ವಿಷ್ಣುಶಾಸ್ತ್ರಿ ಚಿಪಳೂಣಕರ್ಮೂವತ್ತೆರಡೆ ವರ್ಷ ಬದುಕಿದ್ದ ಚಿಪಳೂಣಕರರು ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಭಾಗವಹಿಸಿದವರು, ಮುಂದೆ ಅದು ತೀವ್ರವಾಗಿ ಶಕ್ತಿಯನ್ನು ಕೂಡಿಕೊಂಡು ಮುಂದುವರಿಯಲು ಸಿದ್ಧತೆ ಮಾಡಿದವರು. ಆಧುನಿಕ ಮರಾಠಿ ಗದ್ಯದ ಜನಕ. ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಹೋರಾ ಡಿದ ಧೀರರು.

 ವಿಷ್ಣುಶಾಸ್ತ್ರಿ ಚಿಪಳೂಣಕರ್

ಜಗತ್ತನಲ್ಲಿ ಸ್ವಂತ ವ್ಯಕ್ತಿತ್ವ ಇಲ್ಲದವರು ವ್ಯಕ್ತಿತ್ವ ಇದ್ದವರನ್ನು ಯಾವಾಗಲೂ ತೆಗಳುತ್ತಾರೆ. ಇದು ಎಲ್ಲ ಕಾಲದಲ್ಲೂ ನಡೆದು ಬಂದ ಸಂಗತಿ. ಸ್ವಪ್ರತಿಭೆಯುಳ್ಳವರು ಅವರ ಮಾತನ್ನು ಆಹ್ವಾನವಾಗಿ ಸ್ವೀಕರಿಸುತ್ತಾರಲ್ಲದೆ ಅವರ ನಿಂದೆಗೆ ಸೋತು ಕುಳಿತುಕೊಳ್ಳುವುದಿಲ್ಲ. ಹೀಗೆ ಕಳೆದ ಶತಮಾನದ ಒಬ್ಬ ಮಹಾನ್ ವ್ಯಕ್ತಿಯನ್ನು, ಅವರನ್ನು ಕಂಡರೆ ಅಸೂಯೆಪಡುತ್ತಿದ್ದ ಕೆಲವರು, ಹೀಗೆ ಪ್ರಶ್ನಿಸಿದರು, ‘‘ನೀವು ಯಾವುದಾದರೂ ಒಂದು ಕೆಲಸ ಮಾಡಿಕೊಂಡು ನಿಮ್ಮಷ್ಟಕ್ಕೆ ಹಾಯಾಗಿ ಕುಳಿತುಕೊಳ್ಳಬಾರದೇ? ಈ ಸಂಸ್ಥೆ, ಆ ಸಂಸ್ಥೆ ಎಂದು ಕಟ್ಟಿಕೊಂಡು ಇತರರಿಗೂ ತೊಂದರೆ ಕೊಟ್ಟು ನೀವೂ ತೊಂದರೆ ಪಡುವುದೇಕೆ?’’ ಆಗ ಆ ವ್ಯಕ್ತಿ ಅವರಿಗೆ ಕೂಡಲೇ ಉತ್ತರಿಸಿದರು: ‘‘ಸಮಾಜಕ್ಕೆ ಉಪಯೋಗ ಆಗುವಂಥ ದೊಡ್ಡ ಸಂಸ್ಥೆಗಳನ್ನು ನಿರ್ಮಿಸುವ ಶಕ್ತಿ ಒಬ್ಬ ವ್ಯಕ್ತಿಗೆ ಇದ್ದರೆ ಅದು ಆತನ ಅಪರಾಧವೇ? ನನ್ನ ಟೀಕಾಕಾರರ ದೃಷ್ಟಿಯಲ್ಲಿ ನನ್ನ ಕೆಲಸ ಒಂದು ದೊಡ್ಡ ಪಾಪವೇ ಆಯಿತಲ್ಲಾ? ಸರಿ ಆ ಪಾಪಕ್ಕೆ ಪ್ರಾಯಶ್ಚಿತ್ತ ತೆಗೆದುಕೊಳ್ಳುವುದೇ ಲೇಸು. ಪ್ರಾಯಶ್ಚಿತ್ತ ಎಂದರೆ ಇಂತಹ ಸಂಸ್ಥೆಗಳ ಕೆಲಸವನ್ನೆ ಬೆಳೆಸುತ್ತಾ ಹೋಗುವುದು.’’ ಹೀಗೆಂದರವರು ದೇಶಪ್ರೇಮಿ ವಿಷ್ಣುಶಾಸ್ತ್ರಿ ಚಿಪಳೂಣಕರ್.

ಕಿರಿವಯಸ್ಸು ಹಿರಿಸಾಧನೆ

ಚಿಪಳೂಣಕರರು ಬದುಕಿದ್ದುದು ಮೂವತ್ತೆರಡೆ ವರ್ಷ. ಅಷ್ಟು ಸಲ್ಪ ಕಾಲದಲ್ಲಿ ಅವರು ಮಾಡಿದ ಕೆಲಸದ ಪ್ರಮಾಣ, ಸತ್ವ ಕಂಡಾಗ ಬೆರಗಾಗುತ್ತದೆ.

ವಿಷ್ಣುಶಾಸ್ತ್ರಿಗಳು, ಸ್ವಾಭಿಮಾನಿಗಳು; ಹಟವಾದಿಗಳು. ಮರಾಠಿಭಾಷೆಯ ಶಿವಾಜಿ ಎಂದು ಕರೆಯಿಸಿಕೊಂಡವರು. ಬುದ್ಧಿವಂತರು; ಉದ್ಯೋಗಪ್ರಿಯರು, ದೇಶಾಭಿಮಾನಿಗಳು, ಸದ್ವರ್ತನೆಯುಳ್ಳ ಸರಳ ವ್ಯಕ್ತಿ. ಛಲವುಳ್ಳವರು.

ವಿಷ್ಣುಶಾಸ್ತ್ರಿ ಚಿಪಳೂಣಕರ್ ಅವರು ಮಧ್ಯಮ ವರ್ಗದ ಕುಟುಂಬ ಒಂದರಲ್ಲಿ ೧೮೫೦ ರ ಮೇ ೨೦ ರಂದು ಪುಣೆಯಲ್ಲಿ ಜನಿಸಿದರು.

ವಿಷ್ಣುಶಾಸ್ತ್ರಿಗಳ ತಂದೆಯ ಹೆಸರು ಕೃಷ್ಣಶಾಸ್ತ್ರಿ. ಅವರು ಸಂಸ್ಕೃತದಲ್ಲಿ ಉದ್ಧಾಮ ಪಂಡಿತರು. ಮರಾಠಿಯನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದರು. ಇಂಗ್ಲಿಷಿನಲ್ಲಿಯೂ ಅಷ್ಟೆ ನಿಪುಣತೆಯನ್ನು ಪಡೆದವರು. ಸರ್ಕಾರದಲ್ಲಿ ಅವರು ಭಾಷಾಂತರಕಾರರಾಗಿದ್ದರು. ೧೮೬೫ರಲ್ಲಿ ಸರ್ಕಾರ ಪುಣೆಯಲ್ಲಿ ಉಪಾಧ್ಯಾಯರಿಗೆ ಶಿಕ್ಷಣ ಕೊಡಲು ಒಂದು ಕಾಲೇಜನನನು ಸ್ಥಾಪಿಸಿದಾಗ ಕೃಷ್ಣಶಾಸ್ತ್ರಿಗಳನ್ನು ಕಾಲೇಜಿನ ಮೊದಲ ಪ್ರಿನ್ಸಿಪಾಲರಾಗಿ ನೇಮಿಸಿತು. ೧೮೬೮ರಲ್ಲಿ ಶಾಲೆಗಳ ಉಪಾಧ್ಯಾಯರಿಗಾಗಿ ‘‘ಶಾಲಾ ಪತ್ರಿಕೆ’ ಎಂಬ ಪತ್ರಿಕೆಯನ್ನು ಸರ್ಕಾರ ಪ್ರಾರಂಭಿಸಿತು. ಈ ಪತ್ರಿಕೆಗೆ ಕೃಷ್ಣಶಾಸ್ತ್ರಿಗಳನ್ನು ಸಂಪಾದಕರಾಗಿ ನೇಮಿಸಿತು.

ಹೀಗೆ ವಿಷ್ಣುಶಾಸ್ತ್ರಿಗಳಿಗೆ ತಂದೆಯಿಂದ ಹಲವು ಭಾಷೆಗಳಲ್ಲಿ ಆಸಕ್ತಿ, ಸಾಹಿತ್ಯಪ್ರೇಮ ಇವು ಬಳುವಳಿಯಾಗಿ ಬಂದವು. ಹಾಗೆಯೇ ರಸಿಕತೆ, ಕೆಲಸದಲ್ಲಿ ನಿಷ್ಠೆ, ವಿದ್ಯಾಭಾಸದಲ್ಲಿ ಆತ್ಮೀಯತೆ ಅವರಿಗೆ ರಕ್ತಗತವಾಗಿ ಬಂದವು.

ವಿದ್ಯಾಭ್ಯಾಸ

ವಿಷ್ಣುಶಾಸ್ತ್ರಿಗಳು ೧೮೬೬ ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದರು. ಮುಂದಿನ ಅಭ್ಯಾಸಕ್ಕಾಗಿ ಡೆಕ್ಕನ್ ಕಾಲೇಜನ್ನು ಸೇರಿದರು. ಕಾಲೇಜ್ ಸೇರಿದ ನಂತರ ಅವರಿಗೆ ಮರಾಠಿ ಕವಿತೆಗಳನ್ನು ಓದುವ ಅಭ್ಯಾಸ ಉಂಟಾಯಿತು. ಕಾಲೇಜಿನಲ್ಲಿರುವಾಗ ಸಂಸ್ಕೃತ, ಇಂಗ್ಲಿಷ್, ಮರಾಠಿ ಪುಸ್ತಕಗಳನ್ನು ಓದುವುದರಲ್ಲಿ ಆಸಕ್ತಿ ವಹಿಸುತ್ತಿದ್ದರು. ಅದೇ ವೇಳೆಗೆ ‘ಕಾದಂಬರಿ’, ‘ವಾಸವದತ್ತೆ’  ‘ರಾಜತರಂಗಿಣಿ’ ಗಳಂಥ ದೊಡ್ಡ ದೊಡ್ಡ ಸಂಸ್ಕೃತ ಕಾವ್ಯ ಮತ್ತು ನಾಟಕಗಳನ್ನು ಓದಿದರು. ಅಷ್ಟೇ ಪ್ರಮಾಣದಲ್ಲಿ ಮರಾಠಿಯಲ್ಲಿಯ ಮೋರೋಪಂತರ ಬಹುತೇಕ ಗ್ರಂಥಗಳನ್ನು ಅಭ್ಯಾಸ ಮಾಡಿದರು. ಇಂಗ್ಲಿಷಿನಲ್ಲಿಯ ಸಾಹಿತ್ಯ ಮತ್ತು ಇತಿಹಾಸ ಈ ವಿಷಯಗಳ ಮೇಲೆ ಪ್ರಸಿದ್ಧವಾದ ಅನೇಕ ಗ್ರಂಥಗಳನ್ನು ಅವರು ಕೂಲಂಕಷವಾಗಿ ಓದಿದರು.

೧೮೬೫ರಲ್ಲಿ ವಿಷ್ಣುಶಾಸ್ತ್ರಿಗಳ ಮದುವೆಯಾಯಿತು. ಶ್ರೀಮತಿ ಕಾಶಿಬಾಯಿ ಇವರ ಪತ್ನಿ.

ವಿಷ್ಣುಶಾಸ್ತ್ರಿಗಳು ಬಿ.ಎ. ಪರೀಕ್ಷೆಗೆ ಇತಿಹಾಸ ಅರ್ಥಶಾಸ್ತ್ರ, ತರ್ಕಸಾಶ್ತ್ರ ಮತ್ತು ನೀತಿಶಾಸ್ತ್ರಗಳನ್ನು ಅಧ್ಯಯನ ಮಾಡಿದರು. ೧೮೭೨ರಲ್ಲಿ ಬಿ.ಎ. ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆಗಿನ ಕಾಲದಲ್ಲಿ ಇಂಗ್ಲಿಷ್ ಓದಿದವರಿಗೆ ಮರಾಠಿ ಭಾಷೆಯಲ್ಲಿ ತಿರಸ್ಕಾರ. ವಿಷ್ಣುಶಾಸ್ತ್ರಿಗಳು ಈ ಅನಾವಸ್ಥೆಯನ್ನು ದೂರಮಾಡಿ ಗ್ರಂಥಗಳನ್ನು ರಚಿಸಿದರು. ದೇಶಸೇವೆಯನ್ನು ಮಾಡುವದೇ ಅವರ ಪ್ರಧಾನ ಗುರಿಯಾಗಿತ್ತು. ಜನರನ್ನು ಜಾಗೃತಗೊಳಿಸುವುದು ಪ್ರಧಾನ ಉದ್ದೇಶವಾಗಿತ್ತು ಅವರಿಗೆ.

ವಿಷ್ಣುಶಾಸ್ತ್ರಿಗಳು ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವಾಗಲೇ ಅವರ ತಂದೆ ಅವರಿಗೆ ಸಾಹಿತ್ಯರಚನೆಗೆ ಪ್ರೇರಣೆ ಕೊಟ್ಟಿದ್ದರು. ಸ್ಯಾಮ್ಯುಯಲ್ ಜಾನ್‌ಸನ್ ಎಂಬಾತ ಇಂಗ್ಲೆಂಡಿನ ಪ್ರಸಿದ್ಧ ಬರಹಗಾರ, ಸುಮಾರು ಇನ್ನೂರು ವರ್ಷಗಳ ಕೆಳಗೆ ಇದ್ದವರು. ‘ರ‍್ಯಾಸಿಲಾಸ್’  ಎಂಬುದು ಅವರ ಕಾದಂಬರಿ. ಇದನ್ನು ವಿಷ್ಣುಶಾಸ್ತ್ರಿಗಳು ವಿದ್ಯಾರ್ಥಿಯಾಗಿದ್ದಾಗಲೇ ಮರಾಠಿಗೆ ಅನುವಾದಿಸಿದರು.

ಅರ್ಥಪೂರ್ಣ ಬದುಕಿಗೆ ಸಿದ್ಧತೆ

ಇಪ್ಪತ್ತೆರಡನೆಯ ವಯಸ್ಸಿಗೆ ಶಾಸ್ತ್ರಿಗಳು ಬಿ.ಎ. ಪದವಿ ಪಡೆದು ಜೀವನವನ್ನು ಪ್ರವೇಶಿಸಲು ಸಿದ್ಧರಾದರು. ಈ ಹೊತ್ತಿಗೆ ಅವರು ಸಿದ್ಧತೆ ಯಾವ ಮಟ್ಟದ್ದಾಗಿತ್ತು ಎಂಬುದನ್ನು ಗಮನಿಸಬೇಕು. ಅವರ ತಾಯ್ನುಡಿಯಾದ ಮರಾಠಿ ಭಾಷೆಯಲ್ಲಿನ ಸಾಹಿತ್ಯವನ್ನು ಚೆನ್ನಾಗಿ ಅಭ್ಯಾಸ ಮಾಡಿದ್ದರು. ಸಂಸ್ಕೃತವನ್ನು ಕಲಿತಿದ್ದರಲ್ಲದೆ, ಅದರಲ್ಲಿ ಸಾಮಾನ್ಯವಾಗಿ ಆ ವಯಸ್ಸಿನ ವಿದ್ಯಾರ್ಥಿಗಳು ಓದದಿರುವ ಪ್ರೌಢಕಾವ್ಯಗಳನ್ನು ಓದಿದ್ದರು. ಇಂಗ್ಲಿಷ್ ಭಾಷೆಯನ್ನು ಕಲಿತಿದ್ದರು. ಸಾಹಿತ್ಯವನ್ನು ಅಭ್ಯಾಸಮಾಡಿದ್ದರು. ಇದರಿಂದ ಮರಾಠಿ ಮತ್ತು ಸಂಸ್ಕೃತ ಸಾಹಿತ್ಯಗಳನ್ನು ಇಂಗ್ಲಿಷ್ ಸಾಹಿತ್ಯದೊಂದಿಗೆ ಹೋಲಿಸಿ, ನಮ್ಮ ಸಾಹಿತ್ಯಗಳು ಹೇಗೆ ಶ್ರೀಮಂತವಾಗಿವೆ. ಇಂಗ್ಲಿಷ್ ಸಾಹಿತ್ಯ ಹೇಗೆ ಶ್ರೀಮಂತವಾಗಿದೆ ಎಂದು ಗುರುತಿಸಲು ಸಾಧ್ಯವಾಯಿತು. ಈ ದೇಶದ ಮತ್ತು ಇತರ ದೇಶಗಳ ಚರಿತ್ರೆಯನ್ನು ಅಭ್ಯಾಸ ಮಾಡಿದ್ದರು. ಜೊತೆಗೆ ಅರ್ಥಶಾಸ್ತ್ರವನ್ನು ಓದಿ ದೇಶದ ಆರ್ಥಿಕ ಸ್ಥಿತಿ, ಭಾರತ ಬಡತನದಲ್ಲಿ ನೋಯುತ್ತಿರುವುದೇಕೆ ಇವನ್ನು ಅರ್ಥ ಮಾಡಿಕೊಂಡಿದ್ದರು. ತರ್ಕಶಾಸ್ತ್ರ, ಸ್ಪಷ್ಟವಾಗಿ ಯೋಚನೆ ಮಾಡುವುದನ್ನು ಕಲಿಸುತ್ತದೆ. ನೀತಿಶಾಸ್ತ್ರವು ಜೀವನದಲ್ಲಿ ಯಾವುದು ಸರಿ, ಯಾವುದು ತಪ್ಪು ಎಂದು ನಿರ್ಧರಿಸುವುದು ಹೇಗೆ, ಹೀಗೆ ನಿರ್ಧರಿಸುವುದು ಎಷ್ಟುಕಷ್ಟ ಎಂಬುದನ್ನು ಚರ್ಚಿಸುತ್ತದೆ. ಹೀಗೆ ಸಾಹಿತ್ಯದ ಅಭ್ಯಾಸದಿಂದ ವಿಷ್ಣುಶಾಸ್ತ್ರಿಗಳ ಸ್ವಭಾವ ನಯವನ್ನು ಪಡೆದಿತ್ತು. ಅಂತಃಕರಣಕ್ಕೆ ಮೆರಗು ಬಂದಿತ್ತು. ಜೊತೆಗೆ ಯಾವ ವಿಷಯವನ್ನಾಗಲಿ ಸ್ಪಷ್ಟವಾಗಿ, ಆ ದೇಶದ ಚರಿತ್ರೆಯ ದೃಷ್ಟಿಯಿಂದ, ಆರ್ಥಿಕಸ್ಥಿತಿಯ ದೃಷ್ಟಿಯಿಂದ ವಿಚಾರ ಮಾಡುವುದನ್ನೂ ಕಲಿತುಕೊಂಡರು.

ನೌಕರಿ

ಬಿ.ಎ.ಪದವಿ ಪಡೆದನಂತರ ಅವರು ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. ಅವರ ತಂದೆ ‘ಶಾಲಾಪತ್ರಿಕೆ’ ಯ ಸಂಪಾದಕತ್ವವನ್ನು ವಿಷ್ಣುಶಾಸ್ತ್ರಿಗಳಿಗೆ ವಹಿಸಿಕೊಟ್ಟರು. ವಿಷ್ಣುಶಾಸ್ತ್ರಿಗಳು ಶಾಲೆಗಳ ಉಪಾಧ್ಯಾಯರಿಗಾಗಿ ನಡೆಯುತ್ತಿದ್ದ ಈ ಪತ್ರಿಕೆಯನ್ನು ಬ್ರಿಟಿಷ್ ಸರ್ಕಾರ ಭಾರತದಲ್ಲಿ ಮಾಡುತ್ತಿದ್ದ ಅನ್ಯಾಯಗಳನ್ನು ವಿವರಿಸಲು ಬಳಸಿದರು. ನಿರ್ಭಯವಾಗಿ ಲೇಖನಗಳನ್ನು ಬರೆದರು. ಅದರಲ್ಲಿಯ ಒಂದು ಇಂಗ್ಲಿಷ್ ಲೇಖನವನ್ನು ಓದಿ ಕೋಪಕೊಂಡ ಜೇಕಬ್ ಎಂಬ ಇಂಗ್ಲಿಷರು ‘ಈತ ರಾಜದ್ರೋಹ ಬಗೆದಿದ್ದಾನೆ’ ಎಂದು ಶಾಸ್ತ್ರಿಯವರಿಗೆ ರತ್ನಗಿರಿ ಹೈಸ್ಕೂಲಿಗೆ ವರ್ಗ ಮಾಡಿದರು.

ಈ ಸುಮಾರಿಗೆ ವಿಷ್ಣುಶಾಸ್ತ್ರಿಗಳು ಜೀವನದಲ್ಲಿ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಮೇ ತಿಂಗಳ ರಜೆಯಲ್ಲಿ ಊರಿಗೆ ಬಂದಾಗ ಅವರ ತಂದೆ ಮರಣ ಹೊಂದಿದರು. ಮುಂದೆ ಅಕ್ಟೋಬರ್‌ನಲ್ಲಿ ಅಂದರೆ ಹತ್ತು ತಿಂಗಳ ಅಂತರದಲ್ಲಿ ಅವರ ಮಗನೂ ಮರಣ ಹೊಂದಿದನು. ಸೆಪ್ಟೆಂಬರಿನಲ್ಲಿ ಅವರ ಎರಡನೆಯ ಸಹೋದರಿಯ ಗಂಡ ಚಿಕ್ಕಪ್ರಾಯದಲ್ಲಿ ಸಾವನ್ನಪ್ಪಿದನು. ಹೀಗಾಗಿ ಅವರಿಗೆ ಮನೆತನದ ತೊಂದರೆಯಾಯಿತು. ಅವರ ನೌಕರಿಯಲ್ಲೂ ಹಲವು ತೊಂದರೆಗಳನ್ನು ಎದುರಿಸಬೇಕಾಯಿತು. ರತ್ನಗಿರಿಯಿಂದ ಪುಣೆಗೆ ಮರಳಿ ಬಂದರು. ‘ನಿಬಂಧ ಮಾಲೆ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು. ಇದರಲ್ಲಿ ಅವರು ಬರೆದ ಲೇಖನಗಳಿಂದ ಸರ್ಕಾರಕ್ಕೆ ಕೋಪ ಬಂದಿತು. ಕಡೆಗೆ ಅವರು ಕೆಲಸಕ್ಕೆ ರಾಜೀನಾಮೆ ಕೊಟ್ಟರು.

ಬಂಧನದಿಂದ ಬಿಡುಗಡೆ

೧೮೭೪ರಲ್ಲಿ ಅವರು ನಿಬಂಧ ಮಾಲೆಯನ್ನು ಪ್ರಾರಂಭಿಸಿದಾಗ ಅವರಿಗೆ ೨೪ವರ್ಷ. (‘ನಿಬಂಧ ಮಾಲೆ’ ಎಂದರೆ ‘ಪ್ರಬಂಧಗಳ ಹಾರ’  ಎಂದು ಅರ್ಥ) ಅವರು ಪುಣೆಯ ಸರಕಾರಿ ಹೈಸ್ಕೂಲಿನಲ್ಲಿ ಶಿಕ್ಷಕ ಕೆಲಸಕ್ಕೆ ಸೇರಿ ಕೇವಲ ಒಂದು ವರ್ಷವಾಗಿತ್ತು. ‘ರಾಜಾ ಶಿವಾಜಿ’ ಕಾವ್ಯವನ್ನು ಬರೆದ ಕುಂಟೆಯವರು ಹೈಸ್ಕೂಲಿನ ಮುಖ್ಯಾಧ್ಯಾಪಕರಾಗಿದ್ದರು. ಸರಕಾರಿ ಹೈಸ್ಕೂಲಿನಲ್ಲಿ ಕೆಲಸಕ್ಕೆ ಸೇರುವ ಮೊದಲೇ ಚಿಪುಳೂಣಕರ್ ಅವರು ಕುಂಟೆಯವರ ‘ಮನಸ್ಸು’ ಕವಿತೆಯ ಮೇಲೆ ಜ್ಞಾನ ಪ್ರಕಾಶ ಪತ್ರಿಕೆಯಲ್ಲಿ ಒಂದು ಲೇಖನವನ್ನು ಬರೆದು ಅವರನ್ನು ಟೀಕಿಸಿದ್ರು. ಮುಂದೆ ಕುಂಟೆಯವರು ವಿಷ್ಣುಶಾಸ್ತ್ರಿಗಳನ್ನು ಹೀಯಾಳಿಸುತ್ತ ನಡುನಡುವೆಅವರತಂದೆಯ ಟೀಕೆ ಮಾಡುತ್ತಿದ್ದರು. ವಿಷ್ಣುಶಾಸ್ತ್ರಿಗಳು ಒಂದೊಂದು ದಿನ ತಡವಾಗಿ ಶಾಲೆಗೆ ಬರುತ್ತಿದ್ದರು. ಇದು ಅವರನ್ನು ತೊಂದರೆಗೀಡು ಮಾಡಿತು. ಈ ರೀತಿ ಇಬ್ಬರಲ್ಲಿಯೂ ವೈಷಮ್ಯ ಉತ್ಪನ್ನವಾಗದಿದ್ದರೆ ಕಥೆಯೇ ಬೇರೆಯಾಗುತ್ತಿತ್ತು. ಇತ್ತ ‘ನಿಬಂಧ ಮಾಲೆ’ ಯ ವಿಚಾರಗಳ ಉಗ್ರತೆ, ಅದರ ಆಕ್ರಮಣ ಹೆಚ್ಚುತ್ತ ನಡೆದಂತೆ ಕುಂಟೆಯವರು ನಿಸ್ಸಾಹಾಯಕರಾಗುತ್ತಿದ್ದರು. ‘ನಿಬಂಧ ಮಾಲೆ’ ಯ ಎರಡನೆಯ ಮತ್ತು ಮೂರನೆಯ ಸಂಚಿಕೆಗಳಲ್ಲಿನ ಲೇಖನಗಳು ತೀಕ್ಷ್ಣವಾಗಿದ್ದವು. ಭಾರತದಲ್ಲಿ ಬ್ರಿಟಿಷರು ಎಷ್ಟು ಉದ್ಧಟತನದಿಂದ ನಡೆದುಕೊಳ್ಳುತ್ತಾರೆ ಎಂಬುದನ್ನು ಈ ಲೇಖನಗಳಲ್ಲಿ ವಿಷ್ಣುಶಾಸ್ತ್ರಿಗಳು ತೋರಿಸಿದರು. ಮಿಷನರಿಗಳು ಇಲ್ಲಿ ಎಷ್ಟು ಅನ್ಯಾಯ ಮಾಡುತ್ತಿದ್ದಾರೆ ಎಂಬುದನ್ನು ವಿವರಿಸಿದರು. ಸರಕಾರಿ ಅಧಿಕಾರಿಗಳು ಮತ್ತು ಮಿಷನರಿಯವರು ಕೋಪಗೊಂಡು ಪ್ರತೀಕಾರ ಮಾಡಲು ಸಿದ್ಧರಾದರು. ಇವರು ಬರೆದ ಬರಹಗಳ ಮೇಲಿಂದ ಇವರನ್ನು ರಾಜದ್ರೋಹಿ ಎಂದು ಕರೆದರು. ಈ ಒಂದು ಮುಳ್ಳನ್ನು ಕಿತ್ತೆಸೆಯಬೇಕೆಂದು ಮೇಲಿನ ಅಧಿಕಾರಿ ಮತ್ತುಮಿಷನರಿಯವರು ಬಹಳವಾಗಿ ಯೋಚಿಸಿದರು. ಒಂದು ವರ್ಷದ ಒಳಗೆ ಅವರಿಗೆ ರತ್ನಗಿರಿಗೆ ವರ್ಗವಾಯಿತು.ರತ್ನಗಿರಿಗೆ ಹೋಗುವ ವೇಳೆಗೆ ಸಾನ್, ಮೋಡಕ, ಶಂಕರ ತುಕಾರಾಮ ಮತ್ತುಸಾಲಿಗ್ರಾಮ ಇವರ ಸಹಾಯದಿಂದ ‘ಕಾವ್ಯ ಇತಿಹಾಸ ಸಂಗ್ರಹ’ ಎಂಬ ಪತ್ರಿಕೆಯನ್ನು ನಡೆಸಿದರು. ಬಾಳಕೃಷ್ಣ ವಾಸುದೇವ ಜೋಶಿ ಇವರ ಸಹಕಾರದಿಂದ ಚಿತ್ರಶಾಲೆಯನ್ನು ಪ್ರಾರಂಭಿಸಲು ಯೋಚಿಸಿದರು. ‘ನಿಬಂಧ ಮಾಲೆ’ ಯು ಪ್ರಾರಂಭವಾಗಿಯೇ ಇತ್ತು. ರತ್ನಗಿರಿಗೆ ಅವರನ್ನು ವರ್ಗ ಮಾಡಿ ಸರಕಾರವು ಅವರ ಕೆಲಸ ಕಾರ್ಯಗಳಿಗೆ ದೊಡ್ಡ ಪೆಟ್ಟುಕೊಟ್ಟಿತು. ಇದನ್ನು ಸಹಿಸಿಕೊಳ್ಳುವಷ್ಟು ಸಹನೆ ಅವರಿಗೆ ಇರಲಿಲ್ಲ. ಸರ್ಕಾರಿ ನೌಕರಿಯ ಮೂಲಕ ಅವರನ್ನು ಕಟ್ಟಿಹಾಕಿದಂತಾಗಿತ್ತು. ಸರ್ಕಾರಿ ನೌಕರಿಯ ಸಂಕುಚಿತ ವಾತಾವರಣದ ಮೂಲಕ ಅವರ ಸ್ವಾತಂತ್ರ್ಯಪ್ರಿಯತೆಯು ಒಳಗೆ ಅಡಿಗಿಕುಳಿತಿತ್ತು. ಈ ನೌಕರಿಯನ್ನು ಬಿಟ್ಟುಕೊಟ್ಟು ಜ್ಞಾನಪ್ರಸಾರದ ಮಾರ್ಗದಲ್ಲಿ ದೇಶಸೇವೆ ಮಾಡಲು ಅವರು ನಿಶ್ಚಯಮಾಡಿದರು.

ನನ್ನ ವಿಚಾರ

ಸರ್ಕಾರದ ಮೇಲೆ ಕಟುವಾದ ಟೀಕೆ ಮಾಡುವುದನ್ನು ಬಿಟ್ಟು ಬರಹಕ್ಕೆ ಸೌಮ್ಯತ್ವ ಕೊಡಲು ಬರುತ್ತಿರಲಿಲ್ಲವೇ? ಹೀಗೆ ಮಾಡಬೇಕೆಂದು ಅವರ ಹಿತಚಿಂತಕರು ಹಲವರು ಹೇಳಿದರು. ಚಿಕ್ಕವಯಸ್ಸಿನಲ್ಲಿ ಸರ್ಕಾರದ ವಿರೋಧವನ್ನು ಕಟ್ಟಿಕೊಳ್ಳುವುದು ವಿವೇಕವಲ್ಲ ಎಂದು ಎಚ್ಚರಿಕೆಕೊಟ್ಟರು. ವಿಷ್ಣುಶಾಸ್ತ್ರಿಗಳು ಸರ್ಕಾರಿ ನೌಕರಿಗೆ ರಾಜೀನಾಮೆಯನ್ನು ಕೊಟ್ಟನಂತರ ಗಂಗಲ್ ಎಂಬ ತಮ್ಮ ಮಿತ್ರರಿಗೆ ರಾಜೀನಾಮೆಯ ಉದ್ದೇಶದ ಹಿಂದೆ ಇರುವ ವಿಚಾರವನ್ನು ಸ್ಪಷ್ಟವಾಗಿ ತಿಳಿಸಿದ್ದರು; ಅದೇನೆಂದರೆ,

‘‘ನಾನು ಸರ್ಕಾರಿ ನೌಕರಿಗೆ ರಾಜೀನಾಮೆ ಕೊಟ್ಟ ಸಂಬಂಧವಾಗಿ ಇಲ್ಲಿಯ ಮತ್ತು ರತ್ನಗಿರಿಯ ಜನರಿಗೆ ಒಂದು ತರಹದ ಆತಂಕ ಉಂಟಾಗಿದೆ. ಆದರೆ ಇಲ್ಲಿ ಆಶ್ಚರ್ಯಪಡುವ ಕಾರಣವೇ ಇಲ್ಲ. ಗುಲಾಮಗಿರಿಯಿಂದ ಹೊಟ್ಟೆತುಂಬಿಕೊಳ್ಳುವ ನಮ್ಮ ಜನರು ರಾಜಸೇವೆಯು ಒಂದು ದೇವದತ್ತ ಅಪೂರ್ವವಸ್ತುವಾಗಿದೆ ಎಂದು ತಿಳಿದಿದ್ದಾರೆ. ಇಂತಹ ಕಾಲದಲ್ಲಿ ಸರ್ಕಾರಿ ನೌಕರಿಯನ್ನು ತಾನಾಗಿ ಬಿಡುವುದೆಂದರೆ ಮೂರ್ಖತನ ಇಲ್ಲವೆ ಆತ್ಮಾಘಾತ ಮಾಡಿಕೊಂಡಂತೆ, ಇಲ್ಲವಾದರೆ ಮತ್ತೇನು ಎಂದು ಅವರ ಭಾವನೆ. ಆದರೆ ನನ್ನ ವಿಚಾರ ಬೇರೆಯೇ ಆಗಿರುತ್ತದೆ. ನೌಕರಿಗೆ ಸ್ವಲ್ಪವೂ ಸ್ವಾತಂತ್ರ್ಯವನ್ನು ಕೊಡದೆ ಕೆಲಸ ಮಾಡಿಸಿಕೊಳ್ಳುವ ಅಧಿಕಾರಿಗಳಿಗೆ ತಲೆಬಾಗಿಸುವುದಕ್ಕಿಂತ ಎಲ್ಲ ಸಂಬಂಧ ತೊರೆದು ಸ್ವತಂತ್ರವಾಗಿರುವುದು ಉತ್ತಮವಾದುದು. ನನಗೆ ರತ್ನಗಿರಿಗೆ ವಗ೪ವಾದಾಗಲೇ ನೌಕರಿಗೆ ರಾಜೀನಾಮೆ ಕೊಡಬೇಕಾಗಿತ್ತು. ಯಾವ ಕಾರಣದಿಂದಲೋ ಏನೋ ನಾನು ಬಂಧುವರ್ಗ ಬಿಟ್ಟು ಅಲ್ಲಿಗೆ ಹೋದೆ. ಅಲ್ಲಿದ್ದಾಗಲೂ ಸ್ವಾತಂತ್ರ್ಯ ಆಂದೋಲನ ಮಾಡಬೇಕೆಂಬುದೇ ನನ್ನ ನಿರ್ಧಾರವಾಗಿತ್ತು.’’

ಒಂದು ಮುದ್ರಣಾಲಯ ತೆರೆದು, ಶ್ರದ್ಧೆಯಿಂದ ಅದನ್ನು ನಡೆಸುವುದು, ಅದರಿಂದ ತಮ್ಮ ಮನಸ್ಸಿಗೆ ಒಪ್ಪಿಗೆಯಾಗುವ ಅನೇಕ ಕಾರ‍್ಯಗಳನ್ನು ಮಾಡುವುದು ಅವರ ವಿಚಾರವಾಗಿತ್ತು. ಒಟ್ಟಿನಲ್ಲಿ ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡುವುದೇ ಅವರ ಅಂತಿಮ ನಿರ್ಧಾರವೆಂಬುದು ಅವರ ಅಂತರಾತ್ಮ ಹೇಳುತ್ತಿತ್ತು ಎಂಬುದು ತಿಳಿದು ಬರುತ್ತದೆ. ಮುಂದೆ ಅವರು ಅದರಂತೆ ನಡೆದರು.

ಇಬ್ಬರು ಮಿತ್ರರತ್ನರು

ವಿಷ್ಣುಶಾಸ್ತ್ರಿಗಳೊಂದಿಗೆ ಕೆಲಸಮಾಡಲು ಇಬ್ಬರು ಗೆಳೆಯರು ಕೂಡಿದರು. ಒಬ್ಬರು ಗೋಪಾಲ ಗಣೇಶ ಅಗರ್‌ಕರ್ ಅವರು, ಮತ್ತೊಬ್ಬರು ಬಾಲಗಂಗಾಧರ ತಿಲಕರು.

ಭಾರತೀಯರಲ್ಲಿ ಸ್ವತಂತ್ರರಾಜ್ಯದ ಅರಿವು ಮೂಡಬೇಕು. ಸ್ವರಾಜ್ಯದ ಪ್ರಜ್ಞೆ ಬರಬೇಕು. ರಾಷ್ಟ್ರಾಭಿಮಾನ ಪ್ರತಿಯೊಬ್ಬ ರಲ್ಲೂ ಉಂಟಾಗಬೇಕು. ಇವೆಲ್ಲವುಗಳು ಜನರಲ್ಲಿ ಬರಬೇಕಾದರೆ ಭಾರತೀಯತೆಯನ್ನು ಪ್ರತಿನಿಧಿಸುವಂತಹ ಒಂದು ಸಂಸ್ಥೆ ಪ್ರಾರಂಭಿಸಬೇಕು ಎಂದು ಅವರು ವಿಚಾರಿರಿಸದರು. ನಮ್ಮ ಸಂಸ್ಕೃತಿ ಎಂಧಹುದು? ನಮ್ಮ ಜೀವನ ಆದರ್ಶಗಳೇನು? ಎಂಬುದನ್ನು ತಿಳಿಯುವುದು ನಾವು ಉತ್ತಮಶಿಕ್ಷಣ ಪಡೆದಾಗಲೆ ಸಾಧ್ಯ. ಸದ್ಯಕ್ಕಿರುವ ಪಾಶ್ಚಾತ್ಯ ಶಿಕ್ಷಣದಿಂದ ನಾವು ಉತ್ತಮ ಪ್ರಜೆಗಳನ್ನು ರೂಪಿಸಲು ಅಸಾಧ್ಯವಾಗುವದೆಂದು ಚಿಪಳೂಣಕರವರು ವಿಚಾರಿಸಿ ತಮ್ಮ ಸಹಪಾಠಿಗಳೊಂದಿಗೆ ಒಂದು ವಿದ್ಯಾಸಂಸ್ಥೆ ಪ್ರಾರಂಭಿಸುವದ ರೊಂದಿಗೆ  ದೇಶಕ್ಕಾಗಿ ತಮ್ಮ ಸೇವೆ ಮುಡು ಪಾಗಿಟ್ಟರು. ಶಾಸ್ತ್ರಿಗಳ ದೇಶಾಭಿಮಾನವನ್ನು ಉಕ್ಕಿಸುವ ಪ್ರಬಂಧಗಳನ್ನು ಓದಿ ಅಗರ್‌ಕರ್, ತಿಲಕರು ಸ್ಫೂರ್ತಿಗೊಂಡಿದ್ದರು. ತರುಣರಿ ಗಂತೂ ಇವುಗಳನ್ನು ಓದಿ ಬಿಸಿರಕ್ತ ಕುದಿಯುತ್ತಿತ್ತು. ಜನರಲ್ಲಿ ದೇಶಾಭಿಮಾನದ ಜಾಗೃತಿ ಆರಂಭವಾಯಿತು.

ಶಾಸ್ತ್ರಿಗಳು, ಅಗರಕರ್ ಹಾಗೂ ತಿಲಕರು ಮೂವರೂ ಕೂಡಿ ಚರ್ಚಿಸುತ್ತಿದ್ದರು. ದೇಶ ಬ್ರಿಟಿಷರ ಅಡಿಯಾಳಾಗಿದೆ, ಬ್ರಿಟಿಷರು ನಮ್ಮನ್ನೆಲ್ಲ ಮೆಟ್ಟಿ ನಮ್ಮ ಸಂಪತ್ತು ದೋಚಿದ್ದಾರೆ. ನಾಡು ಅನ್ನಕ್ಕಿಲ್ಲದೆ ಒದ್ದಾಡುತ್ತಿದೆ. ಆದರೆ ನಮ್ಮ ಜನ ಎಚ್ಚೆತ್ತಿಲ್ಲ. ಅವರಲ್ಲಿ ಒಗ್ಗಟ್ಟಿಲ್ಲ. ನಮ್ಮ ಜನರು ಸ್ವಾಭಿಮಾನಿ ಗಳಾಗಬೇಕು. ದೇಶಾಭಿಮಾನಿಗಳಾಗಬೇಕು. ಒಗ್ಗಟ್ಟಾಗಬೇಕು. ಪರಕೀಯರನ್ನು ದೇಶದಿಂದ ಅಟ್ಟಬೇಕು. ಇದಕ್ಕೆ ಮೊದಲು ನಮ್ಮವರ ಅಜ್ಞಾನ ತೊಲಗಬೇಕು. ಜನರಲ್ಲಿ ಆಲಸ್ಯ ತೊಲಗಬೇಕು. ನಮ್ಮ ಸಮಾಜದ ಮೂಢನಂಬಿಕೆ, ಸಂಪ್ರದಾಯಗಳು ಹೋಗಿ ನಾವು ಪ್ರಗತಿಪರರಾಗ ಬೇಕೆಂಬುದೇ ಅವರ ದೃಢ ವಿಶ್ವಾಸವಾಗಿತ್ತು. ಇದನ್ನು ಸಾಧಿಸುವುದು ಹೇಗೆ ಎಂಬುದು ಅವರ ಚರ್ಚೆಯ ವಿಷಯ.

ಪತ್ರಿಕಾರಂಗಕ್ಕೆ ಪ್ರವೇಶ

ತಂದೆ ಕೃಷ್ಣಶಾಸ್ತ್ರಿಗಳು ಮರಾಠಿಶಾಲೆಯ ಶಿಕ್ಷಕರಿಗೆ ಉಪಯೋಗವಾಗುವ ‘ಶಾಲಾ ಪತ್ರಿಕೆ’ ಎಂಬ ಹೆಸರಿನ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿದ್ದರು. ಅದರಲ್ಲಿ ಅವರು ಮರಾಠಿ ವ್ಯಾಕರಣದ ಮೇಲಿನ ನಿಬಂಧ ಮತ್ತು ‘ರಾಸೆಲಸ್’ ಎಂಬ ಗ್ರಂಥದ ಭಾಷಾಂತರ ಈ ಎರಡನ್ನೂ ನಡೆಸಿದ್ದರು. ಈ ಗ್ರಂಥದ ಇಪ್ಪತ್ತನೆ ಭಾಗದ ಭಾಷಾಂತರವು ಪ್ರಕಟವಾದ ಅನಂತರ ಉಳಿದ ಭಾಗದ ಭಾಷಾಂತರವನ್ನು ವಿಷ್ಣುಶಾಸ್ತ್ರಿಗಳಿಗೆ ಒಪ್ಪಿದರು. (ಅದು ಸಮಾಧಾನಕರ ರೀತಿಯಿಂದ ಆದದ್ದನ್ನು ಕಂಡು ಅವರು ಶಾಲಾಪತ್ರಿಕೆಯ ಸಂಪೂರ್ಣಕಾರ್ಯವನ್ನು ವಿಷ್ಣುಶಾಸ್ತ್ರಿಗಳಿಗೆ ಒಪ್ಪಿಸಿದರು.) ಈ ಭಾಷಾಂತರದ ಉದ್ದೇಶ ಬೇರೆ ಭಾಷೆಗಳಿಂದ ಒಳ್ಳೆಯ ಪುಸ್ತಕಗಳನ್ನು ಮರಾಠಿ ಓದುಗರಿಗೆ ತಂದುಕೊಡುವುದು. ಮರಾಠಿ ಭಾಷೆ ಮತ್ತು ಸಾಹಿತ್ಯ ಬೆಳೆಯಲು ಅವಕಾಶಮಾಡಿಕೊಡುವುದು. ವಿಶ್ವವಿದ್ಯಾನಿಲಯಗಳಲ್ಲಿ ಕೆಲಸ ಮಾಡುವ ಮಹಾರಾಷ್ಟ್ರರು ಇಂತಹ ಕೆಲಸವನ್ನು ಮಾಡಬೇಕು. ಮರಾಠಿಯನ್ನೂ ಮತ್ತೂ ಬೇರೆ ಭಾಷೆಗಳನ್ನೂ ಬಲ್ಲ ವಿದ್ವಾಂಸರು ಭಾಷಾಂತರದ ಕೆಲಸವನ್ನು ಕೈಗೊಳ್ಳಬೇಕು, ಆದರೆ ಹಾಗೆ ಮಾಡುತ್ತಿಲ್ಲ ಎಂದು ವಿಷ್ಣುಶಾಸ್ತ್ರಿಗಳಿಗೆ ವಿಷಾದ. ಶಾಸ್ತ್ರಿಗಳು ಶಾಲಾಪತ್ರಿಕೆಯಲ್ಲಿ ಇಂಗ್ಲಿಷ್ ಕವಿತೆಗಳ ಮೇಲೆ ಎಷ್ಟೋ ಲೇಖನಗಳನ್ನು ಬರೆದರು. ಅನಂತರ ಸಂಸ್ಕೃತ ಕವಿತೆಗಳ ಮೇಲೆ ತಮ್ಮ ಲೇಖನಮಾಲೆಯನ್ನು ಪ್ರಸಿದ್ಧಿಸಿದರು. ಈ ಲೇಖನ ಮಾಲೆಯಲ್ಲಿ ಅವರು ಅನುಗ್ರಮವಾಗಿ ಕಾಳಿದಾಸ, ಭವಭೂತಿ, ಬಾಣ, ಸಂಬಂಧು ಮತ್ತು ದಂಡಿ ಈ ಕವಿಗಳ ವಿಷಯ ಸಿಕ್ಕಷ್ಟು ಮಾಹಿತಿಯನ್ನು ಸಂಗ್ರಹಿಸಿ ಅನಂತರ ಆ ಕಾವ್ಯಗಳ ಗುಣಗಳನ್ನು ಪರೀಕ್ಷಿಸಿದರು. ಮುಂದೆ ಮರಾಠಿ ಕವಿತೆಗಳ ಮೇಲೆ ಲೇಖನ ಮಾಲೆ ಅರ್ಧ ಮಾತ್ರ ಪ್ರಕಟವಾಗಿದ್ದಾಗ ಶಾಲಾಪತ್ರಿಕೆಯು ನಿಂತು ಹೋಗುವ ಪ್ರಸಂಗ ಬಂದಿತು. ೧೮೭೨ ರಿಂದ ಶಾಸ್ತ್ರಿಯವರೊಬ್ಬರೇ ಶಾಲಾಪತ್ರಿಕೆಯನ್ನು ಪ್ರಾರಂಭ ಮಾಡಿದಂದಿನಿಂದ ಅದರಲ್ಲಿ ಇಂಗ್ಲಿಷ್ ವಿದ್ವಾಂಸರ ವಿಷಯವಾಗಿ ಮತ್ತು  ಮಿಷನರಿ ಯವರ ವಿಷಯವಾಗಿ ತಮ್ಮಹೊಸ ಪದ್ಧತಿಯ ವಿಚಾರವನ್ನು  ಸಾವಾಕಾಶವಾಗಿ ಪ್ರಕಟಮಾಡಲು ಪ್ರಾರಂಭಿಸಿದರು.

ಶಾಲಾಪತ್ರಿಕೆಗೆ ಸರಕಾರದಿಂದ ಹಣ ದೊರೆಯುತ್ತಿತ್ತು. ಶಿಕ್ಷಣಖಾತೆಯ ವರಿಷ್ಠ ಅಧಿಕಾರಿಗಳು ಚಿಪಳೂಣಕರರ ವಿಚಾರರೀತಿಯನ್ನು ಮನ್ನಿಸಲಿಲ್ಲ. ತಮ್ಮ ಸ್ವಾತಂತ್ರ್ಯದ ವಿಚಾರಕುರಿತ ಲೇಖನಗಳಿಂದಾಗಿ ಶಾಲಾ ಪತ್ರಿಕೆಗೆ ಸರಕಾರದ ಸಹಾಯವು ಎಂದಾದರೂ ಒಂದು ದಿನ ನಿಲ್ಲಬಹುದೆಂಬ ವಿಚಾರ ವಿಷ್ಣುಶಾಸ್ತ್ರಿಗಳ ಮುತ್ಸದ್ಧಿ ಬುದ್ಧಿಗೆ ಮೊದಲೇ ತಿಳಿದಿತ್ತು. ಮತ್ತು ಆ ಪ್ರಕಾರವಾಗಿಯೇ ನಡೆಯಿತು. ಸರ್ಕಾರಕ್ಕೆ ವಿಷ್ಣುಶಾಸ್ತ್ರಿಗಳ ವಿಚಾರವು ಹಿಡಿಸಲಿಲ್ಲ. ಕೊನೆಗೆ ೧೮೭೫ ರಲ್ಲಿ ಆ ಪತ್ರಿಕೆಯು ನಿಂತು ಹೋಯಿತು. ಆದರೆ ಅದಕ್ಕೂ ಮೊದಲು ೧೮೭೪ ರಲ್ಲಿ ಚಿಪಳೂಣಕರ್ ಅವರು ‘ನಿಬಂಧಮಾಲೆ’ ಯನ್ನು ಪ್ರಾರಂಭಿಸಿದ್ದರು.

ಪತ್ರಿಕಾ ರಂಗದಲ್ಲಿ ಪ್ರಗತಿ

ಶಾಲಾಶಿಕ್ಷಣವು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗುತ್ತದೆ. ಆದರೆ ಹಿರಿಯರಿಗೂ ರಾಷ್ಟ್ರಪ್ರೇಮ ಬರಬೇಕಾದರೆ ರಾಷ್ಟ್ರೀಯ ಶಿಕ್ಷಣ, ಕೊಡುವುದು ಅತ್ಯವಶ್ಯ. ರಾಷ್ಟ್ರೀಯ ಶಿಕ್ಷಣವನ್ನು  ಪತ್ರಿಕೆಗಳ ಮುಖಾಂತರ ಕೊಡಬೇಕೆಂದು ತಿಲಕ್, ಅಗರ್‌ಕರ್ ಮತ್ತು ಚಿಪಳೂಣಕರ್ ಮೂವರೂ ಕೂಡಿ ವಿಚಾರಿಸಿದರು. ಅದಕ್ಕೊಂದು ರೂಪರೇಷೆಯನ್ನು ಸಿದ್ಧಗೊಳಿಸಿದರು. ೧೮೮೧ ರಲ್ಲಿ ಎರಡು ವಾರಪತ್ರಿಕೆಗಳನ್ನು ಆರಂಭಿಸಿದರು. ಮರಾಠಿ ಭಾಷೆಯಲ್ಲಿ ‘ಕೇಸರಿ’ ಎಂಬ ಹೆಸರಿನಿಂದ ಪ್ರಾರಂಭವಾಯಿತು. ಇಂಗ್ಲಿಷಿನಲ್ಲಿ ‘ಮರಾಠಾ’ ಎಂಬ ಪತ್ರಿಕೆಯು ಪ್ರಾರಂಭವಾಯಿತು.

ಎರಡೂ ಪತ್ರಿಕೆಗಳು ಜನರನ್ನು ಬಹಬೇಗ ಆಕರ್ಷಿಸಿದವು. ಸಂಪಾದಕೀಯದಲ್ಲಿ ಭಾರತೀಯರ ಅಸಹಾಯಕತೆ, ಬ್ರಿಟಿಷರ ದೌರ್ಜನ್ಯಗಳ ನೈಜ ಚಿತ್ರಣಗಳನ್ನು ಬರೆಯ ಹತ್ತಿದರು. ಪ್ರತಿಯೊಬ್ಬ ಭಾರತೀಯನೂ ಅನ್ಯಾಯದ ವಿರುದ್ಧ ಪ್ರತಿಭಟಿಸಬೇಕು. ನ್ಯಾಯಕ್ಕಾಗಿ ಹೋರಾಟಮಾಡ ಬೇಕೆಂದು ನೇರವಾದ ಮಾತುಗಳಿಂದ ಬರೆಯಹತ್ತಿದರು. ಹೀಗಾಗಿ ಎರಡೇ ವರುಷಗಳಲ್ಲಿ ‘ಕೇಸರಿ’ ಭಾರತೀಯ ಭಾಷೆಯ ಪತ್ರಿಕೆಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಓದುಗರನ್ನು ಹೊಂದಿತು. ಪತ್ರಿಕೆಯ ಭಾಷೆ ಸರಳವೂ, ಸುಂದರವೂ ಆಗಿತ್ತು ಮತ್ತು ಖಚಿತವಾದ ಅಭಿಪ್ರಾಯವನ್ನು ನಿರೂಪಿಸುತ್ತಿತ್ತು.

ಜನರ ಗಮನವನ್ನು ಎತ್ತಕಡೆಗೆ ಹರಿಸಬೇಕು ಎಂಬುದನ್ನು ಚೆನ್ನಾಗಿ ಅರಿತುಕೊಂಡ ಈ ಮೂವರು ರಾಷ್ಟ್ರಪ್ರೇಮಿಗಳು ಪತ್ರಿಕೆಗಳ ಮುಖಾಂತರ ಬ್ರಿಟಿಷರನ್ನು ಎದುರುಹಾಕಿಕೊಂಡು ದೇಶಪ್ರೇಮವನ್ನು ಪ್ರಕಟಪಡಿಸಿದರು. ಇದರ ಪರಿಣಾಮವಾಗಿ ಬಹಳಷ್ಟು ಓದು ಬರಹಬಲ್ಲ ಭಾರತೀಯರು ಬ್ರಿಟಿಷರ ವಿರುದ್ಧ ಚಳವಳಿಯನ್ನು ಮಾಡಲು ನಾಂದಿಯಾಯಿತು.

ವಿದ್ಯಾಕ್ಷೇತ್ರದಲ್ಲಿ

ದಾಸ್ಯತ್ವದಲ್ಲಿ ಸಿಲುಕಿಕೊಂಡಿದ್ದ ಭಾರತೀಯರಿಗೆ ಸ್ವತಂತ್ರ ವಿಚಾರಮಾಡುವ ಶಕ್ತಿ ಕುಂದುತ್ತ ನಡೆದಿತ್ತು. ಬುದ್ಧಿವಂತರಾದ ಕೆಲವರು ಬ್ರಿಟಿಷರು ಉದಾರವಾಗಿ ಕೊಡುವ ಸವಲತ್ತುಗಳಿಂದ ಅವರನ್ನು ಮತ್ತು ಅವರ ಆಡಳಿತವನ್ನು ಹೊಗಳುತ್ತಿದ್ದರು. ಇದನ್ನರಿತ ಚಿಪಳೂಣಕರರಿಗೆ ಮುಂದಿನ ಮಕ್ಕಳಿಗಾದರೂ ಸರಿಯಾದ ವಿದ್ಯಾಭ್ಯಾಸ ನೀಡಬೇಕೆಂದು ತೋರಿತು. ತಮ್ಮ ಆತ್ಮೀಯ ಮಿತ್ರರಾದ ತಿಲಕ ಹಾಗೂ ಅಗರಕರ್‌ರನ್ನು ಕೂಡಿಕೊಂಡು ೧೮೮೦ ರಲ್ಲಿ ವಿದ್ಯಾಸಂಸ್ಥೆಯೊಂದನ್ನು ಪ್ರಾರಂಭಿಸಿದರು.

ಈ ಹೊಸ ಸಂಸ್ಥೆಗೆ ‘ನ್ಯೂ ಇಂಗ್ಲಿಷ್ ಸ್ಕೂಲ್’ ಎಂದು ನಾಮಕರಣ ಮಾಡಿದರು. ಪ್ರಾರಂಭದಲ್ಲಿ ಕೆಲವು ಅಡೆತಡೆಗಳನ್ನು ಎದುರಿಸಬೇಕಾಯಿತು. ವಿದ್ಯಾರ್ಥಿಗಳನ್ನು ಮನೆ ಮನೆಗೆ ಹೋಗಿ ಕರೆದುಕೊಂಡು ಬರಬೇಕಾಯಿತು. ಅನೇಕ ವ್ಯಕ್ತಿಗಳು ಪ್ರೋತ್ಸಾಹ ಕೊಡುವ ಬದಲು ಅವರಿಗೆ ಟೀಕೆ ಮಾಡಿದರು. ಆದರೆ ಈ ಮೂವರ ನಿಸ್ವಾರ್ಥ ಮತ್ತು ಸತತದುಡಿಮೆಯ ಫಲವಾಗಿ ಪರೀಕ್ಷೆಯ ಪರಿಣಾಮ ನಿರೀಕ್ಷೆ ಮೀರಿ ಚೆನ್ನಾಗಿ ಆಯಿತು. ಈ ಶಾಲೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿಯಾಗಲು ಬೇಕಾದ ಮಾರ್ಗದರ್ಶನ ಸಿಕ್ಕುತ್ತಿತ್ತು. ಆದರೆ ಪರೀಕ್ಷೆಯ ಯಶಸ್ಸಷ್ಟೇ ಶಾಲೆಯ ಉಪಾಧ್ಯಾಯರಿಗೆ ಮುಖ್ಯವಾಗಿರಲಿಲ್ಲ. ವಿದ್ಯಾರ್ಥಿಗಳಿಗೆ ಉತ್ತಮ ಸ್ವತಂತ್ರಬಾಳನ್ನು ನಡೆಸುವ ಪಾಠವನ್ನು ತಿಳಿಸಿಕೊಟ್ಟರು. ಮಕ್ಕಳಿಗೆ ಶಿಕ್ಷಣದಲ್ಲಿ ಅಭಿರುಚಿ ಹುಟ್ಟುವಂತೆ ಮಾಡಿದರು. ಭಾರತೀಯ ಸಂಸ್ಕೃತಿ, ಧರ್ಮ, ಇತಿಹಾಸ ಮುಂತಾದುವುಗಳನ್ನು ತಿಳಿಸಿಕೊಟ್ಟರು. ವಿದ್ಯಾರ್ತಿಗಳಿಗೆ ಪಾಶ್ಚಾತ್ಯ ವ್ಯಾಮೋಹ ಕಡಿಮೆಯಾಗಿ ಸ್ವದೇಶಪ್ರೇಮ ಹೆಚ್ಚಾಗುವಂತೆ ಮಾಡಿದರು. ಸಂಸ್ಥೆಯ ಅಭಿವೃದ್ಧಿಗಾಗಿ ಹಗಲಿರುಳೆನ್ನದೆ ತಿಲಕ, ಅಗರ್‌ಕರ್, ಚಿಪಳೂಣಕರ್ ದುಡಿದರು. ಅಷ್ಟೇ ಅಲ್ಲ ಒಂದು ಪೈಸೆ ಸಂಬಳ ಕೂಡ ತೆಗೆದುಕೊಳ್ಳಲಿಲ್ಲ.

ನ್ಯೂ ಇಂಗ್ಲಿಷ್ ಸ್ಕೂಲು ನಿಂತನೀರಿನಂತೆ ಪ್ರಗತಿ ಕುಂಠಿತವಾಗಲಿಲ್ಲ. ಅದು ಹರಿಯುವ ನೀರಿನಂತೆ ಬೆಳೆದು ಇಂದು ‘ಡೆಕ್ಕನ್ ವಿದ್ಯಾಸಂಸ್ಥೆ’ ಯಾಗಿದೆ. ಈ ಮುಖ್ಯ ಸಂಸ್ಥೆಯ ವತಿಯಿಂದ ಪುಣೆಯ ಫರ್ಗ್ಯಸನ್ ಕಾಲೇಜು, ಬೃಹನ್ಮಹಾರಾಷ್ಟ್ರ ವಾಣಿಜ್ಯ ಮತ್ತು ಅರ್ಥಶಾಸ್ತ್ರ ಕಾಲೇಜು, ಸಾಂಗ್ಲಿಯ ವಿಲಿಂಗ್ಡನ್ ಕಾಲೇಜು, ಮುಂಬಯಿಯ ಮುಂಬಯಿ ಕಾಲೇಜು, ಅಲ್ಲದೆ ಅನೇಕ ಹೈಸ್ಕೂಲುಗಳು ನಡೆಯುತ್ತಿವೆ. ಮಹಾರಾಷ್ಟ್ರ ಪ್ರಾಂತದಲ್ಲಿಯೇ ಅನೇಕ ಹಿರಿಯಸಂಸ್ಥೆಗಳ ಸಾಲಿನಲ್ಲಿ ಇದು ಒಂದಾಗಿದೆ. ಸಾಲಿನಲ್ಲಿ ಇದು ಒಂದಾಗಿದೆ.

ರಾಷ್ಟ್ರನಾಯಕರ ಸಂಪರ್ಕ

ನ್ಯಾಯಮೂರ್ತಿ ರಾನಡೆ, ಅಗರ್‌ಕರ್, ಜ್ಯೋತಿರಾವ್ ಫುಲೆ, ಮತ್ತು ಲೋಕಮಾನ್ಯ ತಿಲಕರು ಅಲ್ಲದೆ ಇನ್ನೂ ಅನೇಕ ಜನನಾಯಕರೊಂದಿಗೆ ವಿಷ್ಣುಶಾಸ್ತ್ರಿಗಳು ಸಂಪರ್ಕವನ್ನಿಟ್ಟು ಕೊಂಡಿದ್ದರು.

ಸಾಮಾಜಿಕ ಸುಧಾರಣೆಗಳಿಗೆ ನ್ಯಾಯಮೂರ್ತಿ ರಾನಡೆ ಅವರು ತತ್ತ ಜ್ಞಾನದ ಗಂಭೀರ ಸ್ವರೂಪವನ್ನು ಕೊಟ್ಟರು. ಅಗರ್‌ಕರ್‌ರವರು ಇದನ್ನು ಪ್ರಚಾರ ಮಾಡಲು ಅವಕಾಶಕೊಟ್ಟರು. ಈ ಇಬ್ಬರಿಗಿಂತ ಮೊದಲು ಜ್ಯೋತಿರಾವ್ ಫುಲೆಯವರು ಅಸ್ಪೃಶ್ಯರ ಸಲುವಾಗಿ ದೊಡ್ಡಸಂಘವನ್ನು ಮಾಡಿಕೊಂಡು ಹರಿಜನರ ಬಂಧ ವಿಮೋಚನೆಗಾಗಿ ಶ್ರಮಿಸಿದರು. ರಾನಡೆ ಹಾಗೂ ಫುಲೆಯವರ ಜೊತೆಗೆ ಶಾಸ್ತ್ರಿಗಳು ಕೂಡ ಸಾಮಾಜಿಕ ಪರಿಸ್ಥಿತಿ, ಸಮಾಜದ ಸಮಸ್ಯೆಗಳು ಇವುಗಳ ಅಧ್ಯಯನ ಮಾಡಲು ವಿಷಯವನ್ನು ಸಂಗ್ರಹಿಸಿದರು. ಸ್ಪಷ್ಟವಾದ ಮತ್ತು ಓದುವವರ ವಿಚಾರಶಕ್ತಿಗೆ ಒಪ್ಪುವಂತಹ ಪುಸ್ತಕಗಳನ್ನು ಬರೆದರು.

ಜ್ಞಾನಯೋಗದ ಅಭ್ಯಾಸ

ಶಾಸ್ತ್ರಿಗಳು ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಅವರು ಕೈಕೊಂಡ ಕಾರ್ಯಕ್ರಮಗಳೆಲ್ಲವೂ ಯಶಸ್ವಿಯಾದವು. ಅವರ ಮುಂದೆ ನಿಶ್ಚಿತವಾದ ಧ್ಯೇಯ ದೃಷ್ಟಿಯಿತ್ತು. ದೇಶಸೇವೆ ಮಾಡಬೇಕೆಂಬ ತೀವ್ರ ಹಂಬಲವಿತ್ತು ಅವರಿಗೆ. ಇದನ್ನು ಕಾರ್ಯಗತಮಾಡುವುದು ಹೇಗೆ ಎಂದು ಸ್ಪಷ್ಟವಾಗಿ ಯೋಚಿಸುತ್ತಿದ್ದರು. ದೇಶಸ್ಥಿತಿಯ ಸುಧಾರಣೆಯಾಗಬೇಕಾದರೆ ಜನರನ್ನು ಜ್ಞಾನಸಂಪನ್ನರಾಗಿ ಮಾಡಬೇಕು ಎಂಬುದನ್ನು ಅವರ ಮೊದಲು ತಾವು ಆಚರಿಸಿ ಅನಂತರ ಜನತೆಗೆ ಹೇಳಿದರು. ಅದಕ್ಕೆ ಪೂರಕವಾಗಿ ಎಂಬಂತೆ ‘ಕಾವ್ಯ ಇತಿಹಾಸ ಸಂಗ್ರಹ’  ‘ಚಿತ್ರಶಾಲೆ’ ‘ಕಿತಾಬಖಾನೆ’ ‘ಮರಾಠಾ’ ಮುಂತಾದ ಜ್ಞಾನ ಮಾರ್ಗಕ್ಕೆ ಉಪಕಾರವಾಗುವಂತಹ ಕಾರ್ಯಗಳನ್ನು ಅವರು ಪ್ರಾಂರಭಿಸಿದರು.

ಭಂಡ ಸರಕಾರ

ವಿಷ್ಣುಶಾಸ್ತ್ರಿಗಳು ಸಂಪ್ರದಾಯದಿಂದ ಬಂದ ವಿಚಾರಗಳನ್ನು ಸ್ವತಂತ್ರವಾಗಿ ಯೋಚಿಸದೆ ಒಪ್ಪಲು ಸಿದ್ಧರಿರಲಿಲ್ಲ. ಬ್ರಿಟಿಷರು ಭಾರತಕ್ಕೆ ಬಂದದ್ದರಿಂದ ಅವರು ಇಲ್ಲಿ ಸರಕಾರ ಸ್ಥಾಪಿಸಿದ್ದರಿಂದ ಭಾರತಕ್ಕೆ ಉಪಕಾರವಾಯಿತೆಂದು ಹೇಳುವ ಜನರಿದ್ದರು. ‘‘ಬ್ರಿಟಿಷರನ್ನು ನಾವು ಗುರುವೆಂದು ತಿಳಿಯುವು ದಿಲ್ಲ, ಬ್ರಿಟಿಷರು ಬಂದಾಗ ನಾವು ಸಾಮ್ರಾಜ್ಯವಾಳುತ್ತಿದ್ದೆವು, ಬ್ರಿಟಿಷರು ನಮ್ಮ ಗುಟ್ಟನ್ನು ತಿಳಿಯಲು ಬಂದವರು, ನಮಗೆ ಕಲಿಸಲು ಅಲ್ಲ. ನಾವು ಅವರ ಕೈಕೆಳಗೆ ಇರಲು ಸಿದ್ಧರಿಲ್ಲ’’ – ಈ ಘೋಷಣೆಗಳನ್ನು ವಿಷ್ಣುಶಾಸ್ತ್ರಿಗಳು ಮಹಾರಾಷ್ಟ್ರದಲ್ಲಿ ಮೊದಲು ಮಾಡಿದರು. ಈ ಘೋಷಣೆಗಳಿಂದಾಗಿ ಚಳವಳಿಯನ್ನು ನಡೆಸುವ ಭಾಗ್ಯ ಶಾಸ್ತ್ರಿಗಳಿಗೆ ಲಭಿಸಲಿಲ್ಲ. ಯಾಕೆಂದರೆ ಮೂವತ್ತೆರಡನೆಯ ವಯಸ್ಸಿನಲ್ಲಿಯೇ ಅವರ ಅಂತ್ಯವಾಯಿತು. ಆದರೆ ಅವರು ಏನು ಮಾಡಬೇಕೆಂದಿದ್ದರೊ ಅದನ್ನು ತಿಲಕರು ಪ್ರತ್ಯಕ್ಷವಾಗಿ ಮಾಡಿತೋರಿಸಿದರು. ಸ್ವರಾಜ್ಯವು ನಮ್ಮ ಜನ್ಮಸಿದ್ಧ ಹಕ್ಕು’’ ಇದು ವಿಷ್ಣುಶಾಸ್ತ್ರಿಗಳ ಪ್ರತಿಪಾದನೆಗೆ ತಿಲಕರು ಕೊಟ್ಟ ಸೂತ್ರರೂಪ.

ಪ್ರಭಾವಿ ಬರಹಗಾರ

ಚಿಪಳೂಣಕರ್ ಅವರ ಪ್ರಪ್ರಥಮ ನಿಬಂಧವೆಂದರೆ ‘ಪ್ರಾಚೀನ ಹಿಂದೂ ಜನರ ಜ್ಞಾನ’  ಇದನ್ನು ಕಾಲೇಜಿನಲ್ಲಿರು ವಾಗಲೇ ಬರೆದರು. ಭೂಮಿಯನ್ನು ಸೂರ್ಯ ಆಕರ್ಷಿಸುತ್ತಾರೆ ಎಂಬ ವಿಷಯ ನಮ್ಮ ಪ್ರಾಚೀನರಿಗೆ ಗೊತ್ತಿರುವುದೆಂದು ಅದರಲ್ಲಿ ಪ್ರತಿಪಾದಿಸಿದ್ದಾರೆ.

ಚಿಪಳೂಣಕರ್ ಅವರು ಶಾಲಾ ಪತ್ರಿಕೆಯಿಂದ ಸಂಸ್ಕೃತ ಕವಿಗಳಾದ, ಭವಭೂತಿ, ಬಾಣ, ಸುಬಂಧು ಮತ್ತು ದಂಡಿ ಇವರ ಮೇಲೆ ಐದು ನಿಂಬಂಧಗಳನ್ನು ಬರೆದರು. ‘ಸಂಸ್ಕೃತ ಕವಿ ಪಂಚಕ’ ಎಂಬ ಅವರ ಪುಸ್ತಕದಲ್ಲಿ ಆ ಕವಿಗಳ ಪರಿಚಯವಿದೆ. ಭಾರತೀಯ ಸಂಸ್ಕೃತಿಯ ಪರಂಪರೆಯನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಯಾರಾದರೂ ಟೀಕಿಸಿದರೆ ವಿಷ್ಣುಶಾಸ್ತ್ರಿಗಳ ಉತ್ತರ ರೂಪದಲ್ಲಿ ಮಾರ್ಮಿಕವಾಗಿ ಟೀಕೆಯನ್ನು ಬರೆಯುತ್ತಿದ್ದರು. ಅವರ ಅಭಿಮಾನ ಎಂದೂ ಕುರುಡಾಗಿರಲಿಲ್ಲ.

ನಿಬಂಧಮಾಲಾ

ವಿಷ್ಣುಶಾಸ್ತ್ರಿಗಳು ನಿಬಂಧ ಬರೆಯುವ ಮುನ್ನ ಯಾವಾಗಲೂ ಒಂದು ಸಂಸ್ಕೃತ ಶ್ಲೋಕ ಹಾಕುವುದು ಅವರ ಪದ್ಧತಿ. ಅದರಲ್ಲಿ ಒಂದನ್ನು ಇಲ್ಲಿ ಉದಾಹರಿಸಬಹುದು.

ಸೌವರ್ಣಾನಿ ಸರೋಜಾನಿ ನಿರ್ಮಾತುಂ ಸಂತಿಶಿಲ್ಪಿನಃ|
ತತ್ರಸೌರಭ ನಿರ್ಮಾಣೆ ಚತುರ್‌ಶ್ಚತುರಾನನಃ||

ಎಂದರೆ ಬಂಗಾರದ ಕಮಲ ಮಾಡುವ ಅಕ್ಕಸಾಲಿಗರು ಅನೇಕರಿದ್ದಾರೆ. ಆದರೆ ಅದರಲ್ಲಿ ಸುಗಂಧ ನಿರ್ಮಿಸುವ ಚಾತುರ್ಯ ಆ ಬ್ರಹ್ಮದೇವನೊಬ್ಬನದೇ.

ಅವರು ಈ ಶ್ಲೋಕವನ್ನು ಉದ್ಧರಿಸಿದ್ದು ಒಂದು ಅಂಶವನ್ನು ಸೂಚಿಸುವುದಕ್ಕೆ. ನಮ್ಮ ದೇಶದಲ್ಲಿ ಸಾಕಷ್ಟು ಜನ ಕವಿಗಳು ಇದ್ದಾರೆ. ಅನೇಕ ಕಾವ್ಯಗಳು ಹುಟ್ಟಿಕೊಂಡಿವೆ. ಆದರೆ ಆ ಕಾವ್ಯಗಳಲ್ಲಿ ಜೀವಂತಿಕೆ ಕಡಮೆ. ಕಾವ್ಯ ನಿತ್ಯ ನೂತನವಾಗಬೇಕಾದರೆ ಕವಿ ಜನ್ಮದಿಂದಲೇ ಪ್ರತಿಭಾವಂತನಾಗಿರಬೇಕು. ಜೊತೆಗೆ ಸತತ ಅಭ್ಯಾಸಬಲ, ಉತ್ತಮರ ಮಾರ್ಗದರ್ಶನ ಇವೂ ಬೇಕೆಂದು ಅವರು ತಮ್ಮ ನಿಬಂಧ ಮಾಲೆಯಲ್ಲಿ ವಿವರಿಸಿದರು. ಶಾಸ್ತ್ರಿಗಳು ಏನನ್ನು ಬರೆದರೂ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡವ ರಾಗಿದ್ದರು.

ಶಾಸ್ತ್ರಿಗಳು ಸಂಸ್ಕೃತದಲ್ಲಿ ಮಹಾಮೇಧಾವಿಗಳಾಗಿದ್ದರು. ತಮ್ಮ ನಿಬಂಧಮಾಲೆಯಲ್ಲಿಯ ಸಾಹಿತ್ಯವನ್ನು ಓದುಗರಿಗೆ ರಂಜಿಸುವಂಥ ಭಾಷೆಯಲ್ಲಿ ಕೊಡುತ್ತಿದ್ದರು. ಪ್ರತಿಯೊಂದು ಸಂಚಿಕೆಯಲ್ಲಿ ವಿವಿಧ ವಿಷಯಗಳು ಬಂದಿವೆ. ಅವುಗಳಲ್ಲಿ ಬಹಳಷ್ಟು ಸಂಚಿಕೆಗಳು ಪುಸ್ತಕಗಳ ಹಾಗೆ ಸಂಗ್ರಹಿಸಲು ಯೋಗ್ಯತೆಯನ್ನು ಹೊಂದಿವೆ.

ಶಾಲಾಪತ್ರಿಕೆಯಿಂದ ಅವರ ಬರವಣಿಗೆಯ ಕೆಲಸ ಪ್ರಾರಂಭವಾಯಿತು. ಅದರನಂತರ ೧೮೭೪ ರಲ್ಲಿ ‘ನಿಬಂಧಮಾಲೆ’ಯನ್ನು ನಡೆಸಲು ಪ್ರಾರಂಭಿಸಿದರು. ಏಳು ವರ್ಷಗಳವರೆಗೆ, ಎಂಬತ್ತೊಂದು ಸಂಚಿಕೆಗಳವರೆಗೆ ಬರೆದನಂತರ ತಮ್ಮ ಆಸೆ ಸಫಲವಾಯಿತೆಂದು ಅದನ್ನು ನಿಲ್ಲಿಸಿಬಿಟ್ಟರು. ಈ ಏಳು ವರ್ಷಗಳಲ್ಲಿ ಈ ಪತ್ರಿಕೆಯಲ್ಲಿ ಅಚ್ಚಾದ ಎಲ್ಲಾ ಲೇಖನಗಳು ಚಿಪಳೂಣಕರರು ಬರೆದವೇ ಎಂಬುದನ್ನು ಗಮನಿಸಿದಾಗ ಅವರ ಸಾಧನೆ ಎಷ್ಟು ದೊಡ್ಡದು ಎಂದು ಗೊತ್ತಾಗುತ್ತದೆ. ತಮ್ಮ ಪ್ರಬಂಧಗಳಿಗೆ ವಿಷ್ಣುಶಾಸ್ತ್ರಿಗಳು ಹಲವು ವಿಷಯಗಳನ್ನು ಆರಿಸಿಕೊಂಡರು. ಭಾಷೆ, ಸಾಹಿತ್ಯ, ಸಾಮಾಜಿಕ ಸ್ಥಿತಿ, ರಾಜಕೀಯ ಸ್ಥಿತಿ, ಮನಶಾಸ್ತ್ರದ ಬೆಳವಣಿಗೆ -ಹೀಗೆ ಹಲವಾರು ವಿಷಯಗಳನ್ನು ಕುರಿತು ಬರೆದರು.

ಅಪೂರ್ವ ಕರ್ತೃತ್ವ

ಚಿಪಳೂಣಕರ್ ಅವರು ಒಬ್ಬರೇ, ಯಾರೂ ಹತ್ತಿರವಿರದೆ, ಯಾರನ್ನೂ ಬೇಡದೆ, ಯಾರಿಂದಲೂ ಧನಸಹಾಯ ಪಡೆಯದೆ, ಸರಕಾರದ ಮರ್ಜಿಕಾಯದೆ ಸತತ ಏಳು ವರ್ಷಗಳವರೆಗೆ ನಿಂಬಧಮಾಲೆಯನ್ನು ಯಶಸ್ವಿಯಾಗಿ ನಡೆಸಿದರು. ನಿಜವಾಗಿಯೂ ಇದು ಒಬ್ಬನೇ ವ್ಯಕ್ತಿಯ ಕಾರ್ಯವೆಂದರೆ ಅಸಾಧಾರಣ ಕೆಲಸವೆಂದು ಹೇಳಬಹುದು.

ಅವರ ಮೊದಲನೆಯ ಪ್ರಬಂಧ ‘ಮರಾಠಿ’ ಭಾಷೆಯ ಸ್ಥಿತಿ’, ಅವರ ನಿಬಂಧ ಮಾಲೆಯ ಕೊನೆಯ ಪ್ರಬಂಧ ‘ನಮ್ಮ  ದೇಶದ ಸ್ಥಿತಿ’. ಮೊದಲನೆಯದರಲ್ಲಿ ಸರಕಾರದ ಕಣ್ಣನ್ನು ತೆರೆಯಿಸಿ ಕ್ರಮೇಣ ಜನರ ಮನಸ್ಸನ್ನು ದೇಶಾಭಿಮಾನದ ಕಡೆಗೆ ಹರಿಸಿದರು. ಅವರ ದೇಶಾಭಿಮಾನದ ವೈಶಿಷ್ಟ್ಯವೆಂದರೆ ತ್ಯಾಗ ಮತ್ತು ಮುತ್ಸದ್ದಿತನ. ಅಗರ್‌ಕರ್ ಅವರು ಚಿಪಳೂಣಕರ್ ಅವರು ತೀರಿಕೊಂಡಾಗ ಬರೆದ ಲೇಖನದಲ್ಲಿ ಒಂದು ಸಂಗತಿಯನ್ನು ಹೇಳಿದರು. ‘‘ನಾವು ಲೇಖನಗಳನ್ನು ಬರೆಯುವ ಮೊದಲೆ ಒಂದು ಕಾಲನ್ನು ಸೆರೆಮನೆಯಲ್ಲಿರಿಸಿದ್ದೇವೆ’’ ಎಂದು ಚಿಪಳೂಣಕರ್ ಹೇಳಿದ್ದರಂತೆ. ನಿಸ್ಪೃಹತ್ಯಾಗ, ಸ್ಪಷ್ಟಮಾತು ಇವುಗಳಿಂದ ಅವರು ಜನಪ್ರಿಯ ಲೇಖಕರಾದರು.

ರಸಿಕತೆ ನಿಬಂಧಮಾಲೆಯ ಇನ್ನೊಂದು ರಮಣೀಯ ವೈಶಿಷ್ಟ್ಯ ಇದು ಚಿಪುಳೂಣಕರರಿಗೆ ಅನುವಂಶಿಕವಾಗಿ ಬಂದ ಗುಣ. ಇವರ ತಂದೆಯವರ ಲೇಖನಗಳಲ್ಲಿಯೂ ನಾನು ರಸಿಕತೆಯ ಸ್ವರೂಪ ಕಾಣಬಹುದು. ಚಿಪುಳೂಣಕರ್ ಅವರ ರಸಿಕತೆಯು ಬಹು ನಿರ್ಮಲವಾಗಿತ್ತು.

ಶೈಲಿ

ನಿಬಂಧಮಾಲೆಯನ್ನು ಓದಿದಾಗ ಅದರ ವರ್ಣನಾತ್ಮಕ ಮತ್ತು ಭಾವನಾತ್ಮಕ ಶೈಲಿಯು ನಮಗೆ ರಸವತ್ತಾಗಿ ಕಂಡು ಬರುತ್ತದೆ. ಚಿಪಳೂಣಕರರು ತಮ್ಮ ಬರಹಗಳ ಭಾಷೆಗೆ, ವಿಷಯವನ್ನು ನಿರೂಪಿಸುವ ರೀತಿಗೆ ಬಹು ಪ್ರಾಧಾನ್ಯ ಕೊಡುತ್ತಿದ್ದರು. ವಾಕ್ಯರಚನೆಯು ಸರಳವಾಗಿರಬೇಕು. ಅರ್ಥ ಸರಳ ಮತ್ತು ಸುಂದರವಾಗಿರಬೇಕು. ಅಂದರೆ ಅದು ಮನಸ್ಸಿಗೆ ಹಿಡಿಸುವಂತಿರಬೇಕು ಎಂದಿದ್ದಾರೆ. ಭಾವನಾಶೀಲತ್ವವನ್ನು ಹೃದಯಂಗವಾಗಿ ಚಿತ್ರಿಸಿದ್ದಾರೆ. ಯಾವ ವಿಚಾರವನ್ನು ನಿರೂಪಿಸಿದರೂ ಹೃದಯ ಮುಟ್ಟುವಂತೆ ಬರೆದಿದ್ದಾರೆ. ಆದರೆ ಸಂತೋಷ, ದುಃಖ, ಕೋಪ, ಆಶ್ಚರ್ಯ ಇಂತಹ ಭಾವಗಳನ್ನು ಎಚ್ಚರಿಸುವುದು ಅವರ ಗುರಿಯಲ್ಲ. ವಿಷಯವನ್ನು ವಿಚಾರಮಾಡಿ ನೋಡಬೇಕು, ಯಾವುದು ಸರಿ ಯಾವುದು ತಪ್ಪು ಎನ್ನುವುದನ್ನು ವಿಮರ್ಶಿಸಿ ನೋಡಬೇಕು ಎಂಬುದು ಅವರ ಗುರಿ. ಹೀಗಾಗಿ ಅವರ ಬರಹಗಳಲ್ಲಿ ಭಾವ-ವಿಚಾರಶಕ್ತಿ ಎರಡನ್ನೂ ಕಾಣುತ್ತೇವೆ.

ಮಾತೃಭಾಷೆಯ ಕಟ್ಟಾಭಿಮಾನಿ

ಚಿಪಳೂಣಕರರು ನಿಬಂಧಮಾಲೆಯ ಲೇಖನಗಳ ಮೂಲಕ ಮಾತೃಭಾಷೆಯ ಅಭಿಮಾನವನ್ನು ಎಚ್ಚರಗೊಳಿಸಲು ಪ್ರಾರಂಭಿಸಿದರು. ಹಲವರು ವಿದ್ವಾಂಸರು ಇಂಗ್ಲಿಷ್ ಭಾಷೆಯಲ್ಲಿ ಕೆಲವು ಗ್ರಂಥಗಳನ್ನು ಬರೆದಿದ್ದರು. ಮರಾಠಿಯಲ್ಲಿ ಬರೆದರೆ ಅಪಮಾನವೆಂದು ಅವರ ಕಲ್ಪನೆಯಾಗಿತ್ತು. ತಮ್ಮ ಮಾತೃಭಾಷೆಯನ್ನು ಉಪೇಕ್ಷಿಸುವದೆಂದರೆ ಅಪಮಾನವೆಂಬುದು ಅವರಿಗೆ ತಿಳಿದಿರಲಿಲ್ಲ. ೧೮೫೭ ರಲ್ಲಿ ಮುಂಬಯಿ ವಿದ್ಯಾಪೀಠದ ಸ್ಥಾಪನೆಯಾಯಿತು. ೧೮೭೪ ರಲ್ಲಿ ‘ನಿಂಬಂಧಮಾಲೆ’  ಪ್ರಾರಂಭವಾಯಿತು. ಆಗಿನ ವಿಶ್ವವಿದ್ಯಾನಿಲಯದಿಂದ ಹೊರ ಬೀಳುತ್ತಿದ್ದ ಪಧವೀಧರರು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಲೇಖನಗಳನ್ನು ಬರೆಯುತ್ತಿದ್ದರು. ಚಿಪಳೂಣಕರರು ಮಾತೃಭಾಷೆ ಮತ್ತು ಮಾತೃಭೂಮಿಯ ಸೇವೆಯ ವ್ರತವನ್ನು ಕೈಗೊಂಡರು. ಚಿಪಳೂಣಕರ್ ಅವರ ಅಚಲ ಕರ್ತವ್ಯನಿಷ್ಠೆ, ಶ್ರದ್ಧೆ, ಧ್ಯೇಯಾದರ್ಶ, ಪ್ರತಿಭೆ, ಇವು ಅವರ ನಿಬಂಧಮಾಲೆಯ ಸಂಗ್ರಹದಲ್ಲಿ ಸ್ಪಷ್ಟವಾಗಿ ಕಂಡುಬರುತ್ತದೆ.

ಆಧುನಿಕ ಮರಾಠಿಯ ಗದ್ಯದ ಜನಕ

ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯಲ್ಲಿರುವ ಜ್ಞಾನ ಭಂಡಾರವನ್ನು ಮರಾಠಿಯಲ್ಲಿ ತಂದು ಮರಾಠಿ ಭಾಷೆಯನ್ನು ವೈಚಾರಿಕ ದೃಷ್ಟಿಯಿಂದ ಸಮೃದ್ಧಗೊಳಿಸಬೇಕೆಂದು ಚಿಪಳೂಣಕರರಮನದ ಇಚ್ಛೆಯಾಗಿತ್ತು. ಇಂಗ್ಲಿಷ್ ಭಾಷೆಯನ್ನು ಅರೆ ಕಲಿತು ಮರಾಠಿ ಬಾಷೆಯನ್ನು ತಿರಸ್ಕಾರದಿಂದ ಕಾಣುತ್ತಿದ್ದ ಇಂಗ್ಲಿಷ್ ಸುಶಿಕ್ಷಿತರ ಮೇಲೆ ಸಿಡಿದು ಬೀಳುತ್ತಿದ್ದರು. ಆದರೆ ಇಂಗ್ಲಿಷ್ ಭಾಷೆ ಅಥವಾ ವಿದ್ಯೆಯ ಮೇಲೆ ಅವರಿಗೆ ದ್ವೇಷವಿರಲಿಲ್ಲ. ಕಾರಣ ಇಂಗ್ಲಿಷ್ ಭಾಷೆಯ ಜ್ಞಾನ ಭಂಡಾರವನ್ನು ಮರಾಠಿಯಲ್ಲಿ ತಂದರೆ ಮರಾಠಿಗೆ ಉಜ್ವಲ ಭವಿಷ್ಯ ಉಂಟಾಗುತ್ತದೆ ಎಂದು ಅವರಿಗೆ ಗೊತ್ತಿತ್ತು. ಪರಭಾಷೆ ಸಂಪರ್ಕದಿಂದ ಮರಾಠಿಗೆ ಬಾಧಕವೆಂದು ಅವರು ತಿಳಿದಿರಲಿಲ್ಲ. ತಮ್ಮ ಭಾಷೆಯ ಸತ್ವವನ್ನುಇಟ್ಟುಕೊಂಡು ಇಂಗ್ಲಿಷಿನಲ್ಲಿಯ ವಿಚಾರ, ವಿವಿಧ ಸಾಹಿತ್ಯ ವಾಕ್ಯ ರಚನೆಯ ಪದ್ಧತಿ, ಕೆಲವು ಶಬ್ದಗಳನ್ನು ಕೂಡಾ ಮರಾಠಿಯಲ್ಲಿ ತೆಗೆದುಕೊಳ್ಳಲು ಅಡ್ಡಿ ಇಲ್ಲ ಎಂಬುದು ಅವರ ಉದಾರವಾದ ಅಭಿಪ್ರಾಯವಾಗಿತ್ತು.

ಚಿಪಳೂಣಕರರು ಮರಾಠಿ ವಾಕ್ಯಗಳಿಗೆ ಇಂಗ್ಲಿಷಿನಲ್ಲಿ ವಾಕ್ಯಗಳನ್ನು ರಚಿಸುವ ರೀತಿಯನ್ನು ಬಳಿಸಿದರು. ಅಗತ್ಯವಾದ ಸಂಸ್ಕೃತ ಶಬ್ದಗಳನ್ನು ಉಳಿಸಿಕೊಂಡರು, ಬಳಸಿಕೊಂಡರು. ಅವರ ಹಿಂದಿನ ಕಾಲದ ಮರಾಠಿ ಗದ್ಯದಲ್ಲಿ ಪರ್ಷಿಯನ್ ಭಾಷೆಯ ಪದಗಳು ತುಂಬಿಹೋಗಿದ್ದನು. ಚಿಪಳೂಣಕರರು ಅವುಗಳನ್ನು ಸಂಪೂರ್ಣವಾಗಿ ಬಿಟ್ಟರು. ಈ ಶಬ್ದಗಳಿಲ್ಲ ದೆಯೂ ಮರಾಠಿ ಭಾಷೆಯಲ್ಲಿ ಯಾವ ಭಾವನೆ ಯನ್ನಾಗಲಿ, ವಿಚಾರವನ್ನಾಗಲಿ ಸ್ಪಷ್ಟವಾಗಿ ಹೇಳಬಹುದು ಎಂಬುದು ಅವರ ಅಭಿಪ್ರಾಯ. ಅವರು ಜಾನ್‌ಸನ್, ಅಡಿಸನ್, ಮೆಕಾಲೆ ಮೊದಲಾದ ಇಂಗ್ಲಿಷ್ ಬರಹಗಾರರು ತಮ್ಮ ಭಾಷೆಯನ್ನು ಹೇಗೆ ಬಳಸಿಕೊಂಡಿದ್ದರು ಎಂಬುದನ್ನು ಅಭ್ಯಾಸಮಾಡಿ, ಅವರಿಂದ ಅನೇಕ ವಿಷಯಗಳನ್ನು ಕಲಿತರು. ಹಾಗೆಯೇ ಮೋರೋಪಂತ್, ವಾಮನ ಪಂಡಿತ್, ತುಕಾರಾಂ, ರಾಮದಾಸ್ ಮೊದಲಾದ ಮರಾಠಿ ಕವಿಗಳನ್ನು ಅಭ್ಯಾಸ ಮಾಡಿ ಹಲವು ವಿಷಯಗಳನ್ನು ಕಲಿತರು. ಹೀಗೆ ಅವರ ಬರಹದಲ್ಲಿ ಇಂಗ್ಲಿಷ್, ಸಂಸ್ಕೃತ ಮತ್ತು ಹಿಂದಿನ ಕಾಲದ ಮರಾಠಿ ಸಾಹಿತ್ಯಗಳಿಂದ ಆರಿಸಿದ ಅತ್ಯುತ್ತಮ ಅಂಶಗಳು ಸೇರಿದ್ದವು. ಆಧುನಿಕ ಮರಾಠಿಯಲ್ಲಿ ಪ್ರಭಾವಶಾಲಿ ಗದ್ಯಲೇಖನಪರಂಪರೆಯನ್ನು ಪ್ರಾರಂಭಿಸಿದ ಶ್ರೇಯಸ್ಸು ಚಿಪಳೂಮಕರರಿಗೆ ಸಲ್ಲುತ್ತದೆ. ಇದರಿಂದ ‘ಆಧುನಿಕ ಮರಾಠಿಯ ಗದ್ಯದ ಜನಕ’ ಎಂದು ಮಹಾರಾಷ್ಟ್ರವು ಅವರನ್ನು ಗೌರವಿಸಿತು.

ಆಧುನಿಕ-ಗದ್ಯಚರಿತ್ರಕಾರ ಮತ್ತು ಟೀಕಾಕಾರ

‘ನಿಬಂಧಮಾಲೆ’ಯ ಅತ್ಯಂತ ಗಮನ ಸೆಳೆಯುವ ಇನ್ನೊಂದು ಕಾರ್ಯವೆಂದರೆ ಆಧುನಿಕ ಮರಾಠಿಯ ಪ್ರಥಮ ನಿಬಂಧ ಚರಿತ್ರೆ ಮತ್ತು ಟೀಕೆ. ಇದರಲ್ಲಿ ಸಾಹಿತ್ಯಿಕ ಪ್ರಕಾರದ ಪ್ರತಿಷ್ಠಿತ ಮತ್ತು ಸಾಮಾನ್ಯ ಸ್ವರೂಪವನ್ನು ತೋರಿಸಿಕೊಟ್ಟಿದ್ದಾರೆ. ಸಾಹಿತ್ಯದ ದೃಷ್ಟಿಯಿಂದ ನಿಬಂಧದ ಸುಂದರ ರಚನೆ ಮಾಡುವ ಮೊದಲ ಪ್ರಯತ್ನವನ್ನು ಆಧುನಿಕ ಮರಾಠಿಯಲ್ಲಿಯ ಚಿಪುಳೂಣಕರ್ ಇವರು ಮಾಡಿದ್ದಾರೆ. ನಿಬಂಧ ಸಾಹಿತ್ಯದ ಪ್ರಕಾರವನ್ನು ಇಂಗ್ಲಿಷಿನಿಂದ ತೆಗೆದುಕೊಂಡಿದ್ದರು. ಈಗ ಇದು ಮರಾಠಿ ಭಾಷೆಯಲ್ಲಿ ಒಂದಾಗಿ ಬಿಟ್ಟಿದೆ. ಇದರ ಎಲ್ಲ ಶ್ರೇಯಸ್ಸು ಚಿಪುಳೂಣಕರರಿಗೆ ಸಲ್ಲುತ್ತದೆ. ನಿಬಂಧಮಾಲೆಯಲ್ಲಿ ಡಾಕ್ಟರ್ ಜಾನ್‌ಸನ್ ಇವರ ಹೃದಯಂಗಮವಾದ ಚರಿತ್ರೆಯನ್ನು ಬರೆದಿದ್ದಾರೆ. ಆ ಲೇಖನವೇ ಚರಿತ್ರಸಾಹಿತ್ಯಕ್ಕೆ ನಾಂದಿಯಾಯಿತು.

ಚಿಪಳೂಣಕರ್ ಅವರು ಅಮರನೀತಿಯ ಗ್ರಂಥದ ಮೇಲೆ ಸ್ವತಂತ್ರ ಲೇಖನ ಬರೆದು ಆದರ್ಶ ಟೀಕೆ ಹೇಗಿರಬೇಕು, ಟೀಕಾಕಾರನಲ್ಲಿ ಯಾವ ಗುಣಗಳಿರಬೇಕು. ಇವುಗಳ ವಿವೇಚನೆ ಮಾಡಿದ್ದಾರೆ.

ಈ ಮಾಲೆಯ ಸ್ಫೂರ್ತಿಯಿಂದ ಮಹಾರಾಷ್ಟ್ರದಲ್ಲಿ ಸಾಹಿತ್ಯಸೇವೆಯ ಕಾರ್ಯದ ಉಜ್ವಲ ಪರಂಪರೆಯು ಪ್ರಾರಂಭವಾಯಿತು. ಇದರಿಂದ ಸಾಹಿತ್ಯದ ಅಲೌಕಿಕ ಸ್ವರೂಪ ಎಷ್ಟು ಭವ್ಯವಾಗಿತ್ತು ಎಂದು ಗೊತ್ತಾಗುತ್ತದೆ. ಅವರು ಬರೆದ ಅನೇಕ ಪಂಚತಂತ್ರದ ಕತೆಗಳು ಸಾಹಿತ್ಯಕ್ಷೇತ್ರದಲ್ಲಿ ಚಿರಸ್ಮರಣೀಯವಾಗಿದೆ.

ಕೊನೆಯ ದಿನಗಳು

ಚಿಪಳೂಣಕರರು ೧೮೮೧ ಜನವರಿಯಿಂದ ೧೮೮೨ ರ ಮಾರ್ಚ್ ವರೆಗೆ ‘ಕೇಸರಿ’ ಪತ್ರಿಕೆಯಲ್ಲಿ ಸುಮಾರು ೧೧೫ ಲೇಖನಗಳನ್ನು ಬರೆದರು. ದೇಶಭಾಷೆಯ ಗ್ರಂಥ ಸಂಗ್ರಹಣದ ಅವಶ್ಯಕತೆ, ಪರಭಾಷೆಯ ಶಬ್ದಗಳ ಯೋಜನೆ, ಅನುಕರಣ, ಮುದ್ರಣ ಸ್ವಾತಂತ್ರ್ಯ ಮತ್ತು ದೇಶೋನ್ನತಿ ಮುಂತಾದ ವಿಷಯಗಳನ್ನು ಕುರಿತು ಬರೆದವುಗಳು.

ದೇಶೋನ್ನತಿಯ ಬಗ್ಗೆ ಬರೆಯುವುದೇ ಅವರ ಕೊನೆಯ ಲೇಖನ. ೧೮೮೨ರ ಜನವರಿ ೧೬ರಂದು ಫೋಟೊ ತೆಗೆದುಕೊಳ್ಳುತ್ತಿರುವಾಗ ಬಹಳ ವೇಳೆಯವರೆಗೆ ಬಿಸಿಲಲ್ಲಿ ನಿಂತ ಕಾರಣ ತಲೆಸುತ್ತಿ ಬಿದ್ದರು. ಗಾಯಗಳೇನು ವಿಶೇಷವಾಗಿರಲಿಲ್ಲ, ಆದರೆ ಸ್ವಲ್ಪ ಜ್ವರ ಬಂದಿತು. ಮಾರ್ಚ್ ಹದಿನೇಳರಂದು ಬೆಳಗ್ಗೆ ಈ ಮಹಾಪುರುಷರು ಕೊನೆ ಉಸಿರು ಎಳೆದರು.

ಕಾರ್ಯಶೀಲ ವ್ಯಕ್ತಿತ್ವ

ಚಿಪಳೂಣಕರರು ಸ್ವಾತಂತ್ರದ ಹೋರಾಟಕ್ಕೆ ಸಿದ್ಧತೆ ಮಾಡಿದ ಧೀರರಲ್ಲಿ ಒಬ್ಬರು. ಸುಮಾರು ೧೯೨೦ರಿಂದ ಭಾರತದಲ್ಲಿ ಗಾಂಧಿಜಿಯವರು ನಾಯಕತ್ವ ಬಲಗೊಂಡಿತು. ಸ್ವಾತಂತ್ರ್ಯದ ಹೋರಾಟ ಹೊಸ ಸ್ವರೂಪ ತಳೆದು ಬಿರುಸಾಯಿತು. ಇದಕ್ಕೆ ಸುಮಾರು ನಲವತ್ತು ವರ್ಷಗಳ ಹಿಂದೆ ತೀರಿಕೊಂಡ ಚಿಪಳೂಣಕರರು, ತಿಲಕರಂತಹ ಗೆಳೆಯರೊಂದಿಗೆ ಕೆಲಸ ಮಾಡಿ, ಆಗಲೆ ಹೊರಗಿನ ಸರ್ಕಾರಕ್ಕೆ ಸವಾಲನ್ನು ಹಾಕಿದ್ದರು. ಸರ್ಕಾರಿ ಕೆಲಸವನ್ನು ತಳ್ಳಿ ಹಾಕಿದ್ದರು. ಅವರದು ಕಾರ್ಯಶೀಲ ದೇಶಾಭಿಮಾನ. ಎಳೆಯರ ಮನಸ್ಸನ್ನು ಸರಿಯಾಗಿ ರೂಪಿಸಲು, ಸರ್ಕಾರದ ಹಂಗಿಲ್ಲದೆ ಶಾಲೆಯನ್ನು ತೆರೆದರು. ದೊಡ್ಡವರಿಗೆಹೊಸ ವಿಚಾರಗಳನ್ನು ಮುಟ್ಟಿಸಲು ತಿಲಕರ ಜೊತೆ ಸೇರಿ ಪತ್ರಿಕೆಗಳನ್ನು ನಡೆಸಿದುದಲ್ಲದೆ ಅವಕ್ಕೆ ಮೊದಲು ತಮ್ಮ ‘ಶಾಲಾ ಪತ್ರಿಕೆ’ ಮತ್ತು ‘ನಿಬಂಧಮಾಲಾ’ ಗಳಿಂದ ಶ್ರಮಿಸಿ ದ್ದರು. ಪೂನಾದ ‘ಕಿತಬ್‌ಖಾನಾ’ ಎಂಬ ಪುಸ್ತಕ ಮಾರಾಟದ ಅಂಗಡಿಯ ಸ್ಥಾಪಕರಲ್ಲಿ ಅವರೊಬ್ಬರು. ಇಂಗ್ಲಿಷ್ ಸರ್ಕಾರವನ್ನು ಟೀಕಿಸುವ ಪುಸ್ತಕಗಳನ್ನೂ ಅಂತಹ ಪುಸ್ತಕ ಗಳನ್ನು ಬರೆದ ಲೇಖಕರ ಇತರ ಪುಸ್ತಕಗಳನ್ನೂ ಮಾರಾಟ ಮಾಡುವುದಕ್ಕೂ ಅನೇಕ ಮಂದಿ ಪುಸ್ತಕ ವ್ಯಾಪಾರಿಗಳು ಹೆದರುತ್ತಿದ್ದರು. ಅದಕ್ಕಾಗಿ ಚಿಪಳೂಣಕರರು ಪುಸ್ತಕ ಮಾರಾಟದ ಅಂಗಡಿಯೊಂದನ್ನು ತಮ್ಮ ಮಿತ್ರರ ನೆರವಿನಿಂದ ಪ್ರಾರಂಭಿಸಿದರು. ಇವನ್ನೆಲ್ಲ ಅಚ್ಚುಮಾಡಲು ಪುಣೆಯಲ್ಲಿ ಆರ್ಯಭೂಷಣ ಮತ್ತು ಚಿತ್ರಶಾಲ ಎಂಬ ಮುದ್ರಣಾ ಲಯಗಳನ್ನು ಪ್ರಾರಂಭಿಸಿದರು.

ಶಾಸ್ತ್ರಿಯವರು ನಡು ಎತ್ತರದವರು, ಗೌರವರ್ಣ ವಿಶಾಲವಾದ ಕಪ್ಪುಕಣ್ಣುಗಳು, ಅಗಲವಾದ ಹಣೆ, ದಪ್ಪವಾದ ತುಟಿ. ತಲೆಯ ಮೇಲೆ ಪಾಗೋಟ (ದುಂಡು ಟೊಪ್ಪಿಗೆ) ಮೃದುಸ್ವಭಾವ. ಮಿತಭಾಷಿಯಾಗಿದ್ದರು.

ಮಹಾರಾಷ್ಟ್ರದ ಏಳಿಗೆಯಲ್ಲಿ ಭಾರತೀಯ ದೇಶೋದ್ಧಾರ ದಲ್ಲಿ ರಚನಾತ್ಮಕ ಕೆಲಸವನ್ನು ಮಾಡಿದವರು ಚಿಪಳೂಣ ಕರರು. ಭಾರತೀಯ ಸ್ವಾತಂತ್ರದ ಹಂಬಲ ಮತ್ತು ದೇಶ ಪ್ರೇಮದ ಕ್ರಾಂತಿ ವಿಚಾರಗಳ ಬೀಜಗಳನ್ನು ದೇಶಬಾಂಧವರ ಮನಸ್ಸಿನಲ್ಲಿ ಬೀರಿದ ಮಹಾನುಭಾವರು.