೧೪. ವಿಶೇಷ

ಗುಣ-ಜಾತ್ಯಾದಿಗಳೊಳಗನುಗುಣಮಾಗಿರೆ ಪೇೞದವಱ ವಿಕಳತೆಯಂ ಸ- |

ಯ್ತಿಣಿಸಿ ವಿಶೇಷಮನಱಪುವ ಗಣನೆ ವಿಶೇಷಾನುಭಾವ-ಸದಳಂಕಾರಂ ||೧೨೧||

ಅಲರಂಬು ಕರ್ಬುವಿಲ್ ಕೋಮಲ-ಸರಸಿಜ-ನಾಳ-ತಂತು ತಿರು ಮತ್ತಿವಱಾ |

ಬಲದಿನಗಲ್ದರನೆಚ್ಚಾ ತ್ರಿಲೋಕಮಂ ಕಂತು ಬಸಕೆ ಬರಿಸುವನೆಂತುಂ ||೧೨೨||

೧೧೯. ಸಮಾಧಾನಗೊಳಿಸಲು ನಲ್ಲನು ಅವಳ ಕಾಲಿಗೆರಗಲೆಂದು ತನ್ನ ಅಂಗೈಯನ್ನು ಸೋಂಕಿಸುವುದೇ ತಡ, ಅವಳ ಕಾಲಿನಲ್ಲಿ ಮೂಡಿದ ರೋಮಾಂಚನವು. ಅವಳು ಮುಖವನ್ನು ಬಾಡಿಸಿಕೊಂಡು ಕೋಪವನ್ನು ನಟಿಸುತ್ತಿದ್ದರೂ, ಕೋಪವಿಳಿಯಿತೆಂಬುದನ್ನೇ ಸೂಚಿಸುತ್ತಿತ್ತು. *ಪ್ರಣಯಕುಪಿತೆಯನ್ನು ಸಾಂತ್ವನಗೊಳಿಸಲು ಕಾಲುಹಿಡಿಯುವುದು ರಸಿಕ ಪ್ರೇಮಿಯ ಚತುರೋಪಾಯವೇ ಎಂಬುದು ಕವಿ ಸಮಯ. ಅವಳು ಎಷ್ಟೊಂದು ಗಟ್ಟಿಯಾಗಿ ತನ್ನ ಪ್ರೇಮವನ್ನು ಹೊರಗೆ ಕಾಣಿಸಬಾರದೆಂದು ಅದುಮಿಕೊಂಡಿದ್ದರೂ, ಅವಳ ನಿಯಂತ್ರಣಕ್ಕೆ ಬಗ್ಗದೆ ತಾನಾಗಿ ಹೊರಹೊಮ್ಮುವ ರೋಮಾಂಚ ಅವಳ ಗುಪ್ತ ಪ್ರೇಮವನ್ನು ಹೊರಗೆಡಹುವುದರಿಂದ ಇಲ್ಲಿ ಸೂಕ್ಷ್ಮಾಲಂಕಾರವಿದೆ.

೧೨೦. ಅವಳ ಬಿರುಸಾದ ಮಾತು, ತುಂಬಾ ಕ್ರೂರವಾದ ನೋಟ, ಮುಖದ ವಿಕಾರ-ಇವೆಲ್ಲವೂ ಎಷ್ಟು ಮರೆಸಿದರೂ, ಅವಳ ಚಂಚಲ ಕಟಾಕ್ಷವು ಮಂದಹಾಸವೂ ಅವಳ ಹೃದಯದೊಳಗಿನ ಗಾಢಪ್ರೇಮವನ್ನು ಪ್ರಕಟವಾಗಿ ಹೇಳುತ್ತದೆ! *ಇಲ್ಲಿಯೂ ಮೇಲಿನ ಪದ್ಯದಲ್ಲಿರುವಂತೆಯೇ ‘ಸೂಕ್ಷಾಲಂಕಾರ’ವಿದೆ.*

