ಸಾಕಷ್ಟು ಚರ್ಚೆಗೆ ಒಳಗಾಗಿರುವ ದೇವದಾಸಿ ಸಂಪ್ರದಾಯ ಭಾರತೀಯ ಸಂಸ್ಕೃತಿಗೆ ಮಾತ್ರ ವಿಶಿಷ್ಟವಾಗಿರದೆ, ಇತರ ಸಂಸ್ಕೃತಿಗಳಲ್ಲಿಯೂ ಕಾಣಸಿಗುತ್ತದೆ.

ವಿವಿಧ ಸಂಸ್ಕೃತಿಗಳಲ್ಲಿ ಈ ಸಂಪ್ರದಾಯದ ಅಸ್ತಿತ್ವ ಮತ್ತು ವ್ಯಾಪ್ತಿಗಳನ್ನು ಗುರುತಿಸುವುದು ಮತ್ತು ಭಾರತೀಯ ವಿಭಿನ್ನ ಪ್ರದೇಶಗಳಲ್ಲಿ ಇದರ ಆಚರಣೆ ಅದರ ಮುಖಾಂತರ ಇದರ ಉಗಮವನ್ನು ಸ್ಥೂಲವಾಗಿ ವಿವರಿಸುವುದು ಈ ಪ್ರಬಂಧದ ಗುರಿ.

ದೇವದಾಸಿ ಎಂದರೆ ‘ದೇವರುಗಳಿಗೆ ದಾಸರು’ ಎಂದೇ ಅರ್ಥ. ದೇವ/ದೇವತೆಗಾಗಿ ಒಂದು ಹೆಣ್ಣನ್ನು, ಗಂಡನ್ನು ಅರ್ಪಿಸಿ, ಅವನ/ಅವಳ ಸೇವೆಗಾಗಿಯೇ ಹೆಣ್ಣನ್ನು/ಗಂಡನ್ನು ಮೀಸಲಾಗಿರಿಸುವ ಈ ಪರಂಪರೆ ಬಹು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿ ಬಂದಿದೆ. ಇತರ ಸಂಸ್ಕೃತಿಗಳಲ್ಲಿಯೂ ಇದಕ್ಕೆ ಸಾದೃಶ್ಯವಾಗಿರುವ ಐತಿಹಾಸಿಕ ಮತ್ತು ಕುಲಶಾಸ್ತ್ರೀಯ ವಿವರಗಳು ದೊರೆಯುತ್ತವೆ.

‘ಹೈರೊಡೌಲೊಯಿ’ (ಪವಿತ್ರ ಸೇವಕರು) ಹೀಯರೊಯಿ ದೇವಾಲಯ ಅರ್ಚಕ, harimtu (ದೇವರಿಗೆ ಮೀಸಲಾದ ಹೆಣ್ಣು) ಕೋಸಿಯೊ (ದೇವರ ನಿಕಟ ಸಂಪರ್ಕದ ವ್ಯಕ್ತಿಗಳು’) ಮುಂತಾದ ಶಬ್ದಗಳು ಈ ಮಾದರಿಯ ಸಂಪ್ರದಾಯ ಪ್ರಾಚೀನ ಕಾಲದಲ್ಲಿಯೂ ಅಸ್ತಿತ್ವದಲ್ಲಿದ್ದುದನ್ನು ನಿಸ್ಸಂದೇಹವಾಗಿ ಪುಷ್ಟೀಕರಿಸುತ್ತವೆ.

ಸರ್ ಜೇಮ್ಸ್‌ ಫ್ರೇಜರ್ ಅವರು ನಿಸರ್ಗದ ಎಲ್ಲ ಪುನರುತ್ಪತ್ತಿ ಶಕ್ತಿಗಳ ಫಲವತ್ತತೆಯ ತತ್ವದ ಮೂರ್ತೀಕರಣಗೊಂಡ ಮಾತೃದೇವತೆಯ ಆರಾಧನೆಯ ಜೊತೆಗೆ ಈ ಸಂಪ್ರದಾಯದ ಸಂಬಂಧವನ್ನು ಗುರುತಿಸುತ್ತಾರೆ. ನಿಸರ್ಗವನ್ನು ಸಮೃದ್ಧಗೊಳಿಸುವ ಅವಳು ಸ್ವತಃ ಫಲವತ್ತಳಾಗಿರಬೇಕು ಮತ್ತು ಆ ಕಾರಣಕ್ಕಾಗಿ ಒಬ್ಬ ಸಂಗಾತಿಯಿರಬೇಕು ಎನ್ನುವ ತತ್ತ್ವದ ಆಧಾರದ ಮೇಲೆ ಈ ಮಾತು ರೂಪಗೊಂಡಿತು. ಭೂಮಿಯ, ಪ್ರಾಣಿಗಳ ಮತ್ತು ಮಾನವ ಕುಲದ ಫಲಸಮೃದ್ಧಿಯ ಉತ್ತೇಜನ, ದಿವ್ಯಲಗ್ನ ಅಥವಾ ದೈವೀವಿವಾಹದ ಉದ್ದೇಶವಾಗಿದ್ದು, ಈ ಉದ್ದೇಶ ಸಾಧನೆಗಾಗಿ ಪ್ರತಿ ವರ್ಷ ಪವಿತ್ರ ಉತ್ಸವಗಳ ಆಚರಣೆ ಅತ್ಯಗತ್ಯ ಎಂದು ಭಾವಿಸಲಾಯಿತು. ಇಂಥ ಆಚರಣೆಗಳಲ್ಲಿ ಮದುಮಗಳು ಮತ್ತು ಮದುಮಗನ ಪಾತ್ರವನ್ನು, ವಿಗ್ರಹ ಅಥವಾ ಜೀವಂತ ವ್ಯಕ್ತಿಗಳು ವಹಿಸಬೇಕಾಗುತ್ತಿತ್ತು. ದೈವೀ ಸಂಯೋಗದ ಪಂಥ ಪುರಾತನ ಕಾಲದಿಂದಲೂ ಅನೇಕ ರಾಷ್ಟ್ರಗಳಲ್ಲಿ ವ್ಯಾಪಕವಾಗಿ ಹಬ್ಬಿರುವುದನ್ನು ಮತ್ತು ವಿಭಿನ್ನ ಸಂಸ್ಕೃತಿಗಳಲ್ಲಿ ಬೇರೆ ಬೇರೆ ರೂಪವಿಧಿ ಹೊಂದಿರುವುದನ್ನು ಗುರುತಿಸಬಹುದಾಗಿದೆ. ಅಥೆನ್ಸ್ ದಲ್ಲಿ ಪ್ರತಿವರ್ಷ ಮದಿರಾದೇವ ಡಯೊನಿಸಸ್ನ ಮದುವೆ ಅಲ್ಲಿಯ ರಾಣಿಯೊಂದಿಗೆ ನೆರವೇರುತ್ತಿತ್ತು. ದ್ರಾಕ್ಷಿ ಮತ್ತು ಇತರ ಫಲವೃಕ್ಷಗಳ ಸಮೃದ್ಧಿ ಇದರ ಗುರಿಯಾಗಿತ್ತು. ಇಂಥ ಉತ್ಸವಗಳಲ್ಲಿ ದೇವತೆಯ ಪಾತ್ರವನ್ನು ಜೀವಂತ ವ್ಯಕ್ತಿಯೇ ಧರಿಸುತ್ತಿದ್ದನೋ ಅಥವಾ ಒಂದು ವಿಗ್ರಹ ಧರಿಸುತ್ತಿತ್ತೋ ಎನ್ನುವುದು ಗೊತ್ತಾಗುವುದಿಲ್ಲ (ಫ್ರೇಜರ, ೧೯೫೪: ೧೪೨).

ಸ್ವೀಡನಿನಲ್ಲಿ ಪಶುಪಕ್ಷಿ, ಸಸ್ಯಪ್ರಪಂಚದ ಫಲವತ್ತತೆಯ ಸಂಕೇತವಾದ ‘ಫ್ರೇ’ ದೇವನ ಮನುಷ್ಯ ಪ್ರಮಾಣದ ವಿಗ್ರಹವನ್ನು ಒಂದು ಬಂಡಿಯಲ್ಲಿ ಇಟ್ಟು ಅದನ್ನು ನಾಡಿನ ತುಂಬ ಮರೆಸಲಾಗುತ್ತಿತ್ತು. ಮೆರವಣಿಗೆಯ ಈ ಬಂಡಿಯ ಜೊತೆಗೆ ಒಬ್ಬ ಸುಂದರ ಕನ್ಯೆ ನಡೆದುಹೋಗುತ್ತಿದ್ದಳು. ಉಪ್ಸಲಾದ ಈ ದೇವತೆಯ ದೇವಾಲಯದ ಅರ್ಚಕಳೂ ಆಗಿರುತ್ತಿದ್ದ ಇಂಥ ಕನ್ಯೆಯನ್ನು ದೇವಪತ್ನಿ ಎಂದು ಕರೆಯಲಾಗುತ್ತಿತ್ತು. ಮುಂಬರುವ ವರ್ಷ ಫಲಸಮೃದ್ಧವಾಗಲಿ ಎಂದು ಜನರು ಗುಂಪಾಗಿ ಬಂದು ಈ ದೇವತೆಯ ವಿಗ್ರಹ ಮತ್ತು ಅವನ ಮದುಮಗಳಿಗೆ ಕಾಣಿಕೆಗಳನ್ನು ಸಲ್ಲಿಸುತ್ತಿದ್ದರು. (ಫ್ರೇಜರ, ೧೯೫೪:೧೪೩).

ಕೆಲವೊಂದು ಸಂಸ್ಕೃತಿಗಳಲ್ಲಿ ದೇವ ಅಥವಾ ದೇವತೆಯ ಸೇವೆಗಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳುತ್ತಿದ್ದ ಗಂಡು ಮತ್ತು ಹೆಣ್ಣು ತಮ್ಮನ್ನು ತಾವು ದೈಹಿಕ ಪಾವಿತ್ಯ್ರವನ್ನು ಕಾಪಾಡಿಕೊಳ್ಳಬೇಕಾಗುತ್ತಿತ್ತು. ಹೆಣ್ಣು ತಾನು ‘ಕನ್ಯೆ’ಯಾಗಿರುವುದನ್ನು, ಗಂಡು ‘ಬ್ರಹ್ಮಚಾರಿ’ಯಾಗಿರುವುದನ್ನು ದೇವತೆಯ ಎದುರು ಪ್ರಮಾಣೀಕರಿಸಬೇಕಾಗುತ್ತಿತ್ತು.

ಬೆಬಿಲಾನಿನ ಬೆಲ್‌ ನಗರದಲ್ಲಿ ಪಿರಾಮಿಡ್‌ದಂಥ ಎಂಟು ಗೋಪುರಗಳ ಬೃಹದಾಕಾರದಲ್ಲಿ ತಲೆಯೆತ್ತಿದ ಕೊನೆಯ ಉನ್ನತ ಗೋಪುರದಲ್ಲಿ ಒಂದು ದಿವ್ಯ ಧಾಮ; ಅಲ್ಲಿ ದೇವಾಲಯ; ;ಆ ಗುಡಿಯಲ್ಲಿ ಮೆತ್ತೆ ದಿಂಬುಗಳಿಂದ ಕೂಡಿದ ಭವ್ಯವಾದ ಅಲಂಕೃತ ಹಾಸುಗೆ; ಅದರ ಬದಿಯಲ್ಲಿ ಒಂದು ಬಂಗಾರದ ಪೀಠ. ಆ ದೇವಾಲಯದಲ್ಲಿ ದೇವರ ಮೂರ್ತಿ ಕಾಣುವುದಿಲ್ಲ. ಯಾವನೇ ಪುರುಷ ಅಲ್ಲಿ ರಾತ್ರಿ ಕಾಲ ಕಳೆಯುವಂತಿಲ್ಲ. ಬ್ಯಾಬಿಲಾನಿನ ಸ್ತ್ರೀ ಸಮೂಹದೊಳಗಿಂದ ಆಯ್ದ ಕೇವಲ ಒಬ್ಬ ಸ್ತ್ರೀ ಮಾತ್ರ ಅಲ್ಲಿರಬೇಕು. ಇಂಥವಳು ದೇವನ ಆಯ್ಕೆ ಎನ್ನುವುದು ಅಲ್ಲಿಯ ಚಾಲ್ಡಿಯನ್‌ ಅರ್ಚಕರ ಭಾವನೆ. ರಾತ್ರಿ ದೇವನು ಸ್ವತಃ ಆಯ್ಕೆಯಾದ ಸ್ತ್ರೀಯ ಈ ಹಾಸುಗೆಗೆ ಬಂದು ಅವಳೊಡನೆ ಮಲಗುತ್ತಾನೆ ಎನ್ನುವುದು ಅವರ ನಂಬಿಕೆ. ದೇವರಿಗೆ ಮಾತ್ರ ಮೀಸಲಾಗಿರುವ ಆ ಸ್ತ್ರೀಗೆ ಈ ಲೋಕದ ಗಂಡಿನ ಜೊತೆ ದೈಹಿಕ ಸಂಪರ್ಕ ನಿಷಿದ್ಧ (ಫ್ರೇಜರ, ೧೯೫೪: ೧೪೨).

ಕ್ಯಾನರಿ ದ್ವೀಪದ ಗಾಂಜೆಸ್‌, ಪ್ರಾಚೀನ ಪರ್ಸಿಯನ್‌ ಗ್ರೀಕ್‌ ಮತ್ತು ರೋಮನ್‌ ಜನಸಮುದಾಯಗಳಲ್ಲಿ ‘ಕನ್ಯಾ ಪೂಜಾರಿಣಿ’ಯರು ಅತಿ ಗೌರವಕ್ಕೆ ಪಾತ್ರರಾಗಿದ್ದರು. ಪರ್ಶಿಯಾದ ‘ಕನ್ಯಾ ಪೂಜಾರಿಣಿ’ಯರು ಸೂರ್ಯದೇವನ ಸೇವೆಗೆ ಅರ್ಪಿತರಾದವರು. Aegium ದ ‘ಹೆರಾ’ ಮಾದರಿಯ ಗುಡಿ, ‘ಕನ್ಯೆ’

[ಯರ ಮೇಲ್ವಿಚಾರಣೆಗೆ ಒಳಪಟ್ಟಿದ್ದು ಇಂಥ ಗುಡಿಗಳು ಗ್ರೀಸನ ಅನೇಕ ಕಡೆ ಹರಡಿಕೊಂಡಿದ್ದವು. ರೋಮನ್‌ ಅರಸು ಸುಮಾ ‘ಚಿರಕನ್ಯತ್ವ’ದ ಆಜ್ಞೆ ಹೊರಡಿಸಿದನೆಂದು ಹೇಳಲಾಗುತ್ತದೆ. ಇಂಥ ‘ಕನ್ಯೆ’ಯರು ೩೦ ವರುಷಗಳ ವರೆಗೆ ಅವಿವಾಹಿತವಾಗಿಯೇ ಸೇವೆ ಸಲ್ಲಿಸಿ ನಿವೃತ್ತರಾಗಬೇಕಾಗುತ್ತಿತ್ತು. ಪಾವಿತ್ಯ್ರದ ವ್ರತವನ್ನು ಭಂಗ ಮಾಡಿದವರಿಗೆ ಜೀವಂತ ಹೂಳುವ ಶಿಕ್ಷೆ ವಿಧಿಸಲಾಗುತ್ತಿತ್ತು. Yukatan ದಲ್ಲಿ ಕನ್ಯಾ ಪೂಜಾರಿಣಿಯರು ಯಜ್ಞದ ಅಗ್ನಿಯನ್ನು ಉರಿಸಬೇಕಾಗುತ್ತಿತ್ತು. ಮ್ಯಾಕ್ಸಿಕೋದಲ್ಲಿ ಕನ್ಯತ್ವ ಕಳೆದುಕೊಂಡ ದೇವಾಲಯದ ಹೆಣ್ಣಿಗೆ ಮರಣದಂಡನೆ ವಿಧಿಸಲಾಗುತ್ತಿತ್ತು (ಕ್ರಾಲೇ 1930 :484-485).

