ಇಹಜೀವನ ರೇಖೆ

 

ನನ್ನ ಜೀವನವನ್ನು ಕುರಿತು ಬರೆಯಲು ಯಾರಿಗೂ ಸಾಧ್ಯವಿಲ್ಲ; ಏಕೆಂದರೆ ಮನುಷ್ಯದೃಷ್ಟಿಗೆ ಅಗೋಚರವಾದ ಭೂಮಿಕೆಯಲಲ್‌ಇಯೆ ಅದು ಸಾಗಿದೆ” ಎಮದು ಶ್ರೀ ಅರವಿಂದರು ಹೇಳಿದ್ದಾರೆ. ಯಾರ ಬದುಕಿನಲ್ಲಿ ಧರ್ಮ ಕರ್ಮರಂಗಗಳು ಅತೀಂದ್ರಿಯವೂ ಆಧ್ಯಾತ್ಮಿಕವೂ ಆಗಿರುವ ಲೋಕ ಲೋಕಾಂತರಗಳಲ್ಲಿಯೂ ಸಾಮಾನ್ಯ ಮಾನಸಗ್ರಾಹ್ಯವಲ್ಲದ ಸೂಕ್ಷ್ಮಾತಿ ಸೂಕ್ಚ್ಮವಾದ ಭೂಮಿಕೆಗಳಲ್ಲಿಯೂ ಅಂತರ್ಹಿತವಾಗಿದ್ದುವೋ ಅವರ ಆ ಜೀವನವು ನಮಗೆ “ಚತರಿತ್ರೆ”ಯಾಗುವುದಾದರೂ ಎಂತು? ಮಾನುಷ್ಯ ಮನೋಮಯದ ವಾಗ್‌ವಿಧಾನಗಳಿಂದ ಆ ‘ಅತಿಮಾನಸ’ದ ಅನುಭವಗಳನ್ನು ತತ್ತ್ವಗಳನ್ನೂ ಅದರ ಸಂಭೂತಿಯ ಪ್ರಕಾರಗಳನ್ನೂ ಉಕ್ತಿವಶವಾಗುವಂತೆ ವರ್ಣಿಸುವುದಾದರೂ ಎಂತು? “ಕಾ ತೇ ಸ್ತುತಿಃ ಸ್ತವ್ಯಪರಾ ಪರೋಕ್ತಿಃ.”

ಆದರೆ ಮನುಷ್ಯದೃಷ್ಟಿಯಲ್ಲಿ, ಮಾನುಷ್ಯರೀತಿಯಲ್ಲಿ, ಮಾನವ ಬುದ್ಧಿಗ್ರಾಹ್ಯವಾಗುವಂತೆ ಮತ್ತು ಪ್ರತಿಭಾಗೋಚರವಾಗುವಂತೆ ಅವಿರ್ಭಾವಗೊಂಡಷ್ಟನ್ನು ಮಾತ್ರ ನಾವು ನಮ್ಮ ರೀತಿಯಿಂದ ಮುಟ್ಟಿ. ಕಟ್ಟಿ. ಒಂದು “ದೃಷ್ಟಿ”ಯನ್ನು ರೂಪಿಸಿಕೊಳ್ಳಬಹುದು. ಆ ‘ದೃಷ್ಟಿ’ ಪ್ರತಿಮಾ ಮಾತ್ರವಾದುದಾದರೂ ಅದರಿಂದ ನಮ್ಮ ಪ್ರಗತಿಗೆ ವಿಕಾಸಕ್ಕೆ ಉದ್ಧಾರಕ್ಕೆ ಮಹತ್ತರ ಸಹಾಯ ಒದಗುತ್ತದೆ, ಶ್ರೀ ಅರವಿಂದರ ಮರ್ತ್ಯಶರೀರದ ಭಾವಚಿತ್ರದಿಂದ ಸಾಧಕನಿಗೆ ಒದಹಬಹುದಾದ ಒಂದು ವಿಧವಾದ ಸಹಾಯದಂತೆ. ಭಗವಂತನ ವಿಶ್ವರೂಪ ದರ್ಶನವನ್ನು ಕಂಡಳ್ಕಿ ಅರ್ಜುನನೂ ಕೂಗಿಕೊಳ್ಳಲಿಲ್ಲವೆ, “ತೇನೈವ ರೂಪೇಣ ಚತುರ್ಭುಜೇನ ಸಹಸ್ರಬಾಹೋ ಭವ ವಿಶ್ವಮುರ್ತೇ” ಎಂದು? ನರತ್ವಕ್ಕೆ ಭಗವಂತನ ಸಹಸ್ರಬಾಹುತ್ವವನ್ನು ನೋಡಬೇಕೆಂಬುದೇನೊ ಬಯಕೆ. ಆದರೆ ಕಂಡೊಡನೆ ಕೂಗಿಕೊಳ್ಳುತ್ತದೆ “ಸಾಕು, ಸ್ವಾಮಿ, ನಿನ್ನ ಚತುರ್ಭುಜವೇ ನನಗೆ ಸಾಕು!” ಎಂದು ಭಗವಂತನ ಆ ಅತಿಮಾನಸದ ಸುದುರ್ದರ್ಶರೂಪದಿಂದ ನಮ್ಮ ಈ ಪ್ರಕೃತಿಯ ಮಾನುಷರೂಪಕ್ಕೆ ಇಳಿದ ಮೇಲೆಯೆ ನಾವು ಸಂವೃತ್ತರೂ ಸಚೇತರೂ ಪ್ರಕೃತಿಗತರೂ ಆಗಿ ಮತ್ತೊಮ್ಮೆ ಎಂದಿನಂತೆ ಉಸಿರಾಡಲು ಸಮರ್ಥರಾಗುತ್ತೇವೆ, ಅರ್ಜುನನಂತೆ:

“ದೃಷ್ಟ್ವೇದಂ ಮಾನುಷಂ ರೂಪಂ ತವ ಸೌಮ್ಯಂ ಜನಾರ್ದನ|
ಇದಾನೀಮಸ್ಮಿ ಸಂವೃತ್ತಃ ಸಚೇತಾಃ ಪ್ರಕೃತಿಂ ಗತಃ||”

ನಮಗೆ ದೃಗ್ಗೋಚರವಾಗುವ ಶ್ರೀ ಅರವಿಂದರ ಇಹಜೀವನದ ರೇಖೆ ಕ್ರಿ.ಶ.೧೮೭೨ನೆಯ ಅಗಸ್ಟ್ ೧೫ರಲ್ಲಿ ಪ್ರಾರಂಭವಾಗಿ, ದೇಶವಿದೇಶಗಳಲ್ಲಿ ಚಿತ್ರವಿಚಿತ್ರ ಮಾರ್ಗಗಳಲ್ಲಿ ವಿಸ್ಮಯಕಾರಕವಾದ ಅನೇಕ ಪ್ರಕಾರಗಳಲ್ಲಿ ಕ್ಷೇತ್ರಗಳಲ್ಲಿ ರೂಪಗಳಲ್ಲಿ ಮಿಂಚಿ ಮಿಂಚಿ ಸಂಚರಿಸಿ, ಕ್ರಿ.ಶ.೧೯೫೦ರಲ್ಲಿ ತಾನು ಯಾವ ಅತೀತರಿಂದ ಹೊಮ್ಮಿ ಬಂದಿದ್ದಿತೊ ಆ ಅನಿರ್ವಚನೀಯವಾದ ಅತೀತದಲ್ಲಿ ರೂಪವಿಸರ್ಜನೆಮಾಡಿ ಮರ್ತ್ಯದೃಷ್ಟಿಗೆ ತಿರೋಹಿತವಾಗಿರುವುದನ್ನು ಕಾಣುತ್ತೇವೆ. ಅವರು ಹುಟ್ಟಿದ ದೇಶ ಮತ್ತು ಜನಿಸಿದ ಸಮಯ ಎರಡೂ ದೈವೀಶಕ್ತಿಗಳ ವಿಶೇಷ ಕೃಪೆಗೆ ಪಾತ್ರವಾಗಿದ್ದುವು. ಹತ್ತೊಂಬತ್ತನೆಯ ಶತಮಾನದ ವಂಗದೇಶದ ಶ್ರೀಮಂತ ಗರ್ಭದಿಂದ ಸಂಭವಿಸಿದ ಮಹಾ ವಿಭೂತಿಗಳ ದೇದೀಪ್ಯಮಾನವಾದ ‘ಪವಿತ್ರಪಂಕ್ತಿ’ಯನ್ನು ಯಾರೂ ಪುಲಕಿತರಾಗದೆ ನೆನೆಯಲು ಸಾಧ್ಯವಿಲ್ಲ. ಅದನ್ನು ಆಕಸ್ಮಿಕ ಎಂದು ಭಾವಿಸುವುದಕ್ಕೂ ಸಾಧ್ಯವಾಗುವುದಿಲ್ಲ. ಯಾವುದೋ ಒಂದು ಮಹತ್ತಾದ ಶಕ್ತಿಯ ಮಹೋದ್ದೇಶವೇ ನಿಗೂಢಕಾರ್ಯದಲ್ಲಿ ತೊಡಗಿದ್ದಂತೆ ಭಾಸವಾಗುತ್ತದೆ.

