ವಿಶ್ವನಾಥ ಸತ್ಯನಾರಾಯಣ —ತೆಲುಗು ಭಾಷೆಯಲ್ಲಿ ಸಾಹಿತ್ಯ ರಚಿಸಿದ ಇವರು ಜ್ಞಾನಪೀಠ ಪ್ರಶಸ್ತಿ ಪಡೆದರು. ಸುಮಾರು ಅರವತ್ತು ಕಾದಂಬರಿಗಳನ್ನು ಹನ್ನೆರಡು ಕಾವ್ಯ ಸಂಕಲನಗಳನ್ನು ಐದು ವಿಮರ್ಶಾ ಗ್ರಂಥಗಳನ್ನು ಐದು ನಾಟಕಗಳನ್ನು ಬರೆದರು.

ವಿಶ್ವನಾಥ ಸತ್ಯನಾರಾಯಣ

ಹಾಲು ಚೆಲ್ಲಿದಂತಹ ಬೆಳದಿಂಗಳು. ಮಕ್ಕಳೆಲ್ಲರೂ ಮನೆಯ ಅಂಗಳದಲ್ಲಿ ಮಂಚಗಳ ಮೇಲೆ ಮಲಗಿ ಕಥೆ ಹೇಳುವುದರಲ್ಲಿ, ಕೇಳುವುದರಲ್ಲಿ ತಲ್ಲೀನರಾಗಿದ್ದರು. ಅರಸುಕುಮಾರನ ಕಥೆ, ಅಡುಗೂಲಜ್ಜಿಯ ಕಥೆಗಳು, ಕಂಡು  ಕೇಳಿದ ಕಥೆಗಳು – ಹೀಗೆ ಅವರ ಜಗತ್ತು.

ಕೆಲವು ಹುಡುಗರು ತಮಗೆ ಬಂದ ಪದ್ಯಗಳನ್ನು ಹೇಳುವರು. ಚುಟುಕ, ಒಗಟು ಒಬ್ಬರನ್ನು ಮೀರಿಸಿ ಇನ್ನೊಬ್ಬರು ಪಂದ್ಯ ಕಟ್ಟಿ ಹೇಳುತ್ತಿದ್ದರು.

ಮನೆ ತುಂಬ ಮಕ್ಕಳು. ಗಂಡು ಮಕ್ಕಳು, ಹೆಣ್ಣು ಮಕ್ಕಳು ಚಿಕ್ಕವು, ದೊಡ್ಡವು ಎಲ್ಲವೂ ಸೇರಿದಾಗ ಶಾಲೆಯ ಹಾಗಿರುತ್ತಿತ್ತು ನಮ್ಮ ಮನೆ ಎನ್ನುತ್ತಿದ್ದರು ವಿಶ್ವನಾಥ ಸತ್ಯನಾರಾಯಣ. ಇದೇ ತಮ್ಮ ಕಥೆಗಳಿಗೆ ಸಾಹಿತ್ಯ ಸೇವೆಗೆ ಸ್ಫೂರ್ತಿ ಕೊಟ್ಟಿದೆಯೆಂದೂ ಹೇಳುತ್ತಿದ್ದರು.

೧೯೭೬ರ ನವೆಂಬರ್ ೧೬. ಅಂದು ಸಂಜೆ ವಿಜ್ಞಾನ ಭವನದಲ್ಲಿ ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ನೀಡಲಾಯಿತು. ಅದು ಪ್ರತಿವರ್ಷ ಇಡೀ ಭಾರತದ ಎಲ್ಲ ಭಾಷೆಗಳ ಸಾಹಿತ್ಯ ಕೃತಿಗಳಲ್ಲಿ ಅತ್ಯಂತ ಶ್ರೇಷ್ಠವಾದ ಕೃತಿಯನ್ನು ಬರೆದ ಸಾಹಿತಿಗೆ ಮಹೋನ್ನತ ಪ್ರಶಸ್ತಿ. ನಮ್ಮ ದೇಶದಲ್ಲಿ ಸಾಹಿತ್ಯದಲ್ಲಿ ನೀಡುವ ಅತ್ಯುಚ್ಛ ಪ್ರಶಸ್ತಿ ಇದು. ಇಂತಹ ಗೌರವವನ್ನು ಈ ತನಕ ಗಳಿಸಿದವರು ನಮ್ಮ ದೇಶದಲ್ಲಿ ಕೆಲವೇ ಮಂದಿ.

ಈ ಸಮಾರಂಭಕ್ಕೆ ಮುಂಚೆ ಸತ್ಯನಾರಾಯಣರನ್ನು ಪತ್ರಿಕಾ ವರದಿಗಾರರ ತಂಡ ಮುತ್ತಿಗೆ ಹಾಕಿತ್ತು. ಅವರು ವಿಧವಿಧವಾದ ಪ್ರಶ್ನೆಗಳನ್ನು ಕೇಳಿದರು. ಅವುಗಳಲ್ಲಿ ಎರಡು ಪ್ರಶ್ನೆಗಳಿಗೆ ಸತ್ಯನಾರಾಯಣರು ಸ್ವಾರಸ್ಯಕರವಾಗಿ ಉತ್ತರ ಕೊಟ್ಟರು. ವರದಿಗಾರರಲ್ಲಿ ಒಬ್ಬರು, ‘ನಿಮಗೆ ಈ ಪ್ರಶಸ್ತಿಯಲ್ಲಿ ಸಿಕ್ಕುವ ಒಂದು ಲಕ್ಷ ರೂಪಾಯಿಗಳನ್ನೇನು ಮಾಡುತ್ತೀರಿ?’ ಎಂದರು.

‘ಇದರಲ್ಲಿ ಅರ್ಧಭಾಗ ಶಿವಾಲಯದ ಜೀರ್ಣೋ ದ್ಧಾರಕ್ಕೆ ಕೊಡುತ್ತೇನೆ. ಉಳಿದ ಅರ್ಧಭಾಗ ನನ್ನ ಜೇಬಿಗೆ’ ಎಂದು ನಗುತ್ತಾ ‘ನನ್ನ ಜೇಬಿಗೆ ತೂತುಗಳು ಜಾಸ್ತಿ’ ಎಂದಾಗ ಎಲ್ಲೆಡೆ ನಗೆಯ ಅಲೆ ತೇಲಿತು.

ಇನ್ನೊಬ್ಬರು ಪ್ರಶ್ನಿಸಿದರು:

‘ನಿಮ್ಮ ಸಾಹಿತ್ಯರಚನೆಗೆ ಸ್ಫೂರ್ತಿ ಎಲ್ಲಿಂದ ಬಂತು?’

ಸತ್ಯನಾರಾಯಣರು, ‘ನನ್ನೆಲ್ಲ ಪಾಂಡಿತ್ಯಕ್ಕೆ ಸಾಹಿತ್ಯದ ಪರಿಶ್ರಮಕ್ಕೆ ಮೂಲ ಸ್ಫೂರ್ತಿ ನನ್ನ ಬಾಲ್ಯದ ಜೀವನ’ ಎಂದರು.

ಬಾಲ್ಯದ ಪ್ರಭಾವ

ಸತ್ಯನಾರಾಯಣ ಅವರು ತಮ್ಮ ಬಾಲ್ಯಜೀವನದ ಬಗ್ಗೆ ತುಂಬ ಅಭಿಮಾನದಿಂದ ಮಾತನಾಡುತ್ತಿದ್ದರು. ಒಬ್ಬ ಮನುಷ್ಯನ ಅನಂತರದ ಜೀವನದ ಮೇಲೆ ಬಾಲ್ಯದ ವರ್ಷಗಳು ಎಷ್ಟು ಪ್ರಭಾವ ಬೀರುತ್ತವೆ ಎಂಬುದನ್ನು ಸ್ವಾರಸ್ಯವಾಗಿ ವಿವರಿಸುತ್ತಿದ್ದರು.

ಬಾಲ್ಯವೆಂದರೇನು?ಹುಡುಗನ ತಂದೆ, ತಾಯಿ ಮನೆಯ ಮಕ್ಕಳು ಎಲ್ಲ ಒಂದು ಊರಿನಲ್ಲಿ ವಾಸಿಸುತ್ತಿರುತ್ತಾರೆ. ಅವರಿಗೆ ಹಲವು ಕುಟುಂಬಗಳ ಪರಿಚಯ ಇರುತ್ತದೆ. ಸಾಮಾನ್ಯವಾಗಿ ಈ ಕುಟುಂಬಗಳೆಲ್ಲವುಗಳ ಜೀವನ ರೀತಿ ಒಂದೇ ಬಗೆಯದು, ಹಬ್ಬ ಹುಣ್ಣಿಮೆಗಳು, ಮದುವೆಗಳು, ಜಾತ್ರೆಗಳು, ಸಭೆಗಳು ಇಂತಹ ಸಂದರ್ಭಗಳಲ್ಲಿ ಹುಡುಗನ ಮನೆಯವರು, ಇತರರು ಸೇರುತ್ತಾರೆ. ಒಟ್ಟಿಗೆ ಕಾಲವನ್ನು ಕಳೆಯುತ್ತಾರೆ. ಇವೆಲ್ಲವುಗಳ ನೆನಪು ಹುಡುಗನ ಮನಸ್ಸಿನಲ್ಲಿ ನಿಲ್ಲುತ್ತದೆ.

ಈ ನೆನಪುಗಳ ಪ್ರಭಾವ ಎಂತಹುದು ಎಂಬುದರ ಬಗ್ಗೆ ಅವರ ವಿವರಣೆ ಹೀಗೆ –

೧. ಆ ಗ್ರಾಮದ ಪ್ರಭಾವ, ೨. ದೇಶಕ್ಕೆ ಸಂಬಂಧಿಸಿದಂತೆ ನಡೆಯುವ ಚಟುವಟಿಕೆಗಳ ಪ್ರಭಾವ, ೩. ನಾಗರೀಕತೆಯ ಪ್ರಭಾವ, ೪. ಅವನು ಬೆಳೆದ ಮನೆಯ ವಾತಾವರಣದ ಪ್ರಭಾವ ೫. ಒಬ್ಬ ಮಹಾತ್ಮನದೋ ಅಥವಾ ತನ್ನ ತಂದೆಯದೋ ಪ್ರಭಾವ. ಆಯಾ ಪ್ರಭಾವವನ್ನು ಸ್ವೀಕರಿಸುವ ಬಾಲಕನ ಮನಸ್ಸಿನ ಮೇಲೆ ಸದಾ ಅಂತರಿಕವಾಗಿ ಎರಡು ಮಹತ್ತರವಾದ ವಿಷಯಗಳು ಇರುತ್ತವೆ. ಅವು ಪೂರ್ವಜನ್ಮ ಸಂಸ್ಕಾರ ಮತ್ತು ಜನ್ಮಲಕ್ಷಣ.

ಸಂಸ್ಕಾರ ಮತ್ತು ಜನ್ಮಲಕ್ಷಣ

‘ನಾನು ಹುಡುಗನಾಗಿದ್ದಾಗ ಪ್ರತಿದಿನ ನಮ್ಮ ಮನೆಯಲ್ಲಿ ನಮ್ಮ ತಂದೆ ಪುರಾಣ ಹೇಳುತ್ತಿದ್ದರು. ನನಗೆ ಐದು ವರುಷ. ಆಗ ರಾಮಾಯಣ, ಮಹಾಭಾರತ, ಭಾಗವತದಲ್ಲಿರುವ ಕಥೆಗಳೆಲ್ಲವೂ ಅದ್ಭುತವೆನಿಸುತ್ತಿದ್ದವು. ಆ ಕಾಲದಲ್ಲಿ ತಿಂಗಳಿಗೆ ಎರಡಾದರೂ ಬೀದಿ ನಾಟಕ, ಕೂಚಿಪುಡಿ ಇರುತ್ತಿದ್ದವು. ಆ ಕಥೆಗಳನ್ನು ಕೇಳಲು ನನಗೆ ಖುಷಿ ಎನಿಸುತ್ತಿತ್ತು. ಹೃದಯದಲ್ಲಿ, ಬೀಜರೂಪದಲ್ಲಿ ಹುದುಗಿದ್ದ ಸರ್ವರಸಗಳು ಕ್ರಮೇಣ ಮೊಳಕೆಯೊಡೆಯುವ ವಯಸ್ಸು ಅದು. ಬಾಲ್ಯದಲ್ಲಿ ಕಲ್ಪನಾಪ್ರತಿಭೆ ವೃದ್ಧಿಗೊಳಿಸಲು ಈ ಕಥೆಗಳಿಗಿಂತ ಉತ್ತಮ ಶಿಕ್ಷಣವಿಲ್ಲ’ ಎನ್ನುತ್ತಿದ್ದರು.

ಮನೆತನ

ವಿಶ್ವನಾಥ ಸತ್ಯನಾರಾಯಣ ೧೮೯೫ರ ಸೆಪ್ಟೆಂಬರ್ ಹತ್ತರಂದು ಆಂಧ್ರಪ್ರದೇಶದ ಕೃಷ್ಣಾಜಿಲ್ಲೆಯ ಗನ್ನವರಂ ತಾಲ್ಲೂಕಿನ ನಂದಮೂರು ಗ್ರಾಮದಲ್ಲಿ ಜನಿಸಿದರು. ತಂದೆ ಶೋಭನಾದ್ರಿ, ತಾಯಿ ಪಾರ್ವತಮ್ಮ. ಈ ದಂಪತಿಗಳಿಗೆ ಹುಟ್ಟಿದ ಮೂವರು ಗಂಡುಮಕ್ಕಳಲ್ಲಿ ಸತ್ಯನಾರಾಯಣ ಮೊದಲನೆಯವರು, ತಂದೆ ಸಂಪ್ರದಾಯನಿಷ್ಠರು. ಮಹಾ ಶಿವಭಕ್ತರು. ಕಾಶಿಯಿಂದ ಶಿವಲಿಂಗವನ್ನು ತಂದು ಪ್ರತಿಷ್ಠೆ ಮಾಡಿ ದೇವಾಲಯಗಳನ್ನು ಕಟ್ಟಿಸಿದರು.

