ಒಂದು ದೇಶದ ಸಂಗೀತ ಅದರ ಭಾಗ್ಯಗಳಲ್ಲಿ ಒಂದು; ಆ ದೇಶದವರ ಸಂಸ್ಕತಿಯ ಕನ್ನಡಿಗಳಲ್ಲಿ ಒಂದು.

ಭಾರತದ ಸಂಗೀತ ಕಲೆಗೆ ವಿಷ್ಣು ನಾರಾಯಣ ಭಾತ ಖಂಡೆಯವರು ಸಲ್ಲಿಸಿದ ಸೇವೆ ಅಪಾರ, ಅಮೂಲ್ಯ.

ಅವರು ಸ್ವತಃ ದೊಡ್ಡ ಸಂಗೀತಗಾರರು ಅಷ್ಟೇ ಅಲ್ಲ, ಭಾರತದ ಸಂಗೀತ ಶಾಸ್ತ್ರವನ್ನು ಆಳವಾಗಿ ಅಭ್ಯಾಸ ಮಾಡಿ ಸಂಗೀತ ಹಾಡುವ ಕ್ರಮಕ್ಕೆ ಶಾಸ್ತ್ರೀಯ ಆಧಾರವನ್ನು ಒದಗಿಸಿದರು. ಸಂಗೀತಗಾರರು ಎಂದರೆ ತಿರಸ್ಕಾರವಿದ್ದ ಕಾಲದಲ್ಲಿ ಅವರಿಗೆ ಗೌರವವನ್ನು ತಂದು ಕೊಟ್ಟವರಲ್ಲಿ ವಿಷ್ಣು ನಾರಾಯಣ ಭಾತಖಂಡೆಯವರು ಒಬ್ಬರು.

ಸಂಗೀತ ಕಲೆಯ  ಭಾಗ್ಯಹೀನ ಕಾಲ

ಸಂಗೀತ ಕಲೆಯನ್ನು ದೈವಿಕ ಕಲೆ ಎನ್ನುತ್ತಾರೆ, ಏಕೆ? ಅನಾದಿ ಕಾಲದಿಂದ ಬಂದ ನಾಲ್ಕು ವೇದಗಳು ಹಿಂದು ಧರ್ಮದ ನಂಬಿಕೆಗಳ ಮೂಲಗಳು. ಅವುಗಳಲ್ಲಿ ಸಾಮವೇದ ಒಂದು. ಸಾಮಗಾನದಿಂದಲೇ ಸಂಗೀತದ ಹುಟ್ಟು ಎನ್ನುತ್ತಾರೆ. ಸಂಗೀತವು ಮೊದಲು ಹಾಡುಗಾರಿಕೆಯಿಂದ ಪ್ರಾರಂಭವಾಯಿತಂತೆ; ವಾದ್ಯಗಳಿಂದ ಅಲ್ಲ, ಅದನ್ನು ಪ್ರಾರ್ಥನಾರೂಪವಾಗಿ ದೇವಾಲಯಗಳಲ್ಲಿ ಹಾಡುವ ರೂಢಿ ಇತ್ತು.

ಭಾರತ ಸ್ವಾತಂತ್ರ‍್ಯವನ್ನು ಕಳೆದುಕೊಂಡು ಬ್ರಿಟಿಷರ ದಾಸ್ಯದಲ್ಲಿದ್ದ ಕಾಲದಲ್ಲಿ ಭಾರತೀಯ ಸಂಗೀತ ಕಲೆ ಹೀನಸ್ಥಿತಿಗೆ ಬಂತು. ಈ ಹೀನ ಸ್ಥಿತಿಯಲ್ಲೂ ಉತ್ತರ ಹಿಂದೂಸ್ತಾನದಲ್ಲಿ ಕೆಲವರು ಸಂಗೀತ ಕಲೆಯನ್ನು ಪ್ರೋತ್ಸಾಹಿಸುತ್ತಿದ್ದರು. ಆದರೆ ಆ ಕಾಲದಲ್ಲಿ ಈ ಕಲೆ ತನ್ನ ದೈವಿಕ ಭಾವನೆ ಕಳೆದುಕೊಂಡಿತು. ಏಕೆಂದರೆ, ಇದನ್ನು ಪ್ರೋತ್ಸಾಹಿಸಿದವರು ಸಂಗೀತ ಕಲೆಯನ್ನು ಹೆಚ್ಚಾಗಿ ಜನರ ಮನರಂಜನೆಗಾಗಿ ಉಪಯೋಗಿಸಿದರು. ಇದರಿಂದ ಸಂಗೀತವೇನಿದ್ದರೂ ಮನಸ್ಸಿನ ಖುಷಿಗಷ್ಟೇ ಎಂಬ ಭಾವನೆ ಬೆಳೆಯಿತು.

ಈ ದೋಷದಿಂದಾಗಿ ವಿದ್ಯಾವಂತರು ಸಂಗೀತಗಾರರನ್ನೂ ಸಂಗೀತ ಕಲೆಯನ್ನೂ ತುಚ್ಛ ಭಾವನೆಯಿಂದ ಕಂಡರು. ಸಂಗೀತದ ವಿಷಯದಲ್ಲಿ ವಿದ್ಯಾವಂತರಿಗೆ, ಸಮಾಜದಲ್ಲಿ ಪ್ರತಿಷ್ಠಿತರಿಗೆ ತಿರಸ್ಕಾರ ಭಾವನೆ ಬರಲು ಅಂದಿನ ಹಲವು ಮಂದಿ ಸಂಗೀತಗಾರರೂ ಕಾರಣ. ಅವರಲ್ಲಿ ವಿದ್ಯಾವಂತರಿರಲಿಲ್ಲ, ಸುಸಂಸ್ಕೃತರಿರಲಿಲ್ಲ. ಆದ್ದರಿಂದ ಆ ದಿನಗಳಲ್ಲಿ ಸಂಗೀತ ಎಂಬುದು ಮೈಗಳ್ಳರ, ಕೆಲಸಕ್ಕೆ ಬಾರದ, ಓದುಬರಹ ಭಾರದವರ ವಿದ್ಯೆ ಎಂಬುದಾಗಿ ಜನರು ತಿಳಿದಿದ್ದರು. ಈ ಭಾವನೆ ಶುದ್ಧ ತಪ್ಪು ಎಂದರು ಪಂಡಿತ ಭಾತಖಂಡೆಯವರು. ಸಂಗೀತ ಎಂಬುದು ಸುಶಿಕ್ಷಿತರು ಪಡೆಯಬೇಕಾದ ಒಂದು ದೊಡ್ಡ ಕಲೆ, ಸುಶಿಕ್ಷಿತರಿಗೂ ಅದು ಭೂಷಣವಾಗುತ್ತದೆ ಎಂಬ ಭಾವನೆಯಿಂದ ಅವರು ಅದನ್ನು ಉದ್ಧಾರ ಮಾಡಿದರು.

ಬೆರಗುಗೊಳಿಸುವ ಸಾಧನೆ

ಹತ್ತೊಂಬತ್ತನೆಯ ಶತಮಾನದ ಕೊನೆಯ ಭಾಗ ನಮ್ಮ ದೇಶದ ನವೋದಯದ ಕಾಲ. ಭಾರತದ ಸಂಸ್ಕೃತಿಯಲ್ಲಿ ಮಾಸಿಹೋಗಿದ್ದ ಹಲವು ಅಂಶಗಳು ಮತ್ತೆ ಹೊಳಪನ್ನು ಕಂಡ ಕಾಲ. ನಮ್ಮ ಜನ ತಮ್ಮ ಹಿಂದಿನ ಹಿರಿಮೆಯನ್ನು ತಿಳಿಯಲು ಪ್ರಾರಂಭಿಸಿದ ಕಾಲ. ಆಗ ಸಂಗೀತ ಕಲೆಯೂ ಒಂದು ಗೌರವ ಸ್ಥಾನ ಪಡೆಯಿತು. ಸಂಗೀತ ಕಲೆಯ ಪುನರುತ್ಥಾನಕ್ಕಾಗಿ ಕೆಲಸ ಮಾಡಿದ ಮಹಾಪುರುಷರಲ್ಲಿ ಪಂಡಿತ ಭಾತಖಂಡೆಯವರೂ ಒಬ್ಬರು.

ಅವರು ಸ್ವತಃ ಹಾಡುತ್ತಿದ್ದರು; ವಾದ್ಯ ಸಂಗೀತಗಾರರೂ ಅಹುದು ಅಲ್ಲದೆ ಸಂಗೀತ ಶಾಸ್ತ್ರದ ಪರಿಶೋಧನೆ ಮಾಡಿದ ವಿದ್ವಾಂಸರೂ, ಕಲೆಯನ್ನು ಪ್ರದರ್ಶಿಸುವ ವಿದ್ಯೆಗೂ ಅದರ ಶಾಸ್ತ್ರವಿಭಾಗಕ್ಕೂ ಸಂಬಂಧ ತಂದೆ ಮಹಾವ್ಯಕ್ತಿ. ಸಂಗೀತದ ಪಠ್ಯಪುಸ್ತಕಗಳನ್ನು ಬರೆದ ಕೀರ್ತಿ ಅವರಿಗೇ ಸಲ್ಲುತ್ತದೆ. ಅಖಿಲ ಭಾರತ ಸಂಗೀತ ಸಮ್ಮೇಳನಗಳನ್ನು ಜರುಗಿಸಲು ಅವರೇ ಕಾರಣ ಪುರುಷರು. ಒಬ್ಬ ವ್ಯಕ್ತಿ ಒಂದು ಜೀವಮಾನದಲ್ಲಿ ಇಷ್ಟೊಂದು ಮಹತ್ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿದುದು ಆಶ್ಚರ್ಯದ ಸಂಗತಿ.

ಎರಡು ಪದ್ಧತಿಗಳು

ಭಾರತೀಯ ಸಂಗೀತ ಕಲೆಯಲ್ಲಿ ಎರಡು ಪದ್ಧತಿಗಳು. ದಕ್ಷಿಣಾದಿ ಸಂಗೀತ ಮತ್ತು ಉತ್ತರಾದಿ ಸಂಗೀತ. ದಕ್ಷಿಣಾದಿ ಸಂಗೀತಕ್ಕೆ ’ಕರ್ನಾಟಕ ಸಂಗೀತ’ ಎನ್ನುತ್ತಾರೆ. ಉತ್ತರಾದಿ ಸಂಗೀತಕ್ಕೆ ’ಹಿಂದೂಸ್ತಾನೀ ಸಂಗೀತ’ ಎನ್ನುತ್ತಾರೆ. ಒಂದೇ ತಾಯಿಯ ಇಬ್ಬರು ಮಕ್ಕಳು ಇರುವಂತೆ ಸಂಗೀತ ಕಲೆಯಲ್ಲಿ ಈ ಎರಡು ವಿಧದ ಪದ್ಧತಿಗಳಿವೆ. ಇವೆರಡು ಪದ್ಧತಿಗಳೂ ನೂರಾರು ವರ್ಷಗಳ ಹಿಂದೆ ಒಂದೇ ಆಗಿದ್ದಿರಬೇಕು ಎಂಬ ಊಹೆ ಇದೆ. ಕ್ರಮೇಣ ಸಂಗೀತಗಾರರು ಹಾಡುವ ರೀತಿಯಲ್ಲಿ ಬದಲಾವಣೆ ಇದ್ದಿರಬೇಕು.

ಈಗಂತೂ ಈ ಎರಡು ಪದ್ಧತಿಗಳಲ್ಲಿ ಅನೇಕ ವ್ಯತ್ಯಾಸಗಳಿವೆ. ಬೇರೆ ಬೇರೆಯಾಗಿಯೇ ಇವೆ. ತಳಹದಿ ಒಂದೇ ಬೆಳವಣಿಗೆ ಮಾತ್ರ ಬೇರೆ ಬೇರೆ. ದಕ್ಷಿಣಾದಿ ಕರ್ನಾಟಕ ಸಂಗೀತ ಕಛೇರಿಯಲ್ಲಿ ಹೋಗಿ ಹಾಡುವವರಿಗೆ ಸಹಾಯ ಮಾಡಲು ಪಕ್ಕವಾದ್ಯಗಳು ಯಾವುವು ಗೊತ್ತಿದೆಯೇ? ಪಿಟೀಲು ಮತ್ತು ಮೃದುಂಗ. ಆದರೆ ಉತ್ತರಾದಿ ಹಿಂದೂಸ್ತಾನೀ ಸಂಗೀತ ಕಛೇರಿಯಲ್ಲಿ ಹಾಡುವವರಿಗೆ ಸಾರಂಗಿ ಮತ್ತು ತಬಲ ಪಕ್ಕವಾದ್ಯಗಳು ಸಹಾಯ ಮಾಡುತ್ತವೆ.

