“ಮತ್ತೆ ಇದೇನು?
ಎಂದೆಂದಿಗೂ ನಿನಗಿದೆ ಗತಿಯೇನು?”
– ‘ಅವತಾರ’ ಕವನದಿಂದ

ಏಕಾಕಿಯಾಗಿ ನಿಂತು ಅನಂತ ನೀಲಾಕಾಶವನ್ನು ನೋಡುವಾಗ ನಮಗೊದಗುವ ಒಂದು ಭವ್ಯಶಾಂತಿಯ ಆಶೀರ್ವಾದವನ್ನು ಮನಸ್ಸಿಗೆ ತರುತ್ತದೆ ಪೂಜ್ಯ ಗಾಂಧೀಜಿಯ ಜೀವನ ಸ್ಮೃತಿ. ಅಲೆ ಅಲೆ ಅಲೆಯಾಗಿ, ಮಲೆ ಮಲೆಗಳನ್ನು ಹಬ್ಬಿತಬ್ಬಿ, ದಿಗಂತಗಳಲ್ಲಿಯೂ ಅವಿಶ್ರಾಂತವಾಗಿ ಶೋಭಿಸುವ ಮಹಾರಣ್ಯ ಶ್ರೇಣಿಯಿಂದ ಉದ್ದೀಪನವಾಗುವ ಒಂದು ಭೂಮಭಾವದಂತೆ ಭಕ್ತಿ ಗೌರವಗಳಿಗೆ ಆಸ್ಪದವಾಗಿದೆ ಆ ಲೋಕವಂದ್ಯನ ಬಾಳಿನ ರುಂದ್ರ ವಿಸ್ತೀರ್ಣ. ಬಾನಲ್ಲದೆ ಬೇರೆ ಅಂಚಿಲ್ಲದ ಹೆಗ್ಗಡಲಿನ ತೆರೆತೆರೆತೆರೆಯ ಸುದೃಢಚಂಚಲವಾದ ಬಹುಕರ್ಮಮಯ ಜೀವನದಂತೆ ನಿರಂತರ ನವೀನವಾದ ಸಾಹಸೋಲ್ಲಾಸದಿಂದ ಆತ್ಮಶ್ರೀದ್ಯೋತಕವಾಗಿದೆ ಆ ಚಿರಂಜೀವಿಯ ಅಮೃತಾತ್ಮಚರಿತೆ.

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯ ಬದುಕು ಸಾಮಾನ್ಯ ಮಾನವ ಕಲ್ಪನೆ ಸೋಲುವನಿತು ಯೋಜನ ಯೋಜನ ಯೋಜನ ಹಬ್ಬಿರುವ ಹಿಮಾಲಯ ಮಹಾಪರ್ವತ ಪಂಕ್ತಿಯೂ ಹಣೆಮಣಿಯುವಂತೆ ವಿಸ್ತಾರವಾದುದು, ದೀರ್ಘಾಯುತವಾದುದು, ಮಹೋತ್ತುಂಗವಾದುದು. ಆದರೆ ಅವರ ಬದುಕಿಗಿಂತಲೂ ಮಹೋನ್ನತವಾದುದು ಅವರ ಸಾವು. ಅವರ ಬದುಕಿನ ಬೃಹದ್ದೇವತಾಮಂದಿರಕ್ಕೆ ಕಲಶವಿಟ್ಟಂತಿದೆ ಅವರ ಸಾವು. ಅವರ ಬದುಕು ಹಿಮವತ್‌ಪರ್ವತದಂತಿದ್ದರೆ ಅವರ ಸಾವು ಅದರ ಅತ್ಯುನ್ನತ ಶಿಖರಗಳಾದ ಗೌರೀಶಂಕರ ಧವಳಗಿರಿಗಳನ್ನೂ ಮೀರಿ ಮೇಘಚುಂಬಿಯಾಗಿ ವ್ಯೋಮಾತೀತವಾಗಿ ದಿವೌಕಸವಾಗಿದೆ. ಆ ಜಗದ್ಗುರು ಮೃತಿಯಿಂದಲೆ ಅಮೃತರಾಗಿದ್ದಾರೆ. ಅವರನ್ನು ಪಡೆದು ಮೃತ್ಯು ಧನ್ಯವಾಗಿದೆ, ಅತ್ಯಂತ ಶ್ರೀಮಂತವಾಗಿದೆ. ಅವರಿರುವ ಆ ಲೋಕ ನಮಗೆ ಇನ್ನೆಂದಿಗೂ ಅಪ್ರಿಯವಾಗಲಾರದು. ಆ ಲೋಕದಲ್ಲಿ ನಾವು ಇನ್ನೆಂದಿಗೂ ತಬ್ಬಲಿಗಳಲ್ಲಿ. ನಮಗಿನ್ನು ಮೃತ್ಯುಭಯ ಇಲ್ಲ; ನಮಗಿನ್ನು ಮರಣಭಯ ಸಲ್ಲ.