ಪೇರು ದೇಶದ ಒಂದು ಗ್ರಾಮದಲ್ಲಿ Red Indian ಜನರು “huaca” ದೇವರೆಂದು ಭಾವಿಸಲಾದ ಮಾನವಾಕಾರದ ಕಲ್ಲಿನ ವಿಗ್ರಹದೊಂದಿಗೆ ಸುಮಾರು ೧೪ ವರ್ಷದ ಸುಂದರ ಕನ್ಯೆಯ ಮದುವೆ ಮಾಡುತ್ತಿದ್ದರು. ಈ ವಿವಾಹಿತಳು ‘ಕನ್ಯೆ’ಯಾಗಿಯೇ ಉಳಿದು ಜನರ ಕ್ಷೇಮಕ್ಕಾಗಿ ದೇವತಾ ಮೂರ್ತಿಗೆ ಅವಳನ್ನು ಮೀಸಲಾಗುತ್ತಿತ್ತು (ಫ್ರೇಜರ, ೧೯೫೪:೧೪೪). ಸೀರಿಯಾದ ಡೈರೊ ಪೊಲಿಸಿನ ಹ್ಯಾಸ್ಟ್ರೇಟ್‌ ಮಹಾ ಉತ್ಸವದಲ್ಲಿ ಪುರುಷರು ತಮ್ಮ ಪುರುಷತ್ವ ಶಕ್ತಿಯನ್ನೇ ದೇವತೆಗೆ ಅರ್ಪಿಸುತ್ತಿದ್ದರು (ಫ್ರೇಜರ, ೧೯೫೪ : ೩೫೦). ಮತ್ತು ಇಂಥವನೊಬ್ಬನು ಪ್ರತಿ ವರ್ಷ ಎರಡು ಸಲ ದೇವಾಲಯದ ಮುಖ್ಯ ದ್ವಾರದ ಎದುರು ಇದ್ದ ಬೃಹದಾಕಾರದ ಸ್ತಂಭಗಳನ್ನು ಮೇಲೇರಿ ನಿಲ್ಲುತ್ತಿದ್ದನು. ಅಲ್ಲಿ ನಿಂತ ಅವನು ದೇವರ ಜೊತೆ ಮಾತಾಡಿ ಭೂಮಿಯ ಫಲ ಸಮೃದ್ಧಿ ಮತ್ತು ಜನಾಂಗ ಕಲ್ಯಾಣವನ್ನು ಸಾಧಿಸುತ್ತಾನೆ ಎಂದು ನಂಬಲಾಗುತ್ತಿತ್ತು (ಫೆನಝರ, ೧೯೨೪ : ೨೭೫).

ಕೆಲವು ಬೇರೆ ಉದಾಹರಣೆಗಳಲ್ಲಿ ದೇವರಿಗೆ ಮೀಸಲಾದ ಹೆಣ್ಣುಗಳು ರಾಜ ಮನೆತನ ಅಥವಾ ಅರ್ಚಕವರ್ಗದ ವ್ಯಕ್ತಿಗಳ ಭೋಗದ ವಸ್ತುವಾದುದು ಕಂಡು ಬರುತ್ತದೆ. ಫಲವತ್ತತೆಯ ಕೃಪೆಯನ್ನು ಪಡೆಯುವ ನಂಬಿಕೆಯ ಹಿನ್ನೆಲೆಯಲ್ಲಿ ದೇವರಿಗೆ ಮೀಸಲಾದ ‘ಕನ್ಯೆ’ ತನ್ನ ಮೊದಲರಾತ್ರಿಯ ಭೋಗವನ್ನು ಅರಸು ಅಥವಾ ಅರ್ಚಕನಿಗೆ ಅರ್ಪಿಸುವ ಸಂಪ್ರದಾಯ  ಹುಟ್ಟಿಕೊಂಡಿತು.  ಈಜಿಪ್ತಿನ ಥೆಬಿಸನಲ್ಲಿ ದೇವರಿಗೆ ಮೀಸಲಾದ- ಕನ್ಯೆ ‘ಅಮ್ರಾನ್‌’ ದೇವಾಲಯದ ಒಳ ಅಂಕಣದಲ್ಲಿ ಮಲಗಬೇಕಾಗುತ್ತಿತ್ತು. ಇವಳು ಯಾವುದೇ ಪುರುಷನ ಜೊತೆ ದೈಹಿಕ ಸಂಪರ್ಕ ಹೊಂದಿರಕೂಡದು ಎಂದು ಭಾವಿಸಲಾಗುತ್ತಿತ್ತು. ಈಜಿಪ್ಸಿಯನ್‌ ಪಠ್ಯಗಳಲ್ಲಿ ಇಂಥವಳನ್ನು ‘ದೇವರದಾಸಿ’ ಎಂದು ವರ್ಣಿಸಲಾಗಿದ್ದು ಅವಳೇ ಈಜಿಪ್ತದ ರಾಣಿಯಾಗಿರುತ್ತಿದ್ದಳು. ಈಜಿಪ್ಸಿಯನ್ನರ ಪ್ರಕಾರ ಈ ಅರಸರು ತಮ್ಮ ವಂಶದೇವತೆಯಾದ ‘ಅಮ್ಮಾನ’ನ ಮಕ್ಕಳು. ಆದುದರಿಂದ ಅರಸರ ವೇಷದಲ್ಲಿ ದೇವನೇ ಇರುತ್ತಾನೆಂದು ನಂಬಿ ದೇವರಿಗೆ ಮೀಸಲಾದ ‘ಕನ್ಯೆ’ಯರು ದೇವತಾಸ್ವರೂಪಿ ಅರಸರ ಭೋಗದ ವಸ್ತುಗಳಾಗುತ್ತ ಬಂದರು (ಫ್ರೇಜರ, ೧೯೫೪ : ೧೪೨). ಬೆಂಗಾಲದ ಓರಾಯನ್ನ ವೃಂದದ ಜನ ಸೂರ್ಯ ಮತ್ತು ಭೂಮಿಗಳನ್ನು ಅರ್ಚಕ ಮತ್ತು ಅವನ ಪತ್ನಿಯಲ್ಲಿ ಪ್ರತೀಕಗೊಳಿಸಿ ದೈವೀ ವಿವಾಹ ಮಹೋತ್ಸವವನ್ನು ಆಚರಿಸುತ್ತಾರೆ. ಇದರಿಂದ ಭೂಮಿತಾಯಿ ಫಲಸಮೃದ್ಧಳಾಗುತ್ತಾಳೆ ಎಂದು ಅವರ ನಂಬಿಕೆ (ಫ್ರೇಜರ, ೧೯೫೪ : ೧೪೫).

ಧಾರ್ಮಿಕ ವೇಶ್ಯಾವೃತ್ತಿ ಅಥವಾ ಉದಾತ್ತೀಕೃತ ಸೂಳೆಗಾರಿಕೆ ಅನೇಕ ದೇವಾಲಯಗಳಿಗೆ ಸಂಬಂಧಿಸಿದಂತೆ ರೂಢಿಯಲ್ಲಿ ಬಂದಿತು. ದೇವರಿಗೆ ಅರ್ಪಿಸಿಕೊಂಡ ಗಂಡು ಹೆಣ್ಣು ಸಂಪ್ರದಾಯದ ಬಲದಿಂದಾಗಿ ತಮ್ಮನ್ನು ತಾವು ಸೂಳೆಗಾರಿಕೆಯ ಆಚರಣೆಯಲ್ಲಿ ತೊಡಗಿಸಿಕೊಂಡರು. ಮೀಸಲಾದ ಗಂಡು/ಹೆಣ್ಣು ದೇವತೆಯ ಪ್ರತಿನಿಧಿ. ಇವರ ‘ಸಂಭೋಗ’ ಮಾತೃದೇವತೆಯ ಮನ್ನಣೆ ಪಡೆದ ನಡವಳಿಕೆಯ ಸಂಕೇತ ಮತ್ತು ಇಂಥ ಕ್ರಿಯೆ ಭೂಮಿಯ ಫಲವತ್ತತೆ ಮತ್ತು ಜನಾಂಗ ಸಮೃದ್ಧಿಗೆ ನಿಶ್ಚಿತ ಪ್ರೇರಕ ಎಂಬ ಮುಂತಾದ ನಂಬಿಕೆಗಳು ಬೆಳೆದುಬಂದವು. ‘ಪುರುಷ ದೇವತೆ’ಗೆ ಮೀಸಲಾದ ‘ದಾಸಿ’ಯರು ಸೂಳೆಯರಾಗಿ ಪರಿವರ್ತನೆಗೊಂಡರು. ಈ ಆಚರಣೆಯನ್ನು ಕೇವಲ ವಿಷಯಭೋಗವೆಂದು ಭಾವಿಸದೆ ದೇವತೆಯ ಸೇವೆಗಾಗಿ ಮಾಡುವ ಕರ್ತವ್ಯ ಎನ್ನುವ ಭಾವನೆ ಇಲ್ಲಿ ಹುದುಗಿರುವುದು ಸ್ಪಷ್ಟ. ಇಂಥ ವೇಶ್ಯೆಯರ ಜೊತೆಯ ಭೋಗ ಒಂದು ವ್ಯಕ್ತಿಗತ ಲಾಲಸೆ ಎಂದುಕೊಳ್ಳದೆ ಮಾತೃದೇವತೆಯ ಜೊತೆಗೆ ನಿಕಟ ಸಂಪರ್ಕ ಹೊಂದುವ ಸಾಧನೆ ಎಂದು ಭಾವಿಸಲಾಗುತ್ತದೆ. ಇಂಥ ಪವಿತ್ರ ಗಂಡುಗಳ ಭೋಗದಿಂದ ಹೆಣ್ಣಿಗೆ ಫಲವತ್ತತೆ ಮತ್ತು ಇಂಥ ಪವಿತ್ರ ಹೆಣ್ಣುಗಳ ಭೋಗದಿಂದ ಗಂಡಿಗೆ ಪುರುಷತ್ತ್ವ ಅಧಿಕಗೊಳ್ಳುತ್ತದೆ ಎನ್ನುವ ನಂಬಿಕೆಯೂ ಇದಕ್ಕೆ ಹಿನ್ನೆಲೆಯಾಗಿ ಪ್ರೇರಣೆ ನೀಡಿತು.

ಮೊಟ್ಟಮೊದಲಿಗೆ, ಬ್ಯಾಬಿಲೋನಿಯಾದ ಅತಿ ಪ್ರಾಚೀನ ದಾಖಲೆಗಳಲ್ಲಿ ಪಶ್ಚಿಮ ಏಷ್ಯಾದ ಕೆಲವೆಡೆ ಧಾರ್ಮಿಕ ವೇಶ್ಯೆಗಾರಿಕೆ ರೂಢಿಯಲ್ಲಿದ್ದ ಉಲ್ಲೇಖ ದೊರೆಯುತ್ತದೆ. ನಂತರ ಸೀರಿಯಾ, ಫಿನಿಷಿಯಾ, ಅರೇಬಿಯಾ, ಈಜಿಪ್ತ, ಗ್ರೀಕ್‌, ರೋಮ್‌ ದೇಶಗಳಲ್ಲಿ ಮತ್ತು ದೂರ ಪೌರ್ವಾತ್ಯ, ಮಧ್ಯ ಅಮೇರಿಕೆ, ಪಶ್ಚಿಮ ಆಫ್ರಿಕಾ ಮುಂತಾದ ಕೆಲವೆಡೆ ಇದನ್ನು ಹೋಲುವ ಪಂಥಗಳನ್ನು ಗುರುತಿಸಲಾಗಿದೆ.

ಮೆಸೆಪೊಟೇಮಿಯಾ ಇಂಥ ‘ಪವಿತ್ರ ವೇಶ್ಯಾವೃತ್ತಿ’ಗೆ ತವರುಮನೆಯಾಗಿತ್ತು. ಬ್ಯಾಬಿಲೋನಿಯಾದ (ಅ) ಹಮ್ಮುರಾಬಿ ನ್ಯಾಯಸೂತ್ರ ಮತ್ತು (ಬ) ಗಿಲ್‌ಗಾಮೆಷ್‌ (Gilgamesh) ಪುರಾಣ ಇದಕ್ಕೆ ನಿದರ್ಶನಗಳಾಗಿವೆ.

ಕ್ರಿ. ಪೂ. ೨೦೯೦ ರಲ್ಲಿ Esagili ಯ ಮಾರ್ದುಕ ದೇವಾಲಯದಲ್ಲಿ ಬಳಕೆಗೆ ಬಂದ ಹಮ್ಮುರಾಬಿ ನ್ಯಾಯಸೂತ್ರಕ್ಕೆ ಅನುಗುಣವಾಗಿ ದೇಶದ ಸಣ್ಣ ದೊಡ್ಡ ಯಾವುದೇ ದೇವಾಲಯವಿರಲಿ, ಪ್ರತಿಯೊಂದರಲ್ಲಿ ‘ಗಂಡು’ ಮತ್ತು ‘ಹೆಣ್ಣು’ ಅರ್ಚಕರಿದ್ದು ‘ಹೆಣ್ಣು’ Lierodouloi ಯವರಲ್ಲಿ ವಿವಿಧ ದರ್ಜೆಗಳಿದ್ದವು. Entu, ದೇವನ ಮುಖ್ಯ ಪತ್ನಿಯಾಗಿದ್ದು Natitu ಆ ದೇವತೆಯ ಅನೇಕ ಕೆಳದರ್ಜೆಯ ಪತ್ನಿಯರಾಗಿದ್ದರು. Entu ದರ್ಜೆಯವರು ಈ ಲೋಕದ ಜನರನ್ನು ಮದುವೆ ಆಗುತ್ತಿದ್ದರೋ ಇಲ್ಲವೋ ಗೊತ್ತಾಗುವುದಿಲ್ಲ. ಅಥವಾ ಇವರಲ್ಲಿ ತಂದೆ ಯಾರು ಎನ್ನುವ ಉಲ್ಲೇಖವೂ ಇಲ್ಲ. ಇದಕ್ಕೆ ಪ್ರತಿಯಾಗಿ Natitu ವರ್ಗದವರಿಗೆ ಮದುವೆಯಾಗಲು ಅನುಮತಿಯಿತ್ತು: ಆದರೆ ಅವರು ಸಂತಾನ ಪಡೆಯುವುದು ನಿಷಿದ್ಧವಾಗಿತ್ತು. Zikru ಅಥವಾ Zermashitu ಎನ್ನುವ ಮೂರನೆಯ ಒಂದು ವರ್ಗವೂ ಇತ್ತು. (ವೃತಬದ್ಧರಾದ) Zikru ಮತ್ತು (ಶುದ್ಧವಂಶಜರಾದ) Zermashitu ಈ ಎರಡೂ ಬಗೆಯ ‘ಮೀಸಲು ಹೆಣ್ಣು’ಗಳಿಗೆ ಮದುವೆಯಾಗಲು, ಮಕ್ಕಳನ್ನು ಪಡೆಯಲು ಅನುಮತಿಯಿತ್ತು. ಮದುವೆ ನಿಷಿದ್ಧವಾದ ಮತ್ತು ಕೆಳದರ್ಜೆಯ ಸ್ಥಾನ ಪಡೆದ ಮತ್ತೊಂದು ಸ್ತ್ರೀವರ್ಗ Kadishtu. ಈ Kadishtu ವರ್ಗದ ಮಹಿಳೆಯರ ದೇವಾಲಯದ ಹೊರಗಿನ ಕರ್ತವ್ಯಗಳಲ್ಲಿ ಬ್ಯಾಬಿಲೋನಿಯನ್‌ ಮಹಿಳೆಯರ ಮಕ್ಕಳಿಗೆ ಮೊಲೆಯೂಡಿಸುವುದು ಪ್ರಮುಖವಾಗಿತ್ತು.

