ಕವಿ-ವ್ಯಕ್ತಿ

ಕೃತಿಗೆ ನೇರವಾದ ಸ್ಪಷ್ಟವಾದ ಕಾರಣ ಕವಿ; ಆದುದರಿಂದ ಕೃತಿ ಪರಿಶೀಲನೆಯಲ್ಲಿ ಕವಿಯ ಕಾಲ-ದೇಶ-ಪರಿಸರಗಳನ್ನು ಗಣನೆಗೆ ತೆಗೆದುಕೊಳ್ಳುವಂತೆ, ಕವಿಜೀವನದ ವೈಯಕ್ತಿಕ ವಿವರಗಳನ್ನೂ ಎಣಿಕೆಗೆ ತೆಗೆದುಕೊಳ್ಳುವ ಪ್ರಯತ್ನ ಪಾಶ್ಚಾತ್ಯ ವಿಮರ್ಶೆಯ ಇತ್ತೀಚಿನ ವಿಧಾನಗಳಲ್ಲಿ ಒಂದು. ಕವಿಯ ವೈಯಕ್ತಿಕವಾದ ಹಂಬಲಗಳು, ಆದರ್ಶಗಳು, ಅವನ ಬದುಕಿನಲ್ಲಿ ಬರುವ ಏರಿಳಿತಗಳು, ಅವನೊಂದಿಗೆ ಸಂಪರ್ಕವನ್ನಿರಿಸಿಕೊಂಡ ಮತ್ತು ಹೆಣೆದುಕೊಂಡ ವ್ಯಕ್ತಿಗಳ ಪ್ರೀತಿ ವಿಶ್ವಾಸ ಪ್ರಣಯಗಳ ಪರಿಣಾಮ, ಇತ್ಯಾದಿಗಳಿಂದ ಅವನ ಕೃತಿಯ ಕೆಲವು ಭಾಗಗಳನ್ನು ವಿಮರ್ಶಿಸಲು ಸಾಧ್ಯವಾಗುವುದೆಂಬ ಭಾವನೆ ಅಂಥ ವಿಮರ್ಶೆಯಲ್ಲಿ ಪ್ರಧಾನವಾಗಿದೆ. ಸುದೈವದಿಂದಲೋ, ದುರ್ದೈವದಿಂದಲೋ ನಮ್ಮ ಜನ ಮೊದಲಿನಿಂದಲೂ ಕವಿಗಳ ಕೃತಿಗಳ ಬಗೆಗೆ ಮಾತ್ರ ಮನಸ್ಸು ಕೊಟ್ಟರೇ ಹೊರತು, ಕವಿಜೀವನದ ವಿಚಾರದಲ್ಲಿ ಕುತೂಹಲವನ್ನಾಗಲೀ, ಅದನ್ನು ಬರೆದಿಡಬೇಕೆನ್ನುವ ಆಸಕ್ತಿಯನ್ನಾಗಲೀ ತಾಳಿದಂತೆ ತೋರುವುದಿಲ್ಲ. ಹೀಗಾಗಿ ಕವಿಜೀವನದ ಚಿತ್ರ ಅಪೂರ್ವಕ್ಕೆ ಅವನೇ ಹೇಳಿಕೊಂಡ ಒಂದೆರಡು ಮಾತಿನಿಂದ ಸೂಚಿತವಾಗಬಹುದೇ ಹೊರತು, ಅವನ ನಿತ್ಯ ಜೀವನ ಹೇಗಿತ್ತು, ಅದರ ಸಮಸ್ಯೆಗಳೇನು, ಸ್ವಾರಸ್ಯಗಳೇನು ಎನ್ನುವುದು ನಮಗೆ ತಿಳಿಯುವುದಿಲ್ಲ.[೧.    ನಮ್ಮ ಹಳಗನ್ನಡ ಕವಿಗಳು ಕಾವ್ಯಾರಂಭದಲ್ಲಿ ತಮ್ಮ ಸ್ವಂತ ವಿಷಯಗಳನ್ನು ಹೇಳಿಕೊಂಡಿದ್ದಾರೆ. ಆದರೆ ಅದು ಬಹುಮಟ್ಟಿಗೆ ಐತಿಹಾಸಿಕವಾದುದು. ಆದರೂ ಪಂಪ, ರನ್ನ, ಜನ್ನರಂಥ ಹಲವು ಕವಿಗಳು ತಮ್ಮ ವೈಯಕ್ತಿಕವಾದ ವಿಚಾರಗಳನ್ನು ಅಭಿರುಚಿ ಹಾಗೂ ಸಾಮರ್ಥ್ಯಗಳ ಅಗ್ಗಳಿಕೆಯನ್ನೂ ತಾವೇ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.] ಇದರ ಮೇಲೆ ನಾಲ್ಕು ದಿನ ಇದ್ದು ಮರೆಯಾಗುವ ಲೋಕವ್ಯಕ್ತಿ ಹಾಗೂ ಅವನ ಜೀವನದ ವಿವರಗಳಿಗಿಂತ, ಕಾವ್ಯದಲ್ಲಿ ನೆಲೆಗೊಂಡ ಶಾಶ್ವತ ವ್ಯಕ್ತಿತ್ವ ಮತ್ತು ಜೀವನದರ್ಶನ ಇವು ಮುಖ್ಯ ಎಂದು ಅವರು ಭಾವಿಸಿರಬೇಕು. ಇದರಿಂದಾಗಿ ಕವಿಗಳ ಜೀವನ ಚರಿತ್ರೆ ನಮಗೆ ದೊರೆಯುವುದಿಲ್ಲ. ಅದರ ಬದಲು ಕೆಲವು ಕವಿಗಳನ್ನು ಕುರಿತ ದಂತಕಥೆಗಳು ಮಾತ್ರ ಪರಂಪರಾಗತವಾಗಿ ನಮ್ಮಲ್ಲಿ ಹರಿದು ಬಂದಿವೆ. ಕಾಳಿದಾಸನನ್ನು ಕುರಿತ ಶೃಂಗಾರದ ಕಥೆಗಳು; ಹರಿಶ್ಚಂದ್ರ ಕಾವ್ಯವನ್ನು ಬರೆದದ್ದರಿಂದ ರಾಘವಾಕನ ಹಲ್ಲುಗಳನ್ನು ಹರಿಹರ ಮುರಿದ – ಎಂಬಂಥ ಕಥೆಗಳು; ಕುಮಾರವ್ಯಾಸನಿಗೂ ಚಾಮರಸನಿಗೂ ಸ್ಪರ್ಧೆಯುಂಟಾಯಿತು ಎಂಬ ಕಥೆಗಳು-ವಿವಿಧವಾಗಿ ಬೆಳೆದು ಬಂದಿವೆ. ಇವುಗಳಲ್ಲಿ ಕತೆಗಳಿಗಿರಬಹುದಾದ ಸ್ವಾರಸ್ಯದ ಜೊತೆಗೆ ಅಂದಂದಿನ ಪರಿಸರದ ಮನೋಧರ್ಮಗಳ ತಾಕಲಾಟದ ಪರಿಚಯ ಒಂದಷ್ಟು ಆಗುವುದಾದರೂ, ಎಷ್ಟೋ ವೇಳೆ ಅಸಂಬದ್ಧವೂ, ಜಾತಿ ಮಾತ್ಸರ್ಯ ಸ್ಪರ್ಧಾದಿ ಪೂರ್ವಾಗ್ರಹಜನ್ಯವೂ ಆದುವೆಂಬುದು ಸ್ಪಷ್ಟ. ಇವುಗಳಿಂದ ಕವಿಯ ವೈಯಕ್ತಿಕ ಜೀವನದ  ರೂಪುರೇಖೆಗಳನ್ನು ನಾವು ಗುರುತಿಸುವುದು ದುಸ್ಸಾಧ್ಯ. ಆದರೆ ಪಾಶ್ಚಾತ್ಯರಲ್ಲಿ ಆಯಾ ಕವಿಗಳು ಬದುಕಿದ ಕಾಲದಲ್ಲಿ ಅವರ ಹಿತೈಷಿಗಳೋ, ಸ್ನೇಹಿತರೋ ಬರೆದಿರಿಸಿದ ಕವಿಜೀವನದ ಹಲವು ಪ್ರಸಂಗಗಳಿಂದ, ಕವಿಯೇ ಬರೆದಿರಿಸಿದ ದಿನಚರಿಗಳಿಂದ, ಅವರು ನಡೆಸಿರುವ ಪತ್ರವ್ಯವಹಾರಗಳಿಂದ, ಅವರ ಕಾವ್ಯದ ಜೊತೆಗೇ ನೆರಳಾಗಿ ಅವನ ಜೀವನ ಚರಿತ್ರೆಯೂ ಹರಿದುಬಂದಿದೆ. ಅಷ್ಟೇ ಅಲ್ಲದೆ ಕವಿಯ ಕಾವ್ಯಗಳನ್ನೂ ಅವರ ಜೀವನದ ವಿವರಗಳನ್ನೂ ಜೊತೆಗೂಡಿಸಿಕೊಂಡು ಕವಿಯ ಜೀವನಚರಿತ್ರೆ ಸಾಹಿತ್ಯದ ಒಂದು ಪ್ರಕಾರವಾಗಿ ಬೆಳೆದುಬಂದಿದೆ.

