“ಯುಗದೊಳ್ಪಿಗೆ ಜಗದೊಳ್ಪಿಗೆ
ನಿನ್ನೊಳ್ಪೊನೆ ನೀಂ ಗೆಲ್ಲು”
– ಶತಮಾನ ಸಂಧ್ಯೆ

‘ಸ್ವಾಮಿ ವಿವೇಕಾನಂದ’ರ ಜೀವನಚರಿತ್ರೆಯನ್ನು ಕುರಿತು ನಾವು ಸಮಾಲೋಚನೆ ಮಾಡಲಿರುವ ಈ ಲೇಖನದ ಮೂರು ಭಾಗಗಳಲ್ಲಿ ಮೊದಲನೆಯದು ‘ವ್ಯಷ್ಟಿಸಿದ್ಧಿ’; ಎರಡನೆಯದು ‘ಸಮಷ್ಟಿಸಿದ್ಧಿಗಾಗಿ’; ಮೂರನೆಯದು ‘ದೃಷ್ಟಿಯಂತೆ ಸೃಷ್ಟಿ.’ ಮೊದಲನೆಯದರಲ್ಲಿ: ನರೇಂದ್ರನು ವಿವೇಕಾನಂದರಾದದ್ದು ಹೇಗೆ? ವ್ಯಕ್ತಿಜೀವನ ದೃಷ್ಟಿಯಿಂದ ಅದರ ಅರ್ಥವೇನು? ಮಹಿಮೆಯೇನು? ಪ್ರಯೋಜನವೇನು? ಎರಡನೆಯದರಲ್ಲಿ:  ವಿವೇಕಾನಂದರು ಅಮೆರಿಕಾಕ್ಕೆ ಹೋದದ್ದು ಏಕೆ? ಪ್ರಪಂಚ ಜೀವನ ದೃಷ್ಟಿಯಿಂದ ಅದಕ್ಕೆ ಅರ್ಥವೇನು? ಅದರ ಬೆಲೆಯೇನು? ಅದರಿಂದ ಪ್ರಯೋಜನವೇನು? ಮೂರನೆಯದರಲ್ಲಿ: ಅಂತಹ ಜಿಜ್ಞಾಸೆಯಿಂದ, ಅಂತಹ ಪರಿಶೀಲನೆಯಿಂದ ನಮ್ಮಲ್ಲಿ ಎಂತಹ ದೃಷ್ಟಿ ಮೂಡುತ್ತದೆ; ವ್ಯಷ್ಟಿಯಲ್ಲಿ ಹಾಗೆ ಸಿದ್ಧವಾಗುವ ದೃಷ್ಟಿ ಮುಂದಣ ಜಗತ್‌ಸಮಾಜದ ಸಮಷ್ಟಿಸೃಷ್ಟಿಗೆ ಏನು ಬೆಳಕು ನೀಡುತ್ತದೆ? ಯಾವ ತಪಸ್ಸನ್ನು ಆಶಿಸುತ್ತದೆ? ಎಂತಹ ಶಕ್ತಿಯನ್ನು ಆಹ್ವಾನಿಸುತ್ತದೆ? ಅಂತಹ ದಿವ್ಯದರ್ಶನದಿಂದ ದೀಪ್ತವಾಗುವ ವ್ಯಷ್ಟಿಸಿದ್ಧಿಯಿಂದ ಎಂತಹ ಸಮಷ್ಟಿಸಿದ್ಧಿ ಸಂಸ್ಥಾಪಿತವಾಗಿ ಸರ್ವೋದಯವಾಗಲು ಸಾಧ್ಯವಾಗುತ್ತದೆ?

ವಿವೇಕಾನಂದರ ಜೀವನ ಚರಿತ್ರೆಯನ್ನು ಕುರಿತು ಈ ಪರ್ಯಾಲೋಚನೆ ಮೂರು ಭಾಷಣಗಳಲ್ಲಿ ಹಸುಗೆಗೊಂಡಿದ್ದರೂ ಅವುಗಳನ್ನು ಒಂದೇ ತ್ರಿಕೋನದ ಬೇರೆ ಬೇರೆ ಭುಜಗಳಂತೆ ಭಾವಿಸಬೇಕು. ಏಕೆಂದರೆ ಪೂರ್ಣದೃಷ್ಟಿಗಲ್ಲದೆ ಪೂರ್ಣ ಪ್ರಯೋಜನ ಲಭಿಸುವುದಿಲ್ಲ.

