ಮಲೆನಾಡಿನ ದಟ್ಟವಾದ ಕಾಡಿನ ನಡುವೆ ಡೊಂಕು ಡೊಂಕಾಗಿ ಸಾಗುವ ಹೆದ್ದಾರಿ. ಶ್ರೀಮಂತವಾಗಿ ಅಲಂಕೃತವಾದ ನಾಲ್ಕು ಕುದುರೆ ರಥ ಮಧ್ಯಮ ವೇಗದಲ್ಲಿ ಹೋಗುತ್ತಿದ್ದೆ. ಹಿಂದೆ-ಮುಂದೆ ಅಂಗರಕ್ಷಕ ಕುದುರೆ ಸವಾರರು ಸಮಗತಿಯಲ್ಲಿ ಹೋಗುತ್ತಿದ್ದಾರೆ.

ಹೊಯ್ಸಳ”

ರಥದೊಳಗೆ ಬಾಲಕರಿಬ್ಬರು ತಂದೆಯ ಆ ಕಡೆ ಈ ಕಡೆ ಒತ್ತಿ ಕುಳಿತು ತುಂಬಾ ಕುತೂಹಲದಿಂದ ಕತೆ ಕೇಳುತ್ತಿದ್ದಾರೆ. ಅದೆಷ್ಟೋ ಸಾಹಸದ ಕತೆಗಳನ್ನು ಮುಗಿಸಿ ಇನ್ನೇನು ಊರು ಹತ್ತಿರವಾಗುತ್ತಿದೆಯೆನ್ನುತ್ತ ಇನ್ನೊಂದೇ ಪುಟ್ಟ ರೋಮಾಂಚಕಾರಿ ಕತೆ ಎಂದು ತಂದೆ ಹೇಳತೊಡಗಿದ: “ತುಂಬಾ ಹಿಂದೆ ಇದೇ ಸೊಸೆವೂರ ಬಳಿ ಕಾಡಿನ ನಡುವೆ ಒಂದು ಗುರುಕುಲ. ಸುದತ್ತಾ ಚಾರ್ಯರೆಂಬ ಮುನಿಗಳ ಆಶ್ರಮ. ಹಲವಾರು ವಿದ್ಯಾರ್ಥಿಗಳು ಗುರುಸೇವೆ ಮಾಡುತ್ತಾ ವಿದ್ಯಾಭ್ಯಾಸ ಮಾಡುತ್ತಿದ್ದರು. ಅವರಲ್ಲಿ ಒಬ್ಬ ಯುವಕ ಗುರುಗಳಿಗೆ ತುಂಬಾ ಅಚ್ಚು ಮೆಚ್ಚು. ವಿದ್ಯೆ, ವಿನಯ, ಗುರುಭಕ್ತಿ, ಸೌಜನ್ಯ, ಸೌಶೀಲ್ಯ ಎಲ್ಲದರಲ್ಲೂ ಆತ ಮಾದರಿ. ಧೈರ್ಯ ಸಾಹಸಗಳಲ್ಲಂತೂ ಹೆಸರಾದವನು.

“ಒಮ್ಮೆ ಗುರುಗಳು ಶಿಷ್ಯರೊಂದಿಗೆ ವಾಸಂತಿಕಾ ಅಮ್ಮನವರ ಪೂಜೆಗೆಂದು ಸೊಸೆವೂರಿಗೆ ಹೊರಟರು. ದಾರಿಯಲ್ಲಿ ಇದ್ದಕ್ಕಿದ್ದಂತೆ ಕಾಡೆಲ್ಲ ನಡುಗುವಂತೆ ಗರ್ಜಿಸುತ್ತಾ ಹುಲಿಯೊಂದು ಎರಗಿಬಂತು. ಗುರುಗಳು ತಮ್ಮ ಮೆಚ್ಚಿನ ಶಿಷ್ಯನೆಡೆಗೆ ಕೋಲನ್ನೆಸೆದು “ಪೊಯ್‌ಸಳ” ಎಂದರು. ಗುರುಗಳು ಎಸೆದ ಕೋಲನ್ನು ಅಂತರದಲ್ಲೇ ಹಿಡಿದು ಹುಲಿಯನ್ನು ತಡೆದ. ಏಕಾಕಿಯಾಗಿ ಅದರೊಡನೆ ಹೋರಾಡಿ ಬಡಿದು ಕೊಂದ. ಅವನ ಕೆಚ್ಚಿಗೂ ಗುರುಭಕ್ತಿಗೂ ಮೆಚ್ಚಿದ ಗುರುಗಳು, “ಹೊಸ ರಾಜ್ಯದ ಸ್ಥಾಪಕನಾಗು. ಕನ್ನಡನಾಡು ಹೆಮ್ಮೆಪಡುವಂತಹ ರಾಜಸಂತತಿ ನಿನ್ನಿಂದ ಬೆಳೆಯಲಿ” ಎಂದು ಆಶೀರ್ವದಿಸಿದರು. ಮುಂದೆ ಗುರುಗಳ ಆದೇಶದಂತೆ ರಾಜ್ಯ ಸ್ಥಾಪನೆಗೆ ಪ್ರಶಸ್ತವಾದ ಸ್ಥಳವನ್ನು ಹುಡುಕುವಾಗ ಇದೇ ಕಾಡಿನ ಬಳಿ ಒಂದು ಮೊಲ ಹುಲಿಯೊಂದನ್ನು ಅಟ್ಟಿಸಿಕೊಂಡು ಹೋಗುತ್ತಿದ್ದುದನ್ನು ನೋಡಿದನಂತೆ. ಇದು ಗಂಡು ನೆಲ ಎಂದು ಇಲ್ಲೇ ರಾಜಧಾನಿಯಾಗಿ ಊರನ್ನು ಕಟ್ಟಿ ಶತಕಪುರ ಎಂದು ಹೆಸರಿಟ್ಟನಂತೆ. ಅದೇ ಸೊಸೆವೂರು ಆಯಿತು. ಆ ಮಹಾಪುರುಷ ಸಳನೇ ನಮ್ಮ ವಂಶದ ಮೂಲ ಪುರುಷ. ಆತ ಹುಲಿಯನ್ನು ಹೊಡೆವ ಚಿತ್ರವೇ ಈಗ ನಮ್ಮ ರಾಜ ಚಿಹ್ನೆ”.

ಕತೆ ಕೇಳುತ್ತಿದ್ದ ಕಿರಿಯವನು, “ಪೊಯ್‌ಸಳ” ಎಂದು ಮತ್ತೆ ಮತ್ತೆ ಉಚ್ಚರಿಸುತ್ತೆ ” ಓ, ಅದಕ್ಕೇ ನಮ್ಮ ವಂಶಕ್ಕೆ ಪೊಯ್ಸಳ-ಹೊಯ್ಸಳ ಎಂಬ ಹೆಸರು ಬಂತು!” ಎಂದು ಹಿಗ್ಗಿ ಚಪ್ಪಾಳೆ ತಟ್ಟುತ್ತಾ.

"ಅದಕ್ಕೇ ನಮ್ಮ ವಂಶಕ್ಕೆ ಹೊಯ್ಸಳ ಎಂಬ ಹೆಸರು ಬಂತು !"

“ಭೇಷ್‌. ಎಷ್ಟು ಬೇಗ ತಿಳಿದುಕೊಂಡೆ ಬಿಟ್ಟಿಯಣ್ಣಾ. ಕೆಚ್ಚು, ಪರಾಕ್ರಮ, ಗುರುಭಕ್ತಿಗಳೇ ಈ ವಂಶದವರ ರಕ್ತಗುಣ ಆಗಲಿ ಎಂದು ಹರಸಿ ಗುರುಗಳೇ ಈ ಹೆಸರನ್ನು ಕೊಟ್ಟರಂತೆ ಎಂದು ತಂದೆ ಕಥನಕ್ಕೆ ಮುಕ್ತಾಯ ಕೊಟ್ಟರು.

ಕತೆ ಹೇಳುತ್ತಿದ್ದ ತಂದೆ ಯೊಯ್ಸಳ ರಾಜ್ಯದ ಯುವರಾಜ ಎರೆಯಂಗದೇವ. ಕೇಳುತ್ತಿದ್ದವರು ಆತನ ಪ್ರೀತಿಯ ಮಕ್ಕಳಾದ ಬಲ್ಲಾಳ ಮತ್ತು ಬಿಟ್ಟಿದೇವ.

ವೀರ-ಪ್ರಜಾವತ್ಸಲ

ಬಿಟ್ಟಿದೇವನೇ ಹೊಯ್ಸಳ ರಾಜವಂಶದ ಬಹು ಪ್ರಸಿದ್ಧ ದೊರೆಯೆನಿಸಿದ ವಿಷ್ಣುವರ್ಧನ. ಆತನನ್ನು ಬಿಟ್ಟಿಗ, ಬಿಟ್ಟಿಯಣ್ಣ ಎಂದೂ ಕರೆಯುತ್ತಿದ್ದರು. “ಬಿಟ್ಟಿ” ಎಂಬುದು “ವಿಷ್ಣು” ಎಂಬುವರ ಕನ್ನಡ ರೂಪ.

ವಿಷ್ಣುವರ್ಧನ ಮಹತ್ವಾಕಾಂಕ್ಷಿ. ಸಾಹಸ, ಪರಾಕ್ರಮಗಳಲ್ಲಿ ಅವನನ್ನು ಸರಿಗಟ್ಟುವವರು ವಿರಳ. ಚಾಲುಕ್ಯರ ಸಾಮಂತ ರಾಜ್ಯವಾಗಿದ್ದ ಹೊಯ್ಸಳ ನಾಡನ್ನು ಕೃಷ್ಣೆಯಿಂದ ಮಧುರೆಯವರೆಗೆ ಮತ್ತು ಪಶ್ಚಿಮ ಕರಾವಳಿಯಿಂದ ಕಂಚಿಯವರೆಗೆ ಮತ್ತು ಪಶ್ಚಿಮ ಕರಾವಳಿಯಿಂದ ಕಂಚಿಯವರೆಗೆ ವಿಸ್ತರಿಸಿ ನೂತನ ಸಾಮ್ರಾಜ್ಯವನ್ನೇ ಸ್ಥಾಪಿಸಿ ಕನ್ನಡಿಗರ ಸಾಂಸ್ಕೃತಿಕ ಹಾಗೂ ವೀರ ಪರಂಪರೆಯ ಉಜ್ವಲ ಜ್ಯೋತಿಯನ್ನು ಲೋಕದಲ್ಲಿ ಬೆಳಗಿಸಿದ.

ವಿಷ್ಣುವರ್ಧನ ಕೇವಲ ಪರಾಕ್ರಮಶಾಲಿಯಾಗಿ ಸಾಮ್ರಾಜ್ಯ ಸ್ಥಾಪಕನಾಗಿ ಮಾತ್ರ ದೊಡ್ಡವನಾದವನಲ್ಲ. ಸುಸಂಸ್ಕೃತ ವ್ಯಕ್ತಿಯಾಗಿ ಸತ್ಯ, ಧರ್ಮ, ಮಾನವೀಯ ಅಂತಃಕರಣಗಳಿಂದ ಜನತೆಯ ಪ್ರೀತಿಯನ್ನು ಗಳಿಸಿ ದೊಡ್ಡವನಾದವನು.

ತನ್ನ ಪ್ರಜೆಗಳು ಕೇವಲ ನೆಮ್ಮದಿಯಿಂದ ಬಾಳಿದರೆ ಸಾಲದು. ಧರ್ಮವಂತರಾಗಬೇಕು, ಸುಶಿಕ್ಷಿತರಾಗಬೇಕು, ಉತ್ತಮ ಕಲಾಭಿರುಚಿಯುಳ್ಳ ಸುಸಂಸ್ಕೃತರಾಗಬೇಕು ಎಂದು ಆಶಿಸಿದ ಆದರ್ಶ ದೊರೆ.

ವಿದ್ಯಾಭ್ಯಾಸ

ಹೊಯ್ಸಳ ವಂಶದ ರಾಜ ಎರೆಯಂಗ ಬಹು ಪರಾಕ್ರಮಿ. ಆತನಿಗೆ ಮಹಾದೇವಿ, ಏಚಲದೇವಿ ಎಂದು ಇಬ್ಬರು ಹೆಂಡಿರು. ಏಚಲದೇವಿಯಲ್ಲಿ ಮೂವರು ಗಂಟು ಮಕ್ಕಳಾದರು. ಹಿರಿಯವನು ಬಲ್ಲಾಳ, ಎರಡನೆಯವನು ಬಿಟ್ಟಿದೇವ, ಕೊನೆಯವನು ಉದಯಾದಿತ್ಯ. ಮೂವರೂ ಸಲ್ಲಕ್ಷಣವಂತರು. ರಾಮ, ಲಕ್ಷ್ಮಣ, ಭರತರಂತ ಅತ್ಯಂತ ಪ್ರೀತಿ, ಅನ್ಯೋನ್ಯತೆಗಳಿಂದ ಇದ್ದರು.

ಷಟ್ತರ್ಕಷಣ್ಮುಖ, ತಾರ್ಕಿಕ ಚಕ್ರವರ್ತಿ, ಶ್ರೀಪಾಲ ತ್ರೈವಿದ್ಯಾದೇವರ ಗುರುಕುಲದಲ್ಲಿ ರಾಜಕುಮಾರರಿಗೆ ವಿದ್ಯಾಭ್ಯಾಸವಾಯಿತು. ಸಕಲ ಶಾಸ್ತ್ರಗಳಲ್ಲಿ ಪಾಂಡಿತ್ಯ , ಕ್ಷತ್ರಿಯೋಚಿತ ಶಿಕ್ಷಣ ದೊರೆತವು. ಬಿಟ್ಟಿದೇವಾ ಅಶ್ವವಿದ್ಯೆಯಲ್ಲೂ ಧನುರ್ವಿದ್ಯೆಯಲ್ಲೂ ಅಪ್ರತಿಮನೆನಿಸಿದ.

ಬಿಟ್ಟಿದೇವ ಸ್ಥುರದ್ರೂಪಿ, ಅಸಾಧಾರಣ ತೇಜಸ್ವಿ. ಅಂದವಾದ, ಸದೃಢವಾದ ಮೈಕಟ್ಟು. ಹೊಳೆಯುವ ಕತ್ತಿಯಲಗಿನಂತೆ, ಮುಂಗಾರಿನ ಮಿಂಚಿನಂತೆ ಇದ್ದ. ಅವನದು ಸ್ವತಂತ್ರ ಮನೋವೃತ್ತಿ. ಅವನಲ್ಲಿ ಶಕ್ತಿ, ಯುಕ್ತಿ ಎರಡೂ ಇದ್ದವು. ಸಮರದಲ್ಲಿ, ರಾಜತಂತ್ರಗಳಲ್ಲಿ ಕಾರ್ಯಸಾಧನೆಗಾಗಿ ಉಪಾಯಗಾರನೇ ಹೊರತು ಇತರ ವಿಚಾರಗಳಲ್ಲಿ ಸತ್ಯವಂತ, ಪ್ರಾಮಾಣಿಕ, ಉದಾರಿ, ಗುರು-ಹಿರಿಯರಲ್ಲಿ, ದೇವರಲ್ಲಿ ತುಂಬಾ ಭಕ್ತಿ.

ಚಾಲುಕ್ಯರ ಸ್ನೇಹ-ವಿರಸ

ಒಂದು ಸಲ ಉತ್ತರದ ಮಾಳವರು ಚಾಲುಕ್ಯರ ಮೇಲೆ ಯುದ್ಧಕ್ಕೆ ಬಂದರು. ಚಾಲುಕ್ಯರ ಸೇನೆ ಸೋತು ಹಿಮ್ಮೆಟ್ಟಿತು. ಚಕ್ರವರ್ತಿ ಆರನೇ ವಿಕ್ರಮಾದಿತ್ಯ ಸಾಮಂತರಾದ ಹೊಯ್ಸಳರ ಸಹಾಯವನ್ನು ಕೇಳಿದ. ಆಗ ರಾಜನಾಗಿದ್ದ ವಿನಯಾದಿತ್ಯ ಮುದುಕನಾಗಿದ್ದ. ಆದ್ದರಿಂದ ಮಗ ಎರೆಯಂಗನನ್ನು ಸೇನೆಯೊಂದಿಗೆ ಕಳಿಸಿದ. ಬಹುದೂರದ ಪ್ರಯಾಣ ಮಾಡಿ ದಣಿದರೂ ಲೆಕ್ಕಿಸದೆ ಹೊಯ್ಸಳ ಸೇನೆ ಮಾಳವರ ಧಾರಾನಗರವನ್ನು ಮುತ್ತಿ ಧ್ವಂಸ ಮಾಡಿತು.

ವಿಕ್ರಮಾದಿತ್ಯನ ಮೆಚ್ಚುಗೆಯನ್ನು ಸಂಪದಾದಿಸಿದ ಎರಡಯಂಗದೇವ ಚಾಲುಕ್ಯರ ಮಹಾಮಂಡಲೇಶ್ವರನಾದ. ಹೊಯ್ಸಳ ಸೇನೆಗೆ ಅಪಾರವಾದ ಕೀರ್ತಿಯೂ ಅನುಭವವೂ ದೊರೆತು ಆತ್ಮವಿಶ್ವಾಸವುಂಟಾಯಿತು.

ಹೊಯ್ಸಳರ ಹೆಚ್ಚಳವನ್ನು ಸಹಿಸದ ಇತರ ಸಾಮಂತರು ಅವರ ಮೇಲೆ ನೂರಾರು ಚಾಡಿ ಹೇಳಿ ಚಕ್ರವರ್ತಿಯ ಮನಸ್ಸನ್ನು ಕೆಡಿಸಿದರು. ಹೊಯ್ಸಳರ ಅತಿಯಾದ ಪ್ರಾಬಲ್ಯ ತನಗೇ ಅಪಾಯಕಾರಿ ಎಂದು ಕೊಂಡು ವಿಕ್ರಮಾದಿತ್ಯ ದೂರದೃಷ್ಟಿಯಿಲ್ಲದ ಕುಟಿಲ ಸಾಮಂತರನ್ನು ಎತ್ತಿಕಟ್ಟಿದ. ವಿನಯಾದಿತ್ಯ ಎರೆಯಂಗರು ಬಹಳ ನೊಂದುಕೊಂಡರು. ಬಿಸಿರಕ್ತದ ತರುಣರಾದ ಬಲ್ಲಾಳ, ಬಿಟ್ಟಿದೇವರಿಗಂತೂ ಚಾಲುಕ್ಯರ ಹಂಗು ತೊರೆದು ಸ್ವತಂತ್ರರಾಗಬೇಕು ಎಂಬ ಆಕಾಂಕ್ಷೆ ಬೆಳೆಯತೊಡಗಿತು.

ರಾಜ ಬಿಟ್ಟಿದೇವ

ಕ್ರಿ.ಶ. ೧೧೦೦ ರಲ್ಲಿ ಎರೆಯಂಗ ಮರಣಹೊಂದಿದ. ಯುವರಾಜ ಬಲ್ಲಾಳನು ಒಂದನೇ ಬಲ್ಲಾಳನೆಂಬ ಹೆಸರಿನಲ್ಲಿ ಸಿಂಹಾಸನವೇರಿದ.

ಚಾಲುಕ್ಯರ ಪ್ರೋತ್ಸಾಹದಿಂದ ಶಾಂತಾರ ಜಗದ್ದೇವ ದೋರಸಮುದ್ರವನ್ನು ಆಕ್ರಮಣ ಮಾಡಿದ. ಬಲ್ಲಾಳ, ಬಿಟ್ಟಿದೇವ ಇಬ್ಬರೂ ರಾಜಧಾನಿ ವೇಲೂರನ್ನು ಉದಯಾದಿತ್ಯನ ರಕ್ಷಣೆಯಲ್ಲಿ ಬಿಟ್ಟು ದೋರಸಮುದ್ರವನ್ನು ಬಿಡಿಸಿಕೊಳ್ಳಲು ಬಂದರು. ಭಯಂಕರವಾದ ಕದನವಾಯಿತು. ಹೊಯ್ಸಳ ಸೋದರರ ಪರಾಕ್ರಮದ ಪೆಟ್ಟನ್ನು ತಾಳಲಾರದೆ ಜಗದ್ದೇವನ ಸೇನೆ ಪಲಾಯನ ಮಾಡಿತು.

ಇದಾದ ಕೆಲವೇ ದಿನಗಳಲ್ಲಿ ಬಲ್ಲಾಳ ಮರಣ ಹೊಂದಿದ.

ಪ್ರೀತಿಯ ಅಣ್ಣನನ್ನು ಕಳೆದುಕೊಂಡ ಬಿಟ್ಟಿದೇವ ಮಗುವಿನಿಂತೆ ಬಿಕ್ಕಿ ಬಿಕ್ಕಿ ಅತ್ತ. ಜಗತ್ತೇ ಶೂನ್ಯವೆನಿಸಿತು.

 

ರಾಮಾನುಜಾಚಾರ್ಯರ ಶಿಷ್ಯ

ಶ್ರೀವೈಷ್ಣವ ಮತದ ಆಚಾರ್ಯರು ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿದ್ದರು. ಅವರು ಮಹಾಮಹಿಮರೆಂದು ಬಿಟ್ಟಿದೇವ ಕೇಳಿದ್ದ. ಅವರ ತೇಜಸ್ಸನ್ನು ಕಂಡಿದ್ದ, ಲೋಕಾನುಕಂಪ ಕಂಡು ಗೌರವ ತಾಳಿದ್ದ.

ರಾಮಾನುಜರ ಬಳಿಗೆ ಹೋಗಿ ಬಂದರೆ ಮನಸ್ಸಿಗೆ ಏನೋ ಒಂದು ಬಗೆಯ ಅಪೂರ್ವಶಾಂತಿಯುಂಟಾಗುತ್ತಿತ್ತು. ಅದಕ್ಕಾಗಿ ಪದೇಪದೇ ಅವರ ಬಳಿ ಹೋಗಿ ಅವರ ತತ್ವಬೋಧೆಯನ್ನು ಕೇಳುತ್ತ ಕುಳಿತುಬಿಡುತ್ತಿದ್ದ. ಅವರ ಮಾತಿನಲ್ಲಿ ಸಂಜೀವಿನಿ ಇದ್ದ ಹಾಗಿತ್ತು. “ಬಿಟ್ಟಿದೇವಾ, ಕೇಶವನು ನಿನ್ನ ಕೈಯಿಂದ ಹಲವಾರು ಮಹತ್ಕಾರ್ಯಗಳನ್ನು ಮಾಡಿಸುತ್ತಾನೆ” ಎಂದು ಯತಿವರರು ನುಡಿದಾಗ ಬಿಟ್ಟಿದೇವನಲ್ಲಿ ಹೊಸ ಉತ್ಸಾಹ, ಸಾಸಿರಪಟ್ಟು ಬಲ ಬಂದ ಹಾಗಾಯಿತು.

ದಿನದಿನಕ್ಕೆ ಅವನಿಗೆ ಶ್ರೀವೈಷ್ಣವ ಧರ್ಮದಲ್ಲಿ ಒಲವು ಹೆಚ್ಚಾಗುತ್ತ ಬಂದಿತು. ಆದರೆ ಜೈನ, ಶೈವ, ವೈಷ್ಣವ ಎಂಬ ಜಾತಿಸೂಚಕ ಹೆಸರುಗಳಿಗಿಂತ ಈ ಲೋಕದ ಬಾಳನ್ನು ಹಸನುಗೊಳಿಸುವಂತಹ, ದಿನದಲಿತರ ಕಣ್ಣೀರನ್ನು ತೊಡೆಯುವಂತಹ ಧರ್ಮ ಮುಖ್ಯವಾದುದು ಎಂದು ಅವನ ಭಾವನೆ. ರಾಮಾನುಜರು ತಮಗೆ ನರಕವಾದರೂ ಚಿಂತೆಯಿಲ್ಲ, ಸಹಸ್ರಾರು ಜೀವಿಗಳು ಉದ್ಧಾರವಾದರೆ ಸಾಕು ಎಂದು ಗುರುಗಳು ತಮಗೆ ಗೋಪ್ಯವಾಗಿ ಉಪದೇಶಿಸಿದ್ದ ಅಷ್ಟಾಕ್ಷರಿ ಮಂತ್ರವನ್ನು ದೇವಸ್ತಾನದ ಗೋಪುರದ ಮೇಲೆ ನಿಂತು ಜನರಿಗೆ ಕೂಗಿ ಉಪದೇಶಿಸಿದರೆಂಬ ಸಂಗತಿಯನ್ನು ಕೇಳಿದಾಗ ಬಿಟ್ಟಿದೇವನ ಮೈ ರೋಮಾಂಚಿತವಾಯಿತು. ಶ್ರೀವೈಷ್ಣವ ದೀಕ್ಷೆಯನ್ನು ಪಡೆಯಬೇಕೆಂಬ ಗಂಭೀರ ಆಲೋಚನೆಯೂ ಬಂದಿತು.

ರಾಜನಾದ ಕೆಲವು ವರ್ಷಗಳ ನಂತರ ಬಿಟ್ಟಿದೇವ ರಾಮಾನುಜರಿಂದ ಶ್ರೀವೈಷ್ಣವ ದೀಕ್ಷೆಯನ್ನು ಪಡೆದ. ಇದಕ್ಕೆ ಯಾರ ಆಕ್ಷೇಪಣೆಯೂ ಬರುವ ಸಂಭವ ಇರಲಿಲ್ಲ. ಅವರವರ ಮನಸ್ಸಿಗೆ ಹಿಡಿಸಿದ ಧರ್ಮವನ್ನು ಅವರವರು ಅನುಸರಿಸಬಹುದೆಂಬ ಉದಾರ ಭಾವನೆಗಳೇ ಸಾಮಾನ್ಯವಾಗಿ ಜನರಲ್ಲಿದ್ದವು. ಆದುದರಿಂದ ಬಿಟ್ಟಿದೇವನ ಮತಾಂತರ ಸಾಮಾಜಿಕವಾಗಿ ಅಂತಹ ಮಹತ್ತರ ಘಟನೆಯಾಗಲಿಲ್ಲ. ವೈಯಕ್ತಿಕವಾಗಿ ಮಾತ್ರ ಅವನಿಗೆ ಅದೊಂದು ಮಹತ್ವಪೂರ್ಣವಾದ ದಿನ. “ದೇವಾಂಶ ಸಂಭೂತರಾದ ಆಚಾರ್ಯರಿಂದ ದೀಕ್ಷೆ ಪಡೆದ ನಾನು ಧನ್ಯ. ನನ್ನ ಬಾಳು ಇಂದಿಗೆ ಸಾರ್ಥಕವಾಯಿತು” ಎಂದುಕೊಂಡ. ಗುರುಗಳು ಪೂರ್ಣ ಅನುಗ್ರಹ ಮಾಡಿ ಆಶೀರ್ವದಿಸಿದರು: “ನಿನ್ನಿಂದ ನಾಡು ಎಲ್ಲ ಸೌಭಾಗ್ಯಗಳನ್ನೂ ಪಡೆದು ಬೆಳಗಲಿ”. ಗುರುಗಳು ಬಿಟ್ಟಿದೇವನಿಗೆ ವಿಷ್ಣುವರ್ಧನ ಎಂದು ನಾಮಕರಣ ಮಾಡಿದರು.

