೧೮. ವಿರೋಧ

ಒಂದೊಂದುಱೊಳೊಂದದುವಂ ತಂದೊರ್ಬುಳಿಮಾಡಿ ತದ್ವಿಶೇಷಾಂತರಮಂ |

ಸಂದೇಹಮಿಲ್ಲದಱಪುವುದೊಂದೆ ವಿರೋಧಾಭಿಧಾನಮದುಮಿಂತಕ್ಕುಂ ||೧೩೫||

 

ಶರದಾಗಮದೊಳ್ ಕಳಹಂಸ-ರವಂ ಪೆರ್ಚಿತ್ತು ಕಿವಿಗೆ ಸೊಗಯಿಸಿ ಪೀನಂ |

ವಿರಳತರಮಾಯ್ತು ಬರ್ಹಿಣ-ವಿರಾವಮುರು-ಮುದ-ವಿರಾಮ-ವಿರಸ- ವಿರಾಗಂ ||೧೩೬||

೧೩೩. ‘ನೀವಿಬ್ಬರೂ ಹೀಗೆಯೇ ಸ್ವಲ್ಪ ಕಾಲ ಮಾತನಾಡುತ್ತಿರಿ; (ಅಷ್ಟರಲ್ಲಿ) ನಾನು ಒಳ್ಳೆಯ ಪರಿಮಳದ ಹೂಗಳನ್ನು ಆ ಮರಗಳಿಂದ ಆಯ್ದು ಕೊಯ್ದುಕೊಂಡು ಇಲ್ಲಿಗೆ ಬರುತ್ತೇನೆ’.

೧೩೪. (ಮೇಲಿನ ಪದ್ಯದಲ್ಲಿ) ಕೆಳದಿಯನ್ನು ಕಾಮಿತನಾದ ವರನೊಡನೆ (ಏಕಾಂತದಲ್ಲಿ) ಒಂದುಗೂಡಿಸಿದೊಡನೆ ಸಖಿಯು ಅವರಿಗೆ ಸುರತಸುಖವನ್ನೊದಗಿಸಲೆಂಬ ಬಯಕೆಯಿಂದ ತಾನು (ಹೊರಟುಹೋಗಲು) ಈ (ನೆವದ) ಮಾತನ್ನು ಹೇಳುತ್ತಿರುವಳು. *ಹೋಲಿಸಿ-ದಂಡಿ, MM-೨೯೭.*

೧೩೫. ಒಂದರಲ್ಲಿ ಒಂದು ಹೊಂದದ ವಿರುದ್ಧ ಪದಾರ್ಥಗಳನ್ನು ತಂದು ಒಂದುಗೂಡಿಸುವ ಮೂಲಕ ಅವುಗಳ ವೈಶಿಷ್ಟ್ಯವನ್ನು ಸ್ಪಸ್ಟವಾಗಿ ತಿಳಿಸುವುದೇ ‘ವಿರೋಧ’ ಎಂಬ ಅಲಂಕಾರ. *ಹೋಲಿಸಿ-ದಂಡಿ, ಐಐ -೩೩೩.*

೧೩೬. ಶರತ್ಕಾಲದ ಪ್ರಾರಂಭದಲ್ಲಿ ಕಿವಿಗೆ ಇಂಪಾಗಿ ಕಲಹಂಸಗಳ ಧ್ವನಿ ಹೆಚ್ಚಾಯಿತು, ನವಿಲುಗಳ ನಲಿವೆಲ್ಲ ಅಡಗಿದ್ದರಿಂದ ಅವುಗಳ ದನಿ ವಿರಸವೂ ರಾಗಹೀನವೂ, ವಿರಳವೂ ಆಯಿತು. *ಇಲ್ಲಿ ಹಂಸ-ಮಯೂರ ಧ್ವನಿಗಳಲ್ಲಿ ಗುಣ ಕ್ರಿಯೆಗಳು ವಿರುದ್ಧವಾಗಿವೆಯೆಂದು ಒಟ್ಟುಗೂಡಿಸಿ ಹೇಳಲಾಗಿದೆ. ಹೋಲಿಸಿ-ದಂಡಿ, II -೩೩೪.*

ಮಲಯಾನಿಳನೆಸಕದಿನುದಿರ್ವಲರ್ಗಳ ಮಕರಂದಮಾಲೆಗಳ್ ಪರೆದೆತ್ತಂ |

ನೆಲೆದೊಳ್ ಬಿೞ್ದುಂ ಪಡೆದುವು ವಿಲೋಚನಾಂಬುಗಳನಗ್ಗಳಂ ವಿ[1]ರಹಿಗಳಾ ||೧೩೭||

ದೊರೆಕೊಳ್ವಂತಿರೆ ಮುನ್ನಂ ವಿರೋಧ-ಗತ-ಮಾರ್ಗ-ಭೇದಮಂ ತೋಱದೆನಾ-

ದರದಿನುಪಮಾದಿಗಳೊಳಂ ನಿರುತಮನುಕ್ತಮುಮನಱಗೆ ಲಕ್ಷ್ಯಾಂತರದೊಳ್ ||೧೩೮||

[2]

೧೮ ಅಪ್ರಸ್ತುತ (ಪ್ರಶಂಸೆ)

ಪ್ರಸ್ತುತಮಲ್ಲದುದನೆ ಮಿಗೆ ವಿಸ್ತಾರಿಸಿ ನೆಗೞೆ ಪೇೞ್ದೊಡಕ್ಕುಂ ಮತ್ತ- |

ಪ್ರಸ್ತುತಮೆಂಬುದಳಂಕೃತಿ-ವಿಸ್ತರಮಿಂತಕ್ಕುಮದಱ ಲಕ್ಷ್ಯ-ವಿಭಾಗಂ ||೧೩೯||

ಮೃಗ-ಗಣಮೆ ಸುಖಂ ಬಾೞ್ಗುಂ ಸೊಗಯಿಸುವ ವನಾಂತರಾಳದೊಳ್ ಬಹು-ತೃಣದೊಳ್ |

ಬಗೆದಳಿಪ ಸುೞದು ನೋಡದೆ ಮೊಗಮಂ ವಸು-ಮದ-ವಿ*ಕಾರ-ಕಲುಷಾಯತರಾ ||೧೪೦||

೧೩೭. ಮಲಯಮಾರುತದ ಪ್ರಭಾವದಿಂದ ಉದುರುವ ಹೂಗಳ ಮಕರಂದ ದೂಳಿಗಳು ಎಲ್ಲೆಲ್ಲೂ ನೆಲದ ಮೇಲೆಯೇ ಬೀಳುತ್ತಿದ್ದರೂ ಸಹ, ವಿರಹಿಗಳ ಕಣ್ಣೀರನ್ನು ಉಂಟುಮಾಡಿದವು. *ಕಣ್ಣಲ್ಲಿ ಕಸ ಬೀಳದೆ ಮತ್ತೆಲ್ಲೋ ಬಿದ್ದರೂ ಕಣ್ಣೀರು ಬಂತೆಂಬ ವರ್ಣನೆಯಿರುವುದರಿಂದ ವಿರೋಧಾಲಂಕಾರ. ಅವರು ಪ್ರೇಯಸಿಯರನ್ನು ನೆನೆಸಿಕೊಂಡು ಗೋಳಿಟ್ಟುದು ಮಲಯಮಾರುತದ ಕಾಮೋದ್ದೀಪನದ ಫಲವೆಂದು ಪರಿಹಾರ ಕಲ್ಪಿಸಿಕೊಳ್ಳಲು ಬರುವುದರಿಂದ ‘ವಿರೊಧ’ ಹೋಗಿ ಅಲಂಕಾರ ‘ವಿರೋಧಾಭಾಸ’ವೆನಿಸುವುದು. ದಂಡಿ, II- ೩೩೮.*

೧೩೮. ಈ ಮೊದಲೇ, ಉಪಮಾದಿಗಳನ್ನು ವಿವರಿಸುವಾಗಲೂ ಕೆಲವೊಂದು ರೀತಿಯ ವಿರೋಧ-ಪ್ರಕಾರಗಳ ಭೇದವನ್ನು ಉದಾಹರಿಸಿ ತೋರಿಸಿರುವೆನು. ಇಲ್ಲಿ ಈಗ ಹೇಳದೆ ಬಿಟ್ಟಿರುವವನ್ನು ಬೇರೆ ಲಕ್ಷ್ಯಗಳಲ್ಲಿ ವಾಚಕರೇ ಊಹಿಸಿ ಅರಿತುಕೊಳ್ಳಬೇಕು. *ಈಗಾಗಲೇ ಹೇಳಿರುವ ವಿರೋಧೋಪಮೆ (III -೭೫), ವಿರುದ್ಧರೂಪಕ (III-೧೯) ಮತ್ತು ವಿರುದ್ಧ ಅರ್ಥಾಂತರನ್ಯಾಸಗಳು (III -೩೫) ಇಲ್ಲಿ ವಿವಕ್ಷಿತ.*

೧೩೯. ಅಪ್ರಸ್ತುತವಾದ ವಸ್ತುವನ್ನೇ ವಿಸ್ತಾರವಾಗಿ ವರ್ಣಿಸಿ ಹೇಳಿದರೆ, ಅದು ‘ಅಪ್ರಸ್ತುತಪ್ರಶಂಸೆ’ ಎಂಬ ಅಲಂಕಾರ. ಅದರ ಉದಾಹರಣೆಯ ಕ್ರಮ ಹೀಗೆ- *ಹೋಲಿಸಿ-ದಂಡಿ, II -೩೪೦.*

