ವಿಶ್ವವ್ಯಾಪಿ ಜಾಲದ ಮೂಲಕ ಇಮೇಲ್ ಬಳಕೆ ಪ್ರಾರಂಭವಾದ ಹೊಸದರಲ್ಲಿ ಅದರ ವ್ಯವಹಾರವೆಲ್ಲ ಇಂಗ್ಲಿಷಿನಲ್ಲೇ ಇತ್ತು. ಬರಿಯ ಇಮೇಲ್ ಅಷ್ಟೇ ಏಕೆ, ನಮ್ಮ ಮಟ್ಟಿಗೆ ಇಡಿಯ ವಿಶ್ವವ್ಯಾಪಿ ಜಾಲವೇ ಇಂಗ್ಲಿಷ್‌ಮಯವಾಗಿತ್ತು.

ಆಗ ಇಮೇಲ್‌ನಲ್ಲಿ ವ್ಯವಹರಿಸುವಾಗ ಕನ್ನಡ ಸಂದೇಶಗಳನ್ನು ಇಂಗ್ಲಿಷ್ ಲಿಪಿಯಲ್ಲೇ ಬರೆಯುವ ಅಭ್ಯಾಸವಿತ್ತು. “ಏನಪ್ಪಾ, ಚೆನ್ನಾಗಿದ್ದೀಯಾ?” ಎನ್ನುವುದಕ್ಕೆ “Enappa, chennagiddeeyaa?” ಎಂದು ಲಿಪ್ಯಂತರಿಸಿ ಬರೆಯುವ ಈ ಭಾಷೆಯನ್ನು ಈಗಲೂ ಕೆಲವರು ರೂಢಿಯಲ್ಲಿಟ್ಟುಕೊಂಡಿದ್ದಾರೆ. ಆದರೆ ಕನ್ನಡ ಸಂದೇಶಗಳನ್ನು ಇಂಗ್ಲಿಷಿನಲ್ಲಿ ಬರೆಯುವುದು ಎಷ್ಟು ಕಷ್ಟವೋ ಅದನ್ನು ಓದುವುದು ಇನ್ನೂ ಕಷ್ಟ ಎನ್ನುವುದು ನಮ್ಮೆಲ್ಲರ ಅನುಭವಕ್ಕೂ ಬಂದಿರುವ ವಿಷಯವೇ.

ನಂತರ ಕನ್ನಡ ಪದಸಂಸ್ಕಾರಕಗಳು ಬಂದವು. ಆಗ ಕನ್ನಡದಲ್ಲಿ ಸಿದ್ಧಪಡಿಸಿದ ಕಡತಗಳನ್ನು ಅಟ್ಯಾಚ್‌ಮೆಂಟ್ ರೂಪದಲ್ಲಿ ವಿನಿಮಯ ಮಾಡಿಕೊಳ್ಳುವ ಅಭ್ಯಾಸ ಶುರುವಾಯಿತು. ಮೊದಲಿಗೆ ‘ಬರಹ’, ಹಾಗೂ ನಂತರದ ದಿನಗಳಲ್ಲಿ ‘ನುಡಿ’ (ಇದರ ಮೊದಲ ಹೆಸರು ‘ಕಲಿತ’ ಎಂದಿತ್ತು) ತಂತ್ರಾಂಶಗಳು ಉಚಿತವಾಗಿ ದೊರಕುವಂತಾದಾಗ ಇಮೇಲ್ ಮಾಧ್ಯಮದಲ್ಲಿ ಮಾತ್ರವೇ ಅಲ್ಲ, ಒಟ್ಟು ವಿಶ್ವವ್ಯಾಪಿ ಜಾಲದಲ್ಲೇ ಕನ್ನಡದ ಬಳಕೆ ಇನ್ನಷ್ಟು ವ್ಯಾಪಕವಾಯಿತು.

