ಎಂದಿದ್ದರೆ ಹುಡುಗರು ನಿನ್ನ ಗೋಜಿಗೇ ಬರುತ್ತಿರಲಿಲ್ಲ.’

ಸತ್ತ್ವರಜಸ್ಸು ತಮಸ್ಸುಗಳ ಸ್ವರೂಪವನ್ನು ಯಾವ ವ್ಯಾಖ್ಯಾನವೂ ವಿವರಿಸಲಾರದಷ್ಟು ಸರ್ವಸುಲಭಗ್ರಾಹ್ಯವಾಗುವ ರೀತಿಯಲ್ಲಿ ವಿವರಿಸುವ ಇನ್ನೊಂದು ಸೊಗಸಾದ ಸಾಮತಿ ಈ ‘ಮೂವರು ಕಳ್ಳರು ಮತ್ತು ಶ್ರೀಮಂತ’ನ ಕಥೆ:

ಒಬ್ಬ ಶ್ರೀಮಂತ ಕಾಡಿನಲ್ಲಿ ಪ್ರಯಾಣಮಾಡುತ್ತಿದ್ದಾಗ ಮೂವರು ಕಳ್ಳರು ಮೇಲೆಬಿದ್ದು ಅವನ ಐಶ್ವರ್ಯವನ್ನೆಲ್ಲ ಸುಲಿದುಕೊಂಡರು. ಸುಲಿಗೆಯಾದ ಮೇಲೆ ಒಬ್ಬ ಕಳ್ಳ ಇವನನ್ನು ಜೀವಸಹಿತ ಬಿಡುವುದು ಒಳೆಯದಲ್ಲ. ಕೊಂದು ಹಾಕಿಬಿಡೋಣ ಎಂದು ಕತ್ತಿ ಎತ್ತಿ ಇನ್ನೇನು ಕತ್ತರಿಸಬೇಕು, ಅಷ್ಟರಲ್ಲಿ ಎರಡನೆಯ ಕಳ್ಳ ಅವನನ್ನು ತಡೆದು ‘ಕೊಂದುಹಾಕುವುದರಿಂದ ಏನು ಪ್ರಯೋಜನ? ಬಾಯಿಗೆ ಬಟ್ಟೆತುರುಕಿ, ಕೈಕಾಲು ಕಟ್ಟಿಹಾಕಿ ಹೋದರಾಯಿತು. ಆಮೇಲೆ ಪೋಲೀಸಿಗೆ ಹೇಗೆ ದೂರುಕೊಡುತ್ತಾನೆ?’ ಎಂದನು. ಮೂವರೂ ಸೇರಿ ಅವನನ್ನು ಕಟ್ಟಿಹಾಕಿ ಹೊರಟುಹೋದರು.

ಸ್ವಲ್ಪ ಕಾಲದ ಮೇಲೆ ಮೂರನೆಯ ಕಳ್ಳ ತಾನೊಬ್ಬನೆ ಶ್ರೀಮಂತನ ಬಳಿಗೆ ಬಂದು ‘ಪಾಪ, ನಿಮಗೆ ಬಹಳ ನೋವಾಯಿತು! ಹೆದರಬೇಡಿ. ನಾನು ಕಟ್ಟನ್ನೆಲ್ಲ ಬಿಚ್ಚಿ ನಿಮ್ಮನ್ನು ಬಿಡಿಸುತ್ತೇನೆ’ ಎಂದು ಹೇಳಿ ಶ್ರೀಮಂತನ ಬಂಧನಗಳನ್ನೆಲ್ಲ ಕಳಚಿ, ಅವನನ್ನು ಕಾಡಿನಿಂದ ಹೊರಗೆ ಹೆದ್ದಾರಿಗೆ ಕರೆದುಕೊಂಡು ಬಂದ. ಹೆದ್ದಾರಿ ಕಾಣಿಸುತ್ತಲೆ ಆ ಮೂರನೆಯ ಕಳ್ಳ ನಿಂತುಬಿಟ್ಟು ಹೇಳಿದ ‘ಈ ದಾರಿ ಹಿಡಿದು ಹೋದರೆ ನಿಮ್ಮ ಮನೆ ಸುಲಭವಾಗಿ ಸಿಗುತ್ತದೆ. ನೀವಿನ್ನು ಹೋಗಬಹುದು.’ ತನಗೆ ಅಷ್ಟೊಂದು ಉಪಕಾರಮಾಡಿದ ಕಳ್ಳನಿಗೆ ಕೃತಜ್ಞತೆ ತೋರಬೇಕೆಂಬ ಮನಸ್ಸಿನಿಂದ ಆ ಶ್ರೀಮಂತ ‘ನೀನೂ ನಮ್ಮ ಮನೆಗೆ ಬರಬೇಕು. ಎಷ್ಟು ಉಪಕಾರ ಮಾಡಿದ್ದೀಯ! ನಮ್ಮ ಸತ್ಕಾರ ಸ್ವೀಕರಿಸಿದರೆ ನಮಗೆಲ್ಲ ಸಂತೋಷವಾಗುತ್ತದೆ’ ಎಂದು ಕೇಳಿಕೊಂಡ. ‘ಇಲ್ಲ ಇಲ್ಲ, ಅದಾಗುವುದಿಲ್ಲ. ನಾನು ಅಲ್ಲಿಗೆ ಬರಲಾರೆ. ಬಂದರೆ ಪೋಲೀಸರು ಹಿಡಿಯುತ್ತಾರೆ!’ ಎಂದು ದಾರಿತೋರಿಸಿ ಹಿಂದಕ್ಕೆ ಹೊರಟೇಬಿಟ್ಟ.

ಈ ಕಥೆ ಹೇಳಿ ಪರಮಹಂಸರು ಹೀಗೆಂದಿದ್ದಾರೆ: ‘ಇವನನ್ನು ಕೊಂದು ಬಿಡೋಣ’ ಎಂದ ಮೊದಲನೆ ಕಳ್ಳನೆ ತಮಸ್ಸು. ನಾಶಮಾಡುವುದೆ ತಮಸ್ಸಿನ ಲಕ್ಷಣ. ಎರಡನೆಯ ಕಳ್ಳನೆ ರಜಸ್ಸು. ಜೀವವನ್ನು ಪಾಶಗಳಲ್ಲಿ ಬಂಧಿಸಿ ನೂರಾರು ಕರ್ಮಗಳಲ್ಲಿ ಅದನ್ನು ಸುತ್ತಿಸುವುದೆ ಅದರ ಲಕ್ಷಣ. ರಜಸ್ಸು ನಮ್ಮ ಕೆಲಸಗಳನ್ನೆ ಪ್ರಧಾನವಾಗಿ ಮಾಡಿ ದೇವರನ್ನು ಮರೆಯುವಂತೆ ಮಾಡುತ್ತದೆ. ಸತ್ತ್ವವೊಂದೇ ದೇವರೆಡೆಗೆ ದಾರಿ ತೋರಿಸಿ ಜೀವವನ್ನು ಕರೆದೊಯ್ಯುತ್ತದೆ. ಅದರೆ ಅದೂ ದೇವರಲ್ಲಿಗೇ ಬರಲಾರದು, ಮೂರನೆಯ ಕಳ್ಳನಂತೆ ದಯೆ, ಧರ್ಮ, ಭಕ್ತಿ ಇವುಗಳೆ ಅದರ ಲಕ್ಷಣ. ಅಲ್ಲದೆ ಸತ್ತ್ವವೆ ಏಣಿಯ ಕೊನೆಯ ಮೆಟ್ಟಿಲು. ಅದನ್ನು ದಾಟಿದರೆ ಮಹಡಿ. ಪರಬ್ರಹ್ಮವೆ ಜೀವದ ನಿಜಮನೆ. ತಮಸ್ಸು ರಜಸ್ಸು ಸತ್ತ್ವ ಈ ಮೂರು ಗುಣಗಳಿಂದಲೂ ಪಾರಾಗಿ ತ್ರಿಗುಣಾತೀತವಾಗದಿದ್ದರೆ ಬ್ರಹ್ಮಜ್ಞಾನ ಲಭಿಸುವುದಿಲ್ಲ.

‘ಮಾವಟಿಗಬ್ರಹ್ಮ’ ‘ಸನ್ಯಾಸಿ-ಸರ್ಪದೀಕ್ಷೆ’ ‘ಶ್ರೀಮಂತ-ಮೂವರು ಕಳ್ಳರು’ ‘ಹೋಮಾಪಕ್ಷಿ’ ‘ನವಿಲು-ಅಫೀಮಿನ ರುಚಿ’ ‘ತಂದೆ-ಇಬ್ಬರು ಮಕ್ಕಳು’ ‘ಇರುವೆ-ಸಕ್ಕರೆ ಬೆಟ್ಟ’ ‘ಉಪ್ಪಿನ ಬೊಂಬೆ’ ‘ಗೋಸುಂಬೆ’ ‘ಆನೆ-ಕುರುಡರು’ ‘ಹುಲಿ-ಮೂವರು ಮಿತ್ರರು’ ‘ಹುಲ್ಲುಮೇಯುವ ಹುಲಿ’ ‘ಸಾಧುವೇಷದ ಬೆಸ್ತ’ ‘ಕಾರ್ತಿಕ-ಗಣೇಶ’ ‘ಈಜುಬಾರದ ಪಂಡಿತ’ ‘ಬೆಸ್ತರವಳು-ಮೀನುಬುಟ್ಟಿ’ ‘ಸನ್ಯಾಸಿ-ಕೌಪೀನ’ ‘ಅಕ್ಬರ-ಫಕೀರ’ ‘ರಾಮಚಂದ್ರ-ಕಪ್ಪೆ’ ‘ವ್ಯಾಸ-ಗೋಪಿಯರು’ ಹೀಗೆ ಒಂದಲ್ಲ ಎರಡಲ್ಲ ನೂರಾರು ಸಾಮತಿಗಳಿಂದ ಪರಮಹಂಸರ ವಚನಾಮೃತವು ಮನೋಜ್ಞವಾಗಿದೆ. ವೇದವೇದಾಂತಶಾಸ್ತ್ರಪುರಾಣಗಳ ಬೋಧನೆಯ ಸಾರಸರ್ವವೆಲ್ಲ ಆ ಸಾಮತಿಗಳಲ್ಲಿ ಅಡಕವಾಗಿದೆ. ಅಮೃತ ಸಾಕ್ಷಾತ್ಕಾರಕ್ಕೆ ಭಗವತ್ ಕೃಪೆಯ ಕೆಚ್ಚಲಿನಂತೆ ಮಾತೃವಕ್ಷ ಸದೃಶವಾಗಿ ಸಕರುಣವಾಗಿ ಮೃದು ಕೋಮಲವಾಗಿ ಅವು ಮುಮುಕ್ಪು ಜೀವರಿಗೆ ಮೋಕ್ಷದ ವರದಹಸ್ತವಾಗಿವೆ.