೧೪೦. ಧನಮದದ ವಿಕಾರದಿಂದ ಕಲುಷಿತರಾದ ನರರ ಮುಖವನ್ನು ಕೂಡ ಆಸೆಯಿಂದ ಎದುರುನೋಡದೆ, ಅವರ ಬಳಿ ಸುಳಿಯದೆ, ಸಮೃದ್ಧಿಯಾಗಿ ಹುಲ್ಲು ಬೆಳೆದು ಚೆಲುವಾಂತಿರುವ ಬನಗಳಲ್ಲಿ ಜಿಂಕೆಗಳ ಬಳಗವೇ ಸುಖವಾಗಿ ಬಾಳುತ್ತದೆ. *ಹೋಲಿಸಿ-ದಂಡಿ, II -೩೪೧.*

ಸಂತಂ ಮೃಗ-ಗಣ-ವೃತ್ತಿಯನಿಂತಪ್ರಸ್ತುತಮನಱಪಿದಂ ಪರ-ಸೇವಾ- |

ಚಿಂತಾ- ವಿಷಾದಿತಾಂತಸ್ಸ್ವಾಂತಂ ಸಂತೈಸಲೆಂದು ತನ್ನಂ ತಾನೇ ||೧೪೧||

೨೦. ನಿದರ್ಶನ

ಗುಣ-ದೋಷಾದಿಗಳಿಂದನುಗುಣಮಾಗಿರೆ ಪೇೞ್ದು ತದನುಸದೃಶದಿನೊಂದಂ |

ಪ್ರಣಿಹಿತ-ನಿದರ್ಶನ-ಕ್ರಮದೆಣಿಸುವುದಕ್ಕುಂ ನಿದರ್ಶನಾಲಂಕಾರಂ ||೧೪೨||

 

ಅಮಳಿನ-ಗುಣ-ವೃತ್ತಗಳಿಂ ಸಮುಪಸ್ಥಿತ-ಸಕಳ-ಜ[3]ನರ್ಕಳೂರ್ಜಿತ-ಗುಣಮಂ |

ಸಮನಾಗಿಸುವರ್ ಕನ್ನಡಿ ಕಮನೀಯಾಕಾರ-ಬಿಂಬಮಂ ತಾಳ್ದುವವೋಲ್ ||೧೪೩||

೧೪೧. ಇಲ್ಲಿ ಪರರ ಸೇವೆಯ ಚಿಂತೆಯಿಂದ ಖಿನ್ನಮನಸ್ಕನಾದ ಕವಿಯು ತನ್ನನ್ನು ತಾನೇ ಸಂತೈಸಿಕೊಳ್ಳಲು ಅಪ್ರಸ್ತುತವಾದ ಜಿಂಕೆಗಳ ಜೀವನದ ಹಿರಿಮೆಯನ್ನು ಹೇಳಿದ್ದಾನೆ *ಹೋಲಿಸಿ-ದಂಡಿ, MM-೩೪೭. ದಾಸ್ಯಜೀವನ ಶೋಚನೀಯವೆಂಬುದೇ ಇಲ್ಲಿ ಪ್ರಸ್ತುತ ವಾಕ್ಯಾರ್ಥ. ಅದನ್ನು ಹೇಳದೆ ಅಪ್ರಸ್ತುತಗಳಾದ ಜಿಂಕೆಗಳ ಜೀವನಸೌಖ್ಯವನ್ನು ಹೊಗಳಿರುವುದರಿಂದ ‘ಅಪ್ರಸ್ತುತಪ್ರಶಂಸೆ’ ಅಲಂಕಾರ. ಇದನ್ನೇ ‘ಅನ್ಯೋಕ್ತಿ’. ‘ಅನ್ಯಾಪದೇಶ’ ಎಂಬ ಹೆಸರುಗಳಿಂದಲೂ ಕರೆಯುವರು.*

೧೪೨. ಒಂದು ವಿಷಯವನ್ನು ಹೇಳುವಾಗ ಅದೇ ಗುಣ ಇಲ್ಲವೆ ದೋಷಗಳಿಂದ ಅನುಗತವಾಗಿ ಅದರಂತಿರುವ ಇನ್ನೊಂದನ್ನು ನಿದರ್ಶನವಾಗಿ ಕೊಡುವುದು ನಿದರ್ಶನಾಲಂಕಾರ. *ಹೋಲಿಸಿ-ದಂಡಿ, II -೩೪೮.*

