(ಕ್ರಿ. ಶ. ೧೭೪೧-೧೭೯೯) (ಹೃದಯ ಉದ್ದೀಪಕ ಔಷಧಿ)

ವಿಲಿಯಂ ವಿಥರಿಂಗ್ ೧೭೪೧ರಲ್ಲಿ ಇಂಗ್ಲೆಂಡಿನ ವೈದ್ಯ ಕುಟುಂಬವೊಂದರಲ್ಲಿ ಜನಿಸಿದರು. ಸಸ್ಯಶಾಸ್ತ್ರ, ಖನಿಜಶಾಸ್ತ್ರ, ರಸಾಯನ ಶಾಸ್ತ್ರ, ಪವನ ಶಾಸ್ತ್ರ ಮತ್ತು ಸಂಗೀತ ಈತನ ಆಸಕ್ತಿಯ ವಿಷಯಗಳಾಗಿದ್ದವು. ಆದರೆ ಈತ ವೈದ್ಯಶಾಸ್ತ್ರದ ವ್ಯಾಸಂಗ ಮಾಡಿ ಪದವಿ ಪಡೆದರು. ಪದವಿ ಪಡೆದ ತರುವಾಯ ವೈದ್ಯ ವೃತ್ತಿಯನ್ನು ಆರಂಭಿಸಿದರು. ಬಿಡುವಿನ ಸಮಯದಲ್ಲಿ ಸಸ್ಯಗಳ ನಮೂನೆಗಳನ್ನು ಸಂಗಹಿಸುವ ಹವ್ಯಾಸ ಬೆಳೆಸಿಕೊಂಡರು.

ಅತ್ಯಂತ ಪ್ರತಿಭಾನ್ವಿತನಾಗಿದ್ದ ಮಿಲಿಯಂ ವಿಥರಿಂಗ್ ಬುಗ್ಗೆಗಳ ಮೂಲಕ ಹೊರಗೆ ಚಿಮ್ಮುವ ನೀರಿನಲ್ಲಿಯ ಖನಿಜಾಂಶಗಳ ವಿಶ್ಲೇಷಣೆ ಮಾಡಿದರು, ಲವಣ ಕರಗುವಿಕೆ, ಸಿಂಕೋನ ಮರದ ತೊಗಟೆ, ಮೂತ್ರ ಕಲ್ಲುಗಳು ಮೊದಲಾದವುಗಳ ಬಗ್ಗೆ ಪ್ರಯೋಗ ಪರೀಕ್ಷೆಗಳನ್ನು ಮಾಡಿದರು. ಇಂಥ ಪರೀಕ್ಷೆಗಳ ಫಲಿತಾಂಶಗಳನ್ನು ರೋಗಗಳನ್ನು ಗುಣಪಡಿಸುವುದಕ್ಕೆ ಬಳಸಿಕೊಂಡರು, ಗಿಡಮೂಲಿಕೆಗಳ ಔಷಧಿಗಳನ್ನೂ ತಯಾರಿಸಿದರು.

ಮೊದಲು ಸ್ಟಾಫರ್ಡ್‌ನಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದ ಆತ ಮುಂದೆ ಬರ್ಮಿಂಗ್ ಹ್ಯಾಮಿಗೆ ಹೋಗಿ ತನ್ನ ವೃತ್ತಿಯ ವ್ಯಾಪ್ತಿಯನ್ನು ವಿಸ್ತರಿಸಿಕೊಂಡರು. ಅಲ್ಲಿ ಉಗಿಯಂತ್ರದ ಸಂಶೋಧಕ ಜೇಮ್ಸ್ ವ್ಯಾಟ್, ಆಮ್ಲಜನಕ ಶೋಧಕ ಜೋಸೆಫ್ ಪ್ರೀಸ್ಟ್ಲಿ ಮತ್ತು ಬೆಂಜಾಮಿನ್ ಫ್ರಾಂಕ್ಲಿನ್ ಅವರುಗಳಂಥ ಪ್ರಸಿದ್ಧ ವ್ಯಕ್ತಿಗಳ ಸ್ನೇಹ ಸಂಪಾದಿಸಿದರು.

ಡಿಜಿಟಾಲಿಸ್ ಗಿಡಮೂಲಿಕೆಯ ಔಷಧೀಯ ಗುಣಧರ್ಮಗಳನ್ನು ಕಂಡು ಹಿಡಿದಿದ್ದು ಈತನ ಒಂದು ದೊಡ್ಡ ಸಾಧನೆ. ಈ ಗಿಡಮೂಲಿಕೆಯ ಔಷಧಿಯನ್ನು ಜಲೋದರ ಮತ್ತು ಹೃದ್ರೋಗಗಳಿಗೆ ಬಳಸಲಾಗುತ್ತದೆ. ಹೃದಯರೋಗವನ್ನು ಗುಣಪಡಿಸುವಲ್ಲಿ ಡಿಜಿಟಾಲಿಸ್ ಗಿಂತ (ಹೃದಯ ಉದ್ದೀಪಕ) ಪರಿಣಾಮಕಾರಿಯಾದ ಔಷಧ ಇನ್ನೊಂದಿಲ್ಲ ಎಂದು ಹೇಳಲಾಗುತ್ತದೆದ. ಆದರೆ ಈ ಔಷಧಿಯ ಸೇವನೆಯ ಪ್ರಮಾಣದ ಇತಿಮಿತಿಗಳನ್ನು ತಿಳಿಯುವುದು ಕೂಡ ಅಷ್ಟೇ ಮುಖ್ಯವಾಗಿತ್ತು. ಅಂತಲೇ ಆತ ಹಲವಾರು ಪ್ರಯೋಗಗಳನ್ನು ಮಾಡಿ ಅದರ ಸೇವನೆಯ ಪ್ರಮಾಣಗಳನ್ನು ಗೊತ್ತುಪಡಿಸಿದರು.

ವಿಲಿಯಂ ವಿಥರಿಂಗ್ ೧೭೯೯ರಲ್ಲಿ ಕ್ಷಯರೋಗದಿಂದ ನರಳಿ ನಿಧನ ಹೊಂದಿದರು.