ಇಂದು ಸಾಮಾನ್ಯ ಭಾರತೀಯನು ತನ್ನ ಪುಣ್ಯಭೂಮಿಯ ಇತಿಹಾಸದ ಯಾವ ಕಾಲಭಾಗವನ್ನು ಅವನತಿಯ ಕಾಲವೆಂದೂ ಪತನದ ಕಾಲವೆಂದೂ  ದಾಸ್ಯದ ಕಾಲವೆಂದೂ ಇಳಿಗಾಲವೆಂದೂ ಭಾವಿಸಿ ಹಾಗೆ ಕರೆಯುತ್ತಾನೆಯೊ ಆ ಕಾಲಮಾನವೆ ಒಳಹೊಕ್ಕು ಕಾಣಬಲ್ಲ ವಿಚಾರಮತಿಗೆ ಎಂತಹ ಶ್ರೀಮಂತತೆಯಿಂದ ರಂಜಿಸುತ್ತದೆ ಎಂದರೆ ಸಾಮಾನ್ಯದ ದೃಷ್ಟಿಗೂ ವಿಚಾರಮತಿಯ ದೃಷ್ಟಿಗೂ ರಾಜಿಗೆ ಅವಕಾಶವಿಲ್ಲವೆಂದೆ ಹೇಳಬೇಕಾಗುತ್ತದೆ. ಹಾಗೆ ರಾಜಿಗೆ ಅವಕಾಶವಿಲ್ಲದಿರುವುದಕ್ಕೆ ಕಾರಣ, ಆ ಎರಡು ದೃಷ್ಟಿಗೂ ಬೇರೆಬೇರೆ ಭೂಮಿಕೆಗಳ ಮೇಲೆ ನಿಂತು, ಭಿನ್ನ ಭಿನ್ನ ಪುರುಷಾರ್ಥಗಳನ್ನು ತಮ್ಮ ತಮ್ಮ ಮುಖ್ಯ ಲಕ್ಷ್ಯವಾಗಿಟ್ಟುಕೊಂಡಿರುವುದೆ. ರಾಜಕೀಯವೂ ಆರ್ಥಿಕವೂ ಆದ ಲೌಕಿಕ ದೃಷ್ಟಿಯಿಂದ ನೋಡಿದರೆ ಸಾಮಾನ್ಯನ ದೃಷ್ಟಿಗೆ ಸತ್ಯದ  ಹೆಸರು ಸಲ್ಲುತ್ತದೆ. ಧಾರ್ಮಿಕವೂ ಆಧ್ಯಾತ್ಮಿಕವೂ ಆಗಿರುವ ಲೋಕೋತ್ತರ ದೃಷ್ಟಿಯಿಂದ ಸಮೀಕ್ಷಿಸಿದರೆ ವಿಚಾರಮತಿಯ ಇತ್ಯರ್ಥದಲ್ಲಿಯೆ ಸತ್ಯಕ್ಕೆ ಪಟ್ಟಾಭಿಷೇಕವಾಗುವಂತೆ ಅರ್ಥವಾಗುತ್ತದೆ.

ಸಾಮಾನ್ಯವಾಗಿ ಇತಿಹಾಸಕಾರನ ದೃಷ್ಟಿ ಲೋಕಧರ್ಮಿಯಾದದ್ದು. ನಮ್ಮಲ್ಲಿ ಪ್ರಚುರವಾಗಿರುವ ಇತಿಹಾಸ ರಚನಾವಿಧಾನವು ಪಾಶ್ಚಾತ್ಯರಿಂದ ಆಮದಾಗಿ ಬಂದದ್ದು ಎಂಬುದನ್ನು ಗಮನಿಸಿದರೆ ನಮ್ಮವರ ಚರಿತ್ರದೃಷ್ಟಿಯೂ ಲೌಕಿಕವಾದುದರಲ್ಲಿ ಆಶ್ಚರ್ಯವೇನೂ ಕಾಣುವುದಿಲ್ಲ. ಆದರೆ ವಿಶ್ವಸರ್ವ ಗ್ರಾಸಿಯೂ ವಿಶ್ವರೂಪದರ್ಶಿಯೂ ಆಗಿರುವ ಪುರ್ಣದೃಷ್ಟಿಗೆ ಚರಿತ್ರಕಾರನ ಅಂಶದೃಷ್ಟಿ, ಆತನ ಮನೋಧರ್ಮಕ್ಕೂ ಆತನು ಕೈಗೊಂಡಿರುವ ಕಥಾರೀತಿಯ ಕರ್ಮಕ್ಕೂ ಅನಿವಾರ್ಯವಾದುದಾದರೂ, ಸಮರ್ಪಕವಾಗಿ ತೋರುವುದಿಲ್ಲ. ವಿಶ್ಲೇಷಣಾತ್ಮಕವಾದ ಆಧುನಿಕ ಶಾಸ್ತ್ರದೃಷ್ಟಿ ತನ್ನ ಪರಿಶೀಲನೆಗೆ ಒಳಗಾಗುವ ವಿಷಯವಲಯವನ್ನು ಇತರ ವಿಷಯವಲಯಗಳಿಂದ ಪ್ರತ್ಯೇಕಿಸಿ, ತನ್ನ ಜಿಜ್ಞಾಸೆಗೆ ಪ್ರಕೃತವಾದ ವಿಷಯವನ್ನು ಅದೇ ಸರ್ವಸ್ವವೆಂಬಂತೆ ಪರಿಗಣಿಸುವುದು ಪದ್ಧತಿಯಾಗಿದೆ. ಈ ಪದ್ಧತಿ ಆಯಾ ವಿಷಯದ ಕೂಲಂಕುಷವಾದ ಹೃದಯ ಪರಿಚಯಕ್ಕೆ ಬೇಕಾದ ಏಕಾಗ್ರತೆಯನ್ನೂ ಏಕಮುಖತೆಯನ್ನೂ ದಯಪಾಲಿಸುವುದು ನಿಜವಾದರೂ ಏಕಾಗ್ರತೆಯಿಂದ ಲಭಿಸುವ ಪ್ರಯೋಜನವನ್ನು ಏಕಮುಖತೆ ಅಸತ್ಯ ಅಥವ ಅರ್ಧಸತ್ಯ ಕಲುಷಿತವನ್ನಾಗಿ ಮಾಡುತ್ತದೆಂದು ಒಪ್ಪಿಕೊಳ್ಳಬೇಕಾಗುತ್ತದೆ. ಆಧುನಿಕ ಇತಿಹಾಸ ಪದ್ಧತಿಗೂ ಈ ಟೀಕೆ ಬಹುಮಟ್ಟಿಗೆ ಸಲ್ಲುತ್ತದೆ.