೧೪೩. (ಉತ್ತಮ ರಾಜರ) ನಿರ್ಮಲವಾದ ಸದ್ಗುಣ ಹಾಗು ಸದಾಚಾರಗಳಿಂದ ಕೆಲದಲ್ಲಿಯ ಸಕಲ ಜನರೂ ಆ ಉದಾತ್ತ ಗುಣಗಳನ್ನೇ (ತಮ್ಮಲ್ಲಿ) ಸಮಗೊಳಿಸಿಕೊಳ್ಳುವರು, ಕನ್ನಡಿಯು ಚೆಲುವಾದ ಆಕೃತಿಯ ಪ್ರತಿಬಿಂಬವನ್ನು (ತನ್ನಲ್ಲಿ) ತಳೆಯುವ ಹಾಗೆಯೇ. *ಇಲ್ಲಿ ರಾಜನೀತಿ ಪ್ರಸಕ್ತವಾಗಿದೆಯೆಂದು ಭಾವಿಸಬಹುದು, ಮುಂದಿನ ಎಲ್ಲ ದೃಷ್ಟಾಂತಗಳ ಬೆಳಕಿನಲ್ಲಿ. “ಯಥಾ ರಾಜಾ ತಥಾ ಪ್ರಹಾಃ” ಎಂಬ ಪ್ರಸಿದ್ಧ ಸುಭಾಷಿತದ ಛಾಯೆಯೇ ಈ ಪದ್ಯದಲ್ಲಿರುವುದು ಸ್ಪಷ್ಟವಾಗಿದೆ. ಪ್ರಜೆಗಳೆಲ್ಲರಿಗೂ ರಾಜನೇ ಆದರ್ಶಪ್ರಾಯ; ಅವನ ಸದ್ಗುಣಗಳೇ ಅವರಲ್ಲಿಯೂ ಮಾರ್ಪೊಳೆಯುತ್ತವೆ, ಕನ್ನಡಿಯಲ್ಲಿ ಪ್ರತಿಬಿಂಬ ಮೂಡುವಂತೆ; ಆದ್ದರಿಂದ ರಾಜನು ಒಳ್ಳೆಯ ಗುಣಾಚರಣೆಗಳನ್ನೇ ಹೊಂದಿರಬೇಕೆಂದು ತಾತ್ಪರ್ಯ. ಇಲ್ಲಿ ರಾಜನ ಗುಣಗಳಿಗೆ ಅನುಗುಣವಾಗಿ ಪ್ರಜೆಗಳ ಗುಣಗಳೂ ಇರುತ್ತವೆ ಎಂಬುದನ್ನು ಸಮುಚಿತವಾದ ಕನ್ನಡಿಯ ದೃಷ್ಟಾಂತವನ್ನಿತ್ತು ನಿದರ್ಶಿಸಿರುವುದರಿಂದ ಇದು ನಿದರ್ಶನಾಲಂಕಾರ.*

ಜನಮಱಯದನ್ನೆಗಂ ಮುನ್ನೆ ನಯಮನಱದಱಪಲಾರ್ಪೊಡದು ಮಂತ್ರಿಗುಣಂ |

ಜನವಾದಂ ನೆಗೞೆ ನಗ-ಧ್ವನಿವೋಲನುಕರಣ-ವಾರ್ತೆ ಮಂತ್ರಿಯ ಗುಣಮೇ ||೧೪೪||

 

ತಲೆಸೂಡಿ ಮುನ್ನೆ ಕಜ್ಜದ ಫಲಮಂ ಬೆಸಗೊಂಡುಮೇವನಲ್ಲಿಂ ಬೞಯಂ |

ತಲೆಯಂ ಕಿರಿಯಿಸಿ ದಿವಸಮನಲಸದೆ ಬೆಗೊಳ್ವನಂತು ಗಾವಿಲನಕ್ಕುಂ ||೧೪೫||

 

ಪ್ರತಿಕೂಲನಾಗಿ ನಿಲೆ ವಿಧಿ ಮತ-ನಯಮನುಕೂಲಮಾಗಿ ನಿಲೆಯುಂ ಕಾರ್ಯ- |

ಸ್ಥಿತಿಯಂ ಸಾಧಿಸಲಾಗದು ಮೃತಕ-ಕೃತೋಪಕೃತಿಯವೊಲನರ್ಥಾಯಾಸಂ ||೧೪೬||

೧೪೪. ಜನ ತಿಳಿಯದಂತೆ, ಮುನ್ನವೇ (ರಾಜ) ನೀತಿಯನ್ನರಿತು ರಾಜನಿಗೆ ತಿಳಿಸಬಲ್ಲ ಸಾಮರ್ಥ್ಯವೇ ಮಂತ್ರಿಯ ಗುಣ. ಜನರಲ್ಲಿ ಪ್ರವಾದ ಹರಡಿದ ಬಳಿಕ ಬೆಟ್ಟದ ಮಾರ್ದನಿಯಂತೆ ಅದನ್ನೇ ಅನುಕರಣಮಾಡಿ ನುಡಿದರೆ ಅದು ಮಂತ್ರಿಯ ಗುಣವಾಗುವುದೆ? *ಇಲ್ಲಿಯೂ ಪ್ರಸ್ತುತವಾದ ಮಂತ್ರಿಯ ಗುಣದ ವಿವರಣೆಗೆಂದು ಯಥೋಚಿತವಾದ ಬೆಟ್ಟದ ಮಾರ್ದನಿಯ ದೃಷ್ಟಾಂತವನ್ನು ಕೊಟ್ಟಿರುವುದು ಸ್ಪಷ್ಟವಾಗಿದೆ.*

