“ಅಯ್ಯಾ ವಿಶ್ವಕರ್ಮನೆ, ನನಗೆ ಪಾದುಕೆಗಳನ್ನು ಮಾಡಿಕೊಡು. ಅವನ್ನು ಕಾಲಿಗೆ ಹಾಕಿಕೊಂಡು ನಡೆದರೆ, ಪಾದಕ್ಕೆ ಎಂದಿಗೂ ಕೆಸರಾಗಬಾರದು. ನೀರಿನ ಮೇಲೆ ನಡೆಯಲೂ ಸಾಧ್ಯವಾಗಬೇಕು.”

“ಅಯ್ಯಾ ನನಗೆ ಉಜ್ಜಿ ತೊಳೆಯದಿದ್ದರೂ ಉಜ್ವಲವಾಗಿ ಇರತಕ್ಕ ಅಡುಗೆಯ ಪಾತ್ರೆಗಳನ್ನು ಮಾಡಿಕೊಡು. ಕೈ ಸುಡದಂತೆ ಅಡುಗೆಯ ರುಚಿ ಕೆಡದಂತೆ ಅಡುಗೆ ಕೆಲಸ ಹೇಳಿಕೊಡು.”

ವಿಶ್ವಕರ್ಮನು ಗುರುಕುಲದಲ್ಲಿ ವಿದ್ಯೆ ಕಲಿತು ಬಗೆ ಬಗೆಯ ವಸ್ತುಗಳನ್ನು ಮಾಡುವುದರಲ್ಲಿ ಪ್ರವೀಣನೆನಿಸಿದಾಗ,  ಆಶ್ರಮದಲ್ಲಿದ್ದ ಗುರು, ಗುರುಪತ್ನಿ, ಅವರ ಮಕ್ಕಳು ಎಲ್ಲರೂ ಅವನಲ್ಲಿ ಹೀಗೆ ಒಂದೊಂದಾಗಿ ತಮ್ಮ ಬಯಕೆಯನ್ನು ಹೇಳಿಕೊಂಡರು. ಗುರುವಿನ ಮಗ ಮತ್ತು ಮಗಳು ಅವನಲ್ಲಿ ಮೇಲಿನಂತೆ ಕೇಳಿಕೊಂಡರು.

ಗುರುಭಕ್ತಿಯುಳ್ಳ ಆತನು ಮುಂದೆ ಅವೆಲ್ಲವನ್ನೂ ಮಾಡಿಕೊಟ್ಟನಂತೆ.

ಇಂತಹ ಆಶ್ವರ್ಯಕರವಾದ ನಿರ್ಮಾಣದಿಂದ ಲೋಕ ಪ್ರಸಿದ್ಧನಾದ ಮಹಾಪುರುಷ, ಮಹಾಶಿಲ್ಪಿ ವಿಶ್ವಕರ್ಮ.

ಈ ಪ್ರಪಂಚವೆಲ್ಲವೂ ಪರಮಾತ್ಮನ ಸೃಷ್ಟಿ. ಇಲ್ಲಿ  ಅವನು ನೆಲ, ನೀರು, ಬೆಂಕಿ, ಗಾಳಿ, ಬೆಳಕುಗಳನ್ನು ಸೃಷ್ಟಿಸಿದ್ದಾನೆ. ಮನುಷ್ಯರು, ಪ್ರಾಣಿ-ಪಕ್ಷಿಗಳು, ಮರ- ಗಿಡಗಳು ಎಲ್ಲವೂ ಆತನ ಸೃಷ್ಟಿ. ಆದುದರಿಂದ ಪರಮಾತ್ಮನಿಗೇ ವಿಶ್ವಕರ್ಮ ಎಂತಲೂ ಹೆಸರಿದೆ. ಪರಮಾತ್ಮನ ವಿಶ್ವಕರ್ಮರೂಪವನ್ನು ಭಕ್ತರು ಬಗೆ ಬಗೆಯಾಗಿ ವರ್ಣಿಸಿದ್ದಾರೆ. ಅವನಿಗೆ ಬೇರೆಬೇರೆ ಬಣ್ಣದ ಐದು ಮುಖಗಳು, ಹದಿನೈದು ಕಣ್ಣುಗಳು, ಹತ್ತು ಕೈಗಳು, ವೀಣೆ, ಡಮರು, ಬಿಲ್ಲುಬಾಣ, ಶಂಖಚಕ್ರಗಳನ್ನು ಹಿಡಿದಿದ್ದಾನೆ. ಪೀತಾಂಬರಧಾರಿ. ಹಲವು ಅವತಾರಗಳನ್ನೆತ್ತಿ ಲೋಕಸೃಷ್ಟಿಯನ್ನು ಅವನೇ ಅಭಿವೃದ್ಧಿ ಪಡಿಸಿದ್ದಾನೆ. ನಾವು ಇಲ್ಲಿ ವಿವರಿಸುವುದು ಆ ಪರಮಾತ್ಮನ ಸ್ವರೂಪವನ್ನಲ್ಲ. ಸೃಷ್ಟಿಯಲ್ಲಿ ಪ್ರತಿ ಸೃಷ್ಟಿಯನ್ನು ಮಾಡಿ, ಮಾನವನಿಗೆ ಅನುಕೂಲತೆಗಳನ್ನು ಒದಗಿಸಿದ ಒಬ್ಬ ಮಹಾಶಿಲ್ಪಿಯನ್ನು. ಅವನನ್ನು ಆದಿ ವಿಶ್ವಕರ್ಮ ಪರಮಾತ್ಮನ ಅಂಶದವನೆಂದು ಭಾವಿಸುವುದು ತಪ್ಪಲ್ಲ. ಅವನಿಗೆ ಮಾನವ ಜನಾಂಗವೇ ಋಣಿಯಾಗಿರಬೇಕು.

ಈ ಕಾಲದಲ್ಲಿ ನಾವು ಭೌತವಿಜ್ಞಾನದಿಂದ ಎಷ್ಟೋ ಆಶ್ಚರ್ಯಕರವಾದ ವಸ್ತು ನಿರ್ಮಾಣಗಳನ್ನು ಕಾಣುತ್ತೇವೆ. ಸುಂದರವಾದ ನಗರಗಳು, ಭವ್ಯವಾದ ಚಿತ್ರ ವಿಚಿತ್ರವಾದ ಮನೆ-ಮಠಗಳು, ಯಂತ್ರಾ ಸಾಮಗ್ರಿಗಳು, ವಾಹನಗಳು ಇಂಥವು ಒಂದಲ್ಲ ಎರಡಲ್ಲ, ಸಾವಿರಾರು. ಇವೆಲ್ಲವನ್ನೂ ಮನುಷ್ಯನೇ ಮಾಡಿದ್ದು.

ಪ್ರಾಚೀನ ಕಾಲದಲ್ಲಿ ಯಂತ್ರವಿದ್ಯೆಯೊಂದಿಗೆ ಮಂತ್ರ ವಿದ್ಯೆಯೂ ಇದ್ದುದರಿಂದ ಆಶ್ಚರ್ಯಕರವಾದ ಎಷ್ಟೋ ನಿರ್ಮಾಣಗಳು ಆದವು ಎಂದು ನಮ್ಮ ಪುರಾಣ, ಇತಿಹಾಸಗಳು ಹೇಳುತ್ತವೆ. ಅಂತಹ ನಿರ್ಮಾಣಗಳ ಮೂಲಪುರುಷ ವಿಶ್ವಕರ್ಮ. ದೇವಶಿಲ್ಪಿ ಎಂದು ಅವನು ಪ್ರಸಿದ್ಧನು.

ಜನನ-ಬಾಲ್ಯ-ಬೆಳೆಯ ಸಿರಿ

ಬಹಳ ಹಿಂದಿನ ಕಾಲ. ಬ್ರಹ್ಮನ ಮಾನಸ ಪುತ್ರರಲ್ಲಿ ಧರ್ಮ ಪ್ರಜಾಪತಿ ಎಂಬವನಿದ್ದನು. ಇವನು ದಕ್ಷನ ಹೆಣ್ಣುಮಕ್ಕಳಲ್ಲಿ ಒಬ್ಬಳಾದ ವಸು ಎಂಬಾಕೆಯನ್ನು ಮದುವೆಯಾದನು. ಅವಳಲ್ಲಿ ಎಂಟು ಮಂದಿ ಮಕ್ಕಳಾದರು. ಅವರನ್ನು ಅಷ್ಟವಸುಗಳೆಂದು ಕರೆಯುತ್ತಿದ್ದರು. ಅವರಲ್ಲಿ ಪ್ರಭಾಸ ಎಂಬವನೊಬ್ಬನು. ಇವನು ಒಳ್ಳೆಯ ಗುಣವಂತನು. ತ್ಯಾಗ-ಕರುಣೆ ಉಳ್ಳವನೂ ಪರೋಪಕಾರಿಯೂ ಆಗಿದ್ದನು. ಶುದ್ಧ ಹೃದಯದವನು. ದೇವತೆಗಳಿಗೆ ಗುರುವಾದ ಬೃಹಸ್ಪತಿ, ತನ್ನ ಮಗಳಾದ ಬ್ರಹ್ಮವಾದಿನಿ ಅಥವಾ ಯೋಗಸಿದ್ಧಿ ಎಂಬವಳನ್ನು ಇವನಿಗೆ ಮದುವೆ ಮಾಡಿಕೊಟ್ಟಿದ್ದನು. ಈ ಪುಣ್ಯ ದಂಪತಿಗಳು ಯಾವಾಗಲೂ ಅತಿಥಿ-ಅಭ್ಯಾಗತರನ್ನು ಸತ್ಕರಿಸುತ್ತ, ದೇವರನ್ನೂ ಸತ್ಪುರುಷರನ್ನೂ ವಿದ್ವಾಂಸರನ್ನೂ ಪೂಜಿಸುತ್ತ ಇದ್ದರು.

ಇವರಿಗೆ ಬಹುಕಾಲದಿಂದ ಮಕ್ಕಳಿರಲಿಲ್ಲ. ಲೋಕದಲ್ಲಿ ಅತಿಶ್ರೇಷ್ಠನಾದ ವಿಜ್ಞಾನಿಯೂ ನಿರ್ಮಾಣ  ಕುಶಲನೂ ಗುರುಹಿರಿಯರಲ್ಲಿ ಗೌರವ ಭಕ್ತಿಯುಳ್ಳವನೂ ಧರ್ಮನಿಷ್ಠನೂ ಆದ ಮಗನಾಗಬೇಕೆಂದು ಅವರು ಯಾವಾಗಲೂ ದೇವರಲ್ಲಿ ಬೇಡಿಕೊಳ್ಳುತ್ತಿದ್ದರು. ಅವರ ಬೇಡಿಕೆಯ ಫಲವಾಗಿ ಮತ್ತು ಲೋಕದ ಭಾಗ್ಯದ ಪರಿಣಾಮವಾಗಿ ಒಂದು ಗಂಡು ಮಗುವನ್ನು ಆ ಬ್ರಹ್ಮವಾದಿನಿ ಹೆತ್ತಳು. ತಮ್ಮ ಮಗನು ಮುಂದೆ ಏನಾಗಬೇಕೆಂಬ ಕಲ್ಪನೆ ಆ ದಂಪತಿಗಳಿಗೆ ಮೊದಲೇ ಇದ್ದುದರಿಂದ ಅವರು ಆ ಮಗುವಿಗೆ ವಿಶ್ವಕರ್ಮ ಎಂದು ದೇವರ ಹೆಸರನ್ನೇ ಇಟ್ಟರು.

ಮಗು ಚಿಕ್ಕಂದಿನಲ್ಲೇ ಮುದ್ದಾಗಿ, ಚೆಲುವಾಗಿ, ಚುರುಕಾಗಿ, ಒಳ್ಳೆಯ ಚಟುವಟಿಕೆಯಿಂದ ಕೂಡಿದ್ದಿತು. ಯಾರು ಏನೂ ಕಲಿಸದಿದ್ದರೂ ಹೊಸಹೊಸ ನಿರ್ಮಾಣಗಳನ್ನು ಮಾಡುವುದರಲ್ಲಿ ವಿಶ್ವಕರ್ಮನಿಗೆ ಬಾಲ್ಯದಿಂದಲೇ ಬಹಳ ಆಸಕ್ತಿ. ಆಶ್ರಮಗಳಲ್ಲಿ ಋಷಿಗಳು ವಾಸ ಮಾಡುವ ಎಲೆಮನೆಗಳನ್ನು ನೋಡಿ ಕನಿಕರ ತಾಳುವನು. ಇವುಗಳಿಗಿಂತ ಚೆನ್ನಾಗಿ ಗೋಡೆ ಮಾಡುಗಳಿಂದ ಕೂಡಿದ ಮನೆಗಳನ್ನು ಕಟ್ಟಿ ಅಲ್ಲೇಕೆ ಅವರು ವಾಸ ಮಾಡಬಾರದೆಂದು ಯೋಚಿಸುತ್ತಿದ್ದನು. ಜನರು ಮರದ ಅಡಿಯಲ್ಲೋ ಗುಹೆಗಳೊಳಗೋ ಇರುವುದನ್ನು ಕಂಡು ಇವರಿಗೆಲ್ಲ ಒಳ್ಳೆಯ ವಸತಿಯನ್ನು ಏರ್ಪಡಿಸಬೇಕೆಂದು ಭಾವಿಸುತ್ತಿದ್ದನು. ನಗರಗಳನ್ನೂ ಅರಮನೆಗಳನ್ನೂ ಕಟ್ಟಬೇಕೆಂದು ಸಂಕಲ್ಪಿಸುತ್ತಿದ್ದನು. ಹಾಗೆ ಎಲ್ಲಾದರೂ ಅವನು ಹೇಳಿದಾಗ ಇದು ಬರಿಯ ಮಕ್ಕಳಾಟಿಕೆಯ ಮಾತೆಂದು ಇತರರು ಹೇಳುತ್ತಿದ್ದರು. ಆಟಕ್ಕೆಂದೇ ತಾನು ಗಾಡಿಯನ್ನು ಮಾಡಿದನೆಂದರೆ, ಕೀಲನ್ನು ಒತ್ತಿದಾಗ ಅದು ಹತ್ತಾರು ಅಡಿಯಷ್ಟು ದೂರ ಹೋಗುವಂತೆ ಮಾಡಿ, ಇತರರನ್ನು ಬೆರಗುಗೊಳಿಸು ತ್ತಿದ್ದನು. ಒಮ್ಮೆ ಮಣ್ಣಿನಿಂದಲೇ ಹಸು ಕರುಗಳನ್ನು ಮಾಡಿ ಗಿಡದ ರಸಗಳಿಂದ ಬಣ್ಣ ಕೊಟ್ಟು ನಿಲ್ಲಿಸಿದ. ನೋಡಿದವರಿಗೆ ಅವು ಜೀವವುಳ್ಳವು ಎಂದು ಭಾವಿಸುವಂತೆ ಆಯಿತು. ಹೀಗೆಯೇ ಸ್ವಯಂಸ್ಫೂರ್ತಿ ಯಿಂದ ರೂಪತಾಳಿದ ಅವನ ವಿವಿಧ ರಚನೆಗಳು ಮುಂದೆ ಈತನು ಅತ್ಯದ್ಭುತ ನಿರ್ಮಾಣ ಕುಶಲನಾಗುವನು ಎಂಬುದನ್ನು ಸೂಚಿಸುವಂತೆ ಇದ್ದವು.

