ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಾವು ಇದಿರುಗೊಳ್ಳುವ ದ್ವಿತೀಯ ನವೋದಯಕ್ಕೆ ಸ್ಫೂರ್ತಿಪ್ರಭಾಪ್ರತಿಮರಾಗಿರುವ ಹಿರಿಯ ವ್ಯಕ್ತಿ ಶ್ರೀ ಬಸವೇಶ್ವರರು. ಅಂದು ಕನ್ನಡನಾಡಿನ ಧರ್ಮಭೂಮಿಕೆಯಲ್ಲಿ ಅವರ ಪ್ರಬುದ್ದಚೇತನ ಸಂಮಥಿಸಿ  ಹೊಮ್ಮಿಸಿದ ತೆರೆತೆರೆಯ ಆಂದೋಲನಗಳಲ್ಲಿ ಮೂರ್ತಿಮತ್ತಾಗಿದೆ ನಾವು ಗುರುತಿಸಬಹುದಾದ ಆ ಕಾಲದ ಯುಗಶಕ್ತಿ. ಸಾಹಿತ್ಯ ಭೂಮಿಕೆಯಲ್ಲಿ ಆ ಶಕ್ತಿ ಹರಿಹರ ರಾಘವಾಂಕರ ಕಾವ್ಯವಾಹಿನಿಗಳಲ್ಲಿ ಮೊದಲುಗೊಂಡು, ಮುಂಬರಿದು, ಅನೇಕ ಕವಿಕೃತಿಗಳಲ್ಲಿ ಮುದ್ರಿತವಾಗಿರುವ ಕ್ರಾಂತಿಯಾತ್ರೆಯನ್ನು ಸಂದರ್ಶಿಸುತ್ತೇವೆ. ಕಾವ್ಯಪುರುಷನು ವೃತ್ತ ಕಂದಗಳ ಪ್ರೌಢ ಚಂಪೂಮಾರ್ಗದ ಜನ್ನಿವಾರವನ್ನು ಹರಿದು ಬಿಸುಟು ಸಾಮಾನ್ಯರಿಗೂ ಸುಲಭವಾಗಿರುವ ರಗಳೆ ಷಟ್ಪದಿಗಳ ಲಿಂಗಧಾರಣೆಮಾಡುವ ಉತ್ಸಾಹದೃಶ್ಯ ನಿಜವಾಗಿಯೂ ಮನೋಲ್ಲಾಸ ಕಾರಿಯಾಗುತ್ತದೆ. ಎಲ್ಲಕ್ಕಿಂತಲೂ ಹೆಚ್ಚಾಗಿ, ಸಾಹಿತ್ಯ ಸಮಾಲೋಚಕನ ವಿಶೇಷವಾದ ಗಮನಕ್ಕೆ ಪಾತ್ರವಾಗುವುದೆಂದರೆ ನಿರಂತರ ನಾಟ್ಯಶೀಲ ಕಾವ್ಯಪುರುಷನ ಪದವಿನ್ಯಾಸವು ತನ್ನ ಕ್ಲುಪ್ತ ಛಂದೋಗಾಂಭೀರ್ಯದ ಸಂಪ್ರದಾಯ ಗದ್ದುಗೆಯಿಂದ ಕೆಳಗಿಳಿದು ಬಂದು, ಗದ್ಯದ ನಡೆಗೆ ನೋಂತು, ಕಡೆಗೆ ವಚನರೀತಿಯಲ್ಲಿ ಸಂತೃಪ್ತಿಗೊಳ್ಳುವ ಅಚ್ಚರಿ!

