ಕಾರ್ಬನ್ – ಇಂಗಾಲ – ಜೀವಾಧಾರ ಧಾತು ಅಥವಾ ಮೂಲವಸ್ತು. ಜೀವವನ್ನು ಕಟ್ಟುವ ಪ್ರೋಮೇದಸ್ಸು ಮುಂತಾದ ಅತ್ಯಗತ್ಯ ವಸ್ತುಗಳಲ್ಲಿ ಕಾರ್ಬನ್ ಅನಿವಾರ್ಯ ಅಂಶ.  ಅಥವಾ ಇವೆಲ್ಲ ಕಾರ್ಬನ್ ಸಂಯುಕ್ತಗಳೇ. ಕೆಲವೇ ಕೆಲವು ಧಾತುಗಳನ್ನು ಬಿಟ್ಟರೆ ಜೀವಕ್ಕೆ ಬೇಕಾದ ಅಗತ್ಯ ಧಾತುಗಳು ದಕ್ಕಬೇಕಾದರೆ ಅವು ಕಾರ್ಬನ್ ಅಣುವಿನೊಡನೆ ಬಂಧಿತವಾಗಿರಬೇಕು. ಈ ಅರ್ಥದಲ್ಲಿ ಜೀವಿಯಲ್ಲಿನ ವಸ್ತುಗಳಲ್ಲಿ ಇತರ ಅಗತ್ಯ ಧಾತುಗಳಾದ ನೈಟ್ರೊಜನ್, ಫಾಸ್ಫರಸ್ (ರಂಜಕ) ಹಾಗೂ ಆಕ್ಸಿಜನ್‌ಗಳು ಕೇವಲ ಮಂತ್ರಿಗಳೆಂದೂ ಕಾರ್ಬನ್ ಇವುಗಳ ರಾಜನೆಂದೂ ಹೇಳಬಹುದು. ಇವೆಲ್ಲ ಕಾರ್ಬನ್ ಅಣುವಿನ ಎಡಕ್ಕೆ ಇದ್ದರೆ  ಉಳಿದ ಧಾತುಗಳು ಸುತ್ತಲೂ ಇರುತ್ತವೆ. ಹೈಡ್ರೊಜನ್ ಒಂದು ಮೂಲೆಯಲ್ಲಿ ಬಂಧಿತವಾಗಿರುತ್ತದೆ.

ವಿಶ್ವದಲ್ಲಿ ವಿಪುಲವಾಗಿರುವ ಧಾತುಗಳಲ್ಲಿ ನಾಲ್ಕನೆಯ ಸ್ಥಾನ ಕಾರ್ಬನ್‌ಗೆ ಸಲ್ಲುತ್ತದೆ. ಇದು ನಮ್ಮ ‘ಪುಣ್ಯ’ ವೇ ಸರಿ. ಏಕೆಂದರೆ ಎಲ್ಲ ಜೀವಿಗಳಂತೆ – ಸಸ್ಯ ಪ್ರಾಣಿಗಳಂತೆ – ನಮ್ಮ ದೇಹ ಕಟ್ಟಲು ಬೇಕಾದ ಘಟಕಾಂಗಗಳು ಕಾರ್ಬನ್ ಯುಕ್ತ ರಾಸಾಯನಿಕಗಳು. ವಿಶ್ವದಲ್ಲಿ ಕಾರ್ಬನ್ ನಾಲ್ಕನೆಯ ಸ್ಥಾನ ಪಡೆಯುವಷ್ಟು ವಿಪುಲವಾಗಿರಲು ಕಾರಣವಿದೆ.

