ಒಂದು ಭಾಷೆಯ ಕವಿಕೃತಿಗೂ ಮತ್ತೊಂದು ಭಾಷೆಯ ಕವಿಕೃತಿಗೂ ಕೆಲವು ಸಂದರ್ಭಗಳಲ್ಲಿ ಸಮಾನತೆ ಕಂಡುಬಂದಾಗ ವಿಮರ್ಶಕನಾದವನು ಅಂಥ ಸನ್ನಿವೇಶಗಳನ್ನು ಇರಿಸಿಕೊಂಡು, ಸಮಾನ ವಸ್ತುವನ್ನು ಕುರಿತು ಭಿನ್ನದೇಶದ, ಭಿನ್ನ ಭಾಷೆಯ ಕವಿಪ್ರತಿಭೆ ಕೆಲಸ ಮಾಡಿರುವ ಪರಿಯನ್ನು ಗುರುತಿಸಿ ತೋರಿಸಬಹುದು. ಷೇಕ್ಸ್‌ಪಿಯರ್ ಕವಿಯ ‘ಟೆಂಪೆಸ್ಟ್’ ನಾಟಕದಲ್ಲಿ ಬರುವ ಮಿರಾಂಡಳ ಪಾತ್ರವನ್ನೂ ‘ಒಥೆಲೋ’ ನಾಟಕದ ಡೆಸ್ಡಿಮೋನಳ ಪಾತ್ರವನ್ನೂ, ‘ಶಾಕುಂತಲ’ ನಾಟಕದ ಶಕುಂತಲೆಯ ಪಾತ್ರವನ್ನೂ ಮುಂದಿರಿಸಿಕೊಂಡು ಬಂಕಿಂಚಂದ್ರಚಟ್ಟೋಪಾಧ್ಯಾಯರು ಆ ಮೂರು ಪಾತ್ರಗಳ ಸಾಮ್ಯ-ವೈಷಮ್ಯಗಳನ್ನು ಪರಿಶೀಲಿಸಿದ್ದಾರೆ.

[1] ಶ್ರೀ ಎಸ್.ವಿ. ರಂಗಣ್ಣನವರು ಶಾಕುಂತಲದ ಐದನೆಯ ಅಂಕದ ಸನ್ನಿವೇಶವನ್ನು ಷೇಕ್ಸ್‌ಪಿಯರ್‌ನ ‘ದಿ ವಿಂಟರ‍್ಸ್ ಟೇಲ್’ (The Winter’s Tale) ನಲ್ಲಿ ಸತಿ ಹರ‍್ಮಿಯೋನ್ ಇಂಥದೇ ಒಂದು ಸನ್ನಿವೇಶದಲ್ಲಿ ತನ್ನ ಗಂಡನಾದ ಲಿಯಾಂಟೀಸ್‌ನೊಂದಿಗೆ ನಡೆದುಕೊಂಡ ರೀತಿಯೊಂದಿಗೆ ಹೋಲಿಸಿ ನೋಡಿದ್ದಾರೆ.[2] ಆದರೆ ಈ ಎರಡು ಪ್ರಯತ್ನಗಳೂ ಹಿತವಾಗಿಲ್ಲವೆಂದೇ ಹೇಳಬೇಕು. ಏಕೆಂದರೆ ಪಾಶ್ಚಾತ್ಯ ಪೌರ‍್ವಾತ್ಯ ಕವಿಗಳ ಈ ನಿರ್ಮಿತಿಗಳಲ್ಲಿ ಕೃತಿಗೆ ಹಿನ್ನೆಲೆಯಾದ ಸನ್ನಿವೇಶ, ಮನೋಧರ್ಮ, ಉದ್ದೇಶ ಇವುಗಳ ವಿಚಾರದಲ್ಲಿ ಪೂರ್ವ ಪಶ್ಚಿಮದಷ್ಟು ಅಂತರವಿದೆ. ಬಂಕಿಂಚಂದ್ರರು ಶಕುಂತಲಾ ಮಿರಾಂಡಾ ಇಬ್ಬರನ್ನೂ ಕುರಿತು “ಇಬ್ಬರೂ ಋಷಿಕನ್ಯೆಯರು, ಪ್ರಾಸ್ಪಿರೋ, ವಿಶ್ವಾಮಿತ್ರರಿಬ್ಬರೂ ರಾಜರ್ಷಿಗಳು. ಋಷಿ ಕನ್ಯೆಯರಾದುದರಿಂದ ಇಬ್ಬರಿಗೂ ಅಮಾನುಷಿಕ ಸಹಾಯವಿತ್ತು. ಮಿರಾಂಡಳು ಏರಿಯಲ್‌ನಿಂದ ರಕ್ಷಿತಳಾದವಳು. ಶಕುಂತಲೆಯು ಅಪ್ಸರರಿಂದ ರಕ್ಷಿತಳಾದವಳು”- ಎಂದು ಬರೆಯುತ್ತಾರೆ. ಈ ಹೋಲಿಕೆಯ ಒಂದೊಂದು ಮಾತೂ ವಿವಾದಾಸ್ಪದವಾದುದು. ಶಕುಂತಲೆಗೂ ಮಿರಾಂಡಳಿಗೂ ಕೆಲವು ಗುಣಗಳ ಸಾಮ್ಯವಿರಬಹುದು; ಆದರೆ ಪ್ರಾಸ್ಟಿರೋ ಮತ್ತು ವಿಶ್ವಾಮಿತ್ರ ಇವರಿಬ್ಬರೂ ‘ರಾಜರ್ಷಿ’ಗಳು, ಎಂದು ಮಾಡುವ ತುಲನೆ ಸಾಧುವಾಗಿಲ್ಲ. ಜೊತೆಗೆ, ಶಕುಂತಲೆ ಬೆಳೆದ ಆವರಣಕ್ಕೂ, ಮಿರಾಂಡಾ ಬೆಳೆದ ಆವರಣಕ್ಕೂ ವಿಶೇಷವಾದ ವ್ಯತ್ಯಾಸವಿದೆ. ಹಾಗೆಯೇ ದುರಂತ ನಾಯಿಕೆಯಾದ ಡೆಸ್ಡಿಮೋನಳಿಗೂ, ಶಕುಂತಲೆಗೂ ಇರುವ ಹೋಲಿಕೆಯನ್ನು ಎಷ್ಟು ದೂರ ಒಯ್ಯಬಹುದು? ಶ್ರೀ ರಂಗಣ್ಣನವರ ತೌಲನ ಕ್ರಮವೂ ಅಷ್ಟೇ. ‘ದಿ ವಿಂಟರ‍್ಸ್ ಟೇಲ್’ನಲ್ಲಿ ಬರುವ ಸಂದರ್ಭವೂ, ಶಾಕುಂತಲದ ಐದನೆಯ ಅಂಕದ ಸಂದರ್ಭವೂ ಮೇಲು ನೋಟಕ್ಕೆ ಒಂದೇ ಎಂಬಂತೆ ತೋರಿದರೂ, ಆ ಸನ್ನಿವೇಶದ ಹಿಂದುಮುಂದುಗಳ ದೃಷ್ಟಿಯಿಂದ ನೋಡಿದರೆ, ಈ ಸಂದರ್ಭಗಳನ್ನು ಹೋಲಿಸಿ ಶಕುಂತಲೆಗಿಂತ ಹರ್ಮಿಯೋನಳ ನಡವಳಿಕೆ ಅತ್ಯುತ್ತಮವಾಗಿದೆ ಎಂದು ಅವರು ಹೇಳುವ ತೀರ್ಮಾನವನ್ನು ಒಪ್ಪಲಾಗುವುದಿಲ್ಲ. ಹೇಗೋ ಎಲ್ಲೋ ಸಾಮ್ಯ ಕಂಡಕೂಡಲೇ, ಅವುಗಳನ್ನು ಪರಸ್ಪರ ಹೋಲಿಸಿ ನೋಡುವ ಪ್ರವೃತ್ತಿಯನ್ನು ತಡೆಹಿಡಿಯುವುದು ವಿಮರ್ಶಕರಿಗೆ ಅಸಾಧ್ಯವಾದರೂ, ತಾವು ತುಲನೆಗೆಂದು ಎತ್ತಿಕೊಂಡ ಸಂದರ್ಭಗಳ ಹಿಂದೆ ಇರುವ ಕಾಲ-ದೇಶ-ಸಂಸ್ಕೃತಿಗಳ ಭಿನ್ನತೆಯನ್ನೂ ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ಶ್ರೀ. ಕೆ. ನರಸಿಂಹಮೂರ್ತಿಯವರು “ಶ್ರೀ ರಾಮಾಯಣದರ್ಶನವೂ ಪಾಶ್ಚಾತ್ಯ ಸಾಹಿತ್ಯವೂ”[3] ಎನ್ನುವ ಲೇಖನದಲ್ಲಿ, ‘ರಾಮಾಯಣ ದರ್ಶನ’ದ ಹಲವು ಸನ್ನಿವೇಶ ಸಂದರ್ಭಗಳನ್ನು, ಪಾಶ್ಚಾತ್ಯಕಾವ್ಯಗಳಲ್ಲಿ ಕಂಡುಬರುವ ಅದೇ ರೀತಿಯ ಸನ್ನಿವೇಶ ಚಿತ್ರಣಗಳೊಂದಿಗೆ ಹೋಲಿಸಿದ್ದಾರೆ. ಹಲವು ಭಾಷೆಗಳ, ಸಾಹಿತ್ಯವನ್ನು ಓದಿಕೊಂಡವರು, ಬೇರೆ ದೇಶದ, ಬೇರೆ ಭಾಷೆಯ ಸಾಹಿತ್ಯ ಕೃತಿಗಳಲ್ಲಿ ಸಾಮ್ಯವನ್ನು ಕಂಡಾಗ, ಅವೆರಡನ್ನೂ ಇರಿಸಿಕೊಂಡು ಎರಡು ಕವಿ ಮನಸ್ಸುಗಳು ಹೇಗೆ ಸಮಾನವಾದ ರೀತಿಯಲ್ಲಿ ಕೆಲಸ ಮಾಡಿವೆ ಎನ್ನುವುದನ್ನು ತೋರಿಸುವುದು ಒಳ್ಳೆಯದು. ಅದರ ಬದಲು ಅಂಥ ಸಂದರ್ಭಗಳನ್ನೆತ್ತಿಕೊಂಡು ಒಂದರ ಪ್ರಭಾವದಿಂದಲೇ ಮತ್ತೊಂದು ರೂಪಿತವಾಗಿದೆ ಎಂದು ಖಚಿತವಾಗಿ ತೋರಿಸಲು ಹೊರಡುವವರು ಕೊಂಚ ಯೋಚನೆ ಮಾಡಬೇಕು. ಎಂದರೆ ಒಂದರ ಪ್ರಭಾವದಿಂದಲೇ ಮತ್ತೊಂದು ರೂಪಿತವಾಗಿದ್ದರೂ, ಆ ವಿಚಾರದಲ್ಲಿ ವಿಮರ್ಶಕ ಕಣ್ಣು ಮುಚ್ಚಿಕೊಂಡು ದಾಕ್ಷಿಣ್ಯವಿಮರ್ಶೆಯಲ್ಲಿ ತೊಡಗಬೇಕು ಎಂದಲ್ಲ. ಕೃತಿಗಳೆರಡರ ಪಾತ್ರಗಳಲ್ಲಿ, ಸನ್ನಿವೇಶ ಚಿತ್ರಣಗಳಲ್ಲಿ ಹೋಲಿಕೆ ಕಂಡಾಗ ಆಯಾ ಕವಿಯ ಕಾಲ, ದೇಶ, ಆಯಾ ಕವಿಗಳ ಪ್ರತಿಭೆಗೆ ಹಿನ್ನೆಲೆಯಾದ ಸಂಸ್ಕಾರ, ಸಂಸ್ಕೃತಿ ಇವುಗಳನ್ನು ಮರೆತು, ಹೋಲಿಕೆ ಕಂಡದ್ದೇ ಒಂದು ವಿಶೇಷವೆಂಬಂತೆ ಅವರೆಡನ್ನೂ ಇರಿಸಿ ಕವಿಯ ಮಹತ್ತಿನ ತುಲನೆಗೆ ಇಂಥ ಕೆಲವೇ ಸಂದರ್ಭಗಳನ್ನು ಮಾನದಂಡವನ್ನಾಗಿ ಮಾಡಿಕೊಳ್ಳಬಾರದು. ಎಷ್ಟೋ ವೇಳೆ ಪಾಶ್ಚಾತ್ಯ ರೊಮ್ಯಾಂಟಿಕ್ ಕಾವ್ಯದ ಪ್ರಚೋದನೆಯಿಂದ ನವೋದಯ ಕನ್ನಡ ಕಾವ್ಯ ಮೊದಲಾಯಿತೆಂಬ ಮಾತನ್ನು ಇಟ್ಟುಕೊಂಡು ಹೊಸಗನ್ನಡ ಕವಿತೆ ಸಾಧಿಸಿರುವುದೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಇಂಗ್ಲಿಷ್ ಕವಿಗಳ ನೆರಳು ಎನ್ನುವಂಥ ಪ್ರಮಾದ ವಿಮರ್ಶೆಯ ಮಾತುಗಳನ್ನೂ ಕೆಲವರು ಆಡಿರುವುದುಂಟು. ಈ ರಭಸದಲ್ಲಿ ಕನ್ನಡ ಕವಿಗಳು ಎಷ್ಟರಮಟ್ಟಿಗೆ ಹೊರಗಡೆಯಿಂದ ಪ್ರಚೋದಿತರಾಗಿದ್ದಾರೆ, ಎಷ್ಟರಮಟ್ಟಿಗೆ ಇದು ನಮ್ಮದೇ ಆಗಿದೆ, ಅಷ್ಟೇ ಅಲ್ಲ, ಇಂಗ್ಲಿಷ್ ಕವಿಗಳಿಗಿಂತಲೂ ಯಾವ ಯಾವ ದಿಶೆಯಲ್ಲಿ ಇವರು ಮುಂದುವರಿದಿದ್ದಾರೆ ಎನ್ನುವುದನ್ನು ಇಂಥ ವಿಮರ್ಶಕರು ಮರೆತುಬಿಡುವುದುಂಟು. ‘ರಾಮಾಯಣ ದರ್ಶನ’ದ ಕೆಲವು ಭಾಗಗಳನ್ನು, ಆಂಗ್ಲ ಸಾಹಿತ್ಯದ ಕೆಲವು ಭಾಗಗಳೊಂದಿಗೆ ಹೋಲಿಸತ್ತಾ “ತನ್ನ ಕಾವ್ಯದ ಕೆಲವು ಸಂಚಿಕೆಗಳ ಆರಂಭದಲ್ಲಿ ಮಿಲ್ಟನ್ ತನ್ನ ವೈಯಕ್ತಿಕ ಅನುಭವ, ಅಭಿಪ್ರಾಯಗಳನ್ನು ರೂಪಿಸುವುದುಂಟು. ಅವನಂತೆ ಕುವೆಂಪು ‘ಚಿತ್ರಕೂಟಕೆ’ ಎಂಬ ಸಂಚಿಕೆಯ ಮೊದಲಲ್ಲಿ ತಮ್ಮ ಪೂರ್ವಾನುಭವವನ್ನು ಹೇಳಿಕೊಳ್ಳುತ್ತಾರೆ.

