ಏರೋಡ್ರೋಮನ್ನು ನಾವು ತಲುಪಿದಾಗ ಆರು ಗಂಟೆ. ತುಂಬ ವಿಶ್ವಾಸದಿಂದ ನನ್ನನ್ನು ನೋಡಿಕೊಂಡ, ಶ್ರೀನಿವಾಸಭಟ್ ಅವರಿಗೆ ಕೃತಜ್ಞತೆ ಹೇಳಿ, ಬೀಳ್ಕೊಟ್ಟು, ಮಿಡ್‌ವೇ ಏರ್‌ಲೈನ್ ಕಂಪನಿಯ ಕೌಂಟರನ್ನು ಹುಡುಕಿಕೊಂಡು ಹೊರಟೆ. ವಿಸ್ತಾರವಾದ ಆ ನಿಲ್ಮನೆಯೊಳಗೆ, ಸಾಲಾಗಿದ್ದ ಅನೇಕ ವಿಮಾನ ಕಂಪನಿಗಳ ಕೌಂಟರುಗಳನ್ನು ದಾಟಿಕೊಂಡು, ನನ್ನ ಟಿಕೆಟ್‌ನಲ್ಲಿ ನಮೂದಿತವಾದ ಮಿಡ್‌ವೇ ಏರ್‌ಲೈನ್ ಕೌಂಟರಿಗೆ ಹೋದ ಕೆಲವೇ ನಿಮಿಷಗಳಲ್ಲಿ ನನ್ನ ಸೀಟ್ ನಂಬರ್, ನಾನು ವಿಮಾನವನ್ನು ಪ್ರವೇಶಿಸಲು ಹೋಗಬೇಕಾದ ಗೇಟ್ ನಂಬರ್ ಗುರುತು ಮಾಡಿ. O.K. have a nice trip’ ಎಂದ ಮಹಿಳಾ ಸಹಾಯಕಿ, ‘ನೋಡಿ, ನೀವು ಹಿಡಿಯಬೇಕಾದ ವಿಮಾನ ಇರುವುದು ಏಳು ಗಂಟೆಗೆ. ನೀವು ಇನ್ನೂ ನಲವತ್ತೈದು ನಿಮಿಷ ಕಾಯಬೇಕಾಗುತ್ತದೆ. ಈಗ ಆರೂಕಾಲಿಗೆ ನಮ್ಮದೇ ವಿಮಾನ ಚಿಕಾಗೋಗೆ ಹೊರಡಲಿದೆ. ಅದರಲ್ಲಿ ಸ್ಥಳಾವಕಾಶವೂ ಇದೆ.  ನೀವು ಹೋಗುವುದಾದರೆ ನಿಮ್ಮನ್ನು ಅದರಲ್ಲಿ ಕಳುಹಿಸಿಕೊಡುತ್ತೇನೆ’ – ಎಂದಳು. ನಾನೆಂದೆ : ‘ನನಗೇನೂ ಅಂತಹ ಅವರಸರವಿಲ್ಲ. ಏಳು ಗಂಟೆಯ ವಿಮಾನದಲ್ಲೇ ಹೋಗುತ್ತೇನೆ. ಯಾಕೆಂದರೆ ಇವತ್ತು ಚಿಕಾಗೋಗೆ ಇಲ್ಲಿಂದ ಏಳುಗಂಟೆಗೆ ಹೊರಡುವ ವಿಮಾನದಲ್ಲೇ ಬರುತ್ತೇನೆಂದು ಅಲ್ಲಿ ನನಗಾಗಿ ಕಾಯುವ ಸ್ನೇಹಿತರಿಗೆ ನಿನ್ನೆ ರಾತ್ರಿ ಫೋನ್ ಮಾಡಿ ತಿಳಿಸಿದ್ದೇನೆ.’ ಆಕೆ, ‘ಓಕೆ’ ಎಂದು ಮಧುರವಾಗಿ ಹೇಳಿದಳು. ಅಮೆರಿಕಾದ ಈ ಮಹಿಳಾಮಣಿಯರ ಬಾಯಲ್ಲಿ ‘ಓಕೆ’ ಎಂಬುದು ತಾಳುವ ವಿವಿಧ ಸ್ವರ ವಿನ್ಯಾಸಗಳನ್ನು ಕೇಳುವುದೇ ಒಂದು ಸೊಗಸು.

ಉದ್ದನೆಯ ಮೊಗಸಾಲೆಯಲ್ಲಿ ಕುಳಿತು ವಿಮಾನಗಳು ಬರುವ ಹೋಗುವ ಭರಾಟೆಯನ್ನು ನೋಡುತ್ತಿದ್ದೆ. ಇನ್ನೇನು ಆರೂಕಾಲು ಗಂಟೆಯ ವಿಮಾನ ಹೊರಡಬೇಕು, ಅದಕ್ಕಾಗಿ ಪ್ರವೇಶಿಸುವ ಗೇಟಿನ ಬಾಗಿಲನ್ನು ಮುಚ್ಚುತ್ತಿದ್ದಾರೆ ಅನ್ನುವಷ್ಟರಲ್ಲಿ ಭುಸು ಭುಸು ತೇಗುತ್ತ ಐದಾರು ಜನ ಬಂದರು. ಅವರಿಗಾಗಿ, ಮತ್ತೆ ಹೊರಡಲಿರುವ ವಿಮಾನವನ್ನು ತಡೆ ಹಿಡಿದು ಕೆಲವೇ ನಿಮಿಷಗಳಲ್ಲಿ ಅವರು ವಿಮಾನವನ್ನು ಪ್ರವೇಶಿಸಲು ಅವಕಾಶ ಕಲ್ಪಿಸಲಾಯಿತು.

ನನ್ನ ಪ್ರಯಾಣಕ್ಕೆ ಇನ್ನೂ ಸಮಯವಿದ್ದುದರಿಂದ ನಾನು ಒಂದಷ್ಟು ಹೊತ್ತು ಉದ್ದನೆಯ ಮೊಗಸಾಲೆಯಲ್ಲಿ ಅಡ್ಡಾಡಿದೆ. ಮೊಗಸಾಲೆಯ ಉದ್ದಕ್ಕೂ ಅನೇಕ ವಿಮಾನ ಕಂಪನಿಗಳ ಕೌಂಟರ್‌ಗಳು. ಈ ವಿಮಾನ ಕಂಪನಿಗಳೆಲ್ಲ ಹಲವಾರು ಖಾಸಗಿ ಸಂಸ್ಥೆಗಳಿಗೆ ಸೇರಿದ್ದು; ಯಾಕೆಂದರೆ ಇಲ್ಲಿನ ವಿಮಾನ ಸಂಚಾರದ ವ್ಯವಸ್ಥೆ ನಮ್ಮಲ್ಲಿನಂತೆ ಸರ್ಕಾರಕ್ಕೆ ಸೇರಿದ್ದಲ್ಲ. ‘ಕಾಂಟಿನೆಂಟಲ್ ಏರ್ ಲೈನ್ಸ್’, ‘ಮಿಡ್‌ವೇ ಏರ್ ಲೈನ್ಸ್’, ‘ಈಸ್ಟರ್ನ್ ಏರ್ ಲೈನ್ಸ್’, ‘ಫೆಸಿಫಿಕ್ ಏರ್‌ಲೈನ್ಸ್’, ‘ಟಿಡಬ್ಲ್ಯು.ಎ. ಏರ್ ಲೈನ್ಸ್’ – ಹೀಗೆ ಒಂದರ ಬದಿಗೊಂದು ವಿಮಾನ ಕಂಪನಿಗಳವರ ಕೌಂಟರ್‌ಗಳು. ಆಯಾ ಕಂಪನಿಗಳ ಮೂಲಕ ಬುಕ್ ಮಾಡಿಸಿದವರು, ಆಯಾ ಕಂಪನಿಗಳ ಕೌಂಟರ್ ಬಳಿಗೆ ಹೋಗಿ ಟಿಕೆಟ್ ಬುಕ್ ಮಾಡಿಸಿ, ಅಲ್ಲಲ್ಲಿನ ಗೇಟು ಗಳ ಮೂಲಕ ವಿಮಾನವನ್ನು ಪ್ರವೇಶಿಸಬೇಕು. ಹೀಗಾಗಿ ಒಂದೊಂದು ವಿಮಾನ ನಿಲ್ದಾಣದಲ್ಲೂ ಹಲವಾರು ಕಂಪೆನಿಗಳ ವಿಮಾನಗಳು ಪ್ರತಿ ನಿಮಿಷವೂ ಬರುತ್ತಿರುತ್ತವೆ ಹೋಗುತ್ತಿರುತ್ತವೆ. ಇದರ ಜತೆಗೆ ಬೇರೆ ಬೇರೆಯ ರಾಷ್ಟ್ರಗಳಿಂದ ಬರುವ ಹೋಗುವ ಅಂತರ್ ರಾಷ್ಟ್ರೀಯ ವಿಮಾನಗಳೂ ಸಾಕಷ್ಟಿವೆ. ಮಿಡ್‌ವೇ ವಿಮಾನ ಸಂಸ್ಥೆಯವರೇ ಡೆಟ್ರಾಯಿಟ್‌ನಿಂದ ಚಿಕಾಗೋಗೆ ದಿನಕ್ಕೆ ಹನ್ನೆರಡು ಸಲ ಹೋಗಿ ಬರುವ ವಿಮಾನಗಳನ್ನು ನಡೆಸುತ್ತಾರೆ. ‘ಸುಖ ಪ್ರಯಾಣ ಬೇಕೇ? ಒಳ್ಳೆಯ ಆತಿಥ್ಯ ಬೇಕೇ? ನಮ್ಮ ವಿಮಾನದಲ್ಲೇ ನಿಮ್ಮ ಟಿಕೆಟ್‌ಗಳನ್ನು ಕಾದಿರಿಸಿ’ ಎಂಬ ಜಾಹೀರಾತುಗಳು ಬೇರೆ. ಚಿಕ್ಕ ವಿಮಾನ, ಬೋಯಿಂಗ್, ಏರ್ ಬಸ್, ಜಂಬೋಜೆಟ್ ಹೀಗೆ ಬಗೆ ಬಗೆಯ ಗಾತ್ರ – ಆಕಾರಗಳ ವಿಮಾನಗಳು ಆಯಾ ವಿಮಾನ ಕಂಪನಿಯವರಿಗೆ ಮೀಸಲಾದ, ಅನೆಕ ಚದರ ಮೈಲಿಗಳ ವಿಸ್ತಾರದ ನಿಲ್ದಾಣದಿಂದ ಹೋಗುತ್ತ- ಬರುತ್ತ ಇರುವಾಗಿನ ಭೋರ್ಗರೆತವೊಂದನ್ನು ಸದಾ ಕೇಳಬೇಕಾಗುತ್ತದೆ. ವಿಮಾನ ಇನ್ನೇನು ಹೊರಟಿತು ಎನ್ನುವಾಗ ಕೂಡಾ, ಏರುಮಾರ್ಗದ (ರನ್‌ವೇ) ಮೇಲೆ, ಒಂದರ ಹಿಂದೊಂದು ವಿಮಾನಗಳು ಉಡ್ಯಾಣಕ್ಕೆ (ಟೇಕ್‌ಆಫ್‌ಗಾಗಿ) ಸಾಕಷ್ಟು ಹೊತ್ತು ಸರದಿಯ ಮೇರೆಗೆ ಕಾಯಬೇಕಾಗುತ್ತದೆ. ಈ ವಿಮಾನಗಳಲ್ಲಿ ಪ್ರಯಾಣ ಮಾಡುವವರು, ತಮ್ಮ ಟಿಕೆಟ್‌ಗಳು ಮೊದಲೇ ಖಚಿತವಾಗಿದ್ದಲ್ಲಿ ವಿಮಾನ ಹೊರಡಲು ಹತ್ತು – ಹದಿನೈದು ನಿಮಿಷ ಮೊದಲು ಬಂದರೂ ಸಾಕು; ನಮ್ಮಲ್ಲಿನಂತೆ ಗಂಟೆಗಟ್ಟಲೆ ಮೊದಲೆ ಕ್ಯೂನಲ್ಲಿ ನಿಂತು ಕಾಯಬೇಕಾಗಿಲ್ಲ. ಕೇವಲ ಒಂದೆರಡು ನಿಮಿಷಗಳಲ್ಲಿ ನಿಮ್ಮ ಟಿಕೆಟ್ ಮೇಲೆ ಸೀಟಿನ ನಂಬರ್ ಮತ್ತು ವಿಮಾನವನ್ನು ನೇರವಾಗಿ ಪ್ರವೇಶಿಸಲು ಅನುಕೂಲವಾದ ಸುರಂಗಮಾರ್ಗದ ಗೇಟ್ ನಂಬರ್ ನಮೂದಾಗುತ್ತದೆ.