ಇದುವರೆಗೂ ನಮಗೆ ದೊರೆಯದಿರುವ ಕೃತಿಗಳಲ್ಲಿಯೂ ವಡ್ಡಾರಾಧನೆ ಚಾವುಂಡರಾಯ ಪುರಾಣಗಳಲ್ಲಿಯೂ ಚಂಪೂಕಾವ್ಯಗಳ ಸಂದಿಗೊಂದಿಗಳಲ್ಲಿಯೂ ಇಣುಕಿ ಮಿಣುಕಿ ಹಣುಗಿ ಜಣುಗಿ ಪಯಣಬಂದ ಗದ್ಯವಿಧಾನವು ಹರಿಹರ ಕೈಯಲ್ಲಿ, ಅವನ ರಗಳೆಯ ಕಾವ್ಯಗಳಲ್ಲಿ, ಸ್ಥಲಸ್ಥಲಗಳ ನಡುವೆ ಇಡೀ ಸ್ಥಲಗಳನ್ನೇ ತುಂಬುವಷ್ಟು ಗಣ್ಯವಾಗಿ ಮಾನ್ಯವಾಗಿ ಧನ್ಯವಾಗಿರುವುದನ್ನು ಕಾಣುತ್ತೇವೆ. ಅಲ್ಲಿಯ ಗದ್ಯ ಕ್ಲುಪ್ತಛಂದಸ್ಸನ್ನು ತೊರೆದಿದ್ದರೂ ಅದರ ಮೆಯ್‌ಕಟ್ಟು ಅಛಂದವಾದುದಲ್ಲ; ಅದು ಗದ್ಯರೂಪಧಾರಣೆ ಮಾಡಿದ್ದರೂ ಕಾವ್ಯತ್ವವನ್ನು ಬಿಟ್ಟಿಲ್ಲ. ಆ ಗದ್ಯದ ಪ್ರಕಾರಾಂತರವೆ ವಚನ ಸಾಹಿತ್ಯವಾಗಿ ಹೂ ಬಿಟ್ಟಿತು. ವಚನಗಳು ಆ ಗದ್ಯದಿಂದ ಹೊಮ್ಮಿದ ಬಿಡಿಬಿಡಿಯ ಕಿಡಿವೂಗಳು.

ವೀರಶೈವಧರ್ಮಕ್ಕೆಂತೊ ಅಂತೆ ವಚನಸಾಹಿತ್ಯಕ್ಕೂ ಬಸವೇಶ್ವರರನ್ನು ಆಚಾರ್ಯಪುರುಷರೆಂದು ಪರಿಗಣಿಸಬಹುದು. ಆದರೆ ಅವರು ಪ್ರಧಾನವಾಗಿ ಆಚಾರ್ಯರು, ಗೌಣವಾಗಿ ವಚನಕಾರರು ಎಂಬುದನ್ನು ಮರೆಯಬಾರದು. ಅವರನ್ನು ವಚನಕಾರ ಮಾತ್ರರೆಂದು ಪರಿಭಾವಿಸಿದರೆ, ಮರವನ್ನು ‘ಎಲೆಗಳನ್ನು ಸಿಕ್ಕಿಸಿಕೊಂಡಿರುವ ಕೋಲು’ ಎಂದು ವರ್ಣಿಸಿದಂತಾಗುತ್ತದೆ. ಅವರು ಸಾಹಿತಿಯಲ್ಲ. ಸಾಹಿತ್ಯ ಸೃಷ್ಟಿಮಾಡಲೆಂದು ಅವರು ವಚನರಚನೆಗೆ ಕೈಹಾಕಲಿಲ್ಲ. ಅವರ ವಚನಗಳೂ ಅವರಂತೆಯೆ ಪ್ರಧಾನತಃ ಧರ್ಮಬೋಧನೆ ಮಾಡುವ ಪ್ರಭುಸಮ್ಮಿತಗಳು ಇಲ್ಲವೆ ಮಿತ್ರಸಮ್ಮಿತಗಳು: ರಸಾನುಭವದಾನಮಾಡುವ ಕಾಂತಾಸಮ್ಮಿತಗಳಲ್ಲ. ಅಲ್ಲಲ್ಲಿ ಸಾಹಿತ್ಯಾಂಶದಿಂದ ರಸಾನುಭವವನ್ನುಂಟು ಮಾಡುವನಿತು ರಮಣೀಯವಾಗಿದ್ದರೂ ಅವು ಒಟ್ಟಿನಲ್ಲಿ ಶುದ್ಧ ಸಾಹಿತ್ಯಜಾತಿಗೆ ಸೇರುವುದಿಲ್ಲ. ಹೀಗೆ ಹೇಳುವುದರಿಂದ ಅವರ ವಚನಗಳ ಹಿರಿಮೆಯನ್ನಾಗಲಿ ಅವುಗಳ ಸುಭಗತೆಯನ್ನಾಗಲಿ ಅಲ್ಲಗಳೆದಂತಾಗುವುದಿಲ್ಲ. ಅವುಗಳ ಉಗಮದ ಕಾರಣ ಉದ್ದೇಶ ಪ್ರಯೋಜನಗಳನ್ನು ನಿದೇರ್ಶಿಸಿದಂತಾಗುತ್ತದೆ ಅಷ್ಟೆ.

