ಕೌಸಲ್ಯಾ ಸುಪ್ರಜಾ ರಾಮ
ಪೂರ್ವಾ ಸಂಧ್ಯಾ ಪ್ರವರ್ತತೇ
ಉತ್ತಿಷ್ಠ ನರಶಾರ್ದೂಲ
ಕರ್ತವ್ಯಂ ದೈವಮಾಹ್ನಿಕಂ ||

(ಕೌಸಲ್ಯೆಯ ಸತ್ಪುತ್ರನಾದ ಶ್ರೀರಾಮನೇ,  ಪೂರ್ವದಿಕ್ಕಿನಲ್ಲಿ ಪ್ರಾತಃಕಾಲ ಕಾಣುತ್ತಿದೆ, ಏಳು, ಎಲೈ ನರಶ್ರೇಷ್ಠನೆ, ದೇವತಾರಾಧನೆ ಮೊದಲಾದ ಕಾರ್ಯಗಳನ್ನು ಮಾಡು.)

ದೇವರಿಗೆ ಹೇಳುವ ಸುಪ್ರಭಾತದ ಈ ಶ್ಲೋಕವನ್ನು ಎಷ್ಟು ಬಾರಿ ಕೇಳುತ್ತೇವೆ, ಅಲ್ಲವೆ? ಇದು ವಿಶ್ವಾಮಿತ್ರರು ಶ್ರೀರಾಮನನ್ನು ಎಬ್ಬಿಸಿದಾಗ ಹೇಳಿದ ಶ್ಲೋಕ.

ವಿಶ್ವಾಮಿತ್ರನು ರಾಜ ಮನೆತನಕ್ಕೆ ಸೇರಿದವನು. ಇವನ ತಂದೆ ಗಾಧಿ ಮಹಾರಾಜ. ವಿಶ್ವಾಮಿತ್ರನಿಗೆ ವಿಶ್ವರಥ ಎಂಬ ಹೆಸರೂ ಇತ್ತು. ಇವನಿಗೆ ಹೈಮವತಿ, ಶಾಲಾವತಿ, ದೃಷದ್ವತಿ, ರೇಣು, ಮಾಧವಿ ಮುಂತಾದ ಹೆಂಡತಿಯರಿದ್ದರು. ಇವನಿಗೆ ಮಧುಚ್ಛಂದ, ಕತಿ, ಯಾಜ್ಞವಲ್ಕ್ಯ, ಪಾಣಿನ, ಗಾಲವ, ಮುದ್ಗಲ, ಸಾಂಕೃತಿ, ದೇವಲ, ಅಷ್ಟಕರೆಂಬ ಮಕ್ಕಳಲ್ಲದೆ ಇವನ ವಂಶಕ್ಕೆ ಸೇರಿದ ಶುನಶ್ಯೇಪ ಎಂಬ ಹುಡುಗನೂ ಪ್ರಖ್ಯಾತರಾದವರು.

ವಿಶ್ವಾಮಿತ್ರ ಬಹು ವರ್ಷಗಳ ಕಾಲ ರಾಜ್ಯಭಾರ ಮಾಡಿದ.

ಎಂತಹ ಆತಿಥ್ಯ!

ಒಂದು ಸಲ ಒಂದು ಅಕ್ಷೌಹಿಣಿ ಸೈನ್ಯದೊಡನೆ ಹಲವು ಸ್ಥಳಗಳನ್ನು ನೋಡಬೇಕು ಎಂದು ಹೊರಟ. (ಒಂದು ಅಕ್ಷೌಹಿಣಿ ಎಂದರೆ ೨೧, ೮೭೦ ರಥ, ೨೧, ೮೭೦ ಆನೆ, ೬೫, ೬೧೦ ಕುದುರೆ, ೧,೦೯,೩೫೦ ಕಾಲಾಳು.) ದಾರಿಯಲ್ಲಿ ಒಂದು ಕಾಡಿಗೆ ಬಂದ. ಅಲ್ಲಿ ಅವನುಕಂಡ ದೃಶ್ಯ ಅವನಿಗೆ ಬೆರಗನ್ನು ಉಂಟುಮಾಡಿತು. ಹುಲಿ, ಜಿಂಕೆ, ಹಸು ಎಲ್ಲ ಸ್ನೇಹದಿಂದ ಓಡಾಡುತ್ತಿವೆ! “ಇದೆಂತಹ ಮಹಾತ್ಮೆಯ ಸ್ಥಳ!” ಎಂದು ರಾಜ ಆಶ್ಚರ್ಯಪಟ್ಟು ಮುಂದೆ ಹೊರಟ.ಎಲ್ಲ ಕಡೆ ಶಾಂತಿ ಸೌಂದರ್ಯ ತುಂಬಿಹೋಗಿತ್ತು. ಆಶ್ಚರ್ಯದೊಡನೆ ಸಂತೋಷ ಬೆರೆಯಿತು. ರಾಜ ಹಾಗೆಯೇ ಮುನ್ನಡೆದ.

ದೂರದಲ್ಲಿ ಒಂದು ಆಶ್ರಮ. ಅದು ವಸಿಷ್ಠರು ಎಂಬ ಮಹಾ ಋಷಿಗಳಿಗೆ ಸೇರಿದ ಆಶ್ರಮ. ಅವರ ಪ್ರಭಾವದಿಂದಲೇ ದುಷ್ಟ ಪ್ರಾಣಿಗಳೂ ತಮ್ಮ ವೈರವನ್ನು ಮರೆತು ಸ್ನೇಹವಾಗಿದ್ದವು.

ವಸಿಷ್ಠ ಮಹಾಮುನಿಗಳು ವಿಶ್ವಾಮಿತ್ರ ಮಹಾರಾಜನನ್ನು ಆದರದಿಂದ ಬರಮಾಡಿಕೊಂಡರು. ಬಹಳ ಪ್ರೀತಿಯಿಂದ ಉಚಿತವಾದ ಪೀಠದಲ್ಲಿ ಕೂರಿಸಿದರು. ತಂಪಾದ ಪಾನೀಯಗಳಿಂದಲೂ ರಸಭರಿತವಾದ ಫಲಗಳಿಂದಲೂ ಉಪಚರಿಸಿದರು. ಕುಶಲ ಪ್ರಶ್ನೆ ಮಾಡಿದರು. ರಾಜನೊಡನೆ ಮಾತನಾಡುತ್ತಿರುವಾಗ ವಸಿಷ್ಠರಿಗೆ, ರಾಜ ದೊಡ್ಡ ಸೈನ್ಯವನ್ನು ಕರೆದುಕೊಂಡು ಬಂದಿದ್ದಾನೆ ಎಂದು ತಿಳಿಯಿತು.

“ನೀನೂ ನಿನ್ನ ಪರಿವಾರದವರೂ, ಸೈನಿಕರೂ ಇಲ್ಲಿಯೇ ಆತಿಥ್ಯ ಸ್ವೀಕರಿಸಬೇಕು” ಎಂದರು ಋಷಿಗಳು.

ರಾಜ ಒಪ್ಪಲಿಲ್ಲ. ಒಬ್ಬರಲ್ಲ ಹತ್ತು ಜನರಲ್ಲ ಒಂದು ಅಕ್ಷೌಹಿಣಿ ಸೈನ್ಯ ನಿಂತರೆ ಋಷಿಗಳು ಹೇಗೆ ಊಟ ಹಾಕಬೇಕು, ಇಷ್ಟು ಜನರಿಗೆ ಆನೆಗಳಿಗೆ ಕುದುರೆಗಳಿಗೆ ಇದ್ದಕ್ಕಿದ್ದ ಹಾಗೆ ಆಹಾರ ಒದಗಿಸುವುದು ಅರಮನೆಯಲ್ಲಿ ರಾಜನಿಗೇ ಸಾಧ್ಯವಿಲ್ಲ, ಕಾಡಿನಲ್ಲಿ ಆಶ್ರಮದಲ್ಲಿರುವ ಅವರಿಗೆ ಸಾಧ್ಯವೇ ಎಂದು ಅವನಿಗೆ ತೋರಿತು.

ವಸಿಷ್ಠರು ಬಹಳ ಬಲವಂತ ಮಾಡಿದರು. ಕಡೆಗೆ ವಿಶ್ವಾಮಿತ್ರ ರಾಜ ಒಪ್ಪಿದ.

ವಸಿಷ್ಠರ ಆಶ್ರಮದಲ್ಲಿ ನಂದಿನಿ ಎಂಬ ಗೋವು, ನಂದಿನಿ ಸ್ವರ್ಗದ ಗೋವು ಕಾಮಧೇನುವಿನ ಮಗಳು.

ವಸಿಷ್ಠರು ನಂದಿನಿಯ ಮುಂದೆ ನಿಂತು “ಅಮ್ಮಾ, ರಾಜ ವಿಶ್ವಾಮಿತ್ರ ಬಂದಿದ್ದಾನೆ. ಅವನಿಗೆ, ಅವನ ಕಡೆಯವರಿಗೆ ಸತ್ಕಾರ ಮಾಡಬೇಕಾದದ್ದು ನಮ್ಮ ಕರ್ತವ್ಯ. ಎಲ್ಲರಿಗೆ ಊಟವಾಗುವಂತೆ ಅನುಗ್ರಹಿಸು” ಎಂದರು.

ಒಂದು ಘಳಿಗೆ ಕಳೆಯುವುದರೊಳಗೆ ನಂದಿನಿಯು ರಾಜನ ಕಡೆಯವರೆಲ್ಲರಿಗೂ ಅವರವರ ಇಷ್ಟದ ಪ್ರಕಾರ, ಅನ್ನ, ಭಕ್ಷ್ಯಗಳು, ಜೇನುತುಪ್ಪ ಮತ್ತು ಬಹುವಿಧ ಫಲಗಳಿಂದ ಸತ್ಕರಿಸಿ ಎಲ್ಲರನ್ನೂ ತೃಪ್ತಿಪಡಿಸಿದಳು.

ನನಗೆ ಕೊಡಿ

ಇದನ್ನು ಕಣ್ಣಾರೆ ಕಂಡ ವಿಶ್ವಾಮಿತ್ರ ಮಹಾರಾಜ. ಅವನಿಗೆ ಆಶ್ಚರ್ಯವೇ ಆಶ್ಚರ್ಯ. ಕಾಡಿನಲ್ಲಿ ವಾಸಿಸುವ ಒಬ್ಬ ಬಡಮುನಿ ಸಹಸ್ರಾರು ಸಂಖ್ಯೆಯ ತನ್ನ ಸೈನಿಕರಿಗೆ ಹಾಗೂ ಪರಿವಾರಕ್ಕೆ ತೃಪ್ತಿಕರವಾಗಿ ಸತ್ಕಾರ ಮಾಡುವ ರೀತಿ ಹೇಗೆ? ಬೆರಗಾಗಿದ್ದ ಅವನು ಕೊನೆಗೆ ವಸಿಷ್ಠರನ್ನೆ ಕೇಳಿದ. ಇದೆಲ್ಲ ನಂದನೀಧೇನುವಿನ ಕೃಪೆ ಎಂದು ತಿಳಿದ ಮೇಲಂತೂ ಬಹು ಬೆರಗಾದ.

ಜೊತೆಗೆ ಇನ್ನೊಂದು ಯೋಚನೆ ಬಂದಿತು. ‘ಆ ಗೋವನ್ನು ರಾಜನಾದ ನಾನು ಪಡೆದಿರುವುದು ಉತ್ತಮ’ ಎನ್ನಿಸಿತು.

ವಿಶ್ವಾಮಿತ್ರ ವಸಿಷ್ಠ ಮುನಿಗಳಿಗೆ ಹೇಳಿದ: “ನಿಮ್ಮ ನಂದಿನೀಧೇನುವನ್ನು ರಾಜನಾದ ನನಗೆ ಕೊಡಿ,ನಿಮಗೆ ಅದಕ್ಕೆ ಬದಲಾಗಿ ಒಂದು ಲಕ್ಷ ಅಲಂಕೃತ ಗೋವುಗಳನ್ನೂ, ಹದಿನಾಲ್ಕು ಸಾವಿರ ಉತ್ತಮ ಆನೆಗಳನ್ನೂ, ಎಂಟು ನೂರು ನವರತ್ನ ಖಚಿತವಾದ ರಥಗಳನ್ನೂ, ಇನ್ನೂ ಅನೇಕ ವಸ್ತುಗಳನ್ನೂ ಕೊಡುತ್ತೇನೆ”.

ವಸಿಷ್ಠರು “ಅಯ್ಯಾ ಮಹಾರಾಜ, ನಂದಿನೀ ಧೇನುವನ್ನು ನನ್ನ ದಿನನಿತ್ಯದ ಯಜ್ಞ, ಯಾಗ, ಕರ್ಮ, ತಪಸ್ಸು,ಬರಬಹುದಾದ ಅತಿಥಿ ಅಭ್ಯಾಗತರ ಸೇವೆಗಾಗಿಯೇ ಕಾಮಧೇನು ಕೃಪೆ ಮಾಡಿದ್ದಾಳೆ. ನನಗೆ ನಿಜವಾದ ಐಶ್ವರ್ಯವೆಂದರೆ ಇದೇ. ಈ ಹಸುವನ್ನು ಕೊಡುವುದು ಹೇಗೆ?” ಎಂದರು.