ಚರಿತ್ರೆಯ ಗಮನವನ್ನೆಲ್ಲ ವಿಶೇಷವಾಗಿ ವ್ಯಾಪಿಸಿರುವುದು ರಾಜಕೀಯ. ರಾಜರು, ರಾಜ್ಯಗಳು, ಯುದ್ಧಗಳು, ಕೌಲುಗಳು, ಪಟ್ಟಾಭಿಷೇಕ, ಸಿಂಹಾಸನ-ಚ್ಯುತಿ ಇತ್ಯಾದಿ. ಅದಕ್ಕೆ ಸಹಾಯಕವಾಗಿ ಸಾಮಾಜಿಕ ಮತ್ತು ಆರ್ಥಿಕ ವ್ಯಾಪಾರಗಳನ್ನು ಉಪಯೋಗಿಸಲಾಗುತ್ತದೆ. ಒಮ್ಮೊಮ್ಮೆ ಧಾರ್ಮಿಕದ ಅಂಶಗಳಲ್ಲಿ ಒಂದಾದ ಮತಗಳನ್ನೂ ಮತಾಂದೋಲನಗಳನ್ನೂ ಅವುಗಳಲ್ಲಿರಬಹುದಾದ ಐತಿಹಾಸಿಕಾಂಶಗಳಿಗಾಗಿ ಪರಿಭಾವಿಸುತ್ತದೆ. ನಾಗರಿಕತೆ ಮತ್ತು ಸಂಸ್ಕೃತಿಗಳ ಕಡೆಗೂ ಆಗಾಗ್ಗೆ ಅದರ ಕೃಪಾವಲೋಕನ ಬೀಳುತ್ತದೆ. ಆದರೆ ಪರಮಪುರುಷಾರ್ಥ ಲಕ್ಷಣವಾದ ಆಧ್ಯಾತ್ಮಿಕ ಜ್ಯೋತಿ ಅದಕ್ಕೆ ಅಲಕ್ಷಿತ. ಏಕೆಂದರೆ ಆಧ್ಯಾತ್ಮಿಕ ವ್ಯಾಪಾರ “ಐತಿಹಾಸಿಕ ಘಟನೆ”ಯಾಗುವಷ್ಟು ಸ್ಥೂಲವಾಗಿರುವುದಿಲ್ಲ. ಮುಷ್ಟಿಗ್ರಾಹ್ಯವಾಗಿರುವುದಿಲ್ಲ. ಅದು ಕಾಲದೇಶಗಳ ಚೌಕಟ್ಟಿನಲ್ಲಿ ಸಂಭವಿಸಿದರೂ ಸ್ವರೂಪತಃ ಕಾಲದೇಶಗಳಿಗೆ ಅತೀತವಾದದ್ದು. ಕಾಲದೇಶ ವ್ಯಾಪಾರಗಳಲ್ಲಿ ವ್ಯವಹರಿಸುವ ಇತಿಹಾಸ ಅವುಗಳಿಗೆ ಅತೀತವಾಗಿರುವುದನ್ನೇ ಮುಖ್ಯ ಲಕ್ಷಣವಾಗುಳ್ಳ ಆಧ್ಯಾತ್ಮಿಕವನ್ನು ಅಲಕ್ಷಿಸಿದರೆ ಅದು ನೈಸರ್ಗಿಕವೆಂದೆ ಭಾವಿಸಬೇಕಾಗುತ್ತದೆ.

ಹಾಗೆ ಭಾವಿಸಿ ಇತಿಹಾಸಕಾರನಿಗೆ ಗೌರವ ತೋರಿಸಲು ನಾವು ಪ್ರಯತ್ನಿಸಿದರೂ ಅವನ ಅಂಶದೃಷ್ಟಿಯ ‘ಚರಿತ್ರೆ’ ಪೂರ್ಣದೃಷ್ಟಿಗೆ ಎಂದೂ ಸರ್ವಮಾನ್ಯವಾಗಲಾರದು. ಏಕೆಂದರೆ ಪೂರ್ಣದೃಷ್ಟಿ ಸೃಷ್ಟಿಸಮಸ್ತದ ತಾತ್ಪರ್ಯವನ್ನು ತನ್ನ ಚಿರಭಿತ್ತಿಯನ್ನಾಗಿಟ್ಟುಕೊಂಡು ಲೋಕವ್ಯಾಪಾರಗಳ ಅರ್ಥವನ್ನು, ಎಂದರೆ ಕಾರಣ ಉದ್ದೇಶ ಮತ್ತು ಪ್ರಯೋಜನಾತ್ಮಕವಾದ ಅವುಗಳ ವಿಕಾಸ ಕ್ರಮವನ್ನು, ಗ್ರಹಿಸಲು ಧ್ಯಾನಿಯಾಗುತ್ತದೆ. ಆದ್ದರಿಂದ ಪೂರ್ಣದೃಷ್ಟಿ ಪ್ರಪಂಚದ ರಾಜಕೀಯ ಸಾಮಾಜಿಕ ಆರ್ಥಿಕ ಮತ್ತು ಧಾರ್ಮಿಕವಾದ ವ್ಯಾಪಾರಗಳನ್ನೂ ಆಂದೋಲನಗಳನ್ನು ಸೃಷ್ಟಿಯ ಪರಮ ತಾತ್ಪರ್ಯದ ವ್ಯಾಖ್ಯಾನ ವೇದಿಕೆಯ ಮೇಲೆ ನಿಲ್ಲಿಸಿ ಅವುಗಳ ಸಾಕ್ಷ್ಯವನ್ನು ಸಂಗ್ರಹಿಸುತ್ತದೆ. ರಾಜಕೀಯದ ವಿಚಾರಣೆಯನ್ನು ರಾಜಕೀಯವೆ ನಡೆಸಲು ಅದು ಒಪ್ಪುವುದಿಲ್ಲ. ಆರ್ಥಿಕ ಮಾತ್ರ ದೃಷ್ಟಿಯ ಅರ್ಥಶಾಸ್ತ್ರಕ್ಕೆ ಆರ್ಥಿಕಾಂದೋಲನಗಳ ಅರ್ಥ ನಿರ್ಣಯ ಮಾಡಲು ಬಿಡುವುದಿಲ್ಲ. ಎಲ್ಲ ವ್ಯಾಪಾರಗಳನ್ನೂ ಪರಮ ತಾತ್ಪರ್ಯವೆ ಇಚ್ಛಿಸುತ್ತದೆ; ಆದ್ದರಿಂದಲೆ ಎಲ್ಲ ವ್ಯಾಪಾರಗಳ ಅರ್ಥವನ್ನೂ ಪರಮ ತಾತ್ಪರ್ಯವೆ ಸಮರ್ಥಿಸಬೇಕಾಗುತ್ತದೆ; ಎಕೆಂದರೆ, ಎಲ್ಲ ವ್ಯಪಾರಗಳ ಅರ್ಥವೂ ಪುರುಷಾರ್ಥವೂ ಪರಮತಾತ್ಪರ್ಯದಿಂದಲೆ ಸಾರ್ಥಕವಾಗುತ್ತವೆ.

ಭರತಖಂಡದ ಬದುಕಿನಲ್ಲಿ ಸ್ವಾತಂತ್ಯ್ರೋದಯಕ್ಕೆ ಪೂರ್ವದ ಒಂದೂವರೆ ಶತಮಾನವು ನಮ್ಮ ರಾಷ್ಟ್ರದ ಇಳಿಗಾಲದ ಯುಗವೆಂದು ಸಾಮಾನ್ಯವಾಗಿ ಭಾವಿಸುತ್ತೇವೆ. ರಾಜಕೀಯದಲ್ಲಿ ದಾಸ್ಯ, ಆರ್ಥಿಕದಲ್ಲಿ ದಾರಿದ್ಯ್ರ, ಸಾಮಾಜಿಕದಲ್ಲಿ ಛಿದ್ರತೆ, ಧಾರ್ಮಿಕದಲ್ಲಿ ಕ್ಷುದ್ರತೆ-ಎಂಬೆಲ್ಲ ವರ್ನನೆಗೆ ಪಕ್ಕಾಗುವ ಆ ಕಾಲಕ್ಕೆ ಇಳಿಗಾಲವೆಂದು ಹೆಸರಿಟ್ಟರೆ ಅದರಲ್ಲಿ ತಪ್ಪೇನು? ಹೌದು; ಲೋಕನಿಷ್ಠವಾದ ಮನೋಧರ್ಮಕ್ಕೆ ಅದರಲ್ಲಿ ತಪ್ಪೇನೂ ಕಾಣುವುದಿಲ್ಲ. ಆದರೆ ವೇದನಿಷ್ಠವಾದ, ಎಂದರೆ ಆತ್ಮಶ್ರೀ ನಿಷ್ಠವಾದ, ಪರಮತಾತ್ಪರ್ಯಾರ್ಥದ ಪೂರ್ಣದೃಷ್ಟಿಗೆ ಅದು ವ್ಯಾವಹಾರಿಕ ಮಾತ್ರವಾದ ಮಿಥ್ಯಾದೃಷ್ಟಿ.