ಅವರಿಗೂ ಒಮ್ಮೊಮ್ಮೆ ತಮ್ಮ ವಚನರಚನೆಯ ವಿಚಾರದಲ್ಲಿ ಏನೊ ಒಂದು ಅತೃಪ್ತಿಯ ಅಸಮಾಧಾನ ತಲೆದೋರಿ ಹೀಗೆ ಹೇಳಿಕೊಂಡಿದ್ದಾರೆ: “ಹಾಲ ತೊರೆಗೆ ಬೆಲ್ಲದ ಕೆಸರು, ಸಕ್ಕರೆಯ ಮಳಲು, ತವರಾಜದ ನೊರೆತೆರೆಯಂತೆ ಆದ್ಯರ ವಚನವಿರಲು, ಬೇರೆ ಬಾವಿಯ ತೋಡಿ ಉಪ್ಪುನೀರನುಂಬವನ ವಿಧಿಯಂತೆ ಆಯಿತ್ತೆನ್ನ ಮತಿ, ಕೂಡಲ ಸಂಗಮದೇವ.” “ಆದ್ಯರ ವಚನ ಪರುಷವೆಂದೆಂಬೆನು. ಆ ಪರುಷವೆನಗೆಂತು ದೊರಕುವುದಯ್ಯ!… ಹೊಲೆಯರ ಮದ್ದಲೆಯಂತೆ ನುಡಿವ ಡಂಭಕ ನಾನಯ್ಯ, ಕೂಡಲ ಸಂಗಮದೇವ.” ತಮ್ಮ ವಚನಗಳನ್ನು ಸಾಹಿತ್ಯದ ಒರೆಗಲ್ಲಿಗೆ ಹಚ್ಚಿ ನೋಡುವವರಿಗೆಂಬಂತೆ ಮತ್ತೊಂದು ವಚನದಲ್ಲಿ ಸ್ವಲ್ಪ ವಿಡಂಬನಪೂರ್ವಕವಾಗಿಯೆ ಹೀಗೆ ಎಚ್ಚರಿಸಿದ್ದಾರೆ. “ತಾಳಮಾನ ಸರಸವ ನಾನರಿಯೆ. ವಜೆಬಜಾವಣೆಯ ಲೆಕ್ಕವನರಿಯೆ. ಅಮೃತಗಣ ದೇವಗಣನರಿಯೆ. ಕೂಡಲ ಸಂಗಮದೇವ, ನಿನಗೆ ಕೇಡಿಲ್ಲವಾಗಿ, ಆನು ಒಲಿದಂತೆ ಹಾಡುವೆ.” ವಿಷಗಣದಲ್ಲಿ ವಚನ ಪ್ರಾರಂಭವಾದರೂ ಚಿಂತೆಯಿಲ್ಲ; ವಿಷಧರಭೂಷಣವಾಗಿ ವಿಷಪಾನಮಾಡಿದ ವಿಷಕಂಠ ಕೂಡಲ ಸಂಗಮದೇವನಿಗೆ ಆಗಿರುವುದಕ್ಕಿಂತಲೂ ಹೆಚ್ಚಿನ ಕೇಡು ಇನ್ನೇನೂ ಆಗಲಾರದೆಂದು ದರಸ್ಮಿತರಾಗಿ ಧೈರ್ಯ ಹೇಳುತ್ತಾರೆ!

ಅವರ ಉದ್ದೇಶ ಕೃತಿಲೋಕದ ರಸಾನುಭವವಲ್ಲ; ಭವಲೋಕಕ್ಕೆ ಅಭವಾಲೋಕವನ್ನು ತರುವ ಗುರುತರಕಾರ್ಯ. ಅವರು ಬಾರಿಸಲು ಆಸೆಪಟ್ಟುದು ವೀಣೆಯನ್ನಲ್ಲ, ಒಡಲನ್ನು. ಅವರು ಹಸನುಗೊಳಿಸಲೆಳಸಿದ್ದು ಕಿನ್ನರಿಯ ತಂತಿಗಳನ್ನಲ್ಲ, ನರನ ನರಗಳನ್ನು. ಗೀತೆ, ಕೀರ್ತನೆ, ಪದ, ವಚನ, ಹಾಡುಗಬ್ಬ, ಬಾಜನೆಗಬ್ಬಗಳ ರಚನೆ ಅವರ ಜನ್ಮೋದ್ದೇಶವಾಗಿರಲಿಲ್ಲ. ಮನುಷ್ಯನ ಹೃದಯದಲ್ಲಿ ಮಹೇಶ್ವರನನ್ನು ಕಡೆದು ರಚಿಸುವ ಮಹತ್ತರವಾದ ಭವ್ಯೋದ್ದೇಶ ಅವರದಾಗಿತ್ತು. ತನ್ನ ಕೆಲಸ ಕಾವ್ಯಲೋಕದ್ದಲ್ಲ; ಕರ್ಮಲೋಕದ್ದು ಎಂಬುದನ್ನು ಕುರಿತು ಹೀಗೆ ಹಾಡಿದ್ದಾರೆ: “ಎನ್ನ ಕಾಯುವ ದಂಡಿಗೆಯ ಮಾಡಯ್ಯ! ಎನ್ನ ಶಿರವ ಸೋರೆಯ ಮಾಡಯ್ಯ! ಎನ್ನ ನರವ ತಂತಿಯ ಮಾಡಯ್ಯ! ಎನ್ನ ಬೆರಳ ಕಟ್ಟಿಯ ಮಾಡಯ್ಯ! ಮೂವತ್ತೆರಡು ರಾಗವ ಹಾಡಯ್ಯ! ಉರದಲೊತ್ತಿ ಬಾರಿಸು, ಕೂಡಲ ಸಂಗಮದೇವ!”

ಬಸವಣ್ಣನವರ ವಚನಕೃತಿಗಳಲ್ಲಿ ಸಾಹಿತ್ಯವನ್ನು ಅರಸುವುದಕ್ಕಿಂತಲೂ ಅವರ ಬದುಕಿನಲ್ಲಿ ಅದನ್ನು ಅರಸಿದರೆ ಹೆಚ್ಚು ಸಫಲವಾಗುತ್ತದೆ. ಕುಂಚಗೈಯಾಗಿ ವಸ್ತ್ರಪಟಕ್ಕೆ ಬಣ್ಣಬಳಿಯುವ ವರ್ಣಶಿಲ್ಪಿಯಂತಲ್ಲ ಅವರು; ಪೊರಕೆ ಹಿಡಿದು ಗುಡಿಸುವ, ಗುದ್ದಲಿ ಹಿಡಿದು ಅಗೆಯುವ, ನೀರ್ವೊಯ್ದು ಶುಚಿಗೊಳಿಸುವ, ಗೊಬ್ಬರ ಹಾಕಿ ಬೆಳೆಸುವ, ಕಳೆ ಕಿತ್ತು ಹಸನುಮಾಡುವ, ಬೇಲಿ ಕಟ್ಟಿ ಕಾಯುವ, ಅಬ್ಬರಿಸಿ ಹಕ್ಕಿ ಮಿಗಗಳನ್ನೆಬ್ಬಿ ಪೈರನ್ನು ರಕ್ಷಿಸುವ ಮಾನವ ಹೃದಯಕ್ಷೇತ್ರದ ದೇವಕೃಷಿಕನಂತೆ ಅವರು ಕರ್ಮಯೋಗಿ. ಸಾಹಿತ್ಯಕ್ರೀಡೆಯಿಂದ ದೂರ ನಿಂತೇ ಅವರು ನಮ್ಮ ಸಾಹಿತ್ಯದ ದ್ವಿತೀಯ ನವೋದಯಕ್ಕೆ ಪ್ರೇರಕ ಶಕ್ತಿಯಾಗಿದ್ದಾರೆ.