[1] ಶ್ರೀ. ಅರವಿಂದರ ಜನನ ಕಾಲದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರಿಗೆ ಮೂವತ್ತಾರು ವರ್ಷ ವಯಸ್ಸಾಗಿತ್ತು. ಆಗಾಗಲೆ ಆ ಅದ್ವಿತೀಯ ಭಗವದ್ವಿಭೂತಿ ತನ್ನ ಸಾಧನೆಗಳನ್ನೆಲ್ಲ ಪೂರೈಸಿ ಸರ್ವೊಚ್ಛಸಿದ್ದಿಯಲ್ಲಿ ಸಂಸ್ಥಾಪಿತವಾಗಿತ್ತು. ಸ್ವಾಮಿ ವಿವೇಕಾನಂದರೂ ಕವಿ ರವೀಂದ್ರರೂ ಹತ್ತು ಹನ್ನೆರಡು ವರ್ಷದ ಹುಡುಗರಾಗಿದ್ದರು. ದೇವೇಂದ್ರನಾಥ ಠಾಕೂರ ಮತ್ತು ಕೇಶವ ಚಂದ್ರಸೇನರಂತಹ ಸುಧಾರಕವರ್ಗದವರ ಪ್ರಭಾವದಿಂದ ಸಾಮಾಜಿಕ ಮತ್ತು ಧಾರ್ಮಿಕ ವಲಯಗಳಲ್ಲಿ ನವೋದಯದ ಪ್ರಕ್ಷುಬ್ಧತೆ ವ್ಯಾಪಿಸಿತ್ತು. ಬಾಬು ಅರವಿಂದಘೋಷರ ಇಹಜೀವನವು ಅದೇ ಚೈತನ್ಯ ವೃಕ್ಷದ ಬೇರೊಂದು ಕೊಂಬೆಯಲ್ಲಿ ಮೊಗ್ಗಾಗಿ ಮೈದೋರಿತು.

ಆದರೆ ಒಂದಚ್ಚರಿ. ಇತರರ ಬಾಲ್ಯಜೀವನದ ಮೇಲೆ ಅಂದಿನ ಭಾರತೀಯವಾದ ನವಜಾಗ್ರತಿ ಯಾವ ಪ್ರಭಾವವನ್ನು ಎಷ್ಟು ಪ್ರಮಾಣದಲ್ಲಿ ಬೀರಿತೋ ಅಂತಹ ಪ್ರಭಾವವನ್ನು ಅಂತಹ ಪ್ರಮಾಣದಲ್ಲಿ ಅನುಭವಿಸಲು ಸಾಧ್ಯವಾಗಲಿಲ್ಲ, ಕುಮಾರ ಅರವಿಂದರಿಗೆ. ಅದಕ್ಕೆ ಲೌಕಿಕ ಕಾರಣಗಳು ಎರಡು. ಒಂದನೆಯದು, ಅವರ ತಂದೆ ಇಂಡಿಯನ್‌ಮಿಲಿಟರಿ ಸರ್ವಿಸ್‌ನಲ್ಲಿ ಡಾಕ್ಟರಾಗಿದ್ದುದರಿಂದ ಸಂಪೂರ್ಣವಾಗಿ ‘ಪಾಶ್ಚಾತ್ಯ’ರಾಗಿದ್ದುದು. ಎರಡನೆಯದು, ಕುಮಾರ ಅರವಿಂದರು ಏಳು ವರ್ಷದವರಾಗಿದ್ದಾಗಲೆ ಅವರನ್ನು ಅವರ ಹಿರಿಯ ಸಹೋದರರೊಡನೆ ಪಾಶ್ಚಾತ್ಯ  ರೀತಿಯಲ್ಲಿಯೆ ಸಂಪೂರ್ಣವಾಗಿ ತರಬಿಯತ್ತು ಮಾಡಿಸುವ ಸಲುವಾಗಿ ಇಂಗ್ಲೆಂಡಿಗೆ ಕಳುಹಿಸಿದ್ದು. ತನ್ನ ಏಳನೆಯ ವಯಸ್ಸಿನಲ್ಲಿಯೆ ಮಾತೃಭೂಮಿಯನ್ನು ಬಿಡುವ ಹುಡುಗನೊಬ್ಬನು ಅತಿ ದೂರವಾದ, ಎಲ್ಲ ಅರ್ಥದಲ್ಲಿಯೂ ಅತಿ ದೂರವಾದ, ಪರದೇಶದಲ್ಲಿಯೂ ಪರಭಾಷೆಯಲ್ಲಿಯೆ ವಿದ್ಯಾರ್ಜನೆಮಾಡಿ, ಪರಕೀಯವಾದ  ಸಂಸ್ಕೃತಿಯಲ್ಲಿಯೆ ಪರಕೀಯರ ಸಂಗ ಸಹವಾಸಗಳಲ್ಲಿಯೆ ಅತ್ಯಂತ ಪ್ರಭಾವಪೂರ್ಣವಾದ ತಾರುಣ್ಯದ ಹದಿನಾಲ್ಕು ಸಂವತ್ಸರಗಳನ್ನು ಕಳೆದರೆ. ಎಂದರೆ ತನ್ನ ಇಪ್ಪತ್ತೆರಡನೆಯ ವಯಸ್ಸಿನವರೆಗೆ ಅಲ್ಲಿಯೆ ಬೆಳೆದರೆ, ಅತನಿಗೆ ಸ್ವದೇಶದ ಅತ್ಮಶ್ರೀಯ ಅರಿವೂ ಅನುಭವವೂ ಆಗುವುದಾದರೂ ಹೇಗೆ ತಾನೆ ಸಾಧ್ಯ?

ಶ್ರೀ ಅರವಿಂದರ ತಂದೆ ಡಾ|| ಕೃಷ್ಣಧನಘೋಷರು; ತಾಯಿ ಶ್ರೀಮತಿ ಸ್ವರ್ಣಲತಾದೇವಿ.

ಡಾ|| ಕೃಷ್ಣಧನಘೋಷರನ್ನು ವಿಶೇಷ ವೈದ್ಯಕೀಯ ವಿದ್ಯಾರ್ಜನೆಗಾಗಿ ಇಂಗ್ಲೆಂಡಿಗೆ ಕಳುಹಿಸಿದಾಗ ಅವರ ಮಾವ (ಬಹುಶಃ ತನ್ನ ಮಗಳ ಹಿತಚಿಂತನೆಯಿಂದಲೂ ಇರಬೇಕು!) ಪಾಶ್ಚಾತ್ಯ ನಾಗರಿಕತಾ ಮೋಹಿನಿಗೆ ಮರುಳಾಗದಂತೆ ನೋಡಿಕೊಳ್ಳಬೇಕೆಂದು ಎಚ್ಚರಿಕೆ ಹೇಳಿದ್ದರೂ ಅಳಿಯನು ಎಲ್ಲ ಪ್ರಶಸ್ತಿಗಳನ್ನು ಸಂಪಾದಿಸಿಕೊಂಡು ಸ್ವದೇಶಕ್ಕೆ ಹಿಂದಿರುಗಿದಾಗ ನಖಶಿಖಾಂತವೂ ಸಂಪೂರ್ಣವಾಗಿ ಪಾಶ್ಚಾತ್ಯ ನಾಗರಿಕತೆಯ ಪರಮಭಕ್ತನೂ ಪರಮಾನುಯಾಯಿಯೂ ಆಗಿದ್ದನು. ಅವರ ಊರಾದ ಕೋನ್ನಗರದ ಸ್ವಜಾತೀಯ ಬಂಧುಗಳು ಮ್ಲೋಚ್ಛದೇಶಕ್ಕೆ ಹೋಗಿಬಂದ ಕೃಷ್ಣಧನಘೋಷರಿಗೆ ‘ಶುದ್ಧಿ’ಗಾಗಿ ‘ಪ್ರಾಯಶ್ಚಿತ್ತ’ ಮಾಡಿಕೊಳ್ಳುವಂತೆ ಹೇಳಿದರು. ಕೃಷ್ಣಧನರು ಅವರನ್ನೆಲ್ಲ ತಿರಸ್ಕರಿಸಿ, ತಮ್ಮ ಮನೆ ಜಮೀನುಗಳನ್ನು ಮಾರಿ, ಊರನ್ನೆ ತ್ಯಜಿಸಿದರು. ಸರಕಾರದ ಸಿವಿಲ್‌ಸರ್ಜನ್‌ಆಗಿ ಅನೇಕ ಜಿಲ್ಲೆಗಳಲ್ಲಿ ಕೆಲಸಮಾಡಿ ಸೇವೆಸಲ್ಲಿಸಿ, ಪರೋಪಕಾರಕ್ಕೂ ಪರಮದುಃಖಕಾತರತೆಗೂ ಹೆಸರುವಾಸಿಯಾದರು. ಇಷ್ಟ, ರುಚಿ, ಅಭಿರುಚಿಗಳಲ್ಲಿ ಪೂರ್ತಿಯಾಗಿ ‘ಪಾಶ್ಚಾತ್ಯ’ರಾಗಿದ್ದರೂ ಬಂಕಿಮಚಂದ್ರರ ಕಾದಂಬರಿಗಳಲ್ಲಿಯೂ ಸಮಾಜಸುಧಾರಣೆಗಳಲ್ಲಿಯೂ ಅವರು ತುಂಬ ಆಸಕ್ತರಾಗಿದ್ದರು. ಅವರ ಮನೆ ಐರೋಪ್ಯರಿಗೂ ಭಾರತೀಯರಿಗೂ ಮಧ್ಯೆ ಒಂದು ಸೇತುವೆಯಂತಿತ್ತು. ಅಲ್ಲಿ ಪ್ರತಿಷ್ಠಾವಂತರಾದ ಯೂರೋಪಿಯನ್ನರೂ ಬಂಗಾಳಿಗಳೂ ಕಲೆತು ಸರಸಲ್ಲಾಪಗಳಲ್ಲಿ ಭಾಗಿಗಳಾಗುತ್ತಿದ್ದರು.

ಅರವಿಂದರು ಹುಟ್ಟುವ ಮೊದಲೆ ಮಾತೆ ಸ್ವರ್ಣಲತಾದೇವಿಗೆ ವಿನಯಭೂಷಣ ಮತ್ತು ಮನಮೋಹನ ಎಂಬಿಬ್ಬರು ಗಂಡುಮಕ್ಕಳಾಗಿದ್ದರು. ಅರವಿಂದರು ಮೂರನೆಯ ಮಗನಾಗಿ ಸಂಭವಿಸಿದರು. ಅವರ ತಮ್ಮ ಬರೀಂದ್ರಕುಮಾರ ಹುಟ್ಟಿದ್ದು ಇಂಗ್ಲೆಂಡಿನಲ್ಲಿ, ಏಳು ವರ್ಷದ ಅರವಿಂದರನ್ನೂ ಅವರ ಅಣ್ಣಂದಿರಿಬ್ಬರನ್ನೂ ವಿದ್ಯಾರ್ಜನೆಯ ಸಲುವಾಗಿ ಅಲ್ಲಿ ಬಿಟ್ಟು ಬರಲು ತಾಯಿ ತಂದೆಯರಿಬ್ಬರೂ ಹೋಗಿದ್ದಾಗ.