ಏಕೆಂದರೆ, ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಪೂರ್ವಭಾಗ ಇವನ್ನೊಳಗೊಂಡ ಆ ಕಾಲಮಾನದಲ್ಲಿ ನಮ್ಮ ದೇಶದಲ್ಲಿ ಗೋಚರವಾದ ಆತ್ಮಶ್ರೀಗೆ ಸಮಾನ ತೇಜಸ್ಸಿನ ಆತ್ಮಶ್ರೀ ಬೇರೆ ಇನ್ನಾವ ದೇಶದಲ್ಲಿಯೂ ಆವಿರ್ಭೂತವಾಗಲಿಲ್ಲ ಎಂದು ಹಾಗೆ ಇತ್ಯರ್ಥ ಹೇಳಲು ಸಮರ್ತರೂ ವಿಖ್ಯಾತರೂ ಆದ ವಿದೇಶೀಯ ಮಹದ್ವ್ಯಕ್ತಿಗಳೇ ಒಪ್ಪಿಕೊಂಡಿದ್ದಾರೆ. ರಾಜಕೀಯಾದಿ ಲೌಕಿಕ ಭೂಮಿಕೆಗಳಲ್ಲಿ ನಾವು ಗಳಿಸಿದ ಅಸದೃಶವಾದ ವಿಜಯ ಪರಂಪರೆಗಳಿಗೂ ಆ ಆಧ್ಯಾತ್ಮಿಕ ತಪಶ್ಯಕ್ತಿಯೇ ಪ್ರಚೋದಕವೂ ಸಾಧಕವೂ ಆಯಿತೆಂಬುದರಲ್ಲಿ ಸಂದೇಹವಿಲ್ಲ. ಆ ಕಾಲಮಾನದಲ್ಲಿ ಸಂಭವಿಸಿದ ಹಿಂದೂ ಧರ್ಮದ ನವೋದಯದ ದಿವ್ಯಕಥೆ ಎಂತಹ ಉದಾಸೀನನಿಗೂ ರೋಮಾಂಚನಕಾರಿಯಾಗುವುದನ್ನು ಅದ್ಭುತವಾಗಿದೆ. ವಿವರಗಳಿಗೆ ಹೋಗದೆ ನಮ್ಮ ದೃಷ್ಟಿ ವಿಹಂಗಮವಾಗಿ ವೀಕ್ಷಿಸದರೂ ಸಾಕು, ಭರತಖಂಡದ ಬೃಹದ್‌ವಿಸ್ತೀರ್ಣದಲ್ಲಿ ದಿಕ್ಕುದಿಕ್ಕುಗಳಲ್ಲಿ, ಕಣ್ಣು ಹರಿದತ್ತ ಆತ್ಮಶ್ರೀಯ ಜ್ಯೋತಿಃಸ್ತೂಪಗಳು ಮನಂಗೊಳಿಸಿ, ಅವಿರಾಮಶಿಖರದ ಅಗ್ನಿ ಗೋಪುರಗಳಂತೆ ರಾರಾಜಿಸುತ್ತವೆ. ರಾಮಮೋಹನರಾಯ, ಶ್ರೀ ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಋಷಿ ದಯಾನಂದಸರಸ್ವತಿ, ರವೀಂದ್ರನಾಥ ಠಾಕೂರ, ಶ್ರೀ ರಮಣಮಹರ್ಷಿ, ಶ್ರೀ ಅರವಿಂದರು, ಮಹಾತ್ಮಾ ಗಾಂಧೀಜಿ-ಈ ಒಂದೊಂದು ಹೆಸರಿನ ಹಿಂದೆ ಎಂತಹ ಉಸಿರು ಸ್ಪಂದಿಸುತ್ತದೆ ಎಂಬುದನ್ನು ಅರಿತು ಅನುಭವಿಸಿದರೆ ನಾವು ಮೇಲೆ ಹೇಳಿದ ಮಾತಿನ ಸತ್ಯಾಂಶ ಸುಸಂವೇದ್ಯವಾಗುತ್ತದೆ.

ನಮ್ಮ ದೇಶದ ಸ್ವಾತಂತ್ಯ್ರ ಸಾಧನೆಯ ಯುಗದ ಪ್ರತ್ಯುಷೆಯಲ್ಲಿಯೆ ಸ್ವಾಮಿ ವಿವೇಕನಾಂದರ ಕ್ರಾಂತದರ್ಶಿಯಾದ ಸಿಡಿಲವೀಣೆ ಹೀಗೆಂದು ಗುಡುಗಿದೆ:

“ಓ ನನ್ನ ಭರತಮಾತೆ, ಓ ನನ್ನ ಭಾರತೀಯ ಭ್ರಾತೃಗಳಿರಾ, ನಿದ್ದೆಯಿಂದೆದ್ದೇಳಿ! ನವೋದಯವಾಗುತ್ತಿದೆ; ಕಣ್ದೆರೆದು ನೋಡಿ! ಅದೋ!

“ಸುದೀರ್ಘರಾತ್ರಿ ಕಡೆಗಿಂದು ಕೊನೆಗಾಣುತ್ತಿದೆ…ಶವದಂತೆ ಬಿದ್ದಿದ್ದ ಶರೀರವಿಂದು ಸಪ್ರಾಣವಾಗುತ್ತಿದೆ. ಅದೋ ಕಿವಿಗೊಡಿ: ತೂರ್ಯವಾಣಿಯೊಂದು ಕೇಳಿಬರುತ್ತದೆ: ಬಹು ಪುರಾತನ ಕಾಲದ ಇತಿಹಾಸಗರ್ಭದಿಂದ ಹೊಮ್ಮಿ, ಪರ್ವತಪರ್ವತ ಶಿಖರಗಳಿಂದ ಚಿಮ್ಮಿ, ಅರಣ್ಯಾರಣ್ಯ ಕಂದರ ಕಂದರಗಳಲ್ಲಿ ಸಂಚರಿಸಿ, ಬರಬರುತ್ತ ಪ್ರಬಲವಾಗಿ, ಬಂದಂತೆಲ್ಲ ಅಪ್ರತಿಹತವಾಗಿ, ನಮ್ಮೀ ಪುಣ್ಯಭೂಮಿಯನ್ನು ನಿದ್ದೆಯಿಂದೊದೆದೆಬ್ಬಿಸಿ, ಜ್ಞಾನ ಭಕ್ತಿ ಕರ್ಮ ವೈರಾಗ್ಯ ಸೇವಾತತ್ತ್ವಗಳನ್ನು ಉಚ್ಚ ಕಂಠದಿಂದ ಸಾರುವ ತೂರ್ಯವಾಣಿ ಯೊಂದು ಕೇಳಿಬರುತ್ತಿದೆ. ಹಿಮಾಲಯಗಳಿಂದ ಬೀಸಿಬರುವ ಪುಣ್ಯ ಸಮೀಕರಣ ನಂತೆ ನಿರ್ಜೀವವಾದಂತಿದ್ದ ಅಸ್ಥಿಮಾಂಸಗಳಿಗೆ ಜೀವದಾನ ಮಾಡುತ್ತಿದೆ; ಜಡನಿದ್ದೆಯನ್ನು ಹೊಡೆದೆಬ್ಬಿಸುತ್ತಿದೆ; ಕಾರ್ಯೋತ್ಸಾಹ ಧೈರ್ಯ ಸ್ಥೈರ್ಯಗಳನ್ನು ಉದ್ರೇಕಿಸುತ್ತಿದೆ, ಕುರುಡರಿಗೆ ಕಾಣದು; ಮೂರ್ಖರಿಗೆ ತಿಳಿಯದು. ನಮ್ಮೀ ಭರತಭೂಮಿ ಯುಗಯುಗಗಳ ನಿದ್ರೆಯಿಂದ ಮೇಲೇಳುತ್ತಿದೆ. ಆಕೆಯನ್ನು ಇನ್ನರೂ ತಡೆಯಬಲ್ಲವರಿಲ್ಲ. ಇನ್ಯಾಕೆ ನಿದ್ದೆಮಾಡುವುದಿಲ್ಲ. ಯಾವ ಶಕ್ತಿಯೂ ಆಕೆಯನ್ನು ಬಗ್ಗಿಸಲಾರದು. ಏಕೆಂದರೆ, ಅದೋ ನೋಡಿ. ಮಹಾಕಾಳಿ ಮತ್ತೊಮ್ಮೆ ಎಚ್ಚತ್ತು ಮೈಕೊಡವಿ ಉರಿರೆಳೆದು ನಿಲ್ಲುತ್ತಿದ್ದಾಳೆ!…

