“ಹಾರೈಸು ಹಾರೈಸು ಹಾರೈಸು, ಜೀವ:
ಹಾರೈಸು ನೀನಾಗುವನ್ನೆಗಂ ದೇವ!”
– ಅಗ್ನಿಹಂಸ

ಇಂದಿನ ಕನಸು ನಾಳೆಯ ಮನಸ್ಸು; ನಾಳೆಯ ಮನಸ್ಸು ನಾಡಿದ್ದಿನ  ಉಣಿಸು. ಇವೊತ್ತಿನ ಹಾರೈಕೆ ನಾಳೆಯ ಪೂರೈಕೆ. ವಟಬೀಜದ ಋತಹೃದಯದಲ್ಲಿ ಶಕ್ತಿಪೂರ್ಣವಾಗಿರುವ ಚಿತ್‌ಸಂಕಲ್ಪವು ತಪೋಮಯವಾಗಿ ಆಶಿಸಿತೆಂದರೆ, ಆ ಆಶೆಯೆ ಇಚ್ಛಾಬಲವಾಗಿ ಅಂತಸ್ಸುಪ್ತವಾಗಿರುವ ವೃಕ್ಷತ್ವವನ್ನು ಬಹಿಃಸ್ಫುಟವಾಗುವಂತೆ ಮಾಡುತ್ತದೆ. ಒಂದು ವರ್ಗದ ಪ್ರಾಣಿ ಮತ್ತೊಂದು ವರ್ಗದ ಪ್ರಾಣಿಯಾಗಿ ಪರಿಣಾಮಗೊಳ್ಳುವುದೂ ಅಂತರ‍್ನಿಗೂಢವಾದ ಋತಸಂಕಲ್ಪದ ಚಿತ್‌ತಪಸ್ಸಿನಿಂದಲೆ ಎಮದು ಪತಂಜಲಿಯ ಯೋಗಸೂತ್ರ ಹೇಳುತ್ತದೆ:

“ಜಾತ್ಯಂತರ ಪರಿಣಾಮಃ ಪ್ರಕೃತ್ಯಾಪೂರಾತ್‌ ||” (ಅ.೪, ಸೂ.೨) ಪ್ರಕೃತಿಯ ಆಪೂರಣದಿಂದಲೆ ಜಾತ್ಯಂತರ ಪರಿಣಾಮ ಸಾಧ್ಯ. ಪ್ರಕೃತಿರೂಪದಲ್ಲಿ ಅವ್ಯಕ್ತವಾಗಿರುವ ಶಕ್ತಿಯ ಇಚ್ಛಾವಿಕಾಸದಿಂದಲೆ ಸೃಷ್ಟಿಯಲ್ಲಿ ಬೇರೆಬೇರೆ ಪರಿಣಾಮಗಳಾಗುತ್ತವೆ. ಬರಿಯ ಸನ್ನಿವೇಶ ಮಾತ್ರದಿಂದಲ್ಲ. ಸನ್ನಿವೇಶ ಪ್ರಭಾವ ಅಭಿನಿವೇಶನಕ್ಕೆ, ಎಂದರೆ ಅಸ್ಮಿತಾಸಕ್ತಿಗೆ, ನಿಮಿತ್ತಭಿತ್ತಿಯಾಗುತ್ತದೆಯೆ ಹೊರತು ಅದೇ ಪರಿಣಾಮಕರ್ತೃವಲ್ಲ. “ಹಾರೈಸಿ ಹಾರೈಸಿ ಹಾರೈಸಿ ಹಾರಿದುದೊ ನೀರಧಿಯ ಮೀನ!” ಎಂದು ಆಧುನಿಕ ಜೀವ ವಿಜ್ಞಾನವೂ ಅದೇ ತತ್ವವನ್ನು ಸೂಚಿಸುತ್ತದೆ. ಮಾನವವರ್ಗದಲ್ಲಿ ಪ್ರಗತಿಪರಿಣಾಮವಾಗಬೇಕಾದರೂ ಅದು ಮೊದಲು ವ್ಯಷ್ಟಿಯ ಮನೋಮಯಕ್ಕೆ ಭಾವನಾರೂಪದಲ್ಲಿ ಅವತರಿಸಿ ಬುದ್ಧಿಗ್ರಾಹ್ಯವಾಗುತ್ತದೆ. ಮೊದಲು ‘ಬುದ್ಧಿಗೋಚರ’ವಾದುದು ಕ್ರಮೇಣ ‘ಹೃದಯಗೋಚರ’ವಾಗುತ್ತದೆ. ತರುವಾಯ ಕಾಯಕ್ರಿಯೆಯಲ್ಲಿ ಪ್ರತಿಷ್ಠಿತವಾಗಿ ವಾಸ್ತವವಾಗುತ್ತದೆ.

[1]ಒಳಹೊಕ್ಕು ನೋಡಿದರೆ ಹೊಳೆಯುತ್ತದೆ – ಅಭಿಪ್ರಾಯಗಳ ಶಕ್ತಿ ಆಟಂ ಶಕ್ತಿಗಿಂತಲೂ ಬಲವತ್ತರವಾದದ್ದು, ಅಮೋಘವಾದದ್ದು ಎಂದು. ಭಾರತ ಸ್ವಾತಂತ್ಯ್ರದ ಉದಯ, ಪಾಕಿಸ್ತಾನ್ ಇಸ್ರಾಯೇಲ್ ರಾಷ್ಟ್ರಗಳ ವಿಸೃಷ್ಟಿ, ದುರ್ದಮ್ಯ ಚಕ್ರಾಧಿಪತ್ಯಗಳ ದಮನ ಮತ್ತು ದಲನ,-ಇಂತಹ ಅತ್ಯಂತ ಬಹಿರ್ಮುಖವಾದ ರಾಜಕೀಯ ಘಟನೆಗಳಿಗೂ ‘ಮಂತ್ರ’ಗಳೆ, ಎಂದರೆ ಶಕ್ತಿಪೂರ್ಣವಾದ ಭಾವನೆಗಳೆ, ಕಾರಣವಾದುದನ್ನು ನಾವೆಲ್ಲ ಕಂಡಿದ್ದೇವೆ. ಸತ್‌ಸೃಷ್ಟಿಗಾಗಲಿ ಅಸತ್‌ಸೃಷ್ಟಿಗಾಗಲಿ ‘ಮಂತ್ರ’ ನಿಷ್ಪಕ್ಷಪಾತವಾಗಿ ನೆರವಾಗುತ್ತದೆ. ಅದಕ್ಕೆ ಅಧೀನವಾಗಿ ಅವಶ್ಯಕವಾದ ‘ತಂತ್ರ’ ಸಿದ್ಧವಾಗುತ್ತದೆ; ಅದನ್ನಾಶ್ರಯಿಸಿ ಶಾಸ್ತ್ರವಿಜ್ಞಾನ ‘ಯಂತ್ರ’ಗಳನ್ನು ಕಂಡುಹಿಡಿದು ಒದಗಿಸುತ್ತದೆ. ಲೆನಿನ್ ಸ್ಟಾಲಿನ್ ಗಾಂಧಿಯಂಥವರೂ ಹಿಟ್ಲರ್ ಮುಸ್ಸೊಲಿನಿಯ ವರ್ಗದವರೂ ಜರ್ಮನಿ ಇಟಲಿ ರಷ್ಯಾ ಇಂಡಿಯಾ ಮೊದಲಾದ ದೇಶಗಳ ಅಚಿರಪೂರ್ವ ಇತಿಹಾಸಗಳೂ ಅದಕ್ಕೆ ನಿದರ್ಶನಗಳಾಗಿವೆ. ‘ಮಂತ್ರ ಶಕ್ತಿ’ ಎಂಬ ಪದದ ಅರ್ಥ ಎಷ್ಟು ಹಿಗ್ಗಳಿಸಿ ಎಲ್ಲಿಗೆಳೆದರೂ ಅಸತ್ಯವಾಗಲಾರದೆಂದು ತೋರುತ್ತದೆ. ಆದ್ದರಿಂದಲೆ ನಾವು ಸ್ವೀಕರಿಸುವ ‘ಮಂತ್ರ’ ಸನ್ಮಂತವಾಗಿರಬೇಕಾದುದು ಅತ್ಯಂತ ಆವಶ್ಯಕ, ಲೋಕದ ಕ್ಷೇಮಕ್ಕೆ ಮತ್ತು ನಮ್ಮ ಶ್ರೇಯಸ್ಸಿಗೆ.