ವಿವೇಕಾನಂದರ ಜೀವನ ಚರಿತ್ರೆಯನ್ನು ಓದುವ ತರುಣರು ಮೊದಲು ಬೆರಗಾಗುವುದು ಅದರ ಅದ್ಭುತಕ್ಕೆ; ಪೌರಾಣಿಕ ಎಂಬಂತಿರುವ ಅದರ ಸಾಹಸಪೂರ್ಣತೆಗೆ; ರೋಮಾಂಚನಕರವೂ ಅಲೋಕಭವ್ಯವೂ ಆಗಿ ತೋರುವ ಅದರ ಉಜ್ವಲ ವಿಭೂತಿಯ ದುರ್ದಮ್ಯಶಕ್ತಿಗೆ. ಆ ವ್ಯಕ್ತಿತ್ವದ ಪ್ರಚಂಡ ಜ್ಯೋತಿಯ ಮುಂದೆ, ಅದರ ಅಪ್ರತಿಹತವಾದ ದೈತ್ತೋಪಮವಾದ ದಿವ್ಯಾಧಿಕಾರದ ಮುಂದೆ ಓದುಗನ ಕಿರಿಯ ವ್ಯಕ್ತಿತ್ವ ಅಪ್ಪಳಿಸಿದಂತಾಗಿ ಶರಣುಹೋಗುತ್ತದೆ. ಆದರೂ ಒಡನೊಡೆಯೆ ಅದರ ಭೀಮಶಕ್ತಿ ನಮ್ಮ ನಾಡಿನಾಡಿಗಳಲ್ಲಿ ಹರಿದು ಅಲ್ಲಿಯ ದುರ್ಬಲತೆ ಅಲ್ಪತೆಗಳನ್ನೆಲ್ಲ ಕೊಚ್ಚಿ ನಮ್ಮ ಹೃದಯಗಳಲ್ಲಿಯೂ ತನ್ನ ಮಹಾಶಕ್ತಿಯನ್ನು ಉದ್ದೀಪಿಸಿ, ನಮ್ಮನ್ನೂ ತನ್ನತನಕ್ಕೆ ಏರಿಸುತ್ತಿರುವ ದಿವ್ಯಾನುಭವವೂ ಸ್ಫುರಿಸುತ್ತದೆ.

ಅಂತಹ ಶಕ್ತಿ ನರೇಂದ್ರನಲ್ಲಿ ಹೇಗೆ ಆವಿರ್ಭಾವವಾಯಿತು? ಇತರರಂತೆ ಕಾಲೇಜಿನ ಸಾಮಾನ್ಯ ವಿದ್ಯಾರ್ಥಿಯಾಗಿದ್ದ ಆತನಲ್ಲಿ ಜಗತ್‌ಕಂಪನಕಾರಿಯಾಗುವ ಶಕ್ತಿ ಹೇಗೆ ಉದ್ಭವಿಸಿತು? ಅಂತಹ ಎಳವಯಸ್ಸಿನಲ್ಲಿಯೆ ಆ ಅದ್ಭುತ ಮೇಧಾಶಕ್ತಿ, ಆ ಆಧ್ಯಾತ್ಮಿಕ ಓಜಸ್ಸು, ಆ ನಿರ್ಝರೋಪಾಮ ವಾಗ್ಮಿತೆ, ಆ ಧೀರೋದಾತ್ತ ಸಿಂಹಧೈರ್ಯ, ಆ ಸರ್ವರಹಸ್ಯ ಹೃದಯಭೇದಿಯಾದ ಯೋಗದೃಷ್ಟಿ, ನಿಶ್ಚಲ ನಿರ್ವಿವಾದವಾದ ಆತ್ಮಾನುಭವ ಇವೆಲ್ಲ ಆತನಿಗೆ ದೊರೆಕೊಂಡುದು ಹೇಗೆ?

ಈ ಪರಿಶೀಲನೆ ಇಂದಿನ ತರುಣರಿಗಂತೂ ಅತ್ಯಗತ್ಯ. ಏಕೆಂದರೆ “ಸ್ವಪ್ರಯತ್ನದಿಂದಲೇ ಸರ್ವವನ್ನೂ ಸಾಧಿಸುತ್ತೇನೆ” ಎಂಬ ಅಹಂಕಾರ ಮೂಲವಾದ ಸಾಹಸ ಗರ್ವದ ಹುಲಿ ಒಂದುಕಡೆ; “ನನ್ನಿಂದ ಏನಾಗುತ್ತದೆ? ಎಲ್ಲ ಹಣೆಯ ಬರಹ; ಪಡೆದುಕೊಂಡು ಬಂದಷ್ಟು  ಲಭಿಸುತ್ತದೆ; ನಾನು ಎಷ್ಟು ಒದ್ದಾಡಿದರೂ ದೇವರು ಅಸ್ತು ಎನ್ನದಿದ್ದರೆ ಏನೂ ಆಗುವುದಿಲ್ಲ” ಎಂಬ ತಮಃಪ್ರಧಾನವೂ ಆಲಸ್ಯ ಮೂಲವೂ ಆದ ಹೆಂಬೇಡಿತನದ ದರಿ ಮತ್ತೊಂದು ಕಡೆ. ಹೀಗೆ ಅಪಾಯವೆರಡರ ನಡುವೆ ಅನಾಹುತದ ಅಂಚಿನಲ್ಲಿ ಓಡಾಡುತ್ತದೆ ಅನೇಕ ತರುಣ ಮನಸ್ಸು.