ಮೇಲೆ ಹೇಳಿದವುಗಳಲ್ಲದೆ ಇನ್ನೂ ಕೆಲವು ದೇವದಾಸಿಯರು Erechದ Ishtar ದೇವತೆಯ ಆರಾಧನೆಗೆ ಮಾತ್ರ ಮೀಸಲಾದವರು. Gilgamesh ಪುರಾಣದಲ್ಲಿ ವಿವರಿಸಿದ ಸಂಗತಿಗಳು, ಪ್ರತಿಯೊಬ್ಬ ಬ್ಯಾಬಿಲೋನಿಯನ್‌ ಸ್ತ್ರೀಯೂ ತಾತ್ಪೂರ್ತಿಕವಾಗಿ ವೇಶ್ಯಾವೃತ್ತಗಿಳಿಯುವಂತೆ ಒತ್ತಡ ಹೇರಲಾಯಿತು ಎನ್ನುವುದನ್ನು ನಿಸ್ಸಂದೇಹವಾಗಿ Minurtrants ಪುಷ್ಟೀಕರಿಸುತ್ತವೆ. Ishtar ದೇವಾಲಯದ ಲೈಸನ್ಸ್ ಪಡೆದ ಅರ್ಚಕಿಯರನ್ನು Kvgreti (ಸೂಳೆ), Shamkati (ಸಂತೋಷಕನ್ಯಾ) ಮತ್ತು Kharimati (ಭಕ್ತೆ) ಮುಂತಾಗಿ ಕರೆಯಲಾಗುತ್ತಿತ್ತು. ಇವರು Termashitu ಮತ್ತು Kadishtu ಗಳಿಗಿಂತ ಭಿನ್ನರಾಗಿದ್ದರೋ ಹೇಗೆ ಎನ್ನುವುದು ತಿಳಿಯುವುದಿಲ್ಲ. ಪಶ್ಚಿಮ ಏಶಿಯಾದ ತುಂಬ ಹರಡಿರುವ ಮಹಾ ಮಾತೃದೇವತೆ Ishtar ಪಂಥವನ್ನು ಅರಿತುಕೊಳ್ಳಲು Ishtar ಐತಿಹ್ಯದ ಬಗೆಗೆ ಕೆಲವು ಮಾತು ಹೇಳುವುದು ಅಗತ್ಯ. Gilgamesh ಪುರಾಣ ಉದಾತ್ತೀಕೃತ ವೇಶ್ಯೆಗಾರಿಕೆಯ ಸಂಬಂಧವನ್ನು ಕಲ್ಪಿಸುವ ವಿವರಗಳು ಹೀಗಿವೆ: ಬ್ಯಾಬಿಲೋನಿಯಾದ ಸಾಹಿತ್ಯ ಕಥೆಗಳ ಉಲ್ಲೇಖಗಳ ಪ್ರಕಾರ Tammuz (Adonis) (ವಸಂತ ಋತು) ಎಂಬ ಗಂಡು ದೇವತೆ Ishtar ದೇವಿಯ ಚಿರಯೌವ್ವನ ಪ್ರಣಯಿ. Ishtar ದೇವಿ ನಿಸರ್ಗದ ಪುನರುತ್ಪತ್ತಿ ಶಕ್ತಿಗಳ ಪ್ರತೀಕ. ಈ ದೇವಿಯ ಪ್ರಣಯಿ Tammuz ಪ್ರತಿವರ್ಷ ಸಾಯುತ್ತಿದ್ದ. ಆಗ ಈ ಮಹಾದೇವತೆ ತನ್ನ ದಿವ್ಯ ಪ್ರಣಯಿಯನ್ನು ಹುಡುಕಲು ಭೂಗತಳಾಗುತ್ತಿದ್ದಳು. ಅವಳ ಈ ಗೈರುಹಾಜರಿಯಿಂದಾಗಿ ಇಡೀ ಜೀವನ ನಿರ್ಣಾಮವಾಗುವ, ಇಂಥ ಭೀಕರ ಪ್ರಸಂಗವನ್ನು ತಪ್ಪಿಸಲು ಸ್ತ್ರೀಯರು ಲೈಂಗಿಕ ಪ್ರಣಯ ದೇವತೆಗಳ ಮತ್ತು ಫಲಸಮೃದ್ಧಿ/ಫಲವತ್ತತೆಯ ಹೊಣೆ ಹೊರಬೇಕಾಯಿತು. ‘ಪವಿತ್ರ ವೇಶ್ಯಾಗಾರಿಕೆ’ ಚಲಾವಣೆಯಲ್ಲಿ ಬಂದದ್ದು ಹೀಗೆ. (ಪೆನ್‌ಘರ, ೧೯೬೮; ೨೬೯-೨೭೪).

ಎಲ್ಲ ಪುನರುತ್ಪತ್ತಿ ಶಕ್ತಿಗಳನ್ನು ಮೂರ್ತೀಕರಣಗೊಳಿಸಿದ ‘ಮಹಾಮಾತೆ’ಯನ್ನು ಬೇರೆ ಬೇರೆ ಹೆಸರುಗಳಿಂದ ಅರ್ಚಿಸಲಾಯಿತು; ಆದರೆ ಪಶ್ಚಿಮ ಏಶಿಯಾದ ಅನೇಕ ಜನ ಸಮುದಾಯಗಳಲ್ಲಿ ಈ ಐತಿಹ್ಯ ಮತ್ತು ಆಚರಣೆಗಳು ಮಾತ್ರ ಒಂದೇ ವಿಧ. ಸಿರಿಯಾದಲ್ಲಿ Alar ಅಥವಾ Athar, ಲೆಬಿನಾನಿನ Hieropolis ನಲ್ಲಿ Ataragatis ಈ ಮಾತೃದೇವತೆಯ ಹೆಸರುಗಳು. ಸಿರಯಾದ Bambyee ದಲ್ಲಿ ಈ ದೇವತಾ ಮೂರ್ತಿಯ ಹಬ್ಬದ ದಿನ ಸ್ತ್ರೀಯರು ತಾವೇ ವೇಯೆಯರಾಗುತ್ತಿದ್ದರು ಮತ್ತು ವ್ರತಬದ್ಧ ಹೆಣ್ಣು ತಮ್ಮ ಕನ್ಯೆತನ ಕಳೆದುಕೊಂಡು ಈ ವೃತ್ತಿಯಲ್ಲಿ ತೊಡಗುತ್ತಿದ್ದರು. ಹೀಗೆ ಇಲ್ಲಿ ತಾತ್ಪೂರ್ತಿಕ ಮತ್ತು ಸ್ಥಿರ ಸೂಳೆಗಾರಿಕೆ ಅಸ್ತಿತ್ವದಲ್ಲಿತ್ತು. ಲೆಬಿನಾನಿನ ಸಂಪ್ರದಾಯದ ಪ್ರಕಾರ ಅಲ್ಲಿಯ ಪ್ರತಿಯೊಬ್ಬ ‘ದಾಸಿ-ಕನ್ಯೆ’ Atagralis ದೇವಾಲಯದಲ್ಲಿ ಯಾವುದೇ ಅಪರಿಚಿತ ವ್ಯಕ್ತಿಗೆ ಸೂಳೆಯಾಗಬೇಕಾಗುತ್ತಿತ್ತು (ಬಾರ್ಟನ್‌, ೧೯೩೦ : ೬೭೪).

Phoeniciaದ Byoblosದಲ್ಲಿ Adonis ದೇವತೆಯ ವಾರ್ಷಿಕ ಶೋಕ ದಿನಾಚರಣೆಯಂದು ಪುರುಷರು ಮತ್ತು ಸ್ತ್ರೀಯರು ತಮ್ಮ ತಲೆ ಬೋಳಿಸಿಕೊಂಡು ಕೂದಲು ಅರ್ಪಿಸಬೇಕಾಗುತ್ತಿತ್ತು. ಹೀಗೆ ತಮ್ಮ ಕೂದಲು ಅರ್ಪಿಸಲು ಒಪ್ಪದ ಹೆಣ್ಣುಗಳು ಒಂದು ದಿನದ ಮಟ್ಟಿಗೆ ದೇವಾಲಯಕ್ಕೆ ಬರುವ ಯಾವುದೇ ಒಬ್ಬ ಅಪರಿಚಿತನ ಸೂಳೆಯಾಗಿ ಅವನಿಂದ ಹಣ ಪಡೆಯಬೇಕಾಗುತ್ತಿತ್ತು. ಸಂಪಾದಿಸಿದ ಹಣವನ್ನು ದೇವತೆಗೆ ಅರ್ಪಿಸಬೇಕಾಗುತ್ತಿತ್ತು. ಆದರೆ ಹೆಣ್ಣುಗಳು ತಮ್ಮ ಕೂದಲು ಅರ್ಪಿಸಿ ಈ ಸೂಳೆಗಾರಿಕೆಯಿಂದ ತಪ್ಪಿಸಿಕೊಳ್ಳಬಹುದಾಗಿತ್ತು. (ಪೆನ್‌ಝರ, ೧೯೬೮ : ೨೭೫).

ಸೈಪ್ರಸಿನ Paphos ದಲ್ಲಿ ಅಫ್ರೊಡೈಟ್‌ ದೇವತೆಯ ಧಾಮದಲ್ಲಿ, ಹೆಣ್ಣುಗಳು ವಿವಾಹಪೂರ್ವ ಸೂಳೆಗಾರಿಕೆಗಾಗಿ ತಮ್ಮನ್ನು ಕಾಣಿಕೆಯಾಗಿ ಸಲ್ಲಿಸಬೇಕಾಗುತ್ತಿತ್ತು (ಬಾರ್ಟನ್‌, ೧೯೩೦ : ೬೭೪).

ಉತ್ತರ ಆಫ್ರಿಕಾದ ಸೆಮೆಟಿಸ್‌ ಆದಿವಾಸಿಗಳಲ್ಲಿ ಸೆಮೆಟಿಕ್‌ ಮಾತೃದೇವತೆಯನ್ನು Ashtrat ಮತ್ತು Tanth ಹೆಸರುಗಳಿಂದ ಅರ್ಚಿಸಲಾಗುತ್ತಿತ್ತು. ಈ ದೇವತೆಯ ಉತ್ಸವದಲ್ಲಿ ಜನ ಎಲ್ಲ ಬಗೆಯ ಅಶ್ಲೀಲ ಚೇಷ್ಟೆಗಳನ್ನು ಪ್ರದರ್ಶಿಸುತ್ತಿದ್ದರು. ಬಹುಶಃ ಭಕ್ತರು ತಾತ್ಪೂರ್ತಿಕವಾಗಿ `hierodouloi’ ಎಂದು ರೂಢಿಸಿಕೊಂಡರೆಂದು ಊಹಿಸಬಹುದು (ಬಾರ್ಟನ್‌, ೧೯೩೦ : ೬೭೫).

ಮಹಮ್ಮದನಿಗಿಂತ ಪೂರ್ವದ ಅರಬ್ಬರು ಅಲ್ಲಾತ್‌ ಅಥವಾ ಅಲ್‌ ಉಜ್ಜಾ ಎನ್ನುವ ಹೆಸರಿನ ಮಾತೃದೇವತೆಯನ್ನು ಅರ್ಚಿಸುತ್ತಿದ್ದರು. ಪರಿದರಿ ವರ್ಗದ ಉಲ್ಲೇಖಗಳಿಂದ ದೇವೀಕೃತ ವೇಶ್ಯೆಗಾರಿಕೆ ತಾತ್ಪೂರ್ತಿಕವಾಗಿ ರೂಢಿಯಲ್ಲಿ ಬಂದಿರಬೇಕೆಂದು ಊಹಿಸಲು ನೆರವಾಗುತ್ತದೆ. ಅಲೆಮಾರಿ ಜೀವನ ವಿಧಾನದ ಈ ಜನ ಇಂಥ ರೂಢಿಗೆ ಸ್ಥಿರರೂಪ ಕೊಟ್ಟಂತೆ ತೋರುವುದಿಲ್ಲ (ಬಾರ್ಟನ್‌, ೧೯೩೦ : ೬೭೫).

ಪ್ರಾಚೀನ ಹಿಬ್ರೂ ಮತ್ತು ಇಸ್ರೇಲ್‌ ಧಾರ್ಮಿಕ ವೃಂದಗಳಲ್ಲಿ ಸ್ತ್ರೀ ಪುರುಷ ‘ದಾಸಿ’ಯರು ‘ಪವಿತ್ರ ವೇಶ್ಯೆ’ಯಾಗಿದ್ದುದು ತಿಳಿದುಬರುತ್ತದೆ. ಕೇವಲ ಸ್ತ್ರೀಯರು ಧಾರ್ಮಿಕ ವೇಶ್ಯೆಗಾರಿಕೆ ಅನುಸರಿಸುತ್ತಿದ್ದರು ಎಂದಲ್ಲ. ಆದರೆ ಅರಸರು ಮತ್ತು ಅರ್ಚಕರು ಕೂಡ ಕೆಲವು ಹೆಣ್ಣುಗಳನ್ನು ಧಾರ್ಮಿಕ ವೇಶ್ಯೆಗಾರಿಕೆಗಾಗಿ ಅರ್ಪಿಸುತ್ತಿದ್ದರು. (ಬಾರ್ಟನ್‌, ೧೯೩೦ : ೬೭೫).