ಸತ್ಯನಾರಾಯಣರ ತಂದೆ ಬಹು ಧಾರಾಳಿ ಎಂದು ಹೆಸರು ಪಡೆದಿದ್ದರು. ಪಿತ್ರಾರ್ಜಿತವಾಗಿ ಬಂದ ಭೂಮಿ ಆಸ್ತಿ ಎಲ್ಲವನ್ನೂ ದಾನಧರ್ಮಗಳಿಗೆ ಖರ್ಚುಮಾಡಿ ಬಿಟ್ಟರು. ಸತ್ಯನಾರಾಯಣನಿಗೆ ಐದು ವರುಷ ಆದಾಗ ಅಕ್ಷರಾಭ್ಯಾಸ ಮಾಡಿಸಿ ಅವನಿಗೆ ಓದು ಕಲಿಸಲು ಸೋದರಮಾವನ ಮಗನಾದ ಬುರ್ರಾ ಸುಬ್ಬಯ್ಯನನ್ನು ಅಲ್ಲಿಗೆ ಕರೆದುಕೊಂಡು ಬಂದರು. ಒಂದು ವರುಷ ಕಳೆಯುತ್ತಿದ್ದ ಹಾಗೆ ದೊಡ್ಡ ದೊಡ್ಡ ಪುಸ್ತಕಗಳನ್ನು ಓದುವಷ್ಟು ಚುರುಕು ಬುದ್ಧಿಯವನಾಗಿದ್ದ. ಪದ್ಯಗಳನ್ನು ರಾಗವಾಗಿ ಓದುವುದೆಂದರೆ ಬಲು ಇಷ್ಟ.

ವಿದ್ಯಾಭ್ಯಾಸ

ಕೆಲದಿನ ಸೋದರತ್ತೆಯ ಮನೆಯಲ್ಲಿ, ಇತರ ಬಂಧು ಬಳಗದ ಮನೆಯಲ್ಲಿ ಒಂದೆರಡು ವರುಷ ಹೀಗಿದ್ದು ಸತ್ಯನಾರಾಯಣ ಓದಿಕೊಂಡ. ಅನಂತರ ಶೋಭನಾದ್ರಿ ವೆಲಿ ತಟದಲ್ಲಿ ಮಗನನ್ನು ಓದಲು ಬಿಟ್ಟರು. ಗುರುಗಳಾದ ಗುಡಿಪೊಡಿ ವೀರಭದ್ರಯ್ಯನವರು ತೆಲುಗಿನ ಕಾವ್ಯಗಳನ್ನು ಶಿಷ್ಯನಿಗೆ ಮನತುಂಬುವಂತೆ ಹೇಳಿಕೊಟ್ಟರು. ತೆಲುಗು ಪಂಚ ಮಹಾಕಾವ್ಯಗಳಲ್ಲಿ ಒಂದಾದ ಮನು ಚರಿತ್ರೆಯ ಪಾಠ ನಡೆಯಿತು. ಆಗಲೇ ಅವನಿಗೆ ಕವಿತೆ ಹೇಳುವ ಅಭ್ಯಾಸ ಅಂಟಿಕೊಂಡಿತು.

ಸತ್ಯನಾರಾಯಣ ಭಾವನಿಗೆ ನಾಟಕಗಳಲ್ಲಿ ಆಸಕ್ತಿ ಹೆಚ್ಚು. ಅವರ ಸಹವಾಸದಿಂದ ಇವನಿಗೂ ನಾಟಕಗಳ ಗೀಳು ಹಿಡಿಯಿತು. ಆ ವಯಸ್ಸಿಗಾಗಲೇ ಕೆಲವು ಕವಿತೆಗಳನ್ನೂ ಬರೆದಿದ್ದನು.

ಇಂಗ್ಲೀಷ್ ಶಾಲೆಗೆ ಸೇರಲು ಹನ್ನೆರಡನೇ ವಯಸ್ಸಿನಲ್ಲಿ ಮಚಲೀಪಟ್ಟಣಕ್ಕೆ ಹೋಗಿ ಅಲ್ಲಿ ಹಿಂದೂ ಹೈಸ್ಕೂಲ್‌ಗೆ ಸೇರಿಕೊಂಡರು. ಅಷ್ಟು ಹೊತ್ತಿಗೆ ಮಹಾಭಾರತ, ಭಾಗವತ, ಮನುಚರಿತ್ರೆ ಮುಂತಾದ ಕಾವ್ಯಗಳ ಆಳವಾದ ಪರಿಚಯವಾಗಿತ್ತು. ತಾವೇ ಸ್ವತಃ ಕಾವ್ಯಗಳನ್ನು ರಚಿಸುವಷ್ಟು ಓದಿಕೊಂಡಿದ್ದರು.

ತೆಲುಗಿನ ಆಧುನಿಕ ಕವಿತೆ ರಚನೆ ಮಾಡಿದವರಲ್ಲಿ ಮೊದಲಿಗರು ತಿರುಪತಿ ವೆಂಕಟ ಕವಿಗಳು ಮತ್ತು ಚಳ್ಳಪಿಳ್ಳೆ ವೆಂಕಟಶಾಸ್ತ್ರಿಗಳು. ಈ ಇಬ್ಬರು ಕವಿಗಳ ಹೆಸರು ಆಂಧ್ರದ ನಾಲ್ಕು ಮೂಲೆಗಳಲ್ಲಿ ಮನೆಮಾತಾಗಿತ್ತು. ಚಳ್ಳಪಿಳ್ಳೆ ವೆಂಕಟಶಾಸ್ತ್ರಿಗಳ ಶಿಷ್ಯರಾಗಿ ಸತ್ಯನಾರಾಯಣ ವಿದ್ಯಾರ್ಥಿ ದೆಸೆಯಲ್ಲೇ ಉತ್ತಮ ಸಾಹಿತಿಯಾಗಲು ಶಿಕ್ಷಣ ಪಡೆಯತೊಡಗಿದರು.

ಮಚಲೀಪಟ್ಟಣದಲ್ಲಿ ಕವಿತಾ ಸರಸ್ವತಿ ನಾಟ್ಯವಾಡುತ್ತಿದ್ದ ಕಾಲ ಅದು. ಅಲ್ಲಿ ನಡೆಯುತ್ತಿದ್ದ ಅವಧಾನ ವಿನೋದಗಳು ಗುಂಟೂರು ಪ್ರಾಂತದ ಯುವಕರಲ್ಲಿನ ಕವಿತಾಸಕ್ತಿಯನ್ನು ಎಚ್ಚರಗೊಳಿಸಿತ್ತು. ಅವಧಾನವೆಂದರೆ ಅದ್ಭುತ ವಿದ್ವತ್ತು ಮತ್ತು ಸ್ಮರಣಶಕ್ತಿಯ ಪ್ರದರ್ಶನ. ವಿದ್ವಾಂಸರ ಸುತ್ತ ಹಲವಾರು ಜನರಿರುತ್ತಾರೆ. ವಿದ್ವಾಂಸರ ಸುತ್ತ ಇರುವವರು ಒಬ್ಬರ ನಂತರ ಒಬ್ಬರು ವಿದ್ವಾಂಸರು ಉತ್ತರ ಕೊಡಲು ಬಿಡದೆ ಪ್ರಶ್ನೆಗಳನ್ನು ಕೇಳುವರು. ವಿದ್ವಾಂಸರು ಅನಂತರ ಅದೇ ಕ್ರಮದಲ್ಲಿ ಸಮರ್ಪಕ ಉತ್ತರ ಕೊಡುತ್ತಾರೆ.

ವಿವಾಹ

ವಿಶ್ವನಾಥ ಸತ್ಯನಾರಾಯಣರ ವಿವಾಹ ಅವರ ಹನ್ನೆರಡನೆ ವಯಸ್ಸಿನಲ್ಲಿ ನಡೆಯಿತು. ಈತನ ಸೋದರ ಮಾವ ಕೂಚಿಭಟ್ಟ ಸೀತಾರಾಮಶಾಸ್ತ್ರಿಯವರು ದೊಡ್ಡ ಪಂಡಿತರಾಗಿದ್ದು, ಹಲವಾರು ಎಕರೆ ಜಮೀನಿನ ಒಡೆಯರಾಗಿದ್ದರು. ಇವರಿಗೆ ವರಲಕ್ಷ್ಮಿ ಎಂಬ ಎಂಟು ವರುಷದ ಮಗಳಿದ್ದಳು. ಅವಳನ್ನು ಸತ್ಯನಾರಾಯಣರಿಗೆ ಕೊಟ್ಟು ಮದುವೆ ಮಾಡುವ ಉದ್ದೇಶವಿದ್ದರೂ ತಮ್ಮಂತಹವರ ಮಗಳನ್ನು ವಿಶ್ವನಾಥರ ತಂದೆ ಶೋಭನಾದ್ರಿ ಒಪ್ಪುತ್ತಾರೆಯೇ ಎಂಬ ಅನುಮಾನ. ಇದನ್ನು ತಿಳಿದ ಶೋಭನಾದ್ರಿ ಸೀತಾರಾಮಶಾಸ್ತ್ರಿಗಳಿಗೆ ತಾವೇ ಹೇಳಿಕಳುಹಿಸಿ ತಮ್ಮ ಮಗನಿಗೆ ವರಲಕ್ಷ್ಮಿಯನ್ನು ತಂದುಕೊಳ್ಳುವ ಇಚ್ಛೆ ಇದೆ ಎಂದು ತಿಳಿಸಿದರು. ಮದುವೆ ನಡೆಯಿತು.

ಸತ್ಯನಾರಾಯಣರಿಗೆ ಸನಾತನ ಹಿಂದೂಧರ್ಮದಲ್ಲಿ ಅಚಲ ವಿಶ್ವಾಸ ಶ್ರದ್ಧೆಗಳಿದ್ದುವು. ಅವರು ಯಾವುದೇ ಕಥೆ, ಕಾದಂಬರಿ ಪ್ರಬಂಧ ಬರೆದರೂ ಭಾರತೀಯ ಸಂಸ್ಕೃತಿಯ ಬಗ್ಗೆ ಸನಾತನ ಸಂಪ್ರದಾಯಗಳ ಕುರಿತ ಅವರ ದೃಷ್ಟಿ, ಗೌರವ ಆಳವಾದದ್ದು. ಅವರ ಹಿಂದೂ ಮತಾಭಿಮಾನದಿಂದಾಗಿ ಒಮ್ಮೆ ಅವರು ಉದ್ಯೋಗವನ್ನೂ ಕಳೆದುಕೊಂಡರು.

ಗುಂಟೂರಿನಲ್ಲಿ ಅವರು ಕ್ರಿಶ್ಚಿಯನ್ ಮಿಷಿನರಿ ಕಾಲೇಜಿನಲ್ಲಿ ಆಧ್ಯಾಪಕರಾಗಿದ್ದರು. ಆಗ ಕೆಲವು ಬ್ರಹ್ಮ ಸಮಾಜದವರು, ಬ್ರಾಹ್ಮಣರು ಕ್ರೈಸ್ತಮತಾವಲಂಬಿ ಗಳಾದುದನ್ನು ಕಂಡು ತೀವ್ರವಾಗಿ ಖಂಡಿಸಿ ವಿರೋಧಿಸಿದರು. ಇವರ ಗಾಢ ಹಿಂದೂ ಮತಾಭಿಮಾನವನ್ನು ಕಂಡ ಮಿಷಿನರಿ ಕಾಲೇಜಿನವರಿಗೆ ಕೋಪ ಬಂತು. ಇವರನ್ನು ಕೆಲಸದಿಂದ ತೆಗೆದುಹಾಕಿದರು. ಐದು ವರ್ಷಗಳವರೆಗೆ ನಿರುದ್ಯೋಗಿ ಯಾಗಿಯೇ ಇದ್ದರು.

ಆ ಕಾಲದಲ್ಲಿ ಆಂಧ್ರ ವಿಶ್ವವಿದ್ಯಾನಿಲಯದವರು ಸಾವಿರಪುಟಗಳ ಕಾದಂಬರಿ ಬರೆದವರಿಗೆ ಸಾವಿರದೈನೂರು ರೂಪಾಯಿಗಳ ಬಹುಮಾನ ಕೊಡುವುದಾಗಿ ಪ್ರಕಟಿಸಿದರು. ಸಮಯ ಕೇವಲ ಒಂದು ತಿಂಗಳು ಮಾತ್ರ ಇತ್ತು. ೨೫ ದಿನಗಳಲ್ಲಿ ಸಾವಿರ ಪುಟಗಳ ‘ವೇಯಿ ಪಡಗಲು’ ಎಂಬ ಕಾದಂಬರಿ ಬರೆದು ಬಹುಮಾನ ಗಳಿಸಿದರು.