ವಿವೇಕಾನಂದರ ಜೀವನ ಚರಿತ್ರೆಯನ್ನು ಎಚ್ಚರಿಕೆಯಿಂದ ಗಮನಿಸಿದರೆ ಹುಲಿಯ ಮೇಲೆಯೆ ಏರಿ ದರಿಯನ್ನು ನೆಗೆಯುವ ಮಹೋಪಾಯವನ್ನು ಸಂದರ್ಶಿಸುತ್ತೇವೆ.

ವಿವೇಕಾನಂದರಲ್ಲಿ ಪ್ರಕಾಶವಾಗಿರುವ ಸರ್ವಮಹತ್ತನೂ ನರೇಂದ್ರನಲ್ಲಿ ಬೀಜರೂಪವಾಗಿ ಸಂಸ್ಕಾರರೂಪವಾಗಿ ಇತ್ತೆಂದು ಒಪ್ಪಿಕೊಂಡರೂ ಅದು ವ್ಯಕ್ತಿಯ ಸಾಧನೆಯೂ ಅದಕ್ಕೆ ಸಂವಾದಿಯಾದ ಗುರುಶಕ್ತಿಯ ಕೃಪೆಯೂ ಇಲ್ಲದೆ ವ್ಯಕ್ತವಾಗಲಾರದು ಎಂಬುದು ಸ್ಪಷ್ಟವಾಗುತ್ತದೆ. ನೆಲ ನೀರು ಗಾಳಿಗಳ ಗುರುಕೃಪೆಯಿದ್ದರೆ ತಾನೆ, ಬೀಜದಲ್ಲಿ ಗುಪ್ತವಾಗಿರುವ ವೃಕ್ಷತ್ವ ತನ್ನ ಸುಪ್ತಿಯಿಂದ ಎಚ್ಚತ್ತು ಬೆಳೆಯಲು ಸಾಧ್ಯವಾಗುತ್ತದೆ? ನಮ್ಮೆಲ್ಲರಲ್ಲಿಯೂ ಗುಪ್ತವಾಗಿರುವ ಆ ಸುಪ್ತಶಕ್ತಿ ಎಚ್ಚರಗೊಳ್ಳಬೇಕಾದರೆ ಅಂತಹ ಗುರುಕೃಪಾ ರೂಪವಾದ ದೈವೇಚ್ಛೆಯ ಬಲ ಅತ್ಯಂತ ಅವಶ್ಯಕ. ಯಾವ ರೂಪದಲ್ಲಿಯೆ ಒದಗಲಿ, ಯಾವ ರೀತಿಯಲ್ಲಾದರೂ ಕೆಲಸಮಾಡಲಿ, ಅಂತಹ ಗುರುಕೃಪೆಯ ಆಶೀರ್ವಾದದ ಬಲಕ್ಕಾಗಿ ನಾವು ಸಾಧನೆ ಮಾಡದಿದ್ದರೆ ನಮ್ಮ ಅಂತಃಶಕ್ತಿ ಸಮರ್ಪಕವಾಗಿ ಸಂಪೂರ್ಣವಾಗಿ ಶ್ರೀಯುಕ್ತವಾಗಿ ಮೈದೋರಲಾರದು. ಒಮದು ವೇಳೆ ಅವಿನಯಶೀಲವಾದ ಅಹಂ ಪ್ರಯತ್ನದಿಂದ ಸ್ವಪ್ರತಿಷ್ಠೆಯ ಉದ್ದೇಶಕ್ಕಾಗಿ ಹೊರಹೊಮ್ಮಿದರೂ ಬಂಡೆಯ ಮೇಲಿರುವ ಅಲ್ಪಮೃತ್ತಿಕೆಯಲ್ಲಿ ಮೊಳೆಯುವ ಗಿಡದಂತೆ ಹ್ರಸ್ವವೂ ಕುಬ್ಜವೂ ವಿಕೃತವೂ ಆಗಿ ವ್ಯರ್ಥವಾಗುವುದರಲ್ಲಿ ಸಂದೇಹವಿಲ್ಲ.

