‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’

ಶ್ರೀ ಗುರುಕೃಪೆಯಿಂದಲೂ ಸ್ವಂತ ಸಾಧನೆಯಿಂದಲೂ ನರೇಂದ್ರನಿಗೆ ವ್ಯಷ್ಟಿಸಿದ್ದಿಯೇನೊ ಲಭಿಸಿತು. ಅಂತಹ ಆತ್ಮಸಾಕ್ಷಾತ್ಕಾರಕ್ಕಾಗಿ ಆತನ ಹೃದಯತೃಷ್ಣೆ ಅಸೀಮವ್ಯಾಕುಲವಾಗಿತ್ತು. ಬದುಕಿನ ಸರ್ವಸಾರ್ಥಕತೆಯೂ ಸತ್ಯ ಸಾಕ್ಷಾತ್ಕಾರದಲ್ಲಿ; ಅದಿಲ್ಲದೆ ಬದುಕು ವ್ಯರ್ಥ; ಎಂಬ ದೃಢನಿಶ್ಚಯ ಬುದ್ಧಿಯಿಂದ ಅಂತಹ ಸತ್ಯಕ್ಕಾಗಿ ಶಾಂತಿಗಾಗಿ ಆನಂದಕ್ಕಾಗಿ ಅವನು ಕುದಿಯುತ್ತಿದ್ದನು. ಶ್ರೀ ರಾಮಕೃಷ್ಣರು ತಮ್ಮ ಸ್ಪರ್ಶಮಾತ್ರದಿಂದ ಆತನಲ್ಲಿ ಎರಡು ಮೂರು ಸಾರಿ ಪ್ರಚೋದಿಸಿದ ದಿವ್ಯಾನುಭವಗಳಿಂದ ಆತನಲ್ಲಿದ್ದ ಸಂದೇಹ ತಿಮಿರ ಸಂಪೂರ್ಣವಾಗಿ ತೊಲಗಿತಾದರೂ ರುಚಿಯರಿತ ತೃಷ್ಣೆ ಆ ಅನುಭವ ಪಾರಮ್ಯದ ನೈರಂತರ್ಯಕ್ಕಾಗಿ ಹಾತೊರೆಯತೊಡಗಿತು. ಅದಕ್ಕಾಗಿ ಗುರು ಹೇಳಿದಂತೆ ಸಾಧನೆ ಮಾಡಿದನು. ಅದು ತನಗಿನ್ನೂ ದೊರೆಯಲಿಲ್ಲವಲ್ಲಾ ಎಂದು ಒದ್ದಾಡಿದರು. ಗುರುದೇವನನ್ನು ಕಾಡಿ ಕಾಡಿ ಪೀಡಿಸಿದರು. ಗುರು “ಕಾಲ ಬಂದಾಗ ಎಲ್ಲವೂ ದೊರೆಯುತ್ತದೆ” ಎಂದು ಸಮಾಧಾನ ಹೇಳಿದರು. ಅಂತಹ ಕಾಲವೂ ಒದಗಿತು. ಕಾಶೀಪುರದ ತೋಟದಲ್ಲಿ ಧ್ಯಾನಮಗ್ನನಾಗಿದ್ದ ನರೇಂದ್ರನಿಗೆ ಬ್ರಹ್ಮಸಾಕ್ಷಾತ್ಕಾರಾನುಭವವನ್ನು ಕೃಪೆಗೈಯುವ ನಿರ್ವಿಕಲ್ಪ ಸಮಾಧಿಯೂ ಸಿದ್ದಿಸಿತು.

[5]

ಅಂತಹ ಸಿದ್ಧಿ ತನಗೆ ತಾನೆ ಮಹೋನ್ನತವಾದುದು; ಬದುಕಿನ ಕೃತಜ್ಞತೆಯ ಅನುಭವವನ್ನು ಪೂರ್ಣವಾಗಿ ತಂದುಕೊಡತಕ್ಕುದು. ಅದಕ್ಕೆ ಅದೇ ಪರಮ ಪ್ರಯೋಜನ. ವ್ಯಕ್ತಿಗೆ ಅದಕ್ಕಿಂತಲೂ ಹೆಚ್ಚಿನ ಅನ್ಯಪ್ರಯೋಜನ ಬೇರಾವುದೂ ಇಲ್ಲ. ಅದನ್ನು ಪಡೆದ ಮೇಲೆ ಪಡೆಯತಕ್ಕದ್ದು ಇನ್ನೇನೂ ಇರುವುದಿಲ್ಲ. ಅದು ಪರಮ ಮೌನ; ಪರಮ ನೈಷ್ಕರ್ಮ್ಯ; ಸರ್ವಕರ್ತವ್ಯ ವಿರಾಮ. ಆದ್ದರಿಂದಲೆ ಆ ಸಿದ್ಧಿಯನ್ನು ಪಡೆದ ಸಾಧಕರು ಜೀವನರಂಗದಿಂದ ಸಂಪೂರ್ಣವಾಗಿ ವಿರಕ್ತರಾಗುತ್ತಾರೆ. ನರೇಂದ್ರನಿಗೂ ಅಂತಹ ಪೂರ್ಣ ವಿರಾಮದ ಆಸಕ್ತಿ ಸ್ವಾಭಾವಿಕವಾಗಿಯೆ ಮೂಡಿದುದನ್ನು ಕಾಣುತ್ತೇವೆ.