ಕವಿಯ ಕೃತಿಯನ್ನೋದಿದ ವಿಮರ್ಶಕರ ಸಹಜ ಕುತೂಹಲದಿಂದ ತಮಗೆ ದೊರಕಬಹುದಾದ ಕವಿಜೀವನಚರಿತ್ರೆಯ ವಿವರಗಳನ್ನು ಅವಲೋಕಿಸಲು ಬಯಸುತ್ತಾರೆ, ಅದರಿಂದ ಕೃತಿವ್ಯಾಖ್ಯಾನದ ವಿಚಾರದಲ್ಲಿ ಉಪಯೋಗವಾಗಬಹುದೆಂದು. ಈ ದೃಷ್ಟಿಯಿಂದ ಕವಿಯ ಜೀವನಚರಿತ್ರೆಯಿಂದ ತಕ್ಕಮಟ್ಟಿಗೆ ಪ್ರಯೋಜನವಾಗಿದೆ. ಕೋಲ್‌ರಿಜ್ ಕವಿಯ ಬದುಕಿನ ವಿವರಗಳಿಂದ, ಅವನು ಅಭ್ಯಸಿಸಿದ ಗ್ರಂಥಗಳ ವಿಚಾರಗಳಿಂದ, ಅವನು ಬರೆದಿರಿಸಿಕೊಂಡ ಟಿಪ್ಪಣಿ ಇತ್ಯಾದಿಗಳಿಂದ ಅವನ ಪ್ರತಿಭೆ ಹೇಗೆ ಕೆಲಸ ಮಾಡಿದೆ, ಅವನು ಯಾವ ಯಾವ ರೀತಿಯಲ್ಲಿ ತನಗೆ ದೊರಕಿದ ಕಾವ್ಯ ಪರಿಕರಗಳನ್ನು ತನ್ನ ಪ್ರತಿಭೆಯಿಂದ ಪರಿವರ್ತಿಸಿ ಅಪೂರ್ವ ನಿರ್ಮಾಣವನ್ನು ಮಾಡಿದ್ದಾನೆ-ಎನ್ನುವ ವಿಚಾರವನ್ನು ಅತ್ಯಂತ ರೋಮಾಂಚಕಾರಿಯಾಗಿ ಲಿವಿಂಗ್‌ಸ್ಟನ್ ಲೌಸ್ (Livingston lowes) ಅವರು The Road to Xanadu  ಎಂಬ ಗ್ರಂಥದಲ್ಲಿ ಚಿತ್ರಿಸಿದ್ದಾರೆ. ವರ್ಡ್ಸ್‌ವರ್ತನ ಬದುಕಿನಲ್ಲಿ ಷೆಲ್ಲಿಯ ಬದುಕಿನಲ್ಲಿ ಬರುವ ಪ್ರೀತಿ ಪ್ರಣಯ ಪ್ರಸಂಗಗಳ ಆಧಾರದಿಂದ ಅವರ ಎಷ್ಟೋ ಪ್ರಣಯಗೀತೆಗಳನ್ನು ವಿವರಿಸಿದ್ದಾರೆ. ಹೀಗೆ ಕವಿಜೀವನದ ವಿವರಗಳಿಂದ ಕವಿಕೃತಿಯ ವ್ಯಾಖ್ಯಾನಕ್ಕೆ ಹಲವು ಸಲ ಉಪಯೋಗವಾಗಿರುವುದೂ ಉಂಟು. ಒಂದೊಂದು ಸಲ ಕವಿ ಜೀವನದ ವಿವರಗಳು ದೊರೆಯದೆ ಇದ್ದರೂ, ಕೃತಿಯನ್ನೆ ಪ್ರಧಾನವಾಗಿರಿಸಿಕೊಂಡು ಅಲ್ಲಿನ ಕೆಲವು ಭಾಗಗಳಲ್ಲಿ, ಕೆಲವು ಪಾತ್ರಗಳ ನಡವಳಿಕೆಯಲ್ಲಿ ಕವಿ ತನ್ನ ಬದುಕಿನ ಒಂದು ಮುಖವನ್ನೇ ಇಂಥ ಕಡೆ ವ್ಯಕ್ತಪಡಿಸುತ್ತಿದ್ದಾನೆಂದು ಊಹಿಸುವುದೂ ಈ ವಿಮರ್ಶೆಯಲ್ಲಿ ಒಂದು ಮುಖ್ಯವಾದ ಅಂಶ. ಷೇಕ್ಸ್‌ಪಿಯರ್ ಕವಿಯ ‘ಟೆಂಪೆಸ್ಟ್’ ನಾಟಕದಲ್ಲಿ ಬರುವ ಪ್ರಾಸ್ಟಿರೋವಿನ ಪಾತ್ರದಲ್ಲಿ ಷೇಕ್ಸ್‌ಪಿಯರ್ ತನ್ನನ್ನೆ ಚಿತ್ರಿಸಿಕೊಂಡಿದ್ದಾನೆಂದೂ, ಆ ನಾಟಕದಲ್ಲಿ ಪ್ರಾಸ್ಟಿರೋ ಕಡೆಯಲ್ಲಿ ತನ್ನ ಮಂತ್ರದಂಡವನ್ನು ಮುರಿದೆಸೆಯುವ ಪ್ರಸಂಗ, ಷೇಕ್ಸ್‌ಪಿಯರ್ ಕವಿ ಅಲ್ಲಿಂದಾಚೆಗೆ ನಾಟಕ ರಚನೆಗೇ ಶರಣುಹೊಡೆದನೆಂಬುದನ್ನು ಸೂಚಿಸುವುದೆಂದೂ ವಿಮರ್ಶಕರು ಊಹಿಸುತ್ತಾರೆ. ಪಂಪನ ಬನವಾಸಿಯ ವರ್ಣನೆಯನ್ನು ಓದಿ, ಅಲ್ಲಿ ಕಂಡುಬರುವ ವೈಯಕ್ತಿಕವಾದ ಆ ಹಂಬಲವನ್ನು ಕುರಿತು “ಪಂಪನು ಮಾಡಿರುವ ಬನವಾಸಿ ದೇಶದ ವರ್ಣನೆ ತುಂಬ ಪ್ರಸಿದ್ಧವಾಗಿದೆ. ದೇಶದೇಶವನ್ನು ಸುತ್ತಿ ಬನವಾಸಿಯ ಪ್ರಾಂತಕ್ಕೆ ಬಂದ ಅರ್ಜುನನು ಇಲ್ಲಿಯ ಚೆಲುವಿಗೆ ಮೆಚ್ಚಿ ಆ ಮಾತುಗಳನ್ನು ಆಡಿದಂತೆ ಪಂಪನು ನಿರೂಪಿಸಿದ್ದಾನೆ; ಆದರೆ ನಿಜವಾಗಿ ಇದು ಪಂಪನ ಹೃದಯದಿಂದಲೇ ಉಕ್ಕಿ ಹರಿದ ಹಂಬಲಿಕೆಯ ಚಿಲುಮೆ…. ಹಿಂದೆ ಪಂಪನು ಬನವಾಸಿಯ ಪ್ರಾಂತದ ದಟ್ಟವಾದ ವನಗಳಲ್ಲಿ ಅಲೆದಾಡಿ, ಅಲ್ಲಿಯ ಹೂಗಳ ಕಂಪನ್ನು ಹೀರಿ, ತೆಂಕಣಗಾಳಿಗೆ ಮೈಯೊಡ್ಡಿ, ನಲ್ಮೆಯ ಕೇಳಿಗಳಲ್ಲಿ ಮೈಮರೆತು ಸುಖಪಟ್ಟಿರಬೇಕು. ಈಗ ಲೆಂಬುಳಪಾಟಕದ ಬಿರುಬೇಸಗೆಯ ಎರೆನೆಲದಲ್ಲಿ ಕಾಲನೂಕುತ್ತಿರುವಾಗ ಅವನಿಗೆ ಹಳೆಯ ನೆನಪು ಮಿಂಚಿ, ಬನವಾಸಿಯ ನಾಡೆಲ್ಲ ನಂದನವನದಂತೆ ತೋರುತ್ತಿದೆ…. ಅಲ್ಲಿ ಹಿಂದೆ ಕಂಡ ಇಂಪು ತಂಪು ಸವಿ ಸೊಬಗುಗಳು ಅವನ ಹೃದಯವನ್ನು ಇಷ್ಟುಮಟ್ಟಿಗೆ ಸೆಳೆದಿವೆ. ಪಂಪನು ಎಲ್ಲಿಯೇ ಹುಟ್ಟಿ ಬೆಳೆದಿರಲಿ, ಬನವಾಸಿಯ ಮಲೆನಾಡಿನಲ್ಲಿ ಅವನ ಜೀವಮಾನದ ಸಾರವತ್ತಾದ ಭಾಗ ಕಳೆದಿರಬೇಕು. ಅಲ್ಲಿಯ ಸೊಗಸು ಅವನ ಮನಸ್ಸನ್ನು ತಿದ್ದಿ, ಕವಿತಾಶಕ್ತಿಯನ್ನು ಪುಟಗೊಳಿಸಿರಬೇಕು.”[1] – ಎನ್ನುವ ಈ ಸಕಾರಣವಾದ ಊಹೆ ಈ ಬಗೆಯ ವಿಮರ್ಶೆಗೆ ಒಂದು ನಿದರ್ಶನ. ಈ ರೀತಿಯಲ್ಲಿ ಕವಿ ಜೀವನವನ್ನು ನೋಡಿ ಕೃತಿಯ ಕೆಲವು ಸಂದರ್ಭಗಳನ್ನು ವ್ಯಾಖ್ಯಾನಿಸುವುದೂ, ಕೃತಿಯ ಕೆಲವು ಸಂದರ್ಭಗಳಿಂದ ಕವಿಜೀವನವನ್ನು ಊಹಿಸುವುದೂ ಸಾಧ್ಯವಾಗಬಹುದಾದರೂ, ಸ್ವಾರಸ್ಯವಾಗಿರಬಹುದಾದರೂ, ಆ ಕವಿಜೀವನದ ವಿವರಗಳು ದೊರೆಯದಿದ್ದಲ್ಲಿ ಅಥವಾ ಕೃತಿಯ ಹಲವು ಸಂದರ್ಭಗಳಿಂದ ಕವಿಜೀವನವನ್ನು ನಾವು ಊಹಿಸದಿದ್ದಲ್ಲಿ, ಕೃತಿಯ ಈ ಭಾಗಗಳು ತಮಗೆ ತಾವೇ ಸ್ವಾರಸ್ಯವಾಗುತ್ತಿರಲಿಲ್ಲವೆ? – ಎಂಬ ಪ್ರಶ್ನೆ ನಿಲ್ಲುತ್ತದೆ. ನಿಜ, ಕಾವ್ಯವನ್ನು ಮೊದಲು ಅದು ಇರುವಂತೆ ನೋಡುತ್ತೇವೆ. ಅದು ತನಗೆ ತಾನೇ ನೀಡುವ ಸೊಗಸನ್ನು ಸವಿಯುತ್ತೇವೆ. ಆದರೆ ಕವಿಜೀವನದ ವಿವರಗಳಿಂದ ನಮ್ಮ ಕೃತಿವ್ಯಾಖ್ಯಾನಕ್ಕೆ ಸಹಾಯವಾಗುವುದಾದರೆ, ಕೃತಿಯ ಕೆಲವು ಪ್ರಸಂಗಗಳ ಆಧಾರದಿಂದ ಕವಿಜೀವನದ ಬಗೆಗೆ ನಾವು ಮಾಡುವ ಊಹೆ ಸಮರ್ಪಕವಾಗುವುದಾದರೆ, ಇದರಿಂದ ತೊಂದರೆಯೇನೂ ಇಲ್ಲವಲ್ಲ? ವಾಸ್ತವವಾಗಿ ವಿಮರ್ಶಕರಾದವರು ಈ ವಿಷಯಗಳನ್ನು ಬಳಸಿಕೊಳ್ಳಬಹುದಾದ ಮಿತಿ ಇಷ್ಟು; ಈ ಮಿತಿಯೊಳಗೆ ನಿಂತು ವಿಮರ್ಶಕ ಈ ವಿಧಾನವನ್ನನುಸರಿಸುವುದರಿಂದ ತೊಂದರೆಯೇನೂ ಇಲ್ಲ. ಆದರೆ ಅನೇಕ ವೇಳೆ ವಿಮರ್ಶಕರು, ಈ ಗಡಿಯನ್ನು ದಾಟುವುದರಿಂದಾಗುವ ಕೋಲಾಹಲಗಳು ವಿಶೇಷವಾಗಿವೆ. ಕವಿಜೀವನಚರಿತ್ರೆಗೆ ಕೃತಿ ವಿಮರ್ಶೆಯಲ್ಲಿ ಕೊಡಬೇಕಾದ ಸ್ಥಾನವೆಷ್ಟೆಂಬುದನ್ನರಿಯದೆ ವಿಮರ್ಶೆಯಲ್ಲಿ ಸಾಕಷ್ಟು ಗೊಂದಲವಾಗಿದೆ. ಈ ಗೊಂದಲದಿಂದ ವಿಮರ್ಶೆಗೆ ಆಗಿರುವ ಅಪಾಯಗಳು ಎರಡು : ಕವಿ ಜೀವನಚರಿತ್ರೆಯಲ್ಲಿ ಕಂಡುಬರುವ ಕವಿಯ ಆದರ್ಶಮಯವಾದ ಸಾತ್ವಿಕ ನಡವಳಿಕೆಗಳನ್ನೋ, ಕವಿಯ ದಾರುಣವಾದ ದುಃಖದಾರಿದ್ರ್ಯಗಳ ವಿಚಾರವನ್ನೋ ಓದಿ ಕವಿಯ ಬಗೆಗೆ ಅನಾವಶ್ಯಕವಾದ ಗೌರವವನ್ನೋ ಮರುಕವನ್ನೋ ತಾಳಿ, ಆತನ ಕೃತಿಗೆ ನ್ಯಾಯವಾಗಿ ಸಲ್ಲಬೇಕಾದ್ದಕ್ಕಿಂತ ಮಿಗಿಲಾದ ಪ್ರಶಂಸೆಯನ್ನು ಸುರಿಸುವುದು, ಒಂದು. ಕವಿಜೀವನದ ವಿವರಗಳನ್ನು ಓದಿ, ಆತನ ಬದುಕು ವಿಚಿತ್ರವೂ ಸಂದಿಗ್ಧವೂ, ನಮ್ಮನ್ನು ತನ್ನ ‘ಅನೈತಿಕ’ ವರ್ತನೆಗಳಿಂದ ದಂಗುಬಡಿಸುವಂಥದೂ ಆಗಿದ್ದಲ್ಲಿ, ಆತನ ಕೃತಿ ನಿಜವಾಗಿಯೂ ಸೊಗಸಾಗಿದ್ದರೂ, ಮಹತ್ತಾಗಿದ್ದರೂ, ಅದು ಆತನ ಜೀವನಚರಿತ್ರೆ ನಿರೂಪಿಸುವ ವಾಸ್ತವ ಜೀವನಕ್ಕೆ ವಿರುದ್ಧವಾಗಿರುವ ಕಾರಣದಿಂದ ಅದನ್ನು ಕೀಳ್ಗಳೆಯುವುದು, ಎರಡನೆಯದು. ಸಾಹಿತ್ಯ ವಿಮರ್ಶೆಯಲ್ಲಿ ಈ ಎರಡನೆಯದು ಬಹು ಸುಲಭವಾಗಿ ಎಂಥವರನ್ನೂ ತಪ್ಪು ಹಾದಿಗೆಳೆಯುವಂಥದು. ಏಕೆಂದರೆ ಕವಿಯ ಕೃತಿಯೆಲ್ಲವೂ ಆತನ ವಾಸ್ತವ ಜೀವನಕ್ಕೆ ಸಾಕ್ಷಿಯಾಗಿರುತ್ತದೆ ಎಂದು ಹೊರಟ ಇಂಥವರಿಗೆ, ಕವಿಕೃತಿಗೂ, ಕವಿ ಜೀವನಕ್ಕೂ ಇರುವ ಅಂತರ ದಿಗ್ಭ್ರಮೆಗೊಳಿಸುತ್ತದೆ. ಕವಿಯ ಕಾವ್ಯ ಮಾತ್ರ ಎಷ್ಟೊಂದು ಉದಾತ್ತವಾಗಿದೆ, ಆದರೆ ಅವನ ಜೀವನ ಮಾತ್ರ ಅದಕ್ಕೆ ಅನುಗುಣವಾಗಿ ಇಲ್ಲವಲ್ಲ? ಅವನಿಗೂ ಕೃತಿಗೂ ಹೋಲಿಸಿದರೆ, ಕವಿಕೃತಿಯೆಲ್ಲವೂ ಎಷ್ಟೊಂದು ಅಪ್ರಾಮಾಣಿಕವಾಗಿದೆ! ಇಂಥ ಅಪ್ರಾಮಾಣಿಕನಾದ ಕವಿ ತನ್ನ ಕೃತಿಯಲ್ಲಿ ಮಾಡಿರುವ ಮೋಸವನ್ನೆ ನಾವು ಕಣ್ಮುಚ್ಚಿ ಕಾವ್ಯವೆಂದು ಮೆಚ್ಚುತ್ತಿದ್ದೇವಲ್ಲ! ಹಾಗಾದರೆ ನಾವು ಅವನ ಜೀವನದ ವಿವರಗಳನ್ನು ನೋಡದೆ, ಕೇವಲ ಕೃತಿಯನ್ನು ಮಾತ್ರ ನೋಡಿದ್ದರೆ ಚೆನ್ನಾಗಿತ್ತೋ ಏನೋ – ಇತ್ಯಾದಿ ಸಮಸ್ಯೆಗಳು ಓದುಗರನ್ನೂ ವಿಮರ್ಶಕರನ್ನೂ ಕಾಡುತ್ತವೆ.

