ಹಿನ್ನೋಟ

ಬಟಾಣಿ ಜಡ್ಡಿನ ಡಾಕಪ್ಪ, ರಿಪ್ಪನ್‌ಪೇಟೆಯ ವೆಂಕೋಜಿರಾವ್, ಅರಸಾಳಿನ ಸುರೇಶ್, ಕೊಳವಂಕದ ಸುಧಾಕರ ಇವರೆಲ್ಲಾ ರೊಕ್ಕ ತರಲು ಶಿಕಾರಿಪುರಕ್ಕೆ ಹೊರಟಿದ್ದರು.  ಲೆಕ್ಕಾಚಾರದಲ್ಲಿ ಒಬ್ಬೊಬ್ಬರಿಗೂ ೧೦ ಸಾವಿರ ಬರಬೇಕಿತ್ತು.  ಆದರೂ ಇವತ್ತು ಎಷ್ಟು ದುಡ್ಡು ಕೊಡಬಹುದು?  ನಾವು ಮಾಡಿದ ಲೆಕ್ಕಾಚಾರ ಖರ್ಚು-ವೆಚ್ಚ ಎಲ್ಲವೂ ಈ ಕಂತಿನಲ್ಲಿ ತೀರಬಹುದೇ?  ಕೈಯಲ್ಲಿ ಎಷ್ಟು ಉಳಿಯುತ್ತದೆ.  ಹೀಗೆ ಅವರವರೊಳಗೆ ಚರ್ಚೆ ನಡೆಯುತ್ತಿತ್ತು.  ಏನೆಲ್ಲಾ ಚರ್ಚೆಗಳು, ವಿಚಾರಗಳು ಆಗುವ ವೇಳೆಗೆ ಶಿಕಾರಿಪುರ ಬಂದೇಬಿಟ್ಟಿತು.  ಇಂಡೋ ಅಮೆರಿಕನ್ ಸೀಡ್ಸ್‌ನವರ ಗ್ರೀನ್ ಆಗ್ರೋಪ್ಯಾಕ್ ಅಂಗಡಿಯನ್ನು ಹುಡುಕುತ್ತಾ ಹೊರಟರು.

ಎರಡು ತಿಂಗಳ ಹಿಂದೆ ಕುಮುದ್ವತಿ ತೀರದ ಈ ಎಲ್ಲಾ ರೈತರ ಬಳಿಗೆ ಗರ್ಕಿನ್ ಬೀಜ ಹೊತ್ತ ಏಜೆಂಟರು ಬಂದರು.  ಬೀಜ ನಾವೇ ಕೊಡುತ್ತೇವೆ.  ಗೊಬ್ಬರ ನಾವೇ ಕೊಡುತ್ತೇವೆ.  ಔಷಧಿಗಳನ್ನೂ ನಾವೇ ಕೊಡುತ್ತೇವೆ.  ನೀವು ಬೆಳೆ ಬೆಳೆದರಾಯಿತು.  ಅದನ್ನೆಲ್ಲಾ ನಾವೇ ಮನೆಬಾಗಿಲಿಗೆ ಬಂದು ಕೊಂಡೊಯ್ಯುತ್ತೇವೆ.  ನಿಮಗೆ ಯಾವ ರಿಸ್ಕೂ ಇಲ್ಲ.  ಕೇವಲ ಮೂರು ತಿಂಗಳಲ್ಲಿ ಕಂತೆ ಕಂತೆ ಹಣ ಎಣಿಸಬಹುದು ಎನ್ನುವ ಏನೆಲ್ಲಾ ರೀತಿಯ ಆಮಿಷಗಳ ಮಳೆ ಸುರಿಸಿದರು.