ಗುರುಕುಲವಾಸ – ಗುರುನಿಷ್ಠೆ

ಉಪನಯನವಾದೊಡನೆ, ಪದ್ಧತಿಯಂತೆ ಪ್ರಭಾಸನು ವಿಶ್ವಕರ್ಮನನ್ನು ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳುಹಿಸಿದನು. ಗುರುಭಕ್ತಿ, ದೈವಭಕ್ತಿ, ಲೋಕದ ಹಿತಚಿಂತನೆ – ಇವುಗಳಿಂದ ತುಂಬಿದ ವಿಶ್ವಕರ್ಮನು  ಅಲ್ಲಿ ಹಲವು ವರ್ಷ ವಿದ್ಯೆ ಕಲಿತನು. ವೇದ, ಉಪನಿಷತ್ತು, ಪುರಾಣ, ಧರ್ಮಶಾಸ್ತ್ರ, ಜೋತಿಷ, ತರ್ಕ, ಸಾಹಿತ್ಯ, ನೀತಿಶಾಸ್ತ್ರಗಳೊಂದಿಗೆ ಸೃಷ್ಟಿಯ ವಿಜ್ಞಾನ ರಹಸ್ಯಗಳನ್ನೂ ಅರಿತನು. ಆನೆ, ಕುದುರೆಗಳ ಸವಾರಿ, ಗರಡಿ ವಿದ್ಯೆಗಳನ್ನೂ ಅಭ್ಯಾಸ ಮಾಡಿದನು. ಆಯು ರ್ವೇದ, ಧನುರ್ವೇದ, ಗಾಂಧರ್ವವೇದ, ಸ್ಥಾಪತ್ಯ ವೇದ (ಶಿಲ್ಪವಿದ್ಯೆ) – ಈ ನಾಲ್ಕು ಉಪವೇದಗಳನ್ನೂ ಅಭ್ಯಾಸ ಮಾಡಿದನು. ಇವುಗಳೊಂದಿಗೆ ಚಿತ್ರಕಲೆ, ಸೂಪಶಾಸ್ತ್ರ (ಅಡುಗೆ) ಮುಂತಾದುವೆಲ್ಲ ಹಿಂದೆ ಕಲಿತದ್ದನ್ನೇ ಜ್ಞಾಪಕಕ್ಕೆ ತಂದ ಹಾಗೆ, ಅವನಿಗೆ ಅತಿ ಸುಲಭವಾಗಿ ಕೈಗೂಡಿದವು. ಗುರುಕುಲದಲ್ಲಿ ಇದ್ದಷ್ಟೂ ಕಾಲ ವಿಶ್ವಕರ್ಮನು ಇತರ ಶಿಷ್ಯರ ಹಾಗೆ ಭಿಕ್ಷೆ ಬೇಡಿ ತಂದು ಗುರುಗಳಿಗೆ ಅರ್ಪಿಸಿ, ಅವರು ಕೊಟ್ಟದ್ದನ್ನು ಸೇವಿಸುತ್ತಿದ್ದನು. ಗುರುಸೇವೆ ಮಾಡುತ್ತಿದ್ದನು. ಶ್ರೇಷ್ಠ ಗುರುಭಕ್ತನೆನಿಸಿದ್ದನು.

ವಿಶ್ವಕರ್ಮನ ವಿದ್ಯಾಭ್ಯಾಸ ಮುಗಿದು, ಅವನನ್ನು ನಾಡಿಗೆ ಕಳುಹಿಸಿಕೊಡುವ ದಿನ ಸಮೀಪಿಸಿತು. ಅವನು ಗುರುದಕ್ಷಿಣೆ ಸಲ್ಲಿಸಲು ಸಿದ್ಧನಾದನು. ಗುರು ಮತ್ತು ಗುರುವಿನ ಕುಟುಂಬದವರು ಅಪೇಕ್ಷಿಸಿದ್ದನ್ನು ಸಲ್ಲಿಸುವುದೇ ಗುರುದಕ್ಷಿಣೆ.

ಆ ಸಂದರ್ಭದಲ್ಲಿ ಗುರು, ಗುರುಪತ್ನಿ, ಗುರುಪುತ್ರ, ಗುರುಪುತ್ರಿ – ಒಬ್ಬೊಬ್ಬರಾಗಿ ತಮಗೆ ವಿಶ್ವಕರ್ಮನಿಂದ ಆಗಬೇಕಾದುದನ್ನು ಹೇಳತೊಡಗಿದರು. ಗುರು ಹೀಗೆಂದನು:

“ಎಲೈ ಶಿಷ್ಯನೇ, ನನಗೆ ನೀನು ಒಂದು ಎಲೆಮನೆ ಯನ್ನು ಮಾಡಿಕೊಡು. ಯಾವ ಮಳೆಗೂ ಅದು ಸೋರಬಾರದು. ಚಳಿಗಾಲದಲ್ಲಿ ಅದು ಬೆಚ್ಚಗಿರಬೇಕು, ಸೆಕೆಗಾಲದಲ್ಲಿ ತಂಪಾಗಿರಬೇಕು. ಆ ಪರ್ಣಶಾಲೆ ಎಂದಿಗೂ ಹಳತಾಗಬಾರದು, ಶಿಥಿಲವಾಗಬಾರದು.”

ಗುರುಪತ್ನಿ ತನ್ನ ಇಚ್ಛೆಯನ್ನು ಹೀಗೆ ಪ್ರಕಟಿಸಿದಳು:

‘ಒಂದು ತಿಂಗಳೊಳಗಾಗಿ ಎಲ್ಲವನ್ನೂ ಮಾಡಿಕೊಡುವೆನು.’

“ವಿಶ್ವಕರ್ಮನೇ, ನನಗೊಂದು ಸೊಗಸಾದ ರವಕೆ ಮಾಡಿಕೊಡು. ಬೇಕಾದಂತೆ ಅದು ಬಿಗಿ ಮಾಡುವಂತೆಯೂ ಸಡಿಲ ಮಾಡುವಂತೆಯೂ ಇರಬೇಕು. ಚಿತ್ರವಿಚಿತ್ರವಾದ ಹೊಸ ಚಿನ್ನದ ಆಭರಣಗಳನ್ನು ನಿರ್ಮಿಸಿಕೊಡು. ಒಂದೇ ಕಂಬದಲ್ಲಿ ನಿಂತಿರುವ ಮತ್ತು ಒಂದೇ ಮರದಿಂದ ಮಾಡಿದ, ಬೇಕಾದಲ್ಲಿಗೆ ಒಯ್ಯಲು ಸಾಧ್ಯವಿರುವ ಮನೆಯನ್ನು ಕಟ್ಟಿ ಕೊಡು.”

ಗುರುವಿನ ಮಗನು ಹೀಗೆ ಕೇಳಿಕೊಂಡನು:

“ನನಗೆ ನೀನು ಎರಡು ಪಾದುಕೆಗಳನ್ನು ಮಾಡಿ ಕೊಡು. ಅವನ್ನು ಕಾಲಿಗೆ ಹಾಕುಕೊಂಡರೆ ಪಾದಕ್ಕೆ ಎಂದಿಗೂ ಕೆಸರಾಗಬಾರದು. ನೀರಿನ ಮೇಲೆ ನಡೆಯಲೂ ಸಾಧ್ಯವಾಗಬೇಕು. ಕಾಲಿಗೆ ಮೆತ್ತಗಿದ್ದು, ಓಡುವಾಗ ಅದು ಸುಖಕೊಡುವಂತಿರಬೇಕು.”

ಗುರುವಿನ ಮಗಳು ತನ್ನ ಅಪೇಕ್ಷೆಯನ್ನು ಹೀಗೆ ತಿಳಿಸಿದಳು:

“ನಿನ್ನ ಕೈಯಿಂದಲೇ ನನಗೆ ಎರಡು ಓಲೆಗಳನ್ನು ಮಾಡಿಕೊಡು. ಆನೆಯ ದಂತದಿಂದ ಹೆಣ್ಣುಮಕ್ಕಳ ಆಟದ ಒಡವೆಗಳನ್ನು ನಿರ್ಮಿಸಿಕೊಡು. ಅಯ್ಯಾ, ನನಗೆ ಮುರಿಯದ ಒನಕೆ, ಹಳತಾಗದ ಮೊರ, ಉಜ್ಜಿ ತೊಳೆಯ ದಿದ್ದರೂ ಉಜ್ವಲವಾಗಿರತಕ್ಕ ಅಡುಗೆ ಪಾತ್ರೆಗಳನ್ನು ಮತ್ತು ಪೀಠೋಪಕರಣಗಳನ್ನು ಮಾಡಿಕೊಡು. ಕೈಸುಡದಂತೆ, ಅಡುಗೆಯ ರುಚಿ ಕೆಡದಂತೆ ಒಳ್ಳೆಯ ಅಡುಗೆ ಕೆಲಸ ಹೇಳಿಕೊಡು.”

ವಿಶ್ವಕರ್ಮನು ಅವುಗಳಲ್ಲಿ ಯಾವುದೊಂದನ್ನೂ ತನಗೆ ಅಸಾಧ್ಯವೆಂದು ಹೇಳಲಿಲ್ಲ. “ಒಂದು ತಿಂಗಳೊಳಗಾಗಿ ಅವೆಲ್ಲವನ್ನೂ ಮಾಡಿಕೊಡುವೆನು. ನನಗೆ ಈಗ ಹೋಗಲು ಅನುಮತಿ ಕೊಡಿ” ಎಂದು ಕೇಳಿ ಕೊಂಡನು. ಅಪ್ಪಣೆ ಪಡೆದು ವಿಶ್ವಕರ್ಮನು ಹೊರಟು ಬೇರೊಂದು ಕಾಡಿಗೆ ಹೋದನು.

ತಪಸ್ಸಾಧನೆ – ಅನುಗ್ರಹ

ವಿಶ್ವಕರ್ಮನ ಮನಸ್ಸು ಈಗ ಚಿಂತೆಗೆ ಈಡಾಯಿತು. ‘ಗುರುವಿನ ಇಷ್ಟವನ್ನು ನಡೆಸಿಕೊಡದವನು ಶಿಷ್ಯನೇ? ಗುರುವಿನ ಅನುಗ್ರಹಕ್ಕೆ ಪಾತ್ರನಾಗದವನಿಗೆ ಮುಂದೆ ಒಳ್ಳೆಯದಾಗುವುದಿಲ್ಲ. ಕೊಟ್ಟ ಮಾತನ್ನು ನಡೆಸದವನಿಗೆ ಎಂದೂ ಉನ್ನತಿಯಿಲ್ಲ. ಅಂಥವನು ಪಾಪದ ಹೊರೆ ಯೊಂದಿಗೆ ನರಕಕ್ಕೆ ಇಳಿಯುವನು. ಈಗ ನಾನೇನು ಮಾಡಲಿ ?’ ಎಂದು ಚಿಂತಿಸುತ್ತಿದ್ದ.