“ಯಾವ ಶಕ್ತಿಯ ಉನ್ಮೇಷಮಾತ್ರದಿಂದಲೇ ದಿಗ್ದಿಗಂತವ್ಯಾಪಿಯಾದ ಪ್ರತಿಧ್ವನಿಯಿಂದ ಜಗತ್ತು ಜಾಗ್ರತವಾಗುತ್ತಿರುವುದೋ ಆ ಶಕ್ತಿಯ ಪೂರ್ಣತ್ವವನ್ನು ಭಾವಿಸು, ಅನುಭವಿಸು. ವೃಥಾ ಸಂದೇಹ ಬೇಡ; ದುರ್ಬಲತೆ ಬೇಡ. ದಾಸಜಾತಿ ಸುಲಭವಾದ ಈರ್ಷ್ಯಾದ್ವೇಷಗಳನ್ನು ದೂರಮಾಡಿ-ಈ ಮಹಾ ಯುಗಚಕ್ರ ಪರಿವರ್ತನೆಯ ಸಹಾಯಾರ್ಥವಾಗಿ ಹೆಗಲುಕೊಟ್ಟು ನಿಲ್ಲು; ಸೊಂಟ ಕಟ್ಟಿ ನಿಲ್ಲು; ಧೀರನಾಗಿ ನಿಲ್ಲು:”

ಶ್ರೀ ವಿವೇಕಾನಂದರಂತೆಯೆ ಮಹಾಯೋಗೀಂದ್ರ ಆರೀ ಅರವಿಂದರೂ ಅಂದಿನ ತಮ್ಮ ರಾಜಕೀಯಾಂದೋಲನದ ಮಧ್ಯದಲ್ಲಿಯೆ ಈ ಸತ್ಯವನ್ನು ಅನುಭವಿಸಿ ಕಂಡು ಭರತ ಖಂಡದ ಜೀವಿತೋದ್ದೇಶವನ್ನು ಕುರಿತು ಹೀಗೆಂದು ಭವಿಷ್ಯ ನುಡಿದಿದ್ದಾರೆ:

“ನರನಲ್ಲಿ ನಾರಾಯಣ, ನಾರಾಯಣನಲ್ಲಿ ನರ-ಎಂಬುದೇ ಧ್ಯೇಯ. ಆ ಧ್ಯೇಯದ ಸಾಧನೆ ಮತ್ತು ಲೋಕಕ್ಕೆ ಅದರ ಬೋಧನೆ-ಇವೇ ಭರತವರ್ಷದ ಜೀವಿತೋದ್ದೇಶ. ಇತರ ಜನಾಂಗಗಳಿಗಿಲ್ಲದ ರಹಸ್ಯ ಶಕ್ತಿಯೊಂದು ಆಕೆಗಿದೆ. ಆಕೆಗಿಂದು ಬೇಕಾಗಿರುವುದು ಆ ಶ್ರದ್ಧೆಯ ಉನ್ಮೀಲನ ಮತ್ತು ಆ ಇಚ್ಛಾಶಕ್ತಿಯ ಉದ್ಭೋದನ. ಆಕೆ ಕೈಕೊಂಡ ಯುಗಯುಗಗಳ ಶಿಕ್ಷಾತಪಸ್ಯೆಯ ಗುರಿ ಇಂದು ಬಳಿಸಾರುತ್ತಿದೆ. ಪುರ್ವ ರೋದೋಂತದಲ್ಲಿ ಮಹಾಜ್ಯೋತಿಯೊಂದು ಮೂಡಿಬರುತ್ತಿದೆ. ಅದರ ರಶ್ಮಿರಾಯಭಾರಿಗಳಾಗಲೆ ದಿಗಂತದಲ್ಲಿ ದೃಗ್ಗೋಚರವಾಗುತ್ತಿದ್ದಾರೆ. ಅದೇ ಕಾರಣ, ಭರತಖಂಡದ ಪುನರುತ್ಥಾನಕ್ಕೆ; ಅದೇ ಸಾಕ್ಷಿ,  ವಿಶ್ವಶಕ್ತಿ ಆಕೆಯ ಶ್ವಾಸಕೋಶಗಳಿಗೆ ಮತ್ತೊಮ್ಮೆ ಪ್ರಾಣವಾಯುವನ್ನು ಊದುತ್ತಿದ್ದಾಳೆ ಎಂಬುದಕ್ಕೆ. ಅದೇ ಪ್ರೇರಣೆಯಿಂದಲೆ ಆಕೆಯ ವಿಮೋಚನಕ್ಕಾಗಿ ಮಹದ್ವ್ಯಕ್ತಿಗಳು ಈಗಾಗಲೆ ಕರ್ಮನಿರತರಾಗಿದ್ದಾರೆ. ಆದಕಾರಣವೆ ಆಕೆಯ ಸಂತಾನರ ಹೃದಯ ವಲ್ಮೀಕಗಳಲ್ಲಿ ಪರಿವರ್ತನೆಯ ಮಹಾಶೇಷನು ಹಠಾತ್ತನೆ ಹೆಡೆಯೆತ್ತುತ್ತಿದ್ದಾನೆ.

“ಯಾವ ಜಾಗೃತಿಯ ಪ್ರಪ್ರಥಮ ಪದನ್ಯಾಸವು ರಾಜಕೀಯ ರೂಪದಲ್ಲಿ ಮೈದೋರಿತೋ ಅದು ತುತ್ತತುದಿಗೆ ಆಧ್ಯಾತ್ಮಿಕ ತೇಜಸ್ಸಿನಲ್ಲಿ ಪರ್ಯವಸಾನ ಹೊಂದಿ ಕೃತಕೃತ್ಯವಾಗುತ್ತದೆ. ಭರತಮಾತೆಯ ಚೈತನ್ಯ ಆಕೆಯಲ್ಲಿ ಇನ್ನೂ ಅಕ್ಷಯವಾಗಿದೆ. ಜಗತ್ತು ತನ್ನ ವಿಮೋಚನದ ಸಂದೇಶವನ್ನು ಭರತ ಕಂಡದಿಂದಲೆ ಸ್ವೀಕರಿಸಿ ಉದ್ಧಾರವಾಗುತ್ತದೆ.”

ಇಬ್ಬರು ಮಹಾಮಹಿಮರೂ ಕ್ರಾಂತದರ್ಶಿಗಳಾಗಿ ಭವಿಷ್ಯ ನುಡಿದಿದ್ದಾರೆ. ಅದು ಇಂದು ಬಹುಮಟ್ಟಿಗೆ ಸಫಲವಾಗಿದೆ; ಸಫಲವಾಗುತ್ತಲೂ ಇದೆ. ಅಂತಹ ಸಫಲತೆಯ ಸಿದ್ಧಿಗಾಗಿ ಕಂಕಣಬದ್ಧನಾಗಿ ದುಡಿದು ಮಡಿದ ಮಹಾ ಪರುಷನೊಬ್ಬನ ವ್ಯಷ್ಟಿಶಕ್ತಿಯನ್ನು ಸಮಷ್ಟಿಶಕ್ತಿಯ ಹಿನ್ನೆಲೆಯಲ್ಲಿಟ್ಟು ನೋಡುವ ಪ್ರಯತ್ನವನ್ನೇ ನಾವು ‘ಪೂರ್ಣದೃಷ್ಟಿಗೆ ಗಾಂಧೀಜಿ’ ಎಂದು ಕರೆದಿದ್ದೇವೆ.