ಆರೂ ಮುಕ್ಕಾಲರ ವೇಳೆಗೆ ನಾನು ಪ್ರವೇಶಿಸಿ ಕೂತ ಮಿಡ್‌ವೇ ಏರ್ ಲೈನಿನ ವಿಮಾನ ಅಷ್ಟೇನೂ ದೊಡ್ಡದಾಗಿರಲಿಲ್ಲ. ಏಳು ಗಂಟೆಗೆ ಅದು ಡೆಟ್ರಾಯಿಟ್  ನಿಲ್ದಾಣದ ರನ್‌ವೇಯ ಮೇಲೆ ಉರುಳಿ ಆಕಾಶಪಥಕ್ಕೆ ಏರಿದಾಗ ಇನ್ನೂ ಸೂರ‍್ಯ ಪಶ್ಚಿಮ ದಿಗಂತದಲ್ಲಿ ಎರಡು ಮಾರು ಮೇಲೆಯೇ ಇದ್ದ. ಈ ಕಾಲಗಳಲ್ಲಿ ಹಗಲುಗಳು ದೀರ್ಘವಾದುದರಿಂದ, ಸೂರ್ಯಾಸ್ತಮಾನವಾಗುವುದು ಏಳೂಮುಕ್ಕಾಲರ ಹೊತ್ತಿಗೆ. ಹೀಗಾಗಿ ಸಂಜೆಯ ಬಿಸಿಲು ಮೋಡಗಳ ಮೇಲೆ ತಂಪಾಗಿ ಹರಡಿಕೊಂಡಿತ್ತು. ಕೇವಲ ಹತ್ತು ಹದಿನೈದು ನಿಮಿಷಗಳಲ್ಲಿ ಮೋಡಗಳನ್ನು ತೂರಿಕೊಂಡು, ಹತ್ತೊಂಬತ್ತು ಇಪ್ಪತ್ತು ಸಾವಿರ ಅಡಿಗಳೆತ್ತರವನ್ನು ತಲುಪಿ ವಿಮಾನ ವೇಗವಾಗಿ ಧಾವಿಸತೊಡಗಿದಾಗ, ವಿಮಾನದ ಕೆಳಗೆ ಮೇರೆಯರಿಯದಂತೆ ಹಬ್ಬಿಕೊಂಡ ಬಿಳಿಮೋಡದ ನಾಡು, ಥಟ್ಟನೆ ಕ್ಷೀರಸಾಗರವಾಯಿತು. ಅದರ ಮೇಲೆ ಹಾರುವ ನಮ್ಮ ವಿಮಾನ ಹಾಲ್ಗಡಲಿನ ಮೇಲೆ ತೇಲುವ ರಾಜಹಂಸದಂತೆ ಭಾಸವಾಯಿತು. ಅಲ್ಲಲ್ಲಿ ದಳದಳವಾಗಿ ಹರಡಿಕೊಂಡ ಮೋಡಗಳು, ಕೆಲವೆಡೆ ವಿವಿಧಾಕಾರಗಳಲ್ಲಿ ಏರಿ ಇಳಿದು ಅವರ್ಣನೀಯವಾದ ಶಿಲ್ಪ ಕಲಾಕೃತಿಗಳನ್ನು ನಿರ್ಮಿಸುತ್ತ, ಸಂಜೆಯ ಸೂರ‍್ಯನ ಕಿರಣಗಳ ಮಾಂತ್ರಿಕ ಸ್ಪರ್ಶದಿಂದ ಅದ್ಭುತವಾದ ವರ್ಣವಿಲಾಸದಿಂದ ಶೋಭಿಸತೊಡಗಿದವು. ಈ ವಿವಿಧ ವರ್ಣರಂಜಿತವಾದ ಮೇಘಸಮುದ್ರದ ನೆಲೆಯಿಂದ ವಿಮಾನ ಅವತರಣಗೊಂಡಂತೆ, ದೂರದಲ್ಲಿ ಚಿಕಾಗೋ ಮಹಾನಗರದ ಅಸಂಖ್ಯ ದೀಪಮಾಲೆಗಳು ಗೋಚರಿಸತೊಡಗಿದವು. ಹತ್ತಿರಕ್ಕೆ ಹತ್ತಿರಕ್ಕೆ ಬಂದಂತೆ  ಚಿಕಾಗೋದ ಝಗಝಗಿಸುವ ದೀಪಗಳ ನೇರ ದಾರಿಗಳು, ರೇಖಾಗಣಿತದ ನಕ್ಷೆಗಳಂತೆ ಕಂಗೊಳಿಸಿದವು. ‘ಇದೀಗ ನಮ್ಮ ವಿಮಾನ ಚಿಕಾಗೋದ ಮಿಡ್‌ವೇ ಏರ್‌ಪೋರ್ಟಿನಲ್ಲಿ ಇಳಿಯಲಿದೆ. ಚಿಕಾಗೋ ಕಾಲ ಮಾನದ ಪ್ರಕಾರ ಈಗ ಸಮಯ ಸಂಜೆ ಏಳುಗಂಟೆ’’ – ಎಂದು ಸುಮಧುರ ಕಂಠವೊಂದು ಘೋಷಿಸಿತು. ಎಂಟು ಗಂಟೆ ಐದು ನಿಮಿಷ ತೋರಿಸುತ್ತಿದ್ದ ನನ್ನ ಕೈ ಗಡಿಯಾರವನ್ನು, ಒಂದು ಗಂಟೆ ಹಿಂದಕ್ಕೆ ತಿರುಗಿಸಿದೆ. ಏನಾಶ್ಚರ್ಯ! ನಾನು ಡೆಟ್ರಾಯಿಟ್ ಬಿಟ್ಟಾಗ ಏಳುಗಂಟೆ, ಚಿಕಾಗೊ ತಲುಪಿದಾಗಲೂ ಅದೇ ಏಳುಗಂಟೆ. ಮುನ್ನೂರು ಮೈಲಿಗಳ ಪಯಣದ ನಂತರವೂ ಕಾಲದ ದೃಷ್ಟಿಯಿಂದ ಏನೂ ವ್ಯತ್ಯಾಸವಾಗಿಲ್ಲ – ಅಂದುಕೊಂಡೆ. ಆದರೆ ‘ದೇಶ’ದ ದೃಷ್ಟಿಯಿಂದ ಇಲ್ಲಿನ ಕಾಲಮಾನ, ನಾನು ಹೊರಟ ಸ್ಥಳಕ್ಕಿಂತ ಒಂದು ಗಂಟೆ ಹಿಂದೆ. ಪಶ್ಚಿಮಾಭಿಮುಖವಾಗಿ ಪ್ರಯಾಣಮಾಡುತ್ತ ಮಾಡುತ್ತ, ಕಾಲದಲ್ಲಿ ಇದೇ ಬಗೆಯ ವ್ಯತ್ಯಾಸವಾಗುತ್ತದೆ ಅನ್ನುವುದು ಕ್ರಮೇಣ ನನ್ನ ಅನುಭವಕ್ಕೆ ಬಂದ ಸಂಗತಿಯಾಯಿತು.