ವಿಶ್ವಾಮಿತ್ರನಿಗೆ ಅಸಮಾಧಾನವಾಯಿತು. “ನಿಮ್ಮಂತೆ ಕಾಡಿನಲ್ಲಿರುವ ಋಷಿಗಳಿಗೇಕೆ ಈ ಗೋವು? ನಾನು ರಾಜ. ಅಪರೂಪವಾದ ಇಂತಹವೆಲ್ಲ ರಾಜನ ಸ್ವತ್ತು. ಇದು ನನ್ನ ಬಳಿ ಇರಬೇಕು” ಎಂದು ಸ್ವಲ್ಪ ಗಂಭೀರವಾಗಿಯೇ ನುಡಿದ.

ವಸಿಷ್ಠರು, “ನನಗೆ ಈ ಗೋವನ್ನು ಕೊಡುವ ಸ್ವಾತಂತ್ಯ್ರವಿಲ್ಲ” ಎಂದರು.

ಯಾರು ತಡೆಯಬಲ್ಲರು?

ಈಗ ವಿಶ್ವಾಮಿತ್ರನಿಗೆ ಬಹಳ ಕೋಪ ಬಂದಿತು. ತಾನು, ಪರಾಕ್ರಮಿಯಾದ ರಾಜ, ಋಷಿಯನ್ನು ಪ್ರಾರ್ಥನೆ ಮಾಡಿದರೆ ಈತನಿಗೆ ಇಷ್ಟು ಅಲಕ್ಷ್ಯವೇ? ಎನ್ನಿಸಿತು. “ಪ್ರಾರ್ಥನೆ ಮಾಡಿದರೆ, ಒಳ್ಳೆಯ ಮಾತಿನಲ್ಲಿ ಹೇಳಿದರೆ ಕೊಡುವುದಿಲ್ಲ; ನಾನು ಗೋವನ್ನು ಎಳೆದುಕೊಂಡು ಹೋದರೆ ಈ ಬಡ ಋಷಿ ಏನು ಮಾಡಬಲ್ಲ? ಯಾರು ತಡೆಯಬಲ್ಲರು?” ಎಂದುಕೊಂಡ. ತನ್ನ ಭಟರನ್ನು ಕರೆದು, “ಆ ಧೇನುವನ್ನು ಕಟ್ಟಿ ಎಳೆದು ತನ್ನಿ” ಎಂದು ಆಜ್ಞೆ ಮಾಡಿದ.

ಕೂಡಲೇ ಭಟರು ಆ ಗೋವನ್ನು ಕಟ್ಟಿ ಎಳೆಯತೊಡಗಿದರು. ನಂದಿನಿಗೆ ಬಹಳ ನೋವಾಯಿತು. ಆ ಭಟರುಗಳನ್ನೆಲ್ಲ ಪಕ್ಕಕ್ಕೆ ತಳ್ಳಿ, ಮಿಂಚಿನಂತೆ ವಸಿಷ್ಠರ ಹತ್ತಿರಕ್ಕೆ ಬಂದು ತನ್ನ ಕಷ್ಟವನ್ನು ಪರಿಹರಿಸುವಂತೆ ಪ್ರಾರ್ಥಿಸಿದಳು.

ವಸಿಷ್ಠರು “ಅಮ್ಮ, ರಾಜನ ಶಕ್ತಿ ಸಾಮರ್ಥ್ಯದ ಮುಂದೆ ಬಡಮುನಿಯಾದ ನಾನೇನು ರಕ್ಷಣೆ ಕೊಡಲಿ?” ಎಂದರು. ಆಗ “ಮುನಿವರ, ನನ್ನ ರಕ್ಷಣೆಯನ್ನು ನಾನೇ ಮಾಡಿಕೊಳ್ಳಲಾದರೂ ತಾವು ಅಧಿಕಾರವನ್ನು ಅನುಗ್ರಹಿಸಿ” ಎಂದು ನಂದಿನಿ ಬೇಡಿದಳು. ವಸಿಷ್ಠರು “ಸರಿಯೆ, ಅದರಲ್ಲಿ ತಪ್ಪಿಲ್ಲ” ಎಂದರು.

ಕೂಡಲೇ ಧೇನುವು ‘ಹುಂಭಾ’ ಎಂದು ಒಮ್ಮೆ ಕೂಗಿತು. ಮರು ಕ್ಷಣದಲ್ಲಿ ಸಹಸ್ರಾರು ಜನ ಆಯುಧ ಪಾಣಿಗಳಾದ ಭಟರು ಆ ಧೇನುವಿನ ಒಂದೊಂದು ಕೂದಲಿನಿಂದ ಹುಟ್ಟಿ ಜಿಗಿದರು. ಆರ್ಭಟಿಸುತ್ತ, ವಿಶ್ವಾಮಿತ್ರನ ಸೈನ್ಯದ ಮೇಲೆ ಬಿದ್ದರು. ವಿಶ್ವಾಮಿತ್ರನ ಸೈನ್ಯ ಸಾಮಾನ್ಯವಾದುದಲ್ಲ. ಪ್ರಬಲವಾದದ್ದೆ, ಆದರೆ ಆ ಸೈನ್ಯವೂ ಅವರ ಮುಂದೆ ನಿಲ್ಲಲಾರದೆ ನಾಶವಾಯಿತು.

ಇದನ್ನೆಲ್ಲಾ ತನ್ನ ಕಣ್ಣ ಮುಂದೆಯೇ ಕಂಡ ವಿಶ್ವಾಮಿತ್ರನಿಗೆ ಕೋಪ ತಡೆಯಲಾರದಷ್ಟಾಯಿತು. ತನ್ನ ನೂರು ಜನ ಮಕ್ಕಳನ್ನೂ ಯುದ್ಧಕ್ಕೆ ಕಳುಹಿಸಿದನು. ಅವರು ವಸಿಷ್ಠ ಮುನಿಗಳನ್ನು ದಂಡಿಸಲು ಮುಂದೆ ನುಗ್ಗಿದರು. ಅದನ್ನು ಕಂಡ ವಸಿಷ್ಠರು ಒಂದು ಸಲ ಹುಂಕಾರ ಮಾಡಿದರು. ಇದ್ದಕ್ಕಿದ್ದಂತೆ ಉರಿ ಎದ್ದಿತು. ವಿಶ್ವಾಮಿತ್ರನ ಆ ನೂರು ಮಕ್ಕಳೂ ಬೆಂದು ಬೂದಿಯಾದರು.

ಈಗ ವಿಶ್ವಾಮಿತ್ರ ರಾಜನಿಗೆ ತುಂಬಾ ದುಃಖವಾಯಿತು. ಬೆಂಕಿಯಂತಹ ಕೋಪವಾಯಿತು.

ಎಲ್ಲ ಮಂತ್ರಾಸ್ತ್ರಗಳನ್ನೂ ಅನುಗ್ರಹ ಮಾಡು

ವಿಶ್ವಾಮಿತ್ರ ಯೋಚಿಸಿದ. ‘ನನ್ನ ಮಕ್ಕಳೆಲ್ಲರೂ ಸತ್ತು ಸೈನ್ಯವೆಲ್ಲವೂ ನಾಶವಾದುದು ಈ ವಸಿಷ್ಠನ ತಪರ್ಶಯಕ್ತಿಯಿಂದಲ್ಲವೇ? ನನ್ನ ಮಕ್ಕಳ ಮತ್ತು ಸೈನ್ಯದ ಪರಾಕ್ರಮವೆಲ್ಲ ವ್ಯರ್ಥವಾಯಿತಲ್ಲ! ಆದ್ದರಿಂದ ನಾನೂ ತಪಸ್ಸು ಮಾಡಿ ವಸಿಷ್ಠನಂತೆ ಶಕ್ತಿ ಗಳಿಸಬೇಕು’ ಎಂದು ಮನಸ್ಸಿನಲ್ಲಿ ನಿರ್ಧರಿಸಿದ. ಕೂಡಲೇ ವಸಿಷ್ಠರ ಆಶ್ರಮವನ್ನು ಬಿಟ್ಟು ಹೊರಟ. ನೇರವಾಗಿ, ಹಿಮಾಲಯ ಪರ್ವತಕ್ಕೆ ಹೋಗಿ, ಅಲ್ಲಿ ಒಂದು ಪ್ರಶಾಂತವಾದ ಸ್ಥಳದಲ್ಲಿ ಕುಳಿತು ಕೈಲಾಸಪತಿಯಾದ ಶಂಕರನನ್ನು ಕುರಿತು ಕಠಿಣವಾದ ತಪಸ್ಸನ್ನು ಪ್ರಾರಂಭಿಸಿದ.

ದಿನಗಳು ಮುಗಿದವು. ತಿಂಗಳುಗಳು ಕಳೆದವು, ವರ್ಷಗಳೇ ದಾಟಿದವು. ಈಶ್ವರನು ಪ್ರತ್ಯಕ್ಷನಾಗಲಿಲ್ಲ. ವಿಶ್ವಾಮಿತ್ರನ ತಪಸ್ಸು ಹೆಚ್ಚು ಹೆಚ್ಚು ಕಠಿಣವಾಗುತ್ತಾ ಹೋಯಿತು. ಸಹಸ್ರಾರು ವರ್ಷಗಳೇ ಕಳೆದವು. ವಿಶ್ವಾಮಿತ್ರ ರಾಜನ ಉಗ್ರ ತಪಸ್ಸಿಗೆ ಮೆಚ್ಚಿದ ಈಶ್ವರನು ಪ್ರತ್ಯಕ್ಷನಾದ. “ಅಯ್ಯಾ ವಿಶ್ವಾಮಿತ್ರ, ನಿನ್ನ ತಪಸ್ಸಿಗೆ ಮೆಚ್ಚಿದ್ದೇನೆ. ನಿನಗೆ ಬೇಕಾದ ವರವನ್ನು ಕೇಳಿಕೊ” ಎಂದು ಹೇಳಿದ.

ವಿಶ್ವಾಮಿತ್ರನಿಗೆ ಬಹಳ ಸಂತೋಷವಾಯಿತು.

“ಪ್ರಭೂ, ಬಿಲ್ಲು ಬಾಣಗಳಲ್ಲಿ ಯುದ್ಧ ಮಾಡುವ ಎಲ್ಲ ರಹಸ್ಯಗಳನ್ನೂ, ಯಕ್ಷ, ರಾಕ್ಷಸರು, ಗಂಧರ್ವರು, ಮಹರ್ಷಿಗಳು – ಎಲ್ಲರಲ್ಲಿರುವ ಮಂತ್ರಾಸ್ತ್ರಗಳನ್ನೂ ನನಗೆ ಅನುಗ್ರಹ ಮಾಡು” ಎಂದು ಬೇಡಿದ. ಈಶ್ವರನು ಅವೆಲ್ಲವನ್ನೂ ಅನುಗ್ರಹಿಸಿ ಕಣ್ಮರೆಯಾದ.

ಮತ್ತೆ ಸೋಲೇ!

ಈಗ ವಿಶ್ವಾಮಿತ್ರನು ಆನಂದದಿಂದ ಉಬ್ಬಿಹೋದ. “ಹಿಂದೆ ವಸಿಷ್ಠ ಮುನಿ ನನ್ನ ಸೈನ್ಯವನ್ನೂ, ಮಕ್ಕಳನ್ನೂ, ನಾಶ ಮಾಡಿದ, ಅಲ್ಲವೆ? ಈಗ ನೇರವಾಗಿ ಅವನ ಆಶ್ರಮಕ್ಕೆ ಹೋಗಿ ಅವನ ಸೊಕ್ಕನ್ನು ಮುರಿಯುತ್ತೇನೆ” ಎಂದು ತೀರ್ಮಾನಿಸಿದ. ಬಿರುಗಾಳಿಯಂತೆ ವಸಿಷ್ಠರ  ಆಶ್ರಮಕ್ಕೆ ನಡೆದ.

ವಿಶ್ವಾಮಿತ್ರ ವಸಿಷ್ಠರ ಆಶ್ರಮವನ್ನು ತಲುಪಿದಾಗ ಅವರು ತಪಸ್ಸಿನಲ್ಲಿ ಮೈ ಮರೆತಿದ್ದರು. ಅವರ ಸುತ್ತ ಋಷಿಗಳು ಕುಳಿತು ಧ್ಯಾನ, ಹೋಮ ಮೊದಲಾದವುಗಳಲ್ಲಿ ಮಗ್ನರಾಗಿದ್ದರು.

ಕೋಪದಿಂದ ಉರಿಯುತ್ತ, ಗೆದ್ದೇ ಗೆಲ್ಲುವೆನೆಂಬ ವಿಶ್ವಾಸದಿಂದ ವಿಜೃಂಭಿಸುತ್ತ, ಆಶ್ರಮದಲ್ಲಿ ಕಾಲಿಟ್ಟ ವಿಶ್ವಾಮಿತ್ರ, ರಭಸದಿಂದ ವಸಿಷ್ಠರಿದ್ದಲ್ಲಿಗೆ ಸಾಗಿಹೋದ. ಅನೇಕ ಅಸ್ತ್ರಗಳನ್ನು ಅವರ ಮೇಲೆ ಪ್ರಯೋಗ ಮಾಡಿದ.

ಇದ್ದಕ್ಕಿದ್ದಂತೆ ಎರಗಿದ ಈ ವಿಪತ್ತಿನಿಂದ ಅನೇಕ ತಪಸ್ವಿಗಳು ಗಾಬರಿಗೊಂಡರು, ದಿಕ್ಕಾಪಾಲಾಗಿ ಅರಚುತ್ತಾ ಓಡತೊಡಗಿದರು.

ಈ ಎಲ್ಲ ಗದ್ದಲ, ಕೂಗಾಟದಿಂದ ವಸಿಷ್ಠರ ತಪಸ್ಸಿಗೆ ಭಂಗವಾಯಿತು. ಕಣ್ಣು ಬಿಟ್ಟು ನೋಡಿದರು.