೧೪೫. ಮೊದಲು ಒಂದು ಕಾರ್ಯಕ್ಕೆ ತಲೆಯನ್ನೊಡ್ಡಿಯಾದಮೇಲೆ, (ಅದು ಮಿಂಚಿಹೋದ ಬಳಿಕ), ಅದರ ಫಲವೇನೆಂದು ಕೇಳಿ ಮಾಡುವದೇನು? ತಲೆಯನ್ನು ಬೋಳೊಸಿಕೊಂಡಾದಬಳಿಕ ಅಂದಿನ ದಿನಶುದ್ಧಿ ಹೇಗೆಂದು ಕೇಳುವ ಹಳ್ಳಿಗನಂತೆಯೇ ಅವನೂ ಹೆಡ್ಡನಾಗುವನು *ಕಾರ್ಯವನ್ನು ಕೈಕೊಂಡಾದಬಳಿಕ ಅದರ ಫಲಾಫಲದ ಚಿಂತನೆ ಸಲ್ಲದೆಂಬ ರಾಜನೀತಿಗೆ ಪೋಷಕವಾಗಿ ಇಲ್ಲಿ ಕೆರಸಿಕೊಂಡಾದ ಮೇಲೆ ದಿನಶುದ್ಧಿಯನ್ನು ಕೇಳುವ ಹಳ್ಳಿಗನ ದೃಷ್ಠಾಂತವನ್ನು ಕೊಟ್ಟಿರುವುದು ತುಂಬಾ ಮಾರ್ಮಿಕವಾಗಿದೆ,*

೧೪೬. ವಿಧಿ ಪ್ರತಿಕೂಲವಾಗಿದ್ದರೆ, ರಾಜನೀತಿಯ ತತ್ತ್ವಕ್ಕೆ ಅನುಗುಣವಾಗಿರುವ ಕಾರ್ಯ ಕೂಡ ಸಫಲತೆಯನ್ನು ಪಡೆಯಲಾರದು; ಸತ್ತವನಿಗೆ ಯಾವ ಉಪಚಾರ ಮಾಡಿದರೂ ಹೇಗೆ ನಿಷ್ಫಲವೋ ಹಾಗೆಯೇ ! *ರಾಜನೀತಿಗೆ ಅನುಗುಣವಾಗಿ ನಡೆದವನಿಗೂ ಕಾರ್ಯಸಿದ್ಧಿಯಾಗಲು ವಿಧಿಯ ಸಹಕಾರ ಅಗತ್ಯವೆಂಬ ಪ್ರಸ್ತುತಾರ್ಥಕ್ಕೆ, ವಿಧಿಯ ಕೋಪದಿಂದ ಮೃತನಾದವನಿಗೆ ಮಾಡಿದ ಔಷಧೋಪಚಾರವೆಲ್ಲ ವ್ಯರ್ಥವಾಗುವುದೆಂಬ ಲೌಕಿಕ ದೃಷ್ಟಾಂತವನ್ನು ಚೆನ್ನಾಗಿ ಎತ್ತಿಕೊಡಲಾಗಿದೆ. ಹೋಲಿಸಿ-ಚಾಣಕ್ಯಸೂತ್ರ: “ನ ಮೃತಸ್ಯ ಔಷಧಂ ಪ್ರಯೋಜನಂ” (ಈ ವಾಕ್ಯ ‘ಕವಿರಾಜಮಾರ್ಗವಿವೇಕ’ ಪು. ೩೫ರಲ್ಲಿಯೂ ಉದಾಹೃತ) ಮತ್ತು ಮಾಘ-‘ಪ್ರತಿ ಕೂಲತಾಮುಪಗತೇ ಹಿ ವಿಧೌ ವಿಫಲತ್ವಮೇತಿ ಬಹುಸಾಧನತಾ’ (IX -೬).*

ಪದೆದುದಯಿಸಲೆಂದುಂ ಕಾಲದೊಳಲ್ಲದುದಾರ-ತೇಜನರ್ಕನುಮಲ್ಲಂ ! |

ಸದುದಿತ-ಗುಣನದಱಂ ನಯವಿದನಪ್ಪಂ ಕಾಲಮಂ ನೆರಂ ತೋರ್ಕೆ ನೃಪಂ ||೧೪೭||

 

