೧೬-೧೨-೧೯೩೬ರಲ್ಲಿ ಮೈಸೂರಿನಲ್ಲಿ ಜನಿಸಿದ ರಾಜಗೋಪಾಲ್‌ ಅವರ ಪ್ರಥಮ ಮೃದಂಗ ವಿದ್ಯಾ ಗುರುಗಳು ಎಸ್‌.ರಾಜಾರಾಂ. ಮುಂದೆ ಎಂ.ಆರ್. ರಾಜಪ್ಪನವರಲ್ಲಿ ಪ್ರೌಢ ಶಿಕ್ಷಣ ಪಡೆದು ನಮ್ಮ ನಾಡಿನ ಹಿರಿಮೆಯ ಶ್ರೇಷ್ಠ ಮೃದಂಗ ವಾದಕರಲ್ಲಿ ಸ್ಥಾನ ಪಡೆದರು.

ಬೆಂಗಳೂರು ಆಕಾಶವಾಣಿಯ ನಿಲಯದ ಕಲಾವಿದರಾಗಿ ಹಲವಾರು ವರ್ಷಗಳು ಸೇವೆ ಸಲ್ಲಿಸಿ ನಿವೃತ್ತರಾಗಿರುವ ಶ್ರೀಯುತರು ತಮ್ಮ ಮೊಟ್ಟಮೊದಲ ಕಾರ್ಯಕ್ರಮವನ್ನು ವಿದ್ವಾನ್‌ ತಿಟ್ಟೆ ಕೃಷ್ಣಯ್ಯಂಗಾರ್ ಅವರ ಜೊತೆ ನುಡಿಸುವುದರ ಮೂಲಕ ನೀಡಿದರು. ನಂತರದ ದಿನಗಳಲ್ಲಿ ಕ್ಷೇತ್ರದ ಎಲ್ಲಾ ವಿದ್ವಾಂಸರೊಡನೆಯೂ ಸಹಕರಿಸಿ ಜನರ ಮನ್ನಣೆ ಗಳಿಸಿದ್ದಾರೆ. ರಾಜ್ಯ ಸಂಗೀತ ನೃತ್ಯ ಅಕಾಡೆಮಿಯ ಆಶ್ರಯದಲ್ಲಿ ಹಳೆಬೀಡಿನಲ್ಲಿ ನಡೆದ ಸಂಗೀತ-ನೃತ್ಯ ಮಹೋತ್ಸವದಲ್ಲಿ ‘ಲಯ ವಾದ್ಯ ವೃಂದ’ ಕಾರ್ಯಕ್ರಮ ನೀಡಿದ್ದಾರೆ. ಇಡೀ ಪ್ರಪಂಚದ ನಾನಾ ದೇಶಗಳಲ್ಲಿ ನಾನಾ ನಗರಗಳಲ್ಲಿ, ಪ್ರತಿಷ್ಠಿತವಾದ ಕಾರ್ಯಕ್ರಮಗಳಲ್ಲಿ ಮೃದಂಗ ನುಡಿಸಿರುವ ಹಿರಿಮೆ ಇವರದು. ರಷ್ಯಾ ಮತ್ತು ಜರ್ಮನಿಯಲ್ಲಿ ನಡೆದ ಭಾರತೀಯ ಉತ್ಸವದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿದರು.

ತಮ್ಮ ಅನುಭವ ಪಾಂಡಿತ್ಯ ವಿದ್ಯೆಗಳನ್ನು ಶಿಷ್ಯರಿಗೆ ವಾತ್ಸಲ್ಯದಿಂದ ಬೋಧಿಸುವ ಮೂಲಕ ಹಲವಾರು ಉತ್ತಮ ಲಯ ಕಲಾವಿದರನ್ನು ಕ್ಷೇತ್ರಕ್ಕೆ ನೀಡುತ್ತಿದ್ದಾರೆ.

ಕ್ಲಿಷ್ಟವಾದ ತಾಳಗಳಲ್ಲೂ ಸಲೀಸಾಗಿ ನುಡಿಸುವ ಸಾಮರ್ಥ್ಯವುಳ್ಳ ತಮ್ಮ ಕಲಾತ್ಮಕತೆಯನ್ನು ಶ್ರೋತೃಗಳಿಗೆ ತಲುಪಿಸುವ ಚಮತ್ಕಾರವಿರುವ ಶ್ರೀಯುತರು ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೊಡನೆ ಅನೇಕ ಇತರ ಸಂಸ್ಥೆಗಳ ಸನ್ಮಾನವನ್ನು ಪಡೆದಿರುತ್ತಾರೆ.