ವಾಸ್ತವವಾಗಿ ನನ್ನ ‘ಸೂತ್ರಧಾರ’ರಾದ ಹರಿಹರೇಶ್ವರ ಅವರ ವೇಳಾಪಟ್ಟಿಯ ಪ್ರಕಾರ ಚಿಕಾಗೋದಲ್ಲಿ ನನ್ನನ್ನು ಬರಮಾಡಿಕೊಳ್ಳಬೇಕಾದವರು ಶ್ರೀ ಜಯಸ್ವಾಮಿಯವರು. ಆದರೆ ನಾನಿಳಿಯುವ ಈ ಮಿಡ್‌ವೇ ಏರ್‌ಪೋರ್ಟಿಗೆ, ಜಯಸ್ವಾಮಿಯವರ ಮನೆ ಸುಮಾರು ಅರುವತ್ತು ಮೈಲಿ ದೂರದಲ್ಲಿರುವ ಕಾರಣ  ಅವರು ನನ್ನನ್ನು ಬರಮಾಡಿಕೊಳ್ಳುವ ಜವಾಬ್ದಾರಿಯನ್ನು, ಈ ಏರ್‌ಪೋರ್ಟಿಗೆ ಇಪ್ಪತ್ತೈದು ಮೈಲಿ ದೂರದಲ್ಲಿ ಮನೆ ಮಾಡಿಕೊಂಡಿರುವ ಅವರ ಸ್ನೇಹಿತರಾದ ಶ್ರೀ ವಿಶ್ವನಾಥ್ ಅವರಿಗೆ ವಹಿಸಿದ್ದರು. ಇದರಿಂದಾಗಿ ಶ್ರೀ ವಿಶ್ವನಾಥ್ ಅವರೇ ನನಗೆ ಪರಿಚಯ ಹೇಳಿಕೊಂಡು ತಮ್ಮ ಕಾರಿನಲ್ಲಿ ಚಿಕಾಗೋದ ಉಪನಗರವಾದ ನೇಪರ್‌ವಿಲೆ ಎಂಬ ಊರಿನ ತಮ್ಮ ಮನೆಗೆ ಕರೆದುಕೊಂಡು ಹೋದರು.

ಶ್ರೀ ವಿಶ್ವನಾಥ್ ಅವರು ಎಂಜಿನಿಯರ್. ಬೆಂಗಳೂರಿನಿಂದ ಅಮೆರಿಕಾಕ್ಕೆ ಬಂದೇ ಇಪ್ಪತ್ತು ವರ್ಷಗಳಾಯಿತಂತೆ. ಅಮೆರಿಕಾದ ಹಲವು ಕಡೆ ಕೆಲಸ ಮಾಡಿದ ಇವರು, ಚಿಕಾಗೋಗೆ ಬಂದು ಕೇವಲ ಎರಡು ವರ್ಷವಾಯಿತಂತೆ. ಅವರದೂ ಭಾರೀ ಮನೆ. ಹಾಗೆಯೇ ದೊಡ್ಡ ಸಂಸಾರ. ಅವರ ಮಕ್ಕಳು, ಅವರ ತಮ್ಮನ ಮಕ್ಕಳು ಎಲ್ಲಾ ಜತೆಗೇ ಇದ್ದಾರೆ. ಮಧ್ಯವಯಸ್ಸಿನ, ಸಮತೂಕದ, ಮೃದುಭಾಷಿಯಾದ ವಿಶ್ವನಾಥ್ ಅವರದು ಒಂದು ಬಗೆಯ ಶಿಸ್ತಿನ ಹಾಗೂ ಭಾರತೀಯ ಸಂಪ್ರದಾಯವನ್ನು ಉಳಿಸಿಕೊಳ್ಳುವುದು ಅಗತ್ಯವೆಂಬ ಮನೋಧರ್ಮ. ಅವರ ಮನೆಯಲ್ಲಿ ಎಲ್ಲರೂ ಮಕ್ಕಳಾದಿಯಾಗಿ ಕನ್ನಡದಲ್ಲೇ ಮಾತನಾಡುತ್ತಾರೆ. ತಮ್ಮ ಮನೆಯಲ್ಲಿ ಎಲ್ಲರೂ ಕನ್ನಡದಲ್ಲೇ ಮಾತನಾಡಬೇಕೆಂದು ಅವರು ‘ಶಾಸನ’ ಮಾಡಿದಂತೆ ಕಾಣುತ್ತದೆ. ಅಮೆರಿಕಾದಲ್ಲೇ ಹುಟ್ಟಿ ಬೆಳೆದ ಅವರ ಹದಿನೆಂಟು ವರ್ಷ ವಯಸ್ಸಿನ ಮಗನೂ ಸೊಗಸಾದ ಕನ್ನಡದಲ್ಲಿ ಮಾತನಾಡುತ್ತಾನೆ. ನಾನು ಇದುವರೆಗೂ (ಮತ್ತು ಅನಂತರವೂ) ನಾನಿದ್ದ ಹಲವಾರು ಕನ್ನಡಿಗರ ಮನೆಗಳಲ್ಲಿ, ಅಪ್ಪ-ಅಮ್ಮಂದಿರು ಕನ್ನಡದಲ್ಲಿ ಮಾತನಾಡಿಸಿದರೆ, ಮಕ್ಕಳು ಉತ್ತರ ಕೊಡುವುದು ಇಂಗ್ಲಿಷ್‌ನಲ್ಲೇ. ನಿಜ, ಈ ಮಕ್ಕಳ ಬಹುಪಾಲಿನ ವ್ಯಾವಹಾರಿಕ ಸಂಪರ್ಕಗಳಲ್ಲಿ ಇಂಗ್ಲಿಷಲ್ಲದೆ ಬೇರೊಂದು ಭಾಷೆ ಇಲ್ಲ; ಆದರೆ ಮನೆಯೊಳಗೆ ತಂದೆ-ತಾಯಂದಿರ ಜತೆಗಾದರೂ, ಈ ಮಕ್ಕಳು ಕನ್ನಡದಲ್ಲಿ ಮಾತನಾಡಿದ್ದನ್ನು ನಾನು ಅಷ್ಟಾಗಿ ಕಾಣಲಿಲ್ಲ. ಅವರು ಕನ್ನಡದಲ್ಲಿ ಮಾತನಾಡಿಸಿದರೂ ಅವುಗಳಿಗೆ ಕನ್ನಡ ಅರ್ಥವಾದರೂ – ಅವು  ಇಂಗ್ಲಿಷ್‌ನಲ್ಲೇ ಉತ್ತರ ಕೊಡುತ್ತವೆ. ಹೀಗಿದೆ ಅಮೆರಿಕಾದ ಕನ್ನಡಿಗರ ಮನೆಯೊಳಗಣ ಭಾಷಾ ಸಮಸ್ಯೆ! ಮಕ್ಕಳು ಮನೆಯಾಚೆ ಹೇಗಾದರೂ ಇರಲಿ; ಆದರೆ ಮನೆಯ ಒಳಗೆ ಮಾತ್ರ, ಅವು ಕನ್ನಡದಲ್ಲಿಯೇ ವ್ಯವಹರಿಸುವುದು ಅಗತ್ಯವೆಂಬ ಸಂಗತಿಯನ್ನು  ಮನದಟ್ಟು ಮಾಡಿಕೊಡಬೇಕಾಗಿದೆ. ತಮ್ಮ ತಮ್ಮ ಮನೆಗಳಲ್ಲಿ ಮಕ್ಕಳು ಕನ್ನಡದಲ್ಲಿ ಮಾತನಾಡದೆ ಇರುವಂಥ ಪರಿಸ್ಥಿತಿಗೆ ತಂದೆ- ತಾಯಂದಿರೇ ಕಾರಣ ಎಂದು ನನ್ನ ಭಾವನೆ. ಅಮೆರಿಕಾದಲ್ಲಿ, ಮಕ್ಕಳ ವಿಚಾರಕ್ಕೆ ಯಾವುದನ್ನೂ ಕಡ್ಡಾಯ ಅಥವಾ ಬಲವಂತ ಮಾಡಬಾರದೆನ್ನುವುದು ಅಲ್ಲಿನ ನಾಗರಿಕತೆಯ ಅಂಗೀಕೃತ ಶಿಷ್ಟಾಚಾರವೇನೋ ಹೌದು. ಆದರೆ ತಮ್ಮ ಮಾತೃಭಾಷೆಯ ವಿಚಾರದಲ್ಲಿ ಈ ಒಂದು ಗೆರೆಯನ್ನು ದಾಟುವುದು ತಪ್ಪೇನಲ್ಲ. ಶ್ರೀ ವಿಶ್ವನಾಥ್ ಅವರು ಈ ಬಗ್ಗೆ ಅಮೆರಿಕಾದ ಶಿಷ್ಟಾಚಾರವನ್ನು ಒಪ್ಪಿಕೊಳ್ಳದೆ ಇರುವುದು ನನಗೆ ತುಂಬ ಉಚಿತವಾಗಿ ತೋರಿತು.

