Categories
ಕನ್ನಡ ಡಾ|| ಜಿ ಎಸ್ ಶಿವರುದ್ರಪ್ಪ ರಾಷ್ಟ್ರಕವಿ ಕೃತಿ ಸಂಚಯ ಸಮಗ್ರ ಗದ್ಯ 4 ೪. ಗಂಗೆಯ ಶಿಖರಗಳಲ್ಲಿ ೪೦೯ - ೫೧೭

ವಿಶಾಲ ಬದರಿಗೆ

ಮಂಜು ಹಿಂಜರಿದ ಕಣಿವೆಗಳ ಮಧ್ಯೆ, ಕಿಲಕಿಲ ನಗುವ ಬಾಲಸೂರ‍್ಯನ ಚಿನ್ನದ ಬೆಳಕಿನಲ್ಲಿ ಅಲಕನಂದಾ ನದಿಯ ನೊರೆಗರೆವ ನೀರೆಲ್ಲಾ ಬಂಗಾರವಾಗುತ್ತಿದ್ದಾಗ, ನದಿಯ ಪಕ್ಕದಲ್ಲೇ ನಮ್ಮ ಪ್ರಯಾಣ ಬದರಿಯ ದಿಕ್ಕಿನಲ್ಲಿ ಸಾಗಿತ್ತು. ಹಿಂದಿನ ದಿನ ಮಂದಾಕಿನಿ ತೀರದ ಉದ್ದಕ್ಕೂ ಕೇದಾರದಿಂದ ಉರುಳಿ ಬಂದ ನಾವು, ಈಗ (೨೧.೫.೧೯೯೪) ಅಲಕನಂದಾ ನದಿಯ ದಡದಲ್ಲಿ ಬದರಿಯ ಕಡೆಗೆ ಏರುತ್ತಿದ್ದೆವು. ದಾರಿಯುದ್ದಕ್ಕೂ ಹಸುರೇ ಇಲ್ಲದ ದೈತ್ಯಾಕಾರದ ಪರ್ವತಗಳು ತಮ್ಮ ಕಾಲಬುಡದಲ್ಲಿ ತೊದಲುತ್ತಾ ಹರಿಯುವ ಹೊಳೆಗಳನ್ನು ಅತ್ಯಂತ ನಿರ್ಲಕ್ಷ್ಯದಿಂದ ನೋಡುವಂತೆ ತೋರಿದವು. ಈ ಬೃಹದಾಕಾರದ ಪಾತಾಳದಾಕಳಿಕೆಗಳ ಮಧ್ಯೆ ಮೋಟಾರು ದಾರಿಗಳು, ಇಲ್ಲಿ ಕಂಡು ಅಲ್ಲಿ ಮರೆಯಾಗಿ, ಹೇಗೋ ತಪ್ಪಿಸಿಕೊಂಡು ಪಲಾಯನ ಮಾಡುವ ಪುಕ್ಕಲುಗಳಂತೆ ಕಾಣುತ್ತಿದ್ದವು. ಈ ದಾರಿಗಳ ಮೇಲೆ ಎದೆಗೆಡದ ಧೈರ್ಯದ ತುಣುಕುಗಳಂತೆ, ಅದೆಷ್ಟೋ ವಾಹನಗಳು ಧೂಳೆಬ್ಬಿಸಿಕೊಂಡು ಚಲಿಸುತ್ತಿದ್ದವು. ಶಿಖರಗಳ ಮೇಲೆ ಶಿಖರಗಳನ್ನು ತೆರೆಯುವ, ಕಣಿವೆಯ ನಂತರ ಕಣಿವೆಯನ್ನು ಬಿಚ್ಚುವ ದಾರಿಯಲ್ಲಿ, ವಾಹನಗಳು ಅಲ್ಲಲ್ಲಿ ಮೇಲಿನಿಂದ ಧಡಾರನೆ ಕುಸಿದು ಬಿದ್ದು ದಾರಿಯನ್ನು ತಡೆದ ಬಂಡೆ ಕಲ್ಲು ಮಣ್ಣುಗಳ ರಾಶಿಯ ಮುಂದೆ ಸ್ತಂಭೀಭೂತವಾಗಿ ನಿಂತು, ರಸ್ತೆಯ ಕೆಲಸಗಾರರು ಅದನ್ನೆಲ್ಲಾ ತೆಗೆದು ರಸ್ತೆ ತೆರವು ಮಾಡಿದ ನಂತರ ಮುಂದಕ್ಕೆ ಚಲಿಸುತ್ತಿದ್ದವು. ಹೀಗಾಗಿ ಈ ಪ್ರಯಾಣ ನಾವೆಣಿಸಿದಷ್ಟು ಸರಾಗವಾಗಿ ಸಾಗುವಂತಿರಲಿಲ್ಲ. ಮುಂದಿನ ಹಾಗೂ ಎದರುಗಡೆಯಿಂದ ಬರುವ ವಾಹನಗಳು ಎಬ್ಬಿಸಿದ ಧೂಳಿನ ಮೋಡ ಕರುಗುವವರೆಗೆ ನಿಧಾನಿಸಿ, ವಾಹನಗಳು ತಮ್ಮ ವೇಗವನ್ನು ಮತ್ತೆ ಹೆಚ್ಚಿಸಿಕೊಳ್ಳಬೇಕಾಯಿತು. ಎರಡೂ ಬದಿಗೆ ಕಣ್ಣನ್ನು ತಣಿಸುವ ಹಸುರಿಲ್ಲದ ದಾರಿಯಲ್ಲಿ, ದಾರಿಯುದ್ದಕ್ಕೂ ಪಾತಾಳದಲ್ಲಿ ಪ್ರವಹಿಸುವ ಅಲಕನಂದಾ ನದಿಯ ಪಕ್ಕದಲ್ಲಿ ಪ್ರಯಾಣ ಮಾಡಿದ ನಾವು, ಬೆಳಗಿನ ಎಂಟು ಗಂಟೆಯ ವೇಳೆಗೆ ಪಿಪ್ಪಲ್ ಕೋಟ್ ಎಂಬ ಊರನ್ನು ತಲುಪಿದೆವು.

ಹಿಂದೆ, ಬದರಿಗೆ ಹೋಗುವ ಯಾತ್ರಿಕರು, ಈ ಪಿಪ್ಪಲ್ ಕೋಟ್‌ವರೆಗೆ ಮಾತ್ರ ಬಸ್ಸು ಮತ್ತಿತರ ವಾಹನಗಳಲ್ಲಿ ಬಂದು, ಇಲ್ಲಿಂದ ಮುಂದಕ್ಕೆ ಬದರಿಯವರೆಗೂ ಕಂಡಿಗಳಲ್ಲೋ, ದಂಡಿಗಳಲ್ಲೋ, ಕುದುರೆಯ ಮೇಲೋ ಕಾಲು ನಡಿಗೆಯಲ್ಲೋ ಹೋಗಬೇಕಾಗಿತ್ತು. ಇದು ಹದಿನೈದು – ಇಪ್ಪತ್ತು ವರ್ಷಗಳ ಹಿಂದಿನ ಮಾತು. ಈಗ ನೇರವಾಗಿ ಬದರಿಯವರೆಗೂ ವಾಹನಗಳ ರಸ್ತೆ ಇದೆ. ರುದ್ರಪ್ರಯಾಗದಿಂದ ಇಲ್ಲಿಗೆ ಬರುವ ವೇಳೆಗೆ ನಾವು, ಪಿಂಡಾರ್ – ಅಲಕನಂದಾ ನದಿಗಳ ಸಂಗಮವಾದ ಕರ್ಣಪ್ರಯಾಗವನ್ನು, ಅಲಕನಂದಾ – ಮಂದಾಕಿನಿಗಳ ಸಂಗಮವಾದ ನಂದ ಪ್ರಯಾಗವನ್ನು ದಾಟಿ ಬಂದಿದ್ದೆವು.

ಒಂದಿಷ್ಟು ಉಪಹಾರ ಮುಗಿಸಿಕೊಂಡು ಹೊರಟ ನಾವು ಹತ್ತು ಗಂಟೆಯ ಹೊತ್ತಿಗೆ, ಮೂವತ್ತು ಕಿಲೋಮೀಟರ್ ದೂರದ ರಸ್ತೆಯನ್ನು ಹಿಂದಿಕ್ಕಿ, ಜೊಷೀ ಮಠ ಎಂಬ ಊರಿನ ಪೇಟೆ ಬೀದಿಯ ಉಕ್ಕಡದಲ್ಲಿ ನಿಲ್ಲಬೇಕಾಯಿತು. ನಮ್ಮ ಹಿಂದೆ ಮತ್ತು ಮುಂದೆ ಬದರಿಗೆ ಹೋಗುವ ಅನೇಕ ವಾಹನಗಳು ‘ಕ್ಯೂ’ ನಿಂತಿದ್ದವು. ಇಲ್ಲಿಂದ ಬದರಿಗೆ ಏಕಮುಖ ರಸ್ತೆಯಾದುದರಿಂದ, ಮುಂದಿನ ನಲವತ್ತು ನಾಲ್ಕು ಕಿಲೋಮೀಟರುಗಳ ರಸ್ತೆ ತುಂಬ ಇಕ್ಕಟ್ಟಾದುದೂ, ಅಪಾಯಕಾರಿಯಾದುದೂ ಆಗಿರುವ ಕಾರಣದಿಂದ, ಆ ಕಡೆಯಿಂದ ವಾಹನಗಳು ಬಂದು, ದಾರಿ ತೆರವಾದ ಮೇಲೆಯೇ ಈ  ಕಡೆಯಿಂದ ವಾಹನಗಳನ್ನು ಬಿಡುವುದು. ಹೀಗಾಗಿ ನಮ್ಮ ದಾರಿ ತೆರವಾಗಲು ಸುಮಾರು ಒಂದು, ಒಂದೂವರೆ ಗಂಟೆಗಳಾದರೂ ನಾವು ಕಾಯಬೇಕಾಗುತ್ತದೆಂದು ನಮಗೆ ತಿಳಿಯಿತು. ನಾನು ವಾಹನದಿಂದ ಇಳಿದು, ಜೋಷೀಮಠದ ಪೇಟೆ ಬೀದಿಯಲ್ಲಿ ಸ್ವಲ್ಪ ನಡೆದಾಡಲು ಅಪೇಕ್ಷಿಸಿದೆ.

ಜೋಷೀಮಠ ಅನೇಕ ಕಾರಣಗಳಿಂದ ಮಹತ್ವವನ್ನು ಪಡೆದ ಸ್ಥಳ. ಪುರಾಣಗಳ ಪ್ರಕಾರ ಇದು ಹಿರಣ್ಯಕಶಿಪುವಿನ ರಾಜಧಾನಿಯಾದ ಯೋಧಿಪುರ; ಅಷ್ಟೇ ಅಲ್ಲ, ಇದು ಯಕ್ಷ, ಕಿನ್ನರ ಮತ್ತು ಖಾಸರೆಂಬ ಜನಗಳ ನಾಡು. ಖಾಸ ರಾಜನ ರಾಜಧಾನಿಯಾದ ಇದಕ್ಕೆ ಹಿಂದೆ ಕಾರ್ತಿಕೇಯಪುರವೆಂದು ಹೆಸರಿತ್ತು. ಸ್ಥಳ ಪುರಾಣಗಳು ಹೇಳುವಂತೆ ಪಾರ್ವತಿಯು ಶಿವನನ್ನು ಕುರಿತು ತಪಸ್ಸು ಮಾಡಿದ್ದು ಇಲ್ಲಿಯೇ. ಚಾರಿತ್ರಿಕವಾಗಿ ನೋಡುವುದಾದರೆ ಇದು ಕತ್ಯೂರಿಗಳ ರಾಜಧಾನಿ. ಆಗಲೂ ಇದಕ್ಕೆ ಇದ್ದ ಹೆಸರು ಕಾರ್ತಿಕೇಯಪುರ. ಈ ಬಗ್ಗೆ ಚೀನಾ ದೇಶದ ಬೌದ್ಧ ಯಾತ್ರಿಕನಾದ ಹ್ಯೂಯೆನ್‌ತ್ಸಾಂಗನ ಬರೆಹಗಳಲ್ಲಿ ಉಲ್ಲೇಖವಿದೆ. ಕ್ರಿ. ಶ. ೬೪೩ರಲ್ಲಿ ಹ್ಯೂಯೆನ್‌ತ್ಸಾಂಗನು ಈ ಭಾಗಕ್ಕೆ ಬಂದಿದ್ದನು. ಗುಪ್ತರು ಮಾತ್ರವಲ್ಲ, ದಕ್ಷಿಣದಿಂದ ರಾಷ್ಟ್ರಕೂಟರೂ ಇಲ್ಲಿನ ತನಕ ಬಂದಿದ್ದರೆಂದೂ ಹೇಳಲಾಗಿದೆ.  ರಾಜಶೇಖರನೆಂಬ ಆಲಂಕಾರಿಕನ ‘ಕಾವ್ಯಮೀಮಾಂಸಾ’ ಎಂಬ ಕೃತಿಯಲ್ಲಿ (ಕ್ರಿ.ಶ. ೯ನೇ ಶತಮಾನ) ಕಾರ್ತೀಕೇಯಪುರದ ಉಲ್ಲೇಖವಿದೆ. ಆದರೆ ಈ ಊರಿಗೆ ‘ಜೋಷೀಮಠ’ ಎಂಬ ಹೆಸರು ಬರಲು ಶ್ರೀ ಶಂಕರಾಚಾರ್ಯರು ಕಾರಣವೆಂದು ಹೇಳಲಾಗಿದೆ. ಆಚಾರ್ಯ ಶಂಕರರು ತಮ್ಮ ಎಂಟನೆ ವಯಸ್ಸಿಗೆ ಸನ್ಯಾಸವನ್ನು ಸ್ವೀಕರಿಸಿ, ತಮ್ಮ ಹನ್ನೊಂದನೇ ವಯಸ್ಸಿನಲ್ಲಿ ಐದು ವರ್ಷಗಳ ಕಾಲ ಹಿಮಾಲಯದ ರವಿಗ್ರಾಮ ಎಂಬಲ್ಲಿ ಗುಹೆಯಲ್ಲಿ ವಾಸ ಮಾಡಿದರಂತೆ. ತಮ್ಮ ಹದಿನಾರನೆಯ ವಯಸ್ಸಿಗೆ ಹಲವಾರು ಕೃತಿಗಳನ್ನು (ಬ್ರಹ್ಮಸೂತ್ರ ಭಾಷ್ಯವನ್ನು ಒಳಗೊಂಡು) ರಚಿಸಿದರಂತೆ. ಈ ರವಿಗ್ರಾಮ ಇಂದಿನ ಜೋಷೀಮಠದ ಹತ್ತಿರದಲ್ಲಿ ಸುಪ್ರಸಿದ್ಧವಾದ ಸ್ಥಳವಾಗಿದೆ. ಅಷ್ಟೇ ಅಲ್ಲ ಆಚಾರ್ಯ ಶಂಕರರು, ಇಲ್ಲಿದ್ದ ಕಲ್ಪವೃಕ್ಷದ ಕೆಳಗೆ ಕುರಿತು ಜ್ಯೋತಿಯನ್ನು ದರ್ಶಿಸಿದ ಕಾರಣದಿಂದ, ಮತ್ತು ಆಚಾರ್ಯರು ಇಲ್ಲಿ ಒಂದು ಮಠವನ್ನು ಸ್ಥಾಪಿಸಿದ ಕಾರಣದಿಂದ ಈ ಊರಿಗೆ ಜ್ಯೋತಿರ್ಮಠ ಎಂದು ಹೆಸರಾಯಿತು. ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಮಠಗಳು ಶೃಂಗೇರಿ, ದ್ವಾರಕಾ, ಪೂರಿ ಮತ್ತು ಜ್ಯೋತಿರ್ಮಠ, ಕಾರ್ತಿಕೇಯಪುರವಾಗಿದ್ದ ಇದು ಜ್ಯೋತಿರ್ಮಠವಾದದ್ದು ಹೀಗೆ. ಆದರೆ ಜನರ ನಾಲಗೆಯಲ್ಲಿ ಸವೆದೂ ಸವೆದೂ ಜ್ಯೋತಿರ್ಮಠ, ಜೋಷೀಮಠವೆಂಬ ರೂಪಾಂತರವನ್ನು ಪಡೆದುಕೊಂಡಿದೆ. ಕಾರ್ತಿಕ ಮಾಸದಿಂದ ಹಿಡಿದು ಮುಂದಿನ ಆರು ತಿಂಗಳ ಕಾಲ ಬದರೀ ಕ್ಷೇತ್ರವು ಹಿಮಾವೃತವಾಗುವ ಕಾಲಗಳಲ್ಲಿ ಅಲ್ಲಿಂದ ಬದರಿ ನಾರಾಯಣನ ವಿಗ್ರಹವನ್ನು ತಂದು ‘ಜೋಷೀಮಠ’ದಲ್ಲಿರಿಸಿ ಪೂಜಿಸಲಾಗುತ್ತದೆ.

