ದಕ್ಷಿಣದೇಶದೊಳೊಂದು ಮಹಾಟವಿಯಿರ್ಪುದು ಅದಱಳೊಂದು ಮಾವಿರ್ಪುದು ಆ ಮಹಾವೃಕ್ಷದ ಕೆಲದಲ್ಲಿರ್ದ ಮಲ್ಲಿಕಾವಲ್ಲರಿಯೆ ತನಗರಮೆನೆಯಾಗೆ ಚತುರಕನೆಂಬುದೊಂದು ಕಪಿಂಜರನಿರ್ಕುಂ. ಅದರ್ಕಮೆನಗಂ ಮಿತ್ರತ್ವಂ ಸಲುತ್ತಿರಲೊಂದುದಿನ ಕಪಿಂಜರನಾಹಾರರ್ಥಂ ವಿಹರಿಸಲ್ಪೋಗಿ ತಡೆವುದುಂ ಅಲ್ಲಿಗೆ ಕಲಹಪ್ರಿಯನೆಂಬುದೊಂದು ಮೊಲಂ ಬಂದಾ ಪಕ್ಕಿಯ ಮನೆಯಂ ಪೊಕ್ಕಿರ್ಪುದುಂ ಕಿಱೆದಾನುಂ ಬೇಗಕ್ಕೆ ಕಪಿಂಜರಂ ಬಂದು ಕಂಡೆನ್ನ ಮನೆಯಂ ನೀನೇಕೆ ಪೊಕ್ಕೆ ಪೊರಮಡೆನೆಲೊಡಂ ಎನ್ನ ಕೆಳೆಯನ ಕಜ್ಜದ ಕೇಡನಾಂ ಕಂಡದರ್ಕೆ ಮಧ್ಯಸ್ಥನಾಗಿ ನೀವಿರುರ್ವರುಮಿಲ್ಲಿರ್ದು ಬವರಂಗೆಯಲ್ವೇಡ ತಕ್ಕರ ಸಮೀಪಕ್ಕೆ ಪೋಗಿ ವಿಚಾರಂಗೆಯ್ದು ಅವರ್ ಪೇೞ್ದಂತೆ ಕೇಳಿಮನೆ ಶಶಕ ಪಿಂಜರಂಗಳಂತೆಗೆಯ್ವೆವೆಂದು ಪೋಪುದುಮೀ ಚೋದ್ಯಮಂ ನೋೞ್ಪೆನೆಂದಾನುಮವ ಪಿಂತಪಿಂತನೆ ಪೋದೆ. ಅನ್ನೆಗಮವು ಕಿಱ*ದಂತರಮಂ ಪೋಗಿ ವಿಶಾಲಕರ್ಣನೆಂಬ ಶಾರ್ದೂಲಂ ಜಂಘಾಬಲಮಿಲ್ಲದೆ ತೋಱಲಲಾಱದೆ ಇನ್ನಾಹಾರಮನೆಂತು ಪಡೆವೆನೆಂದು ಚಿಂತಿಸಿ

ವಾಕ್ಯಂ|| ಅನಾಥಂ ಲಿಂಗಮುದ್ದಿಷ್ಟಂ ನ ಮೋಕ್ಷಾಯ ವೀಯತೇ  ||೧೫೮||

ಟೀ|| ಗುರುವಿಲ್ಲದಂಥ ಲಿಂಗಲಾಂಛನವು ಮೋಕ್ಷವ ಮಾಡದು.

ಎಂಬುದು ಶಾಸ್ತ್ರಾರ್ಥಮುಂಟು. ಅನುಮೀ ತೀರ್ಥದ ಸಮೀಪದೊಳ್ ತಾಪಸರೂಪಧಾರಿಯಾಗಿರ್ದು ಸಾರೆ ಬಂದುದೇನಾನುಂ ಪ್ರಾಣಿಗಳಂ ತಿಂದು ಕಾಲಮಂ ಕಳೆವೆನೆಂದು ತಪೋರೂಪಮಂ ಕೈಕೊಂಡಿರ್ದ ಶಾರ್ದೂಲಮಂ ಕಂಡು ಕಲಹಪ್ರಿಯನಿಂತೆಂದುದು: ನಾವೀ ದಿವ್ಯ ತಾಪಸನ ಮುಂದೆ ವಿಚಾರಂಗೆಯ್ವಂ ಬಾಯೆಂಬುದುಂ ಕಪಿಂಜರನದಱೊಡನಿಂತೆದಂ: ‘ಎನಿತು ಪುಲಿ ನಿಯಮಸ್ಥನಾದೊಡಂ ಶ್ರಾವಕನಲ್ಲಂ‘ ಎಂಬ ನಾಣ್ಣುಡಿಯುಂಟು. ಅದಱೆಂ ನಾವದಱ ಸಮೀಪಕ್ಕೆ ಪೋದೊಡೆ ಬಾಣಸಿನ ಮನೆಯನಱಸಿ ಮೊಲಂ ಪೊಕ್ಕಂತಕ್ಕುಮೆಂದೆರಡುಂ ನುಡಿವುದುಮದನಾ ವ್ಯಾಘ್ರತಾಪಸಂ ಕೆಳ್ದಿವೆಂತುಂ ನಂಬುವಂತೆ ಮಾೞ್ಪನೆಂದೊಂದೆ ಕಾಲೊಳ್ನಿಂದಾದಿತ್ಯಂ ಎತ್ತಲ್ ಪೊದನತ್ತಲೆ ಮುಖಮಾಗಿರ್ಪುದಂ ಕಂಡು ಚತುರಕನಿಂತೆದಂ: ಈ ಬಕವೇಷಿ ನಮ್ಮಂ ಕಂಡು ವಿಕೃತವೇಷದಿಂ ನಿಂದಪನಿವನಂ ನಂಬಲ್ಬಾರದು.

ಶ್ಲೋ|| ಬಾಲ ಚುಂಬಿತ ನಾರೀ ಚ ತೃಣಚೋರಶ್ಚ ಬ್ರಾಹ್ಮಣಃ  ||೧೫೯||

ಎಂಬ ಕಥೆಯಂತಕ್ಕುಮೆನೆ ಶಶಕನದೆಂತೆನೆ ಕಪಿಂಜರಂ ಪೇೞ್ಗುಂ:

ವ|| ದಕ್ಷಿಣ ದೇಶದಲ್ಲಿ ಒಂದು ಮಹಾ ಅರಣ್ಯವಿತ್ತು. ಅದರಲ್ಲಿ ಒಂದು ಮಾವಿನ ಮರವಿತ್ತು. ಅ ಮಹಾವೃಕ್ಷದ ಬಳಿಯಲ್ಲಿದ್ದ ಮಲ್ಲಿಗೆಯ ಬಳ್ಳಿಯೇ ತನಗೆ ಅರಮನೆಯಾಗಿರಲು ಚತುರಕನೆಂಬ ಒಂದು ಕಪಿಂಜರನಿತ್ತು, ಅದಕ್ಕೂ ನನಗೂ ಮಿತ್ರತ್ವವುಂಟಾಯಿತು. ಒಂದು ದಿನ ಕಪಿಂಜರನು ಆಹಾರಕ್ಕಾಗಿ ಅಲೆದಾಡಿ ಬರುವುದು ತಡವಾಗಲು ಅಲ್ಲಿಗೆ ಕಲಹಪ್ರಿಯ ಎಂಬ ಒಂದು ಮೊಲವು ಬಂದು ಆ ಹಕ್ಕಿಯ ಮನೆಯನ್ನು ಹೊಕ್ಕಿರಲು ಸ್ವಲ್ಪ ಸಮಯದಲ್ಲೆ ಕಪಿಂಜರನು ಬಂದು ಕಂಡು ತನ್ನ ಮನೆಯನ್ನು ಏಕೆ  ಹೋಕ್ಕೆ,  ಹೊರಕ್ಕೆ ಹೋಗು ಎಂದಿತು. ನನ್ನ ಗೆಳೆಯನ ಕಾರ್ಯದ ಕೇಡನ್ನು ನಾನು ಕಂಡು ಅದಕ್ಕೆ ಮದ್ಯಸ್ಥನಾಗಿ ನೀವಿಬ್ಬರೂ ಇಲ್ಲಿ ಜಗಳವಾಡುವುದು ತರವಲ್ಲ. ಯೋಗ್ಯರಾದವರ ಬಳಿಗೆ ಹೊಗಿ ವಿಚಾರಿಸಿ ಅವರು ಹೇಳಿದಂತೆ ಕೆಳಿ ಎಂದು ಹೇಳಿದೆ. ಅದಕ್ಕೆ ಮೊಲವೂ ಕಪಿಂಜರನೂ ಹಾಗೆಯೇ ಅಗಲಿ ಎಂದು ಹೊಗಲು ಈ ಚೋದ್ಯವನ್ನು ನೋಡುವೆನೆಂದೂ ನಾನೂ ಅವರ ಹಿಂದೆಯೇ ಹೋದೆನು. ಅಷ್ಟರಲ್ಲಿ ಅವು ಸ್ವಲ್ಪ ದೂರ ಹೋದುವು. ವಿಶಾಲಕರ್ಣನೆಂಬ ಶಾರ್ದೂಲವು ಜಂಘಾಬಲವಿಲ್ಲದೆ ಅಲೆದಾಡಲಾರದೆ ಇನ್ನು ಆಹಾರವನ್ನು ಹೇಗೆ ಪಡೆಯಲಿ ಎಂದು ಚಿಂತಿಸುತ್ತಿತ್ತು ವಾ|| ಗುರುವಿಲ್ಲದ ಲಿಂಗಲಾಂಛನವು ಮೋಕ್ಷವನ್ನುಂಟುಮಾಡಲಾರದು. ವ|| ನಾನೂ ಈ ತೀರ್ಥದ ಸಮೀಪದಲ್ಲಿ ತಾಪಸರೂಪಧಾರಿಯಾಗಿದ್ದು ಹತ್ತಿರ ಬಂದ ಯಾವುದಾದರೂ ಪ್ರಾಣಿಗಳನ್ನು ತಿಂದು ಕಾಲವನ್ನು ಕಳೆಯುವೆನೆಂದು ತಪೋರೂಪವನ್ನು ಕೈಕೊಂಡಿದ್ದ ಶಾರ್ದೂಲವನ್ನು ಕಂಡು ಕಲಹಪ್ರಿಯನು ಹೀಗೆಂದಿತು: ನಾವು ಈ  ದಿವ್ಯತಾಪಸನ ಮುಂದೆ ವಿಚಾರಿಸೋಣ, ಬಾ ಎನ್ನಲು ಕಪಿಂಜರನು ಅದರೊಡನೆ ಹೀಗೆಂದನು: “ಹುಲಿ ಎಷ್ಟು ನಿಯಮಸ್ಥನಾದರೂ ಶ್ರಾವಕನಾಗಲಾರದು ಎಂಬ ನಾಣ್ಣುಡಿಯುಂಟು ಅದರಿಂದ ನಾವು ಇದರ ಸಮೀಪಕ್ಕೆ ಹೋದರೆ ಅಡುಗೆಯ  ಮನೆಯನ್ನು ಅರಸಿಕೊಂಡು ಮೊಲವು ಹೊಕ್ಕಂತಾಗುವುದು. ಅದನ್ನು ಆ ವ್ಯಾಘ್ರತಾಪಸನು ಕೇಳಿ ಇವು ಹೇಗಾದರೂ ನಂಬುವಂತೆ ಮಾಡುವೆನೆಂದು ಒಂದೇ ಕಾಲಲ್ಲಿ ನಿಂತು ಅದಿತ್ಯನು ಎತ್ತ ಕಡೆ ಹೊಗುವನೋ ಅತ್ತ ಕಡೆ ಮುಖ ಮಾಡಿಕೂಂಡಿರಲು ಕಂಡು ಚತುರಕನು ಹೀಗೆಂದನು: ಈ ಬಕವೇಷಿ ನಮ್ಮನ್ನು ಕಂಡು ವಿಕೃತ ವೇಷದಿಂದ ನಿಂದಿರುವನು. ಇವನನ್ನು ನಂಬಬಾರದು. ಅಲ್ಲದೆ, ಶ್ಲೋ || ‘ಬಾಲ ಚುಂಬಿತ ನಾರೀಚ ತೃಣಚೋರಶ್ಚ ಬ್ರಾಹ್ಮಣ:‘ ಎಂಬ ಕಥೆಯಾಂತಾದೀತು ಎನ್ನಲು ಮೊಲ ಅದೇನು ಎನ್ನಲು ಕಪಿಂಜರವು ಹೇಳಿತು: