ಕನ್ನಡ ಸಾಹಿತ್ಯದ ಮಹಾಕವಿಗಳಲ್ಲಿ ರನ್ನ ಪ್ರಧಾನತಃ ‘ಶಕ್ತಿ’ ಕವಿ. ಆತನಲ್ಲಿರುವ ಉದ್ದಾಮವಾದ ಇತರ ಕಾವ್ಯಗುಣಗಳು ಶ್ರೇಷ್ಠರಾದ ಬೇರೆ ಕನ್ನಡ ಕವಿಗಳಲ್ಲಿ ಸಮಪ್ರಮಾಣದಲ್ಲಿಯೊ ಸಮಧಿಕಪ್ರಮಾಣದಲ್ಲಿಯೊ ದೊರೆಯುತ್ತದೆ. ಆದರೆ ರನ್ನನ ವಿಶಿಷ್ಟಗುಣವಾದ ‘ಶಕ್ತಿ’ ಅದೇ ಪ್ರಮಾಣದಲ್ಲಿ ಆ ತೂಕದಲ್ಲಿ ಆ ವೇಗದಲ್ಲಿ ಆ ಮಿಂಚಿನಲ್ಲಿ ಮತ್ತೆಲ್ಲಿಯೂ ಲಭಿಸುವುದಿಲ್ಲ. ರನ್ನನ ‘ಶಕ್ತಿ’ಯ ಭವ್ಯತೆಯೇ ಬೇರೆ; ಅದರ ಭೀಮಬಲವೇ ಬೇರೆ; ಅದರ ದುರ್ಯೋಧನ ಧೈರ್ಯವೇ ಬೇರೆ. ಅದರೆದುರು ನಿಂತಾಗ ಗೇರುಸೊಪ್ಪೆಯ ಜಲಪಾತದ ರುಂದ್ರ ಭೀಷ್ಮತೆ ನಮ್ಮನ್ನು ಆಕ್ರಮಿಸಿದಂತಾಗುತ್ತದೆ. ಅದರ ಬಿರುವೊನಲಿಗೆ ಸಿಕ್ಕಿದಾಗ ಕಿಬ್ಬಿಗೆ ಭೋರ್ಗರೆದುರುಳುರುಳುವ ಕಾರ್ಗಾಲದ ನಿರ್ಝರಿಣಿಯ ಮಲೆಯರ್ಬ್ಬಿಗೆ ಮಂಡೆಗೊಟ್ಟಂತಾಗುತ್ತದೆ: ನಮ್ಮನ್ನು ಅಪ್ಪಳಿಸುತ್ತದೆ; ಉಸಿರ್ಕಟ್ಟಿಸುತ್ತದೆ; ಒದ್ದೆಮುದ್ದೆಯನ್ನಾಗಿ ಮಾಡಿ ಕೊಚ್ಚಿ ಬೀಸಾಡುತ್ತದೆ; ಕಯ್ ತತ್ತರಿಸಿ, ಕಾಲ್ ತತ್ತರಿಸಿ, ಮಿದುಳ್ ತತ್ತರಿಸಿ ಹುಚ್ಚೆಬ್ಬಿಸುತ್ತದೆ. ಆ ವಿದ್ಯುತೀರ್ಥದ ರಭಸಕ್ಕೆ ಎದೆಗೊಟ್ಟು ಮಿಂದು, ಶುಚಿಯಾಗಿ, ಚೇತನೋಜ್ವಲನಾಗಿ, ಅದರ ಶಕ್ತಿಪೀಯೂಷಪಾನದಿಂದ ಬಲಾನ್ವಿತನಾಗಿ ಹೊರಗೆ ಬರಬೇಕಾದರೆ ಸಹೃದಯನಿಗೆ ಆಂಜನೇಯ ಸದೃಶವಾದ ಪಟುತೆ ಬೇಕಾಗುತ್ತದೆ. ಅಂತಹ ‘ಶಕ್ತಿ’ ಗುಣ ಒಂದಿಲ್ಲದಿದ್ದರೆ ರನ್ನನಿಗೆ ಮಹಾಕವಿಯ ಪಟ್ಟ ದುರ್ಲಭವಾಗುತ್ತಿತ್ತು. ಅವನದು ಪಂಪಸೂರ್ಯ ಕಾಂತಿಯನ್ನು ಪ್ರತಿಬಿಂಬಿಸುವ ಚಂದ್ರಕೀರ್ತಿ ಮಾತ್ರವಾಗುತ್ತಿತ್ತು. ಕವಿಚಕ್ರವರ್ತಿ ಎಂಬ ಬಿರುದೂ ಅವನನ್ನು ರಕ್ಷಿಸುತ್ತಿರಲಿಲ್ಲ. ಪೊನ್ನನಿಗೊದಗಿರುವ ಗತಿಯೇ ಅವನಿಗೂ ಒದಗುತ್ತಿತ್ತು. ಆ ‘ಶಕ್ತಿ’ ವಿಶೇಷ ಒಂದರಿಂದಲೆ ರನ್ನ ಬದುಕಿದ್ದಾನೆ; ಮಹಾಕವಿಯಾಗಿದ್ದಾನೆ; ಪಂಪ ನಾರಣಪ್ಪರ ನಡುವೆ ಹೆಗಲೆಣೆಯಾಗಿ ಹಣೆಯೆತ್ತಿ ನಿಂತಿದ್ದಾನೆ.