ಸತ್ಯನಾರಾಯಣ ಅಪ್ಪಟ ಹಿಂದೂ ಧರ್ಮಾವ ಲಂಬಿಗಳಾದಂತೆ ಅಮಿತ ದೇಶಭಕ್ತಿಯುಳ್ಳವರಾಗಿದ್ದರು. ಆಗ ಸ್ವಾತಂತ್ರ್ಯದ ಹೋರಾಟ ತೀವ್ರವಾಗಿ ನಡೆಯುತ್ತಿದ್ದ ದಿನಗಳು. ಆಗ ವಿಶ್ವನಾಥ ಸತ್ಯನಾರಾಯಣ ‘ಅವತಾರ ಪರಿವರ್ತನ’ ಎಂಬ ಬಾಲಗಂಗಾಧರ ತಿಲಕ್‌ರ ಜೀವನದ ನಾಟಕವನ್ನೂ ಅನೇಕ ದೇಶಭಕ್ತಿ ಗೀತೆಗಳನ್ನೂ ಬರೆದು ಪ್ರಕಟಿಸಿದರು. ಅವರ ಚಿಕ್ಕ ತಮ್ಮ ಜನಸಮೂಹದಲ್ಲಿ ತೂರಿ ಎಲ್ಲರಿಗೂ ಅವುಗಳನ್ನು ಹಂಚುತ್ತಿದ್ದನಂತೆ. ‘ಅವತಾರ ಪರಿವರ್ತನ’ ನಾಟಕವನ್ನು ಸರ್ಕಾರ ಬಹಿಷ್ಕರಿಸಿತು. ಆಗ ಊರು ಊರಿಗೂ ಹೋಗಿ ದೇಶಭಕ್ತಿ ಗೀತೆಗಳನ್ನು ಪ್ರಚಾರ ಮಾಡಿ ಜನರಲ್ಲಿ ಜಾಗೃತಿ ಯನ್ನುಂಟುಮಾಡಿದರು.

ಅರವತ್ತು ಕಾದಂಬರಿಗಳನ್ನು, ಹನ್ನೆರಡು ಕಾವ್ಯಗಳನ್ನು, ಅನೇಕ ನಾಟಕಗಳನ್ನು, ಸಾವಿರಾರು ಲೇಖನ ಪ್ರಬಂಧಗಳನ್ನು ಬರೆದ ಇವರಿಗೆ ಮೂವತ್ತನೆ ವಯಸ್ಸಿಗೆ ಅಪಾರಕೀರ್ತಿ ಬಂದಿತ್ತು. ಸೋವಿಯೆತ್ ದೇಶದವರು ‘ಭಾರತದ ಪ್ರಮುಖ ಕವಿ’ ಎಂದು ತಮ್ಮ ಅನೇಕ ಪತ್ರಿಕೆಗಳಲ್ಲಿ ಇವರ ವಿಷಯವನ್ನು ಪ್ರಕಟಿಸಿದರು. ಇವರ ಕಥೆಗಳೂ ಕಾದಂಬರಿಗಳೂ ರಷ್ಯನ್ ಭಾಷೆಗೂ ಪ್ರಪಂಚದ ಮತ್ತು ಭಾರತದ ಇತರ ಭಾಷೆಗಳಿಗೂ ಅನುವಾದಗೊಂಡಿವೆ.

ಸತ್ಯನಾರಾಯಣರಲ್ಲಿ ಎರಡು ಗುಣಗಳಿದ್ದವು. ಚಿಕ್ಕಂದಿನಿಂದಲೂ ಕವನಗಳನ್ನು ಬರೆಯುವುದು ಹಾಗೆ ಬರೆದ ಪದ್ಯಗಳನ್ನೂ, ಇತರ ಕವಿಗಳ ಪದ್ಯಗಳನ್ನೂ ಸುಶ್ರಾವ್ಯವಾಗಿ ಹಾಡುವುದು, ಮೂವತ್ತು ನಲವತ್ತು ರಾಗಗಳನ್ನು ಸರಾಗವಾಗಿ ಒಂದರ ಹಿಂದೊಂದರಂತೆ ಹಾಡುತ್ತಿದ್ದರು. ಅವರಿಗೆ ಒಳ್ಳೆಯ ಜ್ಞಾಪಕಶಕ್ತಿ ಇದ್ದಿತು. ಶಾಲೆಯ ಪಠ್ಯಪುಸ್ತಕಗಳನ್ನು ಅವರು ಓದುತ್ತಲೇ ಇರಲಿಲ್ಲ. ಗುರುಗಳು ಹೇಳಿದ ಪಾಠಗಳೂ ಪದ್ಯಗಳೂ ಒಂದೇ ಸಲ ಕೇಳಿದ ಮಾತ್ರಕ್ಕೆ ಬಾಯಿಗೆ ಬರುತ್ತಿದ್ದವು. ಅವರಿಗೆ ಚಿಕ್ಕಂದಿನಿಂದಲೂ ಹರಿಕಥೆ, ನಾಟಕ ಇವುಗಳನ್ನು ನೋಡುವುದರಲ್ಲಿ ತುಂಬ ಆಸಕ್ತಿ. ಇವುಗಳಿಂದ ಪುರಾಣದ ಕಥೆಗಳು ಮಕ್ಕಳ ಮನದಲ್ಲಿ ಬೇರೂರುವ ಉತ್ತಮ ಸಾಧನಗಳೆಂದು ಅವರು ಅಡಿಗಡಿಗೆ ಹೇಳುತ್ತಿದ್ದರು. ಮುಂದೆ ಅವರು ಬರೆದ ಅನೇಕ ನಾಟಕ, ಕಾದಂಬರಿಗಳು ತಾವು ಚಿಕ್ಕಂದಿನಲ್ಲಿ ನೋಡಿದ ಕೇಳಿದ ನಾಟಕ, ಹರಿಕಥೆ ಪುರಾಣಗಳಿಂದ ಸ್ಫೂರ್ತಿ ಪಡೆದವು ಎಂದು ಹೇಳಿದ್ದಾರೆ.

ಅವರು ತಮ್ಮ ಮತ ಮತ್ತು ಸಾಹಿತ್ಯಗಳನ್ನು ಪ್ರೀತಿಸುವಂತೆ ಕಲೆಯ ಬಗ್ಗೆಯೂ ತುಂಬಾ ಅಭಿಮಾನವಿತ್ತು.

ಸತ್ಯನಾರಾಯಣರು ನ್ಯಾಷನಲ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರಮೋದ ಕುಮಾರ ಚಟರ್ಜಿ ಎಂಬ ಖ್ಯಾತ ಕಲಾವಿದರ ಪರಿಚಯವಾಯಿತು. ಅವರು ಕಲ್ಲಿನಲ್ಲಿ ಉತ್ತಮ ಶಿಲ್ಪಗಳನ್ನು ಕೆತ್ತುತ್ತಿದ್ದರಲ್ಲದೇ ಅತ್ತ್ಯುತ್ತಮ ಚಿತ್ರಗಳನ್ನು ಬರೆಯುವುದರಲ್ಲಿಯೂ ಪ್ರಸಿದ್ಧರಾಗಿದ್ದರು. ಅವರು ‘ತ್ರಿಶೂಲ’ ಎಂಬ ಚಿತ್ರ ಬರೆದಾಗ ಅದನ್ನು ನೋಡಿ ಸತ್ಯನಾರಾಯಣ ಬಹಳ ಮೆಚ್ಚಿಕೊಂಡು, ‘ನನಗೊಂದು ರಾಜ್ಯವಿದ್ದಿದ್ದರೆ ನಿಮಗೆ ಆ ರಾಜ್ಯವನ್ನೇ ಕೊಟ್ಟುಬಿಡುತ್ತಿದ್ದೆ’ ಎಂಬ ಉದ್ಗಾರ ತೆಗೆದರಂತೆ. ಆ ಚಿತ್ರದ ಕುರಿತು ಒಂದು ಸುಂದರ ಕವಿತೆಯನ್ನೂ ಬರೆದರು. ಪ್ರಮೋದ್‌ಕುಮಾರ್ ಚಟರ್ಜಿ ಆ ಕಾಲೇಜನ್ನು ಬಿಟ್ಟು ಹೋಗುವಾಗ ವಿಶ್ವನಾಥರೊಡನೆ, ‘ನೀನು ರಾಜ್ಯ ಕಳೆದುಕೊಳ್ಳಬೇಕಿಲ್ಲ. ಈ ತ್ರಿಶೂಲ ಚಿತ್ರವನ್ನು ನಿನಗೆ ಉಡುಗೊರೆಯಾಗಿ ಕೊಡುತ್ತೇನೆ’ ಎಂದು ಆ ಚಿತ್ರ ವಿಶ್ವನಾಥರಿಗೆ ಕೊಟ್ಟರಂತೆ. ಅನಂತರ ವಿಶ್ವನಾಥ ಸತ್ಯನಾರಾಯಣ ‘ತ್ರಿಶೂಲ’ ಎಂಬ ನಾಟಕ ಬರೆದು ಅದರ ಮುಖಪುಟದ ಮೇಲೆ ಆ ಚಿತ್ರದ ಪಡಿಯಚ್ಚನ್ನೇ ಹಾಕಿಸಿದರು.

ವಿಶ್ವನಾಥ ಸತ್ಯನಾರಾಯಣರಿಗೆ ಮಿತ್ರರ ಬಳಗ ಅಪಾರವಾಗಿತ್ತು. ಚಿಕ್ಕಂದಿನಿಂದಲೂ ಅವರ ಸುತ್ತ ಇದ್ದ ಗೆಳೆಯರ ಗುಂಪು ಅವರಿಗೆ ವಯಸ್ಸಾದ ನಂತರವೂ ಅವರನ್ನು ಅಗಲಿರದಿದ್ದುದು ಅವರ ಸ್ನೇಹ ಸೌಹಾರ್ದಗಳಿಗೆ ಉದಾಹರಣೆಗಳಾಗಿವೆ. ಅವರು ಜೀವನದಲ್ಲಿ ಅನೇಕ ಕಷ್ಟನಷ್ಟಗಳನ್ನು ಎದುರಿಸಬೇಕಾಗಿ ಬಂದಾಗ ಅವರ ಸ್ನೇಹಿತರು ಅಡಿಗಡಿಗೆ ಅವರ ನೆರವಿಗೆ ಬಂದರು. ಅವರ ಸಮಸ್ಯೆಗಳನ್ನು ತಮ್ಮ ಸಮಸ್ಯೆಗಳೆಂದೇ ಬಗೆದರು. ವಿಶ್ವನಾಥರು ಸ್ನೇಹಾಕಾಂಕ್ಷಿಗಳಾದಂತೆ ಬಹಳ ಉದಾರ ಹೃದಯಿಗಳೂ ಆಗಿದ್ದರು.

ಸ್ನೇಹಿತರಿಗಾಗಿ ಪ್ರಾಣವನ್ನೇ ಬೇಕಾದರೂ ಕೊಡಬಲ್ಲ ಸ್ನೇಹಜೀವಿಯಾಗಿದ್ದರು ಎಂದು ಅವರ ಸ್ನೇಹಿತರು ಅವರನ್ನು ಹೊಗಳಿದ್ದಾರೆ.

ಸಾಹಿತ್ಯ ರಚನೆ ಪ್ರಾರಂಭ

೧೯೦೯ ರಿಂದ ೧೯೧೫ರ ವರೆಗೆ ವಿಶ್ವನಾಥರ ಕಾವ್ಯಾಭ್ಯಾಸ ನಿರಂತರವಾಗಿ ಸಾಗಿತ್ತು. ಈ ಅವಧಿಯಲ್ಲಿ ಅವರು ಮೂರು ನಾಲ್ಕು ಸಾವಿರ ಪದ್ಯಗಳನ್ನು ಬರೆದು ಹರಿದು ಹಾಕಿದರಂತೆ.

ಅವರಿಗೆ ಇಪ್ಪತ್ತು ವರುಷ ತುಂಬುವ ಹೊತ್ತಿಗೆ ಇಂಟರ್‌ಮೀಡಿಯೇಟ್‌ನಲ್ಲಿದ್ದರು. ಆಗ ತಮ್ಮ ಕುಲ ದೇವರನ್ನು ಕುರಿತು ಬರೆದ ‘ವಿಶ್ವೇಶ್ವರ ಶತಕ’ದಲ್ಲಿ ಅವರ ಪಾಂಡಿತ್ಯ ವ್ಯಕ್ತವಾಗುತ್ತದೆ. ಜತೆಗೆ ಇಂಗ್ಲಿಷ್ ಸಾಹಿತ್ಯದಲ್ಲಿ ಆಸಕ್ತಿ ಬೆಳಸಿಕೊಂಡು ಹಲವಾರು ವಿಮರ್ಶೆಗಳನ್ನು ಬರೆದರು.

ಕೆಲವು ಖಂಡಕಾವ್ಯಗಳನ್ನು ಬರೆದುದಲ್ಲದೆ ‘ಧನ್ಯ ಕೈಲಾಸ’ವೆಂಬ ನಾಟಕ, ‘ಅಂತರಾತ್ಮ’ ಎಂಬ ಕಾದಂಬರಿ ಯನ್ನು ತನ್ನ ವಿದ್ಯಾರ್ಥಿ ದೆಶೆಯಲ್ಲಿ ಸತ್ಯನಾರಾಯಣ ಬರೆದರು.

೧೯೨೦ರಿಂದ ಅವರ ಸಾಹಿತ್ಯ ರಚನೆ ಹೆಚ್ಚಿನ ಹುರುಪಿನಿಂದ ಸಾಗಿತು. ಅವರ ಹೆಸರು ಇಡೀ ತೆಲುಗು ದೇಶದಲ್ಲಿ ವ್ಯಾಪಿಸಿತು.