ಅರವಿಂದರ ಐದನೆಯ ವರ್ಷದಲ್ಲಿ ಅವರನ್ನು ಅಣ್ಣಂದಿರಿಬ್ಬರೊಡನೆ ಡಾರ್ಜಿಲಿಂಗಿನ ಲೊರೆಟೊ ಕಾನ್‌ವೆಂಟ್‌ಸ್ಕೂಲ್‌ಗೆ ಕಳುಹಿಸಲಾಯಿತು. ಅಲ್ಲಿ ಅವರ ಒಡನಾಡಿಗಳು ಸಹಪಾಠಿಗಳು ಎಲ್ಲರೂ ಯೂರೋಪಿಯನ್‌ಮಕ್ಕಳೆ! ಶಿಕ್ಷಣಮಾಧ್ಯಮ ಇಂಗ್ಲಿಷ್‌! ಸಂಭಾಷಣೆ ಇಂಗ್ಲಿಷಿನಲ್ಲಿ! ಪಾಠಪ್ರವಚನಗಳ ವಿಷಯ ಮತ್ತು ವಿಧಾನಗಳೂ ಇಂಗ್ಲಿಷ್‌! ಸ್ವದೇಶದಲ್ಲಿಯೆ ದೇಶಾಂತರವಾಸ!

ಡಾರ್ಜಿಲಿಂಗ್‌ನಲ್ಲಿ ಎರಡು ಚರ್ಷ ಕಳೆದ ಮೇಲೆ ೧೮೭೯ರಲ್ಲಿ ಶ್ರೀಮತಿ ಸ್ವರ್ಣಲತಾದೇವಿಯೊಡನೆ ಡಾ|| ಕೃಷ್ಣಧನಘೋಷರು ತಮ್ಮ ಮೂವರು ಮಕ್ಕಳನ್ನು ಕರೆದುಕೊಂಡು ಇಂಗ್ಲೆಂಡಿಗೆ ಹೋದರು. ಮ್ಯಾಂಚೆಸ್ಟರ‍್ನಲ್ಲಿ ಒಂದು ಇಂಗ್ಲಿಷ್‌ಮನೆತನದ ಆಶ್ರಯದಲ್ಲಿ ಮೂವರೂ ಮಕ್ಕಳೂ ಪಾಶ್ಚಾತ್ಯ ವಿದ್ಯಾಪ್ರವೀಣರಾಗಲು ನಿಂತರು. ಪ್ರಾಚ್ಯದ ಲಜ್ಜಾಸ್ಪದವಾದ ಯಾವ  ಸಂಪ್ರದಾಯದ ಸೋಂಕೂ ತಗಲದಂತೆ ಮಕ್ಕಳು ಸಂಪೂರ್ಣವಾಗಿ ಪಾಶ್ಚಾತ್ಯವಾದ ವಿದ್ಯೆ ನಾಗರಿಕತೆ ಸಂಸ್ಕೃತಿ ನಡೆನುಡಿ ಆಚಾರವ್ಯಹಾರಗಳಲ್ಲಿಯೆ ಬೆಳೆಯಬೇಕೆಂಬುದು ಕೃಷ್ಣಧನರ  ಆಶಯವಾಗಿತ್ತು.

ಅರವಿಂದರು ಇದ್ದ ಮನೆತನದ ಯಜಮಾನನಿಗೆ ಲ್ಯಾಟಿನ್ ಭಾಷೆ ಚೆನ್ನಾಗಿ ಬರುತ್ತಿದ್ದುದರಿಂದ ಆತನು ಇವರಿಗೆ ಆ ಭಾಷೆಯನ್ನೂ ಹೇಳಿ ಕೊಟ್ಟನು. ನಾಲ್ಕೈದು ವರ್ಷಗಳಲ್ಲಿ ಆ ಮನೆಯವರು ಊರುಬಿಡಬೇಕಾಗಿ ಬಂದುದರಿಂದ ಅರವಿಂದರು ಲಂಡನ್ನಿನ ಸೈಂಟ್ ಪಾಲ್ಸ್ ಸ್ಕೂಲಿಗೆ ಸೇರಿದರು. ಅರವಿಂದರಿಗೆ ಗ್ರೀಕ್‌ಭಾಷೆಯನ್ನು ಚೆನ್ನಾಗಿ ಕಲಿಸಿಕೊಟ್ಟವರು ಆ ಶಾಲೆಯ ಮುಖ್ಯೋಪಾಧ್ಯಾಯರೆ.

ಮತ್ತೂ ಐದು ವರ್ಷಗಳು ಕಳೆದುವು. ಅರವಿಂದರು ಕೇಂಬ್ರಿಡ್ಜ್‌ನ ಕಿಂಗ್ಸ್ ಕಾಲೇಜ್‌ಗೆ ಸೇರಿದರು. ಅವರ ಮೇಧಾಶಕ್ತಿಗೂ ವಿದ್ವತ್ತಿಗೂ ಬಹುಮಾನ ರೂಪವಾಗಿ ವರ್ಷಕ್ಕೆ ಎಂಬತ್ತು ಪೌಂಡಿನ ಒಂದು ವಿಶೇಷ ವಿದ್ಯಾರ್ಥಿವೇತನ ಅವರಿಗೆ ಸಿಕ್ಕಿತು.

ಅರವಿಂದರು ತಮ್ಮ ತರಗತಿಯ ಪಾಠಗಳಿಗಾಗಿ ಹೆಚ್ಚುಕಾಲ ಕಳೆಯುತ್ತಿರಲಿಲ್ಲ. ಕಾಲದ ಬಹುಭಾಗವನ್ನೂ ಇಂಗ್ಲಿಷ್ ಕಾವ್ಯ, ಕಾದಂಬರಿ, ವಿಚಾರ ಸಾಹಿತ್ಯ ಇವುಗಳ ಅಧ್ಯಯನದಲ್ಲಿಯೂ ಫ್ರೆಂಚ್‌ಸಾಹಿತ್ಯ ಮತ್ತು ಯೂರೋಪಿಯನ ಚರಿತ್ರೆಗಳ ಕೂಲಂಕಷವಾದ ಜ್ಞಾನಸಂಪಾದನೆಯಲ್ಲಿಯೂ ವ್ಯಯಿಸುತ್ತಿದ್ದರು. ಕಿಂಗ್ಸ್‌ಕಾಲೇಜಿನಲ್ಲಿರುವಾಗಲೆ ಅವರು ಲ್ಯಾಟಿನ್‌ಮತ್ತು ಗ್ರೀಕ್‌ಕಾವ್ಯಭಾಗಗಳಿಗಿಟ್ಟಿದ್ದ ಬಹುಮಾನಗಳಿಗೆ ಪಾತ್ರರಾದರಂತೆ.

೧೮೯೦ರಲ್ಲಿ ಅರವಿಂದರು ಇಂಡಿಯನ್‌ಸಿವಿಲ್‌ಸರ್ವಿಸ್‌ಪರೀಕ್ಷೆಗೆ ಕುಳಿತು, ಗ್ರೀಕ್‌ಮತ್ತು ಲ್ಯಾಟಿನ್‌ಭಾಷೆಗಳಲ್ಲಿಯೂ ಹಿಂದೆ ಯಾರೂ ಪಡೆಯದಿದ್ದಷ್ಟು ನಂಬರು ಗಳಿಸಿ ಸರ್ವಶ್ಲಾಘನೀಯರಾಗಿ ತೇರ್ಗಡೆ ಹೊಂದಿದರು. ಆದರೆ ಕೊನೆಯಲ್ಲಿ ಕುದುರೆಸವಾರಿಯ ಪರೀಕ್ಷೆಗೆ ತಪ್ಪಿಸಿಕೊಂಡರು. ಸಿವಿಲ್‌ಸರ್ವಿಸಿನ ದಾರಿ ಅವರಿಗೆ ಇಷ್ಟವಾಗದಿದ್ದುದೇ ಹಾಗೆ ಮಾಡಿದುದಕ್ಕೆ ಮುಖ್ಯಕಾರಣವಂತೆ.

ಈ ಮಧ್ಯೆ ಅರವಿಂದರು ಬಹುಮುಖವಾದ ತಮ್ಮ ಅಧಯಯನದಲ್ಲಿ ಮುಂಬರಿಯುತ್ತಿದ್ದರು. ಇಟ್ಯಾಲಿಯನ್‌, ಜರ್ಮನ್‌, ಸ್ಪ್ಯಾನಿಷ್‌ಭಾಷೆಗಳನ್ನು ಅಭ್ಯಾಸಮಾಡಿ ಗಾಯಟೆ, ಡಾಂಟೆ ಇವರ ಕೃತಿಗಳನ್ನು ಮೂಲದಲ್ಲಿ ಓದುವ ಮಟ್ಟಿಗೆ ಪರಿಣಿತರಾದರು. ಅಲ್ಲದೆ ಸಾಧನಪೂರ್ಣವೂ ಸ್ಫೂರ್ತಿದಾಯಕವೂ ಆಗಿದ್ದ ವಿಕ್ಟೋರಿಯಾ ಯುಗದ ಇಂಗ್ಲಿಷ್ ಜೀವನದ ಪೂರ್ಣಪ್ರಭಾವದಿಂದ ರಚಿತವಾದ ಅವರ ವ್ಯಕ್ತಿತ್ವ ವ್ಯೋಮಸಾಹಸಕ್ಕೂ ಗರಿಗೆದರಲು ರೆಕ್ಕೆ ಬಡಿಯತೊಡಗಿತು. ಅದಕ್ಕೆ ಪ್ರೇರಕವಾಗಿಯೊ ಎಂಬಂತೆ ತಂದೆ ಕೃಷ್ಣಧನರು ಒದಗಿಸುತ್ತಿದ್ದ ಧನಸಹಾಯವೂ ಕಡಿಮೆಯಾಯಿತು. ಆದರೂ ವಿದ್ಯಾರ್ಥಿವೇತನದಿಂದಲೂ ಮಿತವ್ಯಯದಿಂದಲೂ ಹೇಗೋ ಬದುಕು ತಳ್ಳುತ್ತಿದ್ದರೂ ಸ್ವಂತ ಸಂಪಾದನೆಯ ಕಡೆಗೂ ಮನಸ್ಸು ಹರಿಯುತ್ತಿತ್ತು.

