ಹಂದಿಜ್ವರದ ಬಗ್ಗೆ ಇಡೀ ದೇಶ ಭೀತಿಗೊಳಗಾಗಿರುವ ಸಂದರ್ಭದಲ್ಲಿ, ಸದ್ದಿಲ್ಲದೆಯೇ ನೂರಾರು ಮಕ್ಕಳನ್ನು ಕೊಲ್ಲುವ ಮತ್ತೊಂದು ಜ್ವರದ ಚಿಕಿತ್ಸೆಯ ಬಗ್ಗೆ ಆಶಾಕಿರಣ ಮೂಡಿದೆ. ಕಲ್ಕತ್ತೆಯ ಕೊಳಚೆ ಪ್ರದೇಶದಲ್ಲಿನ ನಿವಾಸಿಗಳ ಮೇಲೆ ನಡೆದ ಸಂಶೋಧನೆಯೊಂದು ಹೊಸ ಬಗೆಯ ಲಸಿಕೆಯೊಂದು ವಿಷಮಶೀತಜ್ವರ ಹರಡದಂತೆ ತಡೆಯಬಲ್ಲುದು ಎಂದು ನಿರೂಪಿಸಿದೆ. ಕಲ್ಕತ್ತೆಯಲ್ಲಿರುವ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಕಾಲೆರಾ ಅಂಡ್ ಎಂಟೆರಿಕ್ ಡಿಸೀಸಸ್ನ ವಿಜ್ಞಾನಿಗಳು ದಕ್ಷಿಣ ಕೊರಿಯಾದಲ್ಲಿರುವ ಅಂತರರಾಷ್ಟ್ರೀಯ ಲಸಿಕೆಗಳ ಸಂಶೋಧನಾ ಸಂಸ್ಥೆಯ ಜೊತೆಗೂಡಿ ವಿಐ ಎನ್ನುವ ಲಸಿಕೆಯ ಪರೀಕ್ಷೆ ನಡೆಸಿದ್ದಾರೆ. ಈ ಲಸಿಕೆ ಐದು ವರ್ಷದೊಳಗಿನ ಮಕ್ಕಳನ್ನು ಟೈಫಾಯಿಡ್ ಸೋಂಕಿನಿಂದ ರಕ್ಷಿಸುತ್ತದೆ ಎಂದು ಈ ಪರೀಕ್ಷೆ ಧೃಢಪಡಿಸಿದೆ. ಲಸಿಕೆಯ ಕ್ಷಮತೆಯನ್ನು ಧೃಢೀಕರಿಸುವ ವ್ಯಾಪಕ ಪರೀಕ್ಷೆ ಇದು ಎಂದು ಇತ್ತೀಚೆಗೆ ಈ ವರದಿಯನ್ನು ಪ್ರಕಟಿಸಿದ ದಿ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಹೇಳಿದೆ.

ವಿಷಮಶೀತ ಜ್ವರ ಅಥವಾ ಟೈಫಾಯಿಡ್ ಸಾಲ್ಮೊನೆಲ್ಲ ಎಂಟೆರಿಕಾ ಟೈಫಿ ಎನ್ನುವ ಬ್ಯಾಕ್ಟೀರಿಯಾದ ಸೋಂಕು. ವಿಶ್ವ ಆರೋಗ್ಯ ಸಂಸ್ಥೆಯ ವರದಿಯೊಂದರ ಪ್ರಕಾರ ಪ್ರತಿವರ್ಷ ಈ ಜ್ವರ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೇ ಅಂದಾಜು 2 ಲಕ್ಷದಿಂದ 6 ಲಕ್ಷ ಜನರನ್ನು ಪ್ರತಿವರ್ಷ ಬಲಿತೆಗೆದುಕೊಳ್ಳುತ್ತದೆ. ಇದರ ಮುಂದೆ ಹಂದಿಜ್ವರದ ದಾಳಿ ಏನೇನೂ ಅಲ್ಲ. ವಿಷಮಶೀತ ಜ್ವರಕ್ಕೆ ಬಲಿಯಾಗುವವರಲ್ಲಿ ಮಕ್ಕಳ ಸಂಖ್ಯೆಯೇ ಹೆಚ್ಚು ಎನ್ನುವುದು ಇನ್ನೊಂದು ವಿಷಾದಕರ ಸಂಗತಿ. ಕಾಲೆರಾದಂತೆಯೇ ಈ ಸೋಂಕೂ ಕಲುಷಿತ ನೀರು, ಆಹಾರದಿಂದ ಹರಡುತ್ತದೆ. ಹೀಗಾಗಿ ಈ ಬಡಿಗೆಯ ಏಟು ಬಡಜನತೆಯ ಮೇಲೇ ಹೆಚ್ಚು. ಶುಚಿತ್ವ ಕಡಿಮೆ ಇರುವ ಕೊಳಚೆ ಪ್ರದೇಶಗಳಲ್ಲಿ, ನೀರಿನ ಅವ್ಯವಸ್ಥೆ ಇರುವ ಗ್ರಾಮೀಣ ಜನತೆಯಲ್ಲಿ ಟೈಫಾಯಿಡ್ ಸೋಂಕು ಸಾಮಾನ್ಯ.  ದೊಡ್ಡವರಿಗೂ ಇದರ ಕಾಟ ಇದ್ದದ್ದೇ. ಒಮ್ಮೆ ಜ್ವರದಿಂದ ಚೇತರಿಸಿಕೊಂಡರೂ ಮರಳಿ, ಮರಳಿ ಕಾಡುವ ಸೋಂಕುಗಳಲ್ಲಿ ಟೈಫಾಯಿಡ್ ಪ್ರಮುಖ.