ಕಾರ್ತಿಕೇಯಪುರವೆಂಬ ತನ್ನ ಮೊದಲಿನ ಹೆಸರನ್ನು ಕಳೆದುಕೊಂಡು, ಜೋತಿರ್ಮಠವೆಂಬ ಹೆಸರನ್ನೂ ಉಳಿಸಿಕೊಳ್ಳಲಾಗದೆ ‘ಜೋಷೀಮಠ’ವಾಗಿರುವ ಈ ಊರು ಸಾಕಷ್ಟು ದೊಡ್ಡದು. ಸಮುದ್ರ ಮಟ್ಟದಿಂದ ಆರು ಸಾವಿರದ ಒಂದುನೂರು ಅಡಿಗಳೆತ್ತರದಲ್ಲಿರುವ ಜೋಷೀಮಠದಿಂದಲೇ ಬದರೀನಾಥಕ್ಕೆ ಪ್ರವೇಶ. ಪ್ರವೇಶಕ್ಕೆಂದು ಕಾದುನಿಂತ ವಾಹನಗಳ ಸರಣಿಯಲ್ಲಿದ್ದ ನಮಗೆ ಸುಮಾರು ಹನ್ನೊಂದು  ಗಂಟೆಯ ವೇಳೆಗೆ ಹಸಿರು ಬಾವುಟದ ಸೂಚನೆ ದೊರೆತು ನಮ್ಮ ವಾಹನದ ಚಕ್ರಗಳು ಚಲಿಸತೊಡಗಿದವು. ಆರು ಸಾವಿರ ಅಡಿಗಳೆತ್ತರದಲ್ಲಿ ಏರುತ್ತಾ ಇಳಿಯುತ್ತಾ ದಟ್ಟ ಹಸುರಿನ ಪರ್ವತಗಳ ಮಧ್ಯೆ ಪ್ರಯಾಣ ಮಾಡಿದ ನಾವು, ಒಂದೆಡೆ ಬೆಟ್ಟದ ದಾರಿಯಿಂದ ಕಣಿವೆಗೆ ಇಳಿದು ವಿಷ್ಣು ಪ್ರಯಾಗ ಎಂಬಲ್ಲಿ  ಅಲಕನಂದಾ ಮತ್ತು ಧವಳಗಂಗಾ ನದಿಗಳ ಸಂಗಮ ಜಲದ ತಾಂಡವ ನೃತ್ಯವನ್ನು ವೀಕ್ಷಿಸುತ್ತಾ, ಸೇತುವೆಯ ಮೂಲಕ ದಾಟಿ ಬರೀ ಶಿಲಾಮಯವಾದ ಪರ್ವತ ಪ್ರಾಂತ್ಯವನ್ನು ಪ್ರವೇಶಿಸಿದೆವು.  ಮುಂದಿನ ಒಂದಷ್ಟು ದೂರದ ದಾರಿ ಬರೀ ಬಂಡೆ ಬೆಟ್ಟಗಳ ಕೋರೆಹಲ್ಲುಗಳ ಕೆಳಗಿನದು. ನಮ್ಮ ಎಡಬಲಗಳಲ್ಲಿ ಸಸ್ಯವಿಹೀನವಾದ ನಿಷ್ಠುರ ಶಿಲಾ ಖಂಡಗಳು ಕೋಟೆ ಕಟ್ಟಿಕೊಂಡು, ಅವುಗಳ ತಲದಲ್ಲಿ ಅಲಕನಂದೆಯ ನಿರಂತರ ಪ್ರವಾಹ ಅನುರಣಿತವಾಗುತ್ತಿತ್ತು. ಕೊಂಚ ಹೊತ್ತಿನಲ್ಲಿ ನಾವು ಗೋವಿಂದ್ ಘಾಟ್ ಎನ್ನುವ ಸ್ಥಳದಲ್ಲಿ ಒಂದೈದು ನಿಮಿಷ ನಿಂತೆವು.

ಗೋವಿಂದ ಘಾಟ್ ಬದರಿಯ ರಸ್ತೆಯಿಂದ ಹೇಮಕುಂಡ ಮತ್ತು ಹೂವಿನ ಕಣಿವೆಗೆ (Valley of Flowers) ಹೊರಳುವ ದಾರಿಯಲ್ಲಿದೆ. ಹೇಮಕುಂಡ ಎಂಬುದು ಗೋವಿಂದ ಘಾಟ್‌ದಿಂದ ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿರುವ ಸಿಖ್ ಜನಾಂಗದ ಪವಿತ್ರ ತೀರ್ಥಕ್ಷೇತ್ರವಾಗಿದೆ. ಗುರುನಾನಕ್ ಇಲ್ಲಿ ತಪಸ್ಸು ಮಾಡಿದರೆಂದು ಹೇಳಲಾಗಿದೆ. ಸಿಖ್ಖರ ಹತ್ತನೆಯ ಧರ್ಮಗುರುವಾದಗುರುಗೋವಿಂದ್ ಸಿಂಗ್ ಅವರು ತಮ್ಮ ಪೂರ್ವಜನ್ಮದಲ್ಲಿ ಹೇಮಕುಂಡ ಎಂಬ ಸರೋವರದ ತೀರದಲ್ಲಿ ಧ್ಯಾನ ಮಾಡಿದ್ದಾಗಿ ‘ಗುರು ಗ್ರಂಥ್ ಸಾಹಿಬ್’ದಲ್ಲಿ ಉಲ್ಲೇಖಿಸಲಾಗಿರುವುದರಿಂದ ಸಿಖ್ ಜನ ಈ ಸರೋವರವನ್ನು ಸಂದರ್ಶಿಸಿ, ಸ್ನಾನಮಾಡಿ, ಅದರ ಬದಿಯಲ್ಲಿರುವ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಸಮುದ್ರ ಮಟ್ಟದಿಂದ ೧೪, ೨೫೦ ಅಡಿ ಎತ್ತರದಲ್ಲಿರುವ ಈ ಸರೋವರ (ಇದಕ್ಕೆ ಲೋಕಪಾಲ್ ಎಂದೂ ಹೆಸರು) ಹಿಮಾಚ್ಛಾದಿತವಾದ ಸಪ್ತ ಶಿಖರಗಳ ಪ್ರತಿಚ್ಛಾಯೆಯಿಂದ ತುಂಬ ಮನೋಹರವಾಗಿದೆ ಎಂದು ಹೇಳುತ್ತಾರೆ. ಕೇವಲ ಕಾಲುನಡಿಗೆ, ಅಥವಾ ಕುದುರೆಗಳ ಮೇಲೆ ಮಾತ್ರ ಅಲ್ಲಿಗೆ ಹೋಗಬಹುದಾದ ದಾರಿ ತುಂಬ ಪ್ರಯಾಸದಾಯಕವಾದದ್ದೆಂದು ಹೇಳಲಾಗಿದೆ.

ಇದೇ ಗೋವಿಂದ್‌ಘಾಟ್ ಹತ್ತಿರ, ‘ಹೂವಿನ ಕಣಿವೆಗೆ’- ರಾಷ್ಟ್ರೀಯ ಉದ್ಯಾನಕ್ಕೆ – ಹತ್ತೊಂಬತ್ತು ಕಿಲೋ ಮೀಟರ್ ಎಂದು ಬರೆದುಕೊಂಡ ಒಂದು ಕೈಮರ ನಿಂತಿದೆ. ಹೇಮಕುಂಡದ ಕಡೆಗೆ ಹೋಗುವ ರಸ್ತೆಯಲ್ಲಿ ಮುಂದುವರಿದು, ನಡುವೆ ಘಂಗಾರಿಯಾ ಎನ್ನುವಲ್ಲಿ ಹೊರಳಿ, ನಾಲ್ಕು ಕಿಲೋಮೀಟರ್ ಹೋದರೆ ಸಿಕ್ಕುತ್ತದೆ ಜಗತ್ ಪ್ರಸಿದ್ಧವಾದ ಹೂವಿನ ಕಣಿವೆ – ವ್ಯಾಲಿ ಆಫ್ ಫ್ಲವರ‍್ಸ್. ಸುಮಾರು ಹತ್ತು ಸಾವಿರದ ಒಂದು ನೂರು ಅಡಿ ಎತ್ತರದಲ್ಲಿ, ಐದು ಕಿಲೋಮೀಟರ್ ಉದ್ದ ಮತ್ತು ಎರಡು ಕಿಲೋಮೀಟರ್ ಅಗಲದ ಒಂದು ಕಣಿವೆಯ ವಿಸ್ತಾರದಲ್ಲಿ ಅತ್ಯಂತ ವರ್ಣಮಯವಾದ ಹೂವುಗಳು ಅರಳಿ ನಗುವ ಸ್ವರ್ಗೀಯವಾದ ದೃಶ್ಯವನ್ನು ನೋಡಲು, ದೇಶವಿದೇಶಗಳಿಂದ ಪ್ರವಾಸಿಗಳು ಇಲ್ಲಿಗೆ ಬರುತ್ತಾರೆ. ಈ ಸ್ಥಳಕ್ಕೆ ಹೋಗುವ ದಾರಿ ಅತ್ಯಂತ ಪ್ರಯಾಸದಾಯಕವಾದದ್ದು. ೧೯೩೧ರಲ್ಲಿ ಫ್ರಾಂಕ್  ಎಸ್. ಸ್ಮಿತ್ (Frank S. Smith) ಎಂಬಾತ ಇದನ್ನು ಮೊಟ್ಟಮೊದಲು ಕಂಡುಹಿಡಿದನು. ಆತ ಒಬ್ಬ ಪರ್ವತಾರೋಹಿ. ಆತ ಕಾಮೆಟ್ ಎಂಬ ಶಿಖರವನ್ನು ಆರೋಹಿಸಿ ಹಿಂದಿರುಗಿ ಬರುವಾಗ, ಈ ‘ಹೂವಿನ ಕಣಿವೆ’ ಅವನ ಕಣ್ಣಿಗೆ ಕಂಡಿತು. ಅದರಿಂದ ಆತ ಎಷ್ಟರ ಮಟ್ಟಿಗೆ ಆಕರ್ಷಿತನಾದನೆಂದರೆ, ತನ್ನ ಅನುಭವವನ್ನು ಕುರಿತು, ‘ನಾಗರಿಕತೆ ತನ್ನ ಗೊಂದಲಗಳಲ್ಲಿ ತಾನು ಮುಳುಗಿರಲಿ; ಆದರೆ ನನಗೆ ಈ ಪ್ರಶಾಂತಿಯಷ್ಟೇ ಸಾಕು’ ಎಂದು ಬರೆದುಕೊಂಡನು. ಈ ಬರಹದಿಂದ ಆಕರ್ಷಿತಳಾಗಿ, ಮಿಸ್ ಜೊನ್ ಮಾರ್ಗರೆಟ್ ಎಂಬಾಕೆ ಇಲ್ಲಿಗೆ ಬಂದು, ಕಂಡು ಆನಂದಿಸಿ, ಇನ್ನೂರ ಐವತ್ತು ಬಗೆಯ ಹೂವಿನ ಬೀಜಗಳನ್ನೂ ಗೆಡ್ಡೆಗಳನ್ನೂ ಸಂಗ್ರಹಿಸಿದಳು. ಆದರೆ ದುರದೃಷ್ಟವಶಾತ್, ಇಲ್ಲಿನ  ಕಡಿದಾದ ಕಣಿವೆಯಲ್ಲಿ ಕಾಲು ಜಾರಿ ಬಿದ್ದು ಸತ್ತು ಹೋದಳು. ಈ ಹೂವಿನ ಕಣಿವೆ, ಗಿಡ್ಡನೆಯ ಭೂರ್ಜಪತ್ರವೃಕ್ಷ ಮತ್ತಿತರ ಹೊದರುಗಳಿಂದ, ಮತ್ತು ಅಸಂಖ್ಯ ವರ್ಣವೈವಿಧ್ಯತೆಯ ಹೂವುಗಳಿಂದ ತುಂಬಿದೆಯಂತೆ. ಇಲ್ಲಿ ಅರಳುವ ಪುಷ್ಪ ವೈಭವವನ್ನು ನೋಡಲು ಜುಲೈ ಮಧ್ಯಭಾಗದಿಂದ ಆಗಸ್ಟ್ ಮಧ್ಯಭಾಗದವರೆಗೆ ಸರಿಯಾದ ಕಾಲ. ಸೆಪ್ಟೆಂಬರ್ ಕೊನೆಯ ವೇಳೆಗೆ, ಹೂವೆಲ್ಲಾ ಬಾಡಿ ಹೋಗಿರುತ್ತವಂತೆ. ಹೂವಿನ ಕಾಲದಲ್ಲಿ ಬಂದರೆ, ಕಣ್ಣು ಹರಿಯುವ ತನಕವೂ ಹಬ್ಬಿಕೊಂಡ ವರ್ಣಮಯ ತರಂಗದಲ್ಲಿ ಮನಸ್ಸು ವಿಸ್ಮಯ – ತನ್ಮಯತೆಯಿಂದ ಅರಳುವುದು ಮಾತ್ರವಲ್ಲ ಆ ಹೂವಿನ ಕಂಪಿನಿಂದ ವ್ಯಕ್ತಿ ಕ್ರಮೇಣ ಯಾವುದೋ ಮೋಡಿಗೆ ಸಿಕ್ಕಿದವನಂತೆ, ತನ್ನ ವ್ಯಕ್ತಿತ್ವವನ್ನೇ ಕಳೆದುಕೊಳ್ಳುವ ಒಂದು ವಿಶೇಷ ವಿಸ್ಮೃತಿಯ ಅನುಭವವಾಗುತ್ತದಂತೆ. ಇಂದ್ರಿಯಗಳೆಲ್ಲವೂ ಒಂದು ರೀತಿಯ ಸಮ್ಮೋಹಕತೆಗೆ ಒಳಗಾಗಿ, ತಾನು ಯಾರು, ತನ್ನ ಹೆಸರೇನು, ತಾನು ಎಲ್ಲಿಂದ ಬಂದೆ, ಎಲ್ಲಿಗೆ ಹೊಗುತ್ತಿದ್ದೇನೆ- ಇತ್ಯಾದಿ ಸಂಗತಿಗಳೆಲ್ಲವೂ ಮರೆತು ಒಂದು ಬಗೆಯ ಮರುಳಿನಲ್ಲಿ ವ್ಯಕ್ತಿ ನಿಲ್ಲುತ್ತಾನಂತೆ. ಹೀಗೆಂದು ಸ್ವಾಮಿ ರಾಮ ಅವರು. ‘living with Himalayan masters’ ಎಂಬ ತಮ್ಮ ಅದ್ಭುತವಾದ ಪುಸ್ತಕದಲ್ಲಿ, ಈ ಹೂವಿನ ಕಣಿವೆಯ ಅನುಭವವನ್ನು ವರ್ಣಿಸಿದ್ದಾರೆ.