ನರೇಂದ್ರನೊಮ್ಮೆ ಗುರುದೇವನಿಗೆ ಹೇಳಿದನು: “ಗುರುದೇವ, ನಿಮ್ಮಂತೆ ನಾನೂ ಸರ್ವದಾ ನಿರ್ವಿಕಲ್ಪಸಮಾಧಿಯಲ್ಲಿ ಮುಳುಗಿರಬೇಕೆಂಬುದೇ ನನ್ನ ಮಹದಭಿಲಾಷೆ!” ಅದನ್ನು ಕೇಳಿ ಸ್ವಲ್ಪ ಅಧೀರರಾಗಿ ಪರಮಹಂಸರು ಹೇಳಿದರು: “ಮತ್ತೆ ಮತ್ತೆ ಅದೇ ಕತೆ! ನಿನಗೆ ನಾಚಿಕೆಯಾಗದೆ? ಇಷ್ಟು ಕಾಲ ಮಹಾವಟವೃಕ್ಷದಂತೆ ಬೆಳೆದಿರುವೆ. ಸಾವಿರಾರು ಜನರಿಗೆ ಶಾಂತಿಛಾಯೆಯನ್ನು ನೀನು ನೀಡಬೇಕಾಗಿದೆ. ಅದನ್ನು ಬಿಟ್ಟು ಸ್ವಂತ ಮುಕ್ತಿಗಾಗಿ ಬಾಯಿ ಬಾಯಿ ಬಿಡುತ್ತೀಯಲ್ಲಾ! ಎಂತಹ ಕ್ಷುದ್ರ ಆದರ್ಶ ನಿನ್ನದು!”

ಅಭಿಮಾನ ಕೆಣಕಿ ನರೇಂದ್ರ ಹೇಳಿದನು: “ನಿರ್ವಿಕಲ್ಪಸಮಾಧಿ ದೊರಕುವವರೆಗೂ ನನ್ನ ಮನಸ್ಸಿಗೆ ಶಾಂತಿಯಿರದು. ಅದು ದೊರಕುವವರೆಗೆ ನಾನು ಏನನ್ನೂ ಮಾಡುವುದಿಲ್ಲ.”

ಅದಕ್ಕೆ ಗುರು “ಹೆದರಬೇಡ, ಅದೂ ದೊರೆಯುತ್ತದೆ” ಎಂದು ಸಾಂತ್ವನ ಹೇಳಿದರು.

ಗುರು ಹಾಗೆ ಆಶೀರ್ವದಿಸಿದ ಎರಡು ದಿನಗಳಲ್ಲಿಯೆ ನರೇಂದ್ರನಿಗೆ ನಿರ್ವಿಕಲ್ಪಸಮಾಧಿಯ ಅನುಭವವೂ ಆಯಿತು.[6]

ನರೇಂದ್ರನು ಶ್ರೀ ರಾಮಕೃಷ್ಣರ ಬಳಿಗೆ ಬಂದು ದಂಡಪ್ರಣಾಮ ಮಾಡಿದಾಗ ಅವರು ಹೇಳಿದರು “ಜಗದಂಬೆ ನಿನಗೆಲ್ಲವನ್ನೂ ತೋರಿಸಿದಳಷ್ಟೆ? ಇನ್ನು ಅದಕ್ಕೆ ಬೀಗ ಹಾಕಿದೆ. ಬೀಗದ ಕೈ ನನ್ನಲ್ಲಿದೆ. ನೀನು ಮಾಡಬೇಕಾಗಿರುವ ಕೆಲಸವೆಲ್ಲವನ್ನೂ ಮುಗಿಸಿದ ಮೇಲೆ ಬೀಗ ತೆಗೆಯುತ್ತೇನೆ.” ಜೊತೆಗೆ ಜಗಜ್ಜನನಿಯನ್ನೂ ಬೇಡಿದರಂತೆ. “ಅಮ್ಮಾ ಅವನ ನಿರ್ಮಿಕಲ್ಪಾನುಭೂತಿಯ ಮೇಲೆ ನಿನ್ನ ಮಾಯಾವರಣವನ್ನು ದಯಮಾಡಿ ಬೀಸು. ಅವನಿಂದ ನಾನು ಮಾಡಿಸಬೇಕಾದ ಕೆಲಸ ಬಹಳವಿದೆ” ಎಂದು.