ಮಲೆಯನಾಡೆನಗೆ
ತಾಯಿಮನೆ. ಕಾಡು ದೇವರ ಬೀಡು, ಗಿರಿಯ ಮುಡಿ

ಶಿವನ ಗುಡಿ, ಬನವೆಣ್ಣೆ ಮೊದಲಿನಾ ಮನದನ್ನೆ.”[4]

– ಎಂದು ನರಸಿಂಹಮೂರ್ತಿಯವರು ಹೋಲಿಸಿ ತೋರಿಸಿದ್ದಾರೆ. ಈ ಮಾತು ತನಗೇ ತಾನೇ ನೇರವಾಗಿ ಬರುವಷ್ಟು ಮಲೆನಾಡಿನ ಅನುಭವದ, ಮಲೆನಾಡನ್ನು ಕುರಿತ ಪ್ರೀತಿಯ ಆಧಿಕ್ಯದ ಬೆಂಬಲ ಕುವೆಂಪು ಅವರಿಗಿದೆ. ‘ಮಿಲ್ಟನ್ನನಂತೆ’ ಕುವೆಂಪು ಅವರು ಹೇಳಿಕೊಂಡಿರುವುದರ ಸಾಮ್ಯವನ್ನು ಗಮನಿಸುವ ಮೊದಲು ಕವಿ ಪಂಪನ ‘ಬನವಾಸಿ’ಯ ವರ್ಣನೆಯನ್ನು ಒಮ್ಮೆ ವಿಮರ್ಶಕರು ಗಮನಿಸಬೇಕಾಗಿತ್ತು. ಪ್ರಾರ್ಥನೆ ತಪಸ್ಸುಗಳ ಮಹಿಮೆಯನ್ನು ಹಲವು ಪಾತ್ರಗಳ ಬಾಯಲ್ಲಿ ಕುವೆಂಪು ಅವರು ಹೇಳಿಸಿರುವ ಭಾಗಗಳನ್ನು ಟೆನ್ನಿಸನ್ ಕವಿಯ ‘ಮಾರ‍್ಟ್‌ಡಿ ಆರ‍್ಥರ್’ ಎಂಬ ಕವನದ “God fulfils Himself in many ways” ಎಂಬ ಪಂಕ್ತಿಯೊಂದಿಗೆ, “More things are brought by prayer than this world dreams of” ಎಂಬ ಮಾತುಗಳೊಂದಿಗೆ ಹೋಲಿಸಿ ನೋಡಿದ್ದಾರೆ. ಹೀಗೆ ಹೋಲಿಸುವ ರಭಸದಲ್ಲಿ, ಅವರು ಭಾರತೀಯ ಪರಂಪರೆಯಲ್ಲಿ ಇಂಥ ಸಾವಿರ ಮಾತುಗಳಿವೆ ಎಂಬುದನ್ನು ಮರೆತಿರುವಂತಿದೆ. ಪೂಜೆ, ಪ್ರಾರ್ಥನೆ, ತಪಸ್ಸು, ಇತ್ಯಾದಿ ವಿಷಯಕವಾದ ಅಭಿಪ್ರಾಯಗಳಿಗೆ ಭಾರತೀಯ ಕವಿ, ಪಾಶ್ಚಾತ್ಯ ಕವಿಗಳಲ್ಲಿ ಅಲ್ಲೊಂದು ಇಲ್ಲೊಂದು ಗೋಚರವಾಗುವ ಮಾತುಗಳಿಂದ ದೀಪ್ತವಾಗಬೇಕಾದ ಅಗತ್ಯವೇನೂ ಇಲ್ಲ. ಈ ಹೋಲಿಕೆಯ ಅತಿರೇಕದಲ್ಲಿ ಲೇಖಕರು “ಆಂಜನೇಯನ ಸಾಗರೋಲ್ಲಂಘನದ ಸಾಹಸದ ವರ್ಣನೆಯ ಮಹಾಛಂದಸ್ಸಿನ ಓಟದ ಮೇಲೆ ಸೇಟನ್ ಖೇಯಾಸ್ ಹಾರುವ ವರ್ಣನೆಯ ಪ್ರಭಾವ ಬೀಳುತ್ತದೆ”. “ಜೂಲಿಯಸ್ ಸೀಸರ್ ನಾಟಕದಲ್ಲಿ ಬ್ರೂಟಸ್ ಮತ್ತು ಮಾರ್ಕ್ ಆಂಟೋನಿ ಮಂದಿಯ ಮನಸ್ಸನ್ನು ಒಲಿಸಿಕೊಳ್ಳಲು ಉಪಯೋಗಿಸುವ ವಾಗ್ಮಿ ತಂತ್ರಗಳನ್ನು ಕುವೆಂಪುವಿನ ಮಂಥರೆ, ಕೈಕೆಯ  ಮನಸ್ಸನ್ನು ಒಲಿಸಿಕೊಳ್ಳಲು ಉಪಯೋಗಿಸುತ್ತಾಳೆ. ಇನ್ನೂ ಪರಿಣಾಮಕಾರಿಯಾಗಿರುವುದು ರಾವಣಪಾತ್ರ ಚಿತ್ರದ ಮೇಲೆ ಬಿದ್ದಿರುವ ಮ್ಯಾಕ್‌ಬೆತ್ ಪಾತ್ರದ ಪ್ರಭಾವ” – ಇಂಥ ಮಾತುಗಳನ್ನು ಹೇಳಿದ್ದಾರೆ. ಈ ಮಾತುಗಳಿಂದ ವಿಮರ್ಶಕರ ವಿಸ್ತಾರವಾದ ವಿದ್ವತ್ತು ಗೋಚರವಾಗುತ್ತದೆ; ಒಂದಕ್ಕೂ ಮತ್ತೊಂದಕ್ಕೂ ಇರುವ ಸಾಮ್ಯವನ್ನು ಅವರ ಕಣ್ಣು ಸೂಕ್ಷ್ಮವಾಗಿ ಗುರುತಿಸುತ್ತದೆ; ಆದರೆ ತೀರಾ ಭಿನ್ನಮನೋಭಾವದ, ಭಿನ್ನ ಹಿನ್ನೆಲೆಯ ಸನ್ನಿವೇಶ ಹಾಗೂ ಪಾತ್ರಗಳನ್ನು ಒಟ್ಟಿಗೆ ಇರಿಸಿ ನೋಡುವುದು ಎಷ್ಟರಮಟ್ಟಿಗೆ ಉಚಿತ ಎನ್ನುವ ಅಂಶ ಮಾತ್ರ ಕಡಿಮೆಯಾಗಿದೆ. ಆದರೆ ಕೆಲವು ಕಡೆ ಅವರ ಪ್ರಯತ್ನ ಮೆಚ್ಚುವಂತಿದೆ; ಕುವೆಂಪು ಅವರಿಗೆ ನೇರವಾದ ಪ್ರಚೋದನೆ ಪ್ರಭಾವ ಅಲ್ಲಿಂದಲೆ ಬಂದಿದೆ ಎಂದು ಒಪ್ಪಿಕೊಳ್ಳಲರ್ಹವಾದ ಕೆಲವು ವರ್ಣನೆಗಳನ್ನು ಬೆರಳಿಟ್ಟು ತೋರಿರುವುದು ಪ್ರಶಂಸನೀಯವಾಗಿದೆ.[5] ಆದರೆ ಪ್ರತಿ ಪಂಕ್ತಿ ಪಂಕ್ತಿಗೆ, ಪಾತ್ರ ಪಾತ್ರಕ್ಕೆ ಪಾಶ್ಚಾತ್ಯ ಸಾಹಿತ್ಯದಿಂದ ಪಂಕ್ತಿಗಳನ್ನು ಉದ್ಧರಿಸಿ ತೋರಿಸುವುದರ ಮೂಲಕ ಈ ಕವಿ ಬೇರೆ ಕವಿಗಳಿಂದಲೇ ಈ ಸಾಮಗ್ರಿಗಳನ್ನು ಎತ್ತಿಕೊಂಡಿದ್ದಾನೆ, ಅವುಗಳಿಲ್ಲದಿದ್ದರೆ ಈ ಕವಿ ಕೃತಿಯ ಈ ಸಂದರ್ಭಗಳು ಹೀಗೆ ಮೂಡುತ್ತಿರಲಿಲ್ಲ ಎಂಬಂತಹ ಧೋರಣೆಯನ್ನು ತಾಳಿರುವುದು ಸರಿಯಲ್ಲ. ದೊಡ್ಡ ಚೇತನಗಳು ಸಮಾನವಾಗಿ ಆಲೋಚಿಸಬಹುದು. ಅವೆರಡರಲ್ಲೂ ಸಾಮ್ಯಕಂಡರೆ ಅದು ಯಾರ ದೋಷವೂ ಅಲ್ಲ. ಸಾರಾಂಶ ಇಷ್ಟು : ಸಾಮ್ಯದಿಂದ ಸ್ವಾಮ್ಯವನ್ನೇ ಶಂಕಿಸುವುದು ಸರಿಯಲ್ಲ.