ಸ್ವಾಮಿ ವಿವೇಕಾನಂದರ ಪಕ್ಕದಲ್ಲಿ ಶ್ರೀರಾಮಕೃಷ್ಣ ಪರಮಹಂಸರನ್ನು ನಿಲ್ಲಿಸಿ ನೋಡುವ ತರುಣದೃಷ್ಟಿಗೆ ದಕ್ಷಿಣೇಶ್ವರದ ಗುಡಿಯ ಪೂಜಾರಿ ನಗೆಪಾಟಲಾಗಿ ಕಾಣಬಹುದು. “ಅಯ್ಯೋ, ಈ ಕಾಡು ಕಾಡಾದ ಗೊಡ್ಡು ಪೂಜಾರಿಯಿಂದ ಚಿಕಾಗೊ ಸರ್ವಧರ್ಮ ಸಮ್ಮೇಲನದಲ್ಲಿ ನಿಂತು ಭಾಷಣಮಾಡಿ ಜಗತ್ತನ್ನೆ ಬೆರಗುಗೊಳಿಸಿ ಅಡಿಗೆರಗಿಸಿದ ಈ ಭೀಮವ್ಯಕ್ತಿ ಏನನ್ನು ತಾನೆ ಪಡೆದಿದ್ದಾನು?” ಎಂಬ ಉದ್ಗಾರ ಹೊಮ್ಮಬಹುದು. ಅಂತಹ ಮನೋಧರ್ಮ ತಾರುಣ್ಯಕ್ಕೆ ಸ್ವಾಭಾವಿಕವಾದದ್ದೆ. ಬಹಿರ್‌ವೈಭವಕ್ಕೆ ಬೆರಗಾಗಿ ಶರಣಾಗುವುದೇ ಅದರ ಲಕ್ಷಣ. ರವೀಂದ್ರರು ಹೇಳಿದಂತೆ “ಗಿರಲು ಮೀಸೆ ಬಿಟ್ಟು, ರಂಗಿನ ರುಮಾಲಿಟ್ಟು, ಹೊಳೆಯುವ ಹಿತ್ತಾಳೆಯ ಬಿಲ್ಲೆಯ ಕೆಂಪು ದವಾಲಿ ತೊಟ್ಟು, ದಂಡಿನ ಉಡುಪು ಉಟ್ಟು, ಬಾಗಿಲು ಕಾಯುತ್ತಾ ನಿಮಿರಿ ನಿಲ್ಲುವ ದ್ವಾರ ಪಾಲಕನಿಗೆ ಕೊಡುವ ಗೌರವವನ್ನು ಒಳಗಿರುವ ಸಾಧಾರಣವಸನಧಾರಿಯಾದ ಅಧಿಕಾರಿಗೆ ಅದು ಕೊಡಲಾರದು.” ಕಾರಣ, ನಿಜವಾದ ಶಕ್ತಿಯ ಸ್ಥಾನದ ಅರಿವಿರುವುದಿಲ್ಲ ತಾರುಣ್ಯಸಹಜವಾದ ಬಹಿರ್ ಮುಖತೆಗೆ. ಉತ್ಸವಮೂರ್ತಿಯಂತಿರುವ ವಿವೇಕಾನಂದರ ವ್ಯಕ್ತಿತ್ವಕ್ಕೆ ಡಂಗುಬಡಿದುಹೋಗುವ ತರುಣ ಹೃದಯ ಪರಮಹಂಸರಿಂದ ಮೊದಮೊದಲು ಆಕರ್ಷಿತವಾಗುವುದಿಲ್ಲ. ಅನುಭವ ವಿಸ್ತಿರಸಿ, ದೃಷ್ಟಿ ಗಂಭೀರವಾಗಿ, ಸಂಸ್ಕಾರ ಹೆಚ್ಚು ಹೆಚ್ಚು ಪಕ್ವವಾಗಿ, ಪ್ರಾಣಮಯದ ರಜಸ್ಸು ಮನೋಮಯದ ಸತ್ತ್ವದಿಂದ ಪಳಗಿದಂತೆಲ್ಲ ಒಯ್ಯೊಯ್ಯನೆ ಅರಿವಾಗುತ್ತದೆ ಆ ಒಳನನ್ನಿ.

