ವಿವಿಧ ದೇಶಗಳು ಈಗ ಪ್ರತ್ಯೇಕ ದ್ವೀಪಗಳಾಗಿ ಉಳಿಯುವುದು ಸಾಧ್ಯ ವಿಲ್ಲ. ರಾಜಕೀಯ, ವಾಣಿಜ್ಯ ವ್ಯವಹಾರಗಳು ಕಾರಣವಾಗಿ ದೇಶಗಳ ನಡುವೆ ಸಂಪರ್ಕಗಳು ಬೆಳೆಯುತ್ತಿವೆ. ಇದಲ್ಲದೆ, ಪ್ರವಾಸ, ಕಲಾಕ್ಷೇತ್ರ, ಸಂಪರ್ಕ ಮಾಧ್ಯಮಗಳ ವಲಯದಲ್ಲೂ ದೇಶ ದೇಶಗಳು ಕೊಡುಕೊಳ್ಳು ವಿಕೆಯ ನೆಲೆಯನ್ನು ಅವಲಂಬಿಸಿವೆ. ಇಂಥ ಸಂದರ್ಭದಲ್ಲಿ ಉಂಟಾಗುವ ಸಂವಹನದ ಕೊರತೆಗೆ ಸಂಪರ್ಕ ಭಾಷೆಗಳು ಅನಿವಾರ್ಯ. ಸಂಪರ್ಕ ಭಾಷೆಯಾಗಿ ಕಾರ್ಯ ನಿರ್ವಹಿಸುವ ಭಾಷೆ ಒಂದು ಸಹಜ ಭಾಷೆಯಾಗಿರುವುದು ಸೂಕ್ತವೆಂಬುದು ಪ್ರಚಲಿತ ಚಿಂತನೆ. ಕೃತಕ ಭಾಷೆಗಳಿಗೆ ಮಿತಿಗಳಿವೆ. ಅವುಗಳನ್ನು ವ್ಯಾಪಕವಾಗಿ ಬಳಸಲು ಹಲವಾರು ತೊಡಕುಗಳಿವೆ. ಅಲ್ಲದೆ ಆ ಭಾಷೆಗಳಲ್ಲೇ ಅಂತರ್ಗತ ವಾಗಿರುವ ಬಿಕ್ಕಟ್ಟುಗಳಿವೆ. ಆದ್ದರಿಂದ ಅವು ಸಮರ್ಥ ಸಂಪರ್ಕ ಭಾಷೆಗಳಾಗಿ ರೂಪುಗೊಳ್ಳುವುದು ಸಂದೇಹಾಸ್ಪದ. ಈಗಿರುವಂತೆ ವಿಶ್ವವ್ಯಾಪಿಯಾದ ಸಂಪರ್ಕ ಭಾಷೆಯಾಗಿ ಕಾರ್ಯ ನಿರ್ವಹಿಸಲು ಇಂಗ್ಲಿಶ್ ಸಮರ್ಥವಾಗಿದೆಯೆಂಬುದು ಹಲವರ ಅಭಿಪ್ರಾಯ.