ಎದುರಿಗೆ ಆಯುಧ ಹಿಡಿದ ವಿಶ್ವಾಮಿತ್ರ ಮಹಾರಾಜ; ವಸಿಷ್ಠರ ಸುತ್ತಮುತ್ತ ತಪಸ್ವಿಗಳು, ವಟುಗಳು ಗಾಬರಿಯಿಂದ ಓಡಾಡುತ್ತಿದ್ದಾರೆ. ಕೆಲವರಿಗೆ ಪೆಟ್ಟು ತಾಕಿದೆ, ರಕ್ತ ಸುರಿಯುತ್ತಿದೆ. ಗಾಬರಿಗೊಂಡು ಓಡುವವರನ್ನು ವಸಿಷ್ಠರು ಸಮಾಧಾನಪಡಿಸಿದರು. ತಮ್ಮ ಕಂಕುಳಿಗೆ ಊರುಗೋಲಾಗಿರಿಸಿಕೊಂಡಿದ್ದ ಯೋಗದಂಡವನ್ನು ತಮ್ಮ ಮುಂದೆ ನಿಲ್ಲಿಸಿದರು.

ವಿಶ್ವಾಮಿತ್ರ ಮಹಾರಾಜನು ಶಸ್ತ್ರಾಸ್ತ್ರಗಳನ್ನು ಒಂದಾದ ಮೇಲೊಂದರಂತೆ ಪ್ರಯೋಗ ಮಾಡುತ್ತಲೇ ಇದ್ದ.

ಅವನು ಪ್ರಯೋಗ ಮಾಡಿದ ಎಲ್ಲ ಅಸ್ತ್ರಶಸ್ತ್ರಗಳೂ ಆ ಯೋಗದಂಡದಲ್ಲಿ ಬಂದು ಅಡಗಿಹೋದವು! ಇದನ್ನು ಕಂಡು ವಿಶ್ವಾಮಿತ್ರ ಕೆಂಡವಾದ. ಅವನಿಗೆ ಏನೂ ತೋರದೆ ಹೋಯಿತು. ಸಾವಿರಾರು ವರ್ಷಗಳು ತಪಸ್ಸು ಮಾಡಿ ಈಶ್ವರನನ್ನು ಮೆಚ್ಚಿಸಿ ಸಂಪಾದಿಸಿದ ಅಸ್ತ್ರಗಳೂ ಈ ಋಷಿಯ ಮುಂದೆ ವ್ಯರ್ಥವಾದುವಲ್ಲ! ತಲೆಯ ಮೇಲೆ ಕೈಯಿಟ್ಟು ಕುಳಿತ.

ಗಾಬರಿಯಿಂದ ಓಡುತ್ತಿದ್ದ ತಪಸ್ವಿಗಳೆಲ್ಲರೂ ಹಿಂದಕ್ಕೆ ಬಂದರು. ವಸಿಷ್ಠ ಮುನಿಗಳನ್ನು ಬಹಳವಾಗಿ ಹೊಗಳಿದರು.

ಈಗ ವಿಶ್ವಾಮಿತ್ರ ರಾಜನ ಬಾಯಿಯಿಂದ “ಧಿಗ್ಬಲಂ ಕ್ಷತ್ರಿಯ ಬಲಂ, ಬ್ರಹ್ಮ ತೇಜೋ ಬಲಂ ಬಲಂ” ಎಂಬ ನಿಟ್ಟುಸಿರಿನ ಮಾತು ಬಂದಿತು. “ಬ್ರಹ್ಮ ತೇಜಸ್ಸಿನ ಮುಂದೆ ಕ್ಷತ್ರಿಯ ತೇಜಸ್ಸಿಗೆ ಧಿಕ್ಕಾರ” ಎಂದ.

ಬ್ರಹ್ಮ ಋಷಿಯಾಗಲೇಬೇಕು

ಆದರೆ ವಿಶ್ವಾಮಿತ್ರ ಸೋಲನ್ನು ಒಪ್ಪುವವನಲ್ಲ. ವಸಿಷ್ಠರನ್ನು ಸೋಲಿಸಲೇಬೇಕು ಎಂದು ಅವನ ಛಲ. ಪುನಃ ತಪಸ್ಸು ಮಾಡಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ತನ್ನ ರಾಣಿಯವರೊಡನೆ ನೇರವಾಗಿ ದಕ್ಷಿಣ ದಿಕ್ಕಿಗೆ ಹೋದ. ಕಾಡಿನಲ್ಲಿ ಕುಳಿತು ಬ್ರಹ್ಮನನ್ನು ಧ್ಯಾನಿಸಿ ಘೋರವಾದ ತಪಸ್ಸನ್ನು ಮಾಡಿದ.

ಮತ್ತೆ ನೂರಾರು ವರ್ಷಗಳೇ ಕಳೆದವು. ಬ್ರಹ್ಮ ಪ್ರತ್ಯಕ್ಷನಾಗಲಿಲ್ಲ. ವಿಶ್ವಾಮಿತ್ರರು ತಪಸ್ಸನ್ನು ನಿ‌ಲ್ಲಿಸಲೇ ಇಲ್ಲ. ಒಂದು ಸಾವಿರ ವರ್ಷಗಳು ಮುಗಿದವು. ಬ್ರಹ್ಮನೂ ವಿಶ್ವಾಮಿತ್ರನ ದೃಢ ಸಂಕಲ್ಪಕ್ಕೆ ಮೆಚ್ಚಿದ, ಪ್ರತ್ಯಕ್ಷನಾಗಿ, 

‘ನಾನು ಬ್ರಹ್ಮಋಷಿಯಾಗಲೇ ಬೇಕು.’

 “ಅಯ್ಯಾ, ವಿಶ್ವಾಮಿತ್ರ ರಾಜ, ಈಘ ನೀನು ರಾಜ ಋಷಿಯಾದೆ” ಎಂದ.

ವಿಶ್ವಾಮಿತ್ರನಿಗೆ ತೃಪ್ತಿಯಾಗಲಿಲ್ಲ. “ನಾನು ಬ್ರಹ್ಮ ಋಷಿಯಾಗಲೇ ಬೇಕು. ಅಲ್ಲಿಯವರೆಗೆ ನನ್ನ ತಪಸ್ಸನ್ನು ಬಿಡುವುದಿಲ್ಲ” ಎಂದು ಅವನ ನಿರ್ಧಾರ. ಪುನಃ ಉಗ್ರವಾದ ತಪಸ್ಸನ್ನು ಮುಂದುವರೆಸಿದ.

ನಾನು ಯಾಗ ಮಾಡಿಸುತ್ತೇನೆ

ಆ ಕಾಲಕ್ಕೆ ಸರಿಯಾಗಿ ಇನ್ನೊಂದು ಸಂಗತಿ ನಡೆಯಿತು.

ಇಕ್ಷ್ವಾಕು ಮಹಾರಾಜನ ವಂಶದವನಾದ ತ್ರಿಶಂಕು ಎಂಬುವನೊಬ್ಬ ರಾಜ. ತಾನು ಮಾಡಿರಬಹುದಾದ ಪಾಪವನ್ನು ಕಳೆದುಕೊಂಡು, ಮನುಷ್ಯ ಶರೀರದಲ್ಲೇ ಸ್ವರ್ಗಕ್ಕೆ ಹೋಗಬೇಕೆಂದು ಅವನ ಇಷ್ಟ.  ಇದಕ್ಕಾಗಿ “ಒಂದು ಯಾಗವನ್ನು ಮಾಡಿಸಿ” ಎಂದು ತನ್ನ ಕುಲಗುರುಗಳಾದ ವಸಿಷ್ಠರನ್ನು ಬೇಡಿಕೊಂಡ. ಅವರು, “ತ್ರಿಶಂಕು, ಯಾರೇ ಆಗಲಿ, ಮನುಷ್ಯ ದೇಹದಲ್ಲಿ ಸ್ವರ್ಗಕ್ಕೆ ಹೋಗುವುದು ಸಾಧ್ಯವಿಲ್ಲ” ಎಂದು ಹೇಳಿದರು; ಯಾಗ ಮಾಡಿಸಲು ಒಪ್ಪದೇ ಹೋದರು.

ತ್ರಿಶಂಕು ಮಹಾರಾಜನಿಗೆ ಇದರಿಂದ ತುಂಬ ವ್ಯಥೆಯಾಯಿತು. ಆದರೂ ತನ್ನ ಆಸೆಯನ್ನು ಬಿಡಲಿಲ್ಲ. ವಸಿಷ್ಠರ ಆಶ್ರಮದಿಂದ ಯೋಚಿಸುತ್ತಾ ದಕ್ಷಿಣ ದಿಕ್ಕಿಗೆ ಹೊರಟ. ಅರಣ್ಯ ಪ್ರದೇಶದಲ್ಲಿ ವಸಿಷ್ಠ ಮುನಿಗಳ ನೂರು ಮಕ್ಕಳು ತಪಸ್ಸನ್ನು ಮಾಡುತ್ತಿದ್ದರು. ಇವರಾದರೂ ತನ್ನ ಆಸೆಯನ್ನು ನಡೆಸಿಕೊಡಬಹುದು ಎನ್ನಿಸಿತು ಅವನಿಗೆ. ತನ್ನ ಆಸೆಯನ್ನು  ಹೇಳಿಕೊಂಡ. “ಗುರುಗಳಾದ ವಸಿಷ್ಠರಾದ ನಂತರ ನೀವೇ ನನಗೆ ಗತಿ, ನೀವಾದರೂ ನನ್ನನ್ನು ಉದ್ಧರಿಸಿ” ಎಂದು ಬೇಡಿಕೊಂಡ. ಇದನ್ನು ಕೇಳಿದ ವಸಿಷ್ಠ ಪುತ್ರರು, ತ್ರಿಶಂಕುವನ್ನು ಕುಚೋದ್ಯ ಮಾಡಿ ನಕ್ಕರು.  “ಗುರುಗಳೇ ತಿರಸ್ಕರಿಸಿರುವುದನ್ನು ನಾವು ಮಾಡಿಸುವುದಿಲ್ಲ” ಎಂದು ಹೇಳಿದರು.

ವಸಿಷ್ಠರು ಮಕ್ಕಳು ಹಾಸ್ಯ ಮಾಡಿದುದರಿಂದ ತ್ರಿಶಂಕುವಿಗೆ ಕೋಪ ಬಂದಿತು. “ವಸಿಷ್ಠರೂ ನೀವೂ ಯಾಗ ಮಾಡಿಸದೆ ಹೋದರೆ ಚಿಂತೆ ಇಲ್ಲ; ಬೇರೆ ಯಾರನ್ನಾದರೂ ಆಶ್ರಯಿಸಿ ಯಾಗ ಮಾಡುತ್ತೇನೆ”  ಎಂದ. ಇದನ್ನು ಕೇಳಿದ ವಸಿಷ್ಠ ಪುತ್ರರು ಕೆರಳಿ, “ಗುರುದ್ರೋಹಿಯಾದ ನೀನು ಚಂಡಾಲನಾಗು” ಎಂದು ಶಾಪ ಕೊಟ್ಟರು. ಇದರಿಂದ ತ್ರಿಶಂಕುವಿಗೆ ಚಂಡಾಲರೂಪ ಬಂದಿತು. ಅವನ ಮೈಬಣ್ಣ ಕಪ್ಪಾಯಿತು , ತಲೆಗೂದಲು ಒರಟಾಯಿತು, ಮುಖದ ತೇಜಸ್ಸು ಹೋಯಿತು. ಅವನ ಜೊತೆಗಿದ್ದ ಮಂತ್ರಿಗಳೂ ಪರಿವಾರದವರೂ ಹೊರಟು ಹೋದರು. ತ್ರಿಶಂಕುವಿನ ದುಃಖ ಹೇಳತೀರದು.

ಆದರೂ ಧೈರ್ಯದಿಂದ ಮುಂದೆ ಬರುತ್ತಿರುವಾಗ ಅವನ ಭಾಗದ ಪುಣ್ಯವೋ ಎಂಬಂತೆ ವಿಶ್ವಾಮಿತ್ರರು ತಪಸ್ಸಿನಲ್ಲಿರುವುದನ್ನು ಕಂಡು, ಅವರಿಗೆ ಸಾಷ್ಟಾಂಗ ಪ್ರಣಾಮ ಮಾಡಿದ.

ಹಿಂದೊಮ್ಮೆ ರಾಜ್ಯದಲ್ಲಿ ಒಂಬತ್ತು ವರ್ಷಗಳ ಕಾಲ ಮಳೆಯೇ ಬಿದ್ದಿರಲಿಲ್ಲ. ಮಹಾಕ್ಷಾಮ ತಲೆದೋರಿತು. ಜನರು ಹೊಟ್ಟೆಗಿಲ್ಲದೆ ತುಂಬ ಕಷ್ಟಪಟ್ಟರು. ಈ ಕಾಲದಲ್ಲಿ ವಿಶ್ವಾಮಿತ್ರರು ತಪಸ್ಸಿಗೆ ಹೋಗಿದ್ದರು. ಅವರ ಹೆಂಡತಿ ಮಕ್ಕಳು ತ್ರಿಶಂಕುವಿನ ರಾಜ್ಯದಲ್ಲಿದ್ದರು. ತ್ರಿಶಂಕು ಅವರಿಗೆ ತಾನೇ ಆಹಾರವನ್ನು ತಂದುಕೊಟ್ಟು ಕಾಪಾಡಿದ. ವಿಶ್ವಾಮಿತ್ರರು ತಪಸ್ಸನ್ನು ಮುಗಿಸಿಕೊಂಡು ಹಿಂದಿರುಗಿದರು. ಕ್ಷಾಮದ ವಿಷಯ ತಿಳಿಯಿತು. ಹೆಂಡತಿ ಮಕ್ಕಳು ಏನಾದರೋ ಎಂದು ಚಿಂತೆಯಿಂದ ಬಂದರು. ಎಲ್ಲರೂ ಸುರಕ್ಷಿತವಾಗಿದ್ದರು. ತ್ರಿಶಂಕು ಅವರನ್ನು ಕಾಪಾಡಿದ ಎಂದು ತಿಳಿದು ಋಷಿಗಳಿಗೆ ತುಂಬ ಸಂತೋಷವಾಯಿತು.

