Categories
ಕ್ರೀಡೆ ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ

ವಿಶ್ವನಾಥ್ ಭಾಸ್ಕರ್ ಗಾಣಿಗ

ದೇಶದ ಕ್ರೀಡಾರಂಗಕ್ಕೆ ಕರ್ನಾಟಕದ ಶ್ರೇಷ್ಠ ಕೊಡುಗೆಗಳಲ್ಲಿ ವಿಶ್ವನಾಥ್ ಭಾಸ್ಕರ್ ಗಾಣಿಗ ಒಬ್ಬರು. ಪವರ್ ಲಿಫ್ಟಿಂಗ್‌ನಲ್ಲಿ ಪದಕಗಳ ಭೇಟೆಯಾಡುತ್ತಿರುವ ಚಿನ್ನದ ಹುಡುಗ.
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಬಾಳಿಕೆರೆ ವಿಶ್ವನಾಥ್ ಭಾಸ್ಕರ್ ಗಾಣಿಗ ಅವರ ಹುಟ್ಟೂರು. ಬಳ್ಳಾರಿ ಜಿಲ್ಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕುಂದಾಪುರ ತಾಲೂಕಿನ ನೆಂಪುವಿನಲ್ಲಿ ಪಿಯು ಶಿಕ್ಷಣ ಪೂರೈಸಿದ ವಿಶ್ವನಾಥ್ ಬಿಸಿಎ ಪದವೀಧರರು. ಸಾಪ್ಟವೇರ್ ಕಂಪನಿಯೊಂದರ ಉದ್ಯೋಗಿ ವಿಶ್ವನಾಥ್ ಅವರಲ್ಲಿ ಕ್ರೀಡಾಸಕ್ತಿ ಮೊಳಕೆಯೊಡೆದದ್ದು ತೀರಾ ಆಕಸ್ಮಿಕ. ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದವಗೆ ಭಾರ ಎತ್ತುವ ಸ್ಪರ್ಧೆಯತ್ತ ಚಿತ್ತ ಹರಿದದ್ದು ಯೋಗವೇ ಸರಿ. ಆನಂತರದ್ದು ಕಠಿಣ ಪರಿಶ್ರಮದ ಕ್ರೀಡಾಯಾನ. ಕುಂದಾಪುರದವರೇ ಆದ ಪ್ರಶಾಂತ್ ಶೇರಿಗಾರ್‌ರಿಂದ ಸ್ಪೂರ್ತಿ- ಮಾರ್ಗದರ್ಶನ. ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಮೊದಲನೇ ಏಷ್ಯನ್ ಪವರ್‌ ಲಿಫ್ಟಿಂಗ್ ಪಂದ್ಯಾವಳಿಯಲ್ಲಿ ಪದಕ ಗೆಲ್ಲುವುದರೊಂದಿಗೆ ಮುಂಚೂಣಿಗೆ, ಕೆಲವೇ ವರ್ಷಗಳ ಕ್ರೀಡಾ ಜೀವನದಲ್ಲಿ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ೬ ಚಿನ್ನ, ೪ ರಜತ, ೩ ಕಂಚಿನ ಪದಕಗಳು, ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗಳಲ್ಲಿ ೧೭ ಚಿನ್ನ, ೫ ರಜತ ಹಾಗೂ ೩ ಕಂಚಿನ ಪದಕಗಳನ್ನು ಗೆದ್ದು ಮುನ್ನಡೆದಿರುವ ವಿಶ್ವನಾಥ್ ನಾಡಿನ ಅತ್ಯಂತ ಭರವಸೆಯ ಕ್ರೀಡಾಚೇತನ.