ಆದರೂ ಹೃದಯದಿಂದ ಹೊಮ್ಮಿದುದರಲ್ಲಿ ಭಾವಸಂಚಾರಕ ಶಕ್ತಿ ಇದ್ದೇ ಇರುತ್ತದೆ. ಆದ್ದರಿಂದ ರಸರಮಣೀಯತೆ ಮಿಂಚಿಯೇ ಮಿಂಚುತ್ತದೆ. ಅಂತಹ ಸಹಜಕಲೆ ಬಸವಣ್ಣನವರ ವಚನಗಳಲ್ಲಿ ಅಲ್ಲಲ್ಲಿ ಮನೋಹರವಾಗಿ ಮೈದೋರುತ್ತದೆ. ಆಧ್ಯಾತ್ಮ, ವಿಡಂಬನೆ, ಭಕ್ತಿ, ಸುಧಾರಣೆ, ಜ್ಞಾನ ಪಿಪಾಸೆ, ಆತ್ಮಭರ್ತ್ಸನೆ-ವಿಷಯ ಯಾವುದೆ ಆಗಲಿ ಇಲ್ಲೊಂದು ಅಲಂಕಾರ, ಅಲ್ಲೊಂದು ರೀತಿ, ಮತ್ತೊಂದೆಡೆ ಛಂದಸ್ಸು, ಮಗುದೊಂದೆಡೆ ಉಪಮೆಗಳ ಓಳಿ, ಬೇರೊಂದೆಡೆ ದೃಷ್ಟಾಂತಗಳ ಪಂಕ್ತಿ, ಹೀಗೆ ಅವರ ವಚನನಾಗರಗಳಲ್ಲಿ ಹೆಡೆಮಣಿಯ ಹೊಂಗದಿರುಗಳು ಹೊಮ್ಮಿ ಕಣ್‌ಮನಂಗೊಳಿಸುವುದನ್ನು ಸಂದರ್ಶಿಸುತ್ತೇವೆ.

“ಉದಕದೊಳಗೆ ಬಚ್ಚಿಟ್ಟ ಬಯಕೆಯ ಕಿಚ್ಚಿನಂತೆ, ನನೆಯೊಳಗಣ ಪರಿಮಳದಂತೆ, ಕನ್ನೆಯ ಸ್ನೇಹದಂತೆ” ಎಂಬುದು ದೇವರ ನಿಲುವಿನ ಬಣ್ಣನೆ.

“ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ? ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ?” ಎಂಬುದು ಭಕ್ತನ ಧ್ಯಾನದ ಹಿರಿಮೆಯ ಬಣ್ಣನೆ.

“ಕಪ್ಪೆ ಸರ್ಪನ ನೆರಳಲ್ಲಿ ಇರ್ಪಂತೆ ಎನಗಾಯಿತ್ತಯ್ಯ…ಶೂಲದ ಮೇಲಣ ಭೋಗವೇನಾದೊಡೇನೊ? ನಾನಾವರ್ಣದ ಸಂಸಾರ ಹಾವ ಹಾವಾಡಿಗನ ಸ್ನೇಹದಂತೆ!”

“ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯ…ಚಂದ್ರಂಗೆ ರಾಹು ಅಡ್ಡ ಬಂದಲ್ಲಿ ಅಂಬುಧಿ ಬೊಬ್ಬಿಟ್ಟೀತೆ? ಆರಿಗಾರು ಇಲ್ಲ; ಕೆಟ್ಟವಂಗೆ ಇಲ್ಲ. ಜಗದ ನಂಟ ನೀನೆ.”

“ಹೊರಿಸಿಕೊಂಡು ಹೋದ ನಾಯಿ ಮೊಲನನೇನ ಹಿಡಿವುದಯ್ಯ?”

“ಎನ್ನ ಚಿತ್ತ ಅತ್ತಿಯ ಹಣ್ಣು ನೋಡಯ್ಯ ಹಿಕ್ಕಿದರೆ ಹುರುಳಿಲ್ಲವಯ್ಯಾ”

“ತುಪ್ಪದ ಸವಿಗೆ ಅಲಗ ನೆಕ್ಕುವ ಸೊಣಗನಂತೆ…”

“ಒಂದು ಮೊಲಕ್ಕೆ ನಾಯಿಗಳನೊಂಬತ್ತು ಬಿಡುವಂತೆ…”

“ಓತಿ ಬೇಲಿಯಂತೆ ಎನ್ನ ಮನವಯ್ಯ…”

“ಓಡುತ್ತ ಬಲ್ಲುದು ಅವಲಕ್ಕಿಯ ಸವಿಯ? ಕೋಡಗವೆತ್ತಬಲ್ಲುದು ಸೆಳೆ ಮಂಚದ ಸುಖವ? ಕಾಗೆ ನಂದನದೊಳಿದ್ದರೇನು ಕೋಗಿಲೆಯಾಗಬಲ್ಲುದೆ? ಕೊಳನ ತಡಿಯಲೊಂದು ಬಕ ಕುಳಿತಿದ್ದರೇನು ಕಳಹಂಸನಾಗಬಲ್ಲುದೆ?”

