ವಾಲಿ ಸುಗ್ರೀವ

 

ಪುರಾಣಗಳನ್ನು ಒಂದು ಜನಾಂಗದ ಪ್ರಾಚೀನ ಲೋಕಚರಿತ್ರೆ ಎಂದು ವರ್ಣಿಸುವುದಕ್ಕಿಂತಲೂ ಒಂದು ಜನಾಂಗದ ಮನೋಲೋಕಚರಿತ್ರೆ ಎಂದು ವರ್ಣಿಸಿದರೆ ಅವು ಸತ್ಯತರವೂ ಅರ್ಥಪೂರ್ಣವೂ ಆಗಿ ಆದರಿಂದ ಬದುಕಿಗೆ ಹೆಚ್ಚು ಪ್ರಯೋಜನ ದೊರೆಯುವುದರಲ್ಲಿ ಸಂದೇಹವಿಲ್ಲ. ವಾಚ್ಯಾರ್ಥಮಾತ್ರ ನಿಷ್ಠವಾದ ಪ್ರತಿಕೃತಿಯ ದೃಷ್ಟಿಗೆ ಅಸಂಭವ ಅಸತ್ಯ ಎಂದು ತೋರುವ ಘಟನೆ ವ್ಯಂಗ್ಯಾಂರ್ಥನಿಷ್ಠವಾದ ದರ್ಶನಧ್ವನಿಗೆ ಪ್ರತಿಮಾವಿಧಾನದಿಂದ ರೂಪಧಾರಣೆ ಮಾಡಿದ ಮನೋಮಯ ಸತ್ಯವೆ ಆಗಿ ತೋರುತ್ತದೆ.

ಈ ಕಾರಣಕ್ಕಾಗಿಯೆ ಪೌರಾಣಿಕವಾದ ಕಥೆಯನ್ನೂ ವ್ಯಕ್ತಿಯನ್ನೂ ಘಟನೆಯನ್ನೂ ಲೌಕಿಕ ಕಾಲದೇಶದ ಚೌಕಟ್ಟಿನಲ್ಲಿ ಇಟ್ಟು ಐತಿಹಾಸಿಕವಾದ ವ್ಯಾಪಾರವನ್ನು ಪರಿಶೀಲಿಸುವಂತೆ ವಿಮರ್ಶೆಮಾಡದಿರುವುದು ಲೇಸು. ಹಾಗೇನಾದರೂ ಮಾಡಿದರೆ ಅನೇಕ ತೊಡಕುಗಳಿಗೆ ಸಿಕ್ಕಿಕೊಳ್ಳಬೇಕಾಗುತ್ತದೆ. ಅಂತಹ ಯಾವ ತೊಡಕನ್ನೂ ಲೌಕಿಕವಾದ ಚರಿತ್ರೆಯ ಮಟ್ಟದಲ್ಲಿ ಬಿಡಿಸಿ ಪರಿಹರಿಸಲು ಅಸಾಧ್ಯವಾಗುತ್ತದೆ.

ಉದಾಹರಣೆಗೆ ಪ್ರಖ್ಯಾತ ಪೌರಾಣಿಕ ಯುದ್ಧಗಳನ್ನು ತೆಗೆದುಕೊಳ್ಳೋಣ. ಆ ಯುದ್ಧಗಳನ್ನು ಚರಿತ್ರೆಯ ಪ್ರಸಿದ್ಧ ಯುದ್ಧಗಳಂತೆ ಪರಿಗಣಿಸಲು ಸಾಧ್ಯವೆ? ಆ ಪೌರಾಣಿಕ ಘಟನೆಗಳಲ್ಲಿ ಕೆಲವಕ್ಕಾದರೂ ಯಾವುದೋ ಒಂದು ರೀತಿಯ ಲೋಕಘಟನಾಧಾರವಿರಬಹುದೆಂದು ಊಹಿಸುವುದು ತಪ್ಪಲ್ಲ. ಆದರೆ ಪುರಾಣದಲ್ಲಿ ಅದು ಸಂಪೂರ್ಣವಾಗಿ ಪರಿವರ್ತಿತವಾಗಿ ಲೋಕದೂರವೂ ‘ಲೋಕ ಸತ್ಯ’ ದೂರವೂ ಆಗಿರುವುದರಿಂದ, ಆಧಾರವೋ ನಿಮಿತ್ತಮಾತ್ರವೋ ಆಗಿರಬಹುದಾದ ಆ ಘಟನೆ, ಅತ್ಯಂತ ಅಮುಖ್ಯವಾಗುತ್ತದೆ. ಅಂತಹ ಘಟನೆಗಳ ಚಾರಿತ್ರಕತೆಯನ್ನು ಅರಸಿ ಹುಡುಕುವ ಪ್ರಯತ್ನವನ್ನೇನೊ, ಅದು ಸಫಲವಾಗಲಿ ವಿಫಲವಾಗಲಿ, ಮಿಮರ್ಶಕನು ಮಾಡಬಹುದು. ಅಂತಹ ವಿಮರ್ಶೆ ಸಂಶೋಧನಾತ್ಮಕ ಎಂಬ ಗೌರವಕ್ಕೆ ಪಾತ್ರವಾಗುತ್ತದೆ. ಆದರಿಂದ ಬುದ್ಧಿಗೆ ವ್ಯಾಯಾಮವೂ ದೊರೆಕೊಳ್ಳಬಹುದು; ಆದರೆ ಹೃದಯಕ್ಕೆ ರಸಾನಂದ ದೊರೆಯಲಾರದು; ಅಲ್ಲದೆ ಬಿಸಿಲ್ಗುದುರೆಯ ಬೇಟೆಯೂ ಆಗಬಹುದು.