ಈ ಸಮಸ್ಯೆಯ ಉದ್ಭವಕ್ಕೆ ಕವಿಗಳ ಜೀವನವೂ ಧಾರಾಳವಾಗಿ ಸಾಮಗ್ರಿಗಳನ್ನು ಒದಗಿಸಿದೆ. ಗಾಡ್ವಿನ್ನನ ಮಗಳೊಡನೆ ಓಡಿಹೋದ ಷೆಲ್ಲಿಯ ವೃತ್ತಾಂತ; ಬೈರನ್ ಕವಿಯ ಪ್ರಖ್ಯಾತ ಪ್ರಣಯ ಸಾಹಸಗಳ ವಿಚಾರ; ಫ್ರಾನ್ಸ್ ದೇಶಕ್ಕೆ ಹೋದಾಗ ಫ್ರೆಂಚ್‌ಭಾಷೆಯನ್ನು ಕಲಿಯಲು ಉಪಾಧ್ಯಾಯಿನಿಯೊಬ್ಬಳನ್ನು ನೇಮಿಸಿಕೊಂಡು, ಅವಳನ್ನು ತನ್ನ ರಮಣಿಯನ್ನಾಗಿ ಮಾಡಿಕೊಂಡ ವರ್ಡ್ಸ್‌ವರ್ತ್ ಅನಂತರ ಅವಳ ಬಗೆಗೆ ನಡೆದುಕೊಂಡ ರೀತಿಗಳು[2] – ಇವುಗಳನ್ನು ಅವಲೋಕಿಸುವ ಸಾಮಾನ್ಯ ವಿಮರ್ಶಕನ ಮನಸ್ಸಿನಲ್ಲಿ ಇಂತಹ ಹಲವು ಸಂಗತಿಗಳೂ ನೆಲಸಿ ಅವನು ಆಯಾ ಕವಿಗಳ ಕಾವ್ಯಗಳನ್ನು ಓದುವಾಗಲೂ ಅವು ತಮ್ಮ ನೆರಳನ್ನು ಚೆಲ್ಲತೊಡಗುತ್ತವೆ. ಹೀಗಾಗಿ ಆಯಾ ಕವಿಗಳ ಅತ್ಯುತ್ತಮ ಕೃತಿಗಳನ್ನೋದುವಾಗ ಅವರ ಜೀವನ ಚರಿತ್ರೆಯ ಇಂಥ ಅಪ್ರಿಯ ಸಂಗತಿಗಳ ನೆನಪು ಓದುಗನ ಕಾವ್ಯಾಸ್ವಾದಕ್ಕೆ ಭಂಗವನ್ನು ತರಬಹುದು. ಅಥವಾ ಅವನ ಕಣ್ಣಿಗೆ ಕವಿಯ ಸತ್ಕೃತಿಯೂ ಮಸುಕಾಗಿ ತೋರಬಹುದು. ವಿಮರ್ಶೆ ಎಂಬ ಹೆಸರಿನಲ್ಲಿ ಕೊಚ್ಚಿ ಹಾಕಲು ಹವಣಿಸುವ ನಾಲಗೆಗೆ ಕವಿಜೀವನದ ಇಂಥ ವಿವರಗಳ ಸಹಾಯ ಸಿಕ್ಕಿದಾಗ, ಅತ್ಯುತ್ಸಾಹದಿಂದ ವಿಮರ್ಶಕನೆನಿಸಿಕೊಂಡವನು ಕವಿಕೃತಿಯನ್ನು ಭಾಷಣದ ಅಥವಾ ಬರೆಹದ ವೇದಿಕೆಯ ಮೇಲೆ ಯಶಸ್ವಿಯಾಗಿ ಬಲಿಹಾಕಬಹುದು. ಲೋಕದಲ್ಲಿ ತೀರ ಸಾಮಾನ್ಯನೂ ಇಳಿಯಲಾರದ, ಇಳಿಯಬಾರದ ಮಟ್ಟಗಳಿಗೆಲ್ಲಾ ಇಳಿದು, ಕಾವ್ಯದಲ್ಲಿ ಮಾತ್ರ ಸೌಂದರ್ಯೋಪಾಸಕನೂ, ಧ್ಯೇಯವಾದಿಯೂ ಆಗಿ ರಾರಾಜಿಸುತ್ತಾ ಮಹಾ ಮಹಾ ತತ್ವಗಳನ್ನು ಉಪದೇಶಿಸುವ ಕವಿಯ ಬಗೆಗೆ ಮತ್ತು ಅವನ ಕೃತಿಗಳ ಬಗೆಗೆ ಒಂದು ರೀತಿಯ ತಿರಸ್ಕಾರ ಹುಟ್ಟಬಹುದು. ಇದರ ಆಧಾರದಿಂದ ಕೃತಿಯ ವಿಚಾರದಲ್ಲಿ ವಿಮರ್ಶಕ ಆತುರದ ಅಪಸಿದ್ಧಾಂತಗಳನ್ನು ಸಾರಿ ಓದುಗರನ್ನು ಹಾದಿಗೆಡಿಸಬಹುದು; ಕವಿಯ ವಿಚಾರದಲ್ಲಿ ಓದುಗರು ತಿರಸ್ಕಾರವನ್ನೂ ತಾಳುವಂತೆ ಮಾಡಬಹುದು. ಆದರೆ ಹೀಗಾಗುವುದು ವಿಚಾರಶೀಲನಾದ ವಿಮರ್ಶಕನ ವಿಚಾರದಲ್ಲಿ ಅಲ್ಲ; ರಭಸಮತಿಯಾದ ವಿಮರ್ಶಕನ ವಿಚಾರದಲ್ಲಿ.

ಕವಿಯ ಕಾವ್ಯವನ್ನೋದಿ ಯಾರಾದರೂ ಅವನ ಜೀವನದ ಬಗೆಗೂ ಆಸಕ್ತಿ ತೋರಿಸುವುದರಲ್ಲಿ ಮೊದಲು ಕಾರಣ, ಕವಿಯೇ ಜೀವನ ಹೇಗಿರಬೇಕು ಎಂದು ಹೇಳುವುದರಿಂದ; ಬದುಕಿನ ಆದರ್ಶಗಳನ್ನು ಕಾವ್ಯಮುಖೇನ ಇಷ್ಟು ಎತ್ತಿ ಹಿಡಿಯುವ ಈತನ ಜೀವನ ಹೇಗಿರಬಹುದು ಎಂಬ ಸಹಜ ಕುತೂಹಲದಿಂದ. ಜೀವನ ಹೇಗಿರಬೇಕು ಎಂಬುದನ್ನು ಈತ ಹೇಳುವಾಗ, ಮೊದಲು ಅವನ ಜೀವನ ಈ ಒಂದು ತತ್ವವನ್ನು ಹೇಳಲು ಅಧಿಕಾರ ಹೊಂದಿದೆಯೇ, ಕಾವ್ಯದಲ್ಲಿ ವ್ಯಕ್ತವಾಗುವ ಈ ಧ್ಯೇಯಮುಖವನ್ನು ಅವನ ವಾಸ್ತವಮುಖ ಸಮರ್ಥಿಸುತ್ತದೆಯೇ – ಎಂದು ಅವನ ಕಾವ್ಯದ ಸೂತ್ರವನ್ನು ಅವನ ಬದುಕಿನ ವ್ಯವಹಾರಗಳಿಗೆ ಅನ್ವಯಿಸಿ ನೋಡುವ ಕುತೂಹಲ ತೀರ ಸಹಜವಾದದ್ದೆ. ಲೋಕದಲ್ಲಿ ಎಷ್ಟೋ ಜನ ನಮ್ಮ ಸುತ್ತ ಅನೀತಿಯುತವಾಗಿ ಬಾಳಿದರೂ ಅವನ ಬಗ್ಗೆ ನಮಗೆ ಅಂತಹ ಆಸಕ್ತಿಯೇನೂ ಇರುವುದಿಲ್ಲ. ಏಕೆಂದರೆ ಅವರೇನೂ ಜೀವನದ ಬಗ್ಗೆ ನಮಗೆ ಯಾವ ಧ್ಯೇಯನಿರ್ದೇಶನಗಳನ್ನೂ ಕೊಡುವುದಿಲ್ಲ. ಆದರೆ ತನ್ನ ಕಾವ್ಯದ ಉದಾತ್ತ ಧ್ಯೇಯಗಳಿಂದ ನಮ್ಮ ಗಮನವನ್ನು, ಗೌರವವನ್ನು ಸೆಳೆದ ಕವಿಯಲ್ಲಿ ಕುಂದುಕೊರತೆಗಳನ್ನು ಕಂಡಾಗ ನಾವು ದಿಗ್ಭ ಮೆಗೊಳ್ಳುತ್ತೇವೆ. ಅವೂ ಮಾನವ ಸಹಜವಾದ ದೌರ್ಬಲ್ಯಗಳೆಂದು ಅವಜ್ಞೆಗೈಯಲು ನಮ್ಮ ಮನಸ್ಸು ಒಪ್ಪುವುದಿಲ್ಲ. ಆದರೆ ವ್ಯಕ್ತಿಜೀವನದಲ್ಲಿಯೂ ಏರಿಳಿತಗಳಿರುತ್ತವೆ; ಅವನು ಯಾವ ಎತ್ತರಕ್ಕೆ ಏರಿದ್ದಾನೆ ಎಂಬುದನ್ನು ಗಮನಿಸದೆ, ಅವನು ಯಾವ ಕೀಳ್ಮೆಗೆ ಇಳಿದಿದ್ದಾನೆ ಎನ್ನುವುದನ್ನು ಮಾತ್ರ ಜೀವನದ ಬಹುಮುಖ್ಯವಾದ ಅಂಶವೆಂಬಂತೆ ಪರಿಗಣಿಸುವುದು ಸಹೃದಯನ ಅಥವಾ ವಿಮರ್ಶಕನ ಕುಸಂಸ್ಕೃತಿಯ ಕುರುಹು ಮಾತ್ರ. ಆದರೆ ಆ ಏರಿಳಿತಗಳಿಂದ ವ್ಯಕ್ತಿ ಏರಿದ ನಿಲುವು ಏನೆಂಬುದನ್ನು ವಿಚಾರಶೀಲನಾದ ವಿಮರ್ಶಕ ಗಮನಿಸುತ್ತಾನೆ.[3] ವಿಚಾರಶೀಲನಾದ ವಿಮರ್ಶಕ ಈ ಎರಡು ಭೂಮಿಕೆಗಳನ್ನು ಬೆರೆಸುವ ಗೊಂದಲಕ್ಕೆ ಕೈಹಾಕುವುದಿಲ್ಲ. ಅವನಲ್ಲಿ ಕವಿ – ಕಾವ್ಯದ ಬಗೆಗೆ ಹಲವು ಪ್ರಶ್ನೆಗಳು ಏಳುತ್ತವೆ: ಕವಿ ಕಾವ್ಯವನ್ನು ರಚಿಸುವಾಗ ಮತ್ತು ಕವಿಯಾಗಿ ಲೋಕವನ್ನು ಪರಿಭಾವಿಸುವಾಗ ಇರುವಂತಹ ಸ್ಥಿತಿ ಅವನು ಲೋಕದ ದೈನಂದಿನ ವ್ಯವಹಾರಗಳಲ್ಲಿರುವಾಗಲೂ ಇರುತ್ತದೆಯೆ? ಕಾವ್ಯವನ್ನು ಬರೆಯುವಾಗ ಅವನು ‘ಕವಿ’ ಯಾಗಿರುವಷ್ಟು, ಕಾವ್ಯವನ್ನು ಬರೆಯದ ಹೊತ್ತಿನಲ್ಲೂ ‘ಕವಿ’ ಯಾಗಿರುತ್ತಾನೆಯೆ? ಲೋಕವ್ಯಕ್ತಿ, ಕವಿವ್ಯಕ್ತಿ ಬೇರೆಬೇರೆಯೆ? ಕವಿ ಕಾವ್ಯವನ್ನು ಬರೆಯುವಾಗ ಏರಿದ ನೆಲೆಯ ಅನುಭವ ಆತನ ಲೋಕವ್ಯಕ್ತಿತ್ವವನ್ನು ಸಂಸ್ಕರಿಸಿ ಆತನ ಲೌಕಿಕ ವ್ಯವಹಾರವನ್ನೂ ಅಷ್ಟೇ ಘನವನ್ನಾಗಿ ಮಾಡಲಾರದೆ? ಈ ವ್ಯಕ್ತಿತ್ವ ಎನ್ನುವುದು ಏನು? ಇದು ಎಷ್ಟು ತೊಡಕಾದುದು! ಕೃತಿವಿಮರ್ಶೆಯಲ್ಲಿ ಕವಿಯ ಲೋಕವ್ಯಕ್ತಿಜೀವನದ ವಿವರಗಳಿಂದ ಸಹಾಯವಾಗಲಾರದೆ? ಅಥವಾ ಸಹಾಯ ಪಡೆದುಕೊಳ್ಳಬಾರದೆ? – ಎಂಬ ಪ್ರಶ್ನೆಗಳು ಆತನಲ್ಲಿ ಉದ್ಭವಿಸುತ್ತವೆ.