ನರೇಂದ್ರನ ವ್ಯಷ್ಟಿಸಿದ್ಧಿಯನ್ನು ಲೋಕಕಲ್ಯಾಣರೂಪವಾದ ಸಮಷ್ಟಿಸಿದ್ಧಿಗಾಗಿ ಧಾರೆಯೆರೆಯಲು ಪರಮಹಂಸರು ಮೊದಲೇ ಸಂಕಲ್ಪಿಸಿದುದನ್ನು ಸ್ಪಷ್ಟವಾಗಿ ಕಾಣುತ್ತೇವೆ. ಆ ದಕ್ಷಣೇಶ್ವರ ದೇವಮಾನವನ ಇಚ್ಛಾಶಕ್ತಿ ನರೇಂದ್ರನನ್ನು ಆಕ್ರಮಿಸಿ ತನ್ನ ಸಂಕಲ್ಪವನ್ನು ಹೇಗೆ ಈಡೇರಿಸಿಕೊಂಡಿತೆಂಬುದೇ ವಿವೇಕಾನಂದರ ಜೀವನಚರಿತ್ರೆ. ವ್ಯಷ್ಟಿಸಿದ್ಧಿಯನ್ನು ಪಡೆದು ಹೊರಹೊರಟ ನರೇಂದ್ರನು ಸ್ವಲ್ಪ ಕಾಲ ಅನಾಮಧೇಯವಾಗಿ ಭರತಖಂಡವನ್ನೆಲ್ಲ ಸುತ್ತಿದನು. ಪರಿವ್ರಾಜಕನಾಗಿ ತಾಯ್ನಾಡಿನ ದುಃಖ ದಾರಿದ್ಯ್ರ ದಾಸ್ಯ ಸಂಸ್ಕೃತಿ ನಾಗರಿಕತೆ ಸೌಜನ್ಯ ದೌಷ್ಟ್ಯ ಇತ್ಯಾದಿ ಸರ್ವಸಮಷ್ಟಿಯನ್ನೂ ಗ್ರಹಿಸಿದನು. ಅಷ್ಟರಲ್ಲಿ ಒಂದು ಅದ್ಭುತ ನಡೆಯಿತು. ಆ ಅದ್ಭುತ ಅಂದು ಅಷ್ಟೇನೂ ಅಸಾಧಾರಣವಾಗಿ ತೋರಲಿಲ್ಲ; ಆಕಸ್ಮಿಕವಾಗಿ ಒದಗಿದಂತೆಯೂ ಇತ್ತು. ಆದರೆ ಆ ಅದ್ಭುತ ಪರಮಹಂಸರ ಸ್ಪರ್ಶದಿಂದ ವಿವೇಕಾನಂದರಿಗೆ ಒದಗಿದ ದಿವ್ಯಾನುಭವದಷ್ಟೇ ಪವಾಡವಾಗಿತ್ತು. ವ್ಯತ್ಯಾಸವಿಷ್ಟೇ: ಅಂದು  ಅದು ಆಂತರಿಕಾನುಭವವಾಗಿ ಬಂದಿತ್ತು; ಇಂದು ಬಹಿರಂಗ ಘಟನೆಯಾಗಿ ಮೈದೋರಿತು.[7]

ಆ ಸಾಗರ ಸಾಹಸದ ಕಥೆಯನ್ನು ನೀವೆಲ್ಲ ಓದಿದ್ದೀರಿ. ಅದರ ವಿದ್ಯುತ್‌ವೈಭವಕ್ಕೆ ಮಾರುಹೋಗಿದ್ದೀರಿ. ನಿಮ್ಮ ಹೃದಯದ ತೊಟ್ಟಿಲುಗಳಲ್ಲಿಯೂ ಅಂತಹ ಸಾಹಸವನ್ನು ಅನುಕರಿಸುವ ಮಹತ್ವಾಕಾಂಕ್ಷೆಯ ಶಿಶು ಒಮ್ಮೊಮ್ಮೆ ತೊದಲಿರಬಹುದು; ಇನ್ನೊಮ್ಮೆ ಅಂಬೆಗಾಲಿಕ್ಕಿರಲೂಬಹುದು. ಆದರೆ ಅದು ಎದ್ದುನಿಂತು ಓಡಾಡುವುದಕ್ಕೆ ಮೊದಲೆ ಒಂದಿನಿತು ವಿವೇಚನೆ ಮಾಡುವುದು ಶ್ರೇಯಸ್ಕರ.