ಎದುರಿಗೆ ಕಾಣುವ ಪರ್ವತಗಳಾಚೆಗೆ ಹರಹಿಕೊಂಡ ಹೂವಿನ ಕಣಿವೆಯ ಕನಸು ಕಾಣುತ್ತ ನಿಂತ ನನ್ನನ್ನು ನಮ್ಮ ಟ್ಯಾಕ್ಸಿಯ ಚಾಲಕ ಹಾರನ್ ಮಾಡಿ ಕರೆದಾಗಲೇ, ನಾನು ನನಸಿಗೆ ಹಿಂದಿರುಗಿ, ಟ್ಯಾಕ್ಸಿಯೊಳಗೆ ಬಂದು ಕೂತೆ. ಸಾಧ್ಯವಾದರೆ ಮುಂದೆ ಎಂದಾದರೂ ಈ ಹೂವಿನ ಕಣಿವೆಯನ್ನು ಕಾಣಬೇಕು ಎಂದುಕೊಂಡೆ.

ಮತ್ತೆ ಚಕ್ರಗಳು ಚಲಿಸತೊಡಗಿದವು. ಬಲಗಡೆಯ ಕಂದರದಲ್ಲಿ ಬಂಡೆಯಿಂದ ಬಂಡೆಗೆ ಧುಮ್ಮಿಕ್ಕುವ ಅಲಕನಂದಾ, ಅದರ ತಳದಿಂದ ಅನಾಮತ್ತಾಗಿ ಆಕಾಶದ ಕಡೆಗೆ ಮೈ ಎತ್ತಿಕೊಂಡು ನಿಂತ ಬಂಡೆ ಬೆಟ್ಟಗಳ ವಕ್ರಾಕಾರಗಳು, ಆ ವಕ್ರ ವಿನ್ಯಾಸಗಳ ನಡುವಿನಿಂದಲೇ ಅಲ್ಲಲ್ಲಿ ತೂರಿ, ಗೆರೆ ಗೆರೆಯಾಗಿ ಇಳಿಯುವ ಜಲಪಾತಗಳು – ಇವನ್ನೆಲ್ಲ ನೋಡುತ್ತ ಕೆಲವು ನಿಮಿಷಗಳಲ್ಲಿ ಪಾಂಡುಕೇಶ್ವರವನ್ನು ತಲುಪಿ, ಅಲ್ಲಿನ ಉಕ್ಕಡದವರ ಸೂಚನೆಯ ಮೇರೆಗೆ ಚಲನೆಯನ್ನು ನಿಲ್ಲಿಸಿದೆವು. ಎದುರಿನ ಬದರಿಯ ಕಡೆಯಿಂದ ಕೆಲವು ಮಿಲಿಟರಿ ಟ್ರಕ್ಕುಗಳು ಬರುತ್ತಿದ್ದ ಕಾರಣದಿಂದ ನಮ್ಮ ವಾಹನ ಹದಿನೈದು ನಿಮಿಷಗಳ ಕಾಲ ನಿಲ್ಲಬೇಕಾಯಿತು. ಇದಕ್ಕೆ ಮುನ್ನ ಗೋವಿಂದಘಾಟ್‌ದಲ್ಲಿ ನಾವು ಇಳಿದು ಸ್ವಲ್ಪ ತಡ ಮಾಡಿದೆವೆಂಬ ಕಾರಣದಿಂದ, ಇಲ್ಲಿ ಯಾರೂ ಟ್ಯಾಕ್ಸಿಯಿಂದ ಇಳಿಯಬೇಡಿ ಎಂದೂ, ಸಿಗ್ನಲ್ ಬಂದ ಕೂಡಲೆ ಹೊರಡಬೇಕಾಗುತ್ತದೆಂದೂ ನಮ್ಮ ಚಾಲಕ ಸೂಚಿಸಿದ. ಹೀಗಾಗಿ ಟ್ಯಾಕ್ಸಿಯಲ್ಲೇ ಕೂತು ಪಾಂಡುಕೇಶ್ವರ ಎಂಬ ಊರನ್ನೂ, ಆ ಊರಿನ ಕೆಳಗೆ ಹರಿಯುವ ಅಲಕನಂದೆಯ ಪ್ರವಾಹವನ್ನೂ, ನದಿಗೂ ರಸ್ತೆಗೂ ನಡುವಣ ತಗ್ಗುಗಳಲ್ಲಿದ್ದ ಸಣ್ಣ ಪುಟ್ಟ ಗುಡಿಗಳನ್ನೂ ನೋಡುತ್ತ ಕುಳಿತೆವು. ನಾವು ಕಂಡ ಹಲವು ಗುಡಿಗಳಲ್ಲಿ ಒಂದು ಪಾಂಡುವಿಗೆ ಸಂಬಂಧಿಸಿದ್ದೆಂದು ತಿಳಿಯಿತು.

ಮಹಾಭಾರತಕ್ಕೂ ಹಿಮಾಲಯಕ್ಕೂ ಇರುವ ನಂಟು, ರಾಮಾಯಣಕ್ಕೂ ಹಿಮಾಲಯಕ್ಕೂ ಅಷ್ಟಾಗಿ ಇಲ್ಲ. ಹಿಮಾಲಯಕ್ಕೆ ಪ್ರವೇಶಿಸುವ ದ್ವಾರದಲ್ಲಿನ ಹೃಷಿಕೇಶದ ಹತ್ತಿರದ ಲಕ್ಷ್ಮಣ ಝೂಲಾವೊಂದನ್ನು ಬಿಟ್ಟರೆ, ಇನ್ನುಳಿದ ಸ್ಥಳಗಳೆಲ್ಲಾ ಮಹಾಭಾರತದ ಪಾತ್ರಗಳಿಗೆ ಸಂಬಂಧಿಸಿದವುಗಳೇ. ಪಾಂಡುಕೇಶ್ವರ, ಆ ಹೆಸರೇ ಸೂಚಿಸುವಂತೆ, ಪಾಂಡವರ ತಂದೆಯಾದ ಪಾಂಡುರಾಜನಿಗೆ ಸಂಬಂಧಿಸಿದ್ದು. ಈಗಿನ ಈ ಘಡವಾಲ್ ಪ್ರದೇಶಕ್ಕೆ, ಮಹಾಭಾರತದ ಕಾಲದಲ್ಲಿ ಪಾಂಚಾಲ ದೇಶವೆಂದು ಕರೆಯಲಾಗುತ್ತಿತ್ತು. ಈ ಪ್ರದೇಶದ ಅನೇಕ ಊರುಗಳು ಪಾಂಡವರ ಹೆಸರಿನಿಂದ ಅಂಕಿತವಾಗಿವೆ- ಪಾಂಡುಖಲ್, ಪಾಂಡುಕೇಶ್ವರ ಇತ್ಯಾದಿ. ಈ ಪಾಂಡುಕೇಶ್ವರ ಪಾಂಡವರ ಬಾಲ್ಯ ಕಾಲದ ಮತ್ತು ತದನಂತರ ಅವರು ವನವಾಸಕ್ಕೆ ಬಂದ ಕಾಲದ ಪ್ರದೇಶ. ಪಾಂಡು, ಮುನಿಶಾಪಕ್ಕೆ ಗುರಿಯಾಗಿ, ಕುಂತಿ ಮಾದ್ರಿಯರೊಡನೆ ಇಲ್ಲಿ ವಾಸವಾಗಿದ್ದಾಗ, ಒಂದು ವಸಂತ ಕಾಲದಲ್ಲಿ ಮಾದ್ರಿಯನ್ನು ಕೂಡಿ, ಋಷಿಶಾಪದ ಕಾರಣದಿಂದ ಸತ್ತುಹೋದ ಸ್ಥಳ ಇದು ; ಪಾಂಡುವಿನ ಮಕ್ಕಳು ತಬ್ಬಲಿಗಳಾಗಿ ಹಂಬಲಿಸಿದ್ದನ್ನು ಈ ನಿಷ್ಠುರ ಶಿಲಾ ಶಿಖರಗಳು ನೋಡಿದ ಸ್ಥಳ ಇದು ; ಇಂಥ ಬೆಟ್ಟ – ಬಂಡೆಗಳ ದಿಟ್ಟ ಪರ್ವತಗಳ ಸಾನ್ನಿಧ್ಯದಲ್ಲಿ ಪಾಂಡುಕುಮಾರರು ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡ ಸ್ಥಳ ಇದು.

ಪಾಂಡುವಿಗೆ ಒದಗಿದ ಅವಸ್ಥೆಯನ್ನು ನೆನೆಯುತ್ತಿದ್ದಂತೆ, ಅದಾವಾಗಲೋ ಸಿಗ್ನಲ್ ಬಂದು, ನಮ್ಮ ಟ್ಯಾಕ್ಸಿ ಮುಂದಕ್ಕೆ ಚಲಿಸತೊಡಗಿತ್ತು. ಬೆಟ್ಟಗಳ ಬಳಸು ದಾರಿಗಳಲ್ಲಿ ಏರುತ್ತಾ ನಡೆದ ಹಾಗೆ, ಎತ್ತರದ ಬೆಟ್ಟಗಳ ನಡುವಣ ಕಂದರಗಳಲ್ಲಿ ಹೆಪ್ಪುಗಟ್ಟಿಕೊಂಡ ಹಿಮ, ನಡುಹಗಲಿನ ಬಿಸಿಲಿನಲ್ಲಿ ಬೆಳ್ಳಗೆ ಹೊಳೆಯುತ್ತಿತ್ತು. ಹಾಸಿಕೊಂಡ ಬಂಡೆಯಂಥ ಹಿಮದ ಹಾಳೆಗಳ ನಡುವೆ, ಬಿಸಿಲಿಗೆ ಕರಗಿದ ಹಿಮ ನೀರಾಗಿ ತೂರಿ, ತಪ್ಪಿಸಿಕೊಂಡು ಕೆಲವೆಡೆ ಕೆಳಕ್ಕೆ-ಇಳಿಯತೊಡಗಿತ್ತು. ಈ ದೃಶ್ಯವನ್ನು ನೋಡುತ್ತಿದ್ದಂತೆ, ಕಣಿವೆಯ ಇಕ್ಕಟ್ಟಿನ ಪುಟ್ಟಗುಡಿಯೊಂದರ ಮುಂದೆ ನಮ್ಮ ಟ್ಯಾಕ್ಸಿ ಗಕ್ಕನೆ ನಿಂತುಕೊಂಡಿತು. ಅದು ಹನುಮಾನ್‌ಚಟ್ಟಿ. ಪಾಂಡುಕೇಶ್ವರದ ಆರು ಸಾವಿರ ಅಡಿಗಳ ಹಂತದಿಂದ, ಮುಂದಿನ ಬದರಿಗೆ ಮತ್ತೆ ನಾಲ್ಕೂವರೆ ಸಾವಿರ ಅಡಿಗಳ ಏರುವೆಯನ್ನು ಹತ್ತುವ ಮುನ್ನ ನಿಲ್ಲಬೇಕಾದದ್ದು ಹನುಮಾನ್ ಚಟ್ಟಿಯ ಆಂಜನೇಯನ ಸನ್ನಿಧಿಯಲ್ಲಿ. ಹನುಮಂತನ ಗುಡಿಯ ಪೂಜಾರಿ ಸ್ವೆಟರು, ಟೋಪಿ ಹಾಕಿಕೊಂಡು, ದೇವರಿಗೆ ಬೆಳಗಿದ ಆರತಿಯ ತಟ್ಟೆಯನ್ನು ತಂದು ನಮ್ಮ ಮುಂದೆ ಹಿಡಿದ. ಮೇಲಕ್ಕೆ ಏರುವ ಎಲ್ಲ ವಾಹನಗಳೂ ಇಲ್ಲಿ ನಿಂತು, ‘ಪಂಡ’ನು ಬಲವಂತವಾಗಿ ಹಣೆಗೆ ಇಡುವ ಆಂಜನೇಯನ ಕುಂಕುಮ ಪ್ರಸಾದದಿಂದ ರಂಜಿತರಾಗಲೇಬೇಕು. ಅದರಲ್ಲೂ ವಾಹನಗಳನ್ನು ನಡೆಯಿಸುವ ಡ್ರೈವರ್‌ಗಳಂತೂ, ಇಂಥ ಘಟ್ಟಗಳ ದೇವರುಗಳ ಪರಮ ಭಕ್ತರು.

ಈ ಹನುಮನ್‌ಚಟ್ಟಿಗೆ ಬೇರೊಂದು ಮಹತ್ವವೂ ಇದೆ. ಅದೆಂದರೆ, ಸೌಗಂಧಿಕಾ ಪುಷ್ಪವನ್ನು ಹುಡುಕಿಕೊಂಡು ಹೊರಟ ಭೀಮಸೇನನ ದಾರಿಗೆ ಅಡ್ಡಲಾಗಿ ತನ್ನ ಬಾಲವನ್ನು ಹಾಸಿ ಕೂತ ಆಂಜನೇಯನು, ಭೀಮನ ಗರ್ವವನ್ನು ಭಂಗಿಸಿದ್ದು ಇಲ್ಲಿಯೇ. ದ್ರೌಪದಿಯ ಮೂಗಿಗೆ ಬಡಿದ ಆ ಸೌಗಂಧಿಕಾ ಗಂಧ, ಈಗಾಗಲೇ ವರ್ಣಿಸಿರುವ ಹೂವಿನ ಕಣಿವೆಯ ಕಡೆಯಿಂದ ಬಂದದ್ದಾಗಿತ್ತೋ ಏನೋ.