ಈ ಪ್ರಶ್ನೆಗಳನ್ನು ಒಂದೊಂದಾಗಿ ಪರಿಶೀಲಿಸೋಣ : ಇಲ್ಲಿ ಮೊದಲ ಪ್ರಶ್ನೆ, ಕವಿ ಕಾವ್ಯವನ್ನು ಬರೆಯುವಾಗ ‘ಕವಿ’ ಯಾಗಿರುವಷ್ಟು, ಆತ ಕಾವ್ಯವನ್ನು ಬರೆಯದ ಹೊತ್ತಿನಲ್ಲಿಯೂ ‘ಕವಿ’ ಯಾಗಿರುತ್ತಾನೆಯೆ? ಈ ಪ್ರಶ್ನೆಗೆ ಉತ್ತರ, ಇಲ್ಲ ಎಂಬುದು. ‘ಕವಿ’ ಎನ್ನುವುದು ಒಂದು ಮನಃಸ್ಥಿತಿ, ಯಾವುದೋ ಒಂದು ಅಪೂರ್ವವಾದ ಶಕ್ತಿಯ ಸೆಳೆತಕ್ಕೆ ಪಾತ್ರನಾದ ವ್ಯಕ್ತಿಯಲ್ಲಿ ಆಗಾಗ ಇರುವ, ಬರುವ ಒಂದು ಸೃಷ್ಟಿಶೀಲವಾದ ಸ್ಥಿತಿ. ಆತ ಲೋಕದಲ್ಲಿ ಎಲ್ಲರಂತೆ ಒಬ್ಬ ವ್ಯಕ್ತಿ. ಅವನಿಗೂ ತನ್ನದೇ ಆದ ಸುಖ, ದುಃಖ, ಶತ್ರುಗಳು, ಮಿತ್ರರು, ಹೆಂಡತಿ, ಮಕ್ಕಳು, ಬಂಧುಬಾಂಧವರು ಉಂಟು. ಆತ ತನ್ನ ವೃತ್ತಿಗಾಗಿ ಬದುಕಿನಲ್ಲಿ ಯಾವುದೋ ಉದ್ಯೋಗದಲ್ಲಿರಬಹುದು. ಅದರಲ್ಲೆಲ್ಲಾ, ಲೋಕ ವ್ಯವಹಾರದಲ್ಲೆಲ್ಲಾ, ಅವನು ಸದಾ ಕಾವ್ಯಪರಿಭಾವನೆಯಲ್ಲಿದ್ದರೆ ಆತನ ನಿತ್ಯಜೀವನ ಸಾಗುವುದು ಹೇಗೆ? ಆತನ ಸಂಸಾರದ ಗತಿಯೇನು? ಹೋಗಲಿ, ಆತನಾದರೂ ಬದುಕುವುದು ಹೇಗೆ? ಆದುದರಿಂದ ‘ಕವಿ’ ಸದಾ ‘ಕವಿ’ ಯಾಗಿರುತ್ತಾನೆಂದು ಹೇಳುವುದು ಹೇಗೆ? ಆದರೆ ಆತನಿಗೆ ಕಾವ್ಯಶಕ್ತಿ ಹೇಗೋ ಬಂದಿರುತ್ತದೆ. ಅದು ಅವನ ಬದುಕಿನ ಯಾವ ಕ್ಷಣದಲ್ಲಿ ಬೇಕಾದರೂ ಬಂದು ಆತನನ್ನು ಆಕ್ರಮಿಸಬಹುದು. ಕವಿ ಆ ಶಕ್ತಿಯ ಸೇವಕ; ಆ ಕ್ಷಣದಲ್ಲಿ ಕವಿ ಅದಕ್ಕೆ ಓಗೊಡದೆ ಹೋದರೆ ಅದು ಹಾಗೆಯೇ ಜಾರಿ ಹೋಗುವುದುಂಟು. ಕವಿ ಕೋಲ್‌ರಿಜ್ ತನ್ನ ‘ಕುಬ್ಲಾಖಾನ್’ ಕವನವನ್ನು ರಚಿಸುವ ಹೊತ್ತಿನಲ್ಲಿ ಯಾರೋ ಸ್ನೇಹಿತರು ಬಂದದ್ದರಿಂದ ಅಲ್ಲಿಗೆ ನಿಂತುಹೋಯಿತೆಂದೂ, ಅನಂತರ ಕವಿ ಪ್ರಯತ್ನಪಟ್ಟಾಗ ಅದು ಮುಂದುವರಿಯಲಿಲ್ಲವೆಂಬುದೂ ಪ್ರಸಿದ್ಧವಾದ ಸಂಗತಿ. ಶ್ರೀ ಪು. ತಿ. ನ. ಹೇಳುತ್ತಿದ್ದರು : ‘I have composed most of my poems in between the files’ ಎಂದು. ಆಫೀಸಿನ ಕಾಗದ ಪತ್ರಗಳ ನಡುವೆಯೂ ಅದು ನುಗ್ಗಿ ಕರಣಿಕನಾದ ಲೋಕವ್ಯಕ್ತಿಯನ್ನು, ಕವಿವ್ಯಕ್ತಿಯ ನಿಲುವಿಗೆ ಜಗ್ಗಬಹುದು; ಹೀಗಾಗಿ ಒಂದು ಕಡೆ ಲೌಕಿಕವಾದ ಸಮಸ್ತ ವ್ಯವಹಾರಗಳು, ಮತ್ತೊಂದು ಕಡೆ ಕ್ಷಣಾರ್ಧದಲ್ಲಿ ಅವುಗಳನ್ನು ಅಲ್ಲಿಯೇ ನಿಲ್ಲಿಸಿ ತನ್ನ ಶಕ್ತಿಗೆ ಅಧೀನವನ್ನಾಗಿ ಮಾಡಿಕೊಳ್ಳುವ ಕಲಾಪ್ರವೃತ್ತಿ – ಈ ಎರಡು ಶಕ್ತಿಗಳ ತುಯ್ತಕ್ಕೆ ಕಲಾವಿದ ಸಿಲುಕುತ್ತಾನೆ. ಕಲಾವಿದನ ಈ ಸ್ಥಿತಿಯನ್ನು ಕುರಿತು ಸುಪ್ರಸಿದ್ಧ ಮನಶ್ಯಾಸ್ತ್ರಜ್ಞರಾದ ಸಿ.ಜೆ. ಯೂಂಗ್ ಅವರು ಹೇಳುತ್ತಾರೆ : “ಸೃಷ್ಟಿಶೀಲನಾದ ಪ್ರತಿಯೊಬ್ಬ ಕಲೆಗಾರನದೂ ದ್ವಂದ್ವ ಇಲ್ಲವೆ ಸಮನ್ವಿತ ವ್ಯಕ್ತಿತ್ವ. ಒಂದು ಕಡೆ ಅವನು ವೈಯಕ್ತಿಕಾನುಭವವುಳ್ಳ ಲೋಕವ್ಯಕ್ತಿ; ಮತ್ತೊಂದು ಕಡೆ ವಿಶಿಷ್ಟವಾದ ಕಲಾಶಕ್ತಿಯನ್ನುಳ್ಳ ಕಲಾವ್ಯಕ್ತಿ. ಅವನ ಜೀವನ ಸಹಜವಾಗಿಯೇ ತುಮುಲಗಳಿಂದ ತುಂಬಿರುತ್ತದೆ. ಏಕೆಂದರೆ ಅವನಲ್ಲಿ ನಿರಂತರವಾಗಿ ಎರಡು ಶಕ್ತಿಗಳ ಘರ್ಷಣೆಯನ್ನು ಕಾಣುತ್ತೇವೆ. ಒಂದು, ಸಾಮಾನ್ಯ ಭೋಗ-ವಿಭವಗಳ ಲಾಲಸೆ; ಮತ್ತೊಂದು ತನ್ನ ಸಮಸ್ತ ಭೋಗಲಾಲಸೆಗಳನ್ನೂ ತೃಣೀಕರಿಸಿ ನಿಲ್ಲುವಂತಹ ಪ್ರಬಲವಾದ ಕಲಾಪ್ರವೃತ್ತಿ.”[4] ಈ ಕಲಾಪ್ರವೃತ್ತಿಗೆ ಆತನೊಂದು ಮಾಧ್ಯಮ. ಯೋಗಿ ಕವಿ ಶ್ರೀ ಅರವಿಂದರು ಹೇಳುತ್ತಾರೆ : “ಕಲಾವಿದನ ಕಲಾಕ್ರಿಯೆಯ ಕೀಲಿಕೈಯನ್ನು ಹುಡುಕಬೇಕಾದದ್ದು ಆತನ ಬಹಿರಂಗ ಮನಸ್ಸಿನ ಜೀವನದಲ್ಲಿ ಅಲ್ಲ; ಅವನ ಅಂತರಂಗದ ವ್ಯಕ್ತಿತ್ವದಲ್ಲಿ… ಲೋಕದ ಸಹಸ್ರಾರು ಮಂದಿಯಿಂದ, ಮತ್ತು ಉಳಿದ ಕಲಾವ್ಯಕ್ತಿಗಳಿಂದ ಈತ ಬೇರೆಯಾದವನು ಎಂದು ತೋರಿಸುವ ಆ ಕಲಾಶಕ್ತಿಯನ್ನು ಪಡೆದ ಕಲಾವ್ಯಕ್ತಿ ನಮಗೆ ಪ್ರಧಾನ. ಆ ಸೃಷ್ಟಿಶಕ್ತಿಗೆ ಕಲಾವಿದ ಒಂದು ಒದಗೆಯೋ, ಮಾಧ್ಯಮವೋ, ಮಾತ್ರ.[5] ಒಬ್ಬ ವ್ಯಕ್ತಿ ಹಲವು ವ್ಯಕ್ತಿತ್ವಗಳ ಮಿಶ್ರಣ.[6] ಅವು ಬಹಿರಂಗದಲ್ಲಿ ಒಂದಕ್ಕೊಂದು ಸೇರಿಕೊಂಡರೂ ಅಂತರಂಗದಲ್ಲಿ ಬಿಡಿಬಿಡಿಯಾಗಿರಬಹುದು. ಇಂತಹ ಹಲವು ವ್ಯಕ್ತಿತ್ವಗಳಲ್ಲಿ, ಕವಿ ವ್ಯಕ್ತಿತ್ವವೆಂಬುದು ಕೇವಲ ಸೃಷ್ಟಿಶೀಲವಾದ ಒಂದು ವ್ಯಕ್ತಿತ್ವವಾಗಿರಬಹುದು ಅವನಲ್ಲಿ. ಆ ಸೃಷ್ಟಿಶೀಲವಾದ ಕಲಾಶಕ್ತಿ ಅವನನ್ನು ತನ್ನ ಉಪಕರಣವನ್ನಾಗಿ ಮಾಡಿಕೊಂಡು, ತನ್ನ ಉದ್ದೇಶ ಮುಗಿದನಂತರ ಅವನನ್ನು ಸಾಮಾನ್ಯರತ್ತ ಎಳೆದು ನಡೆಯಬಹುದು.”[7]