ದೀಕ್ಷಿತರು, ಶ್ಯಾಮಾಶಾಸ್ತ್ರಿಗಳು, ತ್ಯಾಗರಾಜರು ಮುಂತಾದವರು ದಕ್ಷಿಣ ಭಾರತದ ಕರ್ನಾಟಕ ಸಂಗೀತ ಪದ್ಧತಿಯ ಬಹು ಹಿರಿಯ ವಿದ್ವಾಂಸರಲ್ಲಿ ಕೆಲವರು. ಪಂಡಿತ ರವಿಶಂಕರ‍್ ಸಿತಾರ‍್ ವಾದನದಲ್ಲಿ ಪ್ರಸಿದ್ಧರಾದವರು; ಪಂಡಿತ ಅಲಿ ಅಕ್ಬರ‍್ ಖಾನ್ ರವರು ಸರೋಡ್ ವಾದನದಲ್ಲಿ ಪ್ರಸಿದ್ಧರು; ಭೀಮಸೇನ್ ಜೋಷಿ ಬಹು ಚೆನ್ನಾಗಿ ಹಾಡುತ್ತಾರೆ. ಈ ಕಲಾವಿದರಲ್ಲಿ ಉತ್ತರ ಭಾರತದ ಹಿಂದೂಸ್ತಾನಿ ಸಂಗೀತ ಪದ್ಧತಿಯ ವಿದ್ವಾಂಸರು.

ಪಂಡಿತ ಭಾತಖಂಡೆಯವರು ಹಿಂದೂಸ್ತಾನಿ ಸಂಗೀತ ಶೈಲಿಗಾಗಿ ಹಗಲು-ರಾತ್ರಿ ದುಡಿದರು. ಆದ್ದರಿಂದ ಅವರು ಭಾರತದ ಸಂಗೀತ ಚರಿತ್ರೆಯಲ್ಲಿ ಅಮರರಾಗಿದ್ದಾರೆ.

ಮಗನಲ್ಲಿ ತಂದೆಗೆ ಬೇಡದ ಪ್ರತಿಭೆ

೧೮೬೦ರ ಆಗಸ್ಟ್ ೧೦ನೆಯ ದಿನ – ಅಂದು ಶ್ರೀ ಕೃಷ್ಣಜನ್ಮಾಷ್ಟಮಿ – ಪಂಡಿತ ವಿಷ್ಣು ನಾರಾಯಣ ಭಾತಖಂಡೆಯವರು ಮುಂಬಯಿ ನಗರದಲ್ಲಿ ಜನಿಸಿದರು. ಅವರ ತಂದೆ ನಾರಾಯಣ ಭಾತಖಂಡೆಯವರು ಮುಂಬಯಿಯ ಒಂದು ದೊಡ್ಡ ಆಸ್ತಿಯ ಆಡಳಿತಗಾರರೂ, ಕರಣಿಕರೂ ಆಗಿದ್ದರು. ಅವರ ಐದು ಮಕ್ಕಳಲ್ಲಿ ಎರಡನೇ ಮಗನೇ ವಿಷ್ಣು. ಈ ಕುಟುಂಬ ನಾಗಾಂವ್ ಎಂಬ ಹಳ್ಳಿಯಿಂದ ವಾಸಸ್ಥಾನ ಬದಲಾಯಿಸಿ ಮುಂಬಯಿಯ ವಾಲ್ಕೇಶ್ವರ‍್ ಎಂಬಲ್ಲಿಗೆ ಬಂದು ನೆಲೆಸಿತ್ತು.

ವಿಷ್ಣುವಿನ ತಂದೆಗೆ ಸಂಗೀತ ಕಲೆಯಲ್ಲಿ ಆಸಕ್ತಿ ಇತ್ತು. ಅವರು ’ಸ್ವರಮಂಡಲ’ ಎಂಬ ವಾದ್ಯವನ್ನು ನುಡಿಸುತ್ತಿದ್ದರು.

ವಿಷ್ಣುವಿಗೆ ಬಾಲ್ಯದಿಂದಲೂ ಸಂಗೀತ ಕಲೆಯಲ್ಲಿ ಆಸಕ್ತಿ.

ಸ್ವತಃ ಸಂಗೀತದಲ್ಲಿ ಆಸಕ್ತಿ ಇದ್ದ ತಂದೆಗೆ ಇದರಿಂದ ಸಂತೋಷವಾಗಬೇಕಾಗಿತ್ತು. ಆದರೆ ನಿಜವಾಗಿ ಅವರಿಗೆ ಅಸಮಾಧಾನ. ಏಕೆಂದರೆ, ಆಗ ಸಮಾಜ ಸಂಗೀತಗಾರರನ್ನು ಕಡೆಗಣ್ಣಿನಿಂದ ನೋಡುತ್ತಿತ್ತು. ಸಂಗೀತಗಾರರು ಅಸಭ್ಯರು, ಅಯೋಗ್ಯರು ಎನ್ನುತ್ತಿದ್ದರು ಜನ. ಈ ಕಾರಣದಿಂದ ತನ್ನ ಮಗ ವಿಷ್ಣುವು ಸಂಗೀತ ಪ್ರತಿಭೆಯಿಂದ ಬೆಳೆಯುವುದನ್ನು ತಂದೆ ಮೆಚ್ಚಲೇ ಇಲ್ಲ.

ಬಾಲ ಸಂಗೀತಗಾರ

ಹಡೆದ ತಾಯಿ ತನ್ನ ಮಗನ ಕಂಠವನ್ನು ಕೇಳಿ ಆಶ್ಚರ್ಯಪಟ್ಟಳು; ಹಾಡುಗಳನ್ನು ಅವನಿಗೆ ಹೇಳಿಕೊಟ್ಟು ಆನಂದಪಟ್ಟಳು. ಬಾಲಕ ವಿಷ್ಣುವು ತನ್ನ ಪಾಠಶಾಲೆಯಲ್ಲಿಯೂ ಮಧುರವಾದ ಕಂಠದಿಂದ ಶಿಶುಗೀತೆಗಳನ್ನು ಹಾಡುತ್ತಿದ್ದ ಪಾಠಗಳಲ್ಲಿನ ಇತರ ಪದ್ಯಗಳನ್ನೂ ಸುಶ್ರಾವ್ಯವಾಗಿ ಹಾಡಿ ಬಹುಮಾನಗಳನ್ನು ಪಡೆಯುತ್ತಿದನು. ಕ್ರಮೇಣ ಆತನು ಕೊಳಲನ್ನು ನುಡಿಸಲೂ ಆರಂಭಿಸಿದ.

ವಾಲ್ಕೇಶ್ವರ ಬಡಾವಣೆಯಲ್ಲಿ ದೈವಿಕ ಭಾವನೆ ಇದ್ದ ಜನರಿದ್ದರು. ಅವರು ಯಾವುದೇ ಪೂಜೆ ಪುನಸ್ಕಾರಗಳಿಗೆ ಪೂಜಾ ವಿಧಾನವಾಗಿ ಸಂಗೀತ, ನಾಟಕ, ನೃತ್ಯಗಳನ್ನು ಏರ್ಪಡಿಸುತ್ತಿದ್ದರು. ನಾವು ಗಣೇಶನ ಹಬ್ಬದ ದಿನ ವಿವಿಧ ವಿನೋದಾವಳಿ ಕಾರ್ಯಕ್ರಮಗಳನ್ನು ಏರ್ಪಡಿಸುವುದಿಲ್ಲವೇ? ಹಾಗೆಯೇ ಅವರು ರಾಮನವಮಿ, ದೀಪಾವಳಿ, ಕೃಷ್ಣ ಜನ್ಮಾಷ್ಟಮಿ ದಿನಗಳಲ್ಲಿ ಅನೇಕ ಚಟುವಟಿಕೆಗಳನ್ನು ಇಟ್ಟುಕೊಳ್ಳುತ್ತಿದ್ದರು. ಈ ವಿಜೃಂಭಣೆಯ ಕಾರ್ಯಕ್ರಮಗಳಲ್ಲಿ ವಿಷ್ಣುವು ಮುಖ್ಯ ಪಾತ್ರ ವಹಿಸಿಕೊಳ್ಳಬೇಕಾಗಿತ್ತು. ಅವನು ಸಂಗೀತ ನಾಟಕಗಳಲ್ಲಿ ಹಾಡಿಯೂ ಕೊಳಲನ್ನು ನುಡಿಸಿಯೂ ಸಹಕರಿಸುತ್ತಿದ್ದ.

ಬೆಳೆಯುತ್ತಿರುವ ವಿಷ್ಣುವಿಗೆ ಶಾಲೆಯಲ್ಲಿ ಶಿಸ್ತಿನ ಅಗತ್ಯವಿತ್ತು. ಮನೆಯ ದಿನಚರಿಯಿಂದ ಬೇಸರಿಕೆಯೂ ಬರುತ್ತಿತ್ತು. ಮನಸ್ಸಿಗೆ ನೆಮ್ಮದಿ ಸಿಗಲು ಅವನಿಗೆ ಸಂಗೀತ ಒಂದೇ ದಾರಿಯಾಗಿತ್ತು. ಆದರೆ ಈ ಸಂಗೀತದಿಂದಾಗಿ ಅವನ ಶಾಲೆಯ ಪಾಠಗಳಿಗೆ ಯಾವ ಅಡ್ಡಿಯೂ ಆಗುತ್ತಿರಲಿಲ್ಲ. ವಿಷ್ಣುವು ಓದುವುದರಲ್ಲಿ ಬುದ್ಧಿಶಾಲಿಯಾಗಿದ್ದ’ ಚುರುಕಾಗಿದ್ದ ಅವನು ಗಣಿತ, ಭೂಗೋಳ, ಚರಿತ್ರೆ ಮತ್ತು ಭಾಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಪಡೆಯುತ್ತಿದ್ದ ಅವನಿಗೆ ಶಾಲೆಯ ವಿದ್ಯಾಭ್ಯಾಸ ಸುಲಭವೇ ಆಗಿತ್ತು.

ಆ ಕಾಲದಲ್ಲಿ ಮುಂಬಯಿಯಲ್ಲಿ ಬಸ್ ಗಳಾಗಲೀ, ಟ್ರಾಮ್ ಗಳಾಗಲೀ ಇರಲಿಲ್ಲ. ಕಾರುಗಳು ಮತ್ತು ಕುದುರೆಗಾಡಿಗಳು ಆ ಕಾಲದ ವಾಹನಗಳು. ಅವನ್ನು ಉಪಯೋಗಿಸಲು ಶ್ರೀಮಂತರಿಗೆ ಮಾತ್ರ ಸಾಧ್ಯವಿತ್ತು. ಭಾತಖಂಡ ಕುಟುಂಬ ಶ್ರೀಮಂತವಾಗಿರಲಿಲ್ಲ. ಆದ್ದರಿಂದ ವಿಷ್ಣುವು ಕಾಲ್ನಡಿಗೆಯಲ್ಲಿಯೇ ಐದು – ಆರು ಮೈಲಿ ದೂರವಿರುವ ಪ್ರೌಢಶಾಲೆಗೆ ಹೋಗುತ್ತಿದ್ದ.

ಅವನ ತಂದೆ ತಾಯಿಗೆ ಮಗನು ಸಂಗೀತ ಕಲೆಯಲ್ಲಿ ತಲ್ಲೀನನಾಗಿ ಪೋಲಿಯಾದರೆ? ಎಂಬ ಭಯ ಇತ್ತು. ಆದರೆ ಅವರು ಹೆದರಬೇಕಾಗಿರಲಿಲ್ಲ. ವಿಷ್ಣುವು ೧೮೮೦ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಕಾಲೇಜು ಸೇರಿದನು.