ಕುಂಕುಮಾಂಕಿತರಾಗಿ ನಾವು., ಹನುಮಾನ್ ಚಟ್ಟಿಯಿಂದ ಮುಂದಿನ ಎತ್ತರವನ್ನು ಏರತೊಡಗಿದ್ದೆವು. ಕೇವಲ ಇಪ್ಪತ್ತು ಕಿಲೋಮೀಟರ್‌ಗಳಲ್ಲಿ, ನಾಲ್ಕು ಸಾವಿರ ಅಡಿಗಳಿಗೂ ಮೀರಿದ ಏರುವೆಯನ್ನು ನಮ್ಮ ವಾಹನ ಕ್ರಮಿಸಬೇಕಾಯಿತು. ಗಂಧಮಾದನವೆಂದು, ಪುರಾಣಗಳಲ್ಲಿ ವರ್ಣಿತವಾಗಿರುವ, ಅನೇಕ ಬಗೆಯ ಹೂವುಗಳಿಂದ ಶ್ರಾವಣ ಭಾದ್ರಪದಗಳಲ್ಲಿ ಸುಗಂಧಿತವಾಗುವ ಈ ಪರ್ವತದ ವಕ್ರ ಪಥಗಳಲ್ಲಿ, ನಮ್ಮ ಟ್ಯಾಕ್ಸಿ ಸುಮಾರು ಒಂದು ಗಂಟೆಯ ಕಾಲ ಪಯಣಿಸಿದ ನಂತರ ಮಧ್ಯಾಹ್ನದ, ಮಟ ಮಟ ಮಧ್ಯಾಹ್ನದ, ಹೊಳೆಯುವ ಬಿಸಿಲಿನಲ್ಲಿ ಕಾಣಿಸಿತು, ಸುತ್ತುವರಿದ ಬೆಟ್ಟಗಳ ನಡುವಣ ಬಟ್ಟಲಿನಾಕಾರದ ಬಯಲಿನಲ್ಲಿ ವಿಶಾಲ ಬದರಿ. ಎತ್ತರದಲ್ಲಿ ಧ್ವಜವನ್ನೆತ್ತಿ ನಿಂತ ದೇವಸ್ಥಾನ ; ಅದರೆದುರು ಹರಿಯುವ ನದಿ, ಮತ್ತು ವರ್ಣಮಯವಾಗಿ ಹರಹಿಕೊಂಡ ಊರಮನೆ – ಕಟ್ಟಡಗಳು.

ಬದರಿ ಭಾರತದ ಉತ್ತರೋತ್ತರ ತುದಿಯಲ್ಲಿರುವ ಒಂದು ಪುಣ್ಯಕ್ಷೇತ್ರ. ಹಿಮಾಲಯವೆಂದರೆ ಶಿವನಿಗೆ ಗುತ್ತಿಗೆಯಾದದ್ದು ಎನ್ನುವಷ್ಟರ ಮಟ್ಟಿಗೆ ನಮ್ಮ ಪುರಾಣ ಹಾಗೂ ಸಾಹಿತ್ಯಗಳು ವರ್ಣಿಸಿವೆ. ಹಿಮಾಲಯದ ಶುಭ್ರ ಧವಳ ಶೃಂಗಗಳು ಶಿವನ ಆವಾಸವೆಂದು ಹೇಳಲಾಗಿದೆ; ಶಿವನು ಮದುವೆಯಾದದ್ದು ಈ ಹಿಮವಂತನ ಮಗಳು ಪಾರ್ವತಿಯನ್ನು ; ಹಾಗೆಯೇ ಹಿಮಾಚಲದ ಶಿಖರಗಳಿಂದ ಧುಮುಕುವ ಗಂಗೆಯನ್ನೂ ಆತ ತನ್ನ ಜಟಾಜೂಟದಲ್ಲಿ ಸೆರೆಹಿಡಿದು ತನ್ನವಳನ್ನಾಗಿ ಮಾಡಿಕೊಂಡಿದ್ದು ಇಲ್ಲಿಯೇ. ಶಿವನ ಸಮಸ್ತ ಪರಿವಾರ ಹಾಗೂ ಅವನ ವ್ಯವಹಾರ ಭೂಮಿಕೆ ಈ ಹಿಮಾಲಯವೆ. ಶಿವನನ್ನು ಕುರಿತು ವರ್ಣಿಸುವ ಕವಿಗಳಾಗಲೀ, ಚಿತ್ರ ಕಲಾವಿದರಾಗಲೀ, ಹಿಮಾಲಯದ ಹಿನ್ನೆಲೆಯಿಲ್ಲದ ಶಿವನನ್ನು ಕಲ್ಪಿಸಿಕೊಳ್ಳಲಾರರು. ಆದರೂ ಭಾರತದ ಧಾರ್ಮಿಕ ಭಾವನೆಗಳನ್ನು ನಿಯಂತ್ರಿಸುವ ಮತ್ತೊಬ್ಬ ‘ದೇವ’ ನಾದ ವಿಷ್ಣುವಿನ ಆಧಿಪತ್ಯವೂ ಈ ಹಿಮಾಲಯದ ಒಂದು ಭಾಗದಲ್ಲಿ ಸ್ಥಾಪಿತವಾಗಿದೆ. ಅದೇ ಬದರಿ.

ಪ್ರಾಚೀನ ಕಾಲದಿಂದಲೂ ಬದರಿ ಯೋಗಭೂಮಿ ಎಂದು ಹೆಸರಾಗಿದೆ. ಅನೇಕ ಋಷಿ – ಮುನಿಗಳು ತಪಸ್ಸಿಗೆ ನಿಂತು ಸಿದ್ಧಿಯನ್ನು ಪಡೆದ ಸ್ಥಳ ಇದು. ಪುರಾಣಗಳ ಪ್ರಕಾರ ನರ – ನಾರಾಯಣರು ತಪಸ್ಸು ಮಾಡಿದ್ದು ಇಲ್ಲಿ; ಇಂದ್ರನು, ತಪಸ್ಸಿಗೆ ಕೂತ ಈ ಋಷಿಗಳ ತಫೋಭಂಗ ಮಾಡಲು ಅಪೂರ್ವ ಸುಂದರಿಯರಾದ ಅಪ್ಸರೆಯನ್ನು ಕಳುಹಿಸಿದಾಗ, ನಾರಾಯಣ ಋಷಿ ಅಪ್ರತಿಮ ಸುಂದರಿಯಾದ ಊರ್ವಶಿಯನ್ನು ಸೃಷ್ಟಿ ಮಾಡಿ, ಇಂದ್ರನು ಕಳುಹಿಸಿದ ಅಪ್ಸರೆಯರೂ ನಾಚಿಕೊಳ್ಳುವಂತೆ ಮಾಡಿ, ಊರ್ವಶಿಯನ್ನು ಇಂದ್ರನಿಗೆ ಕೊಡುಗೆಯಾಗಿ ಕಳುಹಿಸಿಕೊಟ್ಟಿದ್ದು ಇಲ್ಲಿ; ವೇದವ್ಯಾಸರು ವೇದಗಳನ್ನು ವಿಂಗಡಿಸಿದ್ದು, ಹದಿನೆಂಟು ಪುರಾಣಗಳನ್ನು ರಚಿಸಿದ್ದು, ಇಡೀ ಮಹಾಭಾರತವನ್ನು ತಮ್ಮ ಯೋಗದೃಷ್ಟಿಯಿಂದ ಕಂಡು, ಲಿಖಿತ ರೂಪವನ್ನು ಕೊಟ್ಟಿದ್ದು ಇಲ್ಲಿ; ಶ್ರೀ ಕೃಷ್ಣನ ಸೂಚನೆಯ ಮೇರೆಗೆ ಅವನ ಆಪ್ತನಾದ ಉದ್ಧವನು ತಪಸ್ಸಿಗೆ ಕೂತದ್ದು ಇಲ್ಲಿ ; ಸಾಕ್ಷಾತ್ ಶಿವನೇ,  ಬ್ರಹ್ಮಹತ್ಯಾ ದೋಷದಿಂದ ಮುಕ್ತನಾಗಿ ತಪಸ್ಸಿಗೆ ನಿಂತದ್ದು ಇಲ್ಲಿ. ಅಷ್ಟೇ – ಅಲ್ಲ, ‘ಕಾಶೀಕ್ಷೇತ್ರದಲ್ಲಿ ನನಗೆ ಯಾವ  ಅಭಿಮಾನವಿರುವುದೋ, ಕೈಲಾಸ ಪರ್ವತದಲ್ಲಿ ಯಾವ ಅಭಿಲಾಷೆ ಇರುವುದೋ, ಅವೆಲ್ಲವುಗಳಿಗಿಂತ ಅನಂತ ಗುಣಗಳಷ್ಟು ಅಧಿಕವಾದ ಪ್ರೀತಿಯು ನನಗೆ ಬದರೀ ಕ್ಷೇತ್ರದ ಮೇಲಿರುವುದು’ ಎಂದು ಸ್ಕಾಂದಪುರಾಣಕರ್ತರು ಶಿವನ ಬಾಯಿಂದಲೇ ಬಹಿರಂಗವಾಗಿ ಹೀಗೆ ಘೋಷಿಸಿದ ಮೇಲೆ, ಬದರಿಯ ಮಹಾತ್ಮೆಯನ್ನು ಪ್ರತ್ಯೇಕವಾಗಿ ವರ್ಣಿಸುವ ಅಗತ್ಯವಾದರೂ ಎಲ್ಲಿದೆ?

ಪವಿತ್ರ ಬದರಿಯ ಹಲವು ಮನೆಗಳನ್ನು ಹಾದು, ‘ಪರಮಾರ್ಥ ಲೋಕ’ವೆಂಬ ಭಾರೀ ಕಟ್ಟಡದ ಎದುರಿಗೆ ನಮ್ಮ ಟ್ಯಾಕ್ಸಿ ನಿಂತಿತು. ಅದೊಂದು ಬೃಹದಾಕಾರವಾದ ವಸತಿಗೃಹ. ನೂರಾರು ಕೊಠಡಿಗಳು, ಪ್ರತಿಯೊಂದು ಕೋಣೆಯಲ್ಲೂ ನೆಲದ ಮೇಲೆ ಹಾಸಿದ ರಜಾಯಿಗಳು,  ಹೊದೆಯಲೂ ರಜಾಯಿಗಳು. ಕೆಲವೇ ಜನರಿದ್ದರೆ ಸಣ್ಣ ಕೊಠಡಿ, ಹೆಚ್ಚು ಜನರಿದ್ದರೆ ಉದ್ದವಾದ ಕೊಠಡಿ ವಾಸಕ್ಕೆ ದೊರೆಯುತ್ತದೆ. ಕೊಠಡಿಗಳ ಮಧ್ಯೆ ಉದ್ದವಾದ ಮೊಗಸಾಲೆ; ಅದರ ತುದಿಗೆ ಶೌಚಗೃಹಗಳು. ಕೇದಾರದಲ್ಲಿನ ವಸತಿಗಳಿಗೆ ಹೋಲಿಸಿದರೆ ಇವು ನೂರು ಪಾಲು ಸೊಗಸಾಗಿವೆ. ಈ ‘ಪರಮಾರ್ಥ ಲೋಕ’ವೆಂಬ ವಸತಿಗೃಹದ  ವ್ಯವಹಾರವನ್ನೆಲ್ಲ ಸಾಧು ಸಂಘವೊಂದು ನೊಡಿಕೊಳ್ಳುತ್ತದೆ. ಕೊಠಡಿಗಳಲ್ಲಿ ಉಳಿದುಕೊಳ್ಳಲು ಇಂತಿಷ್ಟು ಎಂದು ನಿಗದಿತವಾದ ಬಾಡಿಗೆ ಇಲ್ಲ. ಇಲ್ಲಿದ್ದು ಹಿಂತಿರುಗುವಾಗ, ಅವರವರಿಗೆ ಇಷ್ಟವಾದಷ್ಟು ಕಾಣಿಕೆ ಕೊಡಬಹುದು. ಯಾತ್ರೆಯ ಈ ಕಾಲದಲ್ಲಂತೂ ದಿನಕ್ಕೆ ನೂರಾರು ಜನ ಬಂದು ಇಲ್ಲಿ ತಂಗುತ್ತಾರೆ. ಇನ್ನು, ಇದಕ್ಕಿಂತ ಅನುಕೂಲವಾದ ವಸತಿಗೃಹಗಳು ಬದರಿಯಲ್ಲಿ ಸಾಕಷ್ಟಿವೆ.

ನಾವು ಮೂವರಿಗೆ ದೊರೆತ ಕೋಣೆ ಅಂಥ ಅನಾನುಕೂಲವಾಗೇನೂ ಇರಲಿಲ್ಲ. ಎರಡನೆಯ ಮಹಡಿಯಲ್ಲಿ ದೊರೆತ ಈ ಕೋಣೆಯಲ್ಲಿ ನೆಲೆ ನಿಂತ ನಂತರ ಕೆಳಗಿಳಿದು ಬಂದು, ಪಕ್ಕದಲ್ಲಿದ್ದ ಕ್ಯಾಂಟೀನಿನಲ್ಲಿ ಒಂದಷ್ಟು ಊಟ ಮಾಡಿ, ಮತ್ತೆ ಒಂದಷ್ಟು ಹೊತ್ತಿನ ನಂತರ ‘ಪರಮಾರ್ಥ ಲೋಕ’ದಿಂದ ಸುಮಾರು ಅರ್ಧ ಮೈಲಿ ದೂರದ ದೇವಸ್ಥಾನದ ಕಡೆಗೆ ಇಳಿಯತೊಡಗಿದೆವು. ತಾತ್ಕಾಲಿಕವಾಗಿ ದಾರಿಯ ಎರಡೂ ಕಡೆ ನಿರ್ಮಿಸಿದ ಹೋಟೆಲು, ಅಂಗಡಿ ಇತ್ಯಾದಿಗಳನ್ನು ಹಾದು, ಇಳಿತದ ತುದಿಗೆ ಬಂದಾಗ ಶುಭ್ರವಾದ ಅಲಕನಂದಾ ನದಿಯ ಪ್ರವಾಹ, ಅದನ್ನು ದಾಟಲು ನಿರ್ಮಿಸಿದ ಸೇತುವೆ. ಸೇತುವೆಯಾಚೆಗಿನ ಎತ್ತರದಲ್ಲಿ, ನರ – ನಾರಾಯಣ ಪರ್ವತಗಳ ಹಿನ್ನೆಲೆಯಲ್ಲಿ ಬದರೀನಾರಾಯಣನ ದೇವಸ್ಥಾನ, ಕಣ್ಣನ್ನು ಸೆಳೆದುವು. ಅನುಕ್ರಮವಾಗಿ ೧೯,೨೧೦ ಮತ್ತು ೧೯,೭೫೦ ಅಡಿಗಳ ಎತ್ತರವನ್ನುಳ್ಳ ನರ ಮತ್ತು  ನಾರಾಯಣ ಪರ್ವತಗಳ ನಡುವೆ, ದೇವಸ್ಥಾನಕ್ಕೆ ಗೋಪುರಾಕಾರದ ಪ್ರಭಾವಳಿಯಂತೆ  ನಿಂತ ನೀಲಕಂಠ ಪರ್ವತದ ಶಿಖರ, ಇಳಿ ಹಗಲಿನ ಬಿಸಿಲಿನಲ್ಲಿ ಬೆಳ್ಳಿಯಂತೆ ಥಳಥಳಿಸತೊಡಗಿತ್ತು. ೨೧.೬೪೦ ಅಡಿ ಎತ್ತರದ ನೀಲಕಂಠ ಪರ್ವತ, ಹಿಮಾಲಯದ ಎತ್ತರವಾದ ಶಿಖರಗಳಲ್ಲಿ ಒಂದು, ನಾವು ಅದನ್ನು ನೋಡುತ್ತಾ, ಸೇತುವೆಯ ಮೂಲಕ ಅಲಕನಂದೆಯನ್ನು ದಾಟಿ, ಅದರ ಬಲಗಡೆ ಇರುವ ಬಿಸಿ ನೀರಿನ ಕುಂಡಗಳಲ್ಲಿ ಸ್ನಾನ ಮಾಡುತ್ತಿದ್ದ ನೂರಾರು ಯಾತ್ರಿಕರನ್ನು ನೋಡುತ್ತ, ಮೆಟ್ಟಿಲು ಏರಿ ಬದರಿಯ ದೇವಸ್ಥಾನವನ್ನು ಪ್ರವೇಶಿಸಿದೆವು.

ಬದರಿಯ ಈ ದೇವಸ್ಥಾನ ಅತ್ಯಂತ ಆಕರ್ಷಕವಾಗಿದೆ. ಹತ್ತು ಸಾವಿರದ ಎರಡು ನೂರು ಅಡಿಗಳ ಎತ್ತರದಲ್ಲಿರುವ ಈ ದೇವಸ್ಥಾನದ ಬಗ್ಗೆ ಯಾವ ಚಾರಿತ್ರಿಕವಾದ ಮಾಹಿತಿಗಳೂ ದೊರೆಯುವುದಿಲ್ಲ. ಇದು ೪೫ ಅಡಿ ಎತ್ತರವಾಗಿದ್ದು, ಸುತ್ತಲೂ ಸಾಕಷ್ಟು ವಿಶಾಲವಾದ ಪ್ರಾಕಾರವಿದೆ. ಪ್ರವೇಶ ದ್ವಾರದಲ್ಲಿ ಮತ್ತು ಅಕ್ಕ ಪಕ್ಕದಲ್ಲಿ ಬಿಳಿಕಲ್ಲುಗಳ ಸೋಪಾನಗಳಿವೆ. ರಾಜಾಸ್ಥಾನಿ, ಮೊಘಲ್ ಮತ್ತು ಉತ್ತರಖಂಡ ಶೈಲಿಯಲ್ಲಿ ರಚಿತವಾಗಿರುವ ಈ ದೇವಸ್ಥಾನ ಕರಿಯ ಕಲ್ಲಿನದು. ಒಳಗಿನ ಕಂಬಗಳು ಪಾಲಿಷ್ ಮಾಡಿದ ಹಾಗೆ ನುಣುಪಾಗಿ ಹೊಳೆಯುತ್ತವೆ. ಕಂಬಗಳ ಮೇಲೆ ಮಹಾವಿಷ್ಣುವಿನ ಅವತಾರದ ಸುಂದರ ಶಿಲ್ಪಗಳಿವೆ. ಈ ದೇವಸ್ಥಾನವನ್ನು ಆಚಾರ್ಯ ಶಂಕರರು ನಿರ್ಮಿಸಿದರೆಂದು ಪ್ರತೀತಿ; ಆದರೆ ಈ ಮೊದಲು ಶಂಕರರು ಕಟ್ಟಿಸಿದ್ದ ನಿಜವಾದ ದೇವಸ್ಥಾನ, ಹಿಮಪಾತಾದಿಗಳಿಂದ ನಷ್ಟವಾದದ್ದರಿಂದ, ಈಗ ನಾವು ಕಾಣುವ ಈ ದೇವಸ್ಥಾನವನ್ನು, ಹಿಂದೆ ದೇವಸ್ಥಾನವಿದ್ದ ಸ್ಥಳದಲ್ಲಿಯೇ ೧೯೨೦ ರಲ್ಲಿ ಶ್ರೀ ಭದ್ರಾಚಾರ್ಯರು ಕಟ್ಟಿಸಿದರೆಂದು ತಿಳಿದುಬರುತ್ತದೆ.

ದೇವಸ್ಥಾನ ತುಂಬ ಚೊಕ್ಕಟವಾಗಿದೆ. ಒಂದು ಅನುಕ್ರಮದಲ್ಲಿ ಭಕ್ತಾದಿಗಳನ್ನು ಪಾಳಿ ನಿಲ್ಲಿಸಿ ದರ್ಶನಕ್ಕೆ ಬಿಡುವುದರಿಂದ, ಯಾವ ನೂಕು ನುಗ್ಗಲಿಗೂ ಅವಕಾಶವಿಲ್ಲ. ಪೂಜೆಯ ಸಮಯವೊಂದನ್ನು ಬಿಟ್ಟರೆ, ಉಳಿದಂತೆ ಸ್ವಲ್ಪ ವಿರಾಮವಾಗಿಯೇ ನಿಂತು ನೋಡಬಹುದು. ಬದರೀ ನಾರಾಯಣನ ವಿಗ್ರಹ ಕಪ್ಪು ಸಾಲಿಗ್ರಾಮ ಶಿಲೆಯದು. ಸುಮಾರು ಮೂರು ಅಡಿ  ಎತ್ತರದ ಈ ವಿಗ್ರಹ ಪದ್ಮಾಸನಸ್ಥ ಭಂಗಿಯಲ್ಲಿದೆ. ಇದರ ಎರಡೂ ಬದಿಗೆ ನರ – ನಾರಾಯಣರ ವಿಗ್ರಹಗಳಿವೆ. ಬಲಕ್ಕೆ ಗರುಡ ಕುಬೇರರ ವಿಗ್ರಹವಿದೆ. ಬದರೀ ನಾರಾಯಣನ ಈ ವಿಗ್ರಹ ಬುದ್ಧನದೆಂದು,  ಬೌದ್ಧರು ಹೇಳುತ್ತಾರೆ. ಬದರಿ ಒಂದು ಕಾಲಕ್ಕೆ ಬೌದ್ಧ ಧರ್ಮದ ಕೇಂದ್ರವಾಗಿತ್ತೆಂದು ಹೇಳಲಾಗಿದೆ. ಹಿಂದೆ ಶ್ರೀ ಶಂಕರಾಚಾರ್ಯರು,   ನಾರದಕುಂಡದಲ್ಲಿ ಮುಳುಗಿ ಹೋಗಿದ್ದ ನಾರಾಯಣನ ವಿಗ್ರಹವನ್ನು ಹುಡುಕಿ ತೆಗೆದು ಪ್ರತಿಷ್ಠಾಪಿಸಿದರಂತೆ. ಈ ಘಟನೆ ಕ್ರಿ. ಶ. ೮೮೭ರಲ್ಲಿ ನಡೆದಂತೆ ತೋರುತ್ತದೆ. ಬಹುಶಃ ಹಿಂದೂ ಹಾಗೂ ಬೌದ್ಧ ಧರ್ಮಗಳ ಸಂಘರ್ಷದ ಐತಿಹಾಸಿಕ ಅವಶೇಷದಂತೆ ತೋರುತ್ತವೆ ಈ ಘಟನೆಗಳು.

ದೇವಸ್ಥಾನದ ಬಲಗಡೆಗೆ ಚಾಚಿಕೊಂಡ ಗಲ್ಲಿಗಳಲ್ಲಿ ಚಹ ಹುಡುಕಿಕೊಂಡು ಸ್ವಲ್ಪ ದೂರ ಹೋದೆವು. ಎರಡೂ ಬದಿಗೆ ಬಗೆ ಬಗೆಯ ಕಂಪುಗಳನ್ನು ಹರಡುವ ಹೋಟಲುಗಳು, ಮತ್ತು ಪ್ರಸಾದವನ್ನು ಮಾರುವ ಅಂಗಡಿಗಳು. ದ್ರಾಕ್ಷಿ, ಬಾದಾಮಿ, ಸಕ್ಕರೆ ಸವರಿದ ಕಡಲೆ, ಅರಿಶಿನ ಕುಂಕುಮ ಇತ್ಯಾದಿಗಳು, ಅಂಗಡಿಗಳ ತಟ್ಟೆಯನ್ನು ತುಂಬಿದ್ದವು. ಜತೆಗೆ ಪ್ರಸಾದಕ್ಕೆ ಸದಾ ಮುಕುರುವ ನೊಣಗಳು. ಇನ್ನು ಕೆಲವು ಅಂಗಡಿಗಳಲ್ಲಿ ಬಣ್ಣದ ಮಣಿಸರಗಳು, ಬಳೆಗಳು, ಕನ್ನಡಿಗಳು, ಜಪಸರಗಳು, ಬದರೀ ದೃಶ್ಯಗಳ ಚಿತ್ರಗಳಿರುವ ಆಲ್ಬಂಗಳು, ಗೈಡ್ ಪುಸ್ತಕಗಳು, ಬದರೀ ಮಹಾತ್ಮೆಯನ್ನೊಳಗೊಂಡ ಜನಪ್ರಿಯ ಕೃತಿಗಳು, ತೀರ್ಥವನ್ನು ತುಂಬಿಕೊಂಡ ಊರುಗಳಿಗೆ ಒಯ್ಯಲು ತಕ್ಕ ತಾಮ್ರದ ಹಾಗೂ ಹಿತ್ತಾಳೆಯ ಗಿಂಡಿಗಳು, ತಂಬಿಗೆಗಳು. ಒಂದೊಂದು ಅಂಗಡಿಯ ಮುಂದೆಯೂ ಪ್ರಸಾದವನ್ನು ಕೊಂಡು ತೀರ್ಥಯಾತ್ರೆಯ ಪುಣ್ಯ ಸಂಪಾದನೆಯನ್ನು ತಮ್ಮ ಊರಿನ ಅಕ್ಕ ಪಕ್ಕದ ಮನೆಗಳಿಗೆ ಹಂಚಲು ಕಾತರರಾದ ಬಹುಸಂಖ್ಯೆಯ ಯಾತ್ರಿಕರಿಂದ, ಬದರಿಯ ಬೀದಿಗಳು ಗಿಜಿಗುಟ್ಟುತ್ತಿದ್ದವು. ಆ ನೂಕು ನುಗ್ಗಲಿನಲ್ಲಿ ಹೋಟೆಲು ಮನೆಯೊಂದರೊಳಕ್ಕೆ ಪ್ರವೇಶ ಮಾಡಿ ಒಂದಷ್ಟು ಬಿಸಿ ಬಿಸಿ ಚಹ ಕುಡಿದು, ಮತ್ತೆ ದೇವಸ್ಥಾನದ ಪ್ರಾಕಾರವನ್ನು ಪ್ರವೇಶಿಸಿದೆವು.

ದೇವಸ್ಥಾನದ ಪ್ರಾಕಾರದಲ್ಲಿ ನಾವು ನಿಂತಿರುವಾಗ, ಪಂಚೆಯುಟ್ಟು, ಉಣ್ಣೆಯ ಉದ್ದನೆಯ ಮುಚ್ಚು ಕೋಟನ್ನು ತೊಟ್ಟು, ನಾಟಕದವರಂತೆ ತಲೆಕೂದಲನ್ನು ಕೊರಳಿನ ಸುತ್ತ ಇಳಿಯಬಿಟ್ಟುಕೊಂಡ, ತಾಂಬೂಲರಾಗ ರಂಜಿತವಾದ ಮುಗುಳ್ನಗೆಯ ವ್ಯಕ್ತಿಯೊಬ್ಬರನ್ನು, ದೇವಸ್ಥಾನಕ್ಕೆ ಸೇರಿದ ಕೆಲವರು ಸಮಸ್ತ ಮರ್ಯಾದೆಗಳೊಡನೆ ಎದುರುಗೊಂಡು, ಥಳ ಥಳ ಹೊಳೆವ ತಂಬಿಗೆಯೊಳಗಿನ ನೀರಿನಿಂದ ಕಾಲು ತೊಳೆದು ಒಳಕ್ಕೆ ಕರೆದುಕೊಂಡರು. ಅವರ‍್ಯಾರೆಂದು ವಿಚಾರಿಸಿದ್ದರ ಮೇಲೆ, ಅವರೇ ‘ರಾವಲ್‌ಜೀ’ ಎಂದು ತಿಳಿಯಿತು. ‘ರಾವಲ್‌ಜೀ’ ಅಂದರೆ ದೇವಸ್ಥಾನದ, ಬದರೀ ದೇವಸ್ಥಾನದ ಪ್ರಧಾನ ಅರ್ಚಕರು. ಅವರು ಕೇರಳದ ನಂಬೂದರೀ ಬ್ರಾಹ್ಮಣರು. ಶಂಕರಾಚಾರ್ಯರ ಕಾಲದಿಂದಲೂ ಬದರೀ  ದೇವಸ್ಥಾನದ, ಅರ್ಚನೆಯ ಅಧಿಕಾರ ರಾವಲ್‌ಜೀ ಅವರಿಗೆ ದತ್ತವಾಗಿದೆ. ಕೇದಾರದಲ್ಲಿಯೂ, ಕೇದಾರೇಶ್ವರನ ಅರ್ಚನೆಯ ಅಧಿಕಾರವನ್ನು ಪಡೆದಿರುವವರು, ಉತ್ತರ ಕರ್ನಾಟಕದ ವೀರಶೈವ ಅರ್ಚಕರು. ಈ ಅರ್ಚಕರು ಪ್ರತಿದಿನವೂ ಕೇದಾರೇಶ್ವರನನ್ನು ಮೊದಲು ಪೂಜಿಸಿದ ನಂತರ, ಉಳಿದ ಭಕ್ತಾದಿಗಳು ತಾವೇ ಕೈಯಾರ ಪೂಜಿಸುವ ಅವಕಾಶ ಅಲ್ಲಿದೆ. ಕೇದಾರೇಶ್ವರನ ಪೂಜೆಯ ಹಕ್ಕು ಬಹು ಹಿಂದಿನಿಂದಲೂ ಪರಂಪರಾಗತವಾಗಿ ಆ ವೀರಶೈವ ಮನೆತನದವರಿಗೆ ಉಳಿದು ಬಂದಿದೆ. ಕೇದಾರ, ವೀರಶೈವರ ಪಂಚಪೀಠಗಳಲ್ಲಿ ಒಂದು ಎಂಬುದನ್ನು ನೆನೆಯಬಹುದು. ಒಟ್ಟಿನಲ್ಲಿ ಕರ್ನಾಟಕ ಹಾಗೂ ಕೇರಳಗಳು ಹಿಮಾಲಯದ ಎರಡು ಪ್ರಮುಖ ಕ್ಷೇತ್ರಗಳ ಪೂಜೆಯ ಅಧಿಕಾರವನ್ನು ಸಂಪಾದಿಸಿಕೊಂಡಿರುವುದು ಸ್ವಾರಸ್ಯದ ಸಂಗತಿಯಾಗಿದೆ. ಈ ಎರಡೂ ಕ್ಷೇತ್ರಗಳ ದೇವಾಲಯಗಳ ಬಾಗಿಲು ತೆರೆಯುವ ಮತ್ತು ಮುಚ್ಚುವ ನಿರ್ಣಯವನ್ನು ತೆಗೆದುಕೊಳ್ಳುವ ದೇವಸ್ಥಾನ ಸಮಿತಿಯ ಮುಖ್ಯಸ್ಥರು ಇವರು. ನವೆಂಬರ್ ತಿಂಗಳ ಮೂರನೆಯ ವಾರದ ಹೊತ್ತಿಗೆ, ಛಳಿಗಾಲದ ಹಿಮ ಬೀಳುವ ಕಾರಣದಿಂದ, ದೇವಸ್ಥಾನದ ಬಾಗಿಲನ್ನು ಭದ್ರಪಡಿಸಿ, ನಾರಾಯಣನ ಉತ್ಸವ ವಿಗ್ರಹವನ್ನು, ನಾಲ್ಕೂವರೆ ಸಾವಿರ ಅಡಿಗಳ ಕೆಳಗಿನ ಜೋಷೀಮಠಕ್ಕೆ ತೆಗೆದುಕೊಂಡು ಹೋಗಿ ಪೂಜಿಸಲಾಗುವುದು. ಅನಂತರ ಮುಂದಿನ ಆರು ತಿಂಗಳ ಕಾಲ ಅಂದರೆ, ಎಪ್ರಿಲ್ ತಿಂಗಳ ಕೊನೆಯವರೆಗೆ, ಅಥವಾ ಮೇ ತಿಂಗಳ ಮೊದಲ ವಾರದವರೆಗೆ ಬದರಿಯ ಮೇಲೆ ದಟ್ಟವಾದ ಹಿಮ ಕವಿದುಕೊಂಡು, ಅದು ನಿಷ್ಕ್ರಿಯವೂ ನಿರ್ಮಾನುಷವೂ ಆಗಿ ಬಿಡುತ್ತದೆ. ಆ ದಟ್ಟ ಹಿಮದ ನೀರವ, ಚಲನರಹಿತ ಸ್ಥಿತಿಯ ನಡುವೆ ‘ಬಾರಾಮಾಸಿ’ಗಳೆಂದು ಜನ ಕರೆಯುವ ಕೆಲವು ಸನ್ಯಾಸಿಗಳು ಇರುತ್ತಾರಂತೆ.

ಮತ್ತೆ ಏಪ್ರಿಲ್ ಕೊನೆ ಅಥವಾ ಮೇ ತಿಂಗಳ ಮೊದಲ ವಾರದ ಹೊತ್ತಿಗೆ ಮಂಜಿನಲ್ಲಿ ಮಲಗಿದ್ದ ಬದರಿ ಮೈ ಕೊಡವಿಕೊಂಡು ಏಳುತ್ತದೆ. ಮನೆ ಮನೆಗಳ ಮೇಲೆ, ಝೋಪಡಿಗಳ ಮೇಲೆ, ಅವುಗಳ ಬೆನ್ನು ಮುರಿಯುವಂತೆ ಕೂತಿದ್ದ ಹಿಮ ಮೆಲ್ಲನೆ ಕರಗಿ, ಬಾಗಿದ ಕಂಬ ಛಾವಣಿಗಳು ರಿಪೇರಿಯಾಗಿ, ಒಲೆಗಳು ಹೊಗೆಯಾಡತೊಡಗುತ್ತವೆ. ಜೋಷೀಮಠದಿಂದ ಮತ್ತೆ ರಾವಲ್‌ಜೀಯವರು ಏರಿಬಂದು, ಬದರಿಯ ದೇವಸ್ಥಾನದ ಬಾಗಿಲನ್ನು ಹತ್ತು ಜನರ ಸಮಕ್ಷಮದಲ್ಲಿ ತೆರೆಯುತ್ತಾರೆ. ಆರು ತಿಂಗಳ ಹಿಂದೆ ಬಾಗಿಲು ಮುಚ್ಚುವ ಮುನ್ನ ಒಳಗೆ ಹೊತ್ತಿಸಿಟ್ಟ ನಂದಾದೀಪ, ರಾವಲ್‌ಜೀ ಅವರು ಬಾಗಿಲು ತೆರೆದಾಗ ಇನ್ನೂ ಉರಿಯುತ್ತಲೇ ಇರುತ್ತದಂತೆ. ಈ ಪ್ರಥಮ ದೀಪ ದರ್ಶನಕ್ಕಾಗಿಯೇ ಇಲ್ಲಿಗೆ ಬಂದ ಯಾತ್ರಿಕರ ಮೊದಲ ತಂಡ ಅದನ್ನು ದರ್ಶಿಸುತ್ತದಂತೆ. ಕೇದಾರದಲ್ಲಿಯೂ ಹೀಗೆಯೇ – ನಂದಾದೀಪ ದರ್ಶನಕ್ಕೆ ಭಕ್ತಾದಿಗಳು ಪ್ರತಿ ವರ್ಷವೂ ಕಾದಿರುತ್ತಾರಂತೆ.

ರಾವಲ್‌ಜೀಯವರು ಒಳಕ್ಕೆ ಹೋದನಂತರ, ನಾವು ದೇವಸ್ಥಾನವನ್ನು ಪ್ರವೇಶಿಸಿದೆವು. ಧೂಪ – ದೀಪ – ಮಂತ್ರಘೋಷಣೆಗಳೊಂದಿಗೆ ಸಂಜೆಯ ಅರ್ಚನೆಯ ಸಿದ್ಧತೆ ನಡೆದಿತ್ತು. ದರ್ಶನಾರ್ಥಿಗಳಾದ ಭಕ್ತರು, ಪಕ್ಕದಲ್ಲಿದ್ದ ಬಿಸಿ ನೀರಿನ ಕುಂಡಗಳಲ್ಲಿ ಸ್ನಾನ ಮುಗಿಸಿ ದೇವಸ್ಥಾನದ ಒಳಗೆ ಸಾಲುಗಟ್ಟಿದ್ದರು. ಛಳಿಯ ರೆಕ್ಕೆಗಳನ್ನು ಬಿಚ್ಚಿ ಇಡೀ ಬದರಿಯನ್ನು ಇರುಳು ತಬ್ಬಿಕೊಳ್ಳತೊಡಗಿತ್ತು.

ಇರುಳು ಕಳೆದು, ಇನ್ನೂ ಹೊತ್ತು ಮೂಡುವ ಮೊದಲೇ, ‘ಪರಮಾರ್ಥ ಲೋಕ’ದ ಬೆಚ್ಚನೆಯ ಕೋಣೆಯಿಂದ ಹೊರಕ್ಕೆ ಬಂದು ನೋಡುತ್ತೇನೆ, ಎರಡನೆ ಮಹಡಿಯ ಕಾರಿಡಾರ್‌ನ ಉದ್ದಕ್ಕೂ ಜನ, ಪಶ್ಚಿಮ ದಿಕ್ಕಿಗೆ ಮುಖ ಮಾಡಿ, ಕಣ್ಣುಗಳ ತುಂಬ ಆಶ್ಚರ್ಯವನ್ನು ತುಂಬಿಕೊಂಡವರಂತೆ ನಿಂತಿದ್ದಾರೆ. ನಾನೂ ನೋಡಿದೆ, ಸ್ವರ್ಗೀಯವಾದ ದೃಶ್ಯ. ಪಶ್ಚಿಮ ಗಗನದಲ್ಲಿ ಕೆತ್ತಿ ನಿಲ್ಲಿಸಿದಂತೆ ಎತ್ತರವಾದ ನೀಲಕಂಠ ಪರ್ವತದ ಇಡೀ ಮೈಯೆಲ್ಲಾ ಬಂಗಾರವಾಗಿ ಥಳಥಳಿಸುತ್ತಿದೆ. ಅದರ ತ್ರಿಕೋನಾಕಾರವಾದ ಪರ್ವತ ಶಿಖರ, ಮಹಾದೇಗುಲದ ಚಿನ್ನದ ಕಲಶದಂತೆ ಮಿನುಗುತ್ತಿದೆ. ಅದರ ಕೆಳಗೆ, ಮುಂಬೆಳಗಿನ ಕಾಂತಿಗೆ ಮೈಯೊಡ್ಡಿಕೊಂಡ ಬದರಿಯ ದೇಗುಲ; ಅದರ ಮೇಲಿನ ಧ್ವಜ; ಅದರ ಎದುರಿಗೆ ಹರಹಿಕೊಂಡ ಊರು; ಎಲ್ಲವೂ ಆಗ ತಾನೇ ಯಾವನೋ ಮಾಂತ್ರಿಕನಿಂದ ನಿರ್ಮಿತವಾದ ಸುಂದರ ಮಿಥ್ಯೆಯಂತೆ ಭಾಸವಾಯಿತು. ಆದರೆ, ಅದರ ಹಿನ್ನೆಲೆಗಿನ ಬಂಗಾರದ ಬೆಟ್ಟಮಾತ್ರ ಸತ್ಯಸ್ಯಸತ್ಯವೆಂಬಂತೆ ನಿಶ್ಚಲವಾಗಿತ್ತು. ಸುಮಾರು ಮುಕ್ಕಾಲು ಗಂಟೆಯವರೆಗೆ, ಸ್ತಂಭೀಭೂತರಾಗಿ, ಕಾಲುಗಳನ್ನೇ ಬೇರೂರಿ ನಿಂತ ನಾವು, ಕ್ರಮ ಕ್ರಮೇಣ ಪೂರ್ವ ದಿಕ್ಕಿನ ಬೆಟ್ಟದ ಕಣಿವೆಗಳನ್ನು ದಾಟಿ ಮೇಲೇರಿದ ಸೂರ‍್ಯನ ಕಿರಣಗಳು, ಆ ಬಂಗಾರವನ್ನು ಥಳಥಳಿಸುವ ಬೆಳ್ಳಿಯನ್ನಾಗಿಸುವ ಪವಾಡವನ್ನು ನೋಡುತ್ತಿದ್ದೆವು. ಆ ಬೆಳ್ಳನೆಯ ಪರ್ವತ, ಕಾಳಿದಾಸನು ವರ್ಣಿಸಿದ ‘ತ್ರಿದಶ ವನಿತೆಯರ ದರ್ಪಣ’ವಾಗುವುದನ್ನು ಕಂಡ ನಂತರ, ನಮ್ಮ ಅಂದಿನ ವಾಸ್ತವಗಳಿಗೆ ಹಿಂದಿರುಗಿದೆವು.

ಬದರಿಯ ಬಿಸಿ ನೀರಿನ ಕುಂಡಗಳಲ್ಲಿ ಸ್ನಾನ  ಮಾಡಿ, ಇನ್ನೊಂದು ಸಲ ದೇವಸ್ಥಾನಕ್ಕೆ ಹೋಗಿ, ಒಂದು ಒಳ್ಳೆಯ ಹೋಟೆಲನ್ನು ಹುಡುಕಿ ಉಪಹಾರ ಮಾಡಿಕೊಂಡು ಬರುವ ಉದ್ದೇಶದಿಂದ, ಒಂದಷ್ಟು ಬಟ್ಟೆಗಳನ್ನು ಬಗಲಲ್ಲಿ ಇರುಕಿಕೊಂಡು ‘ಪರಮಾರ್ಥಲೋಕ’ದ ಬೆಚ್ಚನೆಯ ಕೋಣೆಯಿಂದ ಹೊರಕ್ಕೆ ಬಂದೆವು. ಹೊರಗೆ ಬಂದದ್ದೇ ತಡ, ಅದುವರೆಗೂ ಹೊಂಚು ಹಾಕುತ್ತಿದ್ದ ಭಯಂಕರ ಛಳಿ ನಮ್ಮ ಮೇಲೆ ಎರಗಿತು. ಗಡ ಗಡ ನಡುಗುತ್ತ, ತಕ್ಷಣವೇ ಸಿಕ್ಕ ಹೊಟೇಲೊಂದರಲ್ಲಿ ಬಿಸಿ ಬಿಸಿ ಚಹ ಕುಡಿದು ಒಂದಷ್ಟು  ಬೆಚ್ಚಗಾಗಿ,  ತಗ್ಗನ್ನು ಇಳಿದು, ಅಲಕನಂದಾ  ನದಿಯ ಸೇತುವೆಯ ಈಚೆಕಡೆಯಿಂದ ಆಚೆಕಡೆಯವರೆಗೂ ಮುಂಜಾನೆಯ ಛಳಿಯನ್ನೂ ಲೆಕ್ಕಿಸದೆ ಠಿಕಾಣಿ ಹಾಕಿ ಕೂತಿದ್ದ ಭಿಕ್ಷುಕರ ಸಂದಣಿಯ ಮಧ್ಯೆ ಹಾದು, ದೇವಸ್ಥಾನದ ಕೆಳಗೆ ಇರುವ ತಪ್ತ ಕುಂಡಗಳನ್ನು ತಲುಪಿದೆವು. ಅಲಕನಂದಾ ನದಿಯ ದಡದಲ್ಲಿ ಎರಡು ಬಿಸಿ ನೀರಿನ ಕುಂಡಗಳಿವೆ. ಒಂದನ್ನು ತಪ್ತ ಕುಂಡ ಎನ್ನುತ್ತಾರೆ. ಮತ್ತೊಂದನ್ನು ಸೂರ್ಯಕುಂಡ ಎನ್ನುತ್ತಾರೆ. ಬೆಟ್ಟದ ಹೊಟ್ಟೆಯೊಳಗಿನಿಂದ ಭುಸುಗುಟ್ಟಿ ಹೊಮ್ಮುವ ಬಿಸಿ ನೀರಿನ ಬುಗ್ಗೆಗಳು, ಈ ಕೊಳಗಳಲ್ಲಿ ತುಂಬಿಕೊಂಡು, ಅದರ ಮೂಲಕ ಹಾದು ಕೆಳಗಿನ ಅಲಕನಂದಾ ನದಿಗೆ ಸೇರುತ್ತವೆ. ಸಾಕಷ್ಟು ಅಗಲವಾದ, ಇಳಿದರೆ ಎದೆಯೆತ್ತರಕ್ಕೆ ನೀರೇರುವ ಈ ಬಿಸಿನೀರಿನ ಕೊಳದಲ್ಲಿ ಸ್ನಾನ ಮಾಡುವುದು ಒಂದು ಹಿತವಾದ ಅನುಭವ. ಬದರೀನಾಥನನ್ನು ಸಂದರ್ಶಿಸಲು ಅತ್ಯಂತ ಶ್ರದ್ಧಾಭಕ್ತಿಗಳಿಂದ ಪ್ರಯಾಸದಿಂದ ದಣಿದು ಬರುವ ಯಾತ್ರಿಕರಿಗೆ, ಈ ಎತ್ತರದಲ್ಲಿ, ಅದೂ ಗಡಗಡನೆ ನಡುಗಿಸುವ ಛಳಿಯಲ್ಲಿ, ಈ ತಪ್ತ ಕುಂಡದ ಬಿಸಿ ನೀರಿನ ಸ್ನಾನ, ಅವರ ಆಯಾಸವನ್ನು ಪರಿಹರಿಸುವಂಥದ್ದಾಗಿದೆ. ಒಂದು ಕಾಲಕ್ಕೆ ಬದರೀ ಪ್ರದೇಶವು ಬದರೀ ವೃಕ್ಷಗಳಿಂದ ಕಿಕ್ಕಿರಿದು, ಋಷಿಮುನಿಗಳ ತಪೋ ಭೂಮಿಯಾಗಿತ್ತು. ಈ ಋಷಿಮುನಿಗಳು ಈ ತಪ್ತ ಕುಂಡಗಳಲ್ಲಿ ಸ್ನಾನ ಮಾಡುತ್ತ, ಬದರೀ ಫಲಗಳನ್ನು ಭಕ್ಷಿಸುತ್ತ ನಿರ್ವಿಘ್ನವಾಗಿ ತಪಸ್ಸು ಮಾಡುತ್ತಿದ್ದರಂತೆ, ಹತ್ತು ಸಾವಿರ ಅಡಿಗಳಿಗೂ ಮೀರಿದ ಈ ಎತ್ತರದ ಶೀತಪ್ರಪಂಚದಲ್ಲಿ, ಇಂಥ ಬಿಸಿ ನೀರಿನ ಬುಗ್ಗೆಗಳನ್ನು ಸೃಷ್ಟಿಸಿದ ಆ ಪರಮಾತ್ಮನ ಲೀಲಾವಿನೋದಕ್ಕೆ ಭಕ್ತರು ಆನಂದಭರಿತರಾಗಿ ಭಾವುಕರಾಗುವುದು ಆಶ್ಚರ್ಯವೇನಲ್ಲ. ಜತೆಗೆ, ಈ ಬಿಸಿ ನೀರಿನ ಕುಂಡಗಳನ್ನು ಕುರಿತು, ಪುರಾಣಗಳು ಹೇಳುತ್ತವೆ : ಶ್ರೀಮನ್ನಾರಾಯಣನ ಆಜ್ಞೆಯ ಮೇರೆಗೆ, ಅಗ್ನಿದೇವನು ಶಾಪಗ್ರಸ್ಥನಾಗಿ ತನ್ನ ಒಂದು ಅಂಶದಲ್ಲಿ ಈ ಬದರಿಯಲ್ಲಿ ನೆಲೆಸಿದ್ದಾನೆ. ಈ ಸ್ಥಳದಲ್ಲಿರುವ ಕುಂಡಗಳ ಸುತ್ತ ಐದು ಕಲ್ಲುಗಳಿವೆ. ಅವುಗಳನ್ನು ‘ಪಂಚ ಶಿಲೆ’ಗಳೆಂದು ಕರೆದು, ಒಂದೊಂದು ಕಲ್ಲಿಗೂ ಒಂದೊಂದು ಕತೆಯನ್ನು ನಮ್ಮ ಪುರಾಣಗಳು ಕಟ್ಟಿವೆ.

ಒಂದು ಕುಂಡದಲ್ಲಿ ಮಹಿಳೆಯರಿಗೂ, ಮತ್ತೊಂದರಲ್ಲಿ ಪುರುಷರಿಗೂ ಸ್ನಾನಕ್ಕೆಂದು ವ್ಯವಸ್ಥೆ ಮಾಡಲಾಗಿದೆ. ಆದರೆ ಅದೇನೂ ನಿಯತವಲ್ಲ. ಇಲ್ಲಿ ಒಂದಲ್ಲ ಎರಡು ಕುಂಡಗಳಿರುವುದರಿಂದ, ಸ್ತ್ರೀ ಪುರುಷರು ಪ್ರತ್ಯೇಕವಾಗಿ ಸ್ನಾನ ಮಾಡಲು ಸಾಧ್ಯವಾಗಿದೆ. ಆದರೆ, ಕೇದಾರದ ಬುಡದಲ್ಲಿರುವ ಗೌರೀಕುಂಡದಲ್ಲಿ ಇದು ಸಾಧ್ಯವಾಗುವುದಿಲ್ಲ; ಹಾಗೆಯೇ ಯಮುನೋತ್ರಿಯ ಕುಂಡದಲ್ಲೂ. ಇಂಥ ಕಡೆಗಳಲ್ಲಿ ನಾನು ಕಂಡ ಒಂದು ವಿಶೇಷವೆಂದರೆ, ಈ ಕುಂಡಗಳಲ್ಲಿ ಸ್ನಾನ ಮಾಡುವಾಗ ಯಾವ ಲಜ್ಜಾಭಾವಕ್ಕೂ ಅವಕಾಶವಿಲ್ಲ. ನಿಂತಲ್ಲೇ ಬಟ್ಟೆ ಕಳಚಿ ತುಂಡು ಸುತ್ತಿಕೊಂಡು ನೀರಿಗಿಳಿಯುವ, ಮತ್ತೆ ಮೇಲೆ ಬಂದು ಬಯಲಲ್ಲೇ ಬಟ್ಟೆ ಬದಲಾಯಿಸುವ ಗಂಡು – ಹೆಣ್ಣುಗಳು, ನಾಗರಿಕತೆಯ ಎಲ್ಲ ಸಂಕೋಚಗಳನ್ನೂ ಕಳಚಿ, ತೀರಾ ಸಹಜವಾಗಿ ಇಲ್ಲಿ ನಡೆದುಕೊಳ್ಳುತ್ತಾರೆ. ಯಾವ ಬಗೆಯ ಕುಚೋದ್ಯದ ಭಾವಗಳು, ಯಾರಲ್ಲಿಯೂ ಮೂಡಿದ್ದನ್ನು ನಾನು ಕಾಣಲಿಲ್ಲ. ಈ ಎತ್ತರದ ಮಹಿಮೆಯಿಂದಲೋ ಏನೋ, ಆ ಕೆಳಗಿನ ನಾಗರಿಕ ಜಗತ್ತಿನ ವಿಕೃತಿಗಳು ಇಲ್ಲಿ ಹೆಡೆ ಮುದುರಿ ಕೊಳ್ಳುತ್ತವೆಂದು ತೋರುತ್ತದೆ.

ಎದೆಯೆತ್ತರದ ಬಿಸಿನೀರಿನ ಕುಂಡದಲ್ಲಿ ಸ್ನಾನ ಮಾಡಿ ಹಗುರಾಗಿ ಮತ್ತೆ ಒಂದು ಸಲ ದೇವಸ್ಥಾನಕ್ಕೆ ಹೋಗಿ, ಪೂಜೆಯನ್ನು ನೋಡಿಕೊಂಡು, ಮೆಟ್ಟಿಲುಗಳನ್ನಿಳಿದು, ಅಲಕನಂದೆಯ ಸೇತುವೆಯ ಮೇಲೆ ಬಂದೆವು. ಸೇತುವೆಯ ಮೇಲೆ, ಎರಡೂ ಕಡೆಗೆ ಭಿಕ್ಷುಕರು – ಹುಡುಗರು, ಮುದುಕರು, ಹರೆಯದವರು, ಹೆಂಗಸರು – ಉದ್ದಕ್ಕೂ ಕೂತು, ತಮ್ಮ ಮುಂದೆ ಇರಿಸಿಕೊಂಡ ತಟ್ಟೆಗಳಲ್ಲಿ ಬಡಿಸಿದ ಜಿಲೇಬಿಗಳನ್ನು, ಪೂರಿ-ಪಲ್ಯಗಳನ್ನು ತಿನ್ನುತ್ತಿದ್ದರು. ಬೆಳಿಗ್ಗೆ ಇಷ್ಟು ಹೊತ್ತಿಗೇ, ಇಷ್ಟು ಸೊಗಸಾದ ಉಪಹಾರವನ್ನು ಇವರಿಗೆ ಏರ್ಪಡಿಸಿದವರು ಯಾರಿರಬಹುದು ಎಂದು ವಿಚಾರಿಸಿದ್ದರಲ್ಲಿ, ದಿನಕ್ಕೆ ಎರಡು ಹೊತ್ತು ಈ ‘ದರಿದ್ರನಾರಾಯಣ’ರಿಗೆ, ಹೀಗೆ ಬಡಿಸುವ ಏರ್ಪಾಟನ್ನು ದೇವಸ್ಥಾನದ ವ್ಯವಸ್ಥಾಪಕರೆ ಮಾಡಿದ್ದಾರೆಂದು ತಿಳಿಯಿತು. ಭಿಕ್ಷುಕರು ಇಲ್ಲದೆ, ಇಂಥ ಯಾತ್ರಾಸ್ಥಳ ಶೋಭಿಸುವುದು ಹೇಗೆ ಎಂಬ ಕಳಕಳಿ ಈ ಬಗೆಯ ವ್ಯವಸ್ಥೆಯ ಹಿಂದೆ ಇರಬಹುದೇನೋ! ದೇವಸ್ಥಾನದವರು ನೀಡುವ ಈ ರುಚಿ ರುಚಿಯಾದ ತಿಂಡಿಯನ್ನು ತಿಂದು, ಇಡೀ ದಿನ ಅರಚುತ್ತ ಕೈಚಾಚುತ್ತ ಕುಳಿತರೆ, ಎದುರಿನ ತಟ್ಟೆ-ಬಟ್ಟಲುಗಳಲ್ಲಿ ಅಥವಾ ಹಾಸಿಕೊಂಡ ಬಟ್ಟೆಯ ಮೇಲೆ, ಸಂಜೆಯ ವೇಳೆಗೆ ಸಾಕಷ್ಟು ಹಣ ಜಮಾಯಿಸಿರುತ್ತದೆ. ಬಿಟ್ಟಿ ಕೂಳು, ಭಿಕ್ಷೆಯ ಹಣ, ಇಷ್ಟು ಸಾಕಲ್ಲ? ಕಡೇ ಪಕ್ಷ ಈ ನಾಲ್ಕೈದು ತಿಂಗಳು ಹಾಯಾಗಿ ಜೀವನ ಸಾಗುತ್ತದೆ. ಜತೆಗೆ ಈ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡಿ ತಮ್ಮ ಪೂರ್ವಾರ್ಜಿತ ಪಾಪಗಳನ್ನು ಕಳೆದುಕೊಂಡು, ಭಗವಂತನ ದರ್ಶನದಿಂದ ಪುನೀತರಾಗಲು ಇಲ್ಲಿಗೆ ಬರುವ ಭಕ್ತಾದಿಗಳು, ಹೀಗೆ ಈ ಬಡಬಗ್ಗರಿಗೆ – ಅಂದರೆ ದೇವಸ್ಥಾನದ ಕೃಪಾ ಪೋಷಿತರಾದ ಈ ಭಿಕ್ಷುಕರಿಗೆ – ದಾನ ಮಾಡಿದ್ದರಿಂದ ಬರುವ ಪುಣ್ಯವನ್ನೂ  ಗಂಟುಕಟ್ಟಿಕೊಂಡು ತಮ್ಮ ತಮ್ಮ ವ್ಯವಹಾರದ ಪ್ರಪಂಚವನ್ನು ಪ್ರವೇಶಿಸುವ ಒಂದು ಸದವಕಾಶವನ್ನು ಈ ಕ್ಷೇತ್ರದ ವ್ಯವಸ್ಥಾಪಕರು ಕಲ್ಪಿಸಿಕೊಟ್ಟಿದ್ದಾರೆ. ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಎಂಥ ವಾಸಿಮಾಡಲಾಗದ ರೋಗದ ಬೆಳೆಯನ್ನು ಈ ತೀರ್ಥಕ್ಷೇತ್ರಗಳು ತೆಗೆಯುತ್ತಿವೆ !

ಭಿಕ್ಷುಕರ ಸಾಲುಗಳನ್ನು ಹಾದು, ಸ್ವಲ್ಪ ಮೇಲೆ ಹತ್ತಿ ಬಂದ ಕೂಡಲೇ ಒಂದು ಹೋಟೆಲ್ ಮುಂದೆ ‘ಇಡ್ಲಿ-ದೋಸೆ’ ಎಂಬ ಬೋರ್ಡು ಕಾಣಿಸಿತು. ಅದನ್ನು ಕಂಡ  ನಮ್ಮ ಮನೆಯವರಿಗೆ ಮಹಾನಂದವಾಯಿತು. ನಡೀರಿ ಹೋಗೋಣ ಎನ್ನುತ್ತ ಅವರಿಬ್ಬರೂ ಮುಂದಾಗಿ ನುಗ್ಗಿದರು. ತಾತ್ಕಾಲಿಕವಾಗಿ ನಿರ್ಮಿಸಿದ ಆ ಹೋಟೆಲಿನಲ್ಲಿ ಹೊಸದಾಗಿ ಮಾಡಿಸಿದ ಕುರ್ಚಿ ಮೇಜುಗಳು ರಾರಾಜಿಸುತ್ತಿದ್ದವು. ನಾವು ಇಡ್ಲಿಗೆ ಆರ್ಡರ್ ಮಾಡಿ ಕಾತರದಿಂದ  ಕಾದೆವು. ಇಡ್ಲಿಯೇನೋ ಬಂತು. ಆದರೆ ಆ ಇಡ್ಲಿಗಳು, ಸಾಂಬಾರಿನೊಳಗೆ ನೆನೆದು ಮೆತ್ತಗಾಗಿ, ನಾವು ಅವುಗಳನ್ನು ತಿನ್ನಬೇಕಾದರೆ ಕೊನೇಪಕ್ಷ ಸಂಜೆಯತನಕವಾದರೂ ಕಾದುಕೊಂಡು ಕೂರಬೇಕಾಗಿತ್ತು. ಅಷ್ಟೆ. ‘ಇದೆಂಥದಪ್ಪ ಇಡ್ಲಿ?’ ಎಂದು ನಮ್ಮ ಹರಕು ಮುರುಕು ಹಿಂದಿಯಲ್ಲಿ ಕೇಳಿದರೆ, ಹೋಟೆಲಿನವನು, ‘ನೋಡಿ, ನಾವು ಮದ್ರಾಸಿನಿಂದಲೇ ಇಡ್ಲಿ ತಯಾರಿಸಲು ಅಡಿಗೆಯವನನ್ನು ಕರೆಸಿದ್ದೇವೆ’ ಅಂದ. ಎದುರಿನ ಬೆಟ್ಟದ ಕಲ್ಲಿನಂಥ ಇಡ್ಲಿ, ಸಾಂಬಾರಿನಲ್ಲಿ ಮೆತ್ತಗಾಗುವುದನ್ನು ಕಾಯಲಾಗದೆ, ನಮ್ಮ ಸಿರಿಗನ್ನಡದಲ್ಲಿ ಹೋಟೆಲಿನವನನ್ನು ಶಪಿಸುತ್ತ, ಅರ್ಧ ಬೆಲೆಯಷ್ಟು ಮಾತ್ರ ದುಡ್ಡು ತೆತ್ತು, ಬೇರೊಂದು ತಟಿಕೆ ಹೋಟೆಲಿಗೆ ನುಗ್ಗಿ, ಒಂದಷ್ಟು ಬಿಸಿಬಿಸಿ ಪೂರಿ ಮಾಡಿಸಿಕೊಂಡು ತಿಂದು, ಚಹಾ ಕುಡಿದು, ನೆಟ್ಟಗೆ ನಮ್ಮ ವಸತಿಗೃಹಕ್ಕೆ ಹೊರಟೆವು. ದಾರಿಯಲ್ಲಿ, ನಮ್ಮ ಪಿತೃಗಳಿಗೆ ಬ್ರಹ್ಮಕಪಾಲದಲ್ಲಿ ಪಿಂಡ ಪ್ರದಾನ ಮಾಡಿಸಲೇಬೇಕೆಂದು ದುಂಬಾಲು ಬಿದ್ದ ಪಂಡರನ್ನು ನಿರ್ದಾಕ್ಷಿಣ್ಯವಾಗಿ ನಿವಾರಿಸಿಕೊಂಡು, ಬದರಿಯಲ್ಲಿರುವ ಇನ್ನೂ ಎಷ್ಟೋ ತೀರ್ಥಕ್ಷೇತ್ರಗಳನ್ನು ತೋರಿಸುವುದಾಗಿ ಗಂಟುಬಿದ್ದ ‘ಗೈಡ್’ಗಳನ್ನು ತಪ್ಪಿಸಿಕೊಂಡು, ನಾವು ಉಳಿದುಕೊಂಡ ‘ಪರಮಾರ್ಥ ಲೋಕ’ದ ಎದುರಿಗೆ ಹಾಕಿದ್ದ ಮರಳು ದಿಬ್ಬದ ಮೇಲೆ ಕೂತು, ಸುತ್ತ  ಮಂಡಲಾಕಾರವಾಗಿ ಹಬ್ಬಿದ ಪರ್ವತಗಳನ್ನು, ಎದುರಿಗೆ ಥಳಥಳಿಸುವ ನೀಲಕಂಠ ಶಿಖರದ ಭವ್ಯತೆಯನ್ನು ವೀಕ್ಷಿಸುತ್ತ ಕಾಲ ಕಳೆದವು.