ಕುಮುದ್ವತಿ ತೀರದ ರೈತರೆಲ್ಲಾ ಒಪ್ಪಿದ್ದು ಆಯಿತು.  ಕಂಪೆನಿಯ ಒಪ್ಪಂದಪತ್ರಕ್ಕೆ ಸಹಿ ಹಾಕಿದ್ದೂ ಆಯ್ತು.  ಬೀಜ, ಗೊಬ್ಬರ, ಔಷಧಿಗಳನ್ನು ಕಂಪೆನಿಯೇ ಕೊಡುತ್ತದೆ.  ಅದರೆ ಬೆಲೆ ನಿಗದಿಸಲಾಗಿದೆ.  ಬೆಳೆದ ಬೆಳೆಯನ್ನು ಕಂಪೆನಿಯೇ ಕೊಳ್ಳುತ್ತದೆ.  ಆಗ ಬೀಜ, ಗೊಬ್ಬರ, ಔಷಧಗಳ ಬೆಲೆಯನ್ನು ಮಉರಿದುಕೊಂಡು ಉಳಿದ ಹಣ ರೈತರಿಗೆ ನೀಡಲಾಗುತ್ತದೆ.  ಯಾವುದೇ ಕಾರಣದಿಂದ ಬೀಜ ಹುಟ್ಟದಿದ್ದರೆ, ಫಸಲು ಬರದಿದ್ದರೆ, ಫಸಲು ನಾಶವಾದರೆ ಆಗ ಕಂಪೆನಿ ನೀಡಿದ ಸೌಕರ್ಯಗಳಿಗೆ ರೈತನೇ ಕೈಯಿಂದ ಹಣ ಕೊಡಬೇಕು.  ಗರ್ಕಿನ್ ಗಾತ್ರವನ್ನು ಅನುಸರಿಸಿ ಕಂಪೆನಿ ಬೆಲೆ ನಿಗದಿ ಮಾಡುತ್ತದೆ.  ಇದರಲ್ಲಿ ಯಾವುದೇ ಬದಲಾವಣೆಯಿಲ್ಲ.  ಇದು ಒಪ್ಪಂದಪತ್ರ ಮುಖ್ಯಾಂಶಗಳು.

ರೈತರೆಲ್ಲಾ ೧೦೦ ಗ್ರಾಂಗೆ ೪೦೦ ರೂಪಯಿಗಳ ಲೆಕ್ಕದಲ್ಲಿ ಅರ್ಧ ಎಕರೆಗೆ ೯೦೦ ಗ್ರಾಂ ಬೀಜಗಳನ್ನು ತಂದರು.

ಒಳನೋಟ

ಗರ್ಕಿನ್ ಬೀಜದೊಂದಿಗೆ ಕಂಪೆನಿಯ ಕ್ಷೇತ್ರಾಧಿಕಾರಿಗಳು ಕೃಷಿ ಪದ್ಧತಿಯ ವಿವರವನ್ನು ನೀಡತೊಡಗಿದರು.