ಯಾರ ಬದುಕು ಆತ್ಮಯಜ್ಞಪರಂಪರೆಗಳಿಂದ ವಿರಾಜಿತವಾಗಿದೆಯೋ ಆ ತ್ಯಾಗಮೂರ್ತಿಗೆ ಸಾವು ವಿನಷ್ಟಿಯಲ್ಲ. ಯಾರ ಬದುಕೆಲ್ಲ ಒಂದು ಸುದೀರ್ಘ ಕ್ಷಮಾಸೇತುವೆಯ ಕೋಟಿ ಕಮಾನುಗಳಂತೆ ರಂಜಿಸುತ್ತಿದೆಯೋ ಅಂತಹ ದಯಾಮೂರ್ತಿಗೆ ಸಾವು ಎಂದಿಗೂ ಹತ್ಯೆಯಲ್ಲ. ಯಾರ ಜೀವಿತ ಸರ್ವವೂ ಸತ್ಯ ಅಹಿಂಸೆ ಪ್ರೇಮ ಶಾಂತಿಗಳ ಪುಣ್ಯಪ್ರಸರಣದಲ್ಲಿಯೆ ವ್ಯಯವಾಯಿತೋ ಅಂತಹ ಶಾಂತಸಿದ್ಧನಿಗೆ ಮೃತ್ಯು ಎಂದಿಗೂ ಅಶಾಂತಿಯಲ್ಲ. ಅಂತಹ ಚೇತನಕ್ಕೆ ಶಾಂತಿ ಕೋರುವುದು ಬರಿಯ ಒಂದು ಮಾನುಷ್ಯಮಾತ್ರ ಶಿಷ್ಟಾಚಾರ. ನಾವಿಲ್ಲಿ ಇಂದು ನೆರೆದಿರುವುದು ಅವರ ಮಂಗಳಮಯ ಪುಣ್ಯಸ್ಮರಣೆಗೆ ಭಕ್ತಿ ಗೌರವಗಳನ್ನು ಸಮರ್ಪಿಸಿ “ಹೇ ಲೋಕಗುರು, ನಮ್ಮ ಮುನ್ನಡೆಗೆ ಮಾರ್ಗದರ್ಶಕ ಪರಂಜ್ಯೋತಿಯಾಗು. ಕವಿದಿರುವ ಈ ಕತ್ತಲೆಯಲ್ಲಿ ನಿನ್ನ ಕಿರಣ ಹಸ್ತದಿಂದ ನಮ್ಮನ್ನು ಕೈಹಿಡಿದು ನಡಸು. ನಮ್ಮ ಹೃದಯದಲ್ಲಿ ಹೆಡೆಯೆತ್ತುವ ಕ್ರೋಧ ಹಿಂಸೆ ಪ್ರತೀಕಾರಾದಿ ಅಹಂಕಾರ ಸರ್ಪಗಳಿಗೆ ಗರುಡಮಣಿಯಾಗಿ ನಮ್ಮನ್ನು ರಕ್ಷಿಸು. ಆಸತ್ತಿನಿಂದ ಸತ್ತಿಗೆ. ತಮಸ್ಸಿನಿಂದ ಜ್ಯೋತಿಗೆ, ಮೃತ್ಯುವಿನಿಂದ ಅಮೃತಕ್ಕೆ ನಮ್ಮನ್ನು ಕೊಂಡೊಯ್‌” ಎಂದು ಅವರನ್ನು ಪ್ರಾರ್ಥಿಸುವುದಕ್ಕೆ. ಸರ್ವ ಧರ್ಮ ಸಮನ್ವಯಕ್ಕಾಗಿ, ಸರ್ವ ಜಾತೀಯ ಸೌಹಾರ್ದಕ್ಕಾಗಿ, ಸರ್ವ ಜನತಾ ಹೃನ್‌ಮೈತ್ರಿಗಾಗಿ ಅನವರತವೂ ತಪಸ್ವಿಗಳಾಗಿದ್ದ ಜಗದ್‌ವಿಭೂತಿ ಗಾಂಧೀಜಿಯ ಇಹಜೀವನದ ಕೊಟ್ಟಕೊನೆಯ ಮರಣರೂಪದ ಉತ್ತಮೋತ್ತಮ ಯಜ್ಞದ ದಿವ್ಯ ಸ್ಮರಣೆಗೆ ನಮ್ಮ ಆರಾಧನೆಯೆ ಕಾಣಿಕೆಯನ್ನು ಸಲ್ಲಿಸಿ ಧನ್ಯರಾಗುವುದಕ್ಕಾಗಿ ನಾವಿಲ್ಲಿ ನೆರೆದಿದ್ದೇವೆ.

ಅಷ್ಟಲ್ಲದೆ ಮತ್ತೇನು? ಮಹಾತ್ಮಾಜಿಯ ಮರಣವನ್ನು ದುರ್ಮರಣ ಎಂದು ಕರೆಯುವುದು ಅಜ್ಞಾನದ ಮಾತು. ಲೋಕದಲ್ಲಿ ಅಂತಹ ಸಾವಿನ ಸುಕೃತ ಲಭಿಸುವುದು ಭಗವತ್‌ಕೃಪೆಯಿಂದ ಎಲ್ಲಿಯೋ ಒಬ್ಬಿಬ್ಬರಿಗೆ ಮಾತ್ರ. ಅವರು ರೋಗಗ್ರಸ್ತರಾಗಿ ಸತ್ತವರಲ್ಲ; ಚಿಕಿತ್ಸೆಗೊಳಗಾಗಿ ವೈದ್ಯರಿಂದಾಗಲಿ ಔಷಧಿಗಳಿಂದಾಗಲಿ ಪೀಡಿತರಾಗಿ ಮಡಿಯಲಿಲ್ಲ. ಲೋಭವಿಷಯಾಸಕ್ತರಾಗಿರುವಾಗ ಹೃದಯಸ್ತಂಭನದಿಂದ ಸಾಯಲಿಲ್ಲ. ಸಂಕುಚಿತಭಾವ ಪ್ರೇರಿತವಾದ ಪಕ್ಷ ವಿಪಕ್ಷಗಳ ಕ್ಷುದ್ರವಾದ ಹೋರಾಟದಲ್ಲಿ ಸಿಕ್ಕಿ ಪ್ರಾಣತ್ಯಾಗ ಮಾಡಿದವರಲ್ಲ. ಹಿಟ್ಲರನಂತೆ ಸತ್ತವರಲ್ಲ; ಮುಸ್ಸೋಲಿನಿಯಂತೆ ಮಡಿಯಲಿಲ್ಲ. ಸಾಕ್ರೆಟೀಸನಂತೆ ಸಾವನ್ನಪ್ಪಿದರು; ಯೇಸು ಕ್ರಿಸ್ತನಂತೆ ಶಿಲುಬೆಗೇರಿದರು. ಲೋಕಸೇವೆಯಲ್ಲಿ ತೊಡಗಿರುವಾಗ, ಪ್ರಾರ್ಥನಾ ಸಭೆಗೆ ಹೋಗುತ್ತಿರುವಾಗ, ಸಮಸ್ತ ಪ್ರಜ್ಞೆಯೂ ಮಾನವ ಕಲ್ಯಾಣಕ್ಕಾಗಿ ಭಗವನ್ಮುಖವಾಗುತ್ತಿರುವಾಗ, ಏನು ನಡೆದರೂ ಈಶ್ವರೇಚ್ಛೆ ಎಂದು ಎದೆತೆರೆದು ನಿಂತಿರುವಾಗ, ರಾಮ ರಾಮ ಎಂದು ತಮ್ಮ ನಚ್ಚಿನ ಮಹಾಮಂತ್ರವನ್ನು ಉಚ್ಚರಿಸುತ್ತಾ, ಲೋಕಕಂಠದ ದುಃಖ ದಿಗ್‌ಭ್ರಾಂತಿ ಜನ್ಯ ಚೀತ್ಕಾರ ಹಾಹಾಕಾರಗಳ ಮಧ್ಯೆ, ತಮ್ಮ ಬಾಳುವೆಯನ್ನು ದಿವ್ಯಾಗ್ನಿಗೆ ಬೇಳುವೆಯಾಗಿ ನೀಡಿದರು. ಬೆನ್‌ದಿರುಹದೆ  ರಣವೀರನಂತೆ ಗುಂಡಿಗೆ ಗುಂಡಿಗೆಯೊಡ್ಡಿ ದೇಹವಿಸರ್ಜನೆ ಮಾಡಿದರು. ಎಂತಹ ವೀರ ಯೋಧನ ವಕ್ಷವೂ ಕರುಬುವಂತಿತ್ತಂತೆ ಬಾಪೂಜಿಯ ರಕ್ತಾಂಕಿತವಾದ ಪಕ್ಷ. ಅವರ ಬದುಕಿನ ವಿಷಯದಲ್ಲಿಯೂ ಅದೇ ಮಾತನ್ನು ಹೇಳಬಹುದು. ಎಂತಹ ತ್ರಿಲೋಕ ವೀರಯೋಧನೂ ಕರುಬುವಂತಿದೆ ಅವರ ಜೀವನ ಕಥೆ! ದೇವರು ಇಚ್ಛಿಸಿದಾಗಲೆ ಅವರನ್ನು ಕರದೊಯ್ದಿದ್ದಾನೆ. ತಾತ್ಕಾಲಿಕವಾದ ನಮ್ಮ ಕುಬ್ಜ ದೃಷ್ಟಿಗೆ ಭಯಂಕರ ದುರ್ಘಟನೆಯಾಗಿ ತೋರುವ ಈ ಲೋಕ ಶೋಕದ  ಅಪಮೃತ್ಯುವಿನ ಬದ್ದಾಂಜಲಿಯಲ್ಲಿ ಯಾವ ಅಮೃತಕುಂಭ ಗುಪ್ತವಾಗಿದೆಯೋ ಹೇಳಬಲ್ಲವರಾರು?

ಅವರು ದೇಹತ್ಯಾಗ ಮಾಡಿದ ಈ ಹನ್ನೆರಡು ಹದಿಮೂರು ದಿವಸಗಳಲ್ಲಿಯೆ ಅವರ ಹೃದಯದಿಂದ ಚಿಮ್ಮಿದ ರಕ್ತಧಾರೆಯಿಂದ ಅಮೃತ ಭಾಗೀರಥಿಯರು ಮೂಡುತ್ತಿರುವುದನ್ನು ನೋಡುತ್ತಿದ್ದೇವೆ. ತಾತ್ಕಾಲಿಕವೋ ಚಿರಕಾಲಿಕವೋ ಹೇಳಲು ಸಾಧ್ಯವಿಲ್ಲವಾದರೂ ಹಿಂಸೆ ದ್ವೇಷ ಅಸೂಯೆ ಅಪನಂಬಿಕೆಯ ಅಸುರೀ ಶಕ್ತಿಗಳು ನಾಚಿ ತಲೆತಗ್ಗಿಸಿ ದೈವೀಶಕ್ತಿಗಳಾದ ಸ್ನೇಹ ಸೌಹಾರ್ದ ಸಹಾನೂಭೂತಿಗಳಿಗೆ ಎಡೆಗೊಡುತ್ತಿರುವ ಮಂಗಳವಾರ್ತೆಯನ್ನು ಪತ್ರಿಕೆಗಳು ದಿನ ದಿನವೂ ಘೋಷಿಸುತ್ತಿವೆ. ಭರತಖಂಡದ ರಾಜಧಾನಿಯಲ್ಲಿ ರಾಜಗೌರವಪೂರ್ವಕವಾಗಿ ನಡೆದ ಗಾಂಧೀಜಿಯ ಕಳೇಬರದ ಶ್ಮಶಾನಯಾತ್ರೆಯಲ್ಲಿ ಹಿಂದೂವಿನ ಕಣ್ಣೀರು ಮುಸಲ್ಮಾನನ ಕಣ್ಣೀರಿನೊಡನೆ ಸಂಗಮಿಸಿ, ಮುಸಲ್ಮಾನನ ಕಂಬನಿ ಸಿಖ್ಖನ ಕಂಬನಿಯೊಡನೆ ಸಂಗಮಿಸಿ,  ಹಿಂದು ಮುಸಲ್ಮಾನ ಸಿಖ್ಖರು ತಮ್ಮ ಶೋಕಾಶ್ರುಗಳಿಂದಲೆ ಪಾವನತರವಾದ ತ್ರಿವೇಣೀ ಸಂಗಮವನ್ನು ನಿರ್ಮಿಸಿದ್ದಾರೆ. ಆ ತ್ರಿವೇಣಿತೀರ್ಥದಲ್ಲಿ ಎಲ್ಲ ಮತದವರೂ ಮಿಂದು ಪರಿಶುದ್ಧರಾಗುತ್ತಿದ್ದಾರೆ. ಇಂದು ಪೂಜ್ಯ ಗಾಂಧೀಜಿಯ ಭಸ್ಮಾಸ್ಥಿರೂಪವಾದ ಅವಶೇಷವನ್ನು ಒಳಕೊಂಡು ಸುತೀರ್ಥವಾದ ಪ್ರಯಾಗಕ್ಷೇತ್ರದ ತ್ರಿವೇಣೀ ತೀರ್ಥವು ಆ ದಿವ್ಯತರ ಅಶ್ರು ತ್ರಿವೇಣೀ ಸಂಗಮಕ್ಕೆ ಪ್ರತಿಮಾಮಾತ್ರವಾಗಿದೆ. ಪ್ರಪಂಚದ ಪ್ರಥಮ ಶಾಂತಿದೂತನಿಗಾದ ಗತಿಯೇ ಅದರ ದ್ವಿತೀಯ ಶಾಂತಿದೂತನಿಗೂ ಆಯಿತೆಂದು ಕ್ರೈಸ್ತ ಬಾಂಧವರು ವಿನಮ್ರರಾಗಿದ್ದಾರೆ. ದೆಹಲಿಯ ಮುಸಲ್ಮಾನ ಸಹೋದರರು ತಮ್ಮ ಕ್ಷೇಮಕ್ಕಾಗಿಯೇ ಪ್ರಾಣಾರ್ಪಣ ಮಾಡಿದ ಹುತಾತ್ಮಾ ಗಾಂಧೀಜಿಯ ಭಸ್ಮಾವಶೇಷವನ್ನು ಜುಮ್ಮಾ ಮಸೀದಿಯೆಡೆಯಲ್ಲಿ ಸಮಾಧಿ ಮಾಡಿ ಚೈತ್ಯಮಂದಿರವನ್ನು ರಚಿಸಲು ಸಂಕಲ್ಪಮಾಡಿದ್ದಾರೆಂಬ  ವಾರ್ತೆಯನ್ನು ಕೇಳಿ ಎಂತಹವನ ಹೃದಯದಲ್ಲಿಯೂ ಹಾಲುಕ್ಕದಿರುವುದಿಲ್ಲ. ಎಲ್ಲ ಮತಗಳವರೂ, ತಮ್ಮ ಭೇದಗಳೇನೆ ಇರಲಿ, ಏಕಕಂಠದಿಂದ ತಂತಮ್ಮ ಕೃತಜ್ಞತೆಯನ್ನೂ ಸತ್ಯ ಪ್ರತಿಜ್ಞೆಯನ್ನು ಘೋಷಿಸುತ್ತಿದ್ದಾರೆ. ಪ್ರಪಂಚದ ಮೂಲೆಮೂಲೆಗಳಿಂದ, ಬಹುದೂರದ ಅಜ್ಞಾತ ಪ್ರಾಂತಗಳಿಂದ, ರೈತ ರಾಜ ಚಕ್ರವರ್ತಿ ರಾಷ್ಟ್ರಾಧ್ಯಕ್ಷ ಕಾರ್ಮಿಕ ಧಾರ್ಮಿಕ ಎಂಬ ಭೇದವಿಲ್ಲದೆ ಲಕ್ಷಲಕ್ಷ ದುಃಖದಗ್ಧ ಹೃದಯಗಳಿಂದೆದ್ದ ಕೋಟಿಕೋಟಿ ಶೋಕವಾಣಿಗಳು ಹಿಂಸೆಗೆ ಆಹುತಿಯಾದ ಅಹಿಂಸಾ ಪ್ರವಾದಿಯ ಸ್ತೋತ್ರಗಾನಗೆಯ್ಯುತ್ತಿವೆ. ಆಳಾಳಿನ ಎದೆಗುಹೆಯಲ್ಲಿ ಹುದುಗಿರುವ ದೈವೀಶಕ್ತಿ ತನ್ನನ್ನು ಅಪ್ಪಳಿಸಿದ ಆಸುರೀಶಕ್ತಿಯನ್ನು ದಮನಮಾಡಲು ದೃಢಪ್ರತಿಜ್ಞಾ ರೂಢವಾಗುತ್ತಿದೆ. ಬಹುಶಃ ಮಹಾತ್ಮರು ಹುತಾತ್ಮರೂ ಅದಲ್ಲದೆ ನರಚೇತನ ತನ್ನ ತಮೋನಿದ್ರೆಯಿಂದ ಎಚ್ಚರಲಾರದೆಂದು ತೋರುತ್ತದೆ. ಮಹಾತ್ಮರು ತಮ್ಮ ಜೀವಿತಕಾಲದಲ್ಲಿ ಹೊತ್ತಿಸಿದ ಧರ್ಮಜ್ಯೋತಿ ಹುತಾತ್ಮರಾದ ಅವರ ರಕ್ತತೈಲದಿಂದಲೆ ಪೋಷಿತವಾಗಿ, ಉಜ್ವಲತರವಾಗಿ, ತನ್ನ ಭಗವದ್‌ದೀಪ್ತಿಯನ್ನು ಬೀರುತ್ತಾ, ಲೋಕದ ತಮಸ್ಸು ಸತ್ಯಕ್ಕೆ ಶರಣಾಗುವವರೆಗೂ ವಿಶ್ರಮಿಸುವುದಿಲ್ಲ. ಆಸುರೀಶಕ್ತಿ ತನ್ನ ಕ್ರೂರವರ್ತನೆಯಿಂದಲೆ ದೈವಿಶಕ್ತಿಯನ್ನು ಪ್ರೋಜ್ವಲಗೊಳಿಸುತ್ತದೆ. ನಾವೆಲ್ಲರೂ, ಸಾಮೂಹಿಕವಾಗಿಯೂ ವೈಯಕ್ತಿಕವಾಗಿಯೂ, ಅಸುರೀಶಕ್ತಿಗಳ ದಮನಕ್ಕೂ ದೈವೀಶಕ್ತಿಗಳ ಉತ್ಥಾನಕ್ಕೂ ಶ್ರಮಿಸುತ್ತೇವೆ ಎಂದು ಪ್ರಾರ್ಥನಾಬದ್ದರಾದರೆ ಮಾತ್ರ ಗಾಂಧೀಜಿಯ ಮಹಾತ್ಯಾಗ ಸಾರ್ಥಕವಾಗುತ್ತದೆ;  ಅವರ ಮಹಜ್ಜೀವನ ಸಫಲವಾಗುತ್ತದೆ; ಸಂತುಷ್ಟವಾದ ಅವರ ದಿವ್ಯಚೇತನ ನಮಗೆ ಕೃಪಾಪೂರ್ಣವಾಗುತ್ತದೆ. ಯಾರ ಉಸಿರು ದಿನವೂ ನಾವು ತಿನ್ನುವ ಉಪ್ಪು ಅನ್ನದಿಂದ ಹಿಡಿದು ನಾವು ಧ್ಯಾನಿಸುವ ಪರಮಾತ್ಮನವರೆಗೂ ವ್ಯಾಪಿಸಿ, ನಮ್ಮ ಬಾಳ್‌ಬಟ್ಟೆಯ ಎಳೆಎಳೆಯಲ್ಲೂ ಹಾಸುಹೊಕ್ಕಾಗಿದೆಯೊ ಅಂತಹವರ ದೇಹತ್ಯಾಗ ಸಾವಲ್ಲ ಎಂಬುದನ್ನು ನಮ್ಮ ವರ್ತನೆಯಿಂದ ಸ್ಥಾಪಿಸಿ ಧನ್ಯರಾಗೋಣ.