ಮನಶ್ಯಾಸ್ತ್ರಜ್ಞರು, ಮತ್ತು ದಾರ್ಶನಿಕರ ಈ ಮಾತುಗಳೊಂದಿಗೆ ಸುಪ್ರಸಿದ್ಧ ಕವಿ-ವಿಮರ್ಶಕನಾದ ಟಿ. ಎಸ್. ಎಲಿಯಟ್ ಈ ಬಗ್ಗೆ ಹೇಳಿರುವ ಮಾತುಗಳನ್ನು ಇಲ್ಲಿ ಗಮನಿಸಬಹುದು : “ಕವಿಗಿರುವುದು ಅಭಿವ್ಯಕ್ತಿಗೊಳಿಸಬಹುದಾದಂತಹ ಒಂದು ‘ವ್ಯಕ್ತಿತ್ವ’ ವಲ್ಲ, ಒಂದು ನಿರ್ದಿಷ್ಟ ‘ಮಾಧ್ಯಮ’, ಈ ‘ಮಾಧ್ಯಮ’ವೆಂಬುದು ಕೇವಲ ಮಾಧ್ಯಮವೇ ಹೊರತು, ವ್ಯಕ್ತಿತ್ವವಲ್ಲ. ಅದರಲ್ಲಿ ಆತನ ವಿವಿಧಾನುಭವಗಳು ಹಾಗೂ ಭಾವನೆಗಳು ವಿಚಿತ್ರವಾದ ಮತ್ತು ಅನಿರೀಕ್ಷಿತವಾದ ರೀತಿಯಲ್ಲಿ ಮಿಶ್ರವಾಗಿರುತ್ತವೆ.”[8] ಎಂದರೆ ‘ಕವಿವ್ಯಕ್ತಿ’ ಎಂದು ಯಾವುದನ್ನು ನಾವು ಗುರುತಿಸುತ್ತೇವೊ, ಅದನ್ನು ಉಳಿದ ವ್ಯಕ್ತಿತ್ವಗಳಂತೆ ಒಂದು ವ್ಯಕ್ತಿತ್ವ ಎಂದು ಭಾವಿಸದೆ ಅದೊಂದು ಕಾವ್ಯಶಕ್ತಿಯ ಮಾಧ್ಯಮ ಎಂದು ಭಾವಿಸಬೇಕು ಎನ್ನುತ್ತಾನೆ ಎಲಿಯಟ್. ಏಕೆಂದರೆ ಕಾವ್ಯವೆಂಬುದು ಆತನ ಪ್ರಕಾರ ಕವಿಯ ವ್ಯಕ್ತಿತ್ವದ ಪ್ರಕಾಶನವಲ್ಲ, ಆ ವ್ಯಕ್ತಿತ್ವದಿಂದ ಆತ ತಪ್ಪಿಸಿಕೊಂಡಿದ್ದರ ಅಥವಾ ವಿಮುಕ್ತಿ ಹೊಂದಿದ್ದರ ಪರಿಣಾಮ.[9]

ಈ ಮೇಲಿನ ವಿಚಾರ ಸರಣಿಯಿಂದ ವ್ಯಕ್ತವಾಗುವುದಿಷ್ಟು ; ಕವಿವ್ಯಕ್ತಿ ಲೋಕವ್ಯಕ್ತಿ ಎರಡೂ ಬೇರೆ ಬೇರೆ. ಈ ವ್ಯಕ್ತಿತ್ವ ಬಹಳ ಮಟ್ಟಿಗೆ ದ್ವಂದ್ವ. ಈ ಕಲಾವ್ಯಕ್ತಿತ್ವವನ್ನು, ಒಂದು ವ್ಯಕ್ತಿತ್ವ ಎನ್ನುವುದಕ್ಕಿಂತ ಅದೊಂದು ಮಾಧ್ಯಮ ಎನ್ನುವುದು ಸಮರ್ಪಕ. ಕವಿ ಅಥವಾ ಕಲಾವಿದ ಈ ಮಾಧ್ಯಮದ ಮೂಲಕ ಅಭಿವ್ಯಕ್ತಪಡಿಸುವುದು ತನ್ನ ವೈಯಕ್ತಿಕವಾದ ವ್ಯಕ್ತಿತ್ವವನ್ನಲ್ಲ; ಅಥವಾ ಲೋಕದ ಯಥಾವತ್ತಾದ ಭಾವನೆಗಳನ್ನಲ್ಲ; ಆತ ಅವುಗಳಿಂದ ಬಿಡುಗಡೆಯನ್ನು ಪಡೆಯುವ ಕೌಶಲವನ್ನು ನಾವು ಕೃತಿಯಲ್ಲಿ ಕಾಣುತ್ತೇವೆ. ಆದುದರಿಂದ ಕೃತಿ ಏನಿದ್ದರೂ, ಕವಿಯ ವ್ಯಕ್ತಿ ಜೀವನದ ಯಥಾವತ್ತಾದ ಚಿತ್ರವೆಂದೂ, ಈ ಕಾರಣದಿಂದ ಕವಿಜೀವನದ ವಿವರಗಳಿಂದ ಕೃತಿಯ ಗುಣ – ದೋಷಗಳ ವಿವರಣೆಗೆ ಪ್ರಯತ್ನಿಸಬಹುದೆಂದೂ ಹೊರಡುವುದು ಸರಿಯಲ್ಲ. “ಒಂದು ವೇಳೆ ಕವಿಕೃತಿಯ ಹಲವು ಅಂಶಗಳಿಗೂ ಕವಿಜೀವನ ಚರಿತ್ರೆಗೂ ನಿಕಟವಾದ ಸಂಬಂಧ ಕಂಡುಬಂದರೂ ಸಹ, ಆ ಕೃತಿ ಅದನ್ನು ರಚಿಸಿದ ಕವಿಜೀವನದ ನಕಲೆಂದು ಖಂಡಿತ ಭಾವಿಸಬಾರದು…. ಕಲಾಕೃತಿ ಹೆಚ್ಚೆಂದರೆ ಕಲಾವಿದನ ಒಂದು ‘ಕನಸು’ ಎನ್ನಬಹುದು; ಅಥವಾ ಅದು ತನ್ನ ನಿಜವಾದ ವ್ಯಕ್ತಿತ್ವವನ್ನು ಮರೆಮಾಡಿಕೊಳ್ಳಲು ಆತ ಧರಿಸಿದ ಮುಖವಾಡವಾಗಬಹುದು; ಅಥವಾ ಅದು ಕವಿ ತಾನು ಯಾವ ಬದುಕಿನಿಂದ ತಪ್ಪಿಸಿಕೊಳ್ಳಲು ಬಯಸುವನೋ ಅಂಥ ಬದುಕಿನ ಚಿತ್ರವಾಗಿರಬಹುದು.”[10] ಆದಕಾರಣ ಕವಿಯ ಕಾವ್ಯದ ಪಾತ್ರಗಳಲ್ಲಿ, ಆತ ಕೃತಿಯಲ್ಲಿ ವ್ಯಕ್ತಪಡಿಸುವ ಭಾವನೆಗಳಲ್ಲಿ, ಧ್ಯೇಯಗಳಲ್ಲಿ ಕವಿಯೇ ನಿಂತು ನುಡಿಯುತ್ತಿರುವನೆಂದಾಗಲಿ, ಅದು ಕವಿ ತಾನು ಬಾಳಿನಲ್ಲಿ ಬದುಕಿದ ಪರಿಯ ಚಿತ್ರಣವೆಂದಾಗಲಿ ಭಾವಿಸುವುದು ಅಷ್ಟು ಸರಿಯಾಗುವುದಿಲ್ಲ. ಅಷ್ಟೇ ಅಲ್ಲ, ಕವಿಯ ಕಾವ್ಯ ಒಂದು ಆದರ್ಶ ಸ್ಥಿತಿಗೆ ಕವಿ ಏರಲು ಸಂಕಲ್ಪಿಸಿದ ಹಾರೈಕೆಯೇ ಹೊರತು, ಅವನು ಕವಿಯಾಗಿ ಬದುಕಿದ ಹಲವು ಕ್ಷಣಗಳ ಚಿತ್ರವೇ ಹೊರತು, ಅವನು ಲೋಕದಲ್ಲಿ ಬಹುಪಾಲು ಬದುಕಿದ ವಾಸ್ತವ ಸ್ಥಿತಿಯ ಚಿತ್ರಣವಾಗಲಾರದು. “ಕವಿಗಳು ತಮ್ಮ ವಾಸ್ತವ ಜೀವನದಲ್ಲಿರುವುದಕ್ಕಿಂತ ಕಾವ್ಯಾನುಶೀಲನ ಕಾಲದಲ್ಲಿ ಉತ್ತಮ ವ್ಯಕ್ತಿಗಳಾಗಿದ್ದರು ಅಥವಾ ಅವರು ತಮ್ಮ ಅತ್ಯುತ್ತಮ ಕೃತಿರಚನೆಯ ಮುಹೂರ್ತಗಳಲ್ಲಿ ಅತ್ಯುತ್ತಮವಾಗಿ ಬದುಕಿದ್ದರು”[11]… ಎಂದು ಭಾವಿಸುವುದು ಒಳ್ಳೆಯದು. ಉಳಿದ ಹಾಗೆ ಅವರು ತೀರಾ ಸಾಮಾನ್ಯರಿಗಿಂತ ಭಿನ್ನವಾದ ಅಡ್ಡಹಾದಿಗಳನ್ನು ತುಳಿದಿರಬಹುದು. ಕವಿಕೃತಿಯಲ್ಲಿ ಕಂಡುಬರುವ ಜೀವನಕ್ಕೂ, ನಿಜವಾದ ಅವರವರ ವ್ಯಕ್ತಿಜೀವನಕ್ಕೂ ಯೋಜನಗಳ ಅಂತರ ಕಾಣಬಹುದು. ಸಮಸ್ತ ದುರ್ವ್ಯಾಪಾರಗಳನ್ನೆಲ್ಲ ಕೆಲವು ಸಮರ್ಥರಾದ ಲೇಖಕರಲ್ಲಿ ಕಾಣಬಹುದು. ಮನಶ್ಯಾಸ್ತ್ರ ಅದಕ್ಕೂ ಕಾರಣಗಳನ್ನು ಊಹಿಸುತ್ತದೆ. ಸಿ.ಜೆ. ಯೂಂಗ್ ಅವರು ಹೇಳುತ್ತಾರೆ : “ಕಲಾವಿದನನ್ನು ಆಕ್ರಮಿಸುವ ಆ ಕಲಾಪ್ರವೃತ್ತಿ ಎಷ್ಟರಮಟ್ಟಿಗೆ ಅವನ ವ್ಯಕ್ತಿತ್ವವನ್ನು ಶೋಷಣೆಗೈಯ್ಯಬಹುದೆಂದರೆ, ಆ ಕಲೆಗಾರನಲ್ಲಿ ಅಹಂಕಾರದ ಮೂಲವಾದ ಸ್ವಾರ್ಥಕ್ಷುದ್ರಾದಿ ಗುಣಗಳನ್ನೇ ಉಳಿಸುವಷ್ಟರ ಮಟ್ಟಿಗೆ! ಇವು (ಈ ದುರ್ಗುಣಗಳು) ಅವನ ವ್ಯಕ್ತಿತ್ವ ಆ ಪ್ರಚಂಡಶಕ್ತಿಯ ಪ್ರವಾಹದಲ್ಲಿ ಕೊಚ್ಚಿಹೋಗದಂತೆ ತಡೆಯಲು ಅಗತ್ಯವಾದುವು ….ಒಂದು ವಿಶೇಷ ಶಕ್ತಿಲಾಭ ಎಂದರೆ, ಒಂದು ದಿಕ್ಕಿನಲ್ಲಿ ಅವನ ಚೇತನಕ್ಕೊದಗುವ ಅಪಾರ ಶಕ್ತಿವ್ಯಯ; ತತ್ಪರಿಣಾಮವಾದ ಒಂದು ಶೋಷಣೆ.”[12] ಕಲಾಪ್ರವೃತ್ತಿ ಎಂದರೆ ವ್ಯಕ್ತಿಯೊಬ್ಬನನ್ನು ತನ್ನದೊಂದು ಉಪಕರಣವನ್ನಾಗಿ ಮಾಡಿಕೊಳ್ಳುವ ಪ್ರಬಲವಾದ ಶಕ್ತಿ. ಕಲಾವಿದನ ಸ್ಥಿತಿ ಹೀಗಿರುವಾಗ[13] ಅವನ ಕೃತಿಯ ಮಹತ್ತನ್ನು ಗಮನಿಸಿ ಗೌರವಿಸದೆ ಅವನು ಎಡವಿ ಜಾರಿಬಿದ್ದುದನ್ನೇ ನೆನೆಯುವುದು ಎಷ್ಟೊಂದು ತಪ್ಪಾಗುತ್ತದೆ! ಆತ ಕವಿಯಾಗಿ ಎದ್ದಿದ್ದಾನೆ; ಮನುಷ್ಯ ವ್ಯಕ್ತಿಯಾಗಿ ಬಿದ್ದಿದ್ದಾನೆ. ಕೃತಿ ಹೊತ್ತು ತರುವ ಉಜ್ವಲಾನುಭವದ ಬೆಳಕಿನಲ್ಲಿ ವ್ಯಕ್ತಿಜೀವನದ ಸಣ್ಣ ತಪ್ಪುಗಳು ಕಾಲಕ್ರಮೇಣ ಮರೆತೇಹೋಗುತ್ತವೆ! “ಆ ಹಿರಿಯ ಹೆಸರುಗಳಿಗೆ ಅವುಗಳ ಘನತೆಗೆ ತಕ್ಕ ಮಾನ್ಯತೆಯನ್ನು ಆ ಅನಂತರ ಬಂದ ಪೀಳಿಗೆ ಯಥೇಷ್ಟವಾಗಿ ಸಲ್ಲಿಸಿದೆ. ಅವರ ತಪ್ಪುಗಳನ್ನು ತೂಗಿನೋಡಿ ಅವು ಎಲ್ಲೋ ತಕ್ಕಡಿಯ ಮೇಲಿರುವ ಧೂಳು ಎಂದೆಣಿಸಲಾಗಿದೆ. ಅವರ ಅಪಾರಾಧಗಳು ‘ಅಂದು ಕಡುಕೆಂಪಾಗಿದ್ದರೆ ಇಂದು ಅವು ಹಿಮದಂತೆ ಬೆಳ್ಳಗಿವೆ.’ ಮಧ್ಯಸ್ಥಗಾರನೂ, ಪಾಪವಿಮೋಚಕನೂ ಆದ ಕಾಲಪುರುಷನ ರಕ್ತಾರ್ಪಣೆಯಲ್ಲಿ ಆ ದೋಷಗಳು ಕೊಚ್ಚಿಕೊಂಡು ಹೋಗಿವೆ.”[14] ಏನಾದರೂ ಕಡೆಗೆ ಉಳಿಯತಕ್ಕದ್ದು ಕವಿಯ ಕೃತಿ; ಹಾಗೂ ಅದರಲ್ಲಿ ಅಭಿವ್ಯಕ್ತವಾದ ಶಕ್ತಿ. ಕವಿ ಬದುಕಿದ್ದಾಗ ಕೂಡ, ಅವನು ಯಾವ ಶಕ್ತಿಗೆ ಅಧೀನನಾಗಿದ್ದನೋ ಅದು ಆತನ ವೈಯಕ್ತಿಕ ಕುಂದು-ಕರೆಗಳ ಬಗೆಗೆ ನಮ್ಮಂತೆ ಕೇವಲ ನೈತಿಕದೃಷ್ಟಿಯಿಂದ ವರ್ತಿಸುವಷ್ಟು ಕೃಪಣವಾಗಿರಲಿಲ್ಲ!