೧೨೧. ವಸ್ತುವಿನ ಗುಣ, ಜಾತಿ ಮುಂತಾದುವುಗಳಲ್ಲಿ ಗುಣಪೂರ್ಣತೆಯನ್ನು ಹೇಳದೆ (ಎಂದರೆ ಕಾರಣಸಂಪತ್ತಿಯನ್ನು ಹೇಳದೆ), ಅವುಗಳಲ್ಲಿ ಕೊರತೆಯನ್ನೇ ಹೇಳಿ (ಎಂದರೆ ಕಾರಣವೈಕಲ್ಯವನ್ನೇ ಹೇಳೀ), (ಆದರೂ ಕಾರ್ಯಸಿದ್ಧಿಯಾಗುವುದೆಂದು) ವಸ್ತುವಿನ ವೈಶಿಷ್ಟ್ಯವನ್ನು ನಿರ್ದೇಶಿಸುವುದು ‘ವಿಶೇಷೋಕ್ತಿ’ಯೆಂಬ ಶ್ರೇಷ್ಠ ಅಲಂಕಾರ. *ಹೋಲಿಸಿ-ದಂಡಿ, II-೩೨೩.*

೧೨೨. ಬಾಣವೋ ಹೂವಿನದು, ಬಿಲ್ಲು ಕಬ್ಬಿನದು, ಹೆದೆಯೆಂದರೆ ಮೃದುವಾದ ತಾವರೆಯೆಳೆ-ಮತ್ತೆ ಇವುಗಳ ಬಲದಿಂದಲೇ ವಿರಹಿಗಳನ್ನು ಹೊಡೆದು ಮೂರು ಲೋಕವನ್ನೂ ಮನ್ಮಥನು ತಪ್ಪದೆ ವಶಮಾಡಿಕೊಳ್ಳವನು ! *ಹೋಲಿಸಿ-ದಂಡಿ, II-೩೨೪. ಇಲ್ಲಿ ಗುಣವೈಕಲ್ಯವನ್ನು ಹೇಳಲಾಗಿದೆ.*

ಸ್ಫುರಿಯಿಸದೆ ದಶನ-ವಸನಾಂತರಮಾರಕ್ತಂಗಳಾಗದೆನಸುಂ ಕಣ್ಗಳ್ |

ಭರಿತ-ಭ್ರೂಕುಟಿ-ಕಲಮಾಗಿರದೆ ಮುಖಂ ಗೆಲ್ದನಿಂತುಮ[1]ರಿ-ನೃಪ-ಬಲಮಂ ||೧೨೩||

೧೫. ಸಮಾಹಿತ

[2]ರವಸದ ಬಗೆಯೊಳೊಂದಂ ದೊರೆಕೊಳಿಸುವುದಱಗತರ್ಕಿತೋಪಸ್ಥಾನಂ |

ನಿರುತಂ ಸಮಾಹಿತಾಳಂಕರಂಣಾಂತರಮಕ್ಕುಮಿಂತು ತದುದಾಹರಣಂ ||೧೨೪||

 

ಮುಳಿದಿರ್ದ ನಲ್ಲಳಲ್ಲಿಗೆ ತಿಳಿಪಲ್ ಪೋಪೆನ್ನ ಬಗೆಗೆ ದೊರೆಕೊಳೆ ಮತ್ತೆಂ- |

ತೆಳವೆಱೆ ಗಗನಾಂತರದೊಳ್ ಪೊಳೆದತ್ತೆತ್ತಂ ವಸಂತ-ಸಮಯೋತ್ತಂಸಂ ||೧೨೫||

 

ತಡೆತಡೆದು ಕಾಂತನಲ್ಲಿಗೆ ನಡೆಯಲ್ ಬಗೆದೆನಗೆ ಕಾರ ಕಾರಿರುಳೊಳ್ ಸ- |

ಯ್ತ[3]ಡವಡಿಕೆಗಳಂ ತೊಡೆದತ್ತೆಡೆವಱಯದೆ ಪೊಳೆವ ಮಿಂಚು ಮುಗಿಲೆಡೆಯೆಡೆಯೊಳ್ ||೨೨೬||

೧೨೩. ಇಷ್ಟೂ ತುಟಿಗಳನ್ನು ಅದುರಿಸದೆ, ಇಷ್ಟೂ ಕಣ್ಣುಗಳನ್ನು ಕೆಂಪಾಗಿಸದೆ, ಮುಖದಲ್ಲಿ ಹುಬ್ಬು ಗಂಟಿಕ್ಕದೆ, ಅವನು ಶತ್ರುರಾಜರ ಸೈನ್ಯವನ್ನೆಲ್ಲ (ಶಾಂತನಾಗಿಯೇ) ಗೆದ್ದನು. *ಇಲ್ಲಿ ಕ್ರಿಯಾವೈಕಲ್ಯವನ್ನು ಹೇಳಲಾಗಿದೆ. ಹೋಲಿಸಿ-ದಂಡಿ, II-೩೨೬.*