ಈಗ ಅರವಿಂದರಿಗೆ ವಯಸ್ಸು ಇಪ್ಪತ್ತಾಗಿತ್ತು. ಯೂರೋಪಿಯನ ಹಲವಾರು ಭಾಷೆಗಳಲ್ಲಿ ಅವರು ಪರಿಣಿತರಾಗಿದ್ದಾರೆ. ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ಯಾವ ಸೋಂಕೂ ತಗುಲದಂತೆಯೂ ನೋಡಿಕೊಳ್ಳಲಾಗಿದೆ! ಹೆಚ್ಚೇನು? ಐರೋಪ್ಯ ಸಂಸ್ಕೃತಿಯ ಅಪರಿಮಿತ ಐಶ್ವರ್ಯದ ಅಲಕಾವತಿಯ ಹೆದ್ದಾರಿಯೆ ಅವರ ಸ್ವಾಧೀನವಾಗಿದೆ. ತುಂಬು ತಾರುಣ್ಯ; ತುಂಬಿದ ವಿದ್ವತ್ತು. ಸೌಂದರ್ಯದಲ್ಲಿ ಪ್ರೇಮ; ಆಶಿವದಲ್ಲಿ ಜುಗುಪ್ಸೆ;  ಲೋಕದ ದುಃಖ ದಾರಿದ್ಯ್ರಗಳನ್ನು ತೊಡೆದುಹಾಕುವ ಉತ್ಸಾಹಃ ಲೋಕದ ಆನಂದದಲ್ಲಿ ಭಾಗಿಯಾಗುವ ಉಲ್ಲಾಸ. ಜೊತೆಗೆ, ಅವರ ಹದಿನೈದನೆಯ ವರ್ಷದಿಂದಲೂ ಮೆಲ್ಲಮೆಲ್ಲನೆ ಮೂಡಿ ಅರೆ ಅರಳಿ, ಹೃದಯವನ್ನು ಆಕ್ರಮಿಸಿ, ಅಸೀಮದತ್ತ ಅನಂತದೆಡೆಗೆ ಕೈವೀಸಿ ಕರೆಯುತ್ತಿದ್ದ ಕವಿತಾಕಾಮಿನಿಯ ಹೃದಯಮೋಹಕವಾದ ಸುಂದರ ಕಟಾಕ್ಷ ಸಂಜ್ಞೆಯ ಮಿಂಚಿನಾಹ್ವಾನ!

ಅರವಿಂದರ ಮನಸ್ಸನ್ನು ಮೊದಲು ಸೆಳೆದುದು ತತ್ತ್ವಜ್ಞಾನವಲ್ಲ, ಕಾವ್ಯ ಮತ್ತು ರಾಜಕೀಯ. ಇಂಗ್ಲೆಂಡಿನಲ್ಲಿರುವಾಗಲೆ ಐರ್ಲೆಂಡಿನ ಹೋರಾಟದ ವಿಚಾರವಾಗಿ ಅವರು ಬರೆದ ಕವನದಲ್ಲಿ ತಮ್ಮ ದೇಶದಲ್ಲಿಯೂ ಆಗ ಪ್ರಾರಂಭವಾಗಿದ್ದ ಸ್ವಾತಂತ್ಯ್ರ  ಸಂಗ್ರಾಮದ ಧ್ವನಿಯೂ ಸೇರಿಕೊಂಡಂತಿದೆ. ಆದರೂ ರಾಜಕೀಯಕ್ಕಿಂತಲೂ ಸಾಹಿತ್ಯವೆ ಅವರ ಪ್ರಥಮ ಪ್ರೇಮವಾಗಿತ್ತೆಂದು ಊಹಿಸಬಹುದು. ಇಂಗ್ಲೆಂಡಿನ ಜರ್ಮನಿಯ ಫ್ರಾನ್ಸಿನ ಇಟಲಿಯ ಮತ್ತಿತರ ಹಿರಿಯ ದೇಶಗಳ ಮಹಾಕವಿಗಳ ಜೀವನವೂ ಕೃತಿಗಳೂ ಖ್ಯಾತಿಯೂ ಅವರ ಹೃದಯವನ್ನೂ ಆ ಕನಕವೈಭವದತ್ತ ಸೆಳೆದಿದ್ದುವೆಂದು ತೋರುತ್ತದೆ. ಅವರು ವಿದೇಶದಲ್ಲಿದ್ದಾಗ ಅಲ್ಲಿಯ ಸಾಹಿತ್ಯ ಸಂಸ್ಕೃತಿ ಐತಿಹ್ಯಗಳ ಪ್ರಭಾವಕ್ಕೆ ವಶವಾಗಿ ಕಟ್ಟಿದ್ದ ಕವನಗಳನ್ನು ನೋಡಿದರೆ ಅಂತಹ ಅನುಕರಣಮಾತ್ರ ರಚನೆಯಲ್ಲಿಯೂ ಅವರ ಸಹಜಸ್ವಭಾವ ಸಾಮರ್ಥ್ಯಗಳು ಹೊಳೆಯುತ್ತಿರುವುದನ್ನು ಕಾಣುತ್ತೇವೆ. ಆದರೂ ಅವರು ಭಾರತಕ್ಕೆ ಬಂದಮೇಲೆ ಸ್ವದೇಶದಲ್ಲಿ ಸ್ವಸಂಸ್ಕೃತಿಯ ಸತ್ತ್ವವನ್ನು ಹೀರಿಕೊಂಡ ತರುವಾಯ ಮೂಡಿದ ಅವರ ಕವನಗಳ ಮುಂದೆ ಅವು ಎಷ್ಟು ಕೃತಕ! ಎಷ್ಟು ನೀರಸ! ಆ ಕವನಸಂಗ್ರಹದ ಕೊನೆಯ ಕವನದಲ್ಲಿ[2] ಅವುಗಳ ರಚನೆಗಾಗಿ ಕಳೆದ ಕಾಲ ವ್ಯರ್ಥವಾಯಿತೆಂದೂ ಅವೆಲ್ಲ ಹೆಳವು ಬಡಕಲುಗಳೆಂದೂ ಅವರೇ ಪಶ್ಚಾತ್ತಾಪದಿಂದ ಬೋಳ್ಕೊಂಡಿದ್ದಾರೆ.

ಆದರೆ ವಿಧಿಯ ಉದ್ದೇಶ ಬೇರೆಯಾಗಿತ್ತು. ಯಾವುದು ಮೇಲುನೋಟಕ್ಕೆ ವ್ಯರ್ಥವೆಂದೂ ಅನರ್ಥವೆಂದೂ ತೋರುತ್ತದೆಯೊ ಅದರಿಂದಲೆ ಈಶ್ವರೀಶಕ್ತಿ ತನ್ನ ಮಹತ್ಕಾರ್ಯಸಾಧನೆಗೆ ಅತ್ಯಾವಶ್ಯಕವಾದ ಆಯುಧಗಳನ್ನು ಸಮೆಯುತ್ತಿರುತ್ತದೆ. ಅದನ್ನು ಅರವಿಂದರ ಬದುಕಿನಲ್ಲಿ ಮುಂದೆ ಕಾಣಲಿದ್ದೇವೆ. ಅತಿ ಸಮರ್ಥವಾದ ಯಂತ್ರಶಾಲೆಯಲ್ಲಿ ತನ್ನ ಅದ್ಭುತಾಯುಧ ರಚನೆಯ ಪೂರ್ವಸಿದ್ಧತೆಯೆಲ್ಲ ಮುಗಿದೊಡನೆ ಅದನ್ನು ತನ್ನ ಪ್ರಮುಖ ಸಂಗ್ರಾಮರಂಗಕ್ಕೆ ಸಾಗಿಸುವಂತೆ ವ್ಯೂಹವೊಡ್ಡಿತು, ಆ ಈಶ್ವರೀಶಕ್ತಿ. ೧೮೯೩ರಲ್ಲಿ ಬರೋಡದ ಮಹಾರಾಜರಾಗಿದ್ದ ಸಯ್ಯಾಜಿರಾವ್ ಗಾಯಕವಾಡರು ಲಂಡನ್ನಿಗೆ ಹೋಗಿದ್ದರು. ತರುಣರಾಗಿದ್ದ ಶ್ರೀ ಅರವಿಂದರು ಅವರನ್ನು ಸಂದರ್ಶಿಸಿದರು. ಮೊದಲ ಪರಿಚಯದಿಂದಲೆ ಆಕರ್ಷಿತರಾದ ಮಹಾರಾಜರು ಅವರನ್ನು ತಮ್ಮ ಸಂಸ್ಥಾನದ ಸೇವೆಗೆ ಆಹ್ವಾನಿಸಿದರು. ಅದೇ ವರ್ಷದ ಫೆಬ್ರುವರಿ ತಿಂಗಳಲ್ಲಿ ಶ್ರೀ ಅರವಿಂದರು ಪೂರ್ವ ಪುಣ್ಯಾಭಿಮುಖರಾಗಿ ಹಡಗು ಹತ್ತಿದರು.