ಏಕೆ ಇಂಗ್ಲಿಶ್

ಇಂಗ್ಲಿಶ್ ವಿಶ್ವದಲ್ಲೇ ಅತಿ ವ್ಯಾಪಕವಾಗಿ ಬಳಕೆಯಾಗುತ್ತಿರುವ ಭಾಷೆ. ಕೆಲವು ಮಾಹಿತಿಗಳು ಈ ಕೆಳಕಂಡಂತಿವೆ. ಸುಮಾರು 30 ಕೋಟಿ ಜನರಿಗೆ ಇಂಗ್ಲಿಶ್ ಮೊದಲ ಭಾಷೆ. ಇಷ್ಟೇ ಪ್ರಮಾಣದ ಜನರು ಈ ಭಾಷೆಯನ್ನು ದ್ವಿತೀಯ ಭಾಷೆಯನ್ನಾಗಿ ಬಳಸುತ್ತಿದ್ದಾರೆ. ಇದಲ್ಲದೆ ಹತ್ತಿರ ಹತ್ತಿರ ಹತ್ತು ಕೋಟಿ ಜನರು ಇಂಗ್ಲಿಶ್ ಭಾಷೆಯನ್ನು ವಿದೇಶೀ ಭಾಷೆಯನ್ನಾಗಿ ಕಲಿತಿದ್ದಾರೆ. ಸುಲಲಿತವಾಗಿ ಬಳಸುತ್ತಿದ್ದಾರೆ. 1950 ರಲ್ಲಿದ್ದ ಬಳಕೆದಾರರಿ ಗಿಂತ ಈಗ ಪ್ರತಿ ಶತ 40 ರಷ್ಟು ಹೆಚ್ಚಳ ಕಂಡುಬಂದಿದೆ. ಇನ್ನೂ ಕೆಲವರ ಅಂದಾಜಿನಂತೆ ಇಂಗ್ಲಿಶ್ ಬಲ್ಲವರ ಸಂಖ್ಯೆ ಈಗ ನೂರು ಕೋಟಿಯನ್ನು ದಾಟಿದೆ. ಈ ಅಂದಾಜಿನಲ್ಲಿ ಈ ಭಾಷೆಯನ್ನು ಸುಮಾರಾಗಿ ಮಾತಾಡುವವರು, ಕೇಳಿ ಅರ್ಥ ಮಾಡಿಕೊಳ್ಳುವವರು ಸೇರಿದ್ದಾರೆ. ಏನೇ ಆಗಲಿ ಈ ಅಂಕಿ ಸಂಖ್ಯೆಗಳನ್ನು ನಿಖರ ಮಾಹಿತಿಯೆಂದು ಹೇಳಲಾಗುವುದಿಲ್ಲ. ಏಕೆಂದರೆ ಎಷ್ಟೋ ಬೃಹತ್ ರಾಷ್ಟ್ರಗಳಲ್ಲಿ ಈ ಮಾಹಿತಿ ಸಂಗ್ರಹಣೆಯ ಕ್ರಮವೇ ಸಂದಿಗ್ಧವಾಗಿದೆ. ಸರಿ ಸುಮಾರು ವಿಶ್ವದ ಜನಸಂಖ್ಯೆಯ ಮೂರನೇ ಒಂದು ಪಾಲಿಗಿಂತಲೂ ಅಧಿಕ ಜನರಿರುವ ಭಾರತ ಮತ್ತು ಚೈನಾಗಳಲ್ಲಿ ಇಂಗ್ಲಿಶ್ ಬಲ್ಲವರ ಸಂಖ್ಯೆ ಎಷ್ಟೆಂಬುದು ಖಚಿತವಾಗಿ ತಿಳಿದಿಲ್ಲ. ಚೈನಾದಲ್ಲಿ ಇಂಗ್ಲಿಶ್ ಕಲಿಯಲು ಉತ್ಸುಕತೆ ಈಚಿನ ದಶಕಗಳಲ್ಲಿ ಅಧಿಕಗೊಂಡಿದೆಯೆಂದು ವರದಿ ಮಾಡಲಾಗಿದೆ. ವ್ಯವಸ್ಥಿತವಾಗಿ ನಡೆಯುತ್ತಿರುವ ಇಂಗ್ಲಿಶ್ ಜಾಲ ವಿಸ್ತರಣೆಯ ಕಾರ್ಯಕ್ರಮಗಳು ಯಶಸ್ವಿಯಾದರೆ ವಿಶ್ವದಲ್ಲಿ ಈ ಭಾಷೆಯನ್ನು ಬಲ್ಲವರ ಸಂಖ್ಯೆ ದುಪ್ಪಟ್ಟುಗೊಳ್ಳುವ ಸಾಧ್ಯತೆಯಿದೆ.