ಈ ಹೊತ್ತಿಗೆ ಭಾರತದಲ್ಲಿ ಸ್ವಾತಂತ್ರ್ಯ ಹೋರಾಟ ಬಲವಾಯಿತು. ತರುಣರು ಹೋರಾಟದಲ್ಲಿ ಭಾಗವಹಿಸ ಬೇಕು, ದೇಶಕ್ಕಾಗಿ ತ್ಯಾಗ ಮಾಡಬೇಕು ಎಂದು ನಾಯಕರು ಕರೆಕೊಟ್ಟರು. ಉತ್ಸಾಹಿ ತರುಣರಾದ ವಿಶ್ವನಾಥ ಬಿ.ಎ. ತರಗತಿಯಲ್ಲಿ ಓದುತ್ತಿದ್ದರು. ವಿದ್ಯಾಭ್ಯಾಸವನ್ನು ಬಿಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಕೊನೆಗೆ ಬಂದು ರಾಷ್ಟ್ರೀಯ ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿ ೧೯೨೬ರ ವರೆಗೆ ದುಡಿದರು. ದೇಶಕ್ಕಾಗಿ, ಸ್ವಾತಂತ್ರ್ಯಕ್ಕಾಗಿ ಹೋರಾಡುವ ಹಂಬಲ ಅವರಲ್ಲಿ ಅದಮ್ಯವಾಗಿತ್ತು. ಆ ಸಮಯದಲ್ಲಿ ಅವರು ಅನೇಕ ದೇಶಭಕ್ತಿ ಗೀತೆಗಳನ್ನು ಬರೆದರು. ಸತ್ಯನಾರಾಯಣರು ಬರೆದ ‘ಆಂಧ್ರ ಪೌರುಷಮು; ಕಾವ್ಯ ಓದಿ ಅವರನ್ನು ನೋಡಲು ಅನೇಕರು ಬರುತ್ತಿದ್ದರಂತೆ. ವಿರೋಚಿತ ಪದಗಳಿಂದ ಕೂಡಿ ಪೌರುಷ ಉಕ್ಕುವಂತೆ ಬರೆದ ಈ ವ್ಯಕ್ತಿ ಜಗಜಟ್ಟಿಯಾಗಿರಬಹುದೆಂದು ಭಾವಿಸಿ ಜನ ಬಂದು ಇವರನ್ನು ಕಂಡಾಗ ಅವರಿಗಾದುದು ನಿರಾಶೆ! ಕುಳ್ಳಗೆ ಬಡಕಲಾಗಿ ಬಲಹೀನನಂತಿದ್ದ ಸತ್ಯನಾರಾಯಣರನ್ನು ನೋಡಿ ಈ ಪೌರುಷ, ಶೌರ್ಯ ಶರೀರದ್ದಲ್ಲ, ಹೃದಯದ್ದು ಎಂದು ಅಭಿನಂದಿಸಿ ಹೋಗುತ್ತಿದ್ದರು.

ಇಂದು ತೆಲುಗಿನ ಖ್ಯಾತ ಲೇಖಕರಾದ ಅಡವಿ ಬಾಪಿರಾಜು, ಉತ್ತರಪ್ರದೇಶದ ಗವರ‍್ನರರಾಗಿದ್ದ ಬೆಜವಾಡ ಗೋಪಾಲರೆಡ್ಡಿ, ‘ಭಾರತಿ’ ಪತ್ರಿಕೆಯ ಸಂಪಾದಕರಾಗಿದ್ದ ಶಿವಲೆಂಕ ಶಂಭುಪ್ರಸಾದ್ ವಿಶ್ವನಾಥರ ವಾತ್ಸಲ್ಯದ ಶಿಷ್ಯರಾಗಿದ್ದರು.

೧೯೨೩ರಲ್ಲಿ ವಿಶ್ವನಾಥರ ತಂದೆ ಶೋಭನಾದ್ರಿ ಭದ್ರಾಚಲಂ ಪ್ರದೇಶದಲ್ಲಿ ಸ್ವಲ್ಪ ಜಮೀನನ್ನು ಕೊಂಡರು. ದಟ್ಟವಾದ ಕಾಡುಗಳ ಮೂಲಕ ಆ ಪ್ರದೇಶಕ್ಕೆ ಹೋಗಬೇಕಾಗಿತ್ತು. ದಾರಿಯಲ್ಲಿ ‘ಕಿನ್ನರಸಾನಿ ವಾಟಲು’ ಎಂಬ ಹೊಳೆ ಇತ್ತು. ಸುಂದರವಾದ ಆ ಹೊಳೆ ‘ಕಿನ್ನರಸಾನಿ’ ಎಂಬ ಕಾವ್ಯದ ಕಲ್ಪನೆಗೆ ಸ್ಫೂರ್ತಿ ಇತ್ತಿತು. ಜೊತೆಗೆ ‘ಕೋಕಿಲಮ್ಮ ಪೆಂಡ್ಲಿ’ ಎಂಬ ಗೇಯಕಾವ್ಯವನ್ನೂ ಬರೆದರು.

ಸತ್ಯನಾರಾಯಣ ಅವರು ‘ಗಿರಿಕುಮಾರ’ ಎಂಬ ಹೆಸರಿನಲ್ಲಿ ಪ್ರೇಮಗೀತೆಯನ್ನೂ ರಚಿಸಿದರು. ಅವು ಸ್ವಲ್ಪಕಾಲದಲ್ಲಿ ಜನಪ್ರಿಯವಾದವು.

ಪತ್ರಿಕಾ ಸಂಪಾದಕರಾಗಿ

೧೯೨೭ರಲ್ಲಿ ವಿಶ್ವನಾಥ ತಮ್ಮ ಸ್ನೇಹಿತರ ಜೊತೆಗೂಡಿ ‘ಜಯಂತಿ’ ಎಂಬ ತೆಲುಗು ಪತ್ರಿಕೆಯನ್ನು ಆರಂಭಿಸಿದರು. ಎಷ್ಟೇ ಉತ್ಸಾಹದಿಂದ ಕೆಲಸ ಮಾಡಿದರೂ ‘ಜಯಂತಿ’ ಒಂದು ವರುಷದ ಮೇಲೆ ನಡೆಯಲಿಲ್ಲ.

ವಿಶ್ವನಾಥರು ೧೯೨೮-೨೯ರಲ್ಲಿ ಮಚಲೀಪಟ್ಟಣದ ಹಿಂದೂ ಕಾಲೇಜು ಅಧ್ಯಾಪಕರಾದರು. ಆಗ ಮದರಾಸ್ ವಿಶ್ವವಿದ್ಯಾನಿಲಯದ ಎಂ.ಎ. ಪರೀಕ್ಷೆಗೆ ಕುಳಿತಿದ್ದರು. ಆಗ ಒಂದು ಘಟನೆ ನಡೆಯಿತು.

ಎಂ.ಎ. ಅಂತಿಮ ತರಗತಿಯ ಪರೀಕ್ಷಾಪತ್ರಿಕೆಯಲ್ಲಿ ಕೊಟ್ಟ ಪ್ರಶ್ನೆಗಳಲ್ಲಿ ಒಂದು ಪ್ರಶ್ನೆ ಹೀಗಿತ್ತು-

‘ವೇಣೀ ಸಂಹಾರ ನಾಟಕದ ನಾಯಕನಾರು?’ ವಿಶ್ವನಾಥರು ಅದೊಂದೇ ಪ್ರಶ್ನೆ ತೆಗೆದುಕೊಂಡು ಎಂಬತ್ತು ಪುಟ ಉತ್ತರ ಬರೆದರಂತೆ.

ಆ ಉತ್ತರವೇ ಪ್ರೌಢ ಪ್ರಬಂಧವಾಗಿ ಇಂದಿಗೂ ಎಂ.ಎ. ತರಗತಿಯ ವಿದ್ಯಾರ್ಥಿಗಳು ಅಧ್ಯಯನ ಮಾಡುವ ಪುಸ್ತಕವಾಗಿದೆ.

ಅಘಾತಗಳು

೧೯೩೨ರಲ್ಲಿ ಸತ್ಯನಾರಾಯಣ ಗುಂಟೂರಿನ ಎ.ಪಿ. ಕಾಲೇಜಿನ ಅಧ್ಯಾಪಕರಾದರು. ಈ ಕಾಲದಲ್ಲೇ ಅವರಿಗೆ ಹಲವು ಆಘಾತಗಳು ಒದಗಿದವು. ಅವರ ಹೆಂಡತಿ ತೀರಿಕೊಂಡರು. ಆಗಲೇ ಅವರ ಪ್ರಿಯಮಿತ್ರ ಕೊಡಾಲಿ ವೆಂಕಟಸುಬ್ಬರಾವ್ ತೀರಿಕೊಂಡ. ತಮ್ಮ ದುಃಖ ಮರೆತು ಆತನ ‘ಹಂಪಿ ಕ್ಷೇತ್ರ’ ಕಾವ್ಯ ಪ್ರಕಟಿಸಿ ಅದರಿಂದ ಬಂದ ಹಣವನ್ನು ಮಿತ್ರನ ಕುಟುಂಬಕ್ಕೆ ನೀಡಿ ಸಹಾಯ ಮಾಡಿದರು.

ಹೆಂಡತಿ ಮತ್ತು ಮಗ ತೀರಿಕೊಂಡನಂತರ ಅವರ ಜೀವನದಲ್ಲಿ ಉದಾಸೀನ, ವೈರಾಗ್ಯ ಭಾವನೆ ಬೆಳೆಯ ತೊಡಗಿತು. ಶ್ರೀ ಕಲ್ಯಾಣಾನಂದ ಭಾರತೀ ಸ್ವಾಮಿಗಳ ಬಳಿ ಉಪನಿಷತ್ ಭಾಷ್ಯ ಕಲಿಯತೊಡಗಿ ಅನೇಕ ವೇದಾಂತ ಕೃತಿಗಳನ್ನು ಬರೆದರು. ನೌಕರಿಯನ್ನು ಬಿಟ್ಟರು. ಮನೆಯಲ್ಲಿಯೇ ಇದ್ದು ಬರೆಯಲಾರಂಭಿಸಿದರು.

ಸತ್ಯನಾರಾಯಣರು ರಾಮಮಂತ್ರದ ಉಪಾಸಕ ರಾಗಿದ್ದರು. ಆಂಜನೇಯ ಮತ್ತು ಶಿವಪಂಚಾಕ್ಷರಿ ಮಂತ್ರಗಳನ್ನು ಜಪಮಾಡುತ್ತಿದ್ದರು.

ಸತ್ಯನಾರಾಯಣ ಅವರು ಅನೇಕ ಕೃತಿಗಳನ್ನು ಬರೆದರು. ಅವರು ಬರೆದ ಪುಸ್ತಕಗಳನ್ನೆಲ್ಲ ಸೇರಿಸಿದರೆ ಒಂದೂವರೆ ಲಕ್ಷ ಪುಟಗಳಿಗೂ ಹೆಚ್ಚಾಗುತ್ತದೆ. ಆದರೆ ‘ಏಕವೀರ’ ಕಾದಂಬರಿ ಬಿಟ್ಟರೆ ಉಳಿದ ಗ್ರಂಥಗಳನ್ನೆಲ್ಲ ಅವರು ಹೇಳುತ್ತಾ ಹೋದಂತೆ ಇತರರು ಬರೆದುಕೊಂಡರು. ಅವರೇ ಒಂದು ಕಡೆ ಹೇಳಿದ್ದಾರೆ, ‘ನನಗೆ ಬರೆಯಲು ಮೇಜು ಕುರ್ಚಿಗಳಿಲ್ಲ. ನಾನು ಹೇಳುತ್ತ ಹೋದಂತೆ ನನ್ನ ಶಿಷ್ಯರು ಬರೆದುಕೊಳ್ಳುತ್ತಿದ್ದರು.’

ಅಗಾಧ ಪ್ರಮಾಣದಲ್ಲಿ ಸಾಹಿತ್ಯ ಗ್ರಂಥಗಳನ್ನು ರಚಿಸಿದ ಸಾಹಿತಿಗಳಲ್ಲಿ ವಿಶ್ವನಾಥರೂ ಒಬ್ಬರು. ಅವರು ಕೃತಿರಚನೆ ಪ್ರಾರಂಭಿಸಿದರೆಂದರೆ ತಡೆಯಿಲ್ಲದೆ ಅದು ಮುಂದುವರಿ ಯುತ್ತಿತ್ತು. ಅವರು ಸ್ವಲ್ಪ ಕಾಲದಲ್ಲಿ ಎಷ್ಟು ಕಾವ್ಯ ಕಾದಂಬರಿಗಳನ್ನು ರಚಿಸಿ ಮುಗಿಸುತ್ತಿದ್ದರೆಂಬುದು ಬೆರಗುಮಾಡುವ ಸಂಗತಿ. ಅವರ ಶಿಷ್ಯರಾಗಿದ್ದ ‘ವಿದುರ’ರು ‘ದಿನಕ್ಕೆ ಹತ್ತು ಗಂಟೆಗಳಂತೆ ಏಕಪ್ರಕಾರವಾಗಿ ಒಂದು ಚಲನಚಿತ್ರಕ್ಕೆ ಬೇಕಾಗುವ ಕಥೆ, ಸಂಭಾಷಣೆ, ಪದ್ಯಗಳು, ವರ್ಣನೆಗಳು ಮುಂತಾದ ಎಲ್ಲ ಸಾಹಿತ್ಯವನ್ನು ಈಗ್ಗೆ ಇಪ್ಪತ್ತು ವರುಷಗಳ ಕೆಳಗೆ ಅವರು ಹೇಳುತ್ತಾ ಹೋದಂತೆ ನಾನೇ ಬರೆಯುತ್ತಿದ್ದೆ. ಎರಡೂವರೆ ದಿನಗಳಲ್ಲಿ ಈ ಕೆಲಸವನ್ನು ಮುಗಿಸಿಬಿಟ್ಟರು. ಈಗ ಅವರು ಒಂದು ಕಾದಂಬರಿಯನ್ನು ಎರಡೇ ದಿನಗಳ ಕಾಲ ಹೇಳಿ ಟೇಪ್‌ರಿಕಾರ್ಡ್ ಮಾಡುತ್ತಿದ್ದಾರೆ. ಪಕ್ಕದಲ್ಲಿ ನಕಾಶೆಯೊಂದು, ಅಡಕೆಪುಡಿ ಶೀಸೆ, ಒಂದು ಚೆಂಬು ನೀರು ಇಟ್ಟುಕೊಂಡು ‘ಪೇಯಿ ಪಡಗಲು’ ಬೃಹತ್ ಕಾದಂಬರಿಯನ್ನು ೨೮ ದಿನಗಳಲ್ಲಿ ಉಕ್ತಲೇಖನದಲ್ಲಿ ಬರೆಸಿದರು’ ಎಂದು ಬೆರಗುಗೊಂಡಿದ್ದಾರೆ.