ಅಲ್ಪಗಾತ್ರವಾಗಿದ್ದ ಗಾಂಧೀಜಿಯ ಕಳೇಬರ ಇಂದು ಭೂಮವಾಗಿದೆ; ವಿರಾಡ್ರೂಪಿಯಾಗಿದೆ. ಅದು ಭರತಖಂಡವನ್ನೆಲ್ಲ ಆಕ್ರಮಿಸಿ ತನ್ನ ಪ್ರಭಾವಳಿಯಿಂದ  ಪ್ರಪಂಚವನ್ನೂ ಆಲಿಂಗಿಸಿದೆ. ನಮ್ಮ ರಾಷ್ಟ್ರದ ಪುಣ್ಯನದಿಗಳೆಲ್ಲ ಅವರ ಅವಶೇಷವನ್ನು ಹೊತ್ತ ಹೆಮ್ಮೆಗೆ ಹಿಗ್ಗಿ ಉಲ್ಲೋಲಕಲ್ಲೋಲವಾಗಿ ಸಾಗರೇಶ್ವರನೆಡೆಗೆ ಸಾಗುತ್ತಿವೆ. ಅವರ ದಿವ್ಯ ಚಿತೆಯ ಬೂದಿ ಎಲ್ಲೆಲ್ಲಿಯೂ ಹರಡಿ ಭರತವರ್ಷದ ಮೃತ್ತಿಕೆಯನ್ನು ಪವಿತ್ರತರವನ್ನಾಗಿ ಮಾಡಿದೆ. ಮಹಾತ್ಮರು ಬೂದಿಯಲ್ಲಿಯೂ ಬೆಂಕಿ ಎಂಬುದನ್ನು ನೆನೆದರೆ ಆ ಅಗ್ನಿಕುಂಡದಲ್ಲಿ ನಮ್ಮ ಕೊಳೆಕಸಗಳೆಲ್ಲ ಸುಟ್ಟುಹೋಗುವುದರಲ್ಲಿ ಸಂದೇಹವಿಲ್ಲ. ಅಸ್ಪೃಶ್ಯತೆ, ಜಾತಿಮಾತ್ಸರ್ಯ, ವರ್ಣದ್ವೇಷ, ಆವಶ್ಯಕವಾಗಿರುವುದಕ್ಕಿಂತಲೂ ಹೆಚ್ಚಾದ ಪ್ರಾಂತೀಯತಾಸ್ಪರ್ಧೆ, ಶ್ರೀಮಂತ ದರಿದ್ರ ಭಿನ್ನತೆ, ಕ್ರೌರ್ಯಪ್ರತೀಕಾರ ಮನೋಧರ್ಮ-ಇವೆಲ್ಲವೂ ಅವರ ಚಿತಾಗ್ನಿಯಲ್ಲಿ ದಹಿಸಿಹೋಗಲಿ ಎಂದು ಪ್ರಾರ್ಥಿಸೋಣ.