ಇಂಗ್ಲಿಶನ್ನು ವಿಶ್ವದಲ್ಲಿ ಯಾವ ಯಾವ ಉದ್ದೇಶಗಳಿಗಾಗಿ ಎಷ್ಟು ಪ್ರಮಾಣದಲ್ಲಿ ಬಳಸಲಾಗುತ್ತಿದೆ ಎಂಬುದನ್ನು ತಿಳಿಯಲು ವಿವಿಧ ಸಮೀಕ್ಷೆಗಳು ನಡೆದಿವೆ. ಈ ಸಮೀಕ್ಷೆಗಳಿಂದಲೂ ಇಂಗ್ಲಿಶ್ ಭಾಷೆಯ ವ್ಯಾಪಕ ಬಳಕೆಯ ಸ್ವರೂಪ ಮತ್ತಷ್ಟು ಖಚಿತಗೊಂಡಿದೆ. ಸುಮಾರು 60 ದೇಶಗಳಲ್ಲಿ ಇಂಗ್ಲಿಶ್ ಅಧಿಕೃತ ಭಾಷೆ ಅಥವಾ ಇನ್ನೊಂದು ಭಾಷೆಯೊಡನೆ ಅಧಿಕೃತ ಭಾಷೆಯಾಗಿದೆ. ಮತ್ತೆ 20 ದೇಶಗಳಲ್ಲಿ ಒಂದು ಪ್ರಧಾನ ಭಾಷೆಯಾಗಿದೆ. ಆರು ಖಂಡಗಳಲ್ಲಿ ಈ ಭಾಷೆಯೇ ಮುಖ್ಯ ಸ್ಥಾನದಲ್ಲಿದೆ ಅಥವಾ ಸಮರ್ಥ ಭಾಷೆಯಾಗಿದೆ. ಪುಸ್ತಕ ಪ್ರಕಟನೆ, ವಾರ್ತಾಪತ್ರಗಳು, ವಾಯುಯಾನದ ನಿಲ್ದಾಣಗಳು, ವಾಯುಯಾನ ನಿಯಂತ್ರಣ ಕೇಂದ್ರಗಳು, ಅಂತಾರಾಷ್ಟ್ರೀಯ ವಾಣಿಜ್ಯ ಸಂಬಂಧಗಳು, ಶಿಕ್ಷಣ ಸಮಾವೇಶಗಳು, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ರಾಜತಂತ್ರ, ಕ್ರೀಡೆ, ಅಂತಾರಾಷ್ಟ್ರೀಯ ಸ್ಪರ್ಧೆಗಳು, ಪಾಪ್ ಸಂಗೀತ, ಜಾಹೀರಾತು ಹೀಗೆ ಒಂದೇ ಎರಡೇ. ಹಲವಾರು ಕ್ಷೇತ್ರಗಳಲ್ಲಿ ಇಂಗ್ಲಿಶ್‌ನ ಕಾರುಭಾರ ನಡೆದಿದೆ. ಪ್ರಪಂಚದಲ್ಲಿ ರವಾನೆಯಾಗುವ ಅಂಚೆಯಲ್ಲಿ ಮುಕ್ಕಾಲು ಭಾಗ ಇಂಗ್ಲಿಶ್‌ನಲ್ಲಿರುತ್ತದೆ. ಗಣಕಗಳಲ್ಲಿ ಸಂಗ್ರಹಗೊಂಡ ಬೃಹತ್ ಮಾಹಿತಿ ಕಣಜಗಳಲ್ಲಿ ಪ್ರತಿಶತ 80 ಭಾಗ ಇಂಗ್ಲಿಶ್ ಭಾಷೆಯನ್ನು ಬಳಸುತ್ತವೆ. 