೧೨೪. ಬಗೆದ ಒಂದು ಕಾರ್ಯ ದೈವವಶಾತ್ ತಾನೇ ಅನಿರೀಕ್ಷಿತವಾಗಿ ದೊರೆಕೊಂಡಂತೆ ವರ್ಣಿಸುವುದು ‘ಸಮಾಹಿತ’ವೆಂಬ ಅಲಂಕಾರ. ಅದರ ಉದಾಹರಣೆ ಹೀಗೆ- *ಹೋಲಿಸಿ-ದಂಡಿ, ೨೯೮.*

೧೨೫. ಕೋಪಗೊಂಡ ನಲ್ಲೆಯನ್ನು ಶಾಂತವಾಗಿಸಲೆಂದು ಮನಸ್ಸುಮಾಡಿ ಹೊರಟಿರುವ ನನಗೆ (ಅನುಕೂಲವಾಗಿ) ಈಗ ವಸಂತಮಾಸದ ಶಿರೋಭೂಷಣನಾದ ಬಾಲಚಂದ್ರನು ಆಕಾಶದಲ್ಲಿ ಉದಯಿಸಿರುವನು. *ಇಲ್ಲಿ ನಾಯಕನ ಕಾರ್ಯವನ್ನು ಎಂದರೆ ನಾಯಿಕೆಯ ಕೋಪಶಾಂತಿಯನ್ನು ದೈವಾಯತ್ತವಾಗಿ ಉದಿಸಿರುವ ಚಂದ್ರನೇ ಸಾಧಿಸುವನೆಂಬ ತಾತ್ಪರ್ಯವಿರುವುದರಿಂದ ‘ಸಮಾಹಿತಾಲಂಕಾರ’.*

೧೨೬. ಈ ಮಳೆಗಾಲದ ಕಾಳರಾತ್ರಿಯಲ್ಲಿ ಹೇಗೋ ತಡವರಿಸುತ್ತ ರಮಣನ ಬಳಿಗೈದಲು ಮನಸ್ಸುಮಾಡಿ ನಡೆಯಹೊರಟ ನನಗೆ ಎಡೆಬಿಡದೆ ಮೋಡಗಳ ನಡುವೆ ಹೊಳೆಯುತ್ತಿರುವ ಮಿಂಚು ಬಂದು (ಮನಸ್ಸಿನ) ಮಿಡುಕನ್ನು ಹೋಗಲಾಡಿಸಿದೆ. *ಇಲ್ಲಿ ಕೂಡ, ಕತ್ತಲೆಯಲ್ಲಿ ನಡೆಯಲು ಕಷ್ಟಪಡುತ್ತಿರುವ ಅಭಿಸಾರಿಕೆಗೆ ತಾನಾಗಿ ಬೆಳಗುವ ಮಿಂಚು ಸಹಾಯವನ್ನು ಅವಳ ಪ್ರಯತ್ನವಿಲ್ಲದೆಯೇ ಒದಗಿಸುವುದರಿಂದ ‘ಸಮಾಹಿತ’. ಹೋಲಿಸಿ-ದಂಡಿ, II-೨೯೯.*

೧೬. ಸಮಾಸೋಕ್ತಿ

ತಱಸಂದು ಮನದೊಳೊಂದಂ ಪೆಱತಂ ಮತ್ತದನೆ ಪೋಲ್ವುದಂ ಕುಱಪುಗಳಂ |

ಕುಱಮಾಡಿ ಮಾಡಿ ಪೇೞ್ವುದು ನೆಱೆಯೆ ಸಮಾಸೋಕ್ತಿಯೆಂಬು ದಿಂತದಱ ತೆಱಂ ||೧೨೭||

ತಾಮರೆಯರಲೊಳ್ ಸರಸ-ನಿಜಾಮೋದದೊಳೊಂದಿ ನಲಿದು ಮಕರಂದ-ರಜೋ- |

ವ್ಯಾಮುಗ್ಧದೊಳೀ ಮುಗುಳೊಳಮಾ ಮಾ[4]ೞ್ಕೆಯನಱಸಿ ಸು[5]ೞವುದಳಿ ಕೆಲ[6]ಕೆಲದೊಳ್||೧೨೮||

 