ಗಾಂಧೀಜಿ ಈಗ ತೀರಿಕೊಂಡಿದ್ದಾರೆ. ಅವರ ಐಹಿಕ ಜೀವನಯಾತ್ರೆಯ ದೈಹಿಕರೂಪ ಕೊನೆಗೊಂಡಿದೆ. ಅವರ ಬದುಕು ನಮಗಿಂದು ಚಿತ್ರಕಾರನು ಪೂರೈಸಿದ ಚಿತ್ರದಂತಿದೆ. ಅದನ್ನು ಒಟ್ಟಿಗೆ ನೋಡಬಹುದು. ತಿರುಗಿಸಿ ತಿರುಗಿಸಿ, ಬೇಕಾದ ಕಡೆ ನಿಂತು, ಬೇಕಾದ ಬೆಳಕು ಬಿಟ್ಟು ನೋಡಬಹುದು. ಅವರು ತೀರಿದ ತರುಣದಲ್ಲಿಯೆ ಇಷ್ಟು ಬೇಗನೆ ನಿಷ್ಪಕ್ಷವಾಗಿ ನೋಡುತ್ತೇವೆಂದು ಹೇಳುವುದು ಪ್ರಾಯಶಃ ಸಾಹಸದ ಮಾತಾದೀತು. ಅವರು ತೀರಿಕೊಂಡರೂ ಇನ್ನೂ ನಮಗೆ ಬಹಳ ಹತ್ತಿರವಿದ್ದಾರೆ. ಹಿಮಾಲಯದ ಹತ್ತಿರ ನಿಂತು ನೋಡಿದರೆ ಅದು ಬೃಹದಾಕಾಶವನ್ನೆಲ್ಲ ವ್ಯಾಪಿಸಿದಂತೆ ತೋರುವುದು ಸಹಜ. ದೂರ ಸರಿದರೆ ಮಾತ್ರ ಗೊತ್ತಾಗುತ್ತದೆ,-ಅದರ ಇತಿ, ವಿಸ್ತಾರ, ಔನ್ನತ್ಯ; ಇತರ ಗಿರಿಗಳೊಡನೆ ಅದಕ್ಕಿರುವ ಸಂಬಂಧ; ಇತರ ಪರ್ವತಗಳ ಸಮುದಾಯದಲ್ಲಿ ಅದಕ್ಕಿರುವ ಸ್ಥಾನ, ಮಾನ. ದೂರ ಸರಿಯುವುದರಿಂದ ನಮಗೆ ನಷ್ಟವಾದಂತೆ ತೋರಬಹುದು: ಮೊದಲು ಅದಕ್ಕಿದ್ದ ಬೃಹತ್ತು ಕಡಮೆಯಾಗುತ್ತದೆ; ಆಕಾಶವನ್ನೆಲ್ಲ ತುಂಬಿರುವಂತೆ ತೋರುತ್ತಿದ್ದ ಅದು ಕಿರಿದಾದಿ ಕಾಣತೊಡಗುತ್ತದೆ; ಅದರ ಸರ್ವಸ್ವತೆಗೆ ಚ್ಯುತಿಯೊದಗಿ ಪರ್ವತಶ್ರೇಣಿಯಲ್ಲಿ ಅದೂ ಒಂದು ಎಂಬರಿವು ಮೂಡುತ್ತದೆ; ಅದರ ಎತ್ತರಕ್ಕೆ ಇತರ ಕಿರುಬೆಟ್ಟಗಳು ಎಷ್ಟರ ಮಟ್ಟಿಗೆ ಆಧಾರವಾಗಿವೆ ಎಂಬಂಶ ಸ್ಫುರಿಸುತ್ತದೆ. ಹೀಗಾದರೂ ಅದು ನಿಜವಾಗಿಯೂ ನಮಗೊದಗುವ ನಷ್ಟವಲ್ಲ. ಅದನ್ನು ನಷ್ಟವೆಂದು ಭಾವಿಸುವುದು ಮೋಹಮೂಲವಾದ ಭ್ರಾಂತಿಯನ್ನೇ ಪ್ರೀತಿಸುವ ಒಂದು ಮನೋದೌರ್ಬಲ್ಯವಾದೀತು. ಸತ್ಯಲಾಭ ಎಂದಿಗೂ ನಷ್ಟವಲ್ಲ, ತತ್ಕಾಲದಲ್ಲಿ ಹಾಗೆ ತೋರಿದರೂ. ಏಕೆಂದರೆ ಹಿಮಾಚಲದ ನಿಜವಾದ ಬೃಹತ್ತು ನಮ್ಮ ಸ್ಥಾನ ವ್ಯತ್ಯಾಸದಿಂದ ಸ್ವರೂಪತಃ ಹಿಗ್ಗೂವುದೂ ಇಲ್ಲ, ಕುಗ್ಗುವುದೂ ಇಲ್ಲ. ಅದು ಸುಸ್ಥಿರ. ಬದಲಾಗಿ ನಮಗೊದಗುವ ಲಾಭವೆಂದರೆ, ಹಿಮಾಲಯಕ್ಕೆ ಆಧಾರವಾದ ಪೃಥ್ವಿಯ ವಿಪುಲತರ ವಿಸ್ತೀರ್ಣವೂ ಎಲ್ಲವನ್ನೂ ಒಳಗೊಂಡಿರುವ ಅಪಾರವಾದ ವ್ಯೋಮಮಂಡಲದ ಮಹತ್ತರವಾದ ಅನಂತತೆಯೂ ಅನುಭವಗೋಚರವಾಗಿ, ನಮ್ಮ ಚೇತನ ವಿರಾಟ್‌ಸಂಗಿಯಾಗುತ್ತದೆ. ಅಹಂಕಾರ ಮತ್ತು ಮಮಕಾರಪೂರ್ಣವಾದ ನಮ್ಮ ‘ಅಲ್ಪ’ ದೃಷ್ಟಿಗೆ ಅತ್ಯಂತ ಹಿರಿದಾಗಿ ತೋರುತ್ತಿದ್ದರೂ ಕೂಡ ಅದರ ನಿಜವಾದ ಹಿರಿತನಕ್ಕೆ ಕುಂದುಬರದ ರೀತಿಯಲ್ಲಿ ಕಿರಿದಾಗಿ ತೋರಿ, ಎಲ್ಲವನ್ನೂ ತನ್ನ ಇಚ್ಛಾಮಾತ್ರದಿಂದ ಹೊರಹೊಮ್ಮಿಸಿ ಅನಿರ್ವಚನೀಯವಾದ ತನ್ನ ಇಚ್ಛಾಸೂತ್ರದಿಂದ ಲೀಲಾಜಗತ್ತನ್ನು ನಡೆಸುತ್ತಿರುವ ಭಗವನ್ನಿತ್ಯದ ಭೂಮತೆ ಭವ್ಯತೆಗಳು ಚೇತಃಸ್ಪರ್ಶಿಗಳಾಗಿ ನಮ್ಮನ್ನು ಪ್ರವೇಶಿಸುತ್ತವೆ. ಹೆಮ್ಮೆ ಹೆಡೆಮುಚ್ಚಿ, ಅಹಂಭಾವ ಸಾಷ್ಟಾಂಗ ದಂಡ ಪ್ರಣಾಮಮಾಡಿ, ಜೀವ ವಿನಯಶೀಲವಾಗುತ್ತದೆ. ಅಂತಹ ಅನುಭವಕ್ಕಿಂತಲೂ ಹೆಚ್ಚಿನ ಲಾಭವಾಗಲಿ, ದಿವ್ಯತರವಾದ ಪ್ರಯೋಜನವಾಗಲಿ ಬೇರೆ ಏನಿದೆ?