ಸಂಶೋಧನಾತ್ಮಕ ವಿಮರ್ಶದೃಷ್ಟಿಯನ್ನು ಬಿಟ್ಟು ವರ್ಣನಾತ್ಮಕ ವಿಮರ್ಶ ದೃಷ್ಟಿಯಿಂದ ಪರಿಶೀಲಿಸಿದರೆ ಹೆಚ್ಚಿನ ರಸಪ್ರಯೋಜನ ದೊರೆಯುವುದರಲ್ಲಿ ಸಂದೇಹವಿಲ್ಲ. ಆದರೆ ಇಲ್ಲಿ ಲೋಕಾಶ್ರಯವನ್ನು ತ್ಯಜಿಸಿದ ನಾವು ಕವಿಮನೋಲೋಕಾಶ್ರಯವನ್ನು ನೆಮ್ಮಿ ಮುಂಬರಿಯಬೇಕಾಗುತ್ತದೆ. ಏಕೆಂದರೆ ಪುರಾಣ ಕಥೆ ಚರಿತ್ರೆಯಲ್ಲಿ ಎಂದ ಮೇಲೆ ಅಲ್ಲಿ ಬರುವ ಯುದ್ಧವರ್ಣನೆ ಲೋಕನಿಷ್ಠವಾಗದೆ ಕವಿಪ್ರತಿಭಾನಿಷ್ಠವಾಗುತ್ತದೆ. ರಾಮರಾವಣರ ಯುದ್ಧ. ಕರ್ಣಾರ್ಜುನರ ಯುದ್ಧ, ಸ್ಕಂದತಾರಕರ ಯುದ್ಧ ಇತ್ಯಾದಿ ಯುದ್ಧಗಳನ್ನು ಅನೇಕ ಕವಿಗಳು ಬೇರೆಬೇರೆ ಕಾಲಗಳಲ್ಲಿ ಬೇರೆಬೇರೆ ದೇಶಗಳಲ್ಲಿ ಬೇರೆಬೇರೆ ಭಾಷೆಗಳಲ್ಲಿ ಅವರವರ ಪ್ರತಿಭೆ ವಿದ್ವತ್ತು ದರ್ಶನೋದ್ದೇಶಗಳಿಗನುಸಾರವಾಗಿ ಚಿತ್ರಿಸಿದ್ದಾರೆ, ಬಣ್ಣಿಸಿದ್ದಾರೆ; ತಮ್ಮತಮ್ಮ ಮನಕ್ಕೊಪ್ಪುವ ರೀತಿಯಲ್ಲಿ ಎನಿತೆನಿತೊ ಮಾರ್ಪಾಡುಗಳನ್ನೂ ಮಾಡಿಕೊಂಡಿದ್ದಾರೆ. ಹೀಗಿರುವಾಗ ಯಾವ ಕವಿಯ ಕಾವ್ಯವನ್ನು ನಮ್ಮ ವರ್ಣನಾತ್ಮಕ ವಿಮರ್ಶೆಗೆ ಆಧಾರವನ್ನಾಗಿ ಇಟ್ಟುಕೊಳ್ಳೋಣ? ‘ಪಂಚರಾತ್ರ’ ನಾಟಕದ ಕವಿ ಭಾರತಯುದ್ಧವೇ ನಡೆಯದಂತೆ ಎಗರಿಹೋಗುವ ಅವಕಾಶವನ್ನೆ ಕಲ್ಲಿಸಿದ್ದಾನೆ. ಜೈನರಾಮಾಯಣದ ಕವಿ ವಾಲ್ಮೀಕಿ ರಾಮಾಯಣದ ವ್ಯಕ್ತಿಗಳನ್ನೂ ಘಟನೆಗಳನ್ನೂ ಕೆಲವೊಮ್ಮೆ ನಾಮವಿನಾ ಗುರುತು ಸಿಕ್ಕದಂತೆ ಮಾರ್ಪಡಿಸುತ್ತಾನೆ. ಆದ್ದರಿಂದ ವರ್ಣನಾತ್ಮಕ ವಿಮರ್ಶೆಗಿರುವುದು ಒಂದೆ ದಾರಿ: ಬೇರೆಬೇರೆ ಕಾವ್ಯಗಳಲ್ಲಿ ಈ ಯುದ್ದಗಳನ್ನು ಆಯಾ ಕವಿಗಳು ಹೇಗೆ ಚಿತ್ರಿಸಿದ್ದಾರೆ? ಒಂದಕ್ಕಿಂತ ಒಂದರ ಸೊಗಸೇನು? ಮೇಲ್ಮೆಯೇನು? ಇತ್ಯಾದಿ ಇತ್ಯಾದಿ.

ಆದರೆ ಮೂರನೆಯ ದಾರಿಯೂ ಒಂದಿದೆ: ಅದು ದರ್ಶನಾತ್ಮಕ ವಿಮರ್ಶೆಯ ದಾರಿ, ಅದು ಚಾರಿತ್ರಕವಾದ ಸಂಶೋಧನೆಗೂ ಹೊರಡುವುದಿಲ್ಲ; ಬೇರೆಬೇರೆ ಕವಿಗಳ ಬೇರೆಬೇರೆ ಕಾವ್ಯಗಳಲ್ಲಿ ಹೇಗೆಹೇಗೆ ಚಿತ್ರಿತವಾಗಿದೆ ಎಂಬ ವರ್ಣನೆಗೂ ಹೊರಡುವುದಿಲ್ಲ. ದರ್ಶನಧ್ವನಿಯಿರುವ ಪ್ರತಿಮಾವಿಧಾನದ ಅತ್ಯುತ್ತಮ ಕವಿಕೃತಿಯನ್ನು ಆರಿಸಿಕೊಂಡು ಕಾವ್ಯಘಟನೆಯ ಹೃದಯದಲ್ಲಿ ಸ್ಪಂದಿಸುವ ನಿತ್ಯರಸಸತ್ಯವು ಸಹೃದಯ ಹೃದಯ ಸಂವೇದ್ಯವಾಗುವಂತೆ ದರ್ಶನಾತ್ಮಕ ವಿಮರ್ಶೆಗೆ ಹೊರಡುತ್ತದೆ.