ಚಾರಿತ್ರಿಕ ವಿಧಾನ

‘ಸಾಹಿತ್ಯ ಜನಜೀವನದ ಪ್ರತಿಬಿಂಬ’, ‘ಸಾಹಿತ್ಯ ಒಂದು ಯುಗ ಮನಸ್ಸಿನ ವಾಣಿ’,  ‘ಸಾಹಿತ್ಯ ಒಂದು ರಾಷ್ಟ್ರದ ಜೀವಿತದ ಕಥೆ’ – ಇತ್ಯಾದಿ ಮಾತುಗಳನ್ನು ಯಾರು ತಾನೆ ಕೇಳಿಲ್ಲ? ಇದರ ಅರ್ಥ, ಅಂದಂದಿನ ಕವಿ ಕೃತಿಗಳಲ್ಲಿ ಒಂದು ಯುಗ, ಒಂದು ರಾಷ್ಟ್ರ, ಒಂದು ಜನಜೀವನ ತನ್ನನ್ನು ತಾನು ಪ್ರಕಟಿಸಿಕೊಳ್ಳುತ್ತದೆ ಎಂದು. ಅಂದಂದಿನ ಕವಿ ಕೃತಿ ತಾನು ರಚಿತವಾದ ಕಾಲ – ದೇಶ – ಪರಿಸರಗಳ ಒಂದು ಚಿತ್ರವನ್ನು ಅಥವಾ ಇತಿಹಾಸ -ವನ್ನು ಚಿತ್ರಿಸುತ್ತದೆ. ‘ಇತಿಹಾಸ’ ಎಂದರೆ ವಿಸ್ತಾರವಾದ ಅರ್ಥದಲ್ಲಿ ಒಂದು ಜನತೆ ತಾನು ಬಾಳಿ ಬದುಕಿದ ಪರಿ. ಆ ಜನತೆಯ ಮನೋಭಾವ, ಅದನ್ನು ರಾಜಕೀಯವಾಗಿ, ಧಾರ್ಮಿಕವಾಗಿ, ನೈತಿಕವಾಗಿ, ಸಾಮಾಜಿಕವಾಗಿ ಹಿಡಿದು ನಡೆಸುತ್ತಿದ್ದ ಶಕ್ತಿಗಳು, ಇವೆಲ್ಲವೂ ಜನಜೀವನದ ಇತಿಹಾಸವನ್ನು ರೂಪಿಸುತ್ತವೆ. ಆ ಇತಿಹಾಸದಲ್ಲಿ ಒಬ್ಬನಾಗಿ ಬದುಕಿದ ಕವಿ, ಸಹಜವಾಗಿಯೇ ಅಂದಿನ ‘ಜನಜೀವನದ ಪ್ರತಿಬಿಂಬ’ವಾಗಿ, ‘ಯುಗ ಮನಸ್ಸಿನ ವಾಣಿ’ಯಾಗಿ, ಒಂದು ‘ರಾಷ್ಟ್ರದ ಜೀವಿತದ ಕಥೆ’ಯನ್ನು ತನ್ನ ಕೃತಿಯಲ್ಲಿ ಹಿಡಿದಿಡುತ್ತಾನೆ. ಈ ದೃಷ್ಟಿಯಿಂದ “ಪ್ರತಿಯೊಂದು ಕಲಾಕೃತಿಯೂ ಕಾಲ-ದೇಶದ ಯಾವುದೋ ಬಿಂದುವಿನಲ್ಲಿ ಆವಿರ್ಭವಿಸಿದ್ದು. ಅದು ಬೇರೆಯ ಕಾಲ ದೇಶದಲ್ಲಿ ರಚಿತವಾಗಿದ್ದ ಪಕ್ಷದಲ್ಲಿ ಅದರ ಸ್ವರೂಪವೆ ಬೇರೆಯಾಗಬಹುದಾಗಿತ್ತು ಎನ್ನುವಷ್ಟರಮಟ್ಟಿಗೆ ಅದು ತಾನು ರಚಿತವಾದ ಕಾಲದಿಂದ ಬದ್ಧವಾಗಿದೆ.”[6] ಎಂದರೆ ಇದರ ಅರ್ಥ ಇಷ್ಟೆ: ಪಂಪ ತನ್ನ ಕೃತಿಯನ್ನು ಹತ್ತನೆಯ ಶತಮಾನದ ಕಾಲದಲ್ಲಿ, ಕನ್ನಡ ನಾಡಿನಲ್ಲಿ, ಒಂದು ನಿರ್ದಿಷ್ಟ ಅವಧಿಯಲ್ಲಿ ರಚಿಸಿದನು. ಎಂದರೆ ಪಂಪಭಾರತ ಹತ್ತನೆಯ ಶತಮಾನದ ಯಾವುದೋ ಒಂದು ಬಿಂದುವಿನಲ್ಲಿ ಆವಿರ್ಭವಿಸಿದ್ದು. ಒಂದು ವೇಳೆ ಪಂಪಭಾರತ, ಹತ್ತನೆಯ ಶತಮಾನದ ಬದಲು, ಹನ್ನೆರಡನೆಯ ಶತಮಾನದ ಒಂದು ಬಿಂದುವಿನಲ್ಲಿ ರಚಿತವಾಗಿದ್ದರೆ, ಅದರ ಸ್ವರೂಪ, ಸ್ವಭಾವ ಉದ್ದೇಶಗಳಲ್ಲಿ ಈಗಿರುವುದಕ್ಕಿಂತ ತೀರಾ ಭಿನ್ನವಾಗಿ ಬಿಡುತ್ತಿತ್ತು. ಎನ್ನುವಷ್ಟರ -ಮಟ್ಟಿಗೆ ಅದು ಹತ್ತನೆಯ ಶತಮಾನದ ಸತ್ವದಿಂದ ಬದ್ಧವಾಗಿದೆ. ಆದಕಾರಣ ಕೃತಿಯೊಂದರ ವಿಮರ್ಶೆಗೆ ಹೊರಡತಕ್ಕವನು ಅದನ್ನು ರಚಿಸಿದ ಕವಿ ಯಾವ ಕಾಲದವನು? ಅವನು ಯಾರಿಗಾಗಿ ಬರೆದ? ಅವನು ಉದ್ದೇಶಿಸಿ ಬರೆದ ಅಥವಾ ಪ್ರಕಟಪಡಿಸಿದ ಜನಜೀವನದ ಸ್ವರೂಪ ಸ್ವಭಾವಗಳೇನು ಎನ್ನುವ ಚಾರಿತ್ರಿಕ ಅಂಶಗಳನ್ನು ಗಮನಿಸದಿರಲು ಸಾಧ್ಯವಿಲ್ಲ.

ಪ್ರತಿಯೊಂದು ಕೃತಿಯೂ ಒಂದು ನಿಯಮಿತವಾದ ಕಾಲ, ದೇಶ, ಪರಿಸರದಿಂದ ಬದ್ಧವಾದ ಕಾರಣ, ಕೃತಿಪರಿಶೀಲನೆಯಲ್ಲಿ, ಅಂದಿನ ಇತಿಹಾಸವೂ ವಿಮರ್ಶಕನಿಗೆ ಅತ್ಯಗತ್ಯವಾದ ಪರಿಕರ ಎನ್ನುವ ಈ ಐತಿಹಾಸಿಕ ವಿಧಾನವನ್ನು ಇಂಗ್ಲಿಷ್ ಸಾಹಿತ್ಯದಲ್ಲಿ ಮೊಟ್ಟಮೊದಲು ರೂಢಿಗೆ ತಂದವನು ಕಾರ್ಲೈಲ್. ಕಾರ್ಲೈಲನಿಗೆ ಈ ಐತಿಹಾಸಿಕ ವಿಮರ್ಶಾವಿಧಾನದ ಪ್ರಚೋದನೆ ದೊರೆತದ್ದು ಜರ್ಮನ್ ಸಾಹಿತ್ಯ ವಿಮರ್ಶೆಯಿಂದ. “ಕಾರ್ಲೈಲನ ದೃಷ್ಟಿಗೆ ಕಾವ್ಯ ಆ ಒಂದು ಯುಗದ ಅತ್ಯಪೂರ್ವವಾದ ಸಂಸ್ಕೃತಿಯ ಕುಸುಮ ಮಾತ್ರವಲ್ಲ, ಅಂದಂದಿನ ಇತಿಹಾಸದ ಸಾರವೂ ಹೌದು…. ಒಂದು ದೇಶದ ಸಾಹಿತ್ಯ ಸಮಸ್ತವೂ ಆ ಒಂದು ಜನಾಂಗದ ಆತ್ಮ ಸತ್ವದ ವಿಕಾಸದ ವಿವರ ಎಂದು ತಿಳಿಯಬೇಕು. ಒಂದು ರಾಷ್ಟ್ರದ ಸಾಹಿತ್ಯ ಚರಿತ್ರೆ, ಆ ದೇಶದ ರಾಜಕೀಯ, ಸಾಮಾಜಿಕ, ಆರ್ಥಿಕ, ವೈಜ್ಞಾನಿಕ ಮತ್ತು ಧಾರ್ಮಿಕ ಇತಿಹಾಸಗಳ ಸಾರ.”[7] ಏಕೆಂದರೆ “ನಿಜವಾದ ಕಾವ್ಯ ಒಂದು ದೇಶದ ಮನಸ್ಸಿನಾಳದ ಏಕತೆಯಿಂದ ಹೊಮ್ಮಿದ ಒಂದು ಅಖಂಡಾನುಭವ…”[8]

ಹಾಗಾದರೆ ಕವಿಕೃತಿಯೊಂದರ ಆಸ್ವಾದಕ್ಕೆ ಹೊರಡತಕ್ಕವನು, ಮೊದಲು ಅದಕ್ಕೆ ಸಂಬಂಧಿಸಿದ ಸಮಸ್ತ ಐತಿಹಾಸಿಕ ದಾಖಲೆಗಳನ್ನು ಹುಡುಕಿ ಜೊತೆಗಿಟ್ಟುಕೊಂಡರೆ ಮಾತ್ರ ಕೃತಿ ಅರ್ಥವಾಗುತ್ತದೆ, ಇಲ್ಲದಿದ್ದರೆ ಇಲ್ಲ ಎಂದು ಅರ್ಥವಲ್ಲ. ಐತಿಹಾಸಿಕ ವಿವರಗಳನ್ನರಿಯದೆ ಕೃತಿ ಅರ್ಥವೇ ಆಗಲಾರದು ಎನ್ನುವುದಾದರೆ, ಆಗ ಅದು ಎಲ್ಲ ಕಾಲಕ್ಕೂ ರಸಾನುಭವಕಾರಿಯಾದ ಕಾವ್ಯವಾಗದೆ ಕೇವಲ ಚಾರಿತ್ರಿಕ ವಿಷಯಗಳ ಕಂತೆಯಾಗುತ್ತಿತ್ತು. ಕಾವ್ಯದ ವಸ್ತು ಚರಿತ್ರೆಯಾಗಿರಬಹುದು, ಆದರೆ ಕಾವ್ಯದ ಉದ್ದೇಶ ಆ ಕಾಲದ ಚರಿತ್ರೆಯನ್ನು ನಿರೂಪಿಸುವುದಲ್ಲ. ಕಾವ್ಯ ಅಂದಂದಿನ ಜನಜೀವನದ ಹಿನ್ನೆಲೆಯ ದೃಷ್ಟಿಯಿಂದ, ಕಾಲದ ದೃಷ್ಟಿಯಿಂದ ಚಾರಿತ್ರಿಕವಾದರೂ, ಅದು ತನ್ನಲ್ಲಿ ಪರಿವರ್ತಿಸಿಕೊಂಡ ಅನುಭವದ ರಸರೂಪದಿಂದ ಸಾರ್ವಕಾಲಿಕವಾಗುತ್ತದೆ. ಈ ದೃಷ್ಟಿಯಿಂದ ಪ್ರತಿಯೊಂದು ಉತ್ತಮ ಕಲಾಕೃತಿ ಏಕಕಾಲದಲ್ಲಿಯೆ ಚಾರಿತ್ರಿಕವೂ ಹೌದು ಸಮಕಾಲೀನವೂ ಹೌದು.[9] ಚಾರಿತ್ರಿಕ, ಅದು ಇಂಥ ಕಾಲದ ಇಂಥದೇ ಒಂದು ಜನಜೀವನಕ್ಕೆ ಸಂಬಂಧಿಸಿದ್ದು ಎನ್ನುವ ವಿಚಾರದಲ್ಲಿ; ಅದು ಸಮಕಾಲಿಕ, ಅದು ಇಂದಿಗೂ ನಮ್ಮದೆನ್ನುವಂತಹ ನಿತ್ಯಾಂಶಗಳನ್ನು ಒಳಗೊಂಡಿದೆ ಎನ್ನುವ ವಿಚಾರದಲ್ಲಿ. ಉದಾಹರಣೆಗೆ, ಪಂಪಕವಿ ಹತ್ತನೆ ಶತಮಾನದವನು ಚಾರಿತ್ರಿಕವಾಗಿ; ಆದರೆ ಇವತ್ತು ಅದನ್ನು ಓದುವ ಸಮಯದಲ್ಲಿ, ನಮಗಾಗುವ ಅನುಭವದಲ್ಲಿ, ನಮ್ಮ ಸದ್ಯದ ಲೋಕಾನುಭವದ ಹಿನ್ನೆಲೆಯ ‘ವಿಭಾವ’ಗಳ ಮೂಲಕ ರಸವನ್ನು ವ್ಯಂಜಿಸುವಲ್ಲಿ, ಆ ಕೃತಿ ಸಮಕಾಲೀನವೇ. ಏಕೆಂದರೆ, ಆ ಕೃತಿಯನ್ನು ಓದುವಾಗ ಇದು ಎಂದೋ ಯಾರಿಗೋ ಬರೆದದ್ದು ಅನ್ನಿಸದೆ, ಅದು ಸಮಕಾಲೀನವೂ ಹೌದೆಂಬಂತೆ ಭಾವಿಸುತ್ತೇವೆ. ಹೀಗಾಗಿ ಪ್ರತಿಯೊಂದು ಯುಗದವರಿಗೂ ನಿಜವಾದ ಕವಿಕೃತಿ ಅಂದಂದಿಗೆ ‘ಸಮಕಾಲೀನ’ ವಾಗುವಿಕೆಯಲ್ಲಿಯೆ ಅದರ ಮಹತ್ವವನ್ನು ಒಳಗೊಂಡಿದೆ. ಈ ನಿತ್ಯಾಂಶವನ್ನು ಕುರಿತೇ ಪಂಪ ಹೇಳಿದ್ದು ’ “ಇದು ನಿಚ್ಚಂ ಪೊಸತು, ಅರ್ಣವಂಬೊಲತಿ ಗಂಭೀರಂ ಕವಿತ್ವಂ.”[10]