ಆದರೆ ಇಲ್ಲೂ ಒಂದು ಸಮಸ್ಯೆಯಿತ್ತು. ಯಾವುದೇ ಕನ್ನಡ ತಂತ್ರಾಂಶ ಬಳಸಿ ನೀವೊಂದು ಕಡತ ತಯಾರಿಸಿದ್ದರೆ ನಿಮ್ಮ ಸಂದೇಶ ಓದುವವರಲ್ಲೂ ಆ ತಂತ್ರಾಂಶ, ಅಥವಾ ಕನಿಷ್ಠಪಕ್ಷ ಅದರ ಫಾಂಟುಗಳಾದರೂ ಇರಬೇಕಿದ್ದು ಅನಿವಾರ್ಯವಾಗಿತ್ತು. ಜಾಲತಾಣಗಳ ಪರಿಸ್ಥಿತಿಯೂ ಹೀಗೆಯೇ ಇತ್ತು. ಸರಿಯಾದ ಫಾಂಟುಗಳಿಲ್ಲದ ಕಂಪ್ಯೂಟರಿನಲ್ಲಿ ಕನ್ನಡ ತಾಣಗಳಲ್ಲಿದ್ದ ಪಠ್ಯವೆಲ್ಲ ಇಂಗ್ಲಿಷ್ ಅಕ್ಷರಗಳ ಅಸಂಬದ್ಧ ಜೋಡಣೆಯಂತೆಯೇ ಕಾಣಸಿಗುತ್ತಿದ್ದವು.

ರೆಡಿಫ್‌ಮೇಲ್, ಇ-ಪತ್ರ, ಇ-ಟಪಾಲ್ ಮುಂತಾದ ಕೆಲ ತಾಣಗಳು ಬೇರೆ ತಂತ್ರಾಂಶದ ಅಗತ್ಯವಿಲ್ಲದೆ ಕನ್ನಡದಲ್ಲೇ ಇಮೇಲ್ ಕಳುಹಿಸುವ ಸೌಲಭ್ಯವನ್ನು ಒದಗಿಸಿದವಾದರೂ ಅವು ಯಾವುವೂ ಪರಿಪೂರ್ಣವಾಗಿರಲಿಲ್ಲ. ಜಾಲತಾಣಗಳ ಮಟ್ಟಿಗೆ ಈ ಸಮಸ್ಯೆ ಡೈನಮಿಕ್ ಫಾಂಟ್‌ನಿಂದ ಕೊಂಚಮಟ್ಟಿಗೆ ನಿವಾರಣೆಯಾಯಿತು; ಆದರೂ ಮಾಹಿತಿಯೆಲ್ಲ ಫಾಂಟ್ ಮೇಲೆಯೇ ಆಧರಿತವಾಗಿದ್ದರಿಂದ ಸರ್ಚ್ ಇಂಜನ್ ಮೂಲಕ ಆಗಲೂ ಕನ್ನಡದ ಮಾಹಿತಿಯನ್ನು ಸುಲಭವಾಗಿ ಹುಡುಕಲು ಆಗುತ್ತಿರಲಿಲ್ಲ (ಕೆಲವು ಕನ್ನಡ ತಾಣಗಳ ಮಟ್ಟಿಗೆ ಈ ಪರಿಸ್ಥಿತಿ ಈಗಲೂ ಮುಂದುವರೆದಿದೆ!).

ಈ ಪರಿಸ್ಥಿತಿ ಬದಲಾದದ್ದು ಯುನಿಕೋಡ್ ಸಂಕೇತ ವಿಧಾನ ಬಳಕೆಗೆ ಬಂದಾಗ. ಇಮೇಲ್ ಕಳುಹಿಸುವುದು, ಜಾಲತಾಣಗಳಿಗೆ-ಬ್ಲಾಗುಗಳಿಗೆ ಮಾಹಿತಿ ಸೇರಿಸುವುದು, ಅವನ್ನು ಓದುವುದು, ಕನ್ನಡದ ಮಾಹಿತಿಯನ್ನು ಸರ್ಚ್ ಇಂಜನ್‌ಗಳಲ್ಲಿ ಕನ್ನಡದಲ್ಲೇ ಹುಡುಕುವುದು – ಇದೆಲ್ಲವನ್ನೂ ನಿರ್ದಿಷ್ಟ ತಂತ್ರಾಂಶದ ಮೇಲೆ ಅವಲಂಬಿತರಾಗದೆ ಮಾಡಲು ಸಾಧ್ಯವಾಗಿಸಿದ್ದು ಯುನಿಕೋಡ್. ಈ ವಿಶ್ವಸಂಕೇತದ ಸಣ್ಣದೊಂದು ಪರಿಚಯ ಇಲ್ಲಿದೆ.