ಹಾಗೆ ಹೊರಡುವುದಾದರೆ ವಾಲಿಸುಗ್ರೀವರ ಯುದ್ಧವನ್ನು- (ಯುದ್ಧ ಎನ್ನುವುದಕ್ಕಿಂತಲೂ ಕಾಳಗ ಎನ್ನುವುದು ಮೇಲು. ಏಕೆಂದರೆ ಯುದ್ಧ ಬಹು ವಿಸ್ತಾರವಾದ ದೊಡ್ಡ ಘಟನಾಪರಂಪರೆಯಾದರೆ, ಕಾಳಗ ಅದರ ಒಂದು ಸಣ್ಣ ಅಂಗ.)-ವಾಲಿಸುಗ್ರೀವರ ಕಾಳಗವನ್ನು ಯಾವ ದೃಷ್ಟಿಯಿಂದ ಪರಿಶೀಲಿಸಬಹುದು? ಅದಕ್ಕೇನು ಅರ್ಥಕೊಡಬಹುದು? ಯಾವ ಕವಿಯ ಯಾವ ಕಾವ್ಯವನ್ನು ನಾವು ನಿದರ್ಶನವಾಗಿ ಅತ್ಯಂತ ಮುಖ್ಯವಾಗಿ ಸ್ವೀಕರಿಸಬಹುದು?

ವಾಲಿಸುಗ್ರೀವರ ಕಾಳಗವನ್ನು ಪರಿಶೀಲಿಸಲು ಹೊರಡುವ ವಿಮರ್ಶಕನಿಗೆ ಆದಿ ಕವಿಯ ಆದಿಕಾವ್ಯವೇ ಅತ್ಯಂತ ಆದಿಯ ಆಧಾರವಾಗಿ ನಿಲ್ಲಬೇಕಾಗುತ್ತದೆ, ಉಳಿದೆಲ್ಲಕ್ಕೂ ಮೂಲವಾಗಿ.

ವಾಲ್ಮೀಕಿ ರಾಮಾಯಣದಲ್ಲಿ ವಾಲಿಸುಗ್ರೀವರ ಕಾಳಗಕ್ಕೆ ಪ್ರಖ್ಯಾತಿ ದೊರೆತಿದ್ದ ಪಕ್ಷದಲ್ಲಿ ಅದು ಯುದ್ಧದೃಷ್ಟಿಯಿಂದಲ್ಲ. ವಾಸ್ತವವಾಗಿ ಅಲ್ಲಿ ಯುದ್ಧ ವರ್ಣನೆ ಅತ್ಯಲ್ಪ ಮತ್ತು ಅತ್ಯಂತ ಅಮುಖ್ಯ. ಯುದ್ಧಕಾಂಡದಲ್ಲಿ ಬರುವ ವರ್ಣನೆಗಳಿಗೆ ಹೋಲಿಸಿದರೆ ಏನೇನೂ ಇಲ್ಲ. ಕೊನೆಗೆ ಘಟನಾ ದೃಷ್ಟಿಯಿಂದ ಅಷ್ಟೇನೂ ಪ್ರಮುಖವಲ್ಲದ ಖರದೂಷಣ ಸಂಹಾರಕಾಲದ ಯುದ್ಧವರ್ಣನೆ ಕೂಡ ವಾಲಿಸುಗ್ರೀವ ಯುದ್ಧವರ್ಣನೆಗಿಂತ ಎನಿತೊ ಪಾಲು ವಿವರವೂ ಆಗಿದೆ. ವಾಲಿಸುಗ್ರೀವರ ಕಾಳಗದಲ್ಲಿ ನಮ್ಮ ಆಸಕ್ತಿ ಕಾಳಗದಲ್ಲಿ ನಟ್ಟಿರುವುದಕ್ಕಿಂತಲೂ ವಿಶೇಷವಾಗಿ ವ್ಯಕ್ತಿಗಳಲ್ಲಿ ನಟ್ಟಿರುತ್ತದೆ. ಚೆನ್ನಾಗಿ ಬೆಳೆಸಿ ಕಾಳಗಕ್ಕಾಗಿಯೆ ಅಣಿಮಾಡಿದ ಎರಡು ಗೂಳಿಗಳಿಗೆ ಹಣಾಹಣಿಯಾಗುತ್ತಿದರೆ ನಮ್ಮ ಆಸಕ್ತಿ ಅವುಗಳ ಶಾರೀರಕ ಬಲಪ್ರದರ್ಶನದ ಮತ್ತು ಆ ಬಲದ ಯುಕ್ತಿ ವಿನ್ಯಾಸಗಳ ವೀರಲೀಲೆ ಇವುಗಳಲ್ಲಿ ಮಾತ್ರ ನಟ್ಟು ರಸಾಸ್ವಾದಿಯಾಗುತ್ತದೆ. ಆದರೆ ಇಲ್ಲಿ ನಾವು ವಾಲಿಸುಗ್ರೀವರ ದೈಹಿಕ ಬಲಪ್ರದರ್ಶನ ಚಾತುರ್ಯವನ್ನು ವೀಕ್ಷಿಸುವ ಪ್ರೇಕ್ಷಕರಾಗುವುದಿಲ್ಲ. ನಮ್ಮ ಕುತೂಹಲ ವಿಶೇಷವಾಗಿ ಸುಗ್ರೀವ ವಾಲಿ ರಾಮ ಇವರ ಮನೋವ್ಯಾಪಾರ ಮತ್ತು ಅದರಿಂದಾಗುವ ಪರಿಣಾಮಗಳ ಕಡೆಗೆ ಹೊರಳಿರುತ್ತವೆ. ಇಲ್ಲಿ ವೈರದ ನಡುವೆ ಅಣ್ಣತಮ್ಮಂದಿರ ಅಕ್ಕರೆ ಸಿಕ್ಕಿರುವುದನ್ನು ನಾವು ಮರೆಯುವುದಿಲ್ಲ. ಇಲ್ಲಿಯ ಗೆಲವು ಸೋಲುಗಳ ನಡುವೆ ಧರ್ಮಾಧರ್ಮದ ತಕ್ಕಡಿ ತೂಗುತ್ತಿರುವುದನ್ನು ಕಾಣುತ್ತಲೆ ಇರಬೇಕಾಗುತ್ತದೆ. ಇಲ್ಲಿಯ ಜಯೋತ್ಕರ್ಷದಲ್ಲಿಯೆ ಹೇಡಿತನಕ್ಕೂ ಕ್ಷಾತ್ರತೇಜಕ್ಕೂ ದ್ವಂದ್ವಯುದ್ಧ ನಡೆಯುತ್ತಿರುವುದನ್ನು ನಾವು ಅನುಭವಿಸಬೇಕಾಗುತ್ತದೆ. ಕಾಳಗದ ನಡುವೆಯೆ ಕಾಳಗಕ್ಕೆ ನೇರವಾಗಿ ಸಂಬಂಧವಿರದ ಸುಗ್ರೀವನ ವರ್ತನೆಯ ಕಡೆಗೂ ವಾಲಿಯ ಕಡೆಗೂ ರಾಮನ ವರ್ತನೆಯ ಕಡೆಗೂ ನಮ್ಮ ಮನಸ್ಸು ಓಲಾಡುತ್ತದೆ. ಇಲ್ಲಿಯ ಜಯಾಪಜಯ ಬರಿಯ ಜಯಕ್ಕಾಗಿಯಾಗಲಿ ಅಪಜಯಕ್ಕಾಗಿಯಾಗಲಿ ಮಾನ್ಯ ಅಥವಾ ಅವಮಾನ್ಯವಾಗುವುದಿಲ್ಲ. ನ್ಯಾಯಾನ್ಯಾಯಗಳು ನಡುವೆ ತಲೆಹಾಕಿ ತಕ್ಕಡಿಯ ಸಮತೆಯನ್ನು ತಲೆಕೆಳಗುಮಾಡಿ ನಮ್ಮ ಬುದ್ಧಿಗೆ ಗಡಿಬಿಡಿ ಉಂಟುಮಾಡದಿರುವುದಿಲ್ಲ.