ಚಿಕಾಗೋದಲ್ಲಿ ನಾನಿದ್ದನ್ನು ನಾಲ್ಕು ದಿನಗಳ ಕಾಲ. ಆದರೆ ತುಂಬ ಕೆಟ್ಟ ಹವಾಮಾನದ ಕಾರಣದಿಂದ, ನನ್ನ ಸಂಚಾರ ಬಹುಮಟ್ಟಿಗೆ ಸ್ಥಗಿತಗೊಳ್ಳುವಂತಾ ಯಿತು. ನಾನು ಚಿಕಾಗೋ ತಲುಪಿದ ದಿನ ಭಾರೀ ಶೆಖೆ; ಮರುದಿನ ಧೋ ಧೋ ಎಂದು ಸುರಿಯುವ ಮಳೆ. ಈ ಪರಿಸರದ ಹವಾಮಾನ ಈ ಬಗೆಯ ವೈಪರೀತ್ಯಗಳಿಂದ ಕೂಡಿರುತ್ತದೆಂದು ವಿಶ್ವನಾಥ್ ತಿಳಿಸಿದರು. ಇಲ್ಲಿ ಮೂರು W ಗಳನ್ನು ನಂಬಬಾರದಂತೆ Wife, Weather and Work. ಮದುವೆಯಾದ ಹೆಂಡತಿ  (Wife) ಯಾವಾಗ ಗಂಡನನ್ನು ಬಿಟ್ಟು ಹೋಗುತ್ತಾಳೋ ಹೇಳಲು ಬಾರದು; ಇಲ್ಲಿನ ಹವಾಮಾನ (Weather) ಯಾವ ಯಾವ ರೂಪತಾಳುತ್ತದೋ ಹೇಳಲು ಬಾರದು; ಮತ್ತು ಕೆಲಸವೂ (Work) ಅಂದರೆ, ಉದ್ಯೋಗ ಕೂಡ ಅನಿಶ್ಚಿತ. ಮೇಲಿನ ಅಧಿಕಾರಿ ಅಥವಾ ಕಂಪನಿ ಯಾವಾಗ ಯಾರನ್ನು ಯಾಕೆ ಕೆಲಸದಿಂದ ತೆಗೆದು ಹಾಕಬಹುದೋ ಹೇಳಲು ಬಾರದು.

ಹಿಡಿದ ಮಳೆಯೊಳಗೇ ವಿಶ್ವನಾಥ್ ಅವರ ಅಣ್ಣನ ಮಗಳು ಲತಾ ನನ್ನನ್ನು ಚಿಕಾಗೋ ತೋರಿಸಲು ಕರೆದುಕೊಂಡು ಹೊರಟಳು. ಡ್ರೈವ್ ಮಾಡುತ್ತಿದ್ದ ಅವಳ ಬದಿಗೆ, ಶ್ರೀಮತಿ ವಿಶ್ವನಾಥ್ – ವಿಜಯ, ಹಿಂದಿನ ಸೀಟಿನಲ್ಲಿ ನಾನು. ನೇಪರ್‌ವಿಲೆಯಿಂದ ಚಿಕಾಗೋ ನಗರಕ್ಕೆ ನಲವತ್ತೈದು ಮೈಲಿ. ದಾರಿಯುದ್ದಕ್ಕೂ ಸುರಿವ ಮಳೆಯ ಮಬ್ಬಿನಲ್ಲೇ, ಚಿಕಾಗೋ ನಗರದ ಮಹಾ ಗಗನಚುಂಬಿಗಳು, ಆಕಾಶಪಟದಲ್ಲಿ ಬರೆದ, ಮಾಸಿದ ಚಿತ್ರಗಳಂತೆ ತೋರಿದವು. ವಿಸ್ತಾರವಾಗಿ ಅರ್ಧ ಚಂದ್ರಾಕಾರವಾಗಿ ಹರಹಿಕೊಂಡ ಮಿಚಿಗನ್ ಸರೋವರದ ಅಂಚಿನಲ್ಲಿಯೇ, ಎತ್ತರದ ಗಗನಚುಂಬಿಗಳಿಗೂ ಸರೋವರಕ್ಕೂ ನಡುವಣ ದಾರಿಯಲ್ಲಿ ಸಾಗಿತು ನಮ್ಮ ಪ್ರಯಾಣ. ಆ ಸರೋವರದ ಮೇಲಂತೂ, ನೂರಲ್ಲ ಸಾವಿರ ದೋಣಿಗಳು, ತೀರದ ಉದ್ದಕ್ಕೂ ನಿಂತಿದ್ದವು. ಈ ದೋಣಿಗಳನ್ನು ಅವುಗಳ ಒಡೆಯರು, ಹೀಗೆ ಪಾರ್ಕ್ ಮಾಡಿದ್ದಾರೆಂದೂ, ಒಳ್ಳೆಯ ಹವಾಮಾನಗಳಲ್ಲಿ ಅವುಗಳನ್ನು ಬಿಚ್ಚಿ ಹಾಯಿಸಿಕೊಂಡು, ಈ ಸರೋವರದ ಜಲವಿಸ್ತಾರದ ಮೇಲೆ ವಿಹಾರ ಹೋಗುತ್ತಾರೆಂದೂ ತಿಳಿಯಿತು. ಈ ಸರೋವರದಂಚಿನಲ್ಲಿ ಹಾದು ನಾವು  ಬಹಾಯ್ ಮಂದಿರದ ಬಳಿ ಬಂದೆವು. ಆ ಪಿರಿಪಿರಿ ಮಳೆಯಲ್ಲಿ ಕಾರಿಳಿದು, ಅತ್ಯಂತ ಭವ್ಯವೂ ವರ್ಣಮಯವೂ ಆದ ಗೋಪುರಾಕಾರದ ಬಹಾಯ್ ಮಂದಿರವನ್ನು ಪ್ರವೇಶಿಸಿದೆವು.  ಒಳಗೆ ವೃತ್ತಾಕಾರದ ಸುಖಾಸನಗಳ ಮೇಲೆ ಕೂತ ಕೆಲವರು ನಿಶ್ಯಬ್ದವಾಗಿ ಧ್ಯಾನದಲ್ಲಿ ತೊಡಗಿದ್ದರು. ಒಳಗಿನ ಗೋಲಾಕಾರದ ಗಾಜಿನ ಗುಮ್ಮಟ ತುಂಬ ವರ್ಣಮಯವಾಗಿತ್ತು. ಬಹಾಯ್ ಧರ್ಮದ ಈ ಪ್ರಾರ್ಥನಾ ಮಂದಿರದಲ್ಲಿ ಯಾವ  ದೇವತಾ ವಿಗ್ರಹಗಳೂ ಇಲ್ಲ. ‘ಬಹಾಯ್ ‘ ಎಂದರೆ ಭಗವಂತನ ವೈಭವ ಎಂದು ಅರ್ಥ. ಈ ಮತ – ಧರ್ಮದ ಸ್ಥಾಪಕ ಬಹಾವುಲ್ಲಾ, ಹನ್ನೆರಡನೆಯ ಶತಮಾನದಂದು, ಟೆಹರಾನ್‌ನಲ್ಲಿದ್ದ ಒಬ್ಬ ಸಂತ. ಈತ ಬೋಧಿಸಿದ್ದು ವಿಶ್ವಧರ್ಮವನ್ನು. ದೇವರು ಒಬ್ಬನೇ, ಎಲ್ಲ ಧರ್ಮಗಳ ಗುರಿಯೂ ಆ ಭಗವಂತನೇ. ಆ ಭಗವಂತನ ಹೆಸರಿನಲ್ಲಿ ಎಲ್ಲ ಮನುಷ್ಯರೂ ಒಂದಾಗಿ ಬದುಕುವುದೇ ನಿಜವಾದ ಧರ್ಮ. ಇದೇ ಬಹಾಯ್ ತತ್ವ. ಈ ತತ್ವ ಭಾರತೀಯರಾದ ನಮಗೇನೂ ಹೊಸದಲ್ಲ.

ಚಿಕಾಗೋದ ಕಲಾಸಂಸ್ಥೆ – ಚಿಕಾಗೋ ಇನ್‌ಸ್ಟಿಟ್ಯೂಟ್ ಆಫ್ ಆಟ್ಸ್  – ಒಂದು ಅದ್ಭುತವಾದ ಕಲಾಗಾರ. ಮೂರು ಹಂತಗಳಲ್ಲಿ ವ್ಯಾಪಕವಾದ ಈ ಕಲಾಮಂದಿರದಲ್ಲಿ ಜಗತ್ತಿನ ಚಿತ್ರ – ಶಿಲ್ಪ – ವೈವಿಧ್ಯವನ್ನೆಲ್ಲ ಕೂಡಿಡಲಾಗಿದೆ. ಭಾರತೀಯ ಶಿಲ್ಪ – ಚಿತ್ರ ವಿಭಾಗ ಮಾತ್ರ ನಿರಾಶೆ ಮೂಡಿಸುವಂತಿದೆ. ಚಿಕಾಗೋದಲ್ಲಿರುವ ಅಕ್ವೇರಿಯಂ ಅಥವಾ ಮೀನಾಗಾರ ಅತಿ ದೊಡ್ಡ ಆಕರ್ಷಣೆಯಾಗಿದೆ. ಮತ್ಸ್ಯ ಪ್ರಪಂಚದ ತಳಾತಳವನ್ನು ಹೊಕ್ಕು ಹೊರಬರುವ ಅನುಭವವನ್ನು ಇದು ಕೊಡುತ್ತದೆ. ಇದೆಲ್ಲಕ್ಕಿಂತ ಬಹುದೊಡ್ಡ ಆಕರ್ಷಣೆಯೆಂದರೆ, ‘ಸಿಯರ್ಸ್ ಟವರ್’ ಎಂಬ ಬಹು ದೊಡ್ಡ ಕಟ್ಟಡ. ಇದನ್ನು ನೋಡಲು ನಾನು ಮಳೆ ನಿಂತು ಹವಾಮಾನ ತಿಳಿಯಾಗುವ ಅವಕಾಶಕ್ಕಾಗಿ ಕಾಯಬೇಕಾಯಿತು.

