ಗೇರು ಸಮೃದ್ಧಿ ಯೋಜನೆಯಲ್ಲಿ ಐದು ವರ್ಷದ ಹಿಂದೆ ಗೇರು ಕೃಷಿಗೆ ಉತ್ತೇಜನ ನೀಡುವ ಕೆಲಸ  ಆರಂಭವಾಗಿತ್ತು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೋಲಾರ,ಬೀದರ್‌ಗಳಲ್ಲಿ ೧೫ ಲಕ್ಷ ಕಸಿಗಿಡಗಳನ್ನು ರೈತರಿಗೆ ಉಚಿತವಾಗಿ ತರಿಸಲಾಯಿತು. ಉಲ್ಲಾಳ ಹಾಗೂ ವೆಂಗುರ್ಲಾ ತಳಿಯ ಸಸಿ ಕೃಷಿಗೇರಿದವು. ಜಲಾನಯನ ಇಲಾಖೆ, ತೋಟಗಾರಿಕಾ ಇಲಾಖೆಯ ತೋಟಗಾರಿಕಾ ಮಿಷನ್ ಯೋಜನೆಗಳಲ್ಲಿ  ಗೇರು ಸಸಿ ಒದಗಿಸುವ ಕೆಲಸ ನಡೆಯಿತು. ಸಸಿ ವಿತರಣೆ, ಕೃಷಿ ಮಾರ್ಗದರ್ಶನ, ಗೇರು ತೋಟಗಳಲ್ಲಿ ಮಣ್ಣು,ನೀರಿನ ಸಂರಕ್ಷಣೆಗೆ ಪ್ರೋತ್ಸಾಹ ದೊರೆತವು. ಒಣ ಭೂಮಿಗಳಲ್ಲಿ ತೋಟಗಾರಿಕೆ ಉತ್ಸಾಹ ಮೆಲ್ಲಗೆ ಚಿಗುರಿತು.

‘ರಾಜ್ಯದಲ್ಲಿ ಗೇರು ಉತ್ಪಾದನೆ ಹೆಚ್ಚಿಸಬೇಕು’ ಕಳೆದ ದಶಕದಿಂದ ಮಾತು ಕೇಳುತ್ತಿದ್ದೇವೆ. ಗೇರು ಸಮೃದ್ಧಿಯಂತಹ ಯೋಜನೆಗಳು ಬಂದು ಹೋಗಿವೆ. ಪ್ರತ್ಯೇಕವಾಗಿ ಗೇರು ಅಭಿವೃದ್ಧಿ ನಿಗಮವಿದೆ. ಸಂಶೋಧನಾ ಕೇಂದ್ರ, ಕೃಷಿ ವಿಶ್ವವಿದ್ಯಾಲಯಗಳಿವೆ.  ನಾವು ಗೇರು ಕೃಷಿ ವಿಚಾರದಲ್ಲಿ ಈಗ ಯಾವ ಹಂತ ತಲುಪಿದ್ದೇವೆ?  ಅವಲೋಕಿಸಬೇಕಾದ  ಅಗತ್ಯವಿದೆ. ಅತ್ಯುತ್ತಮ ಗೇರು ತೋಟಗಳು ಏಲ್ಲಿವೆ? ವಿವಿಧ ಪ್ರದೇಶಗಳಲ್ಲಿ ಉಲ್ಲಾಳ, ವೆಂಗುರ್ಲಾ ತಳಿ ಕೃಷಿ ಅನುಭವಗಳೇನು? ಹೆಕ್ಟೇರ್ ಕ್ಷೇತ್ರದಲ್ಲಿ ನಿಖರ ಉತ್ಪಾದನೆ ಎಷ್ಟು? ಕರಾವಳಿ,ಮಲೆನಾಡಿನ ಹಳೆಯ ಗೇರು ತೋಟಗಳಲ್ಲಿ ವಾರ್ಷಿಕ ೧೫-೨೦ಕಿಲೋ ಗೇರು ಬೀಜ ನೀಡಬಲ್ಲ  ಧನಾತ್ಮಕ ವೃಕ್ಷಗಳ ಯಾದಿ   ಇದೆಯೇ?  ಉತ್ತರ ಕಷ್ಟವಿದೆ. ‘ಉಚಿತ ಸಸಿ ಪಡೆಯಿರಿ, ಗೇರು ನಾಟಿ ಮಾಡಿರಿ, ಗೇರು ತೋಟಗಳಲ್ಲಿ ನೀರಿಂಗಿಸಲು ಧನಸಹಾಯ ನೀಡುತ್ತೇವೆ’  ಮಾಹಿತಿ ಪತ್ರ ಬಿತ್ತರಿಸುವದು ಮಾತ್ರ  ತಮ್ಮ ಕೆಲಸವೆಂದು ತೋಟಗಾರಿಕಾ ಇಲಾಖೆ ಭಾವಿಸಿದೆ. ನೆಲಮೂಲದ ಕೃಷಿ ಅನುಭವ  ಕಣ್ಣೆತ್ತಿ ನೋಡದೆಯೇ  ಸಸಿ ಹಂಚುವ ಮಾಮೂಲಿ ಕೆಲಸ ನಡೆದಿದೆ. ವರ್ಷದ ಬಜೆಟ್ ಹಣವನ್ನು ನರ್ಸರಿ ಬಿಲ್‌ಗೆ ಮಾರ್ಕೆಟ್ ಮಾಡುವ ಕೆಲಸ ಸಾಗಿದೆ. 