ಮಹಾಕಾವ್ಯದ ದೀಕ್ಷೆ

ಸತ್ಯನಾರಾಯಣರ ತಂದೆ ತಮ್ಮ ಮಗ ದೊಡ್ಡ ಅಧಿಕಾರಿಯಾಗಲೆಂದು ಆಶಿಸಿದ್ದರು. ಆದರೆ ಮಗ ಯಾವಾಗಲೂ ಪದ್ಯ, ಕವಿತೆ, ಕಥೆಗಳನ್ನು ಬರೆಯುತ್ತ ಆಗಾಗ ಕೆಲಸ ಬಿಡುತ್ತಾ ಇರುವುದು ಅವರಿಗೆ ಸರಿಕಾಣಲಿಲ್ಲ. ಜೊತೆಗೆ ವಿಶ್ವನಾಥರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುವ ಹುಮ್ಮಸ್ಸು, ಅವರು ಬರೆದ ದೇಶಭಕ್ತಿ ಗೀತೆಗಳಾಗಲೀ ಇತರ ಕಾವ್ಯ ಕಾದಂಬರಿಗಳಾಗಲೀ ತಂದೆಯನ್ನು ಮೆಚ್ಚಿಸಲಾರದೇ ಹೋದವು.

‘ಬರೆದರೆ ಶ್ರೀರಾಮಚಂದ್ರನ ಕಥೆ ಬರೆದವನು ಎನ್ನಿಸಿಕೋ’ಎಂದು ಮಗನಿಗೆ ಉಪದೇಶ ಮಾಡಿದರು. ಅದಕ್ಕೆ ಹಿಂದೆಯೇ ಸತ್ಯನಾರಾಯಣ ರಾಮಕಥೆಗೆ ಸಂಬಂಧಿಸಿದ ಎರಡು ಖಂಡಕಾವ್ಯಗಳನ್ನು ಬರೆದಿದ್ದರು. ಅಸುರಲಕ್ಷ್ಮಿ ಸಾಂತ್ವನಮು’, ‘ದೂತವಾಕ್ಯಮು’ ಇವು ರಾಮಾಯಣದ ಸಂದರ್ಭಗಳುಳ್ಳ ಪುಟ್ಟ ಕಾವ್ಯಗಳು.

ಪುನಃ ೧೯೩೬ರ ನಂತರ ‘ಶ್ರೀ ಮದ್ರಾಮಾಯಣ ಕಲ್ಪವೃಕ್ಷಮು’ ಮಹಾಕಾವ್ಯವನ್ನು ಬರೆಯಲು ಆರಂಭಿಸಿದರು. ಈ ದಿನಗಳಲ್ಲಿ ವಿಶ್ವನಾಥರ ಪಾಂಡಿತ್ಯ ಪ್ರತಿಭೆ, ರಚನಾಶಕ್ತಿಗಳು ಸಾವಿರಮುಖದಲ್ಲಿ ಹೊರಹೊಮ್ಮಿದ ‘ಸಾವಿರ ಹೆಡೆಗಳು’ (ವೇಯಿ ಪಡಗಲು) ಬೃಹತ್ ಕಾದಂಬರಿಗೆ ಆಂಧ್ರ ವಿಶ್ವವಿದ್ಯಾನಿಯದವರು ಬಹುಮಾನವಿತ್ತರು. ಜೊತೆಗೆ ‘ಕವಿ ಸಾಮ್ರಾಟ್’ ಎಂಬ ಬಿರುದೂ ಬಂತು.

ಇಷ್ಟೆಲ್ಲ ಪ್ರಸಿದ್ಧಿ ಪಡೆದರೂ, ಸರ್ವರೂ ಮೆಚ್ಚಬಹುದಾದ ಪಾಂಡಿತ್ಯ ಗಳಿಸಿದ್ದರೂ ಅವರಿಗೆ ಗರ್ವ ಲವಲೇಶವೂ ಇರಲಿಲ್ಲ. ೧೯೪೦ರಲ್ಲಿ ನವ್ಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಒಮ್ಮೆ ಅದುವರೆಗೆ ಬೆಳೆದು ಬಂದ ಆಧುನಿಕ ಆಂಧ್ರಸಾಹಿತ್ಯದ ಸಮೀಕ್ಷೆ ಮಾಡುವ ಕೆಲಸ ಅವರದಾಗಿತ್ತು. ಅದುವರೆಗೆ ಸೃಷ್ಟಿಯಾಗಿದ್ದ ಆಧುನಿಕ ತೆಲುಗು ಸಾಹಿತ್ಯದ ಪರಿಚಯವನ್ನು ಮನಮುಟ್ಟುವಂತೆ ಮಾಡಿಕೊಟ್ಟರು. ಆದರೆ ತಮ್ಮ ಒಂದೆ ಒಂದು ಕೃತಿಯನ್ನೂ ಹೆಸರಿಸಲಿಲ್ಲ.

ಸನ್ಮಾನ

ಸತ್ಯನಾರಾಯಣ ರಸತರಂಗಿಣಿ ಎಂಬ ಮುದ್ರಣಾಲಯ ವೊಂದನ್ನು ಸ್ಥಾಪಿಸಿ ತಮ್ಮ ಪುಸ್ತಕಗಳನ್ನು ತಾವೇ ಅಚ್ಚುಮಾಡಿ ಕೊಳ್ಳಲಾರಂಭಿಸಿದರು. ರಾಮಾಯಣ ರಚನೆ ಯೊಂದಿಗೆ ಹಲವು ಕಾದಂಬರಿಗಳನ್ನೂ, ಹಲವಾರು ಕಾವ್ಯಗಳನ್ನೂ, ಉತ್ತಮ ವಿಮರ್ಶೆಗಳನ್ನೂ ಬರೆದರು. ತೆಲುಗು ಪ್ರಾಚೀನ ಕಾವ್ಯಗಳ ಕುರಿತಾದ ಅವರ ವಿಮರ್ಶಾತ್ಮಕ ಲೇಖನಗಳು ಹೆಚ್ಚು ಪ್ರಸಿದ್ಧಿಯಾಗಿವೆ. ರಾಮಾಯಣದ ಅಯೋಧ್ಯಾ ಕಾಂಡವು ಮುಗಿಯಿತು. ಅವರ ಹಲವಾರು ಕಾವ್ಯಗಳೂ, ಕಾದಂಬರಿಗಳೂ ಪ್ರಕಟವಾದವು. ಗುಡಿವಾಡ ದಲ್ಲಿ ಅವರ ಅಭಿಮಾನಿಗಳಾದ ಸಾಹಿತಿ ಮಿತ್ರರು ಅವರಿಗೆ ಗಜಾರೋಹಣ ಮಾಡಿಸಿ (ಆನೆ ಅಂಬಾರಿಯಲ್ಲಿ ಕೂಡಿಸಿ) ಮೆರವಣಿಗೆ ಮಾಡಿ ಸನ್ಮಾನ ಮಾಡಿದರು.

ಇಂತಹ ದಿಟ್ಟ ಕವಿ, ವಿಮರ್ಶಕ, ಕಾದಂಬರಿಕಾರ, ವಿದ್ವಾಂಸ ಇನ್ನೊಬ್ಬರಿಲ್ಲ ಎನ್ನುವಷ್ಟರಮಟ್ಟಿಗೆ ಅವರ ವಿದ್ವತ್ತು. ಅಂತೆಯೇ ಅವರ ಪ್ರತಿಭೆಗೆ ಸಿಕ್ಕ ಪುರಸ್ಕಾರ ೧೯೬೩ಲ್ಲಿ ಕಲ್ಕತ್ತೆಯಲ್ಲಿ ಸತ್ಯನಾರಾಯಣರಿಗೆ ‘ಪುಷ್ಟ ಕಿರೀಟ’ವಿಟ್ಟು ಸನ್ಮಾನಮಾಡಿದರು. ಅದೇ ವರುಷ ವಂಗಸಾಹಿತ್ಯ ಪರಿಷತ್ತು ಅವರಿಗೆ ಸನ್ಮಾನಮಾಡಿತು. ಆಗ ಸುಮಾರು ಮೂರು ಗಂಟೆ ಕಾಲ ಸಂಸ್ಕೃತದಲ್ಲಿ ನಿರರ್ಗಳವಾಗಿ ಉಪನ್ಯಾಸ ಮಾಡಿದ್ದು ಕೇಳಿ ಜನ ದಂಗು ಬಡಿದರಂತೆ. ತರ್ಕ, ಮೀಮಾಂಸದಲ್ಲಿ ಅವರಿಗಿದ್ದ ಅಪಾರ ಪಾಂಡಿತ್ಯ ನೋಡಿ ಬೆರಗಾದರಂತೆ.

ಕಲಾಪ್ರಪೂರ್ಣ ಬಿರುದು

೧೯೬೪ರಲ್ಲಿ ಆಂಧ್ರ ವಿಶ್ವವಿದ್ಯಾನಿಲಯ ಅವರಿಗೆ ‘ಕಲಾಪ್ರಪೂರ್ಣ’ ಬಿರುದಿತ್ತು ಸನ್ಮಾನಮಾಡಿತು.

ನಂತರ ಆಂಧ್ರ ಶಾಸನ ಮಂಡಳಿಯ ಸದಸ್ಯರಾದರು. ರಾಜಕೀಯದಲ್ಲಿದ್ದರೂ ಅವರು ತಮ್ಮ ಸಾಹಿತ್ಯಸೇವೆ ಬಿಡಲಿಲ್ಲ.

೧೯೭೦ರಲ್ಲಿ ಕೇಂದ್ರಸರ್ಕಾರ ವಿಶ್ವನಾಥರಿಗೆ ‘ಪದ್ಮಭೂಷಣ’ ಪದವಿಯನ್ನು ಕೊಟ್ಟು ಸತ್ಕರಿಸಿತು. ಅದೇ ವರ್ಷ ಕೇಂದ್ರ ಸಾಹಿತ್ಯ ಅಕಾಡೆಮಿಯ ವಿಶೇಷ ಸದಸ್ಯತ್ವ (ಫೆಲೋಷಿಪ್) ಲಭಿಸಿತು. ಆಗ ಆಂಧ್ರದ ಮುಖ್ಯ ಮಂತ್ರಿಗಳಾಗಿದ್ದ ಪಿ.ವಿ.ನರಸಿಂಹರಾವ್ ಅವರು ವೇಯಿ ಪಡಗಲು ಕಾದಂಬರಿಯನ್ನು ಹಿಂದಿಗೆ ಅನುವಾದ ಮಾಡಿದರು.

೧೯೭೧ರಲ್ಲಿ ತಿರುಪತಿ ವಿಶ್ವವಿದ್ಯಾನಿಲಯವು ಅವರಿಗೆ ‘ಡಾಕ್ಟರೇಟ್’ ಪದವಿ ಕೊಟ್ಟಿತು. ಅದೇ ವರುಷ ‘ಶ್ರೀಮದ್ರಾಮಾಯಣ ಕಲ್ಪವೃಕ್ಷಮು’ ಕೃತಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿತು.

೧೯೭೬ರಲ್ಲಿ ವಿಶ್ವನಾಥರಿಗೆ ವಿಜಯವಾಡದಲ್ಲಿ ಅವರ ಅಭಿಮಾನಿಗಳು ಸುವರ್ಣ ಪುಷ್ಪಾರ್ಚನೆಯನ್ನು ಅದ್ದೂರಿ ಯಿಂದ ಮಾಡಿದರು.

ಜನಪ್ರಿಯತೆ

ವಿಶ್ವನಾಥ ಸತ್ಯನಾರಾಯಣರು ತಮ್ಮ ಸಾಹಿತ್ಯ ರಚನೆಯಿಂದಾಗಿ ಆಂಧ್ರದಲ್ಲಿ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ಪ್ರಾರಂಭದ ಕೃತಿಗಳೇ ಅವರಿಗೆ ಓದುಗರ ಮೆಚ್ಚುಗೆಯನ್ನು ತಂದುಕೊಟ್ಟವು. ಅನಂತರದ ಕೃತಿಗಳ ಭಾಷೆ ಸ್ವಲ್ಪ ಕ್ಲಿಷ್ಟ. ಸಂಸ್ಕೃತ ಪದಗಳು ಹೆಚ್ಚು. ಆದರೆ ತಾಳ್ಮೆಯಿಂದ ಓದುವವರಿಗೆ ದೊರೆಯುವ ಪ್ರತಿಫಲ ಬೇಕಾದಷ್ಟು.