ಕಾವ್ಯ ಚರಿತ್ರೆ ಅಲ್ಲ; ಆದರೆ ಅದು ಅಂದಂದಿನ ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿದೆ. ಆದಕಾರಣ, ಎಲ್ಲ ಸಹೃದಯರಿಗೆ ಅಲ್ಲದಿದ್ದರೂ, ಒಂದು ಕೃತಿಯ ಮಹತ್ತು ಯಾವ ಯಾವ ಅಂಶಗಳ ಮೇಲೆ ನಿಂತಿದೆ ಎನ್ನುವ ಬಗೆಗೆ ಜವಾಬ್ದಾರಿಯುತವಾದ ತೀರ್ಪನ್ನು ಹೇಳಬೇಕಾದ ವಿಮರ್ಶಕನಿಗೆ ಈ ಚಾರಿತ್ರಿಕ ಹಿನ್ನೆಲೆಯ ಪರಿಚಯ ಅತ್ಯಂತ ಅಗತ್ಯವಾದುದು. ಈ ವಿವರಗಳ ಪರಿಶೀಲನೆಯಿಂದ ಕೃತಿಯ ರಸಾನುಭವಕ್ಕೆ ಯಾವ ರೀತಿಯಿಂದಲೂ ಧಕ್ಕೆ ಒದಗುವುದಿಲ್ಲ; ಅದರ ಬದಲು ಆ ಕೃತಿಯ ರಸಾನುಭವಕ್ಕೆ ಈ ವಿಷಯಗಳಿಂದ ಅನುಕೂಲವೇ ಆಗುತ್ತದೆ. ಪ್ರತಿಯೊಂದು ಕಾಲದ ಕಾವ್ಯಮಾರ್ಗದ ವಿಶಿಷ್ಟತೆಯನ್ನು ಈ ಕ್ರಮದಿಂದ ಎತ್ತಿ ಗುರುತಿಸಬಹುದು. ಹತ್ತನೆಯ ಶತಮಾನದ ಕಾಲ ವೀರಯುಗ; ಹನ್ನೆರಡನೆಯ ಶತಮಾನ ಭಕ್ತಿಯುಗ ಎಂದು ವಿಮರ್ಶಕ ಹೇಳಬೇಕಾದರೆ, ಅದರ ಹಿನ್ನೆಲೆಯನ್ನು ಗಮನಿಸಲೇ ಬೇಕಾಗುತ್ತದೆ. ಅಂತಹ ಅರಿವಿಲ್ಲದಿದ್ದರೆ ಹನ್ನೆರಡನೆಯ ಶತಮಾನದ ಕಾವ್ಯವನ್ನು ವಿಮರ್ಶಿಸುತ್ತಾ ಈ ಕಾವ್ಯಗಳಲ್ಲಿ ವೀರರಸವೇ ಕಾಣಿಸುವುದಿಲ್ಲ, ಇವು ಕೇವಲ ಸಪ್ಪೆಯಾಗಿವೆ ಎಂದು ತಪ್ಪು ತೀರ್ಪನ್ನು ಕೊಟ್ಟು ಹಾಸ್ಯಕ್ಕೆ ಪಕ್ಕಾಗಬೇಕಾಗುತ್ತದೆ ವಿಮರ್ಶಕ. ಪಂಪನ ಕೃತಿಯನ್ನೋದುವ ವಿಮರ್ಶಕ, ಅಂದು ಅವನ ಕೃತಿಗೆ ಹಿನ್ನೆಲೆಯಾದ ರಾಜಕೀಯ ಜೀವನ ಎಂಥದು, ಅಂದು ಪ್ರಚಲಿತವಾದ ಬದುಕಿನ ಮೌಲ್ಯಗಳು ಯಾವುವು ಎನ್ನುವುದನ್ನು ಗಮನಿಸಿದರೆ ಪಂಪನ ಕೃತಿ ಹೇಗೆ ಆ ಯುಗದ ಜನಜೀವನದ ನಿಜವಾದ ಪ್ರತಿನಿಧಿಯಾಗಿದೆ ಎಂಬುದನ್ನು ಕಂಡುಕೊಳ್ಳಬಹುದು. ಆಗ ಅನ್ನಿಸುತ್ತದೆ, ಪಂಪಭಾರತ ಕೇವಲ ವ್ಯಾಸಭಾರತದ ಕನ್ನಡದ ಪಡಿನೆಳಲಲ್ಲ; ಪಂಪಕವಿಯ ಸಮಸ್ತ ಜೀವನಾನುಭವ -ದಿಂದ ಪುಟಗೊಂಡ ವಿನೂತನವಾದ ಸೃಷ್ಟಿ ಎಂದು. ಅಷ್ಟೇ ಅಲ್ಲದೆ ಒಂದು ಕೃತಿ, ಅದನ್ನು ರಚಿಸಿದ ಕವಿ ತನ್ನ ಕಾಲದ ಜನಜೀವನದ ಬಗೆಗೆ ಎಷ್ಟರಮಟ್ಟಿಗೆ ಜೀವಂತ ಪ್ರಜ್ಞೆಯನ್ನುಳ್ಳವನಾಗಿದ್ದಾನೆ ಎನ್ನುವುದನ್ನೂ ಪ್ರಕಟಿಸುವುದರ ಮೂಲಕ ತನ್ನ ಮಹತ್ತನ್ನು ಸ್ಥಾಪಿಸಿಕೊಳ್ಳುತ್ತದೆ. ಆದ್ದರಿಂದ ಕವಿಯ ಹಾಗೂ ಕೃತಿಯ ಮಹತ್ತನ್ನು ಗುರುತಿಸಿ ಹೇಳಬೇಕಾದ ವಿಮರ್ಶಕನಿಗೆ ಆ ಕೃತಿ ರಚಿತವಾದ ಸಮಯ ಸಂದರ್ಭಗಳ ಅರಿವು ಅತ್ಯಗತ್ಯವಾಗಿದೆ. “ಯಾವ ವಿಮರ್ಶಕ ಕೃತಿಸಂಬಂಧಿಯಾದ ಐತಿಹಾಸಿಕ ಅಂಶಗಳ ವಿಚಾರದಲ್ಲಿ ಅಜ್ಞನಾಗಿರುವುದರಲ್ಲೇ ತೃಪ್ತನಾಗುತ್ತಾನೆಯೋ, ಅಂಥವನ ವಿಮರ್ಶೆ ಸದಾ ದಾರಿ ತಪ್ಪುವ ಸಂಭವವಿದೆ. ಯಾವುದು ಮೊದಲು, ಯಾವುದು ಅನಂತರದ್ದು ಎನ್ನುವುದೂ ಅಂಥವನಿಗೆ ಗೊತ್ತಾಗುವುದಿಲ್ಲ. ಈ ಐತಿಹಾಸಿಕ ವಿಚಾರದಲ್ಲಿ ಸಾಕಷ್ಟು ತಿಳಿವಳಿಕೆಯಿಲ್ಲದ ವಿಮರ್ಶಕ ಹೆಜ್ಜೆ ಹೆಜ್ಜೆಗೂ ಎಡಹುವ ಸಂಭವವಿದೆ.”[11] ಕೃತಿಯ ಬೆಲೆಯನ್ನು ನಿರ್ಣಯಿಸುವ ವಿಚಾರದ ಜೊತೆಗೆ, ಒಂದು ಕೃತಿಯನ್ನು ಮತ್ತೊಂದು ಕೃತಿಯೊಂದಿಗೆ ಇರಿಸಿನೋಡುವ ತೌಲನ ವಿಮರ್ಶಾವಿಧಾನದಲ್ಲಿಯೂ, ಆತನಿಗೆ ಈ ಐತಿಹಾಸಿಕ ಹಿನ್ನೆಲೆಯ ಅಗತ್ಯ ವಿಶೇಷವಾಗಿದೆ. ಯಾವ ಕವಿ ಐತಿಹಾಸಿಕವಾಗಿ ಮೊದಲು, ಯಾರು ಅನಂತರದವನು ಎನ್ನುವ ಅರಿವಿಲ್ಲದಿದ್ದರೆ, ಯಾರಿಂದ ಯಾರು ಪ್ರಭಾವಿತರಾಗಿದ್ದಾರೆ ಎಂಬ ವಿಚಾರದಲ್ಲಿ ಅದಲು-ಬದಲು ಮಾಡಿ ವಿಮರ್ಶಕ ಗೊಂದಲವನ್ನೆಬ್ಬಿಸುವ ಸಂಭವವಿದೆ. ಅಂಥ ಸಮಯದಲ್ಲಿ, ರನ್ನನಿಂದ ಪಂಪನೂ ಭಾಸ್ಕರ ಕವಿಯಿಂದ ಕುಮಾರವ್ಯಾಸನೂ ಬೇಕಾದಷ್ಟು ಪದ್ಯಗಳನ್ನೇ ಕದ್ದು ತುಂಬಿಕೊಂಡಿದ್ದಾರೆ ಎಂಬಂಥ ವಿಮರ್ಶೆಗೆ ಆಸ್ಪದವಾಗುತ್ತದೆ. ಅಷ್ಟೇ ಅಲ್ಲದೆ, ಕವಿಕೃತಿಯಲ್ಲಿ ಕೆಲವು ಚಾರಿತ್ರಿಕವಾದ ವಿಷಯಗಳೂ ಸೇರಿಕೊಂಡು ಓದುಗರಿಗೆ ತೊಡಕನ್ನು ಉಂಟುಮಾಡಿದಾಗ, ವಿಮರ್ಶಕನಾದವನು ಅವುಗಳನ್ನು ಐತಿಹಾಸಿಕವಾಗಿ ವಿವರಿಸಿ ಸಹೃದಯರಿಗೆ ಸಹಾಯ ಮಾಡಲು ಈ ವಿಧಾನ ಉಪಯುಕ್ತವಾಗಿದೆ. ಪಂಪ – ರನ್ನರ ಕೃತಿಗಳಲ್ಲಿ ಅವರು ತಮಗೆ ಆಶ್ರಯದಾತರಾದ ರಾಜರುಗಳನ್ನು ವ್ಯಾಸಭಾರತದ ಅರ್ಜುನ ಭೀಮ ಇವರ ಪಾತ್ರಗಳಲ್ಲಿ ಅಭಿನ್ನಗೊಳಿಸಿ ಬರೆದಿರುವುದು ತಿಳಿದ ವಿಚಾರವೇ. ಅದರಲ್ಲೂ ರನ್ನನ ಕೃತಿಗಿಂತ ಪಂಪನ ಕೃತಿಯಲ್ಲಿ ಉದ್ದಕ್ಕೂ ನಡುನಡುವೆ ಅಂದಂದಿನ ಇತಿಹಾಸ, ಕಾವ್ಯದ ಟಿಕೆಟ್ಟನ್ನು ಪಡೆಯದೆ ಒಂದು ರೀತಿಯಲ್ಲಿ ಅಕ್ರಮ ಪ್ರವೇಶಮಾಡಿ ಓದುಗರನ್ನು ಅಲ್ಲಲ್ಲಿ ಕಕ್ಕಾಬಿಕ್ಕಿ ಮಾಡುತ್ತದೆ. ಅಂಥ ಸಂದರ್ಭಗಳ ಅರಿವಿಗೆ ಪಂಪನ ಕಾಲದ, ರಾಜಕೀಯ ಜೀವನದ ಪರಿಚಯ ಅಗತ್ಯವಾಗಿದೆ. ಪಂಪ ಮತದಲ್ಲಿ ಜೈನನಾಗಿದ್ದುದರ ಪರಿಣಾಮವಾಗಿ, ಕೃಷ್ಣನ ಪಾತ್ರದ ವಿಚಾರದಲ್ಲಿ ಅವನ ನಿಲುವು ಏನೆಂಬುದು ಇಂದಿಗೂ ವಿದ್ವಾಂಸರಲ್ಲಿ ವಿವಾದಾಸ್ಪದವಾಗಿದೆ. ಹನ್ನೆರಡನೆಯ ಶತಮಾನದ ಕೃತಿಗಳಲ್ಲಿ ಕಂಡುಬರುವ ಅನ್ಯಮತ ಅವಹೇಳನದ ‘ಮಾಹೇಶ್ವರಸ್ಥಲ’ದ ಮನೋಭಾವವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕಾದರೆ, ಅಂದು ಪ್ರವರ್ತನಗೊಂಡ ಹೊಸ ಧಾರ್ಮಿಕ ಕ್ರಾಂತಿಯ ಸೆಳೆತ ರಭಸಗಳನ್ನು ವಿಮರ್ಶಕ ಅರಿವು ಮಾಡಿಕೊಳ್ಳಬೇಕಾಗುತ್ತದೆ. ಆ ಕೃತಿಗಳನ್ನು ಇಂದು ಆ ಒಂದು ಹಿನ್ನೆಲೆಯಿಲ್ಲದೆ ಓದಿದವನಿಗೆ ಅಲ್ಲಿ ವ್ಯಕ್ತವಾಗಿರುವುದು ಕೇವಲ ಮತಭ್ರಾಂತಿಯ ವೀರೋನ್ಮಾದವಾಗಿ ಕಂಡೀತು. ಆದಕಾರಣ ಯಾವ ಕೃತಿಯನ್ನು ನೋಡಿ ಬೆಲೆ ಕಟ್ಟಬೇಕಾದರೂ ಅದು ಯಾವ ಸಮಯ, ಸನ್ನಿವೇಶ, ಸಂದರ್ಭಗಳ ಒತ್ತಡದಿಂದ ಮೂಡಿತೋ, ಆ ಐತಿಹಾಸಿಕ ವಿಷಯಗಳನ್ನು ವಿಮರ್ಶಕ ಕಡೆಗಣಿಸಲಾಗುವುದಿಲ್ಲ.

