ಮಾನವನ ಉದಯಕ್ಕೆ ಜೀವಿಯ ಉದಯ, ಭೂಮಿಯ ಉದಯ, ನಕ್ಷತ್ರಗಳ ಉದಯ, ವಿಶ್ವದ ಉದಯ ಈ ಉದಯಗಳಿಲ್ಲದೆ ಬೇರೆ ಆಧಾರವಿಲ್ಲ. ಸುಮಾರು 20ಬಿಲಿಯ ವರ್ಷಗಳಿಗೆ ಹಿಂದೆ ಒಂದು ಮಹಾಸ್ಫೋಟವಾಯಿತೆಂದೂ, ಆಗ ಅದ್ಭುತ ಪ್ರಮಾಣದ ಶಕ್ತಿಯ ಬಿಡುಗಡೆಯಾಯಿತೆಂದೂ ಇಂದಿನ ಖಗೋಲ ವಿಜ್ಞಾನ ಸಿದ್ಧಾಂತದಲ್ಲಿ ಹೇಳಲ್ಪಟ್ಟಿದೆ. ಇದು ವಿಶ್ವದ ಹುಟ್ಟು;ಈ ಸಮಯದಲ್ಲಿ ವಿಶ್ವವು ಅತಿ ಗೌಣ ಗಾತ್ರದಲ್ಲಿದ್ದಿತು, ಅತ್ಯಧಿಕ ತಾಪ ಮತ್ತು ಸಾಂದ್ರತೆಗಳಿಂದ ಕೂಡಿದ್ದಿತು. ಇದೇ ಅವಧಿಯಲ್ಲಿ ವಿಶ್ವದ ತ್ರಿಜ್ಯವೂ ಬಹಳ ಬಹಳ ಕಡಿಮೆಯಾಗಿದ್ದಿತು. ಆದ್ದರಿಂದ ಅದರ ವಕ್ರತೆ (ಕರ್ವೇಚರ್)ಯೂ ಅಧಿಕವಾಗಿದ್ದಿತು ಎನ್ನಲಾಗಿದೆ. ಒಟ್ಟಿನಲ್ಲಿ ಈ ಸಿದ್ಧಾಂತಗಳಿಂದ ವಿಶ್ವವು ಹುಟ್ಟಿತು ಏಕೆ ಅಥವಾ ವಿಶ್ವವು ಹೀಗೆ ಹುಟ್ಟುವುದಕ್ಕೆ ಮೊದಲು ಏನಿದ್ದಿತು ಎಂಬುದರ ಬಗೆಗೆ ವಿವರಣೆಗಳಿಲ್ಲ. ಆದರೆ ಹುಟ್ಟಿದ ಬಳಿಕ ಬೆಳೆಯಿತು ಹೇಗೆ ಎಂಬುದಕ್ಕೆ ಭೌತಿಕ ನಿಯಮಗಳ ಮೂಲಕ ಸಾಕಷ್ಟು ವಿಷಯಗಳನ್ನು ಕಲೆ ಹಾಕಲಾಗಿದೆ.