ಪಡೆಯಱಯಲಾಯಲಾದೊ*ಡಱದಂ ಕಿಡಿಸುಗುಮಂತಃಕಳಂಕ-ನೃಪ-ಮಂಡಲಮಂ |

ತಡೆಯದೆ ತಮಸ್ಸ್ವಭಾವಂ ಕಿಡಿಸುವವೋಲಱದು ರಾಹು ಶಶಿ-ಮಂಡಲಮಂ ||೧೪೮||

 

ಕಿಱದೆಂದೇ[4]ಳಿಸಿ ಪಗೆಯಂ ಪಱಪಡೆ ಕಿಡಿಸದೊಡೆ ಪೆತ್ತು ಕಾಲದ ಬಲಮಂ |

ನೆಱೆದಿಱೆಗುಂ ನೆ[5]ರೆದನುವಂ ಮಱಸುವವೊಲ್ ದಿವಸಕರನನಂಬುದ*ನಿವಹಂ ||೧೪೯||

೧೪೭. ಚಂಡಕಿರಣನಾದ ಸೂರ್ಯನು ಕೂಡ ಕಾಲ ಒದಗಿಬಂದಲ್ಲದೆ ಉದಯಿಸಲಾರನು. ಆದ್ದರಿಂದ ರಾಜನೀತಿವಿದನೂ ಗುಣವಂತನೂ ಆದ ರಾಜನು ತನ್ನ ಅಭ್ಯುದಯಕ್ಕೆ ಯೋಗ್ಯ ಕಾಲವನ್ನು ಪ್ರತೀಕ್ಷಿಸಬೇಕು. *ಇಲ್ಲಿ ಪ್ರಾಪ್ತಕಾಲದಲ್ಲಲ್ಲದೆ ಅಭ್ಯುದಯ ಅಶಕ್ಯವೆಂಬ ನೀತಿವಾಕ್ಯಕ್ಕೆ ಸಮುಚಿತವಾಗಿ ಸೂರ್ಯೋದಯದ ಕಾಲಬದ್ಧತೆಯನ್ನು ದೃಷ್ಟಾಂತವಾಗಿ ಕೊಡಲಾಗಿದೆ.*

೧೪೮. ತಮೋಗ್ರಹವಾದ ರಾಹು ಚಂದ್ರಮಂಡಲವನ್ನು ನುಂಗಿಬಿಡುವಂತೆ ಅಂತಶ್ಬಿದ್ರಗಳಿರುವ ರಾಜಮಂಡಲವನ್ನು ಸೈನ್ಯ ತಿಳಿದಿದೆಯೆಂದು ಬಲ್ಲಾತನಾದ ರಾಜನು ನಾಶಗೈಯುವನು. *ಯಾವ ರಾಜರ ಒಳಬಿರುಕುಗಳು ಸೈನ್ಯಕ್ಕೆಲ್ಲ ತಿಳಿದು ಹೋಗಿದೆಯೋ ಅವರನ್ನು ನಯನಿಪುಣನಾದ ವೈರಿಯು ನಾಶಮಾಡಿಯೇಬಿಡುವನು ಎಂಬ ರಾಜನೀತಿಗೆ ಪೋಷಕವಾಗಿ, ಅಂತಃಕಳಂಕವಿರುವ ಚಂದ್ರನನ್ನು ರಾಹು ನುಂಗುವ ಸೂಕ್ತ ನಿದರ್ಶನವನ್ನೀಯಲಾಗಿದೆ. ಹೋಲಿಸಿ-ಮಾಘ II -೩೫,

‘ಧ್ರಿಯತೇ ಯಾವದೇಕೋ$ಪಿ ರಿಪುಸ್ತಾವತ್ ಕುತಃ ಸುಖಮ್ |

ಪುರಃ ಕ್ಲಿಶ್ನಾತಿ ಸೋಮಂ ಹಿ ಸೈಂಹಿಕೇಯೋ$ಸುರದ್ರುಹಾಮ್ ||’

ಅಲ್ಲಿ ಈ ದೃಷ್ಟಾಂತವನ್ನು ಒಬ್ಬನೇ ವೈರಿಯಿದ್ದರೂ ಅಸಡ್ಡೆಮಾಡಬಾರದೆಂಬ ನೀತಿ ವಾಕ್ಯಕ್ಕೆ ಉಪಷ್ಟಂಭಕವಾಗಿ ಕೊಡಲಾಗಿದೆ*.