ವಿಶ್ವಾಮಿತ್ರರು ಅಸಹ್ಯ ರೂಪ ಹೊಂದಿದ್ದ ತ್ರಿಶಂಕುವನ್ನು ಕರುಣೆಯಿಂದ ಮಾತನಾಡಿಸಿದರು. “ನಿನಗೆ ಒಳ್ಳೆಯದಾಗಲಿ. ನಿನಗೆ ಈ ಅವಸ್ಥೆ ಹೇಗೆ ಬಂದಿತು?” ಎಂದು ಕೇಳಿದರು. ತನಗೊದಗಿದ್ದ ಕಷ್ಟ ಸ್ಥಿತಿಯನ್ನು ಅವನು ವಿವರಿಸಿಕೊಂಡ. “ನಾನು ಸುಳ್ಳಾಡಿದವನಲ್ಲ. ಪ್ರಜೆಗಳನ್ನು ಧರ್ಮದಿಂದ ಪಾಲಿಸಿದೆ. ಈಗ ನನ್ನನ್ನು ಕಾಪಾಡುವವರು ಬೇರೆ ಯಾರೂ ಇಲ್ಲ. ಪುರುಷ ಪ್ರಯತ್ನದಿಂದ ದೇವರೂ ಒಲಿಯುವಂತೆ ಮಾಡಿ, ಈ ಶರೀರದೊಡನೆಯೇ ನಾನು ಸ್ವರ್ಗಕ್ಕೆ ಹೋಗುವಂತೆ ಮಾಡಿ” ಎಂದು ಬೇಡಿದ.

ಅವನು ಅನುಭವಿಸುತ್ತಿದ್ದ ಕಷ್ಟವನ್ನು ಕಂಡು ವಿಶ್ವಾಮಿತ್ರರಿಗೆ ಅವನ ಮೇಲೆ ಮರುಕ ಉಂಟಾಯಿತು. “ಅಯ್ಯಾ ತ್ರಿಶಂಕು, ಹೆದರಬೇಡ. ನಿನಗೆ ನಾನು ಯಾಗ ಮಾಡಿಸುತ್ತೇನೆ” ಎಂದು ಅಭಯ ನೀಡಿದರು. ವಸಿಷ್ಠ ಮುನಿಗಳು ಯಾಗವನ್ನು ಮಾಡಿಸುವುದಿಲ್ಲ ಎಂದು ಹೇಳಿದ್ದರು ಅಲ್ಲವೆ, ತಾನು ಅದನ್ನು ಮಾಡಿಸಿ ವಸಿಷ್ಠರ ಮುಖಭಂಗ ಮಾಡಬೇಕೆಂಬುದೇ ವಿಶ್ವಾಮಿತ್ರರ ಮುಖ್ಯ ಉದ್ದೇಶ.

ಕೂಡಲೇ ವಿಶ್ವಾಮಿತ್ರರು ತಮ್ಮ ಶಿಷ್ಯರನ್ನು ಕರೆದು, “ನೀವು ಎಲ್ಲ ಋಷಿಗಳನ್ನೂ ಹೋಗಿ ಕಾಣಿರಿ, ಈ ಯಜ್ಞಕ್ಕೆ ಅವರವರ ಶಿಷ್ಯರೊಡನೆ ಬರುವಂತೆ ನಾನು ಕರೆದನೆಂದು ಹೇಳಿ ಕರೆಯಿರಿ. ಬರುವುದಿಲ್ಲ ಎಂದು ಯಾರಾದರೂ ತಿರಸ್ಕರಿಸಿದರೆ, ಅವರ ವಿಷಯ ನನಗೆ ತಿಳಿಸಿ” ಎಂದು ಅವರುಗಳನ್ನು ಕಳುಹಿಸಿದರು.  ಸರಿ, ಶಿಷ್ಯರು ನಾನಾ ದಿಕ್ಕುಗಳಿಗೆ ಹೊರಟರು. ಅನೇಕ ಮುನಿಗಳನ್ನು ಆಹ್ವಾನಿಸಿದರು. ಅವರಲ್ಲಿ ಮಹೋದಯನೆಂಬ ಋಷಿಯೂ, ವಸಿಷ್ಠರ ನೂರು ಮಕ್ಕಳೂ ವಿಶ್ವಾಮಿತ್ರರು ಮಾಡಿಸುವ ಯಜ್ಞವನ್ನೂ ಅವರ ಶಿಷ್ಯರನ್ನೂ ಜರೆದು ಕುಚೋದ್ಯ ಮಾಡಿದರು. “ಚಂಡಾಲನೊಬ್ಬನು ಮಾಡುವ ಯಾಗದಿಂದ ಸಂತುಷ್ಟರಾದ ದೇವತೆಗಳ ಕೃಪೆಯ ಇಂದ, ಬಾಯಿ ಬಡುಕ ವಿಶ್ವಾಮಿತ್ರನು ತ್ರಿಶಂಕುವನ್ನು ಸ್ವರ್ಗಕ್ಕೇರಿಸುವನಲ್ಲವೆ?” ಎಂದು ನಾನಾ ಪರಿಯಾಗಿ ಜರೆದರು. ಹಿಂದಕ್ಕೆ ಬಂದ ಶಿಷ್ಯರು ನಡೆದ ಸಂಗತಿಯನ್ನು ವಿವರವಾಗಿ ವಿಶ್ವಾಮಿತ್ರರಿಗೆ ತಿಳಿಸಿದರು.

‘ಬೇರೊಬ್ಬ ಇಂದ್ರನನ್ನೇ ಸೃಷ್ಟಿಮಾಡುತ್ತೇನೆ!’

ಕೇಳಕೇಳುತ್ತಲೇ ವಿಶ್ವಾಮಿತ್ರರು ಕೆಂಡದಂತಾದರು. ತಮ್ಮನ್ನೂ ಯಜ್ಞವನ್ನೂ ತ್ರಿಶಂಕುವನ್ನೂ ಜರೆದ ಮಹೋದಯ ಮುನಿಯು ಗತಿಗೆಟ್ಟು ಹೋಗಲೆಂದು ಶಾಪ ಕೊಟ್ಟರು. “ವಸಿಷ್ಠರ ಮಕ್ಕಳೆಲ್ಲರೂ ಸುಟ್ಟು ಬೂದಿಯಾಗಲಿ” ಎಂದು ಶಾಪ ಕೊಟ್ಟರು. ವಿಶ್ವಾಮಿತ್ರರ ಶಾಪದ ಫಲದಿಂದಾಗಿ ಮಹೋದಯ ಮುನಿ ಗತಿಗೆಟ್ಟು ಹೋದ, ವಸಿಷ್ಠರ ನೂರು ಮಕ್ಕಳೂ ಸುಟ್ಟು ಬೂದಿಯಾದರು.

ಬೇರೆ ಇಂದ್ರನನ್ನೇ ಸೃಷ್ಟಿ ಮಾಡುತ್ತೇನೆ!

ವಿಶ್ವಾಮಿತ್ರರು ಯಜ್ಞಾರಂಭ ಮಾಡಿದರು. ಋಷಿಗಳ ಮುಖಾಂತರ ಮಂತ್ರಪೂರ್ವಕವಾಗಿ ಹವಿಸ್ಸನ್ನು ತ್ರಿಶಂಕು ವಿನಿಂದ ದೇವತೆಗಳಿಗೆ ಕೊಡಿಸಿದರು.

ಆದರೆ ಯಾವ ದೇವತೆಯೂ ಹವಿರ್ಭಾಗಗಳನ್ನು ತೆಗೆದುಕೊಳ್ಳಲು ಬರಲಿಲ್ಲ.

ಇದನ್ನು ಕಂಡ ವಿಶ್ವಾಮಿತ್ರರಿಗೆ ಕೋಪ ಉರಿಯಿತು. ಕೂಡಲೇ ತ್ರಿಶಂಕುವನ್ನು ಕರೆದು, “ತ್ರಿಶಂಕು, ನನ್ನ ತಪಶ್ಯಕ್ತಿಯಿಂದ ಈಗ ನಿನ್ನನ್ನು ಈ ಶರೀರವಿರುವಂತೆಯೇ ಸ್ವರ್ಗಕ್ಕೆ ಏರಿಸುತ್ತೇನೆ” ಎಂದು ಗರ್ಜಿಸಿದರು. ಈ ಮಾತನ್ನು ಕೇಳಿ ಅಲ್ಲಿ ನೆರೆದಿದ್ದ ಋಷಿಗಳಿಗೆ ಆಶ್ಚರ್ಯವೇ ಆಶ್ಚರ್ಯ. ಅವರೆಲ್ಲ ಬೆರಗಾಗಿ ನೋಡುತ್ತಿದ್ದಂತೆಯೇ ವಿಶ್ವಾಮಿತ್ರರು ತ್ರಿಶಂಕು ಮಹಾರಾಜನನ್ನು ಸ್ವರ್ಗಕ್ಕೆ ಏರಿಸಿದರು.

ಶರೀರಸಹಿತನಾಗಿ ತ್ರಿಶಂಕು ಮೇಲಕ್ಕೆ, ಮೇಲೆಕ್ಕೆ ಏರಿದ, ದೇವಲೋಕವನ್ನು ಮುಟ್ಟಿದ, ದೇವಲೋಕವನ್ನು ತ್ರಿಶಂಕು ಮುಟ್ಟಿದೊಡನೆಯೇ, ದೇವೇಂದ್ರನಿಗೆ ಕೋಪ ಬಂತು, ಅವನು ತ್ರಿಶಂಕುವಿಗೆ “ಮೂರ್ಖ, ಗುರುಗಳ ಶಾಪದಿಂದ ಭ್ರಷ್ಟನಾಗಿರುವ ನಿನಗೆ ಸ್ವರ್ಗದಲ್ಲಿ ಜಾಗವಿಲ್ಲ” ಎಂದು ಅಬ್ಬರಿಸಿ ಹೇಳಿದ. ಕೋಪದಿಂದ ತ್ರಿಶಂಕುವನ್ನು ಕತ್ತುಹಿಡಿದು ಕೆಳಕ್ಕೆ ತಳ್ಳಿಬಿಟ್ಟನು.

ತ್ರಿಶಂಕು ತಲೆ ಕೆಳಗಾಗಿ ಬೀಳಲಾರಂಭಿಸಿದ. ಅವನಿಗೆ ಮೈಯೆಲ್ಲ ಹೆದರಿಕೆ ತುಂಬಿತು. ‘ಹೋ’ ಎಂದು ಕೂಗಿಕೊಳ್ಳುತ್ತ, “ಮುನಿವರೇಣ್ಯರಾದ ವಿಶ್ವಾಮಿತ್ರರೇ, ಕೆಟ್ಟೆ, ಕೆಟ್ಟೆ! ಕಾಪಾಡಿ, ಕಾಪಾಡಿ!” ಎಂದು ಅಂಗಲಾಚಿದನು. ಇದನ್ನು ಕಂಡು ವಿಶ್ವಾಮಿತ್ರರಿಗೂ ಬಹು ಕೋಪ ಬಂದಿತು. “ಅಯ್ಯಾ ತ್ರಿಶಂಕು, ಹೆದರಬೇಡ ನಿಲ್ಲು!” ಎಂದು ತಮ್ಮ ತಪಶ್ಯಕ್ತಿಯಿಂದ ಅವನನ್ನು ಆಕಾಶದಲ್ಲೇ ನಿಲ್ಲಿಸಿದರು.

ವಿಶ್ವಾಮಿತ್ರರು ದಕ್ಷಿಣ ದಿಕ್ಕಿನಲ್ಲಿ ಬೇರೊಂದು ಸಪ್ತ ಋಷಿಮಂಡಲವನ್ನೂ, ನಕ್ಷತ್ರ ಮಂಡಲವನ್ನೂ ಸೃಷ್ಟಿಸಿದರು.

“ಬೇರೊಬ್ಬ ಇಂದ್ರನನ್ನೇ ಸೃಷ್ಟಿ ಮಾಡುತ್ತೇನೆ. ಇಲ್ಲದಿದ್ದರೆ ದೇವಲೋಕಕ್ಕೆ ಇಂದ್ರನೇ ಇಲ್ಲದಂತೆ ಮಾಡುತ್ತೇನೆ” ಎಂದು ಅಬ್ಬರಿಸಿದರು.

ಋಷಿಗಳಿಗೂ, ದೇವತೆಗಳಿಗೂ ಹೆದರಿಕೆಯಾಯಿತು. ಅವರು ವಿಶ್ವಾಮಿತ್ರರನ್ನು ಕುರಿತು , “ಮಹರ್ಷಿಯೇ , ಈತನಿಗೆ ಗುರುವಿನ ಶಾಪವಿದೆ. ಇವನು ಸ್ವರ್ಗವನ್ನು ಸೇರುವಂತಿಲ್ಲ” ಎಂದರು.