ವಿಶ್ವವು ಮಹಾಸ್ಫೋಟದ ನಂತರ ವಿಸ್ತರಿಸಿಕೊಳ್ಳುತ್ತ, ತಂಪುಗೊಳ್ಳುತ್ತ ಬಂದಿದೆ. ಅದು ಇನ್ನೂ ಈಗಲೂ ವಿಸ್ತರಿಸುತ್ತ ಇದೆ. ವಿಶ್ವದ ತಂಪು 3000 K ತಲುಪಿದ ಕಾಲವಿದ್ದಿತು. ಈ ಪರಿಸರದಲ್ಲಿ ಇಲೆಕ್ಟ್ರಾನ್‌ಗಳು, ಪ್ರೋಸಂಯೋಗಗೊಂಡು ಹೈಡ್ರೊಜನ್ ಪರಮಾಣುಗಳಾದವು. ಆಮೇಲೆ ಎರಡು ಇಲೆಕ್ಟ್ರಾನ್‌ಗಳು ಭ್ರಮಿಸುತ್ತಿರುವ ಹೀಲಿಯಂ ಪರಮಾಣುಗಳಾದವು. ಇದಕ್ಕಿಂತ ಭಾರವಾದ ಪರಮಾಣುಗಳು ಆಮೇಲೆ ನಕ್ಷತ್ರಗಳಲ್ಲಿ ಉಂಟಾದುವು. ಅದಕ್ಕೆ ಮೊದಲು ಹಗುರ ಪರಮಾಣುಗಳಿಂದ ಕೂಡಿದ ಅನಿಲದಿಂದ ತುಂಬಿದ ವಿಶ್ವವು ಗಾಳಿತುಂಬಿದ ‘ಬಲೂನಿ’ನಂತೆ ಇದ್ದಿತಂತೆ. ಆದರೆ ಸಾಧಾರಣ ಬಲೂನಿನಂತೆ ಇದರಲ್ಲಿನ ಅನಿಲವು ಒಂದೇ ಸಮನಾಗಿ ಹರಡಿಕೊಂಡಿರಲಿಲ್ಲ. ಈ ವಿಶ್ವ ಬಲೂನಿನಲ್ಲಿ ಗುರುತ್ವಾಕರ್ಣಣೆಯಿಂದಾಗಿ ಸಂಕೋಚನ (contraction)ಕ್ರಿಯೆಯೂ ಬಿಸಿ ಅನಿಲದ ಸಹಜ ವಿಸ್ತರಣಾ ಗುಣದಿಂದ ವ್ಯಾಕೋಚನೆಯೂ (expansion) ನಡೆಯುತ್ತಲೇ ಇದ್ದವು. ಈ ವ್ಯತ್ಯಾಸಗಳಿಂದ ಅಲ್ಲಲ್ಲಿ ಸಾಂದ್ರತೆಯಲ್ಲಿ ಹೆಚ್ಚು ಕಡಿಮೆಯಾಗುವುದು (ಫ್ಲಕ್ಚುಯೇಷನ್)ನಡೆದೇ ಇದ್ದಿತು. ಕೆಲವಡೆ ಸರಾಸರಿ ಮಟ್ಟಕ್ಕಿಂತ ಹೈಡ್ರೊಜನ್ ಪರಮಾಣುಗಳು ಸಾಂದ್ರವಾಗಿ ನಿಕಟವಾಗಿದ್ದುವು, ಇನ್ನು ಕೆಲವೆಡೆ ಸರಾಸರಿಗಿಂತ ಕಡಿಮೆ ನಿಕಟವಾಗಿದ್ದವು.  ಆದರೆ ಸಮಗ್ರತೆಯ ದೃಷ್ಟಿಯಿಂದ ವಿಶ್ವ ಅನಿಲದ ಸಾಂದ್ರತೆಯು ಸಮತೋಲವಾಗಿದ್ದಿತು, ಎಂದರೆ ಅನಿಲ ವ್ಯಾಕೋಚನಗೊಳ್ಳುವ ಹಾಗೂ ಸಂಕೋಚನಗೊಳ್ಳುವ ಪ್ರವಣತೆಗಳು ಪರಸ್ಪರ ಸಮವಾಗಿದ್ದುವು ಎನ್ನಬಹುದು. ಜೊತೆಗೆ ಸಾಂದ್ರತೆಯಿರುವೆಡೆಯಲ್ಲಿ ಪರಮಾಣುಗಳ ನಡುವಿನ ಗುರುತ್ವಾಕರ್ಷಣೆಯು ಅನಿಲವಿಸ್ತರಣೆಗೆ ತಡೆಹಾಕುತ್ತಿದ್ದಿತು. ಸಾಂದ್ರತೆ ಕಡಿಮೆಯಿರುವೆಡೆ ವಿಸ್ತರಣೆಯು ಗುರುತ್ವಾಕರ್ಷಣೆಯನ್ನು ಮೀರಿ ಹರಡುವ ಕ್ರಿಯೆ ನಡೆಯುತ್ತಿದ್ದಿತು. ಈ ಎಳೆಯ ವಿಶ್ವದಲ್ಲಿ ವಸ್ತು (matter)ಪ್ರತಿವಸ್ತುಗಳಿದ್ದುವು. ವಸ್ತುವಿನ ಸಾಂದ್ರತೆ ಪ್ರತಿವಸ್ತುವಿಗಿಂತ ಹೆಚ್ಚಿಗೆ ಇದ್ದಿತು. ಹೈಡ್ರೊಜನ್, ಹೀಲಿಯಂಗಳು ಒಂದೇ ಸಮನಾಗಿ ಹರಡಿಕೊಂಡಿರಲಿಲ್ಲ.