ಒಮ್ಮೆ ‘ಜಯಂತಿ’ ಪತ್ರಿಕೆಗಾಗಿ ಹಣ ಸಂಗ್ರಹಿಸಲು ತಮ್ಮ ಮಿತ್ರರೊಡನೆ ಪರ‍್ಲಾಕಿಮಿಡಿಯ ಜಮೀನುದಾರರನ್ನು ನೋಡಲು ಹೋದರು. ಜಮೀನುದಾರ ಊರಿನಲ್ಲಿ ಇರಲಿಲ್ಲ. ಹವಾ ಬದಲಾವಣೆಗೆಂದು ಬೇರೊಂದು ಊರಿನ ಸಮುದ್ರದ ಬಳಿಯಿದ್ದ ತನ್ನ ಬಂಗಲೆಯಲ್ಲಿದ್ದ, ಯಾರನ್ನೋ ಕೇಳಿ ಕಾರು ತೆಗೆದುಕೊಂಡು ಅವರು ಜಮೀನುದಾರನ ಬಂಗಲೆ ತಲುಪುವ ಹೊತ್ತಿಗೆ ಕತ್ತಲಾಗಿತ್ತು. ಸತ್ಯನಾರಾಯಣ ಕಾರಿನಲ್ಲಿ ನಿದ್ರಿಸುತ್ತಿದ್ದರು. ಅವರ ಮಿತ್ರರು ಬಂಗಲೆಯ ಗೇಟಿನ ಬಳಿ ಕಾವಲು ಕಾಯುತ್ತಿದ್ದ ಗೂರ್ಖನೊಂದಿಗೆ ಹೇಳಿದರು-

‘ವಿಶ್ವನಾಥ ಸತ್ಯನಾರಾಯಣ ಬಂದಿದ್ದಾರೆಂದು ನಿಮ್ಮ ಜಮೀನುದಾರರಿಗೆ ಹೇಳು.?

ಗೂರ್ಖಾ ಸಿಡುಕಿ,

‘ಯಾರೇ ಬಂದರೂ ಇಷ್ಟು ಹೊತ್ತಿನಲ್ಲಿ ಅವರನ್ನು ಎಬ್ಬಿಸಲು ನನಗೆ ಅಪ್ಪಣೆ ಇಲ್ಲ’ ಎಂದ.

ಈ ಮಾತು ಹೇಗೆ ಕೇಳಿಸಿತೋ. ಜಮೀನುದಾರರು ಬಂದವರು ಯಾರೆಂದು ಮಹಡಿಯಿಂದಲೇ ಕೇಳಿದರು. ಗೂರ್ಖಾ ಹೇಳಿದ

ಕೂಡಲೇ ಜಮೀನುದಾರರು ಇಳಿದು ಗೇಟಿನ ತನಕ ಬಂದು ವಿಶ್ವನಾಥರನ್ನು ಅವರ ಗೆಳೆಯರನ್ನೂ ವಿಶ್ವಾಸದಿಂದ ಒಳಗೆ ಕರೆದೊಯ್ದರು. ಅವರನ್ನು ಮನಃಪೂರ್ವಕವಾಗಿ ಸತ್ಕರಿಸಿದರು. ಮಾರನೆ ದಿನ ಅವರು ಹೊರಟುನಿಂತಾಗ ಹಣ ಕೇಳಲು ವಿಶ್ವನಾಥ ಹಿಂದೇಟು ಹೊಡೆಯುತ್ತಿದ್ದುದ್ದನ್ನು ನೋಡಿ ಜಮೀನುದಾರರು ಚೆಕ್ಕು ಪುಸ್ತಕ ತೆಗೆದು ಒಂದು ಹಾಳೆಯ ಮೇಲೆ ಸಹಿ ಹಾಕಿದರು. ಸತ್ಯನಾರಾಯಣರ ಕೈಗೆ ಕೊಡುತ್ತ “ಎಷ್ಟು ಹಣ ಬೇಕೋ ಅದನ್ನು ನೀವೇ ಬರೆದುಕೊಳ್ಳಿ’ ಎಂದಾಗ ಅವರು ದಿಗ್ಭ್ರಮೆಗೊಂಡರು.

ಇಂತಹ ಅಪಾರ ಜನಪ್ರಿಯತೆ ಗಳಿಸಿದ ಸಾಹಿತಿ ವಿಶ್ವನಾಥ ಸತ್ಯನಾರಾಯಣ ಅವರು.

ಸಾಹಿತ್ಯ ಶ್ರೀಮಂತಿಕೆ

ಆಡು ಮುಟ್ಟದ ಸೊಪ್ಪು ಇಲ್ಲ ಎಂಬಂತೆ ವಿಶ್ವನಾಥ ಅವರು ಬಳಸದ ಸಾಹಿತ್ಯ ಪ್ರಭೇದಗಳಿಲ್ಲ. ಮಹಾಕಾವ್ಯ, ಲಘುಕಾವ್ಯ, ಖಂಡಕಾವ್ಯ, ನಾಟಕ, ಕಾದಂಬರಿ, ಸಣ್ಣಕಥೆ, ವಿಮರ್ಶೆ ಎಲ್ಲ ಬಗೆಯ ರಚನೆಗಳನ್ನು ಅವರು ಮಾಡಿದ್ದಾರೆ. ಅಲ್ಲದೆ ಪ್ರತಿಯೊಂದು ಪ್ರಭೇದದಲ್ಲಿಯೂ ತಮ್ಮದೇ ಸರ್ವಶ್ರೇಷ್ಠ ಕೃತಿ ಎಂಬ ಅಗ್ಗಳಿಕೆಯನ್ನು ಗಳಿಸಿಕೊಂಡರು. ತೆಲುಗಿನಲ್ಲೇ ಅಲ್ಲದೆ ಸಂಸ್ಕೃತದಲ್ಲಿಯೂ ಕಾವ್ಯ, ನಾಟಕ ಗಳನ್ನೂ ಬರೆದಿದ್ದಾರೆ. ಅವರ ಕೃತಿಗಳ ಸಂಖ್ಯೆ ನೂರಕ್ಕೆ ಮೀರಿದೆ. ಇಪ್ಪತ್ತು ಸಾವಿರ ಪದ್ಯಗಳನ್ನು ಪ್ರಕಟಿಸಿದರು. ಅದಕ್ಕೆ ಎರಡರಷ್ಟು ಬರೆದು ಹರಿದುಹಾಕಿದರು.

ಅವರ ಕೃತಿಗಳ ಪೈಕಿ ಬಹಳ ಪ್ರಸಿದ್ಧವಾದ ಕೆಲವು ಕೃತಿಗಳ ಸಂಗ್ರಾಹ್ಯ ಪರಿಚಯ ಮಾಡಿಕೊಳ್ಳೋಣ.

ಶ್ರೀಮದ್ರಾಮಾಯಣ ಕಲ್ಪವೃಕ್ಷಮು

ಶ್ರೀಮದ್ರಾಮಾಯಣ ಕಲ್ಪವೃಕ್ಷಮು ವಿಶ್ವನಾಥ ಅವರ ಮೇರುಕೃತಿ. ವಾಲ್ಮೀಕಿ ರಾಮಾಯಣದಂತೆ ಇದನ್ನು ಆರು ಕಾಂಡಗಳಾಗಿ ವಿಂಗಡಿಸಲಾಗಿದೆ. ಒಂದೊಂದು ಐದು ಖಂಡಗಳು. ಒಂದೊಂದು ಖಂಡದಲ್ಲಿ ಸುಮಾರು ನಾನ್ನೂರು ಪದ್ಯಗಳು. ಅಂದರೆ ಒಟ್ಟು ಹನ್ನೆರಡು ಸಾವಿರಕ್ಕೂ ಮೇಲ್ಪಟ್ಟು ಪದ್ಯಗಳಿವೆ. ಇದರಲ್ಲಿ ವಿಶ್ವನಾಥ ಅವರು ಬಳಸಿದ ಛಂದೋ ವೈವಿಧ್ಯ ಬಹಳ. ಪ್ರಾಯಶಃ ಛಂದಶಾಸ್ತ್ರ ಗ್ರಂಥಗಳನ್ನು ಬಿಟ್ಟರೆ ಯಾವ ಕಾಲದಲ್ಲಿಯೂ ಯಾವ ಕವಿಯೂ ಇಷ್ಟು ಛಂದಸ್ಸುಗಳನ್ನು ಬಳಸಿಲ್ಲ. ಇದರ ಶೈಲಿ ಕೆಲವು ಕಡೆ ನಾರೀಕೇಳ ಪಾಕವನ್ನು ಮೀರಿ ಪಾಷಾಣಪಾಕ ವೆನಿಸಿಕೊಂಡರೆ ಕೆಲವು ಕಡೆ ದ್ರಾಕ್ಷಾಪಾಕವಾಗಿರುತ್ತದೆ. ಸಂಸ್ಕೃತ ಮತ್ತು ತೆಲುಗು ಭಾಷೆಗಳೆರಡರ ಮೇಲೂ ವಿಶ್ವನಾಥ ಅವರಿಗೆ ಉಳ್ಳ ಪ್ರಭುತ್ವಕ್ಕೆ ಇದು ಸಾಕ್ಷಿ. ಅವರದು ಗ್ರಾಂಥಿಕ ಭಾಷೆಯಾದರೂ ಅದರಲ್ಲಿ ಅವರು ಆಡುನುಡಿಯ ಸೊಬಗನ್ನು ತಂದಿದ್ದಾರೆ. ‘ನನ್ನದು ವ್ಯವಹಾರ ಭಾಷೆ’ ಎಂದೂ ಅವರು ಹೇಳಿಕೊಂಡರು. ಇದು ವಾಲ್ಮೀಕಿ ರಾಮಾಯಣದ ಅನುವಾದವಲ್ಲ. ರಾಮನ ಕಥೆಯ ಚೌಕಟ್ಟನ್ನು ತೆಗೆದುಕೊಂಡು ಮಾಡಿದ ಸ್ವತಂತ್ರ ರಚನೆ. ’ನಾನು ಯಾರ ಎಂಜಲನ್ನು ಮುಟ್ಟುವುದಿಲ್ಲ’ ಎಂಬುದು ವಿಶ್ವನಾಥರ ಹೆಮ್ಮೆಯ ಹೇಳಿಕೆ. ವಾಲ್ಮೀಕಿಯ ಎಂಜಲನ್ನು ಸಹ ಅವರು ಮುಟ್ಟಲಿಲ್ಲ. ಕಥೆಯನ್ನು ಬಿಟ್ಟು, ಭಾವನೆಗಳು ವರ್ಣನೆಗಳು ಎಲ್ಲಾ ವಿಶ್ವನಾಥರ ಸ್ವಂತದ್ದು. ‘ಇದು ವಾಲ್ಮೀಕಕ್ಕೆ ಭಾಷ್ಯ’ ಎಂದು ಅವರು ಹೇಳುತ್ತಿದ್ದರು. ತ್ರೇತಾಯುಗದಲ್ಲಿ ಉತ್ತರ ಭಾರತದಲ್ಲಿ ರಾಮನ ಜೀವನ ಕಥೆಯನ್ನು  ಆಧುನಿಕ ಯುಗದಲ್ಲಿ ತೆಲುಗು ದೇಶದಲ್ಲೇ ನಡೆಯಿತೇನೋ ಎಂಬಂತೆ ನವ್ಯವಾಗಿ ಅವರು ಬರೆದರು. ‘ತೆಲುಗು ನಾಡಿನ ಹಳ್ಳಿಗಳ ಅನುಭವವಿಲ್ಲದವರಿಗೆ ನನ್ನ ಕಾವ್ಯದ ಶೋಭೆ ಅರ್ಥವಾಗುವುದಿಲ್ಲ’ ಎಂದು ಹೇಳುತ್ತಿದ್ದರು. ವಾಲ್ಮೀಕಿಯ ಕಥೆಯಲ್ಲಿ ವಿಶ್ವನಾಥರು ಅಲ್ಲಲ್ಲಿ ಮಾರ್ಪಾಟು ಮಾಡಿದ್ದಾರೆ. ಕೆಲವು ಹೊಸ ಕಲ್ಪನೆಗಳನ್ನು ಮಾಡಿದ್ದಾರೆ. ಯುದ್ಧಕ್ಕೆ ಮುಂಚೆ ಶ್ರೀರಾಮ ಸೀತೆಯೆಡೆಗೆ ಒಂದು ಹಂಸದ ಮುಖಾಂತರ ಸಂದೇಶವನ್ನು ಕಳಿಸುವುದು ಇವರ ಸುಂದರವಾದ ಒಂದು ಕಲ್ಪನೆ. ಶ್ರೀರಾಮನು ಕ್ಷೇಮವಾಗಿ ಬಂದರೆ ತಾನು ಅಗ್ನಿ ಪ್ರವೇಶಮಾಡುವೆನೆಂದು ಸೀತೆಯು ಹರಸಿಕೊಂಡಳೆಂಬುದು ಮತ್ತೊಂದು ಅದ್ಭುತ ಕಲ್ಪನೆ. ಪಾತ್ರಗಳ ಚಿತ್ರಣವೂ ವಿಶಿಷ್ಟವಾಗಿದೆ. ವಿಶ್ವನಾಥರ ಕೈಕೇಯಿ ಸ್ವಾರ್ಥಪೂರ್ಣಳಾದ ದುಷ್ಟಪಾತ್ರವಲ್ಲ. ಅವಳು ಶ್ರೀರಾಮನ ಧರ್ನುವಿದ್ಯಾ ಗುರು. ಶ್ರೀರಾಮನು ಅವಳನ್ನು ರಹಸ್ಯವಾಗಿ ಕೇಳಿಕೊಂಡಂತೆಯೇ ಅವಳು ರಾಮನು ಕಾಡಿಗೆ ಹೋಗಲು ಕಾರಣ ಒದಗಿಸುತ್ತಾಳೆ. ಇನ್ನು ವಿಶ್ವನಾಥರ ರಾವಣ ಅತ್ಯಂತ ವಿಶಿಷ್ಟವಾದ ಸೃಷ್ಟಿ. ಅವನು ಮಹಾ ವೈಜ್ಞಾನಿಕರಿಗೆ ಬಿಡಿಸಲಾಗದ ಒಂದು ದೊಡ್ಡ ಸಮಸ್ಯೆ. ಅವನ ನಡೆ, ನುಡಿಗಳಿಂದ ಹೊರಗಡೆಗೆ ಕೆಟ್ಟವನಾಗಿ ಕಂಡರೂ ಆಳವಾಗಿ ನೋಡಿದರೆ ಒಬ್ಬ ಭಕ್ತ ಸಾಧಕನಂತೆ ತೋರುತ್ತಾನೆ. ತೆಲುಗಿನಲ್ಲಿ ಈ ಮುನ್ನ ಎಷ್ಟೋ ರಾಮಾಯಣ ಗಳು ಬಂದಿವೆ. ಆದರೆ ಕವಿತ್ರಯರ ಭಾರತ ಮತ್ತು ಪೋತಾನಾಮಾತ್ಯರ ಭಾಗವತ-ಈ ಎರಡರ ಸಾಲಿನಲ್ಲಿ ಸೇರಿಸಬಹುದಾದಂತಹ ರಾಮಾಯಣ ಬಂದಿರಲಿಲ್ಲ. ವಿಶ್ವನಾಥರ ರಾಮಾಯಣ ಆ ಎರಡರ ಮಟ್ಟವನ್ನು ಮುಟ್ಟಿದೆ.