120 ದೇಶಗಳ 15 ಕೋಟಿ ಜನರು ಆಲಿಸುವ ರೇಡಿಯೋ ಕಾರ್ಯಕ್ರಮಗಳು ಇಂಗ್ಲಿಶ್ ಭಾಷೆಯಲ್ಲಿ ಪ್ರಸಾರವಾಗುತ್ತಿವೆ. ಶಾಲಾ ಶಿಕ್ಷಣದ ಪ್ರಾಥಮಿಕ ಹಂತದಲ್ಲೇ ಇಂಗ್ಲಿಶನ್ನು 5 ಕೋಟಿ ಮಕ್ಕಳು ಹೆಚ್ಚುವರಿ ಭಾಷೆಯಾಗಿ ಕಲಿಯುತ್ತಿದ್ದಾರೆ. 8 ಕೋಟಿ ಜನರು ಪ್ರೌಢ ಶಿಕ್ಷಣದಲ್ಲಿ ಈ ಭಾಷೆಯನ್ನು ಕಲಿಯುತ್ತಿದ್ದಾರೆ. ಬ್ರಿಟಿಶ್ ಕೌನ್ಸಿಲ್ ಸಂಸ್ಥೆ ಪ್ರತಿ ವರ್ಷ ಎರಡೂವರೆ ಲಕ್ಷ ವಿದ್ಯಾರ್ಥಿಗಳಿಗೆ ವಿದೇಶೀ ಭಾಷೆಯಾಗಿ ಕಲಿಯಲು ನೆರವಾಗುತ್ತದೆ. ಈ ಕಲಿಕೆಯ ಜಾಲಕ್ಕೆ ಬರುವ ವಿದ್ಯಾರ್ಥಿಗಳು ವಿಶ್ವದ ಹಲವು ದೇಶಗಳಲ್ಲಿ ಹರಡಿಕೊಂಡಿದ್ದಾರೆ. ಇಂಗ್ಲಿಶ್ ಕಲಿಕೆಯ ಅತ್ಯವಶ್ಯಕವೆಂಬ ನಂಬುಗೆ ಹಲವು ರಾಷ್ಟ್ರಗಳಲ್ಲಿ ಬಲವಾಗಿ ಬೇರುಬಿಟ್ಟಿದೆ. ಅದಕ್ಕಾಗಿಯೇ ಆ ಭಾಷೆ ಕಲಿಯಲು ಉಮೇದು ಕೂಡಾ ಬಲವಾಗಿದೆ.

ಇಂಗ್ಲಿಶ್‌ಗೆ ಅಗ್ರಸ್ಥಾನ ಈಗ ಅಯಾಚಿತವಾಗಿ ದೊರಕಿದಂತೆ ತೋರುತ್ತದೆ. ಬಳಕೆಯ ವ್ಯಾಪಕತೆ ಮತ್ತು ಭೌಗೋಳಿಕ ಪ್ರಸಾರದ ದೃಷ್ಟಿಯಿಂದಲೂ ಆ ಭಾಷೆಗೆ ಹತ್ತಿರ ಬರುವ ಭಾಷೆಗಳೇ ಇಲ್ಲವಾಗಿವೆ. ಚೀನಾದ ಭಾಷೆಯ ವಿವಿಧ ಬಗೆಗಳನ್ನು ಆಡುವವರ ಒಟ್ಟು ಸಂಖ್ಯೆ ವಿಶ್ವವ್ಯಾಪಿ ಇಂಗ್ಲಿಶ್ ಬಳಕೆದಾರರ ಸಂಖ್ಯೆಯನ್ನು ಮೀರಿಸಬಲ್ಲದು. ಆದರೆ ಚೈನೀಸ್‌ಗೆ ಅಂತಾ ರಾಷ್ಟ್ರೀಯ ಭಾಷೆಗಿರಬೇಕಾದ ಹರಡುವಿಕೆ ಇಲ್ಲವಾಗಿದೆ. ಭೌಗೋಳಿಕವಾಗಿ ಬಳಕೆದಾರರೆಲ್ಲ ಸಾಂದ್ರಗೊಂಡಿದ್ದಾರೆ. ಭಾರತದಲ್ಲಿ ಹಿಂದಿ ತನ್ನ ಬಳಕೆದಾರರ ಜಾಲವನ್ನು ವಿಸ್ತರಿಸಿಕೊಂಡಿದೆ. ಆದರೆ ಈ ದೇಶದ ಹೊರಗೆ ಅದನ್ನು ಬಳಸುವವರ ಸಂಖ್ಯೆ ಸೀಮಿತವಾಗಿದೆ. ಅಲ್ಲದೆ ಅಧಿಕೃತವಾಗಿ ಅದನ್ನು ಪ್ರಯೋಗಿಸುವ ವಲಯಗಳೂ ಕಡಿಮೆ. ಸ್ಪಾನಿಶ್ ಭಾಷೆಗೆ ಮೂಲಭಾಷಿಕರ ದೇಶ ಸ್ಪೇನನ್ನು ಸೇರಿಸಿಕೊಂಡು ದಕ್ಷಿಣ ಅಮೆರಿಕ ಮತ್ತು ಮಧ್ಯ ಅಮೆರಿಕದ ಕೆಲವು ದೇಶಗಳಲ್ಲಿ ಅಧಿಕೃತ ಬಳಕೆಯಿದೆ. ಅರಾಬಿಕ್ ಮತ್ತು ಪರ್ಷಿಯನ್‌ಗಳಿಗೂ ಹೀಗೆ ಬಹುದೇಶಗಳ ಬಳಕೆಯುಂಟು. ಹೀಗಿದ್ದರೂ ಇವು ಯಾವೂ ಇಂಗ್ಲಿಶ್‌ನ ಭಾಗಕ್ಕೆ ಸವಾಲನ್ನು ಒಡ್ಡುವಷ್ಟು ಸಮರ್ಥವಾಗಿಲ್ಲ.

ಇಂಗ್ಲಿಶ್ ವ್ಯಾಪಕತೆಯ ಗುಟ್ಟು

ಹಾಗೆ ನೋಡಿದರೆ ಇದು ಗುಟ್ಟಿನ ವಿಷಯವೇನೂ ಅಲ್ಲ. ವಸಾಹತುಗಳ ನಿರ್ಮಾಣ, ಆಳ್ವಿಕೆಯ ಪರಿಣಾಮವಾಗಿ ಜಗತ್ತಿನ ಬಹುಪಾಲು ದೇಶಗಳು ಇಂಗ್ಲಿಶ್ ಭಾಷೆಯ ಸಂಪರ್ಕವನ್ನು ಪಡೆದವು. ವಸಾಹತುಗಳಿಗೆ ಸ್ವಯ ಮಾಡಳಿತ ದೊರಕಿದರೂ ದೇಶೀಯ ಭಾಷೆಗಳ ಮೇಲೆ ಇಂಗ್ಲಿಶ್ ಯಾಜ ಮಾನ್ಯ ಸಾಧಿಸುವುದು ಮುಂದುವರೆಯಿತು. ಬಂಡವಾಳಗಾರರು ಅವರ ಕಂಪನಿ ಗಳೂ ಬಹುಪಾಲು ಇಂಗ್ಲಿಶ್ ಮಾತಾಡುವ ದೇಶಗಳಿಗೆ ಸೇರಿದವರಾಗಿದ್ದರಿಂದ ಬದಲಾದ ಪರಿಸ್ಥಿತಿಯಲ್ಲಿ ಇಂಗ್ಲಿಶ್‌ನ ಸ್ಥಾನಮಾನಕ್ಕೆ ಚ್ಯುತಿಯೊದಗಲಿಲ್ಲ. ಕ್ರಿಶ್ಚಿಯನ್ ಧರ್ಮ ಪ್ರಸಾರವೂ ವಸಾಹತೀಕರಣದ ಭಾಗವಾಗಿ ನಡೆಯಿತಾದ್ದ ರಿಂದ ಧಾರ್ಮಿಕ ಕ್ಷೇತ್ರದಲ್ಲಿ ಈ ಭಾಷೆಗೆ ಅವಕಾಶ ಒದಗಿಬಂತು. ಈಗಲೂ ಈ ಭಾಷೆಯ ವಿಸ್ತರಣಶೀಲತೆಗೆ ಒತ್ತಾಸೆಗಳು ಅಧಿಕವಾಗಿವೆ. ಅಂತಾರಾಷ್ಟ್ರೀಯ ರಾಜಕಾರಣದ ಜತೆಗೆ ಸಾಂಸ್ಕೃತಿಕ ವಲಯದಲ್ಲಿ ಈ ಭಾಷೆಯ ಕೊಂಬೆಗಳು ಹರಡಿಕೊಳ್ಳುತ್ತಿವೆ.