ರನ್ನನಂತೆ ಪ್ರಥಮ ಪರಿಚಯದಲ್ಲಿಯೆ ಸಾಹಿತ್ಯದ ಪ್ರೌಢವಿದ್ಯಾರ್ಥಿಯನ್ನು ತೆಕ್ಕನಾಕ್ರಮಿಸಿ ಅಪ್ಪಳಿಸಿ ಉದ್ರೇಕಿಸಿ ಹೊಡೆದೆಬ್ಬಿಸಿ ಬೆರಗುಗೊಳಿಸಿ ವಶಪಡಿಸಿಕೊಳ್ಳುವ ವೀರಕವಿ ಕನ್ನಡದಲ್ಲಿ ಮತ್ತೊಬ್ಬನಿಲ್ಲ. ಆ ಪ್ರಥಮ ರಸಾಸ್ವಾದನೆಯ ಅನುಭವದ ಮುದ್ರೆಚಿರಸ್ಥಾಯಿಯಾಗಿರುತ್ತದೆ. ಆತನ ಪರವಾದ ನಮ್ಮ ಪ್ರಶಂಸೆಯಾಗಲಿ ಪೂಜೆಯಾಗಲಿ ಪಕ್ಷಪಾತವಾಗಲಿ ಮತ್ತೆ ಧಕ್ಕೆಗೀಡಾಗುವುದಿಲ್ಲ. ಆದರೆ ಸಾಹಿತ್ಯಸೀಮೆಯಲ್ಲಿ ಮುಂದುವರಿದು ಹೊಸಹೊಸ ಪರಿಚಯಗಳಿಂದ ಹೆಚ್ಚು ಹೆಚ್ಚು ಶ್ರೀಮಂತನಾಗುವ ವಿದ್ಯಾರ್ಥಿಗೆ, ಅದರಲ್ಲಿಯೂ ವಿಶೇಷವಾಗಿ ಪಂಪನ ಬೃಹತ್‌ಪ್ರತಿಭೆಯ ಕೂಲಂಕುಷ ಪರಿಚಯದಿಂದ ಊರ್ಧ್ವಪ್ರಜ್ಞನಾದ ಮೇಲೆ, ಕ್ರಮೇಣ ಗೊತ್ತಾಗುತ್ತದೆ. ಆ ಪ್ರಥಮಾನುಭವದ ನಿಜನಕ್ಷೆ.

ನೆರೆಯ ಸಿರಿಮನೆಯಿಂದ ಎರವುತಂದು ಸಿಂಗರಿಸಿದ ಬಡಮನೆಯ ಮದುಮಗಳಂತೆ ಕಾಣಿಸತೊಡಗುತ್ತಾನೆ, ರನ್ನ: ಓಹೊ ಈ ರೇಖೆಯ ವಿನ್ಯಾಸ ಅವನದಲ್ಲ: ಆ ಬಣ್ಣದ ಹೊಳಪು ಸಾಲದ ಸಿರಿ. ಈ ಸಂವಿಧಾನ ಕೃತಿಚೌರ್ಯವಲ್ಲದಿದ್ದರೂ ತತ್ಸದೃಶ್ಯ; ಆ ಪ್ರತಾಪದ ಶಕ್ತಿ ತನ್ನದಾದರೂ ಉಕ್ತಿ ತನ್ನದಲ್ಲ. ಈ ಉಪಮೆ ಚರ್ವಿತರ್ವಣ. ಆ ರೂಪಕ ಸಂಪ್ರದಾಯದ್ದು. ಇಲ್ಲಿ ಪೂರ್ವಕವಿಯ ರೀತಿಯಿದ್ದರೂ ಅಲ್ಲಿರುವ ಧ್ವನಿಯಲ್ಲ; ಅಲ್ಲಿ ಅಕ್ಷರಾಡಂಬರವಿದ್ದರೂ ಪಂಪನ ಗುಣ್ಪಿಲ್ಲ. ಓಹೊ ಇಷ್ಟೇಯೆ ಈ ರನ್ನ? ನವಿಲಿನ ಪುಕ್ಕ ಸಿಕ್ಕಿಸಿಕೊಂಡ ಕೆಂಬೂತ! ಪಂಪೆಲ್ಲ ಪಂಪನದು; ಹೆಸರಿಗೆ ರನ್ನ! ಪಂಪನ ಮಹಾಕಾವ್ಯವಾದ ‘ವಿಕ್ರಮಾರ್ಜುನ ವಿಜಯ’ದ ಒಂದೆರಡು ಆಶ್ವಾಸಗಳನ್ನು ಕಿತ್ತುಕೊಂಡು ಒಂದಿನಿತು ನಾಟಕೀಯವಾಗಿ ಸನ್ನಿವೇಶಗಳನ್ನು ನೆಯ್ದು, ಪಂಪನಿಂದ ಸಕಲ ಸಾಮಗ್ರಿಗಳನ್ನು ಪಡೆದಿದ್ದರೂ ಅವನನ್ನು ಒಮ್ಮೆಯಾದರೂ ನೆನೆಯುವ ಕೃತಜ್ಞತೆಯನ್ನೂ ಅವಜ್ಞೆಮಾಡಿ, ಸಂಪೂರ್ಣಾನುಕರಣದ ‘ಸಾಹಸ ಭೀಮವಿಜಯ’ವನ್ನು  ಜೋಡಿಸಿದ್ದಾನೆ ಅಷ್ಟೆ! ಅಷ್ಟಕ್ಕಾದರೂ ಮುಗಿಯುತ್ತದೆಯೆ ಅವನ ಋಣಭಾರ? ಇಲ್ಲ. ಲೌಕಿಕ ಕಾವ್ಯದಲ್ಲಿ ಹೇಗೊ ಹಾಗೆ ಆಗಮಿಕ ಕಾವ್ಯದಲ್ಲಿಯೂ ರನ್ನ ಪಂಪನ ಅನುಚರ. ಅಲ್ಲಿಯಂತೂ ಇಲ್ಲಿಗಿಂತಲೂ ಕೀಳೆ! ‘ಆದಿಪುರಾಣ’ದ ಆನೆಯ ಮುಂದೆ ‘ಅಜಿತಪುರಾಣ’ದ ಆಡೆ?-ಇದ್ದಕಿದ್ದ ಹಾಗೆ ರನ್ನನನ್ನು ಆರಾಧಿಸುತ್ತಿದ್ದ ನಮ್ಮ ಪ್ರೌಢವಿದ್ಯಾರ್ಥಿ ಅವನನ್ನು ಮೂದಲಿಸಲೂ ಹಿಂಜರಿಯುವುದಿಲ್ಲ.  ಕೊನೆಗೆ ಪ್ರಥಮ ಪರಿಚಯದಿಂದ ಸಂಭವಿಸುತ್ತಿದ್ದ ಆರಾಧನಾ ಕ್ರಿಯೆಗೆ ಪ್ರತಿಯಾಗಿ ಅದೊಂದು ರೀತಿಯ ತಾತ್ಸಾರದ ಪ್ರತಿಕ್ರಿಯೆ ಮೂಡುತ್ತದೆ. ಹುಣ್ಣಿಮೆ ಹೋಗಿ ಅಮಾವಾಸ್ಯೆ ಕವಿಯುತ್ತದೆ. ಆದರೇನು? ಮತ್ತೆ ಬೆಳ್ವಕ್ಕದ ಪಾಡಿವ ಮೂಡದಿರುತ್ತದೆಯೆ?