* * *

ನಮಗೆಲ್ಲ ಗೊತ್ತಿರುವಂತೆ ಕಂಪ್ಯೂಟರ್‌ಗಳು ದ್ವಿಮಾನ ಪದ್ದತಿಯ ಅಂಕಿಗಳನ್ನು ಮಾತ್ರ ಅರ್ಥಮಾಡಿಕೊಳ್ಳಬಲ್ಲವು. ಅಂದರೆ ಅವುಗಳಲ್ಲಿರುವ ಯಾವುದೇ ಮಾಹಿತಿಯಾದರೂ ಅಂತಿಮವಾಗಿ ೦ ಹಾಗೂ ೧ರ ಜೋಡಣೆಯಲ್ಲೇ ಶೇಖರವಾಗಬೇಕು. ಹೀಗಾಗಿ ಯಾವುದೇ ಅಕ್ಷರ, ಸಂಖ್ಯೆ ಅಥವಾ ವ್ಯಾಕರಣ ಚಿಹ್ನೆಯನ್ನು ಸಹಜವಾಗಿಯೇ ಯಾವುದೋ ಒಂದು ಸಂಖ್ಯೆ ಪ್ರತಿನಿಧಿಸುತ್ತದೆ. ಹೀಗೆ ಪ್ರತಿಯೊಂದು ಅಕ್ಷರಕ್ಕೂ ಸಂಖ್ಯೆಗಳನ್ನು ನಿಗದಿಪಡಿಸುವುದು ಎನ್‌ಕೋಡಿಂಗ್ ವ್ಯವಸ್ಥೆಗಳ ಕೆಲಸ.

ಯುನಿಕೋಡ್ ಬಳಕೆಗೆ ಬರುವ ಮುನ್ನ ಹೀಗೆ ಸಂಖ್ಯೆಗಳನ್ನು ನಿಗದಿಪಡಿಸುವ ನೂರಾರು ಎನ್‌ಕೋಡಿಂಗ್ ವ್ಯವಸ್ಥೆಗಳು ಉಪಯೋಗದಲ್ಲಿದ್ದವು. ಕನ್ನಡದ ಉದಾಹರಣೆಯನ್ನೇ ತೆಗೆದುಕೊಂಡರೆ ಟೈಪಿಸುವ ಕ್ರಮ ಪ್ರಕಾಶಕ್‌ನಲ್ಲೊಂದು, ಶ್ರೀಲಿಪಿಯಲ್ಲೊಂದು, ನುಡಿಯಲ್ಲೊಂದು, ಬರಹದಲ್ಲೊಂದು ರೀತಿ ಇದೆಯಲ್ಲ!

ಆದರೆ ಇಂತಹ ಯಾವ ವ್ಯವಸ್ಥೆಯೂ ಬಳಕೆಯಲ್ಲಿರುವ ಎಲ್ಲ ಅಕ್ಷರಗಳನ್ನೂ ಪ್ರತಿನಿಧಿಸುವಷ್ಟು ಶಕ್ತವಾಗಿರಲಿಲ್ಲ. ಒಂದೇ ಎನ್‌ಕೋಡಿಂಗ್ ವ್ಯವಸ್ಥೆಯಲ್ಲಿ ಬೇರೆಬೇರೆ ಭಾಷೆಗಳನ್ನು ಪ್ರತಿನಿಧಿಸುವುದಂತೂ ಸಾಧ್ಯವೇ ಇರಲಿಲ್ಲ. ಬರಹದಲ್ಲೋ ನುಡಿಯಲ್ಲೋ ಟೈಪು ಮಾಡಿದ ಒಂದು ಸಾಲನ್ನು ಯಾವುದಾದರೂ ಇಂಗ್ಲಿಷ್ ಫಾಂಟಿಗೆ ಬದಲಿಸಿ ನೋಡಿದರೆ ಇದು ನಿಮಗೇ ತಿಳಿಯುತ್ತದೆ; ನುಡಿಯ ಉದಾಹರಣೆಯನ್ನೇ ತೆಗೆದುಕೊಂಡರೆ ಇಂಗ್ಲಿಷಿನ ‘C’ ಕನ್ನಡದ ‘ಅ’ ಆಗಿರುತ್ತದೆ ಅಷ್ಟೆ!

