Categories
ರಾಜ್ಯೋತ್ಸವ 2001 ರಾಜ್ಯೋತ್ಸವ ಪ್ರಶಸ್ತಿ ಸಂಘ-ಸಂಸ್ಥೆ

ವಿಮೋಚನಾ ದೇವದಾಸಿ ಪುನರ್ವಸತಿ ಸಂಘ

ದೇವದಾಸಿಯರನ್ನು ಶೋಷಣೆಯ ಸಂಕೋಲೆಗಳಿಂದ ಕಳಚಿ, ಅವರಿಗೆ ಆರೋಗ್ಯಪೂರ್ಣ ಜೀವನ ಕಲ್ಪಿಸಿ, ಅವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಸಾಮಾಜಿಕ ಪರಿವರ್ತನೆಯ ಸಾರ್ಥಕ ಕಾರ್ಯವನ್ನು ಮಾಡುತ್ತಿರುವ ವಿನೂತನ ಸಂಸ್ಥೆ ಅಥಣಿಯ ವಿಮೋಚನಾ ದೇವದಾಸಿ ಪುನರ್ವಸತಿ ಸಂಘ,

ಶತಶತಮಾನಗಳಿಂದ ಬೆಳೆದು ಬೇರೂರಿ ನಿಂತ ಸಮಾಜದ ಒಂದು ಅನಿಷ್ಟ ಪರಂಪರೆ ‘ದೇವದಾಸಿ’ ಪದ್ಧತಿ. ದೇವದಾಸಿ ಮುಗ್ಧ ಹೆಣ್ಣುಮಕ್ಕಳ ಮನವೊಲಿಸಿ, ವಿಶ್ವಾಸ ಗಳಿಸಿ ಅವರನ್ನು ಸನ್ಮಾರ್ಗಕ್ಕೆ ಹಚ್ಚುವ ಕಠಿಣ ಕಾರ್ಯವನ್ನು ಅನೇಕ ಅಡಚಣೆಗಳನ್ನು ಎದುರಿಸಿಯೂ ಸಂಘವು ಕಳೆದ ೧೬ ವರ್ಷಗಳಿಂದ ಸೇವೆಯಲ್ಲಿ ನಿರತವಾಗಿದೆ.

‘ವಿಮೋಚನೆ ವಿಮೋಚನೆ’, ‘ಕತ್ತಲೆ ಕಳೆದ ಬೆಳಕು’, ‘ಮುಳ್ಳುದಾರಿಯಲ್ಲಿ ಬಿರಿದ ಹೂಗಳು’, ‘ಹರಕೆಯ ಹೆಣ್ಣು’, ‘ಮುತ್ತು ಕಟ್ಟಲಿಲ್ಲ ಮುತ್ತೈದೆಯಾದಳು’, ‘ಅವ್ವಾ ನಾ ದೇವದಾಸಿ ಆಗಾಕ ಒಲ್ಲೆ’ ಮೊದಲಾದ ೪೧ ಪ್ರಕಟಣೆಗಳನ್ನು ಹೊರ ತಂದ ಸಾಧನೆ ಇದರದು.

ಶಾಲಾ ಸಮುಚ್ಚಯ, ವಸತಿ ಸಮುಚ್ಚಯ, ಗ್ರಂಥಭಂಡಾರ, ಹಾಸ್ಟೆಲು, ಆಟದ ಮೈದಾನ, ಈಜುಕೊಳ, ಚಿಕಿತ್ಸಾಲಯ, ಶುಶೂಷಾ ಶಿಕ್ಷಣಸಂಸ್ಥೆ, ಗೃಹಕೈಗಾರಿಕೆಗಾಗಿ ಶೆಡ್ಡುಗಳು, ಸಹಕಾರಿ-ಸಂಘ ಸ್ಥಾಪನೆ, ಜನತಾ ಬಜಾರ್ ವ್ಯವಸ್ಥೆ ಮೊದಲಾದ ಯೋಜನೆಗಳ ಜೊತೆಗೆ ಲೈಂಗಿಕ ಶಿಕ್ಷಣ, ಗುಡಿ ಕೈಗಾರಿಕೆ, ಹೈನುಗಾರಿಕೆ, ಬೆರಳಚ್ಚು ಮುದ್ರಣ, ತಿಳಿವಳಿಕೆ ಶಿಬಿರ, ವೈದ್ಯಕೀಯ ನೆರವು, ಊಟ, ವಸತಿ ಏರ್ಪಾಟು ಮುಂತಾದ ಕಾರ್ಯಕ್ರಮಗಳನ್ನು ರೂಪಿಸಿ ಅಸಹಾಯಕ ಹೆಣ್ಣುಮಕ್ಕಳಿಗೆ

ಆಶಾಕಿರಣವಾಗಿದೆ.

ಕೀಳು ಪರಂಪರೆಯೊಂದಕ್ಕೆ ಬಲಿಯಾಗಿ, ದಾರುಣ ಬದುಕು ಸಾಗಿಸುತ್ತಿರುವ ಜನಾಂಗದ ಪುನರುತ್ಥಾನಕ್ಕಾಗಿ ರಚನಾತ್ಮಕ ಕಾರ್ಯ ಕೈಗೊಂಡಿರುವ ಹಲವು ಹೃದಯವಂತರ ಸಂಸ್ಥೆ ‘ವಿಮೋಚನಾ ದೇವದಾಸಿ ಪುನರ್ವಸತಿ ಸಂಘ’.