ನೆರೆದತಿ-ವಿದಗ್ಧ-ಗಣಿಕಾ-ಸುರತಾಸವ-ಸೇವನಾ-ಕೃ[7]ತಾದರನಾಗಿ-

ರ್ದಿರದೆ ತರುಣೀ-ರತಾಂತರ-ಸರಾಗಮಂ ಪೇೞ್ವುದಲ್ಲಿ ತುಂಬಿಯ ನೆವದಿಂ ||೧೨೯||

೧೨೭. ಮನಸ್ಸಿನಲ್ಲಿ ಒಂದರ್ಥವನ್ನು ಇಟ್ಟುಕೊಂಡು, ತತ್ಸಮಾನವಾದ ಇನ್ನೊಂದು ಅರ್ಥದ ಕುರುಹುಗಳನ್ನಷ್ಟೇ ನಿರ್ದೇಶಿಸುವುದು ‘ಸಮಾಸೋಕ್ತಿ’ಯೆನಿಸುವುದು. ಇದರ ಲಕ್ಷ್ಯ ಹೀಗೆ- *ಸಮಾಸ=ಸಂಕ್ಷಿಪ್ತ; ಎರಡರ್ಥವನ್ನು ಒಂದೇ ಉಕ್ತಿಯಲ್ಲಿ ಸಂಕ್ಷೇಪಿಸಿ ಹೇಳುವುದರಿಂದ ‘ಸಮಾಸೋಕ್ತಿ’. ದಂಡಿ, II -೨೦೫.*

೧೨೮. ದುಂಬಿಯ (ಅರಳಿದ) ಕಮಲದಲ್ಲಿ ಸರಸಲೀಲೆಯಿಂದ ಬೇಕಾದಂತೆ ಕೂಡಿ ನಲಿದು, ಇನ್ನೂ ಮಕರಂದ ಹಾಗು ರಜಸ್ಸು ಬಲಿಯದ ಈ ಮೊಗ್ಗಿನಲ್ಲಿಯೂ ಅದೇ ರೀತಿಯನ್ನು ಹುಡುಕಿಕೊಂಡು ಅದರ ಬಳಿಯಲ್ಲೇ ಸುಳಿಯುತ್ತಿದೆಯಲ್ಲ! *ಹೋಲಿಸಿ-ದಂಡಿ, II-೨೦೬.*

೧೨೯. ಇಲ್ಲಿ ದುಂಬಿಯ ನೆವದಿಂದ, ಮೊದಲು ಅತಿ ವಿದಗ್ಧೆಯಾದ ಗಣಿಕೆಯ ಸುರತರಸದಲ್ಲಿ ಕೃತಾದರನಾಗಿದ್ದವನೇ ಈಗ ಬಾಲೆಯೊಬ್ಬಳ ರತಿಯಲ್ಲಿ ಆಸಕ್ತನಾಗಿರುವನೆಂದು ಹೇಳುವ ಅಭಿಪ್ರಾಯವಿದೆ. *ಹೋಲಿಸಿ-ದಂಡಿ, II -೨೦೭.*

ದಾನಪರನಂ ನಿಜೋನ್ನತ-ಮಾನನನಾರೂಢ-ವಿಪುಳ-ವಂಶನನಂತೊಂ- |

ದಾನೆಯನಪಾಯ-ಪಂಕದೊಳೇನುಂ ತಳ್ವಿಲ್ಲದಿರ್ದುದಂ ಕಾಣಿಸಿದಂ ||೧೩೦||

 