ವಿವೇಕಾನಂದರು ಅಮೆರಿಕಾಕ್ಕೆ ಹೋಗಿ ದಿಗ್ವಿಜಯ ಗಳಿಸಿ ಬಂದಮೇಲೆ ಅವರಂತೆಯೆ ವಿಖ್ಯಾತರಾಗುವುದಕ್ಕೆ ಅನೇಕ ಭಾರತೀಯರು ಪ್ರಯತ್ನಿಸಿದರು. ಅವರಲ್ಲಿ ಇಂದಿಗೂ ಬಹುಜನ ಅಖ್ಯಾತರಾಗಿಯೊ ಉಳಿದಿದ್ದಾರೆ. ಆದರೂ ವಿದೇಶಗಳಲ್ಲಿ ಯೋಗ್ಯತಾ ಪತ್ರಿಕೆ ಪಡೆಯದೆ ತಮ್ಮ ನಾಡಿನಲ್ಲಿ ತಮಗೆ ಕೀರ್ತಿ ಲಭಿಸುವುದಿಲ್ಲ ಎಂಬ ಭಾವನೆ ಬಹುಮಟ್ಟಿಗೆ ಸಕಲ ಮನೋವ್ಯಾಪ್ತಿಯಯಾಗಿದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ದಾಸ್ಯ ಸಹಜವಾದ ಅತೀವ ಪರಪ್ರತ್ಯಯನೇಯ ಬುದ್ಧಿ ತನ್ನ ಯೋಗ್ಯತೆಯನ್ನೆ ತಾನು ಮರೆಯುತ್ತದೆ. ಅನ್ಯರು ಕೊಟ್ಟಲ್ಲದೆ ತನ್ನವರಿಗೆ ಅದು ಬೆಲೆ ಕೊಡುವುದಿಲ್ಲ. ಹಿತ್ತಲ ಗಿಡ ಅದಕ್ಕೆ ಮದ್ದಲ್ಲ. ಇತರರು ಕೊಟ್ಟ ಬೆಲೆಯನ್ನೆ ತಾನೂ ಕಟ್ಟುತ್ತದೆ. ಐರ್ಲೆಂಡಿನ ಈಟ್ಸ್ ಕವಿ ಕಟ್ಟಿದ ಮೇಲೆ, ನೊಬೆಲ್‌ಬಹುಮಾನವು ಆ ಬೆಲೆಯನ್ನು ಕೊಟ್ಟ ಮೇಲೆ ತಾನೆ ನಮ್ಮ ರವೀಂದ್ರರಿಗೂ ಇಲ್ಲಿ ಬೆಲೆ ಬಂದದ್ದು! ಅದಕ್ಕೆ ಪೂರ್ವದಲ್ಲಿಯೆ ಮೂವತ್ತು ನಾಲ್ವತ್ತು ವರ್ಷಗಳಿಂದ ಅವರು ಬರೆಯುತ್ತಿದ್ದರೂ ಭಾರತೀಯ ಲಕ್ಷ್ಯ ಅತ್ತಕಡೆ ಹರಿದಿರಲಿಲ್ಲ. ಇಂತಹ ನಾಲ್ಕಾರು ಪ್ರಸಿದ್ಧ ನಿದರ್ಶನಗಳು ಯಾರ ತಲೆಗೆ ಬೇಕಾದರೂ ಹೊಳೆಯುತ್ತವೆ. ಹೆಸರಿಸಬೇಕಾಗಿಲ್ಲ. ಅದನ್ನಿಲ್ಲಿ ಹೇಳುವ ಉದ್ದೇಶವಿಷ್ಟೆ: ನಮ್ಮ ಪರಪ್ರತ್ಯಯನೇಯ ಬುದ್ಧಿ ಅತ್ಯಂತ ಅವಹೇಳನಕರವೂ ಅಸಹ್ಯವೂ ಆಗುವಷ್ಟರ ಮಟ್ಟಿಗೆ ಬೆಳೆದಿದೆ. ಸ್ವಾತಂತ್ಯ್ರ ಬಂದ ಮೇಲಾದರೂ ಅದು ಕಡಿಮೆಯಾಗಬಹುದೆಂಬ ಆಶೆಯಿತ್ತು. ಬರಿಯ ರಾಜಕೀಯವಾದ ಸ್ವಾತಂತ್ಯ್ರದಿಂದ ಅಂತಹ ಆತ್ಮಶ್ರದ್ಧೆ ಸಂಭವಿಸುವುದಿಲ್ಲ ಎಂಬುದು ಹೆಚ್ಚುಹೆಚ್ಚಾಗಿ ಮನದಟ್ಟಾಗುತ್ತಿದೆ. ಏಕೆಂದರೆ ಸಮಾಚಾರ ಸಂಚಾರಾದಿ ಸೌಕರ್ಯ ಸೌಲಭ್ಯಗಳ ದೆಸೆಯಿಂದಾಗಿ ಆ ದೌರ್ಬಲ್ಯ ದಿನದಿನಕ್ಕೂ ಉಲ್ಬಣಿಸುತ್ತಿರುವಂತೆ ತೋರುತ್ತದೆ. ಯಂತ್ರ ನಾಗರಿಕತೆಯಲ್ಲಿ ನಮಗೆ ಮಾರ್ಗದರ್ಶಕವಾಗಬಹುದಾದ ಅಮೆರಿಕೆ ಜಗತ್ತಿನ ಶಾಂತಿಪಾಲನೆಯಲ್ಲಿಯೂ ಶಾಂತಿಸಾಧನೆಯಲ್ಲಿಯೂ ಗುರುವಾಗುತ್ತದೆ ಎಂಬುದು ಬರಿಯ ಭ್ರಾಂತಿ. ಎಷ್ಟು ಅರ್ಥಸಿದ್ಧಿಯಿದ್ದರೇನು? ಎಷ್ಟು ಯಂತ್ರಬುದ್ಧಿಯಿದ್ದರೇನು?  