ಪಂಪನನ್ನು ಕೆಳಗಿಟ್ಟು ಮತ್ತೆ ‘ಗದಾಯುದ್ಧ’ವನ್ನು ಎತ್ತಿಕೊಳ್ಳುತ್ತಾನೆ; ಜಾಗ್ರತ್‌ಪ್ರಜ್ಞನಾಗಿ ಅಮೂಲಾಗ್ರವಾಗಿ ಓದುತ್ತಾನೆ:

ಯಾವ ಪುಟವನ್ನು ತೆರೆಯಲಿ, ಯಾವ ಸನ್ನಿವೇಶವನ್ನು ಗಮನಿಸಲಿ, ಯಾವ ಸಂವಾದವನ್ನು ಪಠಿಸಲಿ, ಯಾವ ವೀರಾಲಾಪನವನ್ನು ವಾಚಿಸಲಿ, ಯಾವ ವರ್ಣನೆಯನ್ನು  ಆಲಿಸಲಿ ಪೂರ್ವಪರಿಚಿತವಾದ  ಅದೇ ‘ಶಕ್ತಿ’ ಹೃದಯವಿಹಾರಿಯಾಗುತ್ತದೆ. ಪ್ರಾಣಸಂಚಾರಿಯಾಗುತ್ತದೆ. ಉತ್ಸಾಹ, ರೋಷ, ಔದಾರ್ಯ, ಪ್ರತೀಕಾರಾದಿ ರಜೋಗುನಪ್ಲಾವಿತ ಸನ್ನವೇಶಗಳ ಮಾತಿರಲಿ; ವಿಲಾಪ, ವಿಷಾದ, ನಿರಾಶೆ, ಶೋಕ, ಚಲ, ದೈನ್ಯ, ಮರಣ ಇತ್ಯಾದಿ ತಮೋಗುಣಪ್ರಚುರವಾದ ಸನ್ನಿವೇಶಗಳಲ್ಲಿಯೂ ಆ ದುರ್ದಮ್ಯ ‘ಶಕ್ತಿ’ ಓದುಗನ ಧಮನಿಗಳಲ್ಲಿ ಅಗ್ನಿಜ್ವಾಲೆಯಂತೆ ಧುಮುಧುಮುಕುವ ಅನುಭವವಾಗುತ್ತದೆ: ಭೀಮ ದುರ್ಯೋಧನರ ಗದಾಯುದ್ಧ ಪ್ರಸಂಗದಲ್ಲಿ ಹೇಗೋ ಹಾಗೆಯೆ ಆಕ್ರಂದಿಸುತ್ತಿರುವ ‘ಕುರುಕುಲವಿಳಯಜ್ವಾಲೆ ಪಾಂಚಾಲಿ’ಯನ್ನು ಸಮೀರ ಕುಮಾರನು ಸಂತೈಸುತ್ತಿರುವ ಸನ್ನಿವೇಶದಲ್ಲಿಯೂ ಆ ‘ಶಕ್ತಿ’ಯ ಮಿಂಚುದೋಳು ನಮ್ಮನ್ನು ಆಲಿಂಗಿಸುತ್ತದೆ. ದುರ್ಯೋಧನನು ಪಾಂಡವಪ್ರಶಂಸಾಪರನಾದ ಸಂಜಯನನ್ನು ತಿರಸ್ಕರಿಸುವ ದೃಶ್ಯದಲ್ಲಿ ಹೇಗೋ ಹಾಗೆಯೆ ಮಡಿದ ಕರ್ಣನ ಕಳೇಬರವನ್ನು ಕಂಡು ಆತನು ಪ್ರಲಾಪಿಸುವಾಗಲೂ ನಮಗೆ ಆ ‘ಶಕ್ತಿ’ ಸ್ಪರ್ಶನವಾಗುತ್ತದೆ. ಭೀಮನ ರೌದ್ರಪ್ರತಿಜ್ಞೆಯಲ್ಲಿ ಎಂತೊ ಅಂತೆಯೆ ಶರಶಯ್ಯಾಗತರಾದ ಗಾಂಗೇಯರನ್ನು ಬೀಳ್ಕೋಳ್ಳುವ ದುರ್ಯೋಧನನ ಅಮರ್ಷತೆಯಲ್ಲಿಯೂ ಅದೇ ‘ಶಕ್ತಿ’ ದರ್ಶಿತವಾಗುತ್ತದೆ. ಕೌರವೇಂದ್ರನು ವೈಶಂಪಾಯನ ಸರೋವರದಲ್ಲಿ ತಲೆ ಮರೆಸಿಕೊಳ್ಳುವಾಗ ಎಂತೊ ಅಂತೆಯೆ ಸಾಹಸಭೀಮನ ಮೂದಲಿಕೆಗೆ, ನೀರೊಳಗಿದ್ದೂ ಬೆವರಿ, ಆತನು ಹೊರಚಿಮ್ಮಿದ ವಿದ್ಯುದ್‌ವರ್ಣನೆಯಲ್ಲಿಯೂ ಅದೇ ‘ಶಕ್ತಿ’ ಸೌದಾಮಿನಿಯ ಭಯಂಕರಾಸ್ಫೋಟನೆಗೆ ಸಿಲ್ಕಿದಂತಾಗುತ್ತದೆ, ನಮ್ಮ ಚೇತನ! ‘ಶಕ್ತಿ’! ‘ಶಕ್ತಿ’! ಮತ್ತೂ ‘ಶಕ್ತಿ’! ಇನ್ನೂ ‘ಶಕ್ತಿ’! ಮುಟ್ಟಿದಲ್ಲಿ ‘ಶಕ್ತಿ’! ಮೆಟ್ಟಿದಲ್ಲಿ ‘ಶಕ್ತಿ’! ಆ ‘ಶಕ್ತಿ’ಯ ಭೀಮಕಾಂತಾ ಕರ್ಷಣೆಯಿಂದ ಬಿಡಿಸಿಕೊಳ್ಳಲಾಗುವುದಿಲ್ಲ. ಅದರ ದಿಗ್ಗಜೋಪಮವಾದ ಐರಾವತ ಕರಾಸ್ಫಾಲನೆಯ ವಿದ್ಯುನ್ಮೋಹನೀಯ ರಸಾಕ್ರಮಣದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ!

ಹೀಗೆ ಪರಸ್ಪರ ವಿರುದ್ಧವೆಂದು ತೋರುವ ಅನುಭವಗಳ ಘರ್ಷಣಾಂದೋಲನಗಳಿಗೆ ಸಿಲುಕಿ ನಮ್ಮ ಪ್ರೌಢವಿದ್ಯಾರ್ಥಿ ದಿಙ್ಮೂಢನಾದಂತಾಗುತ್ತಾನೆ. ಬೆರಗು ಬಡಿದಂತಾಗುತ್ತಾನೆ. ಜ್ವಾಲಾಮಯನಾಗುತ್ತಾನೆ. ‘ಶಕ್ತಿ’ ಸಂಚಾರದಿಂದ ಬಲಿಷ್ಠನಾಗುತ್ತಾನೆ. ರಸಲೋಕದ ಭವ್ಯಾನುಭೂತಿಯಿಂದ ದೀಪ್ತನಾಗುತ್ತಾನೆ.

“ಆರತೀಯ ಕವೀಶ್ವರ
ರಾರುಂ ಮುನ್ನಾರ್ತರಿಲ್ಲ ವಾಗ್ದೇವಿಯ ಭಂ
ಡಾರದ ಮುದ್ರೆಯನೊಡೆದಂ
ಸಾರಸ್ವತಮೆನಿಪ ಕವಿತೆಯೊಳ್ ಕವಿರತ್ನಂ!”

ಎಂಬ ರನ್ನನ ಆತ್ಮಪ್ರತ್ಯಯಕ್ಕೆ ಕೆಮ್ಮನೆ ಸಮ್ಮತ ಹೊಡೆದು ತಾನೂ ಅದನ್ನು ಹೆಮ್ಮೆಯಿಂದ ಅಘೋಷಿಸುತ್ತಾನೆ.

“ರತ್ನಪರೀಕ್ಷಕನಾಂ ಕೃತಿ
ರತ್ನಪರೀಕ್ಷಕನೆನೆಂದು ಫಣಿಪತಿಯ ಫಣಾ
ರತ್ನಮುಮಂ ರನ್ನನ ಕೃತಿ
ರತ್ನಮುಮಂ ಪೇಳ್ ಪರೀಕ್ಷಿಪಂಗೆಂಟೆರ್ದೆಯೆ?”

ಎಂದು ರನ್ನ ತನ್ನ ವಿಮರ್ಶಕರನ್ನು ಉದ್ದೇಶಿಸಿ ಅಂದು ಆಡಿದುದನ್ನು ಮತ್ತೆ ಹೇಳಿಕೊಂಡು ತನಗೆ ತಾನೆ ಎಚ್ಚರಿಕೆ ಕೊಟ್ಟುಕೊಳ್ಳುತ್ತಾನೆ.

ಅರೆ! ಇದೇನು? ಕಥೆ ಅವನದಲ್ಲ; ಸಂವಿಧಾನ ಅವನದಲ್ಲ; ಸನ್ನಿವೇಶ ವಿರಚನೆಯೂ ಸಂಪೂರ್ಣವಾಗಿ ಅವನದಲ್ಲ. ಅಲಂಕಾರ ರೀತಿ ರಸ ಧ್ವನಿ ಎಲ್ಲದಕ್ಕು ಪಂಪನಲ್ಲಿ ಮೇಲ್ಪಂತಿ ಕಾಣುತ್ತದೆ. ವಿಚಾರಕ್ಕೆ ಅವನದಾಗಿ ಹೊಸತು ಹೆಚ್ಚೇನೂ ಗೋಚರಿಸುವುದಿಲ್ಲ. ಆದರೂ ರನ್ನನ ರಸಾಗ್ನಿತೀರ್ಥದಲ್ಲಿ ಮಗ್ನನಾದ ಸಹೃದಯದ ಚೇತನ ತಪೋಜ್ವಲವಾಗುತ್ತದೆ! ಅದಾವುದೊ ಒಂದು ಮಹತ್ವ ನಮ್ಮಲ್ಲಿ ಸಂಚರಿಸುತ್ತದೆ. ಎಲ್ಲಿಂದ ಬಂತು ಮತ್ತೆ ಆ ಮಹತ್ತ್ವಾನುಭವ?

ಅಂಗಡಿಯಿಂದ ಯಾರು ಬೇಕಾದರೂ ತಾಮ್ರದ ತಂತಿಯನ್ನು ಕೊಂಡು ತರಬಹುದು. ಅದನ್ನು ಮುಟ್ಟಿದರೆ ಏನೋ ಆಗುವುದಿಲ್ಲ. ಅದು ವಿದ್ಯುತ್ ಕಂಬವನ್ನೇರಿದಮೇಲೆ ತಾನೆ ಅದರ ಗೌರವ ಬೇರೆಯಾಗುತ್ತದೆ! ಆದ ಅದನ್ನು ಮುಟ್ಟಿದವನಿಗೆ ಅನುಭವ ಗೋಚರವಾಗುತ್ತದೆ ಅಗೋಚರವಾದ ಶಕ್ತಿಯ ತಟಿಚ್ಚುಂಬನ! ರನ್ನನ ಕೃತಿಯನ್ನು ಓದುವವನಿಗೂ ಅಂತಹುದೇ ಅನುಭವವಾಗುತ್ತದೆ. ವಿಷಯ, ವಸ್ತು, ಸಂವಿಧಾನಾದಿಗಳಿಗೆ ಅವನು ಅನ್ಯರಿಗೆ ಋಣಿಯಾಗಿರಬಹುದು. ಆದರೆ ಕೃತಿಯಲ್ಲಿ ಎಲ್ಲೆಲ್ಲಿಯೂ ಪ್ರವಹಿಸುತ್ತಿರುವ ‘ಶಕ್ತಿ’ ಅವನ ಸ್ವಂತ ವ್ಯಕ್ತಿತ್ವದ ತಪೋಗಭಸ್ತಿ; ಅದು ಅವನದೇ ಆದ ಚೈತನ್ಯದ ವಿಶಿಷ್ಟ ಪ್ರತಿಭಾನ; ಕವಿಯ ಸ್ವಸ್ವರೂಪಾನುಸಾರಿಯಾಗಿ ಮೈದೋರುವ ಸ್ವಭಾವವನ್ನು ಲೀಲಾಲೋಕದಲ್ಲಿ ಪ್ರತಿಷ್ಠಿಸುವ ಸ್ವಧರ್ಮ ಸಂಬಂಧಿಯಾದ ಚಿತ್ತಪಸ್. ಆ ‘ಶಕ್ತಿ’ ಪ್ರವಹಿಸಿದಂತೆ ಚಿನ್ನ, ಬೆಳ್ಳಿ, ಕಬ್ಬಿಣ, ಹಿತ್ತಾಳೆ, ಕಡೆಗೆ ಹಸಿಹುಲ್ಲು, ಎಲ್ಲವೂ ವಿದ್ಯುನ್ಮಯವಾಗಿ ನಮ್ಮಮೇಲೆ ಅಧಿಕಾರ ನಡೆಸಲು ಸ್ವಯಂ ಸಮರ್ಥವಾಗುತ್ತವೆ. ಅಂತಹ ‘ಶಕ್ತಿ’ ಮಾತ್ರದಿಂದಲೆ ರನ್ನನ ‘ಗದಾಯುದ್ಧ’ ಕಾವ್ಯಕ್ಕೆ ಭವ್ಯತೆ ಒದಗಿದೆ.

‘ಜಗತ್ತಿನ ಮಹಾಕವಿಗಳನ್ನು ಸಾಲಾಗಿ ನಿಲ್ಲಿಸಿ ನೋಡಿದರೆ ಗುಟ್ಟು ರಟ್ಟಾಗುತ್ತದೆ: ಒಬ್ಬನ ಕೈ ಮತ್ತೊಬ್ಬನ ಜೇಬಿನಲ್ಲಿ!’ ಎಂಬ ಜಾಣ್ಣುಡಿಯಲ್ಲಿ ಅರೆಪಾಲಿಗೆ ಮಿಗಿಲೆ ಸತ್ಯಾಂಶವಿದೆ. ರನ್ನನ ಕೈ ಪಂಪನ ಬಕ್ಕಣದಲ್ಲಿರುವುದನ್ನು ಮಾತ್ರ ನೋಡಿದರೆ ಸಾಲದು. ಆ ಬೆಳ್‌ಗೊಳ್ಳೆಯಿಂದ ರನ್ನನು ಸೃಷ್ಟಿಸಿರುವ ಬೊಕ್ಕಸದ ಐಸಿರಿಯನ್ನೂ ನಾವು ಗಮನಿಸಬೇಕು. ಹನಿಯನ್ನು ಹೊತ್ತು ಮುತ್ತನ್ನು ಹೆರುವ ಶುಕ್ತಿಕೆಯ ಋಣ ಅದರ ದೋಷವಲ್ಲ, ಸರ್ವರೂ ಹೃತ್ಪೂರ್ವಕವಾಗಿ ಹಾರೈಸಿ ಹರಸಬೇಕಾದ ದಿವ್ಯಗುಣ, ಮತ್ತು ಅದರ ಸ್ವಧರ್ಮ ಲಕ್ಷಣ. ಕನ್ನಡ ಸಾಹಿತ್ಯಭಂಡಾರಕ್ಕೆ ಅನರ್ಘ್ಯಕೃತಿರತ್ನವನ್ನು ದಯಪಾಲಿಸಿದ ರನ್ನನ ಋಣ ಕನ್ನಡಿಗರಿಗೆ ವರಕವಿಯ ಕೃಪೆಯ ಅನುಗ್ರಹ ಕಣಾ!