‘ವಿಶ್ವನಾಥ ಮಧ್ಯಾಕ್ಕರಲು’ ೧೯೬೩ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪಾರಿತೋಷಕ ಪಡೆದ ಕೃತಿ. ಇದರಲ್ಲಿ ಹತ್ತು ಶತಕಗಳಿವೆ. ಒಂದೊಂದು ಶತಕ ಒಬ್ಬೊಬ್ಬ ದೇವರಲ್ಲಿ ಬರೆದದ್ದು. ‘ಮಧ್ಯಾಕ್ಕರ’ ಎಂಬುದು ಒಂದು ಛಂದಸ್ಸು. ನನ್ನಯ ಮುಂತಾದ ಪ್ರಾಚೀನ ಕವಿಗಳನ್ನು ಬಿಟ್ಟು, ಇತ್ತೀಚಿನ ಐದಾರು ಶತಮಾನಗಳಿಂದ ಯಾವ ಕವಿಯೂ ಅದನ್ನು ಬಳಸಿಲ್ಲ. ವಿಶ್ವನಾಥರು ಆ ಪ್ರಾಚೀನ ಛಂದಸ್ಸಿಗೆ ಮತ್ತೆ ನೂತನ ಜೀವ ಕೊಟ್ಟಿದ್ದಾರೆ. ಇದರಲ್ಲಿ ವಿಶ್ವನಾಥರ ಭಕ್ತಿ ಮತ್ತು ಆಧ್ಯಾತ್ಮಿಕ ಭಾವನೆಗಳ ಪೂರ್ಣ ಅಭಿವ್ಯಕ್ತಿಯನ್ನು ನಾವು ಕಾಣಬಹುದು.

ವಿಶ್ವನಾಥರ ಕಾವ್ಯಗಳಿಗಿಂತ ಅವರ ಕಾದಂಬರಿಗಳು ಹೆಚ್ಚು ಜನಪ್ರಿಯವಾದುವು. ಅವರ ‘ಚೇಲಿಯಲಿ ಕಟ್ಟ’ ಎಂಬ ಕಾದಂಬರಿ ಹನ್ನೊಂದು ಮುದ್ರಣಗಳನ್ನು ಹೊಂದಿದೆ. ಅವರ ‘ಏಕವೀರ’ ಕಾದಂಬರಿಗೆ ಕಾವ್ಯತ್ವದ ಗೌರವವನ್ನು ತಂದು ಕೊಟ್ಟರೆ, ಅವರ ‘ವೇಯಿ ಪಡಗಲು’ ಕಾದಂಬರಿಗೆ ಮಹಾಕಾವ್ಯದ ಮಹಿಮೆಯನ್ನು ಒದಗಿಸಿದೆ. ‘ಏಕವೀರ’ ಒಂದು ಐತಿಹಾಸಿಕ ಕಾದಂಬರಿ. ಹದಿನೆಂಟನೆಯ ಶತಮಾನದ ಮಥುರಾ ರಾಜವಂಶಕ್ಕೆ ಸೇರಿದ ಇತಿ ವೃತ್ತವನ್ನು ಒಳಗೊಂಡಿದೆ.

‘ವೇಯಿ ಪಡಗಲು’ (ಸಾವಿರ ಹೆಡೆಗಳು) ಸಾವಿರ ಪುಟಗಳ ಆಧುನಿಕ ಸಾಮಾಜಿಕ ಬೃಹತ್ ಕಾದಂಬರಿ. ಸಹಸ್ರ ಮುಖವಾದ ಧರ್ಮದ ಪ್ರತೀಕವಾದ ಸಾವಿರ ಹೆಡೆಗಳ ಸುಬ್ರಹ್ಮಣ್ಯಸ್ವಾಮಿ ಈ ಕಾದಂಬರಿಯಲ್ಲಿ ಚಿತ್ರಿಸಲ್ಪಟ್ಟ ಸಾಮಾಜಿಕ ವಲಯದ ಕೇಂದ್ರಬಿಂದು. ಮೂರು ತಲೆಮಾರುಗಳ ಪ್ರಭುಗಳ, ಎರಡು ತಲೆಮಾರುಗಳ ದಿವಾನರುಗಳ ಜೀವನಗಳಲ್ಲಿಯ ಏರುಪೇರುಗಳನ್ನು ರೂಪಿಸುವ ಈ ಕಾದಂಬರಿಯಲ್ಲಿ ೧೮೭೫ – ೧೯೨೫ರ ಮಧ್ಯಕಾಲದ ಆಂಧ್ರಪ್ರದೇಶದ ಅತ್ಯಂತ ಸೂಕ್ಷ್ಮವಾದ ಚಿತ್ರಣವಿದೆ. ಇದು ಆಂಗ್ಲ ವಿದ್ಯಾವಿಧಾನ, ಸಂಸ್ಕೃತಿಗಳ ಏಟಿಗೆ ಸಿಕ್ಕಿ ಕುಸಿದುಹೋಗಿರುವ ಶತಶತಮಾನಗಳ ಪ್ರಾಚೀನ ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು ಅಸಹಾಯಕರಾಗಿ ನೋಡಬೇಕಾಗಿಬಂದ ವಿಶ್ವನಾಥರ ವಿಷಾದಭರಿತ ಉದ್ಗಾರ. ಇದು ಬಹಳಮಟ್ಟಿಗೆ ವಿಶ್ವನಾಥರ ಆತ್ಮಕಥೆ ಎಂದೂ ಹೇಳಬಹುದು. ಇದರ ಕಥಾನಾಯಕ ಧರ್ಮರಾವು ನಿಜಕ್ಕೂ ವಿಶ್ವನಾಥರೆ. ಇದರಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ಶಿಲ್ಪ, ಚಿತ್ರಲೇಖನ, ವಿದ್ಯಾವಿಧಾನ, ವೈದ್ಯ ವಿಜ್ಞಾನ, ಯಂತ್ರ, ವ್ಯವಸಾಯ, ರಾಜಕೀಯ, ಚುನಾವಣೆ, ಭಕ್ತಿ, ಯೋಗ, ಅಧ್ಯಾತ್ಮ, ಪುನರ್ಜನ್ಮ ಮೊದಲಾದ ಮಾನವಜೀವನದ ಎಲ್ಲಾ ಮುಖಗಳ ಬಗ್ಗೆ ವಿಶ್ವನಾಥರ ವಿಮರ್ಶಾತ್ಮಕವಾದ ಅಭಿಪ್ರಾಯಗಳು ಅಭಿವ್ಯಕ್ತಗೊಂಡಿವೆ. ಇದನ್ನು ಆಂಧ್ರ ದೇಶೀಯ ಜೀವನದ ವಿಜ್ಞಾನ ಸರ್ವಸ್ವ ಎನ್ನಬಹುದು. ಮೊದಲಲ್ಲಿ ಸಾವಿರ ಹೆಡೆಗಳಿದ್ದ ಸುಬ್ರಹ್ಮಣ್ಯಸ್ವಾಮಿಗೆ, ಕೊನೆಗೆ ಎಲ್ಲಾ ಹೆಡೆಗಳು ಲುಪ್ತವಾಗಿ ಎರಡು ಹೆಡೆಗಳು ಮಾತ್ರ ಉಳಿದಿವೆ. ಈ ಎರಡು ಹೆಡೆಗಳು ಗಂಡ-ಹೆಂಡಿರ ಪ್ರತೀಕಗಳು. ಅಂದರೆ ಸರ್ವಧರ್ಮಗಳೂ ನಾಶವಾಗಿರ ಬಹುದು. ಆದರೆ ಹಿಂದೂ ಸಮಾಜದಲ್ಲಿ ದಾಂಪತ್ಯಧರ್ಮ ಮಾತ್ರ ನಾಶವಾಗಲಾರದು ಎಂದು ವಿಶ್ವನಾಥರ ಬಯಕೆ – ಇದರಲ್ಲಿ ಸಾಂಕೇತಿಕವಾಗಿ ಪ್ರಕಟಗೊಂಡಿದೆ. ‘ಚೇಲಿಯಲಿ ಕಟ್ಟಿ’ ಕೂಡ ದಾಂಪತ್ಯ ಧರ್ಮದ ಉತ್ಕೃಷ್ಟತೆಯನ್ನು ನಿರೂಪಿಸುವುದು.

‘ಕಡಿಮಿ ಚೆಟ್ಟು’ ಒಂದು ಐತಿಹಾಸಿಕ ಕಾದಂಬರಿ. ಬನವಾಸಿಯ ಕದಂಬರಾಜ ವಂಶದ ಮೂಲಪುರುಷನಾದ ಮಯೂರವರ್ಮನ ಚರಿತ್ರೆ. ಆಂಧ್ರದ, ಕಾಶ್ಮೀರದ, ನೇಪಾಳದ, ಭಾರತದ ಇತಿಹಾಸವನ್ನು ಆಧರಿಸಿ ಅವರು ಮೂವತ್ತು ಕಾದಂಬರಿಗಳನ್ನು ಬರೆದರು.

ಗುಪ್ತ ಪಾಶುಪತಮ್, ಅಮೃತಶರ‍್ಮಿಷ್ಷಮ್ – ಇವು ಎರಡು ಸಂಸ್ಕೃತ ನಾಟಕಗಳು. ಮೊದಲನೆಯದು ವೀರರಸ ಪ್ರಧಾನವಾದದ್ದು. ಎರಡನೆಯದು ಶೃಂಗಾರರಸ ಪ್ರಧಾನ ವಾದದ್ದು. ಮೊದಲನೆಯದು ಮಹಾಭಾರತ ಯುದ್ಧವನ್ನು, ಎರಡನೆಯದು ಭಾರತದಲ್ಲಿಯ ಮಾಯಾವಿ ಚರಿತ್ರೆಯನ್ನು ಇತಿವೃತ್ತವಾಗಿ ಸ್ವೀಕರಿಸಿವೆ. ಈ ಎರಡು ಪೌರಾಣಿಕ ನಾಟಕಗಳಲ್ಲಿ ವಿಶ್ವನಾಥರು ಅನೇಕ ಆಧುನಿಕ ವೈಜ್ಞಾನಿಕ ಮತ್ತು ಮನೋವೈಜ್ಞಾನಿಕ ಪ್ರಶ್ನೆಗಳನ್ನು ಚರ್ಚಿಸುತ್ತಾರೆ.