ತ್ಯಾಗಾದಿ-ಗುಣ-ಗುಣೋದಯ-ಭಾಗಿಯನೇನಾನುಮೊಂದು[8]ಪಾಯಾಂತರದಿಂ |

ನೀಗಲ್ ನೆಱೆಯದೆಯನುಪಮನೀ ಗಣಿದದಿನಾನೆ ಮಾಡಿ ನುಡಿದಂ ಬಗೆಯಂ ||೧೩೧||

೧೭. ಪರ್ಯಾಯೋಕ್ತ

ಬಗೆದರ್ಥಮನ[9]ಱಪದೆ ಮೆಲ್ಲಗೆ ತಿರ್ದುವ ಬಗೆಯನದಱ ನೆಪದಿಂ ಪೆಱತಂ |

ನಿಗದಿಸುವುದು ಪರ್ಯಾಯೋಕ್ತಿ-ಗತಾಳಂಕಾರಮದಱ ಪಾಂಗಿಂತಕ್ಕುಂ ||೧೩೨||

೧೩೦. ದಾನಪರ, ಮಹಾ ಮಾನವಂತ ಮತ್ತು ಉತ್ತಮವಂಶಗತ ಎನಿಸಿದ ಆನೆಯೊಂದು ಏನೂ ನೆರವಿಲ್ಲದೆ ಅಪಾಯಪಂಕದಲ್ಲಿ ಬಿದ್ದಿರುವುದನ್ನು ತೋರಿಸಿದನು. *ಇಲ್ಲಿ ವಿಶೇಷಣಗಳಲ್ಲಿ ಶ್ಲೇಷೆಯಿರುವುದರಿಂದ ಪ್ರಸ್ತುತನಾದ ರಾಜ ಮತ್ತು ಅಪ್ರಸ್ತುತವಾದ ಆನೆ ಎರಡಕ್ಕೂ ಅವು ಸಮಾನವಾಗಿ ಅನ್ವಯಿಸುತ್ತವೆ. ರಾಜನೆಂಬರ್ಥವನ್ನು ತೆಗೆದುಕೊಂಡರೆ-ದಾನಪರ=ದಾನಶೀಲ, ಮಾನವಂತ=ಅಭಿಮಾನಶಾಲಿ, ಉತ್ತಮವಂಶಗತ=ಸತ್ಕುಲಪ್ರಸೂತ. ಆನೆಯ ಅರ್ಥವನ್ನು ತೆಗೆದುಕೊಂಡರೆ-ದಾನಪರ=ಮದೋದಕವನ್ನು ಸ್ರವಿಸುವ, ಮಾನವಂತ=ದರ್ಪವುಳ್ಳ, ಉತ್ತಮವಂಶಗತ=ಹೆಬ್ಬಿದಿರಿನ ಮೆಳೆಯಲ್ಲಿರುವ. ಹಾಗೆಯೇ ‘ಅಪಾಯಪಂಕ’ವೆಂದರೆ ರಾಜಪರವಾದ ಅರ್ಥ-ಅಪಾಯವೆಂಬ ಕೆಸರು; ಗಜಪರವಾದ ಅರ್ಥ-ಅಪಾಯಕಾರಿಯಾಗಿ ಅಳವಾದ ಕೆಸರು.*

೧೩೧. ಇಲ್ಲಿ ಯಾವ ಉಪಾಯಗಳಿಂದಲೂ ಪರಿಹಾರ್ಯವಲ್ಲದ ದುರವಸ್ಥೆಗೀಡಾಗಿರುವ ತ್ಯಾಗ ಮೊದಲಾದ ಗುಣಾತಿಶಯಗಳನ್ನುಳ್ಳ (ರಾಜನಂತಹ) ಮಹಾಪುರುಷನೊಬ್ಬನನ್ನು, ಈ ರೀತಿಯಾಗಿ ಆನೆಯೆಂದು ಆಲಂಕಾರಿಕವಾಗಿ ವರ್ಣಿಸಿರುವನು. *ಇಲ್ಲಿ ‘ಅನುಪಮನ್’ ಎಂಬುದು ಕರ್ತೃಪದವಾಗಿ ಕಾಣಬರುತ್ತದೆ. ‘ನುಡಿದಂ’ ಎಂಬ ಕ್ರಿಯಾಪದಕ್ಕೆ. ಇದಕ್ಕೆ ಶ್ರೇಷ್ಠನಾದ ಕವಿ ಎಂದು ಸಾಮಾನ್ಯಾರ್ಥವನ್ನಷ್ಟೇ ಕಲ್ಪಿಸಿಕೊಳ್ಳಬಹುದು.*