ಹದಗೊಳಿಸಿದ ಭೂಮಿಯಲ್ಲಿ ನಾಲ್ಕು ಅಡಿಗಳಿಗೊಂದು ಸಾಲನ್ನು ಮಾಡಬೇಕು.  ೨೦ ಸೆಂಟಿಮೀಟರ್ ಅಂತರದಲ್ಲಿ ಬೀಜ ನೆಡಬೇಕು.  ಅರ್ಧ  ಎಕರೆ ಪ್ಲಾಟ್‌ಗೆ ೨೫ ಕಿಲೋಗ್ರಾಮ್ ಬೇವಿನ ಹಿಂಡಿಯೊಂದಿಗೆ ೧ ಕಿಲೋಗ್ರಾಮ್ ಪ್ರುಡಾನ್, ೨೫ ಕಿಲೋಗ್ರಾಮ್ ಪೊಟ್ಯಾಷ್, ೨೫ ಕಿಲೋಗ್ರಾಮ್ ಸೂಪರ್ ಕೊಡಬೇಕು.  ಜೊತೆಗೆ ೫ ಕಿಲೋಗ್ರಾಮ್ ಮ್ಯಾಗ್ನಿಶಿಯಂ ಸಲ್ಫೇಟ್, ೫ ಕಿಲೋಗ್ರಾಮ್ ಮಲ್ಟಿಫ್ಲಕ್ಸ್ ನೀಡಬೇಕು.  ಇದರೊಂದಿಗೆ ದಿನಾಲೂ ಎರಡು ತಾಸು ನೀರು ಕೊಡಬೇಕು.  ಗಿಡಗಳು ಹುಟ್ಟಿ ನಾಲ್ಕೆಂಟು ಎಲೆಗಳಾಗುತ್ತಿದ್ದಂತೆ ೮ನೇ ದಿನ ರ್‍ಯಾಡೋಮಿಲ್ ಹಾಗೂ ಬೇವಿನ ಎಣ್ಣೆ ಮಿಶ್ರಣ ಸಿಂಪಡಿಸಬೇಕು.  ೧೨ನೇ ದಿನ ನೋವೋಕ್ರಾನ್ ಮತ್ತು ಬ್ಲೈಟೆಕ್ಸ್ ಸಿಂಪಡಿಸಬೇಕು.  ೧೫ನೇ ದಿನಕ್ಕೆ ೧ ಕ್ವಿಂಟಾಲ್ ಪ್ಯಾರಂಫಾಸ್ (೧೬-೨೦) ಗೊಬ್ಬರ ನೀಡಬೇಕು.  ಗಿಡದಲ್ಲಿ ಟೆಂಟಕಲ್ಸ್‌ಗಳು ಬರುತ್ತವೆ.  ಆಗ ಎಂಟು ಅಡಿಗೊಂದರಂತೆ ಆರು ಅಡಿ ಎತ್ತರದ ಗೂಟ ಹುಗಿಯಬೇಕು.  ಅದಕ್ಕೆ ದಪ್ಪ ಗೇಜಿನ ತಂತಿ ಕಟ್ಟಬೇಕು.  ಸಾಧ್ಯವಾದರೆ ಎರಡು ಹೊತ್ತು ನೀರು ಕೊಡಬೇಕು.  ಹಾಗೇ ಒಂದು ಕ್ವಿಂಟಲ್ ಡಿ.ಎ.ಪಿ. ಕೊಡಬೇಕು.  ಆಗಾಗ ಕಳೆ ತೆಗೆದು ಗಿಡದ ಬುಡ ಸ್ವಚ್ಛವಾಗಿಡಬೇಕು.  ಇನ್ನು ಮುಂದೆ ಪ್ರತಿ ಐದು ದಿವಸಕ್ಕೊಮ್ಮೆ ನೀಮ್‌ಗೊಬ್ಬರ+ಬ್ಲೈಟೆಕ್ಸ್+ಎಕಲೆಕ್ಸ್ ಕೊಡಬೇಕು.  ಅನಂತರ ಬ್ಲೈಟೆಕ್ಸ್+ಪೊಟ್ಯಾಷಿಯಂ ನೈಟ್ರೇಟ್ ಕೊಡಬೇಕು ಮತ್ತು ಬ್ಲೈಟೆಕ್ಸ್+ಮ್ಯಾಗ್ನೀಷಿಯಂ ಸಲ್ಫೇಟ್… ಮತ್ತು… ಮತ್ತು… ಮತ್ತು…