ಇರಲಿ; ಗೆಲಕ್ಸಿಗಳು ವಸ್ತುವಿನಿಂದ ಆಗಿವೆಯಷ್ಟೆ. ಎಳೆಯ ವಿಶ್ವದಲ್ಲಿ ಇವು ಉಂಟಾಗಲು ಕಾರಣ ಹೆಚ್ಚು ಪ್ರಮಾಣದಲ್ಲಿ ವಸ್ತುವಿದ್ದ ಜಾಗಗಳು. ಇವು ವಸ್ತುವಿನ ಉಳಿಯುವಿಕೆಗೆ ನೆರವಾದವು. ವಿಶ್ವದಲ್ಲಿ ಅನಿಲವು ಅಸಮವಾಗಿ ಹರಡಿಕೊಂಡಿದ್ದು, ಹೆಚ್ಚು ಸಾಂದ್ರವಿರುವ ವಸ್ತುಪ್ರದೇಶಗಳು ಉಂಟಾದ ಪರಿಸ್ಥಿತಿಯನ್ನು ‘ಕ್ರಾಂತಿ’ಘಟ್ಟವೆನ್ನಬಹುದು. ಈ ಎರಡರ ಯುಕ್ತ ಪರಿಸ್ಥಿತಿಯಿಲ್ಲದಿದ್ದರೆ ಗೆಲಕ್ಸಿಗಳಾಗಲೀ, ನಕ್ಷತ್ರಗಳಾಗಲೀ, ಭೂಮಿಯನ್ನೂ ಒಳಗೊಂಡಂತೆ ಗ್ರಹಗಳಾಗಲೀ ಉಂಟಾಗುತ್ತಿರಲಿಲ್ಲ. ಈ ಪರಿಸ್ಥಿತಿಗಳು ಹೀಗೆ ‘ವಿಧಿವತ್ತಾಗಿ’ನಡೆದುದು ಹೇಗೆ ಎಂಬುದು ನಿಗೂಢವಾಗಿ ಉಳಿದಿದೆ.

ವಿಶ್ವದ ಈ ನಿಗೂಢತೆ ಅತ್ಯಂತ ರೋಚಕವೂ ಹೌದು. ಐನ್‌ಸ್ಟೈನ್ ಹೇಳಿದ್ದಾರಂತೆ‘ನಿಗೂಢತೆ ಬಹುಶಃ ನಮ್ಮ ಅತ್ಯಂತ ಸುಂದರ ಅನುಭವ’ ಎಂದು. ರಾತ್ರಿಯ ಆಗಸದಲ್ಲಿ ಮಿನುಗುವ ನಕ್ಷತ್ರ ಇಂಥ ಒಂದು ಅನುಭವ. ಮಿನುಗುವ ನಕ್ಷತ್ರಗಳು ವಜ್ರಗಳಂತೆ ಹೊಳೆಯುವುದನ್ನು ನೋಡುವವವರಿಗಂತೂ ಇವುಗಳ ಹುಟ್ಟು, ‘ಬದುಕು’ ಎಂಥದು ಎಂದಾಗ ವಿಶ್ವದ ಉಗಮ, ನಕ್ಷತ್ರಗಳು ರೂಪುಗೊಂಡುದು ಇವೆಲ್ಲವನ್ನೂ ತಿಳಿಯಬೇಕಾಗುತ್ತದೆ.