ಮಧ್ಯಾಹ್ನದ ಹೊತ್ತಿಗೆ ಒಂದೆಡೆ ತಕ್ಕ ಮಟ್ಟಿಗೆ ಚೆನ್ನಾಗಿಯೇ ಇದ್ದ ಊಟ ಮುಗಿಸಿ, ಮರು ಪ್ರಯಾಣಕ್ಕೆ ನಮ್ಮ ಗಂಟು ಮೂಟೆಗಳನ್ನು ಕಟ್ಟಿಟ್ಟು, ಹೊರಡುವ ಮುನ್ನ ಬದರಿಗೆ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಮನ್ನಾ ಎಂಬ ಹಳ್ಳಿಯನ್ನು ನೋಡಿಕೊಂಡು ಬರಲು ನಿಶ್ಚಯಿಸಿದೆವು. ಮನ್ನಾ, ಭಾರತದ ಉತ್ತರೋತ್ತರ ಗಡಿಯ ಕಟ್ಟ ಕಡೆಯ ಹಳ್ಳಿ. ಅದನ್ನು ದಾಟಿದರೆ ಕೂಡಲೇ ನಾವು ಪ್ರವೇಶಿಸುವುದು ಟಿಬೆಟ್ ಅನ್ನು. ಅಲಕನಂದಾ ಕಣಿವೆಯ ಬದಿಗೆ ಇರುವ ಈ ಹಳ್ಳಿಯ ಸುತ್ತ, ಗಡಿ ಕಾಯುವ ಭಾರತೀಯ ಸೇನಾ ಶಿಬಿರಗಳಿವೆ. ಹಳ್ಳಿಯ ಆಚೆ ಬದಿಗಿರುವ ಪರ್ವತ ಪಂಕ್ತಿಯೇ ನಮ್ಮ ಗಡಿ. ಈ ಬೆಟ್ಟದ ತಗ್ಗಿನಲ್ಲಿರುವ ಈ ಹಳ್ಳಿ ಕಲ್ಲು ಚಪ್ಪಡಿಗಳನ್ನು ಛಾವಣಿಯಾಗಿ ಹೊದಿಸಿದ, ಇಕ್ಕಟ್ಟಾದ ಬಾಗಿಲುಗಳ ಮನೆಗಳನ್ನು ಒಂದು ಕಡೆ ತುರುಕಿದ ಹಾಗಿದೆ. ಒಂದು ಮನೆಗೂ ಇನ್ನೊಂದು ಮನೆಗೂ ಇರುವ ಅಂತರ ತೀರಾ ಕಡಿಮೆ. ಇಲ್ಲಿ ಟಿಬೆಟ್ ಚಹರೆಯ ಕೆಂಪುಬಣ್ಣದ ಕಟ್ಟುಮಸ್ತಾದ ಜನರು ವಾಸಿಸುತ್ತಾರೆ. ಗಂಡಸರು ಹಗ್ಗ ಹೊಸೆಯುತ್ತ, ಬೀಡಿ ಸೇದುತ್ತ ಕೂತಿದ್ದರು; ಹೆಂಗಸರು ಸ್ವೆಟರ್‌ಗಳನ್ನು ಹಾಕುತ್ತಿದ್ದರು. ತಮ್ಮ ಉಬ್ಬಿದ ಕಪೋಲದ ಮೇಲಿನ ಸಣ್ಣ ಕಣ್ಣುಗಳನ್ನು  ಅಗಲಿಸಿ ಕುತೂಹಲದಿಂದ ನಮ್ಮ ಕಡೆ ನೋಡುತ್ತ, ಬಿಸಿಲು ಕಾಯಿಸುತ್ತ ಕೂತ ಈ ಹಳ್ಳಿಗರ ಮಧ್ಯೆ ಹಾದು ನಾವು ಸ್ವಲ್ಪ ದೂರ ಹೋದ ನಂತರ ಅನತಿ ದೂರದಲ್ಲಿ ಕಾಣಿಸಿತು, ಕಾವಿಯ ಧ್ವಜ ಹಾರಾಡುವ ವ್ಯಾಸರ ಗುಹೆ. ಮಹರ್ಷಿ ವ್ಯಾಸರು ಬಂಡೆಗಳ ನಡುವಣ ಈ ಗುಹೆಯಲ್ಲಿ ಕೂತು, ವೇದಗಳನ್ನು ವಿಂಗಡಿಸಿದರು; ಪುರಾಣಗಳನ್ನು ರಚಿಸಿದರು; ಮಹಾಭಾರತವನ್ನು ಬರೆದರು ಎಂದು ಹೇಳಲಾಗಿದೆ. ಈ ಹಿಮಾಲಯದ ಪ್ರತಿಯೊಂದು ಶಿಖರಗಳಿಗೂ, ನದಿಗಳಿಗೂ ಹೆಸರನ್ನು ಕೊಟ್ಟವರು, ಕವಿಯಾದ ವ್ಯಾಸಮಹರ್ಷಿಗಳೇ. ಈ ಪವಿತ್ರ ಬದರಿಯಲ್ಲಿ ನೆಲೆ ನಿಂತಿದ್ದರಿಂದಲೇ ವ್ಯಾಸರನ್ನು ಬಾದರಾಯಣ ಎಂದು ಕರೆಯಲಾಗಿದೆ. ವ್ಯಾಸರಿಗೂ ಬದರಿಗೂ ಇರುವ ಸಂಬಂಧ ಇಂಥದ್ದು.

ಮನ್ನಾದಿಂದ ಹಿಂದಕ್ಕೆ ಬಂದು, ಪರ್ವತ ಮಂಡಲದ ಮದ್ಯೆ ಹರಹಿದ ವಿಶಾಲ ಬದರಿಗೆ ಕೈಮುಗಿದು, ಬದರಿಯ ಉಕ್ಕಡದ ಹತ್ತಿರಕ್ಕೆ ಬರುವ ವೇಳೆಗೆ ಇನ್ನೂ ಅರ್ಧಗಂಟೆ ವಾಹನಗಳನ್ನು ಮುಂದಕ್ಕೆ ಬಿಡಲು ಸೂಚನೆಗಾಗಿ ಕಾಯಬೇಕೆಂದು ತಿಳಿಸಲಾಯಿತು. ಮೂರೂವರೆಯಿಂದ ನಾಲ್ಕು ಗಂಟೆಯವರೆಗೆ ಸಾಲಾಗಿ ಕ್ಯೂ ನಿಂತ ವಾಹನಗಳ ಜತೆಗೆ ಕಾದು, ನಾಲ್ಕು ಗಂಟೆಗೆ ದೊರೆತ ಹಸಿರು ನಿಶಾನೆಯ ಸೂಚನೆಯಂತೆ, ಜೋಷೀಮಠದ ಕಡೆಗೆ ಗಾಲಿಗಳು ಉರುಳತೊಡಗಿದವು. ಬದರಿಯ ವಿಶಾಲವಾದ ಕಣಿವೆಯನ್ನು ಏರಿ, ಮತ್ತೆ ಕಡಿದಾದ ಬೆಟ್ಟಗಳ ಸೊಟ್ಟದಾರಿಗಳಲ್ಲಿ ಇಳಿಯತೊಡಗಿದೆವು. ನಮ್ಮ ಎಡಕ್ಕೆ ಎತ್ತರವಾಗಿ, ಉನ್ಮತ್ತವಾಗಿ ನಿಂತ ಬಂಡೆ ಬೆಟ್ಟಗಳ ಶಿಲಾವಿನ್ಯಾಸಗಳ ಮೇಲೆ ಸಂಜೆಯ ಬಿಸಿಲು ಬಿದ್ದು, ಅವು ವಿಲಕ್ಷಣ ಕಾಂತಿಯಿಂದ ಹೊಳೆಯತೊಡಗಿದವು. ಪಾಂಡುಕೇಶ್ವರ ಗೋವಿಂದಘಾಟ್ ಅನ್ನು ದಾಟಿ, ಪರ್ವತದಿಂದ ಪರ್ವತಕ್ಕೆ ಸೇತುವೆಗಳ ಮೂಲಕ ಹಾಯ್ದು ಏರತೊಡಗಿದೆವು. ಪ್ರತಿಯೊಂದು ಸೇತುವೆಯ ಎರಡೂ ಬದಿಗೆ ಸಶಸ್ತ್ರ ಸೈನಿಕರು, ಕಾವಲು ಕಾಯುತ್ತಿದ್ದರು. ಅಲ್ಲಲ್ಲಿ ಬೆಟ್ಟಗಳ ಮೇಲೆ ನೆಲೆನಿಂತ ಸೈನಿಕ ಶಿಬಿರಗಳಿದ್ದವು.  ಭಾರತದ ಹಾಗೂ ಚೀನಾ ದೇಶಗಳ ನಡುವಣ ಗಡಿಯ ಈ ಪರ್ವತ ಪ್ರದೇಶಗಳಲ್ಲಿ  ಭಾರತೀಯ ರಕ್ಷಣಾವ್ಯವಸ್ಥೆ ತನ್ನ ರೆಕ್ಕೆಗಳನ್ನು ಹರಹಿಕೊಂಡು ಕೂತಿತ್ತು. ಈ ರಕ್ಷಣೆಯ ಜತೆಗೆ, ಬದರಿಯ ಕಡೆಗೆ ಹೋಗುವ ಯಾತ್ರಾರ್ಥಿಗಳ ಸಂಚಾರಕ್ಕೆ ತೊಂದರೆಯಾಗದಂತೆ, ರಸ್ತೆಗಳ ಕ್ಷೇಮವನ್ನು ಈ ಸೈನಿಕ ಶಿಬಿರಗಳು ನೋಡಿಕೊಳ್ಳುತ್ತಿದ್ದವು. ಬೆಟ್ಟಗಳ ಮೇಲಿನಿಂದ ಅಕಸ್ಮಾತ್ತಾಗಿ ಧಡಾರನೆ ಕುಸಿದು ಬೀಳುವ ಕಲ್ಲು – ಮಣ್ಣು – ಬಂಡೆಗಳನ್ನು ಕೂಡಲೇ ತೆಗೆದುಹಾಕುವುದೂ, ಸೇತುವೆಗಳು ಭದ್ರವಾಗಿರುವಂತೆ ನೋಡಿಕೊಳ್ಳುವುದೂ, ಇನ್ನಿತರ ಅಪಾಯಗಳಲ್ಲಿ ನೆರವಾಗುವುದೂ ಈ ಸೈನಿಕ ಶಿಬಿರಗಳ ಕೆಲಸದ ಒಂದು ಭಾಗವಾಗಿದೆ. ಬದರೀ – ಕೇದಾರ – ಗಂಗೋತ್ರಿ – ಯಮುನೋತ್ರಿ ಈ ಎಲ್ಲಾ ಭಾಗಗಳೂ, ಭಾರತದ ಉತ್ತರದ ಗಡಿಗಳಾದುದರಿಂದ ಎಲ್ಲಾ ಕಡೆಗಳಲ್ಲೂ ನಮ್ಮ ಪ್ರಯಾಣದ ಹಾದಿಯಲ್ಲಿ ನಿಂತ ಸೈನಿಕರನ್ನು ನೋಡಿ, ನಮಗೆ ಒಂದು ಬಗೆಯ ಕೃತಜ್ಞತಾಭಾವ ಅವರ ಬಗೆಗೆ ಮನೆ ಮಾಡಿಕೊಂಡಿತು.

ಸಂಜೆಯ ಮಬ್ಬು ಹಬ್ಬಿಕೊಂಡ, ಹಲವಾರು ಪರ್ವತಗಳ ಅಂಕು-ಡೊಂಕು ದಾರಿಗಳನ್ನು ಏರುತ್ತಾ, ಇಳಿಯುತ್ತಾ, ಜೋಷೀಮಠವನ್ನು ದಾಟಿ ಪಿಪ್ಪಲ್ ಕೋಟನ್ನು ತಲುಪಿದಾಗ ಸಂಜೆ ಏಳು ಗಂಟೆ. ಅಲ್ಲಿನ ಕಾಲೀಕಂಬಳಿವಾಲ ಧರ್ಮಶಾಲೆ, ಕಿಕ್ಕಿರಿದ ಯಾತ್ರಿಕರಿಂದ ಗಿಜಿಗುಡುತ್ತಿದ್ದ ಕಾರಣ, ಒಂದರ್ಧ ಗಂಟೆಯ ಅಲೆದಾಟದ ನಂತರ, ಸರ್ಕಾರೀ ಅತಿಥಿಗೃಹವೊಂದರಲ್ಲಿ, ಒಂದು ಒಳ್ಳೆಯ ಕೊಠಡಿ ನಮ್ಮ ಪಾಲಿಗೆ ದೊರೆತದ್ದು ಸಮಾಧಾನದ ಸಂಗತಿಯಾಯಿತು.