ಕವಿಯ ವ್ಯಕ್ತಿತ್ವದಲ್ಲಿ, ರಾಗ-ದ್ವೇಷಾದಿಗಳಿಂದ ಬದ್ಧವಾದ ಲೋಕ ವ್ಯಕ್ತಿ ಬೇರೆ; ಮಹೋನ್ನತ ಹಾರೈಕೆಗಳಿಂದ ತುಡಿಯುವ ಕಲಾವ್ಯಕ್ತಿ ಬೇರೆ. ಒಂದು ಉಳಿಯತಕ್ಕದ್ದು, ಮತ್ತೊಂದು ಅಳಿಯತಕ್ಕದ್ದು,[15] ಕೇವಲ ವ್ಯಕ್ತಿಯೊಬ್ಬನ ಬಹಿರಂಗ ಜೀವನವನ್ನು ಗಮನಿಸಿ ಅವನ ಅಂತರಂಗದ ಜೀವನದ ಪರಿಗಳನ್ನು ನಾವು ನಿರ್ಣಯಿಸುವುದು ಅಸಾಧ್ಯ. ಎಲ್ಲೋ ಒಂದೆರಡು ಪ್ರಸಂಗಗಳಲ್ಲಿ ವ್ಯಕ್ತಿ ನಡೆದುಕೊಂಡ ವಿವರಗಳಿಂದ ಅವನ ಸಮಸ್ತ ಜೀವನವನ್ನು ನಾವು ಅಳೆದು ತೂಗಬಲ್ಲೆವೆ? ಅವಥಾ ವ್ಯಕ್ತಿಯ ಸಮಸ್ತಜೀವನವೂ ಅವನ ಬಹಿರಂಗ ವರ್ತನೆಗಳಲ್ಲಿ ಸಂಪೂರ್ಣವಾಗಿ ವ್ಯಕ್ತವಾಗಲು ಸಾಧ್ಯವೆ? ಒಬ್ಬನ ಜೀವನವನ್ನು ಮತ್ತೊಬ್ಬ ಎಷ್ಟರ ಮಟ್ಟಿಗೆ ಕಾಣಬಲ್ಲ? ಇನ್ನೊಬ್ಬರ ಜೀವನವನ್ನಿರಲಿ ನಮ್ಮ ಅಂತರಂಗದ ಜೀವನವನ್ನೆ ನಾವು ಎಷ್ಟರಮಟ್ಟಿಗೆ ಕಂಡಿದ್ದೇವೆ? ವ್ಯಕ್ತಿತ್ವ ಎನ್ನುವುದು ಅಷ್ಟು ಸರಳವಲ್ಲ; ಅದಕ್ಕೆ ನೂರು ಪದರಗಳಿವೆ. ಮನಶ್ಯಾಸ್ತ್ರವೂ ಯಾವುದೋ ಒಂದು ಪದರದಲ್ಲಿ ನಿಲ್ಲುವುದಷ್ಟೆ? ಹೀಗಿರುವಾಗ ಬಹುಮುಖ ವ್ಯಕ್ತಿಯಾದ ಕವಿಯ ಜೀವನವನ್ನು ಅವನ ಜೀವನಚರಿತ್ರೆಯ ಒಂದೆರಡು ಪ್ರಸಂಗಗಳ ಆಧಾರದಿಂದ ಯಾವುದೋ ನಿರ್ಣಯಕ್ಕೆ ಬಂದು, ಅದನ್ನು ಅವನ ಕೃತಿ ವಿಮರ್ಶೆಗೆ ಬಳಸುವುದು ಸಾಧುವೆ? ಹಡಗಿನ ಬಹುಭಾಗ ನೀರಿನಲ್ಲಿರುತ್ತದೆ; ಮೇಲೆ ಕಾಣುವುದು ಅದರಲ್ಲೊಂದು ಭಾಗ ಮಾತ್ರ. ಮಹಾಸಾಗರದಲ್ಲಿ ತೇಲುವ ಹಿಮಪರ್ವತಗಳ ಮೇಲ್ಭಾಗ ಮಾತ್ರ ನಾವಿಕರಿಗೆ ಕಾಣಿಸುವುದು. ಅದರ ಮುಕ್ಕಾಲು ಭಾಗವೆಲ್ಲಾ ಸಮುದ್ರದ ಒಳಗೇ. ಅಂತೆಯೇ ಕವಿಯ ವ್ಯಕ್ತಿತ್ವದ ಬಹುಭಾಗ ನಮಗೆ ಅಗೋಚರವಾದ ಸಂಯಮಪೂರ್ಣವಾದ ಪರಿಭಾವನೆಯಲ್ಲಿ ಮುಳುಗಿರುತ್ತದೆ. ಅಲ್ಲಿಂದಲೇ ಕಾವ್ಯಸೃಷ್ಟಿ. ಬಹಿರಂಗದಲ್ಲಿ ಅವನ ಬದುಕು ಒಂದು ಬಗೆಯ ಅಸಂಯಮ ಪ್ರವೃತ್ತಿಯಿಂದ ತುಂಬಿದಂತೆ ಕಂಡರೂ, ಕಾವ್ಯಕಲೆಯ ಉಗಮ ಅಂತರಂಗದ ಸೃಷ್ಟಿಶೀಲವಾದ ಸಂಯಮದಿಂದಲೇ.