ಟೈಫಾಯಿಡ್ ಜ್ವರದ ಚಿಕಿತ್ಸೆಗೆ ವಿಶೇಷ ಪ್ರತಿಜೀವಕ (ಆಂಟಿಬಯಾಟಿಕ್) ಔಷಧಗಳು ಲಭ್ಯವಿವೆ. ಕ್ಲೋರಾಂಫೆನಿಕಾಲ್ ಇವುಗಳಲ್ಲಿ ಪ್ರಮುಖವಾದದ್ದು. ಇದೇ ಔಷಧವನ್ನು ಕಾಲರಾ ಚಿಕಿತ್ಸೆಗೂ ಬಳಸಲಾಗುತ್ತಿದೆ. ಇತ್ತೀಚೆಗೆ ಇನ್ನೂ ಹಲವು ಹೊಸ ಔಷಧಗಳನ್ನು ಟೈಫಾಯಿಡ್ ಚಿಕಿತ್ಸೆಗೆ ಬಳಸುತ್ತಿದ್ದಾರೆ. ಕೊಕ್ರೇನ್ ರಿವ್ಯೂ ಎನ್ನುವ ಪತ್ರಿಕೆಯ ವಿಶ್ಲೇಷಣೆಯ ಪ್ರಕಾರ ಕ್ಲೋರಾಂಫೆನಿಕಾಲ್ನಷ್ಟು ಫಲಕಾರಿ ಔಷಧ ಇನ್ನೂ ಸಿಕ್ಕಿಲ್ಲ. ಆದರೆ ಟೈಫಾಯಿಡ್ ರೋಗಾಣುವಿನ ಕೆಲವು ತಳಿಗಳು ಕ್ಲೋರಾಂಫೆನಿಕಾಲ್ಗೂ ಒಗ್ಗಿಕೊಂಡು ಬಿಟ್ಟಿರುವುದರಿಂದ ಸೋಂಕಿನ ಸಂಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ. ಕಾಲರಾ ರಕ್ಷಣೆಗೆ ಬಳಸುವಂತೆಯೇ ಟೈಫಾಯಿಡ್ ರಕ್ಷಣೆಗೂ ಲಸಿಕೆಗಳನ್ನು ಬಳಸಬಾರದೇಕೆ ಎನ್ನುವ ಪ್ರಯತ್ನ ಬಹಳ ದಿನಗಳಿಂದಲೂ ನಡೆದಿದ್ದರೂ, ಫಲಪ್ರದ ಲಸಿಕೆಯ ತಯಾರಿಕೆ ಸಾಧ್ಯವಾಗಿರಲಿಲ್ಲ.