ಸೀತಾಪಹರಣದ ಮಹಾದುಃಖದಿಂದ ಉನ್ಮತ್ತ ಪ್ರಾಯನಾಗಿದ್ದ ಶ್ರೀರಾಮಚಂದ್ರನು ಕಬಂಧನಿಂದಲೂ ಶಬರಿಯಿಂದಲೂ ಮುಂದೆ ತನಗೊದಗಲಿರುವ ನೆರವನ್ನು ತಿಲಿದು ಹಾರೈಸಿ ಋಷ್ಯಮೂಕದ ಬಳಿಯ ಪಂಪಾ ಸರೋವರದೆಡೆಗೆ ಬಂದಿದ್ದನು. ತನ್ನಂತೆಯೆ ಭಾರ್ಯಾಪಹರಣ ಕಾರಣದಿಂದಲೆ ಸಮದುಃಖಿಯಾಗಿದ್ದ ಸುಗ್ರೀವನ ಸಖ್ಯ ಆಂಜನೇಯನ ಮೂಲಕ ದೊರೆತೊಡನೆಯೆ ಅವನಿಗೊದಗಿದ ದುಃಖದ ಕತೆಯನ್ನು ಏಕಪಕ್ಷೀಯವಾಗಿ ಕೇಳಿ

“ವಾಲಿನಂ ತಂ ವಧಿಷ್ಯಾಮಿ ತವ ಭಾರ್ಯಾಪಹಾರಿಣಮ್”

ಎಂದು ಆಶ್ವಾಸನೆ ಕೊಟ್ಟುಬಿಡುತ್ತಾನೆ. ಆ ಸಂದರ್ಭದಲ್ಲಿಯೆ ಕವಿಯೂ

“ಸೀತಾ ಕಪೀಂದ್ರ ಕ್ಷಣದಾಚರಾಣಾಂ
ರಾಜೀವಹೇಮಜ್ವಲನೋಪಮಾನಿ
ಸುಗ್ರೀವ ರಾಮ ಪ್ರಣಯ ಪ್ರಸಂಗೇ
ವಾಮಾನಿ ನೇತ್ರಾಣಿ ಸಮಂ ಸ್ಫುರನ್ತಿ”

ಎಂದು ರಾಮನ ಪೂಣ್ಕೆಗೆ ವಿಧಿಯ ವಜ್ರಮುದ್ರೆಯನ್ನೊತ್ತುತ್ತಾನೆ. ತರುವಾಯವೆ ವಾಲಿಗೂ ಸುಗ್ರೀವನಿಗೂ ಒದಗಿದ ವೈರಕ್ಕೆ ಕಾರಣವಾದ ಕಥೆಯನ್ನೂ ಮುಂದೊದಗಿದ ವ್ಯಥೆಯನ್ನೂ ಅರಿತುಕೊಳ್ಳುತ್ತಾನೆ.