ಭಕ್ತರ ಸಂಗಕ್ಕೆ ಹಾತೊರೆಯುವ ಹೃದಯದ ತೀವ್ರತೆ ಹೇಗೆ ಅಭಿವ್ಯಕ್ತಿಗೊಂಡಿದೆ ಈ ಕೆಳಗಿನ ವಚನಗಳಲ್ಲಿ:

“ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ. ಅಂಬುಜಕೆ ಭಾನುವಿನ ಉದಯದ ಚಿಂತೆ. ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ. ಎನಗೆ ಕೂಡಲ ಸಂಗಮದೇವರ ನೆನೆವ ಚಿಂತೆ.”

“ಹೊಲಬುಗೆಟ್ಟ ಶಿಶು ತನ್ನ ತಾಯ ಬಯಸುವಂತೆ, ಬಟ್ಟೆದಪ್ಪಿದ ಕರು ತನ್ನ ಹಿಂಡ ತಾನರಸುವಂತೆ, ಬಯಸುತ್ತಿರ್ದೆನಯ್ಯಾ ನಿಮ್ಮ ಶರಣರ ಬರವನು. ದಿನಕರನುದಯಕ್ಕೆ ಕಮಲ ವಿಕಸಿತವಾದಂತೆ ಎನಗೆ ನಿಮ್ಮ ಶರಣರ ಬರವು ಕೂಡಲ ಸಂಗಮದೇವ.”

“ಸೂರ್ಯನುದಯ ತಾವರೆಗೆ ಜೀವಾಳ. ಚಂದ್ರಮನುದಯ ನೈದಿಲೆಗೆ ಜೀವಾಳ. ಕೂಪರ ಠಾವಿಯಲ್ಲಿ ಕೂಟವೆ ಜೀವಾಳ. ಒಲಿದ ಠಾವಿಯಲ್ಲಿ ನೋಟವೆ ಜೀವಾಳ. ಕೂಡಲ ಸಂಗನ ಶರಣರ ಬರವೆನಗೆ ಪ್ರಾಣ ಜೀವಾಳಯ್ಯ.

“ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯಾ, ತಂದೆ! ಸುತ್ತಿಸುಳಿದು ನೋಡದಂತೆ ಅಂಧಕನ ಮಾಡಯ್ಯಾ, ತಂದೆ! ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯಾ, ತಂದೆ! ನಿಮ್ಮ ಶರಣರ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲ ಸಂಗಮದೇವ.”

ಈ ವಚನದಲ್ಲಿ ಎಂತಹ ನಗೆಯಾಟಿಯ ಕಿಚ್ಚಾಡುತ್ತಿದೆ? “ಹಾಲ ನೇಮ, ಹಾಲ ಕೆನೆಯ ನೇಮ, ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ, ಬೆಣ್ಣೆಯ ನೇಮ, ಬೆಲ್ಲದ ನೇಮ! ಅಂಬಲಿಯ ನೇಮದವರನಾರನೂ ಕಾಣೆ….”

ಭಕ್ತನ ನ್ಯೂನತೆಗಳೂ ಭಗವಂತನಿಗೆ ಪ್ರಿಯವಾಗುತ್ತವಂತೆ. “ಹಾವಿನ ಡೊಂಕು ಹುತ್ತಕ್ಕೆ ಸಸಿನ. ನದಿಯ ಡೊಂಕು ಸಮುದ್ರಕ್ಕೆ ಸಸಿನ. ನಮ್ಮ ಕೂಡಲ ಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ.”