ಕ್ರಿ.ಶ. ೧೮೯೩ನೆಯ ಸಂವತ್ಸರದ ಪೂರ್ವಾರ್ಧವು ಭರತಖಂಡದ ಚರಿತ್ರೆಯಲ್ಲಿ ಮಾತ್ರವಲ್ಲ, ಪ್ರಪಂಚದ ಇತಿಹಾಸದಲ್ಲಿಯೂ ಒMದು ಧ್ವನಿಪೂರ್ಣವಾದ ಗಣ್ಯಸ್ಥಾನಕ್ಕೆ ಅರ್ಹವಾಗಿ ಗೌರವಾಸ್ಪದವಾಗಿದೆ. ಆ ವರ್ಷದ ಆ ಆರು ತಿಂಗಳ ಅವಧಿಯಲ್ಲಿಯೆ ಮುಂದೆ ಆಧುನಿಕ ಜಗತ್ತಿನ ಮಹಾವಿಭೂತಿಗಳಾಗಲಿರುವ ಮೂವರು ಮಹದ್ವ್ಯಕ್ತಿಗಳು ತಮ್ಮ ಮತ್ತು ಲೋಕದ ಭವಿಷ್ಯ ಜೀವನವನ್ನೇ ಮಾರ್ಪಡಿಸುವ ಇತ್ಯರ್ಥಕಾರಿ ಘಟನೆಗಳಲ್ಲಿ ತೊಡಗಿರುವುದನ್ನು ಕಾಣುತ್ತೇವೆ. ಮುಂಬಯಿ ಬಂದರೆ ಅದಕ್ಕೆ ವೇದಿಕೆಯಾಯಿತು. ಶ್ರೀ ಅರವಿಂದರು ಪಾಶ್ವಾತ್ಯ ವಿದ್ಯಾ ನಾಗರಿಕತೆ ಸಂಸ್ಕೃತಿಗಳ ಸಾರಸರ್ವಸ್ವರೂಪವಾಗಿ ಹಡಗಿನಿಂದಿಳಿದು ಭರತಖಂಡಕ್ಕೆ ಕಾಲಿಟ್ಟ ಸುಮುಹೂರ್ತದಲ್ಲಿಯೆ ಶ್ರೀಮತ್‌ಸ್ವಾಮಿ ವಿವೇಕಾನಂದರು ಪ್ರಾಚ್ಯವಿದ್ಯಾಸಂಸ್ಕೃತಿಯಲ್ಲಿಯೂ ಆಧ್ಯಾತ್ಮಧರ್ಮತತ್ತ್ವಸಿದ್ಧಿಯಲ್ಲಿಯೂ ಸುಪ್ರತಿಷ್ಠಿತರಾಗಿ ಚಿಕಾಗೋದಲ್ಲಿ ನಡೆಯಲಿರುವ ಸರ್ವಧರ್ಮಸಮ್ಮೇಳನಕ್ಕೆ ಹೋಗುವ ಸಲುವಾಗಿಯೂ, ಮಹಾತ್ಮಾ ಗಾಂಧಿಯವರು ಮೊತ್ತಮೊದಲು ದಕ್ಷಿಣ ಆಫ್ರಿಕಕ್ಕೆ ಹೋಗುವ ಸಲುವಾಗಿಯೂ, ಹಡಗು ಹತ್ತಿರುವುದನ್ನು ಗಮನಿಸಿದರೆ ಅದನ್ನೆಲ್ಲ ಆಕಸ್ಮಿಕ ವ್ಯಾಪಾರವೆಂದು ಕಡೆಗಣಿಸುವುದಕ್ಕಾಗುತ್ತದೆಯೆ? ಆದರೆ ಆಗ ಮನುಷ್ಯರಾರೂ ಗಮನಿಸಲಿಲ್ಲ: ಹಡಗು ಹತ್ತಿ ಇಳಿಯುವ ಸಹಸ್ರಾರು ಪ್ರಯಾಣಿಕರಲ್ಲಿ ಗಾಂಧಿ ವಿವೇಕಾನಂದ ಅರವಿಂದರು ಬರಿಯ ಮೂರು ಮಂದಿ!

ಶ್ರೀ ಅರವಿಂದರು ಸ್ವದೇಶಕ್ಕೆ ಮರಳುವನಿತರಲ್ಲಿ ಒಂದು ತಪ್ಪುಸುದ್ಧಿಯ ದೆಸೆಯಿಂದಾಗಿ ಅವರ ತಂದೆ ಡಾ|| ಕೃಷ್ಣಧನರು ಮೃತರಾದರು. ತಮ್ಮ ಮಗನು ಹತ್ತಿಬರುತ್ತಿದ್ದ ಜಹಜು ಮುಳುಗಿತು ಎಂಬ ವಾರ್ತೆಯಿಂದ ಅವರಿಗೆ ಸಿಡಿಲೆರಗಿದಂತಾಯಿತು. ಆದರೆ ವಿಧಿಯ ಲೀಲೆ! ಮುಳುಗಿದ್ದ ಜಹಜಿನಲ್ಲಿ ಅರವಿಂದರು ಹತ್ತಿರಲಿಲ್ಲ: ಅವರು ಅದರ ತರುವಾಯ ಹೊರಟ ಮತ್ತೊಂದು ಜಹಜಿನಲ್ಲಿ ಪ್ರಯಾಣಮಾಡುತ್ತಿದ್ದರು.

ಬರೋಡ ಸಂಸ್ಥಾನದ ನೌಕರಿಯಲ್ಲಿ ಶ್ರೀ ಅರವಿಂದರು ೧೮೯೩ ರಿಂದ ೧೯೦೬ರವೆರೆಗ ಹದಿಮೂರು ವರ್ಷಗಳನ್ನು ಕಳೆದರು. ಮೊದಮೊದಲು ಸ್ಟಾಂಪು, ರೆವಿನ್ಯೂ, ಸೆಕ್ರಿಟೇರಿಯಟ್ ಇಲಾಖೆಗಳಲ್ಲಿ ಕೆಲಸ ಕಲಿತರಾದರೂ ಕಡೆಗೆ ಬರೋಡ ಕಾಲೇಜಿನಲ್ಲಿ ಫ್ರೆಂಚ್‌ಭಾಷೆಯ ಲೆಕ್ಚರರ್ ಆಗಿ ಕೆಲಸಕ್ಕೆ ಸೇರಿದರು. ಆಮೇಲೆ ಅಲ್ಲಿಯೇ ಇಂಗ್ಲಿಷ್ ಪ್ರೊಫೆಸರ್ ಆದರು. ತರುವಾಯ ವೈಸ್‌ಪ್ರಿನ್ಸಿಪಾಲ್‌ಗದ್ದುಗೆಗೂ ಏರಿದರು. ಒಮ್ಮೊಮ್ಮೆ ಇಂಗ್ಲಿಷ್ ಪತ್ರಗಳನ್ನು ಬರೆಯುವುದರಲ್ಲಿಯೂ ಭಾಷಣಗಳನ್ನು ಸಿದ್ಧಗೊಳಿಸುವುದರಲ್ಲಿಯೂ ಮಹಾರಾಜರಿಗೆ ನೆರವಾಗುತ್ತಿದ್ದರು. ಅವರೊಡನೆ ನೈನಿಟಾಲ್ ಮೊದಲಾದ ಪ್ರದೇಶಗಳಿಗೆ ವಿಹಾರಕ್ಕೂ ಹೋಗಿಬರುತ್ತಿದ್ದುಂಟು. ಸ್ಫುರದ್ರೂಪಿಣಿಯಾಗಿದ್ದ ಶ್ರೀಮತಿ ಮೃಣಾಲಿನೀ ದೇವಿಯನ್ನು ಮದುವೆಯಾಗಿ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದ ಅರವಿಂದರು, ಹೊರಗಣ ನೋಟಕ್ಕೆ ಯೂರೋಪಿಗೆ ಹೋಗಿಬಂದ ಇತರ ಅನೇಕ ಭಾರತೀಯ ಸಾಹೇಬ್ ಜನಗಳಂತೆ ಪ್ರವರ್ಧಮಾನವಾಗುತ್ತಿದ್ದ ಒಬ್ಬ  ಸಮರ್ಥ ಅಧಿಕಾರೀ ಬಾಬುವಿನಂತೆ ತೋರುತ್ತಿದ್ದರೂ, ಬರೋಡೆಯ ಈ ಹದಿಮೂರು ವರ್ಷಗಳು ಇಂಗ್ಲೆಂಡಿನ ಆ ಹದಿಮೂರು ವರ್ಷಗಳಿಗೆ ಸಂವಾದಿಯೆಂಬಂತೆ, ‘ಪಾಶ್ಚಾತ್ಯತ್ವ’ದಲ್ಲಿ ಪರಿಪೂರ್ಣತೆಯನ್ನು ಸಾಧಿಸಿದ್ದ ಅವರ ವಿರಾಟ್ ಚೇತನವನ್ನು ‘ಪ್ರಾಚ್ಯತ್ವ’ದಲ್ಲಿಯೂ ಸರ್ವತೋಮುಖವಾಗಿ ಸಂಪೂರ್ಣವಾಗಿ ಪರಿಪಕ್ವ ಮಾಡುವ ದಿವ್ಯಕಾರ್ಯದಲ್ಲಿ ತೊಡಗಿದ್ದುದನ್ನು ಕಾಣುತ್ತೇವೆ.