ಒಂದೊಮ್ಮೆ ಕಾಯಿ ಸೊಟ್ಟ ಪಟ್ಟವಾದರೆ ಯೂರಿಯಾ+ಸಿಎಎನ್ ಕೊಡಬೇಕು.  ಗಿಡ ಸುರುಟಿ ಹೋದರೆ ಮತ್ತೊಂದು, ಗರ್ಕಿನ್ ತುದಿ ಕೊಳೆಯುತ್ತಿದ್ದರೆ ಇನ್ನೊಂದು… ಹೂವಿಗೆ ಹುಳಗಳು ಬಂದರೆ ಮತ್ತೊಂದು… ಇವೆಲ್ಲದರ ಮಧ್ಯೆ ಗಿಡಗಳಲ್ಲಿ ಗರ್ಕಿನ್ ಬಿಡತೊಡಗಿತು.  ಅದರೊಂದಿಗೆ ಗಿಡಗಳ ಪೌಷ್ಟಿಕಾಂಶ ಹೆಚ್ಚಿಸಲು, ಗಟ್ಟಿತನ ಹೆಚ್ಚಿಸಲು ಇನ್ನಷ್ಟು ಗೊಬ್ಬರ ಇನ್ನಷ್ಟು ಔಷಧಿಗಳನ್ನು ಹೆಚ್ಚಿಸಲಾಯಿತು.

ಮಾತುಕತೆ

ವೆಂಕೋಜಿರಾವ್‌ರವರ ಗರ್ಕಿನ್ ತೋಟದಲ್ಲಿ ಆರು ಜನ ಕೊಯ್ದು ಅಲ್ಲಿಯೇ ವಿಂಗಡಿಸುತ್ತಿದ್ದರು.  ಎರಡು ಇಂಚಿನ ಗರ್ಕಿನ್ ಮೊದಲ ದರ್ಜೆಯದು.  ೯ ರೂಪಾಯಿಗೆ ಒಂದು ಕಿಲೋಗ್ರಾಮ್, ಎರಡನೆಯ ದರ್ಜೆ ೫ ರೂಪಾಯಿಗೆ ೧ ಕಿಲೋಗ್ರಾಮ್, ಮೂರನೆಯ ದರ್ಜೆ ೨ ರೂಪಾಯಿಗೆ ೧ ಕಿಲೋಗ್ರಾಮ್. ಇವರಿಗೆ ಮೊದಲ ದಿನ ಸಿಕ್ಕ ೬೦ ಕಿಲೋಗ್ರಾಮ್ ಗರ್ಕಿನ್‌ನಲ್ಲಿ ೩೫ ಕಿಲೋಗ್ರಾಮ್ ಮೊದಲ ದರ್ಜೆಯ ಗರ್ಕಿನ್ ಸಿಕ್ಕಿತು.  ಅನಂತರ ಹೆಚ್ಚು ಹೆಚ್ಚು ಗರ್ಕಿನ್ ಸಿಕ್ಕುತ್ತಿದ್ದಂತೆ ಮೊದಲ ದರ್ಜೆಯದು ಹೆಚ್ಚುತ್ತಾ ಹೋಯಿತು.  ಅಭ್ಯಾಸ ಆಗುವವರೆಗೆ ಎರಡು ಇಂಚಿನ ಗರ್ಕಿನನ್ನು ನಮ್ಮ ಕೆಲಸದೋರು ಕೊಯ್ಯೋದೆ ಇಲ್ಲ.  ಹಂಗಾಗೆ ಮೊದಲು ಮೊದಲು ದಿನಕ್ಕೆ ೪೦೦ ರೂಪಾಯಿಗಳು ಸಿಕ್ತದೆ… ಆಮ್ಯಾಲೆ ದಿನಕ್ಕೆ ೧೫೦೦ ರೂಪಾಯಿಗಳವರೆಗೂ ಸಿಗ್ತದೆ  ಎಂದು ಹೇಳುತ್ತಾರೆ ವೆಂಕೋಜಿರಾವ್.