ಕೃತಿಯ ಸ್ವರೂಪನಿರ್ಣಯದಲ್ಲಿ ಈ ಚಾರಿತ್ರಿಕ ವಿಧಾನದಿಂದ ವಿಶೇಷವಾದ ಪ್ರಯೋಜನವಿರುವುದಾದರೂ, ಅದು ಎಷ್ಟೋ ವೇಳೆ ವಿಮರ್ಶಕನನ್ನು ತಪ್ಪು ಹಾದಿಗೆ ಕೊಂಡೊಯ್ದ ನಿದರ್ಶನಗಳೂ ಇವೆ. ಕೃತಿಗೆ ಒಂದು ಇತಿಹಾಸದ ಆಧಾರ ಅಥವಾ ಹಿನ್ನೆಲೆ ಉಂಟೆಂಬ ಕಾರಣದಿಂದ, ಕೃತಿಯಲ್ಲಿ ಅಭಿವ್ಯಕ್ತವಾಗಿರುವುದೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಅಂದಿನ ಇತಿಹಾಸದ ಯಥಾವತ್ತಾದ ಪ್ರತಿರೂಪ ಎಂದೂ, ಕೃತಿ ಅತ್ಯಂತ ಸಮರ್ಪಕವಾದ ಐತಿಹಾಸಿಕ ದಾಖಲೆಯಾಗಬಲ್ಲದು ಎಂದೂ ತಪ್ಪು ತಿಳಿಯುವ ಸಂಭವ ಉಂಟು. ಅಂಥ ತಿಳಿವಳಿಕೆಯನ್ನುಳ್ಳ ವಿಮರ್ಶಕರಿಗೆ, ಕೃತಿ ಏನಿದ್ದರೂ ಕಾವ್ಯದ ಸೋಗನ್ನು ತಾಳಿದ ಇತಿಹಾಸವೆ. “ಕವಿಗಳು ಕಾವ್ಯಗಳಲ್ಲಿನ ವಸ್ತುಗಳನ್ನು ಎಷ್ಟು ಮೇಲಕ್ಕೆತ್ತಿದರೂ ಭೂಲೋಕದ ಗಾಳಿಯನ್ನು ದಾಟುವಷ್ಟು ಮೇಲಕ್ಕೆ ತಳ್ಳಲಾರರು. ಆದ್ದರಿಂದ ಆಗಿನ ಜನರ ಸ್ವರೂಪವನ್ನು ಈ ಗ್ರಂಥಗಳಿಂದ ತಿಳಿದುಕೊಳ್ಳುವುದು ಒಂದು ಕಷ್ಟವಲ್ಲ”[12] ಎನ್ನುವ ನೆಪದಿಂದ ಹೊರಟ ವಿಮರ್ಶೆ, ಬರುಬರುತ್ತಾ ಕೃತಿಯಲ್ಲಿರುವುದೆಲ್ಲವೂ ಅಂದಿನ ಚರಿತ್ರೆಯ ಪ್ರತಿರೂಪವೇ ಎನ್ನುವ ಅತಿರೇಕಕ್ಕೆ ಹೋಗುವುದುಂಟು. ಪಂಪಭಾರತದಲ್ಲಿ ಕವಿ ತನಗೆ ಆಶ್ರಯವನ್ನು ಕೊಟ್ಟ ಅರಿಕೇಸರಿಯನ್ನು ತನ್ನ ಭಾರತದ ಕಥಾನಾಯಕನಾದ ಅರ್ಜುನನಲ್ಲಿ ಅಭಿನ್ನಗೊಳಿಸಿ ‘ಸಮಸ್ತ ಭಾರತ’ವನ್ನು ಬರೆದಿದ್ದಾನೆ; ಅಷ್ಟೇ ಅಲ್ಲದೆ ಪಂಪ ಅಂದಿನ ಎಷ್ಟೋ ಐತಿಹಾಸಿಕ ವಿಷಯಗಳನ್ನೂ ವ್ಯಕ್ತಿಗಳನ್ನೂ ಇದರಲ್ಲಿ ಅಳವಡಿಸಿಕೊಂಡಿದ್ದಾನೆ – ಎನ್ನುವ ಒಂದು ಚಾರಿತ್ರಿಕ ಹಿನ್ನೆಲೆಯನ್ನು ಗಮನಿಸಿ ಶ್ರೀ ಮುಳಿಯ ತಿಮ್ಮಪ್ಪಯ್ಯನವರು, ತಮ್ಮ “ನಾಡೋಜ ಪಂಪ” ಎಂಬ ಬೃಹದ್ ಗ್ರಂಥದಲ್ಲಿ “ಭಾರತ ಕಥಾನಾಯಕ -ರೊಳಗಿನೆಲ್ಲ ವ್ಯಕ್ತಿಗಳಿಗೂ ಪ್ರತಿಯಾಗಿ ಆಗಿನ ಕಾಲದ ಚಾರಿತ್ರಿಕ ವ್ಯಕ್ತಿಗಳನ್ನು ಕವಿ ಕಲ್ಪಿಸಿಕೊಂಡಿದ್ದನೆಂಬುದು ನಮ್ಮ ಭಾವನೆ”[13] – ಎನ್ನುವ ತೀರ್ಮಾನಕ್ಕೆ ಬಂದಿದ್ದಾರೆ. ಈ ತೀರ್ಮಾನದ ಪರಿಣಾಮವಾಗಿ ಅವರು ಪಂಪಭಾರತದ ಅಥವಾ ಮೂಲ ಭಾರತದ ಅರ್ಜುನನ ವಂಶದ ವ್ಯಕ್ತಿಗಳೊಂದಿಗೆ, ಅರಿಕೇಸರಿಯ ಚಾಳುಕ್ಯವಂಶದ ವ್ಯಕ್ತಿಗಳನ್ನು ಜೊತೆಜೊತೆಗಿರಿಸಿ ವಂಶವೃಕ್ಷದ ಚಿತ್ರವನ್ನು ಬರೆದು,[14] ಮಹಾಭಾರತದೊಳಗಣ ಇಂತಿಂತಹ ಪಾತ್ರಕ್ಕೆ, ಕವಿ ಅಂದಿನ ಇತಿಹಾಸದಲ್ಲಿ ದೊರೆಯುವ ಅರಿಕೇಸರಿಯ ಸಂಬಂಧಿಗಳಾದ ಇಂತಿಂತಹ ವ್ಯಕ್ತಿಗಳನ್ನೆ ಮನಸ್ಸಿನಲ್ಲಿ ಇಟ್ಟುಕೊಂಡಿದ್ದಾನೆ ಎಂಬುದನ್ನು ಸಾಧಿಸಿ ‘ಸಮಸ್ತಭಾರತ’ದ ಹೆಸರು ನೂರಕ್ಕೆ ತೊಂಬತ್ತರಷ್ಟು ಹೇಗೆ ಸಮರ್ಪಕವಾಗಿದೆ ಎಂಬುದನ್ನು ತೋರಿಸುವ ಸಾಹಸಕ್ಕೆ ಕೈಹಾಕಿದ್ದಾರೆ. ಅಷ್ಟೇ ಅಲ್ಲ, ಕವಿ ಬಲಭದ್ರನ ಪಾತ್ರದಲ್ಲಿ ರಾಷ್ಟ್ರಕೂಟ ಗೋವಿಂದರಾಜನನ್ನೂ, ದುರ್ಯೋಧನನ ಪಾತ್ರದಲ್ಲಿ ಬಪ್ಪುವನೆಂಬ ಸಾಮಂತವೀರನ ಅಣ್ಣನಾದ ಕಕ್ಕಲನನ್ನೂ, ವಿಜಯಾದಿತ್ಯನನ್ನು ಧರ್ಮರಾಯನ ಪಾತ್ರದಲ್ಲಿಯೂ, ರಾಜಭೀಮನನ್ನು ಭೀಮನ ಪಾತ್ರದಲ್ಲಿಯೂ ಬೆರೆಸಿರಬೇಕೆಂಬ ಊಹೆ ಈ ರೀತಿಯ ಪಟ್ಟಿಯನ್ನು ಹೆಚ್ಚಿಸಿದೆ. ತನ್ನ ರಾಜನಾದ ಅರಿಕೇಸರಿಯನ್ನು, ಕಥಾನಾಯಕನಾದ ಅರ್ಜುನನಲ್ಲಿ ಸಮಾವೇಶಗೊಳಿಸಿರುವುದಾಗಿ ಕವಿ ಹೇಳಿರುವ ಮಾತಿನ ಸ್ಪಷ್ಟ ಆಧಾರವೊಂದರ ಮೇಲೆ, ಕವಿ ಪಂಪನು ಸಂಪೂರ್ಣ ಪ್ರಜ್ಞಾಪೂರ್ವಕವೆಂಬಂತೆ ತನ್ನ ಮಹಾಭಾರತದ ಉಳಿದೆಲ್ಲ ಪಾತ್ರಗಳಲ್ಲಿಯೂ ಅಂದಿನ ಒಬ್ಬೊಬ್ಬ ಚಾರಿತ್ರಿಕ ವ್ಯಕ್ತಿಗಳನ್ನೆ ಸಮಾವೇಶಗೊಳಿಸಿದ್ದಾನೆ ಎನ್ನುವ ಊಹೆ, ತನಗೆ ತಾನೆ ಚಾರಿತ್ರಿಕವಾಗಿ ಸ್ವಾರಸ್ಯವಾಗಿರುವುದಾದರೂ, ಇದು ಎಷ್ಟರಮಟ್ಟಿಗೆ ಸಾಧ್ಯ, ಎಷ್ಟರಮಟ್ಟಿಗೆ ಸಂಪೂರ್ಣ ಚಾರಿತ್ರಿಕ ಎನ್ನುವ ಪ್ರಶ್ನೆ ಹಾಗೆಯೇ ನಿಲ್ಲುತ್ತದೆ. ಚಾರಿತ್ರಿಕ ಸಂಶೋಧನೆಗೆ ಹೊರಟವರಿಗೆ, ಅರ್ಜುನನ ಪಾತ್ರದೊಂದಿಗೆ ಅರಿಕೇಸರಿಯನ್ನು ಸಮಾವೇಶಗೊಳಿಸಿದಂತೆ, ಇನ್ನೂ ಒಬ್ಬಿಬ್ಬರನ್ನೂ ಸಮಾವೇಶ -ಗೊಳಿಸಿರುವ ಸೂಚನೆಗಳೂ ಸಿಕ್ಕಬಹುದು. ಆದರೆ ‘ಸಮಸ್ತ ಭಾರತ’ದ ಸಮಸ್ತ ಪಾತ್ರಗಳಿಗೂ, ಅಂದಿನ ಒಬ್ಬೊಬ್ಬ ವ್ಯಕ್ತಿಯನ್ನು ಕವಿ ಜೋಡಿಸಿರುವನೆಂದು, ಸಂಶೋಧಕರು ಪ್ರಜ್ಞಾಪೂರ್ವಕವಾಗಿ, ವಿವೇಚನೆಗೆ ಹೊರಟಿರುವಷ್ಟರ ಮಟ್ಟಿಗೆ, ಕವಿಯೂ ಸಂಪೂರ್ಣ ಪ್ರಜ್ಞಾಪೂರ್ವಕವಾಗಿಯೆ ಕೃತಿರಚನೆ ಮಾಡಿರಲು ಸಾಧ್ಯವೆಂಬುದನ್ನು ನಾವು ಒಪ್ಪಲಾರೆವು. ಈ ಒಂದು ಚರಿತ್ರೆಯ ಕನ್ನಡಕವನ್ನು ಹಾಕಿಕೊಂಡ ಮೇಲೆ, ಅಲ್ಲಿ – ಕಾವ್ಯದಲ್ಲಿ – ಕಂಡದ್ದೆಲ್ಲ ಚಾರಿತ್ರಿಕವೆ ಎನ್ನುವ ಭ್ರಮೆ ಕವಿದು, ಕಾವ್ಯದ ಹಾಗೂ ಕಾವ್ಯಭಾಗಗಳ ವ್ಯಾಖ್ಯಾನ ಅತ್ಯಂತ ವಿಚಿತ್ರವಾಗುವುದೂ ಉಂಟು. ಬಪ್ಪುವನ ಅಣ್ಣನಾದ ಕಕ್ಕಲನನ್ನೇ ‘ಆ ಸುಯೋಧನ’ನನ್ನಾಗಿ ಕವಿ ಬದಲಿಸಿದುದಾಗಿರಬಹುದೆ? ಎಂಬ ಊಹೆಯನ್ನು ಇರಿಸಿಕೊಂಡು ಶ್ರೀ ತಿಮ್ಮಪ್ಪಯ್ಯನವರು ಒಂದು ಪದ್ಯವನ್ನು ವ್ಯಾಖ್ಯಾನಿಸಿರುವ ರೀತಿಯನ್ನು ನೋಡಿ : “ದ್ರೋಣನ ಹೂಣಿಕೆಯಿಂದ ಹುರುಪೇರಿದ ಸುಯೋಧನನು ಸಂಸಪ್ತಕರನ್ನು ಅರಿಕೇಸರಿ (ಅರ್ಜುನ) ಯೊಡನ್ನೊಡ್ಡಿಸಲು ಹವಣಿಸುವ ಸಂದರ್ಭದ ವರ್ಣನೆಯನ್ನೀಕ್ಷಿಸಿರಿ :