ತಮ್ಮನ್ನು ಬಿಲದ್ವಾರದಲ್ಲಿ ಕಾವಲಾಗಿರಿಸಿ, ಬಿಲಪ್ರವೇಶಮಾಡಿದ ರಕ್ಕಸನನ್ನು ಕೊಲಲೆಂದು ಬೆಂಬತ್ತಿ ಹೊಕ್ಕ ವಾಲಿ ಬಹಳಕಾಲ ಬರದಿರಲು, ಬಿಲದಿಂದುಕ್ಕಿದ ರಕ್ತಕ್ಕೆ ತನ್ನದೇ ಆದ ವ್ಯಾಖ್ಯಾನಮಾಡಿ, ಬಿಲದ ಬಾಯಿಗೆ ದೊಡ್ಡ ಬಂಡೆಯನ್ನು ಜಡಿದು ಮುಚ್ಚಿ ಹಿಂದಿರುವ ಸುಗ್ರೀವನು ಪದ್ಧತಿಯಂತೆ ಕಿಷ್ಕಂಧೆಗೆ ರಾಜನಾಗುತ್ತಾನೆ. ಸುಗ್ರೀವನ ಕಾರಣ ಎಷ್ಟೇ ಸಮರ್ಪಕವಾಗಿರಲಿ ಬಿಲದ ಬಾಯಿಗೆ ಹೆಬ್ಬಂಡೆಯನ್ನು ಇಡುಕಿ ಬಂದುದು ವಾಲಿಯ ಸಂಶಯಕ್ಕೂ ಕ್ರೋದಕ್ಕೂ ಕಾರಣವಾದುದು ಸ್ವಾಭಾವಿಕವೆ. ವಾಲಿಯೇನೋ ದುಡುಕಿದನು. ಆದರೆ ಇಲ್ಲಿ ರಾಮನೂ ದುಡುಕಿದಂತೆ ತೋರುತ್ತದೆ. ಮುಂದೆ ನಿರ್ವಿವಾದವಾಗಿ ತನಗೆ ಅಪರಾಧವೆಸಗಿದ ರಾವಣವನ್ನೂ ಕೂಡ ತಿದ್ದಲೂ ಒಳ್ಳೆಯ ದಾರಿಗೆ ತರಲೂ ಪ್ರಯತ್ನ ನಡೆಸಿದಂತೆ ಇಲ್ಲಿ ವಾಲಿಗೆ ತಿಳುಹುವ ಯಾವ ಪ್ರಯತ್ನವೂ ನಡೆಯದಿರುವುದನ್ನು ನೋಡಿದರೆ ಸೋಜಿಗವಾಗುತ್ತದೆ. ತಮ್ಮನ ಹೆಂಡತಿಯನ್ನು ಅಪಹರಿಸಿ ಭೋಗಿಸಿದುದು ಮಹಾಪರಾಧವೆಂದೂ ಅದಕ್ಕೇ ಶಿಕ್ಷೆಯೊದಗಿತೆಂದೂ ಮುಂದೆ ಶ್ರೀರಾಮನು ವಾಲಿಯ ಪ್ರಶ್ನೆಗೆ ಉತ್ತರ ಕೊಡುತ್ತಾನೆ. ಆದರೆ ವಾಲಿಯ ಮರಣಾಂತರ ತಾರೆಯನ್ನು ಎಂದರೆ ಅಣ್ಣನ ಹೆಂಡತಿಯನ್ನು ಸುಗ್ರೀವ ಎಂದರೆ ತಮ್ಮನೆ ಭೋಗಿಸುವುದನ್ನು ಶ್ರೀರಾಮನು ನಿಷೇಧಿಸದಿರುವುದನ್ನು ನೋಡಿದರೆ ನಮ್ಮ ನೀತಿದೃಷ್ಟಿ ದಿಗ್ಬ್ರಾಂತವಾಗದಿರುವುದಕ್ಕೆ ಸಾಧ್ಯವಿಲ್ಲ. ರಾಮನ ಕಡೆಯಿಂದ ಒಂದಿನಿತಾದರೂ ಸಂಧಾನಪ್ರಯತ್ನ ನಡೆದಿದ್ದರೆ ಬಹುಶಃ ದುರಂತ ತಪ್ಪುತ್ತಿತ್ತೋ ಏನೋ ಎನ್ನಿಸುತ್ತದೆ, ಓದುಗರ ಲೋಕಸಾಮಾನ್ಯಮತಿಗೆ.

ಸುಗ್ರೀವರಾಯರ ಸಖ್ಯವು ಅಗ್ನಿಸಾಕ್ಷಿಕವಾಗಿ ಪ್ರತಿಜ್ಞಾಮುದ್ರಿತವಾದ ತರುವಾಯ ಮುಂದಿನ ಕೆಲಸಕ್ಕಾಗಿ ಎಲ್ಲರೂ ಕಿಷ್ಕಿಂದೆಗೆ ಹೊರಡುತ್ತಾರೆ. ‘ವೃಕ್ಷೈರಾತ್ಮಾನಮಾವೃತ್ಯ ವ್ಯತಿಷ್ಠನ್ ಗಹನೇ ವನೇ’ ದಟ್ಟಡವಿಯಲ್ಲಿ ಮರಗಳ ಮರೆಯಲ್ಲಿ ಅಡಗಿಕೊಳ್ಳುತ್ತಾರೆ. ಆಹ್ವಾನಕಾರಣವಾದ ಸುಗ್ರೀವನ ಕಾಕನ್ನು ವಾಲಿ ‘ಬಾಸ್ಕರೋ ಅಸ್ತತಟಾದಿವ’ ಕ್ಷುದ್ರನಾಗಿ ಯುದ್ಧಸನದನದ್ಧನಾಗಿ ಬರುತ್ತಾನೆ. ಕವಿ ನಾಲ್ಕೇ ಪಂಕ್ತಿಗಳಲ್ಲಿ ಯುದ್ಧವನ್ನೆಲ್ಲ ಪೂರೈಸುತ್ತಾನೆ:

“ತತಃ ಸುತುಮುಲಂ ಯುದ್ಧಂ ವಾಲಿ ಸುಗ್ರೀವಯೋರಭೂತ್|
ಗಗನೇ ಗ್ರಹಯೋರ್ಘೋರಂ ಬುಧಾಂಗಾರಕಯೋರಿವ||
ತಲೈರಶನಿಕಲ್ಪೈಶ್ಚ ವಜ್ರಕಲ್ಪೈಶ್ಚ ಮುಷ್ಟಿಭಿಃ|
ಜಘ್ನತುಃ ಸಮರೇsನ್ಯೋನ್ಯಂ ಭ್ರಾತರೌ ಕ್ರೋಧಮೂರ್ಛಿತೌ”||

