ಇತರ ದೇಶಗಳಂತೆ ಭರತಖಂಡದಲ್ಲಿಯೂ ರಾಜಕೀಯ ಮಾತ್ರವಾಗಿ ಆ ರೂಪದಿಂದಲೆ ಆ ವಿಧಾನಗಳನ್ನು ಅನುಸರಿಸಿಯೆ ಸ್ವಾತಂತ್ಯ್ರದ ಹೋರಾಟವು ಪ್ರಾರಂಭವಾಯಿತು. ಆ ಸಾಧನೆಗೆ ಆಧ್ಯಾತ್ಮಿಕ ಶ್ರೀಯನ್ನೂ ಧಾರ್ಮಿಕ ರೂಪವನ್ನೂ ಮೊತ್ತಮೊದಲು ದಾನಮಾಡಿದವರು ಸ್ವಾಮಿ ವಿವೇಕಾನಂದರು. ಅವರ ವಿದ್ಯುನ್ಮಯವಾದ ಭಾಷಣಗಳಲ್ಲಿ ‘ಮಾತೆ’ ‘ಭರತಮಾತೆ’ ‘ಭುವನೇಶ್ವರಿ’ ‘ಮಹಾಕಾಳಿ’ ಎಂಬ ಪದಗಳು ಪರ್ಯಾಯಪದಗಳಾಗಿ ಸಮಾನಾರ್ಥದಲ್ಲಿ ಮತ್ತೆ ಮತ್ತೆ ಪ್ರಯೋಗವಾಗುತ್ತವೆ:

“ನಮ್ಮೀ ಭರತಭೂಮಿ ಯುಗಯುಗಗಳ ನಿದ್ರೆಯಿಂದ ಮೇಲೇಳುತ್ತಿದೆ. ಆಕೆಯನ್ನು ಇನ್ನಾರೂ ತಡೆಯಬಲ್ಲವರಿಲ್ಲ; ಇನ್ನಾಕೆ ನಿದ್ದೆಮಾಡುವುದಿಲ್ಲ. ಯಾವ ಶಕ್ತಿಯೂ ಆಕೆಯನ್ನು ಬಗ್ಗಿಸಲಾರದು. ಏಕೆಂದರೆ, ಅದೋ ನೋಡಿ: ಮಹಾಕಾಳಿ ಮತ್ತೊಮ್ಮೆ ಎಚ್ಚತ್ತು ಮೈಕೊಡವಿ ಉಸಿರೆಳೆದು ನಿಲ್ಲುತ್ತಿದ್ದಾಳೆ!… ಪ್ರತಿಯೊಂದು ಜನಾಂಗಕ್ಕೂ ಪ್ರತಿಯೊಬ್ಬ ವ್ಯಕ್ತಿಗಿರುವಂತೆಯೆ ಒಂದೊಂದು ಜೀವನೋದ್ದೇಶವಿದೆ. ಆ ಉದೇಶವೆ ಅದರ ಹೃದಯ. ಉಳಿದುದೆಲ್ಲ ಗೌಣ. ಯಾವ ಜನಾಂಗವಾದರೂ ಶತಮಾನಗಳಿಂದ ತನ್ನ ನಾಡಿನಲ್ಲಿ ಪ್ರವಹಿಸಿ ಬಂದ ಆದರ್ಶವನ್ನು ಕಿತ್ತೊಗೆದರೆ ಸರ್ವನಾಶವಾಗುತ್ತದೆ. ರಾಜಕೀಯ ಒಂದರ ಹೃದಯ; ಕಲಾಜೀವನ ಮತ್ತೊಂದರದು; ಭರತಖಂಡದ ಹೃದಯವೆಂದರೆ ಧರ್ಮ. ಅದನ್ನು ವರ್ಜಿಸಿದೆವಾದರೆ ನಮ್ಮ ಸಂಸ್ಕೃತಿ ಅಳಿದುಹೋಗುತ್ತದೆ… ಪ್ರಪಂಚಕ್ಕೀಗ ಬೇಕಾಗಿರುವುದು ಆತ್ಮದ ಅಮೃತತ್ವದ ಸಂದೇಶ; ಆತ್ಮದ ಐಕ್ಯದ ಸಂದೇಶ. ಆ ಸಂದೇಶವನ್ನು ಸಾರುವ ಭಾರ ಆರ್ಯಾವರ್ತದ ಮೇಲಿದೆ”.

[8]

ವಿವೇಕಾನಂದರ ತರುವಾಯ ಆ ಸಂದೇಶವನ್ನು ರಾಜಕೀಯ ರಂಗದಿಂದಲೆ ಸಮರ್ಥವಾಗಿ ಸಾರಿದವರೆಂದರೆ ಮುಖ್ಯವಾಗಿ ಶ್ರೀ ಅರವಿಂದರು. ಅವರು ರಾಜಕೀಯವೇದಿಕೆಯಿಂದ ಇಳಿದು ಯೋಗವೇದಿಕೆಗೆ ಏರಿದ ತರುವಾಯ ಅದನ್ನು ಸರ್ವಲೋಕಪ್ರಚುರವಾಗಿ ಸಾರಿದವರು ಮಹಾತ್ಮಾ ಗಾಂಧೀಜಿ.

ಶ್ರೀ ಅರವಿಂದರಿಗೆ ದೇಶದ ದಾಸ್ಯವನ್ನೂ ದಾರಿದ್ಯ್ರವನ್ನು ಪರಾನುಕರಣದಿಂದುಂಟಾದ ಸತ್ತ್ವಹೀನತೆಯನ್ನೂ ಕಂಡು ಸಹಿಸಲಾಗಲಿಲ್ಲ. ಮೊದಮೊದಲು ಅತ್ಯಂತ ವಿಚಾರಗರ್ಭಿತವಾದ ಲೇಖನಗಳನ್ನು ಬರೆದು ಜನರನ್ನು ಎಚ್ಚರಿಸಲು ಪ್ರಯತ್ನಿಸಿದರು. ಕೊನೆಗೆ ಬಹಿರಂಗವಾಗಿಯೆ ರಾಜಕೀಯ ರೂಪದಿಂದಲೆ ಸ್ವಾತಂತ್ಯ್ರ ಸಂಗ್ರಾಮರಂಗಕ್ಕೆ ಧುಮುಕಿದರು. ಆ ಭಾಷಣ ಲೇಖನಗಳ ಸತ್ತ್ವ, ರೀತಿ, ವಿಧಾನ, ಶೈಲಿ, ಶಕ್ತಿ ಎಲ್ಲವೂ ಅರವಿಂದ ವಿಶಿಷ್ಟವಾಗಿವೆ. ಎಲ್ಲ ರಾಜಕೀಯ ಮಾತ್ರವಾದ ಭಾಷಣಗಳಿಗೂ ಅನಿವಾರ್ಯವಾಗಿರುವ ತಾತ್ಕಾಲಿಕತೆಯನ್ನು ಮೀರಿ ಅವುಗಳಲ್ಲಿ ಚಿರಕಾಲಿಕವಾಗಬಹುದಾದ ವಿಷಯಗಳೂ ಅಡಕವಾಗಿವೆ. ಜನರು ಮುಂದೆ ಮಹಾತ್ಮಾ ಗಾಂಧೀಜಿಯವರ ಭಾಷಣಗಳಲ್ಲಿ ಯಾವ ಆಧ್ಯಾತ್ಮಿಕವಾದ ತೇಜಸ್ಸನ್ನು ಗುರುತಿಸಿ ಮಣಿದರೋ ಅಂತಹ ತೇಜಸ್ಸನ್ನೇ ಅರವಿಂದರ ವಾಣಿಯಲ್ಲಿಯೂ ಅನುಭವಿಸಿ ಮಂತ್ರಮುಗ್ಧರಾದರು. ಆದರೆ ಮಹಾತ್ಮರಲ್ಲಿ ಕಾಣಬರದ ಒಂದು ವಾಗ್ಮಿತೆ, ಪರಿಪಂಥಿಯ ವಾದವನ್ನು ಸೀಳಿ ಬಿಸುಡುವ ಸಿಂಹನಖಸದೃಶವಾದ ಒಂದು ಶಕ್ತಿಪೂರ್ವ ತರ್ಕಸೂಕ್ಷ್ಮತೆ, ಕವಿಸಹಜವಾದ ಸಂಮೋಹನೀಯವಾದ ಒಂದು ಸಾಹಿತ್ಯಶೈಲಿ ಇವುಗಳನ್ನು ಅರವಿಂದರ ಭಾಷಣ ಲೆಖನಗಳಲ್ಲಿ ಕಾಣುತ್ತೇವೆ. ಆ ಭಾಷಣ ಲೇಖನಗಳು ವಿವೇಕಾನಂದರ ಜನಪ್ರಿಯ ಭಾಷಣಗಳಂತೆ ಸುಲಭ ಮಟ್ಟಕ್ಕೂ ಇಳಿಯುವುದಿಲ್ಲ. ಆದ್ದರಿಂದಲೇ ಅವು ಸಾಮಾನ್ಯರಿಗೂ ಸುಶಿಕ್ಷಿತರಿಗೂ ಸಮಪ್ರಿಯವಾಗಿ, ಅರವಿಂದರ ಅಲ್ಪಾವಧಿಯ ರಾಜಕೀಯ ಜೀವನವನ್ನು ಚಿರಸ್ಮರಣೀಯವಾಗಿ ಮಾಡಿವೆ.

ಶ್ರೀ ಅರವಿಂದರಿಗೆ ‘ಭರತಮಾತೆ’ ಬರಿಯ ಭೌಗೋಲಿಕವಾದ ಭೂಪ್ರದೇಶ ಮಾತ್ರವಾಗಿರಲಿಲ್ಲ. ಭೂಪ್ರದೇಶ ಎಂಬುದು ಆಕೆಯ ಅನ್ನಮಯಕೋಶದ ಸ್ಥೂಲರೂಪಮಾತ್ರವಾಗಿತ್ತು. ಅನ್ನಮಯದಲ್ಲಿಯೂ ಈ ದೃಗ್ಗೋಚರವಾಗಿರುವ ಸ್ಥೂಲಮಾತ್ರರೂಪವಲ್ಲದೆ ಒಂದು ಸೂಕ್ಷ್ಮರೂಪದ ಶರೀರವೂ ಆಕೆಗಿದೆ. ಆಕೆಗೆ ಪ್ರಾಣಮಯ ಮನೋಮಯಾದಿ ಕೋಶಗಳೂ ಇವೆ. ಆಕೆ ಅಧಿದೇವತೆ, ಅಧಿಷ್ಠಾತ್ರಿ. ಯಾವ ದೇವಿಯನ್ನು ಬಂಕಿಮಚಂದ್ರರು ತಮ್ಮ ‘ವಂದೇ ಮಾತರಂ’ ಮಂತ್ರಗೀತೆಯಲ್ಲಿ ಆವಾಹನಂಗೆಯ್ದಿದ್ದರೊ, ಯಾರನ್ನು ‘ನೀನೆ ವಿದ್ಯೆ, ನೀನೆ ಧರ್ಮ, ಹೃದಯದಲ್ಲಿ ನೀನೆ ಮರ್ಮ, ದೇಹದಲ್ಲಿ ನೀನೆ ಪ್ರಾಣ, ಬಾಹುಗಳಲಿ ನೀನೆ ಶಕ್ತಿ, ಹೃದಯದಲ್ಲಿ ನೀನೆ ಭಕ್ತಿ’ ಎಂದು ಬಣ್ಣಿಸಿದ್ದರೊ ಆ ‘ಚಿದ್ರೂಪಿ ಪರದೇವತಾ ಭಗವತೀ ಶ್ರೀ ರಾಜರಾಜೇಶ್ವರೀ’[9]  ಜಗದ್ಧಾತ್ರಿಯ ಶ್ರೀ ಅರವಿಂದರಿಗೆ ಭರತಮಾತೆಯೂ ಆಗಿದ್ದಳು.

೧೯೦೫ರಲ್ಲಿ ಅವರು ತಮ್ಮ ಸಹಧರ್ಮಿಣಿಗೆ ಬರೆದ ಒಂದು ಕಾಗದದಲ್ಲಿ ತಮ್ಮ ಶ್ರದ್ಧಾಸಂಕಲ್ಪಗಳನ್ನು ಕುರಿತು ಹೀಗೆಂದಿದ್ದಾರೆ: ಮೊದಲನೆಯದು, ನನ್ನ ಸಂಪಾದನೆಯೆಲ್ಲ ಭಗವತಿಯ ಸೇವೆಗಾಗಿ. ಎರಡನೆಯದು, ಭಗವತ್ ಸಾಕ್ಷಾತ್ಕಾರಕ್ಕಾಗಿ ನನ್ನ ಬದುಕನ್ನೆಲ್ಲ ಮೀಸಲಾಗಿಸುತ್ತೇನೆ. ಮೂರನೆಯದಾಗಿ, ನಾನೊಂದು ಮಹಾವ್ರತಧಾರಣಿ ಮಾಡುತ್ತೇನೆ. ಭಗವತ್ ಸ್ವರೂಪಿಣಿಯಾದ ಭರತಮಾತೆಯ ಬಂಧನ ವಿಮೋಚನಕ್ಕಾಗಿ, ಕ್ಷಾತ್ರತೇಜದ ಮಾರ್ಗದಿಂದಲ್ಲ, ಬ್ರಾಹ್ಮತೇಜದ ಮಾರ್ಗದಿಂದ ಶಕ್ತಿಸಾಧನೆಯನ್ನು ಕೈಕೊಳ್ಳುತ್ತೇನೆ.[10]

೧೯೫೦ರ ಹೊತ್ತಿಗಾಗಲೆ ಭಾರತೀಯ ರಾಜಕೀಯರಂಗ ಕುದಿಯತೊಡಗಿತ್ತು. ವಂಗವಿಭಜನೆಯ ಅನಂತರವಂತೂ ಆ ಜ್ವಾಲಾಮುಖಿ ಸಜೀವವಾಗಿ ಅಗ್ನಿವಾರಿಯನ್ನು ಪ್ರವರ್ಷಿಸುತ್ತಾ ಮಹೋಗ್ರರೂಪಧಾರಣೆ ಮಾಡಿತ್ತು. ಆ ಚಳವಳಿಗೆ ವಿಪಿನಚಂದ್ರಪಾಲರಂತಹ ಸುಪ್ರಸಿದ್ಧ ರಾಜಕೀಯ ವ್ಯಕ್ತಿಗಳು ಮಾತ್ರವಲ್ಲದೆ ರವೀಂದ್ರನಾಥ ಠಾಕೂರರಂತಹ ಕವಿಗಳೂ ಧುಮುಕಿದ್ದರು. ಭರತವರ್ಷದ ಪೂರ್ವರಂಗವಾದ ವಂಗದೇಶದಲ್ಲಿ ವಿಪಿನಚಂದ್ರಪಾಲರೂ, ಪಶ್ಚಿಮರಂಗವಾದ ಪಂಜಾಬಿನಲ್ಲಿ ಲಾಲಾ ಲಜಪತರಾಯರೂ, ದಕ್ಷಿಣರಂಗವಾದ ಮಹಾರಾಷ್ಟ್ರದಲ್ಲಿ ಬಾಲಗಂಗಾಧರ ತಿಲಕರೂ ಅದುವರೆಗೆ ಮಂದಗಾಮಿಯಾಗಿ ಉಗುರುಬೆಚ್ಚಗೆ ಹರಿಯುತ್ತಿದ್ದ ಸ್ವಾತಂತ್ಯ್ರಾಪೇಕ್ಷೆಯ ಕಿರುಹೊನಲನ್ನು ಕುದಿಕುದಿಯುವ ಬಿರುಹೊನಲನ್ನಾಗಿ ಮಾರ್ಪಡಿಸಿದ್ದರು. ೧೯೦೬ರಲ್ಲಿ ಶ್ರೀ ಅರವಿಂದರು ತಮ್ಮ ಬರೋಡೆಯ ಸರಕಾರಿ ಕೆಲಸಕ್ಕೆ ಪೂರ್ಣವಿರಾಮವಿಕ್ಕುವ ಪೀಠಿಕೆಯಾಗಿ ಸಂಬಳವಿಲ್ಲದ ದೀರ್ಘರಜಕ್ಕೆ ಬರೆದುಹಾಕಿ ವಂಗದೇಶಕ್ಕೆ ತೆರಳಿದರು. ಅಲ್ಲಿ ಅವರು ಹೊಸದಾಗಿ ಸ್ಥಾಪಿತವಾಗಿದ್ದ ನ್ಯಾಷನಲ್ ಕಾಲೇಜ್ ಒಂದಕ್ಕೆ ಕೊಂಚಕಾಲ ಪ್ರಿನ್ಸಿಪಾಲ್ ಆಗಿದ್ದುಕೊಂಡು ವಿಪಿನಚಂದ್ರಪಾಲರು ಹೊರಡಿಸುತ್ತಿದ್ದ ‘ವಂದೇ ಮಾತರಂ’ ಪತ್ರಿಕೆಯಲ್ಲಿ ಲೇಖನಗಳನ್ನು ಬರೆಯತೊಡಗಿದರು. ಇದ್ದಕಿದ್ದಂತೆ ‘ವಂದೇ ಮಾತರಂ’ ಪತ್ರಿಕೆ ಆಗ್ನೇಯಾಸ್ತ್ರವಾಗಿ ಪರಿಣಮಿಸಿ, ವಿದೇಶಿಯ ಸರಕಾರ ದಿಕ್ಕುಗೆಡುವಂತಾಯಿತು. ಒಂದು ಹೊಸ ಧ್ವನಿ, ಒಂದು ಹೊಸಶಕ್ತಿ, ಒಂದು ಹೊಸ ಸ್ಫೂರ್ತಿ, ಒಂದು ದುರ್ದಮನೀಯವಾದ ಹೊಸ ಸ್ಥೈರ್ಯ, ಸಾವನ್ನು ಸಂತೋಷದಿಂದ ಎದುರಿಸುವ ಒಂದು ಹೊಸ ಧೈರ್ಯ ಜನಹೃದಯ ಹೃದಯದಲ್ಲಿಯೂ ಸಂಚಿರಿಸಿ ಸ್ವದೇಶೀ ಆಂದೋಲನ ಉಗ್ರರೂಪಕ್ಕೆ ತಿರುಗಿತು. ಸುಮ್ಮನಿದ್ದರೆ ವಿಪರೀತಕ್ಕಿಟ್ಟುಕೊಳ್ಳಬಹುದೆಂದು ಹೆದರಿದ ಸರಕಾರ ಮುಂಗಾಣದೆ ಕುಂಟು ನೆವ ಹೂಡಿ ಶ್ರೀ ಅರವಿಂದರನ್ನು ರಾಜದ್ರೋಹದ ಆಪಾದನೆಯ ಮೇಲೆ ದಸ್ತಗಿರಿ ಮಾಡಿತು. ಆದರೆ ಅರವಿಂದರು ಅಪರಾಧಿ ಎಂಬುದನ್ನು ಸ್ಥಿರಪಡಿಸಲಾಗದೆ ಇದ್ದುದರಿಂದ ಕೋರ್ಟು ಅವರ ಬಿಡುಗಡೆಗೆ ತೀರ್ಪುಕೊಟ್ಟಿತು.

ಇಷ್ಟರಲ್ಲಿಯೆ ರಾಷ್ಟ್ರಮಹಾಸಭೆಯಾಗಿದ್ದ ಕಾಂಗ್ರೆಸ್ಸಿನಲ್ಲಿ ಬಲಪಕ್ಷ ಎಡಪಕ್ಷಗಳು ಹುಟ್ಟಿಕೊಂಡಿದ್ದುವು. ಸೌಮ್ಯಮಾರ್ಗದ ಮಂದಗಾಮಿಗಳಾದ ವಯಸ್ಕರು ಒಂದು ಕಡೆ, ಉಗ್ರಮಾರ್ಗದ ತೀವ್ರಗಾಮಿಗಳಾದ ಯುವಕರು ಮತ್ತೊಂದು ಕಡೆ. ಅರವಿಂದರು ತೀವ್ರಗಾಮಿಗಳಿಗೆ ಮುಂದಾಳಾದರು. ಕಾಂಗ್ರೆಸ್ಸು ಸೂರತ್ತಿನಲ್ಲಿ ತನ್ನ ಮಹಾಧಿವೇಶನ ನಡಸಿದಾಗ ತಿಲಕರೂ ಅರವಿಂದರೂ ಒಟ್ಟಾಗಿ ನಿಂತು ಮಂದಗಾಮಿಗಳನ್ನೂ ಉಗ್ರವಾಗಿ ಪ್ರತಿಭಟಿಸಿದರು. ಅವರ ಬೆಂಬಲಕ್ಕೆ ಅಗ್ನಿಶಸ್ತ್ರಧಾರಿಗಳಾಗಿದ್ದ ಕ್ರಾಂತಿಕಾರರೂ ಇದ್ದರೆಂಬುದನ್ನು ಇಲ್ಲಿ ನೆನೆಯದಿರಲಾಗುವುದಿಲ್ಲ.

ಸೂರತ್ ಕಾಂಗ್ರೆಸ್ಸನ್ನು ಮುಗಿಸಿ ಅರವಿಂದರು ಬೊಂಬಾಯಿ ಬರೋಡೆಗಳಲ್ಲಿ ಸಂಚರಿಸಿ, ಭಾಷನಗಳಿಂದ ತಮ್ಮ ಉಜ್ವಲಪ್ರಭಾವವನ್ನು ಬೀರಿ, ಜನಮನವನ್ನು ತಮ್ಮ ನೀತಿಗೆ ಒಲಿಸಿಕೊಂಡರು. ಆಗಲೆ ಅವರು ಯೋಗಾಭ್ಯಾಸದಲ್ಲಿ ಮುಂದುವರಿಯುವುದಕ್ಕಾಗಿ ಯೋಗಿ ಲೇಲೆಯಿಂದ ಸಲಹೆಗಳನ್ನು ಪಡೆದುದಲ್ಲದೆ, ಚಿತ್ತವೃತ್ತಿನಿರೋಧದ ಸಾಧನೆಯಲ್ಲಿ ಸಿದ್ದಿಯನ್ನು ಪಡೆದರು.

ಇಷ್ಟರಲ್ಲಿ ಬಂಗಾಳದಲ್ಲಿ ಕಂಗೆಟ್ಟ ಸರಕಾರವು ಹುಚ್ಚಿಗೆದ್ದು ಅಪರಾಧಿ ನಿರಪರಾಧಿ ಎಂಬ ಭೇದವಿಲ್ಲದೆ ತರುಣ ಬಂಗಾಳಿಗಳನ್ನು ದಸ್ತಗಿರಿಮಾಡಿ ವಿಚಾರಣೆಯ ಆಟ ಹೂಡಿ ಅವರನ್ನು ಉಗ್ರಶಿಕ್ಷೆಗೂ ಗುರಿಮಾಡಿತು. ಸರಕಾರದ ವರ್ತನೆಯಿಂದ ಮುನಿದೆದ್ದ ಕ್ರಾಂತಿಕಾರ ಯುವಕರು ಪ್ರತೀಕಾರ ಕೈಕೊಂಡು ಐರೋಪ್ಯ ಅಧಿಕಾರಿಗಳ ಮೇಲೆ ಬಾಂಬು ಎಸೆದುದರ ಪರಿಣಾಮವಾಗಿ ಒಂದೆರಡು ಸಾವುನೋವುಗಳಾದುವು. ಈ ಚಟುವಟಿಕೆಗಳಲ್ಲಿ ಅರವಿಂದರ ತಮ್ಮ ಬರೀಂದ್ರರೂ ಸೇರಿದ್ದುದರಿಂದ ಸರಕಾರದ ಗುಮಾನಿ ಅರವಿಂದರ ಮೇಲೆಯೂ ಬಿದ್ದಿತ್ತು. ೧೯೦೮ನೆಯ ಮೇ ತಿಂಗಳ ೫ನೆಯ ದಿನ ಬೆಳಗಿನ ಜಾವ ೫ ಗಂಟೆಯಲ್ಲಿ ಪೋಲೀಸರು ಅವರಿದ್ದ ಮನೆಯನ್ನು ಮುತ್ತಿ, ಶೋಧಿಸಿ, ಮಲಗಿದ್ದ ಅರವಿಂದರನ್ನು ಹಾಸಗೆಯ ಮೇಲೆಯೆ ದಸ್ರಗಿರಿಮಾಡಿ, ಕೈಗೆ ಕೊಳಗಳನ್ನು ಹಾಕಿ, ಆಲಿಪುರದ ಜೈಲಿಗೆ ಹಿಡಿದುಕೊಂಡು ಹೋದರು.

ಮುಂದೆ ನಡೆದ ನಾಟಕ ಭಾರತ ಸ್ವಾತಂತ್ಯ್ರ ಸಂಗ್ರಾಮದ ಚರಿತ್ತರೆಯಲ್ಲಿ ‘ಆಲಿಪುರದ ಕೇಸು’ ಎಂಬ ಹೆಸರಿನಿಂದ ಸುವಿಖ್ಯಾತವಾಗಿದೆ.

ಈ ಘಟನೆಗೆ ಮೊದಲೆ ಒಂದೆರಡು ತಿಂಗಳ ಹಿಂದೆಯೆ ಅರವಿಂದರಿಗೆ ಒಂದು ಒಳಕೆರೆ ಕೇಳಿಸಿತ್ತಂತೆ; ಆದರೆ ಅವರು ಅದನ್ನು ಪೂರ್ಣವಾಗಿ ಗಮನಿಸಿರಲಿಲ್ಲ. ಕಾವ್ಯ ಮತ್ತು ರಾಜಕೀಯ ಈ ಎರಡರಲ್ಲಿಯೂ ಅವರಿಗೆ ಒಂದು ವಿಶೇಷವಾದ ಮೋಹಾಸಕ್ತಿಯಿತ್ತಂತೆ. ಆದ್ದರಿಂದಲೆ ಅವರು ಯೋಗಸಾಧನೆಯನ್ನು ಕೈಕೊಳ್ಳುವಾಗಲೂ ಯೋಗಿ ಲೀಲೆಗೆ ತಿಳಿಸಿದ್ದರಂತೆ ‘ಯೋಗಸಾಧನೆ ಕಾವ್ಯಸೃಷ್ಟಿಗೂ ರಾಜಕೀಯ ಚಟುವಟಿಕೆಗೂ ಅಡ್ಡಬರಬಾರದು’ ಎಂದು. ಆದರೆ ವಿಧಿ ಯಾವ ಅಭೂತಪೂರ್ವವಾದ ಬ್ರಾಹ್ಮೀಕಾರ್ಯಕ್ಕಾಗಿ ಅವರನ್ನು ನರಜನ್ಮ ಧಾರಣೆಯ ತಪೋರಂಗಕ್ಕೆ ಕಳುಹಿಸಿದ್ದಿತೋ ಆ ಕಾರ್ಯವನ್ನು ಅವರು ಧಿಕ್ಕರಿಸಲು ಸಾಧ್ಯವಾದೀತೆ? ಸೃಷ್ಟಿಯ ವಿಕಾಸವಿಧಾನದಲ್ಲಿಯೆ ಬದಲಾವಣೆಯನ್ನು ಪ್ರಚೋದಿಸುವ ಮಹತ್‌ಪರಿಣಾಮಕರವಾದ ಆ ಭಗವನ್ನಿಯಂತ್ರಿತವಾದ ಬ್ರಾಹ್ಮೀಕರ್ತವ್ಯದೆದುರಿನಲ್ಲಿ, ಮನುಷ್ಯದೃಷ್ಟಿಯಿಂದ ಅದೆಷ್ಟೇ ಮಹಿಮಾಮಯವಾಗಿರಲಿ ಕೀರ್ತೀಕರವಾಗಿರಲಿ ಭವ್ಯವಾಗಿರಲಿ, ಅತಿಕ್ಷುದ್ರವಾಗಿ ತೋರುವ ರಾಜಕೀಯ ಚಟುವಟಿಕೆಯ ಮತ್ತು ಕಾವ್ಯಸೃಷ್ಟಿಯ ಸರಸ ಸ್ವಾರಸ್ಯ ಹವ್ಯಾಸಗಳು ಹೆಡೆಯೆತ್ತಿ ನಿಂತು ಪ್ರತಿಸ್ಪರ್ಧಿಗಳಾಗಬಲ್ಲುವೆ? ಭಯಂಕರವಾಗಿ ಕಾಣುವ ಅಮಂಗಳದ ಮಧ್ಯದಲ್ಲಿಯೆ ತನ್ನ ನಿಗೂಢತರವಾದ ಮಂಗಳವನ್ನು ಸಾಧಿಸುವ ಆ ಸರ್ವಜ್ಞ ದೈವೀಶಕ್ತಿಯ ‘ದೇವಕೇತು’[11] ತನ್ನ ಕಾರ್ಯಕ್ಕಾಗಿ ಮೀಸಲಾಗಿದ್ದ ಶ್ರೀ ಅರವಿಂದರನ್ನು ರಾಜಕೀಯರಂಗದಿಂದ ಯೋಗರಂಗಕ್ಕೆ ಸಾಗಿಸುವ ಸಲುವಾಗಿ, ಅಟ್ಟಿ ಹಿಡಿದು ಕಚ್ಚಿ ಎತ್ತಿಕೊಂಡು ಬಂದು, ಆಲಿಪುರದ ಆಶ್ರಯದಲ್ಲಿ, ಎಂದರೆ ಜೈಲಿನಲ್ಲಿ, ಸೆರೆಯಿಡುವ ನೆವದಲ್ಲಿ ಮರೆಸಿಬಿಟ್ಟಿತು.

ಸಿಡಿಲೆರಗಿದಂತೆ ಎರಗಿದ ಆ ಘಟನೆಗೆ ಅರವಿಂದರು ಪ್ರಾರಂಭದಲ್ಲಿ ಒಂದು ಕ್ಷಣ ವಿಸ್ಮಿತರಾದರು. “ಇದೇನಿದು? ನನಗೊಂದು ಆದೇಶವಿದೆ ಎಂದು ಅರಿತಿದ್ದೆ. ಅದನ್ನು ಸಾಧಿಸುವ ತನಕ ನನಗೆ ನಿನ್ನ ರಕ್ಷೆ ಇರುತ್ತದೆಂದೂ ನಂಬಿದ್ದೆ. ಹೀಗಾಯಿತಲ್ಲಾ!” ಎಂದು ಸಂಶಯಗ್ರಸ್ತರಾದರಂತೆ. ಹಾಗೆಯೆ ಒಂದು, ಎರಡು, ಮೂರು ದಿನಗಳು ಜೈಲಿನಲ್ಲಿ ಉರುಳಿದ್ದುವು. ಆಗ ಒಂದು ಅಂತರ್ವಾಣಿ ಹೇಳಿತಂತೆ: “ಅವಸರ ಬೇಡ. ನೋಡುತ್ತಿರು!” ಎಂದು.

ಸೆರೆಯಲ್ಲಿ ಇವರು ಇಂತಿರುತ್ತಿರಲು, ಅತ್ತ ದೇಶಕ್ಕೆ ದೇಶವೆ ಅವರ ದಸ್ತಗಿರಿಯಿಂದ ಅಲ್ಲೋಲಕಲ್ಲೋಲವಾಯಿತು. ಹೇಗಾದರೂ ಮಾಡಿ ಅರವಿಂದರ ನಿಷ್ಕಳಂಕವಾದ ಜೀವನವನ್ನು ಸಕಳಂಕವನ್ನಾಗಿ ಮಾಡಿ ತೋರಿಸಿ, ಅವರನ್ನು ಅಪರಾಧಿಯನ್ನಾಗಿ ಮಾಡುವ ಪ್ರಪ್ರಯತ್ನದಲ್ಲಿ ಸರಕಾರ ತೊಡಗಿದ್ದಾಗ ಅರವಿಂದರ ದೇಶಬಾಂಧವರು ಅವರ ‘ಸಮರ್ಥನೆ’ಗಾಗಿಯೂ ‘ರಕ್ಷೆ’ಗಾಗಿಯೂ ಭೀಷ್ಮಪ್ರಯತ್ನ ಮಾಡಿದರು. ಅದಕ್ಕಾಗಿ ಸಹಸ್ರಾರು ರೂಪಾಯಿಗಳ ಧನಸಂಗ್ರಹವಾಯಿತು. ಆಗ ತಾನೆ ತಮ್ಮ ವಕೀಲಿವೃತ್ತಿಯಲ್ಲಿ ಉದಯಮಾನ ಸೂರ್ಯನಾಗಿದ್ದ ಶ್ರೀ ಚಿತ್ತರಂಜನದಾಸರು ಅರವಿಂದರ ಪರವಾಗಿ ವಾದಿಸುವ ಸಮಸ್ತ ಭಾರವನ್ನೂ ಹೊತ್ತುಕೊಂಡು ಜಗನ್ಮಾನ್ಯರಾದರು. ಕೇಸು ಒಂದು ವರುಷ ಎಳೆಯಿತು. ಚಿತ್ತರಂಜನರ ಅದ್ಭುತವಾದ ವಾದ ಸಾಮರ್ಥ್ಯವೂ ಹಿಮದೆ ಇಂಗ್ಲೆಂಡಿನಲ್ಲಿ ಅರವಿಂದರ ಸಹಾಧ್ಯಾಯಿಯಾಗಿದ್ದು ಅವರಿಗೆ ಎರಡನೆಯ ಸ್ಥಾನದಲ್ಲಿ ಉತ್ತೀರ್ಣವಾಗಿ ಅವರ ಪ್ರತಿಭೆಯ ಪರಿಚಯವನ್ನು ಚೆನ್ನಾಗಿ ಅರಿತಿದ್ದ ಬೀಚ್‌ಕ್ರಾಫ್ ಎಂಬ ಆಂಗ್ಲೇಯ ನ್ಯಾಯಾಧೀಶನ ವಿವೇಕಪೂರ್ಣತೆಯೂ ಶ್ರೀ ಅರವಿಂದರ ಅನಿಂದನೀಯ ಜೀವನ ಚರಿತವೂ ಮುಪ್ಪುರಿಗೊಂಡ ಕಾರಣವಾಗಿ ಅವರು ನಿರಪರಾಧಿಗಳೆಂದು ಇತ್ಯರ್ಥವಾಗಿ ಸೆರೆಯಿಂದ ಬಿಡುಗಡೆ ಹೊಂದಿದರು.

ಆದರೆ ಅಲಿಪುರದ ಸೆರೆಮನೆಯ ಯೋಗದೀಕ್ಷಾಮಂದಿರವಾಗಿ ಶ್ರೀ ಅರವಿಂದರ ಬಾಳ್ವೆಯ ದಿಕ್ಕನ್ನೆ ಬದಲಾಯಿಸಿತ್ತು. ಸೆರೆಯಿಂದ ಹೊರಗೆ ಬಂದ ಮೇಲೆ ಉತ್ತರಪರ ಎಂಬಲ್ಲಿ ಅವರು ಮಾಡಿದ ರೋಮಾಂಚನಕರವಾದ ಭಾಷಣದಲ್ಲಿ ಆ ಅದ್ಭುತ ಕಥೆ ವರ್ಣಿತವಾಗಿದೆ: “ಆಗ ಆ ಪುರುಷೋತ್ತಮನು ತನ್ನ ಗೀತೆಯನ್ನು ನನ್ನ ಕೈಯಲ್ಲಿಟ್ಟನು. ಅವನ ಶಕ್ತಿ ನನ್ನಲ್ಲಿ ಸಂಚರಿಸಿತು. ಗೀತಾಪ್ರಣೀತವಾದ ಸಾಧನೆಯನ್ನು ಮಾಡಲು ನಾನು ಸಮರ್ಥನಾದೆ. ಆಗಲೆ ನನಗಾದದ್ದು ಹಿಂದೂ ಧರ್ಮದ ಕೇಂದ್ರಸತ್ತ್ವದ ಸಿದ್ಧಿ…ನಾನು ತಿರುಗಾಡುತ್ತಿದ್ದೆ. ಇದ್ದಕಿದ್ದಂತೆ ಅವನ ಚೇತನ ನನ್ನಲ್ಲಿ ಚರಿಸಿತು. ಲೋಕಕ್ಕೂ ನನಗೂ ನಡುವೆ ಅಡ್ಡವಾಗಿ ನಿಂತಿದ್ದ ಎತ್ತರವಾದ ಗೋಡೆಗಳ ಕಡೆ ನೋಡಿದೆ. ಅಲ್ಲಿ ಗೋಡೆಗಳಿರಲಿಲ್ಲ; ವಾಸುದೇವನೆ ನನ್ನನ್ನು ಸುತ್ತುವರಿದಿದ್ದ. ಎದುರಿಗಿದ್ದ ಮರದ ಚಾಚುಗೊಂಬೆಗಳ ಅಡಿಯಲ್ಲಿ ಸುತ್ತಾಡಿದೆ. ಅಲ್ಲಿದ್ದುದು ಮರವಾಗಿರಲಿಲ್ಲ; ಪ್ರತ್ಯಕ್ಷ ವಾಸುದೇವನೆ, ಶ್ರೀ ಕೃಷ್ಣನೆ, ಹಬ್ಬಿ ಹರಡಿ ನನಗೆ ನೆರಳು ಹಿಡಿದು ನಿಂತಿದ್ದ! ಕೋವಿ ಹಿಡಿದು ನನ್ನನ್ನು ಕಾಯುತ್ತಿದ್ದ ಕಾವಲುಗಾರನನ್ನು ನೋಡಿದೆ: ಪ್ರತ್ಯಕ್ಷ ನಾರಾಯಣನೆ ಕಾವಲು ನಿಂತಿದ್ದಾನೆ! ನನಗೆ ಕೊಟ್ಟಿದ್ದ ಒರಟು ಕಂಬಳಿಯ ಮೇಲೆ ಮಲಗಿದೆ: ಶ್ರೀ ಕೃಷ್ಣನ ದಿವ್ಯ ಬಾಹುಗಳೆ ನನ್ನನ್ನು ಅಪ್ಪಿರುವ ಪ್ರತ್ಯಕ್ಷಾನುಭವವಾಯಿತು! ಸೆರೆಮನೆಯಲ್ಲಿದ್ದ ಇತರ ಸೆರೆಯಾಳುಗಳನ್ನು ನೋಡಿದೆ: ಕಳ್ಳರು, ಕೊಲೆಗಾರರು, ಸುಲಿಗೆಗಾರರು, ಎಲ್ಲರೂ ವಾಸುದೇವನಂತೆಯೆ ಕಂಡರು. ಕೇಸು ಪ್ರಾರಂಭವಾದಾಗ ನನ್ನನ್ನು ಕೋರ್ಟಿಗೆ ತಂದು ನ್ಯಾಯಾಧೀಶನ ಮುಂದೆ ನಿಲ್ಲಿಸಿದರು…ಅವನು ಹೇಳಿದ: ‘ನೋಡು. ನ್ಯಾಯಾಧೀಶನ ಕಡೆಗೆ ನೋಡು. ಪೋಲೀಸಿನವರ ಕಡೆಗೆ ನೋಡು. ಎದುರುಗಡೆಯ ಲಾಯರುಗಳ ಕಡೆ ನೋಡು!’ ನೋಡಿದೆ: ಅಲ್ಲಿ ನ್ಯಾಯಾಧೀಶನೂ ಕಾಣಿಸಲಿಲ್ಲ; ಪೋಲೀಸರೂ ಕಾಣಿಸಲಿಲ್ಲ. ವಾಸುದೇವನಲ್ಲದೆ ಅನ್ಯರಾರೂ ಅಲ್ಲಿರಲಿಲ್ಲ! ಬೆಂಚಿನಕಡೆಗೆ ನೋಡಿದೆ: ಎದುರುಗಡೆಯ ವಕೀಲರೂ ಕಾಣಲಿಲ್ಲ. ಅಲ್ಲಿ ಕುಳಿತ್ತದ್ದದ್ದು ನಾರಾಯಣ! ನನ್ನ ಸರ್ವಜೀವನ ಸಖ ಶ್ರೀ ಕೃಷ್ಣನೆ ಅಲ್ಲಿ ಕುಳಿತು ಮುಗುಳುನಗುತ್ತಿದ್ದ!…”[12]

‘ಈಶಾವಾಸ್ಯಮಿದಂ ಸರ್ವಂ’ ಎಂಬ ಉಪನಿಷತ್ತಿನ ಮಂತ್ರದಲ್ಲಿಯೂ ‘ವಾಸುದೇವಃ ಸರ್ವಂ’ ಎಂಬ ಭಗವದ್ಗೀತೆಯ ಶ್ಲೋಕದಲ್ಲಿಯೂ ಯಾವ ವಿರಾಡ್ದರ್ಶನದ ಅನುಭವ ಸೂಚಿತವಾಗಿದೆಯೋ ಆ ‘ಸರ್ವಂ ಖಿಲ್ವಿದಂ ಬ್ರಹ್ಮ’ತ್ವವು ಅರವಿಂದರಿಗೆ ಸಿದ್ಧಿಯಾಗಿತ್ತು. ಹಿಂದೆ ಅವರಿಗೆ ಬೊಂಬಾಯಿಯಲ್ಲಿ ಲೀಲೆಯೊಡನೆ ಸಾಧನೆಯಲ್ಲಿ ತೊಡಗಿದ್ದಾಗ ಆಗಿದ್ದ ‘ಬ್ರಹ್ಮಸತ್ಯಂ ಜಗನ್ಮಿಥ್ಯಾ’ ಅನುಭವಕ್ಕೆ ಈ ‘ಸರ್ವಂ ಖಿಲ್ವಿದಂ ಬ್ರಹ್ಮ’ ಅನುಭವವು ಸಂವಾದಿಯೂ ಸಂಪೂರಕವೂ ಆಗಿ ಒದಗಿತು. ಮೊದಲನೆಯದು ನಿರ್ವಿಕಲ್ಪ ಮತ್ತು ನಿರ್ಗುಣ. ಅದು ನೇತಿ ನೇತಿ ಎಂದು ಏರುತ್ತದೆ. ಎರಡನೆಯದು ಸವಿಕಲ್ಪ ಮತ್ತು ಸಗುಣ. ಅದು ಇತಿ ಇತಿ ಎಂದು ಇಳಿಯುತ್ತದೆ. ಮುಂದೆ ಶ್ರೀ ಅರವಿಂದರ ‘ಪೂರ್ಣಯೋಗದರ್ಶನ’ದಲ್ಲಿ ಈ ಏರಿಕೆ ಮತ್ತು ಇಳಿಕೆಗಳ ಸಂಪೂರ್ಣಾರ್ಥವನ್ನೂ ಮತ್ತು ಪರಮ ಪ್ರಯೋಜನವನ್ನೂ ಸಂದರ್ಶಿಸುತ್ತೇವೆ.

ಶ್ರೀ ಅರವಿಂದರು ಸೆರೆಯಿಂದ ಮಾತ್ರವಲ್ಲದೆ ಮಾಯೆಯಿಂದಲೂ ಮುಕ್ತರಾಗಿ ಹೊರಗೆ ಬಂದು ನೋಡುತ್ತಾರೆ: ತಿಲಕ ಮೊದಲಾದ ದೇಶದ ಮುಖಂಡರು ಕಾರಾಗೃಹವಾಸದಲ್ಲಿದ್ದಾರೆ. ನಾಡಿನಲ್ಲೆಲ್ಲ ಏನೋ ಒಂದು ಅಕರ್ಮಕತೆ ವ್ಯಾಪಿಸಿದೆ. ಆಲಿಸಿದರೆ, ಹಿಂದೆ ದಿಗ್ದಿಗಂತ ಕಂಪನಕಾರಿಯಾಗಿ ವಾಯುಮಂಡಲವನ್ನು ಭೇದಿಸಿಕೊಂಡು ಕೇಳಿಬರುತ್ತಿದ್ದ “ವಂದೇ ಮಾತರಂ” ಮಂತ್ರಘೋಷವೂ ಕೂಡ ನಿಶ್ಯಬ್ಧವಾಗಿದೆ. ಒಂದು ವರ್ಷದಲ್ಲಿ ಎಂತಹ ಬದಲಾವಣೆ! ಸಾಧಾರಣ ಹೃದಯವಾಗಿದ್ದರೆ ಎದೆಗೆಡುತ್ತಿತ್ತೇನೊ! ಆದರೆ ಶ್ರೀ ಅರವಿಂದರು ಒಕ್ಕಯ್ಯಾಗಿಯೆ ಸಮಸ್ತ ಭಾರತೀಯ ಸ್ವಾತಂತ್ಯ್ರ ಸಂಗ್ರಾಮರಂಗದ ರಣಚೇತನ ರಕ್ಷೆಗೆ ದೀಕ್ಷಿತರಾಗಿ ನಿಂತರು. ಇಂಗ್ಲಿಷಿನಲ್ಲಿ ‘ಕರ್ಮಯೋಗಿ’ ಮತ್ತು ಬಂಗಾಳಿಯಲ್ಲಿ ‘ಧರ್ಮ’ ಎಂಬ ಎರಡು ಪತ್ರಿಕೆಗಳನ್ನು ಪ್ರಾರಂಭಿಸಿದರು. ಮತ್ತೆ ಜನತಾಹೃದಯಕ್ಕೆ ಶಕ್ತಿ ಧೈರ್ಯ ಕಾರ್ಯೋತ್ಸಾಹಗಳನ್ನು ತುಂಬುವಂತೆ ಪ್ರಚಂಡವಾದ ಲೇಖನ ಭಾಷಣಗಳ ಪ್ರಸಾರಕಾರ್ಯದಲ್ಲಿ ತೊಡಗಿದರು. “ಕ್ಲೇಶ, ಕಷ್ಟ, ಸಂಕಟ-ಇವು ಭಗವಂತನ ಸುತ್ತಿಗೆಯೇಟುಗಳು. ಅವು ಬಿದ್ದಲ್ಲದೆ ನಮ್ಮ ರಾಷ್ಟ್ರಚೇತನಕ್ಕೆ ಮಹತ್ತಾಗಲಿ, ರಾಷ್ಟ್ರಜೀವನಕ್ಕೆ ಭದ್ರಾಕಾರವಾಗಲಿ ಲಭಿಸುವುದಿಲ್ಲ. ಅವನ ಅಡಿಗಲ್ಲಿನ ಮೇಲೆ ನಾವು ಕಬ್ಬಿಣ; ಬಡಿತದ ಮೇಲೆ ಬಡಿತಗಳು ನಮ್ಮ ಮೇಲೆ ಮಳೆಗರೆಯುತ್ತಿವೆ; ನಾಶಕ್ಕಲ್ಲ, ಸೃಷ್ಟಿಗಾಗಿ. ದುಃಖಭೋಗವಿಲ್ಲದೆ ಪ್ರಗತಿಯೋಗವಿಲ್ಲ.”

ಇನ್ನು ಮುಂದೆ ಅರವಿಂದರ ರಾಜಕೀಯ ಕರ್ಮವೂ ಯೋಗದ ಹಾದಿಯನ್ನೆ ಹಿಡಿದುದನ್ನು ನೋಡುತ್ತೇವೆ. ಜೀವನ್ಮುತ್ತರಾಗಿದ್ದ ಅವರು ಸಮರ್ಪಣ ಯೋಗದಲ್ಲಿ ಸಂಪೂರ್ಣವಾಗಿ ಪ್ರತಿಷ್ಠಿತರಾಗಿದ್ದರು. ’ಕರ್ಮಯೋಗಿ’ ಮಾಸ ಪತ್ರಿಕೆಯಲ್ಲಿ ಆಧ್ಯಾತ್ಮ ರಾಜಕೀಯಗಳು ಅದ್ವೈತಸಿದ್ಧಿಯನ್ನು ಪಡೆದಂತೆ ತೋರಿತು. ಈಶ, ಕೇನ ಮತ್ತು ಕಠೋಪನಿಷತ್ತುಗಳ ಅದ್ಭುತ ಭಾಷಾಂತರಗಳೂ ಆ ಪತ್ರಿಕೆಯಲ್ಲಿಯೆ ಮೊದಲು ಬೆಳಕು ಕಂಡದ್ದು.

ಅರವಿಂದರೂ ತಿಲಕರೂ ಸೆರೆಯಲ್ಲಿದ್ದಾಗ ದೇಶದ ರಾಜಕೀಯ ಸ್ಥಿತಿಯನ್ನು ನೋಡಿ ಸರಕಾರ ತೃಪ್ತಿಪಟ್ಟುಕೊಂಡಿತ್ತು. ಇನ್ನೇನು ಎಲ್ಲ ತಣ್ಣಗಾಗುತ್ತದೆ ಎಂದು ಹಾರೈಸಿತ್ತು. ಆದರೆ ಬಿಡುಗಡೆ ಹೊಂದಿದ ಅರವಿಂದರು ಮತ್ತೆ ಬಿರುಗಾಳಿಗಳನ್ನೆ ಎಬ್ಬಿಸುತ್ತಿರುವುದನ್ನು ಕಂಡು ಅಪ್ರತಿಭವಾಯಿತು. ಮತ್ತೊಮ್ಮೆ ಏನಾದರೂ ಮಾಡಿ ಹೇಗಾದರೂ ಅವರನ್ನೂ ತಿಲಕರನ್ನೂ ದೀರ್ಘಕಾಲದ ಸೆರೆಗೆಳೆಯಬೇಕೆಂದು ನಿಶ್ಚಯಿಸಿತು. ಅದಕ್ಕೆ ಬೇಕಾದ ಸಿ.ಐ.ಡಿ.ಗಳ ವ್ಯೂಹಜಾಲವೂ ಸಿದ್ದವಾಯಿತು. ಅವರಿಗೆ ನೆವವೊದಗಿಸಲೆಂಬಂತೆ ಬಂಗಾಲದ ಕ್ರಾಂತಿಕಾರರೂ ಉಗ್ರಚಟುವಟಿಕೆಗಳನ್ನು ಮತ್ತೆ ಪ್ರಾರಂಭಿಸಿದರು. ೧೯೧೫ನೆಯ ಜನವರಿ ತಿಂಗಳಲ್ಲಿ ಒಬ್ಬ ಬಂಗಾಳಿ ಕ್ರಾಂತಿಕಾರ ತರುಣನು ಕಲ್ಕತ್ತೆಯ ಹೈಕೋರ್ಟಿನ ಆವರಣದಲ್ಲಿಯೆ ಒಬ್ಬ ಪೋಲೀಸ್ ಅಧಿಕಾರಿಯನ್ನು ಹಗಲಿನಲ್ಲಿಯೆ ಗುಂಡಿಕ್ಕಿ ಕೊಂದನು. ಅರವಿಂದರು ಆ ಕಾರ್ಯವನ್ನು ತಮ್ಮ ಪತ್ರಿಕೆಯಲ್ಲಿ ಉಗ್ರವಾಗಿ ಖಂಡಿಸಿದರೂ ಸರಕಾರದ ಭಯೋತ್ಪಾದಕವಾದ ನೀತಿಯೇ ಇಂತಹ ಉನ್ಮತ್ತ ಪ್ರತೀಕಾರಗಳಿಗೆ ತರುಣರನ್ನು ಉದ್ರೇಕಿಸುತ್ತದೆ ಎಂದೂ ಪ್ರತಿಪಾದಿಸಿದರು. ಅಲ್ಲದೆ ಆಗಿನ ರಾಜಕೀಯ ಸ್ಥಿತಿಯನ್ನು ಚೆನ್ನಾಗಿ ಪರಿಶೀಲಿಸಿ ತಮಗದು ಸಕಾಲವಲ್ಲವೆಂದೂ ನಿರ್ಣಯಿಸಿದರು. ಜೊತೆಗೆ ಅಂತರ್ವಾಣಿಯೂ ಅವರನ್ನು ಬಹುದಿನಗಳಿಂದ ಬೇರೆಯ ದಿಕ್ಕಿಗೆ ಕರೆಯತೊಡಗಿತ್ತು. ತಮ್ಮ ಸಂದೇಶವನ್ನು “ದೇಶ ಬಾಂಧವರಿಗೊಂದು ಬಹಿರಂಗಪತ್ರ” ಎಂಬ ಲೇಖನದಲ್ಲಿ ಪ್ರಕಟಿಸಿದರು. ಆ ಪತ್ರದಲ್ಲಿ ಸದ್ಯದ ರಾಜಕೀಯ ಸ್ಥಿತಿಯನ್ನೂ ಮುಂದೆ ಕೈಕೊಳ್ಳಬೇಕಾದ ಮಾರ್ಗವನ್ನೂ ನೀತಿಯನ್ನೂ ಸೂಚಿಸಿ, “ನನ್ನನ್ನು ಗಡಿಪಾರು ಮಾಡಿದರೆ, ನಾನು ಮತ್ತೆ ರಾಜಕೀಯಕ್ಕೆ ಹಿಂತಿರುಗದಿದ್ದರೆ ‘ರಾಷ್ಟ್ರೀಯ ಪಕ್ಷ’ವು ಹತಾಶವಾಗಲೂ ಬಾರದು; ಎದೆಗೆಡಲೂ ಬಾರದು. ಏಕೆಂದರೆ ಭಗವಂತನು ಇಂದಾಗಲಿ ನಾಳೆಯಾಗಲಿ ಮುಂದಾಳಾಗಿ ನಿಂತು ದೇಶವನ್ನು ಸ್ವಾತಂತ್ಯ್ರಕ್ಕೆ ಕೊಂಡೊಯ್ಯುವ ತನ್ನ ಅಭಿಷಿಕ್ತ ದೂತನೊಬ್ಬನನ್ನು ಕಳುಹಿಸಿಯೆ ಕಳುಹಿಸುತ್ತಾನೆ.”[13]

ಹೀಗೆ ಶ್ರೀ ಅರವಿಂದರು ‘ಆಲಿಪುರ ಜೈಲಿ’ನಿಂದ ಹೊರಗೆ ಬಂದ ಹತ್ತು ತಿಂಗಳಲ್ಲಿಯೆ ಎಂದರೆ ೧೯೧೦ನೆಯ ಫೆಬ್ರುವರಿ ತಿಂಗಳಲ್ಲಿ ಬ್ರಿಟಿಷ್ ಇಂಡಿಯಾದಿಂದ ಪಾರಾಗಿ ಫ್ರೆಂಚರಿಗೆ ಸೇರಿದ್ದ ಚಂದ್ರನಗರಕ್ಕೆ ಬಂದು ರಹಸ್ಯವಾಗಿಯೆ ಇದ್ದರು. ಕೆಲದಿನಗಳಲ್ಲಿ  ಆ ನಗರವೂ ಕಲ್ಕತ್ತೆಯ. ಆಗ ಭರತಖಂಡದ ರಾಜಧಾನಿಯಾಗಿದ್ದ ಕಲ್ಕತ್ತೆಯ ಗಡಿಬಿಡಿಗೂ ಕೋಲಾಹಲಕ್ಕೂ ಸಮೀಪವಾಗಿದ್ದುದರಿಂದ ಅದನ್ನೂ ಪರಿತ್ಯಜಿಸಿ ದಕ್ಷಿಣಕ್ಕೆ ಹೊರಟು ಮತ್ತೊಂದು ಫ್ರೆಂಚ್ ನಗರವಾದ ಪಾಂಡುಚೆರಿಗೆ ಬಂದರು, ೧೯೧೦ನೆಯ ಏಪ್ರಿಲ್ ೪ರಲ್ಲಿ.

ಅತ್ತ ಸರಕಾರ ಅವರ ಬಹಿರಂಗ ಪತ್ರಕ್ಕಾಗಿ ಅವರ ಮೇಲೆ ಇನ್ನೊಂದು ರಾಜದ್ರೋಹದ ಆಪಾದನೆ ಹೊರಿಸಿ ಮೊಕದ್ದಮೆ ಹೂಡಿತು. ಅರವಿಂದರು ತಲೆತಪ್ಪಿಸಿಕೊಂಡು ಹೆದರಿ ಓಡಿಹೋದರೆಂದು ಆಪಾದಿಸಿತು. ಅದಕ್ಕೆ ಅರವಿಂದರೂ ಮದರಾಸಿನ ಪತ್ರಿಕೆಯೊಂದರ ಮೂಲಕ ಸರಿಯಾದ ಉತ್ತರ ಕೊಟ್ಟರು. ಆದರೂ ಸರಕಾರ ಪತ್ರವನ್ನು ಅಚ್ಚುಮಾಡಿದವನನ್ನೆ ಹಿಡಿದು ಕೇಸುಹಾಕಿತು. ಆದರೆ ಮೊಕದ್ದಮೆ ನಿಲ್ಲಲಿಲ್ಲ ಮಾತ್ರವಲ್ಲ, ಅರವಿಂದರ ಬಹಿರಂಗಪತ್ರದಲ್ಲಿ  ರಾಕದ್ರೋಹಕರವಾದದ್ದು ಏನೂ ಇಲ್ಲ ಎಂದೂ ಕೋರ್ಟು ತೀರ್ಪುಕೊಟ್ಟಿತು.

೧೯೧೦ರಲ್ಲಿ ಪಾಂಡುಚೆರಿಗೆ ಬಂದ ಶ್ರೀ ಅರವಿಂದರು ೧೯೫೦ರಲ್ಲಿ ಮಹಾಸಮಾಧಿಸ್ಥರಾಗುವ ವರೆಗೂ ನಾಲ್ವತ್ತು ವರ್ಷಗಳೂ ಆ ಒಂದೆಡೆಯಲ್ಲಿ ಶರೀರತಃ ಸ್ಥಾನಬದ್ಧರಾಗಿ, ಒಂದು ರೀತಿಯ ಸ್ಥಾಣುವ್ರತಿಗಳಾಗಿದ್ದರು. ಪಾಶ್ಚಾತ್ಯ ವಿದ್ಯಾಸಂಸ್ಕೃತಿಗಳ ರೀತಿನೀತಿಗಳಲ್ಲಿಯೂ ದ್ರುತಪದಕರ್ಮದಲ್ಲಿಯೂ ಬೆಳೆದು, ಭಾರತೀಯ ಸ್ವಾತಂತ್ಯ್ರ ಸಂಗ್ರಾಮರಂಗದಲ್ಲಿ ಮಿಂಚಿನಂತೆ ಬಿರುಗಾಳಿಯಂತೆ ಮಹಾನದಿಯಂತೆ ವಿಕ್ಷುಬ್ಧಸಾಗರದಂತೆ ಕ್ರಾಂತಿಕಾರನಾಗಿ ಚಲಿಸಿದ ಯೌವನ ಪ್ರಾಯದ ಒಬ್ಬ ವ್ಯಕ್ತಿ ಒಂದು ಮೂಲೆಯ ಕಿರುದಾಣದಲ್ಲಿಯೆ ನಾಲ್ವತ್ತು ವರ್ಷಗಳನ್ನು ಕಳೆದನೆಂದರೆ ಅದೊಂದು ಅದ್ಭುತಪವಾಡವಾಗಿ ತೋರುತ್ತದೆ. ಆದರೆ ಆ ಅದ್ಭುತಪವಾಡ ಅವರು ಸಾಧಿಸಿದ ಇತರ ಕಾರ್ಯಗಳ ಮುಂದೆ, ಕೈಕೊಂಡ ಸಾಹಸಗಳ ಭವ್ಯತೆಯ ಇದಿರಿನಲ್ಲಿ ಅತಿಸಾಮಾನ್ಯವೂ ಆಗುತ್ತದೆ ಎಂಬುದನ್ನು ನೆನೆದರೆ ನಾಲಗೆ ಮೂಕವಾಗುತ್ತದೆ, ಹಣೆ ಮಣಿಯುತ್ತದೆ, ಕೈ ಮುಗಿಯುತ್ತವೆ, ಕಣ್ಣು ಹನಿಗೂಡುತ್ತವೆ, ಸಮಸ್ತಚೇತನವೂ ಪೂಜ್ಯತಾಭಾರದಿಂದಲೂ ಭಗವದ್‌ಗೌರವದಿಂದಲೂ ಸಾಷ್ಟಾಂಗ ಪ್ರಣಾಮದಲ್ಲಿ ಸ್ಥಾಯಿಯಾಗುತ್ತದೆ!

ಶ್ರಿ ಅರವಿಂದರು ಪಾಂಡುಚೆರಿಗೆ ಬಂದಂದು ಮೊದಲುಗೊಂಡು ನಾಲ್ಕು ವರ್ಷಗಳ ಅವರ ಜೀವನವು ಸಾರ್ವಜನಿಕ ದೃಷ್ಟಿಗೆ ದುಷ್‌ಪ್ರವೇಶ್ಯವಾದ ಶೈಲನೀರವತಾಯವನಿಕೆಯ ಮರೆಯಲ್ಲಿ ನಿಗೂಢವಾಗಿದೆ. ಬಹುಶಃ ಹಿಮಾಲಯದ ಆ ಧವಳಗಿರಿಯ ಶಿವನಿಕೇತನ ಕೈಲಾಸದ ಕುಳಿರ್ಪುಚಳಿಗೆ ಮನುಷ್ಯಮತಿ ಮರವಡುತ್ತದೆಯೋ ಏನೋ! ಏನಾಯಿತು? ಏನು ನಡೆಯಿತು? ಯಾವುದೂ  ಗೊತ್ತಿಲ್ಲ. ಅವರು ಪೂರ್ಣಯೋಗ ಸಾಧನೆಯ ಸಾಗರ ಭಗೀರಥ ಸಾಹಸದಲ್ಲಿ ಅಹೋರಾತ್ರಿಯೂ ನಿಮಗ್ನರಾಗಿದ್ದರೆಂದು ಅವರ ಕೆಲವು ಕವನಗಳಿಂದ ಊಹಿಸಬಹುದಷ್ಟೆ.[14] ಯೋಗಶಕ್ತಿಯಿಂದ ಜಗತ್ತಿನ ಸ್ವರೂಪ ಸ್ವಭಾವಗಳಲ್ಲಿಯೆ ಪರಿವರ್ತನೆಯನ್ನುಂಟುಮಾಡುವ, ಸಾಮಾನ್ಯಮಾನವನ ಊಹೆಗೂ ಅತಿ ಭೀಕರವಾಗಿ ತೋರುವ ಮತ್ತು ಮೇಧಾವಿಗಳ ಆಲೋಚನೆಗೂ ಅಸಾಧ್ಯವಾಗಿ ಅಸಂಭವನೀಯವಾಗಿರುವ ಅಘಟನಘಟನಪಟೀಯವಾದ ಆಧ್ಯಾತ್ಮಿಕ ವಿಜ್ಞಾನದ ಪ್ರಯೋಗಾಶಾಲೆಯಲ್ಲಿ ಅಭಿನವ ವಿಶ್ವಾಮಿತ್ರನೆಂಬತೆ ಲೋಕನೇತ್ರಗಳಿಗೆ ಅತೀತರಾಗಿದ್ದರು. ಮುಂದೆ ಅವರು ಪ್ರಾರಂಭಿಸಿದ ‘ಆರ್ಯ’ ಎಂಬ ಮಾಸಪತ್ರಿಕೆಯಲ್ಲಿ ಕ್ರಮಕ್ರಮವಾಗಿ ಲೇಖನಗಳ ರೂಪದಲ್ಲಿ ಪ್ರಕಟವಾಗಿ, ತರುವಾಯ ಗ್ರಂಥರೂಪವನ್ನು ಪಡೆದು, ಈಗ ಸಮಸ್ತ ಪ್ರಪಂಚವನ್ನೂ ಬೆಕ್ಕಸಗೊಳಿಸುತ್ತಿರುವ ಅವರ ಮಹಾ ಮೇರುಕೃತಿಗಳಲ್ಲಿ, ಎಂದರೆ ‘ಪೂರ್ಣಯೋಗ ದರ್ಶನ’ದ ಸಿದ್ಧಾಂತಶಾಸ್ತ್ರವಾದ ‘ದಿವ್ಯಜೀವನ’ (The Life Divine) ದಲ್ಲಿಯೂ ಮತ್ತು ‘ಸರ್ವಯೋಗ ಸಮನ್ವಯ’ದ ಸಿದ್ಧಾಂತಶಾಸ್ತ್ರವಾದ ‘ಯೋಗಸಮನ್ವಯ’ (The Synthesis of Yoga) ದಲ್ಲಿಯೂ ಪ್ರತಿಪಾದಿತವಾಗಿರುವ ಮೂಲತತ್ತ್ವಗಳೂ ಸಾಧನ ಮಾರ್ಗಗಳೂ ಯಾವ ಪ್ರತ್ಯಕ್ಷಾನುಭವದಿಂದ ಮಾತ್ರವೆ ಸಾಧ್ಯವೋ ಆ ಅಪರೋಕ್ಷಾನುಭೂತಿಯಲ್ಲಿ ಪೂರ್ಣಸಿದ್ಧರಾಗಿ, ತಮ್ಮದೆ ಆದ ಒಂದು ನೂತನ ವಿಧಾನದಿಂದ ಲೋಕಸಂಗ್ರಹ ಕಾರ್ಯಕ್ಕೆ ತೊಡಗುವುದನ್ನು ಕಾಣುತ್ತೇವೆ, ೧೯೧೫ರ ಹೊತ್ತಿಗೆ.

ನಾಲ್ಕು ವರ್ಷಗಳ ‘ವ್ಯೋಮಸಾಹಸ’ದ ತರುವಾಯ ಶ್ರೀ ಅರವಿಂದರು ‘ವಲ್ಮೀಕ’ದಿಂದ ಹೊರಬಂದು ಒಂದು ದಾರ್ಶನಿಕ ಮಾಸಪತ್ರಿಕೆಯನ್ನು ಪ್ರಾರಂಭಿಸಿದರು. ಅದೇ ಈಗ ಸುಪ್ರಸಿದ್ಧವಾಗಿರುವ ‘ಆರ್ಯ’ ಸುಮಾರು ಆರು ವರ್ಷಗಳು, ಎಂದರೆ ೧೯೨೧ರ ವರೆಗೆ, ತಿಂಗಳಿಗೆ ೬೪ ಪುಟಗಳಂತೆ ಶ್ರೀ ಅರವಿಂದರ ದಿವ್ಯಲೇಖನಿ ದೇವಗಂಗಾ ಪ್ರವಾಹವಾಗಿ ನಿರಂತರ ಸ್ತೋತ್ರವಾಗಿ ಆ ಅಮೃತಪತ್ರಿಕೆಯ ರೂಪದಲ್ಲಿ ಪೃಥ್ವಿಗೆ ಅವತರಿಸಿತು.[15] ಭಗವದಿಚ್ಛೆಯಂತೆ ಅವರಿಗೆ ಸಹಾಯವಾಗಿ ಪಾಲ್ ಮತ್ತು ಮಿರಾ ರಿಚರ್ಡ್ ಎಂಬ ಫ್ರೆಂಚ್ ದಂಪತಿಗಳೂ ಅಲ್ಲಿಗೆ ಕರೆದುತಂದಂತೆ ಬಂದು ಸೇರಿದರು. ಅಂದಿನ ಆ ಮಿರಾ ಇಂದು ‘ತಾಯಿ’ ಎಂದು ಶ್ರೀ ಅರವಿಂದರ ಶಿಷ್ಯರೆಲ್ಲರಿಗೂ ಶ್ರೀ ಅರವಿಂದ ಸಮಾನರಾಗಿ, ಅವರಿಂದ ಅಭೇಧ್ಯವಾಗಿ ಅತ್ಯಂತ ಪೂಜ್ಯನೀಯರಾಗಿದ್ದಾರೆ.

ಸೂರ್ಯನು ಉದಯಿಸಿದರೆ ಮೊದಲು ಆ ಹೊಂಬೆಳಕಿಗೆ ತಮ್ಮ ನೆತ್ತಿಯನ್ನು ಚಾಚಿ, ಆ ಜ್ಯೋತಿಯ ಸ್ನಾನದಿಂದ ಪುನೀತವಾಗುತ್ತವೆ, ಅತ್ಯುನ್ನತ ಗಿರಿ‍ಶೃಂಗಗಳು ಮಾತ್ರ. ಶ್ರೀ ಅರವಿಂದರ ‘ಆರ್ಯ’ ಪತ್ರಿಕೆಯಿಂದ ಅವರ ಶ್ರೀ ಮಹಿಮೆಯನ್ನರಿತವರು ಬಹಳ ಜನ ಇರಲಿಲ್ಲ. ಏಕೆಂದರೆ ಅಸಾಮಾನ್ಯವಾದ ಮೇಧಾಶಕ್ತಿಯೂ ಅಸಾಧಾರಣವಾದ ಅಭೀಪ್ಸೆಯೂ ಅಪಾರ್ಥಿವಪರವಾದ ಉತ್ಕಟ ಶ್ರದ್ಧೆಯೂ, ನಿರಹಂಕಾರ, ನಿರಸೂಯೆ ಮತ್ತು ಸ್ವಪ್ರಷ್ಠಾಪರವಲ್ಲದ ಜ್ಞಾನಾಸಕ್ತಿ, ಇವುಗಳ ಜೊತೆಗೆ ಉನ್ನತಮಟ್ಟದ ಇಂಗ್ಲಿಷ್ ಭಾಷಾಜ್ಞಾನವೂ ಇಲ್ಲದಿದ್ದರೆ ಶ್ರೀ ಅರವಿಂದರ ಪೂರ್ಣಯೋಗ ಶ್ರೀಯನ್ನು ಅರ್ಥಮಾಡಿಕೊಳ್ಳುವುದು ಅಸಾಧ್ಯ. ಆದ್ದರಿಂದ ಔನತ್ಯವಿದ್ದು ಶಕ್ತಿಯಿದ್ದು ಆಕರ್ಷಿತರಾದ ಕೆಲವರು ಮಾತ್ರವೆ ಪಾಂಡುಚೆರಿಗೆ ಬಂದು ‘ಅತಿಮಾನಸಯೋಗ’ದ ಸಾಧನೆಯನ್ನು ಕೈಕೊಂಡು ಶಿಷ್ಯರಾದರು. ಇಂತು ಶ್ರೀ ಅರವಿಂದಾಶ್ರಮ ಪ್ರಾರಂಭವಾಯಿತು, ತನಗೆ ತಾನೆ.

ಶ್ರೀ ಅರವಿಂದರನ್ನು ರಾಜಕೀಯವಾದ ಕರ್ಮರಂಗಕ್ಕೆ ಮತ್ತೆ ಎಳೆಯಲು ಪದೇ ಪದೇ ಬಹಳ ಪ್ರಯತ್ನಗಳು ನಡೆದುವಂತೆ. ಚಿತ್ತರಂಜನದಾಸ ಮತ್ತು ಲಾಲಾ ಲಜಪತರಾಯರಂತಹ ಅಖಿಲ ಭಾರತೀಯ ಸುಪ್ರಸಿದ್ಧ ವ್ಯಕ್ತಿಗಳೂ ಕಾಂಗ್ರೆಸ್ಸಿನಂತಹ ಪ್ರತಿಷ್ಠಾವಂತ ಸಂಸ್ಥೆಗಳೂ ಮಾಡಿದ ಸರ್ವಪ್ರಯತ್ನದಿಂದಲೂ ಮಹರ್ಷಿಯ ಸ್ಥಾಣುತ್ವ ಒಂದಿನಿತೂ ವಿಚಲಿತವಾಗಲಿಲ್ಲ. ಜಗನ್ಮಹಾಕವಿಯಾಗಿ,[16] ಪೂರ್ಣಸಿದ್ಧನಾಗಿ, ಅತಿಮಾನಸಯೋಗಿಯಾಗಿ, ಗುರುಮಹರ್ಷಿಯಾಗಿ, ಅದ್ಭುತ ಮನೀಷಿಯಾಗಿ, ತತ್ತ್ವಜ್ಞಾನಿಯಾಗಿ, ದಾರ್ಶನಿಕನಾಗಿ, ದ್ರಷ್ಟಾರನಾಗಿ, ಮಾನವ ಜ್ಞಾನಲೋಕದ ಸರ್ವರಂಗಗಳಲ್ಲಿಯೂ ಬೆರಗುಗೊಳಿಸುವ ಕೃತಿಮೇರುಗಳನ್ನು ಸೃಷ್ಟಿಸಿರುವ ಅವರು ಅತೀಂದ್ರಿಯವಾದ ಅತಿಮಾನಸಯೋಗದ ಚಿತ್‌ತಪಸ್‌ಶಕ್ತಿಯಿಂದಲೆ ಜಗತ್ತಿನಲ್ಲಿ ಸ್ವಯಂಕ್ರಿಯೆಗಳನ್ನು ಪ್ರಚೋದಿಸುವ ಭಗವದ್ ವಿಧಾನವನ್ನು ಕೈಕೊಂಡರಲ್ಲದೆ ಮನುಷ್ಯವಿಧಾನದ ದುರ್ಬಲಪ್ರಕಾರದ ಅಸಮರ್ಪಕ ಮಾರ್ಗಗಳಿಗೆ ಇಳಿಯಲು ಇಷ್ಟಪಡಲಿಲ್ಲ.

ಮನುಷ್ಯದೃಷ್ಟಿಗೆ ಅಗೋಚರವಾದ ಆ ವಿಧಾನಗಳ ಮಾತಂತಿರಲಿ; ಗೋಚರವಾಗುವ ವಿಧಾನಗಳಲ್ಲಿ ಕೆಲವನ್ನಾದರೂ ಅವರು ಕೈಕೊಂಡುದನ್ನು ಕಾಣುತ್ತೇವೆ: ಒಂದು, ಲೇಖನವಿಧಾನ, ಎರಡು, ಪತ್ರವಿಧಾನ;[17] ಮೂರು, ದರ್ಶನ ವಿಧಾನ. ಶ್ರೀ ರಾಮಕೃಷ್ಣ ಪರಮಹಂಸರಂತೆ ಸಂಭಾಷಣಾವಿಧಾನವನ್ನು ಅವರು ಕೈಕೊಳ್ಳಲಿಲ್ಲ. ಅಧಿಕಾರೀಸಾಧಕರ ಚೈತನ್ಯವನ್ನು ಎಚ್ಚರಿಸುವ ಪರಮಹಂಸರ ಸ್ಪರ್ಶಾದಿ ವಿಧಾನಗಳನ್ನೂ ಅರವಿಂದರು ಕೈಕೊಂಡಂತೆ ತೋರುವುದಿಲ್ಲ. ಒಂದು ವೇಳೆ ಕೈಕೊಂಡಿದ್ದರೂ ಆ ವಿಷಯ ಇನ್ನೂ ಸರ್ವಜನ ಪ್ರಕಟವಾಗಿಲ್ಲ. ಅದೇನೆ ಇರಲಿ, ಶ್ರೀ ಅರವಿಂದರನ್ನು ಜೀವನವಿಮುಖರೆಂದು ತಿಳಿಯುವುದು ಕಕ್ಕಡುಮೂರ್ಖನಿಗೂ ಅವಮಾನಕರ.

೧೦

ಶ್ರಿ ಅರವಿಂದರು ತಮ್ಮ ಸ್ವಂತ ಮುಕ್ತಿಗಾಗಿ ಸಾಧನೆಯನ್ನು ಕೈಕೊಳ್ಳಲಿಲ್ಲ. ಅವರ ಯೋಗದ ಗುರಿ ‘ಸಂಭೂತಿ’ಯಿಂದ ತಪ್ಪಿಸಿಕೊಂಡು ‘ಅಸಂಭೂತಿ’ಯಲ್ಲಿ ವಿಲಯಹೊಂದುವುದಲ್ಲ. ಯಾವುದು ಈಗ ಅತೀತದಲ್ಲಿದೆಯೋ, ಯಾವುದರ ಒಂದು ಪಾದ ಮಾತ್ರ ನಮ್ಮ ಮರ್ತ್ಯದಲ್ಲಿದ್ದರೂ ಸದ್ಯಕ್ಕೆ ನಿಗೂಢವಾಗಿ ಅವ್ಯಕ್ತಸ್ಥಿತಿಯಲ್ಲಿದೆಯೋ ಆ ಸಚ್ಚಿದಾನಂದ ವಿಜ್ಞಾನಶಕ್ತಿ ಮೊದಲು ಮನೋಮಯ ಪ್ರಾಣಮಯಗಳಿಗೂ, ಕೊನೆಗೆ ಅನ್ನಮಯಕ್ಕೂ ಅವತರಿಸಿ ಸುವ್ಯಕ್ತವಾಗುವಂತೆ ಮಾಡಿ, ಅವಿದ್ಯಾಜನ್ಯವಾದ ಅಜ್ಞಾನ ಅಶಕ್ತಿ ಜರಾಮರಣ ರೋಗಾದಿಗಳನ್ನು ಸಂಪೂರ್ಣವಾಗಿ ಪರಿಹರಿಸಿ, ಮರ್ತ್ಯವನ್ನು ಅಮರ್ತ್ಯವನ್ನಾಗಿ ಪರಿವರ್ತಿಸಿ, ನರತ್ವದಲ್ಲಿಯೆ ಸಂಪೂರ್ಣ ದಿವ್ಯತ್ವವನ್ನೂ ಭಗವತ್‌ಸ್ವರೂಪತೆಯನ್ನೂ ಸ್ಥಾಪಿಸುವ ‘ಅತಿಮಾನವ’ನ ಸೃಷ್ಟಿಯೆ ಅವರ ‘ಅತಿಮಾನಸ ಯೋಗ’ದ ದಿವ್ಯೋದ್ದೇಶ. ಶ್ರೀ ಅರವಿಂದರನ್ನು ಮಿರಿಸುವ ಆಶಾವಾದಿಗಳಾಗಲಿ ಜೀವನ ಪ್ರೇಮಿಗಳಾಗಲಿ ಇದ್ದಾರೆಯೆ?

ಅವರ ಸ್ವಂತ ಸಿದ್ಧಿ ಅವರಿಗೆ ಎಂದೋ ಲಭಿಸಿತ್ತು. ಅವರು ಜೀವನ್ಮುಕ್ತರಾಗಿಯೂ ಸಾಧನೆಮಾಡಿದುದು ಸರ್ವರ ಶ್ರೇಯಸ್ಸಿಗಾಗಿ.[18] ಅವರ ಹುಟ್ಟುಹಬ್ಬದ ದಿನವೆ ಭರತ ಖಂಡದ ಸ್ವಾತಂತ್ಯ್ರವೂ ಹುಟ್ಟಿತೆಂಬುದನ್ನು (೧೫-೮-೧೯೪೨) ನೆನೆದರೆ ಎಂತಹ ಧ್ವನಿಪೂರ್ಣವಾದ ಅರ್ಥಾನುಭವವಾಗುತ್ತದೆ! ಆ ದಿನ ಸಂದೇಶ ಇಡೀ ಪ್ರಪಂಚಕ್ಕೇ ಭಗವದ್‌ವಾಣಿಯ ಒಂದು ‘ತಾಮ್ರ ಪಟನಿರೂಪ’ವಾಗುವಂತಿದೆ. ರಾಜಕೀಯ ಸ್ವಾತಂತ್ಯ್ರಸಿದ್ಧಿಯಾದ ಆರು ತಿಂಗಳಲ್ಲಿಯೆ, ೧೯೧೦ರಲ್ಲಿ ಶ್ರೀ ಅರವಿಂದರು ಭವಿಷ್ಯ ನುಡಿದಿದ್ದಂತೆ, ಭಗವಂತನು ಕಳುಹಿಸಿದ್ದ ‘ಅಭಿಷಿಕ್ತ ದೇವದೂತ’ ನಮ್ಮ ಸ್ವಾತಂತ್ಯ್ರಶಿಲ್ಪಿ ಇಹರಂಗದಿಂದ ಕಣ್ಮರೆಯಾದನು. ಆಗ ಅರವಿಂದರು ಹೇಳಿದರು: “ಯಾವ ಜ್ಯೋತಿ ನಮ್ಮನ್ನು ಪೂರ್ಣ ಸ್ವರಾಜ್ಯಕ್ಕೆ ಕರೆದೊಯ್ದಿತೋ ಆ ಜ್ಯೋತಿ ನಮ್ಮೊಡನೆಯೆ ತಳತಳಿಸುತ್ತಾ ಇದೆ” ಎಂದು. ಮೊನ್ನೆ ಮೊನ್ನೆ ಭಾರತೀಯ ಗಗನದ ಮತ್ತೊಂದು ಆಧ್ಯಾತ್ಮಿಕಜ್ಯೋತಿ ಶ್ರೀ ರಮಣಮಹರ್ಷಿಗಳೂ ದೇಹ ತ್ಯಾಗ ಮಾಡಿದರು. ಅದಾಗಿ ಒಂದೆರಡು ತಿಂಗಳೊಳಗೆ ಇನ್ನೊಂದು ಸರ್ವಲೋಕ ದೀಪ್ಯಮಾನವಾದ ಮಹಾಜ್ಯೋತಿಯ ನಿರ್ಮಾಣಕ್ಕೆ ಯಾರೂ ಸಿದ್ಧರಾಗಿರಲಿಲ್ಲ. ನಿರೀಕ್ಷಿಸಿಯೂ ಇರಲಿಲ್ಲ. ಆದ್ದರಿಂದ ಇದೇ ತಿಂಗಳು ಐದನೆಯ ತೇದಿ ಶ್ರೀ ಅರವಿಂದರ ನಿಧನದ ವಾರ್ತೆ ಬಂದಾಗ ಅನೇಕರಿಗೆ ವಿಸ್ಮಯವಾಯಿತು. ಇದೇನು ನರತ್ವಕ್ಕೆ ಅಮರತ್ವಪಟ್ಟವನ್ನು ಕಟ್ಟಲೆಂದು ಪಣತೊಟ್ಟು ಸಾಧನೆಯಲ್ಲಿ ತೊಡಗಿದ್ದ ಯೋಗಿಂದ್ರನಿಗೆ ತನ್ನ ಅಮರತ್ವವನ್ನೆ ಸಾಧಿಸಲಾಗಲಿಲ್ಲವೆ ಎಂದು! ಆದರೆ ಅವರ ಕಳೇಬರದಿಂದ ಐದು ದಿನಗಳವರೆಗೆ ಒಂದು ದಿವ್ಯ ತೇಜಸ್ಸು ಹೊರಡುತ್ತಿತ್ತು ಎಂಬ ವಾರ್ತೆಯನ್ನು ಓದಿ, ಅರವಿಂದರ ಅತಿಮಾನಸಯೋಗದ ಅರ್ಥ ಕ್ರಮ, ಕಾಲ, ವಿಧಾನ, ತಪಸ್ಯೆ ಇವುಗಳನ್ನು ಅರಿಯದ  ಅಥವಾ ತಪ್ಪಾಗಿ ಅರಿತಿದ್ದ ಆ ಯಕ್ಷಿಣೀಪ್ರಿಯರಿಗೆ ಸ್ವಲ್ಪ ಸಮಾಧಾನವಾಗಿರಬೇಕು: ಮೃತಪಟ್ಟ ಮೇಲೆಯೂ ಆ ಕಳೇಬರದಲ್ಲಿ, ಅತಿಮಾನಸಯೋಗದ ವಿಜ್ಞಾನಶಕ್ತಿಗೆ ಬಹುಕಾಲ ವಾಹನವಾಗಿದ್ದ ಆದಿವ್ಯ ಕಳೇಬರದಲ್ಲಿ, ಪ್ರತಿಷ್ಠಿತವಾಗಿದ್ದ ತೇಜಸ್ಸು ತಿರೋಹಿತವಾಗಿ, ಅದರ ಹಂಚಿಕೆಗೆ ಮರ್ತ್ಯಶಕ್ತಿಗಳು ಕೈಹಾಕಬೇಕಾದರೆ ಐದು ದಿನಗಳು ಕೈಕಟ್ಟಿಕೊಂಡೋ ಕೈಮುಗಿದುಕೊಂಡೋ ಬಳಿನಿಂತು ಬೇಡಿ ಕಾಯಬೇಕಾಯಿತಲ್ಲ!

ಮಹಾತ್ಮಾ ಗಾಂಧೀಜಿ ಆಹುತಿಯಾದಾಗ ಶ್ರೀ ಅರವಿಂದರು ಏನನ್ನು ಹೇಳಿದ್ದರೋ ಅದನ್ನೇ ನಾವು ಇನ್ನೂ ಸಮರ್ಪಕವಾಗಿ ಧೈರ್ಯವಾಗಿ ಹೇಳಿಕೊಳ್ಳಬಹುದು: ‘ಯಾವ ಜ್ಯೋತಿ ಸಮಸ್ತ ಮರ್ತ್ಯವನ್ನೂ ಪೂರ್ಣಯೋಗದ ಪೂರ್ಣಸಿದ್ಧಿಗೆ ಕರೆದೊಯ್ಯುವುದಾಗಿ ತನ್ನ ಸಮಸ್ತ ಚಿತ್‌ತಪಸ್ಸನ್ನೂ ಪ್ರಯೋಗಿಸಲು ಅನವರತ ಸಾಧನೆಯಲ್ಲಿದ್ದಿತೋ ಆ ಜ್ಯೋತಿ ಇನ್ನೂ ನಮ್ಮೊಡನೆ ತಳತಳಿಸುತ್ತಾ ಇದೆ; ದಾರಿ ತೋರಿಸುತ್ತಾ ಇದೆ. ನಮಗಾಗಿ ಅಸುರೀಶಕ್ತಿಗಳೊಡನೆ ಹೋರಾಡುತ್ತಾ ಇದೆ. ನಮ್ಮ ಪೂಜೆಯಲ್ಲಿ ಪ್ರಾರ್ಥನೆಯಲ್ಲಿ ಧ್ಯಾನದಲ್ಲಿ ಉದ್ಧಾರದ ಹಂಬಲದಲ್ಲಿ ನಮಗೆ ಬೆಂಬಲವಾಗಿ ಆಶೀರ್ವಾದವಾಗಿ ದೈವೀ ಶಕ್ತಿಗಳ ನೆರವನ್ನೀಯುತ್ತಾ ಇದೆ. ಅಮಸ್ತ ಪೃಥ್ವೀತತ್ವವೂ ಸಂಪೂರ್ಣವಾಗಿ ಪರಿವರ್ತನೆಗೊಂಡು ಭೂಮಿಯೆ ವೈಕುಂಠವಾಗುವವರೆಗೆ, ಕೈಲಾಸವಾಗುವವರೆಗೆ, ರಾಮರಾಜ್ಯವಾಗುವವರೆಗೆ ಆ ಜ್ಯೋತಿ ವಿರಾಮಹೊಂದುವುದಿಲ್ಲ. ಮರ್ತ್ಯ ದೂರವಾಗುವುದಿಲ್ಲ. ಭೂಮನೋ ಮಂಡಲದಿಂದ ತಿರೋಹಿತವಾಗುವುದಿಲ್ಲ.[19]

ಶ್ರೀ ಅರವಿಂದರಂತಹ ಸರ್ವತೋಮುಖವಾದ ಸಂಪೂರ್ಣವಾದ ಪೂರ್ಣ ವಿಭೂತಿಯನ್ನು ನಾವು ಇತಿಹಾಸದಲ್ಲಿ ಹುಡುಕಿದರೆ ದೊರೆಯುವುದು ಸಂದೇಹಕರ. ಸ್ವಲ್ಪವಾದರೂ ಸಾದೃಶ್ಯ ದೊರೆಯಬೇಕಾದರೆ ಪುರಾಣಗಳಿಗೇ ಹೋಗಬೇಕಾಗುತ್ತದೆ. ಬಹುಶಃ ಪುರಾಣಗಳು ಮುಂದೆ ಸಂಭವಿಸಲಿರುವ ಇತಿಹಾಸವನ್ನು ಪ್ರತಿಮಾವಿಧಾನದಿಂದ ಪ್ರತಿಬಿಂಬಿಸುವ ಪೃಥ್ವಿಮನೋಮಂಡಲದ ವ್ಯೋಮಾಭಿಲಾಷೆಗಳಾಗಿರಬೇಕಲ್ಲವೆ? ಶ್ರೀ ಅರವಿಂದರೂ ಈ ಭೂಮನಸ್ಸಿನ  ಅಂತಹ ಭೂಮವ್ಯೋಮಾಭಿಲಾಷೆಯ ಸಾಹಸೋನ್ಮುಖವಾದ ಒಂದು ಭವ್ಯ ವಿರಾಟ್‌ಪ್ರತಿಮೆಯಾಗಿರಬೇಕೆ?