ಆ ವೇಳೆಗೆ ಅವನ ಬಳಿಗೆ ಒಬ್ಬ ಮಹರ್ಷಿ ಬಂದನು. ಅವನಿಗೆ ವಿಶ್ವಕರ್ಮನು ಸಾಷ್ಟಾಂಗ ವಂದನೆ ಮಾಡಿದನು. ತನ್ನ ಕಷ್ಟವನ್ನೆಲ್ಲ ಹೇಳಿಕೊಂಡು ತನಗೆ ಮಾರ್ಗದರ್ಶನ ಮಾಡುವಂತೆ ಬೇಡಿಕೊಂಡನು. ಆಗ ಮಹರ್ಷಿ ಹೀಗೆ ಅನುಗ್ರಹ ಮಾಡಿದನು –

“ಎಲೈ ತರುಣನೇ, ಹೆದರಬೇಡ ; ಮರುಗಬೇಡ. ದೈವಾನುಗ್ರಹದಿಂದ ನಿನ್ನ ಕಾರ್ಯಗಳೆಲ್ಲ ಕೈಗೂಡುವುವು. ನೀನು ಕಾಶಿಗೆ ಹೋಗು. ಅಲ್ಲಿ ಶಂಭುವಿಗೆ ಪ್ರಿಯವಾದ ಆನಂದಕಾನನದಲ್ಲಿ ವಿಶ್ವೇಶ್ವರನನ್ನು ಪೂಜಿಸು. ಅಲ್ಲಿ ನಿನಗೆ ಇಷ್ಟ ಸಿದ್ಧಿಯಾಗುವುದು. ವಿವಿಧ ಶಿಲ್ಪಗಳ ನಿರ್ಮಾಣಶಕ್ತಿ ನಿನಗೆ ಈಗಲೇ ಇದೆ. ಶಿವನನ್ನು ಒಲಿಸಿದೆಯಾದರೆ, ನಿನ್ನ ಗುರುಕುಲದವರ ಇಚ್ಛೆಯನ್ನು ಮಾತ್ರವಲ್ಲ ಮೂರುಲೋಕಗಳ ಸತ್ಪುರುಷರ, ಮಹಾ ಪುರುಷರ ಇಚ್ಛೆಯನ್ನು ಈಡೇರಿಸಬಲ್ಲವನಾಗುವೆ. ಹಿಂದೆ ಬ್ರಹ್ಮದೇವನು ವಿಶ್ವೇಶ್ವರನ ಅನುಗ್ರಹದಿಂದಲೇ ಸೃಷ್ಟಿ ಮಾಡುವ ಕಲೆಯಲ್ಲಿ ನಿಪುಣನಾದನು. ಇಂದೀಗ ನೀನು ಎರಡನೆಯ ಬ್ರಹ್ಮನ ಹಾಗೆ ಲೋಕದಲ್ಲಿ ವಿಶಿಷ್ಟವಾದ ನಿರ್ಮಾಣಗಳನ್ನು ಮಾಡುವೆ.”

ಕೃಪಾಳುವಾದ ಆ ಮಹರ್ಷಿ ಅವನನ್ನು ಕಾಶಿಗೆ ಕರೆದೊಯ್ದು ಆನಂದಕಾನನವನ್ನು ತೋರಿಸಿ ಮರೆಯಾದನು. ತಾನು ಇರಿಸಿದ್ದ ಗುರುಭಕ್ತಿಯ ಮಹಿಮೆ ಯಿಂದಲೇ ತನಗೆ ಇಂತಹ ಅನುಕೂಲತೆ ದೊರೆಯಿತೆಂದು ವಿಶ್ವಕರ್ಮನು ಭಾವಿಸಿಕೊಂಡನು.

ವಿಶ್ವಕರ್ಮನು ಅಲ್ಲಿ ನಿತ್ಯವೂ ತಪಸ್ಸು ಮಾಡ ತೊಡಗಿದನು. ಕೆಲವು ದಿನ ಗೆಡ್ಡೆಗೆಣಸುಗಳನ್ನು ಮಾತ್ರ ತಿನ್ನುತ್ತಿದ್ದನು. ಆಮೇಲೆ ಗಾಳಿಯನ್ನು ಮಾತ್ರ ಸೇವಿಸಿ ತಪಸ್ಸು ಮಾಡಿದನು. ಹಗಲಿರುಳೂ ಧ್ಯಾನದಲ್ಲೇ ಮುಳುಗಿದ್ದನು. ಹೊರಗಿನ ವಿಚಾರವನ್ನು ಮರೆತು, ವಿಶ್ವೇಶ್ವರನ ಸಾಕ್ಷಾತ್ಕಾರವಾಗುವವರೆಗೆ ಕಠಿಣ ತಪಸ್ಸನ್ನು ಮಾಡಲು ದೃಢವಾದ ನಿರ್ಧಾರ ಮಾಡಿದನು. ಧ್ಯಾನದಲ್ಲಿ ಕುಳಿತ ಅವನಿಗೆ ಶಿವನು ಪ್ರತ್ಯಕ್ಷನಾದಂತೆ ಆಯಿತು. ಹಲವು ವರಗಳನ್ನು ಕರುಣಿಸಿದಂತೆ, ಹೀಗೆ ಹೇಳಿದಂತೆ ಅನುಭವವಾಯಿತು:

“ವಿಶ್ವಕರ್ಮನೇ, ನಿನ್ನ ಇಷ್ಟ ಕೈಗೂಡುವ ಕಾಲ ಬಂದಿದೆ. ಈ ಬಗೆಯ ತಪಸ್ಸನ್ನೀಗ ನಿಲ್ಲಿಸು. ಲೋಕಕ್ಕೆ ಉಪಯೋಗವಾಗುವ ಹೊಸಹೊಸ ಶಿಲ್ಪ ನಿರ್ಮಾಣಗಳು ನಿನ್ನಿಂದ ಆಗಲಿಕ್ಕಿವೆ. ಚಿನ್ನ, ಕಬ್ಬಿಣ, ಬೆಳ್ಳಿ, ತಾಮ್ರ ಮುಂತಾದ ವಿವಿಧ ಲೋಹಗಳಿಂದ ಬೇಕುಬೇಕಾದ ಆಕೃತಿಗಳನ್ನೂ ಕಲೆಗಾರಿಕೆಗಳನ್ನೂ ಮಾಡುವ ಪರಿಪೂರ್ಣ ಜ್ಞಾನ ನಿನಗೆ ಬರಲಿ. ಮರಗೆಲಸ, ಕಲ್ಲುಕೆತ್ತನೆ, ನವರತ್ನ ರಚನೆ, ವಿವಿಧ ವಸ್ತ್ರ ನಿರ್ಮಾಣ; ಗಾಳಿ, ನೀರು, ಬೆಂಕಿ, ಆಕಾಶ, ನೆಲಗಳ ಶಕ್ತಿಯ ಸಿದ್ಧಿ, ಸುಗಂಧ ದ್ರವ್ಯ ನಿರ್ಮಾಣ, ಬಗೆಬಗೆಯ ಸಸ್ಯಸಂಪತ್ತನ್ನು  ಬೆಳೆಸುವುದು – ಇತ್ಯಾದಿಗಳೆಲ್ಲವೂ ಲೀಲಾಜಾಲವಾಗಿ ನಿನಗೆ ಗೊತ್ತಾಗಲಿ. ಯಾರುಯಾರಿಗೆ ಯಾವಯಾವ ಬಗೆಯ ಮನೆ, ಅರಮನೆ, ದೇವಾಲಯ, ನಗರ, ಉದ್ಯಾನ, ಕೆರೆ, ಕಾಲುವೆ ಆಗಬೇಕೋ ಅವೆಲ್ಲವನ್ನೂ ನಿರ್ಮಾಣ ಮಾಡಬಲ್ಲವನಾಗು. ರಥ, ಆಯುಧ, ವಸ್ತು, ವಾಹನ, ಯಂತ್ರಗಳು, ಅಲಂಕಾರಸಾಧನಗಳು – ಎಲ್ಲವನ್ನೂ ರಚಿಸಬಲ್ಲವನಾಗು. ಪಾಕವಿಜ್ಞಾನ, ಗಾನವಾದನ ನೃತ್ಯಾದಿ ಕಲೆಗಳು, ಶಿಲ್ಪ, ದುರ್ಗರಚನೆ, ಇಂದ್ರಜಾಲ ಮುಂತಾದ ಎಲ್ಲ ವಿದ್ಯೆಗಳು ನಿನಗೆ ಅಂಗೈಯ ನೆಲ್ಲಿಕಾಯಿಯಂತೆ ಸಾಧ್ಯವಾಗಲಿ. ಏನನ್ನು ಬೇಕಾದರೂ ನೀನು ರಚಿಸಬಲ್ಲೆ. ಮನುಷ್ಯ ನಿರ್ಮಾಣವನ್ನೂ ಮಾಡಬಲ್ಲೆ. ವಿಶ್ವಕರ್ಮ ಎಂಬ ಹೆಸರು ನಿನಗೆ ಸಾರ್ಥಕವಾಗಲಿ, ಇಷ್ಟೊಂದು ವಿದ್ಯೆಯ ಪರ್ವತವೇ ನಿನ್ನಲ್ಲಿ ಇದ್ದರೂ ಗರ್ವವುಳ್ಳವನಾಗದೆ ವಿನಯಶೀಲನಾಗಿ ಬಾಳು. ನಿನ್ನ ಗುರುಭಕ್ತಿ ಫಲಿಸಿದೆ. ಯಾರು ಗುರುವನ್ನು ಗೌರವಿಸುವುದಿಲ್ಲವೋ ಅವರನ್ನು ನಾನು ಅವಮಾನ ಪಡಿಸುವೆನು. ನಿನ್ನ ಗುರುಭಕ್ತಿಯ ಕಾರಣದಿಂದಲೇ ನಾನು ನಿನಗೆ ಒಲಿದದ್ದು, ವರಗಳನ್ನು ಕೊಟ್ಟದ್ದು. ನೀನು ಈಗಲೇ ನಿನ್ನ ಗುರುಗಳ ಆಶ್ರಮದ ಕಡೆಗೆ ತೆರಳು. ಅವರ ಅಭಿಲಾಷೆಗಳನ್ನು ಮೊದಲು ನಡೆಸಿಕೊಡು. ಚಿರಂಜೀವಿಯಾಗಿ ಬಾಳು. ‘ದೇವತೆಗಳ ಬಡಗಿ’ ಎಂದು ಲೋಕಪ್ರಸಿದ್ಧನಾಗು !”

ಕಾಶಿ ವಿಶ್ವನಾಥ ದೇವರ ಅನುಗ್ರಹವನ್ನು ಪಡೆದ ಅನಂತರ ವಿಶ್ವಕರ್ಮನು ತನ್ನ ಗುರುಕುಲಕ್ಕೆ ಬಂದನು. ಗುರು, ಗುರುಪತ್ನಿ, ಗುರುವಿನ ಮಕ್ಕಳು ಬಯಸಿದುದನ್ನೆಲ್ಲ ಬಹಳ ಬೇಗನೆ ನಿರ್ಮಾಣ ಮಾಡಿಕೊಟ್ಟನು. ಅವರ ಅನುಮತಿ ಆಶೀರ್ವಾದಗಳನ್ನು ಪಡೆದು ತನ್ನ ತಂದೆತಾಯಿಗಳ ಬಳಿಗೆ ಬಂದನು. ತಮ್ಮ ಮಗನು ಎಲ್ಲಾ ಕಲೆಗಳಲ್ಲಿಯೂ ವಿದ್ಯೆಗಳಲ್ಲಿಯೂ ಪಾರಂಗತವಾಗಿ ಬಂದನೆಂದು ಅವರಿಗೆ ಹಿಗ್ಗು. ಲೋಕಕ್ಕೆ ಉಪಯುಕ್ತವಾದ ನಿರ್ಮಾಣಗಳನ್ನು ಮಾಡಲಿರುವನೆಂದು ಸಂತೋಷ. ತನ್ನ ಕರ್ಮ ಕುಶಲತೆಯಿಂದ ವಿಶ್ವಕರ್ಮನು ತನ್ನ ತಂದೆ ತಾಯಿಯನ್ನು ಸಂತೋಷಪಡಿಸಿದನು. ಆಮೇಲೆ ಪುನಃ ಕಾಶಿಗೆ ಬಂದನು. ನೂರಾರು ಮಂದಿ ಕೆಲಸಗಾರರನ್ನೂ ಸಹಾಯಕರನ್ನೂ ಕೂಡಿಕೊಂಡು ಕಾಶಿ ವಿಶ್ವನಾಥ ದೇವರಿಗೆ ಭವ್ಯವಾದ ಮಂದಿರವನ್ನು ನಿರ್ಮಿಸಿದನು. ಈ ಕುಶಲ ಶಿಲ್ಪಿ ಸಾರ್ವಜನಿಕ ಹಿತಕ್ಕಾಗಿ ನಿರ್ಮಿಸಿದ ದೇವಮಂದಿರಗಳಲ್ಲಿ ಇದೇ ಮೊದಲನೆಯದು.

ವಿಶ್ವಕರ್ಮನು ಮುಂದೆ ಪ್ರಹ್ಲಾದನ ಮಗಳಾದ ವಿರೋಚನೆ ಎಂಬವಳನ್ನು ಮದುವೆಯಾದನು. ಈಕೆಯಲ್ಲಿ ವಿಶ್ವರೂಪಾಚಾರ್ಯನೆಂಬ ಮಗನಾದನು. ವಿಶ್ವಕರ್ಮನ ಒಬ್ಬಳು ಮಗಳು ಸಂಜ್ಞಾದೇವಿ. ಇನ್ನೊಬ್ಬಳು ಬರ್ಹಿಷ್ಮತಿ.