೧೪೯. ವೈರಿ ಅಲ್ಪನೆಂದು ಕಡೆಗಣಿಸುತ್ತ, ಅವನನ್ನು ಆಗಲೇ ತುಂಡು ತುಂಡಾಗಿ ನಾಶಮಾಡದಿದ್ದರೆ, ಅವನು ತನಗನುಕೂಲವಾದ ಸಂದರ್ಭವನ್ನು ನೋಡಿ ಕೊಂಡು ಇವನನ್ನೇ ಇರಿಯಲು ಶಕ್ತನಾಗುವನು; ಸಮಯ ನೋಡಿಕೊಂಡು ಮೇಘವೃಂದವು ಸೂರ್ಯನನ್ನು ಕೂಡ ಮುಚ್ಚಿಬಿಡುವಹಾಗೆ! *ಇಲ್ಲಿಯೂ ರಾಜನೀತಿ ವಾಕ್ಯಕ್ಕೆ ಪ್ರತಿಬಿಂಬರೂಪವಾದ ದೃಷ್ಟಾಂತವಿರುವುದು ಸ್ಪಷ್ಟ. ಇಲ್ಲಿ ಮತ್ತು ಇದರ ಮೇಲಿನ ಪದ್ಯದಲ್ಲಿ ಪ್ರಸ್ತುತ ವಾಕ್ಯದ ದೋಷಕ್ಕೆ ಸದೃಶವಾದ ದೋಷ ದೃಷ್ಟಾಂತ ವಾಕ್ಯದಲ್ಲಿಯೂ ಉಕ್ತವಾಗಿರುವುದು ಗಮನಾರ್ಹ’*

ಒಳಗಿರ್ದ ವೈರಿಗಳ್ ಮೊಕ್ಕಳಮೀಯರ್ ಪೆರ್ಚಲಧಿಕ-ವಿಭವರ್ಕಳುಮಂ |

ತಳರದೊಡನಿರ್ದು ಬಡಬಾಳನನೆಂದುಂ ಪೆರ್ಚಲೀಯದಂತಂಬುಧಿಯಂ ||೧೫೦||

ಪರ-ಪಕ್ಷಮುಳ್ಳಿನಂ ತನಗಿರವುಬ್ಬಸಮದಱ ನ[6]*ವುದನೇಗೆಯ್ದುಂ |

ಪರೆದ ಪುಡಿಯೆಲ್ಲಮಂ ನೀರ್ ನೆರೆದು ಕೆಸರ್ಮಾಡದನ್ನೆಗಂ ನೆಲಸುಗುಮೇ ||೧೫೧||

ಕುಱಗೊಂಡು ನೆಗೞ್ದನಿಚ್ಛೆಯನಱಯದೆ ತನ್ನಿಚ್ಛೆಯಿಂದೆ ಕಜ್ಜಂಬೇೞ್ವಂ |

ತಱಸಲಿಸಲಾ[7]ಱನಾರ್ತನ ತೆಱನಱಯದೆ ಮರ್ದುವೇೞ್ವಬೆಜ್ಜನ ತೆಱದಿಂ ||೧೫೨||

 

ಪರಿಣಾಮ-ಪಥ್ಯಮಂ ಸುಖ-ಪರಿಕರಮಂ ಮೆಚ್ಚದನ್ನ ರಾರೀ ಮಾತಂ |

ನಿರತಿಶಯ-ರಸ-ಸಮೇತಮನರೋಚಕಂ ಮೆಚ್ಚದಂತೆ ಸೊಗಯಿಸುವುಣಿಸಂ ||೧೫೩||

೧೫೦. ಎಷ್ಟೇ ವಿಭವಾನ್ವಿತರಿದ್ದರೂ ಅವರು ಏಳ್ಗೆಹೊಂದಲು ಅಂತಶ್ಯತ್ರುಗಳು ಎಂದೂ ಬಿಡುವುದಿಲ್ಲ; ಸಮುದ್ರದಲ್ಲೇ ಎಂದೆಂದೂ ಒಡನಿರುವ ಬಡಬಾಗ್ನಿಯು ಅದು ಉಕ್ಕಲು ಹೇಗೆ ಬಿಡುವುದಿಲ್ಲವೋ ಹಾಗೆಯೇ. *ಇಲ್ಲಿಯೂ ಒಂದು ನೀತಿವಾಕ್ಯ. ಒಂದು ನಿದರ್ಶನ ವಾಕ್ಯ-ಎರಡೂ ಸ್ಪಷ್ಟವಾಗಿವೆ.*

೧೫೧. ಶತ್ರುಪಕ್ಷವಿರುವವರೆಗೂ ತನಗೆ ಉಳವು ಕ್ಲೇಶಮಯವೇ. ಆದ್ದರಿಂದ ಅದನ್ನು (=ಶತ್ರುಪಕ್ಷವನ್ನು) ಹೇಗಾದರೂಮಾಡಿ ನಾಶಗೈಯಬೇಕು. ಹರಡಿದ ದೂಳನ್ನೆಲ್ಲ ನೀರು ಕಲಸಿ ಕೆಸರುಮಾಡದೆ ಸುಮ್ಮನಿರುತ್ತದೆಯೇ?