ಶಾಂತಲೆಯ ಕೈ ಹಿಡಿದ

ಇದೇ ಕಾಲದಲ್ಲಿ ನಡೆದ ಇನ್ನೊಂದು ಮಹತ್ತರ ಘಟನೆ ಎಂದರೆ ವಿಷ್ಣುವರ್ಧನ ಶಾಂತಲಾದೇವಿಯನ್ನು ಮದುವೆಯಾದುದು.

ಶಾಂತಲೆ ಮಾರಸಿಂಗಯ್ಯ, ಮಾಚಿಕಬ್ಬೆಯರ ಪ್ರೀತಿಯ ಮಗಳು. ತಾಯಿಯ ಕಡೆಯಿಂದ ಬಲದೇವ ದಂಡನಾಯಕ ಆಕೆಗೆ ತಾತನಾಗಬೇಕು. ಶ್ರೀಧರ್ಮೇಶ್ವರ ದೇವರ ವರಪ್ರಸಾದದಿಂದ ಹುಟ್ಟಿದವಳು. ಅಸಾಧಾರಣ ಚೆಲುವೆ. ಆಕೆಯ ಗುಣ, ಶೀಲ, ನಡೆ, ನುಡಿ ಯಾರೂ ಮೆಚ್ಚುವಂತಹವು. ಸಕಲ ವಿದ್ಯಾ ಪಾರಂಗತೆ. ಸಂಗೀತ, ನೃತ್ಯಗಳಲ್ಲಿ ಪರಿಣತೆ.

ವಿಷ್ಣುವರ್ಧನನೂ ರಾಜಮಾತೆಯೂ ಆಕೆಯನ್ನು ನೋಡಿದ ಕ್ಷಣದಿಂದ ಮೆಚ್ಚಿಕೊಂಡಿದ್ದರು. ಆಕೆಯ ಗಾಂಭೀರ್ಯ, ಸುಸಂಸ್ಕೃತಿ, ಧಾರ್ಮಿಕ ಮನೋಧರ್ಮಗಳನ್ನೆಲ್ಲ ಗಮನಿಸಿ ರಾಣಿಯಾಗಲು ಈಕೆಯೇ ತಕ್ಕವಳೆಂದು ನಿರ್ಣಯಿಸಿದರು. ಪ್ರಧಾನಿ ಗಂಗರಾಜನ ಸೂಕ್ತವಾದ ಸಲಹೆಯಂತೆ ವಿಷ್ಣುವರ್ಧನ ರಾಜತಂತ್ರ ಕಾರಣಗಳಿಗಾಗಿ ಶಾಂತಲೆಯ ಜೊತೆಗೆ ಬಮ್ಮಲೆ, ದೇವಕಿ, ರಾಜಲೆ, ಬಿಜ್ಜಲೆಯರೆಂಬ ನಾಲ್ಕು ಜನ ರಾಜಕುಮಾರಿಯನ್ನೂ ಮದುವೆಯಾದ. ಅವರಲ್ಲಿ ಮುಖ್ಯಳಾದವಳು. ಕಂಚಿಯ ಪಲ್ಲವ ರಾಜಕುಮಾರಿ, ಗೋವಿಂದರಾಜನ ಮಗಳು, ಬಮ್ಮಲಾದೇವಿ. ಆಕೆಯೂ ಅಪೂರ್ವ ಲಾವಣ್ಯವತಿ. ಕ್ಷತ್ರಿಯೋಚಿತ ಶಿಕ್ಷಣವನ್ನೂ ಪಡೆದಿದ್ದಳು. ಅಶ್ವಿವಿದ್ಯೆಯಲ್ಲಿ ಪ್ರವೀಣೆ.

ಆ ಕಾಲದ ಹೊಯ್ಸಳ ನಾಡಿನಲ್ಲಿ ರಾಣಿಯರು ರಾಜ್ಯಾಡಳಿತದ ಶಿಕ್ಷಣವನ್ನೂ ಪಡೆದಿರುತ್ತಿದ್ದರು. ರಾಜ್ಯಭಾರದ ಗುರುತರ ಜವಾಬ್ದಾರಿಯಲ್ಲಿ ರಾಜನಿಗೆ ಆಪ್ತ ಸಚಿವರಾಗಿ, ಕೆಲವು ಬಾರಿ ಪ್ರಾಂತಗಳ ಮಂಡಲಾಧಿಕಾರಿಗಳಾಗಿ ಇರುತ್ತಿದ್ದರು. ಬಮ್ಮಲ್ಲಾದೇವಿ ಅಸುಂಢಿ, ನೀರಗುಂದ ಪ್ರದೇಶಗಳ ಮಂಡಲಾಧಿಕಾರಿಯಾಗಿದ್ದಳು. ಪ್ರೇಮಲ ಸ್ವಭಾವದ ಆಕೆ ವೀರವನಿತೆಯೂ ಆಗಿ ದೊರೆಯ ವಿಶೇಷ ಪ್ರೀತಿಯನ್ನು ಗಳಿಸಿದ್ದಳು.

ಶಾಂತಲೆ ಪಟ್ಟದ ಮಹಾರಾಣಿಯಾಗಿದ್ದಳು. ಪತಿಯನ್ನನುಸರಿಸಿ ತಾನೂ ಶ್ರೀವೈಷ್ಣವ ಧರ್ಮ ಸ್ವೀಕಾರ ಮಾಡಿದಳು. ಪತಿಯಂತೆಯೇ ದೈವಭಕ್ತಳೂ ಪ್ರಜಾನುರಾಗಿಯೂ ಆಗಿದ್ದಳು. ಹೊಯ್ಸಳ ರಾಜ್ಯದ ಜನತೆ ಈಕೆಯನ್ನು ಕೊಂಡಾಡಿರುವಷ್ಟು ಜಗತ್ತಿನಲ್ಲಿ ಪ್ರಾಯಶ: ಯಾವ ಪ್ರಜೆಗಳೂ ಯಾವ ರಾಣಿಯರನ್ನೂ ಕೊಂಡಾಡಿಲ್ಲ.

ಗಾಯನ-ನಾಟ್ಯಗಳಲ್ಲಿ ಸಾಕ್ಷಾತ್‌ಸರಸ್ವತಿ, ತಕ್ಷಣ ಸಮಯಕ್ಕೆ ಸರಿಯದ ಮಾತನ್ನಾಡಬಲ್ಲ ಪ್ರತಿಭಾವಂತೆ, ವಿವೇಕದಲ್ಲಿ ಗುರು ಬೃಹಸ್ಪತಿಗೆ ಸಮಾನಳು, ಭಗವದ್ಭಕ್ತೆ, ದಾ ರಸಾಮೃತ ಪೂರ್ಣೆ, ಸವತಿಯರ ಮಾತ್ಸರ್ಯವನ್ನು ಪ್ರೀತಿಯಿಂದಲೇ ಹೋಗಲಾಡಿಸಿದವಳು-ಮುಂತಾಗಿ ಹತ್ತು ಹಲವು ಬಗೆಯಾಗಿ ಈಕೆಯನ್ನು ಹೊಗಳಿರುವ ಶಾಸನಗಳು ಈಗಲೂ ಇವೆ.

ಬೇಲೂರಿನ ಭಾಗ್ಯ

ಶ್ರೀವೈಷ್ಣವ ದೀಕ್ಷೆಯನ್ನು ತೆಗೆದುಕೊಂಡ ಈ ರಾಜ ದಂಪತಿಗಳು ರಾಮಾನುಜರಿಗೆ ಗುರುದಕ್ಷಿಣೆಯಾಗಿ ಏನನ್ನು ಅರ್ಪಿಸುವುದು ಎಂದು ಯೋಚಿಸತೊಡಗಿದರು. ವೇಲಾಪುರಿಯಲ್ಲಿ (ಬೇಲೂರು) ಸುಂದರವಾದ, ಶಿಲ್ಪಕಲಾ ಪೂರ್ಣವಾದ ಎರಡು ವೈಷ್ಣವ ದೇವಾಲಯಗಳನ್ನು ಕಟ್ಟಿಸುವುದೇತಕ್ಕ ಗುರುದಕ್ಷಿಣೆ ಎಂದು ತೀರ್ಮಾನಿಸಿದರು.

ಸಿಂಹಾಸನವೇರಿದ ಕೂಡಲೇ ವಿಷ್ಣುವರ್ಧನ ಯಾವುದೇ ಯುದ್ಧ ಮಾಡುವ ದುಡುಕಿಗೆ ಹೋಗಲಿಲ್ಲ. ಸ್ವತಂತ್ರವಾದ ಸಾಮ್ರಾಜ್ಯವನ್ನು ಸ್ಥಾಪಿಸಬೇಕೆಂಬ ತನ್ನ ಆಕಾಂಕ್ಷೆಯ ಸಾಧನೆಯ ಕಡೆ ಗಮನಕೊಟ್ಟ. ತನ್ನ ಸುತ್ತಮುತ್ತಲ ಚಿಕ್ಕ ಮತ್ತು ದೊಡ್ಡ ಶತ್ರುಗಳ ಬಲಾಬಲಗಳನ್ನೂ ಚಲನವಲನಗಳನ್ನೂ ತಿಳಿದು ಕಾಲಕಾಲಕ್ಕೆ ವರದಿ ಮಾಡುವ ಸಮರ್ಥ ಬೇಹುಗಾರಿಕೆಯ ಜಾಲವನ್ನು ಹರಡಿದ. ರಾಜ್ಯದ ಆಯಕಟ್ಟಿನ ಜಾಗಗಳಲ್ಲಿ ಕೋಟಿ ಕೊತ್ತಲಗಳನ್ನು ಕಟ್ಟಿಸಿ ಭದ್ರಪಡಿಸಿದ. ದಿರ್ಘಕಾಲದ ಯುದ್ಧಗಳಿಗೂ ದೂರದ ಕಠಿಣ ದಂಡಯಾತ್ರಿಗಳಿಗೂ ಬೇಕಾದ ಪರಿಕರಗಳನ್ನು ಸಂಗ್ರಹಿಸಿದ. ಎಂತಹ ದುಸ್ತರವಾದ ಸ್ಥಿತಿಯಲ್ಲೂ ಎದೆಯೊಡ್ಡಿ ನಿಲ್ಲಬಲ್ಲ ಸೈನ್ಯವನ್ನು ಸಜ್ಜುಗೊಳಿಸಿದ. ಇದೆಲ್ಲವನ್ನೂ ತಟಸ್ಥನಾಗಿರುವ ಸೋಗಿನಲ್ಲಿ ಸದ್ದಿಲ್ಲದೆ ಮಾಡಿದ.

ಸುವ್ಯವ್ಯಸ್ಥಿತವಾದ ಆಡಳಿತಕ್ಕೂ ಗಮನ ಕೊಡಲು ಈ ತಟಸ್ಥ ನೀತಿಯಿಂದ ಅನುಕೂಲವಾಯಿತು.

ಅತ್ತ ಅತ್ಯಂತ ಪ್ರತಿಭಾವಂತ ರೂವಾರಿಗಳನ್ನು ಕರೆಸಿ ಸುಂದರವಾದ ದೇಗುಲಗಳ ನಿಮಾರ್ಣ ಕೆಲಸಕ್ಕೆ ನೇಮಿಸಿದ. ದೇಗುಲ ನಿರ್ಮಾಣದ ಕೆಲಸ ನಡೆಯತೊಡಗಿತು. ದೂರದಿಂದ ಬೇಕಾದ ಕ್ಲಲುಗಳನ್ನು ತರಿಸಿದರು. ಬಳ್ಳಿಗಾಮೆಯ ದಾಸೋಜ, ಚಾವನ ಮುಖ್ಯ ಶಿಲ್ಪಿಗಳಾಗಿಯೂ ದೃಶ್ಯಪಟ್ಟಿಕೆ, ಸ್ತಂಭಗಳ ರಚನೆ, ವಿಗ್ರಹಗಳ ಕೆಲಸ, ಹೀಗೆ ಬೇರೆ ಬೇರೆ ಕೆಲಸಗಳಿಗೆ ಮಲ್ಲೋಜ, ನಾಗೋಜ, ಚಿಕ್ಕಹಂಪರೇ ಮೊದಲಾದ ಅನೇಕ ಶ್ರೇಷ್ಠ ರೂವಾರಿಗಳು ನೇಮಕಗೊಂಡರು. ರಾಣಿ ಶಾಂತಲೆಯ ಸಲಹೆಯಂತೆ ನಾಟ್ಯದ ಕೆಲವು ಸುಂದರವಾದ ಭಂಗಿಗಳಲ್ಲಿ ಶಿಲಾಬಾಲಿಕೆಯರ ವಿಗ್ರಹಗಳನ್ನು ಕಡೆದು ನಿಲ್ಲಿಸಿದರು. ನಕ್ಷತ್ರಾಕಾರದ ಜಗತಿಯಿಂದ ಹಿಡಿದು ಗೋಪುರದ ವಿಶಿಷ್ಟ ಮಾದರಿಯವರೆಗೂ ತಮ್ಮದೇ ಆದ ಶೈಲಿಯನ್ನು ಅನುಸರಿಸಿದರು. ವಿಷ್ಣುವರ್ಧನದ, ಶಾಲತೆಯರು ದೇವಸ್ಥನಾದ ನಿರ್ಮಾಣವಾಗುವಾಗ ಮತ್ತೆ ಮತ್ತೆ ಹೋಗುವರು, ಅದರ ಕೆಲಸದಲ್ಲಿ ಮೈಮರೆಯವುರ. ಲೋಕೋತ್ತರವಾದ ಅಪೂರ್ವ ಕಲಾಕೃತಿಗಳೆನಿಸಿಕೊಂಡಿರುವ ಈ ದೇಗುಲಗಳ ನಿರ್ಮಾಣಕಾರ್ಯ ೧೧೧೬ ರಲ್ಲಿ ಮುಗಿಯಿತು.