ಅರಿಗನನಾಂಪ ಗಂಡುಮದಟುಂ ನಿಮಗಾವಗಮಾದುದಾಹವಾ
ಜಿರದೊಳದರ್ಕೆ ನಾಳೆ ನರನಂ ತೆಗೆದುಯ್ವುದು ಧರ್ಮಪುತ್ರನಂ
ಗುರು ಪಿಡಿದಪ್ಪನೆಂದವರನಾಗಳೆ ಪೂಣಿಸಿ ಪೋಗವೇಳ್ದು ಮ-
ಚ್ಚರದೊಳೆ ಮಾಣದೊಡ್ಡಿದನಸುಂಗೊಳೆ ಕಕ್ಕರ ಸಂಜೆ ಸಂಜೆಯೊಳ್
(ಪ. ೮೫. ಆ. ೧೧)

ಈ ಪದ್ಯದ ಕಡೆಯ ಭಾಗವನ್ನು “ಕಕ್ಕ-ಅರಸು-ಅಂಜೆ-ಸಂಜೆಯೊಳ್ ಎಂದು ವಿಂಗಡಿಸಿ ಅನ್ವಯಗೊಳಿಸಬೇಕು. ‘ಕಕ್ಕ-ಕಕ್ಕಲ’ ಮೊದಲಾದುವುಗಳು ಒಂದೇ ಹೆಸರಿನ ರೂಪಾಂತರಗಳೆಂಬುದು ಇತರ ರಾಜ ವಂಶಾವಳಿಯಿಂದ ಗೊತ್ತಾಗಿದೆ. ‘ಸಂಸಪ್ತಕರನ್ನು ಹಾಗೆ ಕಳುಹಿಸಿದ ಕಕ್ಕರಸ (ಸುಯೋಧನ)ನು ವೈರಿಗಳಂಜುವಂತೆ ಸಂಜೆಯ ಸಮಯದಲ್ಲಿ ಯುದ್ಧಕ್ಕಣಿಯಾದನು’ ಎಂದೂ, ಅದರೊಡನೆ ಕಕ್ಕರ (ಮಾಸಲು ಬಣ್ಣ)ವು ಸಂಧಿ (ಸಂಜೆ) ಗೊಂಡ ಸಂಜೆಯಲ್ಲಿ ಎಂದೂ, ಪ್ರಕೃತಾಪ್ರಕೃತಾರ್ಥಗಳು ಅಲ್ಲಿ ಸಂಧಿಸಿರಬೇಕೆಂದೂ ನಮಗೆ ತೋರುತ್ತದೆ.”[15] ‘ಕಕ್ಕರ ಸಂಜೆ ಸಂಜೆಯೊಳ್” ಎನ್ನುವ ಒಂದು ಮಾತಿನಲ್ಲಿ ಇರುವ ‘ಕಕ್ಕ’ ಎಂಬ ಒಂದು ಪದದಿಂದ, ‘ಕಕ್ಕ, ಕಕ್ಕಲ’ ಎಂಬ ರಾಜರ ಹೆಸರನ್ನು ಊಹಿಸಿ, ಆತ ಸುಯೋಧನನ ಪಾತ್ರದಲ್ಲಿ ಸಮಾವೇಶಗೊಂಡ ‘ಕಕ್ಕಲ’ನೆ ಆಗಿರಬಹುದೆ – ಎನ್ನುವ ಊಹೆ ಎಷ್ಟರಮಟ್ಟಿಗೆ ಪ್ರಕೃತ ಎಂಬುದನ್ನು ಓದುಗರೇ ಯೋಚಿಸಬೇಕು. ಇಂಥ ವಿವರಣೆಯಿಂದ ಚಾರಿತ್ರಿಕವಾಗಿ ಏನು ಲಾಭವೋ ನಮಗೆ ತಿಳಿಯದು; ಆದರೆ ಕಾವ್ಯದೃಷ್ಟಿಯಿಂದ ಇದರಿಂದ ಯಾವ ಉಪಯೋಗವೂ ಆಗುವುದಿಲ್ಲವೆಂಬುದು ಸ್ಪಷ್ಟವಾದ ವಿಚಾರ. ಇಂಥ ಹಾದಿಯಲ್ಲಿ ವಿಮರ್ಶಕ ಹೊರಡುವ ಸಾಧ್ಯತೆಯನ್ನು ಕಂಡು, ಶ್ರೀ ಅರವಿಂದರು “ಕೆಲವು ನಿಶ್ಚಿತವಾದ ಪ್ರಯೋಜನಗಳ ಕಡೆ ನಮ್ಮನ್ನು ಕೊಂಡೊಯ್ಯುವ ಕಾರಣ, ಈ ಚಾರಿತ್ರಿಕ ವಿಧಾನ ವಾಸ್ತವವಾಗಿಯೂ ಆಕರ್ಷಕವಾದ ರೀತಿಯೇ. ಯಾರಿಗೆ ದೈವದತ್ತವಾದ ಸೂಕ್ಷ್ಮದೃಷ್ಟಿ ಹಾಗೂ ಸಾಹಿತ್ಯವಿವೇಚನೆ ಇಲ್ಲವೋ ಅಂಥವರಿಗೆ, ಕೃತಿಯ ಹಲವು ಮುಖಗಳನ್ನು ಸ್ಪಷ್ಟವಾಗಿಯೂ ತಿಳಿಯಾಗಿಯೂ ಅರ್ಥಮಾಡಿಕೊಳ್ಳಲು ಈ ವಿಧಾನ ಸಹಾಯ ಮಾಡುತ್ತದೆ”[16] ಎನ್ನುತ್ತಾರೆ. ಅಷ್ಟೇ ಅಲ್ಲ. “ಅತ್ಯಂತ ಸೂಕ್ಷ್ಮಸಂವೇದನಾಶೀಲರಾದವರಿಗೆ ಇದರಿಂದ ಏನೂ ಉಪಯೋಗವಿಲ್ಲ; ಮಾನವಮತಿ ಹೇಗೆ ಕೆಲಸಮಾಡುವುದೆನ್ನುವ ಬಗೆಗೆ ನಮ್ಮ ತಿಳಿವನ್ನು ಇದು ಹೆಚ್ಚಿಸುವುದಾದರೂ, ಕಡೆಯಲ್ಲಿ ನಮ್ಮ ರಸವಿಮರ್ಶೆಗೆ ಇದರಿಂದ ಯಾವ ರೀತಿಯ ಪ್ರಯೋಜನವೂ ಆಗುವುದಿಲ್ಲ”[17] ಎನ್ನುವ ಮಾತನ್ನು ಹೇಳುತ್ತಾರೆ. ಮಾತೇನೋ ಜೋರಾಗಿದೆ. ಕೊಂಚ ಯೋಚಿಸಿದಲ್ಲಿ ಚಾರಿತ್ರಿಕ ವಿಧಾನದಿಂದ ‘ದೈವದತ್ತವಾದ ಸೂಕ್ಷ ದೃಷ್ಟಿ ಹಾಗೂ ಸಾಹಿತ್ಯ ವಿವೇಚನೆ ಇಲ್ಲದವರಿಗೆ’ ಕೃತಿಯನ್ನು ಅರ್ಥಮಾಡಿಕೊಳ್ಳಲು ಇದರಿಂದ ಸಹಾಯವಾಗಬಹುದು; ಆದರೆ ಅವರು ಭಾವಿಸುವಷ್ಟು ದಡ್ಡರಿಗೆ ಮಾತ್ರವಲ್ಲದೆ, ಅವರು ಊಹಿಸುವಷ್ಟು ಕುಶಾಗ್ರಮತಿಗಳೂ ಅಲ್ಲದ, ಸಾಧಾರಣ ಸಹೃದಯರಿಗೂ ಈ ವಿಧಾನದಿಂದ ತಕ್ಕಮಟ್ಟಿಗೆ ಪ್ರಯೋಜನ ಉಂಟು ಎಂಬುದನ್ನು ಮರೆಯಬಾರದು.