ಈ ಎನ್‌ಕೋಡಿಂಗ್ ವ್ಯವಸ್ಥೆಗಳ ನಡುವೆ ಪರಸ್ಪರ ಹೊಂದಾಣಿಕೆಯೂ ಇರುವುದಿಲ್ಲ. ಅಂದರೆ, ಒಂದು ಎನ್‌ಕೋಡಿಂಗ್ ವ್ಯವಸ್ಥೆಯಲ್ಲಿ ತಯಾರಾದ ಪಠ್ಯ ಬಹಳಷ್ಟು ಸಲ ಇನ್ನೊಂದು ಎನ್‌ಕೋಡಿಂಗ್ ವ್ಯವಸ್ಥೆಗೆ ಬದಲಾಗುವುದು ಕಷ್ಟವಾಗುತ್ತದೆ. ಬದಲಾವಣೆ ಸಾಧ್ಯವಾದಾಗಲೂ ಅದರಲ್ಲಿ ತಪ್ಪುಗಳು ನುಸುಳಿಬಿಟ್ಟಿರುತ್ತವೆ. ಈ ಪರಿಸ್ಥಿತಿಯನ್ನು ಬದಲಿಸಿದ್ದು ಯುನಿಕೋಡ್ ಸಾಧನೆ.

* * *

ಪ್ರಪಂಚಕ್ಕೆಲ್ಲ ಒಂದೇ ಸಂಕೇತವಿಧಾನ ಎಂಬ ಆಶಯಹೊಂದಿರುವ ಯುನಿಕೋಡ್‌ನಲ್ಲಿ ಪ್ರಪಂಚದ ಪ್ರತಿ ಭಾಷೆಗೂ ತನ್ನದೇ ಆದ ಸಂಕೇತಶ್ರೇಣಿ ಇದೆ. ಯುನಿಕೋಡ್ ಆಧಾರಿತ ತಂತ್ರಾಂಶಗಳಲ್ಲಿ ಬೆರಳಚ್ಚು ಮಾಡಿದ ಮಾಹಿತಿಯನ್ನು ನೇರವಾಗಿ ಮಾಹಿತಿ ಶೇಖರಣೆಯ ಸಂಕೇತವಾದ ಯುನಿಕೋಡ್‌ನಲ್ಲೇ ಸಂಗ್ರಹಿಸಿಡಲಾಗುತ್ತದೆ. ಮಾಹಿತಿ ಸಂವಹನೆಯಲ್ಲಿ ಅಕ್ಷರಶೈಲಿಯ ಸಂಕೇತಗಳ ಬದಲಿಗೆ ಮೂಲ ಮಾಹಿತಿಯನ್ನೇ ಕಳುಹಿಸುವುದರಿಂದ ಸಂದೇಶ ಪಡೆದುಕೊಳ್ಳುವವರ ಗಣಕದಲ್ಲಿ ಇಂಥದ್ದೇ ಅಕ್ಷರಶೈಲಿ ಇರಬೇಕು ಎಂಬ ಅಗತ್ಯ ಇರುವುದಿಲ್ಲ,