ವಿಪಕ್ಷಮಖಿಲೀಕೃತ್ಯ ಪ್ರತಿಷ್ಠಾ ಖಲು ದುರ್ಲಭಾ |

ಅನೀತ್ವಾ ಪಂಕತಾಂ ಧೂಲಿಮುದಕಂ ನಾವತಿಷ್ಠತೇ ||

೧೫೨. ಒಡೆಯನ ಇಚ್ಛೆಯನ್ನು ನಿರ್ದಿಷ್ಟವಾಗಿ ತಿಳಿದುಕೊಳ್ಳದೆ, ತನ್ನ ಇಚ್ಛೆಗನುಸಾರವಾಗಿ ಕಾರ್ಯದ ಸಲಹೆ ಹೇಳುವವನು ಅದನ್ನು ಸಫಲಗೊಳಿಸಲಾರನು. ರೋಗಿಯ ಸ್ಥಿತಿಯನ್ನು ಅರಿಯದೆ ಮದ್ದನ್ನು ಹೇಳುವ ವೈದ್ಯನಂತೆ ಅವನ ಪರಿಯಿರುವುದು.

೧೫೩. ಪರಿಣಾಮದಲ್ಲಿ ಹಿತಕರವೂ, ಸುಖಕರವೂ ಆದ ಈ ಮಾತನ್ನು ಮೆಚ್ಚದವರಾರು? ಸಕಲ ರಸಭರಿತವಾದ, ಸೊಗಸಾದ, ಊಟವನ್ನು ಅರೋಚಕ ರೋಗದಿಂದ ನರಳುತ್ತಿರುವವನಷ್ಟೇ ಮೆಚ್ಚಲಾರನು ಹೇಗೋ ಹಾಗೆ! *ಇಲ್ಲಿಯ ವಿಶೇಷಣಗಳಲ್ಲಿ ಮತ್ತು ದೃಷ್ಟಾಂತದಲ್ಲಿ ಭಾರವಿಯ ಮಾರ್ದನಿಯಿದೆ-

“ಪರಿಣಾಮಸುಖೇ ಗರೀಯಸಿ ವ್ಯಥಕೇsಸ್ಮಿನ್ ವಚಸಿ ಕ್ಷತೌಜಸಾಂ” (II -೪)*

 

ಇಂತುದಿತ-ಭೇದಮಂ ದೃಷ್ಟಾಂತಾಳಂಕಾರ-ಮಾರ್ಗಮಂ ಕನ್ನಡದೊಳ್ |

ಸಂತತ-ಗುಣಮಂ ಕೈಕೊಳ್ವಂತಾಗಿರೆ ಬಗೆದು ಪೇೞ್ಗೆ ಪರಮ-ಕವೀಶರ್ ||೧೫೪||


[1] ವಿರಹಿಗಳೊಳ್ ‘ಅ, ಬ’.

[2] ವರೋಧಿ ‘ಪಾ, ಮ, ಸೀ’. ಇದು ಪರಿಷ್ಕೃತ ಪಾಠ, ಪ್ರಸ್ತಾವೋಚಿತ.

* ವಿರಾಮ ‘ಪಾ, ಮ, ಸೀ’; ಇದು ಅರ್ಥಾನುಸಾರಿಯಲ್ಲವೆಂದು ಇಲ್ಲ ಪರಿಸ್ಕೃತ.

[3] ಜನರ್ಗಳುಪಚಿತ ‘ಮ’, ಜನಗತೋಚಿತ ‘ಪಾ, ಸೀ’ ಇವೊಂದೂ ಅರ್ಥಕ್ಕೆ ಹೊಂದದ ಕಾರಣ, ಪಾಠವಿಲ್ಲಿ ಪರಿಷ್ಕೃತ.

* ಡಱಯಂ ‘ಪಾ, ಮ,’ ಡರಿಯಂ ‘ಸೀ’, ಅರ್ಥದೃಷ್ಟಿಯಿಂದ ಇಲ್ಲಿ ಪಾಠ ಪರಿಷ್ಕೃತವಾಗಿದೆ.

[4] ದೇೞಸಿ ‘ಮ’.

[5] ನೆಱೆದನುವಂ ‘ಪಾ, ಮ’; ಇಲ್ಲಿಯ ಪಾಠ ‘ಸೀ’ ಸೂಚಿತ.

[6]

* ಇಲ್ಲಿಯೂ ಅದೇ ರೀತಿಯಾಗಿ ಎರಡು ವಾಕ್ಯಗಳಿವೆ. ಈ ಪದ್ಯ ಮಾಘ MM-೩೪ ರ ಅಕ್ಷರಾನುವಾದದಂತಿದೆ-

[7]