ವಾಲಿ ಸುಗ್ರೀವರ ಅನ್ಯೋನ್ಯ ಸಾದೃಶ್ಯದಿಂದ ದಿಕ್ಕುತೋರದೆ ಶ್ರೀರಾಮನು ತಟಸ್ಥನಾಗುತ್ತಾನೆ. ಜರ್ಜರೀಕೃತನಾದ ಸುಗ್ರೀವ ರಾಮ ಮೋಸಮಾಡಿದ ಎಂದು ತಿಳಿದು ಓಡಿಹೋಗಿ ಮತಂಗ ಮಹಾವನದಲ್ಲಿ ರಕ್ಷೆಪಡೆಯುತ್ತಾನೆ, ವಾಲಿ ಶಾಪಭಯದಿಂದ ಅದನ್ನು ಪ್ರವೇಶಿಸದೆ ‘ಬದುಕಿಕೊಂಡೆ ಹೋಗು!’ (ಮುಕ್ತೋ ಹ್ಯಸಿ ತ್ವಂ) ಎಂದು ಕಿಷ್ಕಿಂಧೆಗೆ ಹಿಂತಿರುಗುತ್ತಾನೆ.

ಆಮೇಲೆ ರಾಮನು ಮತಂಗವನಕ್ಕೆ ಹೋಗಿ ಸುಗ್ರೀವನನ್ನು ಕಂಡು ಕದ್ದಡಗಿದ ತಾನು ಬಾಣಪ್ರಯೋಗಮಾಡದೆ ಇದ್ದುದಕ್ಕೆ ಕಾರಣ ಹೇಳುತ್ತಾನೆ:

“ಅಲಂಕಾರೇಣ ವೇಷೇಣ ಪ್ರಮಾಣೇನ ಗತೇನ ಚ|
ತ್ವಂ ಚ ಸುಗ್ರೀವ ವಾಲೀ ಚ ಸದೃಶೌ ಸ್ಥಃ ಪರಸ್ಪರಮ್||
ತತೋsಹಂ ರೂಪಸಾದೃಶ್ಯಾನ್ಮೋಹಿತೋ ವಾನರೋತ್ತಮ|
ನೋತ್ಸೃಜಾಮಿ ಮಹಾವೇಗಂ ತಂ ಶತ್ರುನಿಬರ್ಹಣಂ||…
ತಸ್ಮಾದ್ ಯುಧ್ಯಸ್ವ ಭೂಯಸ್ತ್ಯಂ ಮಾ ಮಾ ಶಂಕೀಶ್ಚ ವಾನರ|”

‘ಮತ್ತೆ ಯುದ್ಧಮಾಡು; ಶಂಕಿಸಬೇಡ’ ಎಂದು ಭರವಸೆ ಕೊಡುತ್ತಾನೆ. ಕಾಳಗದ ಸಮಯದಲ್ಲಿ ಸುಗ್ರೀವನನ್ನು ಗುರುತಿಸುವುದಕ್ಕಾಗಿ ‘ಗಜಪುಷ್ಪ’ವೆಂಬ ಕಾಡು ಹುವಿನ ಬಳ್ಳಿಯೊಂದನ್ನು ‘ಮಾಲಯೇವ ಬಲಾಕಾನಾಂ ಸಸಂಧ್ಯಾ ಇವತೋಯದಃ’ ಅವನ ಕೊರಳಿಗೆ ತೊಡಿಸುತ್ತಾನೆ.

ಮತ್ತೆ ಎಲ್ಲರೂ ಕಿಷ್ಕಿಂಧೆಯ ಬಳಿಗೆ ಬರುತ್ತಾರೆ: ಮುನ್ನಿನಂತೆಯೆ ರಾಮಾದಿಗಳು ಅಡಗಿ ನಿಲ್ಲುತ್ತಾರೆ. ಸುಗ್ರೀವನ ಗರ್ಜನೆ ವಾಲಿಯನ್ನು ರಣಕ್ಕೆ ಆಹ್ವಾನಿಸುತ್ತದೆ. ತಾರೆ ಕಾಳಗ ಬೇಡವೆಂದು ಹಿತವಚನ ಹೇಳುತ್ತಾಳೆ.

‘ನ ಹಿ ತೇನ ಸಮಂ ಬಂಧುಂ ಭುವಿ ಪಶ್ಯಾಮಿ ಕಂಚನ’

ತಮ್ಮನಿಗಿಂತಲೂ ಹೆಚ್ಚಿನ ಬಂಧು ಭೂಮಿಯಲ್ಲಿಲ್ಲ ಎಂದು ಅಂಗಲಾಚುತ್ತಾಳೆ. ಅದರ ವೀರವ್ರತದ ವಾಲಿ “ಯುದ್ಧಕ್ಕೆ ಕರೆ ಬಂದಾಗ ಓಗೊಡದಿರುವುದೆಂತು? …ನಾನು ತಮ್ಮನನ್ನು ಗೆದ್ದು, ಅವನ ದರ್ಪವನ್ನು ಇಳಿಸಿ ಹಿಂತಿರುಗುತ್ತೇನೆಯೆ ಹೊರತು ಎಂದಿಗೂ ಅವನನ್ನು ಕೊಲ್ಲುವುದಿಲ್ಲ. ‘ದರ್ಪಮಸ್ಯ ವಿನೇಷ್ಯಾಮಿ ನ ಚ ಪ್ರಾಣೈರ್ವಿಯೋಕ್ಷತೇ.’ ರಾಮನಿಂದ ನನಗೆ ಅಪಾಯವಾಗುತ್ತದೆಂದು ಶಂಕಿಸಬೇಡ. ‘ನ ಚ ಕಾರ್ಯೋ ವಿಷಾದಸ್ತೇ ರಾಘವಂ ಪ್ರತಿ ಮತ್ಕೃತೇ| ಧರ್ಮಜ್ಞಶ್ಚ ಕೃತಜ್ಞಶ್ಚ ಕಥಂ ಪಾಪಂ ಕರಿಷ್ಯತಿ||’ ಧರ್ಮಜ್ಞನಾದ ಶ್ರೀರಾಮನು ಹೇಗೆ ತಾನೆ ಪಾಪಕಾರ್ಯ ಮಾಡುತ್ತಾನೆ” ಎಂದೆಲ್ಲ ಸಮಾಧಾನ ಹೇಳಿ ‘ಶತ್ರುದರ್ಶನಕಾಂಕ್ಷಿ’ಯಾಗಿ ಸುಗ್ರೀವನೆಡೆಗೆ ಧಾವಿಸುತ್ತಾನೆ. ಅಣ್ಣತಮ್ಮಂದಿರಿಗೆ ಎರಡನೆಯ ಸಾರಿ ಕೊನೆಯದಾಗಿ ದ್ವಂದ್ವಯುದ್ಧ ಪ್ರಾರಂಭವಾಗುತ್ತದೆ.