ನಮ್ಮ ಪುಣ್ಯನದಿಗಳಿಂದು ಗಾಂಧಿ ಗಾಂಧಿ ಗಾಂಧಿ ಎಂದು ಕಲ್ಲೋಲರವದಿಂದ ಹರಿಯುತ್ತಿವೆ. ನಮ್ಮ ಹಕ್ಕಿಗಳೆಲ್ಲ ಮಹಾತ್ಮಾ ಗಾಂಧಿಗೆ ಜಯ್ ಎಂದು ಉಲಿಯುತ್ತಿವೆ. ನಮ್ಮ ಅನಿಲದೇವ ಗಾಂಧೀಜಿಯ ಗಂಧಚಿತೆಯ ಸುಗಂಧವನ್ನು ಹೊತ್ತು ಆನಂದೋನ್ಮತ್ತನಾಗಿ ಬೀಸುತ್ತಿದ್ದಾನೆ. ನಮ್ಮ ಅಗ್ನಿದೇವ ಮಹಾತ್ಮರ ಪವಿತ್ರ ಕಳೇಬರವನ್ನು ದಹಿಸಿದ ಪುಣ್ಯಕರ್ತವ್ಯಕರ್ಮದಿಂದ ಕೃತನಾಗಿ ಭವ್ಯತರನಾಗಿದ್ದಾನೆ! ಪುತ್ರಸರ್ವೋತ್ತಮನಾದ ಗಾಂಧೀಜಿಯನ್ನು ಹೆತ್ತು ಹೊತ್ತು ಭಾರತಾಂಬೆಯ ಪಾದಪ್ರಕ್ಷಾಲನ ಪುಣ್ಯಕಾರ್ಯದಿಂದ ಭಾವೋನ್ಮತ್ತನಾಗಿ ಸಮುದ್ರರಾಜನು ತರಂಗತರಂಗಗಳಲ್ಲಿಯೂ ಸಗದ್ಗದ ಕಂಠನಾಗಿದ್ದಾನೆ. ಏಕೆಂದರೆ, ಇದು ದಿಟವಾಗಿಯೂ ವಿರಾಡ್‌ಘಟನೆ, ಸಮಸ್ತ ಪೃಥ್ವೀಚೇತನವನ್ನೂ ಊರ್ಧ್ವಮುಖವಾಗಿಸುವ ವಿರಾಡ್‌ಘಟನೆ!