ಹಾಗಾದರೆ ಕವಿಯ ಜೀವನಚರಿತ್ರೆ ಕವಿಯ ಕೃತಿವಿಮರ್ಶೆಯಲ್ಲಿ ಯಾವ ರೀತಿಯಲ್ಲಿಯೂ ನೆರವಾಗಲಾರದೆ? ಅಥವಾ ನಾವು ಅದನ್ನು ಬಳಸಿಕೊಳ್ಳಲೇ ಬಾರದೆ ಎಂಬ ಪ್ರಶ್ನೆ ಏಳುತ್ತದೆ. ಕವಿಜೀವನಚರಿತ್ರೆ ತನಗೆ ತಾನೇ ಪ್ರತ್ಯೇಕವಾದ ‘ಜೀವನ ಚರಿತ್ರೆ’ ಎಂಬ ಸಾಹಿತ್ಯ ಪ್ರಕಾರವಾಗಿ ನಿಲ್ಲಲು ಸಾಧ್ಯ. ಅದಕ್ಕೆ ತನ್ನದೇ ಆದ ಸ್ವಾರಸ್ಯಗಳಿವೆ. “ಅದರಲ್ಲಿ ಎಷ್ಟೋ ವೇಳೆ ತೀರ ಅಸಂಬದ್ಧವಾದ ಸಂಗತಿಗಳೂ ಇರುವುದುಂಟು. ಆದರೂ ಕವಿಮನೋಧರ್ಮವನ್ನು ಗುರುತಿಸಲು ಸಹಾಯಕವಾಗುವಂಥ ಅಂಶಗಳನ್ನು ವಿಮರ್ಶಕನಾದವನು ಕಡೆಗಣಿಸಲಾಗುವುದಿಲ್ಲ.”[16] ಜೊತೆಗೆ “ಕವಿಕೃತಿಯಲ್ಲಿ ಕಂಡುಬರುವ ಅಭಿವ್ಯಕ್ತಿಯ ಅರಕೆಗಳನ್ನು ತುಂಬಲು, ಮತ್ತು ಕವಿ ಯಾವುದನ್ನು ಹೇಳಲು ಆಶಿಸಿದ್ದನೋ, ಆದರೆ ಕೃತಿಯಲ್ಲಿ ಅಂಥದನ್ನು ಹೇಳಲಾಗಿಲ್ಲವೊ ಅದನ್ನು ತುಂಬಿಕೊಡಲು ಕವಿಯ ಜೀವನಚರಿತ್ರೆಯಿಂದ ಸಹಾಯವಾಗಬಹುದು.”[17] ಕವಿಕೃತಿಗೆ ಪ್ರೇರಣೆಗಳನ್ನು ಒದಗಿಸಿದ ವ್ಯಕ್ತಿಗಳು, ಶಕ್ತಿಗಳು, ಅವನು ಪರಿಚಯ ಮಾಡಿಕೊಂಡ ಪುಸ್ತಕಗಳು, ಅವನ ಬದುಕನ್ನು ರೂಪಿಸಿದ ಘಟನೆಗಳು, ಇತ್ಯಾದಿಗಳನ್ನು ಕವಿಕೃತಿಯ ಬೆಳಕಿನಲ್ಲಿ ಪರಿಶೀಲಿಸುವುದು, ವಿಮರ್ಶೆಯ ವಲಯದಾಚೆ ನಿಲ್ಲುವ, ತನಗೆ ತಾನೇ ಸ್ವಾರಸ್ಯವಾದ ಸಂಗತಿ.[18] ಆದರೆ ಕವಿಜೀವನದ ಅಸಂಬದ್ಧವಾದ ಕ್ಷುಲ್ಲಕ ಸಂಗತಿಗಳನ್ನು ಮುಂದುಮಾಡಿಕೊಂಡು, ಸೊಗಸಾದ ಕವಿಕೃತಿಯ ಮೊಸರಿನಲ್ಲಿ ಕಲ್ಲು ಹಾಕುವ ಚಾಪಲ್ಯವೂ ಹಲವರನ್ನು ಕಾಡಿದೆ. ಹೀಗಾಗಿ ಕವಿಯ ಜೀವನಚರಿತ್ರೆಯ ಅಂಶಗಳಿಂದ ಕೃತಿ ವಿಮರ್ಶೆಗೆ ಕೆಲವು ಸಲ ಅನುಕೂಲವಾಗಿರುವುದಾದರೂ, ಅನುಕೂಲಕ್ಕಿಂತ ಅನನುಕೂಲಗಳಾಗುವ ಸಾಧ್ಯತೆಗಳೇ ಹೆಚ್ಚು. ನಿಜವಾದ ವಿಮರ್ಶಕ ಕೃತಿಯ ಆಸ್ವಾದನ ಸಮಯದಲ್ಲಿ ಕೃತಿವಲಯವನ್ನು ಮೀರಿ ಆಚೆಗೆ ಹೋಗುವುದಿಲ್ಲ. ಕಾವ್ಯಾವಲೋಕನದಲ್ಲಿ ನಮಗೆ ಕಾವ್ಯ ಪ್ರಧಾನವೇ ಹೊರತು ಕವಿಯ ಜೀವನಚರಿತ್ರೆ ಅಲ್ಲ.[19] ಕವಿಜೀವನಚರಿತ್ರೆಯ ಆಧಾರದಿಂದ ಕೃತಿ ಪರಿಶೀಲನೆಗೆ ತೊಡಗಬೇಕು ಎಂದರೆ, ಕಾವ್ಯಾಸ್ವಾದ ಕಾಲದಲ್ಲಿ ಕೃತಿಯ ಮೇಲೆ ಕೇಂದ್ರೀಕೃತವಾಗಬೇಕಾದ ಗಮನವನ್ನು ಕವಿಯ ಜೀವನದ ಕಡೆ ತಿರುಗಿಸಬೇಕು ಎಂದು ಹೇಳಿದಂತಾಗುತ್ತದೆ. ಆದರೆ ವಾಸ್ತವವಾಗಿ “ಕೃತಿಯ ವಿಚಾರದಲ್ಲಿ ನಾವು ಮಾಡುವ ಪ್ರಾಮಾಣಿಕವಾದ ವಿಮರ್ಶೆಯಾಗಲಿ, ಪ್ರಶಂಸೆಯಾಗಲಿ, ಕಾವ್ಯವನ್ನು ಕುರಿತದ್ದಾಗಿರಬೇಕೇ ಹೊರತು ಕವಿಯನ್ನಲ್ಲ.”[20]

ಕವಿಯ ವ್ಯಕ್ತಿತ್ವ ಅನೇಕ ಶ್ರೇಣಿಗಳಲ್ಲಿ ಸಂಚರಿಸುತ್ತದೆ – ವಾದ್ಯವೊಂದರ ವಿವಿಧ ಸ್ವರಸ್ಥಾನಗಳ ಮೇಲಾಡುವ ವಾದಕನ ಬೆರಳುಗಳಂತೆ. ಅವನ ಈ ಸಂಚಾರ ಶ್ರೇಣಿಯಲ್ಲಿ ಈ ಲೌಕಿಕವೂ ಅಂಥದೊಂದು ಸ್ವರಸ್ಥಾನವಾಗಬಹುದು. ಅವನು ಅಲ್ಲಿ ನಿಂತು ಒಮ್ಮೆ ಅಧ್ಯಾತ್ಮದ, ಒಮ್ಮೆ ಪ್ರೇಮದ, ಒಮ್ಮೆ ಸಾಮಾಜಿಕದ ವಿವಿಧ ಸ್ತರಗಳನ್ನು ಮುಟ್ಟಿ ಮುಟ್ಟಿ ಬರುತ್ತಾನೆ. ಅಧ್ಯಾತ್ಮದ ಮಜಲಿಗೇರಿದಾಗ, ಆ ಅನುಭವದ ಸ್ವರಸ್ಥಾನದಲ್ಲಿ ನಿಂತಾಗ ಅವನು ಅಧ್ಯಾತ್ಮ ಕವಿ; ಪ್ರೇಮದ ಮಜಲಿನಲ್ಲಿ ಪ್ರೇಮಕವಿ, ಹೀಗೆ ಆಯಾ ಅನುಭವವನ್ನು ಮುಟ್ಟಿ ಮಿಡಿದಾಗ ಆಯಾ ಸ್ತರದ ಕವಿ. ಆದರೆ ಅವನ ಒಲವು ಯಾವ ಒಂದು ನಿರ್ದಿಷ್ಟ ಶ್ರೇಣಿಯ ಬಗೆಗೆ ಮಿಗಿಲಾಗಿದೆಯೋ, ಯಾವುದನ್ನು ಅವನು ತನ್ನ ಜೀವಜೀವಾಳವನ್ನಾಗಿ ಮಾಡಿ -ಕೊಂಡಿದ್ದಾನೆಯೋ, ಅದರ ಮೇಲೆ ನಾವು ಆತನ ವಿಶಿಷ್ಟತೆಯನ್ನು ಗುರುತಿಸಬೇಕಾಗುತ್ತದೆ.

ಕವಿ – ವ್ಯಕ್ತಿಯ ಈ ಸಮಸ್ಯೆ ತುಂಬಾ ಜಟಿಲವಾದುದು, ವಿವಾದಾಸ್ಪದವಾದುದು. ವಿಮರ್ಶಕನಾದವನು ಗಮನಿಸಬೇಕಾದುದು ಇಷ್ಟು : ಕವಿಯ ವೈಯಕ್ತಿಕ ಜೀವನ ಬೇರೆ; ಅವನ ಕೃತಿ ಬೇರೆ. ಕವಿಜೀವನದ ವಿವರಗಳಿಂದ ವಿಮರ್ಶಕನು ಕೃತಿಯ ಬೆಲೆಯನ್ನು ಕಟ್ಟುವ ಪ್ರಯತ್ನ ಸಾಧುವಾದುದಲ್ಲ. ಕವಿಜೀವನದ ವಿಚಾರವನ್ನು ಬೇಕಾದರೆ ಪ್ರತ್ಯೇಕವಾಗಿ, ಜೀವನ ಚರಿತ್ರೆಯ ದೃಷ್ಟಿಯಿಂದ ನೋಡಬಹುದು. ಕವಿಯ ಕಾವ್ಯದಲ್ಲಿ ವ್ಯಕ್ತವಾಗಿರುವ ಆದರ್ಶಗಳನ್ನು ನೋಡಿ, ಅವನ ಜೀವನ ಅದಕ್ಕೆ ಸಮರ್ಥನೀಯವಾಗಿಲ್ಲವೆಂಬ ಕಾರಣದಿಂದ ಕಾವ್ಯದ ಮಹತ್ವವನ್ನು ಕೀಳ್ಗಳೆಯುವುದಾಗಲಿ, ಕವಿಜೀವನಚರಿತ್ರೆಯಿಂದ ವ್ಯಕ್ತವಾಗುವ ಆತನ ವ್ಯಕ್ತಿತ್ವದ ಮಹತ್ತನ್ನು ನೋಡಿ, ಸುಮಾರಾದ ಕವಿತೆಯನ್ನೂ ಸಹ ಅತ್ಯುತ್ಕೃಷ್ಟ ಎಂದು ಅಟ್ಟಕ್ಕೇರಿಸುವುದಾಗಲಿ – ಎರಡೂ ವಿಮರ್ಶಕನ ಕಾರ್ಯಗಳಲ್ಲ. ಅತ್ಯುತ್ತಮವಾದ ಕಾವ್ಯವನ್ನು ಬರೆಯುವುದಕ್ಕಿಂತ ಅತ್ಯುತ್ತಮವಾದ ಜೀವನವನ್ನು ನಡೆಸುವುದು ಮಹತ್ತಾದುದು ಎನ್ನುವುದನ್ನು ಮನಸಾರೆ ಒಪ್ಪಿದರೂ, ಕಾವ್ಯವಿಮರ್ಶೆಯಲ್ಲಿ ಕವಿಜೀವನಚರಿತ್ರೆಯ ಘಟನೆಗಳನ್ನು ಆ ಕಾಲದಲ್ಲಿ ತಾರದೆ, ಅದನ್ನು ಚಾರಿತ್ರಿಕ ಕುತೂಹಲದಿಂದ ನೋಡುವುದು ಒಳಿತು. ಏಕೆಂದರೆ “ಮಹಾವ್ಯಕ್ತಿಗಳು ಅಪೂರ್ವ, ಕವಿಗಳು ಅಪೂರ್ವ; ಆದರೆ ಮಹಾವ್ಯಕ್ತಿ ಕವಿಯೂ ಆಗಿರುವುದು ಅತ್ಯಪೂರ್ವ.”[21]


[1] ತೀ.ನಂ.ಶ್ರೀ. : ಪಂಪ. ಪು. ೪, ೫

[2] Emile Legoius : William Wordsworth and Annette Valloin.

[3] Seigfried Sassoon : Grandeur of Ghosts :

When I have heard small talk about great men
I Climb to bed; light my two candles : then
Consider what was said; and put aside
what such-a-one remarked and some one else replied.
They have spoken lightly of my deathless friends,
(Lamps for my gloom, hands guiding where I stumble,)
Quoting, for shallow conversational ends,
What Shelly shrilled, what Blake once wildly muttered…..
How can they use such names and be not humble
I have sat silent : angry at what they uttered
The dead bequeathed them life; the dead have said
What these can only memorize and mumble.

