ಶ್ರೀ ವಿ.ಎಸ್.ಕೌಶಿಕ್ ಅವರು ಹಳೆಯ ಮೈಸೂರಿನ ಹಿರಿಯ ನಾಟ್ಯ ಕಲಾವಿದರಾದ ಶ್ರೀ ದಾಸಪ್ಪ ಹಾಗೂ ರಾಜಮ್ಮ ಎಂಬುವರಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದರು. ಮುಂದೆ ಸ್ವಂತ ಪ್ರಯತ್ನದಿಂದ ತಮ್ಮ ಕಲೆಯನ್ನು ಹಿಗ್ಗಿಸಿಕೊಂಡರು. ಸಂಸ್ಕೃತವನ್ನು ಕಲಿತು ಶಾಸ್ತ್ರಗ್ರಂಥವನ್ನೆಲ್ಲ ಅಭ್ಯಾಸ ಮಾಡಿ ಭರತ ನಾಟ್ಯದ ಪ್ರಾಚೀನ ಸ್ವರೂಪವನ್ನು ಅರಿತುಕೊಂಡರು. ೧೯೪೬ರಲ್ಲಿ ಸನಾತನ ಕಲಾಕ್ಷೇತ್ರ ಎಂಬ ಸಂಸ್ಥೆಯನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಿ ನೂರಾರು ವಿದ್ಯಾರ್ಥಿಗಳಿಗೆ ನಾಟ್ಯ ಕಲೆಯನ್ನು ಧಾರೆಯೆರೆದಿದ್ದಾರೆ. ರಾಜ್ಯ ಸರ್ಕಾರವು ನಾಟ್ಯ ಶಿಕ್ಷಕರ ತರಬೇತಿಗೂ ಸನಾತನ ಕಲಾ ಕ್ಷೇತ್ರವನ್ನು ಆರಿಸಿಕೊಂಡಿದೆ. ಅದರ “ಕನಕಸಭಾ” ಅತ್ಯುತ್ತಮ ಹಾಗೂ ಆದರ್ಶ ಸಭಾ ಭವನವೆಂದು ಹೆಸರಾಗಿದೆ. ಅನೇಕ ಉತ್ತಮ ಕೃತಿಗಳನ್ನು ಹಾಗೂ ಕರ್ನಾಟಕ ಸಂಗೀತದ ’ರಾಗ-ತಾನ-ಪಲ್ಲವಿ’ ಎಂಬ ಭಾಗವನ್ನು ಭರತ ನಾಟ್ಯಕ್ಕೆ ಅಳವಡಿಸಿ ಪ್ರಯೋಗ ನಡೆಸಿದ್ದಾರೆ. ಅನೇಕ ಪಾಶ್ಚಾತ್ಯ ಪೌರ್ವಾತ್ಯ ವಿದ್ವಾಂಸರು ಕೌಶಿಕರ ಈ ಪ್ರಯೋಗ ಸಾಧನೆಯನ್ನು ಶಾಸ್ತ್ರ ಪ್ರತಿಭೆಯನ್ನು ಮೆಚ್ಚಿಕೊಂಡಿದ್ದಾರೆ.

’ಭರತನಾಟ್ಯ ದಿಗ್ದರ್ಶನ’ ಎಂಬ ಪ್ರಮುಖ ಗ್ರಂಥವನ್ನೊಳಗೊಂಡು ಅನೇಕ ಉತ್ತಮ ಗ್ರಂಥಗಳನ್ನು ಶ್ರೀಯುತರು ರಚಿಸಿದ್ದಾರೆ. ಶ್ರೀಯುತರಿಗೆ ಸಂದಿರುವ ಅನೇಕ ಸನ್ಮಾನಗಳಲ್ಲಿ ನಮ್ಮ ಅಕಾಡೆಮಿಯ ಪ್ರಶಸ್ತಿಯೂ ಸೇರಿದೆ.