ಆಕರ್ಷಕ

ವ್ಯಕ್ತಿತ್ವ

ವಿಷ್ಣುವಿನ ಲವಲವಿಕೆಯ ಸ್ವಭಾವ, ಸ್ನೇಹಪರತೆ ಮತ್ತು ಆತ್ಮೀಯತೆ ಜನರು ಮೆಚ್ಚುವಂತಿದ್ದವು. ಆತನು ಎಲ್ಲ ಪಂಗಡಕ್ಕೂ ಮುಖಂಡನಾಗಿರುತ್ತಿದ್ದ. ಉದ್ದವಾದ ಕಾಲುಗಳಿದ್ದ ವಿಷ್ಣು ಸ್ವಾರಸ್ಯವಾದ ಮಾತುಗಳನ್ನಾಡುತ್ತಾ ತನ್ನ ಸ್ಹೇಹಿತರೊಂದಿಗೆ ಶಾಲೆಗೆ ನಡೆದು ಹೋಗುವಾಗ ಆ ಐದು – ಆರು ಮೈಲುಗಳ ದಾರಿ ಹತ್ತಿರವೇ ಎಂದೆನಿಸುತ್ತಿತ್ತು. ಸ್ನೇಹಿತರಿಗೂ  ನಡೆಯುವ ಶ್ರಮ ಕಂಡುಬರುತ್ತಿರಲಿಲ್ಲ.

’ಉದ್ದವಾದ ಕಾಲುಗಳು’ ಎಂದಾಗ ವಿಷ್ಣುವು ನೋಡಲು ಹೇಗಿದ್ದಿರಬಹುದು ಎಂಬ ಕುತೂಹಲವಾಗಬಹುದು, ಅಲ್ಲವೇ? ಆತನಿಗೆ ಆಗಿನ ಕಾಲದ ಬ್ರಾಹ್ಮಣ ಪದ್ಧತಿಯಂತೆ ತಲೆಗೂದಲನ್ನೆಲ್ಲ ಕ್ಷೌರ ಮಾಡಿದ ಬೋಳೂ ತಲೆ. ಅದನ್ನು ಮುಚ್ಚಲು ಆತ ಚಿಕ್ಕ ಟೋಪಿ ಧರಿಸುತ್ತಿದ್ದ. ವಿಷ್ಣು ಎತ್ತರವಾಗಿದ್ದ; ಮೈಬಣ್ಣ ಬೆಳ್ಳಗೆ. ಮುಖದಲ್ಲಿ ಅಗಲವಾದ ಆಕರ್ಷಕ ಹಣೆ, ಮಿಂಚುವ ಕಣ್ಣುಗಳು, ನೀಳವಾದ ಮೂಗು. ಅಲ್ಲದೆ, ಈ ಎಳೇ ಹುಡುಗನಿಗೆ ವಿಶಾಲವಾದ ಎದೆ, ಕೊಂಚ ಉದ್ದವಾದ ಕೈಕಾಲುಗಳೂ ಕೈಬೆರಳುಗಳೂ ಇದ್ದು ಆತನ ನಡೆಯಲ್ಲಿ ಒಂದು ಠೀವಿ ಕಾಣುತ್ತಿತ್ತು. ವ್ಯಕ್ತಿತ್ವದಲ್ಲಿ ಗಾಂಭೀರ್ಯವಿತ್ತು. ಪಂಚೆ ಉಟ್ಟು ಮೇಲೆ ಷರ್ಟು, ಕೋಟು ಹಾಕಿಕೊಳ್ಳುತ್ತಿದ್ದ.

ಗುರು

ವಾಲ್ಕೇಶ್ವರದಲ್ಲಿ ಗೋಪಾಲಗಿರಿ ಎಂಬುವರು ಸಿತಾರ‍್ ನುಡಿಸುತ್ತಿದ್ದರು. ಅವರ ಸಿತಾರ‍್ ವಾದನ ಕೇಳಿ ವಿಷ್ಣು ತಾನೂ ಸಿತಾರ‍್ ನುಡಿಸಲು ಆಸೆಪಟ್ಟ ಕಾಲೇಜು ವಿದ್ಯಾಭ್ಯಾಸದ ಜೊತೆಗೆ ಸಿತಾರ‍್ ವಾದನಕ್ಕೆ ಕೈ ಹಾಕಿದ. ಸಿತಾರ‍್ ಸಾಧನೆಗೆ ವಲ್ಲಭದಾಸ್ ದಾಮುಲ್ ಜೀ ಎಂಬ ಕುರುಡು ಸಂಗೀತಗಾರರ ಪರಿಚಯವನ್ನು ಗೋಪಾಲ ಗಿರಿಯವರಿಂದ ಮಾಡಿಸಿಕೊಂಡ.

ವಲ್ಲಭದಾಸರು ಕುರುಡರಾಗಿದ್ದರೂ, ಅವರಿಗೆ ಜೀವನೋಪಾಯಕ್ಕೆ ಯಾವ ತೊಂದರೆಯೂ ಇರಲಿಲ್ಲ. ಆದ್ದರಿಂದ ಅವರು ಸಿತಾರ‍್ ಮತ್ತು ಬೀನ್ ವಾದ್ಯಗಳನ್ನು ಬಾರಿಸಿ ತಮ್ಮ ಸಮಯವನ್ನು ಕಳೆಯುತ್ತಿದ್ದರು. ಸಂಗೀತ ಪಾಠಗಳಿಗೆ ಅವರು ಸಂಬಳವನ್ನು ಬಯಸುತ್ತಿರಲಿಲ್ಲ. ಅವರ ಮನೆ ಭಾತಖಂಡೆಯವರ ಮನೆಯ ಹತ್ತಿರವೇ ಇದುದು ವಿಷ್ಣುವಿಗೆ ಅನುಕೂಲವೇ ಆಯಿತು.

ವಿಷ್ಣುವು ಪ್ರತಿದಿನ ಸಾಯಂಕಾಲ ಅವರಲ್ಲಿಗೆ ಹೋಗಿ, ಅವರ ಸಂಗೀತವನ್ನು ಮನತುಂಬಾ, ಕಿವಿತುಂಬಾ ಕೇಳಿ ಬರುತ್ತಿದ್ದ ಸಂಗೀತ ಪಾಠವೇನೂ ನಡೆಯುತ್ತಿರಲಿಲ್ಲ. ತಂದೆ ತಾಯಿ ತನ್ನ ಈ ಆಸೆಗೆ ಆಸ್ಪದ ಕೊಡಲಾರರೆಂದು ತಿಳಿದು ವಿಷ್ಣು ಅವರಿಗೇ ತಿಳಿಸದೇ ಎರಡು ಮೂರು ತಿಂಗಳು ಬಿಡದೆ ಸಂಗೀತವನ್ನು ಕೇಳಲು ಹೋದ. ಆ ಕಾಲದ ರೂಢಿಯಂತೆ ಗುರುವಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಟ್ಟು, ಗುರುಸೇವೆ ಮಾಡಿ, ಸಂಗೀತದ ಲಾಭ ಪಡೆಯುತ್ತಿದ್ದ.

ಸಂಗೀತಗಾರ

ತಾವು ಸ್ವತಃ ಪಾಠ ಮಾಡದೆ ಹೋದರೂ ಪ್ರತಿದಿನ ತಪ್ಪದೆ ಸಂಗೀತ ಕೇಳಿ ಹೋಗುತ್ತಿದ್ದ ವಿಷ್ಣುವಿನ ತಾಳ್ಮೆಯನ್ನು ವಲ್ಲಭದಾಸರು ಮೆಚ್ಚಿದರು. ನಿಜವಾಗಿ ಅದೆಂತಹ ತಾಳ್ಮೆ! ಗುರುಗಳ ಸಂಗೀತ ಪ್ರಭಾವ ವಿಷ್ಣುವಿನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಿತು. ಗುರುಗಳು ವಾದ್ಯಗಳನ್ನು ನುಡಿಸುವಾಗ, ವಿಷ್ಣು ನೆಟ್ಟ ದೃಷ್ಟಿಯಿಂದ, ಅವರ ಕೈ ಬೆರಳುಗಳು ತಂತಿಗಳ ಮೇಲೆ ಚಲಿಸುವುದನ್ನು ಏಕಾಗ್ರತೆಯಿಂದ ಗಮನಿಸಿ ಮನೆಗೆ ಬರುತ್ತಿದ ಮನೆಗೆ ಬಂದು, ತಾನೇ ಕೊಂಡು ತಂದ ಸಿತಾರ‍್ ನಲ್ಲಿ ನುಡಿಸುವ ಪ್ರಯತ್ನ ಆರಂಭಿಸಿದ. ಗೋಪಾಲಗಿರಿಯವರು ಯುವಕನಿಗೆ ಬೇಕಾದ ಸಲಹೆ ನೀಡುತ್ತಿದ್ದರು.

ವಿಷ್ಣು, ಗುರುವಿನ ಬೆರಳುಗಳು ತಂತಿಗಳ ಮೇಲೆ ಚಲಿಸುವುದನ್ನೇ ಏಕಾಗ್ರತೆಯಿಂದ ನೋಡುತ್ತಿದ್ದ

ವಿಷ್ಣುವಿಗೆ ಸಂಗೀತದಲ್ಲಿದ್ದ ಶ್ರದ್ಧೆ ಮತ್ತು ಆಕಾಂಕ್ಷೆಯನ್ನು ತಿಳಿದು, ಒಂದು ದಿನ ವಲ್ಲಭದಾಸರು ಅವನಿಗೆ ಪಾಠ ಹೇಳಿಕೊಡುವೆನೆಂದು ತಾವಾಗಿ ಮುಂದೆ ಬಂದರು! ಆದರೆ ಆಗಲೇ ವಿಷ್ಣುವು ಸಿತಾರ‍್ ನುಡಿಸಲು ಬಲ್ಲನೆಂದು ತಿಳಿದು ಅವರಿಗೆ ಆಶ್ಚರ್ಯವಾಯಿತು.

ವಿಷ್ಣುವಿಗೆ ಚಿಕ್ಕಂದಿನಿಂದ ಸಂಗೀತ ಕಲೆ ದೈವದತ್ತವಾಗಿ ಬಂದಿತ್ತು. ಆದ್ದರಿಂದ ಅವನಿಗೆ ಸಂಗೀತ ಕಲಿಯುವುದು ಏನೂ ಕಷ್ಟವಾಗಿರಲಿಲ್ಲ. ಅವನ ಪ್ರತಿಭೆ ಕಂಡು ವಲ್ಲಭದಾಸರು ಹೆಚ್ಚಿನ ಪ್ರೋತ್ಸಾಹದಿಂದ ಪಾಠ ಹೇಳಿಕೊಟ್ಟರು. ಸ್ವಲ್ಪ ಸಮಯದಲ್ಲಿಯೇ ವಿಷ್ಣುವು ಸಿತಾರ‍್ ವಾದಕನಾದ. ಖಾಸಗಿ ಸಂಗೀತ ಕಛೇರಿಗಳಲ್ಲಿ ನುಡಿಸುತ್ತಿದ್ದ ಎಲ್ಲರೂ ಅವನ ಸಂಗೀತವನ್ನು ಕೊಂಡಾಡುತ್ತಿದ್ದರು.

ಈ ಸಂಗೀತದ ಆರಾಧನೆಯಿಂದಾಗಿ ವಿಷ್ಣುವಿನ ವಿದ್ಯಾಭ್ಯಾಸವೇನೂ ಹಿಂದುಳಿಯಲಿಲ್ಲ. ಆದರೂ ತಂದೆ, ಮಗನ ಸಂಗೀತ ಪ್ರೇಮವನ್ನು ಒಪ್ಪಲಿಲ್ಲ. ಮಗನ ವಿದ್ಯಾಭ್ಯಾಸದ ಗತಿ ಏನಾಗುವುದೋ ಎಂಬ ಹೆತ್ತವರ ಭೀತಿ ಮಾಸಿಯೇ ಹೋಗಿರಲಿಲ್ಲ. ಆದರೆ ವಿಷ್ಣುವು ೧೮೮೫ರಲ್ಲಿ ಬಿ.ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ. ೧೮೮೭ರಲ್ಲಿ  ಎಲ್.ಎಲ್.ಬಿ. ಪರೀಕ್ಷೆಯಲ್ಲಿಯೂ ಯಶಸ್ವಿಯಾದ.