ರಾಜ್ಯದ ಅರಣ್ಯ ಜಾಗಗಳಲ್ಲಿ ಗೇರು ನಾಟಿಯ ವ್ಯಾಪಕ ಕೆಲಸ ಸುಮಾರು ೫೦ ವರ್ಷಗಳಿಂದ ನಡೆದಿದೆ. ಸರಕಾರಿ ಸ್ವಾಮ್ಯದಲ್ಲಿ ಲಕ್ಷಾಂತರ ಎಕರೆಯಲ್ಲಿ ಗೇರು ತೋಟವಿದೆ.  ಆದರೆ ಇಳುವರಿ ಹೆಕ್ಟೇರ್‌ಗೆ ೩-೪ ಕ್ವಿಂಟಾಲ್‌ಗೂ ಕಡಿಮೆಯಿದೆ.ಸರಿಯಾಗಿ ಆರೈಕೆ ಮಾಡಿದರೆ ಹೆಕ್ಟೇರ್‌ಗೆ ೧೫-೨೦ ಕ್ವಿಂಟಾಲ್ ಉತ್ಪನ್ನ ಪಡೆಯಬಹುದಿತ್ತು.  ೨೫೦ ಗೇರು ಬೀಜ ಸಂಸ್ಕರಣಾ ಘಟಕಗಳು ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿ ಘಟಕವೂ ೧೨೦ ಜನ ಸ್ಥಳೀಯರಿಗೆ ಉದ್ಯೋಗ ನೀಡುತ್ತಿವೆ. ವಿಶೇಷವೆಂದರೆ ಗೇರು ಕಾರ್ಖಾನೆಗಳಲ್ಲಿ ಕೆಲಸ ಪಡೆಯುವವರು  ಇಂಗ್ಲೀಷ್ ಕಲಿತವರಲ್ಲ, ಕಾಲೇಜು ಓದಿದವರಲ್ಲ.  ಫ್ಯಾಕ್ಟರಿ ಸರಹದ್ದಿನ  ಬಡವರು !  ಕ್ರಿ.ಶ.  ೧೯೭೦ರಲ್ಲಿ ಕೇವಲ ೮ ಸಾವಿರ ಟನ್ ಗೇರು ಬೀಜ ರಾಜ್ಯದಲ್ಲಿ ಸಂಸ್ಕರಣೆಯಾಗುತ್ತಿತ್ತು. ಕಳೆದ ಐದು ವರ್ಷಗಳಿಂದ ೧ ಲಕ್ಷ ಟನ್ ಸಂಸ್ಕರಣೆಯಾಗುತ್ತಿದೆ. ಇಂದಿಗೂ ೩೦-೩೫ ಸಾವಿರ ಟನ್ ಮಾತ್ರ ರಾಜ್ಯದ ಉತ್ಪಾದನೆ ! ಈ ವರ್ಷವಂತೂ ಇಳುವರಿಯಲ್ಲಿ ಶೇಕಡಾ ೩೫-೪೦ರಷ್ಟು ಕೊರತೆಯಿದೆ. ಹವಾಮಾನ ವೈಪರಿತ್ಯ ಎಂದು ಹೇಳಲಾಗುತ್ತಿದೆ. ಸಿಪ್ಪೆ ಸಹಿತ ಬೀಜದ ದರ ಕಿಲೋಗೆ ೫೫-೬೦ ರೂಪಾಯಿಗೆ ಏರಿದೆ.  ಇಂದು ಶೇಕಡಾ ೬೫ ಭಾಗ ಹೊರ ರಾಜ್ಯ, ದೇಶಗಳಿಂದ ಕಾರ್ಖಾನೆಗೆ ಬರಬೇಕು. ಕಾರ್ಖಾನೆಗಳು  ಬದುಕುವುದಕ್ಕಾಗಿ ಗೇರು ಬೀಜವನ್ನು ಆಫ್ರಿಕನ್ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿವೆ!.