ಭಕ್ತಿಮಹಿಮೆಯನ್ನು ಕಂಡು ಹೇಳುವ ನಾರದಮಹರ್ಷಿಗಳ ಪೂಜ್ಯವಾಣಿ ಪ್ರಮಾಣಪುರುಷರಾದ ಮಹಾತ್ಮಾ ಗಾಂಧೀಜಿಗೆ ಸಂಪೂರ್ಣವಾಗಿ ಅನ್ವಯಿಸುತ್ತದೆ. “ತೀರ್ಥೀಕುರ್ವಂತಿ ತೀರ್ಥಾನಿ; ಸುಕರ್ಮೀ ಕುರ್ವಂತಿ ಕರ್ಮಾಣಿ; ಸಚ್ಛಾಸ್ತ್ರಿ ಕುರ್ವಂತಿ ಶಾಸ್ತ್ರಾಣಿ. ನಾಸ್ತಿ ತೇಷು ಜಾತಿ ವಿದ್ಯಾ ರೂಪ ಕುಲಧನ ಕ್ರಿಯಾದಿ ಭೇದಃ.”

“ತೀರ್ಥಗಳನ್ನು ಸುತೀರ್ಥಗಳನ್ನಾಗಿ ಮಾಡುತ್ತಾರೆ; ಕರ್ಮಗಳನ್ನು ಸುಕರ್ಮಗಳನ್ನಾಗಿ ಮಾಡುತ್ತಾರೆ; ಶಾಸ್ತ್ರಗಳನ್ನು ಸಚ್ಛಾಸ್ತ್ರಗಳನ್ನಾಗಿ ಮಾಡುತ್ತಾರೆ; ಅವರಲ್ಲಿ ಜಾತಿ ವಿದ್ಯೆ ರೂಪ ಕುಲ ಧನ ಕ್ರಿಯಾದಿ ಭೇದಗಳಿಲ್ಲ.”

ಆರು ತಿಂಗಳ ಹಿಂದೆ ಭರತವರ್ಷದ ಸ್ವಾತಂತ್ಯ್ರೋದಯದ ಮಹಾ ಮುಹೂರ್ತದಲ್ಲಿ ಸ್ವಾತಂತ್ಯ್ರ ಶಿಲ್ಪಿ ಮಹಾತ್ಮ ಗಾಂಧೀಜಿಯನ್ನು ನಿರ್ದೇಶಿಸಿ ಬರೆದ ಕವನಪಂಕ್ತಿಗಳನ್ನೋದಿ ನನ್ನ ಈ ಭಾಷಣರೂಪದ ಭಕ್ತಿಕಾಣಿಕೆಯನ್ನು ಬಾಪೂಜಿಯ ಸಿರಿಯಡಿಗೆ ಸಾಷ್ಟಾಂಗ ನಮಸ್ಕಾರಪೂರ್ವಕವಾಗಿ ಸಮರ್ಪಿಸುತ್ತೇನೆ:

“ಮರೆವುದೆಂತಾ ನಮ್ಮ ಸ್ವಾತಂತ್ಯ್ರ ಶಿಲ್ಪಿಯಂ
ದಿವ್ಯದಿನದೀ ಶುಭ ಮುಹೂರ್ತದಲ್ಲಿ?
ಮರೆವುದೆಂತಯ್‌ಭುವನ ಗೌರವ ಮಹಾತ್ಮನಂ
ಸ್ವಾತಂತ್ಯ್ರದೀ ಸುಪ್ರಭಾತದಲ್ಲಿ?
ಹೆಜ್ಜೆ ಹೆಜ್ಜೆಯನಿಡಿಸಿ ಕೈಹಿಡಿದು ನಡೆಗಲಿಸಿ
ಬಿಡುಗಡೆಗೆ ತಂದ ಆ ತಂದೆಯೆಲ್ಲಿ?
ಎಲ್ಲಿ? ಓ ಅವನೆಲ್ಲಿ? ನಿಚ್ಚವೂ ನಮ್ಮೆದೆಯ
ನಂಜೀಂಟುವಾ ನೀಲಕಂಠನೆಲ್ಲಿ?

ಜನಮನದ ಹಗೆತನದ ರೋಷಹಾಲಾಹಲದಿ
ಹಾಲುದಿಸಿ ಬರುವಂತೆ ಮೂಡಿ ಬಂದೆ!
ಕ್ರಿಸ್ತಬುದ್ದರ ಮೈತ್ರಿಯಂ ಸಾರಿ ಸಾಧಿಸುತೆ
ವಿಶ್ವ ಸೇವಕರ ಪಂಕ್ತಿಯಲ್ಲಿ ನಿಂದೆ!
ಯಂತ್ರ ನಾಗರಿಕತೆಯ ರಾಜಕೀಯದ ಕುಟಿಲ
ತಂತ್ರಕಧ್ಯಾತ್ಮ ಮಂತ್ರವನ್ನು ತಂದೆ!
ಇಂದಿನುತ್ಸವಕೆಮ್ಮನುಳಿದೆಲ್ಲಿ ಹೋದೆ, ಹೇ
ಸ್ವಾತಂತ್ಯ್ರ ಕನ್ಯೆಯಂ ಪಡೆದ ತಂದೆ?

*          *          *

ಇಲ್ಲಿ ಉತ್ಸವದೊಳವನಿಲ್ಲ; ಆ ದೂರದಲಿ
ಕ್ರೋಧಕಾರ್ಪಣ್ಯ ರೋದನಗಳೊಡನೆ,
ಕೆನ್ನೀರು ಕಣ್ಣೀರುಗಳ ಹೊನಲ ಗೋಳ್ ನಡುವೆ
ದಾರಿದ್ಯ್ರದೈನ್ಯ ಧನಮದಗಳೊಡನೆ
ವಾದಿಸುತೆ ಬೋಧಿಸುತೆ ಕರುಣೆಯಂ ಸಾಧಿಸುತೆ
ಭಕ್ತಿಯಿಂ ದೇವನಂ ಪ್ರಾರ್ಥಿಸುತ್ತೆ
ನಿರಶನ ವ್ರತನಿಷ್ಠನಾಗಿಹನು ನೋಡಲ್ಲಿ
ಧರ್ಮ ಶಕ್ತಿಯ ಕೃಪೆಯನರ್ಥಿಸುತ್ತೆ!

ಈಶ್ವರ ಕೃಪಾಬಲದ ಯಾಚನೆಯ ಸಲುವಾಗಿ
ಭೂಮಾತೆ ಕಳುಹಿಸಿಹ ದೂತಭಿಕ್ಷು:
ಈ ಲೋಕಮಂ ನಿರ್ನಿಮೇಷಮವಲೋಕಿಸುವ
ಆ ಲೋಕ ಋತದೊಂದಲೋಕ ಚಕ್ಷು;
ಸೃಷ್ಟಿಕರ್ತಂ ಸೃಷ್ಟಿ ತಾನಾಗಿ ಸೃಷ್ಟಿಯೊಳೆ
ದುಡಿಯುತಿರ್ಪುದಕವನೆ ದಿವ್ಯಸಾಕ್ಷಿ!
ಗಾಂಧಿಯೆಂಬಾ ಪೆಸರೆ ನಾಂದಿಯಾಗಲಿ ನಮ್ಮ
ಸ್ವಾತಂತ್ಯ್ರಸಂಭ್ರಮಕೆ: ಹಾಡು, ಪಕ್ಷಿ!”

 

 


[1] ಮಹಾತ್ಮಾಜಿಯವರ ಅಸ್ಥಿವಿಸರ್ಜನಾನಂತರ ಮೈಸೂರು ನಗರದಲ್ಲಿ ತಾ.೧೨-೨-೪೮ರಲ್ಲಿ ನಡೆದ ಪ್ರಚಂಡ ಬಹಿರಂಗ ಸಭೆಯಲ್ಲಿ ಮಾಡಿದ ಭಾಷಣ.