ವಿಶ್ವದಲ್ಲಿನ ಬಿಸಿ ಅನಿಲದ ವ್ಯಾಕೋಚನ ಸಂಕೋಚನಗಳಿಂದ   ಸಾಂದ್ರ, ವಿರಳ ಪ್ರದೇಶಗಳು ಉಂಟಾದುವಲ್ಲವೇ?ಗುರುತ್ವಾಕರ್ಷಣೆಯು ಸಾಂದ್ರ ಪ್ರದೇಶಗಳನ್ನು ಇನ್ನೂ ಸಾಂದ್ರಗೊಳಿಸಿದಾಗ ಅದಕ್ಕೆ ಮುದ್ದೆಯ ರೂಪಬಂದಿತು. ಇಂತಹ ಮುದ್ದೆ ಅಥವಾ ಗುಚ್ಛಗಳಿಂದ ಗೆಲಕ್ಸಿ (ತಾರಾಸಮೂಹ)ಗಳು ಹುಟ್ಟಿದವು. ಸೂರ್ಯ ಇರುವ ಆಕಾಶಗಂಗೆ (milkyway) ಇಂಥ ಒಂದು ಗೆಲಕ್ಸಿ ಎಂಬುದು ವಿಜ್ಞಾನ ವಿದ್ಯಾರ್ಥಿಗಳಿಗೆಲ್ಲ ಗೊತ್ತಿದೆ. ಗೆಲಕ್ಸಿಗಳ ಒಳಗೂ ಪುನಹ ತಿಳಿಸಿದಂತೆ ಸಾಂದ್ರ ಹಾಗೂ ವಿರಲ ಪ್ರದೇಶಗಳು ರೂಪುಗೊಂಡವು.  ಇದರಲ್ಲಿ ಸಾಂದ್ರೀಕೃತವಾದ ಜಾಗಗಳಲ್ಲಿ, ತಾಪವು ಹೆಚ್ಚುತ್ತ ಹೋದಂತೆ ಸೂರ್ಯನಲ್ಲಿ ನಡೆಯುತ್ತಿರುವ ಪ್ಲಾಸ್ಮಕ್ರಿಯೆಯಂತಹ ಕ್ರಿಯೆ ನಡೆಯುತ್ತಿರುತ್ತದೆ. ಇದು ಎಲ್ಲ ನಕ್ಷತ್ರಗಳಲ್ಲಿ ನಡೆಯುವ ಕ್ರಿಯೆ. ಇದರಿಂದ ಶಕ್ತಿಯ ವಿಕಿರಣ ನಡೆಯುತ್ತದೆ. ಈ ವಿಕಿರಣವೇನಾದರೂ ನಿಂತರೆ ಆ ನಕ್ಷತ್ರವು ಅಂತಿಮ ಘಟ್ಟಕ್ಕೆ ಬಂದಿದೆಯೆಂದರ್ಥ.

ಮುಂದಿನ ವಿಷಯ ಸೂರ್ಯನಂತಹ ನಕ್ಷತ್ರದಿಂದ ಉಂಟಾದ ಸೌರವ್ಯೆಹ, ಗ್ರಹಗಳು, ಉಪಗ್ರಹಗಳು, ಕ್ಷುದ್ರ ಗ್ರಹಗಳು, ಇತ್ಯಾದಿ. ಇದರ ಬಗೆಗೆ ಹಲವು ವಾದಗಳು, ಪ್ರತಿಪಾದನೆಗಳಿವೆ.  ವ್ರೋಅತಿವೇಗದಿಂದ ಧಾವಿಸುತ್ತಿದ್ದ ನಕ್ಷತ್ರವೊಂದು ಸೂರ್ಯನ ಅತಿ ಹತ್ತಿರಕ್ಕೆ ಬಂದಾಗ ಎರಡೂ ಕಾಯಗಳ ಗುರುತ್ವಾಕರ್ಷಣೆಯ ಬಲದಿಂದ ಎರಡರಿಂದಲೂ ದೊಡ್ಡ ಕಾದ ಅನಿಲದ ಅಲೆಗಳು ಎದ್ದವು. ಹೀಗೆ ಸೂರ್ಯನಿಂದ ಹೊರಟ ದೊಡ್ಡ ಅನಿಲ ಅಲೆಗಳು ಹೆಚ್ಚಿದಂತೆ ಅವು ದೂರಕ್ಕೆ ಎಸೆಯಲ್ಪಟ್ಟು, ಅಲ್ಲಿಯೇ ಭ್ರಮಿಸಲು ಆರಂಭಿಸಿದವು. ಕೆಲವು ಹೊರ ನಕ್ಷತ್ರದ ಹಿಂದೆ ಹೋದವು. ಇನ್ನೂ ಕೆಲವು ಇಲ್ಲಿಯೇ ಉಳಿದವು. ಸೌರವ್ಯೆಹದಲ್ಲಿ ಉಳಿದ ಈ ಅನಿಲ ರಾಶಿಗಳು ನಿಯಮಿತ ಕಕ್ಷೆಯಲ್ಲಿ ಚಲಿಸಲಾರಂಭಿಸಿ, ತಂಪುಗೊಂಡು