ಗಾಂಧೀಜಿಯ ಜೀವನವನ್ನು ಚರಿತ್ರೆಯ ರೂಪದಲ್ಲಿ ಒಕ್ಕಣಿಸುವುದು ನಮ್ಮ ಉದ್ದೇಶವಲ್ಲ. ಸಂಕ್ಷೇಪವಾಗಿಯಾದರೂ ಅದನ್ನು ಹೇಳುವುದು ಇಲ್ಲಿ ಅನಾವಶ್ಯಕ. ಅದರ ರೂಪುರೇಖೆಗಳು ಮಾತ್ರವಲ್ಲ, ವಿವರಗಳೂ ಕೂಡ ಮಕ್ಕಳು ಮುದುಕರಾದಿಯಾಗಿ ಈಗಾಗಲೆ ತಕ್ಕಮಟ್ಟಿಗೆ ಎಲ್ಲರಿಗೂ ತಿಳಿದಿದೆ. ಅವರ ಜೀವನಪ್ರತಿಮೆಯನ್ನು ವಿಶೇಷವಾಗಿ ಭರತ ಖಂಡಕ್ಕೆ ಅನ್ವಯಿಸುವಂತೆ ಜಗಜ್ಜೀವನ ರಂಗಭಿತ್ತಿಯಲ್ಲಿಟ್ಟು ಸಮೀಕ್ಷಿಸುವುದೇ ನಮ್ಮ ಪ್ರಕೃತಸಂಕಲ್ಪ.

ಶ್ರೀ ಮೋಹನದಾಸ ಕರಮಚಂದ ಗಾಂಧಿ ಗುಜರಾತು ಪ್ರಾಂತದ ಕಾಥೆವಾಡ ಸಂಸ್ಥಾನಗಳಲ್ಲಿ ಒಂದಾಗಿದ್ದ ಪೋರಬಂದರು ಸಂಸ್ಥಾನದ ದಿವಾನರ ಮಗನಾಗಿ ಕ್ರಿ.ಶ.೧೮೬೯ನೆಯ ಅಕ್ಟೋಬರ್ ೨ನೆಯ ದಿನ ಸಾಮಾನ್ಯ ರೀತಿಯಲ್ಲಿ  ಸಾಮಾನ್ಯರಂತೆ ಭೂಪ್ರಜೆಯಾಗಿ ಅವತರಿಸಿದರು.

ಜೈನರ ಕಾವ್ಯಗಳಲ್ಲಿ ತಿರ್ಥಂಕರನಾಗುವವನು ಜನ್ಮವೆತ್ತುವ ಸಂದರ್ಭದಲ್ಲಿ ವರ್ಣಿತವಾಗುವಂತೆ ಇಲ್ಲಿ ಗರ್ಭಶೋಧನೆ, ಜನ್ಮಾಭಿಷೇಕ, ಇಂದ್ರನ ಆನಂದ ನೃತ್ಯ ಇತ್ಯಾದಿಗಳೇನೂ ನಡೆಯಲಿಲ್ಲ. ಸೂಕ್ಷ್ಮಲೋಕದ ಭಗವತ್‌ಕವಿಯ ಕಾವ್ಯಸತ್ತೆಯಲ್ಲಿ ನಡೆದುವೋ ಬಿಟ್ಟುವೋ ಗದ್ಯಲೇಖಕನಿಗೆ ಅದೆಲ್ಲ ಅಪ್ರಕೃತ. ಅಂತೂ ಅವರೂ ಹುಟ್ಟಿದರು. ಇತರ ಬಾಲಕರಂತೆ ಬೆಳೆದರು. ಶಾಲೆಗೆ ಹೋದರು. ಇತರರಂತೆಯೆ ವಿದ್ಯಾರ್ಜನೆ ಮಾಡಿದರು. ಅಂದಿನ ಕಾಲಸ್ಥಿತಿಗೆ ವಶರಾಗಿ ಇತರ ಅನೇಕರಂತೆ ವಿದ್ಯಾರ್ಜನೆಗಾಗಿ ವಿದೇಶಕ್ಕೆ ಹೋದರು. ಅದನ್ನು ಪೂರೈಸಿಕೊಂಡು ಸ್ವದೇಶಕ್ಕೆ ಹಿಂತಿರುಗಿದರು. ವಕೀಲಿ ವೃತ್ತಿಗೆ ಸೇರಿ ದುಡಿಯಲಾರಂಭಿಸಿದರು. ಪ್ರಾಸಂಗಿಕವಾಗಿ ಒದಗಿದ ಅವಕಾಶ ಅವರನ್ನು ದಕ್ಷಿಣ ಆಫ್ರಿಕಕ್ಕೆ ಕೊಂಡೊಯ್ದಿತು. ಅಲ್ಲಿ ನಡೆದ ಒಂದು ದಾರುಣವಾದ ಅನುಭವ ಅವರನ್ನು ದೀಕ್ಷಿತರನ್ನಾಗಿ ಪರಿವರ್ತಿಸಿತು. ಅಲ್ಲಿ ಸತ್ಯಾಗ್ರಹದ ಪ್ರಯೋಗ ನಡೆಸಿ ಜಯಶೀಲರಾಗಿ ಭಾರತಕ್ಕೆ ಹಿಂತಿರುಗಿದರು. ವಿಧಿ ಇಲ್ಲಿಯೂ ಅವರಿಗಾಗಿ ರಂಗವನ್ನು ಸಮೆದು ಸಿದ್ಧಗೊಳಿಸಿತ್ತು. ನಿರಾಡಂಬರವಾಗಿ ಒಂದು ಮೂಲೆಯಿಂದ ರಂಗಪ್ರವೇಶಮಾಡಿದರು. ದೃಶ್ಯದಿಂದ ದೃಶ್ಯಕ್ಕೆ ಅಂಕದಿಂದ ಅಂಕಕ್ಕೆ ಅವರ ಜೀವನನಾಟಕ ಭರತಖಂಡದ ಜೀವನನಾಟಕದಲ್ಲಿ ಹಾಸುಹೊಕ್ಕಾಗಿ ಎಸಳೆಸಳೆಸಳಾಗಿ ಅರಳಿತು. ಅರಳುತ್ತಾ ಅರುಳುತ್ತಾ ದಿಕ್ಕುದಿಕ್ಕಿಗೂ ಅಮರ ಸೌರಭವನ್ನು ಹರಡಿ ಜಗನ್ನೇತ್ರಾಳಿಗಳನ್ನು ತನ್ನೆಡೆಗೆ ಆಕರ್ಷಿಸುತ್ತಾ ಕೊನೆಗೆ ಸಹಸ್ರದಲಪದ್ಮವಾಗಿ,  ತಪೋನಿರತನಾದ ಭಾರತ ಭಾಗ್ಯವಿಧಾತನಿಗೆ ಸ್ವಾತಂತ್ಯ್ರ ಸಹಸ್ರಾರ ಸಿಂಹಾಸನವಾಗಿ ಪರಿಣಮಿಸಿತು. ಅದರ ಉತ್ಕರ್ಷದ ಮಹೋನ್ನತಿ ಕೈಲಾಸ ಶಿಖರಶಿರಶ್ಚುಂಬಿಯಾಗುತ್ತಿದ್ದಾಗಲೆ ಅತ್ಯಂತ ನಾಟಕೀಯವಾಗಿ ಆಕಸ್ಮಿಕವೆಂಬಂತೆ ಜಗತ್‌ರಂಗದಿಂದ ಅಂತರ್ಧಾನವಾಯಿತು, ೧೯೪೮ನೆಯ ಜನವರಿ ೩೦ನೆಯ ಶುಕ್ರವಾರ ಸಂಜೆ. ಅದರ ಬಿಳಿ ನೆನಪೂ ಅದರ ನರುಗಂಪೂ ಭೂಮಿಯ ಅಕರ್ಷಣ ಶಕ್ತಿಯಂತೆ, ಸೂರ್ಯನ ಜ್ಯೋತಿಶ್ಯಕ್ತಿ ಯಂತೆ, ಲೋಕಾಂಶಗಳಾಗಿ, ಸೃಷ್ಟ್ಯಂಶಗಳಾಗಿ ನಿತ್ಯವಾಗಿವೆ. ಗಾಂಧೀಜಿ ಬಿಟ್ಟುಹೋಗಿರುವ ನಮ್ಮಿ ಪೃಥ್ವಿ ಅವರು ಪ್ರವೇಶಿಸಿದ ಅಂದಿನ ಪೃಥ್ವಿಗಿಂತಲೂ ಸಮಧಿಕತರವಾಗಿ ಶ್ರೀಮಂತವಾಗಿದೆ.

ಆದರೆ ಆ ಶ್ರೀ ಒಬ್ಬ ವ್ಯಕ್ತಿಯ ದುಡಿಮೆಯಂತೆ ತೋರಿದರೂ ಪೂರ್ವಾರ್ಜಿತವಾದ ಆಸ್ತಿಯ ಆಧಾರವಿಲ್ಲದಿದ್ದರೆ, ಅದರ ಬೆಂಬಲವಿಲ್ಲದಿದ್ದರೆ, ಒಬ್ಬ ವ್ಯಕ್ತಿಗೆ ಅದು ಸಾಧ್ಯವಾಗುತ್ತಿತ್ತೆ? ಗಾಂಧೀಜಿ ಜರ್ಮನಿಯಲ್ಲಿ ಹುಟ್ಟಿದ್ದರೆ? ರಷ್ಯಾದಲ್ಲಿ ಹುಟ್ಟಿದ್ದರೆ? ಬಹುಶಃ ಪೃಥ್ವಿಯ ಇನ್ನಾವ ದೇಶದಲ್ಲಿ ಹುಟ್ಟಿದ್ದರೂ ಆ ಶಕ್ತಿ ಈ ರೀತಿಯಲ್ಲಿ ವ್ಯಕ್ತವಾಗಿ ವಿಕಾಸಗೊಳ್ಳಲು ಸಾಧ್ಯವಾಗುತ್ತಿರಲಿಲ್ಲವೆಂದು ಇತಿಹಾಸತಜ್ಞರಿಗೆ ವೇದ್ಯವಾಗುತ್ತದೆ. ಸ್ವಾಸ್ತಿಕದ ಚಪ್ಪಡಿಯ  ಅಡಿಯಲ್ಲಿಯೊ ಕುಡುಗೋಲು ಸುತ್ತಿಗೆಯ ನಡುವೆಯೂ ಸಿಕ್ಕಿ ಆ ಜೀವಬೀಜ ಮೊಳಕೆಯಲ್ಲಿಯೆ ಜರ್ಝರಿತವಾಗುತ್ತಿತ್ತು. ಭರತವರ್ಷದ ಶತಶತಮಾನಗಳ ಸುದೀರ್ಘಕಾಲದ ಆತ್ಮಶ್ರೀಪೂರ್ಣವಾದ ಆಧ್ಯಾತ್ಮಿಕ ಸಂಸ್ಕೃತಿಯ ಅಮೃತ ತೋಪಮವಾದ ಆಧಾರವೂ ಬೆಂಬಲವೂ ಪ್ರೇರಣೆಯೂ ಪ್ರೋತ್ಸಾಹವೂ ದೊರೆಯದಿದ್ದರೆ ಗಾಂಧೀಜಿಯ ಆವಿರ್ಭಾವ ಅಸಾಧ್ಯವಾಗುತ್ತಿತ್ತು. ಶ್ರೀ ರಾಮಕೃಷ್ಣ ಪರಮಹಂಸರ ವಿಚಾರವಾಗಿ ಬರೆಯುತ್ತಾ ಋಷಿಸದೃಶನಾದ ಸಾಹಿತಿ ರೋಮಾ ರೋಲಾಂಡ್ (Romain Rolland) ಹೀಗೆಂದು ಬರೆಯುತ್ತಾರೆ.

“ಈ ಭಗವದ್ ವಿಭೂತಿಯ (ಶ್ರೀ ರಾಮಕೃಷ್ಣರ) ವ್ಯಕ್ತಿತ್ವವು ಒಂದು ಮಹಾ ಸ್ವರಮೇಲದಂತೆ ಸಹಸ್ರಾರು ರಾಗೋಪರಾಗಗಳ ಸಮನ್ವಯ ರಂಗವಾಗಿದೆ. ಅನೇಕ ತಲೆಮಾರುಗಳ ಸಾಧನಸಂಪತ್ತಿ ಆತನ ಹೃದಯದಲ್ಲಿ ಐಕ್ಯವಾಗಿದ್ದರೂ ಅದೆಲ್ಲ ವೈವಿಧ್ಯವನ್ನೂ ತನ್ನತನದೊಂದು ದೀಪ್ತಿಯ ಪೋಷಣೆಗೆ ತೈಲವೆಂಬಂತೆ ಸ್ವೀಕರಿಸಿ ಆತನ ಆತ್ಮಜ್ಯೋತಿ ಸಾರ್ವಭೌಮಿಕೋಜ್ವಲವಾಗಿ ರಂಜಿಸುತ್ತಿದೆ. ಸಹಸ್ರಾರು ಸಂವತ್ಸರಗಳಲ್ಲಿ ಕೋಟ್ಯಂತರ ಹೃದಯಗಳಲ್ಲಿ ಭಾರತಮಾತೆ ಸಾಧಿಸಿದ ತಪಸ್ಸೆ ಈತನಲ್ಲಿ ಮೂರ್ತಿಮತ್ತಾಗಿ ಸಫಲವಾಗಿದೆ.”

ತನ್ನ ಹುಟ್ಟಿದ ನಾಡನ್ನು ಬಿಟ್ಟರಿಯದ, ಓದುಬರಹ ಅಷ್ಟೇನೂ ಬಾರದಿದ್ದ, ಗಾಂಧೀಜಿಯಂತಲ್ಲದೆ ಬಹುಜನ ಸಂಪರ್ಕದಿಂದ ದೂರವಾಗಿದ್ದ ದಕ್ಷಿಣೇಶ್ವರದ ಗುರುದೇವನಿಗೆ ಅನ್ವಯವಾಗುವುದಕ್ಕಿಂತಲೂ ಸತ್ಯತರವಾಗಿ ಗಾಂಧೀಜಿಯ ಬದುಕಿಗೆ ಹೊಂದಿಕೊಳ್ಳುತ್ತದೆ, ಮೇಲೆ ಹೇಳಿದ ಮಾತು. ಗಾಂಧೀಜಿ ಹುಟ್ಟುವಾಗ ಶ್ರೀ ರಾಮಕೃಷ್ಣ ಪರಮಹಂಸರಿಗೆ ೩೩ ವರ್ಷಗಳಾಗಿತ್ತು; ಸ್ವಾಮಿ ವಿವೇಕಾನಂದರಿಗೆ ೬ ವರ್ಷ; ರವೀಂದ್ರರು ಎರಡು ವರ್ಷದ ಹಸುಳೆ; ಸ್ವಾಮಿ ದಯಾನಂದ ಸರಸ್ವತಿಗಳಿಗೆ ಆಗಲೆ ೪೫ ವರ್ಷಗಳಾಗಿತ್ತು. ಇನ್ನು ಮೂರೇ ವರ್ಷಗಳಲ್ಲಿ ಶ್ರೀ ಅರವಿಂದರ ಜನ್ಮಧಾರಣೆಗೆ ವಿಧಿ ಸಂಕಲ್ಪಿಸ್ದಿತು; ಶ್ರೀ ರಮಣ ಮಹರ್ಷಿಗಳ ಬರವಿಗೆ ಇನ್ನೂ ಹನ್ನೊಂದು ವರ್ಷವಿತ್ತು. ಈ ಪ್ರಖ್ಯಾತವಾದ ಆಧ್ಯಾತ್ಮಿಕ ಜ್ಯೋತಿಗಳನ್ನು ಮಾತ್ರ ಗಮನಿಸಿದರೂ ಕೂಡ ಆ ಕಾಲಮಾನ ಎಷ್ಟು ಶ್ರೀಮಂತ ಗರ್ಭಿತವಾಗಿತ್ತು ಎಂಬುದು ಹೊಳೆಯುತ್ತದೆ. ಶುದ್ಧ ಆಧ್ಯಾತ್ಮಿಕವಲ್ಲದೆ ಲೌಕಿಕವೂ ಆಗಿರುವ ಬೇರೆ ಎಷ್ಟೋ ಇತರ ಮಹಾಪುರುಷರೂ ಗಣ್ಯವ್ಯಕ್ತಿಗಳೂ ವಿಜ್ಞಾನಿಗಳೂ ಕವಿಗಳೂ ಆ ಕಾಲಮಾನದಲ್ಲಿ ಜನ್ಮವೆತ್ತಿದ್ದಾರೆ ಎಂಬುದನ್ನು ನೆನೆದರೆ ಅದರ ವಿಭವ, ಸಾಮಾನ್ಯರು ಊಹಿಸುವಂತೆ, ಬರಿಯ ಕಾಕತಾಳೀಯ ಮಾತ್ರವಾದೀತೆ ಎಂದು ಸಂದೇಹಪಡಬೇಕಾಗುತ್ತದೆ. ಶ್ರೀ ವಿವೇಕಾನಂದರು ಭರತಭೂಮಿಯ ನವೋದಯದ ವಿಚಾರದಲ್ಲಿ ಹೇಳಿದಂತೆ, ಯುಗನಿದ್ರೆಯಿಂದ ಎಚ್ಚರಗೊಳ್ಳುವ ಮಹಾಕಾಳಿಯ ಬೇರೆಬೇರೆ ತೋಳುಗಳೆ ಅಲ್ಲಲ್ಲಿ ಮೈದೋರಿದಂತೆ ಭಾಸವಾಗುತ್ತದೆ. ಆದಿಶಕ್ತಿಯ ತರಂಗಿತೇಚ್ಛೆ ಉದ್ದೇಶಪೂರ್ವಕವಾದ ಚಿನ್ಮಯಸೂತ್ರಗಳನ್ನೆಳೆದು ನವೋದಯರಂಗದಲ್ಲಿ ತನ್ನ ಲೀಲಾವಿಭೂತಿಯನ್ನು ಅಲ್ಲಲ್ಲಿ ಮೂಡಿಸುವಂತೆ ತೋರುತ್ತದೆ. ಪೂರ್ಣದೃಷ್ಟಿಯಿಂದ ಧ್ಯಾನಿಸಿದರಂತೂ ನಮ್ಮ ಊಹೆ ಶ್ರದ್ಧೆಯಾಗತೊಡಗಿ ಅನುಮಾನವು ನಿಶ್ಚಿತವಾದ ಅಂತರ್ಜ್ಞಾನವಾಗುತ್ತದೆ. ಬಂಕಿಮಚಂದ್ರ ಮಹಾಶಯನು ಯಾವ ಲೋಕಾಲೋಕಶಕ್ತಿಯನ್ನು ವಂದೇಮಾತರಂ ಎಂಬ ಮಂತ್ರಗೀತೆಯಿಂದ ರಾಷ್ಟ್ರಪುರುಷನ ಹೃದಯಕ್ಕೆ ಆಹ್ವಾನಗೈದು, ರಾಷ್ಟ್ರಕುಂಡಲಿನಿ ಉನ್ಮೀಲಿತವಾಗಿ ಉನ್ಮೇಷಗೊಳ್ಳುವಂತೆ ಮಾಡಲು ಸಮರ್ಥನಾದನೋ ಆ ಚಿಚ್ಛಕ್ತಿಯ ಇಚ್ಛಾವಿನ್ಯಾಸಗಳೇ ಈ ಎಲ್ಲ ವಿಭೂತಿಗಳೋಪಾದಿಯಲ್ಲಿ ವಿಕಾಸಗೊಳ್ಳುವುದನ್ನು ಕಾಣುತ್ತದೆ, ಪೂರ್ಣದೃಷ್ಟಿ.

ಗಾಂಧೀಜಿ ಜೀವನವನ್ನು ಆ ದೃಷ್ಟಿಯಿಂದ ಅವಲೋಕಿಸಿದರೆ ದೇಶಭಕ್ತಿ, ಸಮಾಜಸೇವೆ, ಸ್ವಾತಂತ್ಯ್ರಸಂಪಾದನೆ. ಹರಿಜನೋದ್ಧಾರ, ಸ್ವದೇಶಿ, ಖಾದಿ, ಇತ್ಯಾದಿ ರಾಜಕೀಯ ಸಾಮಾಜಿಕ ಆರ್ಥಿಕ ಭೂಮಿಕೆಗಳಿಗೆ ತುರೀಯವಾದ ಶಾಶ್ವತ ತತ್ತ್ವವೊಂದು ಬೋಧೆಯಾಗುತ್ತದೆ. ಆ ತತ್ತ್ವವೆ ಪೂರ್ಣ ಮನುಷ್ಯತ್ವದ ಸಂಪೂರ್ಣ ವಿಕಾಸಕ್ಕೆ ಕಾರಣವೆಂದೂ, ‘ಸಕಲ ಪ್ರಯೋಜನ ಮೌಲಿಭೂತ’ವಾದ ಸಚ್ಚದಾನಂದ ಸಾಕ್ಷಾತ್ಕಾರವೆ ಅದರ ಅವತರಣೋದ್ದೇಶವೆಂದೂ ಆ ಪರಮ ಪ್ರಯೋಜನವು ಅತೀತದಲ್ಲಿ ಮಾತ್ರವಲ್ಲದೆ ಐಹಿಕದಲ್ಲಿಯೂ ಸಂಸ್ಥಾಪಿತವಾಗಬೇಕಾಗಿರುವುದು ಸೃಷ್ಟಿಯ ಚರಮೋದ್ದೇಶವೆಂದೂ ನಮಗೆ ಬುದ್ಧಿಗೋಚರವಾಗುತ್ತದೆ. ಅಂತಹ ಅಮರ್ತ್ಯಸ್ಥಿತಿ ಮರ್ತ್ಯಕ್ಕೂ ಇಳಿಯಲು ಮನುಷ್ಯತ್ವ ತನ್ನ ಸರ್ವಸ್ವವನ್ನೂ ಸಮರ್ಪಿಸಲು ತಪಸ್ವಿಯಾಗದಿದ್ದರೆ ಬರಿಯ ರಾಜಕೀಯವೂ ಸಾಮಾಜಿಕವೂ ಆರ್ಥಿಕವೂ ಆಗಿರುವ ಪ್ರಯತ್ನಗಳಿಂದ, ಅವು ಎಷ್ಟೇ ಶ್ಲಾಘನೀಯವಾಗಿರಲಿ ಉದಾತ್ತವಾಗಿರಲಿ, ಸುಖಶಾಂತಿಗಳು ನಮ್ಮ ಭಾಗಕ್ಕೆ ಬರಿಯ ಹಂಬಲಿಕೆಗಳಾಗಿಯೆ ಉಳಿಯುತ್ತವೆ ಎಂಬ ಎಚ್ಚರಿಕೆಗೆ ಗಾಂಧೀಜಿಯ ಜೀವನ ಚರಿತ್ರೆ, ತಪಿಸುತ್ತಿರುವ ಪ್ರಪಂಚಕ್ಕೆ ವಿಧಿ ಎತ್ತಿದ ಬೆಂಕಿಯ ತೋರ್ಬೆರಳಂತೆ, ಒಂದು ಭಗವತ್ ಸಾಕ್ಷಿಯಾಗಿದೆ.

 [1] ಗಾಂಧೀಜಿಯ ಜನ್ಮೋತ್ಸವ ಸಂದರ್ಭದಲ್ಲಿ ೨-೧೦-೧೯೪೮.