ರೋಗಾಣುವನ್ನು ಎದುರಿಸಲು ದೇಹವನ್ನು ಸಿದ್ಧಗೊಳಿಸುವ ಉಪಾಯಗಳೇ ಲಸಿಕೆಗಳು. ಸಾಧಾರಣವಾಗಿ ಲಸಿಕೆಗಳಲ್ಲಿ ಸ್ವತಃ ರೋಗಾಣು ಅಥವಾ ಅದರ ದೇಹದ ಅಂಶ ಇರುತ್ತದೆ. ಇವು ದೇಹಕ್ಕೆ ರೋಗಾಣುವಿನ ಪರಿಚಯವನ್ನು ಒದಗಿಸುತ್ತವೆ. ಹೀಗಾಗಿ ಮತ್ತೆಂದಾದರೂ ದೇಹ ರೋಗವನ್ನು ಹೊಕ್ಕ ಕೂಡಲೇ, ದೇಹದ ರೋಗನಿರೋಧಕ ಜೀವಕೋಶಗಳು ಜಾಗೃತವಾಗಿ ದಾಳಿ ಮಾಡಿ ರೋಗಾಣುವನ್ನು ಹತ್ತಿಕ್ಕುತ್ತವೆ. ಹೀಗೆ ರಕ್ಷೆ ದೊರಕುತ್ತದೆ. ಟೈಫಾಯಿಡ್ನ ವಿಷಯದಲ್ಲಿ ಜೀವಂತ ಅಥವಾ ನಿಶ್ಶಕ್ತ ರೋಗಾಣುಗಳಿರುವ ಲಸಿಕೆ ಇಲ್ಲ. ಹೀಗಾಗಿ ಈ ರೋಗಾಣುವಿನ ದೇಹದ ಯಾವುದೋ ಭಾಗವನ್ನಷ್ಟೆ ಬಳಸಿ ಲಸಿಕೆಯನ್ನು ತಯಾರಿಸಲಾಗಿದೆ. ಸದ್ಯಕ್ಕೆ ಇಂತಹ ಎರಡು ಲಸಿಕೆಗಳು ಲಭ್ಯವಿವೆ ಎನ್ನುತ್ತದೆ ಕೊಕ್ರೇನ್ ರಿವ್ಯೂ. ಇವುಗಳಲ್ಲಿ ವಿಐ ಎನ್ನುವುದು ಸೂಜಿಮದ್ದು. ಮತ್ತೊಂದು ನುಂಗಬಲ್ಲ ಔಷಧಿ.

ವಿಶ್ವ ಆರೋಗ್ಯ ಸಂಸ್ಥೆಯು ಈ ಎರಡೂ ಲಸಿಕೆಗಳನ್ನೂ ಮಾನ್ಯ ಮಾಡಿದ್ದರೂ ಇವುಗಳ ಬಳಕೆ ಇನ್ನೂ ಸಾಮಾನ್ಯವಾಗಿಲ್ಲ. ಕಾರಣ: ಈ ಔಷಧಿಗಳ ವ್ಯಾಪಕ ಪರೀಕ್ಷೆ ನಡೆದಿಲ್ಲ. ಇವು ಎಲ್ಲ ವಯಸ್ಸಿನ ಜನರಿಗೂ ರಕ್ಷಣೆ ಒದಗಿಸುತ್ತವೆಯೋ ಎನ್ನುವುದು ಸ್ಪಷ್ಟವಾಗಿರಲಿಲ್ಲ. ಅದರಲ್ಲೂ ಟೈಫಾಯಿಡ್ ಸೋಂಕು ಮಾರಕವೆನ್ನಿಸುವ 2ರಿಂದ 5 ವರ್ಷದೊಳಗಿನ ಮಕ್ಕಳಲ್ಲಿ ಈ ಲಸಿಕೆಗಳ ಸಾಮಥ್ರ್ಯವೇನೆಂಬುದು ಸ್ಪಷ್ಟವಾಗಿರಲಿಲ್ಲ. ನಾಲ್ಕು ವರ್ಷಗಳಷ್ಟು ದರ್ೀಾವಧಿಯಲ್ಲಿ ಸುಮಾರು 37000 ಜನರಿಗೆ ಇದನ್ನು ಒದಗಿಸಿ ಕಲ್ಕತ್ತೆಯ ಇನ್ಸ್ಟಿಟ್ಯೂಟ್ ಆಫ್ ಕಾಲೆರಾ ಅಂಡ್ ಎಂಟೆರಿಕ್ ಡಿಸೀಸಸ್ನ ವೈದ್ಯರು ವಿಐ ಲಸಿಕೆಯ ಪರೀಕ್ಷೆ ಮಾಡಿದ್ದಾರೆ.

