(ಕ್ರಿ. ಶ. ೧೮೪೫-೧೯೨೪) (ರೋಂಟ್ ಗೆನ್ ರಶ್ಮಿಗಳು ಅಥವಾ ಕ್ಷ-ಕಿರಣಗಳು)

ವ್ಯಾಸಂಗಕ್ಕಾಗಿ ಪ್ರವೇಶ ಕೇಳಿ ಬಂದ ವಿದ್ಯಾರ್ಥಿಯನ್ನು ತಿರಸ್ಕರಿಸಿ ಮುಂದೆ ಅವರನ್ನೇ ಕೆಲಸಕ್ಕೆ ಸೇರಿಸಿಕೊಳ್ಳಲು ಪೈಪೋಟಿ ಮಾಡಿದ ವಿದ್ಯಾಸಂಸ್ಥೆಗಳ ಪ್ರಕರಣ ಸಿಗುವುದು ಇಲ್ಲೊಂದು ಅಲ್ಲೊಂದು ಮಾತ್ರ. ಇಂಥ ಒಂದು ಅಪರೂಪದ ಪ್ರಕರಣ ವಿಲ್ ಹೆಲ್ಮ್ ಕಾನ್ರಾಡ್ ರೋಂಟ್ ಗೆನ್ ರ ಜೀವನದಲ್ಲಿ ಸಂಭವಿಸಿತ್ತು. ಇವರು ವ್ಯಾಸಂಗಕ್ಕಾಗಿ ಪ್ರವೇಶ ಕೋರಿ ಹಾಲೆಂಡಿನ ಯುಟ್ರೆಕ್ಟ್ ವಿಶ್ವವಿದ್ಯಾಲಯಕ್ಕೆ ಅರ್ಜಿ ಹಾಕಿದ್ದರು. ಆದರೆ ಆ ವಿಶ್ವವಿದ್ಯಾಲಯ ಅವರಿಗೆ ಪ್ರವೇಶ ನೀಡಲಿಲ್ಲ. ಮುಂದೆ ಅವರು ತನ್ನ ಸಂಶೋಧನಾ ಕಾರ್ಯಗಳ ಮೂಲಕ ವಿಶ್ವಖ್ಯಾತಿ ಗಳಿಸಿದಾಗ ಅದೇ ವಿಶ್ವವಿದ್ಯಾಲಯ ಅವರು ತನ್ನಲ್ಲಿ ಸೇವೆ ಸಲ್ಲಿಸಬೇಕೆಂದು ಕೋರಿ ಆಹ್ವಾನ ಕಳಿಸಿತು. ಅದರ ಆಹ್ವಾನವನ್ನು ಸ್ವೀಕರಿಸಲು ಸಾಧ್ಯವಾಗದೆ ರೋಂಟ್ ಗೆನ್ ತನಗೆ ಹೆಚ್ಚು ಅನುಕೂಲಕರವಾದ ವಾತಾವರಣವಿದ್ದಂಥ ವೂರ್ಜ್‌ಬರ್ಗ್ ವಿಶ್ವವಿದ್ಯಾಲಯದಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದರು.

ರೋಂಟ್ ಗೆನ್ ೧೮೪೫ರಲ್ಲಿ ಜರ್ಮನಿಯ ರೈನ್ ಪ್ರಾಂತ್ಯದ ಲೆನೆಪ್ ಎಂಬ ಹಳ್ಳಿಯಲ್ಲಿ ಜನಿಸಿದರು. ಬಟ್ಬೆ ವ್ಯಾಪಾರಸ್ಥನಾಗಿದ್ದ ತಂದೆ ತನ್ನ ಕುಟುಂಬದ ಸಮೇತ ಹಾಲೆಂಡಿಗೆ ವಲಸೆ ಹೋದರು. ಬಾಲಕನಿದ್ದಾಗ ರೋಂಟ್ ಗೆನ್ ತೀರ ಕುಚೇಷ್ಟೆಯ ಸ್ವಭಾವದವರಾಗಿದ್ದರು. ಈ ಹಿನ್ನೆಲೆಯಿಂದಾಗಿಯೇ ಯುಟ್ರೆಕ್ಟ್ ವಿಶ್ವವಿದ್ಯಾಲಯ ಅವರಿಗೆ ಪ್ರವೇಶ ನೀಡಿರಲಿಲ್ಲ. ಅವರು ಸ್ವಿತ್ಜ್ ರ್ಲೆಂಡಿನ ಜುರಿಕ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಗಣಿತ ಮತ್ತು ವಿಜ್ಞಾನದಲ್ಲಿ ಪದವಿ ಪಡೆದರು.

