ಹರಿಯಿತೇನು ಋಣ ನನಗೂ ನಿನಗೂ
ಬೆಸುಗೆ ಬಿರಿಯಿತೇ ಒಲವಿಗೆ ಕಡೆಗೂ !

ಓಡುತಲಿವೆ ಹಗಲಿರುಳಿನ ಹರಿಣ
ಪದವಿಟ್ಟೆಡೆಯೊಳು ಕೊನರಿಸಿ ಪ್ರಾಣ,
ಬೆನ್ನಟ್ಟಿದರೂ ಕಾಣದ ಬಾಣ
ಕೈ ಕೈ ಹಿಡಿದಿದೆ ಬೆಳಕಿನ ಪಯಣ !

ಎಂದಿನ ತೆರದಲಿ ನೇಸರು ಬೆಳಗಿದೆ
ಎಂದಿನಂದದಲಿ ಚಂದಿರ ತೊಳಗಿದೆ
ಜೀವ ಜೀವವೂ ಒಲಿದೇ ಬದುಕಿದೆ
ಋತು ರಿಂಗಣವೂ ಇದನೇ ಹಾಡಿದೆ.

ಮೋಡ ತಬ್ಬುತಿದೆ ಬೆಟ್ಟದ ಎದೆಯ
ಬಳ್ಳಿ ಮುದ್ದಿಸಿದೆ ಮೊಗ್ಗಿನ ತುಟಿಯ
ಚಿಕ್ಕೆ ಹಾಡುತಿವೆ ಬೆಳಕಿಗೆ ಜಯವ
ಸೃಷ್ಟಿಯ ತುಂಬಾ ಒಲವಿನ ವಿಭವ !

ಪ್ರಥಮ ಕಿರಣ ರಥವೇರಿ ಬಂದೆವು
ಜನುಮ ಜನುಮದಲಿ ಜೊತೆಗೆ ನಿಂದೆವು
ಗುರುತು ತಪ್ಪಿದರು ಗುರುತು ಹಿಡಿದೆವು
ಒಬ್ಬರಿಗೊಬ್ಬರು ಆಸರೆಯಾದೆವು !
ಹೀಗಿದ್ದೂ-
ಹರಿಯಿತೇನು ಋಣ ನನಗೂ ನಿನಗೂ
ಬೆಸುಗೆ ಬಿರಿಯಿತೇ ಒಲವಿಗೆ ಕಡೆಗೂ !