೧೭.೯.೧೯೮೭, ಅಮೆರಿಕಾದ ಇತಿಹಾಸದಲ್ಲಿ ತುಂಬ ಮಹತ್ವದ ದಿನ. ಅಮೆರಿಕಾ ಸಂವಿಧಾನ ರಚನೆಯಾಗಿ ಈ ದಿನಕ್ಕೆ ಎರಡು ನೂರು ವರ್ಷಗಳು ತುಂಬಿದವಂತೆ. ಈ ದಿನದ ಉತ್ಸವಗಳನ್ನು ನಾನು, ಮಳೆಯ ಕಾರಣದಿಂದ ಮನೆಯಲ್ಲಿ ಕೂತು ಟಿ.ವಿ.ಯಲ್ಲಿ ನೋಡಿದೆ. ಇದರ ಜತೆಗೆ ಇನ್ನೂ ಒಂದು ಸ್ವಾರಸ್ಯದ ಸಂಗತಿ ಟಿ.ವಿ.ಯಲ್ಲಿ  ಈ ದಿನ ಪ್ರಸಾರವಾಗುತ್ತಿದೆ. ಅದೆಂದರೆ, ಅಮೆರಿಕಾದ ಸುಪ್ರೀಂಕೋರ್ಟಿಗೆ ಮುಖ್ಯ ನ್ಯಾಯಾಧೀಶನಾಗಿ ಅಮೆರಿಕಾದ ಅಧ್ಯಕ್ಷರಿಂದ ನಾಮಕರಣಗೊಂಡ ರಾಬರ್ಟ್ ಬೋರ್ಕರ್‌ಗೆ ಸಂಬಂಧಿಸಿದ್ದು. ಅಧ್ಯಕ್ಷರು ಮಾಡಿರುವ ಈ ನೇಮಕ ಸ್ಥಿರವಾಗಬೇಕಾದರೆ, ಅದನ್ನು ಅಮೆರಿಕಾದ ಸೆನೆಟ್ ಸಭೆ ಒಪ್ಪಬೇಕು. ಆದರೆ ಈತನ ನೇಮಕವನ್ನು ಕುರಿತು ಸಾಕಷ್ಟು ವಿರೋಧವಾದ ಪ್ರತಿಕ್ರಿಯೆಗಳು ಕಾಣಿಸಿಕೊಂಡಿವೆ. ಈತ ವರ್ಣಭೇದನೀತಿಯ ಪ್ರತಿಪಾದಕ; ಆದ ಕಾರಣ, ಸುಪ್ರೀಂಕೋರ್ಟಿಗೆ ಈತ ಮುಖ್ಯ ನ್ಯಾಯಾಧೀಶನಾದರೆ, ಈತನಿಂದ ಸಂವಿಧಾನಬದ್ಧವಾದ ನ್ಯಾಯ ದೊರಕಲಾರದು; ಈತ ನಿಜವಾದ ಕ್ರಿಶ್ಚಿಯನ್ ಅಲ್ಲ; ಮೂಲತಃ ಸಂದೇಹವಾದಿ; ಈತ ಇದುವರೆಗೂ ನ್ಯಾಯಾಧೀಶನಾಗಿದ್ದ ಹಂತಗಳಲ್ಲಿ ಕೊಟ್ಟಿರುವ ತೀರ್ಪುಗಳು ಸಮರ್ಪಕವಾಗಿಲ್ಲ; ಈ ಕಾರಣಗಳಿಂದ ಅಮೆರಿಕಾದ ಅಧ್ಯಕ್ಷರು, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶ ಸ್ಥಾನಕ್ಕೆ ಈತನನ್ನು ನಾಮಕರಣ ಮಾಡಿರುವುದು ಸರಿ ಅಲ್ಲ. ಇವು ಈತನ ನಾಮಕರಣವನ್ನು ಕುರಿತು ಹೊರಟಿರುವ ವಿರೋಧ ಪ್ರತಿಕ್ರಿಯೆಗಳ ಸಾರಾಂಶ. ಇದರ ಜತೆಗೆ ಈ ನಾಮಕರಣವನ್ನು ಕುರಿತ ಸಮರ್ಥನೆಯ ಪ್ರತಿಕ್ರಿಯೆಗಳೂ ಇಲ್ಲದಿಲ್ಲ. ಈ ಹಿನ್ನೆಲೆಯಲ್ಲಿ, ಹೀಗೆ ಅಮೆರಿಕಾದ ಅಧ್ಯಕ್ಷರಿಂದ ಈ ಸ್ಥಾನಕ್ಕೆ ನಾಮಕರಣಗೊಂಡ ರಾಬರ್ಟ್‌ಬೋರ್ಕರ್, ಸೆನೆಟ್‌ನ ನ್ಯಾಯಾಂಗ ಸಮಿತಿಯ ಮುಂದೆ, ಆ ಸಮಿತಿಯು ಈತನ ಸಮಸ್ತ ಪೂರ್ವಚರಿತ್ರೆಯ ದಾಖಲೆಗಳೊಂದಿಗೆ ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ, ತನ್ನನ್ನು ತಾನು ಸಮರ್ಥಿಸಿಕೊಳ್ಳಬೇಕಾಗಿದೆ. ಈ ಸಮರ್ಥನೆಯ ದೃಶ್ಯವನ್ನು ನಾನು ಟಿ.ವಿ.ಯಲ್ಲಿ ನೋಡಿದೆ.

ನೇಪರ್‌ವಿಲೆಯ ವಿಶ್ವನಾಥ್ ಅವರ ಮನೆಯಲ್ಲಿ ಎರಡು ದಿನ ಇದ್ದ ನನ್ನನ್ನು ಶ್ರೀ ಜಯಸ್ವಾಮಿಯವರು, ಅಲ್ಲಿಂದ ಐವತ್ತು ಮೈಲಿಗಳ ದೂರದ ‘ಲೇಕ್ ಫಾರೆಸ್ಟ್’ ದಲ್ಲಿರುವ ತಮ್ಮ ಮನೆಗೆ ಕರೆದುಕೊಂಡು ಹೋದರು. ಅವರಿರುವ ‘ಲೇಕ್ ಫಾರೆಸ್ಟ್’ ಎಂಬುದು, ನಿಜವಾಗಿಯೂ ಹೆಸರಿಗೆ ತಕ್ಕಂತೆ ಇದೆ. ಅವರ ಮನೆ ಇರುವುದೇ ಮಿಚಿಗನ್ ಸರೋವರದ ತೀರಕ್ಕೆ ಒಂದು ಮೈಲಿ ಸಮೀಪದ ದಟ್ಟವಾದ ಹಸಿರು ಕಾಡಿನ ಮಧ್ಯೆ. ಚಿಕಾಗೋ ನಗರಕ್ಕೆ ಮೂವತ್ತು – ನಲವತ್ತು ಮೈಲಿ ದೂರದ ಈ ಪುಟ್ಟ ಊರಿನ ಜನಸಂಖ್ಯೆ ಕೇವಲ ಮೂರುಸಾವಿರ. ಈ ಊರು, ದಟ್ಟವಾದ ಕಾಡಿನ ಪ್ರಶಾಂತ ಮೌನದೊಳಗಿರುವುದರಿಂದ, ಜಯಸ್ವಾಮಿಯವರ ದೊಡ್ಡಮನೆ ಸುತ್ತ ಹಚ್ಚಗೆ ಮೆತ್ತಿಕೊಂಡ ಹಸುರ ನಡುವೆ ಪ್ರಶಾಂತ – ರಮ್ಯವಾಗಿದೆ.

ಇಂಥ ಪ್ರಶಾಂತವಾದ ಮನೆಯಲ್ಲಿ ಬೆಳಗ್ಗೆ ಎದ್ದು ಕಾಫಿ ಕುಡಿಯುತ್ತ, ಅವತ್ತು ಬಂದ ಒಂದು ರಾಶಿ ದಿನಪತ್ರಿಕೆಗಳಲ್ಲಿ ಒಂದನ್ನು ಕೈಗೆತ್ತಿಕೊಂಡು ನೋಡಿದೆ. ಆ ಪತ್ರಿಕೆಯ ಹೆಸರು ಚಿಕಾಗೋ ಟ್ರಿಬ್ಯೂನಲ್. ನನ್ನ ಗಮನ ಸೆಳೆದದ್ದು ಮೂರು ಸುದ್ದಿಗಳು : ಒಂದು, ಅಮೆರಿಕಾದ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶನ ಸ್ಥಾನಕ್ಕೆ ಅಮೆರಿಕಾದ ಅಧ್ಯಕ್ಷರಿಂದ ನಾಮಕರಣಗೊಂಡ ರಾಬರ್ಟ್ ಬೋರ್ಕರ್ ಅವರು, ಅಮೆರಿಕಾದ ಸೆನೆಟ್ ಸಭೆಯ ನ್ಯಾಯಾಂಗ ಸಮಿತಿಯ ಮುಂದೆ, ಉತ್ತರ ಕೊಡುತ್ತ, ತನ್ನನ್ನು ಟೀಕಿಸುವವರು ತನ್ನನ್ನು ತಪ್ಪಾಗಿ ತಿಳಿದಿದ್ದಾರೆ ಎಂದು ವಾದಿಸಿದ್ದಾನೆ. ಸೆನೆಟರ್ ಜೋಸೆಫ್ ಬಿಡನ್ ಅವರ ಅಧ್ಯಕ್ಷತೆಯ ಈ ವಿಚಾರಣಾ ಸಮಿತಿ ತನ್ನ ವಿಚಾರಣೆಯನ್ನು ಇದೀಗ ಮುಗಿಸಿ, ಮತ್ತೆ ಮುಂದಿನ ಸೋಮವಾರದಿಂದ – ಅಂದರೆ ೨೧.೯.೧೯೮೭ರಿಂದ ರಾಬರ್ಟ್ ಬೋರ್ಕರ್ ಅವರು, ಅಮೆರಿಕಾದ ಬಾರ್ ಕೌನ್ಸಿಲ್ ಪ್ರತಿನಿಧಿಗಳ ಎದುರು ತಮ್ಮನ್ನು ತಾವು ಸಮರ್ಥಿಸಿಕೊಳ್ಳಬೇಕಾಗಿದೆ.