ಸೂರ್ಯನ ತಾಪವನ್ನು ಕುಗ್ಗಿಸಿದುದು

ವಿಶ್ವಕರ್ಮನ ಮಗಳಾದ ಸಂಜ್ಞಾದೇವಿ ವಿಶ್ವದಲ್ಲೇ ಅತ್ಯಂತ ತೇಜೋವಂತನನ್ನು ಮದುವೆಯಾಗಲು ಬಯಸಿದ್ದಳು. ಅದರಂತೆ ಸೂರ್ಯನನ್ನು ವರಿಸಿದ್ದಳು. ಅವಳಲ್ಲಿ ವೈವಸ್ವತಮನು, ಯಮ, ಯಮುನಾ ಎಂಬ ಮೂವರು ಮಕ್ಕಳಾದರು. ಸಂಜ್ಞಾದೇವಿ ಪತಿಭಕ್ತಿ ಯುಳ್ಳವಳಾಗಿದ್ದಳು. ಅವಳಿಗೆ ಸೂರ್ಯನ ತಾಪ ಸಹಿಸಲು ಸಾಧ್ಯವಾಗುತ್ತಿರಲಿಲ್ಲ. ಸೂರ್ಯನನ್ನು ಕಂಡಾಗ ಕಣ್ಣುಮುಚ್ಚಿ ಹೋಗುತ್ತಿತ್ತು. ಗಂಡನನ್ನು ದೃಷ್ಟಿಸಿ ನೋಡಲು ಸಾಧ್ಯವಾಗದೆ ಆಕೆ ತನ್ನಂತೆಯೇ ಇರುವ ಛಾಯಾದೇವಿಯನ್ನು ಸೃಷ್ಟಿಸಿ, ತನ್ನ ಮಕ್ಕಳನ್ನು ನೋಡಿಕೊಳ್ಳಲು ಅವಳನ್ನೇ ನೇಮಿಸಿ ತವರುಮನೆಗೆ ತೆರಳಿದಳು. ತಂದೆಗೆ ತನ್ನ ಕಷ್ಟವನ್ನು ತಿಳಿಸಿದಳು. ಪೊದರುಗಳಲ್ಲಿ ಅವಿತು, ಕುಳಿತು ಸೂರ್ಯನ ತೇಜಸ್ಸು ಕಡಮೆಯಾಗುವಂತೆ ತಪಸ್ಸು ಮಾಡತೊಡಗಿದಳು.

ಸೂರ್ಯನು ಯಾವಾಗಲೂ ಲೋಕಕ್ಕೆ ಬೆಳಕು ಕೊಡುವ ಕೆಲಸದಲ್ಲೇ ಇದ್ದಕಾರಣ, ಅವನಿಗೆ ಈಗ ತನ್ನ ಹೆಂಡತಿ ಸಂಜ್ಞಾದೇವಿಯಿಲ್ಲವೆಂಬುದು ತಿಳಿಯಲಿಲ್ಲ. ಕೆಲವು ಸಮಯದಲ್ಲಿ ಮಕ್ಕಳ ಮೂಲಕ ಅದು ಗೊತ್ತಾಯಿತು. ಅವನು ವಿಶ್ವಕರ್ಮನ ಬಳಿಗೆ ಹೋದನು. ಸಂಜ್ಞಾದೇವಿ ತನ್ನನ್ನು ಬಿಟ್ಟುಹೋದುದು ಏಕೆ ಎಂಬ ಸಂಗತಿ ಸೂರ್ಯನಿಗೆ ತಿಳಿಯಿತು. ಅವನು ಹೀಗೆಂದನು-

“ಪೂಜ್ಯರೆ, ಸಂಜ್ಞಾದೇವಿಯದು ಏನೂ ತಪ್ಪಿಲ್ಲ. ನನ್ನ ಪ್ರಚಂಡ ಕಿರಣಗಳನ್ನು ಚಿಗುರಿನಂತೆ ಕೋಮಲೆಯಾದ ಆಕೆ ಸಹಿಸಲಾರಳು. ಆದರೆ ನಾನೇನು ಮಾಡಲಿ! ಪರಮಾತ್ಮನು ನನಗೆ ಅಂತಹ ತೇಜಸ್ಸನ್ನು ಕೊಟ್ಟಿದ್ದಾನೆ. ವಿಜ್ಞಾನಿಯಾದ ನೀವು ಯೋಚಿಸಿ, ಅದಕ್ಕೇನಾದರೂ ಪರಿಹಾರ ಮಾಡಬಾರದೆ?” ಎಂದು ಕೇಳಿದನು.

ತನ್ನ ಅಳಿಯನ ಬಿಸಿಯನ್ನು ತಗ್ಗಿಸಲು ವಿಶ್ವಕರ್ಮನು ಪ್ರಯತ್ನ ಮಾಡಿದನು. ಹನ್ನೆರಡು ತಿಂಗಳುಗಳೆಂಬ ಅಡ್ಡಕೀಲುಗಳುಳ್ಳ ಒಂದು ಚಕ್ರವನ್ನು ಮಾಡಿ ಅದು ತಾನಾಗಿ ಸೂರ್ಯನಿಗೆ ಅಡ್ಡನಿಂತು ತಿರುಗುತ್ತಿರುವಂತೆ ಮಾಡಿದನು. ಆ ಚಕ್ರವು ಸ್ವಯಂಚಾಲಿತವಾಗಿ ತಿರುಗತೊಡಗಿತು. ಸೂರ್ಯನ ತಾಪ ಕಡಮೆಯಾಯಿತು. ವರ್ಷದ ಕೆಲವು ತಿಂಗಳುಗಳಲ್ಲಿ ತಾಪವು ತುಂಬಾ ಕುಗ್ಗುವ ಹಾಗಾಯಿತು. ಸೂರ್ಯನಿಗೂ ಸಂತೋಷ ವಾಯಿತು. ಸಂಜ್ಞಾದೇವಿ ತಪಸ್ಸು ಮಾಡುತ್ತಿದ್ದಲ್ಲಿಗೆ ಸೂರ್ಯನು ಬಂದು, ಅವಳನ್ನು ಕರೆದುಕೊಂಡು ಹೋದನು. ಅವಳಲ್ಲಿ ಅಶ್ವಿನೀದೇವತೆಗಳೆಂಬ ದೇವ ವೈದ್ಯರು ಜನಿಸಿ ಪ್ರಖ್ಯಾತರಾದರು.

ವಿಶ್ವಕರ್ಮನು ಸಾವಿರಾರು ವರ್ಷ ಬಾಳಿದ ಮಹಾಶಿಲ್ಪಿ ಎನ್ನುತ್ತಾರೆ. ಅವನು ಮಾಡಿದ ವಿವಿಧ ನಿರ್ಮಾಣಗಳು ಯಾವುವೆಂಬುದನ್ನು ಪುರಾಣಗಳಲ್ಲಿ, ರಾಮಾಯಣ, ಮಹಾಭಾರತ, ಭಾಗವತ ಗ್ರಂಥಗಳಲ್ಲಿ ಹೇಳಿದೆ.

ನಗರ ನಿರ್ಮಾಣಗಳು : ಲಂಕಾನಗರ

ವಿಶ್ವಕರ್ಮನು ನಿರ್ಮಿಸಿದ ಪ್ರಾಚೀನ ನಗರಗಳಲ್ಲಿ ಲಂಕಾನಗರವು ರಾಮಾಯಣ ಕಾಲದಲ್ಲಿ ಪ್ರಸಿದ್ಧವಾದುದು. ಐಶ್ವರ್ಯಕ್ಕೆ ಒಡೆಯನೂ ಶಿವನ ಗೆಳೆಯನೂ ಎಂಟು ಮಂದಿ ದಿಕ್ಪಾಲಕರಲ್ಲಿ ಒಬ್ಬನೂ ಆದ ಕುಬೇರನಿಗಾಗಿ ವಿಶ್ವಕರ್ಮನು ಅದನ್ನು ನಿರ್ಮಿಸಿದನು. ಎಲ್ಲೆಲ್ಲೂ ಚಿನ್ನವೇ ಕಂಗೊಳಿಸುತ್ತಿದ್ದ ಆ ನಗರಕ್ಕೆ ಸ್ವರ್ಣಲಂಕೆ ಎಂದೇ ಹೆಸರು. ಕುಬೇರನ ತಮ್ಮನಾದ ರಾವಣನು ತನ್ನ ರಾಕ್ಷಸದರ್ಪದಿಂದ ಕುಬೇರನನ್ನು ಸೋಲಿಸಿ, ಓಡಿಸಿ, ಅವನಿಂದ ಪುಷ್ಪಕ ವಿಮಾನವನ್ನು ಕಿತ್ತುಕೊಂಡನು. ಲಂಕಾನಗರಕ್ಕೆ ಬಂಗಾರದ ಕೋಟೆ. ಶರತ್ಕಾಲದ ಮೋಡಗಳಂತೆ ಬೆಳ್ಳಗಿರುವ ಮನೆಗಳಿಂದ ಅದು ತುಂಬಿತ್ತು. ಅಲ್ಲಲ್ಲಿ ಉದ್ಯಾನಗಳಿದ್ದವು. ನಿರ್ಮಲವೂ ವಿಶಾಲವೂ ಆದ ಬೀದಿಗಳಿದ್ದವು. ಭೂಲೋಕದ ಸ್ವರ್ಗವೆಂಬಂತೆ ಅದು ಕಂಗೊಳಿಸುತ್ತಿತ್ತು. ರಾವಣನನ್ನು ರಾಮನು ವಧಿಸಿದ ನಂತರ, ಲಕ್ಷ್ಮಣನು ಲಂಕೆಯ ಹಿರಿಮೆಗೂ ಸಿರಿಗೂ ಮಾರುಹೋಗಿ, “ಅಣ್ಣಾ, ಈ ಲಂಕೆಯನ್ನೇ ನಾವೇಕೆ ರಾಜಧಾನಿ ಮಾಡಿಕೊಳ್ಳಬಾರದು?” ಎಂದು ಕೇಳಿದನಂತೆ. ಅದಕ್ಕೆ ರಾಮನು, “ಲಂಕೆ ಚಿನ್ನದಿಂದ ತುಂಬಿ ತುಳುಕುತ್ತಿದ್ದರೂ ನನಗೆ ಮೆಚ್ಚಿಕೆಯಿಲ್ಲ. ಜನ್ಮಭೂಮಿ ಸ್ವರ್ಗಕ್ಕಿಂತ ಮೇಲು” ಎಂದನಂತೆ.

ಆದಿಶೇಷನ ಭೋಗವತೀ ನಗರವನ್ನೂ ಸುಖ ಸಮೃದ್ಧಿಗೆ ತಾಣವಾಗುವಂತೆ ವಿಶ್ವಕರ್ಮನೇ ನಿರ್ಮಿ ಸಿದ್ದನು.

 ದ್ವಾರಕಾ ನಗರ

ದ್ವಾಪರ ಯುಗದಲ್ಲಿ ವಿಶ್ವಕರ್ಮನು ಕಟ್ಟಿದ ನಗರಗಳಲ್ಲಿ ದ್ವಾರಕೆ ಮುಖ್ಯವಾಗಿದೆ. ಅದನ್ನು ಅವನು ಶ್ರೀಕೃಷ್ಣನಿಗಾಗಿ ರಚಿಸಿದನು. ಕೃಷ್ಣನು ಕಂಸನನ್ನು ಕೊಂದುದರಿಂದ ಕಂಸನ ಮಾವ ಜರಾಸಂಧನೆಂಬ ರಾಕ್ಷಸನು ಯಾದವರ ಮೇಲೆ ಮತ್ತೆಮತ್ತೆ ದಂಡೆತ್ತಿ ಬಂದನು. ಆದರೆ ಸೋತುಹೋದನು. ಹದಿನೆಂಟನೆಯ ಬಾರಿ ಬರುತ್ತಿದ್ದ ವೇಳೆಗೆ, ಕಾಲಯವನೆಂಬ ಇನ್ನೊಬ್ಬ  ರಾಕ್ಷಸನು ಮೂರು ಕೋಟಿ ಸೈನ್ಯದೊಡನೆ ಯಾದವರ ಮೇಲೆ ಏರಿಬಂದನು. ಈ ಸಂದರ್ಭದಲ್ಲಿ ಯಾದವರನ್ನು ಶತ್ರುಗಳ ಅಪಾಯದಿಂದ ರಕ್ಷಣೆ ಮಾಡುವುದಕ್ಕಾಗಿ ಶ್ರೀಕೃಷ್ಣನು ವಿಶ್ವಕರ್ಮನ ಸಹಾಯ ಪಡೆದನು. ವಿಶ್ವಕರ್ಮನು ಪಡುಗಡಲ ನಡುವೆ ನೂರು ಯೋಜನ ವಿಸ್ತಾರವುಳ್ಳ ಒಂದು ನಗರವನ್ನು ನಿರ್ಮಿಸಿದನು. ಅದೇ ದ್ವಾರಕಾ ನಗರ.

ಆ ನಗರಕ್ಕೆ ಆಳವಾದ ಏಳು ಕಂದಕಗಳು. ಒಂಬತ್ತು ಮಹಾ ಕೋಟೆಗಳು. ಹೂದೋಟಗಳಿಂದ, ತಾವರೆ ಕೊಳಗಳಿಂದ, ಅಡಕೆ, ತೆಂಗು, ಮಾವಿನಮರಗಳ ಚೆಲುವಿನಿಂದ ನಗರ ಒಪ್ಪುತ್ತಿತ್ತು. ರತ್ನಸಾರಗಳಿಂದಲೂ ವಜ್ರ ಮಾಣಿಕ್ಯಗಳಿಂದಲೂ ಮಾಡಿದ ಮೆಟ್ಟಿಲುಗಳು, ಗೋಡೆಗಳು ಥಳಥಳಿಸುತ್ತಿದ್ದವು. ಕೆತ್ತನೆ ಕೆಲಸದಿಂದೊಪ್ಪುವ ಮರದ ಬಾಗಿಲುಗಳು, ಗವಾಕ್ಷಗಳು, ಕಲ್ಲು ಕೆತ್ತನೆಗಳು, ಚಿತ್ರವಿಶೇಷಗಳು ಮನೋಹರವಾಗಿದ್ದವು. ಅವನಿಗೆ ಸಹಾಯಕ್ಕಾಗಿ ಕುಬೇರನು ಏಳು ಲಕ್ಷ ಯಕ್ಷರ ದುಡಿಮೆಗಾರರನ್ನು ಕಳುಹಿಸಿದ್ದನು. ಶಿವನು ಒಂದು ಲಕ್ಷ ಬೇತಾಳಗಳನ್ನು ಕೆಲಸಕ್ಕೆ ಕಳುಹಿಸಿದನೆಂದು ಪುರಾಣದಲ್ಲಿ ಹೇಳಿದೆ. ವಿಶ್ವಕರ್ಮನಿಗೆ ಸಹಾಯಕನಾಗಿ ನಿಂತ ಇನ್ನೊಬ್ಬನು ಗರುಡನು.