ವಿರೋಧ

ಇಷ್ಟಾದರೂ ಇಂಗ್ಲಿಶ್‌ಗೆ ಅನಧಿಕೃತವಾಗಿ ದೊರಕಿರುವ ಅಂತಾರಾಷ್ಟ್ರೀಯ ಭಾಷೆಯ ಪಟ್ಟವನ್ನು ಎಲ್ಲರೂ ಸರ್ವಸಮ್ಮತಿಯಿಂದ ಒಪ್ಪಿದಾರೆಂದಲ್ಲ. ಈಗಾಗಲೇ ಆ ಭಾಷೆಯನ್ನು ಪ್ರಥಮ ಭಾಷೆಯಾಗಿ ಕಲಿತವರು ಮತ್ತು ಅಂಥವರು ಅಧಿಕವಾಗಿರುವ ರಾಷ್ಟ್ರಗಳು ಇಂಗ್ಲಿಶಿನ ಪರವಾಗಿ ನಿಂತರೆ, ಆ ಭಾಷೆಯನ್ನು ಹೊಸದಾಗಿ ಕಲಿಯಬೇಕಾಗಿರುವವರು ಮತ್ತು ಸಮೃದ್ಧವಾದ ಇನ್ನೊಂದು ಭಾಷೆಯನ್ನು ಮಾತಾಡುವವರು ಇಂಗ್ಲಿಶಿನ ಪರವಾಗಿ ನಿಲ್ಲುತ್ತಿಲ್ಲ. ಇದು ಸಹಜ. ಅಮೆರಿಕ ಇಲ್ಲವೇ ಬ್ರಿಟನ್ನಿನ ವಿಜ್ಞಾನಿಯೊಬ್ಬರು ಇಂಗ್ಲಿಶಿನಲ್ಲಿ  ಸಹಜವಾಗಿ ವ್ಯವಹರಿಸಬಲ್ಲರು. ಮತ್ತು ಆ ಭಾಷೆಯಲ್ಲಿ ಮಂಡಿಸಲಾದ ಯಾವುದೇ ವಿಷಯವನ್ನು ಸುಲಭವಾಗಿ ಗ್ರಹಿಸಬಲ್ಲರು. ಆದರೆ ಇಂಗ್ಲಿಶನ್ನು ಅನ್ಯಭಾಷೆಯಾಗಿ ಕಲಿಯುವ ಮತ್ತು ಬಳಸುವ ಬೇರೆ ದೇಶದ ವಿಜ್ಞಾನಿ ಸಹಜವಾಗಿಯೇ ಹಿಂಜರಿತವನ್ನು ಅನುಭವಿಸುತ್ತಾರೆ. ಆ ಭಾಷೆಯನ್ನು ಕಲಿಯಲು ವಿಶೇಷ ಶ್ರಮವನ್ನು ಸಮಯವನ್ನು ವ್ಯಯಮಾಡಬೇಕಲ್ಲದೆ ಕಲಿತ ಮೇಲೂ ತಾರತಮ್ಯದ ಸ್ಥಿತಿ ನಿವಾರಣೆಯಾಗಿರುವುದಿಲ್ಲ.