ದೃಷ್ಟಿಯಂತೆ ಸೃಷ್ಟಿ. ಅದೇನೊ ನಿಜ. ಆದರೆ ನಿರ್ಬಲವಾದ ದೃಷ್ಟಿಯಿಂದ ಯಾವ ಸೃಷ್ಟಿಯೂ ಆಗಲಾರದು. ಅಂತಹ ನಿರ್ವೀರ್ಯತೆಯಿಂದ ದಿವಾಸ್ವಪ್ನಗಳು ಬೇಕಾದರೆ ಮಿಣುಕಬಹುದು. ಅತ್ಯಸೃಷ್ಟಿಯಾಗದು. ಋತವಿಲ್ಲದ ಮಿಥ್ಯಾದೃಷ್ಟಿಯಿಂದ ಅನೃತಸೃಷ್ಟಿ ಮಾತ್ರ ಸಾಧ್ಯ. ಆಲೋಚನೆ ಭಾವಮಯವಾದರೆ ‘ತಪಸ್‌’ ಒದಗುತ್ತದೆ; ತಪಸ್ಯೆಯಿಂದಲ್ಲದೆ ಲಭಿಸಲಾರದು ‘ತಪಸ್‌’ ವಿವೇಕಾನಂದರು ಸಾರಿರುವ ಸಂದೇಶದಿಂದ, ನೀಡಿರುವ ಆವೇಶದಿಂದ, ಅಂತಹ ತಪೋಮಯದೃಷ್ಟಿ ನಮಗೆ ಒದಗುತ್ತದೆಯೆ? ಅಂತಹ ‘ದರ್ಶನ’ ಶಕ್ತಿ ನಮ್ಮಲ್ಲಿ ಪ್ರಜ್ವಲಿಸುತ್ತದೆಯೆ?

ವಿವೇಕಾನಂದರು ಲೋಕಕ್ಕೆ ಇತ್ತ ಸಂದೇಶವನ್ನು ಕುರಿತು ಹಿಂದಣ ಭಾಷಣಗಳಲ್ಲಿ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದೇವೆ. ಅದರಲ್ಲಿ ಒಂದಂಶ ವ್ಯಷ್ಟಿಗೆ ಸಂಬಂಧಿಸಿದ್ದು, ಇನ್ನೊಂದು ಸಮಷ್ಟಿಗೆ. ಇವೆರಡೂ ನಿಜವಾಗಿ ಬೇರೆ ಬೇರೆ ಅಲ್ಲ: ಒಂದಕ್ಕಾಗಿ ಇನ್ನೊಂದು. ವ್ಯಷ್ಟಿಸಿದ್ಧಿಗೆ ಸಂಬಂಧಿಸಿದ ತಪಸ್ಯೆಯನ್ನು ಕುರಿತು, ನರೇಂದ್ರನನ್ನೆ ಉದಾಹರಣೆಯಾಗಿಟ್ಟುಕೊಂಡು ಸಂಕ್ಷೇಪವಾಗಿಯಾದರೂ ನಾಲ್ಕಾರು ಮಾತು ಹೇಳಿದ್ದೇವೆ. ಇಲ್ಲಿ ಯಾವ ರೂಪದ ಮುಂದಣ ಸೃಷ್ಟಿಯಾಗಿ ಯಾವ ಸ್ವರೂಪದ ವ್ಯಷ್ಟಿದೃಷ್ಟಿ ಸಿದ್ಧವಾಗಬೇಕಾಗಿದೆ ಎಂಬುದನ್ನು ಪರ್ಯಾಲೋಚಿಸುತ್ತೇವೆ.