ಕವಿ ಆ ಯುದ್ಧವನ್ನು ಹದಿನೆಂಟಿಪ್ಪತ್ತು ಪಂಕ್ತಿಗಳಲ್ಲಿ ಸಾಂಪ್ರದಾಯಿಕವಾಗಿ ವರ್ಣಿಸುತ್ತಾನೆ. ಅವರು ವಾನರರಾದುದರಿಂದ ಅಸ್ತ್ರ ಶಸ್ತ್ರ ಧನುರ್ಬಾಣಾದಿಗಳ ಪ್ರಯೋಗದ ವರ್ಣನೆಯಿಲ್ಲ. ಕ್ಲಿಷ್ಟಮುಷ್ಟಿ, ಸಶಾಖವೃಕ್ಞ, ವಜ್ರನಖ, ಇವೇ ಆಯುಧಗಳಾಗಿ ಕಾಳಗ ಸಾಗುತ್ತದೆ. ಸಾಲತಾಡನ ವಿಹ್ವಲನಾಗಿ ವಾಲಿ ಸಾಗರದ ಮಧ್ಯೆ ಗುರುಭಾರಸಮಾಕ್ರಾಂತವಾದ ನೌಕೆಯಂತೆ ತತ್ತರಿಸುತ್ತಾನೆ. ವಾಲಿಯ ಪೆಟ್ಟಿಗೆ ಸುಗ್ರೀವನ ಮೈ ನೆತ್ತರುಕಾರಿ ಝರಿಹರಿಯುವ ಕೆಮ್ಮಣ್ಣು ಬೆಟ್ಟದಂತೆ ತೋರುತ್ತಾನೆ. ಬರಬರುತ್ತಾ ಮಂದವಿಕ್ರಮನಾದ ಸುಗ್ರೀವನು ರಾಮನು ಅಡಗಿ ನಿಂತಿದ್ದ ಅರಣ್ಯದ ದಿಕ್ಕಿಗೆ ಪದೇಪದೇ ನೋಡತೊಡಗುತ್ತಾನೆ.

“ವೃಕ್ಪೈಃ ಸಶಾಖೈಃ ಸಶಿಖೈರ್ವಜ್ರಕೋಟಿನಿಭೈರ್ನಖೈಃ|
ಮುಷ್ಟಿಭಿರ್ಜಾನುಭಿಃ ಪದ್ಭಿರ್ಬಾಹುಭಿಶ್ಚ ಪುನಃ ಪುನಃ|
ತಯೋರ್ಯುದ್ದಮಭೂದ್ ಘೋರಂ ವೃತ್ರವಾಸವಯೋರಿವ”||

ಇಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎನ್ನುವುದೂ ನಮಗೆ ಮುಖ್ಯವಾಗುವುದಿಲ್ಲ. ಶ್ರುತಪೌರುಷನಾದ ವಾಲಿಯ ವಿಚಾರವಾಗಿ ಸುಗ್ರೀವನಿಂದಲೆ ನಾವೆಲ್ಲವನ್ನೂ ತಿಳಿದಿದ್ದೇವೆ. ಸುಗ್ರೀವ ಸೋಲುವ ವಿಚಾರದಲ್ಲಿ ನಮಗೆ ಸಂಶಯವೆ ಇರುವುದಿಲ್ಲ. ಆದ್ದರಿಂದ ಕವಿ ಈ ಯುದ್ಧವನ್ನು ಏನೇನು ಉಪಮಾನಗಳಿಂದ ಎಷ್ಟೆಷ್ಟು ಬಣ್ಣಿಸಿದರೂ ನಮ್ಮ ಕಣ್ಣು ಅತ್ತ ತಿರುಗದೆ ಸುಗ್ರೀವನ ಕಣ್ಣಿನಂತೆ ಮತ್ತೆ ಮತ್ತೆ ‘ಮಹಾತೇಜ’ನಾದ ಕ್ಷತ್ರಿಯ ಧನುರ್ಧರನು ಅಡಗಿ ನಿಂತಿದ್ದ ಅಡವಿಯ ಕಡೆಗೇ ತಿರುಗಿ ತಿರುಗಿ ಅಲ್ಲಿಯೆ ನಟ್ಟು ಕಾತರವಾಗುತ್ತದೆ. ಅದೋ ಆ ಮರದ ಸಂಧಿಯಲ್ಲಿ ಹೆದೆಯೇರಿ ಸರಳು ಹೂಡಿದ ಬಿಲ್ಲನ್ನು ಸೆಳೆದು ಹಿಡಿದ ಭಯಂಕರ ಬಾಹುಮುಷ್ಟಿ! ಅಲ್ಲಿ ನಟ್ಟಿದೆ ನಮ್ಮ ಕಾತರದೃಷ್ಟಿ!