ದ್ವಾರಕಾ ನಗರದ ಕಟ್ಟಡಗಳು ಸ್ಫಟಿಕ ಶಿಲೆ ಯಿಂದಲೂ, ಚಿನ್ನ ಬೆಳ್ಳಿಗಳಿಂದಲೂ ರಚಿತವಾಗಿದ್ದವು. ಐದರಿಂದ ಒಂಭತ್ತರವರೆಗೆ ಅಂತಸ್ತುಗಳಿಂದ ಕೂಡಿದ್ದವು. ಆ ಮನೆಗಳಲ್ಲಿರತಕ್ಕ ಪೀಠ-ಕವಾಟ-ಪೆಟ್ಟಿಗೆ ಮುಂತಾದವು ಚಿನ್ನ, ರನ್ನಗಳಿಂದ ಆಗಿದ್ದವು. ಆ ನಗರದ ನಡುವೆ ಹದಿನಾರು ಸಾವಿರ ಉಪ್ಪರಿಗೆ ಮನೆಗಳಿದ್ದವು. ಅವಕ್ಕೆ ಹವಳದ ಕಂಬಗಳು, ವೈಢೂರ್ಯದ ಹಲಗೆಗಳ ಮುಚ್ಚಿಗೆಗಳು, ಇಂದ್ರನೀಲದ ಕಿಟಕಿಗಳು, ಆ ಕಿಟಕಿಗಳಿಗೆ ಮರಕತದ ಶಲಾಕೆಗಳು, ಮುತ್ತಿನ ಕುಚ್ಚುಗಳು, ಥಳಥಳಿಸುವ ರತ್ನಮಂಚಗಳು. ಕೊಠಡಿಗಳು ರತ್ನ ದೀಪಗಳು. ಹೀಗೆ ಅಪೂರ್ವ ರೀತಿಯಲ್ಲಿ ದ್ವಾರಕೆಯನ್ನು ವಿಶ್ವಕರ್ಮನು ನಿರ್ಮಿಸಿದ್ದನು.

ಇಂದ್ರಪ್ರಸ್ಥ ನಗರ

ಯಮುನಾನದಿಗೆ ಸಮೀಪವಿರುವ ಇಂದಿನ ಹಳೆಯ ದೆಹಲಿ ನಗರ ಹಿಂದೆ ಇಂದ್ರಪ್ರಸ್ಥವಾಗಿತ್ತು. ಅದನ್ನು ವಿಶ್ವಕರ್ಮನು ಪಾಂಡವರಿಗಾಗಿ ನಿರ್ಮಾಣ ಮಾಡಿ ಕೊಟ್ಟನು. ಅದರ ನಿರ್ಮಾಣದ ಕಥೆ ಹೀಗಿದೆ-

ಪಾಂಡವರು ಅರಗಿನ ಮನೆಯಿಂದ ಪಾರಾಗಿ ಹೋದ ಮೇಲೆ ದ್ರೌಪದೀಸ್ವಯಂವರದ ಸಂದರ್ಭದಲ್ಲಿ ಪ್ರಕಟವಾಗಿ ಕಾಣಿಸಿದರು. ಪಾಂಡವರು ಬದುಕಿ ಉಳಿದದ್ದನ್ನು ಕಂಡು, ಸತ್ಪುರುಷರಿಗೆಲ್ಲ ಆನಂದವಾಯಿತು. ಧೃತರಾಷ್ಟ್ರನು ವಿದುರನನ್ನು ಕಳುಹಿಸಿ, ಅವರನ್ನು ಹಸ್ತಿನಾವತಿಗೆ ಕರೆಸಿದನು. ಕೆಲವು ದಿನಗಳು ಕಳೆದನಂತರ ಧೃತರಾಷ್ಟ್ರನು ಧರ್ಮರಾಯನಿಗೆ ಹೀಗೆಂದನು –

“ಧರ್ಮಜಾ, ನೀನು ನಿನ್ನ ತಮ್ಮಂದಿರೊಡನೆ ಖಾಂಡವಪ್ರಸ್ಥಕ್ಕೆ ಹೋಗು. ಅದನ್ನು ರಾಜಧಾನಿಯಾಗಿ ಮಾಡಿಕೊಂಡು ಅರ್ಧರಾಜ್ಯವನ್ನು ಆಳು.”

ಕೌರವರಿರುವ ಹಸ್ತಿನಾವತಿ ಭವ್ಯ ನಗರವಾಗಿತ್ತು. ಖಾಂಡವಪ್ರಸ್ಥವು ಪಾಳುಬಿದ್ದ ಕಾಡಾಗಿತ್ತು. ದೊಡ್ಡಪ್ಪನ ಅಪ್ಪಣೆಯಂತೆ, ಪಾಂಡವರು ಶ್ರೀಕೃಷ್ಣನನ್ನು ಮುಂದೆ ಮಾಡಿಕೊಂಡು ಅಲ್ಲಿಗೆ ಹೋಗಿ ಅಲ್ಲಿ ನಗರ ನಿರ್ಮಾಣ ಮಾಡಲು ಯೋಚಿಸಿದರು. ನಗರ ಕಟ್ಟುವವರು ಯಾರು?  ಅಂತಹ ಶಿಲ್ಪಿ ಎಲ್ಲಿದ್ದಾನೆ ? ಶ್ರೀಕೃಷ್ಣನಿಗೆ ಈ ಮೊದಲೇ ವಿಶ್ವಕರ್ಮನ ನಿರ್ಮಾಣ ಸಾಮರ್ಥ್ಯವೂ ಕುಶಲತೆಯೂ ತಿಳಿದಿತ್ತು. ಜೀವನಶಿಲ್ಪಿಯಾದ ವಿಶ್ವಕರ್ಮನನ್ನು ಕಳುಹಿಸಿ ಕೊಡುವಂತೆ ದೇವೇಂದ್ರನನ್ನು ಕೇಳಿಕೊಂಡನು. ಇಂದ್ರನ ಆಜ್ಞೆಯಂತೆ ವಿಶ್ವಕರ್ಮನು ನಗರ ನಿರ್ಮಾಣ ಮಾಡಲು ಸಿದ್ಧವಾಗಿ ಬಂದನು.

ವೇದವ್ಯಾಸರು ತೋರಿಸಿದ ವಿಸ್ತಾರವಾದ ಸ್ಥಳದಲ್ಲಿ ಗುದ್ದಲಿ ಪೂಜೆ ನಡೆಯಿತು. ಶಾಸ್ತ್ರಪ್ರಕಾರವಾಗಿ ನಗರ ವನ್ನು ಕಟ್ಟಲು ಪ್ರಾರಂಭವಾಯಿತು. ನಗರದ ಸುತ್ತಲೂ ಆಳವಾದ ಕಂದಕಗಳಾದವು. ಬಾನೆತ್ತರದ ಕೋಟೆ ಮೇಲೆದ್ದಿತು. ಬೆಳುದಿಂಗಳಂತೆಯೂ ಬಿಳಿಯ ಮೋಡ ದಂತೆಯೂ ಮರೆಯುವ ಆ ಕೋಟೆಗೆ ಅನೇಕ ಹೆಬ್ಬಾಗಿಲುಗಳಾದವು. ಆ ಹೆಬ್ಬಾಗಿಲುಗಳು ಎರಡು ದೊಡ್ಡ ರೆಕ್ಕೆಗಳುಳ್ಳ ಗರುಡನಂತೆ ಕಾಣುತ್ತಿದ್ದವು. ಬಾಗಿಲ ಬಳಿ ಯುದ್ಧೋಪಕರಣಗಳು ಇದ್ದವು. ನಗರದಲ್ಲಿ ದೊಡ್ಡ ದೊಡ್ಡ ಬೀದಿಗಳು, ಚೌಕಿಗೆಗಳು, ಉಪ್ಪರಿಗೆ ಮನೆಗಳು, ಸಾವಿರಾರು ಅಂಗಡಿಗಳು, ಅಲ್ಲಲ್ಲಿ ದೇವಾಲಯಗಳು, ಉದ್ಯಾನಗಳು, ಕ್ರೀಡಾಂಗಣಗಳು, ಕೆರೆ, ಬಾವಿಗಳು ನಿರ್ಮಾಣವಾದವು. ಎಲ್ಲೆಲ್ಲಿಯೂ ನಯನಾಜೂಕಿನ ಕಲ್ಲು ಕೆತ್ತನೆಯ ಮರಗೆಲಸ ರಚನೆಗಳು ಬಣ್ಣದ ಚಕ್ರಗಳು ಬೆರಗುಗೊಳಿ ಸುವಂತಿದ್ದವು.

ಇಂದ್ರನ ಅಮರಾವತಿ ನಗರದಂತಿದ್ದ ಆ ನಗರಕ್ಕೆ ಇಂದ್ರಪ್ರಸ್ಥ ಎಂದು ಹೆಸರಿಟ್ಟರು. ಹಸ್ತಿನಾವತಿಗಿಂತ ಹೆಚ್ಚಿನ ಚೆಲುವೂ ಸಿರಿಯೂ ನೆಮ್ಮದಿಯೂ ಮಂಗಳವೂ ಉಳ್ಳ ನಗರವಾಗಿ ಇಂದ್ರಪ್ರಸ್ಥ ಮರೆಯಿತು. ವೇದ ವೇದಾಂಗ ಗಳನ್ನು ತಿಳಿದವರು, ಹಲವು ಭಾಷೆಗಳನ್ನು ಬಲ್ಲವರು, ವಿದ್ವಾಂಸರು, ಕವಿಗಳು, ವರ್ತಕರು, ಕಲಾವಿದರು, ಇನ್ನಿತರ ಸತ್ಪ್ರಜೆಗಳು ಅಲ್ಲಿ ಬಂದು ನೆಲಸಿದರು. ಈ ನಗರ ನಿರ್ಮಾಣದಿಂದ ವಿಶ್ವಕರ್ಮನಿಗೆ ತುಂಬಾ ಕೀರ್ತಿ ಬಂತು.

ಶರಣರ ಕ್ಷೇತ್ರ

ಯಾವಾಗಲೂ ಶಿವನನ್ನು ಮಂತ್ರಪೂರ್ವಕ ಪೂಜಿಸಿಕೊಂಡು ತಮ್ಮ ವೃತ್ತಿಯನ್ನು ನಡೆಸುವ ಭಕ್ತರಿಗಾಗಿ  ಒಂದು ನಗರವನ್ನು ನಿರ್ಮಿಸಲು ವಿಶ್ವಕರ್ಮನಿಗೆ ಶಿವನು ಹೇಳಿದ್ದನು. ವಿಶ್ವಕರ್ಮನು ತ್ವರೆಯಾಗಿ ಸಾವಿರಾರು ಶಿಲ್ಪಿಗಳಿಂದ ಕೆಲಸ ಮಾಡಿಸಿ ಒಂದು ಧಾರ್ಮಿಕ ಪಟ್ಟಣವನ್ನು ಋಷಿತೋಯ ಎಂಬ ನದಿಯ ತೀರದಲ್ಲಿ ನಿರ್ಮಿಸಿದನು. ಅಲ್ಲಿ ಏಳು ಅಂತಸ್ತಿನ ಮನೆಗಳನ್ನು ಕಟ್ಟಿಸಿದನು. ಶಿವನಿಗಾಗಿ ಅಲ್ಲಿ ದೇವಾಲಯವನ್ನೂ ಮಾಡಿದನು. ‘ಸ್ಥಳಕೇಶ್ವರ’ ಎಂಬ ಹೆಸರಿನಿಂದ ಅಲ್ಲಿ ಶಿವನು ನೆಲಸಿದನು.

ಲಂಕೆಯನ್ನು ಕಳೆದುಕೊಂಡ ಕುಬೇರನಿಗೆ ಅಳಕಾವತಿ ಎಂಬ ನಗರವನ್ನು ವಿಶ್ವಕರ್ಮನೇ ನಿರ್ಮಿಸಿ ಕೊಟ್ಟಿದ್ದನು.

ಯಮನ ಸಭಾಮಂದಿರ

ವಿಶ್ವದ ಜೀವವರ್ಗ ಮಾಡಿದ ಪಾಪ-ಪುಣ್ಯಗಳಿಗೆ ನ್ಯಾಯವನ್ನು ಒದಗಿಸುವವನು ಯಮ. ಅವನು ದಿಕ್ಪಾಲಕರಲ್ಲಿ ಒಬ್ಬನು. ಅವನಿಗೆ ಸಭಾಮಂದಿರವನ್ನು ವಿಶ್ವಕರ್ಮನು ನಿರ್ಮಿಸಿಕೊಟ್ಟಿದ್ದನು. ಅದು ನೂರು ಯೋಜನ ವಿಸ್ತೀರ್ಣವುಳ್ಳದ್ದು. ಸುಡದಿರುವ ಸೂರ್ಯ ನಂತೆ ಹೊಳೆಯುವಂಥದು. ಆ ಸಭೆ ದೈವಿಕ ಸಂಪತ್ತು ಗಳ ನಿಧಿ. ಅಲ್ಲಿ ಹಸಿವು, ಬಯಾರಿಕೆ, ಚಿಂತೆಗಳಿಲ್ಲ.