ಇಂದಿನ ಪ್ರಪಂಚದ ಸಮಸ್ಯೆಗಳೆಲ್ಲ ಎರಡು ಪ್ರಧಾನ ಚಿತ್ತವೃತ್ತಿಗಳ ಮೇಲೆ ನಿಂತಂತಿವೆ: ಒಂದು ಯುದ್ಧಭೀತಿ; ಮತ್ತೊಂದು ಶಾಂತಿಪ್ರೀತಿ. ಗಮನಿಸಬೇಕಾದ ಮತ್ತೊಮದು ವಿಚಿತ್ರವೆಂದರೆ, ಒಂದರಿಂದ ಮತ್ತೊಂದು ಉದ್ಭವಿಸಿ, ಒಂದರಿಂದ ಮತ್ತೊಂದು ಪ್ರೇರಿತವಾಗಿ, ಒಂದು ಮತ್ತೊಂದಕ್ಕೆ ಕಾರಣವಾಗಿ, ಒಂದಕ್ಕೊಂದು ಮಾರಣವಾದಂತಿದೆ! ಎರಡು ಘೋರ ಯುದ್ಧಗಳನ್ನು ನೋಡಿದ ಜಗತ್ತು. ಒಮದಕ್ಕಿಂತ ಒಂದು ಘೋರತರವಾಗಿ ಪ್ರಲಯಕಾರಿಯಾದುದನ್ನು ಕಂಡರಿತ ಜಗತ್ತು, ಮುಂದೇನಾದರೂ ಯುದ್ಧ ಸಂಭವಿಸಿದರೆ ಅದು ಅತ್ಯಂತ ಘೋರತಮವಾಗಿ ಸರ್ವನಾಶದಲ್ಲಿಯೆ ಕೃತಕೃತ್ಯವಾಗಬಹುದೆಂದು ‘ಪ್ರಾಣಭೀತಿ’ಯಿಂದ ಶಾಂತಿಯನ್ನು ಪ್ರೀತಿಸುವಂತೆ ತೋರುತ್ತಿದೆಯೆ ಹೊರತು ಶಾಂತಿಯಲ್ಲಿ ಆರೂಢವಾಗಿ ಸ್ವತಃಸಿದ್ಧವಾಗಿರುವ  ಆತ್ಮಶ್ರೀಯ ಆಧ್ಯಾತ್ಮಿಕ ಪ್ರಯೋಜನಕ್ಕಾಗಿ ಅದನ್ನು ಬಯಸುತ್ತಿರುವಂತೆ ಕಾಣುವುದಿಲ್ಲ. ಆದಕಾರಣವೆ ‘ಶಾಂತಿರಕ್ಷಣೆ’ಗಾಗಿ ಉನ್ಮಾದವೇರಿದಂತೆ ‘ಯುದ್ಧಸಿದ್ಧತೆ’ ಮಾಡಿಕೊಳ್ಳುವ ವಿಪರೀತ ಪರಿಸ್ಥಿತಿ ಒದಗಿರುವುದನ್ನು ನೋಡುತ್ತಿದ್ದೇವೆ. ‘ಯುದ್ಧಸಿದ್ಧತೆ’ಗಾಗಿ ಬುದ್ದಿವ್ರಯ, ಶಕ್ತಿವ್ರಯ, ಧನವ್ರಯ, ಎಲ್ಲಕ್ಕಿಂತಲೂ ಹೆಚ್ಚಾಗಿ ಸೌಜನ್ಯವ್ರಯವಾಗುವುದರಿಂದ ಮಾನವನ ದೈನಂದಿನ ಸರಳ ಜೀವನಕ್ಕೆ ಬೇಕಾಗುವ ಅನ್ನವಸ್ತ್ರಾದಿಗಳ ಉತ್ಪತ್ತಿ ಹಿಂದೆ ಬಿದ್ದು, ಅನೇಕರಿಗೆ ಅವು ದೊರೆಯದೆ ಹಾಹಾಕಾರವೆದ್ದು ‘ಅಶಾಂತಿ’ಗೆ ಕಾರಣವಾಗುತ್ತದೆ. ‘ಕ್ರಾಂತಿಶಕ್ತಿ’ ಅಂತಹ ‘ಅಶಾಂತಿ’ಯನ್ನೆ ತನಗೆ ಮೂಲಧನವನ್ನಾಗಿಯೂ ಮೂಲಬಲವನ್ನಾಗಿಯೂ ಮಾಡಿಕೊಂಡು ತನ್ನ ಸ್ವಾರ್ಥದ ದುರಭಿಸಂಧಿಗೆ ಅದನ್ನು ಉಪಯೋಗಿಸಿಕೊಳ್ಳುತ್ತದೆ. ಅದರಿಂದೊದಗುವ ‘ಅಶಾಂತಿ’ಯನ್ನು ಶಮನ ಮಾಡಲು ‘ಯುದ್ದಸಿದ್ಧತೆ’; ಯುದ್ಧಸನ್ನಾಹ; ಕೊನೆಗೆ ಯುದ್ಧ! ಹೀಗೆ ತನ್ನ ಬಾಲದ ತುದಿಕಡೆಯಿಂದ ತನ್ನನ್ನೆ ನುಂಗಿಕೊಳ್ಳುವ ವಿಚಿತ್ರವಾದ ಸತ್‌ಪ್ರಯತ್ನದಲ್ಲಿ ಸರ್ವದಾ ನಿರತವಾಗಿರುವ ಈ ಅನರ್ಥಶಾಸ್ತ್ರ ವಿಷಯಸರ್ಪದಿಂದ ಮೂಡಿರುವ ‘ಯುದ್ಧಭೀತಿ-ಶಾಂತಿ ಪ್ರೀತಿ’ಯ ಜಟಿಲ ವಿಷವರ್ತುಲಗರ್ತದಿಂದ ಮಾನವತೆಗೆ ಮುಕ್ತಿಯಿದೆಯೆ ಎಂಬ ಪ್ರಶ್ನಚಿಹ್ನೆ ಹಾವಿನ ಹೆಡೆಯಂತೆಯೆ ನಿಮಿರಿ ನಿಲ್ಲುತ್ತದೆ!

ನಿಜವಾದ ಶಾಂತಿಗೆ ಮುನ್ನ ಮನುಷ್ಯತ್ವ ಶಮವನ್ನು ಸಾಧಿಸಬೇಕಾಗುತ್ತದೆ. ಶಮವಿಲ್ಲದ ಶಾಂತಿ ಬರಿಯ ಭ್ರಾಂತಿ. ವ್ಯಷ್ಟಿ ವ್ಯಷ್ಟಿ ಸೇರಿ ಸಮಷ್ಟಿಯಾಗಿದೆ. ಸಮಷ್ಟಿಯೂ ಅನೇಕ ವ್ಯಷ್ಟಿಗಳಾಗಿ ಮೈದೋರಿದೆ. ಆದ್ದರಿಂದ ವ್ಯಷ್ಟಿಯೂ ತನ್ನಲ್ಲಿ ಶಮವನ್ನು ಸ್ಥಾಪಿಸಿಕೊಳ್ಳಲು ಪ್ರಯತ್ನಿಸಿದರೆ ಸಮಷ್ಟಿಯ ಶಮಕ್ಕೆ ಬಲವಾದ ತಳಹದಿಯಾಗುತ್ತದೆ. ವ್ಯಷ್ಟಿವ್ಯಷ್ಟಿಯ ಅಹಂಕಾರ ಶಮನವಾದರೆ ಸಮಷ್ಟಿ ಸಮಷ್ಟಿಗಳ ಅಹಂಕಾರವೂ ಶಮನವಾಗುವುದು ಸಾಧ್ಯ. ದೇಶಭಕ್ತಿ, ರಾಷ್ಟ್ರೀಯತೆ, ಸ್ವಮತ ಸ್ವಸಂಸ್ಕೃತಿ ಸ್ವಭಾಷಾಭಿಮಾನಗಳೆಲ್ಲ ಅಹಂಕಾರಮೂಲವಾದ ವ್ಯಷ್ಟಿಪ್ರತಿಷ್ಠೆಯ ಸಮಷ್ಟಿರೂಪಗಳಲ್ಲದೆ ಮತ್ತೇನು? ಆದ್ದರಿಂದ ವ್ಯಷ್ಟಿ ವ್ಯಷ್ಟಿಗಳಲ್ಲಿ ಅಂತಹ ಶಮಸಾಧನೆಯಿಂದ ಮೂಡುವ ಮೂಲ ಪರಿವರ್ತನೆಗಾಗಿ ನಾವು ಸಾಮೂಹಿಕವಾಗಿ ಕಾರ್ಯೋನ್ಮುಖವಾಗದಿದ್ದರೆ ಬರಿಯ ಅರ್ಥಶಾಸ್ತ್ರ ಅಥವಾ ರಾಜಕೀಯ ಶಾಸ್ತ್ರದ ತೇಪೆ ಹಾಕುವ ಕುಶಲಕರ್ಮದಿಂದ ಎಂದಿಗೂ ಸರ್ವರು ಅಪೇಕ್ಷಿಸುವ ಸಮಷ್ಟಿ ಶಾಂತಿ ಸಿದ್ಧಿಸುವುದಿಲ್ಲ. ಸ್ವಭಾವ ಬದಲಾಯಿಸದೆ ಬದುಕು ಬದಲಾಯಿಸುವುದಿಲ್ಲ. ಅಂತಹ ಬದಲಾವಣೆಗಾಗಿ ಲೋಕಶೋಷಣೆ ಮಾಡಬೇಕಾಗಿಲ್ಲ. ನಮ್ಮ ಸ್ವರೂಪದಲ್ಲಿಯೆ ಆ ದೈವೀಶಕ್ತಿ ಸುಪ್ತವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ಅದನ್ನು ಎಚ್ಚರಗೊಳಿಸಲು ಪ್ರಯತ್ನಮಾಡಿದರೆ ಲೋಕಕಲ್ಯಾಣಕ್ಕೆ ಪ್ರತ್ಯಕ್ಷವಾಗಿ ಸಕ್ರಿಯವಾಗಿ ನೆರವಾಗುತ್ತಾನೆ. ಆ ದೈವೀಸ್ವರೂಪವೆ ಸ್ವಭಾವವಾದರೆ ಅದನ್ನು ಅನುಷ್ಠಾನಕ್ಕೆ ತರುವ ಸ್ವಧರ್ಮ ಸ್ವತಃಸಿದ್ದವಾಗಿ, ತದನುಗುಣವಾದ ಸ್ವಕರ್ಮದಲ್ಲಿ ಸುಪ್ರತಿಷ್ಠಿತವಾಗಿಯೆ ಆಗುತ್ತದೆ. ಪುರಾತನ ಮಹರ್ಷಿಗಳೆಲ್ಲರಿಂದಲೂ ಒಂದಲ್ಲ ಒಂದು ರೀತಿಯಿಂದ ಘೋಷಿತವಾಗುತ್ತಲೆ ಬಂದಿರುವ ಈ ಸನಾತನ ಸತ್ಯವು ನಮ್ಮ ಅರ್ವಾಚೀನ ವಿಭೂತಿಗಳಿಂದ ಮತ್ತೊಮ್ಮೆ ಆಧುನಿಕವಾಗಿ ಮಹೋಜ್ವಲವಾಗಿ ಪ್ರಕಾಶಿತವಾಗಿದೆ.

ವಿವೇಕಾನಂದರು ಸರ್ವಧರ್ಮ ಸಮ್ಮೇಲನದಲ್ಲಿ ಮಾಡಿದ ಉಜ್ವಲ ಭಾಷಣಗಳಲ್ಲಿ ಈ ದೃಷ್ಟಿಗೆ ಪೀಠಿಕಾಪ್ರಾಯವಾದ ವಜ್ರವೇದಿಕೆಯನ್ನು ವಿರಚಿಸಿದ್ದಾರೆ. ಅವರ ಪ್ರಪ್ರಥಮ ಸಂಬೋಧನೆಯ ಆ ದೃಷ್ಟಿಗೆ ಮೂಲಮಂತ್ರದಂತಿದೆ: “ಅಮೆರಿಕಾ ದೇಸದ ಭ್ರಾತೃ ಭಗಿನಿಯರೆ!” ವಾಚ್ಯವಾಗಿ ನೋಡಿದರೆ ಅತಿ ಸಾಮಾನ್ಯವಾಗಿ ಅತ್ಯಲ್ಪವಾಗಿ ತೋರುವ ಆ ಸಂಬೋಧನೆ ಚಿಚ್ಚಕ್ತಿಯ ಎಂತಹ ವಿದ್ಯುತ್‌ಪ್ರವಾಹವನ್ನು ಆಲಿಸಿದವರ ಹೃದಯಗಳಲ್ಲಿ ಪ್ರಚೋದಿಸಿತೆಂಬುದನ್ನು ಸಾಕ್ಷಿಗಳಿಂದಲೆ ಅರಿಯಬೇಕು, ಅನುಭವಿಸಬೇಕು. ಅಸೀಮವಾಗಿದೆ ಅದರ ‘ಧ್ವನಿಶಕ್ತಿ’! ಊದಿದನಿತೂ ಉಜ್ವಲವಾಗುವ ಬೆಂಕಿಯಂತೆ ಭಾವಿಸಿದನಿತೂ ನಿರ್ದಿಗಂತವಾಗುತ್ತದೆ ಅದರ ವ್ಯಾಪ್ತಿ; ನಿಶ್ಯಿಖರವೆಂಬಂತೆ ಏರುತ್ತದೆ ಅದರ ಉನ್ನತ ದೀಪ್ತಿ.[2]

ಇಂದು ವಿವೇಕಾನಂದರ ಕೃಪೆಯಿಂದ ನಮಗೆ ನಿತ್ಯಾಚಾರದ ಸಾಮಾನ್ಯ ವಿಷಯಗಳಾಗಿ ತೋರುವ ಚಿಂತನಾಶಕ್ತಿಗಳು ಅಂದು ಆ ಜನಕ್ಕೆ ಸತ್ಯಕ್ಕೆ ತೆರೆದ ವೈಚಿತ್ಯ್ರಪೂರ್ಣವಾದ ನವೋನವ್ಯವಾದ ದಿವ್ಯವಾಕ್ಷಗಳಂತೆ ರಾರಾಜಿಸಿದುವು. ಆ ವಿಶಾಲದರ್ಶನದ ಔದಾರ್ಯಕ್ಕೆ ಅಲ್ಲಿಯವರೆಗೆ ಮತದೃಷ್ಟಿಯ ಸಂಕೋಚ ಕಾರ್ಪಣ್ಯಗಳು ಅಪ್ಪಳಿಸಿಹೋಗಿ ನಿಬ್ಬೆರಗಾದುವು. ಬಾವಿಯಲ್ಲೆ ಹುಟ್ಟಿ ಬೆಳೆದಿದ್ದ ಕಪ್ಪೆಗಳನ್ನು ಹಿಡಿದೆತ್ತಿ ಸಮುದ್ರಕ್ಕೆ ಬೀಸಿದಂತಾಗಿ ಅವರು ತತ್ತರಿಸಿ ಹೋದರು: ಎಂದು ಪಥ ಅಂತು ಮತ! ದೃಷ್ಟಿಗಳೆನಿತೂ ದಾರಿಗಳನಿತು! ಪೂಜಿಸುವ ರೂಪಗಳೆಲ್ಲ ಪರಮಾತ್ಮನ  ಪ್ರತಿಮೆಗಳೆ! ಭಕ್ತನ ಭಾವದಂತೆ ಭಗವಂತನ ಅವಿರ್ಭಾವ!