“ತಸ್ಯ ಜ್ಯಾತಲಘೋಷೇಣ ತ್ರಸ್ತಾಃ ಪತ್ರರಥೇಶ್ವರಾಃ|
ಪ್ರದುದ್ರುವುರ್ ಮೃಗಾಶ್ಚೈವ ಯುಗಾಂತ ಇವ ಮೋಹಿತಾಃ||
ಮುಕ್ತಸ್ತು ವಜ್ರನಿರ್ಘೋಷಃ ಪ್ರದೀಪ್ತಾಶನಿ ಸಂನಿಭಃ|
ರಾಘವೇಣ ಮಹಾಬಾಣೋ ವಾಲಿವಕ್ಷಸಿ ಪಾತಿತಃ||

ರಾಘವನ ಮಹಾಬಾಣ ವಾಲಿಯ ವಕ್ಷದಲ್ಲಿ ನಟ್ಟಿತು! ವಾಲಿ ಉರುಳಿದನು ಗತಶ್ರೀಯಾಗಿ, ವಿಚೇತನನಾಗಿ!

ಮುಗಿಯಿತಿಲ್ಲಿಗೆ ಯುದ್ಧ! ಪ್ರಖ್ಯಾತ ಪೌರಾಣಿಕ ಯುದ್ಧ! ವಿಮರ್ಶಕನಿಗೆ ಏಕೊ ಸಂಕೋಚವಾಗುತ್ತದೆ, ತಾನು ವರ್ಣಿಸಿದುದನ್ನು ‘ಪ್ರಖ್ಯಾತ ಪೌರಾಣಿಕ ಯುದ್ಧ! ವಿಮರ್ಶಕನಿಗೆ ಏಕೊ ಸಂಕೋಚವಾಗುತ್ತದೆ, ತಾನು ವರ್ಣಿಸಿದುದನ್ನು ‘ಪ್ರಖ್ಯಾತ ಪೌರಾಣಿಕ ಯುದ್ಧ’ ಎಂದು ಕರೆಯುವುದಕ್ಕೆ. ವಾಸ್ತವವಾಗಿ ವಾಲಿ ಸುಗ್ರೀವರ ಯುದ್ಧ ಯುದ್ಧಕ್ಕಾಗಿ ಪ್ರಖ್ಯಾತವಾಗಿಲ್ಲ. ರಾಮನ ಪಾತ್ರದ ಮೇಲೆ ಆಗಿರುವ ಪರಿಣಾಮಕ್ಕಾಗಿಯೆ ಅದು ಪ್ರಖ್ಯಾತವಾಗಿದೆ. ಆದರ್ಶ ಪುರುಷನಾದ ಶ್ರೀ ರಾಮನ ಆ ವರ್ತನೆ ನೀತಿಯ ಧರ್ಮದ ಅನೇಕ ಸಮಸ್ಯೆಗಳಿಗೆ ಎಡೆಗೊಡುತ್ತದೆ. ಆ ವಿಚಾರವಾಗಿ ಸ್ವಯಂ ವಾಲಿಯೆ ರಾಮನನ್ನು ಕಟು ವಿಚಾರಣೆಗೆ ಒಳಪಡಿಸಿ ಮೂದಲಿಸಿದ್ದಾನೆ. ಶ್ರೀರಾಮನು ಕೊಟ್ಟಿರುವ ಉತ್ತರಗಳಲ್ಲಿ ಬಹುಪಾಲು ‘ಹಿಟ್ಲರ್ ಮುಸೊಲಿನಿ’ಗಳು ಕೊಡಬಹುದಾದ ಉತ್ತರಗಳಂತೆ ಸರ್ವಾಧಿಕಾರ ಮನೋಭಾವದಿಂದ ತುಂಬಿವೆ. ಯಾರೆ ಆಗಲಿ ಎಷ್ಟೆ ಪ್ರಯತ್ನಿಸಲಿ ಲೋಕಸಾಮಾನ್ಯವಾದ ನೀತಿಯ ಮತ್ತು ಧರ್ಮದ ದೃಷ್ಟಿಗೆ ವಾಲ್ಮೀಕಿ ರಾಮಾಯಣದ ಶ್ರೀರಾಮನ ಈ ಸಂದಬ್ದ ವರ್ತನೆಯನ್ನು ಆದರ್ಶಪ್ರಾಯವೆಂದು ಸಮರ್ಥಿಸಲು ಸಾಧ್ಯವಾಗುವುದಿಲ್ಲ. ಬಹುಶಃ ಅನಿರ್ವಚನೀಯವಾದ ಭಗವಂತನ ಎಲ್ಲ ವ್ಯಾಪಾರಗಳಿಗೂ ಲೋಕಸಾಮಾನ್ಯ ರೀತಿಯಲ್ಲಿ ನಿರ್ವಚನ ಹೇಳಲು ಸಾಧ್ಯವಿಲ್ಲ ಎಂಬುದಕ್ಕೆ ಇದನ್ನೊಂದು ನಿದರ್ಶನವಾಗಿ ಇಟ್ಟುಕೊಂಡು ಸಮಾಧಾನ ಪಟ್ಟುಕೊಳ್ಳಬಹುದು! ಸಾಧ್ಯಾವಾದರೆ?

ಆದರೆ ಪ್ರತಿಮಾವಿಧಾನದ ದರ್ಶನಧ್ವನಿಯನ್ನು ಆಶ್ರಯಿಸುವ ಪುರ್ಣದೃಷ್ಟಿಗೆ ಅರ್ಥಸಾಧ್ಯವಾಗುವ ರೀತಿಯೂ ಒಂದಿವೆ ಎಂಬುದನ್ನು ನಾವು ಒಪ್ಪುತ್ತೇವೆ.

[1]

 


[1] ‘ಶ್ರೀ ರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ ಕಾಣಬಹುದು.