ಮೇಲೆ ಹೇಳಿದ ತಾರುಣ್ಯದ ದೃಷ್ಟಿಯಿಂದಲೆ ನರೇಂದ್ರನೂ ಶ್ರೀರಾಮಕೃಷ್ಣರ ಬಳಿಗೆ ಹೋದದ್ದು. ಆದರೆ “ದೇವಗಂಗೆಯ ಮಹಾ ಮಕರವು ನೀರು ಕುಡಿಯಲು ಬಂದ ಕಿಶೋರ ಕೇಸರಿಯನ್ನು ಭದ್ರವಾಗಿ ಹಿಡಿದು ಕೊಂಡಿತು. ಸಿಂಹದ ಮರಿ ತಪ್ಪಿಸಿಕೊಳ್ಳಲು ಎಷ್ಟು ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ. ಒಮ್ಮೆ ಕಚ್ಚಿದ ಮಕರಕ್ಕೆ ತನ್ನ ಕೊಂಕುದಾಡೆಗಳನ್ನು ಕಳಚಿ ಬಿಚ್ಚಿ ಬಾಯ್ದೆರೆದು ಆ ಸಿಂಹ ಶಾಬಕವನ್ನು ಬಿಟ್ಟುಬಿಡಲೂ ಸಾಧ್ಯವಾಗಲಿಲ್ಲ. ಹೋರಾಡುತ್ತಾ ಹೋರಾಡುತ್ತಾ ಎರಡೂ ಅಮೃತನದಿಯ ಪವಿತ್ರ ತೀರ್ಥದಲ್ಲಿ ಮಗ್ನವಾಗುವುದನ್ನು ನೋಡುತ್ತೇವೆ.”

[1]

ಇಹಲೋಕದ ವ್ಯಾಪಾರಗಳನ್ನು ವಿವರಿಸುವುದಕ್ಕೆ ಲೌಕಿಕ ಕಾರಣಗಳೆ ಸಾಕು ಎಂಬ ದೃಷ್ಟಿಯೂ, ಬೇರೆ ಲೋಕಗಳಾಗಲಿ ಅಥವಾ ಅವುಗಳಿಗೆ ಸಂಬಂಧಿಸಿದ ಅಲೌಕಿಕ ಕಾರಣಗಳಾಗಲಿ ಅನಾವಶ್ಯಕ, ಆದ್ದರಿಂದ ಇಲ್ಲ, ಎಂಬ ದೃಷ್ಟಿಯೂ ಆಧುನಿಕ ಭೌತವಿಜ್ಞಾನಕ್ಕೆ ಮೂಲಭೂತವಾಗಿವೆ. ಆದರೆ ಸ್ವಾಮಿ ವಿವೇಕಾನಂದ ಶ್ರೀರಾಮಕೃಷ್ಣರ ಸಂಬಂಧವನ್ನೂ ಅದರ ಅಲೋಕ ಸಾಮಾನ್ಯವಾದ ರೀತಿಯನ್ನೂ ತತ್ಸಂಬಂಧ ಸಮೀಕ್ಷೆಯಿಂದ ನಮ್ಮ ಚೇತನದಲ್ಲಿ ಸ್ಫುರಿಸುವ ಧ್ವನಿಸಂಪತ್ತಿಯನ್ನೂ ಅನುಭವಿಸಿ ಅರಿಯುವ ಶ್ರದ್ಧೆಗೆ ಭಿನ್ನದೃಷ್ಟಿ ಒದಗುವುದು ಅನಿವಾರ್ಯ. ಇಲ್ಲಿ ನಡೆಯುವ ವ್ಯಾಪಾರಗಳಿಗೆ ಇಲ್ಲಿಯ ಕಾರಣಗಳಿಗೆ ಅತೀತವಾದ ಅನ್ಯಲೋಕ ಕಾರಣಗಳೂ ಇರಬಹುದೆಂಬ ಅನುಮಾನಕ್ಕೆ ಪ್ರತ್ಯಕ್ಷ ಪ್ರಮಾಣ ದೊರೆತಂತಾಗಿದೆ ಆ ಗುರುಶಿಷ್ಯ ಸಂಬಂಧದಲ್ಲಿ.