ವಿಶ್ವಾಮಿತ್ರರು “ನಾನು ಮಾಡಿದ ಪ್ರತಿಜ್ಞೆ ಸುಳ್ಳಾಗುವಂತಿಲ್ಲ. ನಾನು ಸೃಷ್ಟಿಸಿದ ನಕ್ಷತ್ರಗಳು ಶಾಶ್ವತವಾಗಿದ್ದು, ಇವುಗಳ ಲೋಕದಲ್ಲಿ ತ್ರಿಶಂಕು ಸಶರೀರನಾಗಿ ಇರಲಿ’ ’ ಎಂದು ಹೇಳಿದರು. ದೇವತೆಗಳೂ ಒಪ್ಪಿದರು.

ಅಂತೂ ತನ್ನ ಹಟ ಗೆದ್ದಿತೆಂದು ವಿಶ್ವಾಮಿತ್ರರು ಹರ್ಷಗೊಂಡರು. ಆದರೆ ಮರುಕ್ಷಣವೇ ತಮ್ಮ ಉಗ್ರ ತಪಸ್ಸಿನ ಫಲ, ಕೋಪದಿಂದಾಗಿ ನಷ್ಟವಾಯಿತು ಎಂಬುದನ್ನು ಕಂಡರು. ಮತ್ತೆ ಪಶ್ಚಿಮ ದಿಕ್ಕಿಗೆ ಬಂದು, ಪುಷ್ಕರ ಎಂಬ ಕ್ಷೇತ್ರದಲ್ಲಿ ತಪಸ್ಸು ಮಾಡಲು ಕುಳಿತರು.

ಮಗುವೇ ಯಜ್ಞಪಶು

ಅದೇ ಕಾಲಕ್ಕೆ ಸರಿಯಾಗಿ ಅಯೋಧ್ಯೆಗೆ ರಾಜನಾದ ಅಂಬರೀಷನು ಒಂದು ಯಜ್ಞವನ್ನು ನಡೆಸಿರುವಾಗ ದೇವತೆಗಳು ಮೋಸದಿಂದ ಆ ಯಜ್ಞ ಪಶುವನ್ನು ಕದ್ದುಕೊಂಡು ಹೋದರು. ದುಃಖಿತನಾದ ಅಂಬರೀಷನು ಮಂತ್ರಜ್ಞರ ಸಲಹೆಯಂತೆ ಯಜ್ಞಪಶುವನ್ನು ಹುಡುಕಿಕೊಂಡು ಅರಣ್ಯದಲ್ಲಿ ಬರುತ್ತಿದ್ದ.  ದಾರಿಯಲ್ಲಿ ಋಚೀಕನೆಂಬ ಋಷಿಯ ಆಶ್ರಮ ಸಿಕ್ಕಿತು. ಆತನಲ್ಲಿ ತನಗೊದಗಿರುವ ಕಷ್ಟವನ್ನು ಅರಿಕೆ ಮಾಡಿಕೊಂಡ. ಬಹಳ ಬಡತನದ ಬೇಗೆಯಿಂದ ಬಳಲಿದ್ದ ಆ ಋಷಿಯು, “ನನ್ನ ಮಕ್ಕಳಲ್ಲಿ ಒಬ್ಬನನ್ನು ಯಜ್ಞ ಪಶುವಾಗಿ ಕೊಡುತ್ತೇನೆ” ಎಂದ. ಋಷಿಗೆ ಮೂವರು ಗಂಡು ಮಕ್ಕಳು. ಯಾರನ್ನು ಮಾರುವುದು? ಹಿರಿಯ ಮಗನನ್ನು ತಂದೆಯಾದ ಋಚೀಕನು ಮಾರಲು ಇಷ್ಟಪಡಲಿಲ್ಲ. ಕಿರಿಯ ಮಗನನ್ನು ತಾಯಿಯು ಮಾರಲು ಒಪ್ಪಲಿಲ್ಲ. ಮಧ್ಯದವನಾದ ಶುನಶ್ಯೇಫ ಎಂಬ ಹುಡುಗನನ್ನು ಒಂದು ಲಕ್ಷ ಗೋವುಗಳಿಗೆ ಮಾರಿದರು. ಇದನ್ನು ಕಂಡು ಎಳೆಯ ಬಾಲಕ ಶುನಶ್ಯೇಪನಿಗೆ ಬಹಳ ದುಃಖವಾಯಿತು. ಆದರೂ ತಾನೇ ಯಜ್ಞಪಶುವಾಗಲು ಒಪ್ಪಿ ಅಂಬರೀಷನೊಡನೆ ಹೊರಟ. ದಾರಿಯಲ್ಲಿ ಪುಷ್ಕರಕ್ಷೇತ್ರ ಸಿಕ್ಕಿತು. ಅಲ್ಲಿ ತಪಸ್ಸು ಮಾಡುತ್ತಿದ್ದ ವಿಶ್ವಾಮಿತ್ರರು ಆ ಬಾಲಕನ ಸೋದರಮಾವ.

ಮಗು, ಹೆದರಬೇಡ

ತನ್ನ ಸೋದರಮಾವನನ್ನು ಕಂಡ ಶುನಶ್ಯೇಫನಿಗೆ ತನ್ನ ಪ್ರಾಣ ಉಳಿಯಬಹುದು ಎಂಬ ಆಸೆಯಾಯಿತು. ಓಡಿಹೋಗಿ ಅವರ ತೊಡೆಯ ಮೇಲೆ ಕುಳಿತು ಅಳುತ್ತ, ತನ್ನ ಕಷ್ಟವನ್ನು ತೋಡಿಕೊಂಡ. “ನನಗೆ ತಂದೆ ತಾಯಿ ಇದ್ದೂ ಇಲ್ಲದಂತಾಗಿದೆ. ನೀನು ಎಲ್ಲರನ್ನೂ ರಕ್ಷಿಸುವವನು. ನನ್ನನ್ನು ಕಾಪಾಡು, ನನ್ನ ಪ್ರಾಣ ಉಳಿಯಬೇಕು. ಆದರೆ ಮಹಾರಾಜನ ಯಜ್ಞವೂ ಕೆಡಬಾರದು” ಎಂದು ಬೇಡಿಕೊಂಡ.

ತನ್ನ ತೊಡೆಯ ಮೇಲೆ ಕುಳಿತು ಅಳುತ್ತ ಬೇಡುವ ಆ ಮಗುವಿನ ಸ್ಥಿತಿಗೆ ವಿಶ್ವಾಮಿತ್ರರ ಮನಸ್ಸು ಕರಗಿ ಹೋಯಿತು. “ಮಗು, ಹೆದರಬೇಡ”  ಎಂದರು. ಎಲ್ಲ ಕಷ್ಟಗಳನ್ನೂ ಪರಿಹಾರ ಮಾಡಬಲ್ಲ ಶಕ್ತಿಯುಳ್ಳ ಮಂತ್ರಗಳನ್ನು ಪ್ರೀತಿಯಿಂದ ಉಪದೇಶ ಮಾಡಿದರು. “ಮಗು, ನಿನ್ನನ್ನು ಯಜ್ಞಮಂಟಪದಲ್ಲಿ ಕಂಬಕ್ಕೆ ಕಟ್ಟಿದ್ದಾಗ ಭಕ್ತಿಯಿಂದ ಈ ಮಂತ್ರಗಳನ್ನು ಜಪಿಸುತ್ತಿರು, ನಿನ್ನ ಪ್ರಾಣ ಉಳಿಯುತ್ತ ದೆ” ಎಂದು ಹರಸಿ ಕಳುಹಿಸಿದರು. ಅಂಬರೀಷ ಮಹಾರಾಜನು ಆ ಮಗುವನ್ನು ಕರೆದುಕೊಂಡು ಹೋದ. ಯಜ್ಞ ಪ್ರಾರಂಭಿಸಿ ಹುಡುಗನನ್ನು ಕಂಬಕ್ಕೆ ಬಿಗಿಸಿದ, ಶುನಶ್ಯೇಫನು ತನಗೆ ಉಪದೇಶವಾದ ಮಂತ್ರಗಳನ್ನು ಭಕ್ತಿಯಿಂದ ಜಪಿಸುತ್ತಿದ್ದ. ಅವು ದೇವೇಂದ್ರನನ್ನು ಸ್ತೋತ್ರ ಮಾಡುವ ಮಂತ್ರಗಳು. ಅವನ್ನು ಕೇಳಿ ದೇವೇಂದ್ರನಿಗೂ ದೇವತೆಗಳಿಗೂ ಸಂತೋಷವಾಯಿತು. ಅವರು ಹರಸಿ ಅವನ ಪ್ರಾಣ ಉಳಿಯಿತು. ಯಜ್ಞವೂ ನಿರ್ವಿಘ್ನವಾಗಿ ನಡೆದು,  ಅಂಬರೀಷನಿಗೆ ಯಜ್ಞ ಫಲ ಲಭಿಸಿತು.

ವಸಿಷ್ಠರೂ ಒಪ್ಪಿದರು: ನೀನು ಬ್ರಹ್ಮ ಋಷಿ

ಇತ್ತಲಾಗಿ ತಪಸ್ಸಿಗೆ ಕುಳಿತ ವಿಶ್ವಾಮಿತ್ರರು ಸಾವಿರ ವರ್ಷಗಳವರೆಗೆ ಕಠಿಣ ವ್ರತ ಆಚರಿಸಿದರು. ಬ್ರಹ್ಮನು ಮೆಚ್ಚಿ ಪ್ರತ್ಯಕ್ಷನಾಗಿ , “ಅಯ್ಯಾ ವಿಶ್ವಾಮಿತ್ರ, ಈಗ ನೀನು ಋಷಿಯಾದೆ” ಎಂದನು. ವಿಶ್ವಾಮಿತ್ರರಿಗೆ ಇದರಿಂದ ತೃಪ್ತಿಯಾಗಲಿಲ್ಲ. ತಾವು ಬ್ರಹ್ಮ ಋಷಿ ಎನ್ನಿಸಿಕೊಳ್ಳಬೇಕು ಎಂದು ಅವರ ಹಠ. ಪುನಃ ಘೋರ ತಪಸ್ಸನ್ನು ಮುಂದುವರಿಸಿದರು.

ಈ ಕಾಲದಲ್ಲಿ ಮೇನಕೆ ಎಂಬ ಅಪ್ಸರೆಯನ್ನು ವಿಶ್ವಾಮಿತ್ರರು ಕಂಡರು. ಅವಳ ಜೊತೆಗೆ ಸಂತೋಷವಾಗಿ ಬಾಳಿದರು. ಅವಳಿಗೆ ಶಕುಂತಳೆ ಎಂಬ ಮಗಳು ಹುಟ್ಟಿದಳು. ಹತ್ತು ವರ್ಷಗಳು ಕಳೆದವು. ಒಂದು ದಿನ ವಿಶ್ವಾಮಿತ್ರರಿಗೆ, “ನನ್ನ ತಪಸ್ಸನ್ನು ಬಿಟ್ಟೆನಲ್ಲ” ಎಂದು ನಾಚಿಕೆಯಾಯಿತು. ಮೇನಕೆಯನ್ನು ಬಿಟ್ಟು ಉತ್ತರ ದಿಕ್ಕಿಗೆ ಹೋಗಿ ಉಗ್ರವಾದ ತಪಸ್ಸನ್ನು ಮಾಡಲು ತೊಡಗಿದರು. ಎಷ್ಟೇ ಅಡ್ಡಿಗಳು ಬಂದರೂ ಮನಸ್ಸಿನಲ್ಲಿ ಕೋಪಕ್ಕೆ ಅವಕಾಶ ಕೊಡಲಿಲ್ಲ. ಸಾವಿರ ವರ್ಷ ಕಳೆದು ವ್ರತ ಮುಗಿಯಿತು.  ಒಂದು ದಿನ ಋಷಿ ಊಟ ಮಾಡಲು ಅನ್ನವನ್ನು ಸಿದ್ಧಮಾಡಿಕೊಂಡರು. ಇಂದ್ರನು ಬ್ರಾಹ್ಮಣ ವೇಷದಲ್ಲಿ ಬಂದು ಅನ್ನವನ್ನು ಬೇಡಿದನು. ವಿಶ್ವಾಮಿತ್ರರು ಅನ್ನವನ್ನೆಲ್ಲ ಅವನಿಗೆ ಕೊಟ್ಟುಬಿಟ್ಟರು. ಮತ್ತೆ ತಪಸ್ಸಿಗೆ ಕುಳಿತರು. ಸಾವಿರ ವರ್ಷಗಳ ನಂತರ ಪ್ರತ್ಯಕ್ಷನಾದ ಬ್ರಹ್ಮ, “ಅಯ್ಯಾ ವಿಶ್ವಾಮಿತ್ರ ಈಗ ನೀನು ಮಹರ್ಷಿಯಾದೆ” ಎಂದನು.