ಪ್ರಬಲ ವಿದ್ಯುತ್ ಪ್ರವಾಹವನ್ನು ನಿರ್ವಾಯುಗೊಳಿಸಿದ ಕೊಳವೆಯಲ್ಲಿ ಹಾಯಿಸಿ ಪ್ರಯೋಗ ಮಾಡುತ್ತಿದ್ದಾಗ ರೋಂಟ್ ಗೆನ್ ಅಗೋಚರ ಕಿರಣಗಳನ್ನು ಕಂಡು ಹಿಡಿದರು. ಈ ಕಿರಣಗಳು ಕಾಗದ, ಪುಸ್ತಕ, ಮರದ ತುಂಡು, ರಬ್ಬರ‍್ ಮೊದಲಾದ ವಸ್ತುಗಳನ್ನು ಭೇದಿಸಿಕೊಂಡು ಹೋಗಬಲ್ಲ ಸಾಮರ್ಥ್ಯವುಳ್ಳದ್ದಾಗಿದ್ದವು. ಅವರು ತನ್ನ ಹೆಂಡತಿಯ ಕೈಮೇಲೆ ಈ ಕಿರಣಗಳನ್ನು ಹಾಯಿಸಿ ಕೈಮೂಳೆಗಳ ಚಿತ್ರವನ್ನು ಪಡೆದರು. ಇದು ವೈದ್ಯಕೀಯ ವಿಜ್ಞಾನದಲ್ಲಿ ಮತ್ತು ಇಡಿಯಾಗಿ ವಿಜ್ಞಾನ ಕ್ಷೇತ್ರದಲ್ಲಿ ಒಂದು ಅದ್ಭುತ ಸಂಶೋಧನೆಯಾಯಿತು. ಈ ಕಿರಣಗಳನ್ನು ರೋಟ್ ಗೆನ್ “ಎಕ್ಸ್-ಕಿರಣಗಳು” ಎಂದು ಕರೆದರು. ಆದರೆ ರೋಂಟ್ ಗೆನ್ ರ ಕಾರ್ಯಕ್ಕೆ ಮನ್ನಣೆಯಾಗಿ ಅವರ ಸಹೋದ್ಯೋಗಿ ಪ್ರಾಧ್ಯಾಪಕ ಕಾಲಿಕರ‍್ ಎಂಬುವರು ಎಕ್ಸ್-ಕಿರಣಗಳನ್ನು ರೋಂಟ್ ಗೆನ್ ರಶ್ಮಿಗಳೆಂದು ಕರೆದರು. ರೋಂಟ್ ಗೆನ್ ತಮ್ಮ ಸಂಶೋಧನೆಗಾಗಿ ಯಾವ ಆರ್ಥಿಕ ಫಲವನ್ನೂ ಪಡೆಯಲಪೇಕ್ಷಿಸಲಿಲ್ಲ. ಅವನ್ನು ಸಾರ್ವತ್ರಿಕ ಬಳಕೆಗಾಗಿ ಬಿಟ್ಟುಕೊಟ್ಟರು. ಇಂದು “ಕ್ಷ-ಕಿರಣಗಳು” ಅಥವಾ “ರೋಂಟ್ ಗೆನ್ ರಶ್ಮಿಗಳು” ವೈದ್ಯಕೀಯ ಕ್ಷೇತ್ರದಲ್ಲಿ ಎಷ್ಟು ಮಹತ್ವದ ಪಾತ್ರ ವಹಿಸುತ್ತಿವೆ ಎಂಬುದು ಸರ್ವಶ್ರುತ.

ಈ ಮಹಾಮೇಧಾವಿ ತನ್ನ ೭೮ನೆಯ ವಯಸ್ಸಿನಲ್ಲಿ ೧೯೨೩ರಲ್ಲಿ, ನಿಧನ ಹೊಂದಿದರು.