ಕಲ್ಕತ್ತೆಯ ಕೊಳಚೆ ಪ್ರದೇಶವೊಂದರಲ್ಲಿ ವಿಐ ಲಸಿಕೆಯ ಪರೀಕ್ಷೆ ನಡೆಯಿತು. ಈ ಪ್ರದೇಶವನ್ನು 80 ಭಾಗಗಳಾಗಿ ವಿಭಾಗಿಸಿ ಪರೀಕ್ಷೆ ನಡೆಸಿದರು. ಎರಡರಿಂದ ಅರವತ್ತು ವರ್ಷ ವಯಸ್ಸಿನ ಜನರಿಗೆ ಲಸಿಕೆಯನ್ನು ಚುಚ್ಚಲಾಯಿತು. ಹೋಲಿಕೆಗಾಗಿ ಅದೇ ಪ್ರದೇಶದಲ್ಲಿರುವ ಇನ್ನಷ್ಟು ಜನರಿಗೆ ಹೆಪಟೈಟಿಸ್ ಎ (ವೈರಸ್ನಿಂದುಂಟಾಗುವ ಒಂದು ಬಗೆಯ ಕಾಮಾಲೆ ರೋಗ ಗ ಕಾಲೆರಾ, ಹೆಪಟೈಟಿಸ್ ಎ ಮತ್ತು ಟೈಫಾಯಿಡ್ ಕಲುಷಿತ ನೀರು ಮತ್ತು ಆಹಾರದಿಂದ ಹರಡುವ ರೋಗಗಳು) ಲಸಿಕೆಯನ್ನು ನೀಡಲಾಯಿತು. ಅನಂತರ ಮುಂದಿನ ಎರಡು ವರ್ಷಗಳ ಕಾಲ ಈ ಕುಟುಂಬಗಳಲ್ಲಿ ಟೈಫಾಯಿಡ್ ಜ್ವರ ಉಂಟಾಯಿತೇ ಇಲ್ಲವೇ ಎಂದು ಗಮನಿಸಲಾಯಿತು. ಫಲಿತಾಂಶ: ಹೆಪಟೈಟಿಸ್ ಎ ಲಸಿಕೆಯನ್ನಷ್ಟೆ ಚುಚ್ಚಿದ ಜನತೆಯಲ್ಲಿ 94 ಮಂದಿಗೆ ಟೈಫಾಯಿಡ್ ಜ್ವರ ಉಂಟಾಯಿತು. ಅದೇ ವಿಐ ಲಸಿಕೆ ಚುಚ್ಚಿದವರಲ್ಲಿ ಕೇವಲ 34 ಮಂದಿಯಲ್ಲಿಯಷ್ಟೆ ಈ ಜ್ವರ ಕಾಣಿಸಿತು. ಅರ್ಥಾತ್, ಈ ಲಸಿಕೆಯಿಂದಾಗಿ ಶೇಕಡ 61ರಷ್ಟು ಮಂದಿ ಜ್ವರದಿಂದ ರಕ್ಷಣೆ ಪಡೆದಂತಾಯಿತು.  ಎರಡರಿಂದ ಐದು ವರ್ಷ ವಯಸ್ಸಿನ ಮಕ್ಕಳಲ್ಲಿ ಈ ಲಸಿಕೆಯ ರಕ್ಷಣಾ ಸಾಮಥ್ರ್ಯ ಶೇಕಡ 80ರಷ್ಟು ಎನ್ನುವುದು ವಿಶೇಷ. ಲಸಿಕೆ ಚುಚ್ಚಿದ 100 ಮಕ್ಕಳಲ್ಲಿ 80 ಮಂದಿಗೆ ಖಾತ್ರಿ ರಕ್ಷಣೆ ದೊರೆಯುತ್ತದೆ ಎನ್ನುವುದು ಸಂಶೋಧಕರ ಅಭಿಪ್ರಾಯ.

ಸದ್ಯಕ್ಕೆ ಈ ಲಸಿಕೆಯನ್ನು ದುಡ್ಡಿದ್ದವರಷ್ಟೆ ಮಕ್ಕಳಿಗೆ ಚುಚ್ಚಿಸುತ್ತಿದ್ದಾರೆ. ಇದೀಗ ಇದರ ಸಾಮಥ್ರ್ಯ ಸಿದ್ಧವಾಗಿರುವುದರಿಂದ ಇದನ್ನು ಆರೋಗ್ಯ ಸೇವೆಯ ಮೂಲಕ ಇಡೀ ಜನಸಮುದಾಯಕ್ಕೆ ರಕ್ಷಣೆ ಒದಗಿಸಲು ಬಳಸಬಹುದು ಎನ್ನುವುದು ಸಂಶೋಧಕರ ಅಭಿಪ್ರಾಯ. ಹಾಗಾದಲ್ಲಿ ಪೋಲಿಯೋ, ಕಾಲರಾದಿಂದ ರಕ್ಷಣೆ ಒದಗಿಸಿದಂತೆಯೇ ಟೈಫಾಯಿಡ್ನಿಂದಲೂ ರಕ್ಷಣೆ ಒದಗಿಸಬಹುದು ಎನ್ನುವುದು ಇವರ ಆಶಯ. ಆ ಆಶಯ ನೆರವೇರಲಿ ಎನ್ನೋಣವೇ?