ನೀವು ಕಳುಹಿಸಿದ ಕಡತವನ್ನು, ಅಥವಾ ನಿಮ್ಮ ಜಾಲತಾಣವನ್ನು ಬೇರೊಬ್ಬರು ಓದಲು ಕನ್ನಡದ ಯಾವುದೇ ಓಪನ್‌ಟೈಪ್ ಅಕ್ಷರಶೈಲಿ ಇದ್ದರೆ ಸಾಕು. ವಿನ್ಯಾಸದಲ್ಲಿ ಬದಲಾವಣೆಯಿಲ್ಲದೆ ಯಾವುದೇ ತಂತ್ರಾಂಶ ಅಥವಾ ಜಾಲತಾಣವನ್ನು ಬೇರೆಬೇರೆ ಭಾಷೆಯಲ್ಲಿ ಬಳಸಲೂ ಯುನಿಕೋಡ್ ಸಹಾಯಮಾಡುತ್ತದೆ. ಅಷ್ಟೇ ಅಲ್ಲ, ಯುನಿಕೋಡ್‌ನಲ್ಲಿ ಮಾಹಿತಿಯನ್ನು ಶೇಖರಿಸುವುದಾದರೆ ಪ್ರಪಂಚದ ಎಲ್ಲ ಭಾಷೆಗಳನ್ನೂ ಒಂದೇ ಕಡತದಲ್ಲಿ ಸಂಗ್ರಹಿಸಿಡಬಹುದು. ವಿಶ್ವವ್ಯಾಪಿ ಜಾಲದಲ್ಲಿರುವ ಮಾಹಿತಿ ಯುನಿಕೋಡ್‌ನಲ್ಲಿದ್ದರೆ ಸರ್ಚ್ ಇಂಜನ್‌ಗಳನ್ನು ಬಳಸಿ ಸುಲಭವಾಗಿ ಹುಡುಕಲೂಬಹುದು!

* * *

ಕನ್ನಡವನ್ನು ಯುನಿಕೋಡ್‌ನಲ್ಲಿ ಅಳವಡಿಸುವಾಗ ಪ್ರಾರಭದಲ್ಲಿ ಕೆಲವು ನ್ಯೂನತೆಗಳಿದ್ದವು. ಈಚೆಗೆ ಅವುಗಳನ್ನೆಲ್ಲ ಸರಿಪಡಿಸಿದ ಮೇಲೆ ಯುನಿಕೋಡ್ ಬಳಕೆ ವ್ಯಾಪಕವಾಗಿದೆ. ಇಮೇಲ್ ಹಾಗೂ ಚಾಟ್ ಸಂದೇಶಗಳಲ್ಲಿ, ಬ್ಲಾಗುಗಳಲ್ಲಿ, ಬಹುತೇಕ ಜಾಲತಾಣಗಳಲ್ಲಿ ಕನ್ನಡದ ಬಳಕೆ ಯುನಿಕೋಡ್‌ನಲ್ಲೇ ಆಗುತ್ತಿದೆ. ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ‘ಕಣಜ’ ಅಂತರಜಾಲ ಜ್ಞಾನಕೋಶದ ಮಾಹಿತಿಯೆಲ್ಲವೂ ಯುನಿಕೋಡ್‌ನಲ್ಲೇ ಇದೆ. ಕನ್ನಡದ ಯುನಿಕೋಡ್ ಪಠ್ಯವನ್ನು ಧ್ವನಿರೂಪಕ್ಕೆ ಪರಿವರ್ತಿಸುವ ಇ-ಸ್ಪೀಕ್ ತಂತ್ರಾಶ ಕೂಡ ಆ ತಾಣದಲ್ಲೇ ಇದೆ.