ಥಿಬಿಸಿನ Ammon ದೇವತೆಯ ಜೊತೆಗೆ ಈಜಿಪ್ತಿನಲ್ಲಿ ವ್ಯಾಪಕವಾಗಿ ಹರಡಿದ ಈ ಸಂಪ್ರದಾಯ ಸಂಬಂಧವನ್ನು ಕಲ್ಪಿಸಲಾಗಿದೆ. ಥೀಬಿಸಿನಲ್ಲಿ ಮುಖ್ಯ ಅರ್ಚಕನ ಪತ್ನಿಗೆ ‘ಪ್ರಧಾನ ಸೂಳೆ’ ಎಂದೂ. ಒಬ್ಬ ರಾಣಿ ಅಥವಾ ‘ರಾಜಕುಮಾರಿ’ಗೆ ದೇವ ಪತ್ನಿ’ಯೆಂದೂ ಬಿರುದು. ಪ್ರತಿಷ್ಠಿತ ವಂಶದ ಅತಿ ಚೆಲುವೆ ಕನ್ಯೆಯನ್ನು Ammon ದೇವತೆಗೆ ಮೀಸಲು ಬಿಡಲಾಗುತ್ತಿತ್ತು; ಆಕೆ ತನಗೆ ಇಷ್ಟಬಂದವರ ಜೊತೆಗೆ ಒಂದು ತಿಂಗಳ ಕಾಲ ಲೈಂಗಿಕ ಜೀವನ ನಡೆಸಬೇಕಾಗಿತ್ತು; ಇದು ಅವಳ ಶರೀರದ ಸಹಜ ಶುದ್ಧಿಗೆ ಅಗತ್ಯ ಎಂದು ಭಾವಿಸಲಾಗುತ್ತಿತ್ತು. ಆ ಬಳಿಕ ಮಾತ್ರ ಅವಳು ಮದುವೆಗೆ ಯೋಗ್ಯಳಾಗುತ್ತಿದ್ದಳು. ಈ ಪದ್ಧತಿ ಇತರ ಸೆಮೆಟಿಕ್‌ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿದ್ದ ಇದೇ ಮಾದರಿಯ ಸಂಪ್ರದಾಯವನ್ನು ಎತ್ತಿತೋರಿಸುತ್ತದೆ  (ಬಾರ್ಟನ್‌, ೧೯೩೦ : ೬೭೬).

ಲೀಡಿಯಾದ ಟ್ರಾಲೆಸ್‌ದಲ್ಲಿ ದೊರೆತ ಒಂದು ಗ್ರೀಕ್‌ ಶಿಲಾಶಾಸನದ ಪ್ರಕಾರ ಧಾರ್ಮಿಕ ವೇಶ್ಯೆಗಾರಿಕೆಯ ಆಚರಣೆ ಆದೇಶದಲ್ಲಿ ಕ್ರಿ.ಶ. ಎರಡನೆಯ ಶತಮಾನದವರೆಗೂ ರೂಢಿಯಲ್ಲಿದ್ದುದು ತಿಳಿದುಬರುತ್ತದೆ. ಪಶ್ಚಿಮ ಆಫ್ರಿಕೆಯ Ewe ಮತ್ತು Tshi ಭಾಷೆಗಳನ್ನಾಡುವ ಜನರು ದೇವದಾಸಿಯರನ್ನು ಮೂರು ವಿಧವಾಗಿ ಗುರುತಿಸುತ್ತಾರೆ. ಒಂದು: ವಿವಾಹಿತ ‘ದೇವದಾಸಿ’, ಎರಡು: ಅರ್ಚಕಿಯರು, ಮೂರು: ದೇವಾಲಯದ ಸೂಳೆಯರು. ಈ ದೇವದಾಸಿಯರು Danh-gbi ಎನ್ನುವ ನಾಗದೇವತೆಗೆ ತಮ್ಮನ್ನು ಅರ್ಪಿಸಿಕೊಳ್ಳುತ್ತಿದ್ದರು. ಪ್ರತಿಯೊಂದು ಗುಂಪು ತನ್ನದೇ ಆದ ಸಂಘಟನೆ ಹೊಂದಿದ್ದರೂ ಎಲ್ಲರೂ ಕೂಡಿ ಒಂದೇ ವಠಾರದಲ್ಲಿ ವಾಸ ಮಾಡುತ್ತಿದ್ದರು’. ನೂತನ ದೇವದಾಸಿಯರು ಮೂರು ವರ್ಷಗಳವರೆಗೆ ದೇವತಾರ್ಚನೆಗೆ ಅಗತ್ಯವಾದ ನೃತ್ಯ, ಸಂಗೀತಗಳನ್ನು ಕಲಿಯುತ್ತ ಇರಬೇಕಾಗುತ್ತಿತ್ತು. ಈ ಅವಧಿಯಲ್ಲಿ ಅವರು ಪಾಠಶಾಲೆಯ ಬೋಧಕ, ಅರ್ಚಕ ಮುಂತಾದವರಿಗೆ ಸೂಳೆಯರಾಗಿ ಇರಬೇಕಾಗುತ್ತಿತ್ತು. ಮತ್ತು ಈ ಸಂಸ್ಕಾರದ ಅವಧಿಯಿಂದ ಬಿಡುಗಡೆಯಾದ ಬಳಿಕ ಅವರು ಸಾರ್ವಜನಿಕ ಸೂಳೆಯರಾಗುತ್ತಿದ್ದರು (ಪೆನಝರ, ೧೯೬೮:೨೭೭-೨೭೯).

ಭಾರತದಲ್ಲಿ ದೇವರಿಗಾಗಿ ಸ್ತ್ರೀಯರನ್ನು ಅರ್ಪಿಸುವ ಪದ್ಧತಿ ವೈದಿಕ ಧರ್ಮಕಾಲದಲ್ಲಿ ಇರಲಿಲ್ಲ. ಅರೆಅಲೆಮಾರಿ ವೈದಿಕ ಆರ್ಯರು ಇಂದ್ರ ಮತ್ತು ಅವನ ಸಹದೇವತೆಗಳನ್ನು ಪೂಜಿಸುತ್ತಿದ್ದರು. ಅವರಿಗೆ ಪ್ರತ್ಯೇಕ ದೇವಾಲಯಗಳು ಇರಲಿಲ್ಲ; ಆದರೆ ಸಾಮಾನ್ಯವಾಗಿ ಒಂದು ತಾತ್ಕಾಲಿಕ ಬಲಿಪೀಠದ ಮೇಲೆ ತಮ್ಮ ಯಜ್ಞದ ಆಚರಣೆ ನೆರವೇರಿಸುತ್ತಿದ್ದರು. ಪುರಾಣ ಧರ್ಮದ ವಿಕಾಸದೊಂದಿಗೆ ಶಿವ, ವಿಷ್ಣು ಮತ್ತು ಅವರ ಪತ್ನಿದೇವತೆಯರ ಕ್ರಮೋಕ್ತ ಪೂಜೆ ರೂಪುಗೊಂಡಿತು. ಮತ್ತು ಈ ದೇವತೆಗಳ ಬೃಹತ್‌ ದೇವಾಲಯಗಳು ಇಡೀ ಭಾರತದಲ್ಲಿ ನಿರ್ಮಾಣಗೊಂಡವು. ?ಈ ದೇವತೆಗಳನ್ನು ಹಾಡು ಮತ್ತು ನೃತ್ಯಗಳಿಂದ ಸುಪ್ರೀತಗೊಳಿಸಲು ದೇವಾಲಯಗಳ ಜೊತೆಗೆ ವೇಶ್ಯಾಂಗನೆಯರ ಸಂಬಂಧ ಏರ್ಪಟ್ಟಿತು.

ದೇವದಾಸಿ ಪದ್ಧತಿ ಕುರಿತ ನೇರವಾದ ಉಲ್ಲೇಖಗಳು ಉತ್ತರ ಭಾರತಕ್ಕಿಂತ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ದೊರೆಯುತ್ತವೆ. ಇದಕ್ಕೆ ಕಾರಣ: ಉತ್ತರ ಭಾರತ ಮುಸಲ್ಮಾನರ ದಾಳಿ, ರಾಜ್ಯಾಡಳಿತೆಯಿಂದಾಗಿ ಹೆಚ್ಚು ಆಘಾತಕ್ಕೆ ಒಳಗಾದದ್ದು ಇರಬೇಕು. ಏಕೆಂದರೆ ಇದರಿಂದಾಗಿ ಕಾಲಾನಂತರದಲ್ಲಿ ಹಿಂದೂ ದೇವಾಲಯ ಮತ್ತು ಧಾರ್ಮಿಕ ವ್ಯವಸ್ಥೆಗಳನ್ನು ಕ್ರಮಬದ್ಧವಾಗಿ ನಾಶಗೊಳಿಸಲಾಯಿತು. ಇದರ ಪರಿಣಾಮದಿಂದ ಹಿಂದೂ ಧರ್ಮದ ಯಾವುದೇ ಆಚರಣೆ ಅಸಾಧ್ಯವೆನಿಸಿತು.

ಕ್ರಿ.ಶ. ಏಳನೆಯ ಶತಮಾನದಲ್ಲಿ ಹ್ಯೂಯೆನತ್ಸ್ಯಾಂಗ ಕಾಲದಲ್ಲಿ ದೇವಾಲಯ ನೃತ್ಯ ಸಂಪ್ರದಾಯ ಸುಸಂಬದ್ಧವಾಗಿ ಸ್ಥಾಪಿತಗೊಂಡಿತ್ತು. ಚೀನೀ ಯಾತ್ರಿಕರು ಮುಲ್ತಾನದ ಬಳಿ ಸೂರ್ಯದೇವಾಲಯಲದಲ್ಲಿ ಅನೇಕ ನರ್ತಕಿಯರನ್ನು ನೋಡಿದ್ದರು. ಆರಂಭದಲ್ಲಿ ದೇವದಾಸಿಯರ ಪದ್ಧತಿ ಸೂರ್ಯದೇವಾಲಯಗಳಿಗೆ ವಿಶಿಷ್ಟವಾಗಿತ್ತು . ಕಾಲಾನಂತರದಲ್ಲಿ ಎಲ್ಲ ಪಂಥಗಳ ದೇವಾಲಯಗಳಲ್ಲಿಯೂ ದೇವದಾಸಿಯರ ಸೇವಾಪದ್ಧತಿ ರೂಢಿಯಲ್ಲಿ ಬಂದಿತು. ದೇವಾಲಯದ ಪ್ರತಿಷ್ಠೆ ಮತ್ತು ಸಂಪತ್ತುಗಳಿಗೆ ಅನುಗುಣವಾಗಿ ಅಲ್ಲಿಯ ದೇವದಾಸಿಯರ ಸಂಖ್ಯೆ ಇರುತ್ತಿತ್ತು (ಥೊಮಸ, ೧೯೬೪: ೨೩೭-೨೩೯).

ಸುಪ್ರಸಿದ್ಧ ಸೋಮನಾಥ ದೇವಾಲಯದಲ್ಲಿ ದೇವತೆಯ ಆರಾಧನೆಗಾಗಿ ಶಿವನಿಗೆ ಅರ್ಪಿತವಾದ ೫೦ ಜನ ದೇವದಾಸಿಯರಿದ್ದು ಅವರು ಹಗಲು ರಾತ್ರಿ ಗೀತ ನೃತ್ಯಗಳ ಸೇವೆ ಸಲ್ಲಿಸುತ್ತಿದ್ದರು. ‘ಒಂದು ಮಧ್ಯಕಾಲೀನ ವಿವರಣೆಯ ಪ್ರಕಾರ ಗುಜರಾತವೊಂದರಲ್ಲಿಯೇ ನಾಲ್ಕು ಸಾವಿರ ದೇವಾಲಯಗಳ ನಡುವೆ ಇಪ್ಪತ್ತುಸಾವಿರ ‘ದೇವದಾಸಿ’ ನರ್ತಕಿಯರಿದ್ದರು. ಹತ್ತನೆಯ ಶತಮಾನದಲ್ಲಿ ಚೋಳ ಅರಸ ರಾಜರಾಜ ಕಟ್ಟಿಸಿದ ತಂಜಾವೂರು ದೇವಾಲಯದಲ್ಲಿ ೪೦೦ Talicheri pendrugal ಅಥವಾ ದೇವಾಲಯದ ಹೆಣ್ಣುಗಳು ನೆಲೆಸಿದ್ದರು. ಮತ್ತು ಪ್ರತಿಯೊಬ್ಬರ ಜೀವನ ನಿರ್ವಹಣೆಗೆ ಭೂಮಿಯ ದತ್ತಿ ಕೊಡಲಾಗಿತ್ತು. (ಪೆನಘರ, ೧೯೬೮:೨೪೭). ಪರ್ಶಿಯಾದ ರಾಯಭಾರಿ ಅಬ್ದುರ್ರ‍ಜಾಕನ ವರದಿಯಂತೆ ಪ್ರಬಲರಾದ ವಿಜಯನಗರದ ಚಕ್ರವರ್ತಿಗಳ ಕಾಲದಲ್ಲಿ ನರ್ತಕಿಯರ ಸೂಳೆಗಾರಿಕೆ ಈ ಸಾಮ್ರಾಜ್ಯದ ಆದಾಯದ ಮುಖ್ಯ ಆಕರವಾಗಿತ್ತು. ನಿಜ ಸಂಗತಿಯೆಂದರೆ ೧೨೦೦೦ ಪೋಲೀಸ್‌ ವರ್ಗದ ಸಮಗ್ರ ನಿರ್ವಹಣೆ ಸೂಳೆಯರ ಆದಾಯದಿಂದ ಬಂದ ಹಣದಿಂದಲೇ ನಡೆಯುತ್ತಿತ್ತು (ಎಡ್ವರ್ಡ್ಸ್, ೧೯೨೪:೭೬). ಪೋರ್ತುಗೀಜ ಪ್ರವಾಸಿ Domingo peas ದೇವಾಲಯದಲ್ಲಿ ದೇವದಾಸಿಯರ ಕರ್ತವ್ಯಗಳನ್ನು ಹೀಗೆ ವಿವರಿಸುತ್ತಾನೆ: ದೇವರಿಗೆ ನೈವೇದ್ಯ ಅರ್ಪಿಸುವ ಸಮಯದಲ್ಲಿ ಅವರು ವಿಗ್ರಹದ ಎದುರು ನರ್ತಿಸುತ್ತಾರೆ.

೧೭ನೆಯ ಶತಮಾನದ ಫ್ರೆಂಚ್‌ ಪ್ರವಾಸಿ Tavernier ಕ್ಯಾಂಬೆದಿಂದ ಆರು ಮೈಲಿ ದೂರದಲ್ಲಿದ್ದ ‌ದೇವಾಲಯದ ವರ್ಣನೆ ಮಾಡುತ್ತ ವೃದ್ಧ ವಾರಾಂಗನೆಯರು ಬಾಲಿಕೆಯರನ್ನು ಕೊಂಡು ತಂದು ದೇವದಾಸಿಯನ್ನಾಗಿ ಅರ್ಪಿಸುತ್ತಿದ್ದರು ಎಂದು ವಿವರಿಸುತ್ತಾನೆ (ಎಡ್ವರ್ಡ್ಸ್, ೧೯೨೪ : ೮೦).

ಡಬ್ಲ್ಯು. ವಾರ್ಡ್ ಎನ್ನುವ ಪಾದ್ರಿ ಹೀಗೆ ಬರೆಯುತ್ತಾನೆ: “ಒರಿಸ್ಸಾದ ಜಗನ್ನಾಥ ದೇವಾಲಯದಲ್ಲಿ ನೀಲಿ ಶಿಲೆಯ ವಿಷ್ಣುಮೂರ್ತಿಯ ಅರ್ಚನೆ ನಡೆಯುತ್ತದೆ (ಪೆನ್‌ಝರ, ೧೯೬೮ : ೨೪೧). ಇದಕ್ಕಾಗಿ ದೇವಾಲಯ ಅನೇಕ ದೇವದಾಸಿಯರನ್ನು ಗೀತ ನೃತ್ಯಕ್ಕಾಗಿ ನೇಮಿಸಿಕೊಂಡಿತ್ತು”.

ಆಂಧ್ರಪ್ರದೇಶದ ವೆಂಕಟೇಶ್ವರ ದೇವತೆ ಆರಾಧನೆಗೊಳ್ಳುವ ತಿರುಪತಿ ದೇವಾಲಯದಲ್ಲಿ ಇಂಥ ಪದ್ಧತಿಯ ಆಚರಣೆಯಿದ್ದುದನ್ನು ಅಬೆದುಬಾ ವಿವರಿಸುತ್ತಾನೆ (೧೯೨೮, ೬೦೧).