ವಿವೇಕಾನಂದರ ಜೀವನ ಅರ್ಥಪೂರ್ಣವಾಗಬೇಕಾದರೆ, ಆ ಜೀವನದ ಪೂರ್ಣಾರ್ಥ ನಮಗೆ ಹೊಳೆಯಬೇಕಾದರೆ ಶ್ರೀ ರಾಮಕೃಷ್ಣರ ಜೀವನ ಕಥೆಯ ಹೃದಯ ಪರಿಚಯವಿಲ್ಲದೆ ಸಾಧ್ಯವಿಲ್ಲ. ಸ್ವಾಮಿ ವಿವೇಕಾನಂದರೆ ಹೇಳಿರುವಂತೆ “ಈ ನವಯುಗ ಧರ್ಮಪ್ರವರ್ತಕ ಭಗವಾನ್ ಶ್ರೀ ರಾಮಕೃಷ್ಣನು ಹಿಂದೆ ಅವತರಿಸಿದ ಯುಗಧರ್ಮಪ್ರವರ್ತಕ ಸಮೂಹದ ಪುನಃ ಸಂಸ್ಕೃತ ಮಹಾ ಪ್ರಕಾಶವಾಗಿರುತ್ತಾನೆ.” ವಿವೇಕಾನಂದರು ಆ ಬೃಹಚ್ಛಕ್ತಿಯ ಒಂದು ಬಾಹು; ಆ ಪ್ರಕಾಶದ ಒಂದು ಕಿರಣ. ಆ ಬಾಹುವಿನಲ್ಲಿ ಮೈದೋರಿದ ಬಲವನ್ನು ಅರ್ಥಮಾಡಿಕೊಳ್ಳಬೇಕಾದರೆ ಅದನ್ನು ಚೋದಿಸಿದ ಆ ಮೂಲ ಶಕ್ತಿಗೇ ನಾವು ಹೋಗಬೇಕಾಗುತ್ತದೆ. ಅನಂತರಶಕ್ತಿಗಳ ರಹಸ್ಯವಿರುವುದು ಆದಿಶಕ್ತಿಯಲ್ಲಿ.[2]

ಪರಮಹಂಸರು ನರೇಂದ್ರನ ಆಗಮನಕ್ಕಾಗಿ ಕಾತರಿಸಿ ಕುದಿಯುತ್ತಿದ್ದರು; ನಿರೀಕ್ಷಿಸುತ್ತಿದ್ದರು; ಆದ್ದರಿಂದಲೆ ಕಂಡೊಡನೆ ಗುರುತಿಸಿದರು. ನರೇಂದ್ರನ ಸ್ವಸ್ವರೂಪದ ಮೇಲೆ ಪರ್ವತಪರ್ವತಗಳಾಗಿ ಹಬ್ಬಿ ಹರಡಿ ಬಿದ್ದಿದ್ದ ಆವರಣದ ಚಪ್ಪಡಿಗಳನ್ನು ತಮ್ಮ ವಿದ್ಯುತ್‌ಸ್ಪರ್ಶದಿಂದ ಮುಗಿಲುಗೈದು ಚದರಿಸಿ, ತಾವು ಸಮಾಧಿಯಲ್ಲಿ ಕಂಡ ‘ದರ್ಶನ’ದ ಸತ್ಯಾಂಶವನ್ನು ಸ್ಥಿರಪಡಿಸಿಕೊಂಡರು.[3] ನರೇಂದ್ರನು ಮಾತ್ರ ಗುರುವಿನ ಆ ವಿಚಿತ್ರ ವ್ಯಾಪಾರಗಳನ್ನೆಲ್ಲ ಒಮ್ಮೊಮ್ಮೆ ಕುತೂಹಲದಿಂದ, ಒಮ್ಮೊಮ್ಮೆ ಭಯಮಿಶ್ರಿತವಾದ ಆಶ್ಚರ್ಯದಿಂದ ವೀಕ್ಷಿಸುತ್ತಿದ್ದನೆ ಹೊರತು ಹೆಚ್ಚಿನ ಸಡ್ಡೆಗೆ ಹೋಗಲಿಲ್ಲ. ಪರಮಹಂಸರು ಸರ್ವಸಿದ್ಧಿಗಳನ್ನು ಪಡೆದ ಯೋಗೀಶ್ವರರಾಗಿದ್ದರೂ ಅವರು ಕಲ್ಲನ್ನು ರೊಟ್ಟಿ ಮಾಡುವ ಅಥವಾ ಕಬ್ಬಿಣವನ್ನು ಚಿನ್ನಮಾಡುವ ಪವಾಡಗಳ ಗೋಜಿಗೆ ಹೋಗಲಿಲ್ಲ. ಪವಾಡಗಳನ್ನೂ ಪವಾಡಮಾಡುವವರನ್ನೂ ಕೀಳಾಗಿ ಭಾವಿಸಬೇಕೆಂದು ಹೇಳುತ್ತಿದ್ದರು. ಆದರೆ ನರೇಂದ್ರನಿಂದ ವಿವೇಕಾನಂದರನ್ನು ಸೃಷ್ಟಿಸುವ ಆ ಒಂದು ಜಗದ್ಭವ್ಯವಾದ ದಿವ್ಯ ಲೀಲಾಕಾರ್ಯದಲ್ಲಂತೂ ತಮ್ಮ ವ್ರತನಿಷ್ಠೆಯನ್ನು ಲೋಕಸಂಗ್ರಹಕ್ಕಾಗಿ ಉಲ್ಲಂಘಿಸುವ ಕೃಪೆ ಮಾಡಿದ್ದಾರೆಂದು ನಾವು ಒಪ್ಪಲೇಬೇಕಾಗುತ್ತದೆ. ಅವರು ನರೇಂದ್ರನನ್ನು ವಿವೇಕಾನಂದರನ್ನಾಗಿ ಮಾರ್ಪಡಿಸಿದುದು ತತ್ತ್ವಶಾಸ್ತ್ರೋಪದೇಶದಿಂದಲ್ಲ. ತತ್ತ್ವಶಾಸ್ತ್ರಗಳ ಒಣಕಟ್ಟಿಗೆಗಳ ಹೊರೆಗಳನ್ನು ಪರಮಹಂಸರಿಗೆ ಬೇಕಾಗಿದ್ದರೆ ನರೇಂದ್ರನೇ ಬಂಡಿಗಟ್ಟಲೆ ಕೊಡಬಲ್ಲವನಾಗಿದ್ದನು. ಅವನು ಗುರುವಿನಲ್ಲಿಗೆ ಹೋದುದು ಆ ಒಣಕಟ್ಟಿಗೆಗಾಗಿ ಅಲ್ಲ;  ಅನುಭವಪೂರ್ಣವಾದ ಸತ್ಯಸಾಕ್ಷಾತ್ಕಾರದ ಜೀವಂತ ವೃಕ್ಷಕ್ಕಾಗಿ. ಆ ಪುಲಕಕಾರಿಯಾದ ಪುಣ್ಯಕಥೆಯನ್ನು ಓದಿದರೂ ಸಾಕು ಅದರ ಭವ್ಯತೆ ಹೃದಯಸ್ಯಂದಿಯಾಗಿ ನಮ್ಮ ಸಮಗ್ರ ಚೇತನದಲ್ಲಿಯೂ ಸ್ಪಂದಿಸುತ್ತದೆ.[4]