[4] C.J. Jung : Modern Man in Search of a Soul, p. 194-195

ಕವಿ ಪಂಪ, ವಿಕ್ರಮಾರ್ಜುನ ವಿಜಯವನ್ನು ಬರೆಯುವ ಕಾಲದಲ್ಲಿ, ಅರಿಕೇಸರಿಯನ್ನು ಅರ್ಜುನನಲ್ಲಿ ಅಭಿನ್ನಗೊಳಿಸುವ ‘ಅಳ್ತಿ’ಗೆ ಮನಸೋತಿದ್ದ. ಆದಿಪುರಾಣವನ್ನು ಬರೆಯುವ ಸಂದರ್ಭದಲ್ಲಿ ತನ್ನ ಸಮಸ್ತ ಲೋಕಮರ್ಯಾದೆ ಗೌರವಗಳ ಬಗೆಗೆ ಒಂದು ಕ್ಷಣ ತಿರಸ್ಕಾರವನ್ನು ವ್ಯಕ್ತಪಡಿಸಿ “ಕವಿತೆಯೊಳಾಸೆಗೆಯ್ವ ಫಲಮಾವುದೊ ಪೂಜೆ ನೆಗಳ್ತೆ ಲಾಭಮೆಂಬಿವೆ ವಲಂ?” ಇವಕ್ಕಿಂತಲೂ ಮಿಗಿಲಾದ ಪದವಿಗಳು ಜಿನೇಂದ್ರ ಗುಣಸ್ಥಿತಿಯಿಂದ ದೊರೆಯುವಾಗ “ಪೆರರೀವುದೇಂ ಪೆರರ ಮಾಡುವುದೇಂ ಪೆರರಿಂದವಪ್ಪುದೇಂ” (ಆ. ಪು. ೧-೩೬) ಎಂದು ಹೇಳಿದ ಮನಃಸ್ಥಿತಿಯನ್ನು ಇಲ್ಲಿ ನೆನೆಯುವುದು ಅಪ್ರಕೃತವಾಗಲಾರದು. ಒಂದು ಪ್ರಾತಃಕಾಲದಲ್ಲಿ ಇಬ್ಬನಿಗಳನ್ನು ಕಂಡು, ಅದರ ರಸಾನುಭವದಿಂದ ಪುಲಕಗೊಂಡ ಕವಿ ಕುವೆಂಪು, “ಪೋ! ಇದರ ಮುಂದೆ ಅರಸನ ಸಿರಿಯೇ? ಕಬ್ಬಿಗನ ಕಾಲ್ಗಳಡಿ ಚಕ್ರವರ್ತಿಯ ವಿಪುಲ ಸಂಪತ್ತು!” ಎನ್ನುತ್ತಾರೆ (ಪಕ್ಷಿಕಾಶಿ  : ಪು. ೮೫)

[5] ಕವಿ ತಾನು ದೈವೀಶಕ್ತಿಯ ಉಪಕರಣ ಮಾತ್ರ ಎನ್ನುವ ಶ್ರದ್ಧೆ ನಮ್ಮ ದೇಶದ ಕವಿಗಳಲ್ಲಿ ವಿಶೇಷವಾಗಿ ಕಂಡು ಬರುತ್ತದೆ. ‘ವೀರನಾರಾಯಣನೆ ಕವಿ ಲಿಪಿಕಾರ ಕುಮಾರವ್ಯಾಸ’ ಎನ್ನುತ್ತಾನೆ ನಾರಣಪ್ಪ; ನಾನು ವೀಣೆ ಅವನು ವೈಣಿಕ ಎನ್ನುತ್ತಾನೆ ಲಕ್ಷ್ಮೀಶ. ಧಾರವಾಡದ ಸಹೃದಯ ವೃಂದ ಬೇಂದ್ರೆಯವರಿಗೆ ಅವರ ಷಷ್ಠಿಪೂರ್ತಿಯ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿದಾಗ “ಈ ಎಲ್ಲ ಗೌರವಕ್ಕೆ ಸನ್ಮಾನಕ್ಕೆ ಪಾತ್ರನಾದ ನನ್ನೊಳಗಿನ ಕವಿ ಬೇಂದ್ರೆಗೆ, ಈ ಬೇಂದ್ರೆಯ ನಮಸ್ಕಾರ” – ಎಂದು ತಮ್ಮ ಭಾಷಣವನ್ನು ಆರಂಭಿಸಿದರು. ಇಂತೆಲ್ಲಾ ಮಾತುಗಳಲ್ಲಿ ಪುರಾತನ ಕವಿಯಿಂದ ನೂತನ ಕವಿಯವರೆಗೂ, ಕವಿಗಳು ಲೋಕವ್ಯಕ್ತಿ, ಕವಿವ್ಯಕ್ತಿ ಈ ಎರಡರ ಭಿನ್ನತೆಯನ್ನು ಬಿಡಿಸಿ ತೋರಿಸಿದ್ದಾರೆ. ಕಾವ್ಯನಾಮಗಳನ್ನು ಇರಿಸಿಕೊಳ್ಳುವ ಹವ್ಯಾಸದಲ್ಲೂ ನಾವು ಬಹುಶಃ ಇದನ್ನೇ ಗುರುತಿಸಬಹುದು. ಕೆ.ವಿ. ಪುಟ್ಟಪ್ಪ ಲೋಕವ್ಯಕ್ತಿಯಾದರೆ, ‘ಕುವೆಂಪು ಕವಿವ್ಯಕ್ತಿ’. ದ.ರಾ. ಬೇಂದ್ರೆ ಲೋಕವ್ಯಕ್ತಿಯಾದರೆ, ‘ಅಂಬಿಕಾತನಯದತ್ತ’ ಕವಿವ್ಯಕ್ತಿ.

[6] ಪು.ತಿ.ನ. ಅವರು ‘ಚಿಕುಹೂ’ ಎಂಬ ಕವನದಲ್ಲಿ ಕವಿಯಲ್ಲಿರುವ ಹಲವು ವ್ಯಕ್ತಿತ್ವಗಳ ಪರಿಚಯವನ್ನು ಬಲು ಸೊಗಸಾಗಿ ಈ ಪಂಕ್ತಿಗಳಲ್ಲಿ ಹೇಳಿದ್ದಾರೆ.

ಭವಿನಾ ತಾಪಸಿ ನಾನು
ಕವಿ ನಾ ಕಿಂಕರ ನಾನು
ನಾನು ಇದಕಿತಿಯೇನಿದೆ
ಮಿತಿಯೇನಿದೆ,

[7] Letters of Aurobindo : III Series, p. 53-54

[8] T.S. Eliot : Selected Prose, p. 28

[9] ಅಲ್ಲೇ

[10] Austin Warren & Rene Welleck : Theory of Literature, p. 72

[11] F.L. Lucas : Style, p. 62

[12] C.H. Jung : Modern Man in Search of a Soul, p. 196

[13] ಮನಶ್ಶಾಸ್ತ್ರ ಕವಿಯ ವ್ಯಕ್ತಿತ್ವದ ಬಗೆಗೆ ಹೀಗೆ ಹೇಳುತ್ತದೆ ಎಂದಾಗಲಿ, ಹೀಗೆ ಅಸ್ತವ್ಯಸ್ತವಾಗಿ ಬಾಳುವುದೆ ಉತ್ತಮ ಕಲೆಗಾರನ ಸಲ್ಲ ಕ್ಷಣವೆಂದಾಗಲಿ ಭಾವಿಸಿ ಎಲ್ಲ ಬಗೆಯ ಕಲಾವಿದರೂ ತಮ್ಮ ಚಾರಿತ್ರ್ಯವನ್ನು ಸಮರ್ಥಿಸಿಕೊಳ್ಳತೊಡಗಿದರೆ, ಅದಕ್ಕೆ ಅವರೇ ಹೊಣೆ, ಮನಶ್ಶಾಸ್ತ್ರವಲ್ಲ!

[14] Edmund D. Jones : English Critical Essays, 19th Century (Shelly : A Defence of Poetry) p. 135

(ಸಿ. ಮಹದೇವಪ್ಪ : ಷೆಲ್ಲಿಯ ಕಾವ್ಯ ಸಮರ್ಥನೆ. ಪು. ೫೧)

[15] ಕಾವ್ಯಕ್ಕಿಂತ ಜೀವನ ದೊಡ್ಡದು. ಮಹಾವ್ಯಕ್ತಿಗಳ ಜೀವನ ಕವಿಗಳ ಕಾವ್ಯದ ವಸ್ತುವಾಗಿ ಅದರ ಉಳಿವಿಗೂ ಕಾರಣವಾಗುತ್ತದೆ ಎಂಬುದನ್ನು ಮರೆಯಬಾರದು. ಆದರೆ ಕವಿ ಜೀವನದ ಬಗ್ಗೆ ಆ ಮಾತು ಬೇರೆ.

[16] Helen Gardner : The Business of Criticism. p. 22

[17] A.E. Pawell : The Romantic Theory of Poetry, p. 243

[18] ಈ ಬಗ್ಗೆ ಕುತೂಹಲವುಳ್ಳವರು Livingston Lowes ಅವರ The Road to Xanadu ಎಂಬ ಅಪೂರ್ವ ಗ್ರಂಥವನ್ನು ನೋಡಬಹುದು.

[19] ಆಧ್ಯಾತ್ಮ ಪಥದಲ್ಲಿ ನಡೆಯುವ ವ್ಯಕ್ತಿ – ಸಾಧುವೋ ಸಂತನೋ, ಮಠಾಧಿಪತಿಯೋ – ಬಾಯಲ್ಲಿ ಒಂದು ಹೇಳುತ್ತಾ ಆಚರಣೆಯಲ್ಲಿ ಬೇರೊಂದು ಬಗೆಯಾಗಿ ನಡೆದರೆ ಜನತೆ ಅವನ ವಿಚಾರದಲ್ಲಿ ಗೌರವವನ್ನು ಕಳೆದುಕೊಂಡು ಕೂಡಲೇ ಬಹಿಷ್ಕರಿಸುತ್ತದೆ. ಆದರೆ ಕವಿಯ ಬಗೆಗೆ ಮಾತ್ರ ಅವನಲ್ಲಿ ಈ ಅಸಾಮಂಜಸ್ಯವನ್ನು ಕಂಡರೂ ಜನತೆ ಅದನ್ನು ಅಷ್ಟಾಗಿ ಗಮನಿಸದೆ ಅವನ ಕೃತಿಗಾಗಿ ಗೌರವಿಸುತ್ತಾ ಬಂದಿರುವುದು ಗಮನಾರ್ಹವಾದ ಸಂಗತಿ.

[20] T.S. Eliot : Selected Prose. p. 20

[21] John Drinkwater : The Lyric p. 26

��ರt!�H���%P(��

೮. ಅರ್ಜುನ + ಸುಭದ್ರೆ

[15] ಮುಳಿಯ ತಿಮ್ಮಪ್ಪಯ್ಯ : ನಾಡೋಜ ಪಂಪ. ಪು. ೧೮೯

[16] Sri Aurobindo : Kalidasa II Series, p.12

[17] ಅಲ್ಲೇ ಪು. ೧೨

[18] Cassel’s Encyclopaedia of Literature, p. 130

[19] Cassel’s Encyclopaedia of Literature, p. 130

[20] Sri Aurobindo : The future poetry p. 54

[21] ಕೃತಿಗಳನ್ನಿರಿಸಿರೊಂಡು ಸಾಂಸ್ಕೃತಿಕ ಅಧ್ಯಯನಕ್ಕೆ ಮೀಸಲಾದ ಕೆಲವು ಗ್ರಂಥಗಳಿವೆ. ಅವುಗಳಲ್ಲಿ ಬಿ.ಎಸ್. ಉಪಾಧ್ಯಾಯ ಅವರ India in Kalidasa ಎಂಬ ಗ್ರಂಥವನ್ನು ನೋಡಬಹುದು.

[22] ಶ್ರೀ ಅನಂತ ಕೃಷ್ಣಶರ್ಮ ‘ಸಾಹಿತ್ಯ ಮತ್ತು ಜೀವನ ಕಲೆ’ ಎಂಬ ಪುಸ್ತಕದಲ್ಲಿ ‘ರಾಯರ ಕಾಲದ ರಸಿಕತೆ’ (ಪುಟ ೪೩-೬೪) ಎಂಬ ಲೇಖನವನ್ನು ನೋಡಿ ಕೃಷ್ಣದೇವರಾಯನ ‘ಆಮುಕ್ತ ಮೌಲ್ಯದ’ ಪೆದ್ದನಾರ್ಯನ ‘ಮನುಚರಿತ್ರೆ’, ತಿಮ್ಮನ್ನ ಕವಿಯ ‘ಪಾರಿಜಾತಾಪಹರಣಮು’ – ಈ ಮೂರು ಕಾವ್ಯಗಳಲ್ಲಿ ಚಿತ್ರಿತವಾಗಿರುವ ಜನಜೀವನದ ಚಿತ್ರಗಳ ಆಧಾರದಿಂದ ಶ್ರೀ ಶರ್ಮರು ಕೃಷ್ಣದೇವರಾಯನ ಕಾಲದ ರಸಿಕತೆಯ ಚಿತ್ರವನ್ನು ಕಟ್ಟಲು ಪ್ರಯತ್ನಿಸಿದ್ದಾರೆ. ಅವರು ರಾಯರ ಕಾಲದ್ದೇ ಎಂದು ಹೇಳುವ ಆ ಜೀವನ, ನಿಜವಾಗಿಯೂ ವಾಸ್ತವವಾದದ್ದೆ ಅಥವಾ ಕವಿ ಕಲ್ಪಿತವಾದದ್ದೆ – ಎಂಬ ಭ್ರಾಂತಿಯನ್ನು, ಈ ಕಾಲದವರಾದ ನಮಗೆ ಉಂಟು ಮಾಡುತ್ತದೆ.