ತನ್ನ ಶಾಂತಿಯನ್ನೆ ತಾನು ಸಂಪಾದಿಸಿಕೊಳ್ಳಲಾರದ ದೇಶ ಅನ್ಯದೇಶಗಳಿಗೆ ಎಂತು ತಾನೆ ಶಾಂತಿದಾನ ಮಾಡಬಲ್ಲುದು? ಮೊದಲ ಸಾರಿ ಅಮೆರಿಕಾಕ್ಕೆ ಹೋದಾಗ ವಿವೇಕಾನಂದರೂ ಅಮೆರಿಕಾದ ಅರ್ಥಬಲದಿಂದ ನಮ್ಮ ದಾರಿದ್ಯ್ರದ ಅನರ್ಥವನ್ನು ಪರಿಹರಿಸಿಕೊಳ್ಳಬಹುದೆಂಬ ಹಿರಿಯಾಸೆಗೆ ಪಕ್ಕಾಗಿದ್ದರು. ಆದರೆ ಎರಡನೆಯ ಸಾರಿ ಅಲ್ಲಿಗೆ ಹೋಗುವ ವೇಳೆಗೆ “ಅರ್ಥ ಮಂತ್ರದಿಂದ ಅನರ್ಥವಲ್ಲದೆ ಬೇರೆಯೇನೊ ಸಿದ್ಧಿಸದು” ಎಂಬುದು ಮನದಟ್ಟಾಗಿ, ಅಲ್ಲಿಯ ಧನಿಕವರ್ಗದವರನ್ನು ಆಶ್ರಯಿಸುವುದಕ್ಕೆ ಬದಲಾಗಿ ‘ತಪೋಧನ’ರನ್ನೂ ಆತ್ಮಶ್ರೀಸಾಧನಾ ಕಾಂಕ್ಷಿಗಳನ್ನೂ ಆಕರ್ಷಿಸಿ ತಮ್ಮ ಕಾರ್ಯಸಾಧನೆಗೆ ತಳಹದಿ ಹಾಕಿದರು. ಆ ಕಾರ್ಯಸಾಧನೆ ರಾಜಕೀಯಘಟನಾ ಪರಂಪರಗಳಂತೆ ಪತ್ರಿಕೆಗಳಲ್ಲಿ ದಿನಂಪ್ರತಿ ದಪ್ಪಕ್ಷರಗಳಲ್ಲಿ ಘೋಷಿತವಾಗಿ ಜಗತ್ತಿನ ಜನಕೋಟಿಯ ಹೃದಯಗಳಲ್ಲಿ ಅದ್ಭುತಾನುಭವ ಸ್ಪಂದನಗಳನ್ನೆಬ್ಬಿಸುವಂಥಾದ್ದಲ್ಲ. ಅದು ಮಾನವಹೃದಯದ ಮೂಲಪರಿವರ್ತನೆಗೆ ಸಂಬಂಧಪಟ್ಟದ್ದು. ಯಾವ ಪರಿವರ್ತನೆಯಿಂದ ಅಶಾಂತಿಮೂಲವಾಗಿ ಸದ್ಯಕ್ಕೆ ಮಾನವಸಹಜವಾಗಿರುವ ಅಸ್ಮಿತಾಸಕ್ತಿಯ ಶಾಖೆಗಳಾದ ಅಹಂಕಾರ, ದ್ವೇಷ, ಸ್ಪರ್ಧೆ, ಅಸೂಯೆ, ಪ್ರತೀಕಾರಾದಿ ಆಸುರೀಗುಣಗಳು ಚಿರಶಾಂತಿಕರವೂ ನಿತ್ಯಾನಂದಕರವೂ ಆಗಿರುವ ದೈವೀಗುಣಗಳಾಗುವುವೊ ಅಂತಹ ತಪಸ್ಯೆಗೆ ಸಂಬಂಧಪಟ್ಟದ್ದು. ಅತಿ ಶೀಘ್ರಸಿದ್ಧಿಯ ಆತುರತೆಗೆ ಅಲ್ಲಿ ಎಡೆಯಿಲ್ಲ. ಸ್ವಪ್ರತಿಷ್ಠೆಗೆ ಅಲ್ಲಿ ಸ್ಥಾನವಿಲ್ಲ; ಅದು ಕೀರ್ತಿಶನಿಯ ಕ್ರೀಡಾರಂಗವಲ್ಲ. ಅದು ಪೂರ್ಣತ್ಯಾಗದಿಂದ ಪೂರ್ಣ ಸಿದ್ಧಿಯನ್ನು ಪಡೆಯುವ ಪೂರ್ಣದೃಷ್ಟಿಯ ತಪೋನಂದನ. ಅದಕ್ಕೆ ಬೇಕಾದುದು ತಪಸ್ಯೆ; ಎಲ್ಲರೂ ಅಮೆರಿಕಾಕ್ಕೆ ಹೋಗಬೇಕಾದುದಿಲ್ಲ. ಕೀರ್ತಿವಂತರಾಗಬೇಕಾದುದೂ ಇಲ್ಲ. ಎಲ್ಲಿದ್ದರಲ್ಲಿಯೆ, ಏನಾಗಿದ್ದರದಾಗಿಯೆ, ಅನ್ಯಸ್ಥಾನಕ್ಕೆ ಅಸೂಯೆಪಡದೆ, ತನ್ನ ಸ್ಥಾನವನ್ನು ಅಗೌರವಿಸದೆ. ಚಮ್ಮಾರನಾಗಲಿ ಚಕ್ರವರ್ತಿಯಾಗಲಿ ಸಮದರ್ಶನದಿಂದ ಕೈಗೊಳ್ಳಬೇಕಾದ ತಪಸ್ಯೆ ಅದು:

‘ಶ್ರೀ ಸಾಮಾನ್ಯವೆ ಭಗವನ್‌ಮಾನ್ಯಂ:
ಶ್ರೀ ಸಾಮಾನ್ಯನೆ ಭಗವದ್‌ಧನ್ಯಂ!’

ಎಂಬುದು ಅದರ ಮಂತ್ರ.

“ಸಾಮಾನ್ಯತೆ ಭಗವಂತನ ರೀತಿ;
ಸಾಮಾನ್ಯವೆ ಭಗವತ್ ಪ್ರೀತಿ!”

ಎಂಬುದು ಅದರ ತಂತ್ರ. ‘ಸಾಮಾನ್ಯವೆ ಸರ್ವಮಾನ್ಯ’ ಎಂಬ ಅನುಭವವು ಸಾಮಾನ್ಯವಾದಾಗ ಜಗತ್‌ಶಾಂತಿ ಸ್ವತಃಸಿದ್ಧ.

ವಿವೇಕಾನಂದರ ಅಮೇರಿಕೆಯಾತ್ರೆಯನ್ನು ಪೂರ್ಣದೃಷ್ಟಿಯಿಂದ ಪರಿಶೀಲಿಸಬೇಕು. ಅದರ ಉದ್ದೇಶ ಪ್ರಯೋಜನಗಳನ್ನು ನಿಜವಾಗಿಯೂ ವೈಜ್ಞಾನಿಕವಾಗಿ ಗೊತ್ತುಹಚ್ಚಬೇಕು. ಅದರಿಂದಾದುದೇನು: ವಿವೇಕಾನಂದರ ಸ್ವಂತ ಪ್ರಖ್ಯಾತಿಯೆ? ಭರತಖಂಡದ ಮತ್ತು ಹಿಂದೂಧರ್ಮದ ಪ್ರತಿಷ್ಠೆಯೆ? ಅನ್ಯಮತಗಳ ಅಹಂಕಾರಕ್ಕೆ ಒದಗಿದ ಆಘಾತವೆ? ಆವೊತ್ತಿವರೆಗೆ ಪಾಶ್ಚಾತ್ಯ ಮತದೃಷ್ಟಿಗೆ ಸಂಪೂರ್ಣವಾಗಿ ಅಪರಿಚಿತವೂ ಅಸಹನೀಯವೂ ಅಸಾಧುವೂ ಆಗಿದ್ದ ಸರ್ವಧರ್ಮ ಸಮನ್ವಯದೃಷ್ಟಿಯ ಪ್ರಪ್ರಥಮ ಸಾರ್ವಲೌಕಿಕ ಪ್ರತಿಷ್ಠಾಪನಾಂಕುರಾರ್ಪಣೆಯೆ? ಮೇಲೆ ಹೇಳಿದ ನಾಲ್ಕು ಪ್ರಯೋಜನಗಳಲ್ಲಿ ಮೊದಲ ಮೂರು ಒಂದಲ್ಲ ಒಂದು ರೀತಿಯಿಂದ ಅಹಂಕಾರ ಮೂಲವಾಗಿವೆ; ಕೀರ್ತಿಶನಿಯ ಕಿಂಕರರಾಗಿವೆ. ಆ ಮಿಥ್ಯಾಪ್ರಯೋಜನಗಳನ್ನು ತಿರಸ್ಕರಿಸಿದರೆ ಉಳಿಯುವುದು ಕೊನೆಯದಾದ ಆತ್ಮಶ್ರೀಕರವಾದ ಸತ್ಯ ಪ್ರಯೋಜನ. ನಿಜವಾಗಿಯೂ ಭರತಖಂಡ ಹಿಂದೆಯೂ ಇನ್ನು ಮುಂದೆಯೂ ಲೋಕದ ಶ್ರೇಯಸ್ಸಿಗಾಗಿ ದಾನಮಾಡಬೇಕಾಗಿರುವ ನಿತ್ಯಸತ್ಯದ ಮತ್ತು ಶಾಶ್ವತಶಾಂತಿಯ ದಿವ್ಯ ಸಂದೇಶ: ಸರ್ವಧರ್ಮಸಮನ್ವಯದೃಷ್ಟಿ; ಸರ್ವ ಸಮತೆ;  ಸರ್ವೋದಯ, ಸರ್ವಪುಷ್ಟಿ, ಮತ್ತು ಸರ್ವತುಷ್ಟಿ.[8]