ಎರಡನೆಯ ಸುದ್ದಿ ಅಮೇರಿಕಾದಲ್ಲಿ ಈಗ ಪ್ರವಾಸ ಮಾಡುತ್ತಿರುವ ಕ್ರೈಸ್ತ ಜಗದ್ಗುರು, ಜಾನ್‌ಪಾಲ್ ಪೋಪ್ ಅವರು, ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಏಯ್ಡ್ಸ್ ರೋಗಿಗಳನ್ನು ತಮ್ಮ ಕೈಯಿಂದ ಮುಟ್ಟಿ ಸಂತೈಸಿ ಅವರ ಪರವಾಗಿ ಪರಮಾತ್ಮನಲ್ಲಿ  ಪ್ರಾರ್ಥನೆಯಲ್ಲಿ ಸಲ್ಲಿಸಿದರು. ಸುಮಾರು ಅರವತ್ತು ಏಯ್ಡ್ಸ್ ರೋಗಿಗಳಿಗೆ ಹಾಗೂ ಅವರ ಕುಟುಂಬದವರಿಗೆ, ನಿನ್ನೆಯ ಸಂಜೆಯ ಸಭೆಯಲ್ಲಿ ಯಾವುದೇ ಷರತ್ತಿಲ್ಲದೆ ದೈವೀ ಸಂದೇಶ ಮತ್ತು ಕ್ಷೇಮವನ್ನು ಅವರಿಗೂ ವಿಸ್ತರಿಸುವುದಾಗಿ ಭರವಸೆ ನೀಡಿದರು. ಈ ರೋಗಿಗಳಲ್ಲಿ ಕೇವಲ ಐದು ವರ್ಷದ ಬಾಲಕನೂ ಇದ್ದುದನ್ನು ಕಂಡು ಜಗದ್ಗುರುಗಳು ತುಂಬಾ ವ್ಯಥೆಪಟ್ಟರು.

ಮೂರನೆಯದು: ಇಬ್ಬರು ಲಾಯರ್‌ಗಳು ತಮ್ಮ ಕೇಸಿನ ಪರವಾಗಿ ಮನವೊಲಿಸಿ ಕೊಳ್ಳಲು ನ್ಯಾಯಾಧೀಶರಿಗೆ ಒಂದಷ್ಟು ‘ಸಂಭಾವನೆ’ ಕೊಡಬೇಕಾದ ಪರಿಸ್ಥಿತಿ ಒದಗಿದ ಕಾರಣ, ತಮ್ಮ ಕಕ್ಷಿದಾರರಿಂದ ಎರಡು  ಸಾವಿರದ ಮುನ್ನೂರು ಡಾಲರ್ ಲಂಚವನ್ನು ಪಡೆದುದಾಗಿ ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆಯನ್ನು ನೀಡಿದ್ದಾರೆ.

ಇದರ ಜತೆಗೆ, ಎಂದಿನಂತೆ ಕೊಲೆ-ಸುಲಿಗೆ, ಅತ್ಯಾಚಾರಗಳ ಸುದ್ದಿಯೂ ಸಾಕಷ್ಟಿದೆ. ಈ ಕೆಲವು ಸುದ್ದಿಗಳು ಪ್ರಸ್ತುತ ಅಮೆರಿಕಾದ ಸಮಾಜದ ಮೇಲೆ, ಝಗ್ಗನೆ ಬಿಡುದೀಪವನ್ನು ಹಾಯಿಸುತ್ತವೆ.

ಪತ್ರಿಕೆಯನ್ನು ತಿರುವಿಹಾಕಿ ಹೊರಗೆ ನೋಡಿದೆ. ದಟ್ಟವಾದ ಹಸುರಿನ ಮೇಲೆ ಬೆಳಗಿನ ಬಿಸಿಲು ಬಿದ್ದು ಹೊಳೆಯುತ್ತಿತ್ತು. ಮೂರು ದಿನದಿಂದ ಹಿಡಿದ ಮಳೆ ಬಿಟ್ಟು ಆಕಾಶ ನಿರ್ಮಲವಾಗಿತ್ತು. ವಾತಾವರಣ ಪ್ರಸನ್ನವೂ ತೇಜೋಮಯವೂ ಆಗಿತ್ತು.

ಸುಮಾರು ಹತ್ತು ಗಂಟೆಯ ವೇಳೆಗೆ, ಶ್ರೀಮತಿ ಜಯಸ್ವಾಮಿಯವರ ಜತೆ, ಅವರ ತಮ್ಮನ ಸಾರಥ್ಯದಲ್ಲಿ ಚಿಕಾಗೋ ನಗರದ ಕಡೆ ಹೊರಟೆ. ಮಳೆ ತೊಳೆದ ಹಸುರಿನ ಮೇಲೆ ಬಿದ್ದ ಬಿಸಿಲು ಮಾಡಿದ ಮೋಡಿಯನ್ನು ನೋಡುತ್ತಾ ಸುಮಾರು ಮೂವತ್ತು – ಮೂವತ್ತೈದು ಮೈಲಿ ಪ್ರಯಾಣ ಮಾಡಿ, ಮಾನವ ನಿರ್ಮಿತ ಮಹಾಸೌಧಶಿಖರಾರಣ್ಯವನ್ನು ಪ್ರವೇಶಿಸಿದೆವು. ರಸ್ತೆಯ ತುಂಬ ಕಿಕ್ಕಿರಿದ ವಾಹನಗಳ ಮಂದೆಯಲ್ಲಿ ಸಿಕ್ಕಿಕೊಂಡ ನಮ್ಮ ಗಾಲಿಗಳೂ ಸ್ಥಗಿತಗೊಂಡು, ಚಲನೆಯೇ ದುಸ್ತರವಾಯಿತು. ಕಡೆಗೆ ಈ ಚಕ್ರಗಳ ಚಕ್ರವ್ಯೂಹದಿಂದ ಪಾರಾಗಿ, ಚಿಕಾಗೋದ ಶ್ರೀ ರಾಮಕೃಷ್ಣಾಶ್ರಮವನ್ನು ಹುಡುಕಿಕೊಂಡು ಹೊರಟೆವು.

ಚಿಕಾಗೋ ನಗರವು ನನ್ನ ಮನಸ್ಸಿನಲ್ಲಿ ಬಹುಕಾಲದಿಂದಲೂ ಅಂಕಿತವಾಗಿರುವುದು ಶ್ರೀ ಸ್ವಾಮಿ ವಿವೇಕಾನಂದರು, ಆ ಮಹಾನಗರದಲ್ಲಿ ಸಮಾವೇಶಗೊಂಡ ಸರ್ವಧರ್ಮ ಸಮ್ಮೇಳನದ ಮಹಾಸಭೆ (ಪಾರ್ಲಿಮೆಂಟ್ ಆಫ್ ರಿಲಿಜನ್ಸ್) ಯಲ್ಲಿ ೧೮೯೩ನೇ ಸೆಪ್ಟೆಂಬರ್ ಹನ್ನೊಂದನೆಯ ದಿನಾಂಕ, ಅಪೂರ್ವವಾದ ಭಾಷಣ ಮಾಡಿ ಜಗತ್ತಿನ ಗಮನ ಹಾಗೂ ಗೌರವವನ್ನು ಭಾರತಕ್ಕೆ ಗೆದ್ದುಕೊಟ್ಟರೆಂಬ ಕಾರಣದಿಂದ. ಈ ಘಟನೆ, ಜಗತ್ತಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಚರಿತ್ರೆಯಲ್ಲಿ ಚಿನ್ನದ ಅಕ್ಷರಗಳಲ್ಲಿ ಬರೆದಿಡಬೇಕಾದದ್ದು. ಯಾಕೆಂದರೆ, ಮೊಟ್ಟಮೊದಲ ಬಾರಿಗೆ ಭಾರತದ ಪ್ರವಾದಿಯೊಬ್ಬ, ಪಶ್ಚಿಮ ರಾಷ್ಟ್ರಗಳಿಗೆ ಪೂರ್ವದ ಸಂದೇಶವನ್ನು ಮುಟ್ಟಿಸುವುದರ ಮೂಲಕ, ಜಗತ್ತಿನ ಸಾಂಸ್ಕೃತಿಕ ಪ್ರವಾಹಕ್ಕೆ ಭಾರತದ ವಿಚಾರಧಾರೆಯನ್ನು ಸೇರಿಸಿದ್ದು ಇಲ್ಲಿಯೇ; ಮತ್ತು ಶ್ರೀ ರಾಮಕೃಷ್ಣರ ಸರ್ವಧರ್ಮಸಮನ್ವಯ ತತ್ವವನ್ನು ಉದ್ಘೋಷಿಸಿ, ವಿವೇಕಾನಂದರು ಲೋಕವಿಖ್ಯಾತರಾದದ್ದು ಇಲ್ಲಿಯೇ. ಈ ಕಾರಣದಿಂದ ಅಂದು ಸ್ವಾಮೀಜಿ ಭಾಷಣ ಮಾಡಿದ ಆ ಸಭಾಭವನವನ್ನೂ, ಅವರು ಭಾಷಣ ಮಾಡಿದಾಗ ಅವರು ನಿಂತ ಆ ವೇದಿಕೆಯನ್ನೂ ನೋಡಬೇಕೆಂಬುದು ನನ್ನ ಮಹದಾಸೆಯಾಗಿತ್ತು. ಆ ಸಭಾಭವನ ಚಿಕಾಗೋದಲ್ಲಿ ಈಗ ರಾಮಕೃಷ್ಣಾಶ್ರಮ ಇರುವ ಪರಿಸರದಲ್ಲೆಲ್ಲೋ ಇರಬಹುದೆಂಬುದು ನನ್ನ ಕಲ್ಪನೆಯಾಗಿತ್ತು.

ಆಶ್ರಮದ ಮುಂದೆ ಕಾರು ನಿಂತಾಗ, ಕೆಳಗಿಳಿದು ನೋಡಿದೆ; ಒಂದು ಸಾಧಾರಣವಾದ ಕಟ್ಟಡದ ಮುಂದಿನ ಪ್ರಾಕಾರದ ಮೇಲೆ ‘ದಿ ವೇದಾಂತ ಸೊಸೈಟಿ’ ಎಂಬ ಬೋರ್ಡು ಹಾಕಲಾಗಿತ್ತು. ಅದರ ಕೆಳಗೆ ನಂ. No. 120, East Delavare Place, Chikago ಎಂದು ಬರೆದಿತ್ತು. ಅಗಲವಾದ ಗೇಟನ್ನು ತಳ್ಳಿಕೊಂಡು ಒಳಗೆ ಹೋಗಿ, ಕರೆಗಂಟೆಯನ್ನೊತ್ತಿದಾಗ, ತೆಳ್ಳನೆಯ, ಸೌಮ್ಯ ಮುಖದ, ಪ್ಯಾಂಟುಶರಟು ತೊಟ್ಟ ವ್ಯಕ್ತಿಯೊಬ್ಬರು ಬಾಗಿಲು ತೆರೆದು, ಶ್ರೀಮತಿ ಜಯಸ್ವಾಮಿಯವರನ್ನು ನೋಡಿ, ಮುಗುಳ್ನಕ್ಕು ‘ಓ, ನೀವಾ? ಬನ್ನಿ ಬನ್ನಿ, ಒಳಗೆ ಬನ್ನಿ’ – ಎಂದು ಶುದ್ಧ ಕನ್ನಡದಲ್ಲಿ ಮಾತನಾಡಿದ್ದನ್ನು ಕೇಳಿ ನನಗೆ ಏಕಕಾಲಕ್ಕೆ ಆಶ್ಚರ್ಯವೂ, ಸಂತೋಷವೂ ಉಂಟಾದುವು. ನಾವು ಒಳಗೆ ಹೋದನಂತರ ಅಲ್ಲಿದ್ದ ಪೀಠಗಳ ಕಡೆ ಕೈ ತೋರಿಸಿ ‘ಇಲ್ಲೇ ಕೂತಿರಿ, ಒಂದೈದು ನಿಮಿಷ, ಬಂದು ಬಿಟ್ಟೆ’ ಎಂದು ಹೇಳಿ ಒಳಕ್ಕೆ ಹೋದರು. ನಾವು ಕೂತ ವೆರಾಂಡದ ಬದಿಗೆ ಆಶ್ರಮದ ಪ್ರಾರ್ಥನಾ ಮಂದಿರ. ಒಳಕ್ಕೆ ಹೋಗಿ ನೋಡಿದೆವು. ಅಗಲವಾದ ಪೂಜಾ ವೇದಿಕೆಯ ಮೇಲೆ, ರಾಮಕೃಷ್ಣ ಪರಮಹಂಸರ, ಹಾಗೂ ಅವರ ಅತ್ತ ಇತ್ತ ಸ್ವಾಮಿ ವಿವೇಕಾನಂದ, ಶ್ರೀ ಶಾರದಾದೇವಿಯವರ ಭಾವಚಿತ್ರಗಳು; ಮತ್ತೆ ಅವರ ಬದಿಗೆ ಎರಡೂ ಕಡೆ ಕ್ರಿಸ್ತ ಬುದ್ಧರ ಭಾವಚಿತ್ರಗಳು ಇದ್ದುವು. ಮಂದವಾದ ಬೆಳಕೊಂದು ವೇದಿಕೆಯ ಮೇಲೆ ಹರಹಿಕೊಂಡಿತ್ತು. ಊದುಬತ್ತಿಯ ಸುಗಂಧ, ವಿಸ್ತಾರವಾದ ಆ ಪ್ರಾರ್ಥನಾ ಮಂದಿರವನ್ನು ವ್ಯಾಪಿಸಿತ್ತು. ಪ್ರಾರ್ಥನಾ ಮಂದಿರದ ನೆಲಕ್ಕೆ ಹಾಸಿದ ಮೆತ್ತನೆಯ ಜಮಖಾನದ ಮೇಲೆ ಐವತ್ತು – ಅರವತ್ತು ಕುರ್ಚಿಗಳನ್ನು ಒಪ್ಪವಾಗಿ ಜೋಡಿಸಲಾಗಿತ್ತು. ಒಂದೆರಡು ನಿಮಿಷ ಮೌನವಾಗಿ ಕೂತಿದ್ದು ವೆರಾಂಡಕ್ಕೆ ಬಂದಾಗ, ಬಾಗಿಲಲ್ಲಿ ನಮ್ಮನ್ನು ಬರಮಾಡಿಕೊಂಡಿದ್ದ ಆ ವ್ಯಕ್ತಿ ನಿಂತಿದ್ದರು. ಶ್ರೀಮತಿ ಉಮಾ ಜಯಸ್ವಾಮಿಯವರು, ಅವರಿಗೆ ನನ್ನನ್ನು ಪರಿಚಯ ಮಾಡಿಕೊಟ್ಟರು. ಕೂಡಲೇ ಅವರು, ‘ಕವಿಗಳಲ್ಲವೇ ನೀವು? ಕರ್ನಾಟಕದಲ್ಲಿ ನೀವು ಯಾರಿಗೆ ತಾನೇ ಗೊತ್ತಿಲ್ಲ? ನೀವು ಬಂದದ್ದು ಸಂತೋಷ’ ಎಂದರು. ನನಗೆ ಅವರ ಮಾತು ಕೇಳಿ ನಿಜವಾಗಿಯೂ ಒಂದು ಥರಾ ಸಂಕೋಚವಾಯಿತು. ಮತ್ತೆ ಅವರು ಹೇಳಿದರು : ‘ನಾನೂ ಕರ್ನಾಟಕದವನೇ, ಹಿಂದೆ ಕೆಲವು ವರ್ಷಗಳ ಹಿಂದೆ. ನಾನೂ ಈ ಆಶ್ರಮದ ಸ್ವಾಮಿಗಳಲ್ಲಿ ಒಬ್ಬ. ನನ್ನ ಹೆಸರು ಬ್ರಹ್ಮಸ್ವರೂಪಾನಂದ. ಇದೇನಪ್ಪ ಸ್ವಾಮಿಗಳು ಹೀಗಿದ್ದಾರೆ, ಆ ವೇಷದಲ್ಲಿ, ಅಂದುಕೊಳ್ಳಬೇಡಿ. ಬೆಳಿಗ್ಗೆ ಒಂಭತ್ತರಿಂದ ಹನ್ನೆರಡೂವರೆವರೆಗೂ ನನ್ನದು ಇದೇ ವೇಷ. ಒಳಗೆ ಅಡುಗೆ ಕೆಲಸ ನೋಡಿಕೊಳ್ಳಬೇಕು; ಇಲ್ಲಿ ಆಶ್ರಮದ ಪುಸ್ತಕಗಳ ಮಾರಾಟ ನೋಡಿಕೊಳ್ಳಬೇಕು. ಇದಾದನಂತರ, ನಾನು, ಕಾವಿ ಉಡುಗೆ ಉಂಟಲ್ಲ, ಅದನ್ನು ಹಾಕಿಕೊಳ್ಳುತ್ತೇನೆ. ಈ ಆಶ್ರಮದಲ್ಲಿ ಇನ್ನೂ ಒಬ್ಬರು ಸ್ವಾಮಿಗಳಿದ್ದಾರೆ. ಈಗ ಅವರು ಹೊರಗೆ ಹೋಗಿದ್ದಾರೆ.’ ನಾವು ಸ್ವಲ್ಪ ಹೊತ್ತು ಆಶ್ರಮದ ಗ್ರಂಥಾಲಯ ಹಾಗೂ ಪುಸ್ತಕ ಮಾರಾಟ ವಿಭಾಗವನ್ನು ನೋಡಿದೆವು. ನಾನು ಕುತೂಹಲ ತಡೆಯಲಾರದೆ ಕೇಳಿದೆ, ‘ಸ್ವಾಮೀಜಿ, ಶ್ರೀ ಸ್ವಾಮಿ ವಿವೇಕಾನಂದರು, ಸರ್ವಧರ್ಮ ಸಮ್ಮೇಳನದ ಸಭೆಯಲ್ಲಿ ಮಾತನಾಡಿ ಜಗತ್ತನ್ನೆ ಚಕಿತಗೊಳಿಸಿದರಲ್ಲ, ಆ ಸಮ್ಮೇಳನ ಭವನ ಇಲ್ಲೇ ಇರಬೇಕಲ್ಲ? ಅದನ್ನು ನಾನು ನೋಡಬೇಕು.’ ಅವರೆಂದರು : ‘ಅದನ್ನು ನೀವು ನೋಡುವ ಹಾಗಿಲ್ಲ. ಯಾಕೆಂದರೆ ಅದು ಈ ಆಶ್ರಮ ಇರುವ ಸ್ಥಳದಲ್ಲಿ ಇರಲಿಲ್ಲ. ಈಗ ಈ ನಗರದಲ್ಲಿ ‘ಚಿಕಾಗೋ ಇನ್ಸ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್’ ಎಂಬ ಬೃಹದ್ ವಿಸ್ತಾರದ ಕಟ್ಟಡವೊಂದಿದೆಯಲ್ಲ, ಅದೇ ಹಿಂದೆ ಸರ್ವಧರ್ಮ ಸಮ್ಮೇಳನ ನಡೆದ ಸ್ಥಳ. ಈಗ ಆ ವಿಸ್ತಾರವಾದ ಭವನವನ್ನು ಸಣ್ಣಪುಟ್ಟ ಕೊಠಡಿಗಳನ್ನಾಗಿ ಮಾಡಿ, ಆರ್ಟ್ಸ್‌ಮ್ಯೂಸಿಯಂ ಮಾಡಿದ್ದಾರೆ.’ ನನಗೆ ತುಂಬ ನಿರಾಸೆಯಾಯಿತು. ಎರಡು ದಿನಗಳ ಹಿಂದೆ ಅದೇ ಆರ್ಟ್ಸ್ ಮ್ಯೂಸಿಯಂನ ಬೃಹದಾಕಾರದ ವಿಸ್ತಾರದಲ್ಲಿ ನಾನು ಸುಮಾರು ಮೂರು ಗಂಟೆಗಳ ಕಾಲ ಸುತ್ತಾಡಿದ್ದೆ. ಅದೇ ಶ್ರೀ ವಿವೇಕಾನಂದರು ಚಾರಿತ್ರಿಕವಾದ ಉಪನ್ಯಾಸವನ್ನು ಮಾಡಿದ ಸ್ಥಳ ಎಂಬುದು ನನಗೆ ಗೊತ್ತೇ ಇರಲಿಲ್ಲ.