“ಪ್ರಭಿನ್ನೇ ಪ್ರಸ್ಥಾನೇ ಪರಮಿದಮದಃ ಪಥ್ಯಮಿತಿ ಚ
ರುಚೀನಾಂ ವೈಚಿತ್ಯ್ರಾದೃಜುಕುಟಿಲ ನಾನಾ ಪಥಜುಷಾಂ
ನೃಣಾಮೇಕೋ ಗಮ್ಯಸ್ತ್ಯಮಸಿ ಪಯಸಾಮರ್ಣವ ಇವ”

“ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಂ
ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ ಸರ್ವಶಃ”

ಸೃಷ್ಟಿಯೆಲ್ಲ ಭಗವಂತನ ಅಭಿವ್ಯಕ್ತಿ. ಜೀವದಲ್ಲಿ ಶಿವನಿದ್ದಾನೆ. ಶಿವನೆ ಜೀವವಾಗಿದ್ದಾನೆ. ಜೀವತ್ವದಲ್ಲಿ ಶಿವತ್ವಸ್ಥಾಪನೆಯೆ ಬದುಕಿನ ಗಮ್ಯ; ಅದೇ ಸರ್ವ ಜೀವರ ಗಂತವ್ಯ. ಆದ್ದರಿಂದ ಸ್ವಮತಶ್ರೇಷ್ಠತಾಭ್ರಾಂತಿ ನಿಷಿದ್ಧ, ಅಕ್ಷಮ್ಯ, ಅವೈಜ್ಞಾನಿಕ. ಸಮಸ್ತ ಜಡಚೇತನಗಳಲ್ಲಿ ಅಂತರ್ಯಾಮಿಯಾಗಿರುವುದು ಏಕಮಾತ್ರ ಪರತತ್ತ್ವ. ಅದು ಚಿನ್ಮಯ, ಆನಂದಮಯ, ಸದ್ರೂಪ.

“ಭಯಾದಸ್ಯಾಗ್ನಿಸ್ತಪತಿ ಭಯಾತ್ತಪತಿ ಸೂರ್ಯಃ
ಭಯಾದಿಂದ್ರಶ್ಚ ವಾಯುಶ್ಚ ಮೃತ್ಯುರ್ಧಾವತಿ ಪಂಚಮಃ”
“ಆನಂದೋ ಬ್ರಹ್ಮೇತಿ ವ್ಯಜಾನಾತ್
ಆನಂದಾದ್ದೇವ ಖಿಲ್ವಿಮಾನಿ ಭೂತಾನಿ ಜಾಯಂತೇ
ಆನಂದೇನ ಜಾತಾನಿ ಜೀವಂತಿ
ಆನಂದಂ ಪ್ರಯಂತ್ಯಭಿಸಂವಿಶಂತಿ”

ಆದ್ದರಿಂದ ಭಯಬೇಡ; ಜುಗುಪ್ಸೆ ಸಲ್ಲದು. ಅಸೂಯಾದಿಗಳು ಅಜ್ಞಾನ ಜನ್ಯ. ತಿರಸ್ಕಾರ ಮಹಾಪಾಪ. ಪರಿಣಾಮಯಾತ್ರೆಯಲ್ಲಿ ಒಬ್ಬನು ಮುಂದೆ, ಇನ್ನೊಬ್ಬನು ಹಿಂದೆ; ಇಲ್ಲಿ ಶಕ್ತಿ, ಅಲ್ಲಿ ಅಶಕ್ತಿ ಅದು ಲೀಲಾವಿಧಾನ. ಈಶ್ವರ ವಿಭೂತಿಗಳಲ್ಲಿ ಲೀಲಾಕಾರಣವಾದ ತಾರತಮ್ಯಗಳಿದ್ದರೂ ನಿತ್ಯ ದೃಷ್ಟಿಯಲ್ಲಿ ಅವನು ಸರ್ವರಲ್ಲಿಯೂ ಸಮನಾಗಿದ್ದಾನೆ. “ತತಃಕೃತಾರ್ಥಾನಾಂ ಪರಿಣಾಮಕ್ರಮಸಮಾಪ್ತಿರ್ಗುಣಾನಾಂ” ಎಂದು ಯೋಗವಿಜ್ಞಾನಿ ಪತಂಜಲಿ ಹೇಳುವಂತೆ ವಿಕಾಸಪಥದಲ್ಲಿ ಮುಂದೆ ಮುಂದೆ ನಡೆದು ಕೊನೆಗೆ ಎಲ್ಲರೂ ಕೃತಾರ್ಥರಾಗಿಯೆ ಆಗುತ್ತಾರೆ. ಪರಮ ಪುರುಷಾರ್ಥ ಸಾಧನೆಯೆ ಸೃಷ್ಟಿಯ ಸರ್ವೋತ್ತಮೋದ್ದೇಶ!