ಇದೆಲ್ಲದರ ಜತೆಗೆ ಇಂಗ್ಲಿಶಿನ ಈ ಬಿಗಿ ಹಿಡಿತದಿಂದಾಗಿ ಜಗತ್ತಿನಾದ್ಯಂತ ಇರುವ ನೂರಾರು ಅಲ್ಪಸಂಖ್ಯಾತ ಭಾಷೆಗಳು ವಿನಾಶದ ಅಂಚಿಗೆ ಬಂದು ನಿಲ್ಲುತ್ತವೆ. ಈ ಅಲ್ಪಸಂಖ್ಯಾತ ಭಾಷೆಗಳಿಗೂ ಅವುಗಳನ್ನು ಬಳಸುವ ಭಾಷಿಕರಿರುವ ರಾಷ್ಟ್ರಗಳಿಗೂ ಎಷ್ಟೊಂದು ನಿಕಟ ಸಂಬಂಧವಿದೆಯೆಂದರೆ ಆ ಭಾಷೆಗಳ ವಿನಾಶವೆಂದರೆ ಪರೋಕ್ಷವಾಗಿ ಆ ರಾಷ್ಟ್ರಗಳ ಸ್ವಂತಿಕೆಯನ್ನು, ಸ್ಥಿರತೆಯನ್ನು, ವಿಶಿಷ್ಟ ಚಹರೆಯನ್ನು ನಿರಾಕರಿಸಿದಂತೆಯೇ ಸರಿ. ಈ ಎಲ್ಲ ಕಾರಣಗಳಿಂದಾಗಿ ಯಾವುದಾದರೊಂದು ಭಾಷೆಗೆ ವಿಶ್ವವ್ಯಾಪಿ ಭಾಷೆಯ ಅಧಿಕೃತ ಸ್ಥಾನಮಾನವನ್ನು ನೀಡುವ ಪ್ರಯತ್ನವನ್ನು ಹಲವರು ಆತಂಕದಿಂದ ನೋಡುತ್ತಾರೆ. ಯಾವುದೇ ಅಂಥ ಯತ್ನದ ದುಷ್ಪರಿಣಾಮದ ವಿರುದ್ಧ ಎಚ್ಚರಿಸಲು ಸನ್ನದ್ಧರಾಗಿದ್ದಾರೆ.

ಇಂಗ್ಲಿಶ್‌ನ ಸ್ಥಾನಕ್ಕೆ ಸವಾಲು ಹೀಗೆ ಹೊರಗಿನಿಂದ ಬಂದಿದೆಯಾದರೂ ಒಳಗಿನಿಂದಲೇ ಕೆಲವು ಬಿಕ್ಕಟ್ಟುಗಳನ್ನು ಆ ಭಾಷೆ ಎದುರಿಸುತ್ತಿದೆ. ಭಾಷೆ ಯೊಂದನ್ನು ವಿವಿಧ ದೇಶಗಳಲ್ಲಿ ಬಳಸತೊಡಗಿದಾಗ, ವಿವಿಧ ಉದ್ದೇಶಗಳಿಗಾಗಿ ಆ ಭಾಷೆ ಉಪಯೋಗವಾಗುವಾಗ ಸಹಜವಾಗಿಯೇ ಆ ಭಾಷೆಯಲ್ಲಿ ಹಲವಾರು ಪ್ರಭೇದಗಳು ಉಂಟಾಗುತ್ತವೆ. ಬೇರೆ ಬೇರೆ ದೇಶದ ಜನರು ತಮ್ಮ ಚಹರೆಯನ್ನು ಉಳಿಸಿಕೊಳ್ಳಲು ತಾವು ಬಳಸುವ ಇಂಗ್ಲಿಶ್‌ನಲ್ಲಿ ತಮ್ಮ ವಿಶಿಷ್ಟತೆಯನ್ನು ಕಾಯ್ದುಕೊಳ್ಳುತ್ತಾರೆ. ಈ ವಿಶಿಷ್ಟತೆ ರೂಪುಗೊಳ್ಳಲು ಹಲವಾರು ಕಾರಣಗಳಿರುತ್ತವೆ. ಅದರ ಪರಿಣಾಮವಾಗಿ ಒಂದು ಇಂಗ್ಲಿಶಿನ ಬದಲು ಹಲವು