ದ್ರವ, ಅಲ್ಲಿಂದ ಚಿಕ್ಕಚಿಕ್ಕ ಘನರಾಶಿಗಳಾದವು. ಈ ಚಿಕ್ಕ ಘನರಾಶಿಗಳು ಹತ್ತಿರ ಬಂದು ಗ್ರಹ ಮುಂತಾದ ಕಾಯಗಳಾದುವು. ಇನ್ನೊಂದು ವಾದದಲ್ಲಿ, ಹೊರ ನಕ್ಷತ್ರವು ಸೂರ್ಯನಿಂದ ಒಂದೇ ಒಂದು ಉದ್ದವಾದ ಬಿಸಿ ಅನಿಲರಾಶಿಯನ್ನು ಸೆಳೆಯಿತು.  ಇದರಿಂದ ಮುಂದೆ ಗ್ರಹ ಮುಂತಾದ ಕಾಯಗಳಾದುವು. ಆದರೆ ಹೀಗೆ ಹೊರ ನಕ್ಷತ್ರದಂತಹ ಬೇರೆ ಕಾರ್ಯಗಳು ಘಟ್ಟಿಸುವಷ್ಟು ಹತ್ತಿರಕ್ಕೆ ಬರುವ ವಾದಕ್ಕೆ ಈಗ ಅಷ್ಟು ಮನ್ನಣೆಯಿಲ್ಲ.

ಸೂರ್ಯನಕ್ಷತ್ರದ ಸುತ್ತ ಒಂದು ತೆರೆಯಂತಹ ಅನಿಲ ಪಟ್ಟಿಯು ಸೂರ್ಯ ಸಮಭಾಜಕ ವೃತ್ತದ ಸುತ್ತ ಸುತ್ತುತ್ತಿದ್ದು, ಆಮೇಲೆ ಅವು ತಂಪು ಘನಕಾಯಗಳಾದುವು. ಇದು ಇನ್ನೊಂದು ವಾದ. ವಿಶ್ವದ ದೂಳು ಮತ್ತು ಕಾದ ಅನಿಲಗಳ ಮೋಡವು ಒಂದು ಬಿಲ್ಲೆಯಂತಾಗಿ, ಈ ಮೋಡದೊಳಗಿನ ಅನಿಯತ ರೂಪದಿಂದ ಮೋಡವು ಭ್ರಮಣಕ್ಕೆ ಒಳಗಾಯಿತು.  ದೂಳು, ಅನಿಲಗಳು, ಸಾಂದ್ರಗೊಂಡು, ತಾಪ ಹೆಚ್ಚಿ ಮಧ್ಯದಲ್ಲಿ ಸೂರ್ಯ ರೂಪುಗೊಂಡಿತು. ಘನ ಕಣಗಳು ಡಿಕ್ಕಿ ಹೊಡೆಯುತ್ತ, ಒಂದಕ್ಕೊಂದು ಸೇರಿಕೊಂಡು ಗ್ರಹಗಳಾದುವು;ಇದು ಇನ್ನೂ ಒಂದು ವಾದ. ಒಟ್ಟಿನಲ್ಲಿ ಭೂಮಿಯ ಉಗಮದ ಬಗೆಗೆ ಒಂದು ವಾದವನ್ನೇ ಸರಿ ಎಂದು ಹೇಳುವ ಘಟ್ಟ ಇನ್ನೂ ಬಂದಿಲ್ಲ.

ಆದಿಮ ಭೂಮಿಗೂ ಸೂರ್ಯನಷ್ಟಲ್ಲದಿದ್ದರೂ ಉಗಿ ತುಂಬಿದ ವಾತಾವರಣವಿರುವಷ್ಟು ಬಿಸಿಯಿದ್ದಿತು. ಸುತ್ತಲ ವಾತಾವರಣದಿಂದ ಸಹಸ್ರಾರು ವರ್ಷಗಳ ಕಾಲ ಮಳೆ ಬಿದ್ದು ಬಿದ್ದು, ಭೂಮಿ ತಂಪಾಗಲು ದೀರ್ಘಾವಧಿ ಬೇಕಾಯಿತು. ಆಮೇಲೆ, ಎಂದರೆ ಸುಮಾರು 400ಕೋಟಿ ವರ್ಷಗಳು ಅಥವಾ ಅದಕ್ಕೂ ಮೊದಲ ಭೂಮಿಯಲ್ಲಿ ಜೀವವು ಉದಯಿಸಿತು. ಜೀವ ವಿಕಾಸವಾದವು ಬಂದಮೇಲೆ ಅಣುಜೀವಿ, ಕೋಶಜೀವಿ, ಜಲಜೀವಿ, ಆ ಮೇಲೆ ನೆಲಜೀವಿ, ಆಮೇಲೆ ಕಶೇರುಕ, ಅಕಶೇರುಕ, ಮುಂತಾದ ಜೀವವಿಕಾಸದ ಸ್ಥೂಲ ವಿವರಣೆ ತಿಳಿದಿದೆ.