ಲೋಕ ಸಂಗ್ರಹಕ್ಕಾಗಿ, ಎಂದರೆ ‘ಸಮಷ್ಟಿಸಿದ್ಧಿ’ಗಾಗಿ ಶ್ರೀ ರಾಮಕೃಷ್ಣರು ನರೇಂದ್ರನಿಗೆ ‘ವ್ಯಷ್ಟಿಸಿದ್ಧಿ’ಯನ್ನು ದಯಪಾಲಿಸಿದರು. ಏಕೆಂದರೆ ಪರಿಣಾಮ ಕ್ರಮದ ಈ ಸೃಷ್ಟಿಯಲ್ಲಿ ವೃಷ್ಟಿಯ ಮುಖಾಂತರವೇ ಸಮಷ್ಟಿಯ ಉತ್‌ಕ್ರಮಣವೂ ಉದ್ಧಾರವೂ ಆಗಬೇಕಾಗಿದೆ. ವ್ಯಷ್ಟಿಯ ಪರಿವರ್ತನೆಯಾಗದೆ, ವ್ಯಷ್ಟಿಯ ಮುಖಾಂತರವಾಗಿ ಪರಿಣಾಮಪಥಪ್ರದೇಶ ಮಾಡದೆ, ಸಿದ್ಧವ್ಯಷ್ಟಿಯಾದವನು ಸಮಷ್ಟಿಯ ಉದ್ಧಾರಕ್ಕಾಗಿ ತನ್ನನ್ನು ತಾನು ಸಮರ್ಪಿಸಿಕೊಳ್ಳದೆ,  ಸಮಷ್ಟಿಯಲ್ಲಿ ಯಾವ ಪರಿವರ್ತನೆಯೂ ಮೊಳೆತು ಬೆಳೆದು ಸುಪ್ರತಿಷ್ಠಿತವಾಗಲಾರದು. ಆದ್ದರಿಂದಲೆ ಲೋಕೋದ್ಧಾರಮಾಡುವುದಕ್ಕೆ ಹೊರಡುವ ಮೊದಲು ಪ್ರತಿಯೊಬ್ಬ ವ್ಯಕ್ತಿಯೂ ತನ್ನನ್ನು ತಾನು ನಿಜವಾಗಿಯೂ ‘ಉದ್ಧಾರ’ ಮಾಡಿಕೊಳ್ಳಬೇಕು. ಬೆಳಕು ನೀಡುವ ಮುನ್ನ ಬೆಳಕು ಪಡೆಯಬೇಕು. ತನ್ನ ಪ್ರಸಿದ್ಧಿಯೇ ಜಗತ್ಕಲ್ಯಾಣಸಿದ್ಧಿ ಎಂಬ ಭ್ರಾಂತಿ ಹಳ್ಳಿಯೊಳಿದ್ದರೇನು? ದಿಳ್ಳಿಯೊಳಿದ್ದರೇನು? ಅಂತಹ ಕೀರ್ತಿಶನಿಯಿಂದ ಎಂದಿಗೂ ಸಿದ್ಧಿಸದು ಜಗತ್‌ಶಾಂತಿ. ಇಂದು ಮುಂದುವರಿಯಲೆಳಸುವ ನಾವು ಅಂದು ನರೇಂದ್ರನಿಟ್ಟ ತಪ್ಪು ಹೆಜ್ಜೆಗಳನ್ನೆಲ್ಲ ಮತ್ತೆಯೂ ಇಡಬೇಕಾಗಿಲ್ಲ. ಆತನು ನಮಗಾಗಿ ಗೆದ್ದುಕೊಟ್ಟಿರುವ ಸತ್ಯವನ್ನು ಸ್ವೀಕರಿಸಿ ಮುನ್ನುಗ್ಗಬೇಕಾದುದೆ ನಮ್ಮ ಕರ್ತವ್ಯ.