ಡಾಕಪ್ಪ ಮತ್ತು ಸುಧಾಕರ್‌ರವರ ತೋಟ ತುಂಬಾ ಚೆನ್ನಾಗಿದೆ.  ಇಬ್ಬರೂ ಸದಾ ತೋಟದಲ್ಲೇ ಇರುತ್ತಾರೆ.  ಇತರ ಕೆಲಸದವರೊಂದಿಗೆ ತಾವೂ ಸೇರಿ ಹುರುಪು ಕೊಡುತ್ತಾರೆ.  ಇವರಿಬ್ಬರೂ ಅರ್ಧ ಎಕರೆ ಗರ್ಕಿನ್ ತೋಟಕ್ಕೆ ತಾವೇ ೬೦೦ ಗೂಟಗಳನ್ನು ಕಾಡಿನಿಂದ ಕಡಿದು ತಂದಿದ್ದಾರೆ.  ಉಳಿದವರಿಗೆ ಒಂದು ಗೂಟಕ್ಕೆ ೭ ರೂಪಾಯಿಯಂತೆ ಕೊಟ್ಟಿದ್ದಾರೆ.  ನಮಗೆ ಇದೊಂದು ರೀತಿ ಹೊಸಾ ಕೆಲಸ.  ಏನೇನೋ ಹೆಸರಿನ ಗೊಬ್ರ, ಏನೇನೋ ಔಷಧಿಗಳು, ಅವರು ತಂದಿದ್ದು, ಕೊಟ್ಟಿದ್ದು.  ನಾವು ಹಾಕಿದ್ದೇ ಹಾಕಿದ್ದು.  ನಮಗಂತೂ ಈಟೇ ಉದ್ದನ್ನ ಸೌತೆಕಾಯಿ ಬೆಳೆಯೋದು, ತಿನ್ನೋದು ಗೊತ್ತೇ ಇರ್‍ನಿಲ್ಲ.  ಅದೆಲ್ಲೋ ಪ್ಯಾರಿಸ್‌ನಲ್ಲಿ ಇದನ್ನ ಕೊಟ್ಟೆ ಜೊತೆ ನಂಜಿಕೋತ ತಿನ್ತಾರಂತೆ.  ಉಪ್ಪು, ಹುಳಿ ಹಾಕಿದ ಒಂದು ಗರ್ಕಿನ್‌ಗೆ ಇಪ್ಪತ್ ರೂಪಾಯಿಯಂತೆ! ಕೊಯ್ತಾ ಕೊಯ್ತಾ ಒಂದು ತಿಂದ್ರೂ ಇಪ್ಪತ್ತು ರೂಪಾಯಿ!  ತಿಂದಂಗ್ಹಾಕೈತಿ ಅಲ್ವಾ ಸಾರ್ ಎನ್ನುತ್ತಾರೆ ಡಾಕಪ್ಪ ಮತ್ತು ಸುಧಾಕರ.