ಪ್ರಪಂಚದ ಸ್ವಮತಭ್ರಾಂತಿಯ ಎದೆಗೆ ಭರತಖಂಡವು ಹೊಡೆದ ಮೊದಲ ಸಿಡಿಲ್‌ಗುಂಡು ಸ್ವಾಮಿ ವಿವೇಕಾನಂದರು ಚಿಕಾಗೊ ಸರ್ವಧರ್ಮಸಮ್ಮೇಳನದಲ್ಲಿ ಮಾಡಿದ ದಿವ್ಯೋಜ್ವಲವಾದ ಭಾಷಣ! ಅವರ ತರುವಾಯ ಅವರನ್ನು ಹಿಂಬಾಲಿಸಿ ಅನುಸರಿಸಿ ಅನೇಕ ಮಹನೀಯರು ಆ ವೇದಾಂತ ದೃಷ್ಟಿಯ ಉದಾರವಾಣಿಯನ್ನು ಬೇರೆ ಬೇರೆ ದೇಶಗಳಲ್ಲಿ ಅದ್ಭುತವಾಗಿ ಸಾರಿದ್ದಾರೆ; ಮತ್ತು ಸಾರುತ್ತಲೂ ಇದ್ದಾರೆ. ವಿವೇಕಾನಂದರ ತರುವಾಯ ಶ್ರೀ ರಾಮಕೃಷ್ಣರ ಇತರ ಅಂತರಂಗಶಿಷ್ಯರಲ್ಲಿ ಕೆಲರೂ, ಮತ್ತು ಸಾಮಾನ್ಯಶಿಷ್ಯರಲ್ಲಿ ಬಹುಜನರೂ ಶ್ರೀ ರಾಮಕೃಷ್ಣ ಮಹಾಸಂಘದ ಆಶ್ರಯದಲ್ಲಿ ಆ ಸಂದೇಶ ಕಾರ್ಯಕ್ಕೆ ನಿವೇದಿತರಾಗಿ ನಿರಂತರವೂ ನಿಶ್ಯಬ್ಧವಾಗಿ ಅನಾಮವಾಗಿ ದುಡಿಯುತ್ತಿದ್ದಾರೆ. ರವೀಂದ್ರರು, ಗಾಂಧೀಜಿ, ಶ್ರೀ ಅರವಿಂದರು ಮೊದಲಾದ ವಿಭೂತಿಗಳು, ರಾಧಾಕೃಷ್ಣನ್‌ಮೊದಲಾದ ತತ್ತ್ವಶಾಸ್ತ್ರಜ್ಞರೂ, ನೆಹರೂ ಮೊದಲಾದ ರಾಜಕಾರಣ ನಿಪುಣರೂ ಆ ಸಂದೇಶವನ್ನು ನಾನಾಮುಖಗಳಿಂದ ವಿಸ್ತರಿಸಿದ್ದಾರೆ. ಹೆಸರು. ಕೀರ್ತಿ. ಪ್ರಸಿದ್ಧಿ ಇವುಗಳಿಗೇನಾದರೂ ಬೆಲೆಯಿದ್ದರೆ ಆ ಅಮೃತ ಸಂದೇಶ ಪ್ರಸಾರಕಾರ್ಯಕ್ಕೆ ಪ್ರಣಾಳಿಕೆಗಳಾಗುವುದರಲ್ಲಿಯೆ. ಇತರ ಅಭಿಸಂಧಿಗಳೆಲ್ಲ ಬರಿಯ ಕೆಲಸಕ್ಕೆ ಬಾರದ ಅಹಂಭ್ರಾಂತಿ.

ಅಂತಹ ಅಹಂಭ್ರಾಂತಿಗೆ ಮರುಳಾಗದೆ, ಆ ಅಮೃತಸಂದೇಶದ ಅನುಷ್ಠಾನದಲ್ಲಿ ನಿರತರಾಗಬೇಕಾದುದು ನಮ್ಮ ಸದ್ಯದ ಕರ್ತವ್ಯ. ಅಂತಹ ತಪಸ್ಯೆಯಿಂದ ತಮಗೆ ತಾವಾಗಿಯೆ ಹೊರಹೊಮ್ಮಿದರೆ ಹೊಮ್ಮಲಿ-ಕೀರ್ತಿ, ಸ್ಥಾನ, ಮಾನ, ಸಮಾಜಗೌರವ, ಸಮಾಜಸುಧಾರಣೆ, ಅರ್ಥಲಾಭ, ಯಶೋಲಾಭ, ಇತ್ಯಾದಿ ಉಪಲಭ್ಯಗಳು. ಅವುಗಳನ್ನು ಬೇಡವೆನ್ನುವ ವೈರಾಗ್ಯವೂ ಕೀರ್ತಿಶನಿಯ ವೇಷಾಂತರವಾಗದಂತೆ ನಾವು ಹೃತ್ಪೂರ್ವಕವಾಗಿ ವಿನಯಶೀಲರಾಗಬೇಕಾದುದು ನಮ್ಮ ಆಧ್ಯಾತ್ಮಿಕ ಕ್ಷೇಮಕ್ಕೆ ಅತ್ಯಾವಶ್ಯಕ.