ನಕ್ಷತ್ರಗಳ ತಿರುಳಿನಲ್ಲಿರುವ ಉಷ್ಣತೆಗೆ ವಸ್ತು ಸಂಪೂರ್ಣವಾಗಿ ಅಯಾನೀಕರಣಗೊಂಡಿರುತ್ತದೆ. ಅಲ್ಲಿ ಎಲೆಕ್ಟ್ರಾನುಗಳನ್ನು ಕಳೆದುಕೊಂಡ ಪರಮಾಣು ಅಯಾನುಗಳ ನಡುವಿನ ರಾಸಾಯನಿಕ ಕ್ರಿಯೆ ಸಂಕೀರ್ಣವಾಗಿರುತ್ತದೆ. ನಕ್ಷತ್ರಗಳಲ್ಲಿ ನಡೆಯುವ ಪ್ಲಾಸ್ಮಾ ಕ್ರಿಯೆಯಲ್ಲಿ ನ್ಯೂಕ್ಲಿಯಸ್‌ಗಳು ಡಿಕ್ಕಿಹೊಡೆಯುತ್ತಲೇ ಇರುತ್ತವೆ, ಸಮ್ಮಿಲನಗೊಳ್ಳುತ್ತವೆ, ನಶಿಸುತ್ತವೆ.  ಒಟ್ಟಿನಲ್ಲಿ ನಕ್ಷತ್ರವೊಂದರ ತಿರುಳಿನಲ್ಲಿ ಸಂಪೂರ್ಣ ಅಯಾನ್ ಸ್ಥಿತಿಯಲ್ಲಿರುವ ಹೈಡ್ರೊಜನ್‌ನ (ಪ್ರೋ) ನಾಲ್ಕು ಅಯಾನ್‌ಗಳು ಡಿಕ್ಕಿಹೊಡೆದು ಸಮ್ಮಿಲನಗೊಂಡಾಗ ಹೀಲಿಯಂ ನ್ಯೂಕ್ಲಿಯಸ್ ಉಂಟಾಗುತ್ತದೆ (ನಕ್ಷತ್ರಗಳಲ್ಲಿ ಹೈಡ್ರೊಜನ್ ಸಮೃದ್ಧವಾಗಿರುತ್ತದೆ). ಹೀಗೆ ಉಂಟಾದ ಹೀಲಿಯಂನ ಎರಡು ನ್ಯೂಕ್ಲಿಯಸ್‌ಗಳು ಸಂಯೋಜಿತಗೊಂಡಾಗ ಬೆರಿಲಿಯಂ ರೂಪುಗೊಳ್ಳುತ್ತದೆ.  ನಕ್ಷತ್ರದಲ್ಲಿ ಉಂಟಾಗುವ ಬೆರಿಲಿಯಂ ಅಸ್ಥಿರ ಧಾತು. ಈ ಬೆರಿಲಿಯಂ ಪೂರ್ತಿಯಾಗಿ ನಶಿಸುವ ಮೊದಲೇ ಇದಕ್ಕೆ ಮತ್ತೊಂದು ಹೀಲಿಯಂ ನೂಕ್ಲಿಯಸ್ ಸೇರಿಕೊಂಡಾಗ ಕಾರ್ಬನ್ ಪರಮಾಣುವಿನ ನ್ಯೂಕ್ಲಿಯಸ್ ರೂಪುಗೊಳ್ಳುತ್ತದೆ. ಹೀಲಿಯಂ, ಬೆರಿಲಿಯಂ ಹಾಗೂ ಉತ್ತೇಜಿತ ಕಾರ್ಬನ್‌ನಿಂದಾಗಿ ವಿಶ್ವದಲ್ಲಿ ಕಾರ್ಬನ್ ಅಪಾರವಾಗಿ ಸಂಶ್ಲೇಷಿತಗೊಳ್ಳುತ್ತದೆ. ಕಾರ್ಬನ್ ನ್ಯೂಕ್ಲಿಯಸ್‌ನ ಉತ್ತೇಜಿತ ಸ್ಥಿತಿಯು ಬೆರಿಲಿಯಂ ಹಾಗೂ ಹೀಲಿಯಂ ನ್ಯೂಕ್ಲಿಯಸ್‌ಗಳ ಶಕ್ತಿಗೆ ಯುಕ್ತಪ್ರಮಾಣದಲ್ಲಿ ಸಾಟಿಯಾಗಿರದಿದ್ದರೆ ಕಾರ್ಬನ್ ಅಧಿಕ ಪ್ರಮಾಣದಲ್ಲಿ ರೂಪುಗೊಳ್ಳುತ್ತಿರಲಿಲ್ಲ. ಅದಿಲ್ಲದೆ ಯಾವುದೇ ಜೀವಿಯೂ ಹುಟ್ಟುತ್ತಿರಲಿಲ್ಲ. ಅಥವಾ ಇದನ್ನು ತಿಳಿಯಲು ನಾವ್ಯಾರೂ ಇಲ್ಲಿ ಇರುತ್ತಲೂ ಇಲ್ಲ.