ಯುಗಯುಗಯುಗದತಿಕಷ್ಟದಿ ಜಡವನು ಜಯಿಸಿತು ಜೀವ;
ಬಹುತಪದಿಂದಾ ಜೀವಕೆ ಬಂದುದು ಮಾನವ ಭಾವ.
ಯುಗಯುಗ ಬೇಕೀ ಮನುಜತೆ ಮಾನವತನವನೆ ಮೀರಿ
ದೇವತ್ವವ ಸಂಪಾದಿಸೆ ಸಂಯಮ ಸ್ವರ್ಗಕ್ಕೇರಿ!

ಯುಗಚಕ್ರವ ಮುನ್ನೂಂಕಲು ಇದೆ ಗುರುದೇವನ ಶಕ್ತಿ;
ನಮಗಿಂದಿಗೆ ಬೇಕಾದುದು ಉದ್ಧಾರದ ಆಸಕ್ತಿ.
ಮತಿವಂತನೆ, ಓ ಮಾನವ, ಕಟಿ ಬಂಧನಗೈ. ನಿಲ್ಲು:
ಯುಗದೊಳ್ಪಿಗೆ ಜಗದೊಳ್ಪಿಗೆ ನಿನ್ನೊಳ್ಪನೆ ನೀಂ ಗೆಲ್ಲು!

 

 

 


[1] ಸ್ವಾಮಿ ವಿವೇಕಾನಂದರ ಗ್ರಂಥದ ‘ಅನುಭೂತಿ’ ಎಂಬ ೭ನೆಯ ಅಧ್ಯಾಯ ನೋಡಿ

[2] ಮೈಸೂರು ವಿಶ್ವವಿದ್ಯಾನಿಲಯ ಗ್ರಂಥಮಾಲೆಯ ಶ್ರೀ ರಾಮಕೃಷ್ಣ ಪರಮಹಂಸ ಎಂಬ ಗ್ರಂಥದಲ್ಲಿ ‘ಜೈತ್ರಯಾತ್ರೆ’ ಎಂಬ ೩ನೆಯ ಅಧ್ಯಾಯವನ್ನು ಓದಿ.

[3] ಶ್ರೀ ರಾಮಕೃಷ್ಣ ಪರಮಹಂಸ. ಅಧ್ಯಾಯ ೬, ದೇವಶಿಲ್ಪಿ

[4] ಸ್ವಾಮಿ ವಿವೇಕಾನಂದ. ಅಧ್ಯಾಯ ೫, ‘ಮುಕ್ತಿರಾಹು’ ಓದಿ.

[5] ಸ್ವಾಮಿ ವಿವೇಕಾನಂದ: ಅನುಭೂತಿ. ಪುಟ ೯೮-೯೯.

[6] ಸ್ವಾಮಿ ವಿವೇಕಾನಂದ: ಅನುಭೂತಿ. ಪುಟ ೯೯.

[7] ಸ್ವಾಮಿ ವಿವೇಕಾನಂದ: ‘ಪರಿವ್ರಾಜಕ ಸನ್ಯಾಸಿ’ ಮತ್ತು ‘ಕಡಲಿನಾಚೆಗೆ’ ಎಂಬ ೯. ೧೦ನೆಯ ಅಧ್ಯಾಯಗಳನ್ನು ನೋಡಿ.

[8] ‘ಸ್ವಾಮಿ ವಿವೇಕಾನಂದ’, ಪು. ೧೪೭.