ಇದರಿಂದ ವಿಶ್ವಾಮಿತ್ರರಿಗೆ ಸಂತೋಷವೂ ಆಗಲಿಲ್ಲ. ದುಃಖವೂ ಆಗಲಿಲ್ಲ. ತಾವು ಬ್ರಹ್ಮ ಋಷಿ ಎನಿಸಿಕೊಳ್ಳಬೇಕು ಎಂದು ಪುನಃ ಕಠಿಣ ತಪಸ್ಸನ್ನು ಮುಂದುವರಿಸಿದರು. ಮಧ್ಯೆ ಮಧ್ಯೆ ಒದಗಿದ ಹಲವಾರು ವಿಘ್ನಗಳನ್ನು ಶಾಂತಚಿತ್ತದಿಂದ ಜಯಿಸಿದರು. ವಿಶ್ವಾಮಿತ್ರರ ಈ ತಪಸ್ಸಿಗೆ ಜಗತ್ತೇ ಅಲ್ಲೋಲಕಲ್ಲೋಲವಾಯಿತು. ದೇವೇಂದ್ರನೇ ಬ್ರಾಹ್ಮಣನ ವೇಷಧರಿಸಿ ನಾನಾ ರೀತಿಗಳಲ್ಲಿ ವಿಶ್ವಾಮಿತ್ರರನ್ನು ಪರೀಕ್ಷಿಸಿ ಸೋತ. ಕಡೆಗೆ ಬ್ರಹ್ಮನೇ ಎಲ್ಲ ದೇವತೆಗಳೊಡನೆ ಬಂದು, “ವಿಶ್ವಾಮಿತ್ರರೆ, ನೀವು ಈಗ ಬ್ರಹ್ಮ ಋಷಿಯಾದಿರಿ” ಎಂದನು.

ವಿಶ್ವಾಮಿತ್ರರು ಅವರಿಗೆ ನಮಸ್ಕರಿಸಿ, “ವೇದಜ್ಞಾನವನ್ನು ತಿಳಿದ ವಸಿಷ್ಠರು ನಾನು ಬ್ರಹ್ಮ ಋಷಿ ಎಂದು ಒಪ್ಪಲಿ, ಇದು ನನ್ನ ಆಸೆ” ಎಂದರು. ದೇವತೆಗಳು ವಸಿಷ್ಠರನ್ನು ಪ್ರಾರ್ಥಿಸಿದರು. ಅವರು ಬಂದು ವಿಶ್ವಾಮಿತ್ರರಿಗೆ “ನೀನು ಬ್ರಹ್ಮ ಋಷಿಯಾದೆ” ಎಂದು ಹೇಳಿದರು.

ಆಗ ತಪಸ್ಸನ್ನು ನಿಲ್ಲಿಸಿದ ವಿಶ್ವಾಮಿತ್ರರು ಎಲ್ಲ ದೇವತೆಗಳನ್ನೂ ವಸಿಷ್ಠ ಮುನಿಗಳನ್ನೂ ಗೌರವಿಸಿ, ಕೀರ್ತಿಗಳಿಸಿ ಲೋಕಪೂಜ್ಯರಾಗಿದ್ದಾರೆ.

ದೇವಸಭೆಯಲ್ಲಿ ಪ್ರತಿಜ್ಞೆ

ಒಂದು ದಿನ ಭವ್ಯ ಸಿಂಹಾಸನದಲ್ಲಿ ಕುಳಿತಿದ್ದ ದೇವೇಂದ್ರನು ವಸಿಷ್ಠ ಮುನಿಗಳನ್ನು ಕುರಿತು, “ಮಹಾತಪಸ್ವಿಗಳಾದ ವಸಿಷ್ಠ ಮುನಿಗಳೆ , ನಿಮ್ಮ ಶಿಷ್ಯ ಪರಂಪರೆಗೆ ಸೇರಿದ ಇಕ್ಷ್ವಾಕು ವಂಶದ ರಾಜರುಗಳಲ್ಲಿ ಸತ್ಯಸಂಧನಾಗಿ ಸುಳ್ಳು ಹೇಳದಿರುವ ಧೀರರಿದ್ದಾರೆಯೆ?” ಎಂದನು. ಈ ಪ್ರಶ್ನೆಗೆ ವಸಿಷ್ಟ ಮುನಿಗಳು ಸಂತೋಷದಿಂದ ಉತ್ತರ ಕೊಟ್ಟರು: “ಸೂರ್ಯವಂಶದ ದೊರೆಯಾದ ಹರಿಶ್ಚಂಧ್ರ ಸತ್ಯವಂತನಾಗಿದ್ದಾನೆ” ಎಂದರು.

ಈ ಮಾತು ಅದೇ ಸಭೆಯಲ್ಲಿ ಕುಳಿತಿದ್ದ ವಿಶ್ವಾಮಿತ್ರ ಮುನಿಗಳಿಗೆ ಸರಿ ತೋರಲಿಲ್ಲ. ಅವರು ಜಗ್ಗನೆ ಮೇಲೆದ್ದು, “ಅಯ್ಯಾ ವಸಿಷ್ಠ, ಈ ದೇವೇಂದ್ರನಿಗಂತೂ ಕಾಲ ಕಳೆಯಲು, ಬೇಸರ ಕಳೆಯಲು ಏನನ್ನಾದರೂ ಪ್ರಸ್ತಾಪಿಸಬೇಕೆಂಬ ಬಯಕೆ . ಆದರೆ ಅರಿಯದೆ ದೇವೇಂದ್ರ ನಿನಗೆ ಮೊದಲ ಗೌರವ ಕೊಟ್ಟು ಕೇಳಿದರೆ ಬಾಯಿಗೆ ಬಂದಂತೆ ಹರಟುವೆ” ಎಂದರು.

ಇಬ್ಬರು ಋಷಿಗಳ ನಡುವೆ ಕೋಪದ ಮಾತುಗಳಾದವು. ಬರಬರುತ್ತ ವಾಗ್ವಾದ ಬಿರುಸಾಗುತ್ತಿರುವುದನ್ನು ಕಂಡ ಸಭೆಯವರು ಭಯದಿಂದ ನಡುಗಿದರು. ದೇವೇಂದ್ರನಂತೂ ದಿಗ್ಭ್ರಾಂತನಾದ. ಯಾರಿಗೂ ಈ ಮುನಿಗಳ ಮಧ್ಯೆ ಮಾತನಾಡುವ ಧೈರ್ಯವಿಲ್ಲ. ಕಡೆಗೆ ಹಲ್ಲುಗಳನ್ನು ಕಟಕಟನೆ ಕಡಿಯುತ್ತ ಕೈಯನ್ನು ಮೇಲಕ್ಕೆ ಎತ್ತಿದ ವಿಶ್ವಾಮಿತ್ರರು, “ಎಲವೋ ವಸಿಷ್ಠ, ನಿನ್ನನ್ನೂ ನಿನ್ನ ಶಿಷ್ಯರನ್ನೂ ವ್ರತಭ್ರಷ್ಠರೆನಿಸದಿದ್ದರೆ ನಾನು ವಿಶ್ವಾಮಿತ್ರನೇ ಅಲ್ಲ” ಎಂದು ಗರ್ಜಿಸುತ್ತ ಮೇಘದಿಂದ ಸಿಡಿಲು ಆರ್ಭಟಿಸಿ ಭೂಮಿಯ ಕಡೆಗೆ ಬರುವಂತೆ ಆ ಸಭೆಯಿಂದ ಧಡಧಡನೆ ಹೊರಟುಹೋದರು.

ನನಗೆ ದಾನ ಬೇಕು

ವಿಶ್ವಾಮಿತ್ರರು ನೇರವಾಗಿ ಭೂಲೋಕಕ್ಕೆ ತಮ್ಮ ಆಶ್ರಮಕ್ಕೆ ಬಂದರು. ಹರಿಶ್ಚಂದ್ರ ಮಹಾರಾಜನನ್ನು ಸುಳ್ಳುಗಾರನನ್ನಾಗಿ ಮಾಡುವ ಉಪಾಯದ ಯೋಚನೆಯಲ್ಲಿ ಮಗ್ನರಾದರು. ದೇವೇಂದ್ರನ ಸಭೆಯಲ್ಲಿ ನಾವು ಹಠ ತೊಟ್ಟಂತೆ ಸುಳ್ಳು ಹೇಳಿಸುವುದು ಅಷ್ಟು ಸುಲಭ ಸಾಧ್ಯವಿಲ್ಲವೆಂಬುದು ಅವರಿಗೆ ಈಗ ಚೆನ್ನಾಗಿ ಮನದಟ್ಟಾಯಿತು.

ಹರಿಶ್ಚಂದ್ರನು ಬಹುಸುವರ್ಣ ಯಾಗ ಮಾಡಿದನು. ಆಗ ವಸಿಷ್ಠ ಮುನಿಗಳು ಇಲ್ಲದ ಸಮಯದಲ್ಲಿ ಹರಿಶ್ಚಂದ್ರನ ಯಜ್ಞ ಶಾಲೆಗೆ ವಿಶ್ವಾಮಿತ್ರರು ಬಂದರು. ಹರಿಶ್ಚಂದ್ರನು ಅವರನ್ನು ಬಹಳ ಭಕ್ತಿಯಿಂದ ಕರೆದೊಯ್ದು ಉಚಿತವಾದ ಪೀಠದಲ್ಲಿ ಕೂರಿಸಿ ಅರ್ಘ್ಯಪಾಧ್ಯಾದಿಗಳಿಂದ ಸತ್ಕರಿಸಿ ಬಂದ ಕಾರಣವನ್ನು ನಮ್ರನಾಗಿ ಕೇಳಿದ. ಋಷಿಯು “ನನಗೆ ದಾನ ಬೇಕು” ಎಂದರು. ಹರಿಶ್ಚಂದ್ರ ಒಪ್ಪಿದ. ಆಗ “ಒಂದು ದೊಡ್ಡ ಆನೆಯ ಮೇಲೆ ಒಬ್ಬ ಎತ್ತರದ ಮನುಷ್ಯ ನಿಂತುಕೊಂಡು ಒಂದು ಸಣ್ಣ ಕವಡೆಯನ್ನು ಮೇಲಕ್ಕೆ ಚಿಮ್ಮಿದರೆ ಎಷ್ಟು ಎತ್ತರ ಹೋಗುತ್ತದೆಯೋ ಅಷ್ಟು ಎತ್ತರ ಹೊಸ ಚಿನ್ನದ ರಾಶಿಯನ್ನು ಕೊಡು” ಎಂದರು.

ಹರಿಶ್ಚಂದ್ರನು ಕೂಡಲೆ “ಬಹಳ ಸಂತೋಷ ಮುನಿಗಳೆ, ಭಂಡಾರದಲ್ಲಿದೆ ಸ್ವೀಕರಿಸಿ” ಎಂದ.

ಇಂತಹ ಉತ್ತರವನ್ನು ನಿರೀಕ್ಷಿಸದಿದ್ದ ವಿಶ್ವಾಮಿತ್ರರಿಗೆ ಇದು ಮೊದಲನೆಯ ಸೋಲು ಆದಂತಾಯಿತು. ತಮ್ಮ ಪೆಚ್ಚುತನವನ್ನು ಹೊರಗೆಡಹದೆ, “ರಾಜ, ನಿನ್ನ ಭಂಡಾರದಲ್ಲಿಯೇ ಇರಲಿ, ಬೇಕಾದಾಗ ತರಿಸಿಕೊಳ್ಳುತ್ತೇನೆ” ಎಂದು ಹೇಳಿ ಪುರಸ್ಕೃತರಾಗಿ ಅಲ್ಲಿಂದ ಹೊರಟು ನೇರವಾಗಿ ತಮ್ಮ ಆಶ್ರಮಕ್ಕೆ ಬಂದು ಯೋಚಿಸುತ್ತಾ ಕುಳಿತರು.

ಕಡೆಗೆ ವಿಶ್ವಾಮಿತ್ರರು ತಮ್ಮ ತಪಸ್ಸಿನ ಶಕ್ತಿಯಿಂದ ಕೆಲವು ದುಷ್ಟ ಮೃಗಗಳನ್ನು ಸೃಷ್ಟಿಸಿದರು. ಹರಿಶ್ಚಂದ್ರನ ಪ್ರಜೆಗಳಿಗೆ ತೊಂದರೆ ಕೊಡಲು ಅವನ್ನು ಕಳುಹಿಸಿದರು. ಪ್ರಜೆಗಳು ತಮಗೆ ಕಾಡುಪ್ರಾಣಿಗಳಿಂದ ಕಷ್ಟವಾಗುತ್ತಿದೆ ಎಂದು ರಾಜನಲ್ಲಿ ಮೊರೆ ಇಟ್ಟರು. ಹರಿಶ್ಚಂದ್ರನು ತನ್ನ ಹೆಂಡತಿ ಚಂದ್ರಮತಿ, ಮಗ ರೋಹಿತಾಶ್ವ ಮತ್ತು ಪರಿ ಜನರೊಂದಿಗೆ ಬೇಟೆಗೆ ಬಂದ.

ಹರಿಶ್ಚಂದ್ರನಿಂದ ಸೋಲು

ಆ ಸಮಯದಲ್ಲಿ ವಿಶ್ವಾಮಿತ್ರರು ಇಬ್ಬರು ತರುಣಿಯರನ್ನು ಸೃಷ್ಟಿಸಿ ಕಳುಹಿಸಿದರು. ಅವರು ಹರಿಶ್ಚಂದ್ರನಲ್ಲಿಗೆ ಬಂದರು. ಅವರು ಉದ್ದೇಶಪೂರ್ವಕವಾಗಿ ಅವಿನಯವಾಗಿ ಮಾತನಾಡಿದರು. ಹರಿಶ್ಚಂದ್ರನ ಕೋಪ ಮಾಡಿಕೊಂಡು ಅವರನ್ನು ಹೊಡೆದಟ್ಟಿದ. ವಿಶ್ವಾಮಿತ್ರರು ಹರಿಶ್ಚಂದ್ರನ ಬಳಿಗೆ ಬಂದು, “ನೀನು ನನ್ನ ಮಕ್ಕಳನ್ನು ಹೊಡೆದಿದ್ದೀಯೆ” ಎಂದು ಸಿಟ್ಟಿನಿಂದ ಮಾತನಾಡಿದರು. ಶಿಕ್ಷೆಯಾಗಿ ಅವನ ರಾಜ್ಯವನ್ನೇ ಕಿತ್ತುಕೊಂಡರು. ಹಿಂದೆ ತಾನು ದಾನ ಕೊಡುವೆನೆಂದಿದ್ದ ಸುವರ್ಣವನ್ನೂ ಅದರ ದಕ್ಷಿಣೆಯನ್ನೂ ಕೊಡು ಎಂದರು. ರಾಜನು ಅವರಿಗೆ ಸಿಂಹಾಸನವನ್ನೂ ಬೊಕ್ಕಸವನ್ನೂ ಅರ್ಪಿಸಿದ. ಏನೇ ಕಷ್ಟ ಬಂದರೂ ಸುಳ್ಳನ್ನು ಹೇಳಲಿಲ್ಲ.