ಜೀವಿಗಳು ಬದುಕಿರಲು ಶಕ್ತಿ (energy) ಬೇಕು. ಈ ಶಕ್ತಿ ಸೂರ್ಯನಿಂದ ಬರುತ್ತದೆ. ಆದರೆ ಇದನ್ನು ನಾವು ನೇರವಾಗಿ ದಕ್ಕಿಸಿಕೊಳ್ಳುವಂತೆಯೇ ಇಲ್ಲ. ಇದು ಸಸ್ಯಗಳಲ್ಲಿ ನಡೆಯುವ ಫೋಟೋಸಿಂಥೆಸಿಸ್ (ದ್ಯುತಿ ಸಂಶ್ಲೇಷಣೆ) ಕ್ರಿಯೆಯಲ್ಲಿ ವಿಶಿಷ್ಟವಾಗಿ ಅಡಗಿಕೊಂಡ ರೂಪದಲ್ಲಿ ನಮಗೆ ದೊರೆಯುತ್ತದೆ. ಅಲ್ಲಿಯೂ ಕಾರ್ಬನ್ ಸಂಯುಕ್ತವಾದ ಕ್ಲೊರೊಫಿಲ್ ಇದ್ದರೆ ಮಾತ್ರ ಈ ಕ್ರಿಯೆ ನಡೆಯುತ್ತದೆ. ಕಾರ್ಬನ್ ಚಕ್ರವು ಅಜೀವ ಪದಾರ್ಥದಿಂದ ಜೀವಿಯನ್ನು ಸೇರಿ, ಜೀವಿಗಳ ಮೂಲಕ ಮತ್ತೆ ಹೊರಬಂದು ಅಜೀವ ಪದಾರ್ಥವಾಗಿ ವಾತಾವರಣವನ್ನು ಸೇರಿ ಪೂರ್ಣಗೊಳ್ಳುತ್ತದೆ.

60 ಪರಮಾಣುಗಳಿರುವ ಕಾರ್ಬನ್ ಅಣು (ಫುಲ್ಲರೀನ್)

ತನ್ನಂಥದೇ ಪರಮಾಣುವಿನೊಡನೆ ಅಲ್ಲದೆ ಬೇರೆ ಬಗೆಯ ಪರಮಾಣುಗಳೊಡನೆ ಸಂಯೋಜಿತಗೊಂಡು ಕಾರ್ಬನ್ ಕೆಲವೇ ಪರಮಾಣುಗಳಿಂದ ಹಿಡಿದು ಸರಪಳಿಯಂತಹ ಸಾವಿರಾರು ಪರಮಾಣುಗಳಿರುವ ಸಂಯುಕ್ತಗಳನ್ನು ಉಂಟುಮಾಡುತ್ತದೆ. ಇಂತಹ ಸರಪಳಿ ಯೋಜನೆಗಳಲ್ಲಿ ಅಕ್ಕಪಕ್ಕದ ಶಾಖೆಗಳಂತೆ ಸೇರಿಕೊಳ್ಳುವ ಪರಮಾಣುಗಳಿಂದ ಹಲವು ಆಕಾರ, ಗಾತ್ರಗಳ ಸಂಯುಕ್ತಗಳು ಉಂಟಾಗುತ್ತವೆ. ಅನೇಕಾನೇಕ ಸಾವಯವ ಸಂಯುಕ್ತಗಳು ಇಂತಹ ವಸ್ತುಗಳು. ಈ ಬಗೆಯ ಸಂಕೀರ್ಣ ಸಂಯೋಜನೆಯ ಕಾರ್ಬನ್ ಪದಾರ್ಥಗಳಿಂದಾಗಿಯೇ ಜೀವಕ್ಕೆ ಅಸ್ತಿತ್ವ ಬಂದಿತು. ಜೀವದ ಹುಟ್ಟು, ಸಂತಾನೋತ್ಪತ್ತಿಗಳಿಂದ ಸಾವಿನವರೆಗಿನ ಜೈವಿಕ ಕ್ರಿಯೆಗಳು ಜರುಗಲು ಅತಿ ಸಂಕೀರ್ಣವಾದ ಸಂಯುಕ್ತಗಳು ಬೇಕು. ಇವುಗಳ ರಚನೆ ಸರಪಳಿಯಂತಿರಬಹುದು, ಉಂಗುರಗಳಂತಿರಬಹುದು ಅಥವಾ ಹಾಳೆಯಂತಿರಬಹುದು.  ಇಲ್ಲವೇ, ಇನ್ನೂ ಜಟಿಲವಿರಬಹುದು. ಆಕಾರ, ಗಾತ್ರಗಳಲ್ಲದೆ ಈ ಸಂಯುಕ್ತಗಳಿಗೆ ನಮ್ಯ ಗುಣವಿರಬೇಕು, ಹರಡುವ ಗುಣಬೇಕು ಇತ್ಯಾದಿ ಏನೆಲ್ಲ ಗುಣಗಳ ಬೇಡಿಕೆಯಿರುತ್ತದೆ.

ಬೇರೆ ಧಾತುಗಳಲ್ಲಿ ಇಲ್ಲದ ಒಂದು ವಿಶಿಷ್ಟ ಗುಣ ಕಾರ್ಬನ್‌ಗೆ ಇರುವುದರಿಂದ ಅದರಿಂದ ಅಸಂಖ್ಯಾತ ಸಂಯುಕ್ತಗಳು ರೂಪುಗೊಳ್ಳುವ ಸಾಧ್ಯತೆಯಿದೆ. ಏಕಬಂಧ, ದ್ವಿಬಂಧ ಹಾಗೂ ತ್ರಿಬಂಧಗಳೇ ಕಾರ್ಬನ್ನಿನ ವಿಶಿಷ್ಟ ಗುಣ. ಇದರಿಂದ ಕಾರ್ಬನ್ ಪರಸ್ಪರವಾಗಿ ಹಾಗೂ ಬೇರೆ ಧಾತುಗಳೊಡನೆ ಸಂಯೋಗಗೊಳ್ಳುವ ವಿಧಾನಗಳು ಅನೇಕ ರೀತಿಯಲ್ಲಿವೆ. ಹೀಗಾಗಿ, ಜೀವಿಗಳಿಗಷ್ಟೇ ಅಲ್ಲ ನಿರ್ಜೀವ ವಸ್ತುಗಳು ಹಾಗೂ ಮಾನವ ನಿರ್ಮಿತ ವಸ್ತುಗಳಿಗೂ ಕಾರ್ಬನ್ ಒಂದು ಪ್ರಧಾನ ವಸ್ತುವಾಗಿ ಒದಗುತ್ತದೆ: ಆಹಾರ, ಬಟ್ಟೆ (ಹತ್ತಿ,  ರೇಷ್ಮೆ ಹಾಗೂ ಸಂಶ್ಲೇಷಿತ), ಸೀಮೆಎಣ್ಣೆ, ಪೆಟ್ರೋಲ್, ಎಲ್‌ಪಿಜಿ, ಕಾಗದ, ಮಸಿ, ಟೈರ್, ಆಭರಣಗಳು, ವಿಮಾನ ಭಾಗಗಳು, ಚುಚ್ಚುಮದ್ದಿನ ಸಿರಿಂಜ್, ಔಷಧಿಗಳು ಇತ್ಯಾದಿ ಇತ್ಯಾದಿ. ಇವು ಕೇವಲ ಕೆಲವು ಉದಾಹರಣೆಗಳು. ಕಾರ್ಬನ್ನಿನ ಇಂತಹ ಬಳಕೆ ಅಪಾರವಾಗಿರುವುದು ಸಹಜವೇ.

ಕಾರ್ಬನ್ ಬಹುರೂಪಿ ಪದಾರ್ಥ; ವಜ್ರ ಫುಲ್ಲರೀನ್, ಗ್ರಾಫೈಟ್ ಇವೇ ಇದರ ಕೆಲವು ರೂಪಗಳು.  ಫುಲ್ಲರೀನ್ ಎಂಬುದು ಸುಮಾರು 60 – 70 ಕಾರ್ಬನ್ ಪರಮಾಣುಗಳು ಸೇರಿಕೊಂಡು ಒಂದು ಪಂಜರದಂತೆ ಹೆಣೆದುಕೊಂಡಿರುವ ಕಾರ್ಬನ್ ಅಣು. ಕಾರ್ಬನ್ ಉಪಯೋಗಗಳು ಅನೇಕಾನೇಕ. ವಜ್ರವನ್ನು ಬಿಟ್ಟರೆ ಉಳಿದ ಬಹುಪಾಲು ಕಾರ್ಬನ್ ಪದಾರ್ಥ ಗಳೆಲ್ಲ ಕಪ್ಪಗಿರುತ್ತವೆ. ವಿಶ್ವದಲ್ಲಷ್ಟೇ ಅಲ್ಲದೆ, ಭೂಮಿಯ ಕವಚದಲ್ಲಿಯೂ ಕಾರ್ಬನ್ ಅತಿ ವಿಪುಲವಾಗಿರುವ ಧಾತು.

ವಿಕಿರಣಶೀಲವಾದ ಕಾರ್ಬನ್ – 14ರಿಂದ ರೇಡಿಯೊ ಆಕ್ಟಿವ್ ಡೇಟಿಂಗ್ ಎಂಬ ಪದ್ಧತಿ ಈಗ ರೂಢಿಯಲ್ಲಿದೆ. ಇದರಿಂದ ಅತಿ ಪ್ರಾಚೀನ ವಸ್ತುಗಳ ವಯಸ್ಸನ್ನು ಕಂಡುಹಿಡಿಯಬಹುದು.