ಹೋಗುವೆನು ನಾ ಹೋಗುವೆನು ನಾ, ನನ್ನ ಒಲುಮೆಯ ಗೂಡಿಗೆ;
ಮಲೆಯ ನಾಡಿಗೆ, ಮಳೆಯ ಬೀಡಿಗೆ, ಸಿರಿಯ ಚೆಲುವಿನ ರೂಢಿಗೆ.
ಬೇಸರಾಗಿದೆ ಬಯಲು, ಹೋಗುವೆ ಮಲೆಯ ಕಣಿವೆಯ ಕಾಡಿಗೆ;
ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ!

ಅಲ್ಲಿ ತೆರೆತೆರೆಯದ್ರಿಪಂಕ್ತಿಗಳೆಲ್ಲೆ ಕಾಣದೆ ಹಬ್ಬಿವೆ;
ನಿಬಿಡ ಕಾನನ ರಾಜಿ ಗಿರಿಗಳನಪ್ಪಿ ಸುತ್ತಲು ತಬ್ಬಿವೆ.
ದೆಸೆಯ ಬಸವನ ಹಿಣಿಲ ಹೋಲಿವೆ; ಮುಗಿಲ ಚುಂಬನಗೈದಿವೆ
ತುಂಗಶೃಂಗಗಳಲ್ಲಿ; ದಿಕ್ತಟದಲ್ಲಿ ಸೊಂಡಿಲ ನೆಯ್ದಿವೆ!

ರವಿಯ ರಶ್ಮಿಯ ಪ್ರಜ್ಞೆಯಿಲ್ಲದ ವಿಪಿನ ನಿರ್ಜನ ರಂಗಕೆ,
ಮುಗಿಲನಂಡಲೆಯುತ್ತ ನಿಂತಿಹ ಧೀರ ಪರ್ವತ ಶೃಂಗಕೆ,
ವನ ವಿಹಂಗ ಸ್ವನ ತರಂಗಿತ ಪವನ ಪಾವನ ಸಂಗಕೆ,
ಹೋಗುವೆನು ನಾ ಮಧುರ ಸುಂದರ ಶೈಲವನ ಲಲಿತಾಂಗಕೆ!
– ‘ಪಕ್ಷಿಕಾಶಿ’ಯಿಂದ.

ಆಧುನಿಕ ಕವಿ ಹೀಗೆ ಹಾಡಿದರೆ, ಸಾವಿರ ವರ್ಷಗಳ ಹಿಂದೆ ಕನ್ನಡದ ಆದಿಕವಿ ಪಂಪ ಇಂದಿನ ಇದೇ ಮಲೆನಾಡಿನ ಅಂದಿನೊಂದು ಹಿರಿಯ ಸಿರಿವೀಡಾಗಿದ್ದ ಬನವಾಸಿಯಲ್ಲಿ ತನ್ನ ಬಾಲ್ಯ ಕೌಮಾರಗಳನ್ನೂ, ಬಹುಶಃ ಯೌವನಪ್ರಾರಂಭವನ್ನೂ, ಕಳೆದು ಧರ್ಮಕರ್ಮ ಸಂಯೋಗದಿಂದ ತವರೂರಿಗೆ ದೂರವಾಗಿ ಪುಲಿಗೆರೆಗೆ ಬಂದು, ಅಲ್ಲಿ ಅರಿಕೇಸರಿಯ ಆಸ್ಥಾನದಲ್ಲಿ ಕವಿಯೂ ಕಲಿಯೂ ಆಗಿ ನೆಲಸಿದ ಮೇಲೆ, ಮಲೆನಾಡನ್ನು ನೆನೆನೆನೆದು ವಿರಹವ್ಯಾಕುಲತೆಯಿಂದೆಂಬಂತೆ ತನ್ನ ಲೌಕಿಕ ಕಾವ್ಯ ವಿಕ್ರಮಾರ್ಜುನವಿಜಯದಲ್ಲಿಯ ಬನವಾಸಿಯ ವರ್ಣನೆಯಲ್ಲಿ ತನ್ನ ಹೃದಯದ ರಸಕೃತಜ್ಞತೆಯನ್ನು ತೋಡಿಕೊಂಡಿದ್ದಾನೆ; ಕಾವ್ಯ ಮಾಧುರ್ಯಕ್ಕೆ ಕೋಡಿ ಕೊರೆದಿದ್ದಾನೆ.

ಸೊಗಯಿಸಿ ಬಂದ ಮಾಮರ, ಮರವನ್ನಪ್ಪಿದ ಎಲೆವಳ್ಳಿ, ಹೂತುಂಬಿದ ಜಾತಿ ಸಂಪಗೆ, ಕುಕಿಲುವ ಕೋಗಿಲೆ, ಹಾಡುವ ತುಂಬಿ, ಕೂಡುವ ನಲ್ಲರು-ಯಾವ ಬೆಟ್ಟದಲ್ಲಿ ನೋಡಲಿ, ಯಾವ ಕಾಡಿನಲ್ಲಿ ನೋಡಲಿ! ಹೊರಗಣ ಪ್ರಕೃತಿಸೌಂದರ್ಯಕ್ಕೆ  ಮಾತ್ರವಲ್ಲ, ಆಂತರದ ಸಂಸ್ಕೃತಿಗೆ ಆ ನಾಡು ಬೀಡಾಗಿತ್ತಂತೆ. ತ್ಯಾಗಕ್ಕೆ ಭೋಗಕ್ಕೆ ವಿದ್ಯೆಗೆ ಸಂಗೀತಕ್ಕೆ ಸುಖ ಗೋಷ್ಠಿಗೆ ಆಗರವಾಗಿತ್ತಂತೆ ಆ ನಾಡು. ಅದನ್ನು ನೆನೆದ ಕವಿಯ ಜೀವ ಮರಳಿ ಅಲ್ಲಿಗೆ ಹೋಗಲು ಹಾತೊರೆಯುತ್ತದೆ. ಆದರೆ ಬಹುಶಃ ರಾಜಕಾರ್ಯ ಕರ್ತವ್ಯಭಾರಗಳಿಂದ ಬಂಧಿತನಾದ ಅವನಿಗೆ ಈಗಿನ ವೇಗಸಂಚಾರದ ಮತ್ತು ಸಂಪರ್ಕದ ಸೌಲಭ್ಯಗಳಿಲ್ಲದ ಆಗಿನ ಕಾಲದಲ್ಲಿ ಅದು ಸಾಧ್ಯವಾಗುವ ಸಂಭವವೂ ತೋರಲಿಲ್ಲವೆಂದು ಕಾಣುತ್ತದೆ. ಆದ್ದರಿಂದಲೆ ಈ ಜನ್ಮದಲ್ಲಿ ಅಲ್ಲದಿದ್ದರೆ ಇನ್ನೊಂದು ಜನ್ಮದಲ್ಲಿ, ಮನುಷ್ಯಜನ್ಮ ಸಾಧ್ಯವಿಲ್ಲದಿದ್ದರೆ ಕೋಗಿಲೆಯ ಜನ್ಮವೋ ಮರಿದುಂಬಿಯ ಜನ್ಮವೋ ಪ್ರಾಣಿ ಜನ್ಮವಾದರೂ ಚಿಂತೆಯಿಲ್ಲ, ಅಂತೂ ಮಲೆನಾಡಿನಲ್ಲಿ ಹುಟ್ಟಬೇಕೆಂದು ಹಾರೈಸುತ್ತಾನೆ.

“ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯಲಂಪಿನ ಇಂಪುಗಳ್ಗೆ ಆಗರವಾದ ಮಾನಸರೆ ಮಾನಸರ್! ಅಂತು ಅವರಾಗಿ ಪುಟ್ಟಲ್‌ಏನಾಗಿಯುಂ ಏನೊ ತೀರ್ದಪುದೆ? ತೀರದೊಡಂ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್?” “ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿದೇಶಮಂ!” “ತೆಂಕನಾಡ ಮರೆಯಲ್ಕೆ ಇನ್ನೇನ್ ಮನಂ ಬರ್ಕುಮೇ?”

ಕವಿಯ ಈ ಎದೆಯರಕೆಯಿಂದಲೆ ನಾವರಿಯಬಹುದು ಅಂದಿನ ಮಲೆನಾಡಿನ ಸೊಬಗು ಸೊಗಸುಗಳನ್ನು; ಸೌಂದರ್ಯ ಸೌಭಾಗ್ಯಗಳನ್ನು. ಆದರೆ ಇಂದಿನ ಮಲೆನಾಡು?  ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆಕೊಡುವ ಸಲುವಾಗಿ ಸರಕಾರ ಅವರನ್ನು ಮಲೆನಾಡಿಗೆ ವರ್ಗಮಾಡುತ್ತದೆ ಎಂಬ ಪ್ರತೀತಿಯೆ ಸಾಕು ಸಾಮಾನ್ಯ ಜನಮನದಲ್ಲಿ ಮಲೆನಾಡಿನ ವಿಚಾರವಾಗಿರುವ ಅಭಿಪ್ರಾಯ ಏನು ಎಂಬುದನ್ನು ತಿಳಿದುಕೊಳ್ಳುವುದಕ್ಕೆ. ಅವರಿಗೆ ಮಲೆನಾಡು ಎಂದರೆ ಮಲೆಕಾಡು ಮಳೆ ಸೊಳ್ಳೆ ಮಲೇರಿಯಾ ಹುಲಿ ಹಾವು ರೋಗ ಸಾವು! ಭೂಮಿಯಲ್ಲಿ ಹುಟ್ಟಿದ್ದಕ್ಕೆ ಹೇಗಾದರೂ ಮಾಡಿ ನಿವಾರಿಸಿಕೊಳ್ಳಬೇಕಾಗಿರುವ ಒಂದು ದುರ್ಗಮ ದುರಂತ ಭೂಭಾಗ! ಇಂದಿನ ಕವಿಯೂ ಅಂದಿನ ಕವಿಯಂತೆ ಹಾಡಬಹುದು. ಆದರೆ ಮಲೇರಿಯಾ ಸೊಳ್ಳೆಯ ಗುಂಗಿನ ಘೋರಸತ್ಯದ ಮುಂದೆ ಕವಿಯ ಹೊಂಗನಸಿನ ಹಾಡೆ! ಸಾವು ನೋವು ಬಡತನ ನಿರಕ್ಷರತೆ ಅಜ್ಞಾನ ಅವಿವೇಕ ಇವುಗಳ ಕರ್ಕಶ ನಿಜದೆದುರು ಕವಿಯ ಸಾಲಂಕಾರ ವರ್ಣನೆ ಹೇಗೆ ತಾನೆ ತಲೆಯೆತ್ತಿ ನಿಲ್ಲಬಲ್ಲುದು?

ಹಾಗಾದರೆ ಯಾವುದು ನಿಜ, ಕವಿಯ ವರ್ಣನೆಯೊ ಜನಗಣತಿಯ ವರದಿಯೊ? ‘ಎರಡೂ!’ ಎಂಬುದೆ ಸದ್ಯಕ್ಕೆ ಸರಿಯಾದ ಉತ್ತರ! ಪ್ರಕೃತಿಯ ಮಲೆನಾಡು ಪಂಪನ ಕಾಲದಲ್ಲಿದ್ದಂತೆಯೆ ಇಂದಿಗೂ ದುರ್ದಮ್ಯವಾಗಿದೆ, ಗಗನೋನ್ನತವಾಗಿದೆ, ರುದ್ರವಾಗಿದೆ, ರಮಣೀಯವಾಗಿದೆ. ಸರಿಸಮಾನಸ್ಕಂಧರಿಗೆ ಹಸ್ತಲಾಘವವೀಯುತ್ತಾ, ಕುಬ್ಜಜೀವವನ್ನು ಕಾಲಡಿ ತುಳಿಯುತ್ತಾ, ಅಲ್ಪಚೇತಸರನ್ನು ಅಪ್ಪಳಿಸಿ ಇಲ್ಲಗೈಯುತ್ತಾ ‘ಇದೆ’, ಶಂಕರಿಯೂ ಆಗಿ ಭಯಂಕರಿಯೂ ಆಗಿ. ಅದು ಕಲಿಗಳ ಕಣಿವೆ, ಮಲ್ಲರ ಕಣಿವೆ, ಮಲ್ಲರ ಮಲೆ, ಹೇಡಿಗಳ ಸೂಡು, ಅಂಜುಕುಳಿಗಳಿಗೆ ಕಗ್ಗಾಡು!

ಶ್ರೀರಾಮನು ಸೀತಾಲಕ್ಷ್ಮಣರೊಡನೆ ಅತ್ರಿ ಋಷ್ಯಾಶ್ರಮವನ್ನು ಬೀಳ್ಕೊಂಡು ದಂಡಕಾರಣ್ಯವನ್ನು ಪ್ರವೇಶಿಸಿದೊಡನೆ ‘ವಿಪಿನದ ವಿಪತ್ತೆ ವಪುವೆತ್ತಂತೆ’ ಅರಣ್ಯದ ಭೀತಿಭಯಂಕರತೆಯೆ ಮೈತಾಳಿ ವಿರಾಧರಾಕ್ಷಸನ ಆಕಾರದಿಂದ ಇದಿರಾಗುತ್ತದೆ. ಆ ವಿರಾಧ ಮೊದಲು ಅಪಹರಿಸಿದುದು ಹೆಣ್ಣಾಗಿದ್ದ ಸೀತೆಯನ್ನು: ಸಹಜವಾಗಿಯೆ! ತರುವಾಯ ರಾಮಲಕ್ಷ್ಮಣರನ್ನೂ ಅಪಹರಿಸುತ್ತಾನೆ. ಗಂಡಸರಾದರೂ ಪಟ್ಟಣಿಗ ನಾಗರಿಕರು ಕಾಡಿಗೆ ಅಳುಕದಿರಲಾಗುತ್ತದೆಯೆ? ಆದರೆ ರಾಮಲಕ್ಷ್ಮಣರು ಆ ವಿಪಿನಭಯವನ್ನು ಗೆಲ್ಲುತ್ತಾರೆ; ವಿರಾಧನನ್ನು ಕೊಲ್ಲುತ್ತಾರೆ. ಅದೇ ವಿರಾಧನ ಮೃತದೇಹದಿಂದಲೆ ಒಬ್ಬ ಗಂಧರ್ವ ಮೂಡಿ ಸೀತಾರಾಮಲಕ್ಷ್ಮಣರಿಗೆ ಶುಭವನ್ನು ಕೋರಿ ಅವರ ಮುನ್ನಡೆಗೆ ದಾರಿತೋರಿ ಅಂತರ್ಧಾನವಾಗುತ್ತಾನೆ. ಶಾಪದಿಂದ ರಾಕ್ಷಸನಾಗಿದ್ದ ತುಂಬುರ ಎಂಬ ಹೆಸರಿನ ಆ ಗಂಧರ್ವನು ಶ್ರೀರಾಮನಿಗೆ ನುಡಿದ ದಿವ್ಯವಚನಗಳಲ್ಲಿ ಇದೂ ಒಂದು:

“ದಂಡಕಾರಣ್ಯಮಿದು ಭೀರುಗೆ ಭಯಂಕರಂ;
ರಸಿಕಧೀರಗೆ ಕಲಾಶಂಕರಂ, ನನ್ನಂತೆವೋಲ್‌!”

ವಿಕಾರಿಯೂ ಅಪಾಯಕಾರಿಯೂ ಕರ್ಕಶನೂ ಆದ ರಾಕ್ಷಸ ವಿರಾಧನಿಂದ ಸ್ಫುರದ್ರೂಪಿಯೂ ಸಹಾಯಕಾರಿಯೂ ಮಾರ್ಗದರ್ಶಿಯೂ ಆದ ಗಂಧರ್ವ ತುಂಬುರನು ಮೂಡಿದಂತೆ ಗಂಡೆದೆಯ ರಸಿಕಧೀರಗೆ ಮಲೆನಾಡು ಕಲಾಶಂಕರವಾಗುತ್ತದೆ, ಭೀರುಗೆ ಭಯಂಕರ ಮಾತ್ರವೇ ಆಗಿರುತ್ತದೆ. ಹೊರನೋಟಕ್ಕೆ ವಿರಾಧನಂತೆ ತೋರಬಹುದಾದ ಇಂದಿನ ಮಲೆನಾಡಿನಲ್ಲಿ ಕವಿಯ ಕಣ್ಣು ತುಂಬುರ ಗಂಧರ್ವನನ್ನು ದರ್ಶಿಸಿದೆ. ಶಾಪಗ್ರಸ್ತನಾಗಿರುವ ರಾಕ್ಷಸನನ್ನು ಸಂಹರಿಸಿ ದೇವಪುರುಷನನ್ನು ಕಡೆದು ಬಿಡಿಸಬೇಕಾದ ಕರ್ತವ್ಯ ನಮ್ಮದಾಗಿದೆ. ಕವಿ ಕಂಡದ್ದನ್ನು ಶಿಲ್ಪಿ ಕಡೆಯಬೇಕು; ಶಿಲ್ಪಿ ಕಡೆದುದನ್ನು ಪ್ರಭುಶಕ್ತಿ ಕಟ್ಟಬೇಕು. ಪ್ರಭುಶಕ್ತಿಗೆ ಬೆಂಬಲವಾಗಿ ನಿಂತು ದುಡಿದು ನಡೆದು ಪ್ರಜಾಶಕ್ತಿ ಆ ದಿವ್ಯ ಶ್ರೇಯಸ್ಸನ್ನು ಮುಟ್ಟಬೇಕು. ಆಗ ಮಲೆನಾಡು ಕರ್ಣಾಟಕದ ಕಾಶ್ಮೀರ ಮಾತ್ರವಲ್ಲ. ಭರತಖಂಡದ ಸ್ವಿಟ್ಜರ್ಲೆಂಡ್ ಮಾತ್ರವಲ್ಲ, ಅವುಗಳಿಗಿಲ್ಲದ ಒಂದು ಅಲೌಕಿಕವಾದ ಸಂಸ್ಕೃತಿಯನ್ನೂ ಆತ್ಮಶ್ರೀಯನ್ನೂ ಪಡೆದು ಭವ್ಯವಾಗುವುದರಲ್ಲಿ ಸಂದೇಹವಿಲ್ಲ.

ಆಗಲೆ ಆ ದಾರಿಯಲ್ಲಿ ನಾವು ತಕ್ಕಮಟ್ಟಿಗೆ ಮುಂದುವರಿಯುತ್ತಿದ್ದೇವೆ. ಯಂತ್ರಜ್ಞರಾದ ಶಿಲ್ಪಿವರೇಣ್ಯರ ತಂತ್ರಶಕ್ತಿಯಿಂದ ಪರ್ವತದ ನೆತ್ತಿ ಯುಗಯುಗದ ನಿದ್ರೆಯಿಂದ ಎಚ್ಚತ್ತು ತನ್ನ ಕಬ್ಬಿಣಗನಸನ್ನು ಹೊರಹಾಕಿ ಭದ್ರಾವತಿಗಳನ್ನು ಸೃಷ್ಟಿಸುತ್ತಿದೆ. ಅನಂತಕಾಲದಿಂದಲೂ ಅರಣ್ಯಗಳಲ್ಲಿ ಅಲೆಯುತ್ತಿದ್ದ ಕಾಡುಹೊಳೆ ತನ್ನ ನೀರೆದೆಯ ಗರ್ಭದಿಂದ ಬೆಂಕಿಮಿಂಚನ್ನು ಮಸೆದು ಹೊರಹೊಮ್ಮಿಸಿ ಜೋಗದಂತಹ ವಿದ್ಯುದ್‌ಯೋಜನೆಗಳನ್ನು ಪಡೆಯುತ್ತಿದೆ. ಸಸ್ಯ ಸಂಪತ್ತನ್ನೂ ಪ್ರಾಣಿಸಂಪತ್ತನ್ನೂ ಅಭಿವೃದ್ಧಿಗೊಳಿಸಿ ಹದವರಿತು ಉಪಯೋಗಿಸಿಕೊಳ್ಳಬೇಕೆಂದು ದೂರದೃಷ್ಟಿಯಿಂದ, ನಿಧಾನವಾಗಿಯಾದರೂ, ಕೆಲಸ ಸಾಗುತ್ತಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ ಜನಸಂಪತ್ತನ್ನು ರಕ್ಷಿಸದಿದ್ದರೆ ಉಳಿದುದೆಲ್ಲವೂ ವಿನಷ್ಟವಾಗುತ್ತದೆ, ವ್ಯರ್ಥವಾಗುತ್ತದೆ ಎಂಬ ಮನೋಧರ್ಮ ಜನತೆಯಲ್ಲಿಯೂ ಆಡಳಿತವರ್ಗದಲ್ಲಿಯೂ ಮೂಡಿ ಕಾರ್ಯೋನ್ಮುಖವಾಗಿರುವ ಮಂಗಳಕರ ಸೂಚನೆಗಳು ತೋರುತ್ತಿವೆ. ಸ್ವಾರ್ಥತೆ, ಅಸೂಯೆ, ದ್ವೇಷ, ಅಹಂಕಾರ, ಸ್ವಪ್ರತಿಷ್ಠೆ, ದುರ್ಲಾಭಲೋಭ ಮೊದಲಾದ ಆಸುರೀಶಕ್ತಿಗಳು ಅಡಚಣೆಯೊಡ್ಡದಿದ್ದಲ್ಲಿ ವಿರಾಧನಿಂದ ತುಂಬುರೋದಯವಾಗಲು ಬಹಳ ಕಾಲ ಹಿಡಿಯುವುದಿಲ್ಲ.

ಮಲೆನಾಡಿನ ಸೌಂದರ್ಯವೇನೊ ಸಾವಿರ ವರ್ಷದ ಹಿಂದೆ ಇದ್ದಂತೆಯೆ ಇದೆ. ಅದರ ಸೌಭಾಗ್ಯಕ್ಕೆ ಮಾತ್ರ ಇಳಿಗಾಲ ಬಂದಂತಿದೆ. ಪ್ರಕೃತಿಯ ಸೌಂದರ್ಯ ಮನುಷ್ಯಪ್ರಜ್ಞೆಯ ರಸಾಸ್ವಾದನೆಗೆ ವಿಷಯವಾದಂದು, ನೈಸರ್ಗಿಕವಾದ ಸಂಪತ್ತು ಮನುಷ್ಯಕೃತಿಯ ಅಭ್ಯುದಯಕ್ಕೆ ಅಧೀನವಾದಂದು, ಅಂತಹ ಅಭ್ಯುದಯವು ಸಂಸ್ಕೃತಿಗೂ ನಿಃಶ್ರೇಯಸಕ್ಕೂ ಕೈಂಕರ್ಯವೆಸಗಿದಂದು ಅದು ‘ಸೌಭಾಗ್ಯ’ವಾಗುತ್ತದೆ. ಅಂತಹ ‘ಸೌಭಾಗ್ಯ’ದ ಪರಿವರ್ತನೆಗೆ ತಪಸ್ಸು ಮಾಡುತ್ತಿರುವಂತಿದೆ, ಮಲೆನಾಡಿನ ಸೌಂದರ್ಯಃ ಗಗನಚುಂಬಿಗಳಾದ ಬೆಟ್ಟಗೋಡು; ಶತಮಾನಗಳಿಂದಲೂ  ಮರದ ಬುಡದೆಡೆ ಬಿಸಿಲನ್ನೆ ಕಾಣದೆ ಬೆಳೆದು ನಿಂತಿರುವ ದಟ್ಟಕಾಡು; ಬಿತ್ತರವಾದ ಗದ್ದೆಯ ಕೋಗು; ಎತ್ತರವಾದ ತೋಟಗಳು; ತರತರದ ಹಕ್ಕಿಗಳು; ಸಾವಿರ ತರದ ಅರಣ್ಯಜಂತುಗಳು; ಹೂವು, ಹಣ್ಣು, ಜೇನು, ಗಂಧ, ಗೆಡ್ಡೆ, ಗೆಣಸು, ಮೂಲಿಕೆ, ಕಬ್ಬು, ಕಾಫಿ, ಏಲಕ್ಕಿ, ಮೆಣಸು, ಅಡಕೆ, ಬತ್ತ; ಹಾವು, ಮೊಸಳೆ, ಮೀನು, ಹುಲಿ, ಆನೆ, ಜಿಂಕೆ, ದೊಡ್ಡು, ಕಡ; ಮಾಂಸ, ಚರ್ಮ, ಉಗುರು, ಹಲ್ಲು, ಕೊಬ್ಬು, ಗರಿ! ಏನುಂಟು? ಏನಿಲ್ಲ? ಆದರೆ ನಾವು ಎಚ್ಚತ್ತಿಲ್ಲ. ನಮ್ಮ ಸಸ್ಯಶಾಸ್ತ್ರಜ್ಞರೂ ಪ್ರಾಣಿಶಾಸ್ತ್ರಜ್ಞರೂ ಖನಿಜಶಾಸ್ತ್ರಜ್ಞರೂ ಪಾಶ್ಚಾತ್ಯ ಮಾತ್ರವಾದ ಪಠ್ಯಪುಸ್ತಕ ಶಾಸ್ತ್ರಜ್ಞಾನದಿಂದಲೆ ತೃಪ್ತಿಪಟ್ಟುಕೊಳ್ಳದೆ ಈಕಡೆಯೂ ತಿರುಗಿ ಕೆಲಸಮಾಡಿದರೆ ಎಷ್ಟು ಶ್ರೀಮಂತರಾಗುತ್ತೇವೆಯೊ ಹೇಳಬಲ್ಲವರಾರು?

ಆದರೆ ಕವಿದೃಷ್ಟಿ ಅಲ್ಲಿಯವರೆಗೆ ಕಣ್ಣುಮುಚ್ಚಿ ಕುಳಿತುಕೊಳ್ಳಬೇಕಾಗಿಲ್ಲ. ಕುಳಿತುಕೊಂಡೂ ಇಲ್ಲ. ಅದು ಮಲೆನಾಡನ್ನು ಕಂಡುಂಡು ಮೈಗೊಂಡಿದೆ. ಅವನ ರಸದೃಷ್ಟಿಗೂ ರಸಸೃಷ್ಟಿಗೂ ಪ್ರಕೃತಿ ಸೌಭಾಗ್ಯ ಮಾತ್ರವಲ್ಲ ಆತ್ಮಶ್ರೀಪೂರ್ಣವಾದ ಸೌಭಾಗ್ಯವೂ ಸಿದ್ಧಿಯಾಗಿದೆ; ಇತರರಿಗೂ ಆ ಸೌಭಾಗ್ಯವನ್ನು ಹಂಚಲು ಅವನು ನಿರಂತರ ಕಾತರನಾಗಿದ್ದಾನೆ:

ಎಲ್ಲಿ ತಿಂಗಳು ಕಾಡುಮಲೆಗಳ ಮೇಲೆ ಹಾಲ್ಮಳೆ ಸುರಿವುದೋ,
ಕಿವಿಯ ಜಿಹ್ವೆಗೆ ಎಲ್ಲಿ ಜೊನ್ನುಣಿ ತೇನೆ ಜೀನ್ಮಳೆ ಕರೆವುದೋ,
ಎಲ್ಲಿ ಕದ್ದಿಂಗಳಲಿ ತಾರಾಕೋಟಿ ಕಿಡಿಕಿಕ್ಕಿರಿವುದೋ,
ಕಾರಿನಿರುಳಲಿ ಮಿಂಚುಹುಳುಗಳ ಸೇನೆ ಕತ್ತಲೆಗಿರಿವುದೋ,

ಎಲ್ಲಿ ಹಸುರನು ಚಿಮ್ಮಿ ಕಣ್ಣಿಗೆ ಪೈರುಪಚ್ಚೆಯು ಬೆಳೆವುದೋ,
ಎಲ್ಲಿ ಗದ್ದೆಯ ಕೋಗು ಪವನನ ಹತಿಗೆ ತೆರೆತೆರೆಯೊಲೆವುದೋ,
ಬಿಂಗಗಣ್ಗಳ ಮಲೆಯ ಹೆಣ್ಗಳ ದಿಟ್ಟಿಯೆಲ್ಲೆದೆ ಸೆಳೆವುದೋ,
ಎಲ್ಲಿ ಕಾಲವು ತೇಲಿ ಸುಖದಲಿ ತಿಳಿಯದಂತೆಯೆ ಕಳೆವುದೋ,

ಅಲ್ಲಿಗೈದುವೆನಲ್ಲಿಗೈದುವೆನಿಲ್ಲಿ ಬೇಸರವಾಗಿದೆ;
ಕಾಡುಮಲೆಗಳನಲೆವ ಹುಚ್ಚಿನ ಕಿಚ್ಚು ಹೃದಯದಿ ರೇಗಿದೆ!
ಹೋಗುವೆನು ನಾ ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ:

ಹಸುರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ!
ಅಲ್ಲಿ ಭಾವದ ಬೆಂಕಿಹಕ್ಕಿಯ ಮಿಂಚುರೆಕ್ಕೆಯನೇರುವೆ;
ಧರಣಿ, ದಿನಮಣಿ, ತಾರೆ, ನೀಹಾರಿಕೆಯ ನೇಮಿಯ ಮೀರುವೆ;
ಕಾಲದಾಚೆಗೆ, ದೇಶದಾಚೆಗೆ, ಚಿಂತೆಯಾಚೆಗೆ ಹಾರುವೆ;
ಕಾವ್ಯಕನ್ಯಾ ಶ್ರಾವ್ಯಕಂಠದೊಳಾತ್ಮಭೂತಿಯ ಸಾರುವೆ!

ಮಲೆನಾಡಿನ ನಿಸರ್ಗದ್ದು ರುಂದ್ರಸೌಂದರ್ಯ. ಅಲ್ಲಿ ಮನುಷ್ಯ ಚೇತನ ಗಿರಿ ಅರಣ್ಯಸ್ಪರ್ಧಿಯಾಗಿ ವರ್ಧಿಸಿತೇ ಅವನು ಗೆದ್ದ; ಇಲ್ಲ, ಕ್ರಿಮಿಕೀಟದ ಬಾಳೇ ಅವನಿಗೂ ಸಿದ್ಧ.