ಪರಾಭಕ್ತಿಯ ಐಕ್ಯನುಭವದ ಭಾಗವದ್‌ರತಿಯ ಆನಂದವನ್ನು ಘೋಷಿಸುವ ಈ ವಚನಗಳನ್ನು ಆಲಿಸಿ:

“ವಾರವೆಂದರಿಯೆ, ದಿನವೆಂದರಿಯೆ, ಏನೆಂದರಿಯೆನಯ್ಯಾ! ಇರುಳೆಂದರಿಯೆ, ಹಗಲೆಂದರಿಯೆ, ಏನೆಂದರಿಯೆನಯ್ಯಾ, ನಿಮ್ಮುವ ಪೂಜಿಸಿ ಎನ್ನುವ ಮರೆದೆ.” “ನಿಮ್ಮ ನೋಟವನಂತಸುಖ. ಕೂಟ ಪರಮ ಸುಖವಯ್ಯಾ! ಅಷ್ಟಕೋಟಿ ರೋಮಗಳೆಲ್ಲಾ ಕಂಗಳಾಗಿ ನೋಡುತ್ತಿದ್ದೆ. ನಿಮ್ಮ ನೋಡಿ, ಮನದಲಿ ರತಿಹುಟ್ಟಿ ನಿಮಿರ್ದವೆನ್ನ ಕಂಗಳು!”

“ವಚನದಲ್ಲಿ ನಾಮಾಮೃತ ತುಂಬಿ, ನಯನದಲ್ಲಿ ಮೂರುತಿ ತುಂಬಿ, ಮನದಲ್ಲಿ ನಿಮ್ಮ ನೆನಹು ತುಂಬಿ, ಕಿವಿಯಲ್ಲಿ ನಿಮ್ಮ ಕೀರ್ತಿಯ ತುಂಬಿ, ನಿಮ್ಮ ಚರಣಕಮಲದೊಳು ಸೋಹದ ಬಂಡನುಂಬ ತುಂಬಿಯಾಗಿರ್ಪೆನು.”

ಹೀಗೆ ಒಂದಲ್ಲ ಎರಡಲ್ಲ ಹತ್ತಾರು ವಚನಗಳಲ್ಲಿ ನೂರಾರು ವಚನಭಾಗಗಳಲ್ಲಿ ಸಾಹಿತ್ಯದ ಅನೇಕ ಲಕ್ಷಣಗಳನ್ನು ಎದುರುಗೊಳ್ಳುತ್ತೇವೆ. ನವರಸ ಪರಿಪೂರ್ಣ ಎಂದು ವರ್ಣಿಸಲು ಸಾಧ್ಯವಿಲ್ಲದಿದ್ದರೂ ಎಲ್ಲ ರಸಗಳಿಗೂ ಕಿರೀಟಪ್ರಾಯವಾಗಿ ಎಲ್ಲ ರಸಗಳ ರಸವಾಗಿರುವ ಶಾಂತರಸದ ತೀರ್ಥದಲ್ಲಿ ಮುಳುಗಿ ಮಿಂದು ಪವಿತ್ರಗಾತ್ರರೂ ಪವಿತ್ರಾತ್ಮರೂ ಆಗುತ್ತೇವೆ. ಆದರೆ ಶೃಂಗಾರಾದಿ ಇತರ ರಸಗಳನ್ನು ಸವಿದಂತೆ ಇದು ಬಹುಜನ ಸುಲಭಸಾಧ್ಯವಲ್ಲ. ಬಸವಣ್ಣನವರ ಹೇಳುವಂತೆ “ಆದ್ಯರ ವಚನ ಪರುಷ ಕಂಡಯ್ಯ! ಅಧರಕ್ಕೆ ಕಹಿ, ಉದರಕ್ಕೆ ಸಿಹಿ! ಕೂಡಲ ಸಂಗನ ಶರಣರ ವಚನ ಬೇವ ಸವಿದಂತೆ!” “ಆದ್ಯರ ವಚನ ಆದ್ಯರಿಗಾಯಿತ್ತು. ವೇದ್ಯರಿಗಲ್ಲದೆ ಸಾಧ್ಯವಾಗದು. ಕೂಡಲ ಸಂಗಮದೇವ, ನಿಮ್ಮನುಭಾವದಿಂದೆನ್ನ ಭವ ನಾಸ್ತಿಯಾಯಿತು!” ಸಾಧಕನಿಗೆ ಮುಖ್ಯವಾದುದು ವೇದವಲ್ಲ, ವಚನವಲ್ಲ, ಅನುಭಾವ!

ಬಸವಣ್ಣನವರ ವಚನವಾಹಿನಿ ನಾಡಿನ ಮೇಲೆ ಹರಿದಾಗ ಅಮೃತ ಭಾಗೀರಥಿಯೆ ಹರಿದಂತಾಯಿತೆಂದು ತೋರುತ್ತದೆ. ಅವರ ತರುವಾಯ ಕನ್ನಡ ನಾಡಿನಲ್ಲಿಯೂ ಭರತಖಂಡದಲ್ಲಿಯೂ ಪ್ರಪಂಚದ ಇತರ ಭಾಗಗಳಲ್ಲಿಯೂ ಎಷ್ಟೆಷ್ಟೋ ಮಹಾನುಭಾವರು ಮೂಡಿ ಆಡಿ ಮಾಡಿ ಹೋಗಿರುವುದರಿಂದ ಆ ಎಲ್ಲ ಬೆಳಕುಗಳನ್ನೂ ಕಾಣುತ್ತಿರುವ ನಮಗೆ ನಮ್ಮ ಬೆಳಕು ಸೂರ್ಯನಂತೆ ಕಾಣಿಸದೆ ಸೊಡರಾಗಿ ಕಾಣಿಸಬಹುದು. ಆಗ ನಮ್ಮ ಅಭಿಮಾನ ಮುನಿದೆದ್ದು ಸೊಡರನ್ನು ಆಕಾಶಕ್ಕೆ ಬೀಸಿ ಅದನ್ನೂ ಒಂದು ಸೂರ್ಯನನ್ನಾಗಿ ಮಾಡುವ ಬಾಲಸಾಹಸಕ್ಕೆ ಕೈಹಾಕಬಹುದು. ಅಂತಹ ಅಹಂಕಾರ, ಭ್ರಾಂತಿಯ ಉಲ್ಬಣಾವಸ್ಥೆ, ನಮಗೆ ಅನಾವಶ್ಯಕ. ಮನೆಯ ಪ್ರಪಂಚಸೌಂದರ್ಯಸ್ಫರ್ಧೆಯಲ್ಲಿ ಬಹುಮಾನ ಪಡೆದ ಹೊರತೂ ನಮ್ಮ ಪೂಜೆಗೆ ಪ್ರೀತಿಗೆ ಗೌರವಕ್ಕೆ ಪಾತ್ರಗಳಾಗುವುದಿಲ್ಲ ಎನ್ನುವುದು ಅವಿವೇಕದ ಪರಮಾವಧಿ. ಮಕ್ಕಳಿಗೆ ಹಿಡಿದಿರುವ “ಕೀರ್ತಿ ಶನಿ”ಯಿಂದ ತಾಯಿಗೆ ಅಮೇರಿಕದ ಬೀದಿಗಳಲ್ಲಿ ಅಗೌರವವಾಗದಂತೆ ನೋಡಿಕೊಳ್ಳಬೇಕು. ಬಸವಣ್ಣನವರು ನಮ್ಮ ಮನೆಯ ಗುಡಿಯ ದೇವರಡಿಯ ತಣ್ಜೊಡರು. ನಮ್ಮ ಕತ್ತಲೆಯನ್ನು ಬೆಳಗಲು ಸಾಕು ಆ ಪ್ರದೀಪ. ಅದರ ಪುಣ್ಯಜ್ಯೋತಿಗೆ ಕೈಮುಗಿದು ಧನ್ಯರಾಗುವವರು ಮತ್ತೊಂದಕ್ಕೆ ಖಂಡಿತ ಕರುಬಬೇಕಾಗಿಲ್ಲ.  ಏಕೆಂದರೆ ಎಲ್ಲೆಲ್ಲಿಯೂ ಇರುವಂತೆ ಇಲ್ಲಿಯೂ ಇರುವುದೆಲ್ಲ. ಅನಂತವು ಪೂರ್ಣದಲ್ಲಿ ಎಂತೋ ಅಂತೆ ಅಂಶದಲ್ಲಿಯೂ ಪೂರ್ಣವಾಗಿಯೆ ಅನಂತ!