ಮೊದಲು ಸ್ವದೇಶಕ್ಕೆ ಮರಳಿದಾಗ ಅರವಿಂದರಿಗೆ ತತ್ತ್ವಶಾಸ್ತ್ರದಲ್ಲಾಗಲಿ ಯೋಗಸಾಧನೆಯಲ್ಲಾಗಲಿ ಆಸಕ್ತಿಯಿರಲಿಲ್ಲ. ಪ್ಲೇಟೋ, ಎಪಿಕ್ಟಿಟಸ್, ಎಪಿಕ್ಯೂರಸ್ ಮೊದಲಾದ ಗ್ರೀಕ್ ತತ್ತ್ವಶಾಸ್ತ್ರಜ್ಞರ ಬರವಣಿಗೆಗಳನ್ನು ತುಸು ಮಟ್ಟಿಗೆ ಓದಿದ್ದರೂ ಸದ್ಯದ ಬದುಕಿಗೂ ಬೆಳವಣಿಗೆಗೂ ಶಕ್ತಿಪೂರ್ವಕವಾಗಿ ನೆರವಾಗದ ತರ್ಕಶಾಸ್ತ್ರೀಯ ಮಾತ್ರವಾದ ತತ್ತ್ವಜಿಜ್ಞಾಸೆಯಲ್ಲಿ ಅವರಿಗೆ ಅಭಿರುಚಿಯಿರಲಿಲ್ಲ. ಅವರು ಯಾವ ತತ್ತ್ವಶಾಸ್ತ್ರದ ಸಕ್ರಮ ಅಧ್ಯಯನವನ್ನು ಮಾಡಿರಲಿಲ್ಲ. ಯೂರೋಪಿಯನ ತತ್ತ್ವಶಾಸ್ತ್ರಗಳಲ್ಲಿಯೂ ಅವರಿಗಿದ್ದ ಜ್ಞಾನ ಇತರ ಅಪ್ರವೀಣ ವಿದ್ಯಾವಂತರ ಜ್ಞಾನಕ್ಕಿಂತ ವಿಶೇಷವಾದುದಾಗಿರಲಿಲ್ಲ. ಭಾರತೀಯ ದಾರ್ಶನಿಕ ಸಿದ್ಧಾಂತಗಳನ್ನು ಬಹು ಸ್ಥೂಲವಾಗಿ ಪರಿಚಯ ಮಾಡಿಕೊಂಡಿದ್ದರು. ಅವರಿಗೆ ಭಾರತೀಯ ‘ಆಧ್ಯಾತ್ಮ’ದ ಮೊತ್ತಮೊದಲ ಪರಿಚಯವಾದದ್ದು ಶ್ರೀ ರಾಮಕೃಷ್ಣ ಪರಮಹಂಸರ ವಚನಾಮೃತದಲ್ಲಿ ಮತ್ತು ಸ್ವಾಮಿ ವಿವೇಕಾನಂದರ ಭಾಷಣ ಲೇಖನಗಳಲ್ಲಿ. ಶ್ರೀ ವಿವೇಕಾನಂದರಲ್ಲಿ ಅವರಿಗಿದ್ದ ಗೌರವ ಅಸೀಮವಾಗಿತ್ತು; ಮತ್ತು ಶ್ರೀ ರಾಮಕೃಷ್ಣ ಪರಮಹಂಸರಲ್ಲಿ ಅದಕ್ಕಿಂತಲೂ ಸುಗುಭೀರವಾದ ಪೂಜ್ಯಭಾವನೆಯಿತ್ತು.[3] ಅನುಭವಮೂಲವಾದ ಆಧ್ಯಾತ್ಮದಲ್ಲಿಯೂ ಆಧ್ಯಾತ್ಮಿಕವಾದ ಅನುಭವಗಳಲ್ಲಿಯೂ ಅವರಿಗೆ ವಿಶೇಷ ಆಸಕ್ತಿಯಿತ್ತು. ಏಕೆಂದರೆ ಇಂಗ್ಲೆಂಡಿನಲ್ಲಿದ್ದಾಗಲೂ, ಅಲ್ಲಿಗಿಂತಲೂ ಹೆಚ್ಚಾಗಿ ಭರತ ವರ್ಷಕ್ಕೆ ಬಂದಮೇಲೂ, ಅವರಿಗೆ ಕೆಲವು ಅಸಾಮಾನ್ಯ ಅನುಭವಗಳಾಗಿದ್ದುವು. ಆದರೆ ಆ ಸ್ವಾನುಭವಗಳಿಗೂ ಯೋಗಕ್ಕೂ ಯಾವ ಸಂಬಂಧಕಲ್ಪನೆಯನ್ನೂ ಮಾಡಿರಲಿಲ್ಲ. ಯೋಗದ ವಿಚಾರವಾಗಿ ಅವರಿಗೇನೂ ತಿಳಿದಿರಲಿಲ್ಲ ಮಾತ್ರವಲ್ಲ, ಅದು ಜೀವನ ವಿಮುಖತೆಯನ್ನು ಬೋಧಿಸುತ್ತದೆ ಎಂಬ ತಪ್ಪುಕಲ್ಪನೆಯಿಂದ ತಿರಸ್ಕರಿಸುತ್ತಲೂ ಇದ್ದರಂತೆ!

ಅಂತೂ ಬರೋಡೆಯಲ್ಲಿದ್ದ ಹದಿಮೂರು ವರ್ಷಗಳಲ್ಲಿ ಸಂಸ್ಕೃತ, ಬಂಗಾಳಿ, ಗುಜರಾತಿ, ಮರಾಠಿ ಭಾಷೆಗಳನ್ನು ಕಲಿತರು. ಪ್ರಾಚೀನ ಮಹಾಋಷಿಗಳ ಮತ್ತು ಮಹಾಕವಿಗಳ ಮಾನಸಸರೋವರಗಳಲ್ಲಿ ತಮ್ಮ ಹೃದಯತೃಷ್ಣೆ ಇಂಗುವಂತೆ ರಸಪಾನಮಾಡಿದರು. ಭರ್ತೃಹರಿಯ ‘ನೀತಿಶತಕ’ವನ್ನೂ ಕಾಳಿದಾಸನ ‘ವಿಕ್ರಮೋರ್ವಶೀಯ’ ‘ಋತುಸಂಹಾರ’ಗಳನ್ನೂ ಇಂಗ್ಲಿಷಿಗೆ ಭಾಷಾಂತರಿಸಿದರು. ವಾಲ್ಮೀಕಿ ವ್ಯಾಸ ಕಾಳಿದಾಸರು ಡಾಂಟೆ ಹೋಮರ್ ಷೇಕ್ಸ್‌ಪಿಯರುಗಳ ಸ್ಥಾನವನ್ನು ಆಕ್ರಮಿಸಿದರು. ಮಾತೃಹೃದಯದ ಅನರ್ಘ್ಯ ಐಶ್ವರ್ಯದ ಪರಿಚಯ ಹೆಚ್ಚಿದಂತೆಲ್ಲ ಮುಂದೆ ಮುಂದೆ ನುಗ್ಗಿ ಕೊನೆಗೆ ಶ್ರೀ ಅರವಿಂದರು ಭಾರತೀಯ ವಿದ್ಯಾಸಂಸ್ಕೃತಿ ದರ್ಶನಗಳ ಉತ್ತುಂಗ ಶಿಖರಗಳ ಹಿಮಾಲಯ ವೇದಿಕೆಗೂ ಏರಿ ನಿಂತರು.

ಬರೋಡೆಯಲ್ಲಿ ಶ್ರೀ ಅರವಿಂದರು ಯಾವುದು ಹುಟ್ಟಿನಿಂದಲೆ ತಮ್ಮದಾಗಿದ್ದಿತೋ ಮತ್ತು ಈ ನಡುವೆ ಯಾವುದನ್ನು ಕಳೆದುಕೊಂಡಿದ್ದರೋ ಆ ತಮ್ಮತನವನ್ನು ಮತ್ತೆ ಪಡೆಯುತ್ತಿದ್ದ ಆ ಕಾಲವಂತೂ ಭರತಖಂಡದಲ್ಲಿ ಇತಿಹಾಸದಲ್ಲಿ ಅತಿ ಮಹತ್ತಾದುದಾಗಿತ್ತು. ಯಾವ ಸ್ವಸಂಸ್ಕೃತಿಯನ್ನು ಸ್ವಧರ್ಮವನ್ನೂ ಸ್ವಭಾವವನ್ನೂ ಸ್ವಸ್ವರೂಪವನ್ನೂ ತಮ್ಮ ವ್ಯಷ್ಟಿಜೀವನದಲ್ಲಿ ಉತ್ಥಾನಗೊಳಿಸಲು ಅವರು ಅನುಸಂಧಾನತತ್ಪರರಾಗಿದ್ದರೋ ಆ ಧರ್ಮದೇವತೆ ಭರತ ವರ್ಷದ ಸಮಷ್ಟಿಜೀವನದಲ್ಲಿ ಆಗಾಗಲೆ ಆವಿರ್ಭೂತೆಯಾಗಿ ತನ್ನ ಚಿತ್ತತಪಸ್ಸಿನಿಂದ ಜನಹೃದಯದ ಚೈತನ್ಯ ಸಮುದ್ರದಲ್ಲಿ ಪ್ರಪ್ರಚಂಡವಾದ ತರಂಗಗಳನ್ನು ಎಬ್ಬಿಸಿದ್ದಳು. ಒಂದು ಕಡೆ ಸ್ವಾತಂತ್ಯ್ರ ಸಂಗ್ರಾಮಕ್ಕೆ ಪೂರ್ವಸಿದ್ಧತಾರೂಪವಾದ ರಾಜಕೀಯ ಕಾರ್ಯಕಲಾಪಗಳು ನಡೆಯುತ್ತಿದ್ದರೆ ಮತ್ತೊಂದು ಕಡೆ ಎಲ್ಲ ಉತ್ಥಾನಕ್ಕೂ ಮೂಲ ಶಕ್ತಿಸ್ವರೂಪವಾದ ಆಧ್ಯಾತ್ಮಿಕ ತೇಜಸ್ಸಿನ ಆವಿರ್ಭಾವನೆಗೆ ಸ್ವಾಮಿ ವಿವೇಕಾನಂದರಂತಹ ವಿಭೂತಿಗಳು ಕ್ರತುಕಾರ್ಯದಲ್ಲಿ ದೀಕ್ಷಿತರಾಗಿದ್ದರು. ಆ ದೈವೀಶಕ್ತಿಯ ಪ್ರಭಾವಕ್ಕೆ ಸಿಲುಕದಿರಲು ಅತ್ಯಂತ ಜಡರಿಗಲ್ಲದೆ ಅನ್ಯರಿಗೆ ಸಾಧ್ಯವಾಗುವಂತೆಯೆ ಇರಲಿಲ್ಲ. ವಿವೇಕಾನಂದರ ತರುವಾಯ ರಾಜಕೀಯ ರಂಗದಲ್ಲಿಯೆ ಆಗಲಿ, ಇತರ ಯಾವ ರಂಗದಲ್ಲಿಯೆ ಆಗಲಿ, ಸುಪ್ರಸಿದ್ದರಾಗಿಯಾಗಲಿ ಅಪ್ರಸಿದ್ದರಾಗಿಯಾಗಲಿ ಕಾರ್ಯಸಾಧನೆ ಮಾಡಿದ ಎಲ್ಲ ವ್ಯಕ್ತಿಗಳೂ ಶ್ರೀ ರಾಮಕೃಷ್ಣ ವಿವೇಕಾನಂದರ ಆತ್ಮಶ್ರೀಗೆ ಋಣಿಗಳಾಗಿರುವುದನ್ನು ಕಾಣುತ್ತೇವೆ. ಇನ್ನು ಶ್ರೀ ಅರವಿಂದರಂತಹರು ಅದರ ದಿವ್ಯಪ್ರಯೋಜನದಿಂದ ವಂಚಿತರಾಗುತ್ತಾರೆಯೆ?