ರನ್ನ ಇತರ ಹಳಗನ್ನಡ ಕವಿಗಳಿಗಿಂತ ಹೆಚ್ಚು ಪುಣ್ಯವಂತ. ಆಧುನಿಕ ಸಾರಸ್ವತ ನವೋದಯದಲ್ಲಿ ಕನ್ನಡ ನಾಡು ಆತನಿಗೆ ಸಲ್ಲಬೇಕಾದ ಮರ್ಯಾದೆ ಕಾಣಿಕೆ  ಪೂಜೆ ಎಲ್ಲವನ್ನು ಪೂರ್ಣವಾಗಿ ಸಲ್ಲಿಸಿ, ತನ್ನ ಸಾಹಿತ್ಯಜೀವನಕ್ಕೆ ಆತನಿಂದ ಪಡೆಯಬಹುದಾದ ಸ್ಫೂರ್ತಿಸಮಸ್ತವನ್ನೂ ಪಡೆದು ಹಿಗ್ಗಿತು, ಬೆಳಗಿತು, ಮುನ್ನುಗ್ಗಿತು. ಹಾಗಾಗುವುದಕ್ಕೆ ಪ್ರಧಾನ ಕಾರಣ ರನ್ನನ ಕೃತಿರತ್ನಕ್ಕೆ ಒದಗಿದ ಒಂದು ಅಪೂರ್ವವಾದ ಕಲ್ಯಾಣ ಘಟನೆ. ಅದನ್ನು ನಡಸಿದವರೂ ಆಧುನಿಕ ನವೋದಯದ ಹಿರಿಯ ಆಚಾರ್ಯರೆ. ಬಿ.ಎಂ. ಶ್ರೀಕಂಠಯ್ಯನವರು ರನ್ನನ ಗದಾಯುದ್ಧ ಕಾವ್ಯದಿಂದ ಗದಾಯುದ್ಧ ನಾಟಕವನ್ನು ಕಂಡರಿಸಿ, ರಂಗಭೂಮಿಯ ಸರ್ವಜನಪ್ರಿಯ ವೇದಿಕೆಯಮೇಲೆ ತಂದು ಆಡಿಸಿದುದೆ ತಡ ಕಂಡವರು ಡಂಗುಬಡಿದು ಹೋದರು. ಆ ಸಂಭ್ರಮವನ್ನು ಕಂಡವರಿಗೂ ಅದರ ಔತಣವನ್ನು ಉಂಡವರಿಗೂ ಅಂದಿನ ನೆನಪೆ ಇಂದಿಗೂ ರೋಮಾಂಚನಕಾರಿಯಾಗಿದೆ ಎಂದಮೇಲೆ ಅದು ಬೀರಿದ ಪ್ರಭಾವವನ್ನೂ ಅದರಿಂದಾದ ಪರಿಣಾಮವನ್ನೂ ಊಹಿಸಲು ಮಾತ್ರ ನಮಗೆ ಸಾಧ್ಯ.

ಅದುವರೆಗೂ ಮ್ಯಾಕ್‌ಬೆತ್‌ಹ್ಯಾಮ್ಲೆಟ್‌ಮೊದಲಾದ ಇಂಗ್ಲಿಷ್ ರುದ್ರ ನಾಟಕಗಳನ್ನೂ ಪ್ಯಾರಡೈಸ್ ಲಾಸ್ಟ್ ಮೊದಲಾದ ಪಾಶ್ಚಾತ್ಯ ಮಹಾಕಾವ್ಯಗಳನ್ನೂ ಓದಿ, ನೋಡಿ, ಆ ಜಗತ್‌ಪ್ರಸಿದ್ಧ ಕವಿಗಳ ಕಲೆಗೂ ನಾಟಕೀಯತೆಗೂ ಸಂವಾದ ನೈಪುಣ್ಯಕ್ಕೂ ಓಜಸ್ಸಿಗೂ ಭಾವಪ್ರವಾಹಕ್ಕೂ ರಸಶಕ್ತಿಗೂ ಮರುಳಾಗಿ ಮಾರುಹೋಗಿದ್ದವರೂ ಮೊತ್ತಮೊದಲಾಗಿ ಗದಾಯುದ್ಧ ನಾಟಕವನ್ನು ಕಂಡಾಗ ಬೆರಗಾದರು; ಮೂಗಿನಮೇಲೆ ಬೆರಳಿಟ್ಟುಕೊಂಡರು; ದಿಗ್‌ಭ್ರಾಂತರಾದಂತಾಗಿ ‘ಆ! ಪರ್ವಾಇಲ್ಲ ಕನ್ನಡ!’ ಎಂದು ಅನುಗ್ರಹಪೂರ್ವಕವಾಗಿಯಾದರೂ ಆಶೀರ್ವದಿಸಿಕೊಂಡರು. ಪಾಶ್ಚಾತ್ಯ ವಿಮರ್ಶೆಯ ಒರೆಗಲ್ಲಿನ ಮೇಲೆಯೂ ರನ್ನನ ಚಿನ್ನ ಹೊಂಗೆರೆಯ ಮಿಂಚೆಸೆದು ತನ್ನ ಅಪರಂಜಿತನವನ್ನು ನಿರ್ವಿವಾದವಾಗಿ ಸ್ಥಾಪಿಸಿಕೊಂಡಿತು.

