(ಕ್ರಿ. ಶ. ೧೮೬೦-೧೯೨೭) (ಹೃದಯ ರೋಗ ನಿದಾನ)

ವಿಲಿಯಂ ಐಂಥೋವನ್ ೧೮೬೦ರಲ್ಲಿ ಇಂಡೋನೇಶಿಯದ ಜಾವಾ ರಾಜ್ಯದಲ್ಲಿನ ಸೆಮರಾಂಗ್ ನಲ್ಲಿ ಡಚ್ ಕುಟುಂಬವೊಂದರಲ್ಲಿ ಜನಿಸಿದರು. ತಂದೆ ವೈದ್ಯ. ಆತನ ಮರಣದ ನಂತರ ಆ ಕುಟುಂಬ ಹಾಲೆಂಡಿಗೆ ಹೋಗಿ ಯುಟ್ರೆಕ್ ನಲ್ಲಿ ನೆಲೆಸಿತು. ತನ್ನ ತಂದೆಯಂತೆರ ವಿಲಿಯಂ ಐಂಥೋವನ್ ಕೂಡ ವೈದ್ಯಶಾಸ್ತ್ರದ ಅಧ್ಯಯನ ಮಾಡಿ ವೈದ್ಯ ವೃತ್ತಿಯಲ್ಲಿ ತೊಡಗಿದರು. ಶರೀರ ಕ್ರಿಯೆಗಳ ಕಾರ್ಯ ವಿಧಾನಗಳನ್ನು ತಿಳಿಯುವ ಆಸಕ್ತಿ ಅವರಲ್ಲಿ ವಿದ್ಯಾರ್ಥಿ ದೆಶೆಯಿಂದಲೇ ಬೆಳೆದಿತ್ತು. ಸಂಶೋಧನಾ ಕಾರ್ಯಕ್ಕೆ ಅನುಕೂಲವಾಗುವಂಥ ವಾತಾವರಣವನ್ನು ಅವರು ಅಪೇಕ್ಷಿಸಿದ್ದರು. ಅದಕ್ಕಾಗಿ ಇವರು ಲೇಡೆನ್ ವಿಶ್ವವಿದ್ಯಾಲಯದಲ್ಲಿ ಶರೀರ ಕ್ರಿಯಾಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತ ತನ್ನ ಸಂಶೋಧನಾ ಕಾರ್ಯವನ್ನು ಮುಂದುವರಿಸಿದರು.

ಹೃದಯ ಸ್ಪಂದನದೊಂದಿಗೆ ಉತ್ಪತ್ತಿಯಾಗುವ ವಿದ್ಯುತ್ ಶಕ್ರಿಯ ಪ್ರವಾಹವನ್ನು ದಾಖಲೆ ಮಾಡಿಕೊಳ್ಳುವುದು ಒಂದು ಸಮಸ್ಯೆಯಾಗಿತ್ತು. ಆಗ ಲಭ್ಯವಿದ್ದ ಗ್ಯಾಲ್ವನೊ ಮೀಟರು ಅಂಥ ವಿದ್ಯುತ್ ಪ್ರವಾಹವನ್ನು ದಾಖಲೆ ಮಾಡುವಷ್ಟು ಸೂಕ್ಷ್ಮವಾಗಿರಲಿಲ್ಲ. ಆದುದರಿಂದ ವಿಲಿಯಂ ಐಂಥೋವನ್ ಅದರ ವಿನ್ಯಾಸದ ಆಧಾರದ ಮೇಲೆ ತಂತಿಗಳನ್ನು ಜೋಡಿಸಿದ ಗ್ಯಾಲ್ವನೊ ಮೀಟರ್ ಒಂದನ್ನು ಖುದ್ದಾಗಿ ರೂಪಿಸಿದರು. ಈ ತಂತಿಯ ಗ್ಯಾಲ್ವನೊ ಮೀಟರನ್ನು ಬಳಸಿ ಹೃದಯ ಸ್ಪಂದನದೊಂದಿಗೆ ಉತ್ಪತ್ತಿಯಾಗುವ ವಿದ್ಯುತ್ ಶಕ್ತಿಯ ಪ್ರವಾಹವನ್ನು ಕಾಗದದ ಮೇಲೆ ದಾಖಲೆ ಮಾಡಿಕೊಂಡು ಹೃದಯದ ಸಹಜ ಮತ್ತು ಅಸಹಜ ಕ್ರಿಯೆಗಳನ್ನು ತಿಳಿದುಕೊಳ್ಳಬಹುದು ಎಂಬುದನ್ನು ತೋರಿಸಿಕೊಟ್ಟರು. ಇವರು ತಯಾರು ಮಾಡಿದ ಸೂಕ್ಷ್ಮ ವಿದ್ಯುನ್ಮಾಪಕವು ಹೃದಯ ರೋಗಗಳ ನಿದಾನ ಕಾರ್ಯದಲ್ಲಿ ಹೊಸ ಘಟ್ಟವನ್ನು ಆರಂಭಿಸಿತು ಮತ್ತು ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಉಪಯುಕ್ತವಾದ ಉಪಕರಣವಾಗಿ ಬಳಕೆಗೆ ಬಂದಿತು.

ಐಂಥೋವನ್ ರ ಸೇವೆಯನ್ನು ಮಾನ್ಯ ಮಾಡಿ ಇವರಿಗೆ ೧೯೨೪ರಲ್ಲಿ ನೊಬೆಲ್ ಪಾರಿತೋಷಕವನ್ನು ಕೊಡಲಾಯಿತು.

ಸದಾ ಕಾರ್ಯಮಗ್ನರಾಗಿರುತ್ತಿದ್ದ ಸೌಮ್ಯ ಸ್ವಭಾವದ ವಿಜ್ಞಾನಿ ವಿಲಿಯಂ ಐಂಥೋವನ್ ೧೯೨೭ರಲ್ಲಿ ನಿಧನ ಹೊಂದಿದರು.