ಅರಸಾಳಿನ ಸುರೇಶ್ ಹೇಳುವುದೇ ಬೇರೆ.  ಅವರ ಗರ್ಕಿನ್ ತೋಟದಲ್ಲಿ ಬೀಜ ತಂದ ದಿನದಿಂದ ೮ ಜನ ಕಾಯಂ ಕೆಲಸ ಮಾಡುತ್ತಿದ್ದಾರೆ.  ಬೀಜ ಬಿತ್ತಿದ್ದು, ಗೊಬ್ಬರ ಹಾಕಿದ್ದು, ಗೂಟ ನೆಟ್ಟಿದ್ದು, ತಂತಿ ಕಟ್ಟಿದ್ದು, ಬಳ್ಳಿಯ ನಡುವನ್ನು ಮೆತ್ತಗೆ ಹಿಡಿದು ದಾರ ಕಟ್ಟಿದ್ದು, ನೀರು ಬಿಟ್ಟಿದ್ದು, ಔಷಧಿ ಹೊಡೆದಿದ್ದು, ಗರ್ಕಿನ್ ಕೊಯ್ದಿದ್ದು, ಬೇರೆ ಬೇರೆ ಮಾಡಿದ್ದು, ತೂಕ ಹಾಕಿದ್ದು.  ಹೀಗೆ ಕೆಲಸ… ಕೆಲಸ… ಕೆಲಸ… ಮಾಡಿ ಬಂದು ಈಗ ರೊಕ್ಕ ಕಾಣುತ್ತಿದ್ದೇವೆ.  ಅದೂ ೨೦ ದಿನಗಳ ಕಂತಿನಲ್ಲಿ.  ಆದರೆ ಈಗಾಗಲೇ ೪೦೦ ಆಳುಗೆಲಸ ಆಗಿದೆ.  ಇನ್ನು ಮುಂದೆ ಎಷ್ಟು ಕೆಲಸವಿದೆಯೋ.  ಇದಕ್ಕೆ ಹಾಕಿರೋ ರಾಸಾಯನಿಕ ಗೊಬ್ಬರ, ಔಷಧಿ ಅಂತ ಹೊಡೆದಿರೋ ವಿಷ ನೋಡಿದ್ರೆ ನಾವಂತೂ ತಿನ್ನೋ ಹಾಗೇ ಇಲ್ಲ.  ನಮ್ಮ ನೆಲಕ್ಕೆ ನಾವೀಗ ಎಷ್ಟೊಂದು ವಿಷ ಬೆರೆಸಿದೆವು ಎಂದು ಲೆಕ್ಕ ಹಾಕಿದರೆ ನನಗೇ ಭಯವಾಗುತ್ತಿದೆ ಎನ್ನುತ್ತಾರೆ ಸುರೇಶ್.

ಗರ್ಕಿನ್ ಹಾಕಿದ ದಿನದಿಂದ ಕುಮುದ್ವತಿ ನೀರಿಗಾಗಿ ಎಲ್ಲರಲ್ಲೂ ಪೈಪೋಟಿ ನಡೆದಿತ್ತು.  ನದಿ ಬತ್ತಿಹೋದಾಗ ಅದರೊಳಗಿನ ಅಂತರ್ಜಲಕ್ಕೆ ಕನ್ನ ಹಾಕಲಾಯಿತು.  ಹೀಗೆ ನದಿಯ ಹರಿವು, ಒಳಹರಿವುಗಳೆಲ್ಲಾ ಬತ್ತಿದವು.  ಅರ್ಧ ಎಕರೆ ಗರ್ಕಿನ್ ತೋಟಕ್ಕೆ ೫ ಕ್ವಿಂಟಾಲ್ ರಾಸಾಯನಿಕ ಗೊಬ್ಬರ ಸೇರಿತು.  ರ್‍ಯಾಡೋಮಿಲ್ ಮತ್ತು ಎಕಲೆಕ್ಸ್‌ನಂತಹ ಘೋರ ವಿಷ (ಲೀಟರ್‌ಗಟ್ಟಲೆ) ನೆಲದ ಸೂಕ್ಷ್ಮಜೀವಿಗಳನ್ನು ನುಂಗಿ ಹಾಕಿತು.  ದುಂಬಿಗಳು, ಕೀಟಗಳು ಬಾರದಂತೆ ಇಟ್ಟ ಟ್ರ್ಯಾಪ್‌ನಲ್ಲಿ ವಿಷವಾಯುವಿನಿಂದ ಅನೇಕ ಹಕ್ಕಿಪಿಕ್ಕಿಗಳು ಅತ್ತ ಸುಳಿಯಲಿಲ್ಲ.  ಗಾಳಿಯಲ್ಲಿನ ವಿಷ, ನೆಲದ ವಿಷ ಕೆಲವು ಅಲರ್ಜಿಗಳಿಗೂ ಕಾರಣವಾಗಿತ್ತು.  ಈ ವಿಷವೆಲ್ಲಾ ಮಳೆನೀರಿನೊಂದಿಗೆ ಕುಮುದ್ವತಿ ಸೇರಿ ಸದ್ದಿಲ್ಲದೆ ಈಕೆ ವಿಷದ್ವತಿ ಆಗುತ್ತಾಳೆ.  ಇಲ್ಲಿನ ಗಾಳಿ, ಮಣ್ಣು, ನೀರು ಕಣ್ಣಾರೆ ವಿಷವಾಗುವುದು ಕಾಣುತ್ತಿದೆ.

ಛೇ, ನನಗೆ ಬಂದ ಸಾವಿರ ಲಾಭದಲ್ಲಿ ಈ ನೆಲ, ಜಲ, ಗಾಳಿಯನ್ನು ಖಂಡಿತಾ ಸರಿ ಮಾಡಲಾರೆ ಎಂದು ಪಶ್ಚಾತ್ತಾಪಪಡುತ್ತಾರೆ ಅರಸಾಳಿನ ಸುರೇಶ್.  ಆದರೆ ಬಟಾಣಿಜಡ್ಡಿನ ಡಾಕಪ್ಪನವರಿಗೆ, ಕೊಳವಂಕದ ಸುಧಾಕರ ಮುಂತಾದವರಿಗೆ ಈ ಮೂರು ತಿಂಗಳ ಬೆಳೆಯಿಂದ ೨೫ ಸಾವಿರ ರೂಪಾಯಿಗಳು ಲಾಭವಾಗಿದ್ದು ಅರಸಾಳಿನ ಸಾರಾಯಿ ಅಂಗಡಿಯಲ್ಲಿ ಗುಲ್ಲಾಯಿತು… ರಿಪ್ಪನ್‌ಪೇಟೆಯ ಸಂತೆಯಲ್ಲಿ ಹರಾಜಾಯಿತು… ಆಯನೂರಿನ ಎತ್ತಿನ ಜಾತ್ರೆಯಲ್ಲಿ (ವಿನಿಮಯ) ಸಾಟಿ ಆಯಿತು.  ಈಗ ಕುಮುದ್ವತಿ ತೀರದ ರೈತರು ಗರ್ಕಿನ್ ಬೀಜ ಹುಡುಕಹೊರಟಿದ್ದಾರೆ… ಮುಂಗಾರಿನಲ್ಲೂ ಇದನ್ನು ಬೆಳೆಯಬಹುದೇ ಎಂದು ಏಜೆಂಟರನ್ನು ವಿಚಾರಿಸುತ್ತಿದ್ದಾರೆ.  ಶಿಕಾರಿಪುರದ ಬಸ್ಸಿಗಾಗಿ ಕಾಯುತ್ತಿದ್ದಾರೆ.

ಸಮಾರೋಪ

ಹೀಗಿರುವಾಗಲೇ ಒಂದು ಸಂಜೆ ಜೋರಾಗಿ ಮಿಂಚು ಗುಡುಗು ಪ್ರಾರಂಭವಾಯಿತು.  ಸಿಡಿಲುಗಳು ಅಪ್ಪಳಿಸಿದವು.   ಕುಮುದ್ವತಿ ತೀರದಲ್ಲಿ ಆಕಾಶವೇ ಮಗುಚಿಬಿದ್ದಂತೆ ಆಲಿಕಲ್ಲುಗಳು ಬಿದ್ದವು.  ಭಾರಿ ಮಳೆ ಸುರಿಯಿತು.  ಹೀಗೆ ಗರ್ಕಿನ್ ಬಳ್ಳಿಗಳೂ ಸಮಾಧಿಯಾದವು.  ಕೊಯ್ಲು ಅಂತಿಮ ಹಂತಕ್ಕೆ ಬಂದಿದ್ದರಿಂದ ರೈತರಿಗೆ ನಷ್ಟವಾಗಲಿಲ್ಲ.  ಹೀಗೆ ಗರ್ಕಿನ್‌ನ ಮೊದಲ ದಂಡಯಾತ್ರೆ ಮುಗಿದಿದೆ.  ಊಹುಂ… ವಿಷಯಾತ್ರೆ ಪ್ರಾರಂಭವಾಗಿದೆ.