ಹೈದರಾಬಾದಿನಲ್ಲಿ ನರ್ತಕಿಯರನ್ನು ‘ಬೋಗಮ್’ ಎಂದು ಕರೆಯುತ್ತಿದ್ದು, ಅವರಲ್ಲಿ ಕೆಲವರು  ಹಿಂದೂ ಮತ್ತು ಕೆಲವರು ಮುಸಲ್ಮಾನರಾಗಿದ್ದರು. ಹಿಂದೂ ಹುಡುಗಿಯರಿಗೆ ‘ಬೋಗಮ್‌ಸಾನಿ’ ಅಥವಾ ‘ಬೋಗಮ್‌ ನಾಯಕ’ ಮತ್ತು ಮುಸಲ್ಮಾನ ಹುಡುಗಿಯರಿಗೆ ‘ಬೋಗಮ್‌ ಜಾನ್‌’ ಅಥವಾ ‘ನಾಯಕನ್‌’ ಎಂದು ಕರೆಯಲಾಗುತ್ತಿತ್ತು. ಬೋಗಮ್‌ಸಾನಿಯರು ಶಿವ ಅಥವಾ ವಿಷ್ಣು ದೇವಾಲಯಕ್ಕೆ ಸೇರ್ಪಡೆಯಾಗುತ್ತಿದ್ದರು. ಅವರ ಪ್ರಾರಂಭಿಕ ಸಂಸ್ಕಾರ ವಿಧಿಯಂತೆ ಕೃಷ್ಣ ವಿಗ್ರಹದೊಡನೆ ದೇವದಾಸಿಯ ಮದುವೆ ನಡಯುತ್ತಿತ್ತು. ‘ಬೋಗಮ್‌ಜಾನ್‌’ ಹೆಣ್ಣುಗಳ ಮದುವೆ ಕಠಾರಿಯ ಜೊತೆಗೆ ನೆರವೇರುತ್ತಿತ್ತು (ಪೆನ್‌ಝರ, ೧೯೬೮ : ೨೪೪).

ಕೋಯಿಮತ್ತೂರಿನ Kaikolon ಸಂಗೀತಗಾರರಲ್ಲಿ ಅವರ ಮನೆತನದ ಒಬ್ಬ ಹುಡುಗಿಯನ್ನಾದರೂ ದೇವಾಲಯದ ಸೇವೆಗಾಗಿ ಬಿಡಬೇಕಾಗುತ್ತಿತ್ತು; ಮತ್ತು ಅವಳಿಗೆ ಸಂಗೀತ ಮತ್ತು ನೃತ್ಯ ಶಿಕ್ಷಣ ಕಲಿಸಲಾಗುತ್ತಿತ್ತು. ದೇವತಾ ವಿಗ್ರಹದ ಜೊತೆಗೆ ಅವಳ ಮದುವೆಯಾಗುತ್ತಿತ್ತು ಮತ್ತು ದೇವಸ್ಥಾನದ ಬ್ರಾಹ್ಮಣ ಅರ್ಚಕ ಅವಳಿಗೆ ತಾಳಿ ಕಟ್ಟುತ್ತಿದ್ದ. ದೇವತೆಯ ಪ್ರತಿನಿಧಿಯೆಂದು ನಂಬಲಾದ ಬ್ರಾಹ್ಮಣ ಅರ್ಚಕನನ್ನು ಅವಳ ಮೊದಲರಾತ್ರಿಯ ಭೋಗಕ್ಕೆ ಕರೆತರಲಾಗುತ್ತಿತ್ತು. ಕಾಯ್‌ ಕೋಲನ್‌ ವೃಂದದ ದೇವದಾಸಿ ಸತ್ತಾಗ ಅವಳಿಗೆ ಸಂಬಂಧಪಟ್ಟ ದೇವಾಲಯದ ದೇವತಾ ವಿಗ್ರಹದ ಮೇಲಿನ ಹೊಸ ಬಟ್ಟೆಯನ್ನು ಅವಳ ದೇಹದ ಮೇಲೆ ಹೊದಿಸಲಾಗುತ್ತಿತ್ತು. ಮತ್ತು ದೇವಾಲಯದಿಂದ ಅವಳಿಗಾಗಿ ಹೂ ಕಳಿಸಲಾಗುತ್ತಿತ್ತು. ಶವ ಸಂಸ್ಕಾರ ಮುಗಿಯುವವರೆಗೆ ದೇವಾಲಯದಲ್ಲಿ ಯಾವುದೇ ಪೂಜೆ ನಡೆಯುತ್ತಿರಲಿಲ್ಲ.

ತ್ರಾವಣಕೋರದಲ್ಲಿ ದೇವದಾಸಿಯರನ್ನು ‘ಕುಡಿಕ್ಕಾರ್’ ಎಂದು ಕರೆಯುತ್ತಿದ್ದರು. ಈ ದೇವದಾಸಿಯರು, ತಮಿಳು ಪಾದಮ್‌ ಎನ್ನುವ ನಾಯರ್ ವಿಭಾಗದಿಂದ ಮಾತ್ರ ಹುಡುಗಿಯರನ್ನು ದತ್ತಕ್ಕೆ ತೆಗೆದುಕೊಳ್ಳುತ್ತಿದ್ದರು. ಈ ಹುಡುಗಿಯರು ದೇವಾಲಯದಲ್ಲಿ ಮಾತ್ರ ನರ್ತಿಸುತ್ತಿದ್ದರು. ಯಾವುದೇ ದೇವದಾಸಿ ಯಾವುದೇ ಹುಡುಗಿಯನ್ನು ದತ್ತಕ್ಕೆ ತೆಗೆದುಕೊಳ್ಳಬೇಕಾದರೆ ದೇವಾಲಯದ ಅಧಿಕಾರಿಗಳ ಮಂಜೂರಿ ಪಡೆಯಬೇಕಾಗುತ್ತಿತ್ತು. ಆಗ ಮಾತ್ರ ಇಂಥ ದತ್ತಕ ಹುಡುಗಿ ಕುಡಿ ಮತ್ತು ಪಟಿ – Pati – ಹಕ್ಕುಗಳು ದೊರೆಯುತ್ತಿದ್ದವು. ಅಂದರೆ ಬಾಡಿಗೆರಹಿತ ಮನೆ ಮತ್ತು ದೇವಾಲಯದ ಸೇವೆ (ಪೆನ್‌ಝರ, ೧೯೨೪ : ೨೬೧ – ೨೬೪).

ತಿರುಕಲ್ಯಾಣ ಉತ್ಸವದ ಶಿವ ಪಾರ್ವತಿ ವಿವಾಹ ಕಾಲದ ಆಚರಣೆಗಳನ್ನೇ ದೇವದಾಸಿಯ ಸಮರ್ಪಣಕಾಲದಲ್ಲಿ ಅನುಸರಿಸಲಾಗುತ್ತಿತ್ತು. ಅರ್ಚಕ ತಾಳಿಯನ್ನು ಕಟ್ಟುತ್ತಿದ್ದ. ಪ್ರಾಚೀನ ಕಾಲದಲ್ಲಿ ಸಂಗೀತ ಮತ್ತು ನೃತ್ಯಕಲೆಯನ್ನು ನಿಪುಣರಾದವರಿಗೆ ಉನ್ನತ ಬಿರುದುಗಳನ್ನು ಕೊಡಲಾಗುತ್ತಿತ್ತು. ೧೮೪೭ನೆಯ ಇಸ್ವಿಯಲ್ಲಿ ಕೊಟ್ಟ ಬಿರುದೇ ಕೊನೆಯದೆಂದು ತಿಳಿದುಬರುತ್ತದೆ.

ಮಹಾರಾಷ್ಟ್ರದ ರತ್ನಾಗಿರಿ ಮತ್ತು ಸಾವಂತವಾಡಿ ಜಿಲ್ಲೆಗಳಲ್ಲಿ ಒಂದು ಪಂಗಡ ವಾಸವಾಗಿದೆ. ಅವರಲ್ಲಿ ಪುರುಷರನ್ನು ‘ದೇವಳಿ’ ಮತ್ತು ‘ನಾಯಕ’ ಎಂದೂ, ಸ್ತ್ರೀಯರನ್ನು ‘ಭಾವಿನ್‌’ ಅಥವಾ ‘ನಾಯಕಿಣಿ’ ಎಂದು ಕರೆಯಲಾಗುತ್ತದೆ. ಇವರಲ್ಲಿ ಬಹುಸಂಖ್ಯಾತ ಜನ’ ತಾವು ಸಾವಂತವಾಡಿಯ ಸರ್ದಾರರ ಸೇವಾವೃತ್ತಿಯಲ್ಲಿದ್ದ ಸೇವಕಿಯರ ಮೂಲದಿಂದ ಬಂದವರೆಂದು ಹೇಳಿಕೊಳ್ಳುತ್ತಾರೆ; ಈ ಸೇವಕಿಯರು ಸ್ಥಳೀಯ ದೇವತೆಗಳಿಗೆ ತಮ್ಮನ್ನು ಅರ್ಪಿಸಿಕೊಂಡವರಾಗಿದ್ದರು. ಇತರ ಶೂದ್ರ ಜಾತಿಯ ಹೆಣ್ಣುಗಳು ಅಲ್ಲಿಯ ದೇವಾಲಯದ ದೀಪದ ಎಣ್ಣೆಯನ್ನು ತಮ್ಮ ತಲೆಯ ಮೇಲೆ ಸುರಿದುಕೊಂಡರೆ ಆಯಿತು, ಅವರು ‘ಬಹಾವಿನ್‌’ ಆಗಿ ಬಿಡುತ್ತಿದ್ದರು. ಅವರಲ್ಲಿ ದೇವರ ಮುಖವಾಡವನ್ನೇ ‘ಮದುಮಗ’ನೆಂದು ಭಾವಿಸಿ ಯಾವುದೇ ಹುಡುಗಿ ಶೇಷ ಎಂದು ಕರೆಯಲಾದ ಒಂದು ವಿಧದ ಮದುವೆ ಮಾಡಿಕೊಳ್ಳಬೇಕಾಗುತ್ತಿತ್ತು (ಪೆನ್‌ಝರ, ೧೯೨೪ : ೨೪೫-೨೪೬.)

ಮಾರವಾರದಲ್ಲಿ ಪವಿತ್ರ ದೇವದಾಸಿಯರ ಒಂದು ವರ್ಗವಿದ್ದು ಅವರನ್ನು ‘ಭಕ್ತಿಣ್‌’ ಅಂದರೆ ಭಕ್ತ ‘ಪೂಜ್ಯಮಾನವ’ನ ಪತ್ನಿ – ಎಂದು ಕರೆಯಲಾಗುತ್ತಿತ್ತು. ಈ ಜನರಲ್ಲಿ ಯಾವುದೇ ಹುಡುಗಿಯನ್ನು ದೇವರಿಗೆ ಅರ್ಪಿಸಬೇಕಾದರೆ ಅವಳ ಮದುವೆಯನ್ನು ಒಬ್ಬ ಸಾಧುವಿನ ಜೊತೆಗೆ ಅಥವಾ ಗಣೇಶ ವರ್ಣಚಿತ್ರದ ಜೊತೆಗೆ ಮಾಡಲಾಗುತ್ತಿತ್ತು (ಎಡ್ವರ್ಡ್ಸ್, ೧೯೨೪ : ೮೩).

ಕರ್ನಾಟಕದ ಅನೇಕ ಭಾಗಗಳಲ್ಲಿ ಪವಿತ್ರ ದೇವದಾಸಿಯರ ಒಂದು ಸ್ತ್ರೀ ವರ್ಗವೇ ಕಂಡುಬರುತ್ತಿದ್ದು, ಇವರೆಲ್ಲರೂ ನರ್ತಕಿಯರಾಗಿದ್ದುದು ವಿರಳ. ಮಾದಿಗ, ವಚ್ಚ, ‘ಬೇಡ’ ಕುರುಬ ಮತ್ತು ಗೊಲ್ಲ ಜಾತಿಗಳಲ್ಲಿ ತಂದೆ ತಾಯಿಗಳ ಉತ್ತರಕ್ರಿಯೆಗಳನ್ನು ನೆರವೇರಿಸಲು ಅಥವಾ ವಂಶವನ್ನು ಮುಂದುವರೆಸಲು ಗಂಡು ಸಂತಾನ ಇಲ್ಲದೆಹೋದ ಯಾವುದೇ ಕುಟುಂಬ ತನ್ನ ಮನೆತನದ ಒಂದು ಕನ್ಯೆಯನ್ನು ದೇವರಿಗೆ ಅರ್ಪಿಸುವ ಪದ್ಧತಿ ಬೆಳೆದುಬಂದಿತು; ಇಂಥವಳನ್ನು ‘ಬಸವಿ’ ಎಂದು ಕರೆಯಲಾಯಿತು. (ಪೆನ್‌ಝರ, ೧೯೬೮ : ೨೫೩-೨೫೫).

ವಿಭಿನ್ನ ಸಂಸ್ಕೃತಿಗಳಲ್ಲಿ ಕಂಡುಬರುವ ದೇವದಾಸಿ ಸಂಪ್ರದಾಯದ ಬಗೆಗೆ ಇರುವ ಸಾಕ್ಷಿ ಆಧಾರಗಳ ಸಮೀಕ್ಷೆಯಿಂದ ಈ ಕೆಳಗಿನ ಮುಖ್ಯಾಂಶಗಳನ್ನು ಗಮನಿಸುತ್ತೇವೆ. ‘ದೇವದಾಸಿ’ ಎಂದರೆ ದೇವತೆಗೆ ಅರ್ಪಿತಳಾದವಳು, ದೇವಾಲಯದ ಸೇವೆಗೆ ಮೀಸಲಾದವಳು. ಅಥವಾ ‘ದೇವ’ ‘ದೇವತೆ’ಯ ಪ್ರತೀಕಳಾದ ವಸ್ತುಗಳಿಗೆ ಮದುವೆಯಾದವಳು; ದೇವಾಲಯದ ಅರ್ಚಕ ವರ್ಗಕ್ಕಿಂತ ಕೆಳದರ್ಜೆಯವಳಾಗಿದ್ದು, ದೇವಾಲಯದ ಯಜ್ಞ, ಪೂಜೆ, ಉತ್ಸವ ಇತ್ಯಾದಿ ಆಚರಣೆಗಳಲ್ಲಿ ಸೇವೆ ಸಲ್ಲಿಸುವವಳು.