ಗದಾಯುದ್ಧ ಕಾವ್ಯಕ್ಕೆ ದೃಶ್ಯರೂಪ ಒದಗಿದುದನ್ನು ನಾವು ‘ಅಪೂರ್ವವಾದ ಕಲ್ಯಾಣ ಘಟನೆ’ ಎಂದು ಬಣ್ಣಿಸಿದ್ದೇವೆ. ಆ ಘಟನೆ ಅಪೂರ್ವವಾದರೂ ಮೂಲಕೃತಿಯಲ್ಲಿ ಅದು ಅಂತರ್ಘಟಿತವಾಗಿರದಿದ್ದರೆ ಶ್ರೀಕಂಠಯ್ಯನವರ ಪರಿಣಿತ ಕೌಶಲಕ್ಕೂ ಅದನ್ನು ಅಷ್ಟು ಸಹಜವಾಗಿ ಸ್ವಭಾವಿಕ ಸೃಷ್ಟಿಯೆಂಬಂತೆ ಕಂಡರಿಸಲಾಗುತ್ತಿರಲಿಲ್ಲ. ಬಹುಶಃ ರನ್ನನ ಮೂಲ ಆಶಯವೆ ಶತಮಾನಗಳ ತರುವಾಯ “ಶ್ರೀ” ಯವರ ಹೃದಯದಲ್ಲಿ ಆವಿರ್ಭವಿಸಿ ಮೂರ್ತಿಮತ್ತಾಯಿತೆಂದು ತೋರುತ್ತದೆ. ‘ವಿಕ್ರಮಾರ್ಜುನ ವಿಜಯ’ವನ್ನು ಅಧ್ಯಯನ ಮಾಡುತ್ತಿದ್ದಾಗ ತರುಣ ಆ ಮಹಾಕಾವ್ಯದಲ್ಲಿ ಬರುವ ಗದಾಯುದ್ಧ ವಸ್ತುವಿನ ನಾಟಕೀಯತೆಗೆ ಮೆಚ್ಚಿ ಮನಸೋತು, ಅದನ್ನೊಂದು ಸೊಗಸಾದ ನಾಟಕದ ರೀತಿಯಲ್ಲಿ ರಚಿಸಬೇಕೆಂಬ ಹಂಬಲದಿಂದ ಆಯ್ದುಕೊಂಡು, ಕೆಲಕಾಲ ದೃಶ್ಯರೂಪದಲ್ಲಿಯೆ ಅದನ್ನು ಕಲ್ಪಸಿಕೊಳ್ಳುತ್ತಾ ಇದ್ದು, ತರುವಾಯ ನಾಟಕರೀತಿ ಲೌಕಿಕವೆಂಬ ಜೈನಧಾರ್ಮಿಕ ಕಾರಣದಿಂದಲೊ ಏನೊ ಆ ರೀತಿಯನ್ನು ತ್ಯಜಿಸಿ ‘ಗದಾಯುದ್ಧ’ವನ್ನು ಕಾವ್ಯವಾಗಿಯೆ ರಚಿಸಿದನೆಂದು ತೋರುತ್ತದೆ; ಪ್ಯಾರಡೈಸ್‌ಲಾಸ್ಟ್‌ಕಾವ್ಯವಸ್ತು ಮಿಲ್ಟನ್‌ಕವಿಯ ಪ್ರತಿಭೆಯಲ್ಲಿ ಕೆಲಕಾಲ ದೃಶ್ಯರೂಪದಲ್ಲಿಯೆ ಮೂಡಿದ್ದು, ತರುವಾಯ ತೂಗುಯ್ಯಲಾಡಿ, ಕೊನೆಗೆ ಕಾವ್ಯರೂಪದಲ್ಲಿ ಪರಿಣಮಿಸಿದಂತೆ.

ನಾಟಕರೂಪದಲ್ಲಿಯೆ ಜನ್ಮಧಾರಣೆ ಮಾಡಲು ಕವಿಮನೋಗರ್ಭದಲ್ಲಿ ಹವಣಿಸುತ್ತಿದ್ದ ಗದಾಯುದ್ಧವಸ್ತುವಿನ ಮೊದಲಮೆಯ್ ಅನಂತರದ ಅದರ ಕಾವ್ಯರೂಪದ ಹೇರೊಡಲಲ್ಲಿ ಅಡಗಿತೆ ವಿನಾ ಅಳಿಯಲಿಲ್ಲ. ಹಾಗೆ ಪಳೆಯುಳಿಕೆಯಂತೆ ಒಳಗುಳಿದುದರಿಂದಲೆ ಶ್ರೀಕಂಠಯ್ಯನವರ ಮೇಧಾಶಕ್ತಿಯ ಚಾಣದ ಕಡೆಹಕ್ಕೆ ಹೊರಮೂಡಿ ಸಹಜವೆಂಬಂತೆ ಕಾಣಿಸಿಕೊಳ್ಳಲು ಸಮರ್ಥವಾಯಿತು. ಹಿಂದಣ ಕನ್ನಡ ಸಾಹಿತ್ಯದಲ್ಲಿ ಒಂದು ನಾಟಕವಾದರೂ ಕಾಣ ಬರದಿರುವ  ಸೋಜಿಗದ ಕಾರಣ ಏನೆಯಿರಲಿ, ರನ್ನನನ್ನು  ನಮ್ಮ ಪ್ರಪ್ರಥಮ ನಾಟಕಕಾರನೆಮದು ಸ್ವೀಕರಿಸುವುದರಲ್ಲಿ ಕಾಲಕ್ರಮೌಚಿತ್ಯ ದೃಷ್ಟಿಗೆ ಬಂದರೂ ಕಲಾಕ್ರಮೌಚಿತ್ಯ ದೃಷ್ಟಿಗೆ ಸತ್ಯದೂರವಾಗುವುದಿಲ್ಲ. ಏಕೆಂದರೆ ‘ಶಕ್ತಿ’ಗೆ ಎರಡನೆಯದಾಗಿ ನಾಟಕೀಯತೆಯಿಂದಲೆ ಅಥವಾ ‘ಶಕ್ತಿ’ ಸಮನ್ವಿತನಾದ ನಾಟಕೀಯತೆಯಿಂದಲೆ ರನ್ನ ವರಕವಿ, ಚಿರಕವಿ ಮತ್ತು ಮಹಾಕವಿಯಾಗಿ ನಿಂತಿದ್ದಾನೆ.

ರನ್ನನ ನಾಟಕೀಯತೆಗೆ ‘ಗದಾಯುದ್ಧ’ ನಾಟಕವೆ ಶ್ರೀಮಂತ ಸಾಕ್ಷಿ. ಆದರೆ ನಾಟಕದಲ್ಲಿ ‘ಕಾವ್ಯ’ದಲ್ಲಿರುವ ‘ಶಕ್ತಿ’ ಸಂಪೂರ್ಣವಾಗಿ ಪ್ರದರ್ಶಿತವಾಗಲು ಅವಕಾಶವಿಲ್ಲ. ನಾಟಕಕಲೆ ಪಾತ್ರಗಳ ಮೂಲಕವಾಗಿ ಹೊಮ್ಮುವ ಶಕ್ತಿಯನ್ನು ಮಾತ್ರ ತೋರಿಸಬಲ್ಲುದು; ಕವಿ ತಾನೆಯೆ ರಂಗಕ್ಕೆ ಬರುವಂತಿಲ್ಲವಾದ್ದರಿಂದ ಅವನ ವ್ಯಕ್ತಿತ್ವದ ಶಕ್ತ್ಯಂತ ಪರದೆಯ ಹಿಂದೆ ನಿಲ್ಲಬೇಕಾಗುತ್ತದೆ. ನಾಟಕದಲ್ಲಿ ಮುಖ್ಯವಾಗಿ ಭೀಮದುರ್ಯೋಧನರ ಪಾತ್ರಗಳಲ್ಲಿ ಆ ‘ಶಕ್ತಿ’ ಅದ್ಭುತವಾಗಿ ಸ್ಫುರಿಸುತ್ತದೆ. ಆದರೆ ಭೀಮದುರ್ಯೋಧನರ ಪಾತ್ರಗಳೇ ಸ್ವರೂಪತಃ ‘ಶಕ್ತಿಪಾತ್ರ’ಗಳಾಗಿರುವುದರಿಂದ ದ್ವಿತೀಯ ವರ್ಗದ ಸಾಧಾರಣ ಕವಿಗೂ ಅಲ್ಲಿ ‘ಶಕ್ತಿ’ ಸೃಷ್ಟಿಮಾಡುವುದು ಸುಲಭಸಾಧ್ಯವಾಗುತ್ತದೆ ಬಹುಶಃ ಅನಿವಾರ್ಯವಾಗಿಯೆ ’ಶಕ್ತಿ’ ಸೃಷ್ಟಯಾಗುತ್ತದೆ. ಪ್ರಬಲವಾದ ಪ್ರವಾಹದಲ್ಲಿ ಅದಕ್ಕೆ ಅನುಕೂಲ ದಿಙ್ಮುಖವಾಗಿ ಈಜುವ ಸಾಮಾನ್ಯ ಬಲನೂ ದಡದಲ್ಲಿ ನಿಂತು ನೋಡುವವರಿಗೆ ಆಶ್ಚರ್ಯಕರವಾದ ವೇಗದಿಂದ ಈಜುವ ಮಹಾಬಲಿಷ್ಟನಂತೆ ಕಾಣುವುದಿಲ್ಲವೆ ಹಾಗೆ! ಶಕ್ತಿ ಸಾಲದ ದುರ್ಬಲ ಕವಿಗೆ ಭೀಮದುರ್ಯೋಧನರ ವ್ಯಕ್ತಮಹಿಮೆಯೆ ಅದನ್ನು ದಾನಮಾಡುತ್ತದೆ. ಹಾಗಿರುವಾಗ ರನ್ನನಂತಹ ಬಲಿಷ್ಠಕವಿ ಆ ಪಾತ್ರಗಳಿಂದ ಅದ್ಭುತವಾದ ‘ಶಕ್ತಿ’ ಸೃಷ್ಟಿಮಾಡಿರುವುದರಲ್ಲಿ ಆಶ್ಚರ್ಯವೇನಿದೆ? ರಸಾನುಭವದೃಷ್ಟಿಯಿಂದಲ್ಲದಿದ್ದರೂ ಕಲಾಚಾತುರ್ಯೆ ದೃಷ್ಟಿಯಿಂದ ನೋಡಿದರೆ ಬಲ್ಲಿದರಿಗೆ ಅಲ್ಲಿ ಬೆರಗಿಲ್ಲ.

’ಕಾವ್ಯ’ ರಂಗದಲ್ಲಿಯಾದರೋ ಈ ನಾಟಕಕಲಾಸಮಯದ ಕಟ್ಟು ಕಟ್ಟಳೆಯ ಇಕ್ಕಟ್ಟಿಲ್ಲ; ಅಲ್ಲಿ ಪ್ರತಿಭೆಯ ತಾಂಡವಕ್ಕೆ ನಾಟಕವೇದಿಕೆಯ ಸ್ಥಳಸಂಕೋಚವಿಲ್ಲ. ಅಲ್ಲಿ ರನ್ನನ ‘ಶಕ್ತಿ’ ತನ್ನ ಮಹೋಗ್ರಭವ್ಯವಾದ ನಗ್ನರೂಪದಲ್ಲಿ ತಾನೆ ತಾನಾಗಿ ನಟರಾಜನಾಗಿರುವುದನ್ನು ಸಂದರ್ಶಿಸುತ್ತೇವೆ. ತನ್ಮಗ್ನವಾಗಿ ‘ಸದ್ಯಃಪರ ನಿರ್ವೃತಿ’ಯಾಗುವ ಸಹೃದಯನ ಚೇತನ ಆ ಅಗ್ನಿನಾಟ್ಯದಲ್ಲಿ ಸುಲಗ್ನವಾದಾಗ ಆತನಿಗೆ ಸಂವೇದ್ಯವಾಗುತ್ತದೆ, ರಸರೂಪಿಯಾಗಿ ಅನುಭವಕ್ಕವತರಿಸುವ ಆ ಭಗವದ್ ಭೂಮಾನುಭೂತಿ!

‘ಶಕ್ತಿಕವಿ’ ರನ್ನನ ‘ಗದಾಯುದ್ಧ ಶಿವನ ಸಮುದ್ರ’ದಲ್ಲಿ ಉತ್ಪತ್ತಿಯಾಗುವ ‘ವಿದ್ಯುತ್‌ಶೇಷ’ನ ಒಂದು ಜಿಹ್ವೆ ಸಾಲದೆ, ಅಖಂಡ ಕರ್ಣಾಟಕ ಕ್ಷೇಮಕ್ಕೆ ಮೇಣ್ ವಿರೋಧಿ ವಿಧ್ವಂಸನಕ್ಕೆ?

ರನ್ನನಿರುವ ಕನ್ನಡಕ್ಕೆ
ಅನ್ಯರಿಂದ ಬಹುದೆ ಧಕ್ಕೆ?
ಬರಿಯ ಕವಿಯೆ? ಸಿಡಿಲ ಚಕ್ಕೆ
ಸಿಡಿದು ಬಂತೋ ನಮ್ಮ ನಾಡ
ನುಡಿಯ ಪುಣ್ಯಕೆ!
ಬಿತ್ತು, ಕಾಣೊ, ದಿವ್ಯಾಗ್ನಿಯ
ಕಿಡಿ ಅರಣ್ಯಕೆ!