೧೩೨. ಮನಸ್ಸಿನಲ್ಲಿ ವಿವಕ್ಷಿತವಾಗಿರುವ ಅರ್ಥವನ್ನು (ನೇರವಾಗಿ) ಹೇಳದೆ, ಉಪಾಯವಾಗಿ ಅದರ ಹೊಲಬು ತಿಳಿಯುವಂತೆ, ಮತ್ತೊಂದನ್ನು ಹೇಳುವುದೇ ‘ಪರ್ಯಾಯೋಕ್ತ’ವೆಂಬ ಅಲಂಕಾರ. ಅದರ ಉದಾಹರಣೆ ಹೀಗಿರುತ್ತದೆ- *ಹೋಲಿಸಿ-ದಂಡಿ, ಐಐ-೨೯೫.*

ನೀಮಿರ್ವರುಮನ್ನೆಗಮಿಂತೀ ಮಾೞ್ಕೆಯೊಳಿನಿಸು ಪೊೞ್ತು ನುಡಿವುತ್ತಿರಿಮಾ- |

ನಾಮೋದ-ಕುಸುಮ-ಸಮಿತಿಯನಾ ಮರಗಳೊಳಾಯ್ದು ಕೊಯ್ದುಮಿಲ್ಲಿಗೆ ಬರ್ಪೆಂ ||೧೩೩||

 

ಕೆ[10]ಳದಿಯನಭಿಮತವರನೊರ್ಬುಳಿಗೂಡೆ ವಿದ[11]ಗ್ಧೆ ಸುರತ-ಸೇವನಮಂ ಮೊ- |

ಕ್ಕಳಮವರ್ಗೆ ಮಾಡಲೆಂದಾಗಳೆ ಪೋಗಲ್ಬಗೆದು ನುಡಿದಳಿಂತೀ ಮಾತಂ ||೧೩೪||


[1] ವರಿನೃಪ ‘ಪಾ, ಮ, ಸೀ’.

[2] ಪರಪೆಸದ ‘ಮ’.

[3] ಸಯ್ತಡಿವಡಿಕೆ ‘ಮ, ಅ’.

[4] ಮಾೞ್ಕೆಯಿಱನಱಸಿ ‘ಮ’.

[5] ಸುಱವುದಳಿ ‘ಮ’.

[6] ಕೆಲಗೆಲದೊಳ್ ‘ಮ’.

[7] ಕೃತೋದನನಾಗಿ ‘ಪಾ, ಸೀ’, ಕೃತೌದನನಾಗಿ ‘ಮ’, ಇಲ್ಲಿ ಓದನ ಅಥವಾ ಅನ್ನದ ಪ್ರಸಕ್ತಿಯಿಲ್ಲವಾಗಿ ಮತ್ತು ಕೃತ+ಓದನ=ಕೃತೌದನ ಎಂದಾಗಬೇಕೇಹೊರತು ಸಂಧಿಯಲ್ಲಿ ‘ಕೃತೋದನ’ ಎಂದಾಗಲಾರದ್ದರಿಂದ ಇದು ಅಪಪಾಠ. ಇಲ್ಲಿ ಅರ್ಥದೃಷ್ಟಿಯಿಂದ ಪರಿಷ್ಕೃತ.

[8] ಪಾಯಾಂತರಮಂ ‘ಪಾ, ಮ’.

[9] ನಱಯಿಪವೆವೆಲ್ಲಗೆ ‘ಅ’.

[10] ಕೆಳದಿಯಮಭಿತಮುಮ ‘ಪಾ, ಮ’; ಕೆಳದಿಯನಭಿಮತಮುಮ ಬಿ.ಎಂ. ಶ್ರೀ. ಸೂಚಿತ ಪಾಠ; ಇಲ್ಲಿ ದಂಡಿಯ ಮೂಲದಂತೆ ಅರ್ಥಾನುಸಾರವಾಗಿ ಪರಿಷ್ಕೃತ.

[11] ವಿದಗ್ಧ ‘ಬ’.