ಸಣ್ಣಕಥಾ ಪ್ರಪಂಚದಲ್ಲಿಯೂ ವಿಶ್ವನಾಥರು ಅದ್ವಿತೀಯರೆನಿಸಿಕೊಂಡರು. ಅವರ ‘ನೀ ಯಣಂ ತೀರ‍್ಚುಕೊನ್ನಾ’ ಎಂಬ ಕರುಣರಸಭರಿತವಾದ ಸಣ್ಣಕಥೆ ವಿಶ್ವ ಸಾಹಿತ್ಯಕ್ಕೆ ಆಂಧ್ರ ಸಾಹಿತ್ಯದ ಕಾಣಿಕೆಯೆಂದು ಹೇಳ ಬಹುದಾಗಿದೆ. ಸೂರ್ಯನಾರಾಯಣ ಮತ್ತು ವೆಂಕಟೇಶ್ವರ ರಾವು ಇಬ್ಬರೂ ಮಿತ್ರರು, ಒಂದೇ ಬಾಡಿಗೆ ಮನೆಯ ಎರಡು ಭಾಗಗಳಲ್ಲಿ ವಾಸವಿರುವವರು. ಸೂರ್ಯನಾರಾಯಣನಿಗೆ ಮಕ್ಕಳಿಲ್ಲ. ವೆಂಕಟೇಶ್ವರರಾವ್‌ಗೆ ಒಬ್ಬ ಮಗ. ಆದರೆ ಅವನು ಯಾವಾಗಲೂ ಸೂರ್ಯನಾರಾಯಣ ಅವರ ಮನೆಯಲ್ಲಿ ಅವರ ಮಗನ ಹಾಗೆ ಬೆಳೆಯುತ್ತಾನೆ. ಒಂದು ಸಲ ಸೂರ್ಯನಾರಾಯಣ ದಂಪತಿಗಳು ಹಳ್ಳಿಗೆ ಹೋಗುತ್ತಾ ತಮ್ಮ ಜೊತೆ ಆ ಮಗುವನ್ನು ಕರೆದೊಯ್ಯುತ್ತಾರೆ. ಅಲ್ಲಿ ಅದಕ್ಕೆ ಜ್ವರ ಬರುತ್ತದೆ. ಅವನು ಸತ್ತೂ ಹೋಗುತ್ತಾನೆ. ತಂದೆಗೆ ತಂತಿ ವಾರ್ತೆ ಕೊಡಲಾಗುತ್ತದೆ. ಆದರೆ ಆ ತಂದೆತಾಯಿಗಳು ಬರುವುದು ತಡವಾಗುತ್ತದೆ. ಹಳ್ಳಿಗಳಲ್ಲಿ ಇಡುವಂತಿಲ್ಲವಾದ್ದರಿಂದ ಸೂರ್ಯನಾರಾಯಣ ಮಗುವಿಗೆ ಶವಸಂಸ್ಕಾರ ಮಾಡುತ್ತಾನೆ. ವೆಂಕಟೇಶ್ವರರಾವು ಆಮೇಲೆ ಬರುತ್ತಾನೆ. ‘ನನ್ನ ಮಗುವನ್ನು ನನಗೆ ಕೊಡು, ಅವನ ಶವವನ್ನಾದರೂ ಕೊಡು’ ಎಂದು ಪುತ್ರಶೋಕದಿಂದ ಹುಚ್ಚನಾಗಿ ತಕರಾರು ಮಾಡುತ್ತಾನೆ. ಮಿತ್ರರು ಶತ್ರುಗಳಾಗುತ್ತಾರೆ. ಸೂರ್ಯನಾರಾಯಣ ಆ ಊರನ್ನು ಬಿಟ್ಟು ಬೇರೆ ಊರಿಗೆ ಹೋಗುತ್ತಾನೆ. ಕೆಲವು ವರ್ಷಗಳ ನಂತರ ವೆಂಕಟೇಶ್ವರರಾವುಗೆ ಆ ಊರಿಗೆ ವರ್ಗವಾಗುತ್ತದೆ. ಇಬ್ಬರೂ ಪುನಃ ಮಿತ್ರರಾಗುತ್ತಾರೆ. ಇಷ್ಟರಲ್ಲಿ ಸೂರ್ಯನಾರಾಯಣನಿಗೆ ಒಂದು ಮಗುವಾಗುತ್ತದೆ. ಆದರೆ ತಂದೆತಾಯಿಗಳು ಆ ಮಗುವಿನ ಕಡೆ ನೋಡುವುದೇ ಇಲ್ಲ. ವೆಂಕಟೇಶ್ವರರಾವು ದಂಪತಿಗಳೇ ಅದನ್ನು ಸಾಕುತ್ತಾರೆ. ಒಮ್ಮೆ ಮಗುವಿಗೆ ಕಾಯಿಲೆಯಾಗುತ್ತದೆ. ತಾಯಿತಂದೆ ನೋಡಿಕೊಳ್ಳುವುದಿಲ್ಲ. ವೆಂಕಟೇಶ್ವರಾವು ದಂಪತಿಗಳೇ ವೈದ್ಯಕೀಯ ಚಿಕಿತ್ಸೆ ಮಾಡಿಸುತ್ತಾರೆ. ಆದರೂ ಮಗು ಉಳಿಯುವುದಿಲ್ಲ. ಸ್ವಂತ ತಂದೆ ತಾಯಿಗಳು ಅಳುವುದಿಲ್ಲ. ಸಾಕು ತಾಯಿ ತಂದೆ ಅಳುತ್ತಾರೆ. ಆಗ ಸುಮ್ಮನೆ ಕೂತುಕೊಂಡ ಸೂರ್ಯ ನಾರಾಯಣ ಎದ್ದು ಮಗುವಿನ ಶವವನ್ನು ಎತ್ತಿಕೊಂಡು ವೆಂಕಟೇಶ್ವರರಾವ್‌ಗೆ ಕೊಡುತ್ತಾ ಹೀಗೆ ಹೇಳುತ್ತಾನೆ: ‘ವೆಂಕಟೇಶ್ವರರಾವ್ ಆಗ ನನ್ನ ಮಗುವನ್ನು ನನಗೆ ಕೊಡು ಎಂದು ತಕರಾರು ಮಾಡಿದ್ದೆಯಲ್ಲ, ಇಗೋ ನಿನ್ನ ಮಗ. ತಗೋ, ಏನು ಮಾಡುತ್ತಿಯೋ ಮಾಡಿಕೋ’ – ಈ ಕಥೆಯನ್ನು ಓದುವಾಗ ಎಂಥ ಕಠಿಣ ಹೃದಯವಾದರೂ ಕರಗದೆ ಇರಲಾರದು.

ವಿಶ್ವನಾಥರು ಬಹಳ ಸೂಕ್ಷ್ಮವಾದ, ಸ್ವತಂತ್ರ್ಯವಾದ ದೃಷ್ಟಿ. ‘ನನ್ನ ಯಗಾರಿ ಅಸನ್ನಕಥಾ ಕಲಿತಾರ‍್ಥ ಯುಕ್ತಿ’ ‘ಶಾಕುಂತಲಮುಯೊಕ್ಕ ಅಭಿಜ್ಞತಃ’ ಇವೆರಡು ಇದಕ್ಕೆ ಉದಾಹರಣೆ. ಒಂದು ಸಾವಿರ ವರ್ಷಗಳಿಂದ ನನ್ನಯ ಭಾರತದಲ್ಲಿಯೂ, ಎರಡು ಸಾವಿರ ವರ್ಷಗಳಿಂದ ಕಾಳಿದಾಸನ ಅಭಿಜ್ಞಾನ ಶಾಕುಂತಲದಲ್ಲಿಯೂ ಅಡಕವಾಗಿದ್ದ ಅನೇಕಾನೇಕ ಶಿಲ್ಪರಹಸ್ಯಗಳನ್ನು ವಿಶ್ವನಾಥರು ಆವಿಷ್ಕರಿ ಸಿದ್ದಾರೆ.

ವಿಶ್ವನಾಥರ ಅನೇಕಾನೇಕ ಕಾದಂಬರಿಗಳು, ಸಣ್ಣ ಕಥೆಗಳು, ಸಾಹಿತ್ಯವಿಮರ್ಶೆಗಳು, ಆಂಗ್ಲ, ಹಿಂದಿ, ಕನ್ನಡ ಮುಂತಾದ ಭಾಷೆಗಳಲ್ಲಿ ಅನುವಾದಗೊಡಿವೆ. ಅವರಿಗೆ ಆಂಧ್ರದ ಪ್ರತಿಯೊಂದು ಸಣ್ಣ ದೊಡ್ಡ ನಗರದಲ್ಲೂ ಸನ್ಮಾನಗಳು ನಡೆದಿವೆ. ಅಲ್ಲದೆ ದೆಹಲಿ, ಕಲ್ಕತ್ತ, ಮುಂಬಯಿ ಮುಂತಾದ ಭಾರತದ ದೊಡ್ಡ ನಗರಗಳಲ್ಲಿಯೂ ಸನ್ಮಾನೋತ್ಸವಗಳು ಜರುಗಿವೆ. ಕರ್ನಾಟಕದ ರಾಜಧಾನಿ ಯಾದ ಬೆಂಗಳೂರಿನಲ್ಲಿ ೧೯೭೪ರ ಮಾರ್ಚ್ ೧೭ರಂದು ಅವರ ಸನ್ಮಾನ ಸಮಾರಂಭ ಬಹಳ ವಿಜೃಂಭಣೆಯಿಂದ ನಡೆಯಿತು. ಕರ್ನಾಟಕ ಸಾಹಿತ್ಯ ರಸಜ್ಞರು ತಮಗೆ ನೀಡಿದ ಸನ್ಮಾನಕ್ಕೆ ಉತ್ತರಿಸಿದ ವಿಶ್ವನಾಥರು ಬೆಂಗಳೂರು ವಿಶ್ವವಿದ್ಯಾನಿಲಯ ತೆಲುಗು ಎಂ.ಎ. ತರಗತಿಗಳನ್ನು ಪ್ರಾರಂಬಿಸಬೇಕೆಂದು  ಒತ್ತಾಯಿಸಿದರು. ವಿಶ್ವವಿದ್ಯಾನಿಲಯ ಅವರ ಸೂಚನೆಯನ್ನು ನಡೆಸಿ ಕೊಟ್ಟಿತು. ೧೯೭೪ರ ಜುಲೈನಲ್ಲಿ ತೆಲುಗು ಸ್ನಾತಕೋತ್ತರ ತರಗತಿಗಳು ಪ್ರಾರಂಭವಾದವು.

ವ್ಯಕ್ತಿತ್ವ

ವಿಶ್ವನಾಥ ಸತ್ಯನಾರಾಯಣ ಅವರದು ಕುತೂಹಲಕರ ವ್ಯಕ್ತಿತ್ವ. ಸತ್ಯನಾರಾಯಣ ಅವರಿಗೆ ಹಿರಿಯರನ್ನು ಕಂಡರೆ ತುಂಬಾ ಗೌರವ. ಸಾಹಿತಿಗಳನ್ನು ಕಂಡರೆ ಅಪಾರ ಆದರ. ಶಿಷ್ಯರ ಬಗ್ಗೆ ವಿಶೇಷ ವಾತ್ಸಲ್ಯ. ನೋಡಲು ಕಠಿಣರಂತೆ ಕಂಡರೂ ಅವರ ಮನಸ್ಸು ಹೂವಿನಷ್ಟು ಮೃದು. ತಮ್ಮ ಶಿಷ್ಯನೊಬ್ಬ ತಾನು ರಚಿಸಿದ ಪದ್ಯವನ್ನು ಓದಿದಾಗ ವೇದಿಕೆಯ ಮೇಲೇ ಶಿಷ್ಯನನ್ನು ತಬ್ಬಿಕೊಂಡು ಆನಂದಭಾಷ್ಪ ಸುರಿಸಿದರಂತೆ. ಸತ್ಯನಾರಾಯಣ ತಂದೆಯಂತೆ ಬಹು ಧಾರಾಳಿ. ಅವರ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಪ್ರತಿಯೊಬ್ಬರಿಗೂ ಅವರ ಧಾರಾಳತನ ಗೊತ್ತಿತ್ತು.  ಯಾವ ವಿದ್ಯಾರ್ಥಿ ಸಹಾಯ ಕೇಳಲಿ ಯಾರೇ ಚಂದಾಪೆಟ್ಟಿಗೆ ತರಲಿ ಇಲ್ಲ ಎನ್ನದೆ, ಅತಿ ಧಾರಾಳವಾಗಿ ಕೊಡುತ್ತಿದ್ದರೆಂದು ಅವರ ಸ್ನೇಹಿತರು ಹೊಗಳುತ್ತಾರೆ.

ಸತ್ಯನಾರಾಯಣ ಅವರಿಗೆ ಜಂಬ ಎಂದು ಕೆಲವರು ಹೇಳುತ್ತಿದ್ದರು. ಈ ಸಂಗತಿ ಕಿವಿಗೆ ಬಿದ್ದಾಗ ಸತ್ಯನಾರಾಯಣ ಹೇಳಿದರು, ‘ಹಿಂದೆ ನಾನು ಹಠಮಾರಿಯಾಗಿದ್ದೆ ನಿಜ. ಈಗ ಹಾಗಿಲ್ಲ. ನಾನು ಮೃದುವಾಗಿದಿದ್ದರೆ ಬೇಕಾದುದನ್ನು ಪಡೆಯಬಹುದಾಗಿತ್ತು. ಪದವಿ, ಹಣ ಎಲ್ಲ ಸುಲಭವಾಗಿ ಬರುತ್ತಿತ್ತು. ಆದರೆ ಬೇರೆಯವರಿಗೆ ಡೊಗ್ಗು ಸಲಾಮು ಹಾಕಬೇಕಾಗಿತ್ತಲ್ಲ? ಹಿಂದೆಯೂ ಅದನ್ನು ಮಾಡಲಿಲ್ಲ, ಈಗಲೂ ಅದನ್ನು ಮಾಡುವುದಿಲ್ಲ.’

ಒಮ್ಮೆ ವಿಶ್ವನಾಥರು ಬಳಸಿದ ಒಂದು ಪದ ಪ್ರಯೋಗದ ಬಗ್ಗೆ ಪಂಡಿತರೊಬ್ಬರು ಆಕ್ಷೇಪವೆತ್ತಿದರು. ‘ಇದು ವ್ಯಾಕರಣ ವಿರುದ್ಧವಾದ ಪ್ರಯೋಗ. ಇಂಥ ಪೂರ್ವ ಕವಿ ಪ್ರಯೋಗವೂ ಇಲ್ಲ’ ಎಂದವರ ವಾದ. ಅದಕ್ಕೆ ವಿಶ್ವನಾಥರು, ‘ವ್ಯಾಕರಣ ಕವಿಗಳ ಪ್ರಯೋಗವನ್ನು ಅನುಸರಿಸುತ್ತದೆ. ನಾನೊಬ್ಬ ಕವಿ. ನಾನು ಮಾಡಿದ ಪ್ರಯೋಗವನ್ನು ಆಧರಿಸಿ ವ್ಯಾಕರಣ ಸೂತ್ರವನ್ನು ಬರೆದುಕೊಳ್ಳಿ’ ಎಂದು ಹೇಳಿದರು. ಅವರಿಗೆ ಅಂತ ಆತ್ಮವಿಶ್ವಾಸ.

ವಿಶ್ವನಾಥ ಸತ್ಯನಾರಾಯಣ ಅವರು ೧೯೭೭ರ ಅಕ್ಟೋಬರ್ ೧೮ ರಂದು ಸ್ವರ್ಗಸ್ಥರಾದರು.