ಒಮ್ಮೆ ವಿಷ್ಣುವಿನ ತಂದೆಯವರು ಮಗನ ಸಂಗೀತ ಕಛೇರಿಗೆ ಬಂದರು. ಮಗನ ಸೊಗಸಾದ ಸಂಗೀತವನ್ನು ಕೇಳಿ ತುಂಬಾ ಹೆಮ್ಮೆಪಟ್ಟರು! ಆದರೆ ತಮ್ಮ ಮಗ ಒಂದಾನೊಂದು ದಿನ ಹಿಂದೂಸ್ತಾನೀ ಸಂಗೀತವನ್ನು ಉದ್ಧಾರ ಮಾಡುವ ಹಿರಿಯ ವಿದ್ವಾಂಸ ಆಗಬಹುದೆಂದು ಅವರು ಸ್ವಲ್ಪವೂ ಎಣಿಸಿರಲಿಲ್ಲ.

ಸಂಗೀತದ ಅಭ್ಯಾಸ ಮುಂದುವರಿದಂತೆ ವಿಷ್ಣು ಸಂಸ್ಕೃತ, ಮರಾಠಿ, ಗುಜರಾತಿ, ಹಿಂದಿ ಭಾಷೆಗಳಲ್ಲಿ ಬರೆದ ಸಂಗೀತ ಶಾಸ್ತ್ರದ ಹಳೇ ಪುಸ್ತಕಗಳನ್ನೆಲ್ಲ ತರಿಸಿದರು, ಅವುಗಳಲ್ಲಿನ ಮುಖ್ಯ ವಿಷಯಗಳನ್ನು ಬರೆದಿಟ್ಟುಕೊಳ್ಳಲು ಆರಂಭಿಸಿದ.

ಗಾಯನ ಉತ್ತೇಜನ ಮಂಡಲಿ

೧೮೮೪ರಲ್ಲಿ ಮುಂಬಯಿಯ ಶ್ರೀಮಂತ ಪಾರ್ಸಿ ಜನರು ’ಗಾಯನ ಉತ್ತೇಜಕ ಮಂಡಲಿ’ ಎಂಬ ಸಂಸ್ಥೆ ಸ್ಥಾಪಿಸಿದರು. ವಿಷ್ಣು ಅದನ್ನು ಸೇರಿದ. ಈ ಸಂಸ್ಥೆ ಸಂಗೀತ ಕಲೆಗೆ ಪ್ರೋತ್ಸಾಹ ಕೊಡುತ್ತಿತ್ತು. ಮುಂಬಯಿಯ ಹಾಗೂ ಹೊರಗಿನ ಸಂಗೀತಗಾರರನ್ನು ಆಮಂತ್ರಿಸಿ, ಅವರ ಸಂಗೀತ ಕಛೇರಿಗಳನ್ನು ಏರ್ಪಡಿಸುತ್ತಿತ್ತು.

ಆ ಸಮಯದಲ್ಲಿಯೇ ಅನೇಕ ಸಂಗೀತಗಾರರು ಹೆಚ್ಚಾಗಿ ಮುಸ್ಲಿಮರು – ರಾಜರ ಹಾಗೂ ದರಬಾರುಗಳ ಪ್ರೋತ್ಸಾಹ ಕಳೆದುಕೊಂಡಿದ್ದರು. ಅವರೆಲ್ಲ ಮುಂಬಯಿಯಂತಹ ನಗರಗಳನ್ನು ಸೇರಿದರು. ಭಾರತದ ದೊಡ್ಡ ನಗರಗಳಲ್ಲಿ ಶ್ರೇಷ್ಠ ಸಂಗೀತಗಾರರೆಲ್ಲ ಬಂದು ಸೇರಿದರು; ಕಛೇರಿಗಳನ್ನು ನಡೆಸಿದರು. ಅವರ ಕಲೆ ಮುಂಬಯಿಯ ರಸಿಕರ ಮನಸ್ಸನ್ನು ಸೂರೆ ಮಾಡಿತು. ವಿಷ್ಣುವೂ ಅಂಥವರ ವಿದ್ವತ್ತಿನ ಫಲವನ್ನು ಸವಿದ ರಸಿಕ ವೃಂದದಲ್ಲಿ ಒಬ್ಬ ಆ ವಿದ್ವಾಂಸರ ಕಛೇರಿ ಒಂದನ್ನೂ ವಿಷ್ಣು ತಪ್ಪಿಸಿಕೊಳ್ಳುತ್ತಿರಲಿಲ್ಲ. ಆ ಕಲೆಯಲ್ಲಿನ ರಾಗಗಳ ಲಾಲಿತ್ಯ, ಸಾಂಪ್ರದಾಯಿಕ ಪ್ರದರ್ಶನ, ಕಲೆಯನ್ನು ಮನೋಭಾವಕ್ಕೆ ತಕ್ಕಂತೆ ಹಾಡುವ ವಿವಿಧ ರೀತಿಗಳು ವಿಷ್ಣುವಿಗೆ ಸ್ಪೂರ್ತಿ ಕೊಟ್ಟವು.

ಅವನು ಸಂಗೀತ ಕಲೆಯ ಶಾಸ್ತ್ರೀಯ ಹಿನ್ನೆಲೆಯ ವಿಷಯವಾಗಿ ಯೋಚನೆ ಮಾಡಲು ಪ್ರಾರಂಭಿಸಿದ.

ಇದೇನು ಹೀಗೆ?

ಗಾಯನ ಉತ್ತೇಜನ ಮಂಡಲಿಯ ಸದಸ್ಯರಾಗಿ ಭಾತಖಂಡೆಯವರಿಗೆ ಅನೇಕ ವಿದ್ವಾಂಸರ ಸಂಗೀತ ಕೇಳುವ ಅವಕಾಶ ಸಿಕ್ಕಿತು. ಆ ಮಂಡಲಿಯ ವಿದ್ವಾಂಸರ ಸಹಾಯದಿಂದ ಕೆಲವು ಆಧಾರಪೂರಿತ, ಸಾಂಪ್ರದಾಯಿಕ ರಚನೆಗಳನ್ನು ಸಂಗ್ರಹಿಸಿದರು. ಪ್ರಖ್ಯಾತ ಕಲಾವಿದರಿಂದ ನೂರಾರು ಸಂಗೀತ ರಚನೆಗಳನ್ನು ಕಲಿತರು. ಈ ಪಾಠದಿಂದ ಅವರಿಗೆ ಅಂದು ರೂಢಿಯಲ್ಲಿದ್ದ ಸಂಗೀತದ ವಿಷಯವೆಲ್ಲ ತಿಳಿಯುವಂತಾಯಿತು. ಜೊತೆಗೆ ಅವರು ಹಳೆಯ ಗ್ರಂಥಗಳನ್ನೂ ಅಧ್ಯಯನ ಮಾಡುತ್ತಿದ್ದರು.

ಓದುತ್ತಾ, ಕೇಳುತ್ತಾ ಅವರು ಸಂಗೀತದ ವಿಷಯದಲ್ಲಿ ಒಂದು ನಿರ್ಣಯಕ್ಕೆ ಬಂದರು. ಅದೇನೆಂದರೆ, ಸಂಗೀತಗಾರರು ಪ್ರದರ್ಶಿಸುತ್ತಿರುವ ಸಂಗೀತಕ್ಕೂ ಶಾಸ್ತ್ರದಲ್ಲಿ ಹೇಳಿರುವ ವಿಷಯಗಳಿಗೂ ಯಾವ ಸಂಬಂಧವೂ ಇಲ್ಲವೆಂದು! ಸಂಗೀತಗಾರರಿಗೆ ಪುಸ್ತಕಗಳಲ್ಲಿ ಬರೆದಿದ ಶಾಸ್ತ್ರ ವಿಭಾಗದ ವಿಷಯ ಏನೂ ಗೊತ್ತಿರಲಿಲ್ಲ! ಅಕ್ಷರ ಜ್ಞಾನವೇ ಇಲ್ಲದ ಸಂಗೀತಗಾರರಿಗೆ ಶಾಸ್ತ್ರಜ್ಞಾನ ಎಲ್ಲಿಂದ ಬರಬೇಕು?

ಗುರುವಿನಿಂದ ಶಿಷ್ಯನಿಗೆ, ತಂದೆಯಿಂದ ಮಗನಿಗೆ – ಹೀಗೆ ಪರಂಪರಾನುಗತವಾಗಿ ಕಲಾವಿದರು ಸಾಧನೆ ಮಾಡುತ್ತಿದ್ದರು. ಅವರವರ  ಮನೆತನದ ವೈಶಿಷ್ಟ್ಯಕ್ಕೆ ಸರಿಯಾಗಿ ಸಾಂಪ್ರದಾಯಿಕವಾಗಿ ಹಾಡುವ ರೂಢಿ ಬಂದಿತ್ತು. ಪುಸ್ತಕಗಳ ಆಧಾರ ಇಲ್ಲದ ಕಾರಣ, ಈ ರೀತಿ ಹಾಡುವುದರಲ್ಲಿ ಮಾರ್ಪಾಟುಗಳು ಆಗುತ್ತಲೇ ಇದ್ದವು. ಹೀಗಾಗಿ, ಸಂಗೀತ ಕಲೆಗೆ ಯಾವ ವಿಧದ ತಳಹದಿಯೂ ಭದ್ರವಾಗಿಲ್ಲ ಎಂದು ಭಾತಖಂಡೆಯವರು ಚಿಂತಿಸಿದರು.

 

ಭಾತಖಂಡೆಯವರು, ಅವರ ಪ್ರಮುಖ ಗ್ರಂಥಗಳು

ಸಂಗೀತ ಕಲೆಯ ಶಾಸ್ತ್ರದಲ್ಲಿ ಸಂಶೋಧನೆ

ಭಾತಖಂಡೆಯವರು ಸಂಗೀತದ ಎಲ್ಲ ರಾಗಗಳನ್ನೂ ಬೇರೆ ಬೇರೆ ವರ್ಗಗಳಾಗಿ ವಿಂಗಡಿಸಿದರು. ಅವನ್ನು ವ್ಯವಸ್ಥಿತ ರೀತಿಯಲ್ಲಿ ಬರೆಯುವ ವಿಚಾರವಾಗಿ ದೀರ್ಘ ಯೋಚನೆ ಮಾಡಿದರು. ಅವರ ಈ ಯೋಚನೆಗೆ ಮಂಡಲಿಯ ಸದಸ್ಯರೆಲ್ಲರೂ ಬೆಂಬಲ ಕೊಟ್ಟರು. ಅವರ ಮನಸ್ಸಿಗೆ ಹೊಳೆದುದನ್ನು ವಿವರಿಸಲು ಅವರ ಉಪನ್ಯಾಸಗಳನ್ನು ಏರ್ಪಡಿಸಿದರು. ದಿನ ಕಳೆದಂತೆ ಭಾತಖಂಡೆಯವರು ಕಲೆಯ ಸಂಶೋಧನಾ ಪಂಡಿತರಾದರು. ಸಂಗೀತ ಕಲೆಯ ನಿರೂಪಕರಾದರು. ಸಂಗೀತ ಕಲಾ ಜಗತ್ತಿನಲ್ಲಿ ಗಣ್ಯ ಸ್ಥಾನ ಪಡೆದರು.

ಅವರು ಸಂಗೀತದಿಂದ ಹಣ ಸಂಪಾದಿಸಬೇಕಾಗಿರಲಿಲ್ಲ. ವೃತ್ತಿಯಿಂದ ಅವರು ವಕೀಲರು, ಭಾತಖಂಡೆಯವರು ಪ್ರಸಿದ್ಧ ವಕೀಲರಾಗಿದ್ದರು. ಸಾಕ್ಷಿಗಳಿಗೆ ಪ್ರಶ್ನೆ ಹಾಕುವುದರಲ್ಲಿ ಅವರನ್ನು ಮೀರಿಸುವವರು ಯಾರೂ ಇರಲಿಲ್ಲವಂತೆ! ಅವರು ನ್ಯಾಯದ ವ್ಯವಹಾರದಲ್ಲಿ ಎಂದೂ ಸೋಲಲಿಲ್ಲವಂತೆ! ಕೆಲವು ವರ್ಷ ಅವರು ಮುಂಬಯಿಯಲ್ಲಿ ನ್ಯಾಯಶಾಸ್ತ್ರದ ಅಧ್ಯಾಪಕರಾಗಿದ್ದರು. ಆಗ ಅವರು ಕೆಲವು ಕರಾರುಗಳಿಗೆ ತಕ್ಕ ರಾಗಗಳನ್ನು ಜೋಡಿಸಿ ತರಗತಿಗಳಲ್ಲಿ ಪಾಠ ಹೇಳಿಕೊಡುತ್ತಿದ್ದರಂತೆ!