ಇಂಗ್ಲಿಶ್‌ಗಳು ಬಳಕೆಗೆ ಬಂದಿವೆ. ಈಗ ಜಗತ್ತಿನಲ್ಲಿರುವುದು ಒಂದು ಇಂಗ್ಲಿಶ್ ಅಲ್ಲ; ಇಂಗ್ಲಿಶ್‌ಗಳು. ಬೇರೆ ಬೇರೆ ದೇಶಗಳಲ್ಲಿ ಬಳಕೆ ಯಲ್ಲಿ ಏಷಿಯಾ ಖಂಡದಲ್ಲೇ ಭಾರತೀಯ ಇಂಗ್ಲಿಶ್ ಎಂಬ ಒಂದು ಮಾದರಿ ಯನ್ನು ಗುರುತಿಸಲಾಗಿದೆ. ಈ ಇಂಗ್ಲಿಶ್‌ಗೆ ಪ್ರತ್ಯೇಕ ಪದಕೋಶವಿದೆ; ಧ್ವನಿ ರಚನೆಯ ನಿಯಮಗಳು ಮತ್ತು ವ್ಯಾಕರಣ ನಿಯಮಗಳು ಕೂಡ ಬ್ರಿಟಿಷ್ ಮಾದರಿಗಿಂತ ಗುರುತಿಬಹುದಾದಷ್ಟು ಭಿನ್ನವಾಗಿವೆ. ಪರಿಸ್ಥಿತಿ ಹೀಗಿರುವಾಗ ಯಾವ ಮಾದರಿಯ ಇಂಗ್ಲಿಶನ್ನು ವಿಶ್ವವ್ಯಾಪಿ ಎಂದು ಗುರುತಿಸುವುದು?

ಇಂಗ್ಲಿಶ್ ಪರವಾಗಿ ವಾದಿಸುವವರು ಈ ಹತಾಶ ಸ್ಥಿತಿಯನ್ನು ತಲುಪಿಲ್ಲ. ಅವರು, ಇಂಗ್ಲಿಶ್‌ನ ವಿವಿಧ ರೂಪಗಳು ಬಳಕೆಗೆ ಬರುತ್ತಿದ್ದರೂ ಆ ರೂಪಗಳು ಪರಸ್ಪರ ಭಿನ್ನವೆನಿಸುವಷ್ಟು ದೂರ ಸರಿದಿಲ್ಲವೆನ್ನುತ್ತಾರೆ. ಅಲ್ಲದೆ ಸಂವಹನದ ಹಾದಿಗಳು ಸುಗಮಗೊಂಡು ತೀವ್ರ ವೇಗದಲ್ಲಿ ನಾಡುಗಳ ನಡುವೆ ಸಂಪರ್ಕ ಸಾಧ್ಯವಾಗಿರುವ ಈ ದಿನಗಳಲ್ಲಿ ಈ ವಿವಿಧ ಮಾದರಿಯ ಇಂಗ್ಲಿಶ್‌ಗಳೂ ತಮ್ಮ ನಡುವಣ ಅಂತರವನ್ನು ಕಡಿಮೆ ಮಾಡಿಕೊಂಡು ಒಂದೇ ಚೌಕಟ್ಟಿಗೆ ಬರುವ ಸಾಧ್ಯತೆಗಳು ಹೆಚ್ಚಿವೆಯೆಂದೂ ತಿಳಿಯುತ್ತಾರೆ. ಈ ಅನಿಸಿಕೆ ಸುಳ್ಳಿರಲಾರದು. ಆದರೆ ಹೀಗೆ ಇಂಗ್ಲಿಶ್‌ಗಳು ತಮ್ಮ  ಚಹರೆಗಳನ್ನು ತೊರೆದು ಒಂದು ವಿಶ್ವವ್ಯಾಪಿ ಇಂಗ್ಲಿಶ್‌ನ ನೆರಳಿಗೆ ಸರಿಯುವುದೇ ಆದರೆ ಆ ವಿಶ್ವವ್ಯಾಪಿ ಇಂಗ್ಲಿಶ್, ಬಂಡವಾಳಶಾಹಿ ದೇಶಗಳ ಇಂಗ್ಲಿಶ್ ಆಗಿರುತ್ತದೆ ಎನ್ನುವುದೂ ಸುಳ್ಳಿರಲಾರದು.