ಆದ್ದರಿಂದ ಲೌಕಿಕವನ್ನು ಯಾರೂ ಅಲಕ್ಷಿಸದಿರಲಿ, ಏಕೆಂದರೆ ಅಲೌಕಿಕವು ಲೌಕಿಕದಲ್ಲಿಯೆ ಉನ್ಮೇಷಿತವಾಗಬೇಕು. ಋತಚಿತ್‌ಶಕ್ತಿ ನಮ್ಮ ವಿಶ್ವದ ಪರಿಣಾಮದ ಕ್ರಮವನ್ನು ಹಾಗೆ ಇಚ್ಚಿಸಿ, ಸಂಕಲ್ಪಿಸಿದೆ. ಒಮ್ಮೆ ವಿವೇಕಾನಂದರು ಕಲ್ಕತ್ತೆಯ ಮೃಗಶಾಲೆಗೆ ಭೇಟಿಯಿತ್ತರಂತೆ. ಅಲ್ಲಿಯ ಮುಖ್ಯಾಧಿಕಾರಿಯೊಡನೆ ಡಾರ್ವಿನ್ನನ ವಿಕಾಸವಾದ (Theory of Evolution) ವನ್ನು ಪ್ರಸ್ತಾಪಿಸುತ್ತಾ ಅದರ ನ್ಯೂನತೆಯನ್ನು ವಿವರಿಸಿ, ವೇದಾಂತದೃಷ್ಟಿಯಿಂದ ಅದನ್ನು ತಿದ್ದಿದರಂತೆ: “ಜಾತ್ಯಂತರ ಪರಿಣಾಮಃ ಪ್ರಕೃತ್ಯಾಪೂರಾತ್” ಎಂಬ ಯೋಗಸೂತ್ರದಂತೆ ಆಪೂರಣದ ಪೂರ್ವಸ್ಥಿತಿ ಇಲ್ಲದೆ ಪರಿಣಾಮದ ಉತ್ತರಸ್ಥಿತಿ ಹೇಗೆ ಒದಗುತ್ತದೆ? ಯಾವ ಯಂತ್ರಕ್ಕಾಗಲಿ ನಾವು ತುಂಬುವಷ್ಟು ಶಕ್ತಿಯನ್ನು ಮಾತ್ರವೆ ಅದರಿಂದ ಪಡೆಯಲು ಸಾಧ್ಯ. ಆ ಶಕ್ತಿ ರೂಪಾಂತರ ಹೊಂದಬಹುದು; ಆದರೆ ಪ್ರಮಾಣಾಂತರ ಹೊಂದಲಾರದು. ಎಷ್ಟು ಪೆಟ್ರೋಲ್ ಹಾಕಿದರೆ ಅಷ್ಟು ದೂರ ಹೋಗುತ್ತದೆ ವಿಮಾನ; ಎಷ್ಟು ಕಲ್ಲಿದ್ದಲು ತುಂಬಿದರೆ ಅಷ್ಟು ‘ದೂರ ಕೊಡುತ್ತದೆ’ ರೈಲು. ಹಾಗೆಯೆ ಜೀವಿಗಳ ವಿಕಾಸಾತ್ಮಕವಾದ ಪರಿಣಾಮವೂ ತತ್‌ಪೂರ್ವವಾದ ಆಪೂರಣದ ಶಕ್ತಿ, ವೇಗ, ಪ್ರಮಾಣ, ಸಂಕಲ್ಪ, ಉದ್ದೇಶಾದಿಗಳ ಕ್ರಮದಲ್ಲಿಯೆ ಸಾಗುತ್ತದೆ. ಆ ಸಾಗುವಿಕೆಯ ಸ್ವಭಾವ ಮತ್ತು ಸ್ವಧರ್ಮಗಳಲ್ಲಿ ಜೀವಿಯಿಂದ ಜೀವಿಗೆ ಅಂತರವಿರುತ್ತದೆ. ಡಾರ್ವಿನ್ನನ ‘ಬಲಕ್ಕೆ ಬದುಕು’ ‘ಬಲಿಷ್ಠನಿಗೆ ಬಾಳು’ ಎಂಬ ನಿರಂತರ ಸ್ಪರ್ಧೆಯ ಸಿದ್ಧಾಂತವು ಪ್ರಾಣಿವರ್ಗದ ವಿಚಾರದಲ್ಲಿ ಸತ್ಯವಾಗುವಷ್ಟರಮಟ್ಟಿಗೆ ಮನುಷ್ಯವರ್ಗದಲ್ಲಿ ಪೂರ್ಣ ಸತ್ಯವಾಗುವುದಿಲ್ಲ. ಏಕೆಂದರೆ ಪರಿಣಾಮದಲ್ಲಿ ಮುಂದುವರಿದಂತೆಲ್ಲ ಸ್ಪರ್ಧೆಯ ಸ್ವರೂಪವೆ ವ್ಯತ್ಯಾಸವಾಗುತ್ತದೆ. ಮೊದಲು ಭೋಗಾತ್ಮಕವಾದದ್ದು ಕೊನೆಗೆ ತ್ಯಾಗಾತ್ಮಕವಾಗುತ್ತದೆ. ಸ್ವಭೋಗದಲ್ಲಿಯೆ ಸರ್ವತೃಪ್ತವಾಗುತ್ತಿದ್ದ ಪ್ರಾಣಿ ಸ್ವಾರ್ಥತ್ಯಾಗದಲ್ಲಿಯೆ ತನ್ನ ಆತ್ಮಭೋಗವನ್ನು ಅನುಭವಿಸುವ ಸಾಮರ್ಥ್ಯವನ್ನು ಪಡೆಯುತ್ತದೆ. ಮನುಷ್ಯತ್ವದಲ್ಲಿ. ಯಾವುದನ್ನು ಡಾರ್ವಿನ್‌`Struggle for Life’ ಎಂದು ಕರೆಯುತ್ತಾನೆಯೊ ಅದನ್ನು ಪತಂಜಲಿ ‘ಅಭಿನಿವೇಶ’ ಎಂದು ಕರೆದಿದ್ದಾನೆ. ಅದು ಅಸ್ಮಿತಾಸಕ್ತಿ. ‘ನಾನಿರಬೇಕು. ನಾನಿರಬೇಕು; ಬದುಕಬೇಕು, ಬದುಕಬೇಕು’ ಎಂಬ ಆಸಕ್ತಿ. ಇದು ಪ್ರಾಣಿಗಳಲ್ಲಿ ಮಾತ್ರವಲ್ಲ. ಜ್ಞಾನಿಗಳಲ್ಲಿ ಕೂಡ ಇರುತ್ತದೆ ಈ ಅಭಿನಿವೇಶಸ್ವರವಾಹಿಯಾದದ್ದು. ತನಗೆ ತಾನೆ ರುಚಿಯಾದದ್ದು. ಬದುಕಿನ ಇತರ ಸವಿಗಳಿಗೆಲ್ಲ ಮೂಲ ಸವಿ ಬದುಕುವ ಸವಿ:

“ಸ್ವರಸವಾಹೀ ವಿದುಷೋsಪಿ ತಥಾರೂಢೋsಭಿನಿವೇಶಃ”
(ಯೋ.ಸೂ.೨, ೯.)

ಇದು ಪಶುಸಹಜವಾದರೂ ಮಾನವನಲ್ಲಿ ರೂಪಾಂತರ ಹೊಂದುತ್ತದೆ. ಬರಿಯ ‘ಬದುಕಬೇಕು’ ಎಂಬ ಆಸಕ್ತಿ ‘ಅಮೃತನಾಗಬೇಕು’ ಎಂಬ ಅಭೀಪ್ಸೆಯಾಗುತ್ತದೆ. ಆ ಅಮೃತತ್ವ ಪ್ರಾಣಿಸಹಜವಾದ ಭೋಗಸ್ಪರ್ಧೆಯಿಂದ  ಸಿದ್ದವಾಗದೆ ಪ್ರೇಮಸಹಜವಾದ ತ್ಯಾಗಸ್ಪರ್ಧೆಯಿಂದ ಲಭಿಸುತ್ತದೆ. ಆದ್ದರಿಂದ ಜಾತ್ಯಂತರ ಪರಿಣಾಮವು ಪ್ರಾಣಿವರ್ಗದಿಂದ ಮಾನವವರ್ಗಕ್ಕೆ ಕಾಲಿಟ್ಟಮೇಲೆಯೂ ಪ್ರಾಣಿವರ್ಗಕ್ಕೆ ಸ್ವಾಭಾವಿಕವಾಗಿದ್ದ ಹೋರಾಟದ ವಿಧಾನಗಳನ್ನು ಮತ್ತೆಯೂ ಮುಂದುವರಿಸುವುದು ಪ್ರಗತಿಶೀಲವಲ್ಲ; ಪುರೋಗಮನದ ಲಕ್ಷಣವಲ್ಲ; ತಿರೋಗಮನಕ್ಕೆ ಹಾದಿಯಾಗುತ್ತದೆ. ಆದ್ದರಿಂದ ಪಶುವರ್ಗದಿಂದ ಮಾನವಧರ್ಮವನ್ನು ಅಳೆಯುವುದು ತಪ್ಪು; ಪಶು ಸ್ವಭಾವದಿಂದ ಮಾನವಸ್ವಭಾವವನ್ನು ನಿರ್ಣಯಿಸುವುದಂತೂ ಪರಮ ಬೆಪ್ಪು. ಅಂತಹ ತಪ್ಪು ತತ್ತ್ವದಿಂದಾದ ಬೆಪ್ಪು ನಿರ್ಣಯಗಳನ್ನು ಒಪ್ಪಿಕೊಂಡೆ ಅಲ್ಲವೆ ದೇಶಗಳೂ ಜನಾಂಗಗಳೂ ಯುದ್ಧದಿಂದ ಯುದ್ಧಕ್ಕೂ ಅಶಾಂತಿಯಿಂದ ಅಶಾಂತಿಗೂ ಮುಗ್ಗುತ್ತಿರುವ ಸಂಕಟಕರ ದೃಶ್ಯವನ್ನು ನಾವಿಂದು ನೋಡುತ್ತಿದ್ದೇವೆ?