ಎಲ್ಲ ದೇವಾಲಯಗಳಲ್ಲಿ ಸೂಳೆಗಾರಿಕೆ ಈ ಸಂಪ್ರದಾಯದ ಒಂದು ವಿಶೇಷ ಲಕ್ಷಣ ಆಗಿರಲಿಲ್ಲ. ಆದರೂ ಕೆಲವು ದೇವಾಲಯಗಳಲ್ಲಿ ಲೈಂಗಿಕ ಕ್ರಿಯೆ ದೇವತಾ ಸೇವೆಯ ಒಂದು ಅನಿವಾರ್ಯ ಭಾಗವಾಗಿತ್ತು. ಆದರೆ ವಿವಾಹಿತ ದಂಪತಿಗಳು ಮಂಜೂರಿ ಪಡೆದ ಲೈಂಗಿಕ ಕ್ರಿಯೆಗಳನ್ನು ದೇವತೆಯ ಸೇವೆಯಲ್ಲಿ ತೊಡಗಿರುವ ದೇವದಾಸಿಯರು ಮಾಡಕೂಡದು ಎನ್ನುವುದು ಸ್ಪಷ್ಟ. ಕೆಲವು ದೇವಾಲಯಗಳಲ್ಲಿ ಇವರು ವಿವಾಹ ಮಂಜೂರಿ ಪಡೆದ ಅಥವಾ ಇತರ ಯಾವುದೇ ಕ್ರಿಯೆಗಳಲ್ಲಿ ಭಾಗವಹಿಸುವುದರಿಂದ ದೂರವಿರಬೇಕಾಗುತ್ತಿತ್ತು. ಇಲ್ಲಿ ಉದಾಹರಣೆಗಾಗಿ ಕರ್ನಾಟಕದ ಎಲ್ಲಮ್ಮ ದೇವಿಯ ಗರತಿ ಮುತ್ತು ಕಟ್ಟಿದವರನ್ನು ನಾವು ಸೂಚಿಸಬಹುದು. ದೇವದಾಸಿಯರು ದೇವಾಲಯದಲ್ಲಿ ಗೀತ ನೃತ್ಯಗಳ ಮೂಲಕ ದೇವರಿಗೆ ಸೇವೆ ಸಲ್ಲಿಸುತ್ತಿದ್ದರು. ತಮ್ಮ ದೇವ ದೇವತೆಯರಲ್ಲಿಯ ಲೈಂಗಿಕ ಮಹಿಮೆಯ ಘಟನೆಗಳು ಇವರ ಹಾಡುಗಳ ಮುಖ್ಯ ವಸ್ತು.

ಭಾರತ ಮತ್ತು ಪಶ್ಚಿಮ ಆಫ್ರಿಕಾ ಬಿಟ್ಟರೆ ಬೇರೆ ಯಾವುದೇ ಕಡೆಗೆ ಮೀಸಲು ಕನ್ಯೆಗೆ ಅಗತ್ಯವಾದ ಆರಂಭದ ದೀಕ್ಷಾ ಸಂಸ್ಕಾರ ಪಡೆಯುವುದರ ಬಗ್ಗೆ ವಿವರಣೆ ಇಲ್ಲ. ಈ ಎರಡು ದೇಶಗಳಲ್ಲಿ ಹತ್ತರಿಂದ ಹನ್ನೆರಡು ವಯಸ್ಸಿನ ಹುಡುಗಿಯರಿಗೆ ದೇವದಾಸಿಯ ಪ್ರಾರಂಭದ ದೀಕ್ಷೆಯನ್ನು ಕೊಡಲಾಗುತ್ತಿತ್ತು. ಭಾರತದಲ್ಲಿ ದೇವದಾಸಿಯರ ಮುಖ್ಯ ಕರ್ತವ್ಯಗಳೆಂದರೆ ಹಾಡಿ ಕುಣಿದು ‘ದೇವರ’ನ್ನು ಸಂತೋಷಗೊಳಿಸುವುದು; ದೇವರಿಗೆ ಚೌರೀ ಬೀಸುವುದು; ದೇವತೆಯ ಉತ್ಸವ ಮೆರವಣಿಗೆಗಳಲ್ಲಿ ಹಾಡುವುದು, ಕುಣಿಯುವುದು, ದೇವಾಲಯದ ಕಸ ಗುಡಿಸುವುದು, ನೆಲ ಒರೆಸುವುದು. ‘ಕುಂಭಾರತಿ’ ಬೆಳಗಿಸುವುದು. ದೇವಾಲಯದ ಉತ್ಸವ ಆಚರಣೆಗಳನ್ನು ಹೆಚ್ಚು ಆಕರ್ಷಕಗೊಳಿಸುವುದು ಇತ್ಯಾದಿ. ಈ ದೇವದಾಸಿಯರ ಮೇಲೆ ಕೆಲವು ನಿರ್ಬಂಧಗಳಿದ್ದರೂ ಇತರ ಸಾಮಾನ್ಯ ಸ್ತ್ರೀಯರಿಗಿಂತ ಕೆಲವು ಅಧಿಕ ಸೌಕರ್ಯಗಳು ಇವರಿಗೆ ದೊರೆತಿದ್ದವು. ಪಶ್ಚಿಮ ಏಶಿಯಾದಲ್ಲಿ ಇಂಥ ಹೆಣ್ಣುಗಳಿಗೆ ವಿವಾಹ ಮಂಜೂರಿ ಪಡೆದ ಲೈಂಗಿಕ ಕ್ರಿಯೆ ನಿಷಿದ್ಧವಾಗಿತ್ತು. ಅಷ್ಟೇ ಅಲ್ಲ, ಇವರು ಉತ್ಸವದ ಶುದ್ಧಿಯನ್ನು ಪಾಲಿಸಬೇಕಾಗುತ್ತಿತ್ತು ಶವ ಸಂಸ್ಕಾರದಲ್ಲಿ ಭಾಗಿಯಾಗದೆ ಇರುವುದು, ಹಂದಿಮಾಂಸ ಮತ್ತು ಬೆಳ್ಳುಳ್ಳಿ ಮುಂತಾದ ಆಹಾರ ವಸ್ತುಗಳನ್ನು ವರ್ಜಿಸುವುದು, ಚರ್ಮರೋಗ ಅಥವಾ ಸೋಂಕುರೋಗ ಬಾರದಂತಿರುವುದು ಇತ್ಯಾದಿ ನಿರ್ಬಂಧಗಳನ್ನು ಅವರು ಪಾಲಿಸಬೇಕಾಗುತ್ತಿತ್ತು. ತ್ರಾವಣಕೋರದ ಪದ್ಮನಾಭಸ್ವಾಮಿ ದೇವಾಲಯದ ದೇವದಾಸಿಯರು ಕೆಲವು ನಿರ್ದಿಷ್ಟ ಉಪವಾಸ ವ್ರತಾಚರಣೆಗಳನ್ನು ಆಚರಿಸುತ್ತಿದ್ದರು. ವಿಶೇಷವಾಗಿ ‘ಸ್ವಾಮಿ’ಯ ರಥೋತ್ಸವದ ಅವಧಿಯಲ್ಲಿ ಅವರು ಕಟ್ಟುನಿಟ್ಟಾದ ನಿಯಮಗಳನ್ನು ಆಚರಿಸಬೇಕಾಗುತ್ತಿತ್ತು.

ಬ್ಯಾಬಿಲೋನಿಯಾದ ‘ಮೀಸಲು ಹೆಣ್ಣು’ಗಳು ಶ್ರೀಮಂತರಾಗಿದ್ದು ಅವರನ್ನು ಗೌರವದಿಂದ ಕಾಣಲಾಗುತ್ತಿತ್ತು. ಇತರ ಸಾಮಾನ್ಯ ಹೆಣ್ಣುಮಕ್ಕಳಿಗಿಂತ ಈ ಹೆಣ್ಣುಗಳಿಗೆ ವಂಶಪಾರಂಪರ್ಯ ಹಕ್ಕುಗಳು ಅಧಿಕವಾಗಿದ್ದವು. ಇವರಿಗಾಗಿ ಪ್ರತ್ಯೇಕ ಮನೆಗಳಿದ್ದು ವಿವಾಹಿತ ಮಹಿಳೆಯರಿಗಿದ್ದ ಗೌರವ ಸ್ಥಾನಮಾನಗಳೇ ಇವರಿಗೂ ದೊರೆಯುತ್ತಿದ್ದವು. ಭಾರತದಲ್ಲಿ ದೇವದಾಸಿಯರು ಮಾತ್ರ ಸುಶಿಕ್ಷಿತರು, ಸಂಗೀತ ನೃತ್ಯ ಕಲೆಗಳಲ್ಲಿ ಪರಿಣತಿ ಪಡೆದವರಾಗಿದ್ದು ಸಮಾಜದಲ್ಲಿ ಒಂದು ಪ್ರತಿಷ್ಠಿತ ಸ್ಥಾನವನ್ನು ಹೊಂದಿದವರಾಗಿದ್ದರು. ದೇವರನ್ನೇ ಮದುವೆ ಆದವಳು ಅಥವಾ ದೇವತೆಯ ಪ್ರತೀಕದ ಜೊತೆಗೆ ಮದುವೆ ಆದವಳು ಎಂದು ಭಾವಿಸಲಾದ. ದೇವದಾಸಿ ಎಂದೂ ವಿಧವೆಯಾಗುತ್ತಿರಲಿಲ್ಲ. ಇದರಿಂದ ಕೆಳದರ್ಜೆಯ ಇತರ ಜನ ದೇವದಾಸಿಯರನ್ನು ಸುದೈವಿಗಳು ಎಂದು ತಿಳಿಯುತ್ತಿದ್ದರು. ದೇವದಾಸಿಯರು ಹಿಂದೂ ವಿವಾಹದ ಮೆರವಣಿಗೆಯ ಮುಂಚೂಣಿಯಲ್ಲಿರುತ್ತಿದ್ದರು. ಮದುವೆಯ ತಾಳಿಯನ್ನು ಪೋಣಿಸಿ ಕೊಡುವ ಕಾರ್ಯವನ್ನು ದೇವದಾಸಿಯರಿಗೆ ಒಪ್ಪಿಸಲಾಗುತ್ತಿತ್ತು. ವಿಜಯನಗರದ ಸಾಮ್ರಾಟರ ಕಾಲದಲ್ಲಿ ಇವರಿಗೆ ಅಪೂರ್ವ ಗೌರವಿತ್ತು. ಅರಸನ ರಾಣಿಯರ ಜೊತೆ ಗೂಡಿ ಇದ್ದಾಗ ಅಲ್ಲಿ ಪ್ರವೇಶಿಸುವದು ಅಲ್ಲದೇ ಅವರ ಜೊತೆಗೆ ತಾಂಬೂಲ ಮೆಲ್ಲುವ ವಿಶೇಷ ಮನ್ನಣೆ ಇವರಿಗೆ ದೊರೆತಿತ್ತು. (ಆದರೆ ಇಂಥ ಗೌರವ ಇತರ ಯಾವುದೇ ದರ್ಜೆಯ ಅಧಿಕಾರಿಗಳಿಗೆ ಇರಲಿಲ್ಲ).

ದೇವದಾಸಿಯರು ತಾವು ಸಲ್ಲಿಸುವ ಸೇವೆಗೆ ಪ್ರತಿಯಾಗಿ ನಿರ್ದಿಷ್ಟ ಹಣ ಪಡೆಯುತ್ತಿದ್ದರು. ದೇವಾಲಯದಿಂದ ಅವರು ಪಡೆಯುತ್ತಿದ್ದುದು ಅತಿ ಕಡಮೆ ಹಣ. ಅವರು ಆ ದೇವಾಲಯಕ್ಕೆ ಅರ್ಪಿತರು ಎಂದು ತೋರಿಸುವಷ್ಟು ಮಾತ್ರ. ತುಳು ನಾಡಿನಲ್ಲಿ ದೇವದಾಸಿಯರಿಗೆ ದೇವಾಲಯದಿಂದ ದಿನಭತ್ತೆಯೆಂದು ಒಂದಷ್ಟು ಅಕ್ಕಿ ಮತ್ತು ವರ್ಷಕ್ಕೊಮ್ಮೆ ಬಟ್ಟೆ ಕೊಡಲಾಗುತ್ತಿತ್ತು. ಆದರೆ ಸಾರ್ವಜನಿಕರಿಗೆ ತಮ್ಮನ್ನು ಮಾರಿಕೊಳ್ಳುತ್ತಿದ್ದ ಈ ಹೆಣ್ಣುಗಳು ತಮ್ಮ ಗಳಿಕೆಯ ಒಂದು ಭಾಗವನ್ನು ದೇವತೆಗಾಗಿ ಕಾಣಿಕೆಯೆಂದು ಸಲ್ಲಿಸಬೇಕಾಗುತ್ತಿತ್ತು.

ದೇವದಾಸಿ ಸಂಸ್ಥೆ ಬೆಳೆದ ಕಡೆಯಲ್ಲೆಲ್ಲ ಅನೇಕ ಬಗೆಯ ದೇವದಾಸಿ ವರ್ಗ ರೂಪಗೊಂಡವು. ಬ್ಯಾಬಿಲೋನಿಯನ್ನರಲ್ಲಿ ಐದು ಬಗೆಯ ಪವಿತ್ರ ದಾಸಿಯರನ್ನು ಕಾಣುತ್ತೇವೆ. ಪಶ್ಚಿಮ ಆಫ್ರಿಕಾದಲ್ಲಿ ಮೂರು ಗುಂಪುಗಳು: ಪತ್ನಿಯರು, ಅರ್ಚಕಿಯರು ಮತ್ತು ದೇವಾಲಯ ಸೂಳೆಯರು. ಕೇರಳದ ಕೆಲವೆಡೆ ಎರಡು ವಿಶಿಷ್ಟ ಬಗೆಯ ನರ್ತಕಿಯರಿದ್ದರು: ಮುಜಕ್ಕುಡಿ (ದಿನನಿತ್ಯದ ಕಾರ್ಯ ಮಾಡುದವರು); ೨) ಚಿರಪ್ಪುಕುಡಿ (ವಿಶೇಷ ದಿನಗಳಲ್ಲಿ ಸೇವೆ ಸಲ್ಲಿಸುವವರು).

ಪ್ರಾಚೀನ ಕಾಲದ ಗ್ರೀಕ್‌, ರೋಮ್‌ ಮತ್ತು ಪಶ್ಚಿಮ ಏಶಿಯಾದ ಕೆಲವು ದೇವಾಲಯಗಳಲ್ಲಿ ದೇವದಾಸಿಯರು ತುಂಬ ಕೀಳು ಸ್ಥಾನದಲ್ಲಿದ್ದರು ಎನ್ನುವ ಪಂಗಡದವರಂತೂ ಅಲ್ಲಿಯ ಗುಲಾಮರಾಗಿದ್ದರು. ಅವರು ದೇವರ ಸೇವೆಗೇ ಮೀಸಲಾಗಿದ್ದು ಅವರು ಅರ್ಚಕರ ಕೈಗೊಂಬೆಯಾಗಿದ್ದರು. ಅರ್ಚಕರು ದೇವಾಲಯದ ಯಾವುದೇ ಕೆಲಸ ಮಾಡುವವರಂತೆ ಅಥವಾ ಅವರನ್ನು ಸೂಳೆಯರಂತೆ ನಡೆಸಿಕೊಳ್ಳಬಹುದಿತ್ತು. ಸ್ವಸಮ್ಮತಿ ಇಲ್ಲದೇ ಇವರನ್ನು ಆಯ್ಕೆ ಮಾಡಬಹುದಿತ್ತು.

