ಯುಗ ಯುಗದ ನಿದ್ದೆಯೊಳಗೊಮ್ಮೊಮ್ಮೆ ನಮಗೆ
ಕನವರಿಕೆ : ರಾಮಾ ಕೃಷ್ಣಾ ಬುದ್ಧಾ ಬಸವಾ…..
ಎಂದೊ ಎಚ್ಚರದಲ್ಲಿ ಬಿತ್ತಿದ ಬೀಜ, ನಿದ್ದೆಯ
ನೆಲವ ಮೆಲ್ಲನೆ ಒಡೆದು ಪುಟಿದು ನಿಲ್ಲುವುದು
ನೆನಪಿನೆಲೆಗಳ ತೊಟ್ಟು. ನೂರು ವರುಷದ ಹಿಂದೆ
ಬಿದ್ದ ಬೆಂಕಿಯ ಬೀಜ ತಟ್ಟುತಿದೆ ಈಗ ಇಗೊ
ಎದೆಯ ಕದವ. ‘ಯಾರಯ್ಯ ನೀನು? ಸದಾ ಬಂದು
ಬಾಗಿಲು ಬಡಿವ ನಿನಗಿಲ್ಲವೇನಯ್ಯ ಇಷ್ಟಾದರೂ
ಬುದ್ಧಿ? ನಿದ್ದೆ ಬೇಡವೆ ನಮಗೆ?’ – ಎಂದರವನೆಂದ :
‘ಅಣ್ಣ, ನಾ ವಿವೇಕಾನಂದ, ವರುಷ ನೂರರ ಹಿಂದೆ
ನಾ ಬಂದೆ,’ ‘ಓ, ಬಂದೆಯಾ, ಬಾಪ್ಪ ; ನಿನಗೆ ನೂರ-
ರುತ್ಸವ ಮಾಡಿ, ಹಾಡಿ, ಮಂಗಳಾರತಿಯೆತ್ತಿ, ಜೈ
ಎಂದು ಹೇಳುವತನಕ ತಪ್ಪುವುದಿಲ್ಲ ಕಾಣಪ್ಪ
ನಿನ್ನ ಈ ಗಲಾಟೆ. ನಾವಿದ್ದೇವೆ, ಬದುಕಿದ್ದಾಗ
ಒಂದಿಷ್ಟು ಗದ್ದಲ ; ಆಮೇಲೆ ಮೌನದ ಗೋರಿ.
ಆ ಬಳಿಕ ನಾವು ಆಗಾಗ ಊದುವುದಿಲ್ಲವಪ್ಪ
ನಿಮ್ಮಂತೆ ವರುಷ ವರುಷಕ್ಕೂ ಉತ್ಸವದ ತುತ್ತೂರಿ.