ಜೀವಿಯು ಭೂಮಿಯ ಮೇಲೆ ರೂಪುಗೊಂಡುದೇ ಅಥವಾ ಬೇರೆ ಯಾವುದೋ ಕಾಯದಿಂದ ಕ್ಷುದ್ರ ಗ್ರಹಗಳ ಮೂಲಕ ಬಂದಿತೇ ಎಂಬ ವಾದವೂ ಇದೆ.

ಏನೇ ಇರಲಿ, ವಿಶ್ವದ ಹುಟ್ಟು, ಗೆಲಕ್ಸಿಗಳು, ನಕ್ಷತ್ರಗಳ ಹುಟ್ಟು ಅಲ್ಲಿಂದ ಗ್ರಹಗಳು ಮತ್ತು ನಮ್ಮ ಭೂಮಿಯಂತಹ ಜೀವಾಧಾರ ಗ್ರಹದ ಹುಟ್ಟು, ಆಮೇಲೆ ಅಣು ಜೀವಿಯಿಂದ ಹಿಡಿದು ಅಗಾಧ  ಪ್ರಮಾಣದ ತಿಮಿಂಗಲ, ಆನೆಗಳಂತಹ ಜೀವಿಗಳು ಮತ್ತು ಬಹುಮುಖ ಪ್ರತಿಭೆಯ ಮಾನವ ಈ ಎಲ್ಲಕ್ಕೂ ಒಂದು ಆರಂಭವಿದೆ ಎಂಬಂತೆ ವಿಜ್ಞಾನದ ಸಿದ್ಧಾಂತಗಳು ರೂಪುಗೊಂಡಿವೆ. ಹೆಚ್ಚಿನ ಮಾಹಿತಿ, ನಿಖರ ವಿಷಯಗಳು ತಿಳಿದಾಗ, ಇವುಗಳಲ್ಲಿ ಯಾವ ಯಾವ ಸಿದ್ಧಾಂತಗಳು ಎಷ್ಟು ಬದಲಾಗುತ್ತವೆ ಎಂಬುದನ್ನು ಊಹಿಸಲಾಗದು.  ಹೀಗೆಯೇ, ಡಾರ್ವಿನ್ನನ ವಿಕಾಸವಾದ ಮತ್ತು ಬೇರೆ ಬೇರೆ ಹಂತದ ಜೀವಿಗಳು ಕವಲೊಡೆದಿರುವ ಬಗೆಗೂ ಕೆಲವು ನೂತನ ಚಿಂತನೆಗಳು ಅಲ್ಲಿ ಇಲ್ಲಿ ಬರುತ್ತಿವೆ. ಆದರೆ ಡಾರ್ವಿನ್ ಸಿದ್ಧಾಂತವು ಇನ್ನೂ ಗಟ್ಟಿಯಾಗಿದೆ. ‘ಪ್ರಕೃತಿಯ ಆಯ್ಕೆ’, ‘ಯೋಗ್ಯತಮ ಉಳಿಯುವಿಕೆ’ಇವು ಪ್ರಕೃತಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಕ್ರಿಯೆಗಳು.

ವಿಶ್ವ ಉಗಮದಿಂದ ಆರಂಭವಾಗಿ ಇಂದು ಯಾವ ಉಗಮದ ಹಂತದಲ್ಲಿದ್ದೇವೆ ಎಂದೇನಾದರೂ ಎನಿಸಬಹುದೇ? ಅದು ವಿಶ್ವ ಚರಿತ್ರೆಯಂತಹ ದೀರ್ಘಕಾಲಾವಧಿಯಲ್ಲಿ ಮಾತ್ರ ತಿಳಿಯಲು ಸಾಧ್ಯ.