ಸುಮಾರು ಐವತ್ತು ವರ್ಷಗಳ ಹಿಂದೆ ನಡೆದ ಘಟನೆ.

೧೯೨೩ನೆಯ ಇಸವಿ ಆ ವರ್ಷ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನವು ಕಾಕಿನಾಡದಲ್ಲಿ ಸೇರಿತ್ತು. ಭಾರತವು ಸ್ವಾತಂತ್ರ‍್ಯಕ್ಕೆ ಹೋರಾಡುತ್ತಿದ್ದ ಕಾಲ. ದೇಶದ ಹೆಸರಂತ ನಾಯಕರೆಲ್ಲರೂ ಅಧಿವೇಶನಕ್ಕೆ ಆಗಮಿಸಿದ್ದರು. ಮಹಾತ್ಮಾ ಗಾಂಧೀಯವರೂ ಅಧಿವೇಶನಕ್ಕೆ ಬಂದಿದ್ದರು. ಷೌಕತ್ ಆಲಿ ಮತ್ತು ಮಹಮ್ಮದ್ ಆಲಿ ಎಂಬ ಸಹೋದರರು ಅವರ ಎಡಗೈ ಮತ್ತು ಬಲಗೈ ಎಂದು ಹೆಸರಾಗಿದ್ದರು. ಮಹಮ್ಮದ್ ಆಲಿಯವರು ಕಾಕಿನಾಡ  ಕಾಂಗ್ರೆಸ್ಸಿನ ಅಧ್ಯಕ್ಷರಾಗಿದರು.

ಸಭೆಯ ಅಧ್ಯಕ್ಷರು ಸಭೆಗೆ ವೈಭವದ ಮೆರವಣಿಗೆಯಲ್ಲಿ ಬಂದರು. ಮೆರವಣಿಗೆಯಲ್ಲಿ ಅಧ್ಯಕ್ಷರ ಮುಂದೆ ಹಲವು ಸಂಗೀತ ವಾದ್ಯಗಳು: ಅವುಗಳ ನಾದ ಆಕಾಶವನ್ನೇ ಮುಟ್ಟುತ್ತದೆ ಎನ್ನುವ ಹಾಗಿತ್ತು. ಜನರ ಉತ್ಸಾಹ, ಸಂಭ್ರಮ, ವರ್ಣಿಸಲು ಸಾಧ್ಯವಿಲ್ಲ. ಜಯಜಯಕಾರಗಳು ದಿಕ್ಕುಗಳನ್ನು ತುಂಬುತ್ತಿದವು.

ಅಧ್ಯಕ್ಷ ಮಹಮ್ಮದ್ ಆಲಿ ಸಭಾಭವನದ ಒಳಕ್ಕೆ ಬಂದರು, ಅಧ್ಯಕ್ಷಸ್ಥಾನದಲ್ಲಿ ಕುಳಿತರು.

ಸಭೆಯ ಕಾರ್ಯಕಲಾಪಗಳು ಪ್ರಾರ್ಥನೆಯಿಂದ ಪ್ರಾರಂಭವಾಗಬೇಕು. ತೇಃಪುಂಜ, ದೃಢಕಾಯದ ವ್ಯಕ್ತಿಯೊಬ್ಬನು ವೇದಿಕೆಯನ್ನೇರಿದ; ವಂದೇಮಾತರಂ ರಾಷ್ಟ್ರಗೀತೆಯನ್ನು ಗಂಭೀರವಾದ ಉಚ್ಛಸ್ವರದಲ್ಲಿ ಸುಶ್ರಾವ್ಯವಾಗಿ ಹಾಡಲು ಪ್ರಾರಂಭಿಸಿದ.

’ಹಾಡುವುದನ್ನು ನಿಲ್ಲಿಸಿ. ಒಂದು ಜಾತಿಯವರ ಹಾಡನ್ನು ಹಾಡಕೂಡದು. ವಂದೇಮಾತರಂ ಹಾಡ ಕೂಡದು’ ಎಂದು ಹೇಳಿ ಅಧ್ಯಕ್ಷ ಮಹಮ್ಮದ್ ಆಲಿಯವರು ಹಾಡುವವನನ್ನು ತಡೆದರು.

ರಾಷ್ಟ್ರಗೀತೆಗೆ ಕಾಂಗ್ರೆಸ್ ಅಧ್ಯಕ್ಷರಿಂದ ಅಪಮಾನವೇ? ಕೋಟಿ ಕೋಟಿ ಕಂಠಗಳಿಂದ ನಿನಾದಿಸುತ್ತಿರುವ”ವಂದೇ ಮಾತರಂ ಗೀತೆ’ ಜಾತ್ಯತೀತ ತತ್ತ್ವಕ್ಕೆ ವಿರುದ್ಧವೆ! ಆ ಸಭೆಯಯಲ್ಲಿ ಕುಳಿತ ಜನ ಹಾಗೂ ಜನನಾಯಕರು ಈ ವಿರೋಧವನ್ನು ನಿರೀಕ್ಷಿಸಿಯೇ ಇರಲಿಲ್ಲ. ಅವರು ಬೆರಗಾದರು, ಏನು ಮಾಡಬೇಕೆಂದು ತಿಳಿಯದೆ ಕುಳಿತರು. ಒಂದು ಕ್ಷಣ ಎಲ್ಲೆಡೆಯಲ್ಲಿ ಮೌನ ವ್ಯಾಪಿಸಿತು. ನಾಯಕರ ಪೈಕಿ ಒಬ್ಬರೂ ತುಟಿ ಬಿಚ್ಚಲಿಲ್ಲ. ಮುಂದೇನಾಗುವುದೋ ಎಂಬುದನ್ನು ಅಸಹಾಯಕರಾಗಿ ನೋಡುತ್ತ ಕುಳಿತರು.

ವಂದೇಮಾತರಂ ಹಾಡಲು ಪ್ರಾರಂಭಿಸಿದ ವ್ಯಕ್ತಿ ಘರ್ಜಿಸಿದನು :

’ರಾಷ್ಟ್ರೀಯ ಕಾಂಗ್ರೆಸ್ ಯಾವುದೇ ಒಂದು ಧಾರ್ಮಿಕ ಪಂಥಕ್ಕೆ ಸೇರಿದ್ದಲ್ಲ. ಅಧ್ಯಕ್ಷರೆ ವಂದೇಮಾತರಂ ಹಾಡುವುದನ್ನು ತಡೆಯಲು ನಿಮಗೆ ಯಾವ ಅಧಿಕಾರವೂ ಇಲ್ಲ. ಇದುವರೆಗೆ ತಮ್ಮ ಮೆರವಣಿಗೆಯಲ್ಲಿ ತಾವು ಸಂಗೀತವನ್ನು ಹೇಗೆ ಸಹಿಸಿಕೊಂಡಿರಿ?’

ಇಷ್ಟು ನುಡಿದು, ಆ ವ್ಯಕ್ತಿಯು ಅಧ್ಯಕ್ಷರ ಉತ್ತರದ ದಾರಿ ಕಾಯಲೇ ಇಲ್ಲ, ’ವಂದೇಮಾತರಂ ರಾಷ್ಟ್ರಗೀತೆ”ಯನ್ನು ಪೂರ್ತಿ ಹಾಡಿ ಮುಗಿಸಿದನು. ರಾಷ್ಟ್ರಗೀತೆಯ ಮರ್ಯಾದೆಯನ್ನು ಉಳಿಸಿದನು.

ಎಲ್ಲರ ಬಾಯಲ್ಲಿ ಒಂದೇ ಪ್ರಶ್ನೆ : ’ಯಾರು ಈ ಧೀರ? ’

ಧೈರ್ಯದ ಮೇರು ಪರ್ವತದಂತಿದ್ದ ಆ ವ್ಯಕ್ತಿ ಬೇರೆ ಯಾರೂ ಅಲ್ಲ, ಭಾರತೀಯ ಸಂಗೀತದ ಉದ್ಧಾರಕರೆಂದು, ಕಲಾತಪಸ್ವಿಯೆಂದು ಗಾನಗಂಧರ್ವವೆಂದು ಗಾಯನಾಚಾರ್ಯರೆಂದು ವಿಖ್ಯಾತರಾದ ವಿಷ್ಣು ದಿಗಂಬರ ಪಲುಸ್ಕರ‍್!

ಕಣ್ಣಿನ ಗಾಯ ಸಂಗೀತಕ್ಕೆ ದಾರಿ ತೋರಿಸಿತು

ಕುರುಂದವಾಡ ಎಂಬುದು ದಕ್ಷಿಣ ಮಹಾರಾಷ್ಟ್ರದಲ್ಲಿಯ ಒಂದು ಚಿಕ್ಕ ಸಂಸ್ಥಾನ. ದಾಜಿಸಾಹೇಬ ಪಟವರ್ಧನರು ಆ ಸಂಸ್ಥಾನದ ಅಧಿಪತಿಗಳಾಗಿದ್ದರು.

ಕುರುಂದವಾಡದಲ್ಲಿ ಪಲುಸ್ಕರ ಎಂಬ ಒಂದು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬ. ಕೀರ್ತನ ಹೇಳುವುದು ಆ ಮನೆತನದ ಮುಖ್ಯ ವೃತ್ತಿಯಾಗಿತ್ತು. ಈ ಮನೆತನದಲ್ಲಿ ೧೮೭೨ ಆಗಸ್ಟ್ ೧೮ರಂದು ವಿಷ್ಣು ದಿಗಂಬರ ಪಲುಸ್ಕರರ ಜನನವಾಯಿತು.

ವಿಷ್ಣು ಇನ್ನೂ ಹುಡುಗನಾಗಿದ್ದಾಗಲೇ ಅವನ ಕಂಠ ಬಹು ಇಂಪಾಗಿತ್ತು. ಬುದ್ಧಿಯೂ ಬಹು ಚುರುಕು. ಇದರಿಂದ ಅವನೆಂದರೆ ಎಲ್ಲರಿಗೂ ಅಚ್ಚುಮೆಚ್ಚು.

ವಿಷ್ಣು ಸ್ವಲ್ಪ ದೊಡ್ಡವನಾಗಿ ಬೆಳೆದ. ವಿದ್ಯಾಭ್ಯಾಸ ಮುಂದೆ ಸಾಗುತ್ತಿತ್ತು.

ತಂದೆಯ ಕೀರ್ತನ ವೃತ್ತಿಯಲ್ಲಿ ಮುಂದುವರೆಯಬೇಕೋ ಆಥವಾ ವಿದ್ಯಾಭ್ಯಾಸವನ್ನು ಮುಗಿಸಿ, ಆನಂತರ ಎಲ್ಲಿಯಾದರೂ ಗುಮಾಸ್ತೆಯ ಕೆಲಸಕ್ಕೆ ಸೇರಬೇಕೋ ಎಂದು ಯೋಚಿಸುತ್ತಿದ್ದ. ಅಷ್ಟರಲ್ಲಿ ಕಷ್ಟ ಅವನ ಮೇಲೆ ಎರಗಿತು. ಆಕಸ್ಮಿಕ ಒಂದರಲ್ಲಿ ಅವನ ಕಣ್ಣುಗಳಿಗೆ ಘಾತವಾಯಿತು!

ಹುಡುಗನ ಕಣ್ಣಿಗೆ ಚಿಕಿತ್ಸೆಯಾಗಬೇಕಾಯಿತು. ಕುರಂದವಾಡವನ್ನು ಬಿಟ್ಟು ಮೀರಜಿಗೆ ಹೋದನು. ಅಲ್ಲಿ ಡಾಕ್ಟರ‍್ ಭಡಭಡೆ ಎನ್ನುವ ವೈದ್ಯರು ಅವನ ಕಣ್ಣುಗಳ ಚಿಕಿತ್ಸೆ ಪ್ರಾರಂಭಿಸಿದರು.

ಕಣ್ಣು ಚಿಕಿತ್ಸೆ ಮಾಡುತ್ತಿದ್ದ ಡಾ. ಭಡಭಡೆಯವರು ಬಾಲಕ ವಿಷ್ಣುವಿನ ಸಂಗೀತವನ್ನು ಕೇಳಿದರು. ಅವನ ಕಂಠಮಾಧುರ್ಯ ಮತ್ತು ಸಂಗೀತದ ಪ್ರತಿಭೆ ಇವನ್ನು ಮೆಚ್ಚಿದರು. ಸರಿಯಾಗಿ ಶಿಕ್ಷಣ ಪಡೆದರೆ ಹುಡುಗ ದೊಡ್ಡ ಸಂಗೀತಗಾರನಾಗುತ್ತಾನೆ ಎನ್ನಿಸಿತು. ಸಂಗೀತ ಶಿಕ್ಷಣ ಪಡೆಯಲು ಸಲಹೆ ಕೊಟ್ಟರು.

ಹುಡುಗನಿಗೆ ದೇವರು ಒಳ್ಳೆಯ ಕಂಠ ಕೊಟ್ಟಿದ್ದ ಬುದ್ಧಿಶಕ್ತಿ ಕೊಟ್ಟಿದ್ದ. ಆದರೆ ಇವನಿಗೆ ಉತ್ತಮ ಗುರು ದೊರೆಯಬೇಕಲ್ಲ? ಭಡಭಡೆಯವರೇ ಇದಕ್ಕೆ ಶ್ರಮ ವಹಿಸಿದರು. ಅವರು ಮೀರಜ್ ನ ಮಹಾರಾಜರಿಗೆ ವೈದ್ಯರು. ಅವರು ಮಹಾರಾಜರಿಗೆ ಈ ಪ್ರತಿಭಾವಂತ ಹುಡುಗನ ವಿಷಯ ಹೇಳಿದರು. ಆಸ್ಥಾನದಲ್ಲಿ ಬಾಲಕೃಷ್ಣ ಬುವಾ ಎನ್ನುವವರು ಶ್ರೇಷ್ಠ ಗಾಯಕರು ಎಂದು ಹೆಸರಾಗಿದ್ದರು. ಈ ಪ್ರಸಿದ್ಧ ಸಂಗೀತಗಾರರು ವಿಷ್ಣುವಿಗೆ ಸಂಗೀತ ಹೇಳಿ ಕೊಡುವಂತೆ ಮಹಾರಾಜರು ಏರ್ಪಾಟು ಮಾಡಿದರು.

ಅಮೋಘ ಸಂಗೀತ ಸಾಧನೆ

ಆಗಿನ ಕಾಲದಲ್ಲಿ ಸಂಗೀತ ಕಲಿಯುವುದೆಂದರೆ ಅಗ್ನಿ ಪರೀಕ್ಷೆಗೆ ಒಳಪಟ್ಟಂತೆಯೇ ಸರಿ. ವಿದ್ಯಾರ್ಥಿ ಓದಲು ರಾಗಲಕ್ಷಣಗಳನ್ನು ತಿಳಿಸುವ ಲಕ್ಷಣ ಗ್ರಂಥಗಳಿರಲಿಲ್ಲ. ಗುರುಗಳು ಪ್ರತಿ ದಿನ ಇಷ್ಟು ಹೊತ್ತಿಗೆ ಪಾಠ ಹೇಳಿಕೊಡುತ್ತಾರೆ ಎಂದೇನೂ ನಿಯಮವಿಲ್ಲ. ಅವರ ಇಷ್ಟ ಬಂದರೆ, ಇಷ್ಟ ಬಂದಷ್ಟು ಹೊತ್ತು ಹೇಳಿಕೊಡುವರು. ಅವರ ಮನೆಯಲ್ಲಿ ಶಿಷ್ಯರು ಕೆಲಸ ಮಾಡಬೇಕು. ಕೆಲವರ ಗುರುಗಳ ಮನೆಗಳಲ್ಲಂತೂ ಶಿಷ್ಯರಿಗೆ ಕೆಲಸ ಮಾಡಿ ಮೈಮುರಿಯುವ ಹಾಗಾಗುವುದು. ಹಲವರ ಗುರುಗಳಿಗೆ ಬಹುಬೇಗ ಕೋಪ ಬರುವುದು ಅಂತೂ ಶಿಷ್ಯರು ಗುರುಗಳಿಗೆ ಸಂತೋಷವಾಗುವ ಹಾಗೆ ನಡೆದುಕೊಂಡು ಅವರಿಂದ ಸಂಗೀತ ವಿದ್ಯೆ ಕಲಿಯಬೇಕಾಗಿತ್ತು.

ಇಂತಹ ಅಗ್ನಿಪರೀಕ್ಷೆಯಲ್ಲಿಯೇ ವಿಷ್ಣು ಹನ್ನೆರಡು ವರ್ಷಗಳ ಕಾಲ ಸಂಗೀತ ಸಾಧನೆಯನ್ನು ನಡೆಸಿದನು. ಹಸಿವು, ನಿದ್ರೆ, ನೀರಡಿಕೆಗಳ ಪರಿವೆಯಿಲ್ಲದೆ, ಮನಮುಟ್ಟಿ ಅಭ್ಯಾಸ ಮಾಡಿದನು. ಇನ್ನೂ ಚಿಕ್ಕ ಹುಡುಗ, ರಾತ್ರಿ ನಿದ್ರೆ ಬಂದು ಬಿಡುತ್ತಿತ್ತು. ನಿದ್ರೆ ಬಾರದಿರಲೆಂದು ತಲೆಯ ಕೂದಲನ್ನು ದಾರದಿಂದ ಗೂಟಕ್ಕೆ ಕಟ್ಟುತ್ತಿದನಂತೆ. ಹಗಲಿನಲ್ಲಿ ಗುರುವಿನಿಂದ ಹೇಳಿಸಿಕೊಂಡ ಪಾಠವನ್ನು ಕೈಯಲ್ಲಿ ತಂಬೂರಿ ಹಿಡಿದುಕೊಂಡು ಬೆಳಗಾಗುವವರೆಗೆ ಅಭ್ಯಾಸ ಮಾಡುತ್ತಾ ಕುಳಿತುಕೊಳ್ಳುತ್ತಿದ್ದ. ಈ ದೃಶ್ಯವನ್ನು ಹಲವಾರು ಸಲ ಕಂಡ ಮೀರಜದ ಮಹಾರಾಜರಿಗೇ ಆಶ್ಚರ್ಯವಾಯಿತು. ವಿಷ್ಣುವಿನ ಕೈಯಿಂದ ತಂಬೂರಿಯನ್ನು ಕಸಿದುಕೊಂಡು ’ಇದೇನು ರಾಕ್ಷಸ ಸಾಧನೆ!’ ಎಂದು ಸಿಟ್ಟು ಮಾಡುತ್ತಿದ್ದರಂತೆ.

ವಿಷ್ಣು ಕಲಿಯುತ್ತಿದ್ದುದು ಗ್ವಾಲಿಯರ‍್ ಘರಾನಾ ಎಂಬ ಶೈಲಿಯ ಸಂಗೀತವನ್ನು ಇದನ್ನು  ಕಲಿಯುವುದು ಸುಲಭವಾಗಿರಲಿಲ್ಲ. ಸ್ವಲ್ಪವೂ ಬೇಸರಿಸದೆ ಶ್ರದ್ಧೆಯಿಂದ ವಿದ್ಯೆಯನ್ನು ಕಲಿತು, ಬಹು ಶ್ರೇಷ್ಠ ಸಂಗೀತಗಾರನಾದ.

ಸಂಗೀತಗಾರರಿಗೆ ಇಷ್ಟೇ ಮರ್ಯಾದೆಯೆ?

ಒಂದು ದಿನ ಪ್ರೀತಿಯ ಶಿಷ್ಯನಾದ ವಿಷ್ಣುವನ್ನು ಬಾಲಕೃಷ್ಣ ಬುವಾ ಅವರು ತಮ್ಮ ಜೊತೆ ವಾಯುವಿಹಾರಕ್ಕಾಗಿ ಕರೆದುಕೊಂಡು ಹೊರಟಿದ್ದರು. ಅದೇ ವೇಳೆಗೆ ಮಹಾರಾಜರು ಆ ದಾರಿಯಲ್ಲಿಯೇ ಎದುರಾದರು. ಬಾಲಗಾಯಕ ವಿಷ್ಣುವಿಗೆ ತಮ್ಮೊಡನೆ ಗಾಡಿಯಲ್ಲಿ ಕೂಡಲು ಕರೆದರು. ಬೇರೆ ದಾರಿ ಇಲ್ಲದೆ ವಿಷ್ಣುವಿಗೆ ಮಹಾರಾಜರೊಡನೆ ಹೊರಡಬೇಕಾಯಿತು. ಆದರೆ ಮಹಾರಾಜರು ಬುವಾ ಅವರನ್ನು ತಮ್ಮೊಡನೆ ಬರಲು ಕರೆಯಲಿಲ್ಲ. ಎಷ್ಟಾದರೂ ಬುವಾ ಅವರು ಹೊಟ್ಟೆಯ ಪಾಡಿಗಾಗಿ ಮಹಾರಾಜರ ಸೇವಕರಾಗಿ ಸೇರಿದವರಲ್ಲವೆ?

ಮಹಾರಾಜರೇ ’ಇದೇನು ರಾಕ್ಷಸ ಸಾಧನೆ! ’ಎಂದು ಸಿಟ್ಟು ಮಾಡುತ್ತಿದ್ದರಂತೆ.

ಇಂತಹುದೇ ಇನ್ನೊಂದು ಘಟನೆ ನಡೆಯಿತು. ಮೀರಜದ ಕಾರ್ಖಾನೆಯೊಂದರ ಉದ್ಘಾಟನೆಯಾಯಿತು. ಮಹಾರಾಜರು ನಗರದ ಗಣ್ಯ ನಾಗರಿಕರನ್ನೆಲ್ಲ ಆಮಂತ್ರಿಸಿದ್ದರು. ಆದರೆ ಆಸ್ಥಾನ ಕಲಾವಿದರಾದ ಬುವಾ ಅವರಿಗೆ ಆಮಂತ್ರಣ ಕಳುಹಿಸಲಿಲ್ಲ. ಪ್ರತಿಷ್ಠಿತ ನಾಗರಿಕರೊಡನೆ ಸಂಗೀತಗಾರರನ್ನು ಸೇರಿಸುವುದಾದರೂ ಹೇಗೆ?

ಇಂತಹ ಹಲವಾರು ಘಟನೆಗಳನ್ನು ವಿಷ್ಣು ನೋಡಿದ. ಅವನಿಗೆ ತುಂಬ ವಿಷಾದವಾಯಿತು. ತನ್ನ ಗುರುಗಳಂತಹ ಶ್ರೇಷ್ಠ ಸಂಗೀತಗಾರರಿಗೂ ನಾಲ್ಕು ಜನರ ಮಧ್ಯೆ ಗೌರವವಿಲ್ಲ. ಸಂಗೀತಕ್ಕೆ ಮರ್ಯಾದೆ ಇಲ್ಲ ಎಂದು ಮನಸ್ಸಿಗೆ ನೋವಾಯಿತು.

ಆಗಿನ ಕಾಲದಲ್ಲಿ ಶಾಸ್ತ್ರೀಯ ಸಂಗೀತಕ್ಕೂ ಸಂಗೀತಗಾರರಿಗೂ ಯಾವುದೇ ಸ್ಥಾನಮಾನಗಳಿರಲಿಲ್ಲ. ಗೌರವಸ್ಥರು ಸಂಗೀತ ಕಲಿಯುವುದಿಲ್ಲ. ಸಂಗೀತ ಕಛೇರಿ ನಡೆಸುವುದಿಲ್ಲ ಎಂದೇ ಜನರ ಭಾವನೆ. ಈ ಹೀನ-ದೀನ ಪರಿಸ್ಥಿತಿಗೆ ಬಹುಮಟ್ಟಿಗೆ ಸಂಗೀತಗಾರರೂ ಕಾರಣರಾಗಿದ್ದರೆಂದು ಹೇಳಬಹುದು. ಕೆಲವರು ಸಂಗೀತಗಾರರು ಅನೇಕ ಕೆಟ್ಟ ಗುಣಗಳ ಮೂಟೆ ಎನ್ನುವ ಹಾಗಿದ್ದರು. ಮರ್ಯಾದೆ ಇದ್ದವರು ಯಾರೂ ಅವರನ್ನು ಹತ್ತಿರಕ್ಕೆ ಬರಗೊಡುತ್ತಿರಲಿಲ್ಲ. ಸಂಗೀತಕ್ಕೆ ಒದಗಿದ ಈ ದುರವಸ್ಥೆಯನ್ನು ಹಾಗೂ ಸಂಗೀತಗಾರರ ಹೆಸರಿಗೆ ಹತ್ತಿದ ಕಳಂಕವನ್ನು ತೊಡೆದು ಹಾಕಬೇಕು ಎಂಬ ಮಹತ್ವಾಕಾಂಕ್ಷೆ ಪಲುಸ್ಕರರಿಗೆ. ಈ ಗುರಿಯಿಂದ ೧೮೯೬ರಲ್ಲಿ ಮೀರಜನ್ನು ಬಿಟ್ಟು ದೇಶ ಪರ್ಯಟನೆಯನ್ನು ಕೈಕೊಂಡರು.

ಉತ್ತರಕ್ಕೆ ಹೋಗು!

ಸೌರಾಷ್ಟ್ರದ ಪ್ರವಾಸದಲ್ಲಿದ್ದಾಗ ನಡೆದ ಘಟನೆಯೊಂದು ಪಲುಸ್ಕರರ ಜೀವನದ ದಿಕ್ಕನ್ನು ಬದಲಿಸಿತು.

ಒಂದು ದಿನ ಪಲುಸ್ಕರರು ಜುನಾಗಡದ ಗಿರಿನಾರ ಪರ್ವತದ ಮೇಲಿರುವ ಭಗವತಿಯ ದರ್ಶನಕ್ಕೆ ಹೊರಟಿದ್ದರು ಅವರ ಜೊತೆಗೆ ಅನೇಕ ಮಂದಿ ಶಿಷ್ಯರು ಸುತ್ತಲಿನ ನಿಸರ್ಗದ ಚೆಲುವು ಪಲುಸ್ಕರರ ಮನಸ್ಸನ್ನು ಸೂರೆಗೊಂಡಿತು. ಶಿಷ್ಯರಿಗೆ ಮುಂದಕ್ಕೆ ಹೋಗುವಂತೆ ಹೇಳಿದರು. ತಾವು ಸೃಷ್ಟಿಯ ಸೊಬಗನ್ನು ಸವಿಯುತ್ತ ನಿಂತರು. ದೃಶ್ಯವನ್ನು ನೋಡುತ್ತ ಅವರು ಮೈಮರೆತರು. ಅವರ ಬಾಯಿಂದ ಗಾನಧಾರೆಯು ತಾನೇ ತಾನಾಗಿ ಪ್ರವಹಿಸಿತು. ಹೀಗೆಯೇ ಎಷ್ಟು ಹೊತ್ತು ಹಾಡುತ್ತಿದ್ದರೋ ಏನೋ! ’ಭಲೇ ಭೇಷ್’ ಎಂಬ ಮೆಚ್ಚಿಕೆಯ ಮಾತು ಕೇಳಿಸಿತು. ಪಲುಸ್ಕರರು ಹಾಡುವುದನ್ನು ನಿಲ್ಲಿಸಿ ಹಿಂದಿರುಗಿ ನೋಡಿದರು. ಸನ್ಯಾಸಿಯೊಬ್ಬನು ಹಿಂದೆ ನಿಂತಿದ್ದ. ಸನ್ಯಾಸಿಯೊಬ್ಬ ತಮ್ಮ ಸಂಗೀತಕ್ಕೆ ಬೆಲೆ ಕಟ್ಟುವುದೆ? ಅವರಿಗೆ ಸ್ವಲ್ಪ ಸಿಟ್ಟು ಬಂದಿತು. ’ನಿನಗೆ ಸಂಗೀತದ ಗಂಧವಾದರೂ ಗೊತ್ತಿದೆಯೇ?’ ಎಂದು ಕೇಳಿದರು.

’ಅಲ್ಪ ಸ್ವಲ್ಪ ಉಂಟು’

’ಹಾಗಾದರೆ ನನ್ನ ಸಂಗೀತದ ಬಗ್ಗೆ ನಿನಗೆ ಏನು ಅನಿಸುತ್ತದೆ?’

’ಒಟ್ಟಿನ ಮೇಲೆ ನಿನ್ನ ಹಾಡುಗಾರಿಕೆ ಸರಿಯಾಗಿದೆಯೆಂದೇ ಹೇಳಬಹುದು. ಆದರು ಅದರಲ್ಲಿ ಒಂದು ದೋಷ ಉಳಿದಿದೆ.’.

ತಮ್ಮ ಸಂಗೀತದಲ್ಲಿ ಯಃಕಶ್ಚಿತ್ ಸಾಧುವೊಬ್ಬನು ದೋಷವಿದೆಯೆಂದು ಹೇಳಿದ್ದನ್ನು ಕೇಳಿ ಪಲುಸ್ಕರರು ಅಚ್ಚರಿಗೊಂಡರು. ’ನನ್ನ ಸಂಗೀತದಲ್ಲಿ ದೋಷ ಇದೆ ಎಂದೆಯಲ್ಲ? ಏನು ದೋಷ ಇದೆ, ದೋಷ ಇಲ್ಲದೆ ಹಾಡುವುದು ಹೇಗೆ? ನೀನೇ ಹಾಡಿ ತೋರಿಸು ನೋಡೋಣ’ ಎಂದರು.

ಆಗ ಆ ಸಾಧು ’ನೀನು ಹೇಳಿದಾಗ ನಾನು ಹಾಡುವುದಿಲ್ಲ. ನನಗೆ ಇಷ್ಟ ಬಂದಾಗ ಹಾಡುವೆ. ನಿನಗೆ ಲಭ್ಯವಿದ್ದರೆ ಕೇಳಲು ಸಿಗುವುದು’ ಎಂದು ಬಿರುಸಾಗಿ ನುಡಿದ. ಕ್ಷಣಾರ್ಧದಲ್ಲಿ ಅಲ್ಲಿಂದ ಅದೃಶ್ಯನಾಗಿ ಹೋದ.

ಪಲುಸ್ಕರರಿಗೆ ಬೆರಗಾಯಿತು. ತಮ್ಮ ಕಲೆಯಲ್ಲಿ ಏನು ದೋಷವಿರಬಹುದು? ಆ ಸನ್ಯಾಸಿಗೆ ನಿಜವಾಗಿ ಹಾಡಲು ಬರುತ್ತದೆಯೆ? ಒಂದು ಕ್ಷಣ ನಂಬಿಕೆ ಬರಲೊಲ್ಲದು, ಇನ್ನೊಂದು ಕ್ಷಣ, ’ಇರಬಹುದೇನೋ! ’ಎನ್ನಿಸುವುದು. ಆತನ ಸಂಗೀತ ಕೇಳುವ ಅವಕಾಶ ಸಿಕ್ಕುವುದೇ ಎಂಬ ಪ್ರಶ್ನೆ ಮನಸ್ಸನ್ನು ಕಾಡುವುದು. ಅಂತೂ ಅವನ ಮಾತುಗಳನ್ನೇ ಮೆಲುಕು ಹಾಕುತ್ತ ಮುಂದಕ್ಕೆ ನಡೆದರು.

ಇದ್ದಕ್ಕಿದ್ದ ಹಾಗೇ ಬೆಟ್ಟ ಇನ್ನೊಂದು ದಿಕ್ಕಿನಿಂದ ಸುಮಧರ ಕರ್ಣರಸಾಯನವಾದ ಹಾಡು ಕೇಳಿ ಬಂದಿತು. ಎಷ್ಟು ಇಂಪಾದ ಧ್ವನಿ! ಆಶ್ಚರ್ಯದಿಂದ, ಸಂತೋಷದಿಂದ ಸರಸರನೆ ಮುಂದಕ್ಕೆ ಹೆಜ್ಜೆ ಹಾಕಿದರು. ಅಲ್ಲಿ ಹೋಗಿ ನೋಡಿದರೆ ತಮಗೆ ಮೊದಲು ಭೇಟಿಯಾದ ಸನ್ಯಾಸಿಯೇ ದೇವಿಯ ಮೂರ್ತಿಯ ಎದುರು ಕುಳಿತು ಪರವಶನಾಗಿ ಹಾಡುತ್ತಿದ್ದಾನೆ! ಈ ಸಂಗೀತ ಮನುಷ್ಯರ ಲೋಕದ ಸಂಗೀತವಲ್ಲ ಎನ್ನುವಷ್ಟು ಮಧುರ ಅದು.

ಆ ಅಲೌಕಿಕ, ಅದ್ಭುತ ಗಾನವನ್ನು ಕೇಳಿ ತಮ್ಮ ಉದ್ಧಟ ವರ್ತನೆಗೆ ಪಶ್ಚಾತ್ತಾಪ ಪಟ್ಟು ಪಲುಸ್ಕರರು ಅ ಸನ್ಯಾಸಿಯ ಕಾಲಿಗೆರಗಿದರು. ಸಂಗೀತದಲ್ಲಿ ಇಂತಹ ಅದ್ಭುತ ಸಿದ್ಧಿ ಹೇಗೆ ಪ್ರಾಪ್ತವಾಯಿತೆಂಬುದನ್ನು ತಿಳಿಸಲು ಬಿನ್ನವಿಸಿಕೊಂಡರು. ಆಗ ಸನ್ಯಾಸಿಯು ’ಆಡಂಬರದ ವಸ್ತ್ರಗಳನ್ನು ಧರಿಸಿ ಗರ್ವದಿಂದ ತಮ್ಮ ಕಲೆಯನ್ನು ಮೆರೆಯುವ ಜನರಿಗೆ ಸಂಗೀತ ಸಿದ್ಧಿಸುವುದಿಲ್ಲ. ನಾನು ದೋಷವೆಂದು ಹೇಳಿದ್ದ ನಿನ್ನ ಗಾಯನದಲ್ಲಿ ಅಲ್ಲ, ನಿನ್ನ ಆಚರಣೆಯಲ್ಲಿ’ ಎಂದು ಸ್ಪಷ್ಟವಾಗಿ ನುಡಿದನು.

ಮರುಕ್ಷಣವೇ ಪಲುಸ್ಕರರು ತಮ್ಮ ಮೈಮೇಲಿನ ಬೆಲೆ ಬಾಳುವ ವಸ್ತ್ರಗಳನ್ನೆಲ್ಲ ಕಳಚಿ ಬಿಸಾಡಿದರು. ಮತ್ತು ತಮ್ಮನ್ನು ಶಿಷ್ಯನನ್ನಾಗಿ ಮಾಡಿಕೊಳ್ಳಲು ಪ್ರಾರ್ಥಿಸಿದರು.

ಸನ್ಯಾಸಿಯು, ’ನಿನಗೆ ಸನ್ಯಾಸಿಯಾಗುವ ಯೋಗವಿಲ್ಲ. ಆಚರಣೆಯಲ್ಲಿ ನಮ್ರತೆಯನ್ನು ಬೆಳೆಸಿಕೋ. ಜನರ ಬೆಂಬಲ ಮತ್ತು ಪುರಸ್ಕಾರ ಸಿಗುತ್ತದೆ. ಉತ್ತರ ದಿಕ್ಕಿಗೆ ಪಂಜಾಬಿನ ಕಡೆ ಹೋಗು. ಅಲ್ಲಿ ನಿನಗೆ ಎಲ್ಲವೂ ಅನುಕೂಲವಾಗುವುದು’ ಎಂದು ಹೇಳಿ ಹರಸಿದನು.

ದೇಶ ಪರ್ಯಟನೆ

ಸನ್ಯಾಸಿಯ ಮಾತು ಪಲುಸ್ಕರರಿಗೆ ಸ್ಫೂರ್ತಿಯನ್ನು ಕೊಟ್ಟಿತು. ಅವರು ಉತ್ತರ ಭಾರತದ ಪರ್ಯಟನೆ ಕೈಗೊಂಡರು. ಗ್ವಾಲಿಯರ‍್ ಆಗ ಸಂಗೀತಗಾರರ ಕಾಶಿ ಎಂದು ಪ್ರಸಿದ್ಧವಾಗಿತ್ತು. ಗಾಯನ ಶೈಲಿ ಹುಟ್ಟಿದ್ದೇ ಅಲ್ಲಿ. ಆದುದರಿಂದ ಪಲುಸ್ಕರರು ಮೊಟ್ಟ ಮೊದಲು ಗ್ವಾಲಿಯರಿಗೆ ಬಂದರು. ಅಲ್ಲಿಗೆ ಬರುವ ಹೊತ್ತಿಗೆ ಆಗಲೇ ಹಲವಾರು ಸ್ಥಳಗಳಲ್ಲಿ ಮಾಡಿದ ಸಂಗೀತ ಕಛೇರಿಗಳಿಂದ ಪಲುಸ್ಕರರು ಹುಟ್ಟು ಗಾಯಕರು ಎಂದು ಕೀರ್ತಿ ಪಡೆದಿದ್ದರು. ಗ್ವಾಲಿಯರಿನಲ್ಲಿ ಹಲವಾರು ಸಂಗೀತ ಕಛೇರಿಗಳನ್ನು ನಡೆಸಿದರು. ಆಸ್ಥಾನದ ಗಾಯಕರೆಲ್ಲರೂ ಪಲುಸ್ಕರರ ಗಾಯನ ಪಾಂಡಿತ್ಯವನ್ನು ಏಕಕಂಠದಿಂದ ಹೊಗಳಿದರು. ಆಪ್ಟೆ ಗುರೂಜಿ, ಬಾಬಾ ಗುರೂಜಿ, ಶಂಕರ ಪಂಡಿತ, ಅಮೀನಖಾನ ಮೊದಲಾದವರು ಆಗ ಸಂಗೀತ ಕಲೆಯಲ್ಲಿ ಬಹು ಕೀರ್ತಿವಂತರು. ಅವರೆಲ್ಲ ಪಲುಸ್ಕರರ ಗಾನಕಲೆಯನ್ನು ಬಹುವಾಗಿ ಮೆಚ್ಚಿಕೊಂಡರು. ಮಹಾರಾಜ ಮಾಧವರಾವ ಸಿಂಧಿಯಾ ಅವರು ಪಲುಸ್ಕರರನ್ನು ಆಮಂತ್ರಿಸಿ ಅವರ ಸಂಗೀತ ಕಛೇರಿಯನ್ನೇರ್ಪಡಿಸಿ ಗೌರವಿಸಿದರು.

ಈಗ ಪಲುಸ್ಕರರಿಗೆ ಸನ್ಯಾಸಿಯ ಆದೇಶದಂತೆ ಪಂಜಾಬಿಗೆ ಹೋಗುವ ಯೋಚನೆ. ಅಷ್ಟು ಹೊತ್ತಿಗೆ ಜಲಂಧರಿನಲ್ಲಿ ಸಂತ ಹರಿವಲ್ಲಭ ಸ್ವಾಮಿಗಳ ಪುಣ್ಯ ತಿಥಿ ಸಮಾರಂಭ ನಡೆಯಲಿದೆ ಎಂಬ ಸುದ್ದಿ ತಿಳಿಯಿತು.  ಜಲಂಧರಕ್ಕೆ ಹೊರಡಲು ಸಿದ್ಧರಾದರು. ಪಂಜಾಬಿನ ಈ ಸಮಾರಂಭ ಬಹು ಪ್ರಸಿದ್ಧ. ಬಹು ವೈಭವದಿಂದ ನಡೆಯುವುದು. ಇದಕ್ಕೆಂದು ದೂರ ದೂರದಿಂದ ಸಂಗೀತಗಾರರು ಬರುತ್ತಿದ್ದರು. ಅಲ್ಲಿ ನಡೆಯುವ ಸಂಗೀತ ಕಛೇರಿಗೆ ಬರಲು ಆಮಂತ್ರಿತರಾಗುವುದೇ ಒಂದು ಗೌರವ. ಪಲುಸ್ಕರರನ್ನು ಆಮಂತ್ರಿಸಲು ಸಮಾರಂಭದ ಪ್ರಧಾನ ವ್ಯವಸ್ಥಾಪಕರಾದ ಲೋಲಾರಾಮರು ಬಂದರು. ಜಲಂಧರಿನಲ್ಲಿ ೧೮೯೮ರಲ್ಲಿ ನಡೆದ ಸಂಗೀತ ಕಛೇರಿಯಲ್ಲಿ ಪಲುಸ್ಕರರು ವಿಜಯ ದುಂದುಭಿಯನ್ನು ಮೊಳಗಿಸಿದರು. ತಮ್ಮ ಭವ್ಯ ಆಕಾರ, ವಿನಮ್ರ ವ್ಯವಹಾರ, ಗಾಯನ ಪಟುತ್ವ ಮತ್ತು ಮಧುರ ಶಾರೀರದಿಂದ ಎಲ್ಲರನ್ನೂ ಪ್ರಭಾವಿತಗೊಳಿಸಿದರು. ಈ ಸಮಾರಂಭದ ಆನಂತರ ನೂರಾರು ಊರುಗಳಿಂದ ಆಮಂತ್ರಣದ ಸುರಿ ಮಳೆಯಾಯಿತು. ಪಲುಸ್ಕರರು ಸಮಗ್ರ ಪಂಜಾಬನ್ನು ಸುತ್ತಾಡಿ ಬಂದರು. ಅವರು ಹೋದ ಕಡೆಗಳಲ್ಲೆಲ್ಲ ಸಂಗೀತಪ್ರೇಮಿಗಳೂ ಮಹಾವಿದ್ವಾಂಸರೂ ಅವರ ಗಾಯನದಿಂದ ಮೈಮರೆತರು.

ಗಿರಿನಾರ ಸನ್ಯಾಸಿಯ ಭವಿಷ್ಯ ಅಕ್ಷರಶಃ ಸತ್ಯವಾಯಿತು.

ಗಂಧರ್ವ ಮಹಾವಿದ್ಯಾಲಯ

ಓಕಾರಾದ ಬಾಬಾ ಖೇಮಸಿಂಗ ಬೇಡಿ ಎಂಬುವರು ಪಂಜಾಬಿನಲ್ಲಿಯೇ ಅತಿ ಧನವಂತ ವ್ಯಕ್ತಿಯೆಂದು ಹೆಸರಾದವರು. ತಮ್ಮ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡಲು ಪಲುಸ್ಕರರನ್ನು ಅವರು ಆಮಂತ್ರಿಸಿದರು. ಪಲುಸ್ಕರರಿಗೂ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಒಂದು ಏಕಾಂತ ಸ್ಥಳದಲ್ಲಿ ಕುಳಿತು ಚಿಂತಿಸಬೇಕಾಗಿತ್ತು. ಮುಂದಿನ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿತ್ತು. ಇದಲ್ಲದೆ ವಿದ್ಯಾರ್ಥಿಗಳಿಗೆ ಸಂಗೀತವನ್ನು ಕಲಿಸುವಾಗ ಎದುರಾಗುವ ಸಮಸ್ಯೆಗಳು ಯಾವುವು. ಅವನ್ನು ಬಿಡಿಸುವುದು ಹೇಗೆ ಎಂಬುದನ್ನು ತಮ್ಮ ಸ್ವಂತ ಅನುಭವದಿಂದ ತಿಳಿದುಕೊಳ್ಳಬೇಕಾಗಿತ್ತು. ಇದೆಲ್ಲವನ್ನೂ ಯೋಚಿಸಿ ಓಕಾರಾಕ್ಕೆ ಹೋದರು.

ಆಗಿನ ಕಾಲದಲ್ಲಿ ಸಾಮಾನ್ಯ ಜನರಿಗೆ ಒಳ್ಳೆಯ ಶಾಸ್ತ್ರೀಯ ಸಂಗೀತ ಕೇಳುವ ಅವಕಾಶ ದೊರೆಯುತ್ತಿರಲಿಲ್ಲ. ಆಸ್ಥಾನಗಳಲ್ಲಿ ಶ್ರೇಷ್ಠ ಸಂಗೀತಗಾರರು ಇದ್ದರು. ಆದರೆ ಅವರ ಸಂಗೀತವನ್ನು ಆಸ್ಥಾನದಲ್ಲಿದ್ದ ಶ್ರೀಮಂತರು, ಮುಖ್ಯ ಅಧಿಕಾರಿಗಳು ಮಾತ್ರ ಸವಿಯಬಹುದಾಗಿತ್ತು. ಇತರ ಸಂಗೀತಗಾರರಿಗೆ ಶ್ರೀಮಂತರೇ ಆಶ್ರಯ. ಅವರ ಮನೆಗಳಲ್ಲಿ ಸಂಗೀತ ಕಛೇರಿ ನಡೆಸಬೇಕು. ಸಂಗೀತವು ಮನುಷ್ಯರನನ್ನು ದೇವರ ಸನ್ನಿಧಿಗೆ ಕರೆದುಕೊಂಡು ಹೋಗುತ್ತದೆ. ಮನಸ್ಸನ್ನು ಶುದ್ಧಗೊಳಿಸುತ್ತದೆ ಎಂದು ಪಲುಸ್ಕರರ ನಂಬಿಕೆ. ಸಾಮಾನ್ಯ ಜನರು ಒಳ್ಳೆಯ ಸಂಗೀತ ಕೇಳಲು ಸಾಧ್ಯವಾಗಬೇಕು ಎಂದು ಅವರ ಆಸೆ.

ಎರಡನೆಯದಾಗಿ ಸಂಗೀತಗಾರರಿಗೆ ಸಮಾಜದಲ್ಲಿ ಗೌರವವಿಲ್ಲ ಎಂದು ಅವರು ತಮ್ಮ ಗುರುಗಳನ್ನು ಮಹಾರಾಜರು ಕಂಡ ರೀತಿಯಿಂದ ತಿಳಿದಿದ್ದರು. ಆದರಿಂದ ತುಂಬ ನೊಂದುಕೊಂಡಿದ್ದರು. ಸಂಗೀತಕ್ಕೆ, ಸಂಗೀತಗಾರರಿಗೆ ಯೋಗ್ಯವಾದ ಗೌರವ ದೊರೆಯುವಂತೆ ಮಾಡಬೇಕು ಎಂದು ಸಂಕಲ್ಪ ಮಾಡಿಕೊಂಡಿದ್ದರು. ಹೀಗಾಗಬೇಕಾದರೆ ನೂರಾರು ವಿದ್ಯಾರ್ಥಿಗಳಿಗೆ ಏಕಕಾಲಕ್ಕೆ ಶಿಕ್ಷಣವನ್ನು ಕೊಡುವ ಸಂಗೀತ ಮಹಾವಿದ್ಯಾಲಯವೊಂದನ್ನು ಪ್ರಾರಂಭಿಸಬೇಕು ಎಂದು ಅವರು ತೀರ್ಮಾನಿಸಿದರು. ಓಕಾರಾದಲ್ಲಿದ್ದಾಗ ಸಂಗೀತ ವಿದ್ಯಾಲಯದಲ್ಲಿ ಏನೇನು ಪಾಠ ಹೇಳಬೇಕು, ಇದಕ್ಕೆ ಕ್ರಮ ಏನು ಎಂದು ಎಲ್ಲ ಯೋಚಿಸಿ ತೀರ್ಮಾನಿಸಿದ್ದರು. ಆ ಸಂಗೀತ ಶಿಕ್ಷಣವನ್ನು ಎಷ್ಟು ಹಂತಗಳಲ್ಲಿ ವಿಂಗಡಿಸಬೇಕು ಎಂಬುದನ್ನೂ ನಿರ್ಧರಿಸಿದರು.

’ಉತ್ತರ ದಿಕ್ಕಿಗೆ ಪಂಜಾಬಿನ ಕಡೆ ಹೋಗು’ ಎಂದು ಸನ್ಯಾಸಿ ಹೇಳಿದನು.

ಈ ಯೋಜನೆಗಳೆಲ್ಲವೂ ಒಂದು ಸ್ಪಷ್ಟ ಸ್ವರೂಪಕ್ಕೆ ಬಂದ ಕೂಡಲೇ ಓಕಾರಾದಿಂದ ಹೊರಟು ಲಾಹೋರಿಗೆ ಬಂದರು. ಅಲ್ಲಿಯ ಪ್ರತಿಷ್ಠಿತ ವ್ಯಕ್ತಿಗಳೊಡನೆ ಭೇಟಿ ಮಾಡಿದರು. ಎಲ್ಲ ವಿಷಯಗಳನ್ನು ಅವರ ಜೊತೆಗೆ ಯೋಚಿಸಿದರು.

೧೯೦೧ನೇ ಇಸವಿ ಮೇ ದಿನಾಂಕ ಐದರಂದು ಗಂಧರ್ವ ಮಹಾವಿದ್ಯಾಲಯವನ್ನು ಸ್ಥಾಪಿಸಿದರು.

ಭಾರತೀಯ ಸಂಗೀತದ ಇತಿಹಾಸದಲ್ಲಿಯೇ ಈ ಘಟನೆಯು ಸುವರ್ಣಾಕ್ಷರಗಳಿಂದ  ಬರೆದಿಡುವಂಥದಾಗಿದೆ. ಸಂಗೀತ ಕ್ಷೇತ್ರದಲ್ಲಿ ಹೊಸ ಯುಗವೊಂದರ ನಾಂದಿಯಾಯಿತು. ಸಾರ್ವಜನಿಕರ ಸಹಾಯದ ಮೇಲೆ ನಿಂತ ಮೊಟ್ಟಮೊದಲನೆಯ ಸಂಗೀತ ಸಂಸ್ಥೆ ಇದು. ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಪಲುಸ್ಕರರು ಕಂಡ ಕನಸು ಅಂದು ನನಸಾಯಿತು.

ಗಂಧರ್ವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ಕೊಡುವ ವ್ಯವಸ್ಥೆ ಇದ್ದಿತು. ಆದರೆ ಅದರ ಕೆಲಸ ಮತ್ತು ಉದ್ದೇಶ ಇಷ್ಟೇ ಅಲ್ಲ, ಅದು ಸಂಗೀತಕ್ಕಾಗಿ, ಸಂಗೀತ ಪ್ರಚಾರಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಡುವ ಮಹಾನ್ ಕಾರ್ಯಕರ್ತರಿಗೆ ಶಿಕ್ಷಣ ಕೊಡುವ ಸಂಸ್ಥೆಯಾಯಿತು.

ಗಂಧರ್ವ ಮಹಾವಿದ್ಯಾಲಯ ಪ್ರಾರಂಭವಾದಾಗ ಕೇವಲ ಹದಿನೈದು ವಿದ್ಯಾರ್ಥಿಗಳಿದ್ದರು. ಆದರೆ ಬಹು ಬೇಗ ಆದರೆ ಕೀರ್ತಿ ಬೆಳೆಯಿತು. ಆರೇಳು ವರ್ಷಗಳ ಕಾಲಾವಧಿಯಲ್ಲಿ ಐದು ನೂರು ವಿದ್ಯಾರ್ಥಿಗಳನ್ನೊಳಗೊಂಡ ಮಹಾ ವಿದ್ಯಾಲಯವಾಯಿತು.

ಪಲುಸ್ಕರರು ಎಳೆಯ ವಯಸ್ಸಿನಲ್ಲಿ ಸಂಗೀತ ಕಲಿಯುತ್ತಿದ್ದಾಗ, ತಾವೇ ಸಂಗೀತದ ವಿಷಯ ಓದಬೇಕೆಂದು ಹಂಬಲಿಸಿದ್ದರು. ಆದರೆ ಪುಸ್ತಕಗಳೇ ಇರಲಿಲ್ಲ. ತಾವು ಪಟ್ಟ ನಿರಾಸೆಯನ್ನು ಕಷ್ಟವನ್ನೂ ಅವರು ಮರೆತಿರಲಿಲ್ಲ. ಸಂಗೀತದ ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗುವಂತೆ ಪುಸ್ತಕಗಳು ಪ್ರಕಟವಾಗಲು ಏರ್ಪಾಟು ಮಾಡಿದರು. ಈ ಪುಸ್ತಕಗಳನ್ನು ಅಚ್ಚು ಮಾಡುವುದು ಸುಲಭವಲ್ಲ. ಇವು ಇತರ ಪುಸ್ತಕಗಳಂತೆ ಇರುವುದಿಲ್ಲ. ಹಲವು ಚಿಹ್ನೆಗಳು ಇರಬೇಕು. ಆದುದರಿಂದ ಸಂಗೀತದ ಪಠ್ಯಪುಸ್ತಕಗಳನ್ನು ಪ್ರಕಟಿಸಲು ಮುದ್ರಣಾಲಯವನ್ನು ಸ್ಥಾಪಿಸಲಾಯಿತು. ಈ ವಿದ್ಯಾಲಯದಿಂದಲೇ ’ಸಂಗೀತಾಮೃತ ಪ್ರವಾಹ ’ಎಂಬ ಮಾಸ ಪತ್ರಿಕೆಯನ್ನು ಹೊರಡಿಸಲಾಯಿತು. ಈ ಪತ್ರಿಕೆಯಲ್ಲಿ ಜನಪ್ರಿಯವಾದ ದೇಶಭಕ್ತಿ ಗೀತೆಗಳಿಗೆ ರಾಗ ಪ್ರಸ್ತಾರಗಳನ್ನು ಹಾಕಿ ಅವುಗಳನ್ನು ಪ್ರಚುರಗೊಳಿಸಿದರು.

ಪಲುಸ್ಕರರು ಸಂಜೆಯ ಹೊತ್ತು ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಅವರ ಜೊತೆ ಮಾತನಾಡುತ್ತಾ ಕೂಡುತ್ತಿದ್ದರು. ಭಾರತೀಯ ಸಂಗೀತಕ್ಕೆ ಪ್ರಪಂಚದಲ್ಲಿಯೇ ಕೀರ್ತಿ ಬರುವಂತೆ ಏನು ಮಾಡಬೇಕು ಎಂಬುದೇ ಅವರ ಮಾತಿನ ವಿಷಯ.

ಲಾಹೋರಿನ ಈ ಸಂಗೀತ ಮಹಾವಿದ್ಯಾಲಯದ ಖ್ಯಾತಿ ಹಬ್ಬಿತು. ಗೋಪಾಲಕೃಷ್ಣ ಗೋಖಲೆ ಮೊದಲಾದ ರಾಷ್ಟ್ರೀಯ ನಾಯಕರು ವಿದ್ಯಾಲಯಕ್ಕೆ ಭೇಟಿಕೊಟ್ಟು ಪಲುಸ್ಕರರ ಶ್ರೇಷ್ಠ ಕಾರ್ಯವನ್ನು ಮೆಚ್ಚಿ ಹೊಗಳಿದರು. ಶ್ರೀಮತಿ ಅನಿಬೆಸೆಂಟರು ಕಾಶಿಯ ಹಿಂದೂ ಕಾಲೇಜಿಗೆ ಗಂಧರ್ವ ಮಹಾವಿದ್ಯಾಲಯದಲ್ಲಿ ತರಬೇತಿ ಪಡೆದ ಸಂಗೀತಗಾರರನ್ನೇ ಕಳಿಸಿಕೊಡಲು ಪಲುಸ್ಕರರಿಗೆ ಕೇಳಿಕೊಂಡರು. ಪಲುಸ್ಕರರು ಹೇರಲೆಕರ ಎಂಬುವವರನ್ನು ಕಳಿಸಿಕೊಟ್ಟರು.

ಸ್ವಲ್ಪ ಕಾಲ ಕಳೆದ ನಂತರ ಪಲುಸ್ಕರರಿಗೆ ಮತ್ತೊಂದು ಯೋಚನೆ ಬಂದಿತು. ನಾಡಿನ ಮೂಲೆ ಮೂಲೆಗಳಿಗೆ ಸರಿಯಾಗಿ ಶಿಕ್ಷಣ ಪಡೆದ ಸಂಗೀತ ಶಿಕ್ಷಕರು ಬೇಕಲ್ಲವೆ? ಇಂತಹ ಶಿಕ್ಷಕರನ್ನು ಕಳುಹಿಸಿಕೊಡಿ ಎಂದು ಬೇರೆ ಬೇರೆ ಸ್ಥಳಗಳಿಂದ ಬೇಡಿಕೆಗಳು ಬರುತ್ತವೆ. ಲಾಹೋರಿನಲ್ಲಿರುವ ಮಹಾವಿದ್ಯಾಲಯ ಒಂದರಿಂದ ಸಂಗೀತ ಪ್ರಚಾರ, ಸಂಗೀತಗಾರರನ್ನು ತರಬೇತಿಗೊಳಿಸಿ ಅಗತ್ಯವಾದ ಕಡೆಗಳಿಗೆ ಕಳುಹಿಸುವುದು ಸಾಧ್ಯವಿಲ್ಲ. ಲಾಹೋರಿಗಿಂತ ಭಾರತದಲ್ಲಿ ಮಧ್ಯ ಸ್ಥಳದಲ್ಲಿರುವ ದೊಡ್ಡ ನಗರ ಒಂದರಲ್ಲಿ ಇಂತಹ ಶಿಕ್ಷಣ ಕೊಡಲು ಸಂಸ್ಥೆ ಇರಬೇಕು. ಇದರ ಹಲವಾರು ಶಾಖೆಗಳನ್ನು ತೆರೆಯುವುದು ತೀರ ಅವಶ್ಯಕ. ಈ ವಿಚಾರ ಮನಸ್ಸಿನಲ್ಲಿ ಬರುವುದೇ ತಡ. ಪಲುಸ್ಕರರು ಭಾರತದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕೇಂದ್ರ ಸ್ಥಾನದಂತಿರುವ ಭಾರತದ ಮಹಾದ್ವಾರವೆನಿಸಿದ ಮುಂಬಯಿಯಲ್ಲಿ ಒಂದು ಶಿಕ್ಷಣ ಕೇಂದ್ರವನ್ನು ಪ್ರಾರಂಭಿಸಲು ತೀರ್ಮಾನ ಮಾಡಿದರು.

೧೯೦೮ರ ದಸರೆಯ ಶುಭ ಕಾಲದಲ್ಲಿ ಗಂಧರ್ವ ಮಹಾವಿದ್ಯಾಲಯದ ಪ್ರಾರಂಭೋತ್ಸವವು ನಡೆಯಿತು. ನಗರದ ಪ್ರತಿಷ್ಠಿತ ವ್ಯಕ್ತಿಗಳು ಸಮಾರಂಭಕ್ಕೆ ಬಂದಿದ್ದರು. ಜಗದ್ಗುರು ಶಂಕರಾಚಾರ್ಯರು ಈ ಸಂಗೀತ ಮಹಾ ವಿದ್ಯಾಲಯದ ಉದ್ಘಾಟನಾ ಸಮಾರಂಭವನ್ನು ವಿದ್ಯುಕ್ತವಾಗಿ ನೆರವೇರಿಸಿದರು. ಎರಡು ಮೂರು ವರ್ಷಗಳಲ್ಲಿಯೇ ವಿದ್ಯಾರ್ಥಿಗಳ ಸಂಖ್ಯೆ ಐದು ನೂರಕ್ಕೆ ಏರಿತು.

ಈ ವಿದ್ಯಾಲಯದಲ್ಲಿ ಒಂಭತ್ತು ವರ್ಷಗಳ ಕಾಲ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣನಾದ ವಿದ್ಯಾರ್ಥಿಗೆ ಸಂಗೀತ ಪ್ರವೀಣ ಎಂಬ ಪ್ರಶಸ್ತಿ ದೊರೆಯುತ್ತಿತ್ತು. ಮತ್ತು ಸಂಗೀತ ಶಾಸ್ತ್ರದಲ್ಲಿ ಸ್ನಾತಕ ಪದವಿಯನ್ನು ಪಡೆಯುತ್ತಿದ್ದನು. ೧೯೧೧ರಲ್ಲಿ ಮೊದಲ ಬಾರಿಗೆ ಗಂಧರ್ವ ಮಹಾವಿದ್ಯಾಲಯದ ಘಟಕೋತ್ಸವ ಸಮಾರಂಭವು ನಡೆಯಿತು.

ಈಗ ಗಂಧರ್ವ ಮಹಾವಿದ್ಯಾಲಯಕ್ಕೆ ಸೇರಿದಂತೆ ಇನ್ನೂರೈವತ್ತು ಸಂಗೀತ ಸಂಸ್ಥೆಗಳಿವೆ. ಇವುಗಳಲ್ಲಿ ಸುಮಾರು ಹದಿನೈದು ಸಾವಿರ ಮಂದಿ ಸಂಗೀತ ಕಲಿಯುತ್ತಿದ್ದಾರೆ.

ಪಲುಸ್ಕರರು ವಿದ್ಯಾಲಯವನ್ನು ಪ್ರಾರಂಭಿಸಿದುದರಿಂದ ಸಂಗೀತದಲ್ಲಿ ಆಸಕ್ತಿ ಇರುವವರಿಗೆ ಸರಿಯಾಗಿ ಶಿಕ್ಷಣ ಪಡೆಯಲು ಅವಕಾಶವಾಯಿತು. ಅಷ್ಟೇ ಅಲ್ಲ, ಸಂಗೀತಗಾರರು ಇಷ್ಟು ಮಂದಿ ಶಿಕ್ಷಣ ಪಡೆದ ನಂತರ ಜನ ಸಾಮಾನ್ಯರೂ ಸಂಗೀತ ಕೇಳುವುದು ಸಾಧ್ಯವಾಯಿತು. ಒಬ್ಬ ಸಾಮಾನ್ಯ ಮನುಷ್ಯ, ಸಂಗೀತದಲ್ಲಿ ಆಸಕ್ತಿ ಇದೆ, ಒಳ್ಳೆಯ ಸಂಗೀತ ಕೇಳಬೇಕು. ಅರಮನೆಯ ಕಛೇರಿಗಳಾಗಲಿ ಶ್ರೀಮಂತರ ಮನೆಯ ಸಂಗೀತಕ್ಕಾಗಲಿ ಅವನನ್ನು ಕರೆಯುತ್ತಾರೆಯೆ? ಏನು ಮಾಡಬೇಕು ಅವನು? ಅವನು ಸಾಮಾನ್ಯ ಪ್ರಜೆ ಎಂದ ಮಾತ್ರಕ್ಕೆ ಸಂಗೀತ ಕೇಳಿ ಸಂತೋಷ ಪಡುವ ಅವಕಾಶ ಬೇಡವೆ?

ಯಾರೇ ಆದರೂ ಹಣ ಕೊಟ್ಟು ಟಿಕೆಟ್ ಕೊಂಡು ಒಳ್ಳೆಯ ಸಂಗೀತಗಾರರ ಕಛೇರಿ ಕೇಳಲು ಸಾಧ್ಯವಾಗುವ ಹಾಗೆ ಮಾಡಿದವರು ಪಲುಸ್ಕರರು. ಮೊದಮೊದಲು ಅವರು ದೇವಸ್ಥಾನಗಳಲ್ಲಿ ಹಾಡುತ್ತಿದ್ದರು. ಆನಂತರ ದೊಡ್ಡ ಉದ್ಯಾನಗಳಲ್ಲಿ ಹಾಡಲು ಪ್ರಾರಂಭ ಮಾಡಿದರು. ಕೇಳಲು ಬಯಸುವವರು ಸ್ವಲ್ಪ ದುಡ್ಡು ಕೊಟ್ಟು ಟಿಕೆಟ್ ಕೊಳ್ಳಬೇಕಾಗಿತ್ತು. ಬರಬರುತ್ತ ಇವರ ಕಛೇರಿ ತುಂಬ ಜನಪ್ರಿಯ ಆಯಿತು. ಇವರ ಶಿಷ್ಯರೂ ಗುರುಗಳ ಮೇಲ್ಪಂಕ್ತಿಯನ್ನು ಅನುಸರಿಸಿದರು.

ಶಾಸ್ತ್ರೀಯ ಸಂಗೀತ ಅರಮನೆಗಳಿಂದ ಜನಸಾಮಾನ್ಯರಿಗೆ ಬಂದ ಹಾಗಾಯಿತು.

ಅನೇಕ ಜನ ಪಲುಸ್ಕರರು ಮಾಡಿದ್ದು ತಪ್ಪು ಎಂದರು. ಸಂಗೀತವನ್ನು ಮಾರಿದ ಹಾಗಾಯಿತು ಎಂದರು. ಹಲವರು ಸಂಗೀತಗಾರರೇ ಪಲುಸ್ಕರರನ್ನು ವಿರೋಧಿಸಿದರು. ಆದರೆ ಸಾಮಾನ್ಯ ಜನರೂ ಒಳ್ಳೆಯ ಸಂಗೀತಗಾರರ ಕಛೇರಿ ಕೇಳಿ ಸಂತೋಷಪಡುವ ಅವಕಾಶ ಇರಬೇಕು ಎಂದರು ಪಲುಸ್ಕರರು. ಎರಡನೆಯದಾಗಿ, ಸಂಗೀತಗಾರರು ಯಾವಾಗಲೂ ರಾಜ ಮಹಾರಾಜರು, ಹಣವಂತರು ಇವರನ್ನೇ ನೆಚ್ಚಿಕೊಂಡಿರಬಾರದು, ಜನರಿಂದ ದೂರವಾಗಬಾರದು ಎಂದರು.

ಈ ವಿದ್ಯಾಲಯಕ್ಕೋಸ್ಕರ ಪಲುಸ್ಕರರು ಪಟ್ಟ ಕಷ್ಟ ಅಷ್ಟಿಷ್ಟಲ್ಲ, ವಿದ್ಯಾರ್ಥಿಗಳ ವಾಸದ ಖರ್ಚೆಲ್ಲ ಪಲುಸ್ಕರರದೇ. ದಿನಗಳು ಕಳೆದಂತೆ ವಿದ್ಯಾಲಯದ ಖರ್ಚು ಹೆಚ್ಚಾಯಿತು. ಹೊಸ ಕಟ್ಟಡಗಳನ್ನು ಕಟ್ಟಬೇಕಾಯಿತು. ಹಣವಿರಲಿಲ್ಲ. ಪಲುಸ್ಕರರು ಸಾಲ ಮಾಡಬೇಕಾಯಿತು. ಇದಾದ ನಂತರ, ಕಟ್ಟಡಗಳ ಬೆಲೆ ಏರಿತು, ’ವಿದ್ಯಾಲಯದ ಕಟ್ಟಡವನ್ನು ಮಾರಿ ಬಿಡಿ, ಬೇರೆ ಕಟ್ಟಡಕ್ಕೆ ಹೋಗಿ, ಸಾಲ ತೀರಿಸಬಹುದು’ ಎಂದು ಸ್ನೇಹಿತರು ಸಲಹೆ ಕೊಟ್ಟರು.

’ನಾನು ವಿದ್ಯಾಲಯದ ಕಟ್ಟಡದ ವ್ಯಾಪಾರದಲ್ಲಿ ಹಣ ಮಾಡಬೇಕಾಗಿಲ್ಲ’ ಎಂದು ಬಿಟ್ಟರು ಪಲುಸ್ಕರ‍್.

ಕೆಲವು ದಿನಗಳಲ್ಲಿ ಕಟ್ಟಡಗಳ ಬೆಲೆಗಳು ಇಳಿದು ಹೋದವು. ಪಲುಸ್ಕರರ ಸಾಲ ಇನ್ನೂ ಹೆಚ್ಚಿತು.

’ಸಾಲ ತೀರಿಸಲು ಹಣ ಇಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿ, ದಿವಾಳಿ ತೆಗೆಯಿರಿ. ಸಾಲದ ಹೊರೆ ಇರುವುದಿಲ್ಲ’ ಎಂದು ಸ್ನೇಹಿತರು ಮತ್ತೆ ಸೂಚಿಸಿದರು.

ಪಲುಸ್ಕರರು ಒಪ್ಪಲಿಲ್ಲ. ದೇಶದಲ್ಲಿ ಸಂಚಾರ ಕೈಗೊಂಡರು, ಊರೂರುಗಳಲ್ಲಿ ಕಛೇರಿ ಮಾಡಿ ಹಣ ಸಂಪಾದಿಸಿದರು, ಅದನ್ನೆಲ್ಲ ವಿದ್ಯಾಲಯದ ಸಾಲಕ್ಕೆ ಕಟ್ಟಿದರು.

ಅವರು ಸಾಯುವ ಹೊತ್ತಿಗೆ ಸಾಲ ಪೂರ್ತಿ ತೀರಿ ಹೋಗಿತ್ತು.

ರಾಷ್ಟ್ರಸೇವೆಯಲ್ಲಿ

ವಿಷ್ಣು ದಿಗಂಬರ ಪಲುಸ್ಕರರು ಸದಾ ಸರ್ವದಾ ಸಂಗೀತದ ಏಳ್ಗೆಗಾಗಿ ಶ್ರಮಿಸುತ್ತಿದ್ದರು. ಆದರೆ ತಾವು ಭಾರತೀಯರು, ತಮ್ಮ ನಾಡು ಸ್ವಾತಂತ್ರ‍್ಯಕ್ಕಾಗಿ ಹೋರಾಡುತ್ತಿದೆ ಎಂಬುದನ್ನು ಮರೆಯಲಿಲ್ಲ. ರಾಷ್ಟ್ರೀಯ ಚಟುವಟಿಕೆಗಳಿಂದ ದೂರ ಉಳಿದಿರಲಿಲ್ಲ. ಅವರು ಲೋಕಮಾನ್ಯ ಬಾಲಗಂಗಾಧರ ತಿಲಕರ ಉಗ್ರ ರಾಷ್ಟ್ರೀಯ ವಿಚಾರಗಳಿಂದ ಅತ್ಯಂತ ಪ್ರಭಾವಿತರಾಗಿದ್ದರು. ಪಲುಸ್ಕರರಷ್ಟು ಬೇರೆ ಯಾವ ಸಂಗೀತಗಾರರೂ ನೇರವಾಗಿ ಸ್ವಾತಂತ್ರ‍್ಯದ ಚಳುವಳಿಯಲ್ಲಿ ಭಾಗವಹಿಸಲಿಲ್ಲ ಎಂದೇ ಹೇಳಬಹುದು.

೧೯೦೫ರಲ್ಲಿ ಬ್ರಿಟಿಷ್ ಸರ್ಕಾರ ಬಂಗಾಳವನ್ನು ಎರಡು ಭಾಗ ಮಾಡಿತು. ಇದರಿಂದ ಬಂಗಾಳದ ಜನ ಸಿಡಿದೆದ್ದರು. ಇಷ್ಟು ಮಾತ್ರವಲ್ಲ, ಮತ್ತೆ ಬಂಗಾಳವನ್ನು ಒಂದು ಗೂಡಿಸಬೇಕು ಎಂಬ ಚಳವಳಿ ಇಡೀ ದೇಶಕ್ಕೆ ಹಬ್ಬಿತು. ಪಲುಸ್ಕರರು ಇದರಿಂದ ಪ್ರಭಾವಿತರಾಗದೆ ಉಳಿಯಲಿಲ್ಲ. ಲಾಹೋರ‍್ ನ ಗಂಧರ್ವ ಮಹಾವಿದ್ಯಾಲಯದಿಂದ ಸಂಗೀತದ ಮೂಲಕ ಜನತೆಯಲ್ಲಿ ರಾಷ್ಟ್ರೀಯ ಭಾವನೆಯನ್ನು ಕೆರಳುವಂತೆ ಮಾಡಿದರು.

’ಭಾರತ್ ಹಮಾರಾ ದೇಶ್ ಹೈ’,  ’ವಂದೇಮಾತರಂ’ ಮೊದಲಾದವು ಪ್ರಸಿದ್ಧ ದೇಶಭಕ್ತಿ ಗೀತೆಗಳು. ಪಲುಸ್ಕರರು ಇವನ್ನು ಹಾಡಲು ಸುಲಭವಾಗಿರುವಂತಹ ಅಲ್ಲದೆ ಮನಸ್ಸನ್ನು ಸೆಳೆಯುವಂತಹ ಹೊಸ ರಾಗಗಳಿಗೆ ಹೊಂದಿಸಿದರು. ಈ ರಾಗಗಳನ್ನು ಸೂಚಿಸಿ ಹಾಡಲು ಅನುಕೂಲವಾಗಿರುವಂತೆ ತಮ್ಮ ’ಸಂಗೀತಾಮೃತ ಪ್ರವಾಹ’ ಪತ್ರಿಕೆಯಲ್ಲಿ ಇವನ್ನು ಅಚ್ಚು ಮಾಡಿದರು.

ಆ ಗೀತೆಗಳು ಅತ್ಯಂತ ಜನಪ್ರಿಯವಾದುವು. ಎಲ್ಲರೂ ಅವನ್ನು ಹಾಡುವವರೇ! ಮನೆಗಳಲ್ಲಿ, ಅಂಗಡಿಗಳಲ್ಲಿ ನಾಲ್ಕು ಜನ ಸೇರಿದ ಕಡೆ ಇವೇ ಹಾಡುಗಳು.

ಪಲುಸ್ಕರರು ಸಾರ್ವಜನಿಕ ಕಾರ್ಯಕ್ರಮಗಳ ಪ್ರಾರಂಭದಲ್ಲಿ ದೇಶಭಕ್ತಿಯ ಗೀತೆಗಳನ್ನು ಹಾಡುವ ಸತ್ಸಂಪ್ರದಾಯವನ್ನು ಹಾಕಿದರು. ಸಾರ್ವಜನಿಕ ಸಮಾರಂಭಗಳಲ್ಲಿ ’ವಂದೇಮಾತರಂ” ಗೀತೆಯನ್ನು ಹಾಡುವ ಪದ್ಧತಿಯನ್ನು ಪ್ರಾರಂಭಿಸಿದವರು ಪಲುಸ್ಕರರೇ ಎಂದು ಹೇಳಬಹುದು.

೧೯೦೭ರಲ್ಲಿ ಪಂಜಾಬಿನ ಕೇಸರಿ ಲಾಲಾ ಲಜಪತರಾಯರು ಮತ್ತು ಅಜಿತಸಿಂಗರು ಲಾಹೋರಿನಲ್ಲಿ ಬಂಧಿತರಾದಾಗ ’ಪಗರಿ ಸಂಭಾಲೋ ಓ ಜತ್ತಾ’, ಸಾರೇ ಜಹಾನ್ ಸೆ ಅಚ್ಚಾ’ ಎಂಬ ದೇಶಭಕ್ತಿಯ ಗೀತೆಗಳಿಗೆ ಪಲುಸ್ಕರರು ರಾಗ ಹಾಕಿ ಜನರು ಹಾಡಲು ಸುಲಭ ಮಾಡಿಕೊಟ್ಟರು.

”ವಂದೇಮಾತರಂ’ ಎಂಬ ಪದ ಕೇಳಿದರೇ ಬ್ರಿಟಿಷ್ ಅಧಿಕಾರಿಗಳು ಕೆರಳಿ ಕೆಂಡವಾಗುತ್ತಿದ್ದ ಕಾಲ ಅದು. ಪಲುಸ್ಕರರು ದೇಶಭಕ್ತಿ ಗೀತೆಗಳನ್ನು ಪ್ರಸಾರ ಮಾಡಿದುದು. ಸ್ವತಃ ಹಾಡಿದುದು – ಇವೆಲ್ಲ ಅಧಿಕಾರಿಗಳಿಗೆ ತುಂಬ ಕೋಪವನ್ನು ತಂದಿದ್ದವು. ಲಾಹೋರಿನ ಗಂಧರ್ವ ಮಹಾವಿದ್ಯಾಲಯಕ್ಕೆ ಬಂದು ಅಧಿಕಾರಿಗಳು ಶೋಧನೆ ನಡೆಸಿ ಹೋದರು.

ಪಲುಸ್ಕರರು ಪ್ರಖರ ರಾಷ್ಟ್ರವಾದಿ ಎಂಬುದು ನಾಡಿನ ಆಗಿನ ನಾಯಕರೆಲ್ಲರಿಗೂ ಗೊತ್ತಿತ್ತು. ಆದ್ದರಿಂದಲೇ ೧೯೧೫ರಿಂದ ಮೊದಲುಗೊಂಡು ಮುಂದಿನ ಎಲ್ಲ ಕಾಂಗ್ರೆಸ್ ಅಧಿವೇಶನಗಳಲ್ಲಿ ವಂದೇಮಾತರಂ ರಾಷ್ಟ್ರಗೀತೆಯನ್ನು ಹಾಡಲು ತಪ್ಪದೆ ಪಲುಸ್ಕರರನ್ನು ಆಮಂತ್ರಿಸಲಾಗುತ್ತಿತ್ತು. ೧೯೨೩ರ ಕಾಕಿನಾಡ ಕಾಂಗ್ರೆಸ್ಸಿನ ಅಧಿವೇಶನದಲ್ಲಿ ಅಧ್ಯಕ್ಷರ ಆಜ್ಞೆಯನ್ನು ಮೀರಿ ವಂದೇಮಾತರಂ ಹಾಡಿ ತಮ್ಮ ಆಪ್ರತಿಮ ಧೈರ್ಯ, ಸ್ವಾಭಿಮಾನ ಮತ್ತು ಪ್ರಖರ ರಾಷ್ಟ್ರಾಭಿಮಾನವನ್ನು ಪ್ರಕಟ ಪಡಿಸಿದರು. ಪಲುಸ್ಕರರ ಎದೆಗಾರಿಕೆ ಮತ್ತು ಸ್ವಾಭಿಮಾನದಿಂದಾಗಿ ವಂದೇಮಾತರಂ ರಾಷ್ಟ್ರಗೀತೆಯ ಮಾನ ಉಳಿಯಿತು.

ಇದೇ ರೀತಿ ರಘುಪತಿ ರಾಘವ ರಾಜಾರಾಂ ಪತಿತ ಪಾವನ ಸೀತಾರಾಂ ಎಂಬ ಪ್ರಸಿದ್ಧ ಭಜನೆಗೂ ಸಂಕಟ ಒದಗಿತ್ತು. ೧೯೨೫ರಲ್ಲಿ ಅಹಮದಾಬಾದಿನಲ್ಲಿ ಪಲುಸ್ಕರರು ರಾಮಾಯಣ ಪ್ರವಚನದ ಮಂಗಳದ ದಿನ ರಾಮಾಯಣ ಗ್ರಂಥದ ಮೆರವಣಿಗೆಯನ್ನು ನಡೆಸಲು ನಿರ್ಧರಿಸಿದರು. ಆಗ ಜಾತೀಯ ದ್ವೇಷವು  ಉರಿದೆದ್ದಿತು. ಯಾವ ಕ್ಷಣದಲ್ಲಾದರೂ ದಂಗೆ ಏಳುವ ಸ್ಥಿತಿ ಒದಗಿತು. ಆಗ ಕೆಲವು ಜನರು ಪಲುಸ್ಕರರ ಹತ್ತಿರ ಒಂದು ರಾಮಾಯಣ ಗ್ರಂಥದ ಮೆರವಣಿಗೆಯ ವಿಚಾರವನ್ನು ಕೈಬಿಡಲು ಒತ್ತಾಯ ಪಡಿಸಿದರು. ಆದರೆ ಪಲುಸ್ಕರರು ತಮ್ಮ ದೃಢ ನಿರ್ಧಾರದಿಂದ ಸ್ವಲ್ಪವೂ ಕದಲಲಿಲ್ಲ. ಏನೇ ಬರಲಿ ರಾಮಾಯಣ ಗ್ರಂಥದ ಮೆರವಣಿಗೆ ನಡೆದೇ ತೀರುವುದು’ ಎಂದು ಹೇಳಿದರು. ಮೆರವಣಿಗೆಯ ನಾಯಕತ್ವವನ್ನು ಸ್ವತಃ ವಹಿಸಿದರು.”ರಘುಪತಿ ರಾಘವ ರಾಜಾರಂ ಪತಿತ ಪಾವನ ಸೀತಾರಾಂ’ ಎಂಬ ಸಾಮೂಹಿಕ ಭಜನೆಯೊಂದಿಗೆ ಮೆರವಣಿಗೆಯು ವೈಭವದಿಂದ ನಿರ್ವಿಘ್ನವಾಗಿ ನಡೆಯಿತು.

೧೯೩೦ರಲ್ಲಿ ಭಾರತದಲ್ಲಿ ಅಸಹಕಾರ ಆಂದೋಲನ ನಡೆಯಿತು. ಆ ಚಳವಳಿಯ ಅಂಗವಾಗಿ ಪಾನನಿರೋಧ ಬೇಡಿಕೆಯನ್ನು ಮುಂದಿಡಲಾಯಿತು. ಹೆಂಡ ಮೊದಲಾದ ಪಾನಗಳನ್ನು ಜನ ಸೇವಿಸುವುದು ಕೆಟ್ಟದ್ದು. ಇವನ್ನು ಮಾರಕೂಡದು ಎಂದು ಸರ್ಕಾರ ಅಪ್ಪಣೆ ಮಾಡಬೇಕು ಎಂದು ಚಳವಳಿ ನಡೆಯಿತು. ನಾಡಿನಾದ್ಯಂತ ಸಹಸ್ರಾರು ಸ್ವಯಂಸೇವಕರು  ಮದ್ಯದ ಅಂಗಡಿಗಳ ಮುಂದೆ ಸತ್ಯಾಗ್ರಹ ನಡೆಸಿದರು.

ಇದೇ ಕಾಲಕ್ಕೆ ಪಲುಸ್ಕರರು ಮುಂಬಯಿಯಲ್ಲಿ ಸಂಗೀತ ಸಮ್ಮೇಳನ ಏರ್ಪಡಿಸಿದ್ದರು. ನಾಡಿನ ಮೂಲೆ ಮೂಲೆಗಳಿಂದ ಸಂಗೀತಗಾರರು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಅಲ್ಲಿಯ ಕಾರ್ಯಕ್ರಮವೊಂದರಲ್ಲಿ ಗವಾಯಿಯೊಬ್ಬನು ದರ್ಬಾರಿ ರಾಗದಲ್ಲಿ ’ಕೊಡು ಬಟ್ಟಲ ತುಂಬ ಮದ್ಯ’ ಎಂಬ ಗೀತವನ್ನು ಹಾಡಲು  ಪ್ರಾರಂಭಿಸಿದನು. ಆ ಹಾಡು ಪಲುಸ್ಕರರ ಕಿವಿಗೆ ಬೀಳುವುದೇ ತಡ, ’ನಿಲ್ಲಿಸು’ ನಿನ್ನ ಗಾಯನ’ ಎಂದು ಗದರಿಸಿದರು.

”ಗವಾಯಿಯವರು ಹಟ – ನಾನು ಅದೇ ಗೀತೆಯನ್ನು ಹಾಡುತ್ತೇನೆ ’ಎಂದು.

ಪಲುಸ್ಕರರು ಅಷ್ಟೇ ದೃಢ ನಿರ್ಧಾರದ ಧ್ವನಿಯಲ್ಲಿ ಹೇಳಿದರು : ’ಬೇರೆ ರಚನೆಯನ್ನು ಹಾಡದಿದ್ದರೆ, ನಾನು ಸಭೆಯಿಂದ ಎದ್ದು ಹೋಗುತ್ತೇನೆ’.

ದಾರಿಗಾಣದೆ ಆ ಗವಾಯಿಯು ಬೇರೆ ರಚನೆಯನ್ನು ಹಾಡಲು ಒಪ್ಪಿಕೊಂಡನು.

ಆಗ ಪಲುಸ್ಕರರು ಗವಾಯಿಗೆ ಬುದ್ಧಿ ಹೇಳಿದರು: ’ಜನರ ಭಾವನೆಗಳಿಗೆ ವಿರುದ್ಧವಾಗಿದ್ದು, ಅವರ ಮನಸ್ಸನ್ನು ನೋಯಿಸುವ ಗೀತೆಗಳನ್ನು ಸಂಗೀತಗಾರರು ಹಾಡಕೂಡದು. ದೇಶದಲ್ಲಿ ಎಲ್ಲ ಕಡೆ ಪಾನನಿರೋಧದ ಬಗ್ಗೆ ಚಳವಳಿ ನಡೆಯುತ್ತಿದೆ. ಇಂತಹ ರಚನೆಯನ್ನು ಹಾಡುವುದು ಯೋಗ್ಯವೆನಿಸುವುದಿಲ್ಲ. ನಾವು ರಾಷ್ಟ್ರೀಯ ಭಾವನೆಗಳನ್ನು ಗೌರವಿಸಬೇಕು. ಜವಾಬ್ದಾರಿಯಿಂದ ವರ್ತಿಸಬೇಕು. ಇಲ್ಲವಾದರೆ ಸಮಾಜದಲ್ಲಿ ನಮಗೆ ಗೌರವ ಸ್ಥಾನ ಸಿಗುವುದಾದರೂ ಹೇಗೆ?’

ಸಂಗೀತದ ಘನತೆಗಾಗಿ

ಪಲುಸ್ಕರ‍್ ಅವರು ಬಹಳ ಶಿಸ್ತಿನ ವ್ಯಕ್ತಿ. ಸಂಗೀತ ಕಛೇರಿ ಎಂದರೆ ಶಿಸ್ತಿನಿಂದ, ಸಮಯಕ್ಕೆ  ಸರಿಯಾಗಿ ನಡೆಯಬೇಕು ಎಂದು ಅವರ ನಿಯಮ. ೧೯೨೭ರಲ್ಲಿ ಮದರಾಸಿನಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆಯಿತು. ಅದರ ಅಂಗವಾಗಿ ಸಂಗೀತ ಸಮ್ಮೇಳನವು ನಡೆಯಿತು. ಒಂದು ಸಂಜೆ ಆರು ಗಂಟೆಯವರೆಗೆ ಮತ್ತೊಬ್ಬ ಸಂಗೀತ ವಿದ್ವಾಂಸರ ಕಛೇರಿ ನಡೆಯಬೇಕು. ಆದರಿಂದ ಪಲುಸ್ಕರ‍್ ಅವರ ಕಛೇರಿ ಎಂದು ತೀರ್ಮಾನವಾಗಿತ್ತು. ಎಷ್ಟೋ ಮಂದಿ ಸಂಗೀತದ ವಿದ್ವಾಂಸರು ತಮ್ಮ ಕಛೇರಿಗೆ ಬೇಕೆಂದೇ ತಡವಾಗಿ ಬರುತ್ತಿದ್ದರು. ಸಭಿಕರೆಲ್ಲ ತಮಗಾಗಿ ಕಾದಿದ್ದರೆ ಅದೇ ಅವರಿಗೆ ಹೆಮ್ಮೆ ತಡವಾಗಿ ಕಛೇರಿ ಪ್ರಾರಂಭಿಸಿ, ಮನಸ್ಸು ಬಂದಷ್ಟು ಹೊತ್ತು ಹಾಡುತ್ತಿದ್ದರು.

ಪಲುಸ್ಕರರು ಐದೂ ಮುಕ್ಕಾಲು ಘಂಟೆಗೆ ಸಭೆಗೆ ಬಂದರು. ಅವರ ಶಿಷ್ಯರೂ ಸಿದ್ಧರಾಗಿದ್ದರು. ಆರಕ್ಕೆ ಐದು ನಿಮಿಷ ಇತ್ತು. ಹಾಡುತ್ತಿದ್ದ ವಿದ್ವಾಂಸರು ಕಛೇರಿ ಮುಗಿಸುವ ಸೂಚನೆಯೇ ಕಾಣಲಿಲ್ಲ. ಆರು ಹೊಡೆಯಿತು. ಪಲುಸ್ಕರರು ತಮ್ಮ ಶಿಷ್ಯರೊಂದಿಗೆ ವೇದಿಕೆಗೆ ಬಂದರು. ಮತ್ತೊಬ್ಬ ವಿದ್ವಾಂಸರು ಹಾಡುತ್ತಲೇ ಇದ್ದರು. ಪಲುಸ್ಕರರು ವೇದಿಕೆಯ ಮೇಲೆ ಮುಂದೆ ಬಂದು ಕುಳಿತರು. ಸಭೆಯಲ್ಲಿದ್ದವರಿಗೆಲ್ಲ ಆಶ್ಚರ್ಯ, ದಿಗ್ಭ್ರಮೆ.

ಸಭೆಯನ್ನು ಗೊತ್ತು ಮಾಡಿದ್ದವರಿಗೆ ಕೋಪ ಬಂದಿತು. ಪಲುಸ್ಕರರ ಬಳಿ ಬಂದು, ’ ಆ ವಿದ್ವಾಂಸರ ಕಛೇರಿ ಇನ್ನು ಸ್ವಲ್ಪ ಹೊತ್ತಿನಲ್ಲಿ ಮುಗಿಯುತ್ತದೆ. ಆನಂತರ ನಿಮ್ಮ ಕಛೇರಿ?’ ಎಂದರು.

ಪಲುಸ್ಕರರು ’ನೀವೇ ನನ್ನ ಕಛೇರಿ ಆರು ಗಂಟೆಗೆ ಎಂದು ತಿಳಿಸಿದಿರಿ. ನಾನು ಬಂದಿದ್ದೇನೆ. ಆರು ಗಂಟೆ ಆಗಿದೆ, ಕಛೇರಿ ಪ್ರಾರಂಭ ಮಾಡುತ್ತೇನೆ. ತಡವಾಗುವ ಹಾಗಿದ್ದರೆ ನೀವೇ ನನ್ನ  ಕಛೇರಿ ಏಳು ಗಂಟೆಗೆ ಎಂದು ಹೇಳಬೇಕಾಗಿತ್ತು. ಸಂಗೀತಕ್ಕೆ ಸಂಗೀತಗಾರರಿಗೆ ಮರ್ಯಾದೆ ಕೊಡುವುದುನ್ನು ನೀವು ಕಲಿಯಬೇಕು ’ ಎಂದರು.

ಒಮ್ಮೆ ಪಲುಸ್ಕರರನ್ನು ನವಾಬನೊಬ್ಬ ತನ್ನ ಆಸ್ಥಾನಕ್ಕೆ ಆಹ್ವಾನಿಸಿದ. ಆಸ್ಥಾನದಲ್ಲಿ ಅವರ ಸಂಗೀತ ಕಛೇರಿ ನಡೆಯಬೇಕಾಗಿತ್ತು. ತಮ್ಮ ಕಛೇರಿಗೆ ಏರ್ಪಾಟುಗಳು ಸರಿಯಾಗಿವೆ ಎಂದು ತಾವೇ ಹೋಗಿ ನೋಡಿ ಖಚಿತ ಮಾಡಿಕೊಳ್ಳುವುದು ಪಲುಸ್ಕರರ ಪದ್ಧತಿ. ಹಾಗೆಯೇ ಅವರು ನವಾಬನ ಆಸ್ಥಾನಕ್ಕೆ ಹೋದರು. ಕಛೇರಿ ನಡೆಯುವಾಗ ಕೇಳುವವರಿಗೆಲ್ಲ ಕುರ್ಚಿಗಳು, ಸಂಗೀತಗಾರರು ನೆಲದ ಮೇಲೆ ಕುಳಿತುಕೊಳ್ಳಬೇಕು – ಹೀಗೆ ವ್ಯವಸ್ಥೆಯಾಗಿತ್ತು. ಪಲುಸ್ಕರರಿಗೆ ತುಂಬ ಕೋಪ ಬಂದಿತು. ಎಲ್ಲರಿಗೂ ಕುರ್ಚಿಗಳನ್ನು ಹಾಕಿಸಿ ಇಲ್ಲವೇ ದೊಡ್ಡ ವೇದಿಕೆಯನ್ನು ಹಾಕಿಸಿ, ಎಲ್ಲರೂ ಅದರ ಮೇಲೆ ಕುಳಿತುಕೊಳ್ಳಲಿ ಎಂದರು.

ನಾನು ಸಭಿಕರ ಪಾದಗಳ ಬಳಿ ಕುಳಿತು ಹಾಡಿದರೆ ಸಂಗೀತದ ಕಲೆಗೇ ಅಪಮಾನ ಎಂದರು ಪಲುಸ್ಕರರು

ನಾನು ಸಭಿಕರ ಪಾದಗಳ ಬಳಿ ಕುಳಿತು ಹಾಡಿದರೆ ಸಂಗೀತದ ಕಲೆಗೇ ಅಪಮಾನ ಎಂದು ಪಲುಸ್ಕರರು.

ನವಾಬನ ಅಪ್ಪಣೆ ಇಲ್ಲದೆ ಹೀಗೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವ ಹಾಗಿಲ್ಲ. ವಿಷಯವನ್ನು ಕೇಳಿದಾಗ ನವಾಬನಿಗೆ ಪಲುಸ್ಕರರ ಮಾತು ವಿಚಿತ್ರವಾಗಿ, ತಮಾಷೆಯಾಗಿ ಕಂಡಿತು. ಸಂಗೀತಗಾರರೂ ಆಸ್ಥಾನದ ದೊಡ್ಡ ಮನು‌ಷ್ಯರ ಹಾಗೆ ಕುರ್ಚಿಯಲ್ಲಿ ಕುಳಿತುಕೊಳ್ಳುವುದು? ಹೀಗೆ ಕೇಳುವುದಕ್ಕೆ ಎಷ್ಟು ಧೈರ್ಯ ಇವರಿಗೆ ಎನ್ನಿಸಿತು.

ಕಡೆಗೆ ನವಾಬ ಒಪ್ಪಿದ. ಸಂಗೀತಗಾರರಿಗೆ ಎತ್ತರವಾದ ವೇದಿಕೆಯ ವ್ಯವಸ್ಥೇ ಆಯಿತು.

ರಾಮಾರ್ಪಿತ ಜೀವನ

ಪಲುಸ್ಕರರು ಮೊದಲಿನಿಂದಲೂ ಧಾರ್ಮಿಕ ವಾತಾವರಣದಲ್ಲಿ ಬೆಳೆದುಕೊಂಡು ಬಂದರು. ಅವರು ದತ್ತಾತ್ರೇಯನ ಅನನ್ಯ ಭಕ್ತರಾಗಿದ್ದರು.

ಒಂದು ಸಲ ಪಲುಸ್ಕರರು ಪಂಜಾಬಿನಲ್ಲಿ ಪ್ರವಾಸದಲ್ಲಿದ್ದಾಗ ಲಾಲಾ ನಿರಂಜನ ದಾಸ ಎಂಬುವರು ರೇಶ್ಮೆಯ ವಸ್ತ್ರದಲ್ಲಿ ಸುತ್ತಿದ್ದ ತುಳಸಿರಾಮಾಯಣ ಗ್ರಂಥಗಳನ್ನು ತಂದುಕೊಟ್ಟು ಪಲುಸ್ಕರರಿಗೆ ಇದು ನಿಮ್ಮ ಜೀವನದ ದಾರಿದೀಪವಾಗುವುದು ಎಂದು ಹೇಳಿದರು. ಈ ಘಟನೆ ಪಲುಸ್ಕರರ ಮನಸ್ಸಿನ ಮೇಲೆ ಅಚ್ಚಳಿಯದ ಪ್ರಭಾವವನ್ನು ಬೀರಿತು. ಅಂದಿನಿಂದ ಮೊದಲುಗೊಂಡು ಅವರು ಶ್ರೀರಾಮನ ಅನನ್ಯ, ಏಕಾಂತ ಭಕ್ತರಾದರು. ಕುಳಿತರೆ ರಾಮ, ನಿಂತರೆ ರಾಮ, ಹಾಡುವುದೂ ರಾಮಧುನ್ (ರಾಮಧ್ಯಾನ) ಪ್ರವಚನ ಮಾಡುವುದೂ ರಾಮಾಯಣದ ಮೇಲೆ, ಹೀಗೆ ಅವರದು ರಾಮಾರ್ಪಿತ ಜೀವನವಾಯಿತು.

ಪಲುಸ್ಕರರು ತುಳಸಿರಾಮಾಯಣದ ಅನೇಕ ಚೌಪಾಯಿ, ದೋಹಾ ರೀತಿಯ ಪದ್ಯಗಳನ್ನು ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿದರು. ಪಲುಸ್ಕರರು ಹಾಡಿದ ತುಳಸಿದಾಸರ ಜಬ ಜಾನಕಿನಾಥ ಸಹಾಯ ಕರೆ ಮತ್ತು ಸಂತ ಸೂರದಾಸರ ನಿರ್ಬಲತೆ ಬಲರಾಮ ಎಂಬ ಗೀತೆಗಳು ಇಂದಿಗೂ ಜನಪ್ರಿಯವಾಗಿವೆ.
”ರಘುಪತಿ, ರಾಘವ ರಾಜಾರಂ, ಪತಿತ ಪಾವನ ಸೀತಾರಾಂ’ ಎಂಬ ಭಜನೆಯನ್ನು ಜನಪ್ರಿಯ ಗೊಳಿಸಿದರು. ಈ ಭಜನೆಯನ್ನು ಅವರು ರಾಷ್ಟ್ರಗೀತೆ ಮಟ್ಟಕ್ಕೆ ತರಲು ಪ್ರಯುತ್ನಿಸಿದರು. ಅವರ ಆ ಪ್ರಯತ್ನಕ್ಕೆ ಫಲ ಸಿಗದೆ ಹೋಗಲಿಲ್ಲ. ೧೯೩೦ರಲ್ಲಿ ಮಹಾತ್ಮಾ ಗಾಂಧಿಯವರು ಬ್ರಿಟಿಷ್ ಸರ್ಕಾರದ ವಿರುದ್ಧ ಒಂದು ಹೊಸ ರೀತಿಯ ಚಳಿವಳಿಯನ್ನು ಪ್ರಾರಂಭಿಸಿದರು. ಆಗಿನ ಕಾನೂನಿನ ಪ್ರಕಾರ, ಸರ್ಕಾರದ ಅಪ್ಪಣೆ ಇಲ್ಲದೆ ಉಪ್ಪನ್ನು ನೀಡುವುದು ಅಪರಾಧ. ಗಾಂಧೀಜಿ ತಾವು ಸಮುದ್ರದ ನೀರಿನಿಂದ ಉಪ್ಪನ್ನು ಮಾಡುವುದಾಗಿ ಸರ್ಕಾರಕ್ಕೆ ತಿಳಿಸಿದರು. ಇದಕ್ಕಾಗಿ ದಂಡಿ ಎಂಬ ಸ್ಥಳಕ್ಕೆ ಹೊರಟರು. ಇದೇ ಅವರ ಪ್ರಸಿದ್ಧ ದಂಡೀ ಯಾತ್ರೆ. ಈ ಯಾತ್ರೆಯಲ್ಲಿ ಮೆರವಣಿಗೆಯ ಮುಂದೆ ಪಲುಸ್ಕರರ ಶಿಷ್ಯರಾದ ನಾರಾಯಣರಾವ್ ಖರೆಯವರು ’ ರಾಮಧುನ್’ ಹಾಡುತ್ತ ನಡೆದಿದ್ದರು.

ದಿನಗಳು ಕಳೆದಂತೆ ಪಲುಸ್ಕರರ ಶ್ರೀ ರಾಮಭಕ್ತಿ ಬೆಳೆಯುತ್ತಾ ನಡೆಯಿತು. ಗಂಧರ್ವ ವಿದ್ಯಾಲಯದಲ್ಲಿ ಅಖಂಡ ರಾಮಜಪವನ್ನು ಪ್ರಾರಂಭಿಸಿದರು. ಶ್ರೀರಾಮ ನವಮಿಯ ದಿನ ಮತ್ತು ಚಾತುರ್ಮಾಸ್ಯದ ಪೂರ್ತಿ ನಾಲ್ಕು ತಿಂಗಳುಗಳ ಕಾಲ ದಿನದ ೨೪ ಗಂಟೆಗಳಲ್ಲಿಯೂ ರಾಮಜಪ ನಡೆಯುವಂತೆ ಏರ್ಪಾಟು ಮಾಡಿದರು.

ಒಂದು ದಿನ ಮುಂಜಾನೆ ರಾಮಜಪದಲ್ಲಿ ಪಲುಸ್ಕರರು ಮಗ್ನರಾಗಿದ್ದಾಗ ಸಂಸ್ಥಾನದ ರಾಜನೊಬ್ಬರಿಂದ ಆಮಂತ್ರಣ ಬಂದಿತು. ಆ ರಾಜರ ಸಂದೇಶವನ್ನು ತಂದ ದೂತನು ಪಲುಸ್ಕರರು ಕೂಡಲೇ ತನ್ನ ಜೊತೆ  ಹೊರಡಬೇಕು ಎಂದು ಒತ್ತಾಯ ಮಾಡಿದ. ಆಗ ಪಲುಸ್ಕರರು ರಾಮಜಪ ಮುಗಿಯುವವರೆಗೆ ನಿಲ್ಲಲು ಸಾಧ್ಯವಿದ್ದರೆ ಬರುವುದಾಗಿ ತಿಳಿಸಿದರು. ಆ ದೂತನಿಗೆ ತನ್ನ ಯಜಮಾನನೇ ಮುಖ್ಯ. ರಾಜರನ್ನು ಕಾಯಿಸಬಾರದು, ಕೂಡಲೇ ಹೊರಡಬೇಕು ಎಂದು ಪಲುಸ್ಕರಿಗೆ ಅವಸರಪಡಿಸಿದ. ಪಲುಸ್ಕರರ ಶಿಷ್ಯರಿಗೂ ಹೆದರಿಕೆ – ’ರಾಜರಿಗೆ ಕೋಪ ಬಂದರೆ ಹೇಗೆ? ರಾಮನಾಮ ಜಪವನ್ನು ಅಲ್ಲಿಗೇ ನಿಲ್ಲಿಸಿ ಹೊರಟು ಬಿಡಿ”ಎಂದು ಗುರುಗಳಿಗೆ ಸೂಚಿಸಿದರು. ಪಲುಸ್ಕರರು ’ನಾನು ಈಗಾಗಲೇ ಶ್ರೀರಾಮನ ಸೇವೆಯಲ್ಲಿದ್ದೇನೆ. ಅರ್ಧದಲ್ಲಿಯೇ ಅದನ್ನು ಬಿಟ್ಟು ಬರಲಾರೆ’ ಎಂದು ಸ್ಪಷ್ಟವಾಗಿ ಹೇಳಿ ಕಳುಹಿಸಿದರು.

ಅಖಂಡ ದೇಶಪರ್ಯಟನೆ, ಪ್ರವಚನ, ಕೀರ್ತನೆ, ಸಂಗೀತ ಕಚೇರಿಗಳಿಂದಾಗಿ, ಪಲುಸ್ಕರರನ್ನು ಅಸ್ವಸ್ಥಗೊಂಡರು. ತಮ್ಮ ಉಳಿದ ಆಯುಷ್ಯವನ್ನು ಕಳೆಯಲು ನಾಶಿಕದ ಶ್ರೀರಾಮನಾಮ ಆಧಾರ ಎಂಬ ತಮ್ಮ ಆಶ್ರಮದಲ್ಲಿ ವಾಸಮಾಡತೊಡಗಿದರು. ಆರೋಗ್ಯ ತೀರ ಕೆಟ್ಟಿದ್ದರೂ ರಾಮಾಯಣ ಪಾರಾಯಣ, ರಾಮಜಪಗಳನ್ನು ಬಿಡಲಿಲ್ಲ.

ನಾಸಿಕದಿಂದ ಪಲುಸ್ಕರರನ್ನು ಮೀರಜ್ ಗೆ ಕರೆದೊಯ್ದರು. ಯಾವ ಔಷಧದಿಂದಲೂ ರೋಗ ಗುಣವಾಗಲಿಲ್ಲ, ಮೇಲಿಂದ ಮೇಲೆ ಪಲುಸ್ಕರರಿಗೆ ಎಚ್ಚರ ತಪ್ಪಲು ಪ್ರಾರಂಭವಾಯಿತು. ತಮ್ಮ ಅವಸಾನ ಕಾಲ ಹತ್ತಿರ ಬಂದಿದೆ ಎಂದು ಅರ್ಥವಾಯಿತು. ಒಂದು ಕ್ಷಣವೂ ಬಿಡದೆ ರಾಮ ಜಪವನ್ನು ನಡೆಸಲು ತಮ್ಮ ಶಿಷ್ಯರಿಗೆ ಹೇಳಿದರು. ಶಿಷ್ಯರೆಲ್ಲರೂ ಅವರ ಹಾಸಿಗೆಯ ಹತ್ತಿರ ಕುಳಿತು ’ಶ್ರೀರಾಮ ಜಯರಾಮ ಜಯ ಜಯ ರಾಮ’ ಎಂದು ಸುಶ್ರಾವ್ಯವಾಗಿ ಹಾಡಲು ಪ್ರಾರಂಭಿಸಿದರು. ಪಲುಸ್ಕರರಿಗೆ ಎಚ್ಚರ ತಪ್ಪಿದಾಗ ಶಿಷ್ಯರು ರಾಮಜಪವನ್ನು ನಿಲ್ಲಿಸುತ್ತಿದ್ದರು. ರಾಮಜಪವು ನಿಂತ ಕೂಡಲೇ, ಆ ಎಚ್ಚರ‍ತಪ್ಪಿದ ಸ್ಥಿತಿಯಲ್ಲಿಯೂ ಸಹ ಪಲುಸ್ಕರರ ಸಂಕಟದಿಂದ ಹೊರಳಾಡುತ್ತಿದ್ದರಂತೆ.

ರಾಮಜಪವು ಪ್ರಾರಂಭವಾದ ಕೂಡಲೇ ಶಾಂತವಾಗಿ ಮಲಗಿಕೊಳ್ಳುತ್ತಿದ್ದರಂತೆ!

೧೯೩೧ ಆಗಸ್ಟ್ ದಿನಾಂಕ ೨೧ ರಂದು ’ಶ್ರೀರಾಮ ಜಯರಾಮ ಜಯ ಜಯ ರಾಮ’ ಎಂಬ ಜಪದ ನಿನಾದದ ಮಧ್ಯೆ ಪಲುಸ್ಕರರ ಪ್ರಾಣಪಕ್ಷಿಯು ಹಾರಿಹೋಯಿತು.

ವಿಷ್ಣು ದಿಗಂಬರ ಪಲುಸ್ಕರರಿಗೆ ಸಂಗೀತವು ಜೀವನದ ತಿರುಳಾಗಿತ್ತು. ಅದೇ ತಪಸ್ಸಾಗಿತ್ತು. ದೇಶಸೇವೆಗೆ ಭಗವಂತನ ಸೇವೆಗೆ ಅದೇ ಸಾಧನವಾಗಿತ್ತು.