ಕೃಷಿ ಯೋಗ್ಯ ಪರಿಸರವಿದೆ, ಜಾಗವಿದೆ, ಕೃಷಿಯನ್ನು ಹೇಗೆ ಬೆಳೆಸಬೇಕು ಎಂಬ ರಚನಾತ್ಮಕ ಚಿಂತನೆ ಕೊರತೆಯಾಗಿದೆ. ವಿಯಟ್ನಾಂ ದೇಶದಲ್ಲಿ  ಕ್ರಿ.ಶ. ೧೯೯೫ರ ಸುಮಾರಿಗೆ ವಾರ್ಷಿಕ ಉತ್ಪನ್ನ ೧೦ ಸಾವಿರ ಟನ್ ಇತ್ತು. ಕೇವಲ ೧೦ವರ್ಷಗಳಲ್ಲಿ ಉತ್ಪಾದನೆ ೩.೫ಲಕ್ಷ ಟನ್‌ಗೆ ಏರಿತು !  ನಮ್ಮ ನೆರೆಯ ಮಹಾರಾಷ್ಟ್ರದಲ್ಲಿ ೫ ಸಾವಿರ ಟನ್ ಇದ್ದದ್ದು ಈಗ ೧ಲಕ್ಷ ಟನ್‌ಗೆ ಹೆಚ್ಚಿದೆ. ಕೃಷಿ ಪರಿಸರದ ಎಲ್ಲ ಅನುಕೂಲತೆಗಳಿದ್ದೂ  ರಾಜ್ಯ ಗೋಡಂಬಿ ವಿಚಾರದಲ್ಲಿ ಗಡದ್ದಾಗಿ ನಿದ್ದೆ ಮಾಡುತ್ತಿದೆ!. ‘ಪ್ರತಿ ತಾಲೂಕಿನಲ್ಲಿ ಗೇರು ಕೃಷಿ ಆಸಕ್ತರ ತಂಡ ರಚಿಸಬೇಕು, ಕೃಷಿ ಯಶೋಗಾಥೆ ಪರಿಚಯಿಸಬೇಕು, ಕೃಷಿ ಯೋಗ್ಯ ತಳಿಗಳನ್ನು  ಸ್ಥಳೀಯವಾಗಿ ಗುರುತಿಸಿ ಸಸ್ಯೋತ್ಪಾದನೆ ನಡೆಸಿ ಸಸಿ ಹಂಚಬೇಕು. ಗೇರು ಸಸಿ ಎಂದರೆ ನೆಟ್ಟು ಮರೆಯುವ ಗಿಡವಾಗದೇ ಕೃಷಿ ನಿರ್ವಹಣೆಯ ಅಗತ್ಯ ತಿಳಿಸಬೇಕು.  ಹಳೆಯ ಮರಗಳಿಗೆ ಕಸಿ ಮುಖೇನ ಪುನಶ್ಚೇತನ ಮಾಡಬಹುದು. ಸಸಿ ನಾಟಿಯ ಎರಡು ಮೂರು ವರ್ಷಗಳಲ್ಲಿ ಫಲ ನೀಡಬಲ್ಲ ಈ ಕೃಷಿ ಲಾಭ ಮನದಟ್ಟು ಮಾಡುವ ಕೆಲಸ ನಡೆಯಬೇಕು’ ಎಂದು ಉತ್ತರ ಕನ್ನಡ ಜಿಲ್ಲೆ ಕುಮಟಾದ ಖ್ಯಾತ ಗೇರು ಉದ್ಯಮಿ ಮುರಳೀಧರ ಪ್ರಭು ಹೇಳುತ್ತಾರೆ.

ಸರಕಾರ ಗೇರು ಕೃಷಿಯ ಪ್ರಸ್ತುತ ಸ್ಥಿತಿಗತಿಯ ವಿಮರ್ಶೆ ನಡೆಸಿ  ಕೃಷಿ ಅಭ್ಯುದಯದ ಮಾರ್ಗ ಅನುಸರಿಸಬೇಕು. ಇಂದು ಮಿತ್ತಲ್ ಬಂಡವಾಳ ಹೂಡಿ ಕೈಗಾರಿಕೆ ಆರಂಬಿಸುತ್ತೇನೆಂದರೆ ಇಡೀ ಸರಕಾರ  ತಲೆಬಾಗಿ ನಿಲ್ಲುತ್ತದೆ, ಭೂಮಿ ಸೌಕರ್ಯ ನೀಡಲು ಮುಂದಾಗುತ್ತದೆ!. ಇಂತಹ ಉದ್ಯಮಗಳಿಂದ ಪರಿಸರ ಸಮಸ್ಯೆಗಳು ಜಾಸ್ತಿ.  ಕರಾವಳಿ ಗುಡ್ಡಗಳಲ್ಲಿ  ಗೇರು ಕೃಷಿ ಉತ್ತೇಜನಕ್ಕೆ ಸರಕಾರ ಅಗತ್ಯ ಗಮನ ನೀಡಬೇಕು.  ಏರುತ್ತಿರುವ ತಾಪಮಾನದ ಈ ಪರಿಸರ ಬಿಕ್ಕಟ್ಟಿನಲ್ಲಿ ಹಸಿರು ಬೆಳೆಸಿ ಬಡವರಿಗೆ ಕೆಲಸ ನೀಡುವ ಕೃಷಿ ಕಾಳಜಿ ಅತ್ಯುತ್ತಮ ಕೆಲಸವಾಗುತ್ತದೆ.