ಸ್ವಾಮಿಜಿಯ ಈ ಅದ್ಭುತ ವಾದವನ್ನು ಆಲಿಸಿದವರೊಬ್ಬರು, ಅವರು ಭಾರತೀಯರು, ಪ್ರಶ್ನಿಸಿದರಂತೆ: “ಹಾಗಾದರೆ ನೀವು ಅಮೆರಿಕಾದಿಂದ ಹಿಂತಿರುಗಿದ ಮೇಲೆ ಕೊಲೊಂಬೊದಿಂದ ಆಲ್ಮೋರದವರೆಗೆ ಬಿರುಗಾಳಿಯಾಗಿ ಬೀಸಿದ ವಿದ್ಯುದ್ ಭಾಷಣಗಳಲ್ಲಿ ಲೌಕಿಕೋದ್ಧಾರ ಲೌಕಿಕಕ್ಷೇಮ ಲೌಕಿಕಶ್ರೀ ಲೌಕಿಕಬಲ ಇವುಗಳ ಸಾಧನೆ ಸಂಪಾದನೆಗಳನ್ನೆ ಕುರಿತು ನಮಗೆ ಹೇಳಿದ್ದೇಕೆ? ಈಸಬೇಕು, ಇದ್ದು ಜೈಸಬೇಕು; ಜೀವನ ಸ್ಪರ್ಧೆಯಲ್ಲಿ ಗೆದ್ದು ಬಾಳಬೇಕು ಎಂದು ಬೋಧಿಸಿದ್ದೇಕೆ?”

ತೆಕ್ಕನೆ ಉಕ್ಕಿತಂತೆ ಸ್ವಾಮಿಜಿಯ ಕಣ್ಣಿನಲ್ಲಿ ಧರ್ಮಕೋಪಜ್ವಾಲೆ. ಗುಡುಗಿ ಹೇಳಿದಂತೆ ಆ ಸಿಡಿಲಾಳು: “ನೀವು, ನೀವು ಭಾರತೀಯರು, ನೀವು ಮನುಷ್ಯರೆ? ನೀವು ಪಶುಗಳಿಗಿಂತ ಮೇಲಲ್ಲ. ‘ಆಹಾರ ನಿದ್ರಾ ಭಯ ಮೈಥುನಂ ಚ’ ನಿಮಗೂ ಚತುಷ್ಪಾದಿಗಳಿಗೂ ಏನು ಅಂತರ? ಏನೊ ಸ್ವಲ್ಪಮಾತ್ರವಾದರೂ ಬುದ್ಧಿಶಕ್ತಿ ಮಿನುಗುತ್ತಿರುವುದರಿಂದ ನಿಮಗಿನ್ನೂ ರೂಪಾಂತರ ಒದಗಿಲ್ಲ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ನೀವೆಲ್ಲ ಚತುಷ್ಪಾದಿಗಳಾಗುತ್ತಿದ್ದಿರಿ! ನೀವಿನ್ನೂ ಪಶುಸ್ವಭಾವದಲ್ಲಿಯೆ ಬಿದ್ದರಿವುದರಿಂದ ನಿಮಗೆ ಹೋರಾಡಿ ಗೆಲ್ಲುವ ಪಶುಧರ್ಮವನ್ನೆ ಬೋಧಿಸಬೇಕಾಯಿತು. ಮೊದಲು ಅನ್ನಮಯ ಪ್ರಾಣಮಯಗಳ ಸ್ಪರ್ಧೆಯಲ್ಲಿ ಗೆಲ್ಲಿ. ಆಮೇಲೆ ಮನೋಮಯ ವಿಜ್ಞಾನಮಯ ಆನಂದಮಯಗಳ ಹೋರಾಟಕ್ಕೆ ನಿಮಗೆ ಯೋಗ್ಯತೆ ಬರುತ್ತದೆ. ‘ನಾಯಮಾತ್ಮಾ ಬಲಹೀನೇನ ಲಭ್ಯಃ’ ನಿರ್ಬಲನಿಗೆಲ್ಲಿ ಆತ್ಮ ಸಾಕ್ಷಾತ್ಕಾರ?” ತಮ್ಮ ಶ್ರೇಯಸ್ಸಿಗಾಗಿ, ಜಗತ್ತಿನ ಶ್ರೇಯಸ್ಸಿಗಾಗಿ. ಭಾರತೀಯರು ಮೊತ್ತಮೊದಲು ತಮ್ಮ ಪ್ರೇಯಸ್ಸನ್ನು ಸಾಧಿಸಲೇಬೇಕು ಎಂಬುದು ವಿವೇಕಾನಂದರ ಕಟ್ಟಾಣೆ.

ಆ ಪ್ರೇಯಸ್ಸಾಧನೆಗೆ ಪೀಠಿಕಾಪ್ರಾಯವಾಗಿ ಭರತಖಂಡ ಇಂದು ಸ್ವಾತಂತ್ಯ್ರವನ್ನು ಸಂಪಾದಿಸಿದೆ. ಆಧ್ಯಾತ್ಮಿಕ ಕ್ಷೇಮಕ್ಕೆ ವಿರೋಧವಾಗದಂತೆ ಲೌಕಿಕವಾದ ಎಲ್ಲ ಅಭ್ಯುದಯಗಳನ್ನೂ ಅದು ಸಾಧಿಸಲೇಬೇಕು. ಆದರೆ ದಿಕ್ಕು ತಪ್ಪದಂತೆ ದಿವ್ಯ ಶ್ರೇಯಸ್ಸಿನ ಧರ್ಮಧ್ರುವತಾರೆಯ ಕಡೆ ಸದಾ ಒಂದು ಕಣ್ಣಿಟ್ಟಿರಬೇಕು. ಇಲ್ಲದಿದ್ದರೆ ಭಾರತವೂ ಬರಿಯ ಅಮೆರಿಕೆಯೊ ರಷ್ಯವೊ ಆಗಿಬಿಡುವ ದುರಂತಕ್ಕೆ ಗುರಿಯಾಗುತ್ತದೆ.[3]

