ನೋಡುತ್ತ ಕಲಿಯಬೇಕು. ಮಾಡುತ್ತ ತಿಳಿಯಬೇಕು. ಹಿಂದೆ ಆದ ಅನುಭವದ ಮೂಲಕ ಮುಂದೆ ಸಾಗಬೇಕು. ಹುಟ್ಟುತ್ತಲೇ ಯಾರೂ ಜಾಣರಾಗಿರುವುದಿಲ್ಲ. ಕೃಷಿಯಲ್ಲೂ ಪ್ರಯೋಗಗಳನ್ನು ಮಾಡುತ್ತಿರಬೇಕು. ಪ್ರಯೋಗ ಸಣ್ಣದಿರಲಿ, ದೊಡ್ಡದಿರಲಿ. ಹಾಗೊಮ್ಮೆ ಹೀಗೊಮ್ಮೆ ಆದ ಅನುಭವಗಳ ಮೂಲಕ ರೈತರು ನಿರ್ಣಾಯಕರಾಗಬೇಕು. ಕೃಷಿಯಲ್ಲಿ ಹೀಗೇ ಮಾಡಬೇಕು, ಇದೇ ಸರಿ, ಇದಲ್ಲದ್ದು ಸರಿಯಲ್ಲ ಎಂಬ ನಿರ್ಧಾರಗಳನ್ನು ತೆಗೆದುಕೊಳ್ಳಲು ಬರುವುದಿಲ್ಲ.

ಸಣ್ಣ ಪ್ರಯೋಗಗಳು ಕೃಷಿಯಲ್ಲಿ ಮುನ್ನಡೆಯಲು ಪೂರಕವಾಗಬಲ್ಲವು. ರೈತರ ಬದುಕನ್ನು ಸುಂದರವಾಗಿಸಿಕೊಳ್ಳುವಲ್ಲಿ ಮತ್ತು ಸಹನೀಯವಾಗಿಸುವಲ್ಲಿ ಪ್ರಯೋಗಗಳು ಯಶಸ್ವಿಯಾಗಬಲ್ಲವು. ಬಹುಸಂಖ್ಯಾತ ರೈತರು ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ಪ್ರಯೋಗಶೀಲ ಮನಸ್ಸಿದೆ. ಒಂದು ರೋಗ ಇರಬಹುದು, ಕೀಟ ಇರಬಹುದು, ಬೆಳೆ ಇರಬಹುದು, ಇಳುವರಿಯ ಹೆಚ್ಚಳ ಅಥವಾ ಕಡಿಮೆ ಆಗಲು ಮಳೆ ಪ್ರಮಾಣ ಹೆಚ್ಚು ಅಥವಾ ಕಡಿಮೆ ಆಗಬಹುದು. ಅದಕ್ಕೆಲ್ಲಾ ರೈತರದ್ದೇ ಆದ ಪಾರಂಪರಿಕ ಜ್ಞಾನ ಆಧಾರವಾಗಿರಬಹುದು.

ಪ್ರತ್ಯಕ್ಷ, ಪರೋಕ್ಷ ಅನುಭವಗಳಿರಬಹುದು. ಅಂತಹ ಆವಿಷ್ಕಾರಗಳನ್ನು, ಅನುಶೋಧನೆಗಳನ್ನು ಮಾಡಿ ಯಶಸ್ವಿ ಆಗಿರುತ್ತಾರೆ. ಆದರೆ ಆ ರೈತರಿಗೆ ಇಂಥ ಚಹರೆ ಇರಲಾರದು. ಯಶಸ್ವಿ ಪ್ರಯೋಗದ ಜೊತೆಗೆ ಅವನ ಹೆಸರು ಬೆರೆತುಕೊಂಡಿರಲಾರದು. ಆದಾಗ್ಯೂ ಅಂತಹವರು ನಿರ್ಣಾಯಕರೆನಿಸುತ್ತಾರೆ. ಅಂಥವರ ಬಗ್ಗೆ ಕೃಷಿ ವಿಶ್ವವಿದ್ಯಾಲಯಗಳು ಎಂದಾದರೂ ಯೋಚಿಸಿದ್ದಿದಿಯೇ?

ಸಾವಯವ ಕೃಷಿ, ಶೂನ್ಯ ಬೇಸಾಯ, ಹೊದಿಕೆ ಮಾಡುವುದು, ಹಸುರೆಲೆ ಗೊಬ್ಬರದ ಬಳಕೆ, ಎರೆಗೊಬ್ಬರ ತಯಾರಿಕೆ,… ಹೀಗೆ ಹಲವು ಹತ್ತು ಸಂಗತಿಗಳ ಕುರಿತ ಹಲವಾರು ಪ್ರಯೋಗಗಳನ್ನು ಮಾಡುತ್ತಾ ಬಂದಿರುವೆ. 30 ವರ್ಷಗಳಿಂದಲೂ ನಾನು ಮಾಡುತ್ತಾ ಬಂದಿರುವ ಪ್ರಯೋಗಗಳ ಮೂಲಕ ಕಂಡುಂಡ ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಈ ಲೇಖನ. ಪ್ರಯೋಗಗಳ ಫಲಿತಾಂಶ ಇಲ್ಲಿದೆ.

ಒಂದೂವರೆ ಎಕರೆ ಹೊಲವೇ ಪ್ರಯೋಗಶಾಲೆ. ಪ್ರಯೋಗಗಳಿಗೆ ಸರ್ಕಾರದಿಂದಾಗಲಿ, ಕೃಷಿ ವಿಶ್ವವಿದ್ಯಾಲಯಗಳಿಂದಾಗಲೀ ಸಹಾಯಧನ ಪಡೆದಿಲ್ಲ. ಶೂನ್ಯ ಬೇಸಾಯ ಮಾಡಿದ್ದರಿಂದ ಉಳುಮೆ ಮಾಡುವ ಖರ್ಚಿಲ್ಲ. ಹೊಲದಲ್ಲಿ ಎರೆಹುಳುಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲಲ್ಲಿ ಹುತ್ತಗಳು ಬೆಳೆದಿವೆ. ಹೊಲದಲ್ಲಿ ನೀರಿಂಗುವ ಪ್ರಮಾಣ ಹೆಚ್ಚಾಗಿದೆ. ನೀರು ಹರಿಯದೆ ಅಲ್ಲಲ್ಲಿ ನೀರು ಇಂಗುವಂತಾಗಿ ಅಂತರ್ಜಲ ಮಟ್ಟದಲ್ಲಿ ಏರಿಕೆ ಆಗಿದೆ.

ಹೊಲದಲ್ಲಿ ಮುಚ್ಚುಗೆ ಬಳ್ಳಿ ಹಬ್ಬುತ್ತಲಿದೆ. ಕಳೆ ಸಸ್ಯಗಳು ಹುಟ್ಟುವ ಪ್ರಮಾಣ ಕಡಿಮೆ ಆಗಿದೆ. ಯಾವುದೇ ರಾಸಾಯನಿಕ ಕೀಟನಾಶಕ ಸಿಂಪಡಿಸದೇ ಇದ್ದುದರಿಂದ ಉಪಕಾರೀ ಕೀಟಗಳ ಸಂಖ್ಯೆ ಹೆಚ್ಚಾಗಿದೆ. ಹಿಂದೆ ಕರಿಬೇವಿನ ಎಲೆಗಳು ತೂತು ಆಗುತ್ತಿದ್ದವು. ಈಗ ತೂತು ಆಗದೆ ಎಲೆಗಳು ಆರೋಗ್ಯಪೂರ್ಣ ಆಗಿವೆ.

ಹಸುರೆಲೆ, ತೆಂಗಿನ ಗರಿಯಲ್ಲಿರುವ ಕಡ್ಡಿ ತೆಗೆದು ತಪ್ಪಲನ್ನು, ಕಬ್ಬಿನಸೋಗೆ(ರವದಿ)ಯನ್ನು ತೆಂಗಿನ ಸುತ್ತಲೂ ಹೊದಿಕೆ ಮಾಡಿರುವೆ. ಇದರಿಂದ ತೆಂಗಿನ ಗಿಡದ ಸುತ್ತಲೂ ತೇವಾಂಶ ಆರದಂತೆ ತಡೆ ಆಗಿದೆ. ತೆಂಗಿನ ಗಿಡಕ್ಕೆ ಪೋಷಕಾಂಶ ಹಾಗೂ ಸತ್ವಯುತ ಗೊಬ್ಬರ ಒದಗಿಸಿದಂತಾಗಿದೆ. ಸಾವಯವ ತತ್ವಗಳು ಹೆಚ್ಚಾಗಿದ್ದರಿಂದ ತೆಂಗಿನ ಗಿಡಗಳಿಗೆ ನುಶಿಪೀಡೆ ಸಹಜವಾಗಿ ನಿಯಂತ್ರಣದಲ್ಲಿ ಬಂದಿದೆ.

2003ರಲ್ಲಿ ನಮ್ಮ ಪ್ರದೇಶದಲ್ಲಿ ಭೀಕರ ಬರಗಾಲ. ಜನ ಮತ್ತು ಜಾನುವಾರುಗಳಿಗೆ ಕುಡಿಯಲೂ ನೀರು ಸಿಗಲಾರದ ಪರಿಸ್ಥಿತಿ. ನನ್ನ ಗೆಳೆಯ ಆನಂದ ಹನಮಂತಗಡ ತನ್ನ ತೋಟದ ತೆಂಗಿನ ಗಿಡಗಳಿಗೆ ನೀರು ಸಾಲದು ಎಂಬ ಭಾವನೆಯಿಂದ ಕಡಿಸಿ ಹಾಕಿದ. ಅವನ ತೋಟದಲ್ಲಿದ್ದ ತೆಂಗಿನ ಗಿಡಗಳು ನೀರಿಲ್ಲದೇ ಒಣಗುತ್ತಿದ್ದವು. ನನ್ನ ಕೊಳವೆ ಬಾವಿಯಲ್ಲಿದ್ದ ಅಷ್ಟಿಷ್ಟು ನೀರು ಪಾತಾಳ ಸೇರಿತ್ತು. ಪ್ರತಿವಾರ ತಪ್ಪದಂತೆ ಲಭ್ಯವಿದ್ದ ನೀರನ್ನು ಎರಡು ಗಿಡಗಳ ನಡುವೆ ಇರುವ ಕಾಲುವೆಯಲ್ಲಿ ಹರಿಸಿ ಗಿಡಗಳು ಒಣಗದಂತೆ ಬದುಕಿಸಿದೆ.

ಹೊದಿಕೆ ಮಾಡಿದ್ದರಿಂದ ಇದು ಸಾಧ್ಯವಾಯಿತು. ಎರೆಗೊಬ್ಬರ ತಯಾರಿಕೆಗೆ ಸಗಣಿಯನ್ನು ನೇರವಾಗಿ ಹಾಕದೆ, ಸೆಗಣಿ ನೀರು ಮಾಡಿ ಎರೆಗೊಬ್ಬರದ ತಯಾರಿಕೆಗೆ ಹಾಕಿ ಸಾವಯವ ಪದಾರ್ಥಗಳನ್ನು ಮೃದುವಾಗಿ ಕಳಿಯುವಂತೆ ಮಾಡಿರುವೆ. ಎರೆ ಗೊಬ್ಬರ ತಯಾರಿಕೆಗೆ ಇದರಿಂದ ಹೆಚ್ಚು ಅನುಕೂಲವಾಗಿದೆ. ಕಬ್ಬಿನ ಸೋಗೆಯನ್ನು ಸುಡದೆ ಕಬ್ಬಿನ ಬೆಳೆಯ ನಡುವೆ ಹರಡುತ್ತೇನೆ.

‘ತೋಟದಲ್ಲಿ ಬಾಳೆ ಜೊತೆ ನುಗ್ಗೆ ಹಾಕಿದರೆ (ನಾನುಗ್ಗೋ ನೀನುಗ್ಗೋ) ಎಂದು ನುಗ್ಗು ಮಾಡಿಬಿಡುವುದು’ ಎಂಬ ನನ್ನ ತಂದೆಯ ಮಾತನ್ನು ಗಮನಿಸದೇ ಅದೆಲ್ಲಾ ಮೂಢನಂಬಿಕೆ ಎಂದು ಬಾಳೆ ಮತ್ತು ನುಗ್ಗೆಯನ್ನು  ಜೊತೆಯಲ್ಲೇ ಹಚ್ಚಿ ಉತ್ತಮ ಬೆಳೆ ಬೆಳೆದಿರುವೆ.

ಬೈಲಹೊಂಗಲದ ಕೃಷಿ ವಿಚಾರ ವಿನಿಮಯ ಕೇಂದ್ರದ ವತಿಯಿಂದ ಹಲವಾರು ಕಾರ್ಯಕ್ರಮಗಳ ಏರ್ಪಾಡು ಮಾಡುತ್ತಿದ್ದೆವು. ಅಂತಹ ಕಾರ್ಯಕ್ರಮವೊಂದರಲ್ಲಿ ರುದ್ರಾಪುರ ಗ್ರಾಮದ ಮಿತ್ರ ಉದಯಕುಮಾರ ಅವರು ತಮ್ಮ ತೋಟದಲ್ಲಿ ಬೆಳೆದ ನುಗ್ಗೆ ಗಿಡ ಬೋಳಾಗುತ್ತಿವೆ. ಕೀಟದ ಕಾಟವೋ ಅಥವಾ ರೋಗವೋ ತಿಳಿಯದಾಗಿದೆ ಎಂದರು. ಆಗ ಅಲ್ಲಿ ನೆರೆದಿದ್ದ ಕೆಲವರು ತೋಟಗಾರಿಕಾ ತಜ್ಞರನ್ನು ಕರೆಸಬೇಕೆಂದು ಸಲಹೆ ಕೊಟ್ಟರು.

ಆದರೆ, ನುಗ್ಗೆ ಬೆಳೆದ ಅನುಭವವುಳ್ಳ ನಾನು, ‘ಪ್ರತಿವರ್ಷ ನುಗ್ಗೆ ಗಿಡದ ಎಲೆಗಳು ನಿಸರ್ಗ ಸಹಜವಾಗಿ ಒಣಗಿ ಉದುರುತ್ತವೆ. ಅದು ರೋಗ ಅಥವಾ ಕೀಟ ಬಾಧೆಯಿಂದ ಹಾಗೆ ಆಗುವುದಿಲ್ಲ. ನನ್ನ ತೋಟದಲ್ಲಿ ಬೆಳೆದ ನುಗ್ಗೆ ಗಿಡಗಳನ್ನು ಗಮನಿಸಿದ್ದೇನೆ. ಬೋಳಾದ ನುಗ್ಗೆ ಗಿಡ ಕೆಲವೇ ದಿನಗಳಲ್ಲಿ ಚಿಗುರಿ ಹಚ್ಚಹಸುರಾಗುವುದು. ಮತ್ತೆ ಹೂವು ಕಾಯಿ ಆಗುತ್ತವೆ. ಇದೊಂದು ಸಹಜ ಕ್ರಯೆ’ ಎಂದು ವಿವರಿಸಿ ಗಾಬರಿ ಪಡಬೇಕಿಲ್ಲ, ಸಲಹೆಯೂ ಬೇಕಿಲ್ಲ, ಯಾವ ರಸಾಯನಿಕಗಳ ಸಿಂಪರಣೆಯೂ ಬೇಕಿಲ್ಲ ಎಂದು ಹೇಳಿದೆ.

ಎರಡು ತಿಂಗಳಲ್ಲಿ ನಾನು ಹೇಳಿದಂತೆ ನುಗ್ಗೆ ಗಿಡಗಳು ಹಚ್ಚಹಸುರಾಗಿ, ಹಸಿರಾದ ನುಗ್ಗೆ ಗಿಡಗಳಲ್ಲಿ ಬಿಳಿ ಬಣ್ಣದ ಹೂವರಳಿವೆ ಎಂದು ಉದಯಕುಮಾರ ಬಂದು ಹೇಳಿದ್ದರು. ಅವರಿಗಾಗ ಅನುಮಾನ ದೂರಾಗಿತ್ತು.

ಕಳೆದ ವರ್ಷ ಮನೆಯ ಹಿಂದೆ ಸ್ವಲ್ಪ ಜಾಗದಲ್ಲಿ (ಅರ್ಧ ಗುಂಟೆ) ಮೆಣಸಿನಗಿಡ ಹಾಗೂ ಬದನೆಗಿಡ ಹಚ್ಚಿದ್ದೆ. ಬದನೆ ಗಿಡಗಳು ಜವಾರಿವು. ಜನವರಿ ತಿಂಗಳ ಕೊನೆಯಲ್ಲಿ ಹೂವು ಬಿಡುವ ಹಂತ. ಮೆಣಸಿನ ಗಿಡಕ್ಕೆ ಮುರುಟು ರೋಗಬಂದಿತ್ತು. ಬದನೆ ಕಾಯಿ ಟೊಂಗೆಯ ಕುಡಿಯಲ್ಲಿ ಮೇಲಿನಿಂದ ಕಾಂಡ ಕೊರೆವ ಹುಳು ಬದನೆ ಕುಡಿಯನ್ನೇ ಬಾಡುವಂತೆ ಮಾಡುತ್ತಿತ್ತು. ರಾಸಾಯನಿಕ ಕೀಟನಾಶಕ ಸಿಂಪಡಿಸದೆ ರೋಗ ಮತ್ತು ಕೀಟಗಳ ಬಾಧೆಯನ್ನು ತಡೆಗಟ್ಟುವ ದೊಡ್ಡ ಸಮಸ್ಯೆ ಎದುರಾಯಿತು.

ನನ್ನ ತೋಟದ ಪಕ್ಕದ ಹೊಲದಲ್ಲಿ ಸ್ವಾಮಿಗಳೊಬ್ಬರು (ಶಿವಲಿಂಗಯ್ಯ) ಜವಾರಿ ಆಕಳು ಸಾಕಿದ್ದರು. ಅವರು ಬೆಳಿಗ್ಗೆ ಸ್ನಾನ ಮಾಡಿ ಆಕಳ ಹಾಲು ಹಿಂಡುತ್ತಿದ್ದರು. ಆಗ ಸಹಜವಾಗಿ ಆಕಳು ಮೂತ್ರ ಮಾಡುತ್ತಿತ್ತು. ಆ ಮೂತ್ರವನ್ನು ಕೈಯಲ್ಲಿ ತೆಗೆದುಕೊಂಡು ಬಾಯಲ್ಲಿ ಸ್ವಲ್ಪ ತೀರ್ಥದಂತೆ ಹಾಕಿಕೊಂಡು ನಂತರ ತೆಲೆಗೂದಲಿಗೆ ಒರೆಸಿಕೊಳ್ಳುತ್ತಿದ್ದರು. ಆಕಳ ಮೂತ್ರದ ಬಗ್ಗೆ ಕೇಳಿದೆ. ನನ್ನ ಗುರುಗಳು ಮೆಣಸಿನ ಗಿಡಕ್ಕೆ ಮೂತ್ರವನ್ನು ಕಸಬರಿಗೆಯಿಂದ ಸಿಂಪಡಿಸಲು ಹೇಳುತ್ತಿದ್ದರು. ಮುರುಟು ರೋಗ ಬಾರದಂತೆ ತಡೆಯುವುದಲ್ಲದೆ ಎಲೆಗೆ ಸತ್ವಯುತವಾದ ದ್ರವರೂಪದ ಗೊಬ್ಬರ ಸಿಂಪರಣೆ ಮಾಡಿದಂತೆ ಆಗುವುದು ಎಂದು ಉತ್ಸಾಹದಿಂದ ಹೇಳಿದರು.

ಗೋಮೂತ್ರ ಮ್ಯಾಜಿಕ್

ಮೆಣಸಿನ ಗಿಡಕ್ಕೆ ಮುರುಟು ರೋಗ, ನಂಜುರೋಗಗಳ ಬಾಧೆಯಿಂದ ಸೊರಗಿದ್ದವು. ಬದನೆ ಕಾಯಿಗಳನ್ನು ಕೀಟಗಳು ತಿಂದು ತೂತು ಮಾಡಿ ಹುಳುಕಾಗಿಸುತ್ತವೆ ಎಂಬ ಚಿಂತೆಗೆ ಪರಿಹಾರ ಸಿಕ್ಕಿತೆಂದು ಪ್ರಯೋಗಕ್ಕೆ ಮುಂದಾದೆ. ಸಣ್ಣ- ಸಣ್ಣ ಗಿಡಗಳ ಬುಡಕ್ಕೆ ಮೂತ್ರಕ್ಕೆ ಸ್ವಲ್ಪ ನೀರು ಮಿಶ್ರಣ ಮಾಡಿ ಸುರುವಿದೆ. ಗಿಡಗಳ ಎಲೆಗಳ ಮೇಲೆ ಸಿಂಪರಣೆ ಮಾಡಿದೆ.

ಪರಿಣಾಮ ಅಚ್ಚರಿ ತಂದಿತ್ತು. ವಾರಕ್ಕೊಮ್ಮೆ ಸಿಂಪರಣೆ ತಪ್ಪದೇ ಮಾಡಿದೆ. ಮುರುಟು ರೋಗ ಮಾಯವಾಗಿತ್ತು. ಎಲೆಗಳು ಹಚ್ಚಹಸಿರಿನಿಂದ ಕಂಗೊಳಿಸತೊಡಗಿದವು. ಬದನೆ ಗಿಡದ ತುದಿಯಲ್ಲಿದ್ದ ಕಾಂಡಕೊರೆವ ಹುಳುಗಳು ನಾಶವಾಗಿದ್ದವು. ಅಷ್ಟೇ ಅಲ್ಲ. ಬದನೆ ಮಿಡಿಗಳು ಗೊಂಚಲು ಕಾಂತಿ ಮಾಡಿದ ಲಿಂಗಗಳನ್ನು ಕಟ್ಟಿದಂತೆ ಕಾಣತೊಡಗಿದವು. ಬದನೆ ಕಾಯಿಕೊರಕ ಹುಳುಗಳು ಅತ್ತ ಸುಳಿಯಲೇ ಇಲ್ಲ.

ಮೂವತ್ತು ವರ್ಷಗಳಿಂದ ಬದನೆ ಕಾಯಿ ಪಲ್ಯ ತಿಂದಿರಲಿಲ್ಲ. ಕಾರಣ ವಿಷಕಾರಿ ಕೀಟನಾಶಕಗಳನ್ನು ಬಳಸಿ ಬೆಳೆದ ಬದನೆಕಾಯಿ ತಿನ್ನುವುದೆಂತು? ಕೃಷಿಕರು ಕೇವಲ ಕೀಟಬಾಧೆಗೆ ಭಯಂಕರ ರಾಸಾಯನಿಕ ವಿಷ ಸಿಂಪರಣೆ ಮಾಡುತ್ತಿರಲಿಲ್ಲ. ಕೆಲವೊಮ್ಮೆ ಕಾಯಿಗಳ ಹೊಳಪಿಗೂ ರಾಸಾಯನಿಕ ಸಿಂಪರಣೆ ಮಾಡುವುದನ್ನು ಕಂಡು ಭಯವಾಗುತ್ತಿತ್ತು. ಹೀಗಾಗಿ ಬದನೆಕಾಯಿ ತಿನ್ನದೇ ಇದ್ದವನು, ನಾನೇ ಬೆಳೆದ ಸಹಜವಾದ ನಿಸರ್ಗದತ್ತ ವಿಷರಹಿತ ಬದನೆಕಾಯಿ ಪಲ್ಯ ತಿನ್ನಲು ಹೆಮ್ಮೆ ಎನಿಸಿತು.

ಇತ್ತೀಚೆಗೆ ಕೀಟ ಹಾಗೂ ರೋಗಬಾಧೆಗಳ ನಿಯಂತ್ರಣಕ್ಕೆ ಗೋಮೂತ್ರದ ಬಳಕೆಯ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಆದರೆ ನಾನು ಸ್ವತಃ ಪ್ರಯೋಗ ಮಾಡಿ ಪರಿಣಾಮ ಕಂಡು ಯಶಸ್ವಿಯಾದ ಸಂಗತಿಯನ್ನು ನನ್ನ ತೋಟಕ್ಕೆ ಬಂದವರಿಗೆ ಉತ್ಸಾಹದಿಂದ ತೋರಿಸುತ್ತಿದ್ದೆ. ಬದನೆ ಮತ್ತು ಮೆಣಸಿನ ಗಿಡಗಳಿಗೆ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಗೊಬ್ಬರಗಳ ಬಳಕೆಯಿಲ್ಲ. ರಾಸಾಯನಿಕ ಕೀಟನಾಶಕಗಳಿಗೆ ದುಬಾರಿ ಬೆಲೆ ತೆತ್ತು ಸಿಂಪರಣೆ ಮಾಡಿಲ್ಲ. ಉಪಕಾರಿ ಕೀಟಗಳಿಗೆ ಮತ್ತು ಪರಿಸರಕ್ಕೆ ಹಾನಿ ಇಲ್ಲ.

ಮಜ್ಜಿಗೆ ಕೀಟನಾಶಕ

ಮಜ್ಜಿಗೆಯನ್ನು ಗಡಿಗೆಯಲ್ಲಿ ತುಂಬಿಸಿ ಗಡಿಗೆಯ ಬಾಯಿಗೆ ಅರಿವೆ ಕಟ್ಟಿ ಒಂದು ವಾರ ಇಟ್ಟರೆ, ಅದು ಪರಿಣಾಮಕಾರಿ ಕೀಟನಾಶಕ ವಿಷ ಆಗುತ್ತದೆ. ಇಂತಹ ಮಜ್ಜಿಗೆಯನ್ನು ತೊಗರಿ ಮತ್ತು ಹೆಸರು ಕಾಯಿಕೊರಕ ಕೀಟನಾಶಕ ಔಷಧಿಯಾಗಿ ಬಳಕೆ ಮಾಡಿ ಯಶಸ್ವಿಯಾಗಿರುವೆ.

ಇದೇ ಪ್ರಯೋಗದ ಯಶಸ್ಸಿನ ಬಗ್ಗೆ ಕೃಷಿ ವಿಶ್ವವಿದ್ಯಾಲಯದ ತಜ್ಞರು ನನ್ನ ತೋಟಕ್ಕೆ ಭೇಟಿ ಕೊಟ್ಟಾಗ ಹೇಳಿದೆ. ಆದರೆ, ಅವರು ಒಪ್ಪದೇ ಮಜ್ಜಿಗೆಯಲ್ಲಿ ಏನಿದೆ? ಹುಳಿ ಪದಾರ್ಥವಷ್ಟೇ ಅದಾಗಿದೆ. ಕೀಟಗಳನ್ನು ಕೊಲ್ಲುವ ವಿಷಕಾರಿ ಅಂಶ ಅದರಲ್ಲೇನಿದೆ? ಎಂದು ಕೇಳಿದರು. ಆಗ ನಾನು ಹೇಳಿದ್ದಿಷ್ಟೇ. ನಿರಂತರ ಪ್ರಯೋಶೀಲರಾಗಿದ್ದು, ಸ್ವಂತ ಆಸಕ್ತಿಯಿಂದ ಮತ್ತು ತಮ್ಮ ಸ್ವಾವಲಂಬನೆಗೆ ಪೂರಕವಾಗಿ ಮಜ್ಜಿಗೆಯನ್ನು ಕೀಟನಾಶಕವಾಗಿ ಬಳಸಲು ನನಗೆ ಸಲಹೆ ಕೊಟ್ಟವರು ಬೇಡಹಾಳದ ಸುರೇಶ ದೇಸಾಯಿ ಅವರು.

ಇತರರಿಗೂ ಪ್ರೇರಣೆ

ದೊಡ್ಡವಾಡ ಗ್ರಾಮದ ಶಿವಾನಂದ ಕುದರಿ ಪ್ರಸಕ್ತ ಮುಂಗಾರಿ ಹಂಗಾಮಿನಲ್ಲಿ ಗೋಮೂತ್ರ ಮತ್ತು ಮಜ್ಜಿಗೆಯನ್ನು ಹೆಸರಿನ ಬೆಳೆಗೆ ಟಾನಿಕ (ಬೆಳೆ ಪ್ರಚೋದಕ) ಆಗಿ ಮತ್ತು ಹೆಸರು ಬೆಳೆಯಲ್ಲಿ ಕಾಯಿಕೊರಕ ಕೀಟನಾಶಕವಾಗಿ ಬಳಸಿ ಯಶಸ್ವಿ ಬೆಳೆ ಮಾಡಿ ಉತ್ತಮ ಫಸಲು ಪಡೆದಿದ್ದಾರೆ. ಕಳೆದ ಎರಡು ವರ್ಷಗಳಿಂದ ನನ್ನ ತೋಟಕ್ಕೆ ಬಂದು ನನ್ನ ಪ್ರಯೋಗಗಳಿಂದ ಪ್ರೇರಣೆ ಸಿಕ್ಕು ಪ್ರಯೋಗಕ್ಕೆ ಮುಂದಾಗಿದ್ದು, ಪ್ರಯೋಗ ಯಶಸ್ವಿಯಾಗಿದೆ. ಎಕರೆಗೆ 6 ಕ್ವಿಂಟಾಲ್ ಹೆಸರನ್ನು ಉತ್ಪಾದಿಸಿದ್ದಾರೆ.

ಅದೇ ರೀತಿ ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ಗ್ರಾಮದ ಸಂಗನಗೌಡ ಕನ್ನೂರ ಅವರು ತೊಗರಿ ಬೆಳೆಯ ಕಾಯಿಕೊರಕ ಕೀಟಗಳನ್ನು ಮಜ್ಜಿಗೆ ಸಿಂಪಡಿಸಿ ನಿಯಂತ್ರಣ ಮಾಡಿದ್ದಾರೆ.

ಕೀಟಗಳನ್ನು ನಿಯಂತ್ರಿಸಲು ಹಲವಾರು ಸುಲಭ ವಿಧಾನಗಳಿವೆ. ನಾನು ಅನುಸರಿಸಿದ ವಿಧಾನಗಳು ಜೈವಿಕ ಕೀಟ ಹತೋಟಿ ವಿಧಾನಗಳಾಗಿವೆ. ಇತರ ರೈತರಿಗೂ ಅನುಕರಣೀಯ ಎನಿಸಿವೆ. ಯಾವುದೇ ಕಂಪನಿಗಳ ಹಂಗಿಲ್ಲದೇ ಸ್ವಾವಲಂಬಿ ಮತ್ತು ಸುಸ್ಥಿರ ಕೃಷಿಗಾಗಿ ಪರಿಸರ ಸ್ನೇಹಿ ಕೀಟ ಹತೋಟಿ ವಿಧಾನಗಳು ರೈತರ ಹಣ, ಶ್ರಮ ಎರಡನ್ನೂ ಉಳಿಸಬಲ್ಲವು. ಅದರಿಂದ ನಾವು ತಿನ್ನುವ ಅನ್ನ ವಿಷವಾಗದಂತೆಯೂ, ಅನ್ನ ಕೊಡುವ ಮಣ್ಣು ಮಲಿನವಾಗದಂತೆಯೂ ತಡೆಯಬಹುದು.

ಅದು ನಮಗೂ, ಈ ಭೂಮಿಗೂ, ಈ ಭೂಮಿಯ ವಾರಸುದಾರರಾದ ನಾಳೆಯ ಸಂತತಿಗೂ ಒಳಿತಿನ ಕಾರ್ಯವಲ್ಲವೇ? ಅನ್ನದಾತ ಮಾಡಬೇಕಾದುದು ಕೂಡ ಇದೇ ಅಲ್ಲವೇ?