ವರುಣ, ಕುಬೇರರಿಗೆ ಯೋಗ್ಯವಾದ ಸಭಾಭವನ ಗಳೊಂದಿಗೆ ಅರಮನೆಗಳನ್ನು ವಿಶ್ವಕರ್ಮನೇ ರಚಿಸಿದ್ದನು. ಲಂಕಾನಗರದಲ್ಲಿದ್ದ ರಾವಣ್ಣನ ಅರಮನೆಯೂ ವಿಶ್ವಕರ್ಮ ನಿಂದಲೇ ರಚಿತವಾಗಿತ್ತು. ಆ ಅರಮನೆ ಅರ್ಧಯೋಜನ ವಿಸ್ತಾರವಾಗಿತ್ತು. ಚಿನ್ನ ಬೆಳ್ಳಿಯ ತೋಳುಗಳ ಪ್ರತಿಮೆ ಗಳುಳ್ಳ ಅಂದವಾದ ಕಂಬಗಳಿಂದ ಕಂಗೊಳಿಸುತ್ತಿತ್ತು. ಮೇರು, ಮಂದರ ಪರ್ವತಗಳ ಹಾಗೆ ಮುಗಿಲನ್ನು ಮುಟ್ಟುತ್ತಿತ್ತು. ವಿವಿಧ ರತ್ನಗಳಿಂದೊಪ್ಪುವ ನೆಲಗಟ್ಟಿನಿಂದ ಒಪ್ಪುತ್ತಿತ್ತು.

ಅಗಸ್ತ್ಯ ಮಂದಿರ

ವಿಶ್ವಕರ್ಮನು ಅಗಸ್ತ್ಯ ಋಷಿಯ ಮಹಿಮೆಯನ್ನು ಚೆನ್ನಾಗಿ ತಿಳಿದಿದ್ದನು. ದುಷ್ಟನಾದ ನಹುಷನನ್ನು ಸ್ವರ್ಗದಿಂದ ಇಳಿಸಿ, ಕಡಲನ್ನು ಬತ್ತಿಸಿ, ವಾತಾಪಿ ರಕ್ಕಸನನ್ನು ಹೊಟ್ಟೆಯಲ್ಲಿ ಜೀರ್ಣಮಾಡಿ, ಸೊಕ್ಕೇರಿದ ವಿಂಧ್ಯಪರ್ವತ ರಾಜನನ್ನು ಅಡ್ಡಬೀಳಿಸಿ, ದಕ್ಷಿಣ ದೇಶಕ್ಕೆ ಬಂದ ಋಷಿ ಆತ. ಅಂತಹ ತಪಸ್ವಿಯೂ ವಿದ್ವಾಂಸನೂ ಆದ ಯೋಗಿಗೆ ವಿಶ್ವಕರ್ಮನು ಕುಂಜರ ಪರ್ವತದಲ್ಲಿ ಉಚಿತವಾಗಿ ಒಂದು ಭವನವನ್ನು ಕಟ್ಟಿಸಿದನೆಂದು ರಾಮಾಯಣದಲ್ಲಿ ಹೇಳಿದೆ. ಅದು ಒಂದು ಯೋಜನ ಅಗಲ, ಹತ್ತು ಯೋಜನ ಉದ್ದ ಉಳ್ಳದ್ದು. ಚಿನ್ನ ರನ್ನಗಳಿಂದ ಮರೆಯುತ್ತಿತ್ತು.

ಶ್ರೀಕೃಷ್ಣನಿಗಾಗಿ

ವಿಶ್ವಕರ್ಮನು ದ್ವಾರಕೆಯನ್ನು ನಿರ್ಮಿಸಿದನಂತರ ಶ್ರೀಕೃಷ್ಣನಿಗಾಗಿ ಭವ್ಯವಾದ ಅರಮನೆಯನ್ನು ನಿರ್ಮಿಸಿ ದನು. ಭವ್ಯವಾದ ಉಪ್ಪರಿಗೆ ಮನೆಗಳನ್ನು ಮಾಡಿದನು. ಅವು ರತ್ನದೀಪಗಳಿಂದ ಮೆರೆಯುತ್ತಿದ್ದವು.

ಮನುಷ್ಯರ ವಾಸಗೃಹಗಳನ್ನು ಮಾತ್ರವಲ್ಲ, ಅವುಗಳಲ್ಲಿ ವಾಸಮಾಡುವ ಜನರಿಗೆ ಪೂಜೆ, ಉತ್ಸವ, ಯಜ್ಞ, ಸಭೆ ಮುಂತಾದುವನ್ನು ಕಾಲಕಾಲಕ್ಕೆ ಆಚರಿಸುವುದಕ್ಕಾಗಿ ಹಲವಾರು ಪ್ರಾಚೀನ ದೇವಾಲಯಗಳನ್ನೂ ವಿಶ್ವಕರ್ಮನು ನಿರ್ಮಾಣ ಮಾಡಿದ್ದನು. ಕಾಶಿ ವಿಶ್ವನಾಥ ಮಂದಿರ ಅವುಗಳಲ್ಲಿ ಮೊದಲನೆಯದು. ಪ್ರಭಾಸ ಪುಣ್ಯಕ್ಷೇತ್ರದಲ್ಲಿ ಯಜ್ಞ ಮಾಡಲು ಅನುಕೂಲಪಡಿಸಿದ್ದನು. ಅಲ್ಲಿ ಒಂದು ಯೋಜನ ವಿಸ್ತಾರದ ಭೂಮಿಯಲ್ಲಿ ಯೂಪ (ಯಜ್ಞದ ಕಂಬ)ಗಳನ್ನೂ ಮಂಟಪಗಳನ್ನು ಸಾವಿರಾರು ಯಜ್ಞ ಕುಂಡಗಳನ್ನೂ ನಿರ್ಮಿಸಿದ್ದನು. ಆ ಮಂಟಪಗಳು ಪತಾಕೆ, ಸಿಂಹಾಸನ, ಮುತ್ತಿನ ಮಾಲೆಗಳು, ದಿವ್ಯಚಂದನ, ಹೂ ಮಾಲೆಗಳು, ಕಲ್ಪವೃಕ್ಷದ ತಳಿರುತೋರಣಗಳಿಂದ ಮೆರೆಯು ವಂತೆ ಮಾಡಿದ್ದನು.

ಜಗನ್ನಾಥ ವಿಗ್ರಹ

ಒರಿಸ್ಸಾ ರಾಜ್ಯದಲ್ಲಿರುವ ಪುರಿ ಶ್ರೀ ಶಂಕರಾ ಚಾರ್ಯರ ಮಠದಿಂದ ಕೂಡಿದೆ. ಇದು ಮೋಕ್ಷದಾಯಕ ವಾದ ಪಟ್ಟಣಗಳಲ್ಲಿ ಒಂದು. ಹಿಂದೆ ಇಂದ್ರದ್ಯುಮ್ನ ನೆಂಬ ರಾಜನು ಜಗನ್ನಾಥ ದೇವರನ್ನು ಅಲ್ಲಿ ಪ್ರತಿಷ್ಠೇ ಮಾಡಬೇಕೆಂದು ಯಾಗ ಮಾಡಿದನು. ಜಗನ್ನಾಥ ದೇವರು ಕನಸಿನಲ್ಲಿ ಬಂದು ಹೀಗೆಂದನು “ನೀನು ನಾಳೆ ಬೆಳಗ್ಗೆ ಕಡಲ ಬದಿಯಲ್ಲಿ ತೆರೆಹೊಡೆದು ದಡಕ್ಕೆ ಬಂದು ಬಿದ್ದ ಒಂದು ಮರವನ್ನು ಕಾಣುವೆ. ಅದರಿಂದ ನನ್ನ ಒಂದು ಮೂರ್ತಿಯನ್ನು ಮಾಡಿಸು.” ಇಂದ್ರದ್ಯು ಮ್ನನ ಪ್ರಾರ್ಥನೆಯಂತೆ ವಿಶ್ವಕರ್ಮನು ಅದೇ ಮರದ ತುಂಡಿನಿಂದ ಮಹಾವಿಷ್ಣುವಿನ ವಿಗ್ರಹವನ್ನು ಮಾಡಿ ಕೊಟ್ಟನು. ಆ ವಿಗ್ರಹಗಳು ಅಧಾಕೃತಿಯವು. ಜಗನ್ನಾಥ ವಿಗ್ರಹದ ತಲೆಯ ಮೇಲೆ ಉಜ್ವಲವಾದ ವಜ್ರವನ್ನು ತೊಡಿಸಲಾಗಿದೆ.

ಶಿವ, ವಿಷ್ಣು, ಇಂದ್ರ ಮುಂತಾದ ದೇವತಗಳಿಗೂ ಪ್ರಾಚೀನ ಕಾಲದ ಹಲವು ಮಹಾಶೂರರಿಗೂ ವಿಶ್ವ ಕರ್ಮನು ರಥ ಆಯುಧಗಳನ್ನು ಮಾಡಿಕೊಟ್ಟು ದುಷ್ಟರನ್ನು ನಾಶಪಡಿಸಲು ಸಹಾಯಕನಾದ ಉದಾಹರಣೆಗಳು ಹಲವಿವೆ.

ಶಿವನಿಗೆ ರಥ_ಧನಸ್ಸು

ತ್ರಿಪುರರೆಂಬ ಮೂವರು ಕೆಟ್ಟ ರಾಕ್ಷಸರಿದ್ದರು. ಅವರನ್ನು ಕೊಂದು, ಲೋಕಕ್ಕೆ ಕ್ಷೇಮವನ್ನು ಉಂಟು ಮಾಡಬೇಕೆಂದು ದೇವತೆಗಳೂ ಋಷಿಗಳೂ ಶಿವನನ್ನು ಪ್ರಾರ್ಥಿಸಿದರು. ತನಗೆ ಅದಕ್ಕಾಗಿ ರಥ, ಸಾರಥಿ, ಬಿಲ್ಲು ಬಾಣಗಳನ್ನು ಒದಗಿಸಲು ಶಿವನು ಹೇಳಿದನು. ದೇವತೆಗಳ ಪ್ರಾರ್ಥನೆಯಂತೆ ವಿಶ್ವಕರ್ಮನು ಬಹಳ ಶ್ರಮವಹಿಸಿ ರಥವನ್ನು ನಿರ್ಮಿಸಿದನು. ಅದರ ಗಾಲಿಗಳು ಸೂರ್ಯ ಚಂದ್ರರಂತಿದ್ದವು. ಬಲದ ಗಾಲಿಯಲ್ಲಿ ದ್ವಾದಶಾದಿತ್ಯರ ಹಾಗೆ ಹನ್ನೆರಡು ಅಡ್ಡಪಟ್ಟಿಗಳಿದ್ದವು. ಎಡಗಾಲಿ ಹದಿನಾರು ಅಡ್ಡಪಟ್ಟಿಗಳಿಂದ ಕೂಡಿ ಹದಿನಾರು ಕಳೆ ಯುಳ್ಳ ಚಂದ್ರನಂತೆ ಇತ್ತು. ರಥದ ನೊಗಗಳು ಉದಯ ಪರ್ವತ ಅಸ್ತಪರ್ವತಗಳಂತೆ ಇದ್ದವು. ಸ್ವರ್ಗ_ಮೋಕ್ಷಗಳ ಸಂಕೇತವೇ ಧ್ವಜಗಳು. ರಥಕ್ಕೆ ಬಿಗಿದ ಹಗ್ಗ ಆದಿಶೇಷ ನಂತಿತ್ತು. ಬ್ರಹ್ಮನ ಸಾರಥ್ಯದಲ್ಲಿ ಶಿವನು ಅದರಲ್ಲಿ ಕುಳಿತು, ವಿಶ್ವಕರ್ಮನು ನಿರ್ಮಿಸಿಕೊಟ್ಟ ಬಿಲ್ಲಿನ ಸಹಾಯದಿಂದ ತ್ರಿಪುರರನ್ನು ಕೊಂದನು.

‘ನಿನ್ನಿಂದ ಆ ದುಷ್ಟರ ನಾಶವಾಗಲಿ.’