ತಮಗೆ ರಾಜನು ಕೊಡಬೇಕಾದ ಹಣವನ್ನು ಸಲ್ಲಿಸಲು ವಿಶ್ವಾಮಿತ್ರರು ಅವನಿಗೆ ನಲವತ್ತೆಂಟು ದಿನಗಳ ಅವಧಿ ಕೊಟ್ಟರು. ಅವನೂ ಅವನ ಹೆಂಡತಿಯೂ ಮಗನೂ ರಾಜ್ಯವನ್ನು ಬಿಟ್ಟು ಹೊರಟರು. ಅವರನ್ನು ಗೋಳಾಡಿಸಲು ವಿಶ್ವಾಮಿತ್ರರು ನಕ್ಷತ್ರಕ ಎಂಬಾತನನ್ನು ಕಳುಹಿಸಿದರು.

ಹರಿಶ್ಚಂದ್ರನು ತನ್ನ ರಾಣಿಯನ್ನೂ ಮುದ್ದು ಮಗನನ್ನೂ ಮಾರಿ , ತನ್ನನ್ನೂ ಮಾರಿಕೊಂಡು ಕೊಡಬೇಕಾದ ಹಣವನ್ನು ನಕ್ಷತ್ರಕನಿಗೆ ಸಲ್ಲಿಸಿದ. ಆಡಿದ ಮಾತಿಗೆ ತಪ್ಪಲಿಲ್ಲ.

ಹರಿಶ್ಚಂದ್ರನು ಕಾಶಿಯಲ್ಲಿ ಸ್ಮಶಾನ ಕಾಯುವ ಕೆಲಸ ಮಾಡಬೇಕಾಯಿತು. ಅವನ ಮಗನೇ ಹಾವು ಕಚ್ಚಿ ಸತ್ತ, ಚಂದ್ರಮತಿ ಅವನ ಹೆಣವನ್ನು ಹೊತ್ತು ತಂಧಳು. ಮೊದಲು ಬಂದವಳು ತನ್ನ ಹೆಂಡತಿ ಚಂದ್ರಮತಿ, ಹೆಣ ತನ್ನ ಮಗ ರೋಹಿತಾಶ್ವನದು ಎಂದು ಹರಿಶ್ಚಂದ್ರನಿಗೆ ತಿಳಿಯಲಿಲ್ಲ. “ಹೆಣ ಸುಡುವ ಮೊದಲು ನೆಲದ ಬಾಡಿಗೆ ಕೊಡಬೇಕು” ಎಂದು ಚಂದ್ರಮತಿಗೆ ಹೇಳಿದ. ಅವಳ ದುಃಖದ ಮಾತುಗಳಿಂದ ಅವಳು ಯಾರು, ಹೆಣ ಯಾರದು ಎಂದು ತಿಳಿಯಿತು. ಆದರೂ ಹರಿಶ್ಚಂದ್ರ ತನ್ನ ಯಜಮಾನನಿಗೆ ಬರಬೇಕಾದ ನೆಲದ ಬಾಡಿಗೆಯನ್ನು ಬಿಡಲು ಒಪ್ಪಲಿಲ್ಲ. ಹಣ ತರಲು ಚಂದ್ರಮತಿ ಹೊರಟಳು. ದಾರಿಯಲ್ಲಿ ರಾಜಭಟರು ಅವಳನ್ನು ಹಿಡಿದರು. ಅವಳು ರಾಜಕುಮಾರನನ್ನು ಕೊಂದಳೆಂದು, ಕಾಶಿಯ ರಾಜ ಅವಳಿಗೆ ಮರಣದಂಡನೆ ವಿಧಿಸಿದ. ಹರಿಶ್ಚಂದ್ರನೇ ಅವಳ ತಲೆಯನ್ನು ಕತ್ತರಿಸಬೇಕಾಯಿತು. ಹಿಂಜರಿಯದೆ ತನ್ನ ಕರ್ತವ್ಯ ಮಾಡಲು ಸಿದ್ಧನಾದ ಹರಿಶ್ಚಂದ್ರ. ಆಗ ಪರಮೇಶ್ವರನು ಪ್ರತ್ಯಕ್ಷನಾಗಿ ಅವನನ್ನು ಹೊಗಳಿದ, ಅವನ ಮಗನನ್ನು ಬದುಕಿಸಿದ. ವಿಶ್ವಾಮಿತ್ರರು ಹರಿಶ್ಚಂದ್ರನ ಸತ್ಯಸಂಧತೆಯನ್ನು ಹೊಗಳಿ, ಅವನ ರಾಜ್ಯವನ್ನು ಅವನಿಗೆ ಒಪ್ಪಿಸಿ, ತಮ್ಮ ಆಶ್ರಮಕ್ಕೆ ಹಿಂದಿರುಗಿದರು.

ಶ್ರೀರಾಮನ ಗುರುಗಳು

ರಾಮಾಯಣದಲ್ಲಿ ವಿಶ್ವಾಮಿತ್ರರ ಪಾತ್ರ ಹಿರಿದಾದದ್ದು. ಇಕ್ಷ್ವಾಕು ವಂಶದ ದಶರಥ ಮಹಾರಾಜನಿಗೆ ನಾಲ್ವರು ಮಕ್ಕಳು – ರಾಮ, ಲಕ್ಷ್ಮಣ, ಭರತ, ಶತ್ರುಘ್ನರು. ಅವನ ಗುರುಗಳು ವಸಿಷ್ಠರು. ರಾಜಕುಮಾರರು ಬೆಳೆದು ಧನುರ್ವಿದ್ಯೆಯನ್ನು ಕಲಿತರು, ತಂದೆ ತಾಯಿಯರಿಗೆ ಪ್ರಾಣವಾಗಿ ಪ್ರಜೆಗಳಿಗೆ ಸಂತೋಷವಾಗಿ ರಾಜ್ಯದಲ್ಲಿ ಬೆಳಗುತ್ತಿದ್ದರು.

ಒಂದು ದಿನ ವಿಶ್ವಾಮಿತ್ರರು ದಶರಥನ ಅರಮನೆಗೆ ಬಂದರು. ರಾಜನು ಅವರನ್ನು ಗೌರವದಿಂದ ಬರಮಾಡಿಕೊಂಡು ಉನ್ನತವಾದ ಪೀಠವನ್ನು ಕೊಟ್ಟು ನಮಸ್ಕರಿಸಿದನು. “ನನ್ನಿಂದ ಏನಾಗಬೇಕು? ಅಪ್ಪಣೆ ಮಾಡಿ, ನಡೆಸುತ್ತೇನೆ ಎಂದನು. ಅನಂತರ ವಿಶ್ವಾಮಿತ್ರರು ದಶರಥನಿಗೆ ಹೇಳಿದರು:

“ರಾಜಶ್ರೇಷ್ಠನೆ, ನನ್ನ ಯಾಗಗಳಿಗೆ ಇಬ್ಬರು ರಾಕ್ಷಸರು ತೊಂದರೆಯನ್ನು ಮಾಡುತ್ತಿದ್ದಾರೆ. ಮಾರೀಚ ಮತ್ತು ಸುಬಾಹು ಎಂಬ ಅವರು ಬಹು ಪರಾಕ್ರಮಿಗಳು. ಅವರಿಗೆ ಶಾಪ ಕೊಟ್ಟು ನಿಗ್ರಹಿಸಬಲ್ಲೆ, ಆದರೆ ಯಜ್ಞದ ನಿಯಮದಂತೆ ನಾನು ಕೋಪ ತಾಳಿ ಶಾಪ ಕೊಡಬಾರದು. ಮಹಾತ್ಮನೂ ಸತ್ಯಪರಾಕ್ರಮಿಯೂ ಆದ ಶ್ರೀರಾಮನನ್ನು ನನ್ನೊಡನೆ ಕಳುಹಿಸು. ಅವನು ರಾಕ್ಷಸರನ್ನು ಕೊಲ್ಲಲಿ. ನಾನು ಅವನಿಗೆ ಮೂರು ಲೋಕಗಳಲ್ಲಿಯೂ ಕೀರ್ತಿಶಾಲಿಯಾಗುವಷ್ಟು ಒಳಿತನ್ನು ಮಾಡುತ್ತೇನೆ”.

ವಿಶ್ವಾಮಿತ್ರರ ಕೋರಿಕೆಯನ್ನು ಕೇಳಿ ದಶರಥನಿಗೆ ಚಿಂತೆಯಾಯಿತು. ರಾಮ ಇನ್ನೂ ಚಿಕ್ಕವನು. ರಾಕ್ಷಸರೊಡನೆ ಯುದ್ಧ ಮಾಡಲಾರ ಎಂದು ಅವನಿಗೆ ಚಿಂತೆ. ವಿಶ್ವಾಮಿತ್ರರಿಗೆ ಹಾಗೆಂದು ತಿಳಿಸಿ, “ಋಷಿವರ್ಯ, ನಾನೇ ನಿಮ್ಮೊಡನೆ ಬರುತ್ತೇನೆ. ನನ್ನ ಸೈನ್ಯವನ್ನು ತರುತ್ತೇನೆ. ರಾಕ್ಷಸರೊಡನೆ ಹೋರಾಡುತ್ತೇನೆ. ಅನುಮತಿ ಕೊಡಿ” ಎಂದನು.

ವಿಶ್ವಾಮಿತ್ರರು ರಾಜನಿಗೆ ಸ್ನೇಹವಾಗಿ ಉತ್ತರ ಕೊಟ್ಟರು. “ರಾಮನ ಶೌರ್ಯದಲ್ಲಿ ಅಪನಂಬಿಕೆ ಬೇಡ” ಎಂದರು. ಆದರೂ ದಶರಥನು ಒಪ್ಪಲಿಲ್ಲ.

“ನಾನು ಕೇಳಿದುದನ್ನು ನಡೆಸಿಕೊಡುತ್ತೇನೆ ಎಂದು ಹೇಳಿ, ಈಗ ಮಾತಿಗೆ ತಪ್ಪುತ್ತಿದ್ದೀಯೆ” ಎಂದು ಕೋಪದಿಂದ ವಿಶ್ವಾಮಿತ್ರರು ಎಚ್ಚರಿಸಿದರು. ರಾಜಗುರುಗಳಾದ ವಸಿಷ್ಠರೂ ದಶರಥನಿಗೆ ಬುದ್ಧಿ ಹೇಳಿದರು. “ವಿಶ್ವಾಮಿತ್ರರು ಪರಾಕ್ರಮಿಗಳಲ್ಲಿ ಪರಾಕ್ರಮಿ, ಬುದ್ಧಿವಂತರಲ್ಲಿ ಶ್ರೇಷ್ಠರು, ಮಹಾತಪಸ್ವಿ. ಇವರು ನಾನಾ ವಿಧದ ಶಸ್ತ್ರಾಸ್ತ್ರಗಳನ್ನು ಬಲ್ಲರು. ಇಷ್ಟು ಶಸ್ತ್ರಾಸ್ತ್ರಗಳನ್ನು ತಿಳಿದವರು ಯಾರೂ ಇಲ್ಲ. ರಾಕ್ಷಸರನ್ನು ಇವರೇ ಕೊಲ್ಲಬಲ್ಲರು. ವಿಶ್ವಾಮಿತ್ರರು ಜೊತೆಯಲ್ಲಿರುವಾಗ ರಾಮನಿಗೇನು ಅಪಾಯ? ವಿಶ್ವಮಿತ್ರರೊಡನೆ ಹೋಗುವುದರಿಂದ ರಾಮನಿಗೇ ಒಳ್ಳೆಯದಾಗುವುದು, ಕಳುಹಿಸು” ಎಂದರು. ದಶರಥನು ಒಪ್ಪಿದನು. ಲಕ್ಷ್ಮಣನೂ ರಾಮನೊಡನೆ ಹೊರಟನು.

ದಾರಿಯಲ್ಲಿ ಸರಯೂ ನದಿ ಸಿಕ್ಕಿತು. ಅದರ ತೀರದಲ್ಲಿ ವಿಶ್ವಾಮಿತ್ರರು ಶ್ರೀರಾಮನಿಗೆ ‘ಬಲ’ ಮತ್ತು ‘ಅತಿಬಲ’ ಎಂಬ ಮಂತ್ರಗಳನ್ನು ಉಪದೇಶಿಸಿದರು. ಇವು ಅಸಮಾನ ಬಾಹುಶಕ್ತಿಯನ್ನೂ ಜ್ಞಾನವನ್ನೂ ಕೊಡಬಲ್ಲ ಮಂತ್ರಗಳು, ಅನಂತರ ಒಂದು ಕಾಡಿಗೆ ಬಂದರು. ಭಯಂಕರವಾದ ಆ ಕಾಡಿನಲ್ಲಿ ಪ್ರಾಣಿಗಳ ಮತ್ತು ಕ್ರಿಮಿಕೀಟಗಳ ಶಬ್ದವೇ ಶಬ್ದ. ಅಲ್ಲಿದ್ದ ತಾಟಕೆ ಎಂಬ ದುಷ್ಟ ರಾಕ್ಷಸ ಸ್ತ್ರೀಯನ್ನು ನಿಗ್ರಹ ಮಾಡುವಂತೆ ವಿಶ್ವಾಮಿತ್ರರು ರಾಮನಿಗೆ ಹೇಳಿದರು. ಅದರಂತೆಯೇ ರಾಮನು ತನ್ನನ್ನು ಅಟ್ಟಿಸಿಕೊಂಡು ಬಂದ ತಾಟಿಕೆಯನ್ನು ಕೊಂದನು.