ದೇವತಾ ಪ್ರತಿಷ್ಠಾಪನೆಯ ಪುಣ್ಯ ಸಮಾರಂಭ ಪಾವಿತ್ರ್ಯ ಗಾಂಭೀರ್ಯಗಳಿಂದ ವಿಧ್ಯುಕ್ತವಾಗಿ ನಡೆಯಿತು. ವಿಷ್ಣುವರ್ಧನ ವಿಜಯನಾರಾಯಣಸ್ವಾಮಿಯ ಮೂರ್ತಿಯನ್ನೂ ಶಾಂತಲೆಯು ಚೆಲುವನಾರಾಯಣ ಸ್ವಾಮಿಯ (ಕಪ್ಪೆ ಚೆನ್ನಿಗರಾಯ) ಮೂರ್ತಿಯನ್ನೂ ಶುಭ ಮುಹೂರ್ತದಲ್ಲಿ ಪ್ರತಿಷ್ಠಾಪಿಸಿದರು. ತಿರುನಾರಾಯಣಪುರದಿಂದ ಗುರುಗಳಾದ ರಾಮಾನುಜರನ್ನು ಬೇಲೂರಿಗೆ ಬರಮಾಡಿಕೊಂಡು ರಾಜದಂಪತಿಗಳು ಸುವರ್ಣ ಪುಷ್ಪಗಳಿಂದ ಪಾದಪೂಜೆ ಮಾಡಿದರು. ಗುರುಗಳು ಆನಂದದಿಂದ ಆಶೀರ್ವಾದ ಮಾಡಿದರು. ಇವು ಇಲ್ಲಿ ಕಟ್ಟಿದ ದೇಗುಲಗಳಲ್ಲ, ಸ್ವರ್ಗದಿಂದ ಇದ್ದಕ್ಕಿದ್ದಂತೆ ಇಳಿದುಬಂದಿವೆ, ಮತ್ತೆ ಹಾರಿಹೋಗಿಬಿಡುತ್ತವೆಯೋ ಏನೋ ಎಂದು ಬೆರಗಾಗಿ ನಿಂತು ನೋಡುವ ಜನ ಮಾತಾಡಿಕೊಳ್ಳುತ್ತಿದ್ದರು.

ಶಾಂತಲೆ-ವಿಷ್ಣುವರ್ಧನರಿಗೆ ಜೀವನದಲ್ಲಿ ಒಂದು ಮಹತ್ಕಾರ್ಯ ಸಾಧನೆ ಮಡಿದ ಧನ್ಯತಾಭಾವ ಉಂಟಾಯಿತು.

ಇನ್ನೂ ತನ್ನ ಸಾಮಗ್ರಜ್ಯದ ಕನಸಿನ ಸಾಧನೆಗೆ ತೊಡಗಬಹುದು ಎಂದುಕೊಂಡ ವಿಷ್ಣುವರ್ಧನ.

ರಣಧೀರ

ಚೋಳರು ಗಂಗರ ರಾಜ್ಯದಿಂದ ಕಿತ್ತುಕೊಂಡಿದ್ದ ತಲವನಪುರ (ತಲಕಾಡು) ವನ್ನು ಹಿಂದಕ್ಕೆ ಪಡೆಯಲು ನೆಂಟರಾದ ಗಂಗರಸರು ಹೊಯ್ಸಳರ ನೆರವನ್ನು ಬಹುಕಾಲದಿಂದ ಕೇಳುತ್ತಿದ್ದರು. ಗಂಗರಸರೊಡನೆ ಸ್ನೇಹ ಸಂಧಿಯನ್ನು ಮಾಡಿಕೊಂಡು ವಿಷ್ಣುವರ್ಧನ ತಲಕಾಡನ್ನು ಗೆಲ್ಲಲ್ಲು ಸಿದ್ಧನಾದ.

ಗುಪ್ತ ಸಮಾಲೋಚನೆ ಮಾಡಿದ ಪಂಚಸಚಿವರ ಸಮಿತಿಯೂ ಯುದ್ಧವನ್ನು ಅನುಮೋದಿಸಿತು.

ತಲವನಪುರದಲ್ಲಿ ಚೋಳರ ಮಾಂಡಲೀಕನಾಗಿ ಆದಿಯಮ (ಅಡಿಗೈಮಾನ) ಆಳುತ್ತಿದ್ದ. ಬಹು ಯುಕ್ತಿಯಿಂದಲೇ ಹೊಯ್ಸಳ ರಾಜನನ್ನು ಸೋಲಿಸಬೇಕೆಂದು ಆದಿಯಮ ಸಂಚು ಹೂಡಿದ.

ಹೊಯ್ಸಳ ಸೇನೆ ನಿರಾತಂಕವಾಗಿ ತಿರುಮಕೂಡಲಿಗೆ ಬಂದು ಬೀಡುಬಿಟ್ಟಿತು. ಶತ್ರು ಕಾಲಗದ ಸೂಚನೆಯನ್ನೇ ತೋರದೆ ತಟಸ್ಥನಾಗಿರುವುದು ಸಂಶಯವನ್ನುಂಟು ಮಾಡಿತು. ಬೇರೆ ದಿಕ್ಕಿನಿಂದ ಆದಿಯಮನ ಗೆಳೆಯರು ನರಸಿಂಹವರ್ಮ, ದಾಮೋದರರು ಸೇನಾ ಸಮೇತ ಬರುತ್ತಿರುವ ಸುದ್ದಿಯೂ ತಿಳಿಯಿತು. ಸಮರ ತಂತ್ರದಲ್ಲಿ ನುರಿತ ವಿಷ್ಣುವರ್ಧನನಿಗೆ ಶತ್ರುವಿನ ಸಂಚು ಕ್ಷಣಾರ್ಧದಲ್ಲಿ ಹೊಳೆಯಿತು. ಅದಕ್ಕೆ ತಕ್ಕ ಮರುತಂತ್ರ ಹೂಡಿದ. ಸೇನೆಯನ್ನು ಎರಡು ಭಾಗವಾಗಿ ವಿಂಗಡಿಸಿದ. ಒಂದನ್ನು ಗಂಗರಾಜನ ಸೇನಾಧಿಪತ್ಯದಲ್ಲಿ ತಲವನಪುರವನ್ನು ಮುತ್ತಬೇಕು. ಇನ್ನೊಂದು ಉದಯಾದಿತ್ಯನ ಅಧೀನದಲ್ಲಿ ತಿರುಮಕೂಡಲಲ್ಲೇ ನಿಂತು ನರಸಿಂಹವರ್ಮನ ಸೇನೆಯನ್ನು ದಾರಿಯಲ್ಲೇ ತಡೆದು ನಾಶ ಮಾಡಬೇಕು. ಸಮೀಪದ ಕಾಡಿನಲ್ಲಿ ವಿಷ್ಣುವರ್ಧನನ ವಿಶೇಷ ಅಶ್ವಪಡೆ ಬಿಲ್ಗಾರರ ಪಡೆಗಳು ಅಡಗಿದ್ದು ಸಮಯ ನೋಡಿ ನೆರವಿಗೆ ಬರಬೇಕು. ಹೀಗೆ ವ್ಯವಸ್ಥೆ ಮಾಡಿದ.

ವಿಷ್ಣುವರ್ಧನ, ಶಾಂತಲೆಯರಿಗೆ ಬೇಲೂರು ದೇವಾಲಯಗಳ ನಿರ್ಮಾಣದಲ್ಲಿ ತುಂಬ ಆಸಕ್ತಿ.

ಕಾವೇರಿಯಲ್ಲಿ ಆಗ ತುಂಬಿದ ಪ್ರವಾಹ. ಅದನ್ನು ನೆಚ್ಚಿ ನಿಶ್ಚಿಂತನಾಗಿದ್ದ ಆದಿಯಮ. ರಾತ್ರೋರಾತ್ರಿ ತುಂಬಿದ ಹೊಳೆ ದಾಟಿ ಬೆಳಗಾಗುವ ವೇಳೆಗೆ ತಲವನಪುರದ ಕೋಟೆಯನ್ನು ಮುತ್ತಿದ ಹೊಯ್ಸಳರ ಪ್ರಚಂಡ ಸೇನೆಯನ್ನು ನೋಡಿ ಅವನ ಎದೆ ನಡುಗಿತು. ಗಂಗರಾಜ ಆನೆಗಳ ಸಹಾಯದಿಂದ ಕೋಟೆಯ ಬಾಗಿಲನ್ನು ಒಡೆಸಿ ಸೇನೆಯನ್ನು ಒಳಕ್ಕೆ ನುಗ್ಗಿಸಿದ. ಘೋರವಾದ ಯುದ್ಧವಾಯಿತು. ಎರಡೇ ದಿನಗಳಲ್ಲಿ ಆದಿಯಮ ಸೋತು ಕೋಲಾಲದ ಮಾರ್ಗವಾಗಿ ಕಂಚಿಗೆ ಓಡಿಹೋದ.

ಇತ್ತ ತಿರುಮಕೂಡಲಲ್ಲಿ ಎಣಿಕೆಯಂತೆ ಎಲ್ಲವೂ ನಡೆಯಿತು. ನರಸಿಂಹವರ್ಮ, ದಾಮೋದರರು ತಮ್ಮನ್ನು ಹೊಯ್ಸಳ ಸೇನೆ ದಾರಿಯಲ್ಲೇ ತಡೆಗಟ್ಟೀತೆಂದು ನಿರೀಕ್ಷಿಸಿರಲಿಲ್ಲ. ಆದರೂ ಎದೆಗೆಡದೆ ಹೋರಾಡಿದರು. ಆದರೆ ಸೋತುಹೋದರು. ತಲಕಾಡು ವಿಜಯದ ನೆನಪಿಗೆ ತಿರುಮಕೂಡಲಲ್ಲಿ ಕೀರ್ತಿನಾರಾಯಣ ದೇಗುಲ ನಿರ್ಮಾಣಕ್ಕೆ ಆಜ್ಞೆಮಾಡಿ, ಗಂಗರಾಜ್ಯದಲ್ಲಿ ಹೊಯ್ಸಳ ಆಡಳಿತದ ವ್ಯವಸ್ಥೆಯ ಹೊಣೆಯನ್ನು ಗಂಗರಾಜನಿಗೆ ವಹಿಸಿ ವಿಷ್ಣುವರ್ಧನ ರಾಜಧಾನಿಗೆ ಹಿಂತಿರುಗಿದ.

ತಲಕಾಡ ವಿಜಯದಿಂದ ವಿಷ್ಣುವರ್ಧನನ ಕೀರ್ತಿ ಹೆಚ್ಚಿತು. “ವೀರಸಾಹಸ ಗಂಗ” “ತಲಕಾಡುಗೊಂಡ” ಎಂದು ಬಿರುದಾಂಕಿತನಾದ, ಆದರೆ ವಿಜಯದ ಶ್ರೇಯಸ್ಸೆಲ್ಲ ಸಲ್ಲಬೇಕಾದುದು ಗಂಗರಾಜ ಮತ್ತು ಕೇತನಾಯಕರಿಗೆ ಎಂದು ರಾಜಧಾನಿ ದೋರ ಸಮುದ್ರದಲ್ಲಿ ನಡೆದ ವಿಜಯೋತ್ಸವದಲ್ಲಿ ಅವರಿಗೆ ಬಹುಮಾನ, ಪ್ರಶಸ್ತಿಗಳನ್ನಿತ್ತು ಸನ್ಮಾನಿಸಿದ. ಅವನ ತಮ್ಮ ಉದಯಾದಿತ್ಯನ ಮಗಳು ತೀರಿಕೊಂಡಿದ್ದಳು. ಅವಳ ಆತ್ಮಶಾಂತಿಗಾಗಿ ಗ್ರಾಮಗಳನ್ನು ದಾನಮಾಡಿ ಒಂದು ಕೆರೆ ಮತ್ತು ಒಂದು ಬಸದಿಯನ್ನು ಕಟ್ಟಿಸಿದ.

ದಕ್ಷಿಣದ ದಿಗ್ವಿಜಯ

ಅನಂತರ ದಕ್ಷಿಣದ ದಿಗ್ವಿಜಯಕ್ಕೆ ಹೊರಟ. ಅನೇಕ ಪ್ರದೇಶಗಳನ್ನು ಗೆದ್ದು ರಾಮೇಶ್ವರದವರೆಗೂ ಧಾವಿಸಿ ಹೊಯ್ಸಳ ವಿಜಯ ಪತಾಕೆಯನ್ನು ಮೆರೆಸಿದ.

ಭಾಗ್ಯದ ಮೇಲೆ ಭಾಗ್ಯವೊದಗಿದಂತೆ ವಿಷ್ಣುವರ್ಧನ ಶಾಂತಲೆಯರಿಗೆ ರೂಪದಲ್ಲಿ ಅವರ ಪಡಿಯಚ್ಚು ಎಂಬಂತಹ ಗಂಡು ಮಗು ಹುಟ್ಟಿತು. ವಿಶೇಷ ಉತ್ಸವಗಳೂ ಶೈವ, ಜೈನ, ವೈಷ್ಣವ ದೇಗುಲಗಳಲ್ಲಿ ವಿಶೇಷ ಪೂಜೆ, ಸೇವಾರ್ಥಗಳೂ ನಡೆದವು. ಮಗುವಿಗೆ ವೀರ ಬಲ್ಲಾಳನೆಂದು ಹೆಸರಿಟ್ಟರು.

ದಕ್ಷಿಣ ದೇಶಗಳನ್ನೆಲ್ಲ ಗೆದ್ದು ಬಂದ ವಿಷ್ಣುವರ್ಧನನಿಗೆ ಉತ್ತರದ ದೇಶಗಳನ್ನೂ ಹೀಗೆ ಗೆಲ್ಲಬೇಕೆಂಬ ಹಂಬಲ ಬಲಿಯಿತು. ಅಶ್ವಮೇಧ ಯಾಗ ಮಾಡಲು ನಿರ್ಧರಿಸಿ ಅದಕ್ಕೆ ಏರ್ಪಾಟನ್ನೂ ಮಾಡತೊಡಗಿದ.

ಪ್ರಜೆಗಳ ರಕ್ಷೆ

ಈ ನಡುವೆ ಒಂದು ಸಂಗತಿ ನಡೆಯಿತು. ಒಂದು ದಿನ ದೊರೆ ಅರಮನೆಗೆ ಪುಷ್ಪಗಿರಿ ಆಶ್ರಮದ ಗುರುಕುಲದಲ್ಲಿ ಆಗತಾನೆ ವಿದ್ಯಾಭ್ಯಾಸವನ್ನು ಮುಗಿಸಿದ ಇಬ್ಬರು ಅಣ್ಣ-ತಮ್ಮಂದಿರನ್ನು ಬರಮಾಡಿಕೊಂಡ. ಹಣೆಯಮೇಲೆ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ಶುಭ್ರವಸ್ತ್ರಧಾರಿಗಳಾಗಿ ವಿನಯದಿಂದ ನಮಸ್ಕರಿಸಿ ನಿಂತ ಆ ತೇಜಸ್ವಿ ತರುಣರನ್ನು ಕುರಿತು ದೊರೆ, ” ನಿಮ್ಮ ವಿದ್ಯಾಭ್ಯಾಸವೆಲ್ಲ ಮುಗಿದು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವಿರೆಂದು ಕೇಳಿ ಸಂತೋಷವಾಗಿದೆ. ನಿಮ್ಮ ತಾಯಿತಂದೆ ಯಾರು? ಮುಂದೆ ಏನು ಮಾಡಬೇಕೆಂದಿರುವಿರಿ?” ಎಂದು ಕೇಳಿದ.

ಅವರಲ್ಲಿ ಅಣ್ಣ ಹೇಳಿದ: “ಮಹಾಪ್ರಭೂ, ನಮ್ಮ ತಂದೆತಾಯಿ ಯಾರೆಂದು ತಿಳಿಯುವ ಮುನ್ನವೇ ಅವರು ತೀರಿಹೋಗಿ ಅನಾಥರಾಗಿದ್ದೆವು. ತಿಳುವಳಿಕೆ ಬಂದಾಗ ಗುರುಕುಲದಲ್ಲಿದ್ದೆವು. ಅದು ಯಾರೋ ಪುಣ್ಯಾತ್ಮ ತನ್ನ ಹೆಸರನ್ನೂ ತಿಳಿಸದೆ ನಮ್ಮ ಎಲ್ಲ ವೆಚ್ಚಕ್ಕೂ ಹಣ ಕಳಿಸುತ್ತಿದ್ದನಂತೆ. ನಮ್ಮ ವಿದ್ಯಾಭ್ಯಾಸ ಮುಗಿದ ದಿನ ಗುರುಕುಲಕ್ಕೆ ಹಿಂದೆ ಸೇರಿಸಿಹೋಗಿದ್ದವನೇ ಬಂದು ಗುರುದಕ್ಷಿಣೆಯಾಗಿ ನೂರು ಗದ್ಯಾಣಗಳನ್ನು ಕೊಟ್ಟು ನಮ್ಮನ್ನಿಲ್ಲಿಗೆ ಕರೆತಂದ. ನಮಗೆ ಹತ್ತಿರದ ನೆಂಟರಾರೂ ಇಲ್ಲ. ಈಗ ಎಲ್ಲಾದರೂ ಉದ್ಯೋಗ ಹುಡುಕಬೇಕು.”

ದೊರೆ ನಸುನಕ್ಕು, “ನಿಮ್ಮ ತಂದೆ ಇದೇ ಊರಿನ ದೊಡ್ಡ ವರ್ತಕರಾಗಿದ್ದರೆಂದು ನಿಮಗೆ ತಿಳಿದಿಲ್ಲ.” ಎಂದು ಹೇಳುತ್ತ ಸೇವಕರಿಗೆ ಸಂಜ್ಞೆ ಮಾಡಿದ. ಅವರು ಒಳಗಿನಿಂದ ಚಿನ್ನದ ನಾಣ್ಯಗಳು ಮತ್ತು ಆಭರಣಗಳು ತುಂಬಿದ ಎರಡು ಪೆಟ್ಟಿಗೆಗಳನ್ನು ಹೊತ್ತು ತಂದಿಟ್ಟರು. ಮಹಾರಾಜನು ಅಣ್ಣನ ಕೈಯಲ್ಲಿ ಹಳೆಯ ಪತ್ರಗಳ ಒಂದು ಕಡತವನ್ನು ಇಡುತ್ತ, “ಇಗೊ, ಇವೇ ನಿಮ್ಮ ತಂದೆ ಮಲ್ಲಣ್ಣಶೆಟ್ಟರ ಭೂಮಿ-ಕಾಣಿ, ಆಸ್ತಿ-ಪಾಸ್ತಿಗಳ ದಾಖಲೆ ಪತ್ರಗಳು. ಈ ಹಣ-ಆಭರಣಗಳು ಸಹ ಅವರವೇ. ನಾನು ಯಾದವಪುರದಲ್ಲಿದ್ದಾಗ ಒಮ್ಮೆ ಅವರು ಇದ್ದಕ್ಕಿದ್ದಂತೆ ಬಂದು ಏಕಾಂತದಲ್ಲಿ ಹಸುಳೆಗಳಾದ ನಿಮ್ಮನ್ನೂ, ಈ ಪೆಟ್ಟಿಗೆ, ಕಾಗದ-ಪತ್ರಗಳನ್ನೂ ಒಪ್ಪಿಸಿ, “ಈ ಪಾಂಡುರೋಗ ಯಾವ ಕ್ಷಣದಲ್ಲಿ ಬಲಿ ತೆಗೆದುಕೊಳ್ಳುತ್ತೇ! ಈ ಹಸುಳೆಗಳನ್ನು ಪ್ರಭುಗಳ ಮಡಿಲಿಗೆ ಹಾಕಿದ್ದೇನೆ. ಇವರ ಶಿಕ್ಷಣದ ಭಾರ ತಮ್ಮದು. ಯೋಗ್ಯರಾಗಿ ಬೆಳೆದರೆ ಪ್ರಾಪ್ತ ವಯಸ್ಸಿನಲ್ಲಿ ಇವರಿಗೆ ಈ ಆಸ್ತಿಯನ್ನು ಕೊಡಿ, ಯೋಗ್ಯರಾಗಲಿಲ್ಲ, ಈ ಸಂಪತ್ತೆಲ್ಲ ಪ್ರಭುಗಳಿಗೆ ಸೇರಿಲಿ, ಲೋಕಹಿತಕ್ಕೆ ವಿನಿಯಯೋಗವಾಗಲಿ” ಎಂದರು ಕಣ್ಣೀರು ಗರೆದು. ಅದಾದ ಕೆಲವು ದಿನಗಳಲ್ಲೇ ತೀರಿಕೊಂಡರು. ಅವರಿಗೆ ಕೊಟ್ಟ ಮಾತನ್ನು ದೇವರ ಕೃಪೆಯಿಂದ ನಡೆಸಿದ್ದೇನೆ. ನಿಮ್ಮ ತಂದೆಯ ಈ ಎಲ್ಲ ಸಂಪತ್ತೂ ಈಗ ನಿಮ್ಮದು” ಎಂದನು.

"ನಿಮ್ಮ ತಂದೆಯ ಈ ಎಲ್ಲ ಸಂಪತ್ತೂ ನಿಮ್ಮದು."

ಆ ಅಣ್ಣ, ತಮ್ಮ – ಮಲ್ಲಿಕಾರ್ಜುನ, ನಂದೀಶವಿಸ್ಮಿತರಾಗಿ ನಿಂತರು. ಬಳಿಕ ಕೃತಜ್ಞತೆಯಿಂದ ಚಕ್ರವರ್ತಿಗೆ ತಲೆಬಾಗಿ ನಮಸ್ಕರಿಸಿದರು.

ದೋರಸಮುದ್ರದ ಪ್ರಸಿದ್ಧ ರತ್ನಪಡಿ ವ್ಯಾಪಾರಿಗಳಾಗಿ ಎಂದೆಂದೂ ಹೊಯ್ಸಳ ಸಿಂಹಾಸನಕ್ಕೆ ನಿಷ್ಠರಾಗಿ ನಡೆದುಕೊಂಡರು.

ಮತ್ತೆ ಯುದ್ಧ

ವಿಷ್ಣುವರ್ಧನ ಅಶ್ವಮೇಧಯಗಕ್ಕೆ ಸಿದ್ಧವಗುತ್ತಿದ್ದಾನೆಂದು ಕೇಳಿದ ಚಾಲುಕ್ಯ ಚಕ್ರೇಶ್ವರ ಆಕ್ರೋಶಗೊಂಡ. ಹೇಗಾದರೂ ಮಾಡಿ ಹೊಯ್ಸಳರ ಬಲವನ್ನು ಮುರಿಯಬೆಕೆಂದು ಕೆಲವು ಸಾಮಂತರನ್ನು ಪ್ರಚೋದಿಸಿದ. ಹನ್ನೆರಡು ಜನ ಸಾಮಂತರ ಒಕ್ಕೂಟ ರಚಿತವಾಯಿತು. ಒಕ್ಕೂಟದ ಪ್ರಚಂಡ ಸೇನೆ ಹೊಯ್ಸಳ ನಾಡಿಗೆ ದಂಡೆತ್ತಿ ಬಂದಿತು.ಅವರ ಸೇನೆ ಕಣ್ಣೇಗಾಲದಲ್ಲಿ (ಹಾಸನದ ಬಳಿ) ತಂಗಿತು. ಮೊದಲೇ ಸಿದ್ಧವಾಗಿದ್ದ ಹೊಯ್ಸಳ ಸೇನೆ ಅನಿರೀಕ್ಷಿತವಾಗಿ ರಾತ್ರಿ ಕತ್ತಲಲ್ಲಿ ಬಂದು ಶತ್ರು ಶಿಬಿರದ ಮೇಲೆ ಬಿದ್ದಿತು. ಒಕ್ಕೂಟದ ಸೇನೆ ಸೋತು ಹೋಯಿತು.

ಯುವರಾಜ ಉದಯಾದಿತ್ಯ, ಸರ್ವಾಧಿಕಾರಿ ಕುವರ ವಿಷ್ಣು, ಡಣಾಯಕ ಬೊಪ್ಪಣರು ರಾಜ್ಯ ರಕ್ಷಣೆಯನ್ನೂ ಐದು ಜನ ರಾಣಿಯರು ವಿವಿಧ ಮಂಡಲಗಳ ಆಡಳಿತವನ್ನೂ ಪ್ರಧಾನಿ ಗಂಗರಾಜನ ಮಾರ್ಗದರ್ಶನದಲ್ಲಿ ನೋಡಿಕೊಳ್ಳಬೇಕೆಂಬ ವ್ಯವಸ್ಥೆಯಾಯಿತು. ವಿಷ್ಣುವರ್ಧನ ನಿಶ್ಚಿಂತನಾಗಿ ಒಂದು ಶುಭಮುಹೂರ್ತದಲ್ಲಿ ಚತುರಂಗ ಬಲ ಸಮೇತ ವಿಜಯ ಯಾತ್ರೆ ಹೊರಟನು.

ಮೊದಲು ಉಚ್ಚಂಗಿಯ ಪಾಂಡ್ಯರ ಮೇಲೆ ಬಿದ್ದ. ದುಮ್ಮೆಯ ಬಳಿ ಭಯಂಕರ ಯುದ್ಧವಾಯಿತು. ಹೊಸದಾಗಿ ನೇಮಿತನಾಗಿದ್ದ ಡಣಾಯಕ ಚಾಮದೇವ ದೊರೆ ತನ್ನಲ್ಲಿ ಗುರುತಿಸಿದ್ದ ಶಕ್ತಿಸಾಮರ್ಥ್ಯಗಳು ಸುಳ್ಳಲ್ಲ ಎಂದು ತೋರಿಸಿ ಮಹಾಶೌರ್ಯದಿಂದ ಹೋರಾಡಿ ಬಂಕಾಪುರ, ಉಚ್ಚಂಗಿ ದುರ್ಗಗಳನ್ನು ಗೆದ್ದು ಪ್ರಭುವಿಗೆ ಒಪ್ಪಿಸಿದ. ವಿಷ್ಣುವರ್ಧನ ಅವನಿಗೆ “ಸುಭಟ” ಪ್ರಶಸ್ತಿಯಿತ್ತು ಸನ್ಮಾನಿಸಿದ. ವಿಷ್ಣುವರ್ಧನನು ಅನೇಕ ವಿಜಯಗಳನ್ನು ಸಾಧಿಸಿ ಹಾನುಂಗಲ್ಲಿನ ಕಡೆ ಸಾಗಿದ.

ಅಭೇದ್ಯವಾದ ಹಾನುಂಗಲ್ಲು ದುರ್ಗವನ್ನು ಗೆಲ್ಲುವುದು ಸುಲಭವಾಗಿರಲಿಲ್ಲ. ಲಗ್ಗೆ ಹತ್ತುವುದೇ ಸಾಧ್ಯವಾಗಲಿಲ್ಲ. ತಿಂಗಳುಗಟ್ಟಲೆ ಮಾಡಿದ ನಾನಾ ಪ್ರಯತ್ನಗಳೆಲ್ಲ ವಿಫಲವಾಗಿ ವಿಷ್ಣುವರ್ಧನ ಮಹಾಚಿಂತೆಗೀಡಾದ. ಕಡೆಗೆ ಕುಟಿಲ ತಂತ್ರವನ್ನೇ ಆಶ್ರಯಿಸಬೇಕಾಯಿತು.

ಹೊಯ್ಸಳ ಸೈನಿಕರು ಹಳ್ಳಿಗರಾಗಿ ಮಾರುವೇಷ ಹಾಕಿ ಕಳ್ಳತನದಿಂದ ಮದ್ಯವನ್ನು ಸಾಗಿಸುತ್ತಿರುವಂತೆ ನಟಿಸಿ ತೈಲಪದ ಗುಪ್ತಚರರ ಕೈಗೆ ಸಿಕ್ಕಿಕೊಂಡರು. ಹೊಯ್ಸಳ ಶಿಬಿರಕ್ಕೆ ಹೋಗುತ್ತಿದ್ದ ಮದ್ಯದ ಪೀಪಾಯಿಗಳು ದುರ್ಗದೊಳಕ್ಕೆ ಹೋದವು. ಕೊಂಚ ಕುಡಿದರೂ ಭಾರಿ ಮತ್ತು ಬರುವಂತಹ ಆ ಮದ್ಯ ಹೊಯ್ಸಳರ ವಿಶೇಷ ತಯಾರಿಕೆ. ವಿಷ್ಣುವರ್ಧನನ ಎಣಿಕೆಯಂತೆ, ರಾತ್ರಿ ಮೈಯೆಲ್ಲ ಕಣ್ಣಾಗಿ ಕಾಯುತ್ತಿದ್ದ ದುರ್ಗದ ರಕ್ಷಕರೂ ಕಾವಲ ಬಿಲ್ಗಾರರೂ ಮದ್ಯದ ರುಚಿ ನೊಡಿದರು. ತಂತ್ರ ಫಲಿಸಿತು. ನಡುರಾತ್ರಿ ಹೊಯ್ಸಳರ ಆಯ್ದ ವೀರರಪಡೆ ಸದ್ದಿಲ್ಲದೆ ಕೋಟೆಗೆ ಲಗ್ಗೆ ಹತ್ತಿತು. ಬೆಳಗಾಗುವುದರಲ್ಲಿ ಹೊಯ್ಸಳ ವಿಜಯ ಪತಾಕೆ ಹಾನುಂಗಲ್ಲಿನ ದುರ್ಗದ ಮೇಲೆ ಹಾರಾಡುತ್ತಿತ್ತು.

ಕೊಂಕಣ, ನಿಡುಗಲ್ಲು, ಬವಾಸಿ, ಬೆಳುವೊಲ, ಹಾನುಂಗಲ್ಲು, ಪುಲಿಗೆರೆ ಪ್ರದೇಶಗಳೆಲ್ಲ ಹೊಯ್ಸಳರ ಅಧೀನವಾದವು. ಮೂಂದೆ ರಾಯಚೂರು ದುರ್ಗವನ್ನೂ ಗೆದ್ದು ಕೃಷ್ಣಾ ನದಿಯಲ್ಲಿ ವಿಷ್ಣುವರ್ಧನ ತನ್ನ ರಕ್ತಸಿಕ್ತ ಕತ್ತಿಯನ್ನು  ಕಾಂಬೋಜಿ ಕುದುರೆಯ ಮೈಯನ್ನೂ ತೊಳೆದ. ಮೂರು ವರ್ಷಗಳ ಈ ಚೈತ್ರ ಯಾತ್ರೆಯನ್ನು ಮುಗಿಸಿ ದೋರಸಮುದ್ರಕ್ಕೆ ಹಿಂತಿರುಗಿದ.

ಅಲ್ಲಿ ಆತನಿಗೆ ಜನತೆಯ ಅದ್ಭುತವಾದ ಸ್ವಾಗತ ಕಾದಿತ್ತು. ಎಲ್ಲೆಲ್ಲೂ ತಳಿರು-ತೋರಣಗಳ ಅಲಂಕಾರ. ಸಂತೋಷ-ಸಂಭ್ರಮ. ಅರಮನೆಯಲ್ಲಿ ಐದು ಜನ ರಾಣಿಯರೂ ಕೂಡಿ ಮುತ್ತಿನ ಆರತಿ ಎತ್ತಿದರು.

ತಾನು ಯುದ್ಧ ನಿರತನಾದಾಗ ರಾಜ್ಯದ ಶಾಂತಿ-ನೆಮ್ಮದಿಗಳನ್ನು ಕಾಪಾಡಿ ಚೆನ್ನಾಗಿ ನೋಡಿಕೊಂಡ ಸೋದರ, ರಾಣಿಯರು ಮತ್ತು ಅಮಾತ್ಯರನ್ನು ಮೆಚ್ಚಿ ವಿಷ್ಣುವರ್ಧನ ಮನಸಾರೆ ಅಭಿನಂದಿಸಿದ. “ಶಾಂತಿಯನ್ನು ಕದಡುವ ವಿಪತ್ತೊಂದು ನಡುವೆ ಎರಗಿ ಬಂದಿತ್ತು ಅಪ್ಪಾಜಿ. ಅದರ ವಿವರ ಆಮೇಲೆ ಹೇಳುವೆ” ಎಂದ ಕುವರ ವಿಷ್ಣು.

ಗುರು ಶುಭಚಂದ್ರರು, “ಮಹಾರಾಜ, ನಿನ್ನ ಐದು ಜನ ರಾಣಿಯರೂ ಪಂಚ ರತ್ನಗಳು. ಎಂತಹ ಪ್ರೀತಿ ಸೌಹಾರ್ದಗಳಿಂದ ಸಹಕರಿಸಿ ಆಡಳಿತ ನಡೆಸಿದರು! ಇದಕ್ಕೆಲ್ಲ ಸೂತ್ರಧಾರಿಣಿ ಶಾಂತಲಾದೇವಿ. ತನ್ನ ಪ್ರೇಮದಿಂದಲೇ ಎಲ್ಲರನ್ನೂ ಒಟ್ಟುಗೂಡಿಸಿದ್ದಳು. ಇವರು ಸವತಿಯರಾಗಿರದೆ ಒಡಹುಟ್ಟಿದವರಾಗಿದ್ದರು. ಆದುದರಿಂದಲೇ ಶ್ರವಣಬೆಳಗೊಳದ ಹೊಸಬಸದಿಗೆ ಶಾಂತಲೆಯ ನೆನಪಿಗೆ “ಸವತಿಗಂಧವಾರಣ ಬಸದಿ” ಎಂದು ಹೆಸರು ಕೊಟ್ಟಿದ್ದೇವೆ” ಎಂದರು.

ಪ್ರತಿ ಶುಕ್ರವಾರ ರಾಣಿ ಶಾಂತಲೆ ಓಲಗದಲ್ಲಿ ಕುಳಿತು ಪ್ರಜೆಗಳ ಕಷ್ಟ-ಸುಖ ವಿಚಾರಿಸಿ ವ್ಯಾಜ್ಯಗಳೇನಾದರೂ ಇದ್ದರೆ ಕೇಳಿ ಧರ್ಮಸಮ್ಮತವಾಗಿ ತೀರ್ಪು ಕೊಡುತ್ತಿದ್ದಳೆಂದು ಸಚಿವರೊಬ್ಬರು ವರದಿಯೊಪ್ಪಿಸಿದರು. ಪ್ರಜಾ ಮುಖಂಡರು, “ನಾವು ತಾಯಿ ಮಡಿಲಲ್ಲಿದ್ದಂತೆ ಸುಖವಾಗಿದ್ದೆವು, ಪ್ರಭುಗಳು ದಿಗ್ವಿಜಯಿಗಳಾಗಿ ಬೇಗ ಹಿಂತಿರುಗಲೆಂಬುದೊಂದೇ ಚಿಂತೆಯಾಗಿತ್ತು” ಎಂದು ನಿವೇದಿಸಿಕೊಂಡರು. ವಿಷ್ಣುವರ್ಧನನಿಗೆ ಇವನ್ನೆಲ್ಲ ಕೇಳಿ ತನ್ನವರ ಬಗ್ಗೆ ಅತೀವ ಹೆಮ್ಮೆಯಾಯಿತು.

ರಾಜನಿಲ್ಲದಾಗ ವಿಪತ್ತು

ಓಲಗದಲ್ಲಿ ವಿಪತ್ತಿನ ಮಾತೆತ್ತಿದ ಕುವರ ವಿಷ್ಣು ಆ ಸಂಜೆ ಆಪ್ತಗೋಷ್ಠಿಯಲ್ಲಿ ಅದೆಲ್ಲವನ್ನೂ ಸ್ವಾರಸ್ಯವಾಗಿ ಹೇಳಿದ. ವಿಷ್ಣುವರ್ಧನ ದೂರದೇಶದಲ್ಲಿರುವ ಸಮಯ ಅನುಕೂಲವೆಂದು ಬಗೆದು ಒಂದು ಕಡೆಯಿಂದ ಮಲೆಪರ ಮತ್ತೊಂದು ಕಡೆಯಿಂದ ಕೊಂಗರ ಚತುರಂಗ ಬಲ ಒಂದೇ ಕಾಲದಲ್ಲಿ ದೋರಸಮುದ್ರಕ್ಕೆ ದಾಳಿ ಮಾಡಲೆತ್ನಿಸಿತು. ಕುವರ ವಿಷ್ಣು, ಬೊಪ್ಪಣ, ಶಾಂತಲೆ, ಬಮ್ಮಲೆ, ಗಂಗರಾಜ ಮತ್ತು ಅವರ ಪತ್ನಿ ಲಕ್ಷ್ಮೀಮತಿ ದೇವಿ ಗುಪ್ತ ಸಮಾಲೋಚನೆ ಮಾಡಿ ಉಪಾಯವನ್ನು ಕಂಡುಕೊಂಡರು. ಮಲೆಪರು ಬಯಲುನಾಡಿಗೆ ಬರುವವರೆಗೂ ಕುವರ ವಿಷ್ಣು ಕಾದಿದ್ದು ಅನಂತರ ಸುತ್ತುವರಿದು ಆಕ್ರಮಿಸಿ ಒಬ್ಬನೂ ತಪ್ಪಿಸಕೊಳ್ಳದಂತೆ ತರಿದು ಹಾಕಿದ.

ಇತ್ತ ಬೊಪ್ಪಣ ಕೊಂಗರ ಸೇನೆ ಐದು ಗಾವುದ ದೂರದಲ್ಲಿದ್ದಾಗಲೇ ಅವರು ಬರುವ ಮಾರ್ಗದಲ್ಲಿಯ ಎಲ್ಲ ಹಳ್ಳಿಗರನ್ನೂ ಧನಧಾನ್ಯ ಸಮೇತ ಸುರಕ್ಷಿತ ದೂರಕ್ಕೆ ಶೀಘ್ರವಾಗಿ ಕಳಿಸಿದ. ಬಾವಿ, ಕೊಳ ಮುಂತಾದ ನೀರಿನ ಸೆಲೆಗಳನ್ನೆಲ್ಲ ಮುಚ್ಚಿಸಿದ. ಶತ್ರುವಿಗೆ ಒಂದು ಕಾಳು ಧಾನ್ಯ, ಒಂದು ಹನಿ ನೀರು ಸಹ ಸಿಗದಂತೆ ಮಾಡಿದ. ಚಿಕ್ಕಚಿಕ್ಕ ವೇಗಗಾಮಿ ಪಡೆಗಳೊಂದಿಗೆ ವೈರಿ ಬೀಡಿನ ಸಮೀಪದಲ್ಲಿ ಅಡಗಿದ್ದು ರಾತ್ರಿ ಇದ್ದಕ್ಕಿದ್ದಂತೆ ನುಗ್ಗಿ ಕೊಂಗರ ಶಿಬಿರಕ್ಕೆ ಬೆಂಕಿ ಹಚ್ಚಿದ. ಆನೆ, ಕುದುರೆಗಳ ಕಟ್ಟು ಬಿಚ್ಚಿ ಪಂಜು ತೋರಿಸಿ ಬೆದರಿಸಿ ಓಡಿಸಿದ. ಶತ್ರುಗಳು ದಿಕ್ಕೆಟ್ಟು ಓಡಿದರು.

ಯೋಧರ ಕಣ್ಮಣಿ

ಇತ್ತ ಊರೊಳಗೂ ಹಲವಾರು ದಿನ ಚೈತ್ರ ಯಾತ್ರೆಯಲ್ಲಿ ಭಾಗವಹಿಸಿದ್ದ ಯೋಧರು ತಮ್ಮ ತಮ್ಮ ಮನೆಯವರ ಮುಂದೆ, ಮಿತ್ರರ ಮುಂದೆ ಯುದ್ಧದ ಅನುಭವಗಳನ್ನು ಬಣ್ಣಿಸಿದರು. ತಮ್ಮ ವೈಯಕ್ತಿಕ ಸಾಹಸಗಳನ್ನು ಹೇಳುವಾಗ ದೊರೆ ವಿಷ್ಣುವರ್ಧನನನ್ನು ಕುರಿತ ಅಭಿಮಾನದ ಮಾತು ಬಾರದಿರುತ್ತಿರಲಿಲ್ಲ. ಶೌರ್ಯದಲ್ಲಿ, ಔದಾರ್ಯದಲ್ಲಿ, ದೊಡ್ಡತನದಲ್ಲಿ ಆತನ ಸಮ ಯಾರೂ ಇಲ್ಲ. ಯುದ್ಧ ಶಿಬಿರಗಳಲ್ಲಿ ಪ್ರತಿಯೊಬ್ಬ ಯೋಧನ ಯೋಗಕ್ಷೇಮವನ್ನು ಸ್ವತಃ ವಿಚಾರಿಸಿ, ಸಣ್ಣಪುಟ್ಟದೆನ್ನದೆ ಎಲ್ಲ ಸೌಕರ್ಯಗಳಿಗೂ ಗಮನವಿತ್ತು ನ್ಯೂನತೆಗಳನ್ನು ಸರಿಪಡಿಸುವನು. ರೋಗಿಗಳನ್ನು ಗಾಯಳುಗಳನ್ನು ಕೆಲವು ಬಾರಿ ತಾನೇ ನಿಂತು ಉಪಚರಿಸುವನು. ” ತಂದೆ ಮಕ್ಕಳನ್ನು ನೋಡಿ ಕೊಳ್ಳುವಂತೆ ನಮ್ಮೆಲ್ಲರನ್ನೂ ಮಮತೆಯಿಂದ ನೋಡಿಕೊಂಡ” ಎಂದು ನೆನಪಿಸಿಕೊಂಡು ಉದ್ಗರಿಸುವರು ಕಣ್ತುಂಬ ನೀರು ತಂದು. ಹಾಗೆಯೇ ರಣರಂಗದಲ್ಲಿನ ಅವನ ಶೌರ್ಯ ಪರಾಕ್ರಮಗಳನ್ನೂ ಸಾಹಸಗಳನ್ನು ಮೈಯುಬ್ಬಿ ಬಣ್ಣಿಸುವರು. ಆತ ಉಗ್ರರೂಪಿಯಾಗಿ ಕಾಲಭೈರವನಂತೆ ಕಾಣಿಸುತ್ತಿದ್ದನಂತೆ. ಶರಣಾದವರನ್ನು, ಸೋತ ರಾಜರ ಕುಟುಂಬದ ಹೆಣ್ಣುಮಕ್ಕಳನ್ನು ಅವಮಾನಿಸದೆ ಗೌರವದಿಂದ ಕಂಡು ಅವರು ಅಪೇಕ್ಷಿಸಿದ ಸ್ಥಳಗಳಿಗೆ ಸುರಕ್ಷಿತವಾಗಿ ಕಳಿಸಿಕೊಡುತ್ತಿದ್ದನಂತೆ.

ದಕ್ಷಿಣಾಪಥದಲ್ಲೆಲ್ಲಾ ವಿಷ್ಣುವರ್ಧನನ ಖ್ಯಾತಿ ಹರಿಡಿತು. ವಿಷ್ಣುವರ್ಧನ ಸ್ವತಂತ್ರ ಸಾಮ್ರಾಟನಂತೇ ನಡೆದುಕೊಳ್ಳತೊಡಗಿದ. ಟಂಕಸಾಲೆಯನ್ನೂ ಸ್ಥಾಪಿಸಿ ಹೊಯ್ಸಳ ರಾಜಚಿಹ್ನೆಯುಳ್ಳ ಚಿನ್ನದ ನಾಣ್ಯಗಳನ್ನು ಚಲಾವಣೆಗೆ ತಂದ.

ಸುಂದರವಾದ ರೂಪ, ಒಳ್ಳೆಯ ಮೈಕಟ್ಟು, ಸೌಮ್ಯವಾದ ದೈವೀತೇಜಸ್ಸನಿಂದ ಕೂಡಿದ ಮುಖ, ಗಂಭೀರವಾದ ನಿಲುವು. ಪ್ರೇಮ-ಕರುಣೆ ತುಂಬಿದ ಹೃದಯ, ಉದಾತ್ತ ನಡೆವಳಿಕೆ – ಹೀಗೆ ಎಲ್ಲವೂ ಸೇರಿದ್ದ ವಿಷ್ಣುವರ್ಧನನ ಆಕರ್ಷಕ ವ್ಯಕ್ತಿತ್ವಕ್ಕೆ ಮಣಿದು ನಮಿಸದವರೇ ಇರಲಿಲ್ಲ. ಹೀಗೆ ಆದರ್ಶ ದೊರೆಯಾಗಿ ಆದರ್ಶ ಪುರುಷನಾಗಿ ಜನತೆಯ ಹೃದಯವನ್ನು ವಿಷ್ಣುವರ್ಧನ ಗೆದ್ದಿದ್ದ.

ಯುದ್ಧ- ದುಃಖ

ವಿಷ್ಣುವರ್ಧನ ಶಾಂತಿಯಿಂದ ರಾಜ್ಯವಾಳುತ್ತ ರಾಜಧಾನಿಯಲ್ಲೇ ಬಹಳ ಕಾಲ ಇರಲು ಶತ್ರುಗಳು ಬಿಡಲಿಲ್ಲ. ಚಾಲುಕ್ಯರ ಸೈನ್ಯ ಯುದ್ಧಕ್ಕೆ ಬಂದಿತು.

ಈ ಯುದ್ಧ ನಡೆಯುತ್ತಿದ್ದಾಗಲೆ ವಿಷ್ಣುವರ್ಧನನ ತಮ್ಮ ಉದಯಾದಿತ್ಯ ವಿಷಮಶೀತ ಜ್ವರದಿಂದ ಸತ್ತ ಸುದ್ದಿ ಬಂದಿತು. ದುಃಖದಿಂದ ಕುಸಿದ ರಾಜನು ಹಿಂದಕ್ಕೆ ಹೊರಟುಹೊದನು. ಮರುದಿನ ಅವನ ಸೈನ್ಯವನ್ನು ಕಾಣದ ಶತ್ರುಗಳು ಏನೋ ಮೋಸವಿರಬೇಕೆಂದು ಅನುಮಾನಿಸಿ ಹಿಂದಿರುಗಿದರು.

ಇತ್ತ ದೋರಸಮುದ್ರದಲ್ಲಿ ಸಕಲ ರಾಜಮರ್ಯಾದೆಗಳಿಂದ ವೀರನಿಗೊಪ್ಪುವ ರೀತಿಯಲ್ಲಿ ಉದಯಾದಿತ್ಯನ ಅಂತ್ಯಸಂಸ್ಕಾರ ಮಾಡಿ, ತಮ್ಮನ ಆತ್ಮಶಾಂತಿಗಾಗಿ ಒಂದು ಗ್ರಾಮ, ಶುಲ್ಕರಹಿತವಾದ ಅಗ್ರಹಾರಗಳನ್ನು ದಾನ ಮಾಡಿದ ವಿಷ್ಣುವರ್ಧನ. ಕೆಳವತ್ತಿಯ ಪಕ್ಕದಲ್ಲೇ ತಮ್ಮನ ನೆನಪಿಗೆ ವಿಜಯಾದಿತ್ಯಮಂಗಲ ಎಂಬ ನಗರದ ನಿರ್ಮಾಣಕ್ಕೆ ಆಜ್ಞೆ ಮಾಡಿದ. ಸೋದರವಿಯೋಗ ದುಃಖದಿಂದ ಅವನು ಚೇತರಿಸಿಕೊಳ್ಳಲು ಒಂದೆರಡು ವರ್ಷಗಳೇ ಬೇಕಾದವು.

ಈ ನಡುವೆ ಬನವಾಸಿ, ಹಾನುಂಗಲ್ಲು ಕೈಬಿಟ್ಟು ಹೋಗಿದ್ದವು. ೧೧೨೬ ರಲ್ಲಿ ಚಾಲುಕ್ಯ ವಿಕ್ರಮಾದಿತ್ಯ ಮರಣ ಹೊಂದಿದ. ಕೊಂಕಣದ ಶಿಲಾಹರರಿಗೆ ನೆರವು ಕೊಡುವ ನೆಪದಲ್ಲಿ ವಿಷ್ಣುವರ್ಧನ ಮತ್ತೆ ಉತ್ತರದ ದಿಗ್ವಿಜಯಕ್ಕೆ ಹೊರಟು ಹಾನುಂಗಲ್ಲನ್ನು ಮುತ್ತಿದ.

ಸೇನೆಯ ಮುಂದೆ ನಿಂತು ದಳಗಳನ್ನು ನಡೆಸುತ್ತ ಯುದ್ಧ ಮಾಡುವುದು ವಿಷ್ಣುವರ್ಧನನ ಸಾಮಾನ್ಯ ಪದ್ಧತಿ. ಇದನ್ನು ತಿಳಿದ ಶತ್ರುಗಳು ವಿಷ್ಣುವರ್ಧನನನ್ನು ಒಂದು ವಿಚಿತ್ರ ವ್ಯೂಹದಲ್ಲಿ ಸಿಕ್ಕಿಸಿಕೊಂಡು ಕೊಲ್ಲುವ ಸನ್ನಾಹ ಮಾಡಿದರು. ಲೆಂಕರಾಯನೆಂಬ ಹೊಯ್ಸಳ ವೀರಯೋಧನಿಗೆ ಇದು ತಿಳಿಯಿತು. ಆತ ಪ್ರಭುಗಳ ಪಕ್ಕದಲ್ಲೇ ಅಂಗರಕ್ಷಕನಾಗಿ ನಿಂತು ಮಿಂಚಿನ ವೇಗದಲ್ಲಿ ಕತ್ತಿ ತಿರುವುತ್ತ ಶತ್ರುಗಳು ಹತ್ತಿರ ಸುಳಿಯದಂತೆ ಮಾಡಿದ. ಅಷ್ಟರಲ್ಲಿ ದೂರದಿಂದ ಗಾಳಿಯನ್ನು ಸೀಳಿಕೊಂಡು ವಿಷ್ಣುವರ್ಧನನ ಎದೆಗೆ ಸರಿಯಾಗಿ ಬಂದ ಈಟಿಗೆ ಕಣ್ಣು ಮಿಟಿಕಿಸುವುದರಲ್ಲಿ ಲೆಂಕ ಮೈಯೊಡ್ಡಿದ. ಮಡಿದು ತನ್ನನ್ನೇ ಬಲಿದಾನ ಕೊಟ್ಟ ಲೆಂಕನಿಗೆ ಬಳಿಯಲ್ಲೆ ಯುದ್ಧ ಮಾಡುತ್ತಿದ್ದ ತಂದೆ ಮಾಚ ಮತ್ತು ಅಣ್ಣ ಕಾಳಗಾವುಂಡರು ತೃಪ್ತಿಯ ಅಶ್ರುತರ್ಪಣವಿತ್ತರು. ಅನಂತರ ಈ ವಿವರಗಳನ್ನೆಲ್ಲ ಕೇಳಿದ ವಿಷ್ಣುವರ್ಧನ ಮೂಕನಾದ. ಗಾವುಂಡರ ಮನೆತನಕ್ಕೆ ಚಿನ್ನದ ವೀರ ಪದಕವನ್ನೂ ಒಂದು ಗ್ರಾಮವನ್ನೂ ಇನಾಮಾಗಿ ಕೊಟ್ಟ.

ಹಾನುಂಗಲ್ಲು ಹೊಯ್ಸಳರ ವಶವಾಯಿತು. ಕದಂಬ ಸೇನೆ ತತ್ತರಿಸಿ ಶರಣಾಯಿತು. “ಕದಂಬ ಯೋಧ ತುಹಿನಾಗ್ನಿ” ಎಂಬ ಬಿರುದು ಪಡೆದ ವಿಷ್ಣುವರ್ಧನ.

೧೧೩೦ರ ವೇಳೆಗೆ ಕೃಷ್ಣೆಯಿಂದ ತೆಂಕಾಶಿಯವರೆಗೆ ಪಶ್ಚಿಮ ಕಡಲಿನಿಂದ ಕಂಚಿಯವರೆಗೆ ಹೊಯ್ಸಳ ಸಾಮ್ರಾಜ್ಯ ವಿಸ್ತರಿಸಿ ಪ್ರಬಲವಾಯಿತು.

ದುಃಖ – ಸಂತೋಷ

ಆದರೆ ವಿಷ್ಣುವರ್ಧನನಿಗೆ ಮತ್ತೆ ಕೌಟುಂಬಿಕ ದುಃಖಗಳು ಒಂದಾದ ಮೇಲೊಂದು ಬಂದವು. ೧೧೨೯ರಲ್ಲಿ ಪ್ರಿಯ ಕುಮಾರ ವೀರ ಬಲ್ಲಾಳನು ಅಪಘಾತವೊಂದರಲ್ಲಿ ಮರಣಹೊಂದಿದ. ಅದೇ ದುಃಖದಲ್ಲಿ ಕೊರಗಿ ಸವೆದು ಶಾಂತಲೆ ೧೧೩೧ರಲ್ಲಿ ಶಿವಗಂಗೆಯಲ್ಲಿ ಸ್ವರ್ಗಸ್ಥಳಾದಳು. ತಾಯಿಯನ್ನು ಕಳೆದುಕೊಂಡು ತಬ್ಬಲಿಗಳಾದ ಹರಿಯಾಲದೇವಿ, ಕಿರಿಯ ಬಿಟ್ಟಿದೇವ ಮತ್ತು ವಿನಯಾದಿತ್ಯರನ್ನು ವಾತ್ಸಲ್ಯದಿಂದ ನೋಡಿಕೊಂಡ ಲಕ್ಷ್ಮೀ ಮಹಾದೇವಿ ಇಲ್ಲದಿದ್ದಲ್ಲಿ ವಿಷ್ಣುವರ್ಧನನ ಗತಿ ಏನಾಗುತ್ತಿತ್ತೊ! ಆಕೆಯ ಪ್ರೀತಿ ಅವನನ್ನು ಉಳಿಸಿತು.

ಹಿರಿಯನಾದ ಗಂಗರಾಜನ ಒತ್ತಾಯದ ಕೋರಿಕೆಗೆ ಬಾಗಿ ವಿಷ್ಣುವರ್ಧನ ಲಕ್ಷ್ಮೀದೇವಿಯನ್ನು ಮದುವೆಯಾದ. ಆಕೆಯ ಪ್ರೇಮದಲ್ಲಿ ತನ್ನ ದುಃಖವನ್ನು ಮರೆತ.

ಹಾನುಂಗಲ್ಲನ್ನು ಪುನಃ ಪಡೆಯಲು ಕದಂಬರು ಸತತವಾಗಿ ಪ್ರಯತ್ನಿಸುತ್ತಲೇ ಇದ್ದರು. ೧೧೩೩ರಲ್ಲಿ ಬಲವನ್ನು ಹೆಚ್ಚಿಸಿಕೊಂಡು ದಳಪತಿ ಮಸಣ ಮತ್ತೆ ಹಾನುಂಗಲ್ಲನ್ನು ಮುತ್ತಿದ. ಅನೇಕ ದಿನಗಳು ಭಯಂಕರ ಯುದ್ಧವಾಯಿತು. ಎರಡು ಸೇನೆಗಳೂ ಸಮಸಮವಾಗಿ ಹೋರಾಡುತ್ತಿದ್ದವು. ಹಾನುಂಗಲ್ಲ ಕೈಬಿಡುವುದೇನೋ ಎಂದು ವಿಷ್ಣುವರ್ಧನನಿಗೆ ಚಿಂತೆಯಾಯಿತು. ಒಂದು ಕಡೆ ತುಂಬು ಗರ್ಭಿಣಿಯಾಗಿದ್ದ ಲಕ್ಷ್ಮೀದೇವಿಯ ಕ್ಷೇಮದ ಬಗ್ಗೆ ಕಾತರತೆ.

ಯುದ್ಧ ಆರಂಭವಾಗಿ ಹದಿನೆಂಟನೆಯ ದಿನ ಕೇಶವನ ಕೃಪೆಯಿಂದ ಲಕ್ಷ್ಮೀದೇವಿಗೆ ಸುಖಪ್ರಸವವಾಗಿ ಗಂಡು ಮಗು ಹುಟ್ಟಿತು. ಅದೆಂತಹ ಶುಭ ಗಳಿಗೆಯೋ ಅದೇ ದಿನ ಮಸಣನ ಸೇವೆ ಸಂಪೂರ್ಣವಾಗಿ ಸೋತು ಶರಣಾಯಿತು. ವಿಷ್ಣುವರ್ಧನನ ಆನಂದಕ್ಕೆ ಪಾರವೇ ಇಲ್ಲ. ಮಗುವಿಗೆ ಪ್ರತಾಪ ನರಸಿಂಹನೆಂದು ನಾಮಕರಣ ಮಾಡಿದ. ನಾಡಿನಾದ್ಯಂತ ವಿಜೃಂಭಣೆಯಿಂದ ವಿಜಯೋತ್ಸವನ್ನೂ ವಿಷ್ಣುವರ್ಧನನ ಪುತ್ರೋತ್ಸವವನ್ನೂ ಆಚರಿಸಲಾಯಿತು. ಚಕ್ರವರ್ತಿ ಎಲ್ಲ ದೇಗುಲ ಹಾಗೂ ಬಸದಿಗಳಲ್ಲೂ ಲಕ್ಷದೀಪೋತ್ಸವಕ್ಕೆ ಏರ್ಪಾಟು ಮಾಡಿದ.

 

ಮತ್ತೆ ಶಾಂತಲೆ ಹೋದಳು

ಮುಂದೆರಡು ವರ್ಷಗಳಲ್ಲಿ ಒಮ್ಮೆ ವಿಷ್ಣುವರ್ಧನ ವಾಸಂತಿಕಾದೇವಿ ಪೂಜೆಗೆಂದು ಸೊಸೆವೂರಿಗೆ ಹೋದಾಗ ದೇವಸ್ಥಾನದಲ್ಲಿ ಒಬ್ಬ ಯುವತಿಯನ್ನು ನೋಡಿ ಆಶ್ಚರ್ಯ ಸ್ತಂಭಿತನಾಗಿ ನಿಂತ. ತನ್ನನ್ನಗಲಿ ಹೋದ ಶಾಂತಲೆಯೇ! ಜೊತೆಯಲ್ಲಿದ್ದ ಬೊಪ್ಪಣ್ಣನಿಗೂ ಹಾಗೆಯೇ ಅನಿಸಿತು. ಅನಂತರ ವಿಚಾರಿಸಿದಾಗ ಆಕೆ ಕೇತನಾಯಕ – ಜಕ್ಕಿಯಬ್ಬೆಯರ ಮಗಳು, ಆಕೆಯ ಹೆಸರೂ ಶಾಂತಲೆ ಎಂದು ತಿಳಿಯಿತು. ದೊರೆಯ ಮನಃಸ್ಥಿತಿಯನ್ನು ತಿಳಿದು ಬೊಪ್ಪಣ, ಲಕ್ಷ್ಮೀದೇವಿಯರು ಕೇತನಾಯಕರಲ್ಲಿ ಈ ಪ್ರಸ್ತಾಪ ಮಾಡಿದರು. ನಾಯಕ ದಂಪತಿಗಳು ಸಂತೋಷವಾಗಿ ಮಗಳು ಶಾಂತಲೆಯನ್ನು ವಿಷ್ಣುವರ್ಧನನಿಗೆ ಧಾರೆಯೆರೆದು ಕೊಟ್ಟರು. ತಾನು ಮೊದಲು ಮಾರಸಿಂಗಯ್ಯನವರ ಮಗಳು ಶಾಂತಲೆಯನ್ನು ಮದುವೆಯಾದಾಗಿನ ದಿನಗಳನ್ನೇ ಮತ್ತೆ ಕಾಣುತ್ತಿರುವಂತೆ ದೊರೆ ಭಾವಿಸಿದ. ವರ್ಷವೊಂದು ಕಳೆದುದೇ ಗೊತ್ತಾಗಲಿಲ್ಲ. ಅವರ ಪ್ರೇಮದ ಬಳ್ಳಿಯಲ್ಲಿ ಬಿಟ್ಟ ಹೂವಿಗೆ ಚಿಕ್ಕ ಶಾಂತಲೆ ಎಂದೇ ಹೆಸರಿಟ್ಟ. ಶಾಂತಲೆ ಎಂಬ ಹೆಸರು ಅವನ ಸರ್ವಸ್ವವನ್ನೂ ಆವರಿಸಿತ್ತು. ಈ ಮೋಹವನ್ನು ತೊಡೆಯಲೆಂದೋ ಏನೋ ದೈವೇಚ್ಛೆ ಆ ಇಬ್ಬರು ಶಾಂತಲೆಯನ್ನೂ ದೊರೆಯಿಂದ ಕಿತ್ತುಕೊಂಡಿತು.

ಇಷ್ಟು ಸಾಲದೆಂಬಂತೆ ದೊರೆಗೆ ಅತ್ಯಂತ ಪ್ರಿಯನಾಗಿದ್ದ ಕುವರ ವಿಷ್ಣುವೂ ಮೃತನಾದ. ಶ್ರೀರಂಗದಲ್ಲಿ ಗುರು ರಾಮಾನುಜರು ಕೇಶವನ ಪಾದಾರವಿಂದವನ್ನು ಸೇರಿದರು. ತಾನು ನಿಂತ ನೆಲವೇ ಕರಗಿ ಕುಸಿದು ಹೋಗುತ್ತಿರುವಂತೆ ಅನಿಸಿತು ವಿಷ್ಣುವರ್ಧನನಿಗೆ. “ಬದುಕು ಎಷ್ಟು ಕ್ಷಣಿಕವಾದುದು! ಗಾಳಿಗೊಡ್ಡಿದ ಸೊಡರು!” ಎಂದುಕೊಂಡ.

ವೀರಶ್ರೀ ಕಣ್ಮರೆ

ವಿಷ್ಣುವರ್ಧನ ಕಂಡ ಹೊಯ್ಸಳ ಸಾಮ್ರಾಜ್ಯದ ಕನಸು, ಕನ್ನಡ ಸಂಸ್ಕೃತಿ ವೈಭವಗಳ ಕನಸು ನನಸಾಗಿದ್ದವು. ಆದರೆ ಸ್ವೇಚ್ಛಾಚಾರ, ದುರಾಗ್ರಹಗಳೇ ಸ್ವಭಾವವಾಗಿದ್ದ ಸಣ್ಣಪುಟ್ಟ ಪಾಳೆಯಗಾರರಿಗೆ, ಸಾಮಂತರಿಗೆ ಸಮಗ್ರ ಕನ್ನಡ ನಾಡಿನ ಹಿತದ ಬಗ್ಗೆ ಆಸಕ್ತಿಯೇ ಇರಲಿಲ್ಲ. ಆ ಸ್ವಾರ್ಥಸಾಧಕರಿಗೆ ಸ್ವಪ್ರತಿಷ್ಠೆಯೊಂದೇ ದೊಡ್ಡದಾಗಿತ್ತು. ಈ ವಕ್ರಬುದ್ಧಿಯ ವೈಪರೀತ್ಯಗಳನ್ನು ನಿಗ್ರಹಿಸುವ ಯುದ್ಧಗಳಲ್ಲೇ ವಿಷ್ಣುವರ್ಧನ ಕಾಲ ಕಳೆಯಬೇಕಾಯಿತು. ಹಾನುಂಗಲ್ಲಿನಲ್ಲೇ ಇದ್ದು ಸುತ್ತಲ ಪರಿಸ್ಥಿತಿಯನ್ನು ತಹಬಂದಿಗೆ ತಂದ. ಮಹಾರಾಣಿ ಬಮ್ಮಲೆ, ಜೊತೆಯಲ್ಲೇ ಇದ್ದು ಆತನಿಗೆ ಎಲ್ಲ ಬಗೆಯಲ್ಲೂ ನೆರವಾದಳು.

ನಿರಂತರ ಯುದ್ಧ, ಅವಿಶ್ರಾಂತ ದುಡಿಮೆಗಳಿಂದ ದೊರೆಯ ಆರೋಗ್ಯ ಕೆಟ್ಟಿತು. ಅಂತಹ ತೀವ್ರವಾದ ಆನಾರೋಗ್ಯದಲ್ಲೂ ವಿಷ್ಣುವರ್ಧನನ ಮನಸ್ಸು ಸಮಾಧಾನ ಸ್ಥಿತಿಯಲ್ಲಿತ್ತು. ಅಪೂರ್ವವಾದ ಶಾಂತಿಯನ್ನನುಭವಿಸುತ್ತ ಪ್ರಸನ್ನವಾಗಿತ್ತು. ತನ್ನ ಅಂತ್ಯಕಾಲ ಸಮೀಸಿತೆಂದು ದೊರೆಗೆ ಅರಿವಾಯಿತು. ಒಂದು ದಿನ ಬೊಪ್ಪಣನನ್ನು ಬಳಿಗೆ ಕರೆದು, “ಬೊಪ್ಪಾ, ನನ್ನ ಅನಂತರ ಸಿಂಹಾಸನಕ್ಕೆ ಯಾರೂ ಕಾದಾಡದಂತೆ ನೋಡಿಕೊ. ಕುಮಾರ ನರಸಿಂಹನೇ ದೊರೆಯಾಗಲಿ. ಈ ನನ್ನ ಕನ್ನಡ ಜನತೆ ನಮ್ಮ ಭವ್ಯವಾದ ಸಂಸ್ಕೃತಿಯನ್ನು ಉಳಿಸಿ ಬೆಳೆಸಲಿ” ಎಂದು ಹೇಳಿದ.

ಅದೇ ವರ್ಷ ವಿಷ್ಣುವರ್ಧನನ ಚೇತನ ಚೆನ್ನಕೇಶವನಲ್ಲಿ ಲೀನವಾಯಿತು. ಹೊಯ್ಸಳ ರಾಜ್ಯದ ಪ್ರಜ್ವಲವಾದ ಬೆಳಕು ಆರಿಹೋಯಿತು.

ದೊರೆಯ ಅಂತ್ಯಕಾಲದ ಅಪೇಕ್ಷೆಯಂತೆ ಸೊಸೆವೂರ ಗಂಡುಭೂಮಿಯಲ್ಲಿ ಸಕಲ ಸಾರ್ವಭೌಮ ಗೌರವಗಳೊಡನೆ ವಿಷ್ಣುವರ್ಧನನ ಸಮಾಧಿ ಮಾಡಿದರು. ಎಂಟು ವರ್ಷದ ಮಗು ನರಸಿಂಹನನ್ನು  ಒಂದನೇ ನರಸಿಂಹನೆಂಬ ಹೆಸರಿನಲ್ಲಿ ಸಿಂಹಾಸನದ ಮೇಲೆ ಕೂರಿಸಿ ಪ್ರಾಪ್ತ ವಯಸ್ಸಿಗೆ ಬರುವವರೆಗೂ ಅವನ ಪರವಾಗಿ ರಾಜಮಾತೆ, ಮಹಾಮಾತ್ಯ ಬೊಪ್ಪಣ ರಾಜ್ಯಾಡಳಿತ ನಡೆಸಿದರು.

ಲೋಕದಲ್ಲಿ ವಿಷ್ಣುವರ್ಧನನಂತಹ ಅರಸರು ವಿರಳ. ಅವನಂತಹ ಗುಣಸಂಪನ್ನ, ಸುಸಂಕ್ಕೃತ ವ್ಯಕ್ತಿಗಳು ಇನ್ನೂ ವಿರಳ.