ಇಂದ್ರನಿಗೆ ವಜ್ರಾಯುದ್ಧ

ವೃತ್ರನೆಂಬ ದುಷ್ಟ ರಾಕ್ಷಷನಿದ್ದನು. ಅವನನ್ನು ಕೊಲ್ಲಲ್ಲು ಸರಿಯಾದ ಆಯುಧವಿಲ್ಲದೆ ತೊಂದರೆಯಾ ಯಿತು. ಅದಕ್ಕೆ ದಧೀಚಿ ಎಂಬ ಋಷಿಯ ಬೆನ್ನೆಲುಬು ಬೇಕಾಯಿತು. ಲೋಕೋಪಕಾರಕ್ಕಾಗಿ ಬೆನ್ನೆಲುಬನ್ನು ಕೊಡುವಂತೆ ಇಂದ್ರನು ಕೇಳಿಕೊಂಡನು. ದಧೀಚಿ ತನಗೆ ಇಂಥದೊಂದು ಪರೋಪಕಾರದ ಅವಕಾಶ ದೊರೆತು ದಕ್ಕಾಗಿ ಸಂತೋಷಪಟ್ಟು ಪ್ರಾಣಬಿಟ್ಟನು. ಅವನ ಬೆನ್ನ ಮೂಳೆಯಿಂದ ವಿಶ್ವಕರ್ಮನು ನೂರು ಗಂಟುಗಳುಳ್ಳ, ಉಕ್ಕಿಗಿಂತಲೂ ಗಟ್ಟಿಯಾದ ವಜ್ರಾಯುಧವನ್ನು ಮಾಡಿ ದನು. ಅದು ಇಂದ್ರನ ಆಯುಧವಾಯಿತು. ಅದರ ಸಹಾಯದಿಂದ ಇಂದ್ರನು ವೃತ್ರಾಸುರನನ್ನೂ ಮತ್ತಿತರ ರಾಕ್ಷಸರನ್ನೂ ಬಡಿದು ಕೊಂದನು. ಪರ್ವತರಾಜರುಗಳ ಸೊಕ್ಕನ್ನೂ ಮುರಿದನು.

ಕುಬೇರನಿಗೆ ಪುಷ್ಪಕ ವಿಮಾನ

ಪುರಾಣದ ಕಥೆಗಳ ಪ್ರಕಾರ, ವಿಶ್ವದಲ್ಲಿಯೇ ಮೊತ್ತ ಮೊದಲು ವಿಮಾನವನ್ನು ನಿರ್ಮಾಣ ಮಾಡಿದವನು ವಿಶ್ವಕರ್ಮ. ಅದೇ ಪುಷ್ಪಕ ವಿಮಾನ. ಸೃಷ್ಟಿಕರ್ತನಾದ ಬ್ರಹ್ಮನಿಗೆ ಅನುಕೂಲವಾಗಲೆಂದು ಅದನ್ನು ಅವನು ರಚಿಸಿ ಲೋಕವನ್ನೆ ಬೆರಗುಪಡಿಸಿದನು. ಕುಬೇರನು ತನಗೆ ಅದು ಬೇಕೆಂದು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಅದನ್ನು ಪಡೆದುಕೊಂಡನು. ಒಳ್ಳೆಯ ವಸ್ತು ಯಾರಿಗೂ ಬೇಕಲ್ಲವೆ? ಕುಬೇರನ ತಮ್ಮನಾದ ದುಷ್ಟ ರಾವಣನು ಕುಬೇರನನ್ನು ಸೋಲಿಸಿ, ಅದನ್ನು ವಶಪಡಿಸಿಕೊಂಡನು. ರಾವಣನನ್ನು ರಾಮನು ಕೊಂದನಂತರ ಅದು ಶ್ರೀರಾಮನಿಗೆ ಬಂತು. ಅದರಲ್ಲೇ ಶ್ರೀರಾಮನು ಇತರರೊಂದಿಗೆ ಅಯೋಧ್ಯೆಗೆ ಬಂದನು. ಆಮೇಲೆ ಅದನ್ನು ಶ್ರೀರಾಮನು ಕುಬೇರನಿಗೆ ಕಳುಹಿಸಿಕೊಟ್ಟನು. ವಿಶ್ವಕರ್ಮನು ದೇವತೆಗಳಿಗೂ ಯಕ್ಷ ರಿಗೂ ಗಂಧರ್ವರಿಗೂ ನೂರಾರು ಬೇರೆ ವಿಮಾನಗಳನ್ನು ರಚಿಸಿದ್ದನು.

ಪುಷ್ಪಕವು ವಿಮಾನಗಳ ರಾಜ. ಜನರು ಕುಳಿತಂತೆಲ್ಲ ಅದು ವಿಸ್ತಾರಗೊಳ್ಳುತ್ತಿತ್ತು. ಎಷ್ಟು ಸಾವಿರ ಮಂದಿಯೂ ಅದರಲ್ಲಿ ಕುಳಿತುಕೊಳ್ಳಬಹುದು. ಅದು ಆಕಾಶದಲ್ಲೇ ನಿಲ್ಲಬಲ್ಲುದಾಗಿತ್ತು. ಅದಕ್ಕೆ ಅಪಾಯವೇ ಇರಲಿಲ್ಲ. ಅದರ ಸಂಚಾಲಕರು ಮನಸ್ಸು ಮಾಡಿದ ಸ್ಥಳಕ್ಕೆ ಅದು ತಾನಾಗಿ ಚಲಿಸಿ ಹೋಗಿ ನಿಲ್ಲುತ್ತಿತ್ತು. ಅದರಲ್ಲಿ ಬಗೆ ಬಗೆಯ ಅಂತಸ್ತುಗಳಿದ್ದು ಒಂದು ಸಂಚಾರಿ ನಗರವೋ ಎಂಬಂತೆ ಅದು ಇತ್ತು.

ವಾಲಿಗೆ ಪಲ್ಲಕ್ಕಿ

ರಾಮಾಯಣ ಕಾಲದ ಕಪಿರಾಜನಾದ ವಾಲಿಗೆ ಅತ್ಯುತ್ತಮವಾದ ಪಲ್ಲಕ್ಕಿಯೊಂದನ್ನು ವಿಶ್ವಕರ್ಮನು ಮಾಡಿಕೊಟ್ಟಿದ್ದನು. ದಿವ್ಯವಾದ ಭದ್ರಾಸನದಿಂದ ಕೂಡಿ ಅದು ರಥದಂತೆಯೇ ಇತ್ತು. ಕಲಾಮಯವಾಗಿತ್ತು ಅದರಲ್ಲಿ ಬಿಡಿಸಿದ ಕಾಡು, ಗುಹೆ, ಉದ್ಯಾನ, ಸರೋವರ ಗಳು, ಪ್ರಾಣಿಪಕ್ಷಿಗಳು, ದೇವತೆಗಳು, ಮನುಷ್ಯರು, ವಾನರರು – ಮುಂತಾದವುಗಳ ಚಿತ್ರಣವು ನಿಜತ್ವದ ಭ್ರಾಂತಿಯನ್ನು ಉಂಟುಮಾಡುತ್ತಿದ್ದವು.

ಶಿವ-ವೈಷ್ಣವ ಧನುಸ್ಸು

ವಿಶ್ವಕರ್ಮನು ಮಾಡಿದ ಶಿವಧನುಸ್ಸು ಮತ್ತು ವೈಷ್ಣವ ಧನುಸ್ಸು ಪ್ರಖ್ಯಾತವಾದವು. ತ್ರಿಪುರರ ಸಂಹಾರಕ್ಕಾಗಿ ತಾನು ಉಪಯೋಗಿಸಿದ ಧನಸ್ಸು ಶಿವನು ಮಿಥಿಲೆಯ ಜನಕರಾಜನ ಪೂರ್ವಿಕನಾದ ದೇವರಾತನಿಗೆ ಇಡಲು ಕೊಟ್ಟಿದ್ದನು. ಜನಕರಾಜನು ಯಜ್ಞ, ಫಲವಾಗಿ ಅದನ್ನು ಬೇಡಿ, ತನ್ನದಾಗಿ ಮಾಡಿಕೊಂಡಿದ್ದನು. ಶ್ರೀರಾಮನು ಅದನ್ನು ಮುರಿದು ಸೀತೆಯನ್ನು ವರಿಸಿದ್ದನು.

ವೈಷ್ನವ ಧನುಸ್ಸನ್ನು ವಿಷ್ಣುವು ಋಚೀಕನೆಂಬ ಋಷಿಗೆ ಆತನ ತಪಸ್ಸಿನ ರಕ್ಷಣೆಗಾಗಿ ಕೊಟ್ಟಿದ್ದನು. ಋಚೀಕನ ಮಗ ಜಮದಗ್ನಿ. ಅವನ ಮಗ ಪರಶುರಾಮ. ಪರಶುರಾಮನು ಆ ವೈಷ್ಣವ ಧನುವನ್ನು ಹಿಡಿದುಕೊಂಡು ಶ್ರೀರಾಮನಿಗೆ ಎದುರಾಗಿ ಸೋತರು. ಶ್ರೀರಾಮನು ಆ ವೈಷ್ಣವ ಧನುಸ್ಸನ್ನು ಪರಶುರಾಮನಿಂದ ಪಡೆದು ವರುಣ ನಿಗೆ ಕೊಟ್ಟನು. ಈ ಎರಡು ಬಿಲ್ಲುಗಳೂ ಬಹು ಬಲಿಷ್ಠವೂ ಭಾರವುಳ್ಳವೂ ಶತ್ರುನಾಶಕವೂ ಆಗಿದ್ದವು.

ಅರ್ಜುನ ಕೃಷ್ಣರಿಗೆ ರಥ-ಆಯುಧಗಳು

ಮಹಾಭಾರತ ಮಲ್ಲನಾದ ಅರ್ಜುನನಿಗೆ ವಿಶ್ವಕರ್ಮ ನಿಂದ ರಚಿತವಾದ, ಶತ್ರುಗಳನ್ನು ಕೊಲ್ಲಲು ಯೋಗ್ಯವಾದ ರಥಾಯುಧಗಳು ದೊರೆತವು. ಕೃಷ್ಣನೂ ಅರ್ಜುನನೂ ಹೀಗೆಯೇ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ಅಗ್ನಿದೇವನು ಬ್ರಾಹ್ಮಣ ರೂಪದಲ್ಲಿ ಬಂದನು. ಖಾಂಡವ ವನವನ್ನು ತನಗೆ ಆಹಾರವಾಗಿ ಕೊಡಬೇಕೆಂದು ಅರ್ಜುನನಲ್ಲಿ ಕೇಳಿ ದನು. ಅರ್ಜುನನು ಕೊಡಲು ಒಪ್ಪಿದನು. ಆ ಸಂದರ್ಭ ದಲ್ಲಿ ಅರ್ಜುನನು ತನಗೆ ರಥ-ಆಯುಧಗಳನ್ನು ಕೊಡು ವಂತೆ ಕೇಳಿದನು. ಅಗ್ನಿಯು ವರಣನನ್ನು ಪ್ರಾರ್ಥಿಸಿದನು. ವರುಣನು ಅರ್ಜುನನಿಗೆ ಗಾಂಡೀವ ಎಂಬ ಬಿಲ್ಲನ್ನೂ ಬಾಣಗಳನ್ನೂ ತೆಗೆದಷ್ಟೂ ಮುಗಿಯದ ಎರಡು ಬತ್ತಳಿಕೆಗಳನ್ನೂ ಒಂದು ದಿವ್ಯ ರಥವನ್ನೂ ಕೊಟ್ಟನು. ಶ್ರೀಕೃಷ್ಣನಿಗೆ ವಜ್ರದಿಂದ ಮಾಡಿದ ಚಕ್ರಾಯುಧವನ್ನೂ ಕೌಮೋದಕೀ ಎಂಬ ಗದೆಯನ್ನೂ ಕೊಟ್ಟನು. ಈ ರಥ, ಆಯುಧಗಳನ್ನು ನಿರ್ಮಿಸಿದವನು ವಿಶ್ವಕರ್ಮನು.

ಗಾಂಡೀವವನ್ನು ಯಾರಿಗೂ ಎಂದಿಗೂ ಕತ್ತರಿಸಲು ಬಾರದಂತೆ ರಚಿಸಿದ್ದನು. ಶತ್ರುಗಳಿಗೆ ಅದನ್ನು ನೋಡಿ ದೊಡನೆ ಭಯವಾಗುತ್ತಿತ್ತು. ಅನೇಕ ಭೂತಗಣಗಳ ಹಾಗೂ ದೇವತೆಗಳ ರಕ್ಷಣೆ ಆ ರಥಕ್ಕಿತ್ತು. ಕೃಷ್ಣನಿಗೆ ಕೊಟ್ಟ ಚಕ್ರವು ಪ್ರಯೋಗಿಸಿದೊಡನೆ ವೈರಿಗಳನ್ನು ಕತ್ತರಿಸಿ ಪುನಃ ಹಿಂದಕ್ಕೆ ಬಂದು ಕೈಯನ್ನು ಸೇರುವ ಗುಣವುಳ್ಳದು. ಕೌಮೋದಕೀ ಗದೆ ಸಿಡಿಲಿನಂತೆ ಶಬ್ದಮಾಡಿ ಎದುರಾಳಿ ಯನ್ನು ಕೆಡಹಬಲ್ಲುದು.

ವ್ಯಕ್ತಿ ನಿರ್ಮಾಣ

ವಿಶ್ವಕರ್ಮನು ಯಂತ್ರ ವಸ್ತು ವಾಹನ ಶಿಲ್ಪ ಚಿತ್ರ ಚಮತ್ಕೃತಿಗಳನ್ನಲ್ಲದೆ ಜೀವಸೃಷ್ಟಿಯನ್ನೂ ಮಾಡಬಲ್ಲಪಟು ವಾಗಿದ್ದನು. ರಾಮಾಯಣ ಕಾಲದಲ್ಲಿ ನಳನೆಂಬ ಕಪಿ ವೀರನ ಸೃಷ್ಟಿ ವಿಶ್ವಕರ್ಮನದು. ಸಮುದ್ರಕ್ಕೆ ಸೇತುವೆ ಕಟ್ಟಿದ ಕುಶಲ ಶಿಲ್‌ಪ ನಳ.