ಸ್ವಾಮಿ ವಿವೇಕಾನಂದರ ಆಶಾವಾಣಿ ನಮ್ಮನ್ನು ಆ ದುರಂತಕ್ಕೆ ಇಳಿ ಬಿಡುವುದಿಲ್ಲ ಎಂಬುದಕ್ಕೆ ಅನೇಕ ನಿದರ್ಶನಗಳು ನಮಗೆ ಕಾಣಿಸುತ್ತಿವೆ. ಅದು ನಮ್ಮ ಪುಣ್ಯ, ಸೌಭಾಗ್ಯ. ಪೂಜ್ಯ ಗಾಂಧೀಜಿ, ಶ್ರೀ ಅರವಿಂದಾದಿ ಮಹಾ ವ್ಯಕ್ತಿಗಳಿಂದಲೂ ಶ್ರೀಮದ್ ಭಗವದ್ಗೀತೆ, ಶ್ರೀ ರಾಮಕೃಷ್ಣ ವಚನವೇದ,[4] ‘ದಿವ್ಯ ಜೀವನ’[5] ಮೊದಲಾದ ಭವ್ಯ ವಾಙ್ಮಯ ಕೃತಿಗಳಿಂದಲೂ ಶ್ರೀ ರಾಮಕೃಷ್ಣ ಮಹಾಸಂಘ ಮೊದಲಾದ ಅಮರಸಂಸ್ಥೆಗಳಿಂದಲೂ ಪುನಃ ಪುನಃ ಪ್ರಣೀತವಾಗುತ್ತಿರುವ ಭಾರತೀಯವಾದ ಸರ್ವಧರ್ಮ ಸಮನ್ವಯ ದಿವ್ಯ ದೃಷ್ಟಿಯ ಅಮೃತಸೇಚನೆಯಿಂದ ಬಹುದೂರ ದೇಶಗಳಲ್ಲಿಯೂ ಅನೇಕ ಭಾಷಾಸಂಸ್ಕೃತಿಗಳಲ್ಲಿಯೂ ಈ ನವಯುಗ ಧರ್ಮವು ಅಪ್ರತಿಹತವಾಗಿ ಪ್ರಫುಲ್ಲಿತವಾಗುತ್ತಿದೆ. ಭರತಖಂಡ ಆಶಿಸುವ ಲೋಕ ನಾಯಕತ್ವದ ಅಂತಸ್ಥ ರಾಜಕೀಯವಾದುದಲ್ಲ. ಆಧ್ಯಾತ್ಮಿಕವಾದದ್ದು; ದರ್ಪಮನೋಭಾವದ್ದಲ್ಲ, ಸೇವಾ ಮನೋಭಾವದ್ದು; ಅದು ಸ್ವಾರ್ಥ ದೂರವಾಗಿ ಆಕೃತ್ರಿಮ ಸ್ನೇಹಪೂರ್ಣವಾದದ್ದು; ಸರ್ವೋದಯದ ವಿನಾ ಬೇರೆ ಪ್ರತಿಫಲಾಪೇಕ್ಷೆಯೂ ಇಲ್ಲದ ಅಹೇತುಕವಾದ ಪ್ರೇಮದಿಂದ ಪೂರ್ಣವಾದದ್ದು.[6]

ಈ ದಿವ್ಯ ಧ್ವನಿಯನ್ನೆ ಪ್ರತಿಧ್ವನಿಸುತ್ತಿದೆ, ರಾಜಕೀಯ ಸ್ವಾತಂತ್ಯ್ರವನ್ನು ಆಧ್ಯಾತ್ಮಿಕ ಶ್ರೇಯಸ್ಸಿಗೆ ಸಮರ್ಪಿಸುವ ವಾಗ್ದೇವಿಯ ಆಶೀರ್ವಾಣಿ:

“ಅರ್ಪಿತವಾಗಲಿ ಈ ಸ್ವಾತಂತ್ಯ್ರಂ
ಶ್ರೀ ಚಾಮುಂಡಿಯ ಪದತಲಕೆ!
ಅರ್ಪಿತವಾಗಲಿ ಈ ಸ್ವಾತಂತ್ಯ್ರಂ
ಶ್ರೀ ಪುರುಷೋತ್ತಮ ಕ್ರೀ ಬಲಕೆ!

ಅರ್ಪಿತವಾಗಲಿ ಈ ಸ್ವಾತಂತ್ಯ್ರಂ
ಪರಮಹಂಸ ಗುರುವರನಡಿಗೆ!

ಅರ್ಪಿತವಾಗಲಿ ಈ ಸ್ವಾತಂತ್ಯ್ರಂ
ಅರುಣಾಚಲ ಋಷಿಯೆದೆಗುಡಿಗೆ!

ಸಮರ್ಪಿತವಾಗಲಿ ಈ ಸ್ವಾತಂತ್ಯ್ರಂ
ಶ್ರೀ ಅರವಿಂದರ ಸಿರಿಮುಡಿಗೆ!

ಸಮರ್ಪಿತವಾಗಲಿ ಈ ಸ್ವಾತಂತ್ಯ್ರಂ
ಚಿರ ಕಲ್ಯಾಣಕೆ ಅಡಿಗಡಿಗೆ!”[7]

 


[1] ‘Take up one idea. Make that one idea your life: think of it: dream of it: live on that idea. Let the brain. muscles. nerves. every part of your body be full of that idea. and just leave every other idea alone. This is the way to success. and this is the way great spiritual giants are produced.’ – SWAMI VIVEKANANDA

[2] ‘ಸ್ವಾಮಿ ವಿವೇಕಾನಂದ.’ ಪು. ೧೪೭ ರಿಂದ ೧೫೧ರ ವರೆಗೆ ಓದಿ.

[3] ಸ್ವಾಮಿ ವಿವೇಕಾನಂದ, ‘ಕರೆಯುತಿದೆ ಯುಗವಾಣಿ’ ಎಂಬ ೧೭ನೆಯ ಅಧ್ಯಾಯ ನೋಡಿ.

[4] The Gospel of Sri Ramakrishna – By ‘M.’ Translated by Swami Nikhilananda. ಈಗ ಕನ್ನಡಕ್ಕೆ ಅನುವಾದಗೊಂಡಿದೆ.

[5] The Life Divine – By SRI AUROBINDO.

[6] ‘ಶ್ರೀ ರಾಮಕೃಷ್ಣ ಪರಮಹಂಸ’ ‘ಅನಂತರ’ ಎಂಬ ೮ನೆಯ ಅಧ್ಯಾಯ ನೋಡಿ.

[7] ಶ್ರೀಸ್ವಾತಂತ್ಯ್ರೋದಯ ಮಹಾಪ್ರಗಾಥಾ-ಕುವೆಂಪು