ಇತರ ದೇವಾಲಯಗಳಲ್ಲಿ ಹೆಣ್ಣು ತಾವೇ ಬಂದು ದೇವರಿಗೆ ಅರ್ಪಿಸಿಕೊಳ್ಳುತ್ತಿದ್ದರು. ಅಥವಾ ಪಾಲಕರು ಹೊತ್ತ ಹರಕೆಯಂತೆ ದೇವದಾಸಿಯರಾಗುತ್ತಿದ್ದರು. ಮೂಢ ನಂಬಿಕೆಗೆ ತಂದೆ ತಾಯಿಗಳು ಕೆಲವೊಮ್ಮೆ ತಮ್ಮ ಹುಡುಗಿಯರನ್ನು ತೊರೆದು ದೇವಾಲಯದ ಸೇವೆಗೆ ಬಿಡುತ್ತಿದ್ದರು. ಉದಾ: ಸಾಮಾನ್ಯವಾಗಿದ್ದ ಒಂದು ಮೂಢ ನಂಬಿಕೆಯೆಂದರೆ: ಐದನೆಯ ಮಗಳು ಮನೆತನಕ್ಕೆ ಕೇಡು ತರುತ್ತಾಳೆ ಇತ್ಯಾದಿ. ಕೆಲವೊಂದು ವೃದ್ಧ ದೇವದಾಸಿಯರು ಸಣ್ಣವಯಸ್ಸಿನ ಹುಡುಗಿಯರನ್ನು ದೇವದಾಸಿಯರನ್ನಾಗಿ ಮಾಡಿ ಅವರ ಮೇಲೆ ತಾವು ಉದರ ನಿರ್ವಹಣೆಗಾಗಿ ಅವಲಂಬಿಸುತ್ತಿದ್ದರು.

ಗಂಡುಗಳಿಗಿಂತ ಹೆಚ್ಚಾಗಿ ಹೆಣ್ಣುಗಳನ್ನೇ ದೇವರಿಗಾಗಿ ಮೀಸಲು ಬಿಡುವ ಪರಂಪರೆ ಬೆಳೆದು ಬಂದಿದೆ ನಿಜ. ಆದರೆ ಹೀಗೆ ‘ದೇವದಾಸಿ’ಯಾದವರಲ್ಲಿ ‘ಪುರುಷ’ ಮತ್ತು  ‘ಸ್ತ್ರೀ’ ಇಬ್ಬರೂ ಇದ್ದಾರೆ. ಪ್ರಾಚೀನ ಬ್ಯಾಬಿಲೋನಿಯಾದ ಧಾರ್ಮಿಕ ಅಧಿಕಾರಿಗಳಲ್ಲಿ ಲೈಂಗಿಕ ಆಚರಣೆಗಳನ್ನು ನೆರವೇರಿಸುವ ‘ಸ್ತ್ರೀ’ ಮತ್ತು ‘ಪುರುಷ’ ಎರಡೂ ವರ್ಗಗಳು ಸೇರಿವೆ.

ಹಮ್ಮುರಾಬಿ ನ್ಯಾಯಸೂತ್ರ ಬ್ಯಾಬಿಲೋನಿಯಾದ ಒಂದು ಪುರುಷ ‘ದೇವದಾಸಿ’ ವರ್ಗವನ್ನು ವಿವರಿಸುತ್ತದೆ. ಮಾರ್ದುಕ್‌ ದೇವಾಲಯಕ್ಕೆ ಸೇರಿದ ಈ ವರ್ಗಕ್ಕೆ `Ner-se-Ga’ ಎನ್ನುವ ಸುಮೇರಿಯನ್ ಹೆಸರಿದೆ. ಇವರು ಗಂಡು ದೇವದಾಸಿಯರು (Sodamites). ಹಮ್ಮುರಾಬಿ ನ್ಯಾಯಸೂತ್ರದ ಪ್ರಕಾರ ಸ್ತ್ರೀ Hiero douloi ಮಕ್ಕಳಿಗೆ ಇರುವ ಸ್ಥಾನಮಾನಗಳೇ ಈ ಪುರುಷವರ್ಗದ ಮಕ್ಕಳಿಗೂ ಸಲ್ಲುತ್ತವೆ. Cananites ಬ್ಯಾಬಿಲೋನಿಯನ್ನರ Istar ದೇವತೆಯನ್ನು ಹೋಲುವ Astarte ದೇವತಾ ಪೂಜೆಯ ಆಚರಣೆಗಳಲ್ಲಿ ‘ಹೆಣ್ಣುವೇಶ್ಯೆ’ ಮತ್ತು ‘ಗಂಡುವೇಶ್ಯೆ’ಯರ ಉಲ್ಲೇಖ ದೊರೆಯುತ್ತದೆ; ಅವರನ್ನು ಸೈಪ್ರೆಸಿಹನ Kilion ಸೆಮೆಟಿಕ್‌ ದೇವಾಲಯದಲ್ಲಿ ದೇವರ ಸೇವೆಗೆ ಮೀಸಲಾದ ‘ಗಂಡುವೇಶ್ಯೆ’ಯರ ವರ್ಗ ಅಸ್ತಿತ್ವದಲ್ಲಿತ್ತು ಎನ್ನುವುದಕ್ಕೆ ಆಧಾರಗಳಿವೆ. ಪಶ್ಚಿಮ ಆಫ್ರಿಕಾದ Eve ಮತ್ತು Tshi ಭಾಷೆಯನ್ನಾಡುವ Slave Coast ಮತ್ತು Gold Coast ಜನ ತಮ್ಮಲ್ಲಿಯ ಗಂಡು ಅಥವಾ ಹೆಣ್ಣನ್ನು ದೇವರಿಗೆ ಬಿಡುತ್ತಿದ್ದರು. ‘ಗಂಡುವೇಶ್ಯೆ’ಯರ ಲೈಂಗಿಕ ಸಂಪರ್ಕದಿಂದ ಭಕ್ತರಿಗೆ ದೇವರ ಕೃಪೆ ದೊರೆಯುತ್ತದೆ ಎನ್ನುವುದು ಅವರ ನಂಬಿಕೆಯಾಗಿತ್ತು. ಭಾರತದಲ್ಲಿ ಕೂಡ ಈ ಸಂಪ್ರದಾಯ ಕಂಡುಬರುತ್ತದೆ. ಮಹಾರಾಷ್ಟ್ರದ ಜೇಜೂರಿಯ ಏಕವೀರಾ ದೇವತೆಗೆ ಅರ್ಪಿಸಿಕೊಳ್ಳುವವರನ್ನು ‘ಮುರಲಿ’ಗಳೆಂದು ಮತ್ತು ಸವದತ್ತಿಯ ರೇಣುಕಾ-ಎಲ್ಲಮ್ಮನಿಗೆ ಅರ್ಪಿಸಿಕೊಳ್ಳುವ ಭಕ್ತರನ್ನು ಜೋಗಪ್ಪಗಳೆಂದು ಕರೆಯುತ್ತಾರೆ.

ಧಾರ್ಮಿಕ ಸೂಳೆಗಾರಿಕೆ ಸಾಮಾನ್ಯವಾಗಿ ವಿವಾಹಪೂರ್ವದ ಆಚರಣೆಯಾಗಿದ್ದು ಇದು ಫಲವತ್ತತೆಯ ದೇವತೆಗಳ ಅರ್ಚನಾ ವಿಧಾನಕ್ಕೆ ಸಂಬಂಧಿಸಿದೆ. ಆದರೆ ಚೈನಾದಲ್ಲಿ ವಿವಾಹಿತಳು ಕೂಡ ಕೆಲವೊಮ್ಮೆ ಭೂಮಿಯ ಫಲವತ್ತತೆಯನ್ನು ಮಾಂತ್ರಿಕವಾಗಿ ಪಡೆಯಲು ಸೂಳೆಯಾಗಬೇಕಾಗುತ್ತಿತ್ತು. ಪಶ್ಚಿಮ ಆಫ್ರಿಕಾದ Eve ಮತ್ತು Tshi ಭಾಷೆಯ ಜನರಲ್ಲಿ ಅಲಕ್ಷಿತಳಾದ ಹೆಂಡತಿ Danhi gbi ಅಥವಾ Danh sio ಸರ್ಪ ದೇವತಾಶಕ್ತಿಯ ಸ್ವಾಧೀನಳಾಗಿ ದೇವರಿಗೆ ಮೀಸಲಾದ ಹೆಣ್ಣುಗಳ ತಂಡವನ್ನು ಸೇರಬಹುದಾಗಿತ್ತು.

ತುಳುನಾಡಿನ ಕೆಲವು ದೇವಾಲಯಗಳಲ್ಲಿ ಈ ಬಗೆಯ ಸಂಪ್ರದಾಯಗಳನ್ನು ಗುರುತಿಸಿದ ಫ್ರಾನ್ಸಿಸ್‌ ಹ್ಯಾಮಿಲ್ಟನ್‌ ೧೮ನೆಯ ಶತಮಾನದ ಕೊನೆಯಲ್ಲಿ ಮೊಯ್ಲೇರ ಜಾತಿ ಅಸ್ತಿತ್ವಕ್ಕೆ ಬಂದ ಪದ್ಧತಿಯನ್ನು ವಿವರಿಸುತ್ತಾನೆ. ಅಲಕ್ಷಿತ ಹೆಂಡತಿ ತನ್ನ ಕಾಮವಿಕಾರವನ್ನು ತಡೆಯಲಾಗದೆ ಯಾವುದೇ ದೇವಾಲಯಕ್ಕೆ ಹೋಗಬಹುದು. ಅಲ್ಲಿ ದೇವತೆಗೆ ಬಂದ ನೈವೇದ್ಯ ಊಟ ಮಾಡಿಕೊಂಡು ತನ್ನನ್ನು ದೇವರಿಗೆ ಅರ್ಪಿಸಬಹುದಾಗಿತ್ತು. ಅವಳು ಬ್ರಾಹ್ಮಣಳಾಗಿದ್ದರೆ ದೇವಾಲಯದ ಒಳಗೇ ವಾಸಮಾಡಬಹುದು ಅಥವಾ ಅವಳಿಗೆ ಬೇಡವಾದರೆ ಬೇರೆ ಕಡೆಗೂ ಇರಬಹುದು. ದೇವಾಲಯದ ಒಳಗಿದ್ದರೆ ಅಲ್ಲಿಯ ಸಣ್ಣಪುಟ್ಟ ಕೆಲಸ ಮಾಡುತ್ತ ಬ್ರಾಹ್ಮಣರೊಡನೆ ಮಾತ್ರ ಲೈಂಗಿಕ ಸಂಬಂಧ ಇಟ್ಟುಕೊಂಡು ಇರಬಹುದು. ಅವಳ ಸೇವೆಗೆ ದಿನಭತ್ತೆ ಅಕ್ಕಿ ಮತ್ತು ವರ್ಷಕ್ಕೊಮ್ಮ ಬಟ್ಟೆ ಕೊಡಲಾಗುತ್ತಿತ್ತು. ದೇವಾಲಯದ ಹೊರಗೆ ವಾಸಿಸುವ ಬ್ರಾಹ್ಮಣ ಅಥವಾ ಇತರ ಹೆಣ್ಣುಗಳು ಯಾವುದೇ ಉನ್ನತ ಜಾತಿಯ ಗಂಡಿನ ಜೊತೆ ಸೂಳೆಗಾರಿಕೆ ನಡೆಸಬಹುದು. ಆದರೆ ಪ್ರತಿವರ್ಷ, ದೇವಾಲಯದ ಭಂಡಾರಕ್ಕೆ ತಮ್ಮ ಆದಾಯ ದ ೧/೬ ಅಥವಾ ಅರ್ಧ ಪಗೋಡಾ ಹಣ ಸಲ್ಲಿಸಬೇಕಾಗಿತ್ತಿತ್ತು.

ವಿವಿಧ ದೇವಾಲಯಗಳಿಗೆ ಅರ್ಪಿಸಿಕೊಂಡ ‘ದೇವದಾಸಿ’ – ಸೇವಕರ ಸೇವಾ ನಿಯಮ ಮತ್ತು ಅವಧಿಗಳು ಭಿನ್ನಭಿನ್ನವಾಗಿದ್ದುವು. ಕೆಲವೆಡೆ ಧಾರ್ಮಿಕ ಸೂಳೆಗಾರಿಕೆ ಒಮ್ಮೆ ತಾತ್ಪೂರ್ತಿಕವಾಗಿ ಅಥವಾ ಧಾರ್ಮಿಕ ಮನ್ನಣೆ ಪಡೆದು ನಿರಂತರವಾಗಿ ಆಚರಿಸಲಾಗುತ್ತಿತ್ತು. ಧಾರ್ಮಿಕ ವಿಧಿಯ ಆಚರಣೆಗಾಗಿ ಒಂದುಸಲವಾದರೂ ಆಚರಿಸಬೇಕಾದ ಒಂದು ದೃಷ್ಟಾಂತ ಬ್ಯಾಬಿಲೋನಿಯಾದ ಸ್ತ್ರೀಯರದು. ಬ್ಯಾಬಿಲೋನಿಯಾದ ಸ್ತ್ರೀಯರು ವಿವಾಹ ಪೂರ್ವದಲ್ಲಿ ಒಮ್ಮೆಯಾದರೂ ಇತರರ ಭೋಗಕ್ಕೆ ಒಳಗಾಗಬೇಕಾಗುತ್ತಿತ್ತು. Herodotus ನ ಪ್ರಕಾರ ಪ್ರಾಚೀನ ಬ್ಯಾಬಿಲೋನಿಯಾದ Herodotus Myletta ಆಚರಣೆಯ ಪ್ರಕಾರ ಆ ದೇಶದ ಪ್ರತಿಯೊಂದು ಹೆಣ್ಣು – ಶ್ರೀಮಂತಳಿರಲಿ, ಬಡವಳಿರಲಿ -Aphrodite ದೇವತೆಯ ಮುಖ ಮಂಟಪದ ಎದುರು ಒಮ್ಮೆಯಾದರೂ ಕುಳಿತುಕೊಳ್ಳಲೇಬೇಕಾಗುತ್ತಿತ್ತು ಮತ್ತು ಒಬ್ಬ ಅಪರಿಚಿತ ಗಂಡಿನ ಜೊತೆ ಸಂಭೋಗ ನಡೆಸಬೇಕಾಗುತ್ತಿತ್ತು. ಎಲ್ಲ ವರ್ಗದ ಹೆಂಗಸರು – ರಥ ಕುದುರೆ ಸಾರೋಟುಗಳಲ್ಲಿ ಅನೇಕ ಸೇವಕರ ಕಾವಲಿನಲ್ಲಿ ಬರುವಂಥವರೂ ಸಹ ಈ ದೇವಾಲಯಕ್ಕೆ ಬರುವುದು ಕಡ್ಡಾಯವಾಗಿತ್ತು. ಸ್ತ್ರೀಯರು ನಡುವೆ ಹಾದುಹೋಗುವಷ್ಟು ದಾರಿ ಬಿಟ್ಟು ಸಾಲಾಗಿ ಕುಳಿತುಕೊಳ್ಳುವುದು ಪದ್ಧತಿ. ದೇವಾಲಯಕ್ಕೆ ಬಂದ ಅಪರಿಚಿತ ಪುರುಷ ಇವರ ನಡುವೆ ಹಾಯ್ದುಹೋಗುವಾಗ ತನಗೆ ಬೇಕಾದ ಹುಡುಗಿಯನ್ನು ಆಯ್ದುಕೊಳ್ಳುತ್ತಿದ್ದ. ಹೀಗೆ ಆಯ್ಕೆಗೊಂಡ ಹೆಣ್ಣಿನ ತೊಡೆಯ ಮೇಲೆ ಬೆಳ್ಳಿಯ ನಾಣ್ಯವನ್ನು ಚೆಲ್ಲುತ್ತಿದ್ದ. ಅವಳು ಎದ್ದು ಆ ಗಂಡಿನ ಜೊತೆ ಹೋಗಬೇಕು. ಅವನು Mylitta ದೇವತೆಯ ಹೆಸರಿನಲ್ಲಿ ಅವಳನ್ನು ಭೋಗಿಸುತ್ತಿದ್ದ. ಈ ದೇವತೆ ಸೃಷ್ಟಿದೇವತೆ – ಹುಟ್ಟಿನ ದೇವತೆಯಾದ – Ishtar ದೇವತೆಯನ್ನು ಹೋಲುವವಳು. ಬ್ಯಾಬಿಲೋನಿಯಾದ ಪ್ರತಿಯೊಬ್ಬ ಸ್ತ್ರೀ ಇಂಥ ಪವಿತ್ರೀಕೃತ ಸೂಳೆಗಾರಿಕೆಯಿಂದ ಗಳಿಸಿದ ಹಣವನ್ನು ಆ ದೇವತೆಗೆ ಅರ್ಪಿಸಬೇಕಾಗುತ್ತಿತ್ತು. ಬಳಿಕ ಅವಳು ಮನೆಗೆ ಬಂದು ಪುನಃ ಸಾಮಾನ್ಯ ಜೀವನ ನಡೆಸುತ್ತಿದ್ದಳು. ಅವಳ ಈ ಕ್ರಿಯೆಯನ್ನು ಕೀಳು ದೃಷ್ಟಿಯಿಂದ ಯಾರೂ ಕಾಣುತ್ತಿರಲಿಲ್ಲ; ಪ್ರತಿಯಾಗಿ ಇದರಿಂದ ಅವಳನ್ನು ಗೌರವದಿಂದ ಕಾಣಲಾಗುತ್ತಿತ್ತು (ಬಾರ್ಟನ್‌, ೧೯೩೦:೬೭೩-೬೭೪).