ಭಾರವಾದ ಮನಸ್ಸಿನಿಂದ ಸ್ವಾಮಿ ಬ್ರಹ್ಮ ಸ್ವರೂಪಾನಂದರಿಗೆ ಕೈ ಮುಗಿದು, ಮತ್ತೆ ಚಿಕಾಗೋ ನಗರದ ಅತ್ಯಂತ ಜನನಿಬಿಡವಾದ ಕಟ್ಟಡದ ಬೀದಿಯಿಕ್ಕಟ್ಟುಗಳ ನಡುವೆ, ‘ಸಿಯರ್ಸ್ ಟವರ್’ ಅನ್ನು ನೋಡಲು ಹೊರಟೆವು. ಸುಮಾರು ಅರ್ಧ ಗಂಟೆಯ ಕಾಲ ಹುಡುಕಾಡಿ, ನಂತರ ‘ಸಿಯರ್ಸ್ ಟವರ್’ ಕಟ್ಟಡದ ವಿಸ್ತಾರವಾದ ತಳಮಾಳಿಗೆಯನ್ನು ಹೊಕ್ಕು ಮೇಲೆರುವ ಎಲಿವೇಟರನ್ನು ಪ್ರವೇಶಿಸಿ, ಸೊಯ್ ಎಂದು ಮೇಲಕ್ಕೆ ಹೋದೆವು. ಈ ‘ಸಿಯರ್ಸ್ ಟವರ್’ ಎಂಬುದು ಜಗತ್ತಿನಲ್ಲಿಯೇ ಅತ್ಯಂತ ಎತ್ತರವಾದ ಕಟ್ಟಡವೆಂದು ಹೇಳಲಾಗಿದೆ. ನೂರಾ ಹತ್ತು ಹಂತಗಳನ್ನುಳ್ಳ ಈ ಕಟ್ಟಡದ ಎತ್ತರ, ನೆಲಮಟ್ಟದಿಂದ ಒಂದು ಸಾವಿರದ ಮುನ್ನೂರ ಐವತ್ಮೂರು  (೧೩೫೩) ಅಡಿಗಳು. ವಾಸ್ತವವಾಗಿ ಇದೊಂದು ಖಾಸಗಿ ಕಛೇರಿಯ ಸಂಕೀರ್ಣ. ಇದನ್ನು ಕಟ್ಟಲು ಹಿಡಿದ ಕಾಲ ಮೂರು ವರ್ಷಗಳು; ಒಂದು ಸಾವಿರದ ಆರುನೂರು ಕೆಲಸಗಾರರು ಹಗಲಿರುಳೂ ಕಟ್ಟಿದ ಈ ಕಟ್ಟಡ ಮುಗಿದದ್ದು ೧೯೭೩ರಲ್ಲಿ. ಇದರ ನಿರ್ಮಿತಿಯಲ್ಲಿ ಎಪ್ಪತ್ತಾರು ಸಾವಿರ ಟನ್ ಉಕ್ಕನ್ನೂ, ಐದು ಮೈಲಿ ಉದ್ದದ ಎಂಟು ಲೈನುಗಳನ್ನುಳ್ಳ ಹೆದ್ದಾರಿಯ ನಿರ್ಮಾಣಕ್ಕೆ ತಗಲುವಷ್ಟು ಸಿಮೆಂಟನ್ನೂ ಬಳಸಲಾಗಿದೆ. ಈ ಕಟ್ಟಡದ ಒಂದು ನೂರಾ ಹತ್ತು ಅಂತಸ್ತುಗಳ ಹರಹಿನಲ್ಲಿ ಅಪೂರ್ವವಾದ ಮೂವತ್ತು ಅಂಗಡಿ – ಮಳಿಗೆಗಳೂ, ಏಳು ರೆಸ್ಟೋರಾಂಟುಗಳು ಇವೆ. ಈ ಕಟ್ಟಡದೊಳಗಿರುವ ವಿವಿಧ ಕಛೇರಿಗಳಲ್ಲಿ ಸುಮಾರು ಹನ್ನೆರಡು ಸಾವಿರ ಜನ ಕೆಲಸ ಮಾಡುತ್ತಾರೆ. ಅವರಲ್ಲಿ ಆರು ಸಾವಿರದ ಐನೂರು ಮಂದಿ, ಸಿಯರ್ಸ್ ಕಂಪನಿಗೇ ಸೇರಿದವರು. ತಳಮಾಳಿಗೆಯಿಂದ ಮೇಲಕ್ಕೆ ಹೋಗಲು ಹಾಗೂ ಕೆಳಕ್ಕೆ ಬರಲು ಎರಡು ಎಕ್ಸ್‌ಪ್ರೆಸ್ ಎಲಿವೇಟರ್‌ಗಳು ದಿನಾ ಬೆಳಿಗ್ಗೆ ಒಂಭತ್ತು ಗಂಟೆಯಿಂದ ರಾತ್ರಿ  ಹನ್ನೊಂದೂವರೆಯವರೆಗೆ ಮಿಂಚಿನ ವೇಗದಲ್ಲಿ, ವಾರದಲ್ಲಿ ಏಳು ದಿನವೂ ಕೆಲಸ ಮಾಡುತ್ತಿರುತ್ತವೆ. ಈ ಕಟ್ಟಡದ ತತ್ತರಿಸುವೆತ್ತರವನ್ನು ಏರಲು ಅಥವಾ ಇಳಿಯಲು, ಈ ಎಲಿವೇಟರುಗಳು ತೆಗೆದುಕೊಳ್ಳುವ ಕಾಲ ಕೇವಲ ಒಂದು ನಿಮಿಷ ಮಾತ್ರ! ಈ ಕಟ್ಟಡದ ನೂರಾ ಮೂರನೆಯ ವೀಕ್ಷಣಾಲಯದಿಂದ ನಿಂತು ನೋಡಿದರೆ, ಸ್ವಚ್ಛವಾದ ಹವಾಮಾನದಲ್ಲಿ ಕಾಣುವ ಚಿಕಾಗೋ ನಗರದ ನೋಟ ಅದ್ಭುತವಾದದ್ದು. ನಾವು ಈ ಹಂತದಲ್ಲಿ ನಿಂತು, ಅಗಲವಾದ ಗಾಜು ಗೋಡೆಗಳ ಮೂಲಕ ನೋಡುವ ವೇಳೆಗೆ, ಅದೆಲ್ಲಿಂದಲೋ ಮತ್ತೆ ಮಳೆಯ ಮಬ್ಬು ಚಿಕಾಗೋ ನಗರವನ್ನು ಆವರಿಸಿಕೊಂಡಿತ್ತು. ಆಗಾಗ ಚದುರಿದ ಮಬ್ಬಿನ ಮಧ್ಯೆ ಒಂದಷ್ಟು ಬಿಸಿಲು ಕಾಣಿಸಿದಾಗ, ಕೆಳಗಿನ ದೈತ್ಯಾಕಾರದ ಗಗನಚುಂಬಿಗಳೆಲ್ಲ ಚಿಕ್ಕ ಮಕ್ಕಳ ಆಟದ ಸಾಮಾನಿನಂತೆ ಗೋಚರಿಸಿದವು. ಕೆಳಗಿನ ವಿಸ್ತಾರವಾದ ನಗರದ ಬೀದಿಗಳೊಳಗಿನ ದಟ್ಟವಾದ ಕಾರುಗಳ ಸಂಚಾರವಂತೂ, ಸಣ್ಣ ಸಣ್ಣ ಹುಳುಗಳ ಓಡಾಟದಂತೆ ತಮಾಷೆಯಾಗಿತ್ತು. ಇಡೀ ನಗರ ಒಂದು ಭಾರೀ ಜೇಡನ ಬಲೆಯಂತೆ ಹರಡಿಕೊಂಡಿತ್ತು. ಮತ್ತೆ ಮತ್ತೆ, ಗಾಳಿ ಬೀಸಿದಂತೆ ತೆಳ್ಳಗೆ ಮುಚ್ಚಿಕೊಳ್ಳುತ್ತಿದ್ದ ಮಬ್ಬಿನಲ್ಲಿ, ಕಂಡಷ್ಟೇ ನೋಟದಿಂದ ನಾನು ಸಮಧಾನಪಟ್ಟುಕೊಳ್ಳಬೇಕಾಯಿತು.

ಚಿಕಾಗೋ ವಿಶ್ವವಿದ್ಯಾಲಯದಲ್ಲಿರುವ ನನ್ನ ಹಳೆಯ ಗೆಳೆಯ ಡಾ. ಎ. ಕೆ. ರಾಮಾನುಜನ್, ವಿಶೇಷೋಪನ್ಯಾಸಕ್ಕಾಗಿ ಬಾಸ್ಟನ್ನಿಗೆ ಹೋಗಿದ್ದಾರೆಂದು ತಿಳಿದು ಬಂದ ಕಾರಣ, ನಾನು ಆ ವಿಶ್ವವಿದ್ಯಾಲಯವನ್ನು ಹೋಗಿ ನೋಡುವ ಆಕರ್ಷಣೆ ಅಷ್ಟಾಗಿ ಉಳಿಯಲಿಲ್ಲ.