ಈ ಐತಿಹಾಸಿಕ ವಿವೇಚನೆ ಸಾಹಿತ್ಯ ವಿಮರ್ಶೆಯಲ್ಲಿ ಕೃತಿಯ ಬೆಲೆಯನ್ನು ನಿರ್ಣಯಿಸಲು ವಿಮರ್ಶಕನು ಬಳಸುವ ಒಂದು ಉಪಕರಣ ಮಾತ್ರ. ಈ ಮಾರ್ಗದಲ್ಲಿ ಕೆಲವು ದೋಷಗಳೂ ಉಂಟು. ಮೊದಲನೆಯದಾಗಿ “ಅದು ಕೆಲವು ವೇಳೆ ಕೃತಿಮೌಲ್ಯದ ಸಮಸ್ಯೆಯನ್ನೇ ಕುಗ್ಗಿಸುತ್ತದೆ. ಅಥವಾ ಯಾವುದು ಕೃತಿಯಲ್ಲಿ ಚಾರಿತ್ರಿಕವಾಗಿಯೂ ಪ್ರಧಾನವಾಗಿದೆಯೊ, ಅದು ರಸದೃಷ್ಟಿಯಿಂದಲೂ ಪ್ರಧಾನವೇ – ಎಂದು ತಪ್ಪಾಗಿ ಭಾವಿಸಲು ಅವಕಾಶಕೊಡುತ್ತದೆ.”[18] ಎಷ್ಟೋ ವೇಳೆ ಕೃತಿಯಲ್ಲಿರುವ ಅಂಶ ಚಾರಿತ್ರಿಕವಾದ ಪಕ್ಷದಲ್ಲಿ ಅದು ಚರಿತ್ರೆಯ ದೃಷ್ಟಿಯಿಂದ ಸಮಪರ್ಕವಾಗಿರಬಹುದು. ಆದರೆ ಕಾವ್ಯದೃಷ್ಟಿಯಿಂದಲೂ ಆ ಚಾರಿತ್ರಿಕ ಸಂಗತಿಗೆ ಅಷ್ಟೇ ಮಹತ್ವವಿದೆ ಎಂದು ಹೇಳಲಾಗದು. ಚಾರಿತ್ರಿಕವಾದ ವಿಷಯವೊಂದನ್ನು ಕಾವ್ಯವಸ್ತುವನ್ನಾಗಿ ಮಾಡಿಕೊಂಡ ಕವಿ ಅಥವಾ ಲೇಖಕ, ಚಾರಿತ್ರಿಕವಲ್ಲದ ಕಲ್ಪನಾ ನಿರ್ಮಿತವಾದ ಪಾತ್ರಗಳನ್ನೂ ಸನ್ನಿವೇಶಗಳನ್ನೂ ನಿರ್ಮಿಸಿದಾಗ, ಅದು ಚಾರಿತ್ರಿಕವಾಗಿ ಸರಿಯಾಗಿಲ್ಲದ ಕಾರಣ, ಅದು ಕಾವ್ಯವೇ ಅಲ್ಲವೆಂದೂ, ಇದು ಕೇವಲ ಕಾಲ್ಪನಿಕವಾದದ್ದರಿಂದ ಬೆಲೆಯಿಲ್ಲದ್ದೆಂದೂ ತೀರ್ಪುಹೇಳುವ ಚಾಪಲ್ಯಕ್ಕೆ ವಿಮರ್ಶಕರೂ ಬಲಿಯಾಗಿದ್ದಾರೆ. ಹೀಗಾಗಿ ಈ ವಿಮರ್ಶೆಯ ವಿಧಾನ “ಕೆಲವು ವೇಳೆ ಕೃತಿಯಲ್ಲಿ, ಚಾರಿತ್ರಿಕವಾಗಿ ವಿವರಿಸಲು ಸಾಧ್ಯವಾದಂತಹ ಅಥವಾ ಚಾರಿತ್ರಿಕಾಂಶ- ಗಳನ್ನು ಪ್ರತಿನಿಧಿಸುವ ಸಂಗತಿಗಳ ಬಗೆಗೆ ಅತಿ ಪ್ರಶಂಸೆಯನ್ನು ಸಲ್ಲಿಸುತ್ತದೆ. ಜೊತೆಗೆ ಅಂದಿನ ಜನಜೀವನದಲ್ಲಿ ಪ್ರಚಲಿತವಾದ ಮನೋಗತಿಗಳನ್ನು ಅಭಿವ್ಯಕ್ತಗೊಳಿಸಿಲ್ಲದಂತೆ ತೋರುವ ವ್ಯಕ್ತಿ ವಿಶಿಷ್ಟನಾದ ಕೃತಿಕಾರನನ್ನು ಕೀಳ್ಗಳೆಯುತ್ತದೆ.”[19] ಎಂದರೆ, ಕೆಲವು ವಿಮರ್ಶಕರು ಒಂದು ಕೃತಿ ಎಷ್ಟರಮಟ್ಟಿಗೆ ಅಂದಂದಿನ ಚಾರಿತ್ರಿಕಾಂಶಗಳನ್ನು ವ್ಯಕ್ತಪಡಿಸುತ್ತದೆಯೋ ಅಷ್ಟರಮಟ್ಟಿಗೆ ಅದು ಉತ್ತಮವಾದ ಕೃತಿ ಎಂದು, ಅಂದಿನ ಇತಿಹಾಸಕ್ಕೆ ಋಣಿಯಾಗಿರುವಂತೆ ತೋರದೆ, ಸ್ವತಂತ್ರವಾದ ರೀತಿಯಲ್ಲಿ ನಿರ್ಮಿತವಾದ ಕೃತಿಯೊಂದರ ಲೇಖಕನಿಗೆ ಸಮರ್ಪಕವಾದ ಇತಿಹಾಸ ಪ್ರಜ್ಞೆಯೋ, ಸಾಮಾಜಿಕ ಪ್ರಜ್ಞೆಯೋ ಸಾಲದೆಂಬ ಕಾರಣವನ್ನೊಡ್ಡಿ, ಆ ಕವಿ ಅಂಥ ಮೇಲ್ಮಟ್ಟದವನೇನಲ್ಲ ಎಂದೂ ಹೇಳುವ ಸಂಭವಗಳು ವಿಶೇಷವಾಗಿವೆ. ಆದರೆ ಕೃತಿಯ ಮಹತ್ತು ನಿಂತಿರುವುದು, ಕೃತಿಕಾರ ಎಷ್ಟರಮಟ್ಟಿಗೆ ಅಂದಂದಿನ ಚಾರಿತ್ರಿಕ ಸಂಗತಿಗಳನ್ನು ಪ್ರತಿಕೃತಿಸಿದ್ದಾನೆ ಎನ್ನುವುದರ ಮೇಲೆ ಅಲ್ಲ; ಆತ ಎಷ್ಟರಮಟ್ಟಿಗೆ ತನ್ನ ಕಾಲದ ಶಕ್ತಿಕೇಂದ್ರವಾಗಿ ನಿಂತು, ಆ ಕಾಲದ ಮನೊಧರ್ಮವನ್ನು ತನ್ನ ಕೃತಿಯಲ್ಲಿ ಪ್ರತಿಮಿಸಿದ್ದಾನೆ ಎನ್ನುವುದರ ಮೇಲೆ. ಆದುದರಿಂದ ವಿಮರ್ಶಕ ಕವಿಯ ವಿಶಿಷ್ಟ ಪ್ರತಿಭೆಗೆ ಮೊದಲ ಮನ್ನಣೆ -ಯನ್ನು ಸಲ್ಲಿಸಬೇಕಾದ್ದು ಅತ್ಯಗತ್ಯ. ಅವನ ಕೃತಿಗೆ ಹಿನ್ನೆಲೆಯಾದ ಇತಿಹಾಸಕ್ಕಿಂತ, “ಕೃತಿ ರಚನೆಗೆ ಮೂಲವಾದ ಶಕ್ತಿ ಕೃತಿಕಾರನಲ್ಲಿ ಇಲ್ಲದೆ ಬೇರೆಲ್ಲೊ ಇದೆ ಅಥವಾ ಇತ್ತು ಎಂಬ ಹಾಗೆ, ಒಂದು ಕೃತಿಯ ಸಮರ್ಪಕವಾದ ಅನುಭವಕ್ಕೆ ಕೃತಿಗೆ ಪ್ರಚೋದನೆ ನೀಡಿದ ಸಮಯ ಸಂದರ್ಭಗಳು, ಕೃತಿಕಾರನಿಗೆ ಪ್ರಭಾವವನ್ನೊದಗಿಸಿದ ಸಂಗತಿಗಳು, ಕೃತಿಕಾರನ ಜೀವನದ ಪರಿಸರ ಇತ್ಯಾದಿ ವಿಷಯಗಳನ್ನು ಅಭ್ಯಸಿಸಬೇಕೆಂದು ಹೇಳುವ ಚಾರಿತ್ರಿಕ ವಿಮರ್ಶೆಯ ವಿಧಾನವನ್ನು ನಾನು ಅಷ್ಟಾಗಿ ಪ್ರಶಂಸಿಸಲಾರೆ”[20] – ಎನ್ನುತ್ತಾರೆ ಶ್ರೀ ಅರವಿಂದರು.

ಶ್ರೀ ಅರವಿಂದರ ಆಕ್ಷೇಪಣೆ ಸ್ವಲ್ಪಮಟ್ಟಿಗೆ ನಿಜ. ಕೃತಿರಚನೆಗೆ ಕವಿಗಿಂತ ಅವನ ಹಿನ್ನೆಲೆಗೆ ವಿಶೇಷ ಪ್ರಾಧಾನ್ಯತೆಯನ್ನು ಕೊಡುವಂಥವರ ವಿಷಯಕ್ಕೆ ಅವರ ಆಕ್ಷೇಪಣೆ ಸಲ್ಲುತ್ತದೆ. ಆದರೆ ಕೃತಿಕಾರ ಮತ್ತು ಅವನ ಹಿನ್ನೆಲೆ ಇವೆರಡರಲ್ಲಿ ಯಾವುದು ಮುಖ್ಯ ಎನ್ನುವುದನ್ನು ಯೋಚಿಸಿ ನೋಡಿದರೆ, ನಿಜವಾದ ಕೃತಿ ನಿರ್ಮಾಣದಲ್ಲಿ ಎರಡೂ ಮುಖ್ಯವಾಗುತ್ತವೆ. ಅಂದಂದಿನ ಕಾಲ ಸಮರ್ಥನಾದ ಕವಿಯನ್ನು ತನ್ನ ಅಭಿವ್ಯಕ್ತಿಗೆ ಒಂದು ಉಪಕರಣವನ್ನಾಗಿ ಮಾಡಿಕೊಳ್ಳುತ್ತದೆ. ಸಮರ್ಥನಾದ ಕವಿ ತಾನು ತನ್ನ ಕಾಲದ ನಿಜವಾದ ವಾಣಿಯಾಗಿ ಪರಿಣಮಿಸುತ್ತಾನೆ. ಬೀಜದಲ್ಲಿ ಹುದುಗಿದ ಮಹಾವೃಕ್ಷವೊಂದು ಬೆಳೆಯಬೇಕಾದರೆ, ಅದು ನಿಂತ ನೆಲದ ಗುಣವೂ ಪ್ರಧಾನಪಾತ್ರ ವಹಿಸುತ್ತದೆ. ಆದಕಾರಣ ಕವಿಯೂ ಕಾಲವೂ ಕೂಡಿ ಒಂದು ಉತ್ತಮ ಕೃತಿಯ ನಿರ್ಮಾಣಕ್ಕೆ ಕಾರಣವಾಗುತ್ತವೆ. ಕವಿ ಒಂದು ನಿರ್ದಿಷ್ಟವಾದ ಕಾಲ – ದೇಶದ ಪರಿಸರದಲ್ಲಿ ಬದುಕಿದವನಾದ ಕಾರಣ, ಆ ಕಾಲದ ಪ್ರಧಾನ ಭಾವನಾತರಂಗಗಳಿಂದ ಅಥವಾ ಇತಿಹಾಸದಿಂದ ಪ್ರಭಾವಿತನಾಗದಿರಲು ಸಾಧ್ಯವಿಲ್ಲ; ಹಾಗೆಯೇ ಆ ಕಾಲವೂ ಕವಿಕೃತಿಯಿಂದ ಪ್ರಭಾವಿತವಾಗಬಹುದು. ಆದರೆ ಕವಿಯ ಮೇಲೆ ಆತನ ಪರಿಸರದ, ಚಾರಿತ್ರಿಕ ಘಟನೆಗಳ, ಛಾಯೆ ಬಿದ್ದಿರುವುದಾದರೂ ಅವನ ಕೃತಿಯಲ್ಲಿರುವುದೆಲ್ಲವೂ ಅಂದಿನ ಕಾಲದ ಚಾರಿತ್ರಿಕಾಂಶಗಳೆ ಎಂದು ಹೇಳುವುದು ಸರಿಹೋಗುವುದಿಲ್ಲ. ವಾಸ್ತವವಾಗಿ, ಚಾರಿತ್ರಿಕ ವಿಮರ್ಶೆ ಬೇರೆ; ಚಾರಿತ್ರಿಕ ಸಂಶೋಧನೆ ಬೇರೆ. ಚಾರಿತ್ರಿಕ ವಿಮರ್ಶೆ ಮಾಡುವವನಿಗೆ ಕಾವ್ಯ ಪ್ರಧಾನ; ಕವಿ ಚರಿತ್ರೆಯನ್ನೂ ಕಾವ್ಯ ವಸ್ತುವನ್ನಾಗಿ ಹೇಗೆ ಬಳಸಿಕೊಂಡಿದ್ದಾನೆ, ಅದು ಕಾವ್ಯತ್ವವನ್ನು ಪಡೆದಿದೆಯೆ ಇಲ್ಲವೆ ಎಂಬುದು ಮುಖ್ಯ. ಚಾರಿತ್ರಿಕ ಸಂಶೋಧಕನಿಗೆ ಕಾವ್ಯತ್ವ ಅಪ್ರಧಾನ; ಅವನಿಗೆ ಕಾವ್ಯ ಎಷ್ಟರಮಟ್ಟಿಗೆ ಅಂದಿನ ಚರಿತ್ರೆಯನ್ನು ಒಳಗೊಂಡಿದೆ ಎನ್ನುವುದು ಮುಖ್ಯ. ಈ ದೃಷ್ಟಿಯಿಂದ ಕೃತಿಯಲ್ಲಿ ಅಂದಿನ ಸಂಸ್ಕೃತಿಯನ್ನು ಕಾಣುವ ಕಟ್ಟುವ ಪ್ರಯತ್ನಗಳು ಈಚೆಗೆ ನಡೆದಿವೆ. ಕೃತಿಯಲ್ಲಿ ಪರೋಕ್ಷವಾಗಿ ವ್ಯಕ್ತವಾಗಿರುವ ಜನಜೀವನದ ನಡವಳಿಕೆಯ, ಅಂದಿನ ಮೌಲ್ಯಗಳ, ಅಂದಿನ ನಾಗರಿಕತೆಯ ವಿಷಯಗಳನ್ನು ಸಾಂಸ್ಕೃತಿಕ ಅಧ್ಯಯನದ ದೃಷ್ಟಿಯಿಂದ ನೋಡುವುದು ತಪ್ಪೇನಲ್ಲ. ಆ ದಿಕ್ಕಿನಲ್ಲಿಯೂ ಕಾವ್ಯ ಅಮೂಲ್ಯವಾದ ಸಾಮಗ್ರಿಗಳನ್ನು ಒದಗಿಸಿದೆ.[21] ಆದರೂ ಅಲ್ಲಿ ವ್ಯಕ್ತವಾಗಿರುವ ಜನಜೀವನದ ಮತ್ತು ಜನಮನದ ಚಿತ್ರ ಅಂದಿನ ಕಾಲಕ್ಕೆ ವಿಶಿಷ್ಟವಾದುದು ಎಂದು ಹೇಳುವುದು ಸುಲಭವಲ್ಲ. ಏಕೆಂದರೆ, ಕವಿ ಎಷ್ಟೋ ವೇಳೆ ತನ್ನ ಕಾಲಕ್ಕಿಂತಲೂ ಹಿಂದಿನಿಂದ ಪರಂಪರಾಗತವಾಗಿ ಬಂದ ರೀತಿ ನೀತಿ -ಗಳನ್ನೂ ಮೌಲ್ಯಗಳನ್ನೂ ಪ್ರಕಟಿಸಿರಬಹುದು. ಅಥವಾ ಮುಂದೆ ಇಂಥದಾಗಬೇಕೆಂಬ ಆದರ್ಶಸ್ಥಿತಿಯ ಚಿತ್ರವನ್ನು ಪ್ರಕಟಿಸಿರಲೂಬಹುದು. ಅದರಲ್ಲಿಯೂ ಪ್ರಾಚೀನ ಸಿದ್ಧ ವಸ್ತು -ವೊಂದನ್ನಾರಿಸಿಕೊಂಡು ರಚಿತವಾದ ಕೃತಿಯಲ್ಲಿ, ಕೃತಿರಚಿತವಾದ ಕಾಲದ, ಸಮಕಾಲೀನ ಜೀವನದ ಯಥಾವತ್ತಾದ ಚಿತ್ರಣವನ್ನು ಕಾಣುವುದು ಕಷ್ಟ.[22] ರಾಮಾಯಣದಂತಹ ಪ್ರಾಚೀನ ವಸ್ತುವನ್ನಾರಿಸಿಕೊಂಡು  ಮೂಡಿರುವ ಕುವೆಂಪು ಅವರ ‘ಶ್ರೀ ರಾಮಾಯಣದರ್ಶನಂ’ದಲ್ಲಿ ಇಂದಿನ ಇಪ್ಪತ್ತನೆಯ ಶತಮಾನದ ಯುಗಧರ್ಮ ಪ್ರತಿಮಿತವಾಗಿದೆ ಎಂದು ಹೇಳಬಹುದೇ ಹೊರತು, ಅದರಲ್ಲಿ ಸಮಕಾಲೀನ ಜೀವನದ ಯಥಾವತ್ತಾದ ಚಿತ್ರಣವನ್ನು ಹುಡುಕಿ ನೋಡುವುದು ಸರಿಹೋಗುವುದಿಲ್ಲ. ಸಾಮಾಜಿಕ ವಸ್ತುವನ್ನಾಶ್ರಯಿಸಿ ರಚಿತವಾದ ಕೃತಿಗಳ ವಿಚಾರದಲ್ಲಿ ಹೇಳುವುದಾದರೆ, ಅವುಗಳಿಂದ ಚರಿತ್ರೆಯ ಶೋಧಕರಿಗೆ ಧಾರಾಳವಾಗಿ ಸಾಮಗ್ರಿ ದೊರೆಯಬಹುದು. ಒಂದು ಮಾತಿನಲ್ಲಿ ಹೇಳುವುದಾದರೆ, ಕಾವ್ಯ ಚರಿತ್ರೆ ಅಲ್ಲ. ಕವಿಕೃತಿಗಳನ್ನು ಚಾರಿತ್ರಿಕ ಆಕರಗಳೆಂದು ಭಾವಿಸುವುದಕ್ಕಿಂತ – ಭಾವಿಸಬಾರದೆಂದೇನೂ ಅಲ್ಲ – ಶಾಸನಗಳಿಗೋ, ಚರಿತ್ರೆಯ ಪುಸ್ತಕಗಳಿಗೋ ಹೋದರೆ, ಸಂಶೋಧಕನಿಗಾಗಲಿ, ವಿಮರ್ಶಕನಿಗಾಗಲಿ ವಿಶೇಷವಾದ ಲಾಭವುಂಟು.


[1] ರವೀಂದ್ರರು : ಅನು : ಟಿ.ಎಸ್. ವೆಂಕಣ್ಣಯ್ಯ : ‘ಪ್ರಾಚೀನ ಸಾಹಿತ್ಯ’, ಶಕುಂತಳಾ, ಮಿರಾಂಡಾ ಮತ್ತು ಡೆಸ್ಡಿಮೋನಾ. ಪು. ೧೦೪-೧೧೭.

[2] ಎಸ್.ವಿ. ರಂಗಣ್ಣ : ಹೊನ್ನಶೂಲ. ಪು. ೧೪೬-೧೪೮

[3] ಸಂ. : ದೇ. ಜವರೇಗೌಡ  : ರಾಮಾಯಣ ದರ್ಶನಂ ಉಪನ್ಯಾಸ ಮಾಲೆ, ಪು. ೯೪-೧೦೮.

[4] ಸಂಪಾದಕರು ದೇ. ಜವರೇಗೌಡ : ರಾಮಾಯಣದರ್ಶನ ಉಪನ್ಯಾಸ ಮಾಲೆ, ಪು. ೯೫-೯೬

[5] ‘ಅತ್ತಲಾ ದೈತ್ಯಸಭೆಯೊಳ್’ ಎಂಬ ಸಂಚಿಕೆಯ ಮೊದಲಲ್ಲಿ ಬರುವ ರಾವಣನ ವರ್ಣನೆ, Milton ತನ್ನ Paradise ಕೃತಿಯಲ್ಲಿ ಸೇಟನ್ನನ್ನು ವರ್ಣಿಸುವ ಸಂದರ್ಭಕ್ಕೆ ಹೆಚ್ಚು ಕಡಿಮೆ ಯಥಾವತ್ತಾಗಿ ಹೋಲುತ್ತದೆ. ಕುವೆಂಪು, ಮಿಲ್ಟನ್‌ನ ಮಾತುಗಳಿಂದಲೆ ಇಲ್ಲಿ ಪ್ರಭಾವಿತರಾಗಿದ್ದಾರೆ. ಹಾಗೆಯೇ ರಾವಣ ಧ್ಯಾನಮಾಲಿನಿಯ ಮರಣ ಸಮಯದಲ್ಲಿ “ಬಾಳ್! ಕಳ್ಳನೊರೆದೊಂದು ಸುಳ್ಳಿನ ಸಂತೆ! ಬರಿಬೊಂತೆ!” ಇತ್ಯಾದಿ ಮಾತುಗಳು ಮ್ಯಾಕ್ಟೆತ್ ಇಂಥದೇ ಸಂದರ್ಭದ “Life is a tale told by an idiot, of sound and fury signifying nothing” ಎಂಬ ಮಾತಿಗೆ ಸಂಪೂರ್ಣ ಋಣಿಯಾಗಿವೆ ಎಂಬುದನ್ನು ಲೇಖಕರು ತೋರಿಸಿದ್ದಾರೆ.

[6] Helen Gardner : The Business of Criticism. p. 17

[7] F.W. Roe : Carlyle : As a Critic of Literature. p. 53

[8] ಅಲ್ಲೇ. ಪು. ೪೮

[9] Helen Gardner : The Business of Criticism. “All art including contemporary art, is historical”, p. 17

[10] ಪಂಪ : ಆದಿಪುರಾಣ, ೧-೨೭

[11] Warren and Wellek : The Theory of Literature, p. 37

[12] ರಾ. ಅನಂತಕೃಷ್ಣಶರ್ಮ : ಸಾಹಿತ್ಯ ಮತ್ತು ಜೀವನ ಕಲೆ, ಪು. ೪೪

[13] ಮುಳಿಯ ತಿಮ್ಮಪ್ಪಯ್ಯ : ನಾಡೋಜ ಪಂಪ, ಪು. ೧೫೭

[14] ಮುಳಿಯ ತಿಮ್ಮಪ್ಪಯ್ಯ : ನಾಡೋಜ ಪಂಪ. ಪು. ೧೫೭

ಚಾಳುಕ್ಯ ವಂಶ ಸೋಮ ವಂಶ
೧. ಯುದ್ಧಮಲ್ಲ ೧. ಸೋಮ
೨. ಅರಿಕೇಸರಿ ೨. ಭರತ
೩. ನರಸಿಂಹ ೩. ಪ್ರತಿಮ
೪. ದುಗ್ಧಮಲ್ಲ ೪. ಶಂತನು
೫. ಬದ್ದೆಗ ೫. ಭೀಷ್ಮ
೬. ದುಗ್ಧಮಲ್ಲ ೬. ವಿಚಿತ್ರವೀರ್ಯ
೭. ನರಸಿಂಹ + ಜಾಕಬ್ಬೆ ೭. ಪಾಂಡು + ಕುಂತಿ
೮. ಅರಿಕೇಸರಿ ೮. ಅರ್ಜುನ + ಸುಭದ್ರೆ

 

[15] ಮುಳಿಯ ತಿಮ್ಮಪ್ಪಯ್ಯ : ನಾಡೋಜ ಪಂಪ. ಪು. ೧೮೯

[16] Sri Aurobindo : Kalidasa II Series, p.12

[17] ಅಲ್ಲೇ ಪು. ೧೨

[18] Cassel’s Encyclopaedia of Literature, p. 130

[19] Cassel’s Encyclopaedia of Literature, p. 130

[20] Sri Aurobindo : The future poetry p. 54

[21] ಕೃತಿಗಳನ್ನಿರಿಸಿರೊಂಡು ಸಾಂಸ್ಕೃತಿಕ ಅಧ್ಯಯನಕ್ಕೆ ಮೀಸಲಾದ ಕೆಲವು ಗ್ರಂಥಗಳಿವೆ. ಅವುಗಳಲ್ಲಿ ಬಿ.ಎಸ್. ಉಪಾಧ್ಯಾಯ ಅವರ India in Kalidasa ಎಂಬ ಗ್ರಂಥವನ್ನು ನೋಡಬಹುದು.

[22] ಶ್ರೀ ಅನಂತ ಕೃಷ್ಣಶರ್ಮ ‘ಸಾಹಿತ್ಯ ಮತ್ತು ಜೀವನ ಕಲೆ’ ಎಂಬ ಪುಸ್ತಕದಲ್ಲಿ ‘ರಾಯರ ಕಾಲದ ರಸಿಕತೆ’ (ಪುಟ ೪೩-೬೪) ಎಂಬ ಲೇಖನವನ್ನು ನೋಡಿ ಕೃಷ್ಣದೇವರಾಯನ ‘ಆಮುಕ್ತ ಮೌಲ್ಯದ’ ಪೆದ್ದನಾರ್ಯನ ‘ಮನುಚರಿತ್ರೆ’, ತಿಮ್ಮನ್ನ ಕವಿಯ ‘ಪಾರಿಜಾತಾಪಹರಣಮು’ – ಈ ಮೂರು ಕಾವ್ಯಗಳಲ್ಲಿ ಚಿತ್ರಿತವಾಗಿರುವ ಜನಜೀವನದ ಚಿತ್ರಗಳ ಆಧಾರದಿಂದ ಶ್ರೀ ಶರ್ಮರು ಕೃಷ್ಣದೇವರಾಯನ ಕಾಲದ ರಸಿಕತೆಯ ಚಿತ್ರವನ್ನು ಕಟ್ಟಲು ಪ್ರಯತ್ನಿಸಿದ್ದಾರೆ. ಅವರು ರಾಯರ ಕಾಲದ್ದೇ ಎಂದು ಹೇಳುವ ಆ ಜೀವನ, ನಿಜವಾಗಿಯೂ ವಾಸ್ತವವಾದದ್ದೆ ಅಥವಾ ಕವಿ ಕಲ್ಪಿತವಾದದ್ದೆ – ಎಂಬ ಭ್ರಾಂತಿಯನ್ನು, ಈ ಕಾಲದವರಾದ ನಮಗೆ ಉಂಟು ಮಾಡುತ್ತದೆ.