ಕೇಂದ್ರ ಸರಕಾರ ೨೦೦೯ರಲ್ಲೇ ಯುನಿಕೋಡ್ ಅನ್ನು ಅಧಿಕೃತ ಶಿಷ್ಟತೆ (ಸ್ಟಾಂಡರ್ಡ್) ಎಂದು ಘೋಷಿಸಿದೆ. ಮೊನ್ನೆ ಆಧಾರ್ ದಾಖಲಾತಿಗೆ ಹೋದಾಗ ಅಲ್ಲೂ ಕನ್ನಡದ ಮಾಹಿತಿ ಯುನಿಕೋಡ್‌ನಲ್ಲೇ ದಾಖಲಾಗುತ್ತಿದ್ದದ್ದು ಕಣ್ಣಿಗೆ ಬಿತ್ತು. ಕರ್ನಾಟಕ ಸರಕಾರವೂ ಕನ್ನಡಕ್ಕೆ ಯೂನಿಕೋಡ್ ಶಿಷ್ಟತೆಯನ್ನು ಕಡ್ಡಾಯವೆಂದು ಪ್ರಕಟಿಸುವಂತಾದರೆ ಒಳ್ಳೆಯದು. ಸರಕಾರದ ಎಲ್ಲ ಜಾಲತಾಣಗಳೂ ಕನ್ನಡದಲ್ಲಿ – ಅದರಲ್ಲೂ ಯುನಿಕೋಡ್‌ನಲ್ಲಿ – ಇರುವಂತೆ ಮಾಡುವುದು ಮತ್ತು ಅವುಗಳಲ್ಲಿರುವ ಮಾಹಿತಿ ಆಗಿಂದಾಗ್ಗೆ ಅಪ್ಡೇಟ್ ಆಗುತ್ತಿರುವಂತೆ ನೋಡಿಕೊಂಡರೆ ಇನ್ನೂ ಒಳ್ಳೆಯದು, ತಮಗೆ ಬೇಕಾದ ಯಾವುದೇ ಮಾಹಿತಿಯನ್ನು ಯಾರು ಯಾವಾಗ ಬೇಕಿದ್ದರೂ ಸುಲಭವಾಗಿ ಹುಡುಕಿಕೊಳ್ಳುವುದು ಇದರಿಂದ ಸಾಧ್ಯವಾಗುತ್ತದೆ. ಸರಕಾರದ ತಾಣಗಳಷ್ಟೇ ಅಲ್ಲ, ಎಲ್ಲ ಪತ್ರಿಕೆಗಳ ಜಾಲತಾಣಗಳೂ ಯುನಿಕೋಡ್‌ನಲ್ಲಿದ್ದರೆ ಗೂಗಲ್ ನ್ಯೂಸ್‌ನಂತಹ ಸೇವೆಗಳಲ್ಲಿ ಕನ್ನಡಕ್ಕೆ ಸ್ಥಾನ ಬೇಕೆಂಬ ಬಹುದಿನಗಳ ಬೇಡಿಕೆಗೂ ಇನ್ನಷ್ಟು ಬಲ ಬರುತ್ತದೆ.

* * *

ಅಂದಹಾಗೆ ಯುನಿಕೋಡ್‌ನಲ್ಲಿ ಟೈಪಿಸುವುದು ಬಹಳ ಸುಲಭ. ಬರಹ-ನುಡಿ ಮುಂತಾದ ತಂತ್ರಾಂಶಗಳಲ್ಲಿ ಈ ಸೌಲಭ್ಯ ಬಹಳ ದಿನಗಳಿಂದಲೇ ಇದೆ. ಅನೇಕ ಜಾಲತಾಣಗಳಲ್ಲಿ ಕನ್ನಡದಲ್ಲೇ ನೇರವಾಗಿ ಟೈಪಿಸುವ ಸೌಲಭ್ಯ ಕೂಡ ಇದೆ – ಗೂಗಲ್ ಟ್ರಾನ್ಸ್‌ಲಿಟರೇಟ್ಕ್ವಿಲ್‌ಪ್ಯಾಡ್ಕನ್ನಡ ಸ್ಲೇಟ್ ಇವೆಲ್ಲ ಇಂತಹ ತಾಣಗಳಿಗೆ ಕೆಲ ಉದಾಹರಣೆಗಳು. ನಿಮ್ಮಲ್ಲಿ ಯಾವುದೇ ಕನ್ನಡ ತಂತ್ರಾಂಶ ಇಲ್ಲದಿದ್ದರೂ ಚಿಂತೆಯಿಲ್ಲ. ಇಲ್ಲಿ ಟೈಪಿಸಿದ ಕನ್ನಡ ಪಠ್ಯವನ್ನು ಬೇಕಾದ ಕಡೆಗೆ ಕಾಪಿ-ಪೇಸ್ಟ್ ಮಾಡಿಕೊಳ್ಳಬಹುದು!

ನುಡಿ-ಬರಹ ಅಕ್ಷರಶೈಲಿಗಳಲ್ಲಿರುವ ಪಠ್ಯವನ್ನು ಯುನಿಕೋಡ್‌ಗೆ ಬದಲಿಸುವುದೂ ಸುಲಭ. ಇದಕ್ಕಾಗಿ ಬರಹ ತಂತ್ರಾಂಶದಲ್ಲಿ ‘ಬರಹ ಕನ್ವರ್ಟ್’ ಎಂಬ ಸೌಲಭ್ಯ ಇದೆ. ಅರವಿಂದರ ಜಾಲತಾಣದ ಮೂಲಕವೂ ಈ ಕೆಲಸ ಮಾಡಬಹುದು.