ವಿಶ್ವಕರ್ಮನ ನಿರ್ಮಾಣದಲ್ಲಿ ಇದಕ್ಕಿಂತ ಮುಖ್ಯವೂ ಮಹತ್ವವೂ ಆದುದು ತಿಲೋತ್ತಮೆ ಎಂಬ ಚೆಲುವೆಯ ಸೃಷ್ಟಿ. ಸುಂದೋಪಸುಂದರೆಂಬ ರಕ್ಕಸರ ನಾಶಕ್ಕಾಗಿ ಆಕೆಯನ್ನು ಸೃಷ್ಟಿಸಲಾಯಿತು.

ಹಿಂದೆ ಅಣ್ಣತಮ್ಮಂದಿರಾದ ಸುಂದ ಉಪಸುಂದ ಎಂಬಿಬ್ಬರು ರಾಕ್ಷಸರು ಇದ್ದರು. ಅವರು ಕ್ರೂರರು, ಶೂರರು, ಭಯಂಕರರು, ಲೋಕಪೀಡಿತರು. ಜೊತೆ ತಪ್ಪದೆ, ಅನ್ಯೋನ್ಯ ಪ್ರೀತಿಯಿಂದ ಶರೀರ ಎರಡು, ಪ್ರಾಣ ಒಂದು ಎಂಬ ಹಾಗೆ ಇದ್ದರು. ಅವರು ಬ್ರಹ್ಮನನ್ನು  ತಪಸ್ಸಿನಿಂದ ಮೆಚ್ಚಿಸಿ, “ನಮಗೆ ಬೇರೆ ಯಾರಿಂದಲೂ ಮರಣ ಬರಬಾರದು” ಎಂಬ ವರವನ್ನು ಬೇಡಿದರು. ಬ್ರಹ್ಮನು ವರವಿತ್ತನು. ರಕ್ಕಸರ ಸೊಕ್ಕನ್ನು ಇನ್ನು ಕೇಳ ಬೇಕೆ ?

ತಿನ್ನಿರಿ, ಸುಖಪಡಿರಿ, ಕಡಿಯಿರಿ, ಕುಡಿಯಿರಿ, ಹಾಡಿರಿ, ಕುಣಿಯಿರಿ – ಎಂಬವೇ ಅವರ ಘೋಷಣೆ. ಹೊರಟರು, ಸಾಧುಗಳನ್ನು ಸತ್ಪುರಷರನ್ನು ಹಿಂಸಿಸಿದರು. ಯಜ್ಞಗಳನ್ನು ಕೆಡಿಸಿದರು. ದೇವಾಲಯಗಳನ್ನು ಕೆಡವಿದರು. ಧ್ಯಾನ ಉಪಾಸನೆ ಮಾಡುವವರನ್ನು ಪೀಡಿಸಿದರು. ತಮ್ಮನ್ನು ದೂರುವವರನ್ನು ಕಟ್ಟಿ ಹೊಡೆದರು. ಜನರು ದಿಕ್ಕು ಗೆಟ್ಟರು. ದೇವತೆಗಳು ಏನುಮಾಡಲೂ ತೋಚದೆ ಕುಳಿತರು. ಸಿದ್ಧಿಗಳನ್ನು ಪಡೆದ ಅನೇಕ ಮಹರ್ಷಿಗಳು ಎಲ್ಲೆಲ್ಲೋ ಹೋಗಿ ಅಡಗಿಕೊಂಡರು. ಸುಂದೋಪ ಸುಂದರು ಅವರ ಬೇಟೆಗೆ ತೊಡಗಿದರು. ತಾವೂ ಗುಪ್ತರೂಪ ಧರಿಸಿ ಹುಡುಕತೊಡಗಿದರು. ಇದರಿಂದ ಎಲ್ಲೆಲ್ಲೂ ಹಾಹಾಕಾರವುಂಟಾಯಿತು. ಯಾರೂ ಏನೂ ಮಾಡಲಾರದೆ ಬ್ರಹ್ಮನಿಗೆ ಮೊರೆಯಿಟ್ಟರು. ಬ್ರಹ್ಮನು ವಿಶ್ವ ಕರ್ಮನನ್ನು ಕರೆಸಿದನು. “ನಿನ್ನ ರಚನಾ ಸಾಮರ್ಥ್ಯದಿಂದ ಈ ಸುಂದೋಪಸುಂದರನ್ನು ನಾಶಪಡಿಸು” ಎಂದು ಕೇಳಿ ಕೊಂಡನು. ವಿಶ್ವಕರ್ಮನು ಸ್ವಲ್ಪ ಹೊತ್ತು ಯೋಚಿಸಿದನು. ಅವನಿಗೆ ಯೋಗ್ಯವಾದ ಒಂದು ಉಪಾಯ ಹೊಳೆ ಯಿತು. ಯಂತ್ರ-ಆಯುಧಗಳ ನಿರ್ಮಾಣ ಇಲ್ಲಿ ಉಪ ಯೋಗವಿಲ್ಲ. ಹಾಗಿದ್ದರೆ ಮಾಡಬೇಕಾದುದೇನು?

ವಿಶ್ವಕರ್ಮನು ಅತ್ಯಂತ ಸುಂದರವಾದ ಒಂದು ಹೆಣ್ಣಿನ ರೂಪವನ್ನು ಸೃಷ್ಟಿಸಲು ಯೋಚಿಸಿದನು. ಪ್ರಪಂಚ ದಲ್ಲಿ ಅತ್ಯಂತ ಸುಂದರವೆನಿಸುವ ಅಂಶಗಳು ಏನೇ ನಿವೆಯೋ ಅವನ್ನೆಲ್ಲ ತಿಲತಿಲವಾಗಿ (ಎಳ್ಳಿನಷ್ಟಾಗಿ) ಸಂಗ್ರಹಿಸಿ ‘ತಿಲೋತ್ತಮೆ’ ಎಂಬ ಹೆಸರಿನ ಕನ್ಯೆಯನ್ನು ನಿರ್ಮಿಸಿದನು. ಅದಕ್ಕೆ ಪ್ರಾಣ ಪ್ರತಿಷ್ಠೆ ಮಾಡಿದನು. ಇಂಪಾದ ಸ್ವರದಿಂದ ಮಾತಾಡುವ ಶಕ್ತಿ ಕೊಟ್ಟನು. ತಪಸ್ವಿಯೂ ಲೋಕದ ಹಿತಚಿಂತಕನೂ ದೈವಾನುಗ್ರಹ ವುಳ್ಳವನೂ ಗುರುಭಕ್ತನೂ ಆದ ವಿಶ್ವಕರ್ಮನಿಗೆ ಇದು ಸಾಧ್ಯವಾಯಿತು.

“ಎಲೈ ತಿಲೋತ್ತಮೆ, ನೀನು ಸುಂದೋಪಸುಂದರ ಬಳಿಗೆ ಹೋಗು. ಅವರ ಮನಸ್ಸನ್ನು ಆಕರ್ಷಿಸು. ನಿನ್ನ ಚೆಲುವಿಗೆ ಸೋತು ಅವರು ಪರಸ್ಪರ ಅಸೂಯೆಗೊಂಡು ಹೊಡೆದಾಡಲಿ. ನಿನ್ನಿಂದ ಆ ದುಷ್ಟರ ನಾಶವಾಗಲಿ. ಆಗ ನಮ್ಮ ಉದ್ದೇಶ ನೆರವೇರುವುದು” ಎಂದು ವಿಶ್ವ ಕರ್ಮನು ಹೇಳಿದನು. ತಿಲ್ಲೋತ್ತಮೆಯ ಚೆಲುವು ಎಲ್ಲರ ಮನಸ್ಸನ್ನೂ ಸೆಳೆಯುವಂತಿತ್ತು.

ಸುಂದೋಪಸುಂದರು ವಿಂಧ್ಯೆಯ ಪ್ರಸ್ಥಭೂಮಿಗೆ ಬಂದಿದ್ದರು. ಮದ್ಯಪಾನ ಮಾಡಿದ್ದರು. ಅವರ ಮುಂದೆ  ತಾಳ ವಾದ್ಯ ಗೀತಗಳೊಂದಿಗೆ ದೇವಲೋಕದ ಸ್ತ್ರೀಯರು ನರ್ತನ ಮಾಡುತ್ತಿದ್ದರು. ತಿಲೋತ್ತಮೆಯು ತೆಳ್ಳಗಿನ ರೇಷ್ಮೆಯ ಕೆಂಪು ಸೇರೆಯುಟ್ಟು ಮೋಹಕವಾಗಿ ಶೃಂಗಾರ ಮಾಡಿ ಹೂ ಕೊಯ್ಯುವುದನ್ನು ನಟಿಸುತ್ತ ನೃತ್ಯ ಮಾಡಿಕೊಂಡು ಬಂದಳು. ರಕ್ಕಸರಿಬ್ಬರೂ ಆಕೆಯ ಒಂದೊಂದು ಕೈಯನ್ನು ಹಿಡಿದರು. “ಈಕೆ ನನ್ನ ಹೆಂಡತಿ, ನನ್ನ ಹೆಂಡತಿ” ಎಂದು ಇಬ್ಬರೂ ಹೇಳತೊಡಗಿದರು. ಮಾತಿನಲ್ಲಿ ಪ್ರಾರಂಭವಾದ ಜಗಳವು ಇಬ್ಬರೂ ಗದೆ ಹಿಡಿದು ಕಾದಾಡುವಲ್ಲಿಗೆ ತಲಪಿತು. ಒಬ್ಬರನ್ನೊಬ್ಬರು ಗದೆಯಿಂದ ಬಡೆದುಕೊಂಡು, ಇಬ್ಬರೂ ತಲೆಯೊಡೆದು ರಕ್ತಕಾರಿ ಬಿದ್ದು ಸತ್ತುಹೋದರು. ಅವರಿಗೆ ಬೇರೆ ಯಾರಿಂದಲೂ ಮರಣ ಬರಲಿಲ್ಲ. ಅವರವರಿಂದಲೇ ಬಂತು. ಲೋಕಕ್ಕೆ ಕ್ಷೇಮವಾಯಿತು. ವಿಶ್ವಕರ್ಮನ ನಿರ್ಮಾಣದ ಜಾಣ್ಮೆ ಸಫಲವಾಯಿತು.

ಬುದ್ಧಿಶಕ್ತಿ, ಸೃಷ್ಟಿಶಕ್ತಿಗಳ ಸಂಕೇತ

ದೇವಶಿಲ್ಪಿಯೆಂದು ಪ್ರಸಿದ್ಧನಾಗಿದ್ದ ವಿಶ್ವಕರ್ಮನ ಹೆಸರು ಭಾರತದೇಶದಲ್ಲಿ ಇಂದಿಗೂ ಮನೆಮಾತಾಗಿದೆ. ಉತ್ತಮವಾದ ಚಿತ್ರ, ಶಿಲ್ಪ, ಗೃಹನಿರ್ಮಾಣ, ಮರ ಕೆಲಸ, ಆಭರಣಗಳ ರಚನೆ ಯಾವುದಿದ್ದರೂ ಅದು ವಿಶ್ವಕರ್ಮನ ರಚನೆ ಎಂದು ಕೊಂಡಾಡುವಂತಾಗಿದೆ. ಯಾವ ಕಾಲದಲ್ಲಿ ಇದ್ದವನು, ಯಾವ ಕಾಲದವರೆಗೆ ಬಾಳಿದವನು ಎಂದು ನಿಶ್ಚಯಿಸಿ ಹೇಳುವಂತಿಲ್ಲ. ಅದರಿಂದ ನಮಗೆ ಆಗಬೇಕಾದುದೇನು ? ಆದರೆ ಅವನ ರಚನೆಗಳು, ನಗರ, ರಾಜಮಂದಿರ, ದೇವಾಲಯ ಮುಂತಾದವುಗಳ ನಿರ್ಮಾಣದ ಕುರಿತು ಹಲವಾರು ಕಥೆಗಳು ಪ್ರಚಾರ ದಲ್ಲಿವೆ. ಇಂದಿಗೂ ಮರ, ಕಲ್ಲು, ಲೋಹ, ಮಣ್ಣು – ಮುಂತಾದವುಗಳಿಂದ ಸುಂದರವಾದ ಆಕೃತಿಗಳನ್ನು ಮಾಡುವ ಕರಕೌಶಲವುಳ್ಳವರನ್ನು ವಿಶ್ವಕರ್ಮ ಸಮಾಜ ದವರು ಎನ್ನುತ್ತಾರೆ. ಸ್ವತಃ ಆಧಿಪುರಷನಾದ ವಿಶ್ವಕರ್ಮನೇ ಎಲ್ಲ ಇಂದಿನ ಕುಶಲ ಕರ್ಮಕಾರರಿಗೆ, ಕಾರ್ಮಿಕರಿಗೆ, ವಿವಿಧವಾದ ಕೃತಿರಚನೆ ಮಾಡಲು ಸಮರ್ಥರಾದವರಿಗೆ ಪ್ರೇರಕನು ; ಆದರ್ಶನು. ಮನುಷ್ಯನ ನಾಗರಿಕತೆಯ ಆಧಾರ. ತನ್ನ ಇಷ್ಟದಂತೆ, ತನಗೆ ಅನುಕೂಲವಾಗುವಂತೆ, ಸಂತೋಷವಾಗುವಂತೆ ಹೊಸಹೊಸ ಸೃಷ್ಟಿಗಳನ್ನು ಮಾಡಬಲ್ಲುದು ಅವನ ಶಕ್ತಿ. ಮನುಷ್ಯನ ಬುದ್ಧಿಶಕ್ತಿಗೆ, ಸೃಷ್ಟಿಶಕ್ತಿಗೆ ಸಂಕೇತ ವಿಶ್ವಕರ್ಮ.