ಶ್ರೀ ಅರವಿಂದರು ಸ್ವದೇಶಕ್ಕೆ ಮರಳಿದ ೧೮೯೩ನೆಯ ಸಂವತ್ಸರದ ಸೆಪ್ಟೆಂಬರ್ ತಿಂಗಳಿನಲ್ಲಿ ಶ್ರೀ ವಿವೇಕಾನಂದರು ಚಿಕಾಗೋ ನಗರದ ಸರ್ವಧರ್ಮ ಸಮ್ಮೇಳನದಲ್ಲಿ ಭಾರತೀಯವಾದ ಆರ್ಷೇಯ ದರ್ಶನದ ಸರ್ವವರ್ಣಗ್ರಾಸಿಯಾದ ಶ್ವೇತ ಧ್ವಜವನ್ನು ನಭಕ್ಕೆತ್ತಿ ಜಗತ್ತನ್ನು ಬೆರಗುಗೊಳಿಸಿದರು. ಭಾರತೀಯರ ಮೇಲೆ ಅದರ ಪರಿಣಾಮ ಏನಾಯಿತೆಂಬುದು ಈಗಾಗಲೆ ನಿರ್ವವಿದಿತವಾದ ಇತಿಹಾಸ ವಿಷಯವಾಗಿದೆ.[4] ಅಲ್ಲದೆ ೧೮೯೭ರಲ್ಲಿ ಸ್ವಾಮಿ ವಿವೇಕಾನಂದರು ಸ್ವದೇಶಕ್ಕೆ ಹಿಂತಿರುಗಿ ಬಂದು, ಕೊಲಂಬೋದಿಂದ ಆಲ್ಮೋರದವರೆಗೂ ತಮ್ಮ ಜಿವ್ಹಾಗ್ನಿಯಿಂದ ದೇಶದ ಚೇತನದಲ್ಲಿ ಶಕ್ತಿಯನ್ನೂ ಧೈರ್ಯವನ್ನೂ ಆತ್ಮಗೌರವವನ್ನೂ ಪೋಜ್ವಲಗೊಳಿಸಿದರು. ಆ ಭಾಷಣಗಳಿಂದಲೂ ಲೇಖನಗಳಿಂದಲೂ ತಮ್ಮ ಹೃದಯಪ್ರದೀಪಗಳನ್ನು ಹೊತ್ತಿಸಿಕೊಂಡ ಅಸಂಖ್ಯೇಯರಲ್ಲಿ ಶ್ರೀ ಅರವಿಂದರೂ ಒಬ್ಬರು.

ಒಬ್ಬರು; ಆದರೆ, ಅದೆಂತಹ ಒಬ್ಬರು!

“ಅವರ ಒಂದು ಪತ್ರದ ಸಾರಾಂಶ ಹೀಗಿದೆ:

“ನಾನು ನನ್ನ ಯೋಗಸಾಧನೆಯನ್ನು ಪ್ರಾರಂಭಿಸಿದ್ದು ೧೯೦೪ರಲ್ಲಿ. ಆಗ ನನಗೆ ಯಾವ ಮನುಷ್ಯಗುರುವೂ ಇರಲಿಲ್ಲ. ನಾಲ್ಕು ವರ್ಷಗಲ ತರುವಾಯ ಎಂದರೆ ೧೯೦೮ರಲ್ಲಿ ಮಹಾರಾಷ್ಟ್ರ ಯೋಗಿಯೊಬ್ಬನಿಂದ ಬಹು ಮುಖ್ಯವಾದ ಸಹಾಯ ದೊರೆಯಿತು. ಆಗ ನನ್ನ ಸಾಧನೆಯ ಮೂಲಸ್ವರೂಪವನ್ನು ಕಂಡುಕೊಂಡೆ. ಅಲ್ಲಿಂದ ಮುಂದೆ, ‘ತಾಯಿ’ ಭರತ ಖಂಡಕ್ಕೆ ಬರುವವರೆಗೂ ಮತ್ತಾರಿಂದಲೂ ನನ್ನ ಸಾಧನೆಗೆ ಸಹಾಯ ದೊರೆಯಲಿಲ್ಲ. ಹಿಂದೆಯೂ ಆಮೇಲೆಯೂ ನನ್ನ ಸಾಧನೆಗೆ ಸಹಾಯ ದೊರೆತುದು ಪುಸ್ತಕಗಳಿಂದಲ್ಲ; ನನ್ನ ಅಂತಃಕರಣದಲ್ಲಿ ಮೇಲಿಂದ ಮೇಲೆ ಮೂಡಿ ನುಗ್ಗಿಬರುತ್ತಿದ್ದ ಸ್ವಾನುಭವಗಳಿಂದ. ಅದರೆ ನಾನು ಜೈಲಿನಲ್ಲಿದ್ದಾಗ ನನ್ನ ಬಳಿ ‘ಗೀತೆ’ ’ಉಪನಿಷತ್ತು’ ಇದ್ದುವು, ಏನಾದರೂ ಪುಸ್ತಕಸಹಾಯ ಪಡೆದಿದ್ದರೆ ಅವುಗಳಿಂದ ಮಾತ್ರ ಪಡೆದಿದ್ದೇನೆ. ಭಗವದ್‌ಗೀತೆಯಿಂದ ನನ್ನ ಯೋಗಸಾಧನೆಗೂ ಉಪನಿಷತ್ತುಗಳಿಂದ ನನ್ನ ಧ್ಯಾನಕ್ಕೂ ಮಾರ್ಗದರ್ಶನ ಒದಗಿದೆ. ಕೆಲಕಾಲದ ಅನಂತರ ನಾನು ಪಾಂಡುಚೇರಿಯಲ್ಲಿ ವೇದಗಳನ್ನು ಅಭ್ಯಸಿಸಲು ತೊಡಗಿದಾಗ ನನಗೆ ಆಗಲೆ ಆಗಿದ್ದ ಅನುಭವಗಳಿಗೆ ಅವುಗಳಿಂದ ಸಮರ್ಥನೆ ದೊರಕಿತೇ ಹೊರತು ಹೇಳಿಕೊಳ್ಳುವಂತಹ ಮಾರ್ಗದರ್ಶನವೇನೂ ದೊರೆಯಲಿಲ್ಲ… ಇನ್ನೊಂದು ವಿಷಯ. ನಾನು ಜೈಲಿನಲ್ಲಿ ಇದ್ದಾಗ ಸುಮಾರು ಹದಿನೈದು ದಿನಗಳು ಎಡೆಬಿಡದೆ ಶ್ರಿ ವಿವೇಕಾನಂದರ ವಾಣಿ ನನ್ನ ಧ್ಯಾನದ ಕಿವಿಗಳಿಗೆ ಒಂದೇ ಸಮನಾಗಿ ಕೇಳಿಸುತ್ತಿತ್ತು. ಅಲ್ಲದೆ ಅವರ ಸಾನ್ನಿಧ್ಯವೂ ನನ್ನ ಅನುಭವಕ್ಕೆ ಸುಸ್ಪಷ್ಟವಾಗಿ ಗೋಚರವಾಗಿತ್ತು. ಆ ವಾಣಿ ಯೋಗಾನುಭವದ ಒಂದು ಬಹು ಮುಖ್ಯ ಕ್ಷೇತ್ರವನ್ನು ಮಾತ್ರ ಕುರಿತು ನನಗೆ ಉಪದೇಶ ಕೊಡುತ್ತಿತ್ತು. ಆ ಕ್ಷೇತ್ರದ ವಿಚಾರವಾಗಿ ಹೇಳಬೇಕಾದುದನ್ನೆಲ್ಲ ಹೇಳಿಯಾದ ಮೇಲೆ ಅದು ನಿಂತು ಹೋಯಿತು.”[5]

ಶ್ರೀ ಅರವಿಂದರ ಜೀವನವನ್ನು ಸಮೀಕ್ಷಿಸಿದರೆ ಅವರು ಕಾವ್ಯಾನುಭವದ ಮಾರ್ಗವಾಗಿಯೆ ಯೋಗಾನುಭವಕ್ಕೆ ಕಾಲಿಟ್ಟರೆಂಬುದು ಸ್ಪಷ್ಟವಾಗುತ್ತದೆ. ಅವರು ಕವಿಮಾತ್ರರಾಗಿದ್ದಾಗಲೆ ಅಪ್ರಯತ್ನವಾಗಿಯೆ ಅನೇಕಾನುಭವಗಳನ್ನು ಪಡೆದಿದ್ದರು. ಆದರೆ ಮಹಾರಾಷ್ಟ್ರದ ಯೋಗಿ ಲೇಲೆಯ ಸಹಾಯದಿಂದ ಆತನ ಸಾನ್ನಿಧ್ಯದಲ್ಲಿ ಸಕ್ರಮ ಸಾಧನೆಗೆ ಮೊದಲುಮಾಡಿದ ಮೂರು ದಿನಗಳಲ್ಲಿಯೆ ಅವರಿಗೆ ‘ನಿರ್ವಿಕಲ್ಪಾನುಭವ’ ಸಿದ್ಧಿಸಿತಂತೆ.[6] ಆ ‘ಬ್ರಹ್ಮ ಸತ್ಯಂ ಜಗನ್ಮಿಥ್ಯಾ’ ಪ್ರಜ್ಞಾಸ್ಥಿತಿಯ ನಿಸ್ತರಂಗ ನಿರ್ವಿಕಾರ ನಿರ್ಗುಣಶಾಂತಿ ಅವರನ್ನು ಸಂಪೂರ್ಣವಾಗಿ ವ್ಯಾಪಿಸಿತು. ಅವರು ಉಪನ್ಯಾಸ, ಬರೆಹ, ವಾದ ವಿವಾದ ಮೊದಲಾದ ರಾಜಕೀಯ ಕಾರ್ಯಗಳಲ್ಲಿ ತೊಡಗಿದ್ದಾಗಲೂ ಆ ಅನುಭವ ಸರ್ವದಾ ಅವರ ಅಂತರಂಗದ ಭಿತ್ತಿಯಾಗಿರುತ್ತಿತ್ತು. ಬೊಂಬಾಯಿ ನಗರದಲ್ಲಿ ಅವರು ರಾಜಕೀಯವಾದ ಚಟುವಟಿಕೆಗಳಲ್ಲಿ ತೊಡಗಿದ್ದಾಗಲೆ ಅವರಿಗೆ ಸಿದ್ಧಿಯಾದ ಆ ಅನುಭವವನ್ನು ‘ನಿರ್ಮಾಣ’ ಎಂಬ ಒಂದು ಅದ್ಭುತವಾದ ಕವನ[7]ದಲ್ಲಿ ನಿರೂಪಿಸಿದ್ದಾರೆ.