ಮರುದಿನ ಉಷಃಕಾಲದಲ್ಲಿ ವಿಶ್ವಾಮಿತ್ರರು ರಾಮನನ್ನು ಎಬ್ಬಿಸಿದರು. ದೇವಾಸುರರನ್ನೆಲ್ಲ ಸೋಲಿಸಬಲ್ಲ ದಿವ್ಯ ಅಸ್ತ್ರಗಳನ್ನು ಶ್ರೀರಾಮನಿಗೆ ಉಪದೇಶಿಸಿಕೊಟ್ಟರು. ಅವನ್ನು ಹಿಂದಕ್ಕೆ ತೆಗೆದುಕೊಳ್ಳುವ ರೀತಿಯನ್ನೂ ಕಲಿಸಿಕೊಟ್ಟರು.

ಅನಂತರ ವಿಶ್ವಾಮಿತ್ರರು ಯಾಗಕ್ಕೆ ಸಿದ್ಧತೆ ಮಾಡಿಕೊಂಡರು. ಯಾವ ರೀತಿಯಲ್ಲಿ ಯಾಗವನ್ನು ರಕ್ಷಿಸಬೇಕು ಎಂದು ಹೇಳಿಕೊಟ್ಟರು. ಯಾಗವು ಪ್ರಾರಂಭವಾಯಿತು. ಐದು ದಿನಗಳ ಕಾಲ ಯಾವ ಅಡ್ಡಿಯೂ ಇಲ್ಲದೆ ನಡೆಯಿತು. ಆರನೆಯ ದಿನ ಇದ್ದಕ್ಕಿದ್ದಂತೆ ಆಕಾಶದಲ್ಲಿ ಭಯಂಕರವಾದ ಶಬ್ದವಾಯಿತು. ಮಾರೀಚ ಸುಬಾಹುಗಳೂ ಅವರ ಹಿಂಬಾಲಕರೂ ಓಡಿಬಂದರು. ಯಾಗದ ಪವಿತ್ರ ಅಗ್ನಿಯಲ್ಲಿ ರಕ್ತವನ್ನು ಸುರಿದರು. ಮಾರೀಚನನ್ನು ರಾಮನು ಹೊಡೆದು ಓಡಿಸಿದನು. ಸುಬಾಹುವನ್ನು ಕೊಂದನು. ವಿಶ್ವಾಮಿತ್ರರಿಗೂ ಇತರ ಋಷಿಗಳಿಗೂ ಬಹಳ ಸಂತೋಷವಾಯಿತು.

ಅಹಲ್ಯೆಯ ಉದ್ದಾರ

ಮಿಥಿಲೆ ಎಂಬುದೊಂದು ದೇಶ. ಅಲ್ಲಿಯ ರಾಜ ಧರ್ಮಾತ್ಮನೆನೆಸಿಕೊಂಡ ಜನಕ ಮಹಾರಾಜ. ಅವನ ಆಸ್ಥಾನದಲ್ಲಿ ಅದ್ಭುತವಾದೊಂದು ಧನಸ್ಸು. ಅದಕ್ಕೆ ಶಿವಧನಸ್ಸು ಎಂದು ಹೆಸರು. ಅದನ್ನು ಬಾಗಿಸಿ ಹೆದೆ ಏರಿಸಲು ಯಾರಿಂದಲೂ ಆಗಿರಲಿಲ್ಲ. ಜನಕನು ಒಂದು ಯಜ್ಞವನ್ನು ಮಾಡಲು ನಿಶ್ಚಯಿಸಿದ್ದ. ವಿಶ್ವಾಮಿತ್ರರೂ ಹಲವರು ಋಷಿಗಳೂ ಅಲ್ಲಿಗೆ ಹೊರಟರು. ವಿಶ್ವಾಮಿತ್ರರು ರಾಮನಿಗೆ ಧನುಸ್ಸಿನ ವಿಷಯ ಹೇಳಿ, ಅವನನ್ನೂ ಲಕ್ಷ್ಮಣನನ್ನೂ ಕರೆದುಕೊಂಡು ಹೊರಟರು.

ದಾರಿಯುದ್ದಕ್ಕೂ ಸುಂದರ ವನಗಳು. ಋಷಿಗಳ ತಪಸ್ಸಿನ ತಾಣಗಳು. ವಿಶ್ವಾಮಿತ್ರರು ರಾಮಲಕ್ಷ್ಮಣರಿಗೆ ಅವುಗಳ ಕಥೆಗಳನ್ನು ಹೇಳುತ್ತ ಪ್ರಯಾಣವು ಸಂತೋಷದಿಂದ ಸಾಗುವಂತೆ ಅವರನ್ನು ಕರೆದುಕೊಂಡು ಹೋದರು.

ಮಾರ್ಗದಲ್ಲಿ ಗೌತಮರ ಆಶ್ರಮಕ್ಕೆ ಬಂದರು. ಸುಂದರವಾದ ಆ ಆಶ್ರಮ ಶೂನ್ಯವಾಗಿತ್ತು. ರಾಮನಿಗೆ ಆಶ್ಚರ್ಯವಾಯಿತು. “ಹೀಗೇಕೆ?” ಎಂದು ಪ್ರಶ್ನಿಸಿದ. ಗೌತಮರ ಹೆಂಡತಿ ಅಹಲ್ಯೆ. ಅವಳು ಪಾಪ ಮಾಡಿದಳೆಂದು ಗೌತಮರು, “ಅನೇಕ ಸಹಸ್ರ ವರ್ಷಗಳ ಕಾಲ ಆಹಾರವಿಲ್ಲದೆ ಧೂಳಿನಲ್ಲಿ ಬಿದ್ದಿರು” ಎಂದು ಶಾಪ ಕೊಟ್ಟಿದ್ದರು. ಗೌತಮರು ತಪಸ್ಸಿಗೆ ತೆರಳಿದ್ದರು. ಇದೆಲ್ಲವನ್ನೂ ವಿಶ್ವಾಮಿತ್ರರು ರಾಮನಿಗೆ ವಿವರಿಸಿದರು. “ಅಹಲ್ಯೆಯನ್ನು ಉದ್ಧರಿಸು” ಎಂದು ಹೇಳಿದರು. ಅವರೆಲ್ಲರೂ ಆಶ್ರಮವನ್ನು ಪ್ರವೇಶಿಸಿದರು. ಶ್ರೀರಾಮನಿಂದ ಅಹಲ್ಯೆಯ ಶಾಪವು ಕೊನೆಯಾಯಿತು. ಮತ್ತೆ ಅವಳು ತೇಜಸ್ವಿನಿಯಾಗಿ ಎಲ್ಲರಿಗೆ ಕಾಣಿಸಿಕೊಂಡಳು. ಬಹು ಸಂತೋಷದಿಂದ ಆಕೆಯು ಅವರನ್ನು ಸತ್ಕರಿಸಿದಳು. ಆಕೆಯ ಶಾಪ ವಿಮೋಚನೆಯಾದುದನ್ನು ತಿಳಿದ ಗೌತಮ ಋಷಿಯೂ ಬಂದು ಸೇರಿದರು. ಎಲ್ಲರಿಗೂ ಹರ್ಷವಾಯಿತು.

ವಿಶ್ವಾಮಿತ್ರರು ರಾಮನಿಗೆ ದೇವಾಸುರನನ್ನು ಸೋಲಿಸಬಲ್ಲ ದಿವ್ಯ ಅಸ್ತ್ರಗಳನ್ನು ಉಪದೇಶಿಸಿ ಕೊಟ್ಟರು.

ಸೀತಾರಾಮರಿಗೆ ಆಶೀರ್ವಾದ

 

ವಿಶ್ವಾಮಿತ್ರರೂ ರಾಜಕುಮಾರರೂ ಮಿಥಿಲೆಗೆ ಬಂದರು. ಜನಕ ಮಹಾರಾಜನು ಅವರನ್ನು ಬಹು ಸಂಭ್ರಮದಿಂದ ಬರಮಾಡಿಕೊಂಡನು. ವಿಶ್ವಾಮಿತ್ರರು ರಾಮಲಕ್ಷ್ಮಣರನ್ನು ಅವನಿಗೆ ಪರಿಚಯ ಮಾಡಿಕೊಟ್ಟರು. ಶಿವಧನಸ್ಸನ್ನು ಹೆದೆ ಏರಿಸಿದವರಿಗೆ ತನ್ನ ಮಗಳು ಸೀತಾದೇವಿಯನ್ನು ಕೊಟ್ಟು ಮದುವೆ ಮಾಡಲು ಜನಕನು ನಿಶ್ಚಯಿಸಿದದ. ಆದರೆ ಈ ಸಾಹಸವನ್ನು ಯಾರೂ ಮಾಡಲಾರದೆ ಹೋಗಿದ್ದರು. ವಿಶ್ವಾಮಿತ್ರರು, “ವತ್ಸ ರಾಮ, ಧನಸ್ಸನ್ನುನೋಡು” ಎಂದರು. ಅವನು ಅದನ್ನು ಇತ್ತಿ ಹೆದೆ ಕಟ್ಟಿ ಎಳೆದಾಗ, ಧನಸ್ಸು ಮುರಿದು ಬಿದ್ದಿತು, ಸಿಡಿಲಿನಂತೆ ಶಬ್ದವಾಯಿತು.

ಜನಕನು ಮಗಳಾದ ಸೀತಾದೇವಿಯನ್ನು ಶ್ರೀರಾಮನಿಗೆ ಕೊಟ್ಟು ಮದುವೆ ಮಾಡಿದ. ಅವನ ಮತ್ತೊಬ್ಬ ಮಗಳಾದ ಊರ್ಮಿಳೆಯು ಲಕ್ಷ್ಮಣನನ್ನೂ, ಜನಕನ ತಮ್ಮ ಕುಶಧ್ವಜನ ಪುತ್ರಿಯರು ಭರತ, ಶತ್ರುಜ್ಞರನ್ನೂ ಮದುವೆಯಾದರು. ವಿಶ್ವಾಮಿತ್ರರು ಅವರೆಲ್ಲರಿಗೂ ಆಶೀರ್ವಾದ ಮಾಡಿ ಹಿಮಪರ್ವತಕ್ಕೆ ಹೊರಟುಹೋದರು.

ಭವ್ಯ ವ್ಯಕ್ತಿತ್ವ

ಸಾಹಸಿಗಳಲ್ಲಿ ಸಾಹಸಿ, ಸಿಡಿಲಿನ ಮೂರ್ತಿ, ಶಕ್ತಿಯ  ಪ್ರತ್ಯಕ್ಷ ರೂಪ ವಿಶ್ವಾಮಿತ್ರರು. ದೇವತೆಗಳು, ರಾಕ್ಷಸರು, ಮನುಷ್ಯರಲ್ಲಿ ಯಾರಿಗೂ ಹೆದರದ ವೀರರು. ಮಹಾತಪಸ್ವಿಗಳು. ತಪ್ಪು ಮಾಡಿದಾಗ ಸೋಲನ್ನೊಪ್ಪಿ, ಒಳ್ಳೆಯದನ್ನೆ ಮಾಡುವರು. ಹರಿಶ್ಚಂದ್ರನನ್ನು ಕಡೆಗೆ ಹರಸಿ ರಾಜ್ಯವನ್ನು ಕೊಟ್ಟಂತೆ. ಛಲ, ಶೌರ್ಯ, ತಪಸ್ಸಿನ ಶಕ್ತಿಗಳೊಂದಿಗೆ ಕಾರುಣ್ಯ ಇವರಲ್ಲಿ ಮನೆ ಮಾಡಿತ್ತು. ಶುನಶ್ಯೇಫನನ್ನು ಉಳಿಸಿದ ಕರುಣಾಮೂರ್ತಿಗಳು. ಅಹಲ್ಯೆಯ ಶಾಪವಿಮೋಚನೆಗೆ ಕಾರಣರು. ‘ಬೇರೆ ಇಂದ್ರನನ್ನೆ ಸೃಷ್ಟಿಸುತ್ತೇನೆ’ ಎಂದು ಹೊರಟ – ಅದನ್ನು ಸಾಧಿಸಲೂ ಶಕ್ತರಾಗಿದ್ದ – ತಪೋಧನರು – ಶ್ರೀರಾಮಚಂದ್ರನ ಗುರುಗಳು. ಅವನು ಸೀತಾದೇವಿಯ ಕೈ ಹಿಡಿಯಲು ಮಿಥಿಲೆಗೆ ಕರೆದೊಯ್ದು ಜ್ಞಾನಿಗಳು. ಪ್ರಾಚೀನ ಭಾರತದಲ್ಲಿ ನಮ್ಮನ್ನು ಬೆರಗುಗೊಳಿಸುವ ಪರ್ವತಸದೃಶ ಪೂಜ್ಯರಲ್ಲಿ ವಿಶ್ವಾಮಿತ್ರರು ಒಬ್ಬರು.