“ತೇನ ತ್ಯಕ್ತೇನ ಭುಂಜೀಥಾ ಮಾ ಗೃಧಃ ಕಸ್ಯಸ್ವಿದ್‌ಧನಂ”

ಎಂಬುದು ಉಪನಿಷತ್ತಿನ ಮಂತ್ರೋಪದೇಶ. ಅದು ‘ಮಾ ಗೃಧಃ’ ಎಂದು ಮಾತ್ರ ಹೇಳಿಲ್ಲ. ‘ಭುಂಜೀಥಾ’ ಎಂದೂ ಆಶೀರ್ವದಿಸಿದೆ. ವ್ಯಷ್ಟಿಸಿದ್ಧಿ ಅತ್ಯಾವಶ್ಯಕ; ಆದರೆ ಅದು ಸಮಷ್ಟಿಸಿದ್ಧಿಗೆ ಸಮರ್ಪಿತವಾಗದಿದ್ದರೆ ಲೋಕ ಕಲ್ಯಾಣವು ದೂರದೂರವಾಗಿ ಬಹಿದೀರ್ಘಸೂತ್ರಿಯಾಗಬೇಕಾದೀತು. ನಾವು ಬಯಸುವ ಶಾಂತಿ ನಾವು ಬಯಸುವ ಪ್ರಮಾಣದಲ್ಲಿ ಸ್ಥಾಪಿತವಾಗುವುದಕ್ಕೆ ಬಹಳಕಾಲ ಬೇಕಾಗಬಹುದು:

“ಇಳಿತಂದುದು ಈ ಭೂಮಿಗೆ
ಅವತಾರದ ಮೇಲವತಾರ:
ಆದುದ್ದಾರಕೆ ಸಾವಿರಮಡಿ
ಇಹುದಾಗುವ ಉದ್ದಾರ!”

ಆದರೆ ಸಾಧಕನಾದವನ ಶ್ರದ್ಧೆ ಹಿಂಜರಿಯುವುದಿಲ್ಲ. ವಿವೇಕಾನಂದರು ನಮಗಿತ್ತಿರುವ ಈ ಕರೆಯನ್ನು ಆಲಿಸಿ:

ಓ ಮಾನವ, ಅತೀತದ ಪೂಜೆಯಿಂದ ಪ್ರತ್ಯಕ್ಷದ ಪೂಜೆಗೆ, ನಿನಗಿದೋ ಆಹ್ವಾನ! ಹೋದ ದುಃಖದಿಂದ ಬರುವ ಸುಖಕ್ಕೆ, ನಿನಗಿದೋ ಆಹ್ವಾನ! ಗತಾನುಶೋಚನೆಯಿಂದ ಆಧುನಿಕ ನವಪ್ರಯತ್ನಕ್ಕೆ, ನಿನಗಿದೋ ಆಹ್ವಾನ! ಲುಪ್ತಪಂಥದ ಪುನರುದ್ಧಾರಸಾಹಸದೆ ವೃಥಾಶಕ್ತಿಕ್ಷಯದಿಂದ ಸದ್ಯೋನಿರ್ಮಿತ ವಿಶಾಲ ಸನ್ನಿಕಟ ಪಥಕ್ಕೆ, ನಿನಗಿದೋ ಆಹ್ವಾನ! ಓ ಬುದ್ಧಿಮಾನ್‌ಮಾನವಾ, ಇದನ್ನು ತಿಳಿ; ಸಿದ್ದನಾಗು, ಪ್ರಬುದ್ಧನಾಗು!

“ಯಾವ ಶಕ್ತಿಯ ಉನ್ಮೇಷ ಮಾತ್ರದಿಂದಲೆ ದಿಗ್ದಿಗಂತವ್ಯಾಪಿಯಾದ ಪ್ರತಿಧ್ವನಿಯಿಂದ ಜಗತ್ತು ಜಾಗ್ರತವಾಗುತ್ತಿರುವುದೋ ಆ ಶಕ್ತಿಯ ಪೂರ್ಣತ್ವವನ್ನು ಭಾವಿಸಿ ಅನುಭವಿಸು; ವೃಥಾ ಸಂದೇಹಬೇಡ; ದುರ್ಬಲತೆ ಬೇಡ ದಾಸಜಾತಿ ಸುಲಭವಾದ ಈರ್ಷ್ಯಾದ್ವೇಷಗಳನ್ನು ದೂರಮಾಡಿ ಈ ಮಹಾ ಯುಗಚಕ್ರ ಪರಿವರ್ತನೆಯ ಸಹಾಯಾರ್ಥವಾಗಿ ಹೆಗಲುಕೊಟ್ಟು ನಿಲ್ಲು; ಸೊಂಟಕಟ್ಟಿ ನಿಲ್ಲು; ಧೀರನಾಗಿ ನಿಲ್ಲು!”

“ನಾವು ಪ್ರಭುವಿನ ದಾಸರು, ಪ್ರಭುವಿನ ಪುತ್ರರು; ಪ್ರಭುವಿನ ಲೀಲೆಗೆ ಸಹಾಯಕರು ಎಂಬುದನ್ನು ತಿಳಿ. ವಿಶ್ವಾಸಹೃದಯದಿಂದ ದೃಢಭಾವಧಾರಿಯಾಗಿ ಕಾರ್ಯಕ್ಷೇತ್ರಕ್ಕೆ ಧುಮುಕು! ನಿರ್ಭರತೆಯಿಂದ ಧುಮುಕು!”