ಅರ್ಮೆನಿಯಾದಲ್ಲಿ ಕೂಡ ಪ್ರತಿಷ್ಠಿತ ಜನ ತಮ್ಮ ಕನ್ಯೆಯರನ್ನು Anahit ದೇವತೆಗೆ ಮೀಸಲು ಬಿಡುತ್ತಿದ್ದರು. ಒಂದು ಪದ್ಧತಿಯಂತೆ ಈ ಕನ್ಯೆಯರು ಅಪರಿಚಿತರೊಂದಿಗೆ, ದೇವತೆಗೆ ಹತ್ತಿರದಲ್ಲಿಯೇ ಇದ್ದು, ಲೈಂಗಿಕ ಕ್ರಿಯೆಗಳನ್ನು ನಡೆಸುತ್ತಿದ್ದರು. ಬಳಿಕ ಅಂಥ ಹೆಣ್ಣುಗಳನ್ನು ಮದುವೆ ಮಾಡಿಕೊಡಲಾಗುತ್ತಿತ್ತು. ಮತ್ತು ಇಂಥ ಹೆಣ್ಣಿನ ಜೊತೆ ಬಾಳುವುದು ಕೀಳು ಎಂದು ಯಾರೂ ಭಾವಿಸುತ್ತಿರಲಿಲ್ಲ (ಅನಾನರೆಯನ್‌, ೧೯೩೦ : ೭೯೭). ವಾಸ್ತವವಾಗಿ ಈ ವಿವಾಹಪೂರ್ವ ಲೈಂಗಿಕ ಆಚರಣೆಗಳು ಹೆಣ್ಣಿನಲ್ಲಿ ಸದಾ ಫಲವತ್ತತೆಯನ್ನೂ ಪ್ರಚೋದಿಸಲು ಅಥವಾ ತಮಗೆ ಆಸರೆಯಿತ್ತ ಗಂಡಿನ ಪೌರುಷವನ್ನು ವರ್ಧಿಸಲು ರೂಢಿಯಲ್ಲಿ ಬಂದವು. ಹೀಗೆ ಕೆಲವು ದೇವಾಲಯಗಳಲ್ಲಿ ತಾತ್ಪೂರ್ತಿಕ ಅಥವಾ ಸ್ಥಿರ ವೇಶ್ಯೆಗಾರಿಕೆ `Eg’ ದೇವರ ಪವಿತ್ರ ಸೇವೆ ಎಂದು ಭಾವಿಸಿ ಬೆಳೆದುಬಂದಿತು. ಭಾರತದಲ್ಲಿ ಇಡೀ ಜೀವನವನ್ನು ದೇವರಿಗಾಗಿಯೇ ಮೀಸಲಿಟ್ಟ ಉದಾಹರಣೆಗಳೂ ಸಿಗುತ್ತವೆ. ಈ ವಿಸ್ಮಯಕಾರಿ ಆಚರಣೆಯ ಉಗಮದ: ವಿವರಣೆಗೆ ಅನೇಕ ಕಾರಣಗಳನ್ನು ನೀಡಲಾಗುತ್ತದೆ. ಅವುಗಳಲ್ಲಿ ಕೆಲವು ಗಮನಾರ್ಹವಾದವುಗಳು ಹೀಗಿವೆ:-

೧) ದೇವದಾಸಿ ಸಂಪ್ರದಾಯ ದೇವರ ಕೃಪೆಗಾಗಿ ತಮ್ಮನ್ನು ಅರ್ಪಿಸಿಕೊಳ್ಳುವ ನರಬಲಿ ಆಚರಣೆಗೆ ಪ್ರತಿಯಾಗಿ ರೂಢಿಯಲ್ಲಿ ಬಂದಿತು.

೨) ಅಪರಿಚಿತರಿಗೆ ಲೈಂಗಿಕ ಆತಿಥ್ಯ ನೀಡುವ ಪದ್ಧತಿಯಿಂದಾಗಿ ಮೂಡಿ ಬಂದಿತು.

೩) ಭೂಮಿ, ಮನುಷ್ಯ ಮತ್ತು ಪಶು ಪಕ್ಷಿಗಳ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಒಂದು ವಿಧಿಕ್ರಿಯೆ. ಬೇರೆ ಮಾತಿನಲ್ಲಿ ಹೇಳುವುದಾದರೆ ಈ ದೇವದಾಸಿ ಸಂಪ್ರದಾಯ ಫಲವತ್ತತೆಯ ಪಂಥದ ಪರಿಣಾಮ.

೪) ಪತಿತ ಮತ್ತು ವಿಷಕಾರಿ ಅರ್ಚಕ ವರ್ಗದ ವಿಷವರ್ತುಲದ ಅಧೀನವಾಗಿ ಬಾಳಿದ ಜನರ ಅರ್ಚನಾ ವಿಧಾನವನ್ನು ಪ್ರತಿನಿಧಿಸುತ್ತದೆ. (ಫೆನ್‌ಝರ, ೧೯೨೪ : ೨೬೭).

ಈ ಎಲ್ಲ ಕಾರಣಗಳಲ್ಲಿ ಜೇಮ್ಸ್‌ ಫೇಜರ್ ಅನುಮೋದಿಸಿದ ಮೂರನೆಯ ಕಾರಣ ಹೆಚ್ಚು ಸಮಂಜಸವೆಂದು ತೋರುತ್ತದೆ. ನಮಗೆ ದೊರೆಯುವ ಪ್ರಾಚೀನ ವಿಭಿನ್ನ ಸಂಸ್ಕೃತಿಗಳಲ್ಲಿ ಇದ್ದ ಉಲ್ಲೇಖ ಸಾಕ್ಷ್ಯಾಧಾರಗಳನ್ನು ಗಮನಿಸಿದಾಗ ದೇವದಾಸಿ ಪದ್ಧತಿಯನ್ನು ಕುರಿತು ಗಮನಿಸಿದಾಗ ಒಂದು ಮಾತು ಸ್ಪಷ್ಟವಿದೆ: ಈ ಸಂಪ್ರದಾಯದ ಉಗಮಕ್ಕೆ ಎಲ್ಲ ಕಡೆಗೂ ಒಂದೇ ಬಗೆಯ ಕಾರಣಗಳಿಲ್ಲ; ಇರಲಿಕ್ಕಿಲ್ಲ. ಆದರೆ ಈ ಸಂಪ್ರದಾಯ ಇಡೀ ವಿಶ್ವದಲ್ಲಿ ಅಸ್ತಿತ್ವದಲ್ಲಿತ್ತು; ಪರಿಸ್ಥಿತಿಗಳಿಗೆ ಅನುಗುಣವಾಗಿ ಈ ಸಂಪ್ರದಾಯ ಬೆಳವಣಿಗೆ ಹಾಗೂ ಆಚರಣೆಗಳಲ್ಲಿ ಕೆಲವು ವ್ಯತ್ಯಾಸಗಳಿವೆ;

BIBLIOGRAPHY

೧. ಅನಾನರೆಯನ್‌, ಎಂ.ಹೆಚ್‌. ೧೯೩೦ ಇನ್‌ ಎನ್‌ಸಾಯಕ್ಲೊಪಿಡಿಅ ಆಫ್‌ ರಿಲಿಜಿನ್‌ಹ್ಯಾಂಡ ಎಥಿಕ್ಸ Vol. ಎಡಿಟೆಡ್‌ : ಜೇಮ್ಸ್ ಹೇಸ್ಟಿಂಗ್ಸ್, ಸೆಕೆಂಡ ಇಂಪ್ರೆಶನ್‌, ಟಿ ಅಂಡ ಟಿ ಕ್ಲಾರ್ಕ್ ಎಡಿಬನ್‌ಬರ್ಗ.
೨. ಎಡ್ವರ್ಡ, ಎಸ್‌.ಎಮ್‌. ೧೯೨೪ ಕ್ರೈಮೆ ಇನ್‌ ಇಂಡಿಯಾ’ ಹಂಪ್ರೆ ಮಿಲ್‌ ಫೋರ್ಡ್ ಅಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್‌ ಲಂಡನ್‌.
೩. ಕ್ರೂಕ್‌ ಡಬ್ಲು. ೧೯೩೦ “ಪ್ರಾಸ್ಟಿಟ್ಯೂಶನ್‌” ಇನ್‌ ಎನ್‌ಸಾಯ್‌-ಕ್ಲೊಪಿಡಿಅ ಆಫ್‌ ರಿಲಿಜನ್‌ ಅಂಡ ಎಥಿಕ್ಸ್ Vol. X ಎಡಿಟೆಡ್‌ ಜೇಮ್ಸ್‌ ಹೇಸ್ಟಿಂಗ್ಸ್, ಸೆಕೆಂಡ್‌ ಇಂಪ್ರೆಶನ್‌ ಟಿ ಅಂಡ ಟಿ ಕ್ಲಾರ್ಕ್ ಎಡಿನ್‌ಬರ್ಗ.
೪. ಕ್ರಾಲೇ ಎ. ಈ. ೧೯೩೦ ಎನ್‌ಸಾಯ್‌ಕ್ಲೊಪಿಡಿಅ ಆಫ್‌ ರಿಲಿಜನ್‌ ಎಥಿಕ್ಸ್ Vol.III ಎಡಿಟೆಡ್‌ ಜೇಮ್ಸ್ ಹೇಸ್ಟಿಂಗ್ಸ್, ಸೆಕೆಂಡ್‌ ಇಂಪ್ರೆಶನ್‌ ಟಿ ಅಂಡಟಿ ಕ್ಲಾರ್ಕ ಎಡಿನ್‌ಬರ್ಗ.
೫. ಜಾರ್ಜ ಎ. ಬಾರ್ಟನ್‌ ೧೯೩೦ ಎನ್‌ಸಾಯ್‌ಕ್ಲೊಪಿಡಿಆ ಆಫ ರಿಲಿಜನ್‌ ಅಂಡ ಎಥಿಕ್ಸ Vol. VI ಎಡಿಟೆಡ್‌ ಜೇಮ್ಸ ಹೇಸ್ಟಿಂಗ್ಸ, ಸೆಕೆಂಡ ಇಂಪ್ರೆಶನ್‌ ಟಿ ಹ್ಯಾಂಡ ಟಿ ಕ್ಲಾರ್ಕ ಎಡಿನ್‌ಬರ್ಗ.
೬. ಡುಬೊಯಿಸ್‌ ಅಬ್ಬೆ, ಜೆ.ಎ.: ೧೯೨೮ ಹಿಂದುಮ್ಯಾನರ್ಸ್, ಕಸ್ಟಮ್ಸ ಹ್ಯಾಂಡ ಸೆರೆಮೋನಿಸ್‌ ಎಡಿಟೆಡ ಹೆನ್ರಿ ಕೆ. ಬ್ಯೂಚಂಪಾ ಅಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್‌ ಲಂಡನ್‌ III ಎಡಿಷನ್‌.
೭. ಥೊಮಸ್‌ ಪಿ. ೧೯೬೪ ‘ಇಂಡಿಯನ್‌ ವುಮೆನ್‌ ಥ್ರೂ ದಿ ಏಜಿಸ್‌’ ಎಷ್ಯಾ ಪಬ್ಲಿಶಿಂಗ ಹೌಸ, ನ್ಯೂಯರ್ಕ.
೮. ಪುನೆಕರ ಎಸ್‌.ಡಿ. ಅಂಡ ಕಮಲಾರಾವ ೧೯೬೨ ಎ ಸ್ಟಡಿ ಆಫ ಪ್ರಾಸ್ಟಿಟ್ಯೂಶನ್‌ ಇನ್ ಬಾಂಬೆ; ಅಲೈಡ್‌ ಪಬ್ಲಿಷರ, ಪ್ರೈವೇಟ ಲಿಮಿಟೆಡ್‌ ಬಾಂಬೆ.
೯. ಪ್ಯಾನಝರ ಎನ್‌.ಎಮ್‌. ೧೯೬೮ ಅಪೆಂಡಿಕ್ಸ್ -IV ಸೇಕ್ರೆಡ್‌ ಪ್ರಾಸ್ಟಿಟ್ಯೂಶನ್‌ ಇನ್‌ ಚಾರ್ಲಸ್‌ ಹೆನ್ರಿ ಹ್ಯಾಂಡ ಎನ್‌ ಎಮ್‌. ಪೆಂಜವಿಲ್ಡ ‘ದಿ ಓಶನ್‌ ಆಫ ಸ್ಟೋರಿ Vol. I ದಿಲ್ಲಿ, ಮೋತಿಲಾಲ ಬನಾರಸಿದಾಸ.
೧೦. ಫ್ರೆಜರ್, ಜೇಮ್ಸ್ ೧೯೫೪ ದಿ ಗೋಲ್ಡನ್‌ ಬೌ ಅಬ್ರಿಡ್ಜ ಎಡಿಷನ್‌ ಮ್ಯಾಕಮಿಲನ್‌ ಹ್ಯಾಂಡ ಕಂಪನಿ ಲಿಮಿಟೆಡ್‌ ಲಂಡನ್‌.
೧೧. ಮ್ಯಾಕರಾಕ್‌ ಜೆ.ಎ. ೧೯೩೦ ಎನ್‌ಸಾಯ್‌ಕ್ಲೊಪಿಡಿಅ ಆಫ್‌ ರಿಲಿಜನ್‌ ಹ್ಯಾಂಡ ಎಥಿಕ್ಸ Vol. I ಎಡಿಟೆಡ್‌ ಜೇಮ್ಸ ಹೆಸ್ಟಿಂಗ್ಸ, ಸೆಕೆಂಡ್‌ ಇಂಪ್ರೆಶನ್‌ ಟಿ ಅಂಡ ಟಿ ಕ್ಲಾರ್ಕ ಎಡಿನ್‌ಬರ್ಗ.