 

 


[1] ಇದೇ ಲೇಖಕನ ‘ಪೂರ್ಣದೃಷ್ಟಿಗೆ ಗಾಂಧೀಜಿ’ ಮತ್ತು ‘ಕವಿ ರವೀಂದ್ರರು’ ಎಂಬ ಲೇಖನಗಳನ್ನೂ ‘ಸ್ವಾಮಿ ವಿವೇಕಾನಂದ’ ಮತ್ತು ಶ್ರೀ ರಾಮಕೃಷ್ಣ ಪರಮಹಂಸ ಎಂಬ ಗ್ರಂಥಗಳನ್ನೂ ನೋಡಿ.

[2] Songs to myrtilla: `Envoi’ —
Pale poems, weak and few. who vainly use
Your wings towards the unattainable spheres,
Offspring of the Divine Hellenic Muse.
Poor maimed children born of six disastrous years!
Depart and live for seasons many or few
If live you may, but stey not here to pain
My heart with hopeless passion and renew
Visions of beauty that my lips shall never attain.

[3] ಶ್ರೀ ಅರವಿಂದರ ರಾಜಕೀಯವಾದ ಭಾಷಣಗಳನ್ನು ಓದಿದವರಿಗೆ ಆ ಭಾಷಣಗಳಲ್ಲಿ ಸ್ವಾಮಿ ವಿವೇಕಾನಂದರ ವಾಣಿಯ ಪ್ರತಿಧ್ವನಿ ಎಷ್ಟು ಸ್ಪಷ್ಟವಾಗಿ ಕೇಳಿಸುತ್ತದೆ ಎಂಬುದನ್ನು ಗಮನಿಸದಿರುವುದಕ್ಕೆ ಆಗುವುದಿಲ್ಲ. ಅಲ್ಲದೆ ಶ್ರೀ ಅರವಿಂದರ ಬರವಣಿಗೆಗಳಲ್ಲಿ ಪತ್ರಗಳಲ್ಲಿ ಶ್ರೀ ರಾಮಕೃಷ್ಣರ ಹೆಸರೂ ಮಾತುಕತೆಗಳ ನಿದರ್ಶನಗಳೂ ಮತ್ತೆ ಮತ್ತೆ ಬರುವುದನ್ನು ವಾಚಕರು ಗಮನಿಸಬಹುದು.

[4] ಕುವೆಂಪು ಅವರ ‘ಶ್ರೀ ರಾಮಕೃಷ್ಣ ಪರಮಹಂಸ’ ಮತ್ತು ‘ಸ್ವಾಮಿ ವಿವೇಕಾನಂದ’ ಎಂಬ ಎರಡು ಗ್ರಂಥಗಳನ್ನು ನೋಡಿ.

[5] ಸ್ವಾಮಿ ವಿವೇಕಾನಂದರು ಇದಕ್ಕೆ ಮೊದಲೇ ೧೯೦೨ರಲ್ಲಿ ದೇಹತ್ಯಾಗ ಮಾಡಿದ್ದರು.

[6] ‘ಶ್ರೀ ರಾಮಕೃಷ್ಣ ಪರಮಹಂಸ’-ಕುವೆಂಪು, ‘ಜೈನಯಾತ್ರೆ’ಯನ್ನು ನೋಡಿ.

[7] Only the illimitable Permanent
Is here. A Peace Stupendous. featureless. still
Replaces all.-what once was I. in it
A silent unnamed emptiness content
Either to fade in the Unknowable
Or thrill with the luminous seas of the Infinite.

[8] ‘ಶ್ರೀ ರಾಮಕೃಷ್ಣ ಪರಮಹಂಸ’-ಕುವೆಂಪು ‘ಅನಂತರ’ ಎಂಬ ಅಧ್ಯಾಯವನ್ನು ನೋಡಿ.

[9] ಕುವೆಂಪು ಅವರ ‘ಬಲಿದಾನ’ ನಾಟಕದ ೨ನೆಯ ದೃಶ್ಯವನ್ನು ನೋಡಿ.

[10] ಅವರು ಶರೀರ ತ್ಯಾಗಮಾಡುವುದಕ್ಕೆ ಮೊದಲೆ ಈ ಎಲ್ಲ ಸಂಕಲ್ಪಗಳೂ ಸಿದ್ಧಿಯಾಗಿರುವುದನ್ನು ನಾವು ಗಮನಿಸಬೇಕು.

[11] ಕುವೆಂಪು ಅವರ ‘ಅಗ್ನಿಹಂಸ’ ಎಂಬ ಕವನಸಂಗ್ರಹದಲ್ಲಿರುವ ಫ್ರಾನ್ಸಿಸ್ ಥಾಮ್‌ಸನ್‌ಕವಿಯ ‘The Hound of Heaven’ ಕವನದ ಕನ್ನಡ ರೂಪಾಂತರವಾದ ‘ದೇವಕೇತು’ ಎಂಬ ಕವನವನ್ನು ನೋಡಿ.

[12] ‘ಉತ್ತರಪರ ಭಾಷಣದಿಂದ.’

[13] ಆ ದೇವದೂತನು ದಕ್ಷಿಣ ಆಫ್ರಿಕದ ಕುಲುಮೆಯಲ್ಲಿ ಹದಗೊಂಡು ಸಿದ್ಧನಾಗುತ್ತಿದ್ದನಲ್ಲವೆ?

[14] ‘Thought the Paraclete’, ‘Transformation’, ‘Shiva’, ‘The bird of Fire’, ‘The heavens’, ಮತ್ತು ‘Jivanmukta’ ಎಂಬ ಕವನಗಳಲ್ಲಿ.

[15] ಅದರ ಮಹೋದ್ದೇಶವನ್ನು ಕುರಿತ ಪರಿಚಯವನ್ನೂ ವಿವರಗಳನ್ನೂ ಈ ಲೇಖಕರು ಮುಂದೆ ಬರೆಯಬೇಕೆಂದಿರುವ ಬರಹಗಳಲ್ಲಿ ಓದುಗರು ನಿರೀಕ್ಷಿಸಬಹುದು. ‘ಆರ್ಯ’ ಪತ್ರಿಕೆಯ ಸಾಗರದಿಂದ ಉದ್ಭವಿಸಿರುವ ಹಿಮಾಲಯಗಳೆಂದರೆ ಇವು: (೧) The Life Divine. (೨) The Synthesis of Yoga. (೩) The Secret of the Veda. (೪) Essays on the Gita. (೫) The Psychology of Social Development. (೬) The Ideal of Human Unity. (೭) The Future Poetry. (೮)  A defence of Indian Culture.

[16] ‘Savitri-A Legend and a Symbol’ ಎಂಬ ಅವರ ಮಹಾಕಾವ್ಯ (Epic) ಇನ್ನೂ ಪೂರ್ತಿಯಾಗಿ ಹೊರಬಿದ್ದಿಲ್ಲ, ಅದು ಕಾವ್ಯಲೋಕಕ್ಕೆ ಒಂದು ನೂತನ ಪ್ರಪಂಚವನ್ನೆ ಗೆದ್ದುಕೊಡುವುದರಲ್ಲಿ ಸಂದೇಹವಿಲ್ಲ. -ಈಗ ಹೊರಬಂದಿದೆ.

[17] ಸುಮಾರು ಎಂಟೊಂಬತ್ತು ವರ್ಷಗಳ ಕಾಲ ದಿನಕ್ಕೆ ಎಂಟು ಹತ್ತು ಗಂಟೆಗಳಂತೆ ಪ್ರತಿದಿನವೂ ಪತ್ರಗಳನ್ನು ಬರೆದಿದ್ದಾರಂತೆ. ಅವುಗಳಲ್ಲಿ ಕೆಲವೇ ಕೆಲವು ಭಾಗಗಳು ಈಗಾಗಲೆ ಮೂರು ದೊಡ್ಡ ಸಂಪುಟಗಳಲ್ಲಿ ಅಚ್ಚಾಗಿವೆ.

[18] Only to bring God’s forces to waiting Nature.
To help with wide-winged peace her tormented labour
And heal with joy her ancient sorrows.
Casting down light on the inconscient darkness.
He acts and lives….(Jivanmukta)

[19] ಶ್ರೀ ಅರವಿಂದರು ದೇಹತ್ಯಾಗಮಾಡಿದ ಹದಿಮೂರನೆಯ ದಿನ ಪ್ರಾತಃಕಾಲ ಅವರು ‘ತಾಯಿ’ಯವರಿಗೆ ಇತ್ತ ಭರವಸೆಯೂ ಇದನ್ನೇ ಪೋಷಿಸುತ್ತದೆ.