ಸಂಗೀತ ಭಾತಖಂಡೆಯವರಿಗೆ ಹಣ ಗಳಿಸುವ ಸಾಧನವೂ ಆಗಿರಲಿಲ್ಲ. ಮನರಂಜನೆಯ ಸಾಧನವೂ ಆಗಿರಲಿಲ್ಲ. ಸಂಗೀತ ಅದ್ಭುತವಾದ, ಪವಿತ್ರವಾದ ಕಲೆ ಎಂಬ ಭಾವನೆಯಿಂದ ಅವರು ಅದನ್ನು ಅಧ್ಯಯನ ಮಾಡಿದರು.

ಸಂಗೀತಕ್ಕಾಗಿ ಅಧ್ಯಯನ

ಭಾತಖಂಡೆಯವರು ಸಂಗೀತ ಶಾಸ್ತ್ರವನ್ನು ಒಂದು ನಿರ್ದಿಷ್ಟ ರೂಪಕ್ಕೆ ತರಲು ಆರಂಭಿಸಿದರು. ಅಂದು ರೂಢಿಯಲ್ಲಿದ್ದ ರಾಗಗಳ ನಿಯಮಗಳನ್ನು ಬರೆದರು. ಸಾಂಪ್ರದಾಯಿಕ ರಚನೆಗಳನ್ನು ಬರೆದರು. ಅವರು ಆಗಿಂದಾಗ್ಗೆ ಕೇಳುತ್ತಿದ್ದ ಸಂಗೀತವನ್ನು ಗುರುತಿಸಿಟ್ಟರು. ವಿದ್ವಾಂಸರು ಹಾಡುವ ಶೈಲಿಗಳನ್ನೆಲ್ಲ ತಿಳಿದರು. ಮಂಡಲಿಯಲ್ಲಿ ಈ ವಿಚಾರವಾಗಿ ಚರ್ಚೆ ನಡೆಯುತ್ತಲೇ ಇತ್ತು. ತಾವು ಮಾಡಿದ ಟಿಪ್ಪಣಿಗಳನ್ನು ಮಂಡಲಿಯ ಸದಸ್ಯರಿಗೆ ಓದಿ ಹೇಳುತ್ತಿದ್ದರು. ಹೀಗೆಯೇ ಅವರು ಬರೆದ ’ಲಕ್ಷ್ಯ ಸಂಗೀತ’ ಮತ್ತು ’ಹಿಂದೂಸ್ತಾನೀ ಸಂಗೀತ ಪದ್ಧತಿ’ ಪುಸ್ತಕಗಳು ಬೆಳಕು ಕಂಡವು.

’ಗಾಯನ ಉತ್ತೇಜನ ಮಂಡಲಿ’ ಗೆ ನಜೀರ‍್ ಖಾನ್ ಎಂಬ ಸಾರಂಗಿ ವಾದ್ಯ ಪಂಡಿತರು ಸೇರಿದರು. ಅವರಿಗೆ ವಡಿವಾಲ್ ಶಿವರಾಂ ಎಂಬ ಶಿಷ್ಯರಿದ್ದರು. ಈ ಶಿಷ್ಯರು ಗುಜರಾತಿ ನಾಟಕ ಕಂಪೆನಿಯೊಂದರಲ್ಲಿ ಸಂಗೀತ ರಚನಾಕಾರರಾಗಿದ್ದರು. ಅವರ ಕೆಲಸಕ್ಕೆ ಭಾತಖಂಡೆಯವರ ಸಂಪರ್ಕ ಇದ್ದರೆ ಒಳ್ಳೆಯದು ಎಂದು ನಜೀರ‍್ ಖಾನರು ಭಾತಖಂಡೆಯವರ ಪರಿಚಯವನ್ನು ಅವರಿಗೆ ಮಾಡಿಕೊಟ್ಟರು. ವಡಿಲಾಲ್ ರವರು ಭಾತಖಂಡೆಯವರ ವಿದ್ವತ್ತಿಗೆ ಮಾರು ಹೋದರು. ಭಾತಖಂಡೆಯವರು ಕೈಗೊಂಡ ಕೆಲಸಕ್ಕೆ ಪೂರ್ಣ ಸಹಕಾರ ನೀಡಿದರು. ಅವರಿಂದ ಸಂಗೀತ ಸೇವೆಗೆ ಸ್ಪೂರ್ತಿ ಪಡೆದರು. ಅವರ ಆಜನ್ಮ ಆರಾಧಕರಾದರು.

ಹೊಸ ನಿಧಿ

ಭಾತಖಂಡೆಯವರಿಗೆ ಸಾಂಪ್ರದಾಯಿಕ ಕಲೆ ಎಲ್ಲೆಲ್ಲಿರುವುದೋ ಅಲ್ಲಲ್ಲಿಂದ ಎಲ್ಲವನ್ನೂ ಪಡೆದು ಶೇಖರಿಸಿ ಇಡಬೇಕೆಂಬ ಪ್ರಬಲವಾದ ಆಸೆ ಆಯಿತು. ಅದಕ್ಕಾಗಿ ಅವರು ಭಾರತದ ದೇಶದಲ್ಲಿ ಭೇಟಿ ಮಾಡದ ಸಂಗೀತ ವಿದ್ವಾಂಸರು ಇರಲಿಲ್ಲ. ಅವರು ಹೋಗಿ ನೋಡದ ಪುಸ್ತಕ ಭಂಡಾರ ಇರಲಿಲ್ಲ!

ಜಯಪುರದ ಮಹಮದ್ ಆಲಿ ಖಾನರ ಮಗ ಆಸಿಶ್ ಖಾನರು ಅವರ ಮನೆತನದ ಸಂಗೀತದ ಬಂಡವಾಳವೇ ಆಗಿದ್ದರಂತೆ. ಆಶಿಶ್ ಖಾನರು ಆಗ ಜೀವನಕ್ಕೆ ಸಂಪಾದನೆ ಇಲ್ಲದೆ ಒದ್ದಾಡುತ್ತಿದ್ದು ಉದ್ಯೋಗ ಹುಡುಕಿ ಮುಂಬಯಿಗೆ ಬಂದಿದ್ದರು. ಭಾತಖಂಡೆಯವರಿಗೆ ಅವರ ಭೇಟಿಯಾಯಿತು. ಆಶಿಶ್ ಖಾನರು ಹಾಡುವ ಅಪೂರ್ವ ರಾಗಗಳನ್ನು ಕೇಳಿದ ಮೇಲಂತೂ ಭಾತಖಂಡೆಯವರು ಹುಚ್ಚರಂತಾದರು. ಅವರಿಂದ ಪಾಠ ಹೇಳಿಸಿಕೊಂಡರು. ಈ ಪಾಠದಿಂದ ಆಶಿಶ್ ಖಾನರಿಗೆ ತಿಂಗಳ ವರಮಾನವೂ ಖಚಿತವಾಯಿತು. ಅವರಿಂದ ಕಲಿತುಕೊಂಡ ರಾಗಗಳನ್ನೆಲ್ಲ ಸಂಗೀತ ಲಿಪಿಯಲ್ಲಿ ಭಾತಖಂಡೆಯವರು ಬರೆದಿಟ್ಟು ಕೊಂಡರು. ಅವಕ್ಕೆ ತಕ್ಕ ರಾಗಗಳನ್ನೂ ತಾಳಗಳನ್ನೂ ಸೂಚಿಸಿದರು. ರಾಗಗಳನ್ನು ಮಿಂಚಿನಂತೆ ಬರೆದು ಶಾಶ್ವತಗೊಳಿಸುವುದನ್ನು ಕಂಡು ಆಶಿಶ್ ಖಾನರು ಬೆರಗಾದರು! ಕೇವಲ ಎರಡು ಮೂರು ತಿಂಗಳುಗಳಲ್ಲಿ ಭಾತಖಂಡೆಯವರು ಇನ್ನೂರ ಐವತ್ತು ರಾಗಗಳನ್ನು ಪುಸ್ತಕದಲ್ಲಿ ಬರೆದಿಟ್ಟುಕೊಂಡರು!

ಅಡ್ಡಿ – ನಿವಾರಣೆ

ಭಾತಖಂಡೆಯವರು ಆಶಿಶ್ ಖಾನರಿಂದ ಸಂಗೀತ ಕಲೆಯನ್ನು ಈ ರೀತಿ ಪಡೆದ ವಿಷಯವನ್ನು ತಿಳಿದು, ಮುಂಬಯಿಯ ಅನೇಕ ಸಂಗೀತಗಾರರು ಹೊಟ್ಟೆಕಿಚ್ಚಿನಿಂದ ಜಯಪುರದ ಮಹಮದ್ ಆಲಿಗೆ ದೂರು ಕೊಟ್ಟರು. ಆ ವೃದ್ಧರು ಒಡನೆ ಮುಂಬಯಿಗೆ ಬಂದು, ಮಗನನ್ನು ಆಕ್ಷೇಪಿಸಿದರು. ’ನೀನು ನಮ್ಮ ಸಂಗೀತ ಭಂಡಾರವನ್ನೆಲ್ಲ ಬರಿದು ಮಾಡಿದೆ. ಹಣದ ಆಸೆಗಾಗಿ ನಮ್ಮ ಮನೆತನದ ನಿಧಿಯನ್ನು ಕಳೆದುಕೊಂಡೆ. ಇಂತಹ ಸಂಪಾದನೆಗಿಂತ ನೀನು ಉಪವಾಸ ಬಿದ್ದಿದ್ದರೆ ಚೆನ್ನಾಗಿತ್ತು!’ ಎಂದರು ಈ ಕಠೋರ ಮಾತುಗಳನ್ನು ಕೇಳಿ ಭಾತಖಂಡೆಯವರು ಕಣ್ಣೀರಿಟ್ಟರು. ಮಹಮದ್ ಆಲಿಯವರ ಕಾಲಿಗೆ ಎರಗಿ, ’ಸ್ವಾಮೀ ಇದರಲ್ಲಿ ನಿಮ್ಮ ಮಗನ ತಪ್ಪು ಏನೂ ಇಲ್ಲ, ಎಲ್ಲವೂ ನನ್ನ ತಪ್ಪೇ! ದಯವಿಟ್ಟು ಕ್ಷಮಿಸಿ. ನಿಮ್ಮ ಸಂಗೀತವನ್ನು ನಾನು ಎಂದೆಂದಿಗೂ ದುರುಪಯೋಗ ಮಾಡುವುದಿಲ್ಲ. ನಿಮ್ಮ ಕೃತಜ್ಞ ಶಿಷ್ಯ ನಾನು’ ಎಂದರು.

ಗುರುಗಳ ಪರಿವರ್ತನೆ

ಭಾತಖಂಡೆಯವರು ತಾವು ಬರೆದ ಎಲ್ಲ ರಾಗಗಳ ಲಿಪಿಯನ್ನು ಗುರುಗಳಿಗೆ ತೋರಿಸಿದರು, ಅವುಗಳನ್ನು ಹಾಡಿಯೂ ತೋರಿಸಿದರು. ಅವರ ಮಹತ್ತಾದ ಕೆಲಸವನ್ನು ಕಂಡು ಮಹಮದ್ ಆಲಿಯವರು ಬಾಯಿ ತುಂಬಾ ಹೊಗಳಿದರಂತೆ! ಅವರ ಸಂಗೀತ ಭಂಡಾರಕ್ಕೆ ಇನ್ನೂ ಹೆಚ್ಚಿನ ರಾಗಗಳನ್ನೂ ರಚನೆಗಳನ್ನೂ ತಾವೇ ಇಷ್ಟಪಟ್ಟು ಸೇರಿಸಿದರಂತೆ! ಅವರಿಂದ ಭಾತಕಂಡೆಯವರು ಇನ್ನೂ ಮುನ್ನೂರು ರಾಗಗಳನ್ನು ಕಲಿತರು; ಬರೆದಿಟ್ಟುಕೊಂಡರು.

ತಂದೆ – ಮಗ ಹಾಡುವ ಸಂಗೀತ ಎಲ್ಲವನ್ನೂ  ಗ್ರಾಮೋಫೋನ್ ರಿಕಾರ್ಡ್‌ಗಳನ್ನು ಮುದ್ರಿಸಿಟ್ಟುಕೊಂಡರು. ಆದರೆ ಈ ರಿಕಾರ್ಡುಗಳಲ್ಲಿ ಮುದ್ರಿಸಿಟ್ಟುಕೊಂಡರು. ಆದರೆ ಈ ರಿಕಾರ್ಡುಗಳನ್ನೆಲ್ಲ ಇಲಿ, ಜಿರಲೆ ತಿಂದುಬಿಟ್ಟವು. ಅದು ಸಂಗೀತಗಾರರಿಗೆ ಮತ್ತು ಸಂಗೀತ ಕಲೆಗೆ ದೊಡ್ಡ ನಷ್ಟ.

ವರ್ಷಗಳು ಉರುಳಿದಂತೆ ಭಾತಖಂಡೆಯವರು ಲಕ್ಷಣ ಗೀತೆಗಳನ್ನು ಪುಸ್ತಕ ರೂಪದಲ್ಲಿ ಬರೆದರು.   ಉದಯೋನ್ಮುಖ ಕಲಾವಿದರಿಗೆ ಈ  ಪುಸ್ತಕದಿಂದ ತುಂಬಾ ಉಪಕಾರ ಆಯಿತು. ವಿದ್ಯಾರ್ಥಿಗಳು ಪುಸ್ತಕ ಓದಿ ಸಂಗೀತ ಕಲಿತುಕೊಳ್ಳುವುದಕ್ಕೆ ಸಾಧ್ಯವಾಯಿತು. ಅಂತಹ ಪುಸ್ತಕಗಳನ್ನು ಬರೆದವರಲ್ಲಿ ಅವರೇ ಮೊದಲಿಗರು.

ಸಂಗೀತದಿಂದ ಮನಶ್ಯಾಂತಿ

ಇದೇ ಸಮಯದಲ್ಲಿ ಭಾತಖಂಡೆಯವರಿಗೆ ದುಃಖ ಎರಗಿತು. ಅವರ ಚಿಕ್ಕ ಹೆಣ್ಣುಮಗುವೂ ಹೆಂಡತಿಯೂ ತೀರಿಕೊಂಡರು. ಅವರ ಒಂಟಿ ಜೀವನದಲ್ಲಿ ಮನಸ್ಸಿಗೆ ಶಾಂತಿ ಕೊಡುತ್ತಿದುದು ಸಂಗೀತ ಒಂದೇ. ದಿನವೆಲ್ಲ ಕೋರ್ಟು ಕಛೇರಿಯ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಬೇಸರ, ದುಃಖಗಳು ಕವಿದಾಗ ಸಂಗೀತಕ್ಕೆ ಮೊರೆ ಹೋಗುತ್ತಿದರು. ಅವರು ಸಂಗೀತದ ಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸ್ವರಗಳ ರಚನೆ, ಖಚಿತವಾದ ತಾಳಗಳನ್ನು ಬರೆದ ರಾಗ, ಇತ್ಯಾದಿ ಬರೆದು ಪ್ರಕಟಿಸಿದರು. ಈ ಪ್ರಕಟಣೆಗಳು ಇಡೀ ಭಾರತದ ಸಂಗೀತಗಾರರ ಗಮನ ಸೆಳೆದವು.

ಎಷ್ಟು ಕೆಲಸ ಮಾಡಿದರೂ ಅವರ ಮನಸ್ಸನ್ನು ಕೆಲವು ಪ್ರಶ್ನೆಗಳು ಕಾಡುತ್ತಲೇ ಇದ್ದವು. ಸಂಗೀತ ಪುಸ್ತಕಗಳಿಗೂ ರೂಢಿಯಲ್ಲಿರುವ ಕಲೆಗೂ ಯಾವ ಸಂಬಂಧವೂ ಇಲ್ಲದ ಮೇಲೆ ಪುಸ್ತಕಗಳನ್ನು ಏತಕ್ಕಾದರೂ ಓದಬೇಕು?’ ಎಂದು ಅವರಿಗೆ ಬೇಸರ. ಈ ಸ್ಥಿತಿಯನ್ನು ಸರಿಪಡಿಸಲು ಅವರು ಅಂದು ರೂಢಿಯಲ್ಲಿದ್ದ ಸಂಗೀತದ ಶಾಸ್ತ್ರ ವಿಭಾಗವನ್ನು ಬರೆಯಲು ಯೋಚಿಸಿದರು.

ಭಾರತ ಪ್ರವಾಸ

ಅವರ ಮನಸ್ಸನ್ನು ಕಾಡುತ್ತಿದ ಪ್ರಶ್ನೆಗಳಿಗೆ ಉತ್ತರ ಹುಡುಕಲು ಮೊದಲು ಅವರು ದಕ್ಷಿಣ ಭಾರತದ ಪ್ರವಾಸ ಕೈಗೊಂಡರು. ಮದರಾಸು, ತಂಜಾವೂರು, ಮೈಸೂರು, ಬೆಂಗಳೂರು ಎಲ್ಲ ಸುತ್ತಿದರು. ಆಮೇಲೆ ಮಧ್ಯಭಾರತದ ನಾಗಪುರ, ಹೈದರಾಬಾದು, ವಿಜಯನಗರದ ಸಂಗೀತಗಾರರನ್ನು ಕಂಡರು. ಕೊನೆಯದಾಗಿ ಉತ್ತರ ಭಾರತದ ಆಗ್ರಾ, ದೆಹಲಿ, ಜಯಪುರ, ಉದಯಪುರ ಎಲ್ಲ ಸುತ್ತಿ ಅಲ್ಲಿನ ಸಂಗೀತಗಾರರನ್ನೂ ಶಾಸ್ತ್ರಜ್ಞರನ್ನೂ ಕಂಡರು. ಆದರೂ ಅವರ ಪ್ರಶ್ನೆಗಳಿಗೆ ಉತ್ತರ ಸಿಕ್ಕಲೇ ಇಲ್ಲ.

ಭಾತಖಂಡೆಯವರು ತಮ್ಮ ಅಖಿಲ ಭಾರತದ ಪ್ರವಾಸದಲ್ಲಿ ಸಂಗ್ರಹಿಸಿದ ವಿಷಯಗಳನ್ನು ಪಠ್ಯಪುಸ್ತಕವಾಗಿ ಪ್ರಕಟಿಸಲು ಪ್ರಯತ್ನಿಸಿದರು. ೧೯೧೮ರಲ್ಲಿ ಅವರು ಹಳೇ ಸಂಪ್ರದಾಯದ ರಚನೆಗಳನ್ನು  ತಮ್ಮದೇ ಆದ ಹೊಸ ಲಿಪಿಯಿಂದ, ಹೊಸ ಸಂಕೇತಗಳಿಂದ ಬರೆದರು. ಅದಕ್ಕೆ ’ಗೀತಮಾಲಿಕೆ’ ಎಂದು ಹೆಸರಿಟ್ಟು ಒಂದು ಮಾಸಿಕ ಮಾಲೆಯಲ್ಲಿ ಪ್ರಕಟಿಸಿದರು. ಅದನ್ನು ಜನಪ್ರಿಯ ಮಾಡಲು ಮಾಲಿಕೆಗೆ ಕೇವಲ ನಾಲ್ಕಾಣೆ ಬೆಲೆ ಇಟ್ಟರು. ಇದರ ಜೊತೆಗೆ ’ಅಭಿನವ ರಾಗ ಮಂಜರಿ’ ಎಂಬ ಸಂಸ್ಕೃತ ಗ್ರಂಥವನ್ನೂ ಬರೆದರು. ಈ ಬರವಣಿಗೆಯಿಂದ ಭಾತಖಂಡೆಯವರು ಭಾರತದಲ್ಲೆಲ್ಲಾ ಪ್ರಖ್ಯಾತರಾದರು. ಅವರ ಬರವಣಿಗೆಯ ಕೀರ್ತಿ ಎಲ್ಲೆಡೆಯಲ್ಲೂ ಹಬ್ಬಿತು.

ಬರೋಡ ಸಂಸ್ಥಾನದ ಮಹಾರಾಜ ಸಯ್ಯಾಜಿರಾವ್ ಗಾಯಕ್ ವಾಡರು, ಗ್ವಾಲಿಯರಿನ ಮಹಾರಾಜರಾದ ಮಾಧವರಾವ್ ಸಿಂಧಿಯಾ ಮತ್ತು ರಾಮ್ ಪುರದ ನವಾಬರಾದ ಹಮೀದ್ ಆಲಿ ಅವರು ಭಾತಖಂಡೆಯವರ ಕೆಲಸ ಕಾರ್ಯದಲ್ಲಿ ಅಪಾರ ಆಸಕ್ತಿ ತೋರಿಸಿದರು.

ಬರೋಡದಲ್ಲಿ

ಬರೋಡ ಸಂಸ್ಥಾನದಲ್ಲಿ ಒಂದು ಸಂಗೀತ ಶಾಲೆ ಇತ್ತು. ಅದನ್ನು ಅಭಿವೃದ್ಧಿ ಮಾಡಲು ಭಾತಖಂಡೆಯವರನ್ನು ಅಲ್ಲಿನ ಮಹಾರಾಜರು ೧೯೧೫ರಲ್ಲಿ ಆಹ್ವಾನಿಸಿದರು. ಸಂಗೀತ ಶಾಸ್ತ್ರಕ್ಕೂ, ಸಂಗೀತ ಹಾಡುವುದಕ್ಕೂ ಸಂಬಂಧ ಇರಬೇಕಾದರೆ ಭಾರತದ ಗಣ್ಯ ವಿದ್ವಾಂಸರು ಒಂದುಗೂಡಬೇಕು. ಇದಕ್ಕಾಗಿ ಒಂದು ಸಂಗೀತ ಸಮ್ಮೇಳನದ ಅಗತ್ಯ ಇದೆ ಎಂದು ಭಾತಖಂಡೆಯವರು ಮಹಾರಾಜರಿಗೆ ಸೂಚನೆ ಕೊಟ್ಟರು. ಅವರ ವಾದಸರಣಿ ಮಹಾರಾಜರಿಗೆ ಒಪ್ಪಿಗೆಯಾಯಿತು. ೧೯೧೬ರಲ್ಲಿ ಅಖಿಲ ಭಾರತ ಸಂಗೀತ ಸಮ್ಮೇಳನವನ್ನು ಏರ್ಪಡಿಸಿದರು. ಸಂಗೀತ ಕಲೆಯ ಚರಿತ್ರೆಯಲ್ಲಿ ಇದೇ ಮೊದಲ ಸಮ್ಮೇಳನ! ಇದರ ಯಶಸ್ಸು ಭಾತಖಂಡೆಯವರ ಪಾಲಿನದು.

ಈ ಸಮ್ಮೇಳನದಲ್ಲಿ ಅನೇಕ ವಿಧದ ಚರ್ಚೆ ಮತ್ತು ಸ್ಪರ್ಧೆಗಳು ನಡೆದವು. ಸಂಗೀತ ಕಲೆಯು ವಿವಿಧ ರೀತಿಯಲ್ಲಿ ಪ್ರಚಾರವಾಯಿತು. ಇಂತಹ ಸಮ್ಮೇಳನವನ್ನು ಪ್ರತಿ ವರ್ಷ ನಡೆಸಬೇಕೆಂದು ನಿರ್ಣಯಿಸಿದರು. ಇದಕ್ಕಾಗಿ ಒಂದು ಕಾರ್ಯಕಾರಿ ಸಮಿತಿಯ ರಚನೆಯಾಯಿತು. ಆ ಸಮಿತಿಗೆ ಭಾತಖಂಡೆಯವರನ್ನೇ ಕಾರ್ಯದರ್ಶಿಯನ್ನಾಗಿ ನೇಮಿಸಿದರು.

ಈ ಸಮ್ಮೇಳನದ ಪ್ರತಿಫಲ ಎಂಬಂತೆ ಮುಂಬಯಿಯ ಪ್ರಾಥಮಿಕ ಶಾಲೆಗಳಲ್ಲಿ ಸಂಗೀತವನ್ನು ಹೇಳಿಕೊಡಬೇಕೆಂದು ಅಲ್ಲಿನ ನಗರ ಸಭೆಯವರು ನಿರ್ಣಯಿಸಿದರು.

ಗ್ವಾಲಿಯರ‍್ ನಲ್ಲಿ ಸಂಗೀತ ಶಾಲೆಯ ಸ್ಥಾಪನೆ

ಬರೋಡದ ಸಂಗೀತ ಶಾಲೆ ಅಭಿವೃದ್ಧಿ ಪಡೆದು ವಿಶ್ವವಿದ್ಯಾನಿಲಯದ ಕಾಲೇಜಿಗೆ ಸೇರಿತು. ಗ್ವಾಲಿಯರ‍್ನಲ್ಲೂ ಒಂದು ಸಂಗೀತ ಶಾಲೆ ಸ್ಥಾಪಿಸಬೇಕೆಂದು ಅಲ್ಲಿನ ಮಹಾರಾಜ ಮಾಧವರಾವ್ ಸಿಂಧಿಯಾ ಆಶಿಸಿದರು. ಭಾತಖಂಡೆಯವರನ್ನು ಆಮಂತ್ರಿಸಿದರು. ಅವರು ಅಲ್ಲಿನ ಶಾಲೆಯ ಸ್ಥಾಪನೆಗೆ ಬೇಕಾದ ಮುಖ್ಯಾಂಶಗಳ ಪಟ್ಟಿಯನ್ನು ತಯಾರಿಸಿದರು. ಆದರೆ ಆ ಶಾಲೆಗೆ ಬೇಕಾದ ಉಪಾಧ್ಯಾಯರುಗಳು ಇರಲಿಲ್ಲ. ಆದ್ದರಿಂದ ಮಹಾರಾಜರು ಗ್ವಾಲಿಯರ‍್ ಸಂಸ್ಥಾನದ ಎಲ್ಲ ಸಂಗೀತಗಾರರನ್ನೂ ಕರೆಸಿದರು. ಆ ಪಂಗಡದಿಂದ ಭಾತಖಂಡೆಯವರು ಕೆಲವು ಸಂಗೀತಗಾರರನ್ನು ಆರಿಸಿದರು. ಹೀಗೆ ಆರಿಸಿದ ಸಂಗೀತಗಾರರಿಗೆ ಮುಂಬಯಿಯಲ್ಲಿ ವಿಶೇಷ ಶಿಕ್ಷಣ ಕೊಟ್ಟರು. ಈ ಶಿಕ್ಷಣದ ಸಮಯದಲ್ಲಿ ಸಂಗೀತಗಾರರು ಸಹಕರಿಸಲಿಲ್ಲವಂತೆ. ಸ್ವಾರ್ಥದಿಂದ ತಮಗೆ ಗೊತ್ತಿದ್ದ ಸಂಗೀತ ಪ್ರದರ್ಶಿಸಲಿಲ್ಲ. ಕೆಲವರು ಹೆಮ್ಮೆಯಿಂದ ಮುಂದೆ ಬರಲಿಲ್ಲ. ಕೆಲವರು ಸಂಕುಚಿತ ಭಾವನೆಯಿಂದ ಭಾತಖಂಡೆಯವರಿಗೆ ನಿರಾಸೆ ಮಾಡಿದರು. ತಾವು ಕಷ್ಟಪಟ್ಟು ಕಲಿತಿದ್ದುದನ್ನು ಇತರ ವಿದ್ವಾಂಸರ ಮುಂದೆ ಹಾಡಿ ಅವರಿಗೂ ತಿಳಿಯುವಂತೆ ಏಕೆ ಮಾಡಬೇಕು ಎಂದು ಅವರಲ್ಲಿ ಬಹುಮಂದಿಯ ಯೋಚನೆ. ಆಗ ಭಾತಖಂಡೆಯವರು ವಿಶಾಲ ಮನಸ್ಸಿನಿಂದ ತಮಗೆ ಗೊತ್ತಿದ ಸಂಗೀತ ನಿಧಿಯನ್ನೇ ಅವರ ಮುಂದಿಟ್ಟರು. ಅದನ್ನು ಕಂಡು ಸಂಗೀತಗಾರರಿಗೆ ಆಶ್ಚರ್ಯವಾಯಿತು. ತಮ್ಮ ತಪ್ಪು ತಿಳಿಯಿತು. ಆನಂತರ ಅವರು ಭಾತಖಂಡೆಯವರ ಆಶ್ರಯದಲ್ಲಿ ತಮಗೆ ಬೇಕಾದ ತರಬೇತು ಹೊಂದಿ ‌ಗ್ವಾಲಿಯರ‍್ ಗೆ ಹಿಂತಿರುಗಿದರು.

೧೯೧೮ರಲ್ಲಿ ಗ್ವಾಲಿಯರ‍್ ನಲ್ಲಿ ಮಾಧವ ಸಂಗೀತ ಮಹಾವಿದ್ಯಾಲಯ ಎಂಬ ಶಾಲೆ ಸ್ಥಾಪಿತವಾಯಿತು. ಭಾತಖಂಡೆಯವರು ಆಗಿಂದಾಗ್ಗೆ ಗ್ವಾಲಿಯರ‍್ ಹಾಗೂ ಬರೋಡಕ್ಕೆ ಹೋಗಿ  ಆ ಸಂಗೀತ ಶಾಲೆಗಳ ಕೆಲಸವನ್ನು ಪರಿಶೀಲಿಸುತ್ತಿದ್ದರು.

 

ರಾಮ್ ಪುರದ  ನವಾಬರ ಶಿಷ್ಯ!

ತಾನಸೇನ್ ಎಂಬ ಸಂಗೀತ ಚಕ್ರವರ್ತಿಯ ಹೆಸರನ್ನು ಕೇಳಿದ್ದೀರಲ್ಲವೇ? ಅವರು ಅಕ್ಬರ‍್ ಚಕ್ರವರ್ತಿಯ ಆಸ್ಥಾನದ ನವರತ್ನಗಳು ಎಂದು ಪ್ರಸಿದ್ಧರಾದ ಒಂಬತ್ತು ಮಂದಿ ಮಹಾನುಭಾವರಲ್ಲಿ ಒಬ್ಬರು. ಅವರು ತಮ್ಮ ಗಾನದಿಂದ ದೀಪಕ ಎಂಬ ರಾಗ ಹಾಡಿಜ್ಯೋತಿ ಬೆಳಗುವಂತೆ ಮಾಡಿದರಂತೆ! ಮೇಘ ಮಲ್ಹಾರ ಎಂಬ ರಾಗ ಹಾಡಿ ಮಳೆ ಬರುವಂತೆ ಮಾಡಿದರಂತೆ! ಇಂತಹ ಕಥೆಗಳು ಅವರ ಹಿರಿಮೆಯನ್ನು ತೋರಿಸುತ್ತವೆ. ತಾನಸೇನರ ಗಾನ ದೈವಿಕವಾಗಿತ್ತು. ಅವರು ಮುಸ್ಲಿಮರು, ಆದರೆ ಅವರ ಗುರುಗಳು ಹಿಂದೂಧರ್ಮದವರು. ಆದ್ದರಿಂದ ತಾನಸೇನರು ಹಿಂದೀ ಭಾಷೆಯಲ್ಲಿ ಹಿಂದೂ ದೇವತೆಗಳ ಮೇಲೆ ಸಂಗೀತ ಕೃತಿಗಳನ್ನು ರಚಿಸುತ್ತಿದ್ದರು. ಅವರ ಹಾಡುಗಳನ್ನು ಭಕ್ತರು ಹಿಂದೂ ದೇವಾಲಯಗಳಲ್ಲಿ ಹಾಡುತ್ತಾರೆ.

ತಾನಸೇನರ ಕಾಲದಿಂದ ವ್ಯವಹಾರದಲ್ಲಿ ಇಟ್ಟುಕೊಂಡ ಅವರ ಸಂಗೀತ ಪದ್ಧತಿಯ ಸಂಗೀತಗಾರರು ರಾಮ್ ಪುರದಲ್ಲಿ ಅನೇಕರಿದ್ದರು. ಅಲ್ಲದೆ ಅಲ್ಲಿನ ನವಾಬರು ಸ್ವತಃ ಸಂಗೀತಗಾರರಾಗಿದ್ದರು. ಆದ್ದರಿಂದ ರಾಮಪುರ ಸಂಗೀತದ ಕೇಂದ್ರವೆನಿಸಿಕೊಂಡಿತ್ತು. ನವಾಬರು ಭಾತಖಂಡೆಯವರನ್ನು ಕರೆಸಿದರು. ರಾಮ್ ಪುರದ ಸಂಗೀತ ಅಭಿವೃದ್ಧಿಯಾಗಲು. ಆದರೆ ಅಲ್ಲಿನ ಕಲಾವಿದರಿಗೆ ವಿಶಾಲ ಬುದ್ಧಿ ಇರಲಿಲ್ಲ. ಅವರ ಸಂಪ್ರದಾಯಕ್ಕೆ ಅಂಟಿಕೊಂಡವರು. ಭಾತಖಂಡೆಯವರ ಅಭಿಪ್ರಾಯಗಳನ್ನು ವಿರೋಧಿಸಿದರು. ಆದರೆ ಭಾತಖಂಡೆ ಅವರ ಪ್ರಸಿದ್ಧ ವಿದ್ವಾಂಸರು ಹಾಡುತ್ತಿದ್ದ ರೀತಿಯೇ ತಮ್ಮ ಅಭಿಪ್ರಾಯಕ್ಕೆ ಹೇಗೆ ಸಮರ್ಥನೆ ಕೊಡುತ್ತದೆ ಎಂಬುದನ್ನು ಹಾಡಿ ತೋರಿಸಿದರು.

ರಾಮ್ ಪುರದಲ್ಲಿ ಉಸ್ತಾದ್ ವಜೀರ‍್ ಖಾನ್ ಎಂಬುವರು ಆಸ್ಥಾನದ ಸಂಗೀತಗಾರರು. ತಾನಸೇನರ ಕಾಲದಿಂದ ಪರಂಪರೆಯಾಗಿ ಬಂದ ಅನೇಕ ಹಾಡುಗಳು ಅವರಿಗೆ ಬರುತ್ತಿದ್ದವು. ಆದರೆ ಅವರು ಅವು ತಮ್ಮ ಮನೆತನದ ಆಸ್ತಿ ಎಂದೇ ಭಾವಿಸಿದ್ದರು. ಆದುದರಿಂದ ಭಾತಖಂಡೆಯವರಿಗೆ ಹೇಳಿಕೊಡಲು ಒಪ್ಪಲಿಲ್ಲ.

ಭಾತಖಂಡೆರಯವರು ಒಂದು ಉಪಾಯ ಮಾಡಿದರು. ಭಾತಖಂಡೆಯವರು ನವಾಬರ ಶಿಷ್ಯರಾದರು. ಅವರಂತಹ ಯೋಗ್ಯ ಶಿಷ್ಯರು ಸಿಕ್ಕಿದ ಹೆಮ್ಮೆಗೆ, ನವಾಬರು ಸಂತೋಷದಿಂದ ಅವರಿಗೆ ಬೇಕಾದ ಸಂಗೀತವನ್ನು ಕೊಡಲು ಸಿದ್ಧರಾದರು! ನವಾಬರ ಆಶ್ರಯದಲ್ಲಿದ್ದ ಸಂಗೀತಗಾರರು ಅದುವರೆಗೂ ಬಿಟ್ಟುಕೊಡದೆ ವಿದ್ಯೆಯನ್ನು ನವಾಬರ ಅಪ್ಪಣೆ ಮೇರೆಗೆ ಅವರಿಗೆ ಹೇಳಿಕೊಟ್ಟರು. ನವಾಬರ ಮುಖಾಂತರ ಹಾಡುಗಳನ್ನೆಲ್ಲ ಭಾತಖಂಡೆಯವರು ಸುಲಭವಾಗಿ ಪಡೆದರು!

ಭಾತಖಂಡೆಯವರು ರಾಮ್ ಪುರದ ನವಾಬರ ಶಿಷ್ಯರಾದರು

ಭಾತಖಂಡೆಯವರ ಚಾತುರ್ಯ ಮತ್ತು ಸಾಧನೆಯಿಂದಾಗಿ ದೆಹಲಿಯಲ್ಲಿ ರಾಮ್ ಪುರದ ನವಾಬರ ಅಧ್ಯಕ್ಷತೆಯಲ್ಲಿ ಎರಡನೆಯ ಅಖಿಲ ಭಾರತ ಸಂಗೀತ ಸಮ್ಮೇಳನ ಜರುಗಿತು. ಭಾತಖಂಡೆಯವರು, ಕೆಲವು ರಾಗಗಳ ಲಕ್ಷಣಗಳನ್ನು ಚರ್ಚಿಸಲು ವಿದ್ವಾಂಸರೆನ್ನೆಲ್ಲ ಒಟ್ಟಿಗೆ ಸೇರಿಸಿದರು. ಈ ಚರ್ಚೆಯಿಂದ ಈ ರಾಗಗಳ ನಿಯಮಗಳನ್ನು   ಸ್ಪಷ್ಟವಾಗಿ ನಿರ್ದಿಷ್ಟವಾಗಿ ರೂಪಿಸಲು ಸಾಧ್ಯವಾಯಿತು. ದೆಹಲಿಯಲ್ಲಿ ಹಿಂದೂಸ್ತಾನೀ ಸಂಗೀತದ ಕೇಂದ್ರ ಅಕಾಡೆಮಿ ಸ್ಥಾಪಿಸಬೇಕೆಂದು ಈ ಸಮ್ಮೇಳನ ಬಯಸಿತು.

೧೯೧೯ರಲ್ಲಿ ಮೂರನೆಯ ಅಖಿಲ ಭಾರತದ ಸಮ್ಮೇಳನ ವಾರಣಾಸಿಯಲ್ಲಿ ಜರುಗಿತು.

ಇದರಾಚೆ ವಿದ್ವಾಂಸರ ಇಂತಹ ಚರ್ಚಾಕೂಟಗಳನ್ನು ನಡೆಸುವುದು ಕಷ್ಟವಾಯಿತು. ಇತರ ವಿದ್ವಾಂಸರೆದುರಿಗೆ ಹಾಡಲು ಕೆಲ ವಿದ್ವಾಂಸರು ಇಷ್ಟಪಡಲಿಲ್ಲ.

ನಾಲ್ಕನೆಯ ಸಮ್ಮೇಳನ

೧೯೨೪ರ ಡಿಸೆಂಬರ‍್ ತಿಂಗಳಲ್ಲಿ ಲಕ್ನೋ ನಗರದಲ್ಲಿ ನಾಲ್ಕನೆಯ ಸಂಗೀತ ಸಮ್ಮೇಳನ ಜರುಗಿತು. ಆಗ ರಾಯ್ ರಾಜೇಶ್ವರ ಬಾಲಿ ಎಂಬುವರು ಸಂಯುಕ್ತ ಪ್ರಾಂತದ ವಿದ್ಯಾ ಇಲಾಖೆಯ ಸಚಿವರಾಗಿದ್ದರು. ಅವರೂ ಅವರ ಚಿಕ್ಕಪ್ಪ ರಾಯ್ ಉಮಾನಾಥ ಬಾಲಿ ಮತ್ತು ಅವರ ಕುಟುಂಬವೆಲ್ಲ ಸಂಗೀತ ಕಲೆಯ ಆರಾಧಕರಾಗಿದ್ದರು. ಅವರೆಲ್ಲ ಮೊದಲ ಮೂರು ಸಂಗೀತ ಸಮ್ಮೇಳನಗಳಲ್ಲೂ ಭಾಗವಹಿಸಿದ್ದರು.

ಮ್ಯಾರಿಸ್ ಸಂಗೀತ ಕಾಲೇಜಿನ ಸ್ಥಾಪನೆಯಿಂದ ಭಾತ ಖಂಡೆಯವರ ಜೀವನದ ಉದ್ದೇಶದ ಸಫಲವಾಯಿತು ಎನ್ನಬೇಕು. ಈ ಸಂಸ್ಥೆ ನಾಲ್ಕು ತಿಂಗಳಿಗೊಮ್ಮೆ ತನ್ನ ಪತ್ರಿಕೆಯ ಒಂದೊಂದು ಸಂಚಿಕೆಯನ್ನು ಪ್ರಕಟಿಸುತ್ತಿತ್ತು. ಅವುಗಳಲ್ಲಿ ಹಿಂದಿ ಭಾಷೆಯಲ್ಲೂ ಇಂಗ್ಲೀಷ್ ಭಾಷೆಯಲ್ಲೂ ಸಂಗೀತ ಕಲೆಯನ್ನು ಕುರಿತು ಲೇಖನಗಳಿರುತ್ತಿದ್ದವು.

ಹದಿನೈದು, ಹದಿನಾರು, ಹದಿನೇಳು ಮತ್ತು ಹದಿನೆಂಟನೆಯ ಶತಮಾನಗಳಲ್ಲಿನ ಸಂಗೀತ ಕಲೆಯ ಪ್ರಮುಖ ಶೈಲಿಗಳ ಹೋಲಿಕೆಯ ಅಧ್ಯಯನ ಎಂಬ ವಿಷಯವಾಗಿ ಭಾತಖಂಡೆಯವರು ಬರೆಯುತ್ತಿದ ಲೇಖನಗಳು ಆ ಸಂಚಿಕೆಗಳಲ್ಲಿ ಪ್ರಕಟಿತವಾಗುತ್ತಿದ್ದವು. ೧೯೪೦ರಲ್ಲಿ ಈ ಎಲ್ಲ ಲೇಖನಗಳೂ ಪುಸ್ತಕ ರೂಪವಾಗಿ ಪ್ರಕಟವಾದವು.

ಪಠ್ಯಪುಸ್ತಕಗಳ ಪ್ರಕಟಣೆ

ಭಾತಖಂಡೆಯವರು ಸ್ಥಾಪಿಸಿದ ಸಂಗೀತ ಶಾಲೆಗಳಲ್ಲಿನ ಪಾಠ ಮಾಡಲು ಬೇರೆ ಬೇರೆ ತರಗತಿಯ ಪಠ್ಯಪುಸ್ತಕಗಳ ಅಗತ್ಯ ಕಂಡು ಬಂತು. ಭಾತಖಂಡೆಯವರು ಬೇರೆ ಬೇರೆ ಹಂತಗಳ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಪಠ್ಯಪುಸ್ತಕಗಳನ್ನು ರಚಿಸಿ ಪ್ರಕಟಿಸಿದರು. ಅವು ಕ್ರಮಿಕ ಪುಸ್ತಕಮಾಲೆ ಎಂದು ಹೆಸರು ಪಡೆದವು. ಸಂಗೀತ ಶಾಲೆಗಳಲ್ಲಿನ ಪಾಠಗಳು ಮುಂದುವರಿಯುತ್ತಿದ್ದಂತೆ ಈ ಪಠ್ಯಪುಸ್ತಕಗಳೂ ಮಾಲೆಯಲ್ಲಿ ಹೆಚ್ಚು ಹೆಚ್ಚಾಗಿ ಪ್ರಕಟವಾದವು.

ಅಲ್ಲಿಗೆ ಅವರು ಸಂಗೀತ ಸೇವೆಗಾಗಿ ಕೈಗೊಂಡ ಕೆಲಸ ಮುಗಿಯಿತು ಎಂದುಕೊಂಡರು.

೧೯೩೩ರಲ್ಲಿ ಭಾತಖಂಡೆಯವರು ಮ್ಯಾರಿಸ್ ಕಾಲೇಜಿಗೆ ತಮ್ಮ ಕೊನೆಯ ಭೇಟಿ ಕೊಟ್ಟರು. ಅಷ್ಟರಲ್ಲಿ ಆ ಕಾಲೇಜಿನಲ್ಲಿ ತರಬೇತಿ ಹೊಂದಿದ ದಕ್ಷ ಸಂಗೀತಗಾರರು ಭಾರತದ ಬೇರೆ ಬೇರೆ ಸ್ಥಳಗಳಿಗೆ ಹೋಗಿ ಸಂಗೀತ ಪ್ರಸಾರ ಮಾಡುತ್ತಿದ್ದರು. ಕೆಲವರು ಕೇಂದ್ರ ಸರ್ಕಾರದ ಆಕಾಶವಾಣಿಯ ನಿಲಯಗಳಲ್ಲಿ ಕೆಲಸಕ್ಕೆ ಸೇರಿದರು. ಮ್ಯಾರಿಸ್ ಕಾಲೇಜು ಸಂಗೀತ ಕಲೆಯ ಉಗಮ ಸ್ಥಾನವೆಂದು ಹೆಸರುವಾಸಿಯಾಯಿತು.

ಕಲ್ಕತ್ತ, ಮುಂಬಯಿ, ನಾಗಪುರ, ಸೂರತ್, ಕಾನ್ ಪುರ, ಅಲಹಾಬಾದ್, ಜಬ್ಬಲ್ ಪುರ  ಮುಂತಾದ ನಗರಗಳಲ್ಲಿ ಭಾತಖಂಡೆಯವರ ಸಂಗೀತ ಕಾಲೇಜುಗಳಿವೆ.

ಸಾರ್ಥಕ ಬದುಕು

೧೯೩೩ರಲ್ಲಿ ತನ್ನ ಸುಸ್ವಪ್ನದ ಸಫಲತೆ ಕಂಡು ಭಾತ ಖಂಡೆಯವರು ಮುಂಬಯಿಗೆ ಹಿಂತಿರುಗಿದರು. ಒಂದು ಕೆಟ್ಟ ದಿನ ಅವರಿಗೆ ಪಾರ್ಶ್ವವಾಯು ತಗುಲಿ ಹಾಸಿಗೆ ಹಿಡಿದರು. ಮೂರು ವರ್ಷಗಳ ಕಾಲ ಅವರು ಈ ಸ್ಥಿತಿಯಲ್ಲಿಯೇ ಕಾಲ ಕಳೆದರು.

೧೯೩೬ರ ಸೆಪ್ಟೆಂಬರ‍್ ೧೯ ರಂದು ಶ್ರೀ ಗಣೇಶ ಚತುರ್ಥಿಯ ದಿನ ಪಂಡಿತ ವಿಷ್ಣು ನಾರಾಯಣ ಭಾತಖಂಡೆಯವರು ದೈವಾಧೀನರಾದರು. ಅಂದು ಭಾರತದ ದಿವ್ಯಜ್ಯೋತಿ ಒಂದು ನಂದಿಹೋಯಿತು. ಆದರೆ ಅವರು ಸಂಗೀತ ಕಲೆಗಾಗಿ ಮಾಡಿದ ಅಮೂಲ್ಯವಾದ ಕೆಲಸ ನಂದಾದೀಪವಾಗಿ ಬೆಳಗುತ್ತಿದೆ.

ಅವರ ಪುಣ್ಯತಿಥಿಯನ್ನು ಸಂಗೀತಗಾರರು ಭಾರತದಾದ್ಯಂತ ತುಂಬ ಭಕ್ತಿಯಿಂದ ಆಚರಿಸುತ್ತಾರೆ.

ಅವರು ಸ್ಥಾಪಿಸಿದ ಕಾಲೇಜುಗಳಲ್ಲಿ ಪ್ರತಿ ವರ್ಷವೂ ಮೂರು ದಿನಗಳ ಕಾಲ ’ಸಂಗೀತ ಧಾರಾ’ ಮಹೋತ್ಸವ ನಡೆಯುತ್ತದೆ. ಸೆಪ್ಟಂಬರ‍್ ಮೂರನೇ ವಾರದಲ್ಲಿ ಆಕಾಶವಾಣಿಯಲ್ಲೂ ಕಾರ್ಯಕ್ರಮದ ವ್ಯವಸ್ಥೆ ಇದೆ.

ಗಾಯನಾಚಾರ್ಯ ಪಂಡಿತ ವಿಷ್ಣು ನಾರಾಯಣ ಭಾತಖಂಡೆ ಚಿರಸ್ಮರಣೀಯರಾಗಿದ್ದಾರೆ, ಅವರು ಸಂಗೀತ ಪ್ರಪಂಚಕ್ಕೆ ಸಲ್ಲಿಸಿದ ಸೇವೆ ಅಗಾಧವಾಗಿದೆ. ಹಿಂದುಸ್ತಾನೀ ಸಂಗೀತ ಕಲೆಯ ಇಂದಿನ ಅಭಿವೃದ್ಧಿ ಅವರು ತನ್ನ ಜೀವಮಾನದಲ್ಲಿ